Connect with us

ದಿನದ ಸುದ್ದಿ

ದಾವಣಗೆರೆ ವಿವಿ 09ನೇ ವಾರ್ಷಿಕ ಘಟಿಕೋತ್ಸವ | ದೇಶದ ಏಕತೆ, ಅಖಂಡತೆಗಾಗಿ ಧರ್ಮ, ಸಂಸ್ಕೃತಿಗಳು ಸದೃಢವಾಗಬೇಕು : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Published

on

ಸುದ್ದಿದಿನ,ದಾವಣಗೆರೆ : ವಿಶ್ವಶಾಂತಿಗಾಗಿ ಇಡೀ ಜಗತ್ತೇ ಭಾರತ ದೇಶದಿಂದ ಹೆಚ್ಚಿನದನ್ನು ಅಪೇಕ್ಷಿಸುತ್ತಿದ್ದು, ದೇಶದ ಏಕತೆ, ಅಖಂಡತೆಗಾಗಿ ನಮ್ಮಲ್ಲಿನ ಧರ್ಮ, ಸಂಸ್ಕøತಿಗಳು ಸದೃಢವಾಗಬೇಕು, ಈ ದಿಸೆಯಲ್ಲಿ ಯುವ ಪೀಳಿಗೆ ಮಹತ್ವದ ಪಾತ್ರ ವಹಿಸಬೇಕು ಎಂದು ರಾಜ್ಯದ ಘನತೆವೆತ್ತ ರಾಜ್ಯಪಾಲರು ಹಾಗೂ ದಾವಣಗೆರೆ ವಿವಿ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಆವರಣದಲ್ಲಿ ಗುರುವಾರ ಏರ್ಪಡಿಸಲಾದ 09 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಸುದೈವ ಕುಟುಂಬಕಂ’, ‘ಸರ್ವೇ ಜನ ಸುಖಿನೋಭವಂತು’ ಎನ್ನುವಂತಹ ಆಲೋಚನೆಗಳೇ ನಮ್ಮ ದೇಶದ ಸಂಸ್ಕøತಿಯಾಗಿದೆ. ವಿಶ್ವ ಶಾಂತಿಗಾಗಿ ಇಡೀ ಜಗತ್ತು ಭಾರತದಿಂದ ಹೆಚ್ಚಿನದನ್ನು ಅಪೇಕ್ಷಿತ್ತಿದೆ. ಜಗತ್ತಿನ ಅಪೇಕ್ಷೆ ಪೂರೈಸಲು ನಾವೆಲ್ಲರು ಸಹಭಾಗಿಗಳಾಗಲು ಪ್ರಯತ್ನ ಮಾಡಬೇಕು. ಭಾರತ ವಿಶ್ವಗುರು ಆಗುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕಿದೆ.

ಪ್ರಸ್ತುತ ದೇಶದ ಜನಸಂಖ್ಯೆಯಲ್ಲಿ ಯುವಜನತೆ ಹೆಚ್ಚಿದ್ದಾರೆ, ಹೀಗಾಗಿ ಇಪ್ಪತ್ತೊಂದನೇ ಶತಮಾನ ಭಾರತ ದೇಶದ್ದು ಎಂದು ಹೇಳಲಾಗುತ್ತದೆ. ಯುವಶಕ್ತಿಯಿಂದ ಭಾರತ ದೇಶಕ್ಕೆ ಹೆಚ್ಚಿನ ನಿರೀಕ್ಷೆಯಿದೆ. ಅನೇಕ ಸವಾಲುಗಳು ನಮ್ಮ ಮುಂದಿವೆ. ಸಮಸ್ಯೆ, ಸವಾಲುಗಳ ನಿವಾರಣೆಗೆ ಯುವ ಜನತೆ ದೇಶದೊಂದಿಗೆ ಕೈಜೋಡಿಸಬೇಕು. ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು, ನಮ್ಮ ಸಂವಿಧಾನ ದೇಶದ 130 ಕೋಟಿ ಜನರಿಗೂ ಮೂಲಭೂತ ಹಕ್ಕುಗಳನ್ನು ನೀಡಿದೆ.

ಆದರೆ ಕೇವಲ ಕುಟುಂಬ, ಸಮುದಾಯ, ಊರು ಬಗ್ಗೆ ಯೋಚನೆ ಮಾಡುವುದು ಸರಿಯಲ್ಲ. ಮೂಲಭೂತ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯಗಳ ಬಗ್ಗೆಯೂ ಕಾಳಜಿ ಬೇಕು. ದೇಶ, ಸಮಾಜದ ಬಗ್ಗೆಯೂ ಕರ್ತವ್ಯ ಪರಿಪಾಲನೆ ಆಗಬೇಕು. ಹೆಚ್ಚಿನ ಜನಸಂಖ್ಯೆಯಿಂದ ಪರಿಸರ ಹಾಳಾಗುತ್ತಿದೆ. ಭವಿಷ್ಯದಲ್ಲಿ ಇದು ದೊಡ್ಡ ಸವಾಲನ್ನು ಸೃಷ್ಟಿ ಮಾಡಲಿದೆ. ಜಲಸಂರಕ್ಷಣೆ, ಪರಿಸರ ರಕ್ಷಣೆ, ದೇಶದ ಜನಹಿತಕ್ಕಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿಯೂ ಜನರ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದರು.

ಘಟಿಕೋತ್ಸವವು ವಿದ್ಯಾರ್ಥಿಗಳು, ಪೋಷಕರು, ಗುರುಗಳ ಪಾಲಿಗೆ ಅತ್ಯಂತ ಮಹತ್ವದ್ದು ಹಾಗೂ ಭಾವನಾತ್ಮಕವಾದ ಸಮಾರಂಭವಾಗಿದೆ. ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪಡೆದವರಿಂದ ಭವಿಷ್ಯದಲ್ಲಿ ದೇಶಕ್ಕೆ ಹಾಗೂ ಸಮಾಜಕ್ಕೆ ಇನ್ನಷ್ಟು ಸೇವೆ ದೊರೆಯಲಿ ಎಂದರು.

ಬಂಗಾರದ ಪದಕಗಳು, ಪದವಿ ಪಡೆದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲದೆ ಪ್ರಸ್ತುತ ಅಧ್ಯಯನ ನಿರತ ವಿದ್ಯಾರ್ಥಿಗಳೂ ಕೂಡ, ಬಂಗಾರದ ಪದಕ ಪಡೆದಂತಹ ವಿದ್ಯಾರ್ಥಿಗಳಿಂದ ಪ್ರೇರಣೆ ಪಡೆಯಬೇಕು. ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಏಕಾಗ್ರತೆಯಿಂದ ಅಧ್ಯಯನ ಮಾಡಿದಲ್ಲಿ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ರಾಜ್ಯಪಾಲರು ಆಶಯ ವ್ಯಕ್ತಪಡಿಸಿದರು.

ಘಟಿಕೋತ್ಸವ ಭಾಷಣ ಮಾಡಿದ ಓರಿಸ್ಸಾ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಾಜಿ ಕುಲಾಧಿಪತಿ ಡಾ. ಪಿ.ವಿ. ಕೃಷ್ಣಭಟ್ ಅವರು, ಭಾರತದಲ್ಲಿ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೆ ಸಾವಿರಾರು ವರ್ಷಗಳ ದೀರ್ಘ ಇತಿಹಾಸವಿದೆ. ನಲಂದಾ, ತಕ್ಷಶಿಲಾ, ವಿಕ್ರಮಶಿಲಾ ಮುಂತಾದ ವಿವಿಗಳು ವಿಶ್ವಾದ್ಯಂತ ವಿದ್ಯಾರ್ಥಿಗಳು, ವಿದ್ವಾಂಸರನ್ನು ಆಕರ್ಷಿಸಿದ್ದವು.

ಬಖ್ತಿಯಾಲ್ ಖಿಲ್ಜಿ ನಲಂದಾ ವಿವಿ ಮೆಲೆ ದಾಳಿ ಮಾಡಿ ಅಲ್ಲಿನ ಪುಸ್ತಕ ಭಂಡಾರಕ್ಕೆ ಬೆಂಕಿ ಹಚ್ಚಿದಾಗ, ಆ ಬೆಂಕಿ 6 ತಿಂಗಳ ಕಾಲ ಉರಿಯುತ್ತಿತ್ತೆಂದು ವರ್ಣಿಸಲಾಗಿದೆ. ಹೀಗೆ ನಮ್ಮಲ್ಲಿದ್ದ ಅಪಾರ ಜ್ಞಾನಭಂಡಾ ಮತ್ತು ವಿವಿ ಗಳು ಪರಕೀಯ ಆಕ್ರಮಣದಿಂದ ಉಧ್ವಸ್ಥಗೊಂಡವು. ಸ್ವಾತಂತ್ರ್ಯಾನಂತರ ದೇಶದಲ್ಲಿ ರಾಷ್ಟ್ರೀಯ ಸ್ಫೂರ್ತಿ, ಚಿಂತನೆಯನ್ನು ಉತ್ತೇಜಿಸುವ, ರಾಷ್ಟ್ರೀಯ ಉದ್ದೇಶಗಳಿಗೆ ಪೂರಕವಾದ ಶಿಕ್ಷಣ ವ್ಯವಸ್ಥೆ ರೂಪಿಸುವಲ್ಲಿ ಯಶಸ್ಸು ಕಂಡಿಲ್ಲ.

ದೆಹಲಿಯ ಜೆ.ಎನ್.ಯು ವಿವಿಯಂತಹ ಪ್ರತಿಷ್ಠಿತ ವಿವಿಗಳ ವಿದ್ಯಾರ್ಥಿಗಳು ‘ಭಾರತ್ ತೇರೆ ಟುಕಡೇ ಹೋಂಗೆ’ ಎಂಬ ಘೋಷಣೆ ಹಾಕುವ ಮಟ್ಟಕ್ಕೆ ತಲುಪಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಘೋರ ದುರಂತವಾಗಿದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿಜ್ಞಾನ, ತಂತ್ರಜ್ಞಾನಕ್ಕೆ ವಿಶೇಷ ಪ್ರಾಮುಖ್ಯತೆ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ.

ನಮ್ಮ ದೇಶದ ಪ್ರತಿಭಾವಂತರು, ವಿಜ್ಞಾನಿಗಳು, ತಂತ್ರಜ್ಞರು, ಸಂಶೋಧಕರು ತಾವು ವಿಶ್ವದಲ್ಲಿ ಯಾರಿಗೂ ಕಡಿಮೆ ಇಲ್ಲ, ಮುಂದುವರಿದ ದೇಶಗಳನ್ನು ಮಿರಿಸುವ ಸಾಧನೆ ಮಾಡಬಲ್ಲ ಸಾಮಥ್ರ್ಯ ಹೊಂದಿದವರು ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಜಗತ್ತಿನ ಹಲವು ರಾಷ್ಟ್ರಗಳು ವಿಜ್ಞಾನ, ತಂತ್ರಜ್ಞಾನದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದ್ದರೂ, ಆ ಪ್ರಗತಿ ಮನುಕುಲಕ್ಕೆ ಕಲ್ಯಾಣಕಾರಿಯಾಗುವ ಬದಲಿಗೆ ಹಾನಿಕಾರಕವಾಗುವ ಸಂಭವವನ್ನೇ ಸೂಚಿಸುತ್ತಿದೆ.

ಕೋವಿಡ್ ಸೂಕ್ಷ್ಮಾಣುಗಳನ್ನು ಚೀನಾ ದೇಶದ ಪ್ರಯೋಗ ಶಾಲೆಯಲ್ಲಿ ನಿರ್ಮಾಣ ಮಾಡಲಾಯಿತೆಂಬ ಸಂಗತಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಇತ್ತೀಚಿನ ಯುಕ್ರೇನ್ ಮೇಲಿನ ರಷ್ಯಾ ದಾಳಿ ಮತ್ತು ಅದರಿಂದಾಗಿರುವ ಅಪಾರ ಸಾವು ನೋವುಗಳು ಸಂಭವನೀಯ ದುರಂತದ ಮುನ್ಸೂಚನೆಯಾಗಿದೆ.

ಸದ್ಯದ ಜಾಗತಿಕ ಸನ್ನಿವೇಶದಲ್ಲಿ ಜಗತ್ತು ಸಿಡಿಮದ್ದುಗಳ ರಾಶಿಯ ಮೇಲೆಯೇ ಕುಳಿತಿದೆಯೇನೋ ಎನ್ನುವ ಚಿತ್ರ ಕಣ್ಣಿಗೆ ಕಟ್ಟುತ್ತಿದೆ. ವಿಜ್ಞಾನ, ತಂತ್ರಜ್ಞಾನಗಳು ವಿನಾಶಕರವಾಗದಿರಬೇಕಾದರೆ ಸಮಗ್ರ ಜಗತ್ತಿನ ಹಿತವನ್ನು ಸಾಧಿಸುವ ಮನೋಭಾವ, ಜೀವನ ದೃಷ್ಟಿ ಬೆಳೆಸುವಂತಾಗಬೇಕು. ವಿಶ್ವಾದ್ಯಂತ ಗಂಭೀರವಾದ ಸಾಮಾಜಿಕ ತುಮುಲವನ್ನು ನಾವು ವೀಕ್ಷಿಸುತ್ತಿದ್ದೇವೆ. ಹಿಂಸೆ, ಕ್ರೌರ್ಯ, ಶಸ್ತ್ರಸಂಗ್ರಹ, ಯುದ್ಧಭೀತಿಯ ಸನ್ನಿವೇಶಗಳು ವಿಕರಾಳರೂಪವನ್ನು ತಳೆಯುತ್ತಿವೆ. ಭಾರತದ ಶಾಂತಿ ಸಮನ್ವಯತೆಯ ಸಂದೇಶಕ್ಕಾಗಿ ವಿಶ್ವ ಕಾತರಿಸುತ್ತಿರುವಂತೆ ಕಾಣುತ್ತಿದೆ ಎಂದರು.

ಭಾರತೀಯ ಪರಂಪರೆಯಲ್ಲಿ ಎಲ್ಲಾ ಜೀವನಮೌಲ್ಯಗಳ ಸಮುಚ್ಛಯವನ್ನೇ ಧರ್ಮ ಎಂದು ಕರೆಯಲಾಗಿದೆ. ಧರ್ಮ ಶಬ್ದದ ಅರ್ಥವ್ಯಾಪ್ತಿಯನ್ನು ಸರಿಯಾಗಿ ತಿಳಿಯದೆ ಅದನ್ನು ರಿಲೀಜನ್ ಶಬ್ದಕ್ಕೆ ಪರ್ಯಾಯವಾಗಿ ಪರಿಗಣಿಸಿರುವುದು ಬಹಳಷ್ಟು ಅನರ್ಥಗಳಿಗೆ ಕಾರಣವಾಗಿದೆ.

ಕ್ರೈಸ್ತಮತದ ಸರ್ವಶ್ರೇಷ್ಠತೆಯನ್ನು ಸಾರುವ ಉದ್ದೇಶದಿಂದಲೇ 19ನೇ ಶತಮಾನದ ಅಂತ್ಯಭಾಗದಲ್ಲಿ ಆಯೋಜಿಸಲಾಗಿದ್ದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕನಂದರು ಹಿಂದೂ ಧರ್ಮದ ವೈಶ್ವಿಕ ಚಿಂತನೆ, ವೈಜ್ಞಾನಿಕ ದೃಷ್ಟಿಕೋನವನ್ನು ಅಸಂಧಿಗ್ದವಾಗಿ ಪ್ರತಿಪಾದಿಸಿ ವಿಶ್ವದ ಚಿಂತನಶೀಲ ಸಮೂಹದ ಗಮನ ಆಕರ್ಷಿಸುವಲ್ಲಿ ಯಶಸ್ವಿಯಾದರು, ಪರಿಣಾಮವಾಗಿ ಸಮ್ಮೇಳನದ ಆಯೋಜಕರ ಉದ್ದೇಶ ವಿಫಲಗೊಳ್ಳುವಂತಾಯಿತು ಎಂದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಸ್ವಾಗತ ಭಾಷಣ ಮಾಡಿ, ಘಟಿಕೋತ್ಸವದಲ್ಲಿ 06 ಪಿಹೆಚ್‍ಡಿ, 04 ಎಂ.ಫಿಲ್, ಪದವಿ, 9724 ಸ್ನಾತಕ ಮತ್ತು 1612 ಸ್ನಾತಕೋತ್ತರ ಪದವಿಧರರಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಒಟ್ಟು 44 ವಿದ್ಯಾರ್ಥಿಗಳು 79 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಸರ್ಕಾರದ ನಿರ್ದೇಶನದಂತೆ ವಿವಿ ಯಲ್ಲೂ ಮಾಹಿತಿ ಸಂವಹನ ತಂತ್ರಜ್ಞಾನದಡಿ ಕೆಲಸಗಳ ನಿರ್ವಹಣೆಯಾಗುತ್ತಿದ್ದು, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಸ್ವಚ್ಛ ಆಡಳಿತ ತರುವುದೇ ಇದರ ಉದ್ದೇಶವಾಗಿದೆ.

ಈ ಘಟಕಕ್ಕಾಗಿಯೇ ಪ್ರತ್ಯೇಕ ಕಚೇರಿ ಸ್ಥಾಪಿಸಲಾಗಿದ್ದು, ವಿವಿಯಲ್ಲಿ ಮಾಹಿತಿ ತಂತ್ರಜ್ಞಾನ ಕೆಲಸಗಳನ್ನು ಜಾರಿಗೊಳಿಸಿರುವುದನ್ನು ಪ್ರಶಂಸಿಸಿ, ರಾಷ್ಟ್ರ ಮಟ್ಟದ ಪ್ರಶಸ್ತಿ ಬಂದಿರುವುದು ಸಂತೋಷದ ಸಂಗತಿ.

ರಾಷ್ಟ್ರೀಯ ಉಚ್ಛತರ ಶಿಕ್ಷಣ ಅಭಿಯಾನದಡಿ ಕೇಂದ್ರ ಸರ್ಕಾರದಿಂದ ವಿವಿಗೆ 20 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದರು.

ಗೌರವ ಡಾಕ್ಟರೇಟ್ ಪ್ರದಾನ

ಆಯರ್ವೇದ ಮತ್ತು ಯೋಗ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಶಶಿಕುಮಾರ್ ವಿ.ಎಂ, ನಿವೃತ್ತ ಪ್ರಾಧ್ಯಾಪಕರು, ಜನಪದ ತಜ್ಞರಾದ ಡಾ. ಮೀರಾ ಸಾಬಿಹಳ್ಳಿ ಶಿವಣ್ಣ ಮತ್ತು ಇತಿಹಾಸಕಾರರಾದ ಲಕ್ಷ್ಮಣ ಎಸ್ ತೆಲಗಾವಿ ಅವರಿಗೆ ಘಟಿಕೋತ್ಸವದಲ್ಲಿ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪುರಸ್ಕಾರ ಪ್ರದಾನ ಮಾಡಿದರು.

ಪಿಹೆಚ್‍ಡಿ ಹಾಗೂ ಎಂಫಿಲ್ ಪ್ರದಾನ

ಅರ್ಥಶಾಸ್ತ್ರ ವಿಭಾಗದಲ್ಲಿ ಗುರುಪ್ರಸಾದ್ ಎಂಎಸ್, ಮೈಕ್ರೋಬಯಾಲಜಿ ವಿಭಾಗದಲ್ಲಿ ನವೀನ ಕೆ.ಸಿ. ಹಾಗೂ ಈರಮ್ಮ ಎನ್., ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಜಾರುಬಂಡಿ ರಾಜಶೇಖರ್, ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ರಾಜಪ್ಪ ಎಲ್ ಮತ್ತು ಪ್ರಸನ್ನ ಎಸ್.ಹೆಚ್. ಅವರಿಗೆ ಪಿಹೆಚ್‍ಡಿ ಪ್ರದಾನ ಮಾಡಲಾಯಿತು. ಗಣಿತಶಾಸ್ತ್ರ ವಿಭಾಗದಲ್ಲಿ ರೇಖಾ ಎಂ.ಬಿ., ಜೀವಶಾಸ್ತ್ರ ವಿಭಾಗದಲ್ಲಿ ವಿರುಪಾಕ್ಷ ಟಿ.ಆರ್., ರಸಾಯನಶಾಸ್ತ್ರ ವಿಭಾಗದಲ್ಲಿ ಮಧು ಹೆಚ್, ಸಾಮಾಜಿಕ ಸೇವೆ ವಿಭಗದಲ್ಲಿ ಪಾಪಯ್ಯ ಸಿ., ಹಾಗೂ ಶಿಕ್ಷಣ ವಿಭಾಗದಲ್ಲಿ ದೀಪಕ್ ಕೆ.ಎಸ್. ಅವರಿಗೆ ಎಂ.ಫಿಲ್ ಅನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಪ್ರೊ. ಎಸ್.ವಿ. ಹಲಸೆ, ಕುಲಸಚಿವರು (ಪರೀಕ್ಷಾಂಗ) ಪ್ರೊ. ಅನಿತಾ ಹೆಚ್.ಎಸ್., ಕುಲಸಚಿವರು (ಆಡಳಿತ) ಪ್ರೊ. ಗಾಯತ್ರಿ ದೇವರಾಜ್, ವಿಶ್ವವಿದ್ಯಾನಿಲಯದ ವಿವಿಧ ನಿಕಾಯಗಳ ಮುಖ್ಯಸ್ಥರು, ಸಿಂಡಿಕೇಟ್ ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ

Published

on

ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.

ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್.‌ ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್‌. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.

ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.

ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ

Published

on

ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್‌ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್‌ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್‌ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್‌ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್‌, ಚೇತನ್‌ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.

ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್‌ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್‌ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್‌ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.

ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending