ರಾಜಕೀಯ
ಮೋದಿಗೆ ಗೌಡರೇ ಪ್ರಬಲ ಎದುರಾಳಿ !
ಸುದ್ದಿದಿನ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೆ ಪ್ರಬಲ ಎದುರಾಳಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುದೀರ್ಘ ರಾಜಕೀಯ ಇತಿಹಾಸ ಹೊಂದಿರುವ ಎಚ್.ಡಿ. ದೇವೇಗೌಡ ಅವರ ರಾಜಕೀಯ ಅನುಭವವನ್ನು ಗಮನಿಸಿದರೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ದೇವೇಗೌಡರೆ ಪರ್ಯಾಯ ನಾಯಕ ಎಂಬುದಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ. ದೇವೇಗೌಡರೆ ಏಕೆ ಮುಂದಿನ ಪ್ರಧಾನಿಯಾಗಬಾರದು ಎಂದು ಪ್ರಶ್ನಿಸಿದರು.
ಇದೀಗ ಪ್ರಾಂತಿಯ ಪಕ್ಷಗಳು ಒಟ್ಟಾಗಿ ದೇಶದ ಚುಕ್ಕಾಣಿ ಹಿಡಿಯುವ ಕಾಲ ಬಂದಿದೆ. ಪ್ರಾಂತಿಯ ಪಕ್ಷಗಳೊಂದಿಗೆ ಸೇರಿ ರಾಷ್ಟ್ರೀಯ ಪಕ್ಷಗಳು ಅಧಿಕಾರ ಹಿಡಿಯುತ್ತಿವೆ. ಆಂಧ್ರಪ್ರದೇಶ, ತೆಲಂಗಾಣ, ಮಧ್ಯ ಈಶಾನ್ಯ ಭಾಗದಲ್ಲಿಯೂ ಪ್ರಾದೇಶಿಕ ಪಕ್ಷಳ ಪ್ರಾಬಲ್ಯವಿದೆ. ಇದನ್ನು ಗಮನಿಸಿದರೆ ಇಂದಿನ ರಾಜಕೀಯ ಪ್ರಾಂತೀಯ ಪಕ್ಷಗಳ ಕಡೆ ವಾಲಿರುವುದು ತಿಳಿಯುತ್ತದೆ. ಪ್ರಾದೇಶಿಕ ಪಕ್ಷಗಳಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿರುತ್ತದೆ. ಹಾಗಾಗಿ ಅವರು ಅತ್ಯಂತ ಪರಿಣಾಮಕಾರಿಯಾಗಿ ಆ ಸಮಸ್ಯೆ ಬಗೆಹರಿಸುತ್ತಾರೆ. ಇದೇ ಕಾರಣಕ್ಕೆ ಕಾವೇರಿ ಸಮಸ್ಯೆ ಉದ್ಬವವಾದಾಗ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಹುಡುಕಿಕೊಂಡು ಬಂದರು. ಸ್ಥಳೀಯ ಸಮಸ್ಯೆಗಳ ಕುರಿತು ಪ್ರಾಂತೀಯ ಪಕ್ಷಗಳಿಗಿರುವ ಆಳವಾದ ಅರಿವನ್ನು ಗಮನಿಸಿಯೆ ಜನರು ಸ್ಥಳೀಯ ಪಕ್ಷಗಳಿಗೆ ಒಲವು ತೋರುತ್ತಿದ್ದಾರೆ. ಹಾಗಾಗಿ ಈ ಪಕ್ಷಗಳು ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಒಗ್ಗೂಡಿ ದೇಶದ ಆಡಳಿತ ಚಕ್ಕಾಣಿ ಹಿಡಿಯುವ ಕಾಲ ಬಂದಿದೆ. ಈ ಕಾರ್ಯದಲ್ಲಿ ಮುಂದಾಳತ್ವ ವಹಿಸುವ ಶಕ್ತಿ ಎಚ್.ಡಿ. ದೇವೇಗೌಡ ಅವರಿಗೆ ಇದೆ. ಹಾಗಾಗಿ ಇವರೆ ಹಾಲಿ ಪ್ರಧಾನಿ ನರೇಂದ್ರಮೋದಿ ಅವರಿಗೆ ಪ್ರಬಲ ಎದುರಾಳಿ ಆಗಲಿದ್ದಾರೆ ಎಂದರು.

ದಿನದ ಸುದ್ದಿ
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಮಹಿಳಾ ಮತ್ತು ಪುರುಷರಿಗೆ ಸಮಾನ ವೇತನ ನೀಡಿದ ಉದ್ಯೋಗ ಖಾತರಿ ಯೋಜನೆ ಹೆಸರು ಬದಲಾವಣೆಗೆ ಅಸಮಧಾನ
ದಾವಣಗೆರೆ: ಅಭಿವೃದ್ಧಿ ಕಾಮಗಾರಿ ದೆಹಲಿ ಮಟ್ಟದಲ್ಲಿ ತೀರ್ಮಾನ ಆಗಬೇಕಿಲ್ಲ. ಪಂಚಾಯತ್‍ನಲ್ಲಿ ಗ್ರಾಮಸಭೆ ಮೂಲಕ ಗ್ರಾಪಂ ಸದಸ್ಯರು ತೀರ್ಮಾನ ಕೈಗೊಂಡು ನಮ್ಮ ಹಳ್ಳಿಯಲ್ಲಿ ಇಷ್ಟು ಶೌಚಾಲಯ ಆಗಬೇಕು. ಇಷ್ಟು ಶಾಲೆಗಳ ಅಭಿವೃದ್ಧಿ ಆಗಬೇಕು. ನಮ್ಮ ಹೊಲದ ರಸ್ತೆಗಳು ಅಭಿವೃದ್ಧಿ ಆಗಬೇಕು. ಜಲಮೂಲಗಳ ಶುದ್ದೀಕರಣ, ಹೂಳೆತ್ತಿ ಅಂತರ್ಜಲ ಹೆಚ್ಚಳದ ಮೂಲಕ ಸ್ವಾವಲಂಬಿ ಹಳ್ಳಿಯ ರೂಪುರೇಷ ಹಾಕಿಕೊಂಡು ಪಂಚಾಯತ್‍ನಲ್ಲಿ ತೀರ್ಮಾನ ಮಾಡಿಕೊಂಡರೆ ಜನರು ಉದ್ಯೋಗ ಖಾತರಿಯಲ್ಲಿ ಹಳ್ಳಿಯನ್ನು ಕಟ್ಟುವ ಕೆಲಸ ಮಾಡುತ್ತಾರೆ ಎಂದು ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ (Dr.Prabha Malikarjun) ತಿಳಿಸಿದರು.
ಅವರು ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಹೊನ್ನೂರು ಗ್ರಾಮದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಿದ್ದ ಮನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣಾ ಶಿಬಿರ ಮತ್ತು ಕೂಲಿಕಾರರ ಕುಂದುಕೊರತೆಗಳ ಪರಿಶೀಲನೆ ಕಾರ್ಯಕ್ರಮ ಉದ್ಘಾಟಿಸಿ ಅವರು (Dr.Prabha Malikarjun) ಮಾತನಾಡಿದರು.
ಉದ್ಯೋಗ ಖಾತರಿ ಯೋಜನೆ ಅನುಷ್ಟಾನದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ಕೆಲಸ ಮಾಡಿ ಜನರಿಗೆ ಉದ್ಯೋಗ ನೀಡಿದ್ದಾರೆ. ಈ ನಿಟ್ಟಿನಲ್ಲಿ ಹೊನ್ನೂರು ಗ್ರಾಪಂನಲ್ಲಿ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದರಿಂದ ಇಲ್ಲಿನ ಗ್ರಾಪಂ ಉದ್ಯೋಗ ಖಾತರಿಯಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ ಎಂದು ಅವರು (Dr.Prabha Malikarjun) ಶ್ಲಾಘಿಸಿದರು.
ಮನರೇಗಾದಿಂದ ದೇಶದಲ್ಲಿ 5 ರಿಂದ 6 ಕೋಟಿ ಜನ ಕೂಲಿಕಾರ್ಮಿಕರು ಆರ್ಥಿಕವಾಗಿ ಸಬಲರಾಗಿದ್ದಾರೆ. 2005 ರಿಂದ 2026 ರವರೆಗೆ ಸುಮಾರು 20 ವರ್ಷಗಳಿಂದ ಗ್ರಾಮಗಳ ಅಭಿವೃದ್ಧಿಗೆ ಮನರೇಗಾ ಯೋಜನೆ ಕಾರಣವಾಗಿತ್ತು. ಈಗ ಇದನ್ನು ಕೇಂದ್ರ ಸರ್ಕಾರ ಬದಲಾಯಿಸಿ ವಿಕಸಿತ ಭಾರತ-ಗ್ಯಾರಂಟೀ ಫಾರ್ ರೋಜಗಾರ್ ಮತ್ತು ಆವೀಜಿಕ ಮಿಷನ್ ವಿಬಿ-ಜಿ.ರಾಮ್ ಜಿ ಕಾಯ್ದೆ-2005 ಎಂದು ಬದಲಿಸಿದ್ದು ಹಳ್ಳಿ ಅಧಿಕಾರ ಕಸಿದುಕೊಂಡು, ಗ್ರಾಮೀಣ ಆರ್ಥಿಕತೆಗೆ ಪೆಟ್ಟು ನೀಡಲು ಮುಂದಾಗಿದೆ. ಮಹಿಳಾ ಮತ್ತು ಪುರುಷರಿಗೆ ಸಮಾನವಾದ ಕೆಲಸ ಕೊಡುವ ಯೋಜನೆವೊಂದಿದ್ದರೆ ಅದು, ‘ಮನರೇಗಾ’ ಯೋಜನೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾಪುರುಷನ ಹೆಸರಿಟ್ಟ ‘ಮನರೇಗಾ’ಯೋಜನೆಯ ಹೆಸರನ್ನೇ ಅಳಿಸುವ ಕೆಲಸ ಮಾಡಿದೆ ಎಂದು ಸಂಸದರು (Dr.Prabha Malikarjun) ಅಸಮಧಾನ ವ್ಯಕ್ತಪಡಿಸಿದರು.

ಶಾಸಕರಾದ ಕೆ.ಎಸ್.ಬಸವಂತಪ್ಪ ಅವರು ಹಳ್ಳಿ ಜನರ ದನಿಯಾಗಿ, ಅವರ ಕಷ್ಟ-ಸುಖಗಳನ್ನು ಅಂಚಿಕೊಂಡಿದ್ದಾರೆ. ಅವರು ಬಡವರ ಕಷ್ಟ-ಸುಖಗಳನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಅವರ ಜೊತೆಯಲ್ಲಿ ಮಾಯಕೊಂಡ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾದಾಗ ಅವರಿಂದ ಸಾಕಷ್ಟು ಕಲಿಯುವ ಅವಕಾಶ ಸಿಕ್ಕಿದೆ. ಸ್ವಯಂ ಉದ್ಯೋಗದಲ್ಲಿ ನೀವು ಹೇಗೆ ಆರ್ಥಿಕವಾಗಿ ಸಬಲರಾಗಬಹುದು ಎಂಬ ಬಗ್ಗೆ ತಿಳಿಸಿದ್ದಾರೆ ಎಂದು (Dr.Prabha Malikarjun) ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರಾದ ಕೆ.ಎಸ್.ಬಸವಂತಪ್ಪ ಮಾತನಾಡಿ, ದೇಶದಲ್ಲಿ ದುಡಿಯುವ ವರ್ಗಕ್ಕೆ ಕೆಲಸ ಕೊಡಬೇಕೆಂಬ ಉದ್ದೇಶದಿಂದ 2005ರಲ್ಲಿ ಯುಪಿಎ ಸರ್ಕಾರ ನೇತೃತ್ವ ವಹಿಸಿದ್ದ ಮಾಜಿ ಪ್ರಧಾನಿ ದಿ.ಮನಮೋಹನ್ ಸಿಂಗ್ ಅವರು ‘ಮನರೇಗಾ’ ಯೋಜನೆ ಜಾರಿಗೊಳಿಸುವ ಮೂಲಕ ದುಡಿಯುವ ವರ್ಗಕ್ಕೆ ಕೆಲಸ ಕೊಟ್ಟು ಆರ್ಥಿಕವಾಗಿ ಸಬಲರನ್ನಾಗಿ ಮಾಡಿತು. ಅಂದಿನಿಂದ ಈವರೆಗೆ ದೇಶದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ಮನರೇಗಾ’ ಯೋಜನೆ ಜಾರಿಗೊಳ್ಳುವ ಪೂರ್ವದಲ್ಲಿ ಇಲ್ಲಿನ ಹಳ್ಳಿಯ ಜನರು ಮಹಾರಾಷ್ಟ್ರ, ಕೇರಳ ಸೇರಿದಂತೆ ಹೊರ ರಾಜ್ಯ ಹಾಗೂ ರಾಜ್ಯದ ಕಾಫಿನಾಡು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದರು. ಯಾವಾಗ ಹಿಂದಿನ ಯುಪಿಎ ಸರ್ಕಾರ ‘ಮನರೇಗಾ’ ಯೋಜನೆ ಜಾರಿಗೊಳಿಸಿತು. ಅಂದಿನಿಂದ ಈವರೆಗೂ ಹಳ್ಳಿಯ ಜನರು ಬದುಕು ಕಂಡುಕೊಂಡು ಆರ್ಥಿಕವಾಗಿ ಸಬಲರಾದರು. ಆದರೆ ಈಗ ಕೇಂದ್ರ ಸರ್ಕಾರ ‘ಮನರೇಗಾ’ ಹೆಸರು ಬದಲಾಯಿಸುತ್ತಿದೆ ಎಂದು (Dr.Prabha Malikarjun) ಅಸಮಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಗಿತ್ತೆ ಮಾಧವ ವಿಠ್ಠಲ್ ರಾವ್, ತಾಪಂ ಇಓ ರಾಮಭೋವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ರಾಜಕೀಯ
ಸಚಿವ ಎನ್.ಎಸ್.ಭೋಸರಾಜು: ಕ್ವಾಂಟಮ್ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಸಹಭಾಗಿತ್ವಕ್ಕೆ ಪೆನಾಂಗ್ DCM ಒಲವು
ಬೆಂಗಳೂರು : ಮಲೇಷ್ಯಾದ ಪ್ರಮುಖ ಸೆಮಿಕಂಡಕ್ಟರ್ ಹಬ್ ಆಗಿರುವ ಪೆನಾಂಗ್ ರಾಜ್ಯದ ಉನ್ನತ ಮಟ್ಟದ ನಿಯೋಗವು, ಕರ್ನಾಟಕದೊಂದಿಗೆ ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸಹಭಾಗಿತ್ವಕ್ಕೆ ಆಸಕ್ತಿ ವ್ಯಕ್ತಪಡಿಸಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಭೋಸರಾಜು ತಿಳಿಸಿದರು.
ಇಂದು ವಿಕಾಸಸೌಧದಲ್ಲಿ ಪೆನಾಂಗ್ ರಾಜ್ಯದ ಉಪಮುಖ್ಯಮಂತ್ರಿಗಳಾದ ಶ್ರೀ ಜಗದೀಪ್ ಸಿಂಗ್ ದಿಯೋ ನೇತೃತ್ವದ ನಿಯೋಗದೊಂದಿಗೆ ಸಭೆ ನಡೆಸಿದ ನಂತರ ಸಚಿವರು ಈ ವಿಷಯ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಪೆನಾಂಗ್ ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ದಿಯೋ, ತಮ್ಮ ರಾಜ್ಯದ ಯಶಸ್ಸಿನ ಮಾದರಿಯನ್ನು ವಿವರಿಸಿದರು. “ಪೆನಾಂಗ್ ಭೌಗೋಳಿಕವಾಗಿ ಸಣ್ಣ ರಾಜ್ಯವಾಗಿದ್ದರೂ, ಇಂದು ಜಾಗತಿಕ ಮಟ್ಟದ ಸೆಮಿಕಂಡಕ್ಟರ್ ಶಕ್ತಿಯಾಗಿ ಹೊರಹೊಮ್ಮಿದೆ. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿರುವ ಬಲವಾದ ‘ಉದ್ಯಮ ಮತ್ತು ಸಂಶೋಧನಾ ಸಹಭಾಗಿತ್ವ’ (Industry-Research Collaboration). ಇದರಲ್ಲಿ ಪೆನಾಂಗ್ ವಿಶ್ವವಿದ್ಯಾಲಯವು (Penang University) ನಿರ್ಣಾಯಕ ಪಾತ್ರ ವಹಿಸಿದೆ. ಉದ್ಯಮಗಳಿಗೆ ನೇರವಾಗಿ ಬೆಂಬಲ ನೀಡುವಂತಹ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ವಿವಿ ನಿರ್ಮಿಸಿದೆ,” ಎಂದು ಅವರು ತಿಳಿಸಿದರು. ಇದೇ ಮಾದರಿಯನ್ನು ಕರ್ನಾಟಕ ಮತ್ತು ಪೆನಾಂಗ್ ನಡುವೆ ವಿಸ್ತರಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಚರ್ಚೆಯ ವೇಳೆ ಸಚಿವ ಎನ್.ಎಸ್. ಭೋಸರಾಜು ಅವರು ಸಣ್ಣ ನೀರಾವರಿ ಕ್ಷೇತ್ರದಲ್ಲಿ ಕರ್ನಾಟಕ ಸಾಧಿಸಿರುವ ಮೈಲಿಗಲ್ಲುಗಳನ್ನು ಪರಿಚಯಿಸಿದರು. ವಿಶೇಷವಾಗಿ ರಾಜ್ಯದ ‘ತ್ಯಾಜ್ಯದಿಂದ ಸಂಪತ್ತು’ (Waste to Wealth) ಪರಿಕಲ್ಪನೆಯಡಿ ಜಾರಿಗೆ ತಂದಿರುವ ಕೆ.ಸಿ. ವ್ಯಾಲಿ (ಕೋರಮಂಗಲ-ಚಲ್ಲಘಟ್ಟ) ಮತ್ತು ಎಚ್.ಎನ್. ವ್ಯಾಲಿ (ಹೆಬ್ಬಾಳ-ನಾಗವಾರ) ಯೋಜನೆಗಳ ಬಗ್ಗೆ ಗಮನ ಸೆಳೆದರು.
“ನಗರದ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಅದನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರದಂತಹ ಬರಪೀಡಿತ ಜಿಲ್ಲೆಗಳ ಕೆರೆಗಳಿಗೆ ತುಂಬಿಸುವ ಮೂಲಕ ಅಂತರ್ಜಲ ಮಟ್ಟವನ್ನು ಯಶಸ್ವಿಯಾಗಿ ಹೆಚ್ಚಿಸಿದ್ದೇವೆ. ಕೃಷಿ ಚಟುವಟಿಕೆಗಳಿಗೆ ಇದು ಜೀವ ತುಂಬಿದೆ,” ಎಂದು ಸಚಿವರು ನಿಯೋಗಕ್ಕೆ ವಿವರಿಸಿದರು. ಈ ಸುಸ್ಥಿರ ಅಭಿವೃದ್ಧಿ ಮಾದರಿಗೆ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿತು.
ಕರ್ನಾಟಕ ಸರ್ಕಾರ ಯುವಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ರೂಪಿಸಿರುವ ಮಹತ್ವಾಕಾಂಕ್ಷೆಯ ‘ಕ್ವಾಂಟಮ್ ಆಕ್ಷನ್ ಪ್ಲಾನ್’ ನಲ್ಲಿ ಭಾಗಿಯಾಗಲು ಪೆನಾಂಗ್ ನಿಯೋಗ ಉತ್ಸುಕತೆ ತೋರಿತು. “ಪೂರ್ವದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಪೆನಾಂಗ್ ಜೊತೆಗಿನ ಸಹಭಾಗಿತ್ವಕ್ಕೆ ನಮ್ಮ ಸರ್ಕಾರ ಮುಕ್ತವಾಗಿದೆ,” ಎಂದು ಸಚಿವರು ಸ್ವಾಗತಿಸಿದರು. ಬೆಂಗಳೂರು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹಾಗೂ ಪೆನಾಂಗ್ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೊಂದಿರುವ ಪರಿಣತಿಯ ಸಮ್ಮಿಲನದಿಂದ ವಿಫುಲ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಉಭಯ ನಾಯಕರು ಅಭಿಪ್ರಾಯವ್ಯಕ್ತಪಡಿಸಿದರು.
ಸಭೆಯ ಅಂತ್ಯದಲ್ಲಿ, ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ದಿಯೋ ಅವರು ಸಚಿವ ಭೋಸರಾಜು ಅವರಿಗೆ ಮಲೇಷ್ಯಾ ಮತ್ತು ಪೆನಾಂಗ್‌ಗೆ ಭೇಟಿ ನೀಡುವಂತೆ ಅಧಿಕೃತ ಆಹ್ವಾನ ನೀಡಿದರು. ವಿಶೇಷವಾಗಿ ಪೆನಾಂಗ್‌ನ ವಿಶ್ವವಿದ್ಯಾಲಯದ ಸಂಶೋಧನಾ ಸೌಲಭ್ಯಗಳು ಮತ್ತು ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಖುದ್ದಾಗಿ ವೀಕ್ಷಿಸಿ, ಮಾನವ ಸಂಪನ್ಮೂಲ ಅಭಿವೃದ್ಧಿ ಒಪ್ಪಂದವನ್ನು (MoU) ಅಂತಿಮಗೊಳಿಸಲು ಈ ಭೇಟಿ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಐಟಿ, ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಎನ್. ಮಂಜುಳಾ, ಕೆ-ಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಸದಾಶಿವ ಪ್ರಭು ಸೇರಿದಂತೆ ಪೆನಾಂಗ್ ರಾಜ್ಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜಕೀಯ
‘CM’ ಆಗಿ ಈ ಅವಧಿಯನ್ನು ಪೂರ್ಣಗೊಳಿಸುವ ವಿಶ್ವಾಸವಿದೆ : ಸಿಎಂ ಸಿದ್ದರಾಮಯ್ಯ
ಮೈಸೂರು: ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ ಆಗಿ ಸಿಎಂ ಸಿದ್ದರಾಮಯ್ಯ ಡಿ ದೇವರಾಜು ಅರಸು ಅವರ ದಾಖಲೆ ಮುರಿದಿದ್ದೇನೆ ಎಂದು ಮೈಸೂರಿನಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇಷ್ಟು ವರ್ಷದ ರಾಜಕಾರಣ ನನಗೆ ತೃಪ್ತಿ ತಂದಿದ್ದು, ಮುಖ್ಯಮಂತ್ರಿ ಆಗಿ ಪೂರ್ಣಾವಧಿಯಾಗಿ ಮುಂದುವರಿಯುವ ವಿಶ್ವಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಈ ಕುರಿತು ಟ್ವೀಟ್ ನಲ್ಲಿ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ ಅವರು, ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ದಾಖಲೆಯನ್ನು ಮುರಿಯಲೆಂದು ನಾನು ರಾಜಕೀಯ ಮಾಡಿಲ್ಲ. ಈ ದಾಖಲೆ ಕಾಕತಾಳೀಯವಾಗಿ ಆಗಿದೆ. ಜನರ ಆಶೀರ್ವಾದದಿಂದ ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಲು ಸಾಧ್ಯವಾಗಿದೆ. ಮುಖ್ಯಮಂತ್ರಿಯಾಗಿ ಈ ಅವಧಿಯನ್ನು ಪೂರ್ಣಗೊಳಿಸುವ ವಿಶ್ವಾಸವಿದೆ. ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕಷ್ಟೆ.
ನನ್ನ ಅಭಿಮಾನಿಗಳು ನಾಟಿ ಕೋಳಿ ಪಲಾವ್ ಹಂಚಿದ ಸುದ್ದಿ ಗಮನಿಸಿದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ನೆಂಟರು ಬಂದಾಗ ಮಾತ್ರ ನಾಟಿ ಕೋಳಿ ಅಡುಗೆ ಮಾಡುತ್ತಾರೆ. ನಾನೂ ಹಳ್ಳಿಯವನಾಗಿರುವುದರಿಂದ ಸಹಜವಾಗಿ ನಾಟಿ ಕೋಳಿ, ರಾಗಿ ರಾಗಿ ಮುದ್ದೆ ತಿನ್ನುತ್ತಿದ್ದೆ. ಹಳ್ಳಿಯವರ ಊಟದ ಕ್ರಮ ಇದಾಗಿದ್ದು, ನಾನು ಮುಖ್ಯಮಂತ್ರಿಯಾಗಿರುವುದರಿಂದ ಸ್ವಲ್ಪ ಪ್ರಚಾರ ಸಿಗುತ್ತಿದೆ.
https://x.com/siddaramaiah/status/2008449729609560294?s=20
ಇಷ್ಟು ವರ್ಷಗಳ ರಾಜಕಾರಣ ತೃಪ್ತಿ ತಂದಿದೆ. ಜನರ ಕೆಲಸ ಮಾಡುವುದು ಖುಷಿಯ ಸಂಗತಿ. ರಾಜಕಾರಣ ಎಂದರೆ ಬಡವರು, ದಲಿತರು, ಹಿಂದುಳಿದವರ ಕೆಲಸ ಮಾಡಿಕೊಡುವುದು. ಹೆಚ್ಚೆಂದರೆ ಶಾಸಕನಾಗಬೇಕೆಂದು ಅಂದುಕೊಂಡಿದ್ದೆ. ಶಾಸಕನಾದೆ, ಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿಯೂ ಆದೆ. ಅವಕಾಶಗಳು ಸಿಕ್ಕಿದ್ದರಿಂದ ಇವೆಲ್ಲ ಆಗಲು ಸಾಧ್ಯವಾಯಿತು.
ದೇವರಾಜ ಅರಸು ಹಾಗೂ ನಾನು ಇಬ್ಬರೂ ಮೈಸೂರಿನವರೇ ಆಗಿದ್ದು, ಇಬ್ಬರೂ ದೀರ್ಘಾವಧಿಯ ಮುಖ್ಯಮಂತ್ರಿಗಳಾಗಿದ್ದೇವೆ. ಆದರೆ ಕಾಲಘಟ್ಟ ಬೇರೆ ಬೇರೆಯಾಗಿದೆ. 1972ರಿಂದ 80ವರೆಗೆ ಮುಖ್ಯಮಂತ್ರಿಯಾಗಿದ್ದರು. ನಾನು ಎರಡು ಅವಧಿಗೆ ಆಗಿದ್ದೇನೆ ಎಂದು ಟ್ವಿಟ್‌ನಲ್ಲಿ ಹಂಚಿಕೊಂಡಿದ್ದಾರೆ.

-
ದಿನದ ಸುದ್ದಿ3 days agoನಕಲಿ ಜಿ.ಎಸ್.ಟಿ ಬಿಲ್ಲುಗಳ ಮೂಲಕ ಅವ್ಯವಹಾರ | ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಕೆ. ಲಮಾಣಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ7 days agoಪ್ರೊ.ಪೂರ್ಣಾನಂದ, ಎ.ನಾರಾಯಣ, ಸತೀಶ್ ಆಚಾರ್ಯ ಸೇರಿದಂತೆ ಹಲವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ
-
ದಿನದ ಸುದ್ದಿ7 days agoಇದೇ 11 ರಂದು ಜಿಎಂ ವಿಶ್ವವಿದ್ಯಾಲಯದಲ್ಲಿ ಪ್ರಥಮ ಘಟಿಕೋತ್ಸವ : ಕುಲಪತಿ ಡಾ. ಎಸ್.ಆರ್. ಶಂಕಪಾಲ್
-
ದಿನದ ಸುದ್ದಿ3 days agoತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ
-
ದಿನದ ಸುದ್ದಿ4 days agoಫಾಸ್ಟ್ ಫುಡ್ ತಯಾರಿಕೆ ಉಚಿತ ತರಬೇತಿ
-
ದಿನದ ಸುದ್ದಿ4 days agoಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳಿಗೆೆ ತರಬೇತಿ





