ಕ್ರೀಡೆ
HaPpY BiRtHdAy : ಓಟದ ರಾಣಿ ಪಿ. ಟಿ. ಉಷಾ ಅಂದ್ರೆ ಸುಮ್ನೇನಾ..!

27 ಜೂನ್ 1964 ರಲ್ಲಿ ಜನಿಸಿದ ಪಿ.ಟಿ.ಉಷಾ ಅವರು ಭಾರತದ ಓಟದ ರಾಣಿ ಎಂಬ ಬಿರುದಿಗೆ ಹೆಸರಾಗಿರುವ ನಮ್ಮ ಕಾಲದ ಮಹತ್ವದ, ಅಪರೂಪದ ಕ್ರೀಡಾ ಪಟು. ಭಾರತದ ಅಥ್ಲೆಟಿಕ್ಸ್ ಸಾಧನೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಣನೀಯವಾಗಿರುವಂತೆ ಕಾಪಾಡಿಕೊಳ್ಳುವುದರಲ್ಲಿ ಪಿ ಟಿ ಉಷಾ ಅವರು ನೀಡಿರುವ ಕೊಡುಗೆ ಮಹತ್ವಪೂರ್ಣವಾದದ್ದು.
1976ರಲ್ಲಿ ಕೆರಳ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಕ್ರೀಡಾ ಶಾಲೆಯೊಂದನ್ನು ತೆರೆಯಿತು. ಪಿ.ಟಿ ಉಷಾ ಆ ಶಾಲೆಯಿಂದ ಹೊರಹೊಮ್ಮಿದ ಪ್ರತಿಭೆ. 1979ರಲ್ಲಿ ನಡೆದ ನ್ಯಾಶನಲ್ ಸ್ಕೂಲ್ ಗೇಮ್ಸ್‘ನಲ್ಲಿ ಭಾಗವಹಿಸಿದ ಈಕೆಯ ಅಸಾಧಾರಣ ಪ್ರತಿಭೆಯನ್ನು ಅಥ್ಲೆಟಿಕ್ಸ್ ತಜ್ಞ ನಂಬಿಯಾರ್ ಅವರು ಗುರುತಿಸಿದರು. ನಂತರ ಉಷಾ ಅವರ ಕ್ರೀಡಾಜೀವನದುದ್ದಕ್ಕೂ ನಂಬಿಯಾರ್ ಅವರೇ ತರಬೇತುದಾರರಾಗಿದ್ದರು.
1980ರ ಮಾಸ್ಕೊ ಒಲಿಂಪಿಕ್ಸ್ ಪಿ ಟಿ ಉಷಾ ಅವರು ಭಾಗವಹಿಸಿದ ಪ್ರಥಮ ಅಂತರರಾಷ್ಟ್ರೀಯ ಸ್ಪರ್ಧೆ. 1982ರಲ್ಲಿ ನವದೆಹಲಿ ಏಷ್ಯಾಡ್ ನ 100ಮೀ ಮತ್ತು 200 ಮೀ.ಓಟದ ಸ್ಪರ್ಧೆಯಲ್ಲಿ ಪಿ ಟಿ ಉಷಾ ರಜತ ಪದಕ ಗೆದ್ದರು. ಒಂದು ವರ್ಷದ ಬಳಿಕ ಕುವೈತ್ ನಲ್ಲಿ ನಡೆದ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಚಾಂಪಿಯನ್ ಶಿಪ್ ನಲ್ಲಿನ 400 ಮೀ.ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ನೂತನ ಏಷಿಯನ್ ದಾಖಲೆ ನಿರ್ಮಿಸಿದರು. 1983-89ರ ಅವಧಿಯಲ್ಲಿ ಏಷ್ಯಾ ಉಪಖಂಡದ ಟ್ರಾಕ್ ಅಂಡ್ ಫೀಲ್ಡ್ ನಲ್ಲಿ ಉಷಾ 13 ಚಿನ್ನದ ಪದಕಗಳನ್ನು ಗಳಿಸಿದರು. ಲಾಸ್ ಎಂಜೆಲಿಸ್ಸಿನಲ್ಲಿ 1984ರಲ್ಲಿ ನಡೆದ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ 400 ಮೀಟರ್ಸ್ ಹರ್ಡಲ್ಸಿನ ಸೆಮಿಫೈನಲ್ಸ್‘ನಲ್ಲಿ ಅವರು ಮೊದಲಿಗರಾಗಿದ್ದಾಗಿಯೂ ಅಂತಿಮ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಅವಕಾಶವನ್ನು ಸ್ವಲ್ಪದರಲ್ಲಿ ಕಳೆದುಕೊಂಡರು. ಮಿಲ್ಖಾ ಸಿಂಗ್ ಅವರ 1960ರ ಸಾಧನೆ ಪ್ರಕರಣದಲ್ಲಾದಂತೆ ಉಷಾ ಅವರಿಗೆ ಸಹಾ ಕೂದಲೆಳೆಯ ಅಂತರದಲ್ಲಿ ಪದಕ ಗಳಿಕೆಯ ಅವಕಾಶ ತಪ್ಪಿಹೋಯಿತು. ಪದಕ ಬರಲಿಲ್ಲವಾದರೂ ಉಷಾ ಅವರು ಒಲಿಂಪಿಕ್ಸ್ ಕ್ರೀಡೆಗಳಲ್ಲಿ 400ಮೀ.ಹರ್ಡಲ್ಸಿನ ಫೈನಲ್ ತಲುಪಿದ ಪ್ರಥಮ ಭಾರತೀಯ ಮಹಿಳೆಯಾಗಿದ್ದಾರೆ. ಅವರ ಈ ಸಾಧನೆಯನ್ನು ಇಡೀ ವಿಶ್ವವೇ ಬೆಕ್ಕಸ ಬೆರಗಿನಿಂದ ಕೊಂಡಾಡಿತು.
ಪಿ.ಟಿ ಉಷಾ ಅವರು 1986ರಲ್ಲಿ ಸಿಯೊಲ್ನಲ್ಲಿ ನಡೆದ 10ನೆಯ ಏಷಿಯನ್ ಗೇಮ್ಸ್ ಟ್ರ್ಯಾಕ್ ಅಂಡ್ ಫೀಲ್ಡ್ ಸ್ಪರ್ಧೆಗಳಲ್ಲಿ 4 ಚಿನ್ನ 1 ರಜತ ಪದಕಗಳನ್ನು ಪಡೆದರು. ಜಕಾರ್ತಾದಲ್ಲಿ 1985ರಲ್ಲಿ ನಡೆದ 6ನೆಯ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಚಾಂಪಿಯನ್ ಶಿಪ್ ನಲ್ಲಿ 5 ಚಿನ್ನದ ಪದಕ ಗಳಿಸಿದರು. ಅವರು ಅದೇ ಸ್ಪರ್ಧೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಏಕಾಂಗಿಯಾಗಿ ಆರು ಪದಕ ಗೆದ್ದ ಏಕೈಕ ಕ್ರೀಡಾಳು ಎನಿಸಿದ್ದಾರೆ.
ಪಿ. ಟಿ ಉಷಾ ಅಂತಾರಾಷ್ಟ್ರೀಯ ಮಟ್ಟದ ನೂರಕ್ಕೂ ಹೆಚ್ಚಿನ ಪದಕಗಳಿಗೆ ಭಾಜನರಾಗಿದ್ದಾರೆ. ರೈಲ್ವೆಯಲ್ಲಿ ಅಧಿಕಾರಿಯಾಗಿರುವ ಉಷಾ ಪದ್ಮಶ್ರೀ, ಅರ್ಜುನ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವೆಲ್ಲಕ್ಕೂ ಮಿಗಿಲಾಗಿ ಭಾರತದಲ್ಲಿ ಅಥ್ಲೆಟಿಕ್ಸ್ ವಿಚಾರ ಬಂದಾಗಲೆಲ್ಲಾ ನೆನಪಾಗುವ ಮಹತ್ವದ ಹೆಸರಾಗಿ ಭಾರತೀಯ ಮನೆ ಮನಗಳಲ್ಲಿ ಹಸುರಾಗಿ ಉಳಿದಿದ್ದಾರೆ. ಮುಂದೆ ಬಂದ ಹಲವಾರು ಕ್ರೀಡಾಳುಗಳಿಗೆ ನಿತ್ಯ ಪ್ರೇರಣೆಯಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಕ್ರೀಡೆ
ವಾಲಿಬಾಲ್ ಪಂದ್ಯಾವಳಿ | ಹೊಸದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಥಮ ಸ್ಥಾನ

ಸುದ್ದಿದಿನ, ಹೊನ್ನಾಳಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾಳಿ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ 2023-24ನೇ ಸಾಲಿನ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜುಗಳ ಪುರುಷ ಮತ್ತು ಮಹಿಳೆಯರ ಪಂದ್ಯಾವಳಿಯನ್ನುಇದೇ 17-18 ರಂದು ಆಯೋಜಿಸಲಾಗಿತ್ತು.
ಈ ಪಂದ್ಯಾವಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸದುರ್ಗ ಪ್ರಥಮ ಸ್ಥಾನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿ ದ್ವಿತೀಯ ಸ್ಥಾನ, ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ ತೃತೀಯ ಸ್ಥಾನ, ಶ್ರೀ ಶಿವಲಿಂಗೇಶ್ವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನಗಿರಿ ನಾಲ್ಕನೇ ಸ್ಥಾನವನ್ನು ಪಡೆದು ಕಾಲೇಜಿಗೆ ಮತ್ತು ವಿಶ್ವ ವಿದ್ಯಾನಿಲಯಕ್ಕೆ ಕೀರ್ತಿ ತಂದಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ಜಿ ಧನಂಜಯ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.
ಈ ಸಮಾರಂಭದಲ್ಲಿ ಪ್ರೊ. ಡಿ ಸಿ ಪಾಟೀಲ್, ಗ್ರಂಥಪಾಲಕರಾದ ಪ್ರೊ. ಎಂ ನಾಗರಾಜ ನಾಯ್ಕ ಕ್ರೀಡಾ ಆಯೋಜಕರಾದ ಡಾ. ಹರೀಶ ಪಿ ಎಸ್, ಬೆಳ್ಳುಳ್ಳಿ ಕೊಟ್ರೇಶ, ಹೆಚ್ ವಿ ಗೀತಾ, ಅಮೂಲ್ಯ ಆರ್ ಹೆಚ್, ಡಾ. ಮಂಜುನಾಥ ಗುರು ವಿ ಜಿ ದಾವಣಗೆರೆ ವಿಶ್ವವಿದ್ಯಾನಿಲಯ ಕ್ರೀಡಾಧಿಕಾರಿಗಳಾದ ಡಾ. ವೀರಪ್ಪ ಬಿ ಹೆಚ್ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಡಾ. ಚಂದ್ರಶೇಖರ್ ಸಿ, ಡಾ. ರೇಖಾ ಎಂ ಆರ್, ಗಿರೀಶ್ ಎಂ ಎಸ್, ಬಾಲಚಂದ್ರಣ್ಣ ಬಿ. ಆರ್. ಕಲ್ಲೇಶಪ್ಪ ಹರೀಶ್ ಕೆ ಎಂ , ತೀರ್ಪುಗಾರರಾದ ಆಶಿಕ್ ಮತ್ತು ಕಲೀಲ್, ಇಬ್ರಾಹಿಂ ಜಾಫರ್ ಮುಖ್ಯ ಮುಖ್ಯ ತೀರ್ಪುಗಾರರಾದ ಪರಮೇಶ್ವರಪ್ಪ ಮತ್ತು ನಮ್ಮ ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಐಸಿಸಿ ವಿಶ್ವಕಪ್ ಕ್ರಿಕೆಟ್ | ಭಾರತ-ನ್ಯೂಜಿಲೆಂಡ್ ನಡುವೆ ಮೊದಲ ಸೆಮಿಫೈನಲ್ ಪಂದ್ಯ

ಸುದ್ದಿದಿನ, ಡಿಸ್ಕ್ : ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್‌ನ ಮೊದಲ ಸೆಮಿಫೈನಲ್ ಪಂದ್ಯವು ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿದೆ.
ಪಂದ್ಯವು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಇದು ಎರಡನೇ ಬಾರಿ ಈ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ.
ಈ ಹಿಂದೆ 2019ರಲ್ಲಿ ಈ ತಂಡಗಳು ಎದುರಾಗಿದ್ದವು. ವಾಂಖೆಡೆ ಕ್ರೀಡಾಂಗಣವು ಹೆಚ್ಚು ಸ್ಕೋರ್ ದಾಖಲಿಸಲು ಹೆಸರುವಾಸಿಯಾಗಿದ್ದು, ಈ ಹಿಂದೆ ನಡೆದ ಪಂದ್ಯಾವಳಿಯಲ್ಲಿ ಶ್ರೀಲಂಕಾ ಎದುರು ಆಕರ್ಷಕ 302 ರನ್ ಗಳನ್ನು ಕಲೆ ಹಾಕಿತ್ತು. ಎರಡನೇ ಸೆಮಿಫೈನಲ್ ಪಂದ್ಯವು ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಾಡಿದ್ದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಎರಡು ಪಂದ್ಯ

ಸುದ್ದಿದಿನ ಡೆಸ್ಕ್ : ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿವೆ. ಧರ್ಮಶಾಲಾದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ.
ಎರಡನೇ ಪಂದ್ಯ ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಪಾಕಿಸ್ತಾನ-ಶ್ರೀಲಂಕಾ ತಂಡಗಳು ಸೆಣೆಸಲಿವೆ. ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.
ಹೈದರಾಬಾದ್‌ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ, ನ್ಯೂಜಿಲೆಂಡ್ ತಂಡ ನೆದರ್ಲೆಂಡ್ ವಿರುದ್ದ 99 ರನ್‌ಗಳಿಂದ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿತು. ನ್ಯೂಜಿಲೆಂಡ್ ಪರ ವಿಲ್ ಯಂಗ್ 70 , ಟಾಮ್ ಲಾಥಮ್
53 ಹಾಗೂ ರಚಿನ್ ರವೀಂದ್ರ 51 ರನ್ ಗಳಿಸಿದರು.
ನೆದರ್ಲೆಂಡ್ ಪರ ರೋಲೋಫ್ ವಾಂಡೆರ್ ಮೆರ್ವೆ, ಪೌಲ್ ವ್ಯಾನ್ ಮೀಕರೆನ್, ಆರ್ಯನ್ ದತ್ ತಲಾ 2 ವಿಕೆಟ್ ಪಡೆದುಕೊಂಡರು. 323 ರನ್‌ಗಳ ಗುರಿ ಬೆನ್ನತ್ತಿದ ನೆದರ್ಲೆಂಡ್ 46.3 ಓವರ್‌ಗಳಲ್ಲಿ 223 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ನೆದರ್ಲೆಂಡ್ ಪರ ಕಾಲಿನ್ ಆಕರ್‍ಮನ್ 69, ಸ್ಕಾಟ್ ಎಡ್ವರ್ಡ್ 30 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಮಿಶೆಲ್ ಸ್ಯಾಂಟ್ನರ್ 5, ಮ್ಯಾಟ್ ಹೆನ್ರಿ 3 ವಿಕೆಟ್ ಪಡೆದುಕೊಂಡರು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಯಾಂಟ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
