ರಾಜಕೀಯ
ಇನ್ಮುಂದೆ ಎಲೆಕ್ಷನ್ ಗೆ ನಿಲ್ಲಲ್ಲ | ಸಿದ್ದರಾಮಯ್ಯ

ಸುದ್ದಿದಿನ ಡೆಸ್ಕ್ | ನಂಗೆ ವಯಸ್ಸು 70 ಆಯ್ತು. ಇನ್ಮುಂದೆ ಎಲೆಕ್ಷನ್ ಗೆ ನಿಲ್ಲೋಲ್ಲದಿಲ್ಲ. ಚುನಾವಣಾ ರಾಜಕೀಯದಿಂದ ದೂರ ಇರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. 2017ರ ಚುನಾವಣೆಯಲ್ಲಿ ಚುನಾವಣೆಗೆ ನಿಲ್ಲೋದಿಲ್ಲ ಎಂದಿದ್ದರು.ಮತ್ತೆ ಈಗ ಈ ರೀತಿ ಹೇಳಿದ್ದಾರೆ.
ನಂಗೆ ವರ್ಷ ಆಗ್ತಿದೆ ಓಡಾಡಲು ಸಾಧ್ಯವಿಲ್ಲ. ಹಾಗಾಗಿ ಚುನಾವಣೆಗೆ ನಿಲ್ಲೋದಿಲ್ಲ. ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿ ಕೊಳ್ಳುತ್ತೇನೆ. ಇನ್ನು ಕೆಲವೇ ತಿಂಗಳು ಲೋಕಸಭಾ ಎಲೆಕ್ಷನ್ ಬಾಕಿ ಇರುವಾಗ ಈ ರೀತಿ ಹೇಳಿರುವ ಅಚ್ಚರಿ ಮೂಡಿಸಿದೆ. ಮತ್ತೆ ಲೋಕಸಭಾ ಎಲೆಕ್ಷನ್ ಗೆ ಸ್ಪರ್ಧಿಸುವ ನಿರ್ಧಾರ ಏನಾದ್ರೂ ಮಾಡಿದ್ದಾರೆಯೇ ಎಂಬುದು ಮುಂದೆ ತಿಳಿಯಲಿದೆ ಎಂದು ಹೇಳಿದ್ದಾರೆ.
ದಿನದ ಸುದ್ದಿ
ಜಿಎಸ್ ಟಿ ಪರಿಹಾರದಲ್ಲಿ ರಾಜ್ಯಕ್ಕೆ ಅಂದಾಜು 27 ಸಾವಿರ ಕೋಟಿ ಖೋತಾ ಆಗಬಹುದು : ಸಿದ್ದರಾಮಯ್ಯ

ಸುದ್ದಿದಿನ,ಬೆಂಗಳೂರು : ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯುಪಿಎ ಸರ್ಕಾರದ ಹತ್ತು ವರ್ಷಗಳಲ್ಲಿ ಕರ್ನಾಟಕಕ್ಕೆ ನೀಡಿದ್ದ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ಯುಪಿಎಗಿಂತ ತಮ್ಮ ಸರ್ಕಾರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಿದೆ ಎಂದು ಒಂದಷ್ಟು ಸುಳ್ಳು ಅಂಕಿ-ಅಂಶಗಳನ್ನು ಮುಂದಿಟ್ಟು ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕಿಡಿಕಾರಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ವ್ಯಾಪಾರದಲ್ಲಿ ನುರಿತ ಗುಜರಾತಿಗಳು ಲೆಕ್ಕದಲ್ಲಿ ಪಕ್ಕಾ ಎನ್ನುವ ಅಭಿಪ್ರಾಯ ಇದೆ. ಆದರೆ ಆ ರಾಜ್ಯದವರಾದ ಪ್ರಧಾನಿ ಮತ್ತು ಗೃಹಸಚಿವರು ಬಾಯಿಬಿಟ್ಟರೆ ಸುಳ್ಳು ಲೆಕ್ಕಗಳೇ ಉದುರುತ್ತವೆ. ಗೃಹಸಚಿವ ಅಮಿತ್ ಶಾ ಅವರು ಮತ್ತೊಮ್ಮೆ ಸುಳ್ಳುಗಳ ಮೂಟೆ ಉರುಳಿಸಿಹೋಗಿದ್ದಾರೆ. ಈಗ ನಾನು ಹೇಳುವ ಲೆಕ್ಕವನ್ನು ಅವರು ಗಮನವಿಟ್ಟು ಕೇಳಬೇಕು ಮತ್ತು ತಾಳ್ಮೆಯಿಂದ ಉತ್ತರ ಕೊಡಬೇಕು.
ಮೊದಲನೆಯದಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ದುಡ್ಡು ಭಿಕ್ಷೆ ಅಲ್ಲ, ಅದು ನ್ಯಾಯಬದ್ದವಾಗಿ ನಮಗೆ ಸಿಗಬೇಕಾಗಿರುವ ಪಾಲು. ಕರ್ನಾಟಕ ಪ್ರತಿವರ್ಷ ಅಂದಾಜು 2,20,000 ಕೋಟಿ ರೂಪಾಯಿಯಷ್ಟು ತೆರಿಗೆ-ಸುಂಕ ಮೂಲಕ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಅದರಲ್ಲಿ ಹಣಕಾಸು ಆಯೋಗದ ಶಿಫಾರಸಿನ ಸೂತ್ರದಂತೆ ಆ ತೆರಿಗೆ ಹಣದಲ್ಲಿ ಶೇಕಡಾ 42ರಷ್ಟು ಹಣವನ್ನು ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಹಿಂದಿರುಗಿ ಕೊಡಬೇಕು. ಆದರೆ ಬಿಜೆಪಿ ಆಡಳಿತದ ಕಾಲದಲ್ಲಿ ನಮಗೆಂದೂ ಶೇಕಡಾ 42ರಷ್ಟು ಪಾಲು ಸಿಕ್ಕಿಲ್ಲ ಎಂದರು.
ಯುಪಿಎ ಆಡಳಿತದ ಕಾಲದಲ್ಲಿ (2010/11- 2013/14) ಹಣಕಾಸು ಆಯೋಗ ಕರ್ನಾಟಕಕ್ಕೆ ಕೇಂದ್ರ ತೆರಿಗೆಗಳ ಪಾಲು ನಿಗದಿಪಡಿಸಿದ್ದು ರೂ.45, 713 ಕೋಟಿ, ನಾವು ಪಡೆದದ್ದು ರೂ.47,036 ಕೋಟಿ. ಇದು ನಿಗದಿಪಡಿಸಿದ್ದಕ್ಕಿಂತ ರೂ.1.323 ಕೋಟಿ (ಶೇಕಡಾ 2.9ರಷ್ಟು) ಹೆಚ್ಚು. ಬಿಜೆಪಿ ಆಡಳಿತದ ಕಾಲದಲ್ಲಿ (2014-15 2019-20) 13 ಮತ್ತು 14ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನಿಗದಿಪಡಿಸಿದ್ದ ತೆರಿಗೆ ಪಾಲು ರೂ.2,03,039 ಕೋಟಿ, ಸಿಕ್ಕಿದ್ದು ಕೇವಲ ರೂ.1,65 963 ಕೋಟಿ ರೂಪಾಯಿ ಮಾತ್ರ, ಅಂದರೆ ರೂ.48,768 ಕೋಟಿ (ಶೇಕಡಾ 18.2ರಷ್ಟು) ಕಡಿಮೆ.
2019-20ರ ವರ್ಷಕ್ಕೆ ಕರ್ನಾಟಕಕ್ಕೆ ಹಣಕಾಸು ಆಯೋಗ ನಿಗದಿಪಡಿಸಿದ್ದ ತೆರಿಗೆ ಪಾಲು ರೂ.48, 768 ಕೋಟಿ, ನಮಗೆ ಸಿಕ್ಕಿರುವುದು ರೂ.30.919 ಕೋಟಿ ಮಾತ್ರ. ಇದರ ಜೊತೆಗೆ ಹತ್ತು ವರ್ಷಗಳ ಹಿಂದಿನ ಮತ್ತು ಈ ಹಣಕಾಸು ವರ್ಷದ ಕೇಂದ್ರ ಸರ್ಕಾರದ ಬಜೆಟ್ ಗಾತ್ರದಲ್ಲಿನ ಹೆಚ್ಚಳವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ರಾಜ್ಯ ಬಜೆಟ್ ಪ್ರಕಾರ 2020-21ನೇ ಹಣಕಾಸು ವರ್ಷದಲ್ಲಿ ನಿರೀಕ್ಷಿತ ತೆರಿಗೆ ಪಾಲು ರೂ.28,591 ಕೋಟಿ. ನನ್ನ ಪ್ರಕಾರ ಪ್ರಸಕ್ತ ವರ್ಷ ಮೊತ್ತ ರೂ.15,017 ಕೋಟಿಗೆ ಇಳಿದರೂ ಅಚ್ಚರಿ ಇಲ್ಲ. ಹೀಗಾದರೆ ಇದು 2019-20ರಲ ನಿರೀಕ್ಷೆಗಿಂತ ರೂ.33,751 ಕೋಟಿ ಇಲ್ಲವೇ ರಾಜ್ಯ ಬಜೆಟ್ ಅಂದಾಜಿಗಿಂತ ರೂ.24 789ರಷ್ಟು ಕಡಿಮೆ ಯಾಗುತ್ತದೆ.
ಜಿಎಸ್ ಟಿ ಪರಿಹಾರದಲ್ಲಿ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಜಿಎಸ್ ಟಿ ಪರಿಹಾರದಲ್ಲಿ ಅಂದಾಜು 25ರಿಂದ 27 ಸಾವಿರ ಕೋಟಿ ಖೋತಾ ಆಗಬಹುದು. ಕೇಂದ್ರ ಸರ್ಕಾರ ಇತ್ತೀಚೆಗೆ 18-19,000 ಕೋಟಿಯಷ್ಟೇ ಪರಿಹಾರ ನೀಡುವುದಾಗಿ ಹೇಳಿತ್ತು.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಲಿರುವ ಅನುದಾನ ರೂ.31,570 ಕೋಟಿಗಳಷ್ಟಾಗಬಹುದೆಂದು ನಿರೀಕ್ಷಿಸಲಾಗಿತ್ತು. ಈಗಿನ ಲೆಕ್ಕಾಚಾರದ ಪ್ರಕಾರ ಇದು ರೂ.17,372 ಕೋಟಿ ಗಳಷ್ಟಾಗಬಹುದು. ಇದರಿಂದ ರೂ.14,198 ಕೋಟಿ ಖೋತಾ ಆಗಲಿದೆ. ರಾಜ್ಯದ ಹಣಕಾಸು ಪರಿಸ್ಥಿತಿಗೆ ಇದು ಮಾರಕ ಹೊಡೆತ ಎಂದು
ಒಟ್ಟಾರೆಯಾಗಿ ಕರ್ನಾಟಕ ರಾಜ್ಯ ಕಳೆದ ವರ್ಷಕ್ಕಿಂತ ಸುಮಾರು 50,000 ಕೋಟಿಯಷ್ಟು ಕಡಿಮೆ ಅನುದಾನ ಪಡೆಯಬಹುದು ಇದನ್ನು ಆಧರಿಸಿ ಪ್ರಸಕ್ತ ಹಣಕಾಸು ವರ್ಷದ ಆದಾಯ ರೂ.1,80,217 ಕೋಟಿ ಗಳಾಗಬಹುದೆಂದು ರಾಜ್ಯ ಬಜೆಟ್ ನಲ್ಲಿ ನಿರೀಕ್ಷಿಸಲಾಗಿತ್ತು. ಕೇಂದ್ರ ಅನುದಾನದ ಕಡಿತದಿಂದಾಗಿ ಇದು ರೂ.1,14,758 ಕೋಟಿಗೆ ಇಳಿಯುವ ನಿರೀಕ್ಷೆ ಇದೆ.
ದಶಕಗಳಿಂದ ನಮ್ಮ ಒಟ್ಟು ಸಾಲ ಸುಮಾರು ರೂ.3.2ಲಕ್ಷ ಕೋಟಿಗಳೆಂದು ಅಂದಾಜು ಮಾಡಲಾಗಿದೆ. ಆದರೆ ಈಗಿನ ಒಂದೇ ವರ್ಷದಲ್ಲಿ ಸುಮಾರು ರೂ.90,000 ಕೋಟಿ ಸಾಲ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಬಿಜೆಪಿ ಸರ್ಕಾರ ಕರ್ನಾಟಕವನ್ನು ಶಾಶ್ವತ ಸಾಲಗಾರ ರಾಜ್ಯವನ್ನಾಗಿ ಮಾಡಲು ಹೊರಟಿದೆ.
ಕೇಂದ್ರದಿಂದ ಸಿಗಬೇಕಾಗಿರುವ ತೆರಿಗೆ ಪಾಲು ಮತ್ತು ಅನುದಾನದ ಖೋತಾದಿಂದಾಗಿ ಆರ್ಥಿಕ ನಷ್ಟಕ್ಕೀಡಾಗಿರುವ ಕರ್ನಾಟಕಕ್ಕೆ ವಿಶೇಷ ಅನುದಾನದ ರೂಪದಲ್ಲಿ ರೂ.5,495 ಕೋಟಿ ನೀಡಬೇಕೆಂದು ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಈ ಅನುದಾನದ ನೆರವಿಗೂ ಕರ್ನಾಟಕದಿಂದ ಆಯ್ಕೆಯಾಗಿ ಹೋಗಿರುವ ಈಗಿನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಡ್ಡಗಾಲು ಹಾಕಿದ್ದಾರೆ.
ಕಾಂಗ್ರೆಸ್ ಪಕ್ಷದ ವಿರುದ್ಧ ಈ ರೀತಿ ತಿರುಚಿದ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಆರೋಪಗಳನ್ನು ಮಾಡುವ ಮೊದಲು ಕೇಂದ್ರ ಹೋಮ್ ಮಿನಿಸ್ಟರ್ ಅಮಿತ್ ಶಾ ಅವರು ಮತ್ತೊಮ್ಮೆ ತಮ್ಮ ಹೋಂವರ್ಕ್ ಸರಿಯಾಗಿ ಮಾಡಿಕೊಂಡು ಬರಬೇಕೆಂದು ಅವರಿಗೆ ಸಲಹೆ ನೀಡುತ್ತೇನೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕೆಎಸ್ಆರ್ಟಿಸಿ ನೌಕರರು ಆತಂಕಕ್ಕೆ ಒಳಗಾಗುವುದು ಬೇಡ : ಸಾರಿಗೆ ಸಚಿವ ಲಕ್ಷ್ಮಣ ಸವದಿ ಭರವಸೆ

ಸುದ್ದಿದಿನ,ದಾವಣಗೆರೆ : ಕೊರೊನಾ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಸೊರಗಿದೆ ನಿಜ. ಒಟ್ಟಾರೆ 4 ಸಾವಿರ ಕೋಟಿ ಹಾನಿಗೊಳಗಾಗಿದೆ. ಹೀಗಂದ ಮಾತ್ರಕ್ಕೆ ನೌಕರರು ಆತಂಕಕ್ಕೆ ಒಳಗಾಗುವುದು ಬೇಡ. ನೌಕರರ ಬದುಕನ್ನು ಬೀದಿಗೆ ಬರಲು ನಾನು ಬಿಡುವುದಿಲ್ಲವೆಂದು ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸಂ.ಸವದಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗ, ದಾವಣಗೆರೆ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಕ.ರಾ.ರ.ಸಾ ನಿಗಮದ ಕೇಂದ್ರ ಬಸ್ ನಿಲ್ದಾಣ ದಾವಣಗೆರೆ ಇಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕ.ರಾ.ರ.ಸಾ ನಿಗಮದ ಬಸ್ ನಿಲ್ದಾಣದ ಪುನರ್ ನಿರ್ಮಾಣದ ಶಂಕುಸ್ಥಾಪನೆ ಹಾಗೂ ನೂತನ ತಾತ್ಕಾಲಿಕ ಬಸ್ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೆಎಸ್ಆರ್ಟಿಸಿ ನೌಕರರು ಇತ್ತೀಚೆಗೆ ನಡೆಸಿದ ಹೋರಾಟ ತಪ್ಪಲ್ಲ. ಆದರೆ ಸಮಯ, ಸಂದರ್ಭ ಗಮನದಲ್ಲಿಟ್ಟುಕೊಂಡು ಮಾಡಬೇಕಿತ್ತು. ಪ್ರತಿಭಟನೆಗೂ ಮುನ್ನ ನೋಟಿಸ್ ನೀಡಿ ಮಾಡಬೇಕು. ದಿಢೀರನೆ ಪ್ರತಿಭಟನೆಗೆ ನಿಲ್ಲುವುದು ಸರಿಯಲ್ಲ. ನೋಟಿಸ್ ನೀಡಿದ್ದರೆ ನಾನೇ ತಕ್ಷಣ ತಮ್ಮನ್ನು ಕರೆಸಿ ಸ್ಪಂದಿಸುತ್ತಿದ್ದೆ. ಕೊರೊನಾ ಹಿನ್ನೆಲೆಯಲ್ಲಿ ಸಹ ತಾವು ಕೇಳದಿದ್ದರೂ ನಾನು ಮುಖ್ಯಮಂತ್ರಿಗಳ ಮನವೊಲಿಸಿ ನಾಲ್ಕು ತಿಂಗಳ ವೇತನಕ್ಕೆ ವ್ಯವಸ್ಥೆ ಮಾಡಿದ್ದೆ. ತಾವು ತಮ್ಮ ಬೇಡಿಕೆಗಳಿಗೆ ಹೋರಾಟ ಮಾಡುವುದು ನಿಮ್ಮ ಹಕ್ಕಾದರೆ ನಾವು ಅದನ್ನು ಪೂರೈಸುವುದು ನಮ್ಮ ಕರ್ತವ್ಯ. ಆದರೆ ನಮ್ಮ ಚಾಲರು, ನಿರ್ವಾಹಕರೇ ತಮ್ಮ ಬಾಳಿಗೆ ಬೆಳಕಾದ ಬಸ್ಸಿಗೆ ಕಲ್ಲು ತೂರಿದ್ದು ಮನಸ್ಸಿಗೆ ಬೇಸರ ತಂದಿತು ಎಂದು ಖೇದ ವ್ಯಕ್ತಪಡಿಸಿದರು.
ಕಾಲ ಹೀಗೆಯೇ ಇರುವುದಿಲ್ಲ. ಅಭಿವೃದಿಯೆಡೆ ನಿಗಮ ಸಾಗಲಿದೆ. ಹಿಂದೆಲ್ಲ ಕೆಲವೇ ಕಂಪೆನಿಗಳ ವಾಹನಗಳು ನಮ್ಮಲ್ಲಿದ್ದವು. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಅಂತರಾಷ್ಟ್ರೀಯ ವಾಹನಗಳು ಬರಲಿವೆ. ಎಲೆಕ್ಟ್ರಾನಿಕ್ ಬಸ್ಗಳನ್ನು ನಿಗಮದ ಮೂಲಕ ಓಡಿಸಲು ಒಪ್ಪಂದ ಮಾಡಲಾಗಿದೆ. ನಮ್ಮದೇ ಚಾಲಕರು/ನಿರ್ವಾಹಕರು ಈ ಬಸ್ಗಳನ್ನು ನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಶೀಘ್ರದಲ್ಲಿ 4 ರಿಂದ 6 ಕಡೆ ತರಬೇತಿ ಕೇಂದ್ರಗಳನ್ನು ಆರಂಭಿಸಿ ತರಬೇತಿ ನೀಡಲಾಗುವುದು.
ವಾಯುಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ, ವಾಯುಮಾಲಿನ್ಯವನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಎಲೆಕ್ಟ್ರಾನಿಕ್ ಬಸ್ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. 1 ಬಸ್ ವೆಚ್ಚ ರೂ.2 ಕೋಟಿ ಇದ್ದು ಕೇಂದ್ರ ಸರ್ಕಾರ ರೂ.55 ಲಕ್ಷ ಸಬ್ಸಿಡಿ ನೀಡಲಿದೆ. ಸಬ್ಸಿಡಿಯಲ್ಲಿ ಖರೀದಿಸಿದ ಏಜೆನ್ಸಿ ಬಸ್ ಇಲಾಖೆಗೆ ನೀಡುವ ಒಪ್ಪಂದ ಮಾಡಿಕೊಳ್ಳಲಾಗುವುದು. ತರಬೇತಿ ಹೊಂದಿದ ನಮ್ಮ ಸಿಬ್ಬಂದಿಗಳು ಇದನ್ನು ನಿರ್ವಹಿಸುವರು ಎಂದರು.
ಉತ್ತಮ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ನೀಡುವಂತೆ, ಪ್ರತಿ ಲೀಟರ್ಗೆ ಹೆಚ್ಚು ಕಿ.ಮೀ ಓಡಿಸುವ ಚಾಲಕರಿಗೆ 11 ಗ್ರಾಂ ಬಂಗಾರದ ಪದಕ ನೀಡುವ ಯೋಜನೆ ಇದೆ. ಈ ನಿಟ್ಟಿನಲ್ಲಿ ಚಾಲಕರು ಉತ್ತಮ ಸೇವೆ ಸಲ್ಲಿಸಬೇಕು. ಸಿಬ್ಬಂದಿಗಳ 10 ಬೇಡಿಕೆಗಳ ಪೈಕಿ 9 ನ್ನು ಪೂರೈಸಲಾಗಿದೆ. ಯಾರೂ ಆತಂತಕ್ಕೆ ಈಡಾಗದೇ ಕರ್ತವ್ಯ ನಿರ್ವಹಿಸಬೇಕು ಎಂದರು.
ಇಲಾಖೆ ಹಾನಿ ಆಗಲು ಕಾರಣ ರಾಜಕೀಯ ಇಚ್ಚಾಶಕ್ತಿ ಕೊರತೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಆಗಬಹುದೆಂಬ ಆತಂಕ. ಡೀಸೆಲ್ ದರ, ಟೈರ್ ದರ, ಸಂಬಳ ಎಲ್ಲವೂ ಹೆಚ್ಚಾಗುತ್ತಿದೆ. ಆದರೆ ಆದಾಯ ಹೆಚ್ಚಿಸಲು ಆಗುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಆದಾಯವನ್ನು ಸರಿದೂಗಿಸುವ ಬಗ್ಗೆ ನನ್ನದೇ ಪರಿಕಲ್ಪನೆಯಿದ್ದು ಈ ಪ್ರಕಾರ 4 ನಿಗಮಗಳನ್ನು ಅಭಿವೃದ್ದಿಪಡಿಸಲಾಗುವುದು ಎಂದರು.
• ಜೀವನದಲ್ಲಿ ಮೂರು ಸಂಗತಿಗಳನ್ನು ಅರಿತು ಬಾಳಬೇಕು. ಹುಟ್ಟು ಸಾವು ಮತ್ತು ಅದರ ನಡುವಿನ ಬದುಕು. ಅಧಿಕಾರ, ಐಶ್ವರ್ಯ, ಆಯುಷ್ಯ ಯಾವುದೂ ಶಾಶ್ವತ ಅಲ್ಲ. ಆದರೆ ಜೀವನದ ಮೌಲ್ಯವನ್ನು ಅರಿತಾಗ ಮಾತ್ರ ನಾವು ಈ ನೆಲದ ಋಣ ತೀರಿಸಲು ಏನಾದರೂ ಉತ್ತಮ ಕಾರ್ಯಗಳನ್ನು ಮಾಡಲು ಸಾಧ್ಯ. ನಾವು ಮಾಡುವ ಉತ್ತಮ ಕಾರ್ಯಗಳು ಮಾತ್ರ ಶಾಶ್ವತವಾಗಿರುತ್ತವೆ. ಈ ನಿಟ್ಟಿನಲ್ಲಿ ತಮ್ಮ ಸೇವೆಯಲ್ಲಿ ಅಪಘಾತ ಮತ್ತು ಅಪರಾಧ ಮಾಡದೇ ಬೆಳ್ಳಿ ಪದಕ ಗೌರವಕ್ಕೆ ಭಾಜನರಾದ ಚಾಲಕರಂತೆ ಇತರರೂ ತಾವು ಉತ್ತಮ ಸೇವೆ ಸಲ್ಲಿಸಬೇಕೆಂಬ ಮನೋಭಾವ ಹೊಂದಬೇಕು.
• ಸಂಸದರಿಗೆ ಅಭಿನಂದನೆ : ಈ ಕಾರ್ಯಕ್ರಮ ಆಗುವುದಕ್ಕೆ ಕಾರಣಕರ್ತರು ಸಂಸದ ಜಿ.ಎಂ.ಸಿದ್ದೇಶ್ವರರವರು. ಮೈಸೂರಿಗೆ ಲಭಿಸಬೇಕಿದ್ದ ಸ್ಮಾರ್ಟ್ಸಿಟಿ ಯೋಜನೆಯನ್ನು ಕೇಂದ್ರದ ಮೇಲೆ ಒತ್ತಡ ತಂದು ದಾವಣಗೆರೆಗೆ ಲಭಿಸುವಂತೆ ಮಾಡಿದರು. ಇದೀಗ ಸ್ಮಾರ್ಟ್ಸಿಟಿಯಿಂದ ರೂ.90 ಕೋಟಿ ಮತ್ತು ಇಲಾಖೆಯಿಂದ 30 ಕೋಟಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣವಾಗುತ್ತಿರುವುದಕ್ಕೆ ನಾನು ಸಂಸದರನ್ನು ಅಭಿನಂದಿಸುತ್ತೇನೆ.
|ಲಕ್ಷ್ಮಣ ಸಂ.ಸವದಿ, ಸಾರಿಗೆ ಸಚಿವರು
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ ರವೀಂದ್ರನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರದಲ್ಲಿ ಹೈಟೆಕ್ ಬಸ್ನಿಲ್ದಾಣವಾಗುತ್ತಿರುವುದು ಸಂತಸದ ವಿಚಾರ. ಆದರೆ ಬಸ್ಸ್ಟ್ಯಾಂಡ್ ಕೆಡವಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದಂತೆ ಕ್ಷಿಪ್ರವಾಗಿ ಕೆಲಸ ಮುಗಿಸಬೇಕೆಂದರು.
ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಮಾತನಾಡಿ, ಒಟ್ಟು 9 ಎಕರೆ ಜಾಗದಲ್ಲಿ ಸ್ಮಾರ್ಟ್ಸಿಟಿಯ ರೂ.90 ಕೋಟಿ ಮತ್ತು ಸಾರಿಗೆ ಇಲಾಖೆಯ ರೂ.30 ಕೋಟಿ ಸೇರಿ ಒಟ್ಟು ರೂ.120 ಕೋಟಿ ವೆಚ್ಚದಲ್ಲಿ ನಿರ್ಮಿಸಲು ನೀಲಿನಕ್ಷೆ ತಯಾರಿಸಲಾಗಿದೆ. ನೆಲಮಹಡಿ ಸೇರಿ ಒಟ್ಟು ಆರು ಮಹಡಿಗಳಲ್ಲಿ ನಿಲ್ದಾಣದ ನಿರ್ಮಾಣ ಆಗಲಿದೆ.
ಬಸ್ ನಿಲ್ದಾಣದಲ್ಲಿ ಟಿಕೆಟ್ ಬುಕಿಂಗ್, ಮಹಿಳಾ ವಿಶ್ರಾಂತಿ ಕೊಠಡಿಗಳು, ಶೌಚಾಲಗಳು, ಭದ್ರತಾ ಕೊಠಡಿ, ಸೋಲಾರ್ ಸೌಲಭ್ಯ, ವಾಹನಗಳ ಪಾರ್ಕಿಂಗ್, ಎಲಿವೇಟರ್ಗಳು, ಎಸ್ಕಲೇಟರ್ಗಳು, ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಎಲೆಕ್ಟ್ರಾನಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಸೌಲಭ್ಯ ಸಹ ಮಾಡಲಾಗುವುದು ಎಂದರು.
ಬೆಳ್ಳಿ ಪದಕ ಪ್ರದಾನ :ದಾವಣಗೆರೆ ವಿಭಾಗದಲ್ಲಿ 2018 ಮತ್ತು 2019 ನೇ ಸಾಲಿನಲ್ಲಿ ಸತತವಾಗಿ 5 ವರ್ಷ ಅಪಘಾತ/ಅಪರಾಧರಹಿತವಾಗಿ ಹಾಗೂ ಪ್ರತಿ ವರ್ಷ ಕನಿಷ್ಟ 200 ದಿನ ಹಾಜರಾತಿ ಹೊಂದಿ ಸೇವೆ ಸಲ್ಲಿಸಿದ ಒಟ್ಟು 27 ಚಾಲಕರು ಮತ್ತು ಚಾಲಕ/ನಿರ್ವಾಹಕರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು.
ಮಾಯಕೊಂಡ ಕ್ಷೇತ್ರದ ಶಾಸಕರಾದ ಪ್ರೊ.ಲಿಂಗಣ್ಣ, ಜಿ.ಪಂ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ್, ಸಾರಿಗೆ ಮಂಡಳಿ ನಿರ್ದೇಶಕರುಗಳಾದ ರಾಜು, ಆರುಂಡಿ ನಾಗರಾಜ್, ರುದ್ರೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಎಎಸ್ಪಿ ರಾಜೀವ್ ಮುಖ್ಯ ಇಂಜಿನಿಯರ್ ಜಗದೀಶ್ ಚಂದ್ರ ಇತರೆ ಅಧಿಕಾರಿಗಳು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕಿಸಾನ್ ಸಮ್ಮಾನ್ನಡಿ 9 ಕೋಟಿ ರೈತರಿಗೆ 1.34 ಲಕ್ಷ ಕೋಟಿ ರೂ. ಸಹಾಯಧನ : ಅಮಿತ್ ಶಾ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ರೈತರಿಗೆ ಸಮರ್ಪಿತಗೊಂಡ ಸರ್ಕಾರ
ಸುದ್ದಿದಿನ,ಬಾಗಲಕೋಟೆ: ಹಿಂದಿನ ಸರ್ಕಾರಗಳು ಕೇವಲ 21 ಸಾವಿರ ಕೋಟಿ ರೂ. ನೀಡಲಾಗುತ್ತಿದ್ದ ಕೃಷಿ ಬಜೆಟ್ ಅನ್ನು ನಮ್ಮ ಸರ್ಕಾರ 2020 ರಲ್ಲಿ 1.34 ಲಕ್ಷ ಕೋಟಿ ರೂ. ಗಳಿಗೆ ಹೆಚ್ಚಿಸಿದ್ದಲ್ಲದೆ, ಕಿಸಾನ್ ಸಮ್ಮಾನ್ ಯೋಜನೆ ಮೂಲಕ 9 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 1.13 ಲಕ್ಷ ಕೋಟಿ ರೂ. ಗಳನ್ನು ಜಮಾ ಮಾಡುವ ಮೂಲಕ ರೈತರಿಗೆ ಪ್ರಥಮ ಆದ್ಯತೆ ನೀಡುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ರೈತರಿಗೆ ಸಮರ್ಪಿತಗೊಂಡಿರುವ ಸರ್ಕಾರವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಹ ಅವರು ಹೇಳಿದರು.
ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮ ಬಳಿಯ ಸಾಯಿಪ್ರಿಯ ಶುಗರ್ಸ್ ಲಿ. ಯೂನಿಟ್ ಆವರಣದಲ್ಲಿ ಎಂ.ಆರ್.ಎನ್. (ನಿರಾಣಿ) ಉದ್ಯಮ ಸಮೂಹ ಸಂಸ್ಥೆ ವತಿಯಿಂದ ಭಾನುವಾರದಂದು ಏರ್ಪಡಿಸಿದ ಸಮಾರಂಭದಲ್ಲಿ ನೂತನ ಕಾರ್ಖಾನೆ ಗಳ ಉದ್ಘಾಟನೆ, ನಿರಾಣಿ ಸಮೂಹ ದಿಂದ 75 ಸಾವಿರ ಟಿಸಿಡಿ ಕಬ್ಬು ನುರಿಸುವ, 260 ಮೆ.ವ್ಯಾ. ಸಹ ವಿದ್ಯುತ್, 26 ಲಕ್ಷ ಲೀ. ಇಥೆನಾಲ್ ಪ್ರತಿದಿನ ಬಯೋ ಸಿ.ಎನ್.ಜಿ. & ಸಿಒ2 ಉತ್ಪಾದನೆ ಗಳ ವಿಸ್ತರಣೆ ಯೋಜನೆಗಳಿಗೆ ಭೂಮಿಪೂಜೆ ಹಾಗೂ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವುದು ಮಾತ್ರವಲ್ಲ, ಇಡೀ ವಿಶ್ವದ ನೇತೃತ್ವ ವಹಿಸುವ ದಿಸೆಯತ್ತ ಸಾಗುತ್ತಿದ್ದಾರೆ. ಇದರಲ್ಲಿ ಕರ್ನಾಟಕ ರಾಜ್ಯದ ಕೊಡುಗೆ ಮಹತ್ವದ್ದಾಗಿದೆ. ದೇಶದಲ್ಲಿ ಜರುಗುತ್ತಿರುವ ಎಲ್ಲ ಹಂತಗಳ ಚುನಾವಣೆಗಳಲ್ಲಿ ದೇಶದ ಜನತೆ ನಮಗೆ ಬೆಂಬಲ ವ್ಯಕ್ತಪಡಿಸುತ್ತ ನಮ್ಮ ಸರ್ಕಾರವನ್ನು ಬಲಪಡಿಸುತ್ತಿದ್ದಾರೆ.
ದೇಶವನ್ನು ನಮ್ಮ ಸರ್ಕಾರ ಆತ್ಮನಿರ್ಭರಗೊಳಿಸುವತ್ತ ಸಾಗಿದೆ. ದೇಶದಲ್ಲಿ ಪೆಟ್ರೋಲ್ ಆಮದಿಗಾಗಿ ಸರ್ಕಾರದ ಬಹಳಷ್ಟು ಆದಾಯ ವಿದೇಶಿ ವಿನಿಮಯಕ್ಕೆ ಖರ್ಚಾಗುತ್ತಿದೆ. ಕಬ್ಬು ಬೆಳೆಯ ಸಹ ಉತ್ಪನ್ನವಾಗಿರುವ ಇಥೆನಾಲ್ ಇದೀಗ ದೇಶದ ಇಂಧನ ಕ್ಷೇತ್ರದಲ್ಲಿ ಪೆಟ್ರೋಲ್ಗೆ ಪರ್ಯಾಯ ಇಂಧನವಾಗಿ ಬಳಸಲಾಗುತ್ತಿದ್ದು, ದೇಶದ ಅಗತ್ಯತೆಯನ್ನು ಪೂರೈಸಲು ಸಹಕಾರಿಯಾಗಿದೆ ಎಂದರು.
ಇಥೆನಾಲ್ ಉತ್ಪಾದನೆ ಹಾಗೂ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ಉತ್ತೇಜನ ನೀಡುತ್ತಿದ್ದಾರೆ. ಸಕ್ಕರೆ ಉತ್ಪಾದನೆಯ ಜೊತೆ ಜೊತೆಗೆ ಇಥೆನಾಲ್ ಉತ್ಪಾದನೆಗೆ ಅವಕಾಶವಿದ್ದು, ಇದರಿಂದ ರೈತರಿಗೂ ಅನುಕೂಲವಾಗಲಿದೆ ಅಲ್ಲದೆ ಸಕ್ಕರೆ ಕಾರ್ಖಾನೆಗಳಿಗೂ ಲಾಭದಾಯಕವಾಗಲಿದೆ. ಇಥೆನಾಲ್ ಹೆಚ್ಚಿನ ಉತ್ಪಾದನೆ ಹಾಗೂ ಬಳಕೆಯಿಂದ ಇಂಧನ ಕ್ಷೇತ್ರದಲ್ಲಿ ವಿದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದ್ದು, ಆರ್ಥಿಕವಾಗಿಯೂ ದೇಶಕ್ಕೆ ವಿದೇಶಿ ವಿನಿಮಯದಲ್ಲಿ ಉಳಿಕೆಯಾಗಲಿದೆ.
ನಿರಾಣಿ ಸಮೂಹದ ಉದ್ಯಮವು ಇದೀಗ ತನ್ನ ಕಾರ್ಖಾನೆ ಘಟಕವನ್ನು ವಿಸ್ತರಿಸುತ್ತಿರುವುದರಿಂದ ಸುಮಾರು 10 ಸಾವಿರ ಉದ್ಯೋಗ ಸೃಷ್ಟಿಸಿದಂತಾಗಿದೆ. 2015 ರಲ್ಲಿ ಇಥೆನಾಲ್ ಉತ್ಪಾದನೆಗೆ ಸುಂಕ ಕಡಿತಗೊಳಿಸಲಾಗಿದೆ. ಇಥೆನಾಲ್ಗೆ ಶೇ. 18 ರಷ್ಟು ಇದ್ದ ಜಿಎಸ್ಟಿ ಯನ್ನು ಇದೀಗ ಶೇ. 5 ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರು.
ಪೆಟ್ರೋಲ್ ಹಾಗೂ ಡೀಸೆಲ್ ಬಳಕೆಯನ್ನು 2022 ರೊಳಗೆ ಶೇ. 10 ರಷ್ಟು ಹಾಗೂ 2025 ರ ವೇಳೆಗೆ ಶೇ. 25 ರಷ್ಟು ಕಡಿತಗೊಳಿಸಲಾಗುವುದು. ಇಂಧನಕ್ಕಾಗಿ ಗಲ್ಫ್ ರಾಷ್ಟ್ರಗಳಿಗೆ ನಮ್ಮ ದೇಶದಿಂದ ಹೆಚ್ಚಿನ ಹಣ ಬಳಕೆಯಾಗುತ್ತಿದ್ದು, ಇದೀಗ ಪ್ರಮಾಣ ಕಡಿತದಿಂದ ಉಳಿಯುವ ಹಣವನ್ನು ನಾವು ರೈತರ ಅಭಿವೃದ್ಧಿಗಾಗಿ ಬಳಸಿಕೊಳ್ಳಲು ಸಹಾಯಕವಾಗಿದೆ.
ಭಾರತೀಯ ಆಹಾರ ನಿಗಮದದಲ್ಲಿ ಲಭ್ಯವಾಗುವ ಮೆಕ್ಕೆಜೋಳ, ಅಕ್ಕಿ ಧಾನ್ಯವನ್ನು ಇಥೆನಾಲ್ ಉತ್ಪಾದನೆಗೆ ಬಳಸಿಕೊಳ್ಳಲು ನೀತಿಯೊಳಗೆ ಸೇರಿಸಿಕೊಳ್ಳಲಾಗಿದೆ. ಈ ನೂತನ ನೀತಿಯಿಂದಾಗಿ ರೈತರಿಗೂ ಅನುಕೂಲವಾಗಲಿದೆ. ರೈತರಿಗೆ ಆರ್ಥಿಕ ಲಾಭದ ಜೊತೆಗೆ ಉದ್ಯೋಗ ಸೃಷ್ಟಿಗೂ ಅನುಕೂಲವಾಗಲಿದೆ. ಇಥೆನಾಲ್ ಪರಿಸರ ಸ್ನೇಹಿಯಾಗಿದೆ.
ನಮ್ಮ ಸರ್ಕಾರ ಪ್ರಾಥಮಿಕ ಆದ್ಯತೆಯನ್ನು ರೈತರಿಗೆ ನೀಡುತ್ತಿದ್ದು, ಆದಾಯ ದ್ವಿಗುಣಗೊಳಿಸುವತ್ತ ಕ್ರಮ ಕೈಗೊಂಡಿದೆ. 2013-14 ರಲ್ಲಿ 21 ಸಾವಿರ ಕೋಟಿ ರೂ. ಇದ್ದ ಕೃಷಿ ಬಜೆಟ್ ಅನ್ನು ನಮ್ಮ ಸರ್ಕಾರ 2020 ರ ಬಜೆಟ್ನಲ್ಲಿ 1.34 ಲಕ್ಷ ಕೋಟಿ ರೂ. ಗಳನ್ನು ಕೃಷಿ ಕ್ಷೇತ್ರಕ್ಕಾಗಿ ಮೀಸಲಿಡುವ ಮೂಲಕ ರೈತ ಪರ ಸರ್ಕಾರ ಎಂಬುದನ್ನು ನಿರೂಪಿಸಿದೆ ಎಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನಮ್ಮ ಸರ್ಕಾರ ರೈತರ ಬ್ಯಾಂಕ್ ಖಾತೆಗೆ ಪ್ರತಿ ವರ್ಷ 6 ಸಾವಿರ ರೂ. ಗಳನ್ನು ಜಮಾ ಮಾಡುತ್ತಿದೆ. ಡಿಸೆಂಬರ್ ವರೆಗೆ ಸುಮಾರು 9 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗೆ 1.13 ಲಕ್ಷ ಕೋಟಿ ರೂ.ಗಳನ್ನು ಜಮಾ ಮಾಡಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 50 ಲಕ್ಷ ಹೆ. ಭೂಮಿಗೆ ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸಿದೆ.
ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ 5 ವರ್ಷ ಪೂರ್ಣಗೊಳಿಸಿದ್ದು, 90 ಸಾವಿರ ಕೋಟಿ ರೂ. ಈ ವಿಮೆ ಯೋಜನೆಯಡಿ ರೈತರಿಗೆ ಪಾವತಿಯಾಗಿದೆ. ಎಪಿಎಂಸಿ ಗಳಲ್ಲಿ ಆನ್ಲೈನ್ ವ್ಯವಹಾರ ಒದಗಿಸುವ ಮೂಲಕ ರೈತರಿಗೆ ಲಾಭದಾಯಕವಾಗುವಂತೆ ಮಾಡಲಾಗಿದೆ. ಹಿಂದಿನ ಸರ್ಕಾರ 6 ಲಕ್ಷ ಕೋಟಿ ರೂ. ರೈತರಿಗೆ ಸಾಲ ನೀಡುತ್ತಿತ್ತು. ನಮ್ಮ ಸರ್ಕಾರ 13.22 ಲಕ್ಷ ಕೋಟಿ ರೂ. ಗಳನ್ನು ರೈತರಿಗೆ ಸಾಲ ನೀಡುವ ಮೂಲಕ ನೆರವಾಗಿದೆ. 10 ಸಾವಿರಕ್ಕೂ ಹೆಚ್ಚು ರೈತ ಉತ್ಪಾದಕ ಸಂಘಗಳನ್ನು ಸ್ಥಾಪಿಸಲಾಗಿದ್ದು, 7 ಸಾವಿರ ಕೋಟಿ ರೂ. ಗಳನ್ನು ಸರ್ಕಾರ ಇದಕ್ಕಾಗಿ ನೀಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ 1.6 ಕೋಟಿ ರೈತರಿಗೆ ನೀಡಲಾಗಿದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರ ರೈತರ ಪರವಾಗಿದ್ದು, ರೈತ ಪರವಾದ ಕೇಂದ್ರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ರೈತರಿಗೆ ಸಮರ್ಪಿತವಾಗಿರುವ ಸರ್ಕಾರ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಕರ್ನಾಟಕ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ರೈತರು ಇದೀಗ ತಮ್ಮ ಬೆಳೆಯನ್ನು ಹೆಚ್ಚು ಲಾಭದಾಯಕವಾಗುವ ರೀತಿಯಲ್ಲಿ ಯಾವುದೇ ಅಡ್ಡಿಯಿಲ್ಲದೆ ಮಾರಾಟ ಮಾಡುವಂತಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣ ಮಾಡುವಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಹ ಅವರು ಹೇಳಿದರು.
ನೂತನ ಸಚಿವರು ಹಾಗೂ ಎಂ.ಆರ್.ಎನ್. (ನಿರಾಣಿ) ಉದ್ಯಮ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಮುರುಗೇಶ್ ನಿರಾಣಿಯವರು ಸ್ವಾಗತಿಸಿ, ನಮ್ಮದು ಕೃಷಿ ಪ್ರಧಾನ ದೇಶವಾಗಿದ್ದು, ನಮ್ಮ ಸಮೂಹ ಸಂಸ್ಥೆಗಳು ಕೃಷಿ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸುಮಾರು 75 ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡಿದೆ. ಇಥೆನಾಲ್ ಉತ್ಪಾದಿಸುವ ಮೂಲಕ ನಮ್ಮ ಸಂಸ್ಥೆ ಪ್ರಧಾನಮಂತ್ರಿಗಳು ಜಾರಿಗೊಳಿಸಿದ ಆತ್ಮನಿರ್ಭರ್ ಯೋಜನೆಯನ್ನು ಸಾಕಾರಗೊಳಿಸುವತ್ತ ಹೆಜ್ಜೆಯಿರಿಸಿದೆ ಎಂದರು.
ಉಪಮುಖ್ಯಮಂತ್ರಿಗಳು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ ಕಾರಜೋಳ, ನೂತನ ಸಚಿವರಾದ ಮುರುಗೇಶ್ ನಿರಾಣಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ,ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಸಚಿವರಾದ ಆರ್. ಶಂಕರ್, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ್, ವಿಜಯಪುರ ಸಂಸದ ಪರಮೇಶ ಜಿಗಜಿಣಗಿ.
ಕೊಪ್ಪಳ ಸಂಸದ ಸಂಗಣ್ಣ ಕರಡಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶಶಿಕಲಾ ಜೊಲ್ಲೆ, ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ್, ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಸಂಸದ ಸಂಜಯ್ ಪಾಟೀಲ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು, ಸಂಜೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ್ರು ನಾಗೇಶ್..!
-
ದಿನದ ಸುದ್ದಿ6 days ago
ಕೋವಿದ್ ಪ್ರಭಾವಳಿಯಲ್ಲಿ ಪ್ರಭುತ್ವದ ಕ್ರೌರ್ಯ
-
ಲೈಫ್ ಸ್ಟೈಲ್6 days ago
ಪಕ್ಷಿ ಪರಿಚಯ | ಬೆಳ್ಗಣ್ಣ
-
ದಿನದ ಸುದ್ದಿ7 days ago
“ನೀನು ಅಪ್ಪನಿಗೆ ಹುಟ್ಟಿದಿಯಾ ಅನ್ನೋದಕ್ಕೆ ಸಾಕ್ಷಿ ಏನು..?” : ಸಚಿವ ಈಶ್ವರಪ್ಪ
-
ದಿನದ ಸುದ್ದಿ7 days ago
ಸಚಿವ ಸಂಪುಟ ವಿಸ್ತರಣೆ : ಏಳು ಹೊಸ ಸಚಿವರ ಹೆಸರು ಫೈನಲ್ ಗೊಳಿಸಿದ ಯಡಿಯೂರಪ್ಪ
-
ಲೈಫ್ ಸ್ಟೈಲ್6 days ago
ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ ; ಮಿಸ್ ಮಾಡ್ದೆ ಓದಿ..!
-
ದಿನದ ಸುದ್ದಿ6 days ago
ದಲಿತರಿಗೆ ಪರ್ಯಾಯ ಸಂಸ್ಕೃತಿ ಇಲ್ಲವೆ..?
-
ದಿನದ ಸುದ್ದಿ3 days ago
ಕಿಸಾನ್ ಸಮ್ಮಾನ್ನಡಿ 9 ಕೋಟಿ ರೈತರಿಗೆ 1.34 ಲಕ್ಷ ಕೋಟಿ ರೂ. ಸಹಾಯಧನ : ಅಮಿತ್ ಶಾ