Connect with us

ಬಹಿರಂಗ

ಅಂಬೇಡ್ಕರ್ ಮತ್ತು ಹಿಂದೂ ಕೋಡ್ ಬಿಲ್..!

Published

on

  • ವಿ.ಎಸ್.ಬಾಬು

ಸ್ವಾತಂತ್ರ್ಯ ನಂತರದ ಸರ್ಕಾರ ಅಂಬೇಡ್ಕರ್ ಅವರನ್ನು ಗಂಭೀರವಾಗಿ ಪಲಗಣಿಸಿತು. ಈ ಮೂಲಕ ಅವರಿಗೆ ನಿರ್ದಿಷ್ಟ ಜವಾಬ್ದಾರಿಯುತವಾದ ಹುದ್ದೆಯನ್ನು ವಹಿಸಿತು. ಆಗ ಅವರು ಜಾತಿಯ ತಾಳಿಕೆ-ಬಾಳಿಕೆ ಅಡಗಿರುವುದೇ ಸ್ವಜಾತಿ ವಿವಾಹ ಪದ್ಧತಿಯಲ್ಲ ಎಂದುಕೊಂಡರು. ಅಂಬೇಡ್ಕರ್ ಅದನ್ನು ವಿರೋಧಿಸುತ್ತಿದ್ದ ತಾತ್ವಿಕ ವಿಷಯಗಳಿಗೆ ಪರ್ಯಾಯವಾದ ಸಂಗತಿಗಳನ್ನು ಹಿಂದೂ ಕೋಡ್‌ಬಿಲ್‌ನ ಮುಖಾಂತರ ಜಾರಿಗೊಳಿಸಲು ಪ್ರಯತ್ನಿಸಿದರು.

ಹಾಗಾಗಿ ಹಿಂದೂ ಕೋಡ್‌ ಬಿಲ್ ರಚಿಸಲು ಅಂಬೇಡ್ಕರ್ ಕಾತುರರಾದರು.ಅಲ್ಲದೆ ಮನು ಮತ್ತು ಅತನ ತರಹದ ಎಲ್ಲರ ವಿವಾಹ ಸಂಬಂಧಿ ಆಲೋಚನೆಗಳನ್ನು ಪರಿಶೀಲಿಸಿದರು.ಆದರೂ ಅದರಲ್ಲಿ ಪುರುಷರಿಗೆ ಸ್ತ್ರೀಯರನ್ನು ಅಧೀನಗೊಳಿಸಲೆಂದೇ ಅಸ್ತಿತ್ವ ಪಡೆದ ಪಿತೃ ಪ್ರಧಾನತೆ ವಿವಾಹ ಸಂಸ್ಥೆಯೊಳಗಿನ ಲಿಂಗಾಧಾರಿತ ತಾರತಮ್ಯವನ್ನು ಇಟ್ಟುಕೊಳ್ಳುವುದರ ಮೂಲಕವೇ ಸ್ವಜಾತಿ ವಿವಾಹ ಪದ್ಧತಿಯನ್ನು ಅಂದರೆ ಬ್ರಾಹ್ಮಣ ಪಿತೃಪ್ರಧಾನತೆ ನಿರ್ಮೂಲನೆಗೊಳಿಸಲು ಅಗತ್ಯವಾದ ತಿದ್ದುಪಡಿಗಳನ್ನು ತರಲು ಪ್ರಯತ್ನಿಸಿದರು.ಈ ಎಲ್ಲ ಅಂಶಗಳನ್ನು ಒಳಗೊಂಡ ‘ಕೂಸೆ’ ಹಿಂದೂ ಕೋಡ್ ಬಿಲ್ ಆಗಿದೆ.

ಆದ್ದರಿಂದ ಹಿಂದೂ ಕೋಡ್ ಬಿಲ್ ನಲ್ಲಿ ಮಹಿಳೆ ಸಂಬಂಧ ಎಲ್ಲ ಅಂಶಗಳು ಜಾತಿ ಪದ್ಧತಿಯನ್ನು ಉಳಿಸಿಕೊಂಡಿರುವ ಮೌಲ್ಯಗಳು ಮತ್ತು ಮಹಿಳಾ ವಿರೋಧಿ ಸಂಗತಿಗಳಾದ ವಿಧವೆ, ಆಸ್ತಿ ನಿರಾಕರಣಿ ಇತ್ಯಾದಿ ಸಂಗತಿಗಳನ್ನು ನಿರ್ವಹಿಸುತ್ತದೆ. ಇದು ಪಿತೃಪ್ರಧಾನತೆಯನ್ನು ಮುಂದುವರೆಸುತ್ತಿರುವ ವಿವಾಹ ಸಂಸ್ಥೆಯ ಲಿಂಗತಾರತಮ್ಯ ಗುಣಲಕ್ಷಣಗಳನ್ನು ನಿರ್ಮೂಲನೆ ಗೊಳಿಸುವುದರಲ್ಲಿ ಸಫಲವಾಗಲು ಸಾಧ್ಯವಿಲ್ಲ. ಈ ವಿವಾಹ ಸಂಬಂಧಿ ಮಸೂದೆ ಜಾತಿ ಒಳಗಿರುವ ಪಿತೃಪ್ರಧಾನತೆಯ ಮೌಲ್ಯಗಳಿಂದ ಗ್ರಹಿತವಾದವು.

ಈ ಹಿನ್ನೆಲೆಯಲ್ಲಿ ಹಿಂದೂ ಕೋಡ್ ಬಿಲ್‌ನ್ನು ಪರಿಶೀಲಿಸುವುದಾದರೆ ಇದು ಹಿಂದೂ ಸ್ತ್ರೀ-ಪುರುಷರ ಅಂತರಜಾತಿಯ ವಿವಾಹಗಳಿಗೆ ಕಾನೂನಾತ್ಮಕ ಅನುಮೋದನೆ ನೀಡಿದ್ದಲ್ಲದೆ, ಮಹಿಳೆಗೆ ವಿಚ್ಛೇದನೆ ಪಡೆಯುವ ಹಕ್ಕನ್ನು ಮನುಸ್ಮೃತಿ ಮಹಿಳೆಯರ ಮೇಲೆ ಹೇರಿದ್ದ ನಿಯಂತ್ರಣಗಳನ್ನು ತರ್ಕಬದ್ಧವಾಗಿ ಮಂಡಿಸುವ ಅಂಬೇಡ್ಕರ್ ಅದರಿಂದ ಹೊರಬರಲು ಬಯಸುವ ಮಹಿಳೆಯರಿಗೆ ವಿಚ್ಛೇದನೆ ಹಕ್ಕು ಅಗತ್ಯ ಎಂದು ತಿಳಿದು ಈ ಸಂಗತಿಯನ್ನು ಸೇರಿಸಿದ್ದಾರೆ.

ಹಾಗೆಯೇ ಜಾತಿಪದ್ಧತಿಯೊಂದಿಗೆ ಮತ್ತು ಪಿತೃಪ್ರಧಾನತೆಯೊಂದಿಗೆ ಮೈಗೂಡಿಸಿಕೊಂಡಿದ್ದ ಭಾರತದ ಜಮೀನ್ದಾರಿ ಪದ್ಧತಿ ಆಸ್ತಿಯ ಹಕ್ಕನ್ನು ಪುರುಷರಿಗೆ ವಹಿಸಿತ್ತು. ಇದು ಭೂಮಿಯ ಒಡೆತನ, ಕುಟುಂಬ ಆದಾಯದಲ್ಲಿ ಪಾಲು, ಕೃಷಿ ಉತ್ಪನ್ನದ ವಿತರಣೆ ಎಲ್ಲದರಿಂದಲೂ ಮಹಿಳೆಯರನ್ನು ಪ್ರತ್ಯೇಕಿಸಲಾಗಿತ್ತು.ಜೊತೆಗೆ ಭೂಮಿಯಲ್ಲಿ ದಿನನಿತ್ಯ ಕೆಲಸ ಮಾಡುವ ಮಹಿಳೆಯರ ದುಡಿಮೆಯನ್ನು ಅದೃಶ್ಯಗೊಳಿಸುವ ಮೂಲಕವೇ ಆಸ್ತಿಹಕ್ಕನ್ನು ನಿರಾಕರಿಸಲಾಗಿತ್ತು. ಈ ಕುರಿತು “ಮನು ಆಸ್ತಿಯ ವಿಚಾರದಲ್ಲಿ ಹೆಂಡತಿಯನ್ನು ಗುಲಾಮಳ ಸ್ಥಾನಕ್ಕೆ ಇಳಿಸಿದ್ದ” (ಬಾ.ಸಾ.ಅಂ.ಬ.ಭಾ, 1999, ಸಂ.4, ಪು.51), ಅಂಬೇಡ್ಕರ್‌ ಈ ಮಸೂದೆ ಮುಖಾಂತರ ಮಹಿಳೆಗೆ ಆಸ್ತಿಹಕ್ಕನ್ನು ಸಾಮಾಜಿಕ ನ್ಯಾಯದ ಅಡಿಯಲ್ಲಿ ಒದಗಿಸಲು ಮುಂದಾದರು.

ಈ ಕುರಿತು 1956ರಲ್ಲಿ ಅಂಬೇಡ್ಕರ್ ಸಿದ್ದಾರ್ಥ ಕಾಲೇಜಿನಲ್ಲಿ ಮಾತನಾಡುತ್ತಿದ್ದರು. ಅವರ ಪ್ರಕಾರ ಹಿಂದೂ ವಿವಾಹ ಕಾಯಿದೆಯ ಕೊನೆಯ ಬದಲಾವಣೆ ಮಹಿಳೆಯ ಆಸ್ತಿಹಕ್ಕಿಗೆ ಸಂಬಂಧಿಸಿದ್ದು.1937ಕ್ಕೆ ಮುನ್ನ ಆಕೆ ಒಂದು ಕುಟುಂಬದ ಸೊಸೆ ಆಗಲಿ ಅಥವಾ ವಿಧವೆ ಸೊಸೆಯಾಗಲಿ ಆ ಕುಟುಂಬದಲ್ಲಿ ಆಸ್ತಿಯ ಪಾಲನ್ನು ಕೇಳುವಂತಿರಲಿಲ್ಲ. ಆದರೆ 1937ರ ಕಾಯ್ದೆಯಲ್ಲಿ ವಿಧವೆಗೆ ತಮ್ಮ ಮೃತಪತಿಯ ಆಸ್ತಿಯನ್ನು ಪಡೆಯುವ ಹಕ್ಕನ್ನು ನೀಡಿತು. ಆದರೂ ಮಹಿಳೆಯ ಆಸ್ತಿಯ ಹಕ್ಕು ಅಪೂರ್ಣವಾಗಿತ್ತು. ಆದರೆ ಈಗ ಹಿಂದೂ ವಿವಾಹ ಕಾಯ್ದೆ ಮೂಲಕ ಮನೆಯ ಮಗಳಿಗೂ ಸಹ ಮಗನಷ್ಟೇ ಆಸ್ತಿ ಮೇಲೆ ಹಕ್ಕು ಇರುವ ಸಂಗತಿಯನ್ನು ಒಳಗೊಂಡಿದೆ. ಇದು ಸಮಾಜದಲ್ಲಿ ಅಳವಡಿಸಲಾಗಿರುವ ಮೌಲ್ಯಗಳನ್ನು ಸಮಾಜದಲ್ಲಿ ಅಸ್ತಿತ್ವಕ್ಕೆ ಬಂದಿರುವ ಜಾತಿ ಪದ್ಧತಿಯಲ್ಲಿನ ಆಮೂಲಾಗ್ರ ಬದಲಾವಣೆಗೆ ಸಾಧ್ಯವಾಗುವುದೆಂದು ಹಿಂದೂ ಕೋಡ್ ಬಿಲ್ಲನ್ನು ರೂಪಿಸಲಾಗಿದೆ” ಎಂದರು. (ಅಂಬೇಡ್ಕರ್‌, ಉದ್ಧತ; ಅಹಲಾರಂಗ್ಲೀಕರ್, 1991, ಪು.241).

ಇಷ್ಟೆಲ್ಲ ಸಂಗತಿಗಳನ್ನು ಒಳಗೊಂಡ ಈ ಕಾಯ್ದೆಯ ಮಂಡನೆಯ ಸಂದರ್ಭದಲ್ಲಿ ಅಂಬೇಡ್ಕರ್‌ ಅಪಾರವಾದ ವಿರೋಧವನ್ನು ಎದುರಿಸಬೇಕಾಯಿತು.ಅದನ್ನು ಸಮರ್ಥಿಸುವಾಗ ಅಂಬೇಡ್ಕರ್ ಪಾರ್ಲಿಮೆಂಟಿನಲ್ಲಿ ಎದ್ದು ನಿಂತು ಹೀಗೆ ನುಡಿದರು. “ಮಹಿಳೆಯ ಆಸ್ತಿಹಕ್ಕನ್ನು ಸಮರ್ಥಿಸುವ ಬೃಹಸ್ಪತಿಯನ್ನು, ವಿಚ್ಛೇದನ ಸಿದ್ಧಾಂತವನ್ನು ಪ್ರತಿಪಾದಿಸುವ ‘ಪರಾಶರ ಸ್ಮೃತಿ’ಯನ್ನು ಹಿಂದೂ ಮೂಲಭೂತವಾದಿ ಮುಖಂಡರ ಮುಂದೆ ಎತ್ತಿಹಿಡಿದರು. ಇದು ಹಿಂದೂಕೋಡ್ ಬಿಲ್‌ನಲ್ಲಿರುವ ತಮ್ಮ ಸಿದ್ಧಾಂತದ ಮೂಲಭೂತ ಸತ್ಯ” ಎಂದರು (ಬಾ.ಸಾ.ಅಂ.ಬ.ಭಾ, 1994, ಪು.622), ಹೀಗೆ ಅಂಬೇಡ್ಕರ್ ಹಿಂದೂಕೋಡ್ ಮಸೂದೆಯನ್ನು ಮಂಡಿಸಿದರು.

ಆದರೆ ಇದು ಪಿತೃಪ್ರಧಾನ, ಧರ್ಮಪ್ರಧಾನ, ಹಾಗೂ ಜಾತಿಪ್ರಧಾನ ಗುಣಗಳನ್ನು ಸಮರ್ಥಿಸುವ ಸದಸ್ಯರ ಪ್ರತಿರೋಧದಿಂದಾಗಿ ಈ ಮಸೂದೆ ಬಹುಮತ ಗಳಿಸುವಲ್ಲಿ ವಿಫಲವಾಯಿತು.ಈ ಘಟನೆಯಿಂದ ತುಂಬಾ ಬೇಸರಗೊಂಡ ಅಂಬೇಡ್ಕರ್ ತಮ್ಮ ಮಂತ್ರಿ ಪದವಿಗೆ ಸೆಪ್ಟೆಂಬರ್ 27, 1951ರಂದು ರಾಜೀನಾಮೆ ಸಲ್ಲಿಸಿದರು.ಇದು ಈ ಮಸೂದೆಯ ಜಾತಿ ಸಂಬಂಧಿ ಪರಿಹಾರದ ಬದ್ಧತೆಯನ್ನು ತೋರಿಸುತ್ತದೆ.ಜೊತೆಗೆ ಮಹಿಳೆಯರ ಬಗೆಗಿನ ಉದಾರ ಮನೋಭಾವನೆಯನ್ನು ಬಿಚ್ಚಿಡುತ್ತದೆ” ಎಂದು ಭಾವಿಸಿದವರು ಸಹ ನಂತರ ಈ ಘಟನೆಗೆ ಪ್ರತಿಕ್ರಿಯಿಸಿದರು.

ಅನೇಕ ಸಮಾಜಶಾಸ್ತ್ರಜ್ಞರು ಇದೊಂದು ದುರದೃಷ್ಟಕರ ಪ್ರಸಂಗ ಎಂದು ವಿಷಾದ ವ್ಯಕ್ತಪಡಿಸಿದರು. ಅದರಲ್ಲೂ ಬಾಂಬೆ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಶ್ರೀ ಪಿ.ಬಿ.ಗಜೇಂದ್ರ ಗಡಕರ್ ಅವರು ಅಂಬೇಡ್ಕರ್‌ ಅವರು ವಹಿಸಿದ ಪಾತ್ರದ ಬಗ್ಗೆ ಹೀಗೆ ಅಭಿಪ್ರಾಯಪಟ್ಟಿದ್ದಾರೆ. “The Honourable Dr. Ambedkar has played an important role in the progress of this bill and in introducing the code before the Parliment. He has shown his determination to persuade the legislature to see it through without delay. It is well known that Dr. Ambedkar can legitimately and justly feel proud for the substantial work done by him in the drafting for our Constitution. It with the active co-operation and support of the Prime Minister who fortunately shares his Law Minister enthusiasm. The code Dr. Ambedkar is able to give it the pride of place in her statue book. I for one would hail it as time sweet revenglon the Hindu society as a whole. If Dr. Ambedkar gave us hindus our code his achievement would go down in history as a very eloquent piece of poetic justice indeed.”

ಇನ್ನು ಕೆಲವರು ಇದನ್ನು “ಚರಿತ್ರೆಯ ಹಿನ್ನಡೆ” ಎಂದರು. ಅಂದರೆ ಆಧುನಿಕ ಭಾರತದಲ್ಲಿಯೂ ಮಹಿಳೆಯ ಪರಿಸ್ಥಿತಿಗಳು ಹಿಂದಿನಂತೆಯೇ ಯಥಾಪ್ರಕಾರ ಮುಂದುವರೆದಿವೆ ಎಂದರು.

ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯನ್ನು ಬೌದ್ಧಿಕವಾಗಿ ಮತ್ತು ಸಾಮಾಜಿಕ, ಸಾಂಸ್ಕೃತಿಕವಾಗಿ ಕಡೆಗಣಿಸಲಾಗಿತ್ತು.ಗಂಡು ಹೆಣ್ಣಿನ ನಡುವೆ ಇರುವ ಈ ಲಿಂಗ ತಾರತಮ್ಯವು ಜಾತಿ ತಾರತಮ್ಯದ ಜೊತೆಗೆ ಸಂಬಂಧ ಪಡೆದಿತ್ತು. ಹಿಂದೂ ಧರ್ಮದಲ್ಲಿ ಶೂದ್ರನು ಕೀಳು ಮಾನವನಾದರೆ ಸ್ತ್ರೀ ನೀಚಳೆಂದು ಪರಿಗಣಿಸಲ್ಪಟ್ಟಿದ್ದಾಳೆ. ಇದರಿಂದಾಗಿ ಸ್ತ್ರೀಯು ವಿವಿಧ ಹಂತದಲ್ಲಿ ಸಾಮಾಜಿಕ ಭಿನ್ನತೆಯಿಂದ ಶೂದ್ರರಿಗಿಂತ ಹೆಚ್ಚಿಗೆ ಗುರಿಯಾಗಿದ್ದಾಳೆ. ಸ್ತ್ರೀ ಕಿರುಬನ ಹೃದಯದ ವಳು (ಋಗ್ವೇದದ) ಅವಳು ಎಲ್ಲ ಕೆಡುಕಿನ ಬೇರು (ಮಹಾಭಾರತ), ಅವಳು ಚಂಚಲೆ ಖಡ್ಗದಂತೆ ಹರಿತವಾದವಳು, ಬಿರುಗಾಳಿಯಂತೆ ಅಸ್ಥಿರಳು(ರಾಮಾಯಣ), ಹೆಂಗಸು ಕಾಮಪಿಪಾಸೆ ಉಳ್ಳವಳು, ಕುಟಿಲೆ, ಸ್ತ್ರೀ ಸ್ವಾತಂತ್ರ್ಯಕ್ಕೆ ಎಂದಿಗೂ ಅನರ್ಹಳು (ಮನು) ಸ್ತ್ರೀ ಒಂದು ವಸ್ತು, ಪದಾರ್ಥ, ಶಾಕ್ತ ಮುಂತಾಗಿ ಸ್ತ್ರೀಯನ್ನು ವೇದೋಪನಿಷತ್ತುಗಳ ಕಾಲದಿಂದಲೂ ಕಡೆಗಣಿಸಿಕೊಂಡು ಬರಲಾಗಿತ್ತು.” (ಅದೇ, ಪು.51,53) ಮಹಿಳೆ ಇಂತಹ ದಿಗ್ಟಂಧನಗಳಿಗೆ ಗುರಿಯಾದುದರಿಂದ ಅವಳ ಬಿಡುಗಡೆಗಾಗಿ ಪ್ರಯತ್ನಗಳು ಹೋರಾಟಗಳು ಚರಿತ್ರೆಯ ಉದ್ದಕ್ಕೂ ನಡೆದಿವೆ. ಜ್ಯೋತಿಬಾ ಫುಲೆ, ರಾಜಾರಾಮ ಮೋಹನರಾಯ್‌ರಂತವರು ಇಲ್ಲಿ ಉಲ್ಲೇಖನಾರ್ಹರು. ಇದರಲ್ಲಿ ಅಂಬೇಡ್ಕರ್‌ ಅವರು ಮಹಿಳೆಗೆ ಸಮಾನಹಕ್ಕು ಅಧಿಕಾರಗಳನ್ನು ಕೊಡಿಸಿಕೊಡುವಲ್ಲಿ ಮಾಡಿದ ಪ್ರಯತ್ನಗಳು ಮಹತ್ವದ್ದಾಗಿವೆ.

1955ರ ಜನವರಿಯಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆಗಳು ನಡೆದವು.ನಂತರ ಬಹುಮತದ ಸರ್ಕಾರದ ಪಾರ್ಲಿಮೆಂಟ್‌ನ ಎರಡು ಸದನಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ನಾಲ್ಕು ಮಸೂದೆಗಳನ್ನು ಒಂದಾದ ಮೇಲೆ ಒಂದರಂತೆ ಮಂಡಿಸಿದರು.ಈ ನಾಲ್ಕು ಮಸೂದೆಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಲಾಗಿದೆ.ಎರಡು ಸದನಗಳ ಅನುಮೋದನೆ ದೊರೆಯಿತು.ಆದ್ದರಿಂದ 1955-56ರಲ್ಲಿ ಮಂಡಿತವಾದ ಹಿಂದೂ ಕೋಡ್ ಬಿಲ್‌ಗೆ ಮಹಿಳಾ ನೆಲೆಯಿಂದ ಪ್ರಮುಖವಾದ ಸ್ಥಾನ ಹೊಂದಿದೆ. ಇದು ವಿವಾಹ ಸಂಬಂಧಿತವಾದ ಮಹಿಳೆಯರ ಹಲವು ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿತವಾದ ಕಾಯ್ದೆಯಾಗಿದ್ದು, ಅದರ ಪ್ರಮುಖ ಅಂಶಗಳು ಈ ರೀತಿಯಿವೆ:

ಒಂದು : ಬಹುಪತ್ನಿತ್ವವನ್ನು ನಿಷೇಧಿಸಿ, ಏಕಪತಿ-ಪತ್ನಿತ್ವವನ್ನು ಕಾನೂನು ಬದ್ಧಗೊಳಿಸುವುದು (Hindu Marriage Act), ಹಿಂದೂ ವಿವಾಹ ಕಾಯ್ದೆ (1955) ಬಹುಪತ್ನಿತ್ವವನ್ನು ಅಪರಾಧವಾಗಿ ಪರಿಗಣಿಸಿದೆ. ಜೊತೆಗೆ ಏಕಪತ್ನಿತ್ವಕ್ಕೆ ಅನುಮತಿಯಿದೆ. ಅಂದರೆ ಇದರಲ್ಲಿ “ಅಂಬೇಡ್ಕರ್ ಅವರು ಎರಡು ರೀತಿಯ ವಿವಾಹ ಪದ್ಧತಿಗಳನ್ನು ಪ್ರಸ್ತಾಪಿಸಿದ್ದರು.ಮೊದಲನೆಯದು ಪಾರಂಪರಿಕ ವಿವಾಹಪದ್ಧತಿ (Sacramintal Marriage), ಎರಡನೆಯದು ನಾಗರಿಕ ವಿವಾಹಪದ್ಧತಿ (ಅತುಟ ಒಚಿಡಿಡಿಚಿರಜ), ಈ ಎರಡು ಪದ್ಧತಿಗಳು ಸಂಪೂರ್ಣವಾಗಿ ಸಂಪ್ರದಾಯದಿಂದ ಭಿನ್ನವಾಗಿರಲಿಲ್ಲ. ಏಕೆಂದರೆ ಭಾರತೀಯ ಸಂಸ್ಕೃತಿಯಲ್ಲಿಯೇ ಈ ಎರಡು ಬಗೆಯ ವಿವಾಹಗಳಿದ್ದವು.ಸಾಂಪ್ರದಾಯಿಕವಾಗಿ ಗುರು ಹಿರಿಯರು ನಿರ್ಧರಿಸಿದ ವಿವಾಹ ಮೊದಲ ಬಗೆಯದಾಗಿದ್ದರೆ, ಪರಸ್ಪರ ಪ್ರೀತಿಸಿ ಮದುವೆಯಾಗುವುದು ಗಾಂಧರ್ವ ವಿವಾಹಪದ್ಧತಿ ಎನಿಸಿತ್ತು.

ಗಾಂಧರ್ವ ವಿವಾಹಪದ್ಧತಿಗೆ ಹೊಸ ಅಂಶಗಳನ್ನು ಸೇರಿಸಿ ಅಂಬೇಡ್ಕರ್ ಅವರು ನಾಗರಿಕ ವಿವಾಹ ಪದ್ಧತಿಯನ್ನು ರೂಪಿಸಿದಂತೆ ಕಾಣುತ್ತದೆ. ಆದರೆ ಅಂಬೇಡ್ಕರ್‌ ನಾಗರಿಕ ವಿವಾಹಪದ್ಧತಿಗೆ ಕಾನೂನಿನ ರಕ್ಷೆಯನ್ನು ಒದಗಿಸಿದರು. ಇದು ಎಲ್ಲ ಮತೀಯ ಸ್ತ್ರೀಯರನ್ನು ಸಮಾನವಾಗಿ ಪರಿಗಣಿಸಿದ ಕಾನೂನಾಗಿತ್ತು.” (ಬಾ.ಸಾ.ಅಂ.ಬ.ಭಾ, 2004,ಪು.600,800) ಈ ಮೂಲಕವೇ ಅಂತರ್‌ಜಾತಿಯ ವಿವಾಹ ಬಹಿಷ್ಕ್ರುತವಲ್ಲ ಎಂದು ಏಕಪತ್ನಿತ್ವ ವ್ಯವಸ್ಥೆಯನ್ನು ಜಾರಿಗೊಳಿಸಿ, ಇದನ್ನು ಕಾನೂನು ಬದ್ಧಗೊಳಿಸಲಾಗಿದೆ. ಯಾವುದೇ ವ್ಯಕ್ತಿ ಮೊದಲನೆಯ ಪತ್ನಿ ಜೀವಂತವಿದ್ದು, ಅವಳಿಂದ ವಿಚ್ಛೇದನ ಪಡೆಯದೆ ಮರುವಿವಾಹವಾಗುವಂತಿಲ್ಲ. ಈ ರೀತಿ ವಿವಾಹಕ್ಕೆ ಕಾನೂನು ಮನ್ನಣೆ ಇರುವುದಿಲ್ಲ.

ಬಹುಪತ್ನಿತ್ವ ಪದ್ಧತಿ ಭಾರತ ದಂಡಸಂಹಿತೆ ಪ್ರಕಾರ ಅಪರಾಧ ಎಂದು ಪರಿಗಣಿಸಲಾಗಿದೆ.ಪ್ರಾಚೀನ ಹಿಂದೂ ಸಮಾಜದಲ್ಲಿ ಬಹುಪತ್ನಿತ್ವ ರೂಢಿಯಲ್ಲಿತ್ತು.ಈಗ ಭಾರತೀಯ ದಂಡಸಂಹಿತೆ 494 ಮತ್ತು 495ನೇ ಕಲಂನ ಪ್ರಕಾರ ಶಿಕ್ಷೆಗೆ ಅರ್ಹರಾಗುತ್ತಾರೆ. ಹಾಗೆಯೇ ಯಾವುದೇ ವ್ಯಕ್ತಿಯ ತಂದೆಯ ಸಂಬಂಧ ಮೇಲುಮುಖವಾಗಿ 5ನೇ ತಲೆಮಾರಿನವರೆಗೆ ತಾಯಿಯ ಸಂಬಂಧ ಮೇಲುಮುಖವಾಗಿ 3ನೇ ತಲೆಮಾರಿನವರಿಗೆ ಸಂಬಂಧದಲ್ಲಿ ವಿವಾಹವಾಗುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ.

ಒಬ್ಬ ವ್ಯಕ್ತಿ ಭಾರತದಲ್ಲಿ ಮದುವೆಯಾಗಿ ನಂತರ ವಿದೇಶಕ್ಕೆ ತೆರಳಿ ಅಲ್ಲಿ ಮರುವಿವಾಹವಾದರೂ ಕೂಡ ಅಪರಾಧಿ ಎಂದು ಕಾನೂನಿನ ಅನ್ವಯ ಪರಿಗಣಿಸಲ್ಪಡುತ್ತಾನೆ. ವಿಚ್ಛೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಮರುವಿವಾಹಕ್ಕೆ ಈ ಕಾಯ್ದೆಯಲ್ಲಿ ಅವಕಾಶವಿಲ್ಲ ವಿಚ್ಛೇದನ ಕ್ರಿಯೆ ಪೂರ್ಣಗೊಳ್ಳುವವರೆಗೆ ಆತ ಮತ್ತು ಆಕೆ ಮರುವಿವಾಹ ಮಾಡಿಕೊಳ್ಳುವಂತಿಲ್ಲ. ಈ ಕಾನೂನಿನ ಕಣ್ಣುತಪ್ಪಿಸಿ ಈ ರೀತಿಯ ವಿವಾಹವಾದರು ಕೂಡ ಅದು ಅನೂರ್ಜಿತವೆಂದೇ ಹೇಳುತ್ತದೆ. ಅಷ್ಟೇ ಅಲ್ಲ, ಈ ಕಾಯ್ದೆಯಲ್ಲಿ ಪ್ರತಿಯೊಂದು ಸಮಾಜದ ಜನತೆ ಸ್ತ್ರೀಯನ್ನು ಹೇಗೆ ಕಾಣುತ್ತಾ ಬಂದಿದೆ ಎಂಬುದನ್ನು ಆಧಾರ ಸಹಿತವಾಗಿ ಸಾಬೀತುಪಡಿಸಲು ಪ್ರಯತ್ನಿಸಿದ ಅಂಬೇಡ್ಕರ್‌ ಭಾರತೀಯ ಪ್ರಾಚೀನ ಕಾಲದಿಂದ ನಿರಾಕರಿಸಿದ ವಿವಾಹ ವಿಚ್ಛೇದನ ಹಕ್ಕನ್ನು ಕಲ್ಪಿಸಿದರು. ಅವರ ಪ್ರಕಾರ “ಸಕಾರಣಗಳಿಲ್ಲದೆ ಪುರುಷನಾಗಲೀ, ಸ್ತ್ರೀಯಾಗಲೀ ತಾಳಿಯನ್ನು ಹರಿದುಕೊಳ್ಳುವುದಕ್ಕೆ ಬರುವುದಿಲ್ಲ. ಹಾಗೆಯೇ ಕೆಲವು ಸಕಾರಣಗಳು ಹಾಗೂ ಮೂಲಭೂತ ನ್ಯೂನತೆಗಳು ಪುರುಷನಲ್ಲಿದ್ದರೆ ಅಂತಹ ವ್ಯಕ್ತಿಯಿಂದ ವಿವಾಹ ವಿಚ್ಛೇದನವನ್ನು ಪಡೆಯಬಹುದು.” (ಬಾ.ಸಾ. ಅಂ.ಬ.ಭಾ, ಅದೇ, ಪು.721, 777) ಎಂದು ಹೇಳುತ್ತಾರೆ. ವಿವಾಹ ವಿಚ್ಛೇದನೆಗೆ ಕಾರಣಗಳ ಪಟ್ಟಿ ನೀಡುತ್ತಾರೆ. ಅವುಗಳೆಂದರೆ:

1. ಮದುವೆ ಮಾಡಿಕೊಂಡ ವ್ಯಕ್ತಿ ಇಲ್ಲವೆ ಹೆಣ್ಣು ಸುಮಾರು ಎರಡು ವರ್ಷ ದೂರಾಗಿ ದೇಶ್ಯಾಂತರ ಹೋಗಿದ್ದರೆ,
2. ಇನ್ನೊಬ್ಬಳು ಭಾಗಿದಾರನೊಂದಿಗೆ ಬದುಕು ನಡೆಸಿದ್ದರೆ,
3. ತಾನು ಮಾಡಿಕೊಂಡ ಪುರುಷನಿಗೆ ಯಾವುದಾದರೊಂದು ಭಯಾನಕ ಸೋಂಕು ರೋಗ ತಗುಲಿದ್ದರೆ,
4. ಗುಹ್ಯರೋಗದಿಂದ ಪೀಡಿತನಾಗಿದ್ದರೆ,
5. ಸಾಂಕ್ರಮಿಕ ಕುಷ್ಠರೋಗದಿಂದ ನರಳುತ್ತಿದ್ದರೆ,
6. ಮದುವೆಯಾದಂದಿನಿಂದ ಮನಸ್ವಾಸ್ಥ ಇರದಿದ್ದರೆ,
7. ವ್ಯಭಿಚಾರಿಯಾಗಿದ್ದರೆ,
8. ಗಂಡನು ಷಂಡನಾಗಿದ್ದರೆ,
9, ಉಪಪತ್ನಿಯನ್ನು ಇಟ್ಟುಕೊಂಡರೆ,
10. ಅನ್ಯಮತಕ್ಕೆ ಮತಾಂತರಗೊಂಡಿದ್ದರೆ,
11. ಪುರುಷ ಹುಚ್ಚು ಇಲ್ಲವೆ ಬುದ್ಧಿಭ್ರಮಣೆ ಹೊಂದಿದ್ದರೆ, ವಿಚ್ಛೇದನಕ್ಕೆ ದಾವೆ ಹಾಕಿ ವಿಚ್ಛೇದನೆಯನ್ನು ಪಡೆಯಬಹುದು(ಅದೇ, ಪು.733). ಹಾಗೆಯೇ ವಿಚ್ಚೇದನೆ ಜೊತೆಗೆ ಗಂಡನು ತನ್ನ ಆಸ್ತಿಯಲ್ಲಿ ಜೀವನಾಂಶ ಕೊಡಬೇಕಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ವಿವರಣೆ ಹೀಗಿದೆ;

1. ಗಂಡನ ನಿವ್ವಳ ವರಮಾನದ ಐದನೆಯ ಒಂದು ಭಾಗಕ್ಕೆ ಮೀರದಂತೆ ಹಣವನ್ನು ಪತ್ನಿಗೆ ಕೊಡತಕ್ಕದ್ದು.
2. ಪತಿಯ ಆಸ್ತಿಯಲ್ಲಿ ಒಂದು ಭಾಗವನ್ನು ಕೊಡತಕ್ಕದ್ದು.
3. ಆಸ್ತಿಯಲ್ಲಿ ಒಂದು ಮೊತ್ತವನ್ನು ಕೊಡತಕ್ಕದ್ದು.
4. ಪ್ರತಿ ತಿಂಗಳು ಇಂತಿಷ್ಟು ಮೊತ್ತವನ್ನು ಕೊಡತಕ್ಕದ್ದು.
5. ಅವಳಿಗೂ ಆಸ್ತಿ ಇದ್ದರೆ ಗಂಡ ಮತ್ತು ಹೆಂಡತಿಯ ಈರ್ವರ ಆಸ್ತಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.” (ಉದ್ಧೃತ : ಬಾಬುರಾವ್ ಮುಡಬಿ, 2005, ಪು.146)

ಹೀಗೆ ಈ ವಿವಾಹ ಕಾಯ್ದೆಯಲ್ಲಿ 1956 ವಿಚ್ಛೇದನಕ್ಕೆ ಪರಸ್ಪರ ಇಬ್ಬರಲ್ಲಿ ಒಬ್ಬರು ದೋಷಾರೋಪಣೆಗೆ ಒಳಪಟ್ಟಾಗ (ಶೀಲ, ಆರೋಗ್ಯದ ಬಗ್ಗೆ ಇತ್ಯಾದಿ) ಮಾತ್ರ ವಿಚ್ಛೇದನಕ್ಕೆ ಅವಕಾಶವಿತ್ತು.ಆದರೆ 1976ರಲ್ಲಿ ಜಾರಿಗೆ ಬಂದ ವಿವಾಹ ವಿಶೇಷ ಕಾನೂನು ಭಾಗ 13ರ (ಬಿ) ಪ್ರಕಾರ ಗಂಡ ಹೆಂಡತಿ ಪರಸ್ಪರ ಒಪ್ಪಿಗೆಯಿಂದಲೂ ದಾಂಪತ್ಯದಿಂದ ಬಿಡುಗಡೆ ಹೊಂದಬಹುದು.

“ವಿವಾಹ ವಿಚ್ಛೇದನೆ ಕುರಿತು ಮೊಕದ್ದಮೆಗಳು ನ್ಯಾಯಾಲಯದಲ್ಲಿ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಪತ್ನಿ ಜೀವನಾಂಶಕ್ಕೆ ಅರ್ಹಳಾಗಿರುತ್ತಾಳೆ.ನ್ಯಾಯಾಲಯವು ಪತಿಯ ಒಟ್ಟು ವರಮಾನದ ಐದನೆಯ ಭಾಗದಷ್ಟು ವರಮಾನವನ್ನು ಜೀವನಾಂಶ ನೀಡುವಂತೆ ಆದೇಶವಿದೆ.ಮೊಕದ್ದಮೆ ಇತ್ಯರ್ಥವಾದಾಗ ಪತಿಯಿಂದ ಪತ್ನಿಗೆ ಒಟ್ಟಾಗಿ ಒಂದೇ ಮೊತ್ತದಲ್ಲಿ ಅಥವಾ ಆಕೆ ಬದುಕಿರುವವರೆಗೆ ಮಾಸಿಕವಾಗಿ ಜೀವನಾಂಶ ನೀಡುವಂತೆ ಕಲ್ಪಿಸಲಾಗಿದೆ.ಆದರೆ ವಿಚ್ಛೇದನೆ ಹೊಂದಿದ ಪತ್ನಿ, ಮರು ವಿವಾಹವಾದ ಸಂದರ್ಭದಲ್ಲಿ ಆಕೆ ಜೀವನಾಂಶಕ್ಕೆ ಅರ್ಹಳಾಗಿರುವುದಿಲ್ಲ” ಎಂದು ಹೇಳುತ್ತದೆ.

ವಿವಾಹ ವಿಚ್ಛೇದನ ಕುರಿತು ಕಾನೂನಿನಲ್ಲಿ ಇಷ್ಟೆಲ್ಲ ಅವಕಾಶಗಳು ಇದ್ದಾಗ್ಯೂ ಸಂಪ್ರದಾಯವಾದಿಗಳು ಇರುವ ಈ ಸಮಾಜದಲ್ಲಿ “ವಿವಾಹ ವಿಚ್ಛೇದನೆ” ಎಂಬುದು ವಾಸ್ತವವಾಗಿ ಹಿಂದೂ ಧರ್ಮದ ವಿರೋಧಿ ಅಂಶವಾಗಿ ನಿರೂಪಿತಗೊಳ್ಳುತ್ತದೆ.ಆದ್ದರಿಂದ ಇಂದಿಗೂ ಕೂಡ ಬಹುತೇಕ ಮಹಿಳೆಯರು ಜೀವನಾಂಶಕ್ಕಾಗಿ ನ್ಯಾಯಾಲಯದ ಮೊರೆ ಹೊಕ್ಕಿರುವ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ.ದಾಖಲಾದ ಪ್ರಕರಣಗಳನ್ನೇ ವೈಭವೀಕರಿಸಲಾಗುವುದು. ವಿವಾಹ ವಿಚ್ಛೇದನೆ ಎಂಬುದು ಮಹಿಳೆಯರನ್ನು ಹಿಂಸೆಗೆ ಒಳಪಡಿಸುವ ಬಹುಮುಖ್ಯವಾದ ಸಂಪ್ರದಾಯವಾಗಿದೆ.ಅದರ ಜೊತೆಗೆ “ಧರ್ಮಬಾಹಿರ ಮಕ್ಕಳನ್ನು ಧರ್ಮಸಮ್ಮತಿಗೊಳಿಸುವುದು, ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 15 ವರ್ಷಕ್ಕೆ (ಈಗ 18 ವರ್ಷ ಆಗಿದೆ) ಏರಿಸುವುದರ ಮೂಲಕ ಅವರಿಗೆ ಸ್ವಾತಂತ್ರ್ಯವನ್ನು ಒದಗಿಸುವುದಾಗಿದೆ.ಆದರೆ ಜಾತಿ, ಮತ್ತು ಪಿತೃಪ್ರಧಾನ ಲೈಂಗಿಕ ಪಾವಿತ್ರ್ಯ ಗುಣಗಳಿಂದಾಗಿ ಇದು ಇಂದಿಗೂ ನಮ್ಮ ಸಮಾಜದ ಬಹು ಮುಖ್ಯ ಸಾಮಾಜಿಕ ಸಮಸ್ಯೆಯಲ್ಲಿ ಚರ್ಚೆಗೊಳ್ಳುತ್ತಿರುವುದು. ಇದು ಬಾಲ್ಯವಿವಾಹ, ವೈಧವ್ಯ, ಪತಿವ್ರತೆ, ಶೀಲ-ಅಶ್ಲೀಲಗಳಲ್ಲಿ ಸುತ್ತುವರೆಯುತ್ತಿದೆ.ಇವು ಶಿಶ್ನಕೇಂದ್ರಿತ ಆಧಿಪತ್ಯವನ್ನು ಅನಾವರಣಗೊಳಿಸುತ್ತವೆ.

ಮಹಿಳೆಗೂ ಆಸ್ತಿ ಹಕ್ಕನ್ನು ಕಾನೂನುಬದ್ಧಗೊಳಿಸಲಾಯಿತು. ಅಂದರೆ ಮಹಿಳೆಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲನ್ನು (Succession Act (1956) ಜಾರಿಗೊಳಿಸಲಾಯಿತು.ಅದರ ಪ್ರಕಾರ “ಗಂಡ ಸತ್ತರೆ ಆತನ ಆಸ್ತಿಯು ಆತನ ಹೆಂಡತಿಗೆ ಸೇರುತ್ತದೆ. ಹೆಣ್ಣು ಮಕ್ಕಳಿಗೆ ತನ್ನ ತಂದೆ ಆಸ್ತಿಯಲ್ಲಿ ಸಮಪಾಲು ಇದ್ದು, ಅವರು ತಮ್ಮ ಆಸಕ್ತಿ ಹಾಗೂ ಇಚ್ಛೆಗೆ ಅನುಸಾರವಾಗಿ ಮಾರಾಟ ಮಾಡಬಹುದು. ಈ ವಿಷಯದಲ್ಲಿ ಅವಳು ಸಂಪೂರ್ಣ ಸ್ವತಂತ್ರಳು.ಹಾಗೆಯೇ ಇದು ಸಂವಿಧಾನದ 15ನೇ ವಿಧಿಗೆ ಸಂಬಂಧಿಸಿದೆ. ಇದರಲ್ಲಿ ಹಿಂದೂ ಮಹಿಳೆಯು ಈ ಕಾನೂನಿನ ಜಾರಿಯ ನಂತರ ಆಸ್ತಿಯ ಕುರಿತು ಅಂತಿಮ ಇಷ್ಟಪತ್ರವನ್ನು ಬರೆಯದೆ ಮರಣ ಹೊಂದಿದ್ದರೆ, ಅವಳ ಆಸ್ತಿಗೆ ಸಮನಾದ ಉತ್ತರಾಧಿಕಾರದ ಕ್ರಮವು ಅನ್ವಯಿಸುತ್ತದೆ” ಇತ್ಯಾದಿ ಅಂಶಗಳನ್ನು ತಿಳಿಸುತ್ತದೆ.(ಉದ್ಧತ: ಅರವಿಂದ ಮಾಲಗತ್ತಿ, 1991, ಪು.143) ಜೊತೆಗೆ ಈ ಕಾಯ್ದೆಯ ಮಹತ್ವದ ಬದಲಾವಣೆಯ ಅಂಶಗಳೆಂದರೆ:

1. ಇದುವರೆಗೆ ಧಾರ್ಮಿಕ ಫಲಾನುಭವಕ್ಕೂ, ಆಸ್ತಿಹಕ್ಕಿಗೂ ಇದ್ದ ಸಂಬಂಧವನ್ನು ತೆಗೆದುಹಾಕಿ ವಾರಸುದಾರಿಕೆ ಹಕ್ಕು ಮತ್ತು ವಾರಸುದಾರಿಕೆ ಕ್ರಮವನ್ನು ವಿಧಿಸಲಾಗಿದೆ.

2. ಇದುವರೆಗೆ ಸ್ತ್ರೀಯರಿಗಿದ್ದ ಪರಿಮಿತ ಹಕ್ಕು (ಜೀವನ ಪದ್ಯಂತ ಅನುಭವಿಸುವ ಹಕ್ಕು) ತೆಗೆದುಹಾಕಿ, ಸ್ತ್ರೀಯರಿಗೆ ಯಾವುದೇ ರೀತಿಯಲ್ಲಿ ಆಸ್ತಿ ಲಭಿಸಿರಲಿ ಅವರು ಪುರುಷರಂತೆ ಸಂಪೂರ್ಣ ಹಕ್ಕುದಾರರಾಗುವರೆಂದು ಘೋಷಿಸಲಾಗಿದೆ.

3. ವಾರಸುದಾರಿಕೆಯ ಅನುಕ್ರಮಣಿಯಲ್ಲಿ ಬಹಳ ಕೆಳಗೆ ಇದ್ದ ಮೃತ ಮಗನ ಹಾಗೂ ಮೃತ ಮಗಳ ಮಗಳನ್ನು ಬಹಳ ಮುಂದೆ ತಂದು ಅವರನ್ನು ಮಗ ಮೃತ ಮಗನ ವಿಧವೆ, ಮೃತ ಮಗನ ಮಗ, ಅವನ ವಿಧವೆ, ಮೃತ ಮಗನ ಮಗ (ಮೊಮ್ಮಗ) ಅವನ ವಿಧವೆ, ಮಗಳು, ಮೃತ ಮಗಳು, ಮಗ ಮುಂತಾದವರನ್ನು ಪ್ರಥಮ ದರ್ಜೆಯ ವಾರಸುದಾರರನ್ನಾಗಿ ಮಾಡಲಾಗಿದೆ. ಧಾರ್ಮಿಕ ಕಾರಣದಿಂದಾಗಿ ದೂರವಿಟ್ಟಿದ್ದ ಈ ಸ್ತ್ರೀ ಸಂಬಂಧಗಳನ್ನು ಮೃತವ್ಯಕ್ತಿಗೆ ಹತ್ತಿರದ ರಕ್ತ ಸಂಬಂಧಿಗಳಾಗುತ್ತಾರೆಂಬ ಕಾರಣದಿಂದ ಈ ಬದಲಾವಣೆ ಮಾಡಲಾಗಿದೆ.

4. ಮಿತಾಕ್ಷರದ ಛಾಯಾಭಾಗದಲ್ಲಿ ಎರಡು ಶಾಖೆಗಳಿಗೂ ಒಂದೇ ವಾರಸುದಾರಿಕೆ ನಿಯಮಾವಳಿಯನ್ನು ಅನ್ವಯಿಸಲಾಗಿದೆ.

5. ಸ್ತ್ರೀಯರ ಆಸ್ತಿ(ಸ್ತ್ರೀಧನಕ್ಕೆಗೆ ಸಂಬಂಧಿಸಿದಂತೆ ವಾರಸುದಾರಿಕೆ ನಿಯಮಗಳನ್ನು ಏಕರೂಪಗೊಳಿಸಲಾಗಿದೆ. ಸ್ತ್ರೀಧನದ ಲಕ್ಷಣಗಳ ಮೇಲೆ ಈಗ ಅದು ಅವಲಂಬಿಸುವುದಿಲ್ಲ. ಸ್ತ್ರೀಧನದ ಬಗ್ಗೆ ಈವರೆಗೆ ಇದ್ದ ಎಲ್ಲ ಗೊಂದಲಗಳನ್ನು ನಿವಾರಿಸಿ ಸ್ತ್ರೀಗೆ ಯಾವ ಮೂಲದಿಂದ ಯಾವಾಗ ಯಾವ ಆಸ್ತಿಯೇ ಬರಲಿ ಅದು ಅವಳ ಸಂಪೂರ್ಣ ಆಸ್ತಿಯಾಗುತ್ತದೆಂದು ತಿಳಿಸುತ್ತದೆ.

6. ಸ್ತ್ರೀ ಹಾಗೂ ಪುರುಷರ ಆಸ್ತಿ ಸಂಬಂಧವಾಗಿ ಈವರೆಗೆ ಸ್ತ್ರೀಪುರುಷರೆ ವಾರಸುದಾರರಲ್ಲಿ ಇದ್ದ ಭೇದಭಾವನ್ನು ಈ ಕಾನೂನು ತೆಗೆದುಹಾಕುತ್ತದೆ. ಒಂದೇ ಶ್ರೇಣಿಯ ಸಂಬಂಧಿಕರಾದಲ್ಲಿ ಸ್ತ್ರೀಪುರುಷರಿಬ್ಬರೂ ಸಮಾನ ಹಕ್ಕಿನ ವಾರಸುದಾರರಾಗುತ್ತಾರೆ.

7. ಈವರೆಗೆ ವ್ಯಭಿಚಾರದ ಕಾರಣದಿಂದಾಗಿ ಸ್ತ್ರೀ ವಾರಸುದಾರರಿಗೆ ಇದ್ದ ಅನರ್ಹತೆಯನ್ನು ತೆಗೆದುಹಾಕಿ ಅಂತಹ ಸ್ತ್ರೀಯರ ವಾರಸುದಾರಿಕೆ ಹಕ್ಕನ್ನು ಮಾನ್ಯ ಮಾಡಲಾಗಿದೆ.

8. ಮಗನು ತಮ್ಮ ಹುಟ್ಟಿನಿಂದ ಪಡೆಯುವ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ಉಳಿಸಿಕೊಂಡಿದ್ದರೂ, ಮಗಳಿಗೆ ಜನ್ಮಸಿದ್ಧ ಹಕ್ಕನ್ನು ಕೊಡದಿದ್ದರೂ, ತಾಯಿ, ಹೆಂಡತಿ, ಮಗಳು, ಮೊಮ್ಮಗಳು ಈಗ ಒಂದನೇ ದರ್ಜೆಯ ವಾರಸುದಾರ ರಾಗುವುದರಿಂದ ಮಗ, ಮೊಮ್ಮಗ, ಮರಿ ಮಗನಿಗೆ ದೊರಕುವ ಆಸ್ತಿಯ ಪಾಲು ಕಡಿಮೆ ಆಗುತ್ತದೆ.

9. ವಾಸದ ಮನೆಯ ಬಗ್ಗೆ ಕುಟುಂಬದ ಕೆಲವು ಸದಸ್ಯರಿಗೆ ಮೊದಲು ಕೊಳ್ಳುವ ಹಕ್ಕನ್ನು ಕೊಡಲಾಗಿದೆ.

10. ಮೊಟ್ಟ ಮೊದಲ ಬಾರಿಗೆ ಅವಿಭಕ್ತ ಕುಟುಂಬದ ಆಸ್ತಿಯಲ್ಲಿರುವ ತನ್ನ ಪಾಲಿನ ಬಗ್ಗೆ ಮೃತಪತ್ರ ಬರೆಯುವ ಅಧಿಕಾರವನ್ನು ಸಹಭಾಗೀದಾರರಿಗೆ ಕೊಡಲಾಗಿದೆ. ಹಾಗೆಯೇ ಪ್ರಥಮ ದರ್ಜೆಯ ಸ್ತ್ರೀ ವಾರಸುದಾರರಿದ್ದಾಗ ಸಹಭಾಗಿದಾರನ ಪಾಲು ಬದುಕಿರುವ ಉಳಿದ ಸಹಭಾಗಿದಾರರಿಗೆ ಹೋಗದೆ, ವಾರಸುದಾರಿಕೆ ಮೂಲಕ ಅವನ ವಾರಸುದಾರರಿಗೆ ಸಮಾನವಾಗಿ ಹೋಗುತ್ತದೆ. ಸ್ವಯಾರ್ಜಿತ ಆಸ್ತಿ ಸ್ತ್ರೀ ಪುರುಷ ಸಂಬಂಧಿಗಳಿಗೆ ಸಮಾನವಾಗಿ ಹಂಚಿಕೆಯಾಗುತ್ತದೆ.

11. ಕಾನೂನುಬಾಹಿರ ಸಂಬಂಧದಲ್ಲಿ ಹುಟ್ಟಿದ ಮಕ್ಕಳಿಗೆ ತಾಯಿಯ ಆಸ್ತಿಯಲ್ಲಿ ಈವರೆಗೆ ಇದ್ದ ವಾರಸುದಾರಿಕೆಯ ಹಕ್ಕನ್ನು ಉಳಿಸಿಕೊಳ್ಳಲಾಗಿದೆ. ಆದರೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಆ ಹಕ್ಕು ಇರುವುದಿಲ್ಲ” (ಬಾಬುರಾವ್ ಮುಡಬಿ: 2005, ಪು-145, 150).

ಇವಿಷ್ಟು ಮಹಿಳೆ ಆಸ್ತಿಯ ಸಂಬಂಧ ಸಂಗತಿಗಳಾಗಿದ್ದು, ಇವನ್ನು ಪ್ರಕರಣಗಳ ಮೂಲಕ ತೋರಿಸಲಾಗಿದೆ. ಆದ್ದರಿಂದ ಈ ಅಧಿನಿಯಮ ಎಂಟನೇ ಪ್ರಕರಣದಲ್ಲಿ ಸ್ತ್ರೀಯರ ಆಸ್ತಿ ಹಕ್ಕಿಗೆ ಹೊಸದಾಗಿ ಸೇರಿದ ನಿಯಮಗಳೆಂದರೆ:

ವಿವಾಹ ಕಾನೂನು ಜಾರಿಗೆ ಬಂದ ಮೇಲೆ ಹಿಂದೂ ಪುರುಷನೊಬ್ಬನು ಮೃತನಾದರೆ ಹಾಗೂ ಅವನಿಗೆ ಮಿತಾಕ್ಷರ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಇದ್ದಲ್ಲಿ ಹಾಗೂ ಅವನಿಗೆ ಒಂದನೇ ದರ್ಜೆಯ ಸ್ತ್ರೀ ಸಂಬಂಧಿಗಳು(ತಾಯಿ, ಹೆಂಡತಿ, ಮಗಳು, ಮೃತ ಮಗನ, ಮಗಳು, ಮೃತ ಮಗಳು, ಮೃತ ಮಗನ ಹೆಂಡತಿ / ಮೃತ ಮೊಮ್ಮಗನ ಹೆಂಡತಿ ಅಥವಾ ಮಗಳು) ಇದ್ದಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿನ ಅವನ ಪಾಲು ಒಂದನೇ ದರ್ಜೆಯ ಎಲ್ಲ ಸ್ತ್ರೀ ಪುರುಷ ವಾರಸುದಾರರಿಗೆ ಸಮಾನವಾಗಿ ವಾರಸುದಾರಿಕೆಯ ಮೂಲಕ ಹೋಗುತ್ತದೆ. ಹಿಂದೂ ಪುರುಷನ ಒಂದೇ ದರ್ಜೆಯ ವಾರಸುದಾರರಲ್ಲಿ ಮೇಲ್ಕಂಡ ಸ್ತ್ರೀ ಸಂಬಂಧಿಗಳಲ್ಲದೆ, ಅವನ ಮಗ, ಮೊಮ್ಮಗ… ಹೀಗೆ ಪುರುಷ ಸಂಬಂಧಿಗಳು ಬರುತ್ತಾರೆ. ಮೇಲೆ ತಿಳಿಸಿದ ಸ್ತ್ರೀ ಸಂಬಂಧಿಗಳು ಯಾರೂ ಇಲ್ಲದಿದ್ದಲ್ಲಿ ಅವರ ಪಾಲು ಹಿಂದಿನ ಹಿಂದೂ ಮಿತಾಕ್ಷರ ನಿಯಮದಂತೆ ಅವರ ಪುರುಷ ಸಂಬಂಧಿಗಳಿಗೆ ಉಳಿದವರ ಹಕ್ಕಿನ ಪ್ರಕಾರ ಹೋಗುತ್ತದೆ.

ಅಧಿನಿಯಮದ ಮತ್ತೊಂದು ಮಹತ್ವದ ಬದಲಾವಣೆ 14ನೇ ಪ್ರಕರಣದಲ್ಲಿ ಇದೆ.ಹಿಂದೂ ಸ್ತ್ರೀಯೊಬ್ಬಳು ಈ ಅಧಿನಿಯಮ ಜಾರಿಗೆ ಬರುವ ಮೊದಲಾಗಲಿ ಅನಂತರವಾಗಲಿ ಯಾವುದೇ ಆಸ್ತಿಯನ್ನು ಪಡೆದಿದ್ದಲ್ಲಿ ಅವಳು ಈ ಆಸ್ತಿಯ ಸಂಪೂರ್ಣ ಮಾಲೀಕಳಾಗುತ್ತಾಳೆಂದು ಈ ಪ್ರಕರಣ ತಿಳಿಸುತ್ತದೆ.ಹಿಂದಿನ ಹಿಂದೂ ಕಾನೂನಿನಲ್ಲಿ ಕೆಲವು ಹಿಂದೂ ಸ್ತ್ರೀ ಸಂಬಂಧಿಗಳಿಗೆ ಮಾತ್ರ ಆಸ್ತಿ ಹಕ್ಕು ದೊರಕುತ್ತಿದ್ದು ಅವರ ಸ್ತ್ರೀ ಧನವನ್ನುಳಿದ ಎಲ್ಲ ಆಸ್ತಿಗಳಲ್ಲಿ ಕೇವಲ ಜೀವಿತಾವಧಿಯವರೆಗೆ ಅನುಭವಿಸುವ ಹಕ್ಕನ್ನು ಮಾತ್ರ ಹೊಂದಿರುತ್ತಿದ್ದರು.ಅವರ ಮರಣಾನಂತರ ಆ ಆಸ್ತಿ ಪನಃ ಪುರುಷ ಸಂಬಂಧಿಗಳಿಗೆ ಹಿಂದಿರುಗುತ್ತಿತ್ತು ಎನ್ನುವ ಹಿನ್ನೆಲೆಯಲ್ಲಿ ಈ ತಿದ್ದುಪಡಿಯನ್ನು ಅರ್ಥ ಮಾಡಿಕೊಂಡಾಗ ಅದರ ಮಹತ್ವ ತಿಳಿಯುತ್ತದೆ.ಈ ಪ್ರಕರಣ ಸ್ತ್ರೀಧನ ಹಾಗೂ ಉಳಿದ ಆಸ್ತಿ ಹಕ್ಕಿನ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಿ ಎಲ್ಲ ಆಸ್ತಿಯನ್ನು ಸ್ತ್ರೀಯರ ಸಂಪೂರ್ಣ ಒಡೆತನದ ಆಸ್ತಿಯಾಗಿ ಘೋಷಿಸುತ್ತದೆ.ಸ್ತ್ರೀಯರಿಗೂ ತಮ್ಮ ಆಸ್ತಿಯನ್ನು ಮಾರುವ, ದಾನಕೊಡುವ, ಮೃತಪತ್ರ ಬರೆಯುವ ಹಕ್ಕನ್ನು ಒದಗಿಸಿದೆ.

ಸ್ತ್ರೀ ವಾರಸುದಾರರನ್ನು (ತಾಯಿ, ಹೆಂಡತಿ, ಅವಿವಾಹಿತೆ, ವಿಧವೆ, ಗಂಡನಿಂದ ಬೇರೆಯಾದ ಮಗಳು) ಈ ಮನೆಯಲ್ಲಿ ವಾಸಿಸುತ್ತಿದ್ದು, ಗಂಡು ಮಕ್ಕಳು ಬೇರೆ ಮನೆಯಲ್ಲಿ ಬೇರೆ ಊರಿನಲ್ಲಿ ವಾಸಿಸಬಹುದಾದ ಸಂದರ್ಭವನ್ನು ಇದು ಕಲ್ಪಿಸಿಕೊಳ್ಳುವುದೇ ಇಲ್ಲ. ಇಂತಹ ಕುಟುಂಬಗಳು ದಕ್ಷಿಣ ಭಾರತದ ಕೇರಳ ಹಾಗೂ ಮಂಗಳೂರಿನ ಕರಾವಳಿ ಪ್ರದೇಶಗಳಲ್ಲಿ ಇದ್ದವು. ಅವು ಅಳಿಯತನ ಪದ್ಧತಿಯನ್ನು ಹೊಂದಿದ್ದವು.ಅಂದರೆ ಗಂಡಸರು ಸಹ ಮದುವೆಯಾದ ನಂತರ ಹೆಂಡತಿಯ ಮನೆಯಲ್ಲಿ ವಾಸಿಸುತ್ತಿದ್ದರು.ಈ ಮೂಲಕವೇ ಅವರು ಹುಟ್ಟಿದ ಮನೆಯ ವಾರಸುದಾರಿಕೆಯನ್ನು ಕಳೆದುಕೊಳ್ಳುತ್ತಿದ್ದರು. ಹಾಗಾಗಿ ಈ ಕಾನೂನಿನ ಪ್ರಕಾರ ಗಂಡು ಮಕ್ಕಳು ಮನೆಯನ್ನು ವಿಭಾಗ ಮಾಡಿಕೊಂಡು ಮಾರಾಟ ಮಾಡಿ ಸ್ತ್ರೀ ವಾರಸುದಾರರಿಗೆ ವಾಸಿಸುವ ಮನೆ ಇಲ್ಲದಂತೆ ಮಾಡಬಹುದು. ಹೀಗೆ ಪುರುಷ ವಾರಸುದಾರರ ಹಿತವನ್ನು ರಕ್ಷಿಸುವ ಈ ನಿಯಮ ಸೀ ವಾರಸುದಾರರ ಹಿತವನ್ನು ಕಡೆಗಣಿಸಿದೆ.ಆದ್ದರಿಂದ ಇದು ಮಹಿಳೆಗೆ ಆಸ್ತಿ ನೀಡುವ ಮೇಲ್ಪದರ ನೆಲೆಗಳನ್ನು ಮಾತ್ರ ಹೊಂದಿದೆ.ಪರಿಣಾಮ ಈ ಕಾನೂನು ಮಹಿಳೆ ಸ್ವಲ್ಪ ಚಲನಶೀಲಗೊಳ್ಳಲು ಸಾಧ್ಯವಾಗಿದೆ.

ತಾಯಿಯನ್ನು ಮಗುವಿನ ಸಹಜ ಪೋಷಕಳೆಂದು ನಿರ್ಧರಿಸುವುದು Hindu Minorities and Guardianship oಛಿಣ (1956), ಇದು ಒಳಗೊಂಡ ಸಂಗತಿಗಳೆಂದರೆ “ತಾಯಿಯ ತಂದೆಯು ನೇಮಿಸಿದ ರಕ್ಷಕನನ್ನು ಬದಲಾಯಿಸಿ ಹೊಸ ರಕ್ಷಕನನ್ನು ತನ್ನ ಇಚ್ಚೆಗೆ ಅನುಸಾರವಾಗಿ ನೇಮಿಸುವುದು.ಅಪ್ರಾಪ್ತ ವಯಸ್ಕ ಮಗುವಿನ ತಾಯಿಯು ಜೀವಂತವಿದ್ದಾಗ ತಂದೆಯು ಆ ಮಗುವಿಗೆ ರಕ್ಷಕನನ್ನು ನೇಮಿಸುವುದನ್ನು ಈ ಕಾನೂನು ನಿಷೇಧಿಸುತ್ತದೆ.”

ಮಹಿಳೆ ದತ್ತು ಸ್ವೀಕಾರ ಹಕ್ಕು ಹಾಗೂ ವಿಚ್ಛೇದನದ ಸಂದರ್ಭದಲ್ಲಿ ನಿರ್ವಹಣಾ ಹಕ್ಕು Adoption and Maintenance Right (1956).ಈ ಕಾಯ್ದೆಯು ಹಲವು ಸಂಗತಿಗಳನ್ನು ಒಳಗೊಂಡಿದೆ. ಅವುಗಳೆಂದರೆ :

ಅ. ಕಾನೂನಿನ ಪ್ರಕಾರ ಗಂಡು ಮತ್ತು ಹೆಣ್ಣು ಮಗುವನ್ನು ಯಾವುದೇ ವ್ಯತ್ಯಾಸವಿಲ್ಲದೆ ದತ್ತು ಸ್ವೀಕರಿಸಬಹುದು. ಆದರೆ ಹಿಂದಿನ ಹಿಂದೂ ಕಾನೂನಿನಲ್ಲಿ ಹೆಣ್ಣುಮಗುವನ್ನು ದತ್ತು ಸ್ವೀಕರಿಸುವ ಅವಕಾಶವಿರಲಿಲ್ಲ.

ಆ. ಈ ಕಾನೂನಿನ ಪ್ರಕಾರ ಪ್ರತಿ ಜೀವಂತವಾಗಿದ್ದಾಗ ಪತ್ನಿ ತನ್ನ ಇಚ್ಛೆಗೆ ಅನುಸಾರವಾಗಿ ದತ್ತು ಸ್ವೀಕರಿಸಬಹುದು. ಆದರೆ ಹಿಂದಿನ ಕಾನೂನಿನಲ್ಲಿ ಮಹಿಳೆಗೆ ಈ ಅವಕಾಶವನ್ನು ನಿರಾಕರಿಸಲಾಗಿತ್ತು.

ಇ. ಹಿಂದಿನ ಹಿಂದೂ ಕಾನೂನಿನ ಪ್ರಕಾರ ಕನ್ಯ ಮತ್ತು ವಿಧವೆಗೆ ದತ್ತು ಸ್ವೀಕರಿಸುವ ಹಕ್ಕು ಇರಲಿಲ್ಲ. ಆದರೆ ಹಿಂದೂ ನೀತಿಸಂಹಿತೆ ಈ ಭಾಗದಲ್ಲಿ ಅವರಿಗೆ ದತ್ತು ಸ್ವೀಕರಿಸುವ ಹಕ್ಕನ್ನು ತೋರಿಸಿದೆ.

ಈ. ಹಿಂದೂ ಕಾನೂನಿನ ಪ್ರಕಾರ ಪತಿ ಮಕ್ಕಳನ್ನು ದತ್ತು ಪಡೆಯುವಾಗ ಪತ್ನಿಯ ಒಪ್ಪಿಗೆಯನ್ನು ಪಡೆಯುವ ಅಗತ್ಯವಿರಲಿಲ್ಲ. ಆದರೆ ಹಿಂದೂ ನೀತಿಸಂಹಿತೆಯ ಪ್ರಕಾರ ಈ ಎರಡು ಕ್ರಮಗಳನ್ನು ಪತಿ ಕೈಗೊಳ್ಳುವಾಗ ಪತ್ನಿಯ ಒಪ್ಪಿಗೆಯನ್ನು ಪಡೆಯಬೇಕು.

ಉ. ಸಂವಿಧಾನದ ಹನ್ನೊಂದನೇ ವಿಭಾಗದ ಪ್ರಕಾರ ತಂದೆ ತನಗಿಂತ ಕನಿಷ್ಠ 21 ವರ್ಷ ಸಣ್ಣ ಪ್ರಾಯದ ಮಗಳನ್ನು ಮಾತ್ರ ದತ್ತು ಸ್ವೀಕರಿಸಬಹುದು (ವಿಶೇಷ: ಬಾ.ಸಾ.ಅಂ.ಬ.ಭಾ: ಸಂ-14-1, 2: ಗಮನಿಸಿ).

ಒಟ್ಟಿನಲ್ಲಿ ಬಹುಪತ್ನಿತ್ವ ಬಾಲ್ಯವಿವಾಹ, ವಿಧವೆ ಇತ್ಯಾದಿ ಅಂಶಗಳು ಮಹಿಳಾ ಚಳುವಳಿಗಳು ಸ್ವಾತಂತ್ರ್ಯದಿಂದಲೇ ಕೈಗೆತ್ತಿಕೊಂಡಿದ್ದ ವಿಚಾರಗಳಾಗಿದ್ದರೂ ಅಂಬೇಡ್ಕರ್ ಅವಕ್ಕೊಂದು ಗಟ್ಟಿಯಾದ ನೆಲೆಯನ್ನು ಒದಗಿಸಲು ಪ್ರಯತ್ನಿಸಿದರು.ಮಹಿಳಾ ಚಳುವಳಿಗಳು ಮಹಿಳೆಯರ ಕೊರತೆಗಳನ್ನು ಗುರುತಿಸಿ ಅವುಗಳ ಪರಿಹಾರಕ್ಕೆ ಒತ್ತಾಯ ತರುತ್ತಿದ್ದಾಗ ಅಂಬೇಡ್ಕರ್ ಮಹಿಳೆಯರಿಗಿಂತ ಹೆಚ್ಚಿನದಾಗಿ ಪುರುಷನು ಅನುಭವಿಸುತ್ತಿರುವ ಸ್ವಾತಂತ್ರ್ಯ ಅವಕಾಶದ ಬಗ್ಗೆ ಗಮನ ಹರಿಸಿದರು.ಈ ಪೂರ್ವದ ಕಾನೂನು ಸ್ತ್ರೀಯರ ಪುನರ್‌ವಿವಾಹದ ಸಾಧ್ಯತೆಗಳನ್ನು ಕಾನೂನುಬದ್ಧಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಅಂಬೇಡ್ಕರ್ ಪುರುಷನ ಒಂದಕ್ಕಿಂತ ಹೆಚ್ಚಿನ ವಿವಾಹ, ಆಸ್ತಿಯ ಮೇಲಿನ ಏಕಸ್ವಾಮ್ಯ, ಸಂತಾನದ ಮೇಲಿನ ಏಕಸ್ವಾಮ್ಯ ಇತ್ಯಾದಿಗಳನ್ನು ನಿಯಂತ್ರಿಸುವುದು ಅಗತ್ಯವೆಂದು ಪ್ರಸ್ತುತಪಡಿಸಿದರು.ಈ ಸಮಾಜ ಲಿಂಗಭೇದವು ಸ್ತ್ರೀಗೆ ಹಾಕಿದ ನಿರ್ಬಂಧಗಳಿಂದಷ್ಟೆ ಅಲ್ಲದೇ ಪುರುಷನಿಗೆ ಒದಗಿಸಿದ ಸ್ಟೇಟ್ಸ್ ಕೂಡ ಉಲ್ಬಣಿಸಿರುವುದನ್ನು ಕಾನೂನಿನ ಮೂಲಕ ಸರಿಪಡಿಸಲು ಪ್ರಯತ್ನಿಸಿದರು.

ಅಂಬೇಡ್ಕರ್ ರೂಪಿಸಿದ ಕೋಡ್ ಬಿಲ್ ಕೇವಲ ಸುಧಾರಣೆ ಗುಣವನ್ನಷ್ಟೇ ಹೊಂದಿದ್ದಲ್ಲದೆ ಈ ಜಾತಿಪ್ರಧಾನ, ಪಿತೃಪ್ರಧಾನ ಸಮಾಜ ರಚನೆಯ ತಳಹದಿಯನ್ನು ಬುಡಮೇಲು ಮಾಡುವ ಅಂಶಗಳನ್ನು ಹೊಂದಿದ್ದರಿಂದ ಸಹಜವಾಗಿಯೇ ಅದರ ಬಗ್ಗೆ ಭಿನ್ನಾಭಿಪ್ರಾಯ ಉಂಟಾಯಿತು.ಬೇರೆಲ್ಲ ವಿಚಾರಗಳಲ್ಲಿ ಅತ್ಯಂತ ಪ್ರಗತಿಪರರೆಂದು ಗುರುತಿಸಿಕೊಂಡ ಅನೇಕ ಪುರುಷರು ಕೂಡ ಈ ಸಂದರ್ಭದಲ್ಲಿ ಅಂಬೇಡ್ಕರ್‌ ಅವರು ನೀಡಿದ ಸಮಾನ ಅವಕಾಶಗಳ ಕುರಿತು ಆಕ್ಷೇಪವೆತ್ತಿದರು ಮತ್ತೆ ಕೆಲವರು ಮೇಲ್ನೋಟಕ್ಕೆ ಸಮಾಧಾನದಿಂದ ಇದ್ದಂತೆ ಕಂಡುಬಂದರೂ ಒಳಗೆ ಅಸಮಾಧಾನದಿಂದ ಕುದಿಯುತ್ತಿದ್ದರು. ಸ್ವತಃ ಅಂದಿನ ರಾಷ್ಟ್ರಪತಿಗಳಾದ ಶ್ರೀ ರಾಜೇಂದ್ರಪ್ರಸಾದ್ ಅವರೇ ಇದಕ್ಕೆ ಅಸಮ್ಮತಿ ಸೂಚಿಸಿದರು ಎಂಬುದೇ ವಿಪರ್ಯಾಸ.

ಉಲ್ಲೇಖಗಳು

1. ಬಾ.ಸಾ.ಅಂ.ಬ.ಭಾ: 1999, ಸಂ.03, ಪು.51.
2. ಸಂ.ಮಾ.ಭರಣಿ, 1991, ಶತಮಾನದ ಅಂಬೇಡ್ಕರ್, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ತುಮಕೂರು, ಪು.241.
3. ಬಾ.ಸಾ.ಅಂ.ಬ.ಭಾ: 1994, ಸಂ.03, ಪು.622.
4. ಬಾ.ಸಾ.ಅಂ.ಬ.ಭಾ: 1994, ಸಂ.03, ಪು.51,53.
5. ಬಾ.ಸಾ.ಅಂ.ಬ.ಭಾ: 2004, ಸಂ.14: ಭಾಗ.1, ಪು.600,800
6. ಬಾ.ಸಾ.ಅಂ.ಬ.ಭಾ: 2004, ಸಂ.14: ಭಾಗ.2, ಪು.771,800.
7. ಬಾಬುರಾವ್ ಮುಡಬಿ, 2005, ಮಹಿಳಾ ಸಬಲೀಕರಣ ಅಂಬೇಡ್ಕರ್ ದೃಷ್ಟಿಕೋನ, ಲಕ್ಷ್ಮಿ ಪ್ರಕಾಶನ, ಬೆಂಗಳೂರು, ಪು. 146.
8. ಅರವಿಂದ ಮಾಲಗತ್ತಿ, 1999, ಡಾ.ಅಂಬೇಡ್ಕರ್ ವಿಚಾರಧಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು, ಪು. 143.
9. ಬಾಬುರಾವ್ ಮುಡಬಿ, 2005, ಮಹಿಳಾ ಸಬಲೀಕರಣ ಅಂಬೇಡ್ಕರ್ ದೃಷ್ಟಿಕೋನ, ಲಕ್ಷ್ಮಿ ಪ್ರಕಾಶನ, ಬೆಂಗಳೂರು, ಮ. 145.

(ಡಾ. ಯರ್ರಿಸ್ವಾಮಿಯವರ ಅಧ್ಯಯನದೊಂದಿಗೆ ಬಹು ಮುಖ್ಯವಾದ ಈ ಲೇಖನವನ್ನು ಮತ್ತೊಮ್ಮೆ ಬರೆದಿದ್ದೇನೆ.- ವಿ.ಎಸ್.ಬಾಬು ಅವರ ಫೇಸ್‌ಬುಕ್‌ ಬರಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ

Published

on

~ಗೋವರ್ಧನ ನವಿಲೇಹಾಳು

ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.

ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.

ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.

ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.

ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?

ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.

ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.

ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ

Published

on

~ಗೋವರ್ಧನ ನವಿಲೇಹಾಳು

ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ  ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.

ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು  ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ  ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ;  ಎಚ್ಚರಿಕೆಯೂ ಹೌದು.

ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಎಲೆಕ್ಟ್ರಾಲ್ ಬಾಂಡ್‌ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್‌ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.

ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.

ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್‌ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.

ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್‌ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್‌ಗಳಾಗಿ ಪರಿವರ್ತಿಸುತ್ತದೆ.

ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.

ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ

ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.

ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.

ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.

ಸುದ್ದಿದಿನ | ವಾಟ್ಸಾಪ್ | 9980346243

Continue Reading

ದಿನದ ಸುದ್ದಿ

ರಸ್ತೆ ವಿಸ್ತೀರ್ಣ ವಿರೋಧಿಸಿ ಎಸ್‌ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ

Published

on

ದಾವಣಗೆರೆ: ಎಸ್‌ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸುವುದರೊಂದಿಗೆ, ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಎಸ್‌ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಲ್ಲಿ ಸೇರಿದ ಎಸ್‌ಒಜಿ ಕಾಲೊನಿಯ ನಿವಾಸಿಗಳು ಇಲ್ಲಿಂದಲೇ ಮೆರವಣಿಗೆ ಹೊರಟು  ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.

ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್‌ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂದು ಎಸ್‌ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್‌ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

Continue Reading

Trending