ದಿನದ ಸುದ್ದಿ
ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎನ್ನುವ ಪ್ರಶ್ನೆಯೇ ಇಲ್ಲ : ಸಚಿವ ಭೈರತಿ ಬಸವರಾಜ್
ಸುದ್ದಿದಿನ,ದಾವಣಗೆರೆ: ರೋಗಿಗಳಿಗೆ ಬೆಡ್ ಇಲ್ಲ ಎಂಬುದರ ಬಗ್ಗೆ ವರದಿ ಬಂದಿವೆ. ಬೆಡ್ ಇಲ್ಲ ಎನ್ನುವ ಪ್ರಶ್ನೆಯೇ ಇಲ್ಲ. ಇದು ಯಾರೋ ಹುಟ್ಟ ಹಾಕಿದ್ದಾರೆ. ಸಾಕಷ್ಟು ವ್ಯವಸ್ಥಿತವಾಗಿ ಸನ್ನದ್ದರಾಗಿದ್ದೇವೆ. ಯಾವುದೇ ತೊಂದರೆ ಇಲ್ಲ ಎಂದ ಅವರು, ಬೇರೆ ಆಸ್ಪತ್ರೆಗಳಿಗೆ ರೆಫರ್ ಮಾಡಿದ ಪ್ರಕರಣಗಳಲ್ಲಿ ಕೂಡ ಕೊರೊನಾ ರೋಗಿಗಳಿಗೆ ಸರ್ಕಾರವೇ ಹಣ ಭರಿಸುತ್ತದೆ ಈ ಬಗ್ಗೆ ಯಾವುದೇ ಅನುಮಾನ ಬೇಡ. ಎಬಿಆರ್ಕೆ ಆರೋಗ್ಯ ಯೋಜನೆಯಡಿ ಹಣ ಸಂದಾಯ ಮಾಡಲಾಗುತ್ತದೆ. ಯಾವುದೇ ಫೀ ನೀಡುವ ಅವಶ್ಯಕತೆ ಇಲ್ಲ ಎಂದು ಸಚಿವ ಭೈರತಿ ಬಸವರಾಜ್
ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಉಸ್ತುವಾರಿ ಸಚಿವನಾಗಿ ಬಂದಂತಹ ಸಂದರ್ಭದಲ್ಲಿ ಅನೇಕ ಮನವವಿಗಳನ್ನು ರೈತರು ಹಾಗೂ ಕಾರ್ಮಿಕರು ನೀಡಿದ್ದರು. ಆ ವೇಳೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ದಾವಣಗೆರೆ ವಿಶೇಷವಾಗಿ ಮೆಕ್ಕೆಜೋಳ ಬೆಳೆಯುವಂತಹ ಜಿಲ್ಲೆಯಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ರೂ. 5 ಸಾವಿರದಂತೆ ಸುಮಾರು ರೂ. 500 ಕೋಟಿ ಹಣ ಪ್ರೋತ್ಸಾಹ ಧನವನ್ನು ರೈತರಿಗೆ ನೀಡಲಾಗಿದೆ.
ಕೊರೊನಾ ಸಂದರ್ಭದಲ್ಲಿ ಲಾಕ್ಡೌನ್ ಹಿನ್ನೆಲೆಯಿಂದಾಗಿ ಹೂ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಆ ವೇಳೆ ಒಂದು ಹೆಕ್ಟೇರ್ಗೆ ರೂ. 25 ಸಾವಿರ ಘೋಷಣೆ ಮಾಡಲಾಗಿದೆ. ಜೊತೆಗೆ ಆಟೋ ಟ್ಯಾಕ್ಸಿ ಚಾಲಕರು, ಕಾರ್ಮಿಕರು, ನೇಕಾರರು, ಸವಿತಾ ಸಮಾಜ, ನೇಕಾರರು ಸೇರಿದಂತೆ ಎಲ್ಲ ಸಮುದಾಯಗಳಿಗೆ ಆರ್ಥಿಕವಾಗಿ ಸಹಾಯ ಮಾಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದು ಸ್ಮರಿಸಿದರು.
ಇಡೀ ದೇಶದಲ್ಲಿ ನಮ್ಮ ರಾಜ್ಯ ರೂ. 2 ಸಾವಿರ ಕೋಟಿ ಹಣವನ್ನು ಬಡವರಿಗೆ ಪ್ರೋತ್ಸಾಹಧನವಾಗಿ ಕೊಟ್ಟು, ಅವರೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ನೀಡಲಾಗಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ರೂ.22 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ನಗರದಲ್ಲಿ 3 ಕೋವಿಡ್ ಟೆಸ್ಟಿಂಗ್ ಲ್ಯಾಬ್ ಮಾಡಲಾಗಿದೆ. ಚಿಗಟೇರಿ ಆಸ್ಪತ್ರೆಯನ್ನು ಉನ್ನತ ದರ್ಜೆಗೇರಿಸಲು ಮನವಿ ಮಾಡಿದ್ದೇನೆ. ತಾಲ್ಲೂಕು ಹಂತದಲ್ಲೂ ಪ್ರವಾಸ ಮಾಡಿ ಅವರ ಮನವಿಗೆ ಸ್ಪಂದಿಸಿದ್ದೇನೆ. ಅದೇ ರೀತಿ ಮುಂದೆಯೂ ಸಹ ಕಾರ್ಯ ನಿರ್ವಹಿಸುವೆ ಎಂದು ಭರವಸೆ ನೀಡಿದರು.
ಪ್ರಗತಿಪರ ನಾಯಕರಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಒಂದು ವರ್ಷ ಪೂರೈಸಿದೆ. ಕೊರೊನಾ ಹಿನ್ನೆಲೆಯ ಈ ಸಂದರ್ಭದಲ್ಲಿ ಸರ್ಕಾರದ ಆದೇಶ ಹಾಗೂ ಕೇಂದ್ರ ಸರ್ಕಾರದ ನಿಯಮದಂತೆ ಕಾರ್ಯಕ್ರಮ ನೆರವೇರಿಸಲಾಗಿದೆ ಎಂದರು.
ರಾಜ್ಯದ ಜನತೆಯನ್ನು ಉದ್ದೇಶಿಸಿ ಮುಖ್ಯಮಂತ್ರಿಗಳು ಅನೇಕ ತೀರ್ಮಾನ ಹಾಗೂ ದೃಢ ಸಂಕಲ್ಪಗಳನ್ನು ತಿಳಿಸಿದ್ದಾರೆ. ಕಳೆದ ಒಂದು ವರ್ಷದಿಂದ ಆದಂತಹ ಪರಿಸ್ಥಿತಿಗಳನ್ನು ಅವಲೋಕನ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಅನೇಕ ಸಂಕಷ್ಟಗಳು ಎದುರಾದವು. ಭೀಕರ ಬರಗಾಲ, ಅದಾದ ಮರು ಕ್ಷಣವೇ ಮಳೆಯ ರುದ್ರನರ್ತನದಿಂದ ಅನೇಕ ಮನೆ, ಬೆಳೆ ನಷ್ಟ ಜೊತೆಗೆ ಸಾವು ನೋವು ಎಲ್ಲವೂ ಕೂಡ ಸಂಭವಿಸಿತು.
ಆಗ ಸಚಿವ ಸಂಪುಟ ಇಲ್ಲದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಒಬ್ಬರೇ ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ. ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡುವ ಹಾಗೂ ಬೆಳೆ ಹಾನಿ ಆದವರಿಗೆ ಬೆಳೆ ಪರಿಹಾರ ಒದಗಿಸುವ ಕೆಲಸ ಮಾಡಿದ್ದಾರೆ. ಇದಾದ ಬಳಿಕ ಕೊರೊನಾ ಹೆಮ್ಮಾರಿ ಕಾಯಿಲೆ ಅವರಿಸಿತು. ಈ ವೇಳೆಯೂ ಕೂಡ ಧೃತಿಗೆಡದೆ ಕೊರೊನಾ ಮುಕ್ತಿಗೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡು, ಸಾಕಷ್ಟು ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಅಭಿವೃದ್ಧಿ ಬಗ್ಗೆ ಅನೇಕ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಯ ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲ. ಅವರ ಋಣ ತೀರಿಸುವ ಕೆಲಸ ನನ್ನ ಮೇಲಿದೆ. ಖಂಡಿತವಾಗಿ ಇನ್ನು ಮೂರು ವರ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಕೊರೊನಾ ಬಾರದಿದ್ದರೆ ರಾಜ್ಯ ಅಭಿವೃದ್ಧಿ ಪಥದತ್ತ ಸಾಗುತಿತ್ತು. ಕೊರೊನಾ ಬಂದು ಆರ್ಥಿಕ ಸಮಸ್ಯೆ ಎದುರಿಸುವ ಕೆಲಸವಾಗಿದೆ. ರಾಜ್ಯದಲ್ಲಿ ಇನ್ನೂ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಬೇಕಾಗಿದೆ. ರೈತರಿಗೆ ಬೇಕಾದಂತಹ ಅನೇಕ ಕಾರ್ಯಕ್ರಮ, ಯಾವೊಬ್ಬ ಬಡವರು ಇನ್ನು ಮೂರು ವರ್ಷದಲ್ಲಿ ರಾಜ್ಯದಲ್ಲಿ ಮನೆ ಇಲ್ಲದೆ ಇರಬಾರದು ಎಂಬ ದೃಢ ಸಂಕಲ್ಪವನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.
ಇದು ನಿಜವಾಗಲೂ ಹೆಮ್ಮೆ ತರುವಂತಹ ವಿಷಯವಾಗಿದೆ. ಅನೇಕ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ಒಂದು ವರ್ಷದಲ್ಲಿ ಮಾಡಿದ್ದಾರೆ. ಇನ್ನೂ ಮೂರು ವರ್ಷ ಅವಧಿಯಿದೆ. ಅಷ್ಟರಲ್ಲಿ ಉಳಿದ ಕಾರ್ಯಕ್ರಮ ಹಾಗೂ ಅಭಿವೃದ್ಧಿ ಏನಾಗಬೇಕು ಅದರ ಬಗ್ಗೆ ಗಮನ ಹರಿಸಲಾಗುವುದು ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ
ಸುದ್ದಿದಿನ,ದಾವಣಗೆರೆ: ದೇಶದ ಪ್ರಮುಖ ಆರೋಗ್ಯ ವಿಮೆ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶುರನ್ಸ್ ಕಂಪನಿ ಲಿಮಿಟೆಡ್, ಕರ್ನಾಟಕದಲ್ಲಿ ಮಳೆಗಾಲದಲ್ಲಿ ಜನರನ್ನು ಕಾಡುವ ವಿವಿಧ ಬಗೆಯ ಕಾಯಿಲೆಗಳ ಚಿಕಿತ್ಸಾ ಸೌಲಭ್ಯವನ್ನು ವಿಸ್ತರಿಸಿದೆ.
ಈ ಉಪಕ್ರಮದ ಮೂಲಕ, ಪಾಲಿಸಿದಾರರಿಗೆ ‘ಟಾಕ್ ಟು ಸ್ಟಾರ್’ ಸೇವೆ ಹಾಗೂ ಮನೆ ಬಾಗಿಲಿನ ಆರೋಗ್ಯ ಸೇವೆ ಕಲ್ಪಿಸಿಕೊಡಲಾಗುತ್ತಿದೆ. ಇದರ ನೆರವಿನಿಂದ ಆರಂಭಿಕ ಹಂತದಲ್ಲೇ ಅಗತ್ಯ ವೈದ್ಯಕೀಯ ಸಲಹೆ ಮತ್ತು ಪರೀಕ್ಷೆಗಳ ನೆರವು ಒದಗಿಸಲಾಗುತ್ತಿದೆ. ಜೊತೆಗೆ, ಸಾರ್ವಜನಿಕರು ಸ್ಟಾರ್ ಹೆಲ್ತ್ ಕಸ್ಟಮರ್ ಆ್ಯಪ್ ಮೂಲಕ 24*7 ಉಚಿತ ವರ್ಚುವಲ್ ವೈದ್ಯರ ಸಮಾಲೋಚನೆ ಪಡೆಯುವ ಅವಕಾಶವನ್ನೂ ಕಲ್ಪಿಸಲಾಗಿದೆ ಎಂದು ಸ್ಟಾರ್ ಹೆಲ್ತ್ ಇನ್ಶುರನ್ಸ್ ಕರ್ನಾಟಕ ವಹಿವಾಟು ವಿಭಾಗದ ಮುಖ್ಯಸ್ಥ ಆದಿತ್ಯ ಓಂಪ್ರಕಾಶ್ ಬಿಯಾನಿ ಹೇಳಿದ್ದಾರೆ.
ಪಾಲಿಸಿದಾರರಿಗೆ ಅನಿಯಮಿತ ಟೆಲಿ ಸಮಾಲೋಚನೆಯಡಿ ಪಾಲಿಸಿ ಅವಧಿಯಲ್ಲಿ ಎಷ್ಟೇ ಬಾರಿ ಬೇಕಾದರೂ ದೂರವಾಣಿ ಅಥವಾ ಆನ್ಲೈನ್ ಮೂಲಕ ವೈದ್ಯರ ಸಲಹೆ ಪಡೆಯಬಹುದು. ಜ್ವರ ಅಥವಾ ಸೋಂಕಿನ ಆರಂಭಿಕ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯಕೀಯ ಸಲಹೆ ಪಡೆಯಲು ಇದು ನೆರವಾಗುತ್ತದೆ. ಸಾರ್ವಜನಿಕರಿಗೆ ಉಚಿತ ವರ್ಚುವಲ್ ವೈದ್ಯರ ಸಮಾಲೋಚನೆಯೂ ಇರುತ್ತದೆ.
ಅಂತೆಯೇ ಪಾಲಿಸಿದಾರರು ‘ಟಾಕ್ ಟು ಸ್ಟಾರ್’ ಸೇವೆಯಡಿ 7200 222 333 ಸಂಖ್ಯೆಗೆ ಕರೆ ಮಾಡಿ ಮಾರ್ಗದರ್ಶನ ಪಡೆಯಬಹುದು. ನಗದುರಹಿತ ಮನೆ ಬಾಗಿಲಿನ ಆರೋಗ್ಯ ಸೇವೆಯಡಿ ಅರ್ಹ ಪಾಲಿಸಿದಾರರಿಗೆ ಸ್ಟಾರ್ ಹೆಲ್ತ್ ಕ್ಯಾಷ್ಲೆಸ್- ಸೌಲಭ್ಯದ ಮೂಲಕ ಮನೆ ಬಾಗಿಲಿಗೇ ಆರೋಗ್ಯ ಸೇವೆ ಒದಗಿಸಲಾಗುತ್ತದೆ. ವೈದ್ಯರ ಸಲಹೆಯಂತೆ ನಸಿರ್ಂಗ್ ಸೇವೆ, ರಕ್ತ ಪರೀಕ್ಷೆ, ಆರೋಗ್ಯ ಮೇಲ್ವಿಚಾರಣೆ, ಐವಿ ಫ್ಲೂಯಿಡ್ಸ್ ಹಾಗೂ ಚುಚ್ಚುಮದ್ದು ಸೇರಿದಂತೆ ಅಗತ್ಯ ಚಿಕಿತ್ಸೆಗಳನ್ನು ಮನೆಯಲ್ಲೇ ನೀಡಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಶೇ. 56 ರಷ್ಟು ಗಣತಿ ನಮೂನೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್.ಐ.ಆರ್.ಕುರಿತು ಮಾಹಿತಿ ನೀಡಲು ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಬಿಎಲ್ಒಗಳು ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಅರ್ಜಿಗಳನ್ನು ವಿತರಿಸಿ, ಸ್ವೀಕರಿಸುತ್ತಿದ್ದಾರೆ. ಶೇ. 91 ರಷ್ಟು ಜನರಿಗೆ ಫಾರಂ ಭರ್ತಿ ಮಾಡಲು ತಿಳಿಯದ ಕಾರಣ ಬಿಎಲ್ಒಗಳೇ ಸಾರ್ವಜನಿಕರಿಗೆ ಸಹಾಯ ಮಾಡುತ್ತಿದ್ದಾರೆ ಎಂದರು.
ಸಾರ್ವಜನಿಕರ ಅನುಕೂಲಕ್ಕಾಗಿ ದಾವಣಗೆರೆ ನಗರದಲ್ಲಿ 45 ಕೇಂದ್ರಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ತಾಲೂಕು ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ಅನುಮಾನಗಳಿದ್ದಲ್ಲಿ ಸಾರ್ವಜನಿಕರು ಬಿಎಲ್ಒಗಳನ್ನು ಅಥವಾ ಚುನಾವಣಾ ವೆಬ್ಸೈಟ್ನಲ್ಲಿ ಲಭ್ಯವಿರುವ ನೋಡಲ್ ಅಧಿಕಾರಿಗಳು ಮತ್ತು ಸೂಪರ್ವೈಸರ್ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸದ್ಯಕ್ಕೆ ಸಾರ್ವಜನಿಕರಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸುತ್ತಿಲ್ಲ. ಆಗಸ್ಟ್ 7 ರ ನಂತರ ಯಾರು ಯಾವ ದಾಖಲೆಗಳನ್ನು ನೀಡಬೇಕು ಎಂಬುದನ್ನು ಸ್ಪಷ್ಟಪಡಿಸಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.
ವಿವಿಧ ತಾಂತ್ರಿಕ ಹಾಗೂ ನೈಜ ಕಾರಣಗಳಿಂದಾಗಿ ಒಟ್ಟು 17,499 ಮತದಾರರ ಗಣತಿ ನಮೂನೆಗಳು ವಾಪಸ್ ಬಂದಿಲ್ಲ. ಇದರಲ್ಲಿ ಪ್ರಮುಖವಾಗಿ 7,487 ಮರಣ ಪ್ರಕರಣಗಳು , 263 ವಿಳಾಸ ಪತ್ತೆಯಾಗದವರು , 6,677 ಶಾಶ್ವತವಾಗಿ ಸ್ಥಳಾಂತರಗೊಂಡವರು , 2,994 ದ್ವಿಪ್ರತಿ ದಾಖಲಾತಿ (Double Entry) ಹಾಗೂ 78 ಇತರೆ ಕಾರಣ ಎಂದು ತಿಳಿಸಿದರು.
1,200 ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಗುರುತಿಸಿ, ಅಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮತದಾರರ ಪರಿಷ್ಕರಣೆಯ ಕಾರ್ಯವಿಧಾನದ ಕುರಿತು ವಿವಿಧ ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆ ಯಲ್ಲಿ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸುವ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಜುಲೈ 29ರ ವರೆಗೆ ಮಾತ್ರ ಕಾಲಾವಕಾಶ ಇರುವುದರಿಂದ ಬಿಎಲ್ಒಗಳು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಅವರೊಂದಿಗೆ ಶಾಂತಿಯುತವಾಗಿ ವರ್ತಿಸಿ, ಸೂಕ್ತ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಒಂದು ವೇಳೆ ದ್ವಿಪ್ರತಿ (Double Entry) ಸೇರಿದಂತೆ ಯಾವುದೇ ತಪ್ಪು ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ನೀಡಿದಲ್ಲಿ, ಅಂತವರ ವಿರುದ್ಧ ಎಫ್ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಡಾ.ಮಹಾಂತೇಶ್ ಚುನಾವಣಾ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ಗೌಡ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆ ನಡೆಸುವಂತೆ ದೂರು ನೀಡಿ 5 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತಾಗೆ ದೂರು ಸಲ್ಲಿಸಿದ್ದಾರೆ.
ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ವಿಭಾಗ-2 ರ ವ್ಯಾಪ್ತಿಗೆ ಒಳಪಡುವ ಮಾಯಕೊಂಡ, ಹೊನ್ನಾಳಿ, ಚನ್ನಗಿರಿ ಉಪ ವಿಭಾಗಗಳು ಹಾಗೂ ವಿಭಾಗ-2ರ ಕಛೇರಿಯ ವ್ಯಾಪ್ತಿಗೆ 2023-24 ರಿಂದ 2025-26ನೇ ಸಾಲಿನ ಅವಧಿಯಲ್ಲಿ ಬಿಡುಗಡೆಯಾಗಿರುವ ಸ್ಥಳೀಯ ಶಾಸಕರ ಅನುದಾನದಲ್ಲಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣವನ್ನು ಇಲಾಖೆಯ ವಾಹನಗಳ ಇಂಧನ ವೆಚ್ಚಕ್ಕೆಂದು ನಿಯಮಬಾಹಿರವಾಗಿ ದುರ್ಬಳಕೆ ಮಾಡಿಕೊಂಡಿರುವುದು ಮಾತ್ರವಲ್ಲದೆ, ಬಹುತೇಕ ಕಡೆಗಳಲ್ಲಿ ಯಾವುದೇ ಕಾಮಗಾರಿ ನಡೆಸದೆ ನಕಲಿ ಕಡತ ಸೃಷ್ಟಿಸಿ ಸ್ಥಳೀಯ ಶಾಸಕರ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ವಿಷಯವು ಅಧಿಕೃತ ಮೂಲಗಳಿಂದ ತಿಳಿದು ಬಂದ ಕಾರಣ ಮಾಹಿತಿಹಕ್ಕು ಅಡಿಯಲ್ಲಿ ಹಲವಾರು ಭಾರಿ ಅರ್ಜಿ ಸಲ್ಲಿಸಿ, ಮಾಹಿತಿ ಕೋರಿದಾಗಲೂ ನಿಯಮಬಾಹಿರವಾಗಿ ಹಿಂಬರಹ ನೀಡುತ್ತ ಬಂದಿರುತ್ತಾರೆ.
ಆದ ಕಾರಣ ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆಗೆ ಒಳಪಡಿಸಿ, ಕೈಗೊಂಡ ಕ್ರಮದ ವರದಿಯನ್ನು ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಐ.ಡಿ.ಎಲ್, ಬೆಂಗಳೂರು ಇವರಿಗೆ ದಿನಾಂಕ: 06-02-2026 ರಂದು ದೂರು ನೀಡಲಾಗಿತ್ತು. ಆದರೆ ದೂರು ನೀಡಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ದಿನಾಂಕ: 21-04-2026 ರಂದು ಜ್ಞಾಪನ ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ 2 ತಿಂಗಳು ಕಳೆದರೂ ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ಗೌಡ ಎಂ.ಬಿ ಇವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಆದ ಕಾರಣ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತ ಕಾಯ್ದೆಯ ಅನುಸಾರ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ಸಲ್ಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
-
ಅಂಕಣ6 days agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ5 days agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
-
ದಿನದ ಸುದ್ದಿ3 days agoಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ಗೌಡ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
-
ದಿನದ ಸುದ್ದಿ16 hours agoಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ

