ದಿನದ ಸುದ್ದಿ
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗ ಯೋಜನೆ ಪ್ರಗತಿ ಪರಿಶೀಲನೆ ; ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ

ಸುದ್ದಿದಿನ,ಚಿತ್ರದುರ್ಗ: ಬಯಲುಸೀಮೆಯ ಜನರ ಬಹುದಿನಗಳ ಬೇಡಿಕೆಯಾಗಿರುವ ದಾವಣಗೆರೆ-ಚಿತ್ರದುರ್ಗ-ತುಮಕೂರು 198 ಕಿ.ಮೀ. ಉದ್ದದ ನೂತನ ನೇರ ರೈಲ್ವೆ ಮಾರ್ಗ ಯೋಜನೆಗೆ 06 ತಿಂಗಳ ಒಳಗಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗ ಯೋಜನೆ ಕುರಿತು ಚಿತ್ರದುರ್ಗ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಶನಿವಾರ ಮೂರು ಜಿಲ್ಲೆಗಳ ಅಧಿಕಾರಿಗಳು ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಾವಣಗೆರೆ-ಚಿತ್ರದುರ್ಗ-ತುಮಕೂರು ರೈಲ್ವೆ ಮಾರ್ಗವು ಈ ಭಾಗದ ಜನರ ಬಹು ಬೇಡಿಕೆಯ ಯೋಜನೆಯಾಗಿದ್ದು, 198 ಕಿ.ಮೀ. ರೈಲ್ವೆ ಮಾರ್ಗಕ್ಕೆ 1801 ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ಶೇ. 50 ರಷ್ಟು ವೆಚ್ಚ ಭರಿಸಿದರೆ, ಉಳಿದ ಶೇ. 50 ರಷ್ಟು ವೆಚ್ಚವನ್ನು ರೈಲ್ವೆ ಇಲಾಖೆ ಭರಿಸಲು ಸಿದ್ಧವಾಗಿದೆ. ಪ್ರಮುಖವಾಗಿ ಈ ಯೋಜನೆಗೆ ಭೂಮಿ ಸ್ವಾಧೀನ ಪಡಿಸಿ, ರೈಲ್ವೆ ಇಲಾಖೆಗೆ ಹಸ್ತಾಂತರಿಸುವ ಗುರುತರ ಹೊಣೆ ರಾಜ್ಯ ಸರ್ಕಾರದ ಮೇಲಿದ್ದು, ಇದುವರೆಗೂ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ 900 ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕಿದೆ ಅಲ್ಲದೆ, ವಿಶೇಷ ಭೂಸ್ವಾಧೀನ ಅಧಿಕಾರಿಯ ಕಚೇರಿಯನ್ನು ಚಿತ್ರದುರ್ಗದಲ್ಲಿ ಸ್ಥಾಪಿಸಿ, ಅಧಿಕಾರಿಯನ್ನು ರಾಜ್ಯ ಸರ್ಕಾರ ನೇಮಿಸಬೇಕು.
ಪ್ರಸ್ತುತ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಮುಗಿದ ಕೂಡಲೆ, ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ಅನುದಾನ ಬಿಡುಗಡೆ ಹಾಗೂ ವಿಶೇಷ ಭೂಸ್ವಾಧೀನ ಅಧಿಕಾರಿಯನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು. ಲೋಕಸಭೆಗೆ ಚುನಾವಣೆ ಮಾರ್ಚ್ ವೇಳೆಗೆ ಘೋಷಣೆಯಾಗುವ ಸಂಭವ ಇರುವುದರಿಂದ, ಅಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆಯನ್ನು ಕೂಡಲೆ ಪ್ರಾರಂಭಿಸಬೇಕು. ಭೂಮಿ ಕಳೆದುಕೊಳ್ಳುವ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರೈಲ್ವೆ ಮಾರ್ಗ ಬರುವುದರಿಂದ ಭೂಮಿಯ ಬೆಲೆ ದುಬಾರಿ ಇರುತ್ತದೆ. ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾದಷ್ಟೂ ಭೂಮಿಯ ಬೆಲೆ ಇನ್ನಷ್ಟು ಹೆಚ್ಚಾಗುತ್ತದೆ. ಇದರಿಂದ ಯೋಜನೆಯ ಮೇಲೆ ಅನಗತ್ಯ ಹೆಚ್ಚುವರಿ ವೆಚ್ಚ ತಗುಲುವ ಸಾಧ್ಯತೆ ಇರುತ್ತದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವುದು, ಅಗತ್ಯ ಅನುದಾನವನ್ನು ಬಿಡುಗಡೆ ಮಾಡುವುದು ಹಾಗೂ ವಿಶೇಷ ಭೂಸ್ವಾಧೀನ ಅಧಿಕಾರಿಯನ್ನು ನೇಮಿಸುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯ ಅಗತ್ಯವಿದೆ. ಹೀಗಾಗಿ ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಭೂಸ್ವಾಧೀನ ಅಧಿಕಾರಿಗಳು ಕೂಡಲೆ ಆದ್ಯತೆ ಮೇರೆಗೆ ಕ್ರಮ ಕೈಗೊಂಡು 06 ತಿಂಗಳ ಒಳಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಭೂಸ್ವಾಧೀನ ಬಳಿಕವೂ ಪರಿಹಾರ ಹಣ ಪಾವತಿ ವಿಳಂಬವಾದಲ್ಲಿ, ಪರಿಹಾರ ಮೊತ್ತಕ್ಕೆ ನಿಯಮಾನುಸಾರ ಬಡ್ಡಿ ಸಹಿತ ರೈತರಿಗೆ ಪರಿಹಾರ ಪಾವತಿಸಬೇಕು ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಸೂಚನೆ ನೀಡಿದರು.
ರೈಲ್ವೆ ಇಲಾಖೆ ಸಿದ್ಧ : ರೈಲ್ವೆ ಇಲಾಖೆ ಬೆಂಗಳೂರಿನ ಮುಖ್ಯ ಇಂಜಿನಿಯರ್ ಅಲೋಕ್ ತಿವಾರಿ ಅವರು ಮಾತನಾಡಿ, ಯೋಜನೆಗೆ ಒಟ್ಟಾರೆ 2165 ಎಕರೆ ಭೂಮಿ ಅಗತ್ಯವಿದ್ದು, ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಕೈಗೊಂಡು, ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಿದ ಕೂಡಲೆ, ಕಾಮಗಾರಿಯನ್ನು ಪ್ರಾರಂಭಿಸಿ, ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಸನ್ನದ್ಧವಾಗಿದೆ ಎಂದರು. ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಈ ಹಿಂದೆ ಸಮೀಕ್ಷೆಗಾಗಿ ಘೋಷಣೆಯಾಗಿದ್ದ ಚಿತ್ರದುರ್ಗ-ಜಗಳೂರು-ಕೊಟ್ಟೂರು ನೂತನ ರೈಲ್ವೆ ಮಾರ್ಗದ ಕುರಿತು ಪ್ರಸ್ತಾಪಿಸಿದ್ದಕ್ಕೆ ಉತ್ತರಿಸಿದ ರೈಲ್ವೆ ಅಧಿಕಾರಿಗಳು, 78 ಕಿ.ಮೀ. ಉದ್ದದ ಈ ಯೋಜನೆಗೆ 554 ಕೋಟಿ ರೂ. ಅಂದಾಜು ವೆಚ್ಚವಾಗಲಿದ್ದು, ಯೋಜನೆ ಕುರಿತು ವಿಸ್ತøತ ಪರಿಶೀಲನೆಯ ಬಳಿಕ, ಈ ಯೋಜನೆ ಅಷ್ಟೇನು ಲಾಭದಾಯಕ ಹಾಗೂ ಕಾರ್ಯಸಾಧುವಲ್ಲ ಎಂಬುದಾಗಿ ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ ಎಂದರು.
ಯೋಜನೆ ಪ್ರಗತಿ ಪರಿಶೀಲನೆ : ಚಿತ್ರದುರ್ಗ ಉಪವಿಭಾಗಾಧಿಕಾರಿ ವಿಜಯಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 101. 35 ಕಿ.ಮೀ. ರೈಲ್ವೆ ಮಾರ್ಗ ಬರಲಿದ್ದು, 1063 ಎಕರೆ ಭೂಮಿ ಅಗತ್ಯವಿದ್ದು, ಪರಿಹಾರಕ್ಕಾಗಿ 560 ಕೋಟಿ ರೂ. ಅಗತ್ಯವಿದೆ. ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದ ಕೂಡಲೆ, ಪರಿಹಾರ ಮೊತ್ತ ಪಾವತಿಸಲು ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕಾಗುತ್ತದೆ. ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಕೈಗೊಳ್ಳಲಾಗುವುದು ಎಂದರು. ದಾವಣಗೆರೆ ಜಿಲ್ಲೆಯ ಅಧಿಕಾರಿ ರೇಷ್ಮಾ ಅವರು ಮಾತನಾಡಿ, ಜಿಲ್ಲೆಯಲ್ಲಿ 31. 05 ಕಿ.ಮೀ. ರೈಲ್ವೆ ಮಾರ್ಗ ಬರಲಿದ್ದು, 237 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಬೇಕಿದೆ. 7 ಗ್ರಾಮಗಳಲ್ಲಿ ಕಂದಾಯ ಹಾಗೂ ರೈಲ್ವೆ ಇಲಾಖೆ ಜಂಟಿ ಅಳತೆ ಮಾಡಿದ್ದು, ಇನ್ನು 7 ಗ್ರಾಮಗಳಲ್ಲಿ ಜಂಟಿ ಅಳತೆ ಕಾರ್ಯ ಬಾಕಿ ಇದೆ. ಜನವರಿ ಒಳಗಾಗಿ ಈ ಕಾರ್ಯ ಪೂರ್ಣಗೊಳ್ಳುತ್ತದೆ. ಪರಿಹಾರ ಪಾವತಿಗೆ 100 ಕೋಟಿ ರೂ. ಅನುದಾನದ ಅಗತ್ಯವಿದೆ. ಈಗಾಗಲೆ 237 ಎಕರೆ ಭೂಸ್ವಾಧೀನಕ್ಕೆ 11(1) ಅಧಿಸೂಚನೆ ಹೊರಡಿಸಲಾಗಿದೆ. 6 ತಿಂಗಳ ಒಳಗಾಗಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.
ತುಮಕೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿ 59 ಕಿ.ಮೀ. ರೈಲ್ವೆ ಮಾರ್ಗ ಬರಲಿದ್ದು, 796 ಎಕರೆ ಭೂಮಿ ಅಗತ್ಯವಿದೆ. ಈಗಾಗಲೆ 26 ಎಕರೆ ಸರ್ಕಾರಿ ಭೂಮಿ ಲಭ್ಯವಿದ್ದು, ಉಳಿದ 661 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಈ ಪೈಕಿ 136 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಕಾಮಗಾರಿ ಪ್ರಾರಂಭಗೊಂಡಿದೆ. ಭೂಮಿ ಸ್ವಾಧೀನ ಸಂಬಂಧ ಪರಿಹಾರ ಪಾವತಿಸಲು 360 ಕೋಟಿ ರೂ. ಅನುದಾನದ ಅಗತ್ಯವಿದೆ. 6 ತಿಂಗಳ ಒಳಗಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಮಾತನಾಡಿ, ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗವು ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಂತ ಉಪಯುಕ್ತ ಯೋಜನೆಯಾಗಿದೆ. ಈ ಮಾರ್ಗದಲ್ಲಿ ಬಸ್ ಪ್ರಯಾಣ ದರ ಹಾಗೂ ಸರಕು ಸಾಗಾಣಿಕೆ ದರ ಅತ್ಯಂತ ದುಬಾರಿ ಇದೆ. ನೂತನ ರೈಲ್ವೆ ಮಾರ್ಗ ಬೇಗ ಪೂರ್ಣಗೊಂಡಲ್ಲಿ, ಸಾರ್ವಜನಿಕರಿಗೆ ಪ್ರಯಾಣಕ್ಕೆ ಹಾಗೂ ಸರಕು ಸಾಗಾಣಿಕೆಯೂ ಮಿತವ್ಯಯವಾಗಲಿದೆ. ಜಿಲ್ಲೆಯಲ್ಲಿ ಭೂಸ್ವಾಧೀನ ಕಾರ್ಯ ಕುರಿತು ತಾವೇ ಖುದ್ದಾಗಿ ಆಸಕ್ತಿ ವಹಿಸಿ, ಬೇಗ ಪೂರ್ಣಗೊಳಿಸಲು ಪ್ರಾಮಾಣಿಕ ಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್. ರವೀಂದ್ರ, ಅಪರ ಜಿಲ್ಲಾಧಿಕಾರಿ ಸಂಗಪ್ಪ ಸೇರಿದಂತೆ ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ ಕಂದಾಯ ಇಲಾಖೆ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಪ್ರವಾಸೋದ್ಯಮ ಇಲಾಖೆ | ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿಗೆ ಸೇರಿದ 292 ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 162 ಅಭ್ಯರ್ಥಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಆಹಾರ ಕರಕುಶಲ ಸಂಸ್ಥೆ ಮೈಸೂರು ( Food Craft Institute ) ಮತ್ತು ಹೋಟೆಲ್ ನಿರ್ವಹಣಾ ಸಂಸ್ಥೆ ಬೆಂಗಳೂರು (Institute Of Hotel Management ) ಇವರ ಸಹಯೋಗದಲ್ಲಿ ವಸತಿ ಸಹಿತ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಲ್ಟಿ ಕ್ಯೂಸಿನ್ ಕುಕ್ ( Multi Cusine Cook ) ಮತ್ತು ಫುಡ್ ಅಂಡ್ ಬೇವರೇಜ್ ಸರ್ವಿಸ್ ಸ್ಟೇವಾರ್ಡ್ ( Food And Beverage Service Steward ) ನಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಜಿಲ್ಲೆಯ ಅಭ್ಯರ್ಥಿಗಳು ಮಾ.25 ರಿಂದ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿನ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ದ್ವಿ-ಪ್ರತಿಯಲ್ಲಿ ಏಪ್ರಿಲ್ 3 ರೊಳಗೆ ನೇರವಾಗಿ ಇಲಾಖೆಗೆ ಸಲ್ಲಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಕಾವ್ಯ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಜಯಲಕ್ಷ್ಮಿ ಕಾರಂತ್ ಅವರಿಗೆ ‘ಯಕ್ಷ ಧ್ರುವ’ ರಾಜ್ಯ ಪ್ರಶಸ್ತಿ ಪ್ರದಾನ

ಸುದ್ದಿದಿನ,ದಾವಣಗೆರೆ:ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆಯ ಅಧ್ಯಕ್ಷರೂ, ಹಿರಿಯ ಸಾಹಿತಿ, ಯಕ್ಷಗಾನ ವಿದ್ವಾಂಸರು, ತಾಳಮದ್ದಳೆಯ ಅರ್ಥಧಾರಿಗಳಾದ ಜಯಲಕ್ಷ್ಮಿ ಕಾರಂತ್‌ರವರಿಗೆ ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ಭಂಟರ ಭವನದಲ್ಲಿ ಮಂಗಳೂರಿನ ಯಕ್ಷ ಧ್ರುವ ಪಟ್ಲ ಪೌಂಡೇಷನ್ ಟ್ರಸ್ಟ್ ಹಮ್ಮಿಕೊಳ್ಳಲಾದ ಮಹಿಳಾ ಘಟಕದ 8ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ “ಯಕ್ಷ ಧ್ರುವ” ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು ಎಂದು ಕಲಾಕುಂಚ ಯಕ್ಷರಂಗದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಹಿರಿಯ, ಕಿರಿಯ ಮಹಿಳೆಯರಿಗೆ, ಮಕ್ಕಳಿಗೆ ಯಕ್ಷಗಾನ ಮದ್ದಳೆ ತರಬೇತಿ, ಮಹಾಭಾರತ, ರಾಮಾಯಣ ಪರಂಪರೆಯ ಪೌರಾಣಿಕ ಪ್ರಸಂಗಗಳ ರಚನೆ, ನಿವೃತ್ತಿ ಶಿಕ್ಷಕಿಯಾದರೂ ಶೈಕ್ಷಣಿಕ ಕಾಳಜಿಯ ಸ್ವಯಂ ಸೇವೆಯೊಂದಿಗೆ, ಕಲೆ, ಸಾಹಿತ್ಯ, ಸಂಗೀತ, ಭಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಗುರುತಿಸಿ ಶ್ರೀಮತಿ ಜಯಲಕ್ಷ್ಮಿ ಕಾರಂತ್‌ರನ್ನು ಮಹತ್ವಪೂರ್ಣ ಈ ಪ್ರಶಸ್ತಿಗೆ ಭಾಜನಾಗಿದ್ದು ಕಲಾಕುಂಚ ಯಕ್ಷರಂಗ ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಅಲರ್ಟ್..!

- ಸುನೀತ ಕುಶಾಲನಗರ
ನದಿಯ ನೇವರಿಸಿದ ಗಾಳಿ
ಮುದಗೊಳಿಸಿ ಸರಿಯಿತು.
ಜಡಿ ಮಳೆ ಧೋ ಎಂದು
ಸಕಾಲಿಕವಾಗಿ ಸುರಿದು
ಹೊಸ ಹುಟ್ಟು.
ಆದರೇನು?
ಹಿಂಗಾರು, ಮುಂಗಾರು
ಆಗೊಮ್ಮೆ ಈಗೊಮ್ಮೆ
ಪದೇ ಪದೇ ಅದೇ ರಾಗ .
ಸುರಿದು ತುಂತುರು
ಕಾಣಿಸಿ ನಿಂತಿತೆನ್ನುವಾಗ
ಮತ್ತೆ ನಿಲ್ಲದ ಹಠ.
ಮಳೆಗೆ ಈಗ ಮುಟ್ಟು
ನಿಲ್ಲುವ ಸಮಯವೋ?
ಗುಡುಗು,ಮಿಂಚಿನಿಂದ
ಮುಟ್ಟಿನಲ್ಲಿ ಏರುಪೇರೋ ?
ಒಟ್ಟಿನಲ್ಲಿ
ನದಿಯ ಸೋಕಿದ ಗಾಳಿ
ಸಮುದ್ರದೊಳಗೆ ವಿಲೀನ.
ಅಕಾಲಿಕ ಮಳೆ…
ಇಳೆಗೆ ಸೊಂಟ ಬೇನೆ
ನದಿಯ ತಾಕಿದ ಬೆಳದಿಂಗಳು
ಕಿವಿಯಲ್ಲಿ ಉಸುರಿತು
ಹರಿಯುತ್ತಿರುವ ನದಿಯು
ಬೀಸುವ ಗಾಳಿಯು
ತಲೆಯೆತ್ತಿ ನಿಂತ ಬೆಟ್ಟವೂ
ಸ್ಥಾನ ಬದಲಿಸಲು
ಹೊತ್ತು ಬೇಕೆ?
ನಿಲ್ಲದ ಮಳೆಯ ಮುಟ್ಟಿಗೆ
ಸಲ್ಲುವ ಘೋಷಣೆ
ಹೈ ಅಲರ್ಟ್!
ಬದುಕಿನ ಧ್ಯಾನ
ಯೆಲ್ಲೋ, ಆರೆಂಜ್, ರೆಡ್
ಬಣ್ಣಗಳ ಅಲರ್ಟ್ ನಲ್ಲೇ
ಕಳೆದು ಹೋಗುತ್ತಿದೆ.
ಕಾಮನ ಬಿಲ್ಲ ತೋರಿಸಿ
ಸರಿದು ಬಿಡು ಮಳೆಯೇ
ಇಳೆಯ ಉಸಿರು
ಹಸಿರಾಗಲಿ. (ಕವಯಿತ್ರಿ: ಸುನೀತ ಕುಶಾಲನಗರ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಕ್ಯೂ-ಸ್ಪೈಡರ್ಸ್ ವತಿಯಿಂದ ಉಚಿತ ಉದ್ಯೋಗದರಿತ ಕೌಶಲ್ಯ ತರಬೇತಿ ಆಯ್ಕೆ ಪ್ರಕ್ರಿಯೆ
-
ದಿನದ ಸುದ್ದಿ7 days ago
ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಆರಂಭಿಸಿ : ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯ
-
ದಿನದ ಸುದ್ದಿ6 days ago
ಅಮಾನವೀಯ ಕೃತ್ಯ | ಹೆಣ್ಣು ಮಗು ಮಾರಾಟ ಮಾಡಿದ ಪೋಷಕರು
-
ಅಂಕಣ6 days ago
ಸಿದ್ಧಾಂತ ಮತ್ತು ಪತ್ರಿಕೋದ್ಯಮ
-
ದಿನದ ಸುದ್ದಿ6 days ago
ದಾವಣಗೆರೆ | ನಾಳೆಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ, 81 ಕೇಂದ್ರಗಳಲ್ಲಿ 22579 ವಿದ್ಯಾರ್ಥಿಗಳು
-
ದಿನದ ಸುದ್ದಿ6 days ago
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್
-
ಅಂಕಣ3 days ago
ಕವಿತೆ | ಅಲರ್ಟ್..!
-
ದಿನದ ಸುದ್ದಿ1 day ago
ಜಯಲಕ್ಷ್ಮಿ ಕಾರಂತ್ ಅವರಿಗೆ ‘ಯಕ್ಷ ಧ್ರುವ’ ರಾಜ್ಯ ಪ್ರಶಸ್ತಿ ಪ್ರದಾನ