ಬಹಿರಂಗ
ದಮ್ಮುಕಟ್ಟುವಿಕೆ, ಭಯ, ಏಕಾಕಿತನ ಕೊವಿಡ್ -19 ಸಾವು ಹೇಗಿರುತ್ತದೆ..?
- ಭಾನುವಾರದ ಲಾಸ್ ಏಂಜಲ್ಸ್ ಟೈಮ್ಸ್ ನ ಅಂಕಣದ ಅನುವಾದ ಇದು. ಗಂಭೀರವಾದ ಕೊವಿಡ್ ಪ್ರಕರಣಗಳು ಹೇಗಿರುತ್ತವೆ ಎಂಬ ಚಿತ್ರಣ ನೀಡುವುದಕ್ಕಾಗಿ. ದಯವಿಟ್ಟು ಓದಿ. ಆದರೆ, ಓದುವ ಮೊದಲು ಗಮನಿಸಿ: ಈ ಲೇಖನದ ಉದ್ದೇಶ ನಿಮ್ಮನ್ನು ಭಯಬೀಳಿಸುವುದಲ್ಲ. ಕೊರೊನಾ ಸೋಂಕಿತರೆಲ್ಲ ಸಾಯುವುದಿಲ್ಲ.ಆದರೆ ಕೊರೊನಾಕ್ಕೆ ಸುಲಭತುತ್ತಾಗುವ ವಯಸ್ಕರು, ಬೊಜ್ಜು ದೇಹದವರು, ಮಧುಮೇಹ-ರಕ್ತದೊತ್ತಡದಂತಹ ದೇಹವ್ಯವಸ್ಥೆಯ ತೊಂದರೆಗಳಿರುವವರು, ಶ್ವಾಸಕೋಶಗಳ ದೀರ್ಘಕಾಲಿಕ ತೊಂದರೆ ಇರುವವರು, ಬೇರೆ ಗಂಭೀರ ಆರೋಗ್ಯ ಸಮಸ್ಯೆಗಳಿರುವವರು – ಇವರಲ್ಲಿ ನಿಮ್ಮ ಕುಟುಂಬಿಕರು, ಪ್ರೀತಿಪಾತ್ರರು ಇರಬಹುದು. ಅವರನ್ನು ಯಾಕೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು, ಅವರಿಗೆ ಸೋಂಕು ತಗುಲದಂತೆ ನಾವು ಏಕೆ ಎಚ್ಚರ ವಹಿಸಬೇಕು ಎಂಬುದಕ್ಕೆ ಇದು ಕಾರಣವಾದೀತು.
- ಅಂಕಣಕಾರರು: ಸ್ಟೀವ್ ಲೋಪೆಜ್,ಕನ್ನಡಕ್ಕೆ: ರಾಜಾರಾಂ ತಲ್ಲೂರು
ಅವರು ಅಂಗಲಾಚುತ್ತಾರೆ, ಎದೆಹೊಡೆದುಕೊಳ್ಳುತ್ತಾರೆ, ಅವರ ಕಣ್ಣುಗಳಲ್ಲಿ ಭಯ ಮರಗಟ್ಟಿರುತ್ತದೆ.
“ಹಾಸಿಗೆಯ ಮೇಲೆ ಕುಳಿತಲ್ಲೇ ಪೂರ್ಣ ವೇಗದಲ್ಲಿ ಮ್ಯಾರಥಾನ್ ಓಡುತ್ತಿರುವಂತೆ ದಮ್ಮು ಬಿಡುತ್ತಾರೆ.” ಎಂದು ವಿವರಿಸುತ್ತಾರೆ ಡಾ|ಅಡುಪಾ ರಾವ್, ಕೆಕ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಮತ್ತು ತುರ್ತು ಚಿಕಿತ್ಸಾ ಪರಿಣತ.
“ಅವರ ಉಸಿರಾಟ ಎಷ್ಟು ಆಳ ಮತ್ತು ವೇಗವಾಗಿರುತ್ತದೆಂದರೆ ಪ್ರತೀ ಉಸಿರಿಗೂ ಅವರು ಶ್ರಮ ಹಾಕಬೇಕಾಗುತ್ತದೆ. ಅದು ಬಹುತೇಕ ನೀರಿನಿಂದ ಹೊರಬಿದ್ದ ಚೆಮ್ಮೀನಿನ ತೊಳಲಾಟದಂತೆ. ಅವರಿಗೆ ಬೇಕಾದಷ್ಟು ಗಾಳಿ ಸಿಕ್ಕೇಇಲ್ಲ ಎನ್ನುವಂತೆ.”
ವೆರ್ದುಗೊ ಹಿಲ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಕೊಠಡಿಯ ನರ್ಸ್ ಮನ್ನಿ ಕೊಡದಾಡಿ ಅವರು, ತಾನು ಕಂಡದ್ದನ್ನು ಹೀಗೆ ವಿವರಿಸುತ್ತಾರೆ.
ರೋಗಿಗಳಿಗೆ “ನೀರಿನಡಿ ಉಸಿರಾಡಿದಂತೆ, ಅವರು ಆಳದಿಂದ ಮೇಲ್ಭಾಗಕ್ಕೆ ಈಜಿ ಬರುತ್ತಿರುತ್ತಾರೆ ಆದರೆ ನೀರಿನಿಂದ ಹೊರಗೆ ಮೂಗು ತರಲಾಗದ ಸ್ಥಿತಿ.” ಕಳೆದ ಹತ್ತು ವರ್ಷಗಳಿಂದ ಅರೆವೈದ್ಯಕೀಯ ಸಿಬ್ಬಂದಿ ಮತ್ತು ಆಂಬುಲೆನ್ಸ್ ಚಾಲಕರೂ ಆಗಿರುವ ಅವರು ಮನ್ನಿ, ಈ ವೈರಸ್ ಶತ್ರುವಿನಂತೆ ಮತ್ತು ಆಸ್ಪತ್ರೆಯೇ ಯುದ್ಧಭೂಮಿಯಂತೆ ಎಂದರು.
ಇತ್ತೀಚೆಗೊಮ್ಮೆ ಒಂದೇ ಸಮನೆ ರೋಗಿಗಳು ಆಸ್ಪತ್ರೆಗೆ ಹರಿದು ಬಂದದ್ದನ್ನು ನೆನಪಿಸಿಕೊಂಡು, ಅವರು ಬಂದವರೆಲ್ಲ ಅಯೋಮಯ ಸ್ಥಿತಿಯಲ್ಲಿದ್ದರು. ಹೆಸರು-ವಿಳಾಸ ಹೇಳುವ ಸ್ಥಿತಿಯಲ್ಲೂ ಇರಲಿಲ್ಲ. ಕೆಲವು ದಿನ ಸತತವಾಗಿ ದೊಡ್ಡ ಸಂಖ್ಯೆಯಲ್ಲಿ ಬರುತ್ತಲೇ ಇರುತ್ತಾರೆ, ಕೆಲವರು ಅಲ್ಪಸ್ವಲ್ಪ ರೋಗಲಕ್ಷಣ ಪೀಡಿತರಾದರೆ ಮತ್ತೆ ಕೆಲವರು ರೋಗಲಕ್ಷಣಗಳೊಂದಿಗೆ ಭಯಗೊಂಡವರು.
“ಕೆಲವರು ಒದ್ದಾಡುತ್ತಾರೆ, ಹಾಸಿಗೆಯಿಂದ ಏಳಲು ಪ್ರಯತ್ನಿಸುತ್ತಾರೆ, ಮುಗಿಸಿ ಹೊರಡಬಯಸುತ್ತಾರೆ…. ಇನ್ನು ಕೆಲವರು ಸಹಾಯ ಮಾಡಿ, ಕಾಪಾಡಿ, ಉಸಿರಾಡಲಾಗುತ್ತಿಲ್ಲ. ನನ್ನನ್ನು ಈಗಲೇ ಉಳಿಸಿ.” ಎನ್ನುತ್ತಾರೆ. “ಕೆಲವರು ಶಬ್ದಗಳಲ್ಲಿ ಹೇಳಿದರೆ ಇನ್ನು ಕೆಲವರಿಗೆ ಅದೂ ಸಾಧ್ಯ ಆಗುವುದಿಲ್ಲ. ಅವರ ಒಂದು ಆರ್ತ ನೋಟವೇ ಸಾಕು. ನಮ್ಮ ಕೈಯಲ್ಲೇನೋ ಮ್ಯಾಜಿಕ್ ಔಷಧಿ ಇದೆ ಎಂಬಂತೆ ನಮ್ಮನ್ನು ಮುಟ್ಟಿ ಅಂಗಲಾಚಿ, ಕೊಡಲಿ ಎಂಬಂತೆ ಮುಖ ಮಾಡುತ್ತಾರೆ. ನಮಗೆ ಕೊಡಲು ಸಾಧ್ಯವಿದ್ದರೆ ಒಳ್ಳೆಯದಿತ್ತು” ಎಂದು ಮನ್ನಿ ನಿಟ್ಟುಸಿರುಬಿಡುತಾರೆ.
ಇದೆಲ್ಲ ಹೀಗಿರಬೇಕಾಗಿರಲಿಲ್ಲ. ರಾಷ್ಟ್ರೀಯ ನಾಯಕತ್ವದ ವೈಫಲ್ಯ, ಟೆಸ್ಟಿಂಗ್-ಟ್ರೇಸಿಂಗ್-ರಿಓಪನಿಂಗ್ ಕುರಿತು ಯದ್ವಾತದ್ವಾ ಸ್ಥಳೀಯ ಆಡಳಿತದ ತೀರ್ಮಾನಗಳು, ಮೂಲಭೂತವಾದ ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸದ ನಾಗರಿಕರು – ಈ ಎಲ್ಲ ಕಾರಣಗಳಿಂದಾಗಿ ಐದು ತಿಂಗಳ ಬಳಿಕ ಈಗ ಅಮೆರಿಕ ಬ್ರೆಜಿಲ್ ಗಿಂತ ದುಪ್ಪಟ್ಟು ಕೊವಿಡ್ -19 ಸಾವಿನ ಸಂಖ್ಯೆ ಹೊಂದಿದೆ.
ಬೇಸಿಗೆಯಲ್ಲಿ ವೈರಸ್ ಕಮ್ಮಿ ಆಗಬಹುದೆಂಬ ನಿರೀಕ್ಷೆ ಇತ್ತು. ಅದು ಸುಳ್ಳಾಗಿ ಪ್ರಕರಣಗಳು ಹೆಚ್ಚುತ್ತಿವೆ, ಕ್ಯಾಲಿಫೋರ್ನಿಯಾದಂತಹ ಕಡೆಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ (ಬೇಸಗೆಯಲ್ಲಿ ವೈರಸ್ ಸಾಯಲಿದೆ ಎಂದು ಪ್ರೆಸಿಡೆಂಟ್ ಟ್ರಂಪ್ ಹೇಳಿದ್ದು ನೆನಪಿದೆಯೆ?) ಇಷ್ಟಾದರೂ ಜನ ನಿಯಮಗಳನ್ನು ಪಾಲಿಸುತ್ತಿಲ್ಲ. ಮೊನ್ನೆಮೊನ್ನೆ ಆರೆಂಜ್ ಕೌಂಟಿಯಲ್ಲಿ ಶಿಕ್ಷಣ ಮಂಡಳಿ ಮಾಸ್ಕ್ – ಸಾಮಾಜಿಕ ಅಂತರ ಇಲ್ಲದೆ ಶಾಲೆಗಳನ್ನು ತೆರೆಯಲು ತೀರ್ಮಾನಿಸಿತು.
ನಮ್ಮ ಹತ್ತಿರದವರು ಗತಿಸಿದ್ದರೆ, ನಮ್ಮ ಆರೋಗ್ಯ ಕಾರ್ಯಕರ್ತರು-ವೈದ್ಯರು ಅಪಾಯಕ್ಕೀಡಾಗಲಿದ್ದಾರೆ ಎಂಬ ಅರಿವಿದ್ದರೆ ನಾವು ಹೀಗೆ ಮಾಡುತ್ತಿದ್ದೆವೆ? ಈ ನಿರ್ಲಕ್ಷ್ಯಕ್ಕೆ ಒಂದು ಮುಖ್ಯ ಕಾರಣ- ಪಾಸಿಟಿವ್ ಆದವರಲ್ಲಿ ಹೆಚ್ಚಿನವರು ಗುಣಮುಖರಾಗುತ್ತಿರುವುದು. ಇನ್ನಾದರೂ ಕೊರೊನಾ ಸಾವು ಹೇಗಿರುತ್ತದೆಂಬ ಕಲ್ಪನೆ ಬಂದ ಮೇಲೆ ನಾವು ಎಚ್ಚರಾಗುತ್ತೇವೆಯೆ?
ಹೇಳುವುದು ಕಷ್ಟ. ಆದರೆ ನಾನು ತುರ್ತು ಚಿಕಿತ್ಸಾ ಕೊಠಡಿಗಳಲ್ಲಿ, ಐಸಿಯುಗಳಲ್ಲಿ ಪ್ರತಿದಿನ ಏನಾಗುತ್ತಿದೆ ಎಂದು ವಿವರಿಸುವಂತೆ ವೈದ್ಯರನ್ನು ಆರೋಗ್ಯ ಸಿಬ್ಬಂದಿಗಳನ್ನು ಕೇಳಿದೆ. ಅದನ್ನೆಲ್ಲ ಅರಿತರೆ, ನೀವು ಈ ವೈರಸ್ ಸೋಂಕಿನ ಅನುಭವ ಪಡೆಯಲು ಮುಂದಾಗಲಾರಿರಿ.
“ನಮ್ಮ ದುರಾದೃಷ್ಟಕ್ಕೆ ಐಸಿಯು ಗಳಲ್ಲಿರುವ ರೋಗಿಗಳು ನಾವು ಇಚ್ಛಿಸಿದಂತೆ ಸುಧಾರಿಸಿಕೊಳ್ಳುತ್ತಿಲ್ಲ” ಎನ್ನುತ್ತಾರೆ ಡಾ|ರಾವ್.ಅದೂ ಹೈ-ಡೋಸ್ ಆಕ್ಸಿಜನ್ ನೀಡಿದ ಬಳಿಕ, ವೆಂಟಿಲೇಟರ್ ಅಳವಡಿಸಿದ ಬಳಿಕ, ರಕ್ತ ತೆಳುಕಾರಕ ನೀಡಿ ದೇಹದಲ್ಲೆಲ್ಲ ನೋವುಂಟುಮಾಡುವ ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆದ ಬಳಿಕ, ಶ್ವಾಸಕೋಶಗಳ ಉರಿಯೂತಗಳನ್ನು ಸ್ಟೀರಾಯ್ಡ್ ನೀಡಿ ತಗ್ಗಿಸಲು ಪ್ರಯತ್ನಿಸಿದ ಬಳಿಕ. ಗಂಭೀರ ಸ್ಥಿತಿಗೆ ಹೋದ ಪ್ರಕರಣಗಳಲ್ಲಿ ರೋಗಿಗೆ ಮತ್ತು ಬರಿಸುವ ಸೌಕರ್ಯವಾದರೂ ಇದೆ, ಉಳಿದವರಿಗೆ ಅದೂ ಇರುವುದಿಲ್ಲ ಅವರು ಸಂಕಟ ಅನುಭವಿಸಬೇಕು.
“ಇಡಿಯ ಕೊವಿಡ್ ಸಂಕಟದಲ್ಲಿ ಯಾರೂ ಬಾಯಿಬಿಟ್ಟು ಹೇಳದ ದುರಂತವೆಂದರೆ ವ್ಯಕ್ತಿಯ ಜೀವನದ ಅಂತ್ಯದಲ್ಲೂ ಮಾನವೀಯ ಬಾಂಧವ್ಯ ತೋರಿಸಲು ಸಾಧ್ಯ ಆಗದಿರುವ ಸ್ಥಿತಿ. ಸಾವಿನ ಮಂಚದಲ್ಲಿರುವಾಗ ರೋಗಿಯ ಜೊತೆಗಿರುವುದು ಹಿಂದೆಲ್ಲ ಸಾಧ್ಯವಾಗುತ್ತಿತ್ತು. ಈಗ ಅವರು ಏಕಾಕಿತನದಲ್ಲೇ ಸಾಯಬೇಕು.” ಎನ್ನುತ್ತಾರೆ ಡಾ|ರಾವ್.
ಒಂದು ಪ್ರಕರಣದಲ್ಲಿ ಡಾ| ರಾವ್ ಅವರ ಅವರ ಸಹೋದ್ಯೋಗಿ ವೈದ್ಯರೊಬ್ಬರ ತಂದೆ ಸ್ವತಃ ದಂತವೈದ್ಯರು ತೀರಿಕೊಂಡರು. ಆದರೆ ಮಗನಿಗೆ ತಂದೆಯ ಅಂತಿಮ ಕ್ಷಣಗಳಲ್ಲಿ ಒಟ್ಟಿಗಿರಲಾಗಲಿಲ್ಲ.
“ಕಳೆದ ವಾರ, ನಾನು ಕಿಡ್ನಿ ಕಸಿ ಆದ ರೋಗಿಯೊಬ್ಬರ ಗಂಟಲಿನೊಳಗೆ ವೆಂಟಿಲೇಟರ್ ನಳಿಕೆ ಇಳಿಸಬೇಕಿತ್ತು. ಆ ಕೊನೆಯ ಕ್ಷಣದಲ್ಲಿ ಆ ವ್ಯಕ್ತಿ ಬಾಗಿಲ ಸಂದಿಯಿಂದ ಇಣುಕುತ್ತಿದ್ದ ತನ್ನ ಪತ್ನಿಯನ್ನು ನೋಡಿದ ರೀತಿ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ.’ಇದೇ ಕೊನೆಯ ಬಾರಿಗೆ’ ಎಂಬಂತಿತ್ತು ಆ ನೋಟ” ಎನ್ನುತ್ತಾರೆ ಡಾ|ರಾವ್.
ನಾನು ಡಾ| ರಾವ್ ಅವರನ್ನು ಭೇಟಿ ಮಾಡಿದ್ದು, ಅವರ 12 ತಾಸುಗಳ ಪಾಳಿಯ ಬಳಿಕ ಸಣ್ಣ ಬಿಡುವಿನಲ್ಲಿರುವಾಗ. ಆಗ ಅವರ ಯೂನಿಟ್ ನಲ್ಲಿ ಏಳು ಗಂಭೀರ ಸ್ಥಿತಿಯ ರೋಗಿಗಳು, ಅವರಲ್ಲೊಬ್ಬಾಕೆ ಎರಡು ತಿಂಗಳ ಬಾಣಂತಿ ಇದ್ದರು. ಆ ಬಾಣಂತಿಗೆ ಹೆರಿಗೆಯ ವೇಲೆ ಉಸಿರಾಟ ಕಷ್ಟವಾಗಿತ್ತು. ಅವರಲ್ಲಿ ಇಬ್ಬರು 20ರ ಆಸುಪಾಸಿನವರಾದರೆ ಉಳಿದವರು 30-60 ನಡುವಿನವರು. ಇವರಲ್ಲದೆ ಆರೇಳು ಮಂದಿ ಅಷ್ಟೇನೂ ತೀವ್ರವಲ್ಲದ ತೊಂದರೆಯವರೂ ಇದ್ದರು.
ಕೊವಿಡ್ ನಲ್ಲಿ ರೋಗಿಗಳ ಯಾತನೆ ಹೊಸ ಮಟ್ಟಕ್ಕೇರಿರುತ್ತದೆ ಎನ್ನುತ್ತಾರೆ ಕೆಕ್ ಆಸ್ಪತ್ರೆಯ ಶಾಮಕ ಚಿಕಿತ್ಸಾ ಪರಿಣತೆ ಡಾ|ಸುನೀತಾಪುರಿ. ರೋಗದ ಗುಣಲಕ್ಷಣಗಳು- ಚಿಕಿತ್ಸೆಯ ಲಾಭ-ಅಪಾಯಗಳ ಬಗ್ಗೆ ವಿವರಿಸುತ್ತಾ ಅವರು, ವೈದ್ಯರಿಗೂ ಈ ಕೊರೊನಾ ವೈರಸ್ ಬಗ್ಗೆ ಗೊತ್ತಿರುವುದು ಅತ್ಯಲ್ಪ. ಈ ಕಾರಣಕ್ಕಾದರೂ ಪರಿಸ್ಥಿತಿ ಕೈಮೀರುವ ಮೊದಲು ಜನರು ಎಚ್ಚರ ವಹಿಸಬೇಕೆನ್ನುತ್ತಾರವರು.
ಶಾಮಕ ಚಿಕಿತ್ಸೆ, ತೀವ್ರ ಸ್ಥಿತಿ ತಲುಪಿರುವ ರೋಗಿಗಳಿಗೆ ಎಷ್ಟು ಸಾಧ್ಯವೋ ಅಷ್ಟು ಆರಾಮ, ಡಿಗ್ನಿಟಿ ಒದಗಿಸಲು ಪ್ರಯತ್ನಿಸುತ್ತದೆ, ಆದರೂ ಕುಟುಂಬಿಕರಿಗೆ ರೋಗಿಯ ಬದುಕು ವಿಸ್ತರಿಸುತ್ತಿದೆಯೋ ಸಾವು ಉದ್ದಕ್ಕೆಳೆಯುತ್ತಿದೆಯೋ ಗೊತ್ತಾಗುವುದಿಲ್ಲ. ಕೆಲವು ಗಂಭೀರ ರೋಗಿಗಳನ್ನು ಹಾನಿಗೀಡಾದ ಶ್ವಾಸಕೋಶಗಳ ಸುಧಾರಣೆಗಾಗಿ ವಿಶೇಷ ಮಂಚದಲ್ಲಿ ಕವುಚಿ ಮಲಗಿಸಬೇಕಾಗುತ್ತದೆ. ಅದರ ಅಡ್ಡಪರಿಣಾಮಗಳೂ ಇರುತ್ತವೆ ಎನ್ನುತ್ತಾರೆ ಡಾ|ಪುರಿ.
“ಹಾಗೆ ಮಲಗಿಸಿದಾಗ, ದೇಹದ್ರವಗಳ ಒತ್ತಡದಿಂದಾಗಿ ಮುಖ ಮತ್ತು ದೇಹದ ಭಾಗಗಳು ಊದಿಕೊಳ್ಳಬಹುದು. ಆ ವಿಕಾರವನ್ನು ಒಳಗಿನ ಸಿಬ್ಬಂದಿಗಳಾಗಿ ನಮಗೂ ನೋಡಲು ಕಷ್ಟವಾಗುತ್ತದೆ” ಎಂದವರು ಸಂಕಟಪಟ್ಟರು.
ಹೃದಯ ಸ್ಥಗಿತಗೊಂಡ ಸ್ಥಿತಿಯಲ್ಲಿ ಮೂವತ್ತರ ಹರೆಯದ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ಕರೆತಂದ ಕಥೆಯನ್ನು ಆಂಬ್ಯುಲೆನ್ಸ್ ಚಾಲಕ ಮನ್ನಿ ಹಂಚಿಕೊಂಡರು. “ನಾವು ಉಸಿರಾಟ ಪುನಃಸ್ಥಾಪಿಸಲು ಸಿಪಿಆರ್ ಸಹಿತ ಎಲ್ಲಪ್ರಯತ್ನ ಮಾಡಿದರೂ ಬದುಕಿಸಿಕೊಳ್ಳಲಾಗಲಿಲ್ಲ. ನಮಗಿದೀಗ ಬಹುತೇಕ ಯುದ್ಧವೇ ಆಗಿದೆ. ನಮ್ಮ ಕಣ್ಣಿಗೆ ಕಾಣಿಸದ ವೈರಿಯ ಜೊತೆ ಯುದ್ಧ.
ಎರಡನೇ ಮಹಾಯುದ್ಧ ಆಗಿದ್ದರೆ, ಬರುವ ಯುದ್ಧ ವಿಮಾನ ಕಾಣಿಸ್ತಿತ್ತು. ನಮ್ಮತ್ತ ಗುಮ್ಡೆಸೆಯುವ ಶತ್ರು ಸೈನಿಕರು ಕಣ್ಣಿಗೆ ಕಾಣಿಸುತ್ತಿದ್ದರು.ಈ ಯುದ್ಧದಲ್ಲಿ ಶತ್ರು ಕಣ್ಣಿಗೆ ಕಾಣಿಸುವುದಿಲ್ಲ. ದಾಳಿಯೂ ಅಚಾನಕ್ಕಾಗಿ ಸಂಭವಿಸುತ್ತದೆ. ಅದನ್ನೆದುರಿಸಲು ನಮ್ಮ ಬಳಿ ಇರುವುದು ಮಾಸ್ಕ್ ಮತ್ತು ಕೈ ತೊಳೆಯುವಿಕೆ ಮಾತ್ರ” ಎಂದರವರು.
“ನನಗೂ ಒಬ್ಬಳು ಮಗಳಿದ್ದಾಳೆ, ಆಕೆಗೆ ದೇಹದ ರೋಗನಿರೋಧಕ ವ್ಯವಸ್ಥೆಯ ತೊಂದರೆ ಇದೆ. ನನಗೆ ಈ ಸೋಂಕು ತಗುಲಬಾರದೆಂದಿಲ್ಲ. ನಾನು ಸೋಂಕನ್ನು ಆಕೆಗೆ ದಾಟಿಸುವ ಅಪಾಯ ಇದೆ. ಈ ಮಾನಸಿಕ ಒತ್ತಡಗಳನ್ನೆಲ್ಲ ನಾವು ಸಹೋದ್ಯೋಗಿಗಳ ಜೊತೆ ಹಂಚಿಕೊಂಡು ನಿರಾಳವಾಗಬೇಕು ಅಷ್ಟೇ.” ಎಂದ ಆಂಬ್ಯುಲೆನ್ಸ್ ಚಾಲಕ ಮನ್ನಿ ಅವರಲ್ಲಿ ಈವತ್ತು ಹೇಗನ್ನಿಸುತ್ತಿದೆ ಎಂದರೆ, ಅವರು “ಈವತ್ತು ನಾನು ಕಾರಲ್ಲಿ ಕುಳಿತು ಅತ್ತೇಬಿಟ್ಟೆ. ಇದು ಯಾವಾಗ ಮುಗಿಯತ್ತೋ ಗೊತ್ತಿಲ್ಲ. ನಾವು ಬದುಕಿನ ಅಂಚಿನಲ್ಲಿದ್ದೇವೆ ಅನ್ನಿಸ್ತಿದೆ” ಎಂದು ನಿಟ್ಟುಸಿರುಬಿಟ್ಟರು.
ಇತ್ತೀಚೆಗೆ ನಿಧನಹೊಂದಿದ ಮಹಿಳಾ ರೋಗಿಯೊಬ್ಬರ ಬಗ್ಗೆ ಹೇಳಿದ ಡಾ|ಪುರಿ, ಆಕೆಯ ಮಗಳು ಕಾಲೇಜು ವಿದ್ಯಾರ್ಥಿನಿ. ತಾನು ತನಗಾದ ನಷ್ಟದ ಬಗ್ಗೆ ಹೇಳಿದರೂ ಸಹಪಾಠಿಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದದ್ದನ್ನು ಉದಾಹರಿಸಿದರು. “ಎಳೆಯರು ಮಾಸ್ಕ್ ಧರಿಸುತ್ತಿಲ್ಲ. ರಸ್ತೆಯಲ್ಲಿ ಹಠಾತ್ ಕಾರ್ ಬಂದು ಗುದ್ದಿದ ಹಾಗೇ ನಮಗೆ ಕೊರೊನಾ ದಾಳಿ ಆಗಬಹುದು ಎಂಬುದನ್ನವರು ಮರೆಯುತ್ತಾರೆ. ಮಾಸ್ಕ್ ಎಂಬುದು ಸೀಟ್ ಬೆಲ್ಟ್ ಇದ್ದಂತೆ” ಎಂದರು.
ಸಿಸ್ಟಿಕ್ ಫೈಬ್ರೋಸಿಸ್ ಚಿಕಿತ್ಸಾ ಪರಿಣತೆಯೂ ಆಗಿರುವ ಡಾ|ಪುರಿ, ಆ ರೋಗದಲ್ಲಿ ಸಾವು ಬೇಗ ಬರುತ್ತದಾದರೂ, ಅದು ಬರುವ ಹೊತ್ತಿಗೆ ರೋಗಿ-ಮನೆಯವರು ಅದಕ್ಕೊಂದು ರೀತಿ ತಯಾರಾಗಿರುತ್ತಾರೆ. ಆದರೆ ಕೊರೊನಾ ಸಾವು ಮೈಮೇಲೆ ನೂರಾರು ಇಟ್ಟಿಗೆಗಳು ಧೊಪ್ಪೆಂದು ಬಿದ್ದಂತೆ. ಸಾವು ಹಠಾತ್ ಸಂಭವಿಸಿದಾಗ ಕುಟುಂಬ ಕೂಡ ಆಘಾತಕ್ಕೀಡಾಗುವುದು ಸಹಜ ಎಂದರು. “ಪ್ರತೀ ಬಾರಿ ಅದೇ ರೀತಿಯ ಮುಖಗಳು… ನಿರಾಕರಣೆಯ ಮುಖಗಳು. ಇದಾಗಲು( ಈ ಸಾವು ಸಂಭವಿಸಲು) ಸಾಧ್ಯವೇ ಇಲ್ಲ ಎಂಬ ಮುಖಗಳು… ನೀವೇನೋ ಹೇಳುತ್ತಿದ್ದೀರಿ ಅದು ನನ್ನ ಮೆದುಳಿನಲ್ಲಿ ದಾಖಲಾಗುತ್ತಿಲ್ಲ ಎಂಬಂತಹ ಮುಖಗಳು.” ಎಂದು ಆ ಸನ್ನಿವೇಶವನ್ನು ಡಾ|ಪುರಿ ವಿವರಿಸುತ್ತಾರೆ.
ಜಗನ್ಮಾರಿಯ ಆರಂಭದ ದಿನಗಳಲ್ಲಿ ಡಾ|ರಾವ್ ಮನೆಗೂ ಹೋಗುತ್ತಿರಲಿಲ್ಲ. ಕುಟುಂಬಕ್ಕೆ ಸೋಂಕು ತಗುಲೀತೆಂಬ ಭಯ. ಕೆಲಸದಿಂದ ದೂರ ಉಳಿಯಲು ಸಾಧ್ಯವೇ ಇಲ್ಲದ ಸ್ಥಿತಿ.“ನಾನು ರೋಗಿಗಳ ಮನೆಗೆ ತೆರಳಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಆರೈಕೆ ಮಾಡುತ್ತೇನೆಂಬುದು ವೈದ್ಯರ ಹಿಪೊಕ್ರಾಟಿಕ್ ಪ್ರತಿಜ್ಞೆಯ ಭಾಗ. ಆದರೆ ನಾವೀಗ ರಾಷ್ಟ್ರೀಯ ತುರ್ತುಸ್ಥಿತಿಯಲ್ಲಿದ್ದರೂ ಅದನ್ನು ಹಾಗೆ ಪರಿಗಣಿಸುತ್ತಿಲ್ಲ, ನಮಗೆ ಈ ಕಷ್ಟಕಾಲದಲ್ಲಿ ಅಗತ್ಯವಿದ್ದ ನಾಯಕತ್ವವೂ ಸಿಕ್ಕಿಲ್ಲ. “ನಮ್ಮ ಮುಕ್ತವಾಗಿರುವ ಹಕ್ಕುಗಳನ್ನು ನಾನು ಗೌರವಿಸುತ್ತೇನೆ, ಅದರ ಜೊತೆ ನಮಗೆ ಸಾಮಾಜಿಕ ಜವಾಬ್ದಾರಿಯೂ ಬೇಕು.”
ಮಾತು ಮುಗಿದ ಬಳಿಕ ಡಾ| ರಾವ್ ತನ್ನ ಪಾಳಿಗೆ ಹಿಂದಿರುಗಿದರು. ಸಂಕಟ ಇಳಿಗತಿಯಲ್ಲಿರಬೇಕಾಗಿದ್ದ ಈ ಬೇಸಗೆಯಲ್ಲಿ ನಮ್ಮ ಬದುಕು ತೂಗುಯ್ಯಾಲೆಯಲ್ಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್ನ ಎಸ್ಎನ್ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್ಎನ್ಎನ್ ಅಪಾರ್ಟ್ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.



