Connect with us

ಭಾವ ಭೈರಾಗಿ

“ನಿನ್ನ ನೆರೆಹೊರೆಯವರನ್ನು ನಿನ್ನಂತೆಯೇ ಪ್ರೀತಿಸು” ಎಂದು ಹೇಳಿದ್ದ ಯೇಸು; ಆದರೆ ಇಂದು..!?

Published

on

  • ಹರ್ಷಕುಮಾರ್ ಕುಗ್ವೆ

ನಿನ್ನ ನೆರೆಹೊರೆಯವರನ್ನು ನಿನ್ನಂತೆಯೇ ಪ್ರೀತಿಸು” ಎಂದು ಯೇಸು ಹೇಳಿದ್ದ. ಆದರೆ ಇಂದು ನಾವು ಬದುಕಿರುವ ಸನ್ನಿವೇಶದಲ್ಲಿ ನಿಜವಾಗಿಯೂ ಅತ್ಯಂತ ಕಷ್ಟವಾಗಿರುವುದೇ ಇದು. ನಮಗೆ ನೆರೆಹೊರೆಯವರು ಮನುಷ್ಯರಾಗಿ ಕಾಣದೇ ಬೇರೆಯ ಧರ್ಮದವರಾಗಿ, ಬೇರೆಯ ಜಾತಿಯವರಾಗಿ, ಶತ್ರುಗಳಾಗಿ ಕಾಣುತ್ತಾರೆ. ಹೀಗಾಗಿ ಮನುಷ್ಯರನ್ನು ಮನುಷ್ಯರಾಗಿ ಪ್ರೀತಿಸುವ ಮನಸ್ಥಿತಿ ದಿನಕಳೆದಂತೆಯೂ ಕ್ಷೀಣವಾಗತೊಡಗಿದೆ. ಮಾನವೀಯತೆ ಎನ್ನುವುದೇ ದುಸ್ತರವಾಗಿದೆ.

ಈಗ ಸರ್ಕಾರ ಹೇಗಾದರೂ ಮಾಡಿ, ಮುಂಬಾಗಿಲಿನಿಂದ ಅಲ್ಲದಿದ್ದರೆ ಹಿಂಬಾಗಿಲಿನಿಂದಲಾದರೂ ಜಾರಿಗೊಳಿಸಲು ಉದ್ದೇಶಿಸಿರುವ “ಪೌರತ್ವ” ಕಾನೂನು “ನೆರೆಹೊರೆಯವರನ್ನು ದ್ವೇಷಿಸಿ” ಎನ್ನುತ್ತದೆ.

ಇವನು ಪಾಕಿಸ್ತಾನಿ ಇರಬಹುದೇ, ಬಾಂಗ್ಲಾದೇಶಿ ಇರಬಹುದೇ ಎಂಬ ಅನುಮಾನದಲ್ಲಿ ಭೀತಿಯಿಂದ ಬದುಕುವಂತೆ ಮಾಡುತ್ತದೆ. ಅಥವಾ ಇವನು ನನ್ನ ಧರ್ಮದ ಮೇಲೆ ಸವಾರಿ ಮಾಡುತ್ತಾನೆ ಎಂಬ ಶಾಶ್ವತ ಪೂರ್ವಗ್ರಹ ಬಿತ್ತಲಿದೆ.

ನಾವು ನಮ್ಮ ದೇಶದ ಸಂವಿಧಾನದ ಬಗ್ಗೆ ಅತ್ಯಂತ ಹೆಮ್ಮೆ ಪಡಲು ಇರುವ ಕಾರಣ ಎಂದರೆ ಅದು “ನೆರೆಹೊರೆಯವರನ್ನು ನಮ್ಮಂತೆಯೇ ಪ್ರೀತಿಸುವ” ತಾತ್ವಿಕತೆಯನ್ನು ಹೊಂದಿರುವುದು. ಅದರಲ್ಲಿರುವ ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯದ ಅಂಶಗಳು ಇದೇ ತತ್ವ ಹೊಂದಿರುವಂತವು.

ಯೇಸು, ಬುದ್ಧ, ಪೈಗಂಬರ್, ಬಸವ, ಸ್ವಾಮಿ ವಿವೇಕಾನಂದ, ಅಂಬೇಡ್ಕರ್, ಪೆರಿಯಾರ್, ಫುಲೆ ದಂಪತಿಗಳು… ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಇದೇ ತತ್ವವನ್ನೇ ಬೋಧಿಸಿದರು. ಆದರೆ ಅವರೆಲ್ಲರ ಆಶಯಗಳ ಸಮಾಜ ಇನ್ನೂ ಸೃಷ್ಟಿಯಾಗಲೇ ಇಲ್ಲ.

ದ್ವೇಷವನ್ನು ಬಿತ್ತಿ ದ್ವೇಷ ಹೆಮ್ಮರವನ್ನು ಬೆಳೆದು ಮತ್ತಷ್ಟು ದ್ವೇಷದ ಫಸಲನ್ನು ತೆಗೆಯಲು ತೊಡಗಿರುವವರ ಮಧ್ಯೆ ಪ್ರೀತಿಯ ಮಾತುಗಳಿಗೆ ಬೆಲೆಯೇ ಇಲ್ಲವಾಗಿದೆ. ಹೀಗಾಗಿ ಯೇಸು ಕ್ರಿಸ್ತನ “ನೆರೆಹೊರೆಯವರನ್ನು ನಿನ್ನಂತೆಯೇ ಪ್ರೀತಿಸು” ಎಂಬ ವಾಣಿ ಇಂದು ಅರ್ಥ ಕಳೆದುಕೊಂಡಿದೆ.

ಆದರೂ, ಕನಿಷ್ಟ ಪಕ್ಷ ನಮ್ಮ ನಮ್ಮ ಮಟ್ಟಿಗಾದರೂ ನೆರೆಹೊರೆಯವರನ್ನು ಜಾತಿ-ಧರ್ಮ ಭೇಧಗಳನ್ನು ಮೀರಿ ಪ್ರೀತಿಸುವ ಮೂಲಕ ಯೇಸುವಿನಂತಹ ದಾರ್ಶನಿಕ ವ್ಯಕ್ತಿಗೆ ಗೌರವ ಸಲ್ಲಿಸೋಣ.

ಎಲ್ಲರಿಗೂ ಕ್ರಿಸ್ ಮಸ್ ಶುಭಾಶಯಗಳು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಕವಿತೆ | ಅವಳೀಗ ಕಾಯುವುದಿಲ್ಲ

Published

on

  • ಶಮೀಮ ಕುತ್ತಾರ್, ಮಂಗಳೂರು

ಬೆಳಕು ಬರಲೆಂದು
ಕಿಟಕಿಯನ್ನೊಂಚೂರು
ಸರಿಸಹೊರಟಿದ್ದಳು…
ಒಳಗಿನಿಂದಲೇ ಸರಪಳಿಗಳು
ಕೈಗಳ ಬಿಗಿದಾಗ
ಬೆಳಕಿಗಿಂತ ಬಿಡುಗಡೆಯೇ
ಸಾಕೆನಿಸಿತ್ತು.

ಬಯಕೆಗಳು ಶಾಪವಾದಾಗ
ಇರವನ್ನೂ ಮರೆಯಬೇಕವಳು
ಓದಿ ಮುಗಿಸಲಾಗದ
ಇತಿಹಾಸದ ಮೌನಗಳಲ್ಲಿ
ಅಹಲ್ಯೆ ಕಲ್ಲಾದಂತೆ.

ಬಲದ ಬಲೆಯಾಗಿ
ಬಗಲಲ್ಲಿ‌ ಬೀಳುವಾಗ
ಮೋಹ ಮರೆತ ದ್ರೌಪದಿ
ಐವರ ಮಡದಿಯಾದಂತೆ.

ನೆನಪುಗಳ ವಿಲೇವಾರಿಯಲ್ಲಿ
ನೋವಿನ ಲೆಕ್ಕ ಕೇಳುವ
ಬದುಕ ವಹಿವಾಟುಗಳಲ್ಲಿ
ಅವಳಿಗಷ್ಟೇ ದಕ್ಕುವ ಉತ್ತರಗಳು.

ಹೆಣ್ಣು ಕ್ರಾಂತಿಯಾಗಲು
ಕಾರಣಗಳನ್ನು ಕಾಲವೇ ಸೃಷ್ಟಿಸಿತು..
ಯಾವ ದಿಕ್ಕಿನಿಂದ ಬೀಸಿದರೂ
ವಿಳಾಸದ ಹಂಗಿಲ್ಲದ ಗಾಳಿಯಂತೆ.

ಮುಹಬ್ಬತಿನಲ್ಲಿ ಮುಳುಗಿಸುವ
ಅವಳೊಲುಮೆಯ ಟಪಾಲನ್ನು‌
ಜತನದಿಂದ ಕಾಯಬೇಕಿತ್ತು
ಲೋಕ,
ಅರುಂಧತಿ ನಕ್ಷತ್ರದಂತೆ..
ಆದರೆ ಲೋಕದ ಕಣ್ಣಿಗೆ
ಅವಳು ಹೆಣ್ಣು…

ಹಾಗಾಗಿ ಈಗೀಗ ಅವಳು
ಇದ್ಯಾವುದನ್ನೂ ಕಾಯುವುದಿಲ್ಲ..

ಎದೆಗೆ ಬಿದ್ದ ಸಾವಿತ್ರಿಯ ಅಕ್ಷರಗಳು
ಕಾಲಾಂತದಲ್ಲಿ‌ ಅವಳ
ಯೋಚನೆಗೆ ಉಸಿರಾದರೆ,
ಕಾಲ ಕಳೆದು ಕೂಡಿಸಿದ
ಅವಳ ಮಾತು-ಮೌನಗಳು‌
ಕಾಲಾತೀತವಾಗಿ ಬೆಳೆದು
ಕಿಟಕಿಯಲ್ಲಿ ಹುಡುಕಿದ ಬೆಳಕಿಗೆ
ಹೆಬ್ಬಾಗಿಲು ತೆರೆದುಕೊಂಡಿತು…(ಕವಯಿತ್ರಿ- ಶಮೀಮ ಕುತ್ತಾರ್
ಮಂಗಳೂರು)

ಕವಯಿತ್ರಿ- ಶಮೀಮ ಕುತ್ತಾರ್
ಮಂಗಳೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ಇಷ್ಟಂತೂ ಹೇಳಬಲ್ಲೆ..!

Published

on

  • ರಂಗಮ್ಮ ಹೊದೇಕಲ್, ತುಮಕೂರು

ನಾವು
ಗುಡಿಸಲಿನಲ್ಲಿ ಹುಟ್ಟಿ
ಅವ್ವನೆದೆಯ ಹಾಲು ಕುಡಿದು
ಗೋಣಿತಾಟಿನ ಮೇಲೆ ಮಲಗಿ
ನಕ್ಷತ್ರ ಎಣಿಸಿದವರು!

ಚೀಕಲು ರಾಗಿಯ ಅಂಬಲಿ ಕುಡಿದು
ತಂಗಳು ಹಿಟ್ಟಿಗೆ ಉಪ್ಪು ಸವರಿ
ಹಸಿವ ನೀಗಿಸಿಕೊಂಡವರು
ದಾಹಕ್ಕೆ ಕಣ್ಣೀರನ್ನೇ ಕುಡಿದವರು!

ದಾಸಯ್ಯನಂತಹ ಅಪ್ಪ
ಭೂಮ್ತಾಯಿಯಂತಹ ಅವ್ವ
ಎದೆಗಿಳಿಸಿದ್ದು
ಅಕ್ಷರ ಮತ್ತು ಅಂತಃಕರಣ!

ಯಾರು ಯಾರೋ ಕೊಟ್ಟ
ಹರಿದ ಚೀಲ,ಮುರುಕು ಸ್ಲೇಟು
ತುಂಡು ಬಳಪ,ಬಳಸಿ ಎಸೆದ ಬಟ್ಟೆ
ನಮ್ಮ ಪ್ರಿಯವಾದ ಆಸ್ತಿಗಳು!

ಬುಡ್ಡಿದೀಪದ ಬೆಳಕಿನಲ್ಲಿ
ಅಕ್ಷರಗಳ ಜೊತೆ ಆಡಿದ ನಾವು
ಯಾರದೋ ಸಂಭ್ರಮದಲ್ಲಿ
ಉಳಿದ ಅನ್ನಕ್ಕೆ ಕಾದಿದ್ದು
ಇನ್ನೂ ಹಸಿಯಾಗಿದೆ!

ಯಾರದೋ ಜಮೀನಿಗೆ
ಬೆವರು ಬಸಿದ
ಅಪ್ಪ ಅವ್ವ
ಅರ್ಧ ಉಂಡು ಕಣ್ಣೀರಾದದ್ದೂ
ನೆನಪಿದೆ!

ಅಂದೂ ನಾವು
ಶಾಪವಾಗಲಿಲ್ಲ
ಕೇಡನ್ನೂ ಹಾಡಲಿಲ್ಲ!

ಉಪ್ಪಿಟ್ಟಿನಿಂದ ಅನ್ನಕ್ಕೆ ಬದಲಾದ
ಈ ಯುಗದಲ್ಲಿಯೂ
ನೀವು ನಿಮಗೆ ಪರಂಪರೆಯಿಂದ ಬಂದಿರುವ ಆಸ್ತಿ,ಅಂತಸ್ತು
ಸೇವಕರು…ಇತ್ಯಾದಿತ್ಯಾದಿಗಳನ್ನು
ಪ್ರದರ್ಶಿಸುತ್ತಲೇ ಇದ್ದೀರಿ!

ಸಹ್ಯವಾಗದ ಅಸ್ತ್ರಗಳನ್ನೇ
ನೀವು ಮಸೆಯುವಾಗ
ನಿಮ್ಮ ಅಜ್ಞಾನಕ್ಕೂ ನಮ್ಮ ಅನುಕಂಪವಿದೆ!

ನಾವು ಈ ನೆಲದ ಮಕ್ಕಳು
ಬೆಂಕಿಯೂ‌.ಬೆಳಕೂ ಆಗಬಲ್ಲ ಕಿಡಿಗಳು
ಭದ್ರ ಬೇರೂರಿ ಆಕಾಶಕ್ಕೆ ಚಿಮ್ಮಿ
ನಿಮ್ಮ ಕಣ್ಣಲ್ಲೂ ಮತಾಪು ಹೊತ್ತಿಸಬಲ್ಲವರು!! (ರಂಗಮ್ಮ ಹೊದೇಕಲ್, ತುಮಕೂರು)

ಕವಯಿತ್ರಿ : ರಂಗಮ್ಮ ಹೊದೇಕಲ್, ತುಮಕೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ಚಳಿಗಾಲದ ಎರಡು ಜೀವರಸಗಳು

Published

on

  • ಜಿ. ದೇವೂ ಮಾಕೊಂಡ

ಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲ
ಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ
ಒಂದು ಕಡೆ ಕಾಫಿಯ ಸ್ವಾಗತ
ಮತ್ತೊಂದು ಕಡೆ ಮುತ್ತಿನ ಸೆಳೆತ.

ಯಾವುದು ಆರಿಸಿಕೊಳ್ಳಲಿ
ಈ ನಿಶಬ್ಧ ಚಳಿಯಲಿ?
ಕಾಫಿಯ ಇಚ್ಚೆಯನ್ನೊ?
ಮುತ್ತಿನ ಬಿಸಿಯನ್ನೊ?
ಇಷ್ಟೊಂದು ಚಡಪಡಿಕೆಯಿರಬಾರದು
ಇಚ್ಚೆಯ ಸಂಚಯನಗಳಲ್ಲಿ!

ನಮ್ಮ ಆರಂಭದ ಭೇಟಿಗೆ,
ಒಂದರ ನೆನಪಿಗೆ ಇನ್ನೊಂದು
ಸುಂಕವಾಗಲಿ
‘ಬೈ ವನ್ ಗೆಟ್ ವನ್ ಫ್ರಿ’
ಚಳಿಗಾಲದ ಜಾಹಿರಾತು ಆಫರ್.

ಕೊನೆಗೊಂದು ದಿನ ಕುರುಹುಗಳಂತೆ ನೆನಪಿಸಿಕೊಳ್ಳೊಣ
ಇದು ಆರಂಭವೊ ಅಥವ
ಅಂತ್ಯವಾಗುವುದೊ?
ಯಾರಿಗ್ಗೊತ್ತು?

ಈ ಕಾಫಿ
ಈ ಮುತ್ತು
ಯುದ್ದೋನ್ಮಾದದ ಸಂಕೇತಗಳಾ?
ಅಥವ
ಕೊನೆಯ ಯುದ್ದದ
ಕರಾರುಗಳಾ?

ನೆನಪಿಗೆ ಒಂದೊಂದು ಸೆಲ್ಫಿ ಇರಲಿ
ಜೊತೆಗೊಂದಿಷ್ಟು ಭಿನ್ನ ನಗುವಿರಲಿ.. (ಕವಿ: ಜಿ.ದೇವೂ ಮಾಕೊಂಡ)

ಕವಿ: ಜಿ.ದೇವೂ ಮಾಕೊಂಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending