ದಿನದ ಸುದ್ದಿ
ಕೊರೋನಾ ತಂದಿದೆ ಆಪತ್ತು; ತಲ್ಲಣಗೊಂಡಿದೆ ಮಕ್ಕಳ ಜಗತ್ತು..!
ಹೋಯ್ತಾ ಕೊರೋನಾ..? ಶಾಲೆಗೆ ಹೊರಡೋಣ..?
- ವಿ.ಕೆ.ಕುಮಾರಸ್ವಾಮಿ, ಶಿಕ್ಷಕರು, ರಾಮನಗರ
ಅಮ್ಮಾ ನನ್ ಲಂಚ್ ಬಾಕ್ಸ್ ಎಲ್ಲಿ? ನನ್ ಡ್ರಾಯಿಂಗ್ ಬುಕ್ ಎಲ್ಲೋಯ್ತು? ಅಯ್ಯೋ ಲೇಟ್ ಆಯ್ತು, ವ್ಯಾನ್ ಬಂದೇಬಿಡ್ತು ಅಮ್ಮಾ, ಲೇ ಪುಟ್ಟಾ ನೆನ್ನೆ ಮಿಸ್ಸು ಕನ್ನಡ ಹೋಮ್ವರ್ಕ್ ಕೊಟ್ಟಿದ್ರಲ್ಲಾ ಅದನ್ನ ಕಂಪ್ಲೀಟ್ ಮಾಡಿದ್ಯೇನೋ? ಲೋ ಸಾಗರ್ ಬಿಡೋ ಇವತ್ತು ಫಸ್ಟ್ ಪೀರಿಯಡ್ ಪಿ.ಟಿ ಇದೆ, ಚೆನ್ನಾಗಿ ಆಟ ಆಡೋಣ ಆಮೇಲೆ ಮಿಕ್ಕಿದ್ದು ನೋಡ್ಕಳಣ! ಅಬ್ಬಾ! ಮಕ್ಕಳ ಲೋಕ ಅದೆಷ್ಟು ಚೆಂದ ಅಲ್ವಾ. ಹೀಗಿದ್ದ ಮಕ್ಕಳ ಆಟ ಪಾಠಗಳ ತುಂಟಾಟಕ್ಕೆ ಇಂದು ಕೊರೋನಾ ಹೆಮ್ಮಾರಿ ಬ್ರೇಕ್ ಹಾಕಿರುವುದು ವಿಷಾದನೀಯ.
ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧವಾಗಿದ್ದು, ಮಕ್ಕಳ ಮನದ ತುಂಬಾ ಮೋಡ ಕವಿದ ವಾತಾವರಣ ಆವರಿಸಿದ್ದು ಖಿನ್ನತೆ, ಮಾನಸಿಕ ಅಸಮತೋಲನ, ವರ್ತನೆಯಲ್ಲಿ ಬದಲಾವಣೆ, ಮೊಬೈಲ್ ಗೀಳು ಹೆಚ್ಚಾಗಿ ಅವರ ಬದುಕು ಬಿರುಗಾಳಿಗೆ ಸಿಕ್ಕ ನಾವೆಯಂತೆ ಉಯಿಲಾಡುತ್ತಿದೆ. ಈ ಬಗ್ಗೆ ಇಲ್ಲೊಂದು ಅವಲೋಕನ..
ಹಿರಿದಾಗುತ್ತಿದೆ ಶೈಕ್ಷಣಿಕ ಅಂತರ
ಪ್ರಸ್ತುತ ಸಂದರ್ಭದಲ್ಲಿ ಇಡೀ ಶೈಕ್ಷಣಿಕ ಚಟುವಟಿಕೆಗಳು ನಿಂತುಹೋಗಿದ್ದು, ಕಳೆದ ಮೂರು ತಿಂಗಳಿಂದ ಮಕ್ಕಳ ಕಲಿಕೆಯ ಅಂತರ ಹಿರಿದಾಗುತ್ತಿದೆ. ಈಗಾಗಲೇ ಕೊರೋನಾ ಎಂಬ ವಿಷ ಕ್ರಿಮಿ ತನ್ನ ಬಾಹುಗಳನ್ನು ವಿಸ್ತಾರವಾಗಿ ಚಾಚುತ್ತಿರುವುದರಿಂದ, ಮಕ್ಕಳ ಸುರಕ್ಷತೆಯೊಂದಿಗೆ ಶಾಲೆಗಳ ಆರಂಭ ಅಷ್ಟು ಸುಲಭದ ಮಾತಲ್ಲ. ಈ ಸಂಬಂಧ ಸರ್ಕಾರ ಅಥವಾ ಪೋಷಕರು ಮಕ್ಕಳ ಶ್ರೇಯೋಭಿವೃದ್ಧಿಗೆ ವಿವಿಧ ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಅದು ಮಕ್ಕಳ ಮೇಲೆ ನೇರ ಶಿಕ್ಷಣ ಪದ್ಧತಿಯಷ್ಟು ತೀವ್ರ ಪರಿಣಾಮ ಬೀರದಿರುವುದು ಆತಂಕದ ಸಂಗತಿಯಾಗಿದೆ.
ಬಹುತೇಕ ಇಂದಿನ ಮಕ್ಕಳಲ್ಲಿ ಕಾಡುತ್ತಿರುವ ತಾತ್ಕಾಲಿಕ ನೆನಪಿನ ಶಕ್ತಿಯ ಪರಿಣಾಮವಾಗಿ, ಮಕ್ಕಳನ್ನು ಈ ಮೊದಲಿನ ಸಹಜ ಸ್ಥಿತಿಗೆ ತರುವುದು ತೀರಾ ಪ್ರಾಯಾಸದ ಕೆಲಸವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆನ್ಲೈನ್ ಶಿಕ್ಷಣ ದುಸ್ತರವಾಗುತ್ತಿದ್ದು, ಇದು ಶೈಕ್ಷಣಿಕ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಕೊರೋನಾ ಹೋಯ್ತಾ? ಶಾಲೆಗೆ ಆರಂಭವಾಯ್ತಾ? ಎಂಬುದು ಇಂದು ಏನೂ ಅರಿಯದ ಮುಗ್ಧ ಮಕ್ಕಳನ್ನು ಕಾಡುತ್ತಿರುವ ಬಹುದೊಡ್ಡ ಪ್ರಶ್ನೆಯಾಗಿದೆ. ಹೀಗೆ ಕೊರೋನಾ ಮಧ್ಯದಲ್ಲಿ ಅಡಕತ್ತರಿಗೆ ಸಿಕ್ಕಂತಾಗಿರುವ ಮಕ್ಕಳ ಬದುಕು ನಿಜಕ್ಕೂ ತಲ್ಲಣಗೊಂಡಿದೆ.
ಸಾಮಾಜೀಕರಣಕ್ಕೆ ಬ್ರೇಕ್
ಮಕ್ಕಳನ್ನು ಸಾಮಾಜೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಕುಟುಂಬದಷ್ಟೇ, ಶಾಲೆ, ನೆರೆಹೊರೆ ಹಾಗೂ ಸಮಕಾಲೀನ ವಯೋಮಾನದವರ ಪಾತ್ರವೂ ಸಹ ಹಿರಿದಾಗಿದೆ. ಆದರೆ ಕೊರೋನಾ ವಿಷ ಪೀಡೆ ಮಕ್ಕಳನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿರುವುದರಿಂದ, ಅವರು ಮನೆಯಿಂದ ಹೊರಗೆ ಬಾರದಂತಾಗಿ ಖಿನ್ನತೆ ಹೆಚ್ಚಾಗುತ್ತಿದೆ.
ಇದರಿಂದ ಅವರಲ್ಲಿ ವಯೋ ಸಹಜ ಮಾನಸಿಕ ಬೆಳವಣಿಗೆ ಕ್ಷೀಣಿಸುತ್ತಿದ್ದು, ವರ್ತನೆಯಲ್ಲಿ ವಿಭಿನ್ನ ಬದಲಾವಣೆಗಳು ಕಂಡು ಬರುತ್ತಿದೆ. ನಿತ್ಯವೂ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಮಕ್ಕಳ ಲೋಕ ಇಂದು ಮಂಕಾಗುತ್ತಿದೆ. ಹೀಗಾಗಿ ಸಾಮಾಜೀಕರಣ ಪ್ರಕ್ರಿಯೆ ತಡವಾಗುವುದರ ಜೊತೆಗೆ, ಅವರ ಭವಿಷ್ಯವೂ ಸಹ ಡೋಲಾಯಮಾನವಾಗುತ್ತಿದೆ.
ಮೊಬೈಲ್ ಬಳಕೆಯಿಂದ ಆಪತ್ತು
ಮನೆಯಲ್ಲೇ ಉಳಿದುಕೊಂಡಿರುವ ಕೋಟ್ಯಂತರ ಮಕ್ಕಳು ಇಂದು ಕಾಲ ಕಳೆಯಲೆಂದೋ ಅಥವಾ ಆನ್ಲೈನ್ ತರಗತಿಗಳಿಗೆಂದೋ ಮೊಬೈಲ್ ಮೊರೆ ಹೋಗಿದ್ದಾರೆ. ಆದರೆ ಭಾರತದಲ್ಲಿನ ಬಹುಪಾಲು ಪೋಷಕರ ಅನಕ್ಷರತೆ ಸಮಸ್ಯೆಯಿಂದಾಗಿ ತಮ್ಮ ಮಕ್ಕಳು ಮೊಬೈಲ್ನ್ನು ಸರಿಯಾದ ಉದ್ದೇಶಕ್ಕೆ ಬಳಸುತ್ತಿದ್ದಾರೆಯೇ ಎಂಬುದನ್ನು ತಿಳಿಯುವುದರಲ್ಲಿ ವಿಫಲತೆ ಎದುರಾಗಿದೆ.
ಇದರಿಂದ ಮಕ್ಕಳ ಮೇಲಿನ ಹಿಡಿತ ತಪ್ಪಿ, ಅವರ ಮನಸ್ಸು ವ್ಯಗ್ರವಾಗಿ ವಿವಿಧ ಸೈಬರ್ ಕ್ರೈಮ್ಗಳತ್ತ ಮುಖ ಮಾಡುತ್ತಿದ್ದಾರೆ. ಅಲ್ಲದೇ ಪ್ರತಿದಿನ ಗೇಮ್ ಆಡಲು, ಚಾಟ್ ಮಾಡಲು ಇನ್ನಿತರ ಉದ್ದೇಶಗಳಿಗಾಗಿ ದೀರ್ಘಾವಧಿಯವರೆಗೆ ಮೊಬೈಲ್ ಬಳಕೆ ಮಾಡುತ್ತಿರುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ಇದು ತೊಡಕಾಗುತ್ತಿದೆ. ಸಣ್ಣ ವಯಸ್ಸಿನಲ್ಲೇ ಮಕ್ಕಳ ಮೇಲೆ ಆಘಾತಕಾರಿ ಪರಿಣಾಮಗಳು ಸೃಷ್ಟಿಯಾಗುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ.
ಮೌಲ್ಯಗಳ ಕುಸಿತ
ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಬಹುತೇಕ ಇಂದಿನ ಡಿಜಿಟಲ್ ಯುಗದ ಮಕ್ಕಳು ಪೋಷಕರ ಮಾತಿಗೆ ಮನ್ನಣೆ ನೀಡುವುದು ಕಡಿಮೆಯೇ. ಮನೆಯಲ್ಲೇ ಉಳಿದ ಮಕ್ಕಳ ಮನಸ್ಸು ದಿಕ್ಕು ತಪ್ಪಿದಂತಾಗಿ, ಅವರಲ್ಲಿ ತೀವ್ರತರ ಮಾನಸಿಕ ಅಸಮತೋಲನ ಉಂಟಾಗುತ್ತಿದೆ. ಇದರಿಂದ ಪೋಷಕರು ಮಕ್ಕಳಿಗೆ ಏನು ಹೇಳಿದರೂ ಅದು ತಪ್ಪೇ ಎಂಬಂತಾಗುತ್ತಿದೆ.
ಸುಮಾರು ಮಕ್ಕಳು ತಮ್ಮ ಪೋಷಕರ ವಿರುದ್ಧ ವಾಗ್ವಾದಕ್ಕೆ ಇಳಿಯುತ್ತಿರುವುದು, ಆತ್ಮಹತ್ಯೆ ಬೆದರಿಕೆಗಳನ್ನು ಒಡ್ಡುತ್ತಿರುವುದು, ತಮ್ಮ ವಯೋಮನಕ್ಕೆ ಮೀರಿದ ಭಾಷೆಯ ಬಳಕೆ, ಮಾನಸಿಕ ಸಂಘರ್ಷಗಳು, ಮಾನಸಿಕ ಕ್ಷೋಭೆ, ಇವುಗಳಿಂದಾಗಿ ಮಕ್ಕಳಲ್ಲಿರಬೇಕಾದ ನಿರೀಕ್ಷಿತ ಮೌಲ್ಯಗಳು ಕ್ಷೀಣಿಸುತ್ತಿವೆ. ಅತಿಯಾದ ಟಿ.ವಿ ಹಾಗೂ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಸ್ವಾಸ್ಥ್ಯ ಹಾಳಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವುದು ಅತ್ಯಂತ ಕ್ಷಿಷ್ಟಕರವಾಗುತ್ತಿದೆ. ಇವಿಷ್ಟೇ ಅಲ್ಲದೆ ಪೌಷ್ಟಿಕಾಂಶಗಳ ಕೊರತೆ, ಕೌಟುಂಬಿಕ ದೌರ್ಜನ್ಯಗಳು, ಬಲವಂತದ ದುಡಿಮೆ, ಮುಂತಾದ ಸಮಸ್ಯೆಗಳು ಮಕ್ಕಳಲ್ಲಿ ತಲೆದೋರುತ್ತಿದೆ.
-ವಿ.ಕೆ.ಕುಮಾರಸ್ವಾಮಿ,
ಬರಹಗಾರ, ಶಿಕ್ಷಕರು,
ವಿರುಪಾಪುರ, ಸುಗ್ಗನಹಳ್ಳಿ ಅಂಚೆ,
ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು,
ರಾಮನಗರ ಜಿಲ್ಲೆ – 561101
ಮೊ: 9113906120, 9740840678 (ವಾಟ್ಸಪ್)
ಇ ಮೇಲ್ : kumarvirupapura@gmail.com
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ
ಸುದ್ದಿದಿನ,ಚನ್ನಗಿರಿ: ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯು ಸೋಮೌಅರ ನವಿಲೇಹಾಳು ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿಯಾಗಿ ಗ್ರಾಮಸಭೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.
ಗ್ರಾಮಸಭೆ ಎಂಬುದು ಗ್ರಾಮಸ್ಥರ ಸಮಸ್ಯೆಗಳನ್ನು ನೇರವಾಗಿ ಚರ್ಚಿಸಿ, ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸುವ ಪ್ರಮುಖ ವೇದಿಕೆಯಾಗಿರುವುದರಿಂದ, ಗ್ರಾಮಸಭೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು PDO ಅವರಿಗೆ ಮನವಿ ಮಾಡಲಾಯಿತು.
ಅದರಂತೆ ಗ್ರಾಮಸಭೆಯ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ಟಾಂಟಾಂ/ಧ್ವನಿವರ್ಧಕದ ಮೂಲಕ ಗ್ರಾಮದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುವುದರ ಜೊತೆಗೆ, ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅರ್ಹ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸಭೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸುವಂತೆ ತಿಳಿಸಲಾಯಿತು.
ಗ್ರಾಮದಲ್ಲಿಯೇ ಉದ್ಯೋಗ ಸೃಷ್ಟಿಗೆ ಒತ್ತು
ಇದೇ ಸಂದರ್ಭದಲ್ಲಿ ಮನರೇಗಾ (MGNREGA) ಯೋಜನೆಯಡಿ ಗ್ರಾಮದ ಅರ್ಹ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವಂತೆ ಮನವಿ ಮಾಡಲಾಯಿತು.
ಗ್ರಾಮಸ್ಥರು ಉದ್ಯೋಗಕ್ಕಾಗಿ ಅನಿವಾರ್ಯವಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ, ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಿರುವ ಕೆಲಸಗಳನ್ನು ಸಮರ್ಪಕವಾಗಿ ಗುರುತಿಸಿ, ಅರ್ಹರಿಗೆ ನಿಯಮಾನುಸಾರ ಉದ್ಯೋಗ ಒದಗಿಸಬೇಕು ಎಂದು ತಿಳಿಸಲಾಯಿತು.
ಪ್ರಸ್ತುತ ಬತ್ತದ ನಾಟಿ ಕಾರ್ಯಕ್ಕೆ ಅಗತ್ಯವಿರುವ ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೃಷಿ ಕೆಲಸಗಳು ಲಭ್ಯವಿಲ್ಲದ ಅವಧಿಯಲ್ಲಿ ಗ್ರಾಮಸ್ಥರಿಗೆ ಮನರೇಗಾ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳ ಮೂಲಕ ಉದ್ಯೋಗ ಒದಗಿಸಿ, ಗ್ರಾಮದಲ್ಲಿಯೇ ಆದಾಯದ ಅವಕಾಶಗಳನ್ನು ಸೃಷ್ಟಿಸುವುದು ಅಗತ್ಯವಾಗಿದೆ ಎಂದು ಮನವಿ ಮಾಡಲಾಯಿತು.
ಗ್ರಾಮದಲ್ಲಿಯೇ ಉದ್ಯೋಗ ದೊರೆತರೆ ಗ್ರಾಮಸ್ಥರ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ, ಗುಳೆ ಹೋಗುವುದನ್ನು ತಡೆಯಲು ಹಾಗೂ ಗ್ರಾಮದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು PDO ಅವರ ಗಮನಕ್ಕೆ ತರಲಾಯಿತು.
ಇತರೆ ಗ್ರಾಮಾಭಿವೃದ್ಧಿ ವಿಚಾರಗಳ ಚರ್ಚೆ
ಇದರ ಜೊತೆಗೆ ನವಿಲೇಹಾಳ ಗ್ರಾಮದ ವಿವಿಧ ಅಭಿವೃದ್ಧಿ ಸಮಸ್ಯೆಗಳು, ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ಉದ್ಯೋಗಾವಕಾಶಗಳು, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು PDO ಅವರೊಂದಿಗೆ ಚರ್ಚಿಸಲಾಯಿತು.
ಗ್ರಾಮಸ್ಥರಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಮರ್ಪಕವಾಗಿ ತಲುಪುವಂತೆ ಪಾರದರ್ಶಕವಾಗಿ ಹಾಗೂ ನಿಯಮಾನುಸಾರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಲಾಯಿತು.
ಗ್ರಾಮಸಭೆಯಲ್ಲಿ ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆ, ಸ್ಥಳೀಯ ಉದ್ಯೋಗ ಸೃಷ್ಟಿ ಹಾಗೂ ಗ್ರಾಮಾಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ನವಿಲೇಹಾಳ ಗ್ರಾಮವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.
“ಗ್ರಾಮದ ಅಭಿವೃದ್ಧಿ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಗ್ರ ಗ್ರಾಮಾಭಿವೃದ್ಧಿ ಸಾಧ್ಯ.”
ಗ್ರಾಮದ ಜನರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ನವಿಲೇಹಾಳ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ (ರಿ.) ನಿರಂತರವಾಗಿ ಜನಪರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ಜಾಫರ್ ರವರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ದಿನದ ಸುದ್ದಿ
ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.
ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.
ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.
“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.
ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.
ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.
ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


