ದಿನದ ಸುದ್ದಿ
ಕಾರ್ಯಕ್ರಮಗಳಲ್ಲಿ ಹೆಚ್ಚು ಜನ ಸೇರಿದ್ರೆ ಎಫ್‍ಐಆರ್; ಕೊರೊನಾ ನಿಯಂತ್ರಣಕ್ಕೆ ಪರಿಣಾಮಕಾರಿ ತಂತ್ರಗಳ ಅನುಸರಣೆ : ಡಿಸಿ ಮಹಾತೇಶ ಬೀಳಗಿ
ಸುದ್ದಿದಿನ,ದಾವಣಗೆರೆ : ಕೊರೊನಾ ನಿಯಂತ್ರಣ ಹಿನ್ನೆಲೆ ಮದುವೆ, ಜಾತ್ರೆ, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಸೇರಿದಲ್ಲಿ ನಿಯಮಾನುಸಾರ ಎಫ್‍ಐಆರ್ ದಾಖಲಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೋವಿಡ್ ಲಸಿಕಾಕರಣ ಪ್ರಗತಿ ಮತ್ತು ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕೊರೊನಾ ಯುದ್ದ ಇನ್ನೂ ಮುಗಿದಿಲ್ಲ. ಜನರು ಮೈಮರೆತು, ಮದುವೆ, ಜಾತ್ರೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಸೇರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದ್ದು ಎಲ್ಲರೂ ಸಹಕರಿಸಬೇಕು ಎಂದರು.
ಜನರು ಪ್ರಸ್ತುತ ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಬದುಕುವ ರೀತಿ ನೋಡುತ್ತಿದ್ದರೆ ಎರಡನೇ ಅಲೆ ದೂರವಿಲ್ಲ ಎನ್ನಿಸುತ್ತಿದೆ. ಸರ್ಕಾರ ಕೂಡ ಈ ಹಿನ್ನೆಲೆಯಲ್ಲಿ ಮೊದಲಿನಂತೆ ಮದುವೆ, ಜಾತ್ರೆ, ಇತರೆ ಸಾರ್ವಜನಿಕರು ಸೇರುವ ಕಾರ್ಯಕ್ರಮಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಮತ್ತು ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಸೇರಿದರೆ ಕ್ರಮ ವಹಿಸುವುದಕ್ಕೆ ಸೂಚನೆ ನೀಡಿದೆ. ಈ ಸುತ್ತೋಲೆಯನ್ನು ಸಂಬಂಧಿಸಿದವರಿಗೆ ನೀಡಿ ಜಾರಿ ಮಾಡಲಾಗುತ್ತಿದ್ದು, ನಿಯಮ ಮೀರಿದರೆ ಪೊಲೀಸ್ ಇಲಾಖೆಯವರು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಕೊರೊನಾ ನಿಯಂತ್ರಣ ತಂತ್ರಗಳು
ಕೊರೊನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಮೊದಲನೆಯದಾಗಿ ಕೊರೊನಾ ಪರೀಕ್ಷೆ ಸಂಖ್ಯೆ ಮತ್ತು ಲಸಿಕಾಕರಣವನ್ನು ಹೆಚ್ಚಿಸಲು ಜನರಲ್ಲಿ ಅರಿವು ಮೂಡಿಸಲು ಐಇಸಿ ಸೇರಿದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನರ ನಡವಳಿಕೆ ಹೀಗೇ ಮುಂದುವರೆದರೆ ಕೊರೊನಾ ಎರಡನೇ ಅಲೆ ದೂರ ಇಲ್ಲ. ಆದ ಕಾರಣ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಮೈಮರೆಯದೇ ಕೋವಿಡ್ ನಿಯಂತ್ರಣದಲ್ಲಿ ಜಾಗರೂಕರಾಗಿ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಕೋವಿಡ್ ನಿಯಂತ್ರಣದಲ್ಲಿ ಮೊದಲನೆಯದಾಗಿ ಕೊರೊನಾ ಟೆಸ್ಟ್‍ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಜಿಲ್ಲೆಗೆ ಪ್ರತಿದಿನ 2800 ಟೆಸ್ಟ್ ಗುರಿ ನೀಡಲಾಗಿದ್ದರೂ ಅಷ್ಟು ಪ್ರಗತಿ ಇಲ್ಲ. ಆದ್ದರಿಂದ ಇನ್ನು ಮುಂದೆ ನೀಡಿರುವ ಗುರಿ ಜೊತೆಗೆ 100 ಹೆಚ್ಚುವರಿ ಟೆಸ್ಟ್ ಮಾಡಬೇಕು. ದಾವಣಗೆರೆ ತಾಲ್ಲೂಕಿಗೆ 1000, ಹೊನ್ನಾಳಿ ಮತ್ತು ಹರಿಹರ ತಲಾ 375, ಜಗಳೂರು 300 ಮತ್ತು ಚನ್ನಗಿರಿ 450 ಟೆಸ್ಟ್ ಜೊತೆಗೆ ಹೆಚ್ಚುವರಿ 100 ಟೆಸ್ಟ್ ಮಾಡಬೇಕು. ಹಾಗೂ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಟೆಸ್ಟ್ ಮಾಡಬೇಕು.
ಲಸಿಕಾಕರಣದಲ್ಲಿ ಜಿಲ್ಲೆಯಲ್ಲಿ ಪ್ರಗತಿ ಕಡಿಮೆ ಇದೆ. ಆರೋಗ್ಯ ಕಾರ್ಯಕರ್ತರು, ಫ್ರಂಟ್‍ಲೈನ್ ವರ್ಕರ್ಸ್ ಮತ್ತು 45 ರಿಂದ 59 ವರ್ಷದವರೆಗಿನ ಇತರೆ ಖಾಯಿಲೆಯಿಂದ ಬಳಲುತ್ತಿರುವ, 60 ವರ್ಷ ಮೇಲ್ಪಟ್ಟಿರುವವರು ಸೇರಿದಂತೆ ಒಟ್ಟಾರೆ ಕೋವಿಡ್ ಲಸಿಕಾಕರಣ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಆದ ಕಾರಣ ಜಿ.ಪಂ, ತಾ.ಪಂ,. ಗ್ರಾ ಪಂ ಅಧ್ಯಕ್ಷರು ಮತ್ತು ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ನಾಯಕತ್ವದಲ್ಲಿ ಲಸಿಕಾಕರಣಕ್ಕೆ ಉತ್ತೇಜನ ನೀಡಬೇಕು. ಶಾಸಕರು ಲಸಿಕೆ ಹಾಕಿಸಿಕೊಳ್ಳುತ್ತಿರುವ ಚಿತ್ರದ ಫ್ಲೆಕ್ಸ್ ಹಾಕಿಸಬೇಕು.
ಮೂರೂ ಹಂತದವರು ಕೇವಲ ಆಧಾರ್ ಕಾರ್ಡ್‍ನೊಂದಿಗೆ ಆಸ್ಪತ್ರೆಗಳಿಗೆ ಬಂದು ಸ್ಥಳದಲ್ಲೇ ನೋಂದಣಿ ಮಾಡಿಸಿಕೊಂಡು ಲಸಿಕೆ ಹಾಕಿಸಿಕೊಳ್ಳಬಹುದು. ಹಾಗೂ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂಬ ಬಗ್ಗೆ ಸ್ಥಳೀಯ ಆಡಳಿತ, ತಹಶೀಲ್ದಾರರು, ತಾಲ್ಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಜನರ ಮನವೊಲಿಸಬೇಕು ಎಂದರು.
ಪ್ರತಿ ದಿನ ನಿಗದಿತ ಸಂಖ್ಯೆಯ ಕೊರೊನಾ ಟೆಸ್ಟ್ ಆಗಬೇಕು ಮತ್ತು ಇದರ ಫಲಿತಾಂಶಗಳು ಸಕಾಲದಲ್ಲಿ ಪೋರ್ಟಲ್‍ನಲ್ಲಿ ಅಪ್‍ಡೇಟ್ ಮಾಡಬೇಕೆಂದು ಸರ್ವೇಕ್ಷಣಾ ಘಟಕಕ್ಕೆ ಈ ಮೂಲಕ ಎಚ್ಚರಿಕೆ ನೀಡುತ್ತಾ ಇದ್ದೇನೆ ಎಂದರು.
ಮೂರನೇ ಹಂತದ 45 ರಿಂದ 59 ವರ್ಷದವರೆಗಿನ ಇತರೆ ಖಾಯಿಲೆಯಿಂದ ಬಳಲುತ್ತಿರುವ, 60 ವರ್ಷ ಮೇಲ್ಪಟ್ಟಿರುವವರ ಲಸಿಕಾಕರಣವನ್ನು ಯಶಸ್ವಿಗೊಳಿಸಲು ತಾಲ್ಲೂಕುವಾರು ಡ್ರೈವ್ ಮಾಡಬೇಕು ಹಾಗೂ ಕೊರೊನಾ ಟೆಸ್ಟ್ ಮತ್ತು ಲಸಿಕಾಕರಣದ ಯಶಸ್ಸಿಗೆ ತಹಶೀಲ್ದಾರರ ನೇತೃತ್ವದ ತಂಡ ಐಇಸಿ, ಜಾಗೃತಿ ಕಾರ್ಯಕ್ರಮಗಳೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ತಹಶೀಲ್ದಾರರು ಪ್ರತಿ ದಿನ ಸಭೆ ನಡೆಸಿ ಪ್ರಗತಿ ಪರಿಶೀಲಿಸಬೇಕು. ಜೊತೆಗೆ ಜನಸಂದಣಿ ಆಗದಂತೆ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ತಹಶೀಲ್ದಾರರಿಗೆ ಡಿಸಿ ತಿಳಿಸಿದರು.
ಎಸ್‍ಪಿ ಹನುಮಂತರಾಯ ಮಾತನಾಡಿ, ತಹಶೀಲ್ದಾರರು ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು, ಮದುವೆ ಇತರೆ ಜನ ಸೇರುವ ಸಮಾರಂಭಗಳಿಗೆ ಸ್ಥಳೀಯ ಸಂಸ್ಥೆಗಳು ಅನುಮತಿ ನೀಡುವಾಗ ಕಟ್ಟುನಿಟ್ಟಾಗಿ ನಿಯಮಾವಳಿಯನ್ನು ಪಾಲಿಸಬೇಕು. ಕೋವಿಡ್ ನಿಯಮಾವಳಿ ಪಾಲನೆ ಬಗ್ಗೆ ಸಭೆ ಕರೆದು ನಡಾವಳಿ ಸಿದ್ದಪಡಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದರು. ಹಾಗೂ ಕೋವಿಡ್ ಲಸಿಕಾಕರಣಕ್ಕೆ ಸಂಬಂಧಿಸಿದಂತೆ ಆಗಲೀ ನಿಯಮಾವಳಿ ಪಾಲನೆ ಸೇರಿದಂತೆ ಕೋವಿಡ್ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸದಾ ಸಿದ್ದವಾಗಿದ್ದು ನೆರವು ಪಡೆಯುವಂತೆ ತಿಳಿಸಿದರು.
ಸಿಇಓ ಮಾತನಾಡಿ, ಲಸಿಕಾಕರಣ ಹಾಗೂ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಂಗನವಾಡಿ, ಆಶಾ, ಪಿಡಿಓ ಸೇರಿದಂತೆ ನೌಕರರಿಗೆ ಮೈಕ್ರೋ ಪ್ಲಾನ್ ಸಿದ್ದಪಡಿಸಿ ಅದರಂತೆ ಕಾರ್ಯಾಚರಣೆ ಮಾಡಬೇಕೆಂದರು.
ಐಎಲ್‍ಐ ಮತ್ತು ಎಸ್‍ಎಆರ್‍ಐ
ಜಿಲ್ಲಾಧಿಕಾರಿಗಳು ಐಎಲ್‍ಐ(ಇನ್‍ಫ್ಲ್ಯುಯೆಂಜ ಲೈಕ್ ಇಲ್‍ನೆಸ್) ಮತ್ತು ಎಸ್‍ಎಆರ್‍ಐ(ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಇನ್‍ಫೆಕ್ಷನ್ಸ್) ಪ್ರಕರಣಗಳಿಗೂ ಸಹ ಸ್ವಾಬ್ ಟೆಸ್ಟ್ ಮಾಡುತ್ತಿಲ್ಲ. ಶೀತ, ಕೆಮ್ಮು, ಮೈಕೈ ನೋವಿನಂತಹ ಪ್ರಕರಣಗಳಿಗೆ ಇನ್ನು ಮುಂದೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಬೇಕು.
ಪಿಹೆಚ್‍ಸಿ ಮತ್ತು ಸಿಹೆಚ್‍ಸಿ ಗಳಲ್ಲಿ ನಿಗದಿತ ಟೆಸ್ಟ್ ಗುರಿ ಸಾಧಿಸಬೇಕು. ಐಎಲ್‍ಐ ಲಕ್ಷಣಗಳಿರುವವರಿಗೆ ಮೊದಲು ಸ್ವಾಬ್ ಪರೀಕ್ಷೆ ಮಾಡಿ ನಂತರ ಚಿಕಿತ್ಸೆ ನೀಡಬೇಕು ಎಂದರು.
ಸರ್ಕಾರಿ ವೈದ್ಯರು ಮಾತನಾಡಿ, ಖಾಸಗಿ ಆಸ್ಪತ್ರೆಗಳಿಂದ ಐಎಲ್‍ಐ ಪ್ರಕರಣ ರೆಫರ್ ಆಗುತ್ತಿಲ್ಲವೆಂದಾಗ, ಡಿಸಿ ಪ್ರತಿಕ್ರಿಯಿಸಿ ಐಎಲ್‍ಐ ರೆಫರ್ ಮಾಡದೇ ಇರುವ ಖಾಸಗಿ ಕ್ಲಿನಿಕ್, ಆಸ್ಪತ್ರೆಗಳನ್ನು ಮುಚ್ಚಿಸುತ್ತೇನೆ. ಈ ಹಿಂದಿನಂತೆಯೇ ಐಎಲ್‍ಐ ಪ್ರಕರಣಗಳನ್ನು ಸರ್ಕಾರಿ ಆಸ್ಪತ್ರೆಗೆ ರೆಫರ್ ಮಾಡಬೇಕು.
ಈ ಎಚ್ಚರಿಕೆಯನ್ನೇ ನೋಟಿಸ್ ಎಂದು ತಿಳಿದು ಖಾಸಗಿ ಆಸ್ಪತ್ರೆಗಳು ಇಂದಿನಿಂದಲೇ ಐಎಲ್‍ಐ ಪ್ರಕರಣಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಬೇಕು, ಇಲ್ಲವಾದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಲು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಿಹೆಚ್‍ಸಿ, ಸಿಹೆಚ್‍ಸಿ, ಜನನಿಭಿಡ ಪ್ರದೇಶಗಳು, ಕಲ್ಯಾಣ ಮಂದಿರ, ಹೋಟೆಲ್‍ಗಳು, ಹಾಸ್ಟೆಲ್‍ಗಳು, ಶಾಲೆಗಳು, ಕೋಮಾರ್ಬಿಡಿಟಿ ಇರುವವರಿಗೆ ಕೋವಿಡ್ ಪರೀಕ್ಷೆ ನಡೆಸಬೇಕು. ಕಿಟ್ಸ್‍ಗಳ, ಕನ್ಸ್ಯೂಮಬಲ್ಸ್ ಮತ್ತು ಆಕ್ಸಿಜನ್ ಕೊರತೆ ಇಲ್ಲ. ಜಿಲ್ಲೆಯಲ್ಲಿ ಒಟ್ಟು 92 ವೆಂಟಿಲೇಟರ್, 38 ಹೈಫ್ಲೋ ಆಕ್ಸಿಜನ್, 770 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಇದೆ ಎಂದರು.
ಡಿಹೆಚ್‍ಓ ಡಾ.ನಾಗರಾಜ್ ಮಾತನಾಡಿ, ಆರೋಗ್ಯ ಇಲಾಖೆಯೊಂದಿಗೆ ಆರ್‍ಡಿಪಿಆರ್, ಕಂದಾಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಸಹಕಾರ ಹಿಂದಿನಂತೆ ಮುಂದುವರೆದರೆ ಯಶಸ್ಸು ಸಾಧ್ಯ ಎಂದರು.
ಗ್ರಾಮ ವಾಸ್ತವ್ಯ
ಡಿಸಿ, ಸಿಇಓ ಮತ್ತು ಎಸ್‍ಪಿ ಸೇರಿದಂತೆ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ಮೂರನೇ ಶನಿವಾರ ಮಾ.20 ರಂದು ಚನ್ನಗಿರಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಇದೆ.
|ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿಗಳು
ಸಭೆಯಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ತಹಶೀಲ್ದಾರರಾದ ಗಿರೀಶ್, ಡಾ.ನಾಗವೇಣಿ, ರಾಮಚಂದ್ರಪ್ಪ, ಬಸವನಗೌಡ, ಆರ್‍ಸಿಹೆಚ್‍ಓ ಡಾ.ಮೀನಾಕ್ಷಿ, ಡಿಎಸ್‍ಓ ಡಾ.ರಾಘವನ್, ಟಿಹೆಚ್‍ಓ ಡಾ.ವೆಂಕಟೇಶ್ ಸೇರಿದಂತೆ ಎಲ್ಲ ತಾಲ್ಲೂಕುಗಳ ತಾಲ್ಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ
ಸುದ್ದಿದಿನ,ದಾವಣಗೆರೆ:ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದ್ದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ,
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ನಂತರ 23ಕ್ಕೆ ಹೆಚ್ಚು ವಿದ್ಯಾರ್ಥಿನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ಆಡಳಿತ ವ್ಯವಸ್ಥೆ ಕೊನೆಯಾಗಬೇಕು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ *ಮಹಬೂಬ್ ಭಾಷಾ* ಆಗ್ರಹಿಸಿದ್ದಾರೆ ಸಂವಿಧಾನ ವಿರೋಧಿ ಆಡಳಿತಕ್ಕೆ ಕಡಿವಾಣ ಹಾಕಲು ದೇಶದ ಯುವಜನರು ಹಾಗೂ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು, ಸಂವಿಧಾನ ವಿರೋಧಿ ನಡೆ ಹಾಗೂ ಹೋರಾಟವನ್ನು ಹತ್ತಿಕ್ಕು ಹೊನ್ನಾರವಾಗಿದೆ.
ನೀಟ್ ಹಗರಣ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಕಾರ್ಪೊರೇಟರ್ ಶಿಕ್ಷಣ ನೀತಿಗಳ ಕಾರಣ, ಪರೀಕ್ಷೆಯ ಅಕ್ರಮ ವಿರುದ್ಧ ಹೋರಾಟ ಎರಡನೇ ಸ್ವತಂತ್ರ ಸಂಗ್ರಾಯದ ರೀತಿಯಲ್ಲಿ ದೇಶದಿಂದ ವ್ಯಾಪಿಸುತ್ತಿದ್ದು, ಆಳುವ ಸರ್ಕಾರ ರಾಷ್ಟ್ರದ ಭವಿಷ್ಯ ವಾಗಿರುವ ಯುವ ಸಮೂಹದ ಕನಸುಗಳನ್ನು ಹೊಸಕಿ ಹಾಕಬಾರದೆಂದು ಹೇಳಿದ್ದಾರೆ.
ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸುದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ
ಸುದ್ದಿದಿನ,ದಾವಣಗೆರೆ :ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಂತರ20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ
ರಾಜಿನಾಮೆ ನೀಡಬೇಕು. ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ಆಡಳಿತ ವ್ಯವಸ್ಥೆ ಕೊನೆಯಾಗಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೀತಿ ,ಸಂಶೋಧನೆ ಮತ್ತು ತರಬೇತಿ ವಿಭಾಗದ ರಾಜ್ಯ ಸಂಚಾಲಕರಾದ ವಿನಾಯಕ ಬಿ.ಎನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹ ಮಾಡಿದ್ದಾರೆ.
ಸಂವಿಧಾನ ವಿರೋಧಿ ಆಡಳಿತಕ್ಕೆ ಕಡಿವಾಣ ಹಾಕಲು ದೇಶದ
ಯುವಜನರು, ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು. ಸೊನಮ್ ವಾಂಗ್ಟಕ್ ಅವರನ್ನು ಏಕಾಏಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಸಂವಿಧಾನವಿರೋಧಿ ನಡೆ, ಹೋರಾಟ ಹತ್ತಿಕ್ಕುವ ಹುನ್ನಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀಟ್ ಹಗರಣ, ವಿದ್ಯಾರ್ಥಿಗಳ ಆತ್ಮ ಹತ್ಯೆಗೆ ಕಾರ್ಪೊರೇಟ್ ಶಿಕ್ಷಣ ನೀತಿಗಳು ಕಾರಣ. ನೀಟ್ ಪರೀಕ್ಷೆ ಅಕ್ರಮದ ವಿರುದ್ಧದ ಹೋರಾಟ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ರೀತಿಯಲ್ಲಿ ದೇಶದಾದ್ಯಂತ ವ್ಯಾಪಿಸುತ್ತಿದೆ. ಆಳುವ ಸರ್ಕಾರ ರಾಷ್ಟ್ರದ ಭವಿಷ್ಯವಾಗಿರುವ ಯುವ ಸಮೂಹದ ಕನಸುಗಳನ್ನು ಹೊಸಕಿ ಹಾಕಬಾರದು’.ಎಂದು ತಿಳಿಸಿದ್ದಾರೆ.
ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಂದನೆಗಳೊಂದಿಗೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
ಸುದ್ದಿದಿನ,ದಾವಣಗೆರೆ : ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಮಾಯಾಕೊಂಡ ಕ್ಷೇತ್ರವು ನಿಗದಿತ ಅವಧಿಗಿಂತ ಮೊದಲೇ ಗಣತಿ ನಮೂನೆಗಳ ಹಂಚಿಕೆಯನ್ನು ಪೂರ್ಣಗೊಳಿಸಿರುವುದರಿಂದ ಮತ್ತು ಶೇ. 92.31 ರಷ್ಟು ಡಿಜಿಟಲೀಕರಣ ಸಾಧನೆ ಮಾಡಲಾಗಿರುವುದರಿಂದ, ಪ್ರಗತಿಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು 108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅವರು ತಿಳಿಸಿದರು.
ಅವರು ಮಂಗಳವಾರ ದಾವಣಗೆರೆ ತಾಲ್ಲೂಕು ಕಚೇರಿಯಲ್ಲಿ ದಾವಣಗೆರೆ ಜಿಲ್ಲೆಯ 108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕುರಿತು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಒಟ್ಟು 1,97,048 ಮತದಾರರನ್ನು ಹೊಂದಿದ್ದು ಎಲ್ಲಾ 1,97,048 ಗಣತಿ ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ ಇದುವರೆಗೆ ಒಟ್ಟು 1,81,890 ಗಣತಿ ನಮೂನೆಗಳನ್ನು ಡಿಜಿಟಲೀಕರಿಸಲಾಗಿದ್ದು, ಶೇಕಡಾ 92.31 ರಷ್ಟು ಗುರಿಯನ್ನು ತಲುಪಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (SIR) ಪ್ರಕ್ರಿಯೆಯಲ್ಲಿ ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಗಣತಿ ನಮೂನೆಗಳ ಹಂಚಿಕೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯು ಬಿರುಸಿನಿಂದ ಸಾಗಿದ್ದು, ಇನ್ನು ಕೇವಲ 4,165 ಫಾರ್ಮ್‌ಗಳು (ಶೇಕಡಾ 2.11) ಮಾತ್ರ ಡಿಜಿಟಲೀಕರಣಕ್ಕೆ ಬಾಕಿ ಇವೆ ಕ್ಷೇತ್ರದಲ್ಲಿ ಯಾವುದೇ ಹಂಚಿಕೆಯಾಗದ ಫಾರ್ಮ್‌ಗಳು ಬಾಕಿ ಉಳಿದಿಲ್ಲ, ಬಾಕಿ ಉಳಿದಿರುವ ಗಣತಿ ನಮೂನೆಗಳ ಗಣಕೀಕರಣ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಮನೆ ಮನೆ ಭೇಟಿ ಸಂದರ್ಭದಲ್ಲಿ ಇಂದಿನವರೆಗೆ ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10,993 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪತಿ (ಡೂಪ್ಲಿಕೇಟ್) ಸೇರಿದಂತೆ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 193 ನಮೂನೆಗಳು ಸಂಗ್ರಹವಾಗದೆ ಉಳಿದಿದ್ದು, 5059 ಶಾಶ್ವತ ವಲಸೆ, 3951 ಮರಣ ಪ್ರಕರಣ, 1760 ದ್ವಿಪ್ರತಿ ನಮೂನೆಗಳು ಹಾಗೂ 30 ಇತರೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ರಾಜೇಶ್ ಕುಮಾರ್ ಸಿ ಅವರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


