ಲೈಫ್ ಸ್ಟೈಲ್
ಜನೌಷಧ ! ಜನರಿಕ್ ಔಷಧ ?! ಏನು ಎತ್ತ..?

ಈಗಷ್ಟೇ ಜನೌಷಧಿ ಸಾಪ್ತಾಹ ಮುಗಿದಿದೆ. ದೇಶದ ಮೂಲೆಗಳಲ್ಲೂ ಸಹ ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ಬೆಲೆಗೆ ದೊರಕುವ ಜನರಿಕ್ ಔಷಧಿಗಳನ್ನು ಮಾರಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಜನರಿಕ್ ಔಷಧಗಳನ್ನು ಮಾರುವ ಜನೌಷಧಿ ಕೇಂದ್ರಗಳನ್ನು ಹೆಚ್ಚು ಹೆಚ್ಚಾಗಿ ಸ್ಥಾಪಿಸಲು ಸರ್ಕಾರವು ಪ್ರೋತ್ಸಾಹಿಸುತ್ತಿದೆ. ಹಾಗಿದ್ದರೆ ಈ “ಜನರಿಕ್” ಔಷಧಿಗಳೆಂದರೇನು? ಜನೌಷಧಿಗಳೆಂದರೇನು? ಅವುಗಳ ಬೆಲೆ ಏಕೆ ಕಡಿಮೆ? ಅವುಗಳು ಕಾರ್ಯಕ್ಷಮತೆ ಹೇಗಿರುತ್ತದೆ? ಅವುಗಳಿಗೆ ಲೈಸೆನ್ಸ್ ನೀಡುವವರು ಯಾರು? ಇವುಗಳ ನಿಯಂತ್ರಣ ಹೇಗೆ? ಇತ್ಯಾದಿ ಹಲವು ಪ್ರಶ್ನೆಗಳಿಗೆ ಉತ್ತರ ಬೇಕಲ್ಲವೇ? ಪ್ರಯತ್ನಿಸೋಣ.
- ಡಾ.ಎನ್.ಬಿ.ಶ್ರೀಧರ, ಶಿವಮೊಗ್ಗ
“ಜನರಿಕ್ ಔಷಧವಂತೆ!!. ಕೆಲಸ ಮಾಡ್ತದೋ ಏನೋ? ಅಲ್ರಿ.. ಅಷ್ಟು ಕಡಿಮೆ ಬೆಲೆಗೆ ಹ್ಯಾಗ್ ಮಾರ್ತಾರೆ? ಅದ್ರಲ್ಲಿ ಔಷಧಿನೇ ಕಡಿಮೆ ಇರಬಹುದು ಅಲ್ವೆ?. ಇದು ಒಂದಿಷ್ಟು ಜನರ ಅಭಿಪ್ರಾಯ.
“ಜನರಿಕ್ ಔಷಧಿ ಕೆಲಸ ಮಾಡಲ್ವಂತೆ. ಅದಕ್ಕೆ ಬ್ರಾಂಡೆಡ್ ಔಷಧಿ ತರ್ಸಿ ಕೊಂಡಿದ್ದೇನೆ. ದುಡ್ಡು ಜಾಸ್ತಿ ಆದರೂ ಪರ್ವಾಗಿಲ್ಲ. ಒಟ್ನಲ್ಲಿ ಚೆನ್ನಾಗಿ ಕೆಲಸ ಮಾಡಬೇಕು. ಇದು ಕೆಲವರ ಅಭಿಪ್ರಾಯ.
ಇತ್ತೀಚೆಗಂತೂ ದುಬಾರಿ ಔಷಧಗಳು ಉತ್ತಮವಾಗಿ ಕೆಲಸ ಮಾಡುತ್ತವೆಂಬ “ಪ್ಲಾಸೆಬೋ” ಪರಿಣಾಮ ಜನರ ತಲೆ ಹೊಕ್ಕುಬಿಟ್ಟಿದೆ. ಅದಕ್ಕೆ “ಡಾಕ್ಟ್ರೇ.. ಔಷಧಿ ದುಬಾರಿಯಾದರೂ ಪರವಾಗಿಲ್ಲ. ರೋಗ ಬೇಗ ಗುಣವಾಗಬೇಕು. ದುಬಾರಿ ಔಷಧಿ ಬರೆದುಕೊಡಿ” ಎನ್ನುವವರ ಸಂಖ್ಯೆಗೇನೂ ಕಡಿಮೆ ಇಲ್ಲ.
ಜನೌಷಧಿ ಕೇಂದ್ರಗಳನ್ನು ಹೆಚ್ಚು ಹೆಚ್ಚಾಗಿ ಸ್ಥಾಪಿಸಲು ಸರ್ಕಾರಗಳೇ ಪ್ರೋತ್ಸಾಹಿಸುತ್ತಿದ್ದಾವೆ. ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ಬೆಲೆಗೆ ದೊರಕುವ ಜನರಿಕ್ ಔಷಧಿಗಳನ್ನು ಮಾರುತ್ತಾರೆ. ಹಾಗಿದ್ದರೆ ಈ ಜನರಿಕ್ ಔಷಧಿಗಳೆಂದರೇನು? ಜನೌಷಧಿಗಳೆಂದರೇನು? ಅವುಗಳ ಬೆಲೆ ಏಕೆ ಕಡಿಮೆ? ಅವುಗಳು ಕಾರ್ಯಕ್ಷಮತೆ ಹೇಗಿರುತ್ತದೆ? ಅವುಗಳಿಗೆ ಲೈಸೆನ್ಸ್ ನೀಡುವವರು ಯಾರು? ಇತ್ಯಾದಿ ಹಲವು ಪ್ರಶ್ನೆಗಳಿಗೆ ಉತ್ತರ ಬೇಕಲ್ಲವೇ? ಪ್ರಯತ್ನಿಸೋಣ…
ಸರಳವಾಗಿ ಉದಾಹರಣೆ ನೀಡಬೇಕೆಂದರೆ “ಕ್ರೋಸಿನ್” ಇದು ತಲೆನೋವಿಗೆ ಉಪಯೋಗಿಸುವ ಔಷಧದ ಬ್ರಾಂಡೆಡ್ ಹೆಸರು. ಇದು ಜಿ.ಎಸ್.ಕೆ ಕಂಪನಿಯ ಬ್ರಾಂಡೆಡ್ ಉತ್ಪನ್ನವಾದರೆ “ಪ್ಯಾರಸೆಟಮಾಲ್” ಇದು ಕ್ರೋಸಿನ್ನಲ್ಲಿರುವ “ಜನರಿಕ್” ಔಷಧಿಯ ಹೆಸರು. ಜನರಿಕ್ ಔಷಧಿಯಾದ “ಪ್ಯಾರಾಸೆಟಮಾಲ್” ಅನ್ನು ಅನೇಕ ಕಂಪನಿಗಳು ಅನೇಕ ಬ್ರಾಂಡೆಡ್ ಹೆಸರಿನಲ್ಲಿಯೂ ತಯಾರಿಸುತ್ತವೆ. ಜನರಿಕ್ ಪ್ಯಾರಸೆಟಮಾಲ್ 15 ಗುಳಿಗೆಗೆ ರೂ: 5 ಇದ್ದರೆ ಕ್ರೋಸಿನ್ 15 ಗುಳಿಗೆಗಳಿಗೆ ರೂ: 30.24 ಇರುತ್ತದೆ. ಅಂದರೆ ಬೆಲೆಯು ಬ್ರಾಂಡೆಡ್ ಔಷಧಿಗೆ ಕನೀಷ್ಟ 6 ಪಟ್ಟು ಜಾಸ್ತಿ !!. ಎರಡರ ಪರಿಣಾಮವೂ ಒಂದೇ. ಇದು ಅನೇಕ ಜನರಿಗೆ ಗೊತ್ತಿರುವುದಿಲ್ಲ.
ಇದನ್ನೂ ಓದಿ | ‘ಮೈತ್ರಿ ಸೇತು’ ಸೇತುವೆಯ ವೈಶಿಷ್ಟ್ಯತೆ..!
ಸಾಮಾನ್ಯವಾಗಿ ಒಂದು ಔಷಧ ಕಂಪನಿ ‘ಹೊಸ ಔಷಧ’ ಕಂಡುಹಿಡಿಯಿತೆಂದರೆ ಇಂತಿಷ್ಟು ವರ್ಷಗಳ ಕಾಲ ಅದರ ಸ್ವಾಮ್ಯತೆ ಅಥವಾ ಹಕ್ಕು ಹೊಂದಿರುತ್ತದೆ. ಅಂದರೆ ಈ ಪೇಟಂಟ್ ಅವಧಿಯಲ್ಲಿ ಬೇರೆ ಯಾವ ಔಷಧ ಕಂಪನಿಗಳೂ ಸಹ ಈ ಹೊಸ ಔಷಧವನ್ನು ಬಳಸಿ ಹೊಸ ಕಂಪನಿ ಹೆಸರಿನೊಂದಿಗೆ ಮಾರುವಂತಿಲ್ಲ. ಪೇಟಂಟ್ ಅವಧಿ ಮುಗಿದ ನಂತರ ಯಾವ ಕಂಪನಿ ಬೇಕಾದರೂ ಈ ಔಷಧವನ್ನು ಸಿದ್ದಪಡಿಸಿ ಹೊಸ ಬ್ರಾಂಡ್ ಹೆಸರಿನಿಂದ ಮಾರುಕಟ್ಟೆಯಲ್ಲಿ ಮುಕ್ತವಾಗಿ ಮಾರಬಹುದು.
ಇದಕ್ಕೆ ಮೂಲ ಕಂಪನಿ/ ಪೇಟಂಟ್ ಪಡೆದಿದ್ದ ಕಂಪನಿಯ ಪರವಾನಗಿ ಬೇಕಾಗಿರುವುದಿಲ್ಲ. ರಾಸಾಯನಿಕ ಹೆಸರು, ಜನರಿಕ್ ಹೆಸರು (ಮೂಲ ಹೆಸರು) ಮತ್ತು ಬ್ರಾಂಡೆಡ್ ಹೆಸರು / ಟ್ರೇಡ್ ನೇಮ್/ ಪ್ರೊಪ್ರೈಟರಿ ಹೆಸರುಗಳಿಂದ ಒಂದು ಔಷಧವನ್ನು ಗುರುತಿಸಬಹುದು. ಇವುಗಳಲ್ಲಿ ಔಷಧದ ರಾಸಾಯನಿಕ ಹೆಸರು ಮತ್ತು ಜನರಿಕ್ ಹೆಸರುಗಳು ಎಂದಿಗೂ ಬದಲಾಗುವುದಿಲ್ಲ. ರಾಸಾಯನಿಕ ಹೆಸರುಗಳನ್ನು ಓದುವುದು ಮತ್ತು ನೆನಪಿಟ್ಟುಕೊಳ್ಳುವುದು ಸಾಮಾನ್ಯವಾಗಿ ಕಷ್ಟ ಸಾದ್ಯ, ಆದರೆ ಜನರಿಕ್ ಹೆಸರುಗಳನ್ನು ಸುಲಭವಾಗಿ ಓದಬಹುದು ಮತ್ತು ನೆನಪಿಟ್ಟುಕೊಳ್ಳಬಹುದು.
ಬ್ರಾಂಡೆಡ್ ಔಷಧಗಳಿಗೆ ಪರ್ಯಾಯವಾಗಿ ಬಳಸುವ ಉದ್ದೇಶದಿಂದ ಸ್ವಾಮ್ಯತೆ ಅಥವಾ ಪೇಟಂಟ್ ಅವಧಿಯ ನಂತರ ಮಾರುಕಟ್ಟೆಯಲ್ಲಿ ಔಷಧದ ಮೂಲ ಹೆಸರಿನಲ್ಲಿ ಲಭ್ಯವಿರುವ ಔಷಧಗಳಿಗೆ “ಜನರಿಕ್ ಔಷಧ” ಗಳು ಎನ್ನುತ್ತಾರೆ.ಸಾರ್ವಜನಿಕರಿಗೆ ಇರುವಂತೆ ಬಹುತೇಕ ಜನರಿಗೆ ಜನರಿಕ್ ಔಷಧಿಗಳ ಬಗ್ಗೆ ಈ ಕೆಳಗಿನ ಸಂಶಯಗಳಿವೆ.
ಜನರಿಕ್ ಔಷಧಗಳು ಏಕೆ ಅಗ್ಗ?
- ಬ್ರಾಂಡೆಡ್ ಔಷಧಿಗಳಿಗೆ ಲೈಸನ್ಸ್ ಕೊಡುವಾಗ ಅನುಸರಿವಷ್ಟು ಕಠಿಣ ಕ್ರಮವನ್ನು ಜನರಿಕ್ ಔಷಧಿಗಳಿಗೆ ಅನುಮತಿ ನೀಡುವಾಗ ಅನುಸರಿಸುವುದಿಲ್ಲ.
- ಜನರಿಕ್ ಔಷಧಿಗಳು ಬ್ರಾಂಡೆಡ್ ಔಷಧಗಳಷ್ಟು ಕಾರ್ಯಕ್ಷಮತೆ ಹೊಂದಿಲ್ಲ.
- ಜನರಿಕ್ ಔಷಧಗಳು ಬ್ರಾಂಡೆಡ್ ಔಷಧಗಳಂತೆ ಉತ್ತಮವಾಗಿ ಉತ್ಪಾದನಾ ಗುಣಮಟ್ಟ ಹೊಂದಿಲ್ಲ.
- ಜನರಿಕ್ ಔಷಧಗಳ ಗುಣಮತ್ತ, ಪರಿಣಾಮ, ಅಡ್ಡ ಪರಿಣಾಮ ಇವುಗಳನ್ನು ತಪಾಸಣೆ ಮಾಡಲು ಉತ್ತಮ ಸಂಸ್ಥೆಗಳಿಲ್ಲ.
- ಇವುಗಳ ಬೆಲೆ ಕಡಿಮೆ. ಕಾರಣ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿರಬಹುದು.
- ಜನರಿಕ್ ಔಷಧಿಗಳಿಗೆ ಅಡ್ಡ ಪರಿಣಾಮಗಳಾದರೆ ತಯಾರಿಕರು ಹೊಣೆಗಾರಿಕೆ ವಹಿಸಿಕೊಳ್ಳುವುದಿಲ್ಲ.
ಈ ಪ್ರಶ್ನೆಗಳಿಗೆಲ್ಲ ಕೆಳಗೆ ಉತ್ತರವಿದೆ.
ಜನರಿಕ್ ಔಷಧಗಳೇಕೆ ಬ್ರಾಂಡೆಡ್ ಔಷಧಗಳಿಗಿಂತ ಅಗ್ಗ?
ಮಾರುಕಟ್ಟೆಗೆ ಹೊಸ ಔಷಧಿ ಲಗ್ಗೆ ಇಡುವ ಮುನ್ನ ಅಮೇರಿಕಾ ಸರ್ಕಾರದ ಅಧೀನದ ಸಂಸ್ಥೆಯಾದ ಆಹಾರ ಮತ್ತು ಔಷಧ ಪರವಾನಗಿ ಪ್ರಾಧಿಕಾರದ (ಎಫ್‌ಡಿಎ) ಕಠಿಣ ಕಣ್ಗಾವಲಿನಲ್ಲಿ ಪುನರಾವಲೋಕನಗೊಂಡಿರುತ್ತದೆ. ಕಂಪನಿಗಳು ಹೊಸ ಔಷಧಗಳನ್ನು ಕಂಡುಹಿಡಿಯುವಲ್ಲಿ ಸಾಕಷ್ಟು ಸಮಯ (ಸುಮಾರು 6-12 ವರ್ಷಗಳು) ಮತ್ತು ಸುಮಾರು 200 ಬಿಲಿಯನ್ ಹಣವನ್ನು ವ್ಯಯಿಸಿರುತ್ತವೆ.
ಎಫ್‌ಡಿಎಯು ಈ ಕಂಪಗಳಿಗೆ ತಾವು ತೊಡಗಿಸಿದ ಹಣವನ್ನು ಹಿಂಪಡೆಯಲು ನೆರವಾಗುವಂತೆ ಪೇಟಂಟ್ ಅವಧಿಯನ್ನು ನೀಡಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಸಾಧಿಸಲು ನೆರವಾಗುತ್ತದೆ, ಹಾಗಾಗಿ ಬ್ರಾಂಡೆಡ್ ಔಷಧಗಳು ತುಸು ತುಟ್ಟಿ. ಆದರೆ ಜನರಿಕ್ ಔಷಧಗಳು ಹಾಗಲ್ಲ, ಪೇಟಂಟ್ ಅವಧಿಯ ನಂತರವೇ ಜನರಿಕ್ ಔಷಧಿಗಳನ್ನು ಸಿದ್ದಪಡಿಸಲು ಎಫ್‌ಡಿಎಯು ಪರವಾನಗಿ ನೀಡುವುದರಿಂದ , ಮತ್ತೊಮ್ಮೆ ಪ್ರಾಣಿಗಳ ಮತ್ತು ಮಾನವನ ಮೇಲೆ ಪ್ರಯೋಗ ಮಾಡಿ ಇದರ ಸುರಕ್ಷತೆ ಮತ್ತು ಪರಿಣಾಮದ ಬಗ್ಗೆ ಪರೀಕ್ಷಿಸುವ ಅವಶ್ಯಕತೆ ಇರುವುದಿಲ್ಲ.
ಹಾಗಾಗಿ ಜನರಿಕ್ ಔಷಧಿಗಳು ಅಗ್ಗ. ಬಹು ಮುಖ್ಯವಾಗಿ ಯಾವುದೇ ಕಂಪನಿ ತಯಾರಿಸಿದರೂ ಔಷಧದ ಮೂಲ ಹೆಸರಿನಲ್ಲೆ (ಜನರಿಕ್ ಹೆಸರಿನಲ್ಲಿ) ಮಾರಾಟ ಮಾಡಬೇಕಾಗಿರುವುದರಿಂದ ಮಾರುಕಟ್ಟೆಯಲ್ಲಿ ಕಂಪನಿ ದರ ಪೈಪೋಟಿಗೆ ಇಳಿದುಬಿಡುತ್ತದೆ. ಈ ಕಾರಣಗಳಿಂದ ಜನರಿಕ್ ಔಷಧಗಳು ಬ್ರಾಂಡೆಡ್ ಔಷಧಗಳಿಗಿಂತ ಕೆಲವೊಮ್ಮೆ ಶೇ: 70-85 ರಷ್ಟು ಕಡಿಮೆ ದರದಲ್ಲಿ ಲಭ್ಯವಾಗುತ್ತವೆ.
ಜನರಿಕ್ ಔಷಧಗಳು ಹೇಗೆ ಅನುಮೋದನೆ ಪಡೆಯುತ್ತವೆ?
ಯಾವುದೇ ಕಂಪನಿ ಹೊಸದಾಗಿ ಜನರಿಕ್ ಔಷಧಗಳನ್ನು ಸಿದ್ದಪಡಿಸಿ ಮಾರುಕಟ್ಟೆಗೆ ತರುವ ಮುನ್ನ ಹೊಸ ಅರ್ಜಿಯನ್ನು ಎಫ್‌ಡಿಎಗೆ ಸಲ್ಲಿಸಿರುತ್ತದೆ. ಆಗ ಎಪ್‌ಡಿಎ ವಿವಿಧ ಮೂಲಬೂತ ಪರೀಕ್ಷೆಗಳನ್ನು ನಡೆಸಿದ ನಂತರವೇ ಅನುಮೋದನೆ ನೀಡುತ್ತದೆ.
ಔಷಧದ ಅಡ್ಡಪರಿಣಾಮ ಮತ್ತು ಸುರಕ್ಷತೆಯ ತಪಾಸಣೆ ನಡೆಯುತ್ತದೆಯೇ?
ಹೌದು. ಜನರಿಕ್ ಅಥವಾ ಬೇರೆ ಯಾವುದೇ ಔಷಧ ಇರಲಿ, ಅವು ಎಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆಯೋ ಅಲ್ಲಿಯವರೆಗೆ ಎಪ್‌ಡಿಎಯ ಕಣ್ಗಾವಲಿನಲ್ಲಿರುತ್ತವೆ. ಔಷಧಗಳು ಸಿದ್ದವಾಗಿ ಬಳಕೆದಾರರಿಗೆ ಲಭ್ಯವಾಗುವ ತನಕದ ಎಲ್ಲಾ ಹಂತದಲ್ಲೂ ಎಪ್‌ಡಿಎಯು ಕಾಲಕಾಲಕ್ಕೆ ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಔಷಧಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಧೃಢಪಡಿಸುತ್ತದೆ. ಚಿಕಿತ್ಸಾ ವೈಫಲ್ಯ ಅಥವಾ ವೈಪರಿತ್ಯಗಳು ಕಂಡುಬಂದಲ್ಲಿ , ಸಾರ್ವಜನಿಕರಿಗೆ ಹಾಗೂ ಆರೋಗ್ಯ ಕ್ಷೇತ್ರ ವೃತ್ತಿಪರರಿಗೆ ಸೂಚನೆ/ ಸಲಹೆ/ ಶಿಫಾರಸ್ಸುಗಳನ್ನು ನೀಡುವ ಹೊಣೆಗಾರಿಕೆಯನ್ನು ಎಪ್‌ಡಿಎ ಹೊಂದಿದೆ.
ಭಾರತದಲ್ಲಿ ಜನರಿಕ್ ಔಷಧಗಳ ಪರಿಸ್ಥಿತಿ ಏನು?
ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಜಗತ್ತಿನ 30% ಜನರಿಗೆ ಅವಶ್ಯಕ ಔಷಧಗಳು ಕೈಗೆಟುಕುತ್ತಿಲ್ಲ. ಇದರ ಪ್ರಮಾಣ ಆಫ್ರಿಕಾ ಮತ್ತು ಏಷಿಯಾದಲ್ಲಿ 50%. ಭಾರತದಲ್ಲಿ ಒಟ್ಟು ಉತ್ಪನ್ನದ ಶೇ 1.2 ರಷ್ಟನ್ನು ಭಾರತೀಯರು ತಮ್ಮ ಆರೋಗ್ಯದ ಮೇಲೆ ಖರ್ಚು ಮಾಡುತ್ತಾರೆ. ವಾರ್ಷಿಕ ವೈದ್ಯಕೀಯ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಜನರಿಕ್ ಔಷಧಗಳನ್ನು ಭಾರತದಲ್ಲಿ ಪರಿಚಯಿಸಲಾಗಿದೆ.
ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ
ಪ್ರಯೋಗಾಲಯಗಳಿಗಾಗಿ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಎಬಿಎಲ್) ಸರ್ಕಾರಿ ಮತ್ತು ಖಾಸಗಿ ತಯಾರಕರಿಂದ ಆಯ್ದ ಬ್ಯಾಚಿನ ಔಷಧಗಳನ್ನು ತಂದು ವಿವಿಧ ಪರೀಕ್ಷೆಗೆ ಒಳಪಡಿಸುವ ಮೂಲಕ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಧೃಢಪಡಿಸಿಕೊಳ್ಳುತ್ತದೆ.
ಕೇಂದ್ರ ಸರ್ಕಾರದಿಂದ ಸಹಾಯಧನ ಪಡೆದ ಸರ್ಕಾರೇತರ ಅಥವಾ ಲಾಭ ನಿರಪೇಕ್ಷಿತ ಸಂಘಟನೆಗಳೇ ಸಾಮಾನ್ಯವಾಗಿ ಭಾರತದಲ್ಲಿ ಜನರಿಕ್ ಔಷಧ ತಯಾರಕರು. ಜನರಿಕ್ ಔಷಧಗಳಲ್ಲಿ ದರ ವ್ಯತ್ಯಾಸಗಳಿದ್ದರೂ ಅವುಗಳ ಪರಿಣಾಮಕಾರಿತ್ವವನ್ನು ಹೋಲಿಕೆ ಮಾಡಬಹುದು.
ಜನರಿಕ್ ಮತ್ತು ಬ್ರಾಂಡೆಡ್ ಔಷಧಗಳ ಪರಿಣಾಮಕಾರಿತ್ವದಲ್ಲಿ ವ್ಯತ್ಯಾಸವಿಲ್ಲ ಎಂಬುದು ಸಾಬೀತಾಗಿದ್ದರೂ ಸಹ ಅನೇಕ ಆರೋಗ್ಯ ಸಂಭಂಧಿ ವೃತ್ತಿಪರರು, ಹೆಸರಾಂತ ಕಂಪನಿಗಳ ಔಷಧಗಳನ್ನೇ ಬರೆದುಕೊಡುತ್ತಾರೆ. ಆದರೆ ಅವರಿಗೆ ಕಡಿಮೆ ಹೆಸರಿರುವ ಕಂಪನಿಗಳು ಜನರಿಕ ಔಷಧಗಳನ್ನು ತಯಾರಿಸುತ್ತವೆ ಎಂಬುದೇ ತಿಳಿದಿರುವುದಿಲ್ಲ!
ಔಷಧ ತಯಾರಿಕೆಯಲ್ಲಿ ಬಳಸುವ ಉಪವಸ್ತುಗಳಿಂದ ಅಲ್ಪ ಸ್ವಲ್ಪ ಗುಣಮಟ್ಟದಲ್ಲಿ ವ್ಯತ್ಯಾಸವಾಗಬಹುದೇ ಹೊರತು ಮೂಲ ಔಷಧಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎನ್ನುತ್ತಾರೆ ಸಂಶೋಧಕರು. ಕೆಲವು ಔಷಧಿಗಳ ಗುಣಮಟ್ಟ ಸ್ವಲ್ಪ ಕಡಿಮೆ ಎಂಬ ಅಪವಾದ ಬಿಟ್ಟರೆ ಬಹುತೇಕ ಜನರಿಕ್ ಔಷಧಿಗಳು ಬ್ರಾಂಡೆಡ್ ಔಷಧಿಗಳಿಗಿಂತ ಗುಣ ಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿರುವುದಿಲ್ಲ ಎಂಬುದು ಅಂಬೋಣ.
ಜಾನುವಾರುಗಳಲ್ಲಿಯೂ ಜನರಿಕ್ ಔಷಧಿ ಇದೆಯೇ?
ಇದೆ. ಜನರಿಕ್ ಔಷಧಿಗಳು ಜಾನುವಾರು ಚಿಕಿತ್ಸೆಯಲ್ಲೂ ಇವೆ. ಆದರೆ ಭಾರತದಲ್ಲಿ ಇನ್ನೂ ಇದರ ಜನೌಷಧಿ ಕೇಂದ್ರಗಳು ಇಲ್ಲ. ಈ ಔಷಧಿಗಳಿಗೆ ಅಷ್ಟು ಪರಿಣಾಮ ಹೊಂದಿಲ್ಲ ಎಂಬ ಭಾವನೆಯಿಂದ ಇವುಗಳನ್ನು ಬರೆದುಕೊಡುವುದಿಲ್ಲ ಎನ್ನುತ್ತದೆ ಸಮೀಕ್ಷೆ. ಆದರೆ ಜಾನುವಾರುಗಳ ಜನರಿಕ್ ಔಷಧಿಗಳಿಗೂ ಸಹ ಅಮೇರಿಕದಲ್ಲಿ ಎಫ್ ಡಿ ಎ ಅತ್ಯಂತ ಕಠಿಣ ತಪಾಸಣೆಗಳ ನಂತರವೇ ರಹದಾರಿ ನೀಡುತ್ತದೆ.ಭಾರತದಲ್ಲಿಯೂ ಸಹ ಪಶು ಜನೌಷಧಿ ಕೇಂದ್ರಗಳು ಬಂದರೆ ಜಾನುವಾರುಗಳ ಔಷಧಿ ಕಡಿಮೆ ದರದಲ್ಲಿ ದೊರಕಬಹುದು.
ಜನೌಷಧಿ ಕೇಂದ್ರಗಳೆಂದರೇನು?
ಭಾರತ ಸರ್ಕಾರವು ಜನರಿಕ್ ಔಷಧಿಗಳು ಜನಸಾಮಾನ್ಯರಿಗೆ ಕಡಿಮೆ ಬೆಲೆಗೆ ದೊರೆಯುವಂತೆ ಮಾಡಿದ ವ್ಯವಸ್ಥೆಯೇ ಜನೌಷಧಿ ಕೇಂದ್ರಗಳು. ಇಲ್ಲಿ ದೊರೆಯುವ ಜನರಿಕ್ ಔಷಧಿಗಳು ಬ್ರಾಂಡೆಡ್ ಔಷಧಿಗಳಷ್ಟೇ ಪರಿಣಾಮಕಾರಿಯಾಗಿರಬೇಕು. ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ಭಾರತ ಸರ್ಕಾರದ ಔಷಧ ಇಲಾಖೆಯ ಸುಪರ್ಧಿಯಲ್ಲಿ ನಿಯಂತ್ರಣದಲ್ಲಿವೆ. ಬ್ಯೂರೋ ಆಫ್ ಫಾರ್ಮಾ ಪಬ್ಲಿಕ್ ಸೆಕ್ಟರ್ ಅಂಡರ್ಟೇಕಿಂಗ್ಸ್ ಆಫ್ ಇಂಡಿಯಾ ಇದು ಜನೌಷಧಿಗಳ, ತಯಾರಿಕೆ, ಸಾಗಣೆ ಮತ್ತು ಗುಣಮಟ್ಟದ ಹೊಣೆ ಹೊತ್ತಿದೆ.
1. ಪ್ರತಿ ಔಷಧಿ ಬ್ಯಾಚಿನ ಔಷಧಿಗಳ ಗುಣಮಟ್ಟವು ಎನ್.ಎ.ಬಿ.ಎಲ್ ಪ್ರಯೋಗಶಾಲೆಗಳಿಂದ ದೃಢಪಟ್ಟಿರಬೇಕು.
2. ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳು ದೃಢೀಕರಿಸಲ್ಪಟ್ಟ ಸಂಸ್ಥೆಗಳಿಂದ ಮಾತ್ರ ಔಷಧ ಖರೀದಿಸಬೇಕು.
ಈ ವರೆಗೆ ಸುಮಾರು 4700 ಕ್ಕಿಂತ ಜಾಸ್ತಿ ಜನೌಷಧ ಕೇಂದ್ರಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈ ವರ್ಷದ ಆಯವ್ಯಯದಲ್ಲಿ ಇನ್ನೂ ಜಾಸ್ತಿ ಕೇಂದ್ರಗಳನ್ನು ತೆರೆಯಲು ಭಾರತ ಸರ್ಕಾರ ಉದ್ದೇಶಿಸಿದೆ.
ಯಾರು ಜನೌಷಧಿ ಕೇಂದ್ರಗಳನ್ನು ತೆರೆಯಬಹುದು?
ಸರ್ಕಾರದಿಂದ ಮಾನ್ಯತೆ ಪಡೆದ ಜನಕಲ್ಯಾಣ ಕಾರ್ಯಕ್ರಮದಲ್ಲಿ ಕನೀಷ್ಟ 3 ವರ್ಷ ಅನುಭವವಿರುವ, ಸರ್ಕಾರೇತರ ಸಂಸ್ಥೆಗಳು, ಸಹಕಾರಿ ಸಂಘಗಳು ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ ಉಚಿತವಾಗಿ ನೀಡಲ್ಪಡುವ ಸ್ಥಳದಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಬಹುದು.
ಅಲ್ಲದೇ ಫಾರ್ಮಾ ಪದವೀದರರು ಸೇರಿದಂತೆ ಯಾವುದೇ ನಿರುದ್ಯೋಗಿ ಪದವೀಧರರು ಅವಶ್ಯಕ ಸ್ಥಳ, ಕನೀಷ್ಟ ಬಂಡವಾಳ, ಶೀತಲಿಕರಣ ಯಂತ್ರ, ಗೋದಾಮು, ಔಷಧಿ ಅಂಗಡಿ ತೆರೆಯಲು ಮೂಲಭೂತ ಸೌಲಭ್ಯ ಮತ್ತಿತರ ರಹದಾರಿ ಹೊಂದಿದ್ದರೆ ಜನೌಷಧಿ ಕೇಂದ್ರಗಳನ್ನು ತೆರೆಯಬಹುದು. ಪ್ರತಿ ಔಷಧಿಯ ಮೇಲೆ ಶೇ: 20 ರಷ್ಟು ಲಾಭ ಇದ್ದೇ ಇದೆ. ಸರ್ಕಾರದಿಂದ ರೂ:1.5 ಲಕ್ಷದ ವರೆಗೆ ಸಹಾಯವೂ ಸಹ ದೊರೆಯುವುದು.
ಹೊಸ ಔಷಧಿಗಳು ಮಾರುಕಟ್ಟೆಗೆ ಬಂದಾಗ ಅವುಗಳ ಕಂಪನಿಯವರು ಹಾಕಿದ ಬಂಡವಾಳ ಮತ್ತು ಲಾಭವನ್ನು ಹಿಂದಿರುಗಿ ಪಡೆಯಲು ಜಾಸ್ತಿ ದುಬಾರಿ ಬೆಲೆಗೆ ಮಾರುವುದು ಸಹಜ. ಅವುಗಳನ್ನು ಖರೀದಿಸುವುದು ಅನಿವಾರ್ಯ ಸಹ. ಆದರೆ ಪೇಟೆಂಟ್ ಅವಧಿ ಮುಗಿದು ಔಷಧಿಯು “ಜನರಿಕ್” ರೂಪದಲ್ಲಿ ದೊರೆಯತೊಡಗಿದಾಗ ಅವುಗಳನ್ನೇ ಖರೀದಿಸುವುದು ಒಳ್ಳೆಯದಲ್ಲವೇ?
ಜನರಿಕ್ ಔಷಧಗಳು ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಲೆಂದೇ ಬಂದವುಗಳು. ವ್ಯವಸ್ಥೆಯಲ್ಲಿ ಸಣ್ಣ ಪುಟ್ಟ ದೋಷಗಳಿರಬಹುದು.ಕೆಲವೊಮ್ಮೆ ಕಳಪೆ ಔಷಧಿಯೂ ಸಹ ಪತ್ತೆಯಾಗಿರಬಹುದು. ಇದು ವ್ಯಾಪಾರಿ ವೃತ್ತಿಯ ಎಲ್ಲ ರಂಗಗಳಲ್ಲಿದೆ. ಹೀಗಂದ ಮಾತ್ರಕ್ಕೆ ಅವುಗಳನ್ನೆಲ್ಲಾ ಸಂಶಯ ದೃಷ್ಟಿಯಿಂದ ನೋಡುವುದು ಒಳಿತಲ್ಲ. ರಾಷ್ಟ್ರೀಯ ವೈದ್ಯಕೀಯ ಆಯೋಗ (ಹಿಂದಿನ ಭಾರತೀಯ ಭಾರತೀಯ ವೈದ್ಯಕೀಯ ಮಂಡಳಿ) ಸಹ ಜನರಿಕ್ ಔಷಧಿಗಳನ್ನೇ ಬರದು ಕೊಡಬೇಕು ಎಂಬ ನಿಯಮ ಮಾಡಿದೆ.ಇದೇ ನಿಯಮವನ್ನು ಭಾರತೀಯ ಪಶುವೈದ್ಯಕೀಯ ಪರಿಷತ್ತು ಸಹ ಕಾಲಕ್ರಮೇಣ ಅನುಕರಿಸಬಹುದು.
ಬಹುತೇಕ ಜನ ಸಾಮಾನ್ಯರು ಸರ್ವೇ ಸಾಮಾನ್ಯವಾಗಿ ಬಳಸಿಲು ಪ್ರಾರಂಭಿಸಿದ ಮೇಲೆ ಮಾತ್ರ ಜನರಿಕ್ ಔಷಧಿಗಳಿಗೆ ಒಂದು ಉತ್ತಮ ಕಾಲ ಬಂದು ಸರ್ಕಾರದ ಆಶಯ ಈಡೇರಬಹುದು.
-(ಡಾ:ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನಡೆಸ್ಕ್:ಜಾತಿಗಣತಿ ಮರು ಸಮೀಕ್ಷೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.
ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಹೇಳಿದ್ದಾರೆ.
54 ಮಾನದಂಡಗಳನ್ನು ಇಟ್ಟುಕೊಂಡು ಹೋಗಿ ಮನೆ ಮನೆ ಸಮೀಕ್ಷೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವಿಚಾರದಲ್ಲಿ ಸರಿಯಾದ ಸ್ಪಷ್ಟತೆ ನೀಡಬೇಕು ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರೇ ಜಾತಿ ಗಣತಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು161 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಿ, ಇದೀಗ ಜಾತಿ ಜನಗಣತಿಯನ್ನು ವಾಪಸ್ ಪಡೆಯುವುದಾಗಿ ಹೇಳುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
RCB ಸಂಭ್ರಮಾಚರಣೆ : 18 ರೂಪಾಯಿಗೆ ಬಿರಿಯಾನಿ ಮಾರಾಟ

ಸುದ್ದಿದಿನ,ಬೆಂಗಳೂರು:ಆರ್‌ಸಿಬಿ ವಿಜಯೋತ್ಸವದಲ್ಲಿ ಬೆಂಗಳೂರು ಮಿಂದೆದ್ದಿದೆ. ಜನ ವಿಭಿನ್ನ ರೀತಿಯಲ್ಲಿ ತಮ್ಮ ಸಂಭ್ರಮಾಚರಣೆ ವ್ಯಕ್ತಪಡಿಸಿದ್ದಾರೆ. ಹೋಟೆಲ್ ರೆಸ್ಟೋರೆಂಟ್‌ಗಳೂ ಕೂಡ ಇದನ್ನೇ ಬಂಡವಾಳ ಮಾಡಿಕೊಂಡು ಭರ್ಜರಿ ವ್ಯಾಪಾರ ಮಾಡಿವೆ.
ಬೆಂಗಳೂರಿನ #NativeCooks ಫುಡ್ ಡೆಲಿವರಿ ಸಂಸ್ಥೆಯು ಕೇವಲ 18 ರೂಪಾಯಿಗೆ ಬಿರಿಯಾನಿ ಮಾರಾಟ ಮಾಡುವ ಮೂಲಕ ಆರ್‌ಸಿಬಿ ಅಭಿಮಾನಿಗಳ ಮನ ಗೆದ್ದಿದೆ.
ಹೌದು, ಹೆಬ್ಬಾಳ, ಆರ್‌ಟಿ ನಗರ, ಸದಾಶಿವನಗರದಲ್ಲಿ ಡೆಲಿವರಿ ಶುಲ್ಕವಿಲ್ಲದೆ ಅತಿ ಕಡಿಮೆ ದರದಲ್ಲಿ ಫುಡ್ ಡೆಲಿವರಿ ಮಾಡುತ್ತಿರುವ #NativeCooks ಸಂಸ್ಥೆಯು ಆರ್‌ಸಿಬಿ ಅಭಿಮಾನಿಗಳನ್ನು ಖುಷಿಪಡಿಸಲು ಈ ರೀತಿ ಹೊಸ ಆಫರ್ ಬಿಟ್ಟಿತ್ತು. ಮೂಲಗಳ ಪ್ರಕಾರ ಸುಮಾರು ಒಂದು ಸಾವಿರ ಬಿರಿಯಾನಿ ಲಂಚ್‌ಬಾಕ್ಸ್‌ಗಳನ್ನು ತಲಾ 18ರೂಪಾಯಿಯಂತೆ ಮಾರಾಟ ಮಾಡಿದೆ.
ಮನೆಯಲ್ಲೇ ಮಾಡಿದ ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ನೇಟೀವ್ ಕುಕ್ಸ್ ಸಂಸ್ಥೆಯು ಹೆಣ್ಣುಮಕ್ಕಳೇ ಸೇರಿ ನಡೆಸುತ್ತಿರುವ ಪುಟ್ಟ ಕೇಟರಿಂಗ್ ಆಗಿದೆ. ವಾರದಲ್ಲಿ 6 ದಿನಗಳ ಕಾಲ ಕಾರ್ಯ ನಿರ್ವಹಿಸುವ ಈ ಕೇಟರಿಂಗ್. ವೆಜ್ ಊಟವನ್ನು ಕೇವಲ 80 ರೂಪಾಯಿಗೆ ಹಾಗೂ ನಾನ್‌ವೆಜ್ ಊಟವನ್ನು 135 ರೂಪಾಯಿಗೆ ಹಾಗೂ ಎಕ್ ಮೀಲ್‌ಅನ್ನು ಕೇವಲ 110 ರೂಪಾಯಿಗೆ ಮಾರಾಟ ಮಾಡುತ್ತಿದೆ.
ಸದ್ಯಕ್ಕೆ ಹೆಬ್ಬಾಳ, ಆರ್‌ಟಿನಗರ ಹಾಗೂ ಸದಾಶಿವನಗರಕ್ಕೆ ಡೆಲಿವರಿ ಶುಲ್ಕ ಇಲ್ಲದೇ ಆಹಾರ ವಿತರಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ 80 4853 6206 ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಚಿತ್ರ ವಿಮರ್ಶೆ | ಸೂಲಗಿತ್ತಿ ತಾಯವ್ವ

~ಡಾ. ಪುಷ್ಪಲತ ಸಿ ಭದ್ರಾವತಿ
ಚಿತ್ರ – ತಾಯವ್ವ ,ನಿರ್ಮಾಣ – ಅಮರ ಫಿಲಂಸ್, ನಿರ್ದೇಶನ- ಸಾತ್ವಿಕ ಪವನ ಕುಮಾರ್,ತಾರಾಗಣ – ಗೀತಪ್ರಿಯ. ಬೇಬಿ ಯಶಿಕಾ, ಮತ್ತಿತರರು
ನಾವು ಎಷ್ಟೇ ಆಧುನಿಕತೆ, ಸಮಾನತೆ, ಸ್ವಾತಂತ್ರ್ಯ ಎಂದು ಹೆಣ್ಣು ಮಾತನಾಡಿದರೂ, ಈ ಸಮಾಜದ ಸಂಕೋಲೆಯಲ್ಲಿ ಇವತ್ತಿಗೂ ನಾವು ಕಂಡು ಕಾಣದಂತೆ ಬಂಧಿಯಾಗಿದ್ದೇವೆ. ಈ ಪುರುಷ ನಿರ್ಮಿತ ಸಮಾಜದಲ್ಲಿ ಹೆಣ್ಣನ್ನು ತನ್ನ ಸಂಕೂಲೆಯಲ್ಲಿಯೇ ಬಂಧಿಸಿಟ್ಟಿರುವನು. ಅದೊಂದು ಸ್ವೇಚ್ಛಾಚಾರದ, ಸಮಾನತೆಯ, ಹೆಸರಿನ ಮುಖವಾಡ ತೊಟ್ಟಿದೆ ಅಷ್ಟೇ. ಈ ಮುಖವಾಡಗಳ ನಡುವಿನ ಪುರುಷ ನಿಯಂತ್ರಿತ ಬದುಕಿನಲ್ಲಿ ಹೋರಾಟವೆಂಬುದು ಹೆಣ್ಣಿಗೆ ನಿತ್ಯವಾಗಿದೆ.
ಸ್ತ್ರೀ ಅವಳು ಪ್ರಕೃತಿ, ಪ್ರಕೃತಿ ಇಲ್ಲವಾದರೆ ಇನ್ನೂ ನಾವೆಲ್ಲ ತೃಣಮೂಲ. ಇಂತಹ ಸತ್ಯ ಅರಿವಿದ್ದರೂ ನಾವು ಪದೇ ಪದೇ ಈ ಪ್ರಕೃತಿಯನ್ನು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಹಾಗೆಯೇ ಪ್ರಕೃತಿಯ ಇನ್ನೊಂದು ರೂಪವಾದ ‘ಹೆಣ್ಣನ್ನು’ ನಾವು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇದರ ಪರಿಣಾಮವಾಗಿಯೇ ಹೆಣ್ಣಿನ ಸರಾಸರಿ ಗಂಡಿಗಿಂತ ಗಣನೀಯವಾಗಿ ಕಡಿಮೆಯಾಗುತ್ತಿರುವುದು. ” ಹೆಣ್ಣು ಭ್ರೂಣಹತ್ಯೆ” ಎಂಬುದು ಸಮಾಜದ ಅದು ಹಾಗೂ ವಿಶ್ವಕ್ಕೂ ಮಾರಕ. ಇಂತಹ ಒಂದು ವಿಷಯ ವಸ್ತುವನ್ನು ಕೇಂದ್ರಿಕರಿಸಿಕೊಂಡು ಸಮಾಜಕ್ಕೆ ಜಾಗೃತಿ ಮೂಡಿಸುವ ಸಲುವಾಗಿ, ಎಚ್ಚರಿಕೆಯ ಕರೆಘಂಟೆಯೆಂಬಂತೆ “ತಾಯವ್ವ” ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿದೆ.
ಕಳೆದ ವರ್ಷಗಳಲ್ಲಿಯೇ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಹಿಂದೆ ಸುಮಾರು 500ಕ್ಕೂ ಹೆಚ್ಚಿನ ಭ್ರೂಣಗಳು ಸಿಕ್ಕವು. ವಿಚಾರ ಪ್ರಚಾರವೂ ಆಯಿತು. ಆದರೆ ಕೇವಲ ಸುದ್ದಿಯಾಗಿ ಕಣ್ಮರೆಯಾಗುತ್ತವೆ. ಇಂದಿನ ಸಮಾಜಕ್ಕೆ ಇಂತಹ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತಂದು ಯುವಕರಿಗೆ ಹಾಗೂ ಸಮಾಜಕ್ಕೆ ಜಾಗೃತಿಮೂಡಿಸಬೇಕಾಗಿದೆ. ಇಂತಹ ಕಾರ್ಯದಲ್ಲಿ
” ತಾಯವ್ವ” ಸಿನಿಮಾ ಗೆದ್ದಿದೆ ಎಂದರೆ ಅತಿಶಯೋಕ್ತಿಯೆನಲ್ಲಾ. ಈ ಗೆಲುವು ಚಿತ್ರದ ನಾಯಕಿ ” ಗೀತ ಪ್ರಿಯಾ” ಅವರ ಶ್ರಮ, ಹಾಗೂ ಅವರ ಪೂರ್ಣ ಪ್ರಮಾಣದ ಪಾತ್ರದ ತಲ್ಲೀನತೆಯು ಸಿನಿಮಾದುದ್ದಕ್ಕೂ ಕಾಣುತ್ತದೆ.
ಮೂಲತಃ ” ಗೀತ ಪ್ರಿಯಾ” ಅವರು ಕಳೆದ 35 ವರ್ಷಗಳ ಅಧಿಕವಾಗಿ ತಮ್ಮನ್ನು ತಾವು ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡು ವಿಧ್ಯಾಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ್ದಾರೆ. ಇವರ ತಾಯಿ ನೆರಳಲ್ಲಿ ಹುಟ್ಟಿದ ಮಗುವೇ ” ಕೃಪಾನಿಧಿ ಗ್ರೂಪ್ ಸಂಸ್ಥೆ”. ಸದಾ ಮಿಡಿವ ತಾಯಿ ಹೃದಯ ಇವರದ್ದಾಗಿದ್ದರಿಂದಲೇ ತಮ್ಮ ಪ್ರಥಮ ಚಿತ್ರದಲ್ಲಿಯೇ ಗಂಭೀರ ವಿಷಯ ವಸ್ತುವಿನ ಆಯ್ಕೆ, ಗಂಭೀರವಾದ ಅಭಿನಯ, ಸಮಾಜಮುಖಿ ಕಾಳಜಿಯಿರುವುದರಿಂದಲೇ ಇದರೆಲ್ಲರ ಫಲಿತಗಳೆಂಬಂತೆೇ “ತಾಯವ್ವ” ರೂಪುಗೊಂಡಿದೆ.
ಸಿನಿಮಾ ಕಲಾಪ್ರಿಯರಿಗೆ ಒಂದೊಳ್ಳೆ ಸುಗ್ಗಿ, ಕುಟುಂಬದ ಸಮೇತ ಸಿನಿಮಾ ವೀಕ್ಷಿಸಬಹುದು. ಗೀತ ಪ್ರಿಯಾ ಅವರು ಈ ಸಿನಿಮಾದಲ್ಲಿ ಅಭಿನಯಿಸಿ, ಹಾಗೂ ಸಂಗೀತಕ್ಕೆ ತಮ್ಮ ಧ್ವನಿಯನ್ನು ನೀಡಿರುವುದು ಇನ್ನೂ ವಿಶೇಷ. ಬೇಬಿ ಯಶೀಕಾ ಮುಂದಿನ ಭವಿಷ್ಯ ಇನ್ನಷ್ಟು ಸಿನಿಮಾರಂಗದಲ್ಲಿ ಉಜ್ವಲವಾಗಿರಲಿ. ನಿರ್ದೇಶಕರ ಪ್ರಯತ್ನ. ಚಿತ್ರಕಥೆಯ ಹಿಡಿತ ಹಾಗೂ ಎಲ್ಲೂ ಸಡಿಲವಿರದೇ ಸಾಗಿರುವುದು ನಮ್ಮ ಕನ್ನಡ ಚಿತ್ರರಂಗಕ್ಕೆ ಪ್ರಸ್ತುತ ಕೊಡುಗೆಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ4 days ago
ರಾಜ್ಯದ ಹಲವೆಡೆ ಧಾರಾಕಾರ ಮಳೆ ; ಜನಜೀವನ ಅಸ್ತವ್ಯಸ್ತ
-
ದಿನದ ಸುದ್ದಿ4 days ago
ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ
-
ದಿನದ ಸುದ್ದಿ4 days ago
ಗುಜರಾತ್ನ ಅಹಮದಾಬಾದ್ನಲ್ಲಿ ಏರ್ಇಂಡಿಯಾ ಪ್ರಯಾಣಿಕ ವಿಮಾನ ಪತನ : 242 ಪ್ರಯಾಣಿಕರು ಸಾವು
-
ದಿನದ ಸುದ್ದಿ4 days ago
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ
-
ಅಂಕಣ1 day ago
ಕವಿತೆ | ಅವ ಸುಡುತ್ತಾನೆ
-
ದಿನದ ಸುದ್ದಿ4 days ago
ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದಲ್ಲಿ ನಿಷೇಧ ; ತೆರವುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಪತ್ರ
-
ದಿನದ ಸುದ್ದಿ1 hour ago
ಶಾಮನೂರು ಶಿವಶಂಕರಪ್ಪ ಒಂದು ಕುಟುಂಬ, ವ್ಯಕ್ತಿ ಅಲ್ಲ, ಇಡೀ ಕಾಂಗ್ರೆಸ್ ಪಕ್ಷಕ್ಕೆ ಒಂದು ದೊಡ್ಡ ಶಕ್ತಿ : ಡಿಸಿಎಂ ಡಿ.ಕೆ.ಶಿವಕುಮಾರ್