Connect with us

ಬಹಿರಂಗ

ಸಂವಿಧಾನ ರಚನೆಯಲ್ಲಿ ಡಾ. ಬಾಬೂ ಜಗಜೀವನ್ ರಾಮ್ ಅವರ ಪಾತ್ರ

Published

on

  • ಡಾ. ಷಕೀಬ್ ಎಸ್ ಕಣದ್ಮನೆ, ನವಿಲೇಹಾಳ್

ಭಾರತೀಯ ಇತಿಹಾಸದಲ್ಲಿ ವರ್ಣಬೇಧ ನೀತಿಯನ್ನು ತಲತಲಾಂತರದಿಂದ ಕಾಣಬಹುದು, ರಾಜಮಹರಾಜರ ಕಾಲದಲ್ಲಿಯೂ ಕ್ರೂರ ವರ್ತನೆಗಳು, ನೀತಿ ನಿಯಮಗಳು, ದಲಿತ ಬಲಿತ, ಮೇಲು ಕೀಳುಗಳೆಂಬ ಪರಿಕಲ್ಪನೆಗಳು ನಮ್ಮ ನಾಡಿನಲ್ಲಿ ಕಾಣಬಹುದು. ಇದು ಬರಿಯ ರಾಜರ ಕಾಲದಲ್ಲಿ ಅಷ್ಟೇ ಅಲ್ಲದೆ, ಬ್ರಿಟಿಷರ ಆಡಳಿತದ ಕಾಲಘಟ್ಟದಲ್ಲಿಯೂ ಸಹ ಅಷ್ಟೇ ಕ್ರೂರತನವನ್ನು ಮೀರಿತ್ತು.

ದಲಿತರು ಓಣಿಯಲ್ಲಿ ಓಡಾಡುವಂತಿರಲಿಲ್ಲ, ಅವರು ನಡೆದಾಡಿದ ಜಾಗದಲ್ಲಿ ದಲಿತರು ಬಂದರೆ ಮೈಲಿಗೆ ಎಂದು ಮಡಿ ಮೈಲಿಗೆಗಳ ಕಾನ್ಸೆಪ್ಟ್ಗಳ ಆಧಾರದಲ್ಲಿ ದಲಿತರನ್ನು ಕೀಳಾಗಿ ನೋಡುವ ಕಾಲಘಟ್ಟದಲ್ಲಿ ದಲಿತರಿಗೆ ಶಿಕ್ಷಣ ವ್ಯವಸ್ಥೆಯಂತೂ ಕನಸಿನ ಮಾತು. ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ಅಕ್ಷರ ಜ್ಞಾನಕ್ಕಾಗಿ ಹೋರಾಡಿದ ಅನೇಕ ದಲಿತ ಮುಖಂಡರುಗಳಲ್ಲಿ ನಮಗೆ ತಟ್ಟನೆ ನೆನಪಿಗೆ ಬರುವುದು ಡಾ. ಬಿ.ಆರ್. ಅಂಬೇಡ್ಕರ್. ಇವರ ಹೋರಾಟ ಅಷ್ಟಿಷ್ಟಲ್ಲ, ಹಾಗೇ ಇವರ ಸಮಕಾಲೀನರಾದ ಬಿಹಾರ ಮೂಲದ ಡಾ. ಬಾಬೂ ಜಗಜೀವನ್ ರಾಮ್ ಎಂಬುವರು ಕೂಡ ದಲಿತರ ಧನಿಯಾಗಿ, ಧಮನೀತರ ಪರವಾಗಿ ಸೆಟೆದೆದ್ದು ನಿಂತ ಧೀಮಂತ ರಾಜಕಾರಣಿಗಳಲ್ಲಿ ಇವರು ಮೊದಲಿಗರು.

ಡಾ. ಬಾಬೂ ಜಗಜೀವನರಾಮರು ಬಿಹಾರದ ಚಾಂದ್ವಾ ಗ್ರಾಮದಲ್ಲಿ ಏಪ್ರಿಲ್ 5,1908 ರಂದು ಭಾರತೀಯ ಜಾತಿ ವ್ಯವಸ್ಥೆಯ ಚಮರ್ ಜಾತಿಯಲ್ಲಿ ಜನಿಸಿದರು. ಇವರಿಗೆ ಓರ್ವ ಹಿರಿಯ ಸಹೋದರ ಮತ್ತು ಮೂವರು ಸಹೋದರಿಯರು ಇದ್ದು, ಇವರ ತಂದೆ ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ ಶೋಭಿರಾಮ್ ಮತ್ತು ತಾಯಿ ವಸಂತಿ ದೇವಿ ಆಗಿದ್ದರು.

ಬಾಬೂಜಿಯವರು 1914ರಲ್ಲಿ ಶಾಲೆಗೆ ಪ್ರವೇಶ ಪಡೆಯುತ್ತಾರೆ, ಇಲ್ಲಿಂದ 1920 ರಲ್ಲಿ ರ‍್ಹಾ ನಗರದಲ್ಲಿನ ಅಗರ್‌ವಾಲ್ ಮಿಡಲ್ ಸ್ಕೂಲಿಗೆ ಸೇರುತ್ತಾರೆ, ಇಲ್ಲಿಯೇ ಇವರು ಮೊದಲ ಬಾರಿಗೆ ಇಂಗ್ಲೀಷ್ ಬೋಧನೆಯನ್ನು ಪಡೆದರು.1922 ರಲ್ಲಿ ಅದೇ ಪಟ್ಟಣದ ಟೌನ್ ಸ್ಕೂಲಿಗೆ ಸೇರುತ್ತಾರೆ. ಈ ಶಾಲೆಯಲ್ಲಿ ನಡೆದ ಒಂದು ಸಣ್ಣ ಘಟನೆ ಬಾಬೂಜಿಯವರ ಜೀವನದಲ್ಲಿ ಮಹತ್ತರವಾದ ಪರಿಣಾಮ ಬೀರಿತು.

ಆ ಘಟನೆ ಯಾವುದೆಂದರೆ ಟೌನ್ ಸ್ಕೂಲಿನಲ್ಲಿ ಕುಡಿಯುವ ನೀರಿಗಾಗಿ ಎರಡು ಕುಂಡಗಳನ್ನು ಇರಿಸಲಾಗಿತ್ತು, ಅದರಲ್ಲಿ ಒಂದು ಹಿಂದೂಗಳಿಗೆ ಮತ್ತೊಂದು ಮುಸ್ಲೀಮರಿಗೆ ಎಂದು ಪ್ರತ್ಯೇಕ ಮಾಡಲಾಗಿತ್ತು. ಇದರಲ್ಲಿ ಬಾಬೂಜಿಯವರು ಹಿಂದೂಗಳದ್ದಾಗಿದ್ದ ಕುಂಡದ ನೀರನ್ನು ಕುಡಿಯುತ್ತಾರೆ, ಇವರು ಅಸ್ಪೃಶ್ಯರಾಗಿದ್ದ ಕಾರಣ ಈ ವಿಷಯ ಶಾಲೆಯ ಮುಖ್ಯ ಶಿಕ್ಷಕರಿಗೆ ತಿಳಿಯುತ್ತದೆ, ಈ ವಿಷಯದಿಂದ ಬಾಬೂಜಿಯವರು ತಮ್ಮ ಜೀವನದಲ್ಲಿಯೇ ಮೊದಲ ಬಾರಿಗೆ ಜಾತಿ ತಾರತಮ್ಯವನ್ನು ಶಾಲಾ ಹಂತದಲ್ಲಿಯೇ ಎದುರಿಸಬೇಕಾಯಿತು.

ಆದರೂ ಅವರು ವಿಚಲಿತರಾಗದೆ ಶಾಲೆಯಲ್ಲಿ ಇಡುತ್ತಿದ್ದ ನೀರಿನ ಕುಂಡಗಳನ್ನು ಹೊಡೆದು ಹಾಕುತ್ತಿದ್ದರೂ, ಪದೇ ಪದೇ ನೀರಿನ ಕುಂಡಗಳು ಹೊಡೆಯುತ್ತಿದ್ದದ್ದನ್ನು ಗಮನಿಸಿದ ಶಾಲಾ ಆಡಳಿತ ಮಂಡಳಿ. ವಿಷಯದ ಆಳವನ್ನು ದಲಿತ ಸಮುದಾಯದ ವಿದ್ಯಾರ್ಥಿಗಳಿಗೂ ಸಹ ಒಂದು ಪ್ರತ್ಯೇಕ ನೀರಿನ ಕುಂಡಗಳನ್ನಿಡುವ ಪದ್ಧತಿಯನ್ನ ಅನುಸರಿಸಿತು. ಇದು ಇವರ ಮೊದಲ ಪ್ರತಿಭಟನೆ ಅಥವಾ ಹೋರಾಟ ಎಂದರೆ ತಪ್ಪಾಗಲಾರದು.

1925ರಲ್ಲಿ ಬಾಬೂಜಿಯವರು ಮಾಡಿದ ಸ್ವಾಗತ ಭಾಷಣವೇ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯಕ್ಕೆ ಸೇರಲು ಕಾರಣವಾಯಿತು. ಮೆಟ್ರಿಕ್ಯುಲೇಷನ್ ಅನ್ನು ಮೊದಲ ವಿಭಾಗದಲ್ಲಿ ಉತ್ತೀರ್ಣರಾಗಿ 1927ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯಕ್ಕೆ ಸೇರಿದರು. ಇಲ್ಲಿ ಇವರಿಗೆ ಬಿರ್ಲಾ ವಿದ್ಯಾರ್ಥಿ ವೇತನವನ್ನು ನೀಡಲಾಯಿತು, ಇಲ್ಲಿಯೇ ಇವರು ಇಂಟರ್ ಸೈನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಹಿಂದೂ ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಇದ್ದಾಗ ಇವರು ಪರಿಶಿಷ್ಠ ಜಾತಿಗಳನ್ನು ಸಂಘಟಿಸಿ ಸಾಮಾಜಿಕ ತಾರತಮ್ಯದ ವಿರುದ್ಧ ಪ್ರತಿಭಟಿಸಿದರು. ನಂತರದಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮುಂದುವರೆಸಿ 1931 ರಲ್ಲಿ ಬಿ.ಎಸ್ಸಿ ಪದವಿ ಪಡೆದರು.

ಬಾಬೂಜಿಯವರ ರಾಜಕೀಯ ಸಾಧನೆ

  1. ಸತತ 30 ವರ್ಷಗಳ ಕಾಲ ಕೇಂದ್ರ ವಿಧಾನ ಸಭೆಯ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದರು.
  2. ಇವರು ಭಾರತೀಯ ಕ್ಯಾಬಿನೆಟ್‌ನಲ್ಲಿ ಧೀರ್ಘಕಾಲ ಸೇವೆ ಸಲ್ಲಿಸಿದ ಕ್ಯಾಬಿನೆಟ್ ಮಂತ್ರಿ ಎಂಬ ದಾಖಲೆಯನ್ನು ಹೊಂದಿದ್ದಾರೆ.

    ಕೇಂದ್ರ ಕಾರ್ಮಿಕ ಮಂತ್ರಿಯಾಗಿ 1946 ರಿಂದ 1952 ರ ವರೆಗೆ

  3. ಕೇಂದ್ರ ಸಂಪರ್ಕ ಸಚಿವರಾಗಿ 1952 ರಿಂದ 1956 ರ ವರೆಗೆ
  4. ಕೇಂದ್ರ ಸಾರಿಗೆ ಮತ್ತು ರೈಲ್ವೆ ಸಚಿವರಾಗಿ 1956 ರಿಂದ1962 ರ ವರೆಗೆ
  5. ಕೇಂದ್ರ ಸಾರಿಗೆ ಮತ್ತು ಸಂಪರ್ಕ ಸಚಿವರಾಗಿ 1962 ರಿಂದ 1963 ರ ವರೆಗೆ
  6. ಕೇಂದ್ರ ಕಾರ್ಮಿಕ ಉದ್ಯೋಗ ಮತ್ತು ಪುನರ್ವಸತಿ ಸಚಿವರಾಗಿ 1966ರಿಂದ 1967 ರ ವರೆಗೆ
  7. ಕೇಂದ್ರ ಆಹಾರ ಮತ್ತು ಕೃಷಿ ಸಚಿವರಾಗಿ1967 ರಿಂದ 1970 ರವರೆಗೆ
  8. ಕೇಂದ್ರ ರಕ್ಷಣಾ ಸಚಿವರಾಗಿ 1970 ರಿಂದ1974 ಮತ್ತು 1977-1979ರವರೆಗೆ ಎರಡು ಅವಧಿಯಲ್ಲಿ ಕಾಣಬಹುದು.
  9. ಕೇಂದ್ರ ಕೃಷಿ ಮತ್ತು ನೀರಾವರಿ ಸಚಿವರಾಗಿ1974 ರಿಂದ 1977ರ ವರೆಗೆ
  10. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ಸಿನ ಅಧ್ಯಕ್ಷರಾಗಿ ಸೇವೆ
  11. ಕಾಂಗ್ರೇಸ್ ಫಾರ್ ಡೆಮಾಕ್ರಸಿ ಪಕ್ಷದ ಸ್ಥಾಪಕ ಸದಸ್ಯರಾಗಿದ್ದರು ಹಾಗೂ 1977ರಲ್ಲಿ ಜನತಾ ಪಕ್ಷದೊಂದಿಗೆ ಉತ್ತಮ ಹೊಂದಾಣಿಕೆ ಹೊಂದಿದ್ದರು.
  12. ಜನವರಿ24,1979 ರಿಂದ ಜುಲೈ 28,1979 ರ ವರೆಗೆ ಭಾರತದ ಉಪಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
  13. 1976ಸಪ್ಟೆಂಬರ್ ನಿಂದ ಏಪ್ರಿಲ್ 1983ರ ವರೆಗೆ ಸ್ಕೌಟ್ ಅಂಡ್ ಗೈಡ್ಸ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಸಂವಿಧಾನ ರಚನೆಯಲ್ಲಿ ಬಾಬೂಜಿಯವರ ಪಾತ್ರ

ಕಾರ್ಮಿಕ ಇಲಾಖೆಯನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸುತ್ತಿರುವಾಗಲೇ ಅವರೊಬ್ಬ ಭವಿಷ್ಯದ ಮೇರು ಸಂಸದೀಯ ಪಟು ಎಂಬ ಕುರುಹುಗಳನ್ನು ಪರಿಚಯಿಸಿದರು. ಇಂತಹ ಸಮಯದಲ್ಲಿ ದೇಶಕ್ಕೆ ಕ್ಯಾಬಿನೆಟ್ ಆಯೋಗದ ಆಗಮನವು ಸ್ವಾತಂತ್ರ್ಯದ ಆಶಾಕಿರಣವನ್ನು ಮೂಡಿಸತೊಡಗಿತ್ತು. ಇದನ್ನು ಗಳಿಸುವುದರ ಜೊತೆಗೆ ಮಧ್ಯಾಂತರ ಸರ್ಕಾರ ದೇಶೀಯ ಸಂವಿಧಾನವೊAದನ್ನು ರಚಿಸಲು ಮುಂದಾಯಿತು.

ಈ ಮಹತ್ವದ ಕಾರ್ಯವನ್ನು ನೆರವೇರಿಸಲು ವಿವಿಧ ಪ್ರಾಂತ್ಯಗಳಿಂದ ಸಂವಿಧಾನ ಶಾಸಕಾಂಗ ಸಭೆಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾಗಿತ್ತು. ಆವಾಗ ಬಾಬೂಜಿ ಬಿಹಾರದಲ್ಲಿ ಸ್ಪರ್ಧಿಸಿ ಚುನಾಯಿತರಾದರೆ, ಬಾಂಬೆಯಲ್ಲಿ ಸ್ಪರ್ಧಿಸಿದ ಅಂಬೇಡ್ಕರ್‌ಗೆ ಬಿ.ಜಿ ಖೇರ್ ಎಸಗಿದ ದ್ರೋಹದಿಂದ ಸೋಲಾಯಿತು. ಮಂಡಲ ಎಂಬ ಬಂಗಾಳದ ದಲಿತ ಪ್ರತಿನಿಧಿ ರಾಜಿನಾಮೆ ನೀಡಿ ಅವರನ್ನು ಅಲ್ಲಿಂದ ಸ್ಪರ್ಧಿಸಿ ಆಯ್ಕೆಗೊಳ್ಳುವಂತೆ ಅವಕಾಶ ಕಲ್ಪಿಸಿದರು.

ಬಂಗಾಳದ ವಿಭಜನೆಯ ತರುವಾಯ ಅಂಬೇಡ್ಕರ್ ಸದಸ್ಯತ್ವವನ್ನು ಕಳೆದುಕೊಂಡರು. ಅಂಬೇಡ್ಕರಿಲ್ಲದ ಸಂವಿಧಾನ ಶಾಸಕಾಂಗ ಸಭೆ ಅಪ್ರಯೋಜಕವೆಂದು ಭಾವಿಸಿದ ಮಧ್ಯಾಂತರ ಸರ್ಕಾರ ವಿಧಿಯಿಲ್ಲದೆ ಚುನಾಯಿಸಿ ಬರಮಾಡಿಕೊಂಡಿತು. ಕೇವಲ ಸದಸ್ಯರಾಗಿದ್ದುಕೊಂಡು ದಲಿತರ ಮತ್ತು ಇತರ ಶೋಷಿತರ ವರ್ಗಗಳ ಹಿತಾಸಕ್ತಿಯನ್ನು ಕಾಪಾಡಲು ಮುಂದಾಗಿದ್ದ ಅವರಿಗೆ ದೇಶದ ಸಮಗ್ರತೆಯನ್ನು ಪ್ರತಿಬಿಂಬಿಸುವ ಮಹತ್ವದ ಹೊರೆ ಅವರ ಹೆಗಲ ಮೇಲಿತ್ತು.

28 ಜನ ದಲಿತ ಪ್ರತಿನಿಧಿಗಳ ಪೈಕಿ ಡಾ. ಬಾಬೂ ಜಗಜೀವನರಾಮ್ ಕೂಡ ಅಗ್ರಮಾನ್ಯ ಸ್ಥಾನದಲ್ಲಿ ಗುರುತಿಸಿಕೊಂಡಿದ್ದವರು. ಅವರು ಸಂವಿಧಾನದ ಐದು ಪ್ರಮುಖ ಸ್ಥಾಯಿ ಸಮಿತಿಗಳ ಸದಸ್ಯರಾಗಿ ತಮ್ಮ ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿದರು.

ಡಾ. ಬಾಬೂ ಜಗಜೀವನ್ ರಾಮ್ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ರವರು ಸದಸ್ಯರಾಗಿದ್ದ ಸಂವಿಧಾನ ರಚನಾ ಸ್ಥಾಯಿ ಸಮಿತಿಗಳು

ಡಾ. ಬಾಬೂ ಜಗಜೀವನ್ ರಾಮ್ ಸದಸ್ಯರಾಗಿ ಆಯ್ಕೆಯಾಗಿದ್ದ ರಾಜ್ಯಾಂಗ ಸಭೆಯ ಸದನ ಸ್ಥಾಯಿ ಸಮಿತಿಗಳು

  1. ಕಾನೂನುಗಳ ನಿಯಮಾವಳಿ ಸಮಿತಿ
  2. ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರ ಹಾಗೂ ಬುಡಕಟ್ಟು ಮತ್ತು ಹೊರತುಪಡಿಸಿದ ಸಲಹಾ ಸಮಿತಿ
  3. ಸಲಹಾ ಸಮಿತಿಯ ಉಪ ಸಮಿತಿ; ಅಲ್ಪಸಂಖ್ಯಾತರ ಸಮಿತಿ
  4. ಸಂಯುಕ್ತ ರಾಜ್ಯಾಂಗ ಸಮಿತಿ
  5. ಹೊರತು ಪಡಿಸಿದ ಮತ್ತು ಭಾಗಶಃ ಹೊರತುಪಡಿಸಿದ ಪ್ರದೇಶಗಳ ಉಪಸಮಿತಿ
  6. ಡಾ. ಬಿ.ಆರ್ ಅಂಬೇಡ್ಕರ್ ಸದಸ್ಯರಾಗಿ ಆಯ್ಕೆಯಾಗಿದ್ದ ರಾಜ್ಯಾಂಗ ಸಭೆಯ ಸದನ ಸ್ಥಾಯಿ ಸಮಿತಿಗಳು
  7. ರಾಜ್ಯಾಂಗ ಸಭೆಯ ಮೇಲಿನ ಕಾರ್ಯಗಳ ಸಮಿತಿ
  8. ರಾಷ್ಟ್ರೀಯ ಧ್ವಜ ಹಂಗಾಮಿ ಸಮಿತಿ
  9. ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರ ಹಾಗೂ ಬುಡಕಟ್ಟು ಮತ್ತು ಹೊರತುಪಡಿಸಿದ ಸಲಹಾ ಸಮಿತಿ
  10. ಮೂಲಭೂತ ಹಕ್ಕುಗಳ ಉಪಸಮಿತಿ
  11. ಸಲಹಾ ಸಮಿತಿಯ ಉಪ ಸಮಿತಿ; ಅಲ್ಪಸಂಖ್ಯಾತರ ಸಮಿತಿ
  12. ಸಂಯುಕ್ತ ರಾಜ್ಯಾಂಗ ಸಮಿತಿ
  13. ಶ್ರೇಷ್ಠ ನ್ಯಾಯಾಲಯದ ಹಂಗಾಮಿ ಸಮಿತಿ.

ಬಾಬೂಜಿ ಗಾಂಧೀವಾದವನ್ನು ಎಂದೂ ಕುರುಡಾಗಿ ಆರಾಧಿಸಿದವರಲ್ಲ. ಅಸ್ಪೃಶ್ಯತೆಯ ಆಚರಣೆಯ ವಿಚಾರದಲ್ಲಿ ಅವರೆಂದೂ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡವರಲ್ಲ. ಒಮ್ಮೆ ಅವರು ಹಿಂದೂ ಮಹಾಸಭಾದ ಬಿಹಾರದ ಘಟಕ ಅಸ್ಪೃಶ್ಯತಾ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಅವರ ನೆಚ್ಚಿನ ರಾಜಕೀಯ ಗುರುವಾಗಿದ್ದ ಡಾ. ರಾಜೇಂದ್ರ ಪ್ರಸಾದರು ಸ್ವತಃ ಭಾಗವಹಿಸಿದ್ದರು. ಆ ಸಮಯದಲ್ಲಿ ಸಂಪ್ರದಾಯವಾದಿ ಹಿಂದೂಗಳೆಲ್ಲಾ ಬೆಚ್ಚಿ ಬೀಳುವಂತಹ ಮಾತುಗಳನ್ನಾಡಿ ಬಿಟ್ಟರು. ಅದೇನೆಂದರೆ ‘ನಿಮ್ಮ ಈ ನಯವಂಚಕತನದಿಂದ ಅಸ್ಪೃಶ್ಯತೆಯ ಕಳಂಕವನ್ನು ತೊಡೆಯಲಾರಿರಿ. ನಿಮ್ಮಲ್ಲಿ ಸವರ್ಣೀಯತೆ ಎಲ್ಲಿಯವರೆಗೆ ಜಾಗೃತವಾಗಿರುತ್ತದೆಯೋ ಅಲ್ಲಿಯವರೆಗೂ ಅಸ್ಪೃಶ್ಯತೆಯನ್ನು ಉಚ್ಛಾಟಿಸಲು ಸಾಧ್ಯವಿಲ್ಲ.

ನಿಮ್ಮಲ್ಲಿ ಒಬ್ಬರಾದರೂ ನಿದರ್ಶನ ಪೂರಕವಾಗಿಯಾದರೂ, ಅಸ್ಪೃಶ್ಯತೆಯನ್ನು ತೊಲಗಿಸಲು ಯಾವುದಾದರೊಂದು ಕ್ರಮ ಕೈಗೊಂಡಿರುವಿರಾ ಎಂದು ಕೇಳುತ್ತೇನೆ. ಈಗಿನ್ನೂ ಉಪದೇಶ, ಭಾಷಣ, ವ್ಯಾಖ್ಯಾನ ಸಾಕು. ನಿಮ್ಮ ವೈಯಕ್ತಿಕ ಹಾಗೂ ಸಾಮೂಹಿಕ ವರ್ತನೆಯಿಂದ ಅಸ್ಪೃಶ್ಯತೆಯ ನಿರ್ಮೂಲನಾ ಕಾರ್ಯಕ್ರಮಗಳನ್ನು ಕಾರ್ಯಗತ ಮಾಡಿ ತೋರಿಸಿರಿ’. ಎಂದು ತಮ್ಮ ನೇರನುಡಿಗಳಿಂದ ಚುಚ್ಚಿ ಹಿಂದೂ ಸಮಾಜವನ್ನು ಎಚ್ಚರಿಸಿದರು.

ಅವರು ಸಂವಿಧಾನದ ಅಲ್ಪಸಂಖ್ಯಾತರ ಉಪಸಮಿತಿಗೆ ಸದಸ್ಯರಾಗಿದ್ದುಕೊಂಡು ಸಂವಿಧಾನದಲ್ಲಿ ಸೇರ್ಪಡೆಯಾಗಬೇಕಿದ್ದಂತಹ ಅವಕಾಶ ಮತ್ತು ರಕ್ಷಣಾ ಸ್ವರೂಪಗಳ ಬಗ್ಗೆ ಸುಧೀರ್ಘವಾದ ಲಿಖಿತ ಮನವಿಯೊಂದನ್ನು ಸಮರ್ಪಿಸಿದರು. ಇದರಲ್ಲಿ ದಲಿತರು ಮತ್ತು ಇತರ ಶೋಷಿತರು ಪಡೆದುಕೊಳ್ಳಬೇಕಾದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ, ನ್ಯಾಯಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಬಗೆಗೆ ಸವಿವರವಾಗಿ ಚರ್ಚಿಸಿ ಉಲ್ಲೇಖಿಸಿದರು.

ಅವರು ಶಾಸಕಾಂಗ ಸಭೆಯಲ್ಲಿ ಅಸ್ಪೃಶ್ಯತೆಯ ಕುರಿತು ಮಂಡಿಸಿದಾಗ ಕೇವಲ ಹಿಂದೂ ಧರ್ಮೀಯರು ಮಾತ್ರ ಆಚರಿಸುವ ಅಸ್ಪೃಶ್ಯತೆಗೆ ಕಡಿವಾಣ ಹಾಕುವುದರ ಬದಲು ಭಾರತೀಯರೆಲ್ಲರೂ ಆಚರಿಸುವ ಭಿನ್ನ ಬಗೆಯ ಅಸ್ಪೃಶ್ಯತೆಯನ್ನು ತೊಡೆದುಹಾಕಲು ಆಗ್ರಹಿಸಿದರು. ಈ ಉದ್ದೇಶಕ್ಕಾಗಿ ಅವರು ಮೂರು ನಿರ್ಣಾಯಕಗಳನ್ನು ವಿಧಿಸಲು ಕೋರಿದ್ದರು. ಅವುಗಳೆಂದರೆ;

  • ಯಾವುದೇ ಭಿನ್ನತೆ ಅಥವಾ ತಾರತಮ್ಯವಿಲ್ಲದೆ ಹಿಂದೂ ಸಮಾಜದ ಎಲ್ಲಾ ಜಾತಿಗಳಿಗೆ ಎಲ್ಲಾ ಹಿಂದೂ ದೇವಾಲಯಗಳು ತೆರೆದಿರಬೇಕು(ಪ್ರವೇಶವಿರಬೇಕು)
  • ಯಾವುದೇ ಜಾತಿಯವರಿಗೆ ಸೇರಿದ ನೀರು ಅಥವಾ ಆಹಾರಗಳು ಹಿಂದೂ ಸಮಾಜದ ಯಾವುದೇ ಇತರ ಜಾತಿಯವರು ಮುಟ್ಟಿದ ಮಾತ್ರಕ್ಕೆ ಮೈಲಿಗೆಯಾಗತಕ್ಕದ್ದಲ್ಲ.
  • ಹಿಂದೂಗಳು ಯಾವುದೇ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಎಲ್ಲಾ ಜತಿಯ ಹಿಂದೂಗಳು ಯಾವುದೇ ಭೇದವಿಲ್ಲದೆ ಭಾಗವಹಿಸುವಂತಾಗಬೇಕು.

ಬಹುಶಃ ಈ ಮೂರು ಅಂಶಗಳ ಮೇಲೆ ಬಾಬೂಜಿಯವರು ಅಸ್ಪೃಶ್ಯತೆಯ ನಿರ್ಮೂಲನೆಯ ವಿಚಾರದಲ್ಲಿ ಅಂಬೇಡ್ಕರ್‌ರಂತೆಯೇ ತಮ್ಮ ಭಾವನೆಗಳನ್ನು ಘನೀಕರಿಸಿಕೊಂಡಿದ್ದವರು. ಅವರು ಅತ್ಯಂತ ಪ್ರಾಯೋಗಿಕವಾಗಿದ್ದಂತಹ ಅನುಭವದ ವಿಚಾರಗಳನ್ನು ಸಂವಿಧಾನದ ರಚನಾ ಸಂದರ್ಭದಲ್ಲಿ ಧಾರೆಯೆರೆದರು. ಅನೇಕ ಸಂಧರ್ಬದಲ್ಲಿ ಬಾಬೂಜಿ ಅಂಬೇಡ್ಕರ್ ನಿರಂತರ ಹೋರಾಟಗಳಿಗೆ ಮೌನ ಬೆಂಬಲಿಗರಾಗಿದ್ದರು.ಉದ್ಯೋಗ ಮೀಸಲಾತಿಯಲ್ಲಿ ಬಡ್ತಿಯನ್ನು ದೊರಕಿಸಿಕೊಟ್ಟರು .

ಮೀಸಲಾತಿ ಮೇಲಿನ ಚರ್ಚೆಗಳು ಸಂವಿಧಾನ ರಚನಾ ಸಂದರ್ಭದಲ್ಲಿ ಬಂದಾಗ ಅನೇಕ ಸವರ್ಣೀಯರು ಇದರ ಅಳವಡಿಕೆಯನ್ನು ವಿರೋಧಿಸಿದರು. ಮತ್ತೆ ಕೆಲವರು ಇದನ್ನು ಸಂವಿಧಾನದ ಅಳವಡಿಕೆಯ ನಂತರ ಕೇವಲ ಆಡಳಿತಾತ್ಮಕ ಕಾನೂನುಗಳಿಂದ ದೊರಕಿಸಿಕೊಡಬಹುದೆಂಬ ಸಲಹೆಗಳನ್ನು ನೀಡಿದರು. ಆದರೆ ಅಲ್ಪಸಂಖ್ಯಾತರ ಉಪಸಮಿತಿಯ ಸದಸ್ಯರಾಗಿದ್ದ ಬಾಬೂಜಿ ಇದನ್ನು ಬಲವಾಗಿ ತಿರಸ್ಕರಿಸಿದರು.

ಇದರ ಬದಲು ಮೀಸಲಾತಿಯನ್ನು 40 ವರ್ಷಗಳ ಕಾಲಾವಧಿಗೆ ನಿಗಧಿಪಡಿಸಬೇಕೆಂದು ಸಭೆಯ ಮುಂದೆ ಸೂಚಿಸಿದರು. ಇದರ ಬದಲು ಅಂಬೇಡ್ಕರ್ ಪ್ರತಿ 10 ವರ್ಷಕ್ಕೊಮ್ಮೆ ನವೀಕರಿಸಿಕೊಳ್ಳಬೇಕೆಂಬ ಸಲಹೆಯನ್ನು ನೀಡಿದರು. ಇದರ ಒಳ ಮರ್ಮವನ್ನು ಅರಿ ಬಾಬೂಜಿ ದಲಿತರ ಸಂಘಟನಾ ಶಕ್ತಿ ಇಮ್ಮಡಿಗೊಳಿಸುತ್ತದೆಂಬ ಆಶಾಭಾವನೆಯನ್ನು ಹೊಂದಿದ್ದರು.

ಅಂಬೇಡ್ಕರ್ ಪರಿನಿರ್ವಾಣದ ನಂತರ ಅವರ ಸಂವಿಧಾನವನ್ನು ಕಾಯಬೇಕಾದ ಜವಬ್ದಾರಿ ಮತ್ತು ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆಯು ಬಾಬೂಜಿಯವರ ಮೇಲಿತ್ತು. ಉದ್ಯೋಗದಲ್ಲಿ ಪರಿಶಿಷ್ಠರಿಗೆ ಮೀಸಲಾತಿಯ ಅವಕಾಶವಿದ್ದರೂ ಅದರೊಳಗೆ ಬಡ್ತಿಗೆ ಅವಕಾಶವಿರಲಿಲ್ಲ. ಅವರು 1962 ರಲ್ಲಿ ರೈಲ್ವೆ ಮಂತ್ರಿಗಳಾಗಿದ್ದಾಗ ಪ್ರಕರಣವೊಂದು ನ್ಯಾಯಾಲಯದ ಮೆಟ್ಟಿಲೇರಿತು. ಕೆ. ರಂಗಾಚಾರಿಯೆದುರು ರೈಲ್ವೆ ಜನರಲ್ ಮ್ಯಾನೇಜರ್ ತೀರ್ಪಿನಡಿ ಬಾಬೂಜಿ ಇಡೀ ಸಮಸ್ತ ದಲಿತ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸಂಸತ್ತಿನ ಒಳಗೆ ಮತ್ತು ಹೊರಗೆ ಸಂಘಟನಾತ್ಮಕ ಹೋರಾಟ ಆರಂಭಿಸಿದರು.

ಇವರ ತುಡಿತವನ್ನರಿತ ಅಂದಿನ ಕಾಂಗ್ರೇಸ್ ಸರ್ಕಾರ ಉದ್ಯೋಗ ಮೀಸಲಾಯಿತಿಯಲ್ಲಿ ಬಡ್ತಿಯನ್ನು ನೀಡುವ ಸಲುವಾಗಿ ಸಂವಿಧಾನದ ಅದರ ಪರಿಚ್ಛೇದಗಳಿಗೆ ಅಗತ್ಯ ತಿದ್ದುಪಡಿಯನ್ನು ತರಲು ಮುಂದಾಯಿತು. ಬಹುಶಃ ಇಂತಹ ಅವಕಾಶವನ್ನೇನಾದರೂ ಬಾಬೂಜಿ ಸದುಪಯೋಗಪಡಿಸಿಕೊಳ್ಳದೆ ಹೋಗಿದ್ದರೆ ಮೀಸಲಾತಿ ಪಡೆಯುತ್ತಿರುವ ಎಲ್ಲಾ ಜಾತಿಯ ಉದ್ಯೋಗಸ್ಥರಿಂದು ಮುಂಬಡ್ತಿ ಮಡೆಯಲು ಸಾಧ್ಯವಾಗುತ್ತಿರಲಿಲ್ಲ. ಅವರ ಸಮಯೋಚಿತ ನಿರ್ಧಾರದ ಫಲವಾಗಿ ಇಂದು ದಲಿತರು ಮತ್ತು ಹಿಂದುಳಿದವರು ಮೀಸಲಾಯಿತಿಯ ಹೆಚ್ಚಿನ ಫಲಗಳನ್ನು ಅನುಭವಿಸುವಂತಾಗಿದೆ.

ಗ್ರಂಥ ಋಣ

  • ಬಾಬು ಜಗಜೀವನರಾಮ್ – ಪ್ರೊ.ಟಿ.ಯಲ್ಲಪ್ಪ ಬೂತಯ್ಯ
  • ಬಾಬೂಜಿ ಚಿಂತನ ಮಂಥನ – ಸಂಪಾದಕ ಮೈಲಹಳ್ಳಿ ರೇವಣ್ಣ- ಪ್ರಸಾರಾಂಗ, ಮೈಸೂರು 2010
  • ಡಾ.ಬಾಬುಜಗಜೀವನರಾಮ್ ಸಾಮಾಜಿಕ ಬದಲಾವಣೆಯ ಸಂಕೇತ ಮತ್ತು ಒಂದು ಕಾಲಘಟ್ಟದ ವ್ಯಕ್ತಿ – ಸಂಪಾದಕ ಅಥವಾ ಹೆಚ್. ವೆಂಕಟೇಶ್ ಇಳಾ ಮುದ್ರಣ, ಬೆಂಗಳೂರು 2009
  • ಭಾರತದ ಜಾತಿ ಪದ್ಧತಿಯ ಸವಾಲುಗಳು – ಪ್ರೊ.ಗೌರಮ್ಮ, ಪ್ರೊ. ಯಲ್ಲಪ್ಪ ಬೂತಯ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ

Published

on

ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಮಹತ್ವದ ಜವಾಬ್ದಾರಿಯನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಿದೆ.

ಈ ನೇಮಕ ಕೇವಲ ಸಂಘಟನಾತ್ಮಕ ಬದಲಾವಣೆಯಲ್ಲ. ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ದಿಕ್ಕು, ಪಕ್ಷದ ಒಳಾಂಗಣ ಸಮತೋಲನ ಮತ್ತು ಭವಿಷ್ಯದ ಚುನಾವಣಾ ತಂತ್ರಗಳಿಗೆ ಇದು ಪ್ರಮುಖ ಸೂಚನೆಯಾಗಿದೆ. ಹಲವು ದಶಕಗಳ ರಾಜಕೀಯ ಅನುಭವ, ಸಂಘಟನಾ ಕೌಶಲ್ಯ ಮತ್ತು ಹೈಕಮಾಂಡ್‌ಗೆ ನಿಕಟ ಸಂಪರ್ಕ ಹೊಂದಿರುವ ಹರಿಪ್ರಸಾದ್ ಅವರು ಈಗ ರಾಜ್ಯ ಕಾಂಗ್ರೆಸ್‌ನ ನೂತನ ಸಾರಥಿಯಾಗಿ ಹೊರಹೊಮ್ಮಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ

ಬಿ.ಕೆ. ಹರಿಪ್ರಸಾದ್ ಅವರು 1954ರ ಜುಲೈ 29ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎ. ಕೆಂಪಯ್ಯ ಹಾಗೂ ತಾಯಿ ಕೆ. ಗುಣಾವತಿ. ಬಾಲ್ಯದಿಂದಲೇ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳತ್ತ ಆಸಕ್ತಿ ಹೊಂದಿದ್ದ ಅವರು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿಯೇ ಕಾಂಗ್ರೆಸ್ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡ ಅವರು ಮುಂದೆ ಪೂರ್ಣಾವಧಿ ರಾಜಕಾರಣಿಯಾಗಿ ಬೆಳೆದರು.

ವಿದ್ಯಾರ್ಥಿ ರಾಜಕಾರಣದಿಂದ ರಾಷ್ಟ್ರೀಯ ಮಟ್ಟದ ನಾಯಕತ್ವದವರೆಗೆ

ಹರಿಪ್ರಸಾದ್ ಅವರ ರಾಜಕೀಯ ಬದುಕು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳಿಂದ ಆರಂಭವಾಯಿತು. ಸಂಘಟನಾ ರಾಜಕಾರಣದಲ್ಲಿ ತೋರಿದ ಸಾಮರ್ಥ್ಯದಿಂದ ಅವರು ಶೀಘ್ರದಲ್ಲೇ ಪಕ್ಷದ ಹಿರಿಯ ನಾಯಕರ ಗಮನ ಸೆಳೆದರು.

ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಅವರು, ಹಲವು ರಾಜ್ಯಗಳ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಹೈಕಮಾಂಡ್‌ನೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ನಾಯಕರಲ್ಲಿ ಹರಿಪ್ರಸಾದ್ ಪ್ರಮುಖರು ಎಂದು ಪರಿಗಣಿಸಲಾಗುತ್ತದೆ.

ಬಿ.ಕೆ. ಹರಿಪ್ರಸಾದ್ ಅವರು ಹಲವು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1990ರಿಂದಲೇ ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಾ ಬಂದಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಹಲವು ವಿಷಯಗಳ ಬಗ್ಗೆ ಧ್ವನಿ ಎತ್ತಿದ ಅವರು ಸಂಸತ್ತಿನ ಚರ್ಚೆಗಳಲ್ಲಿ ಗಮನ ಸೆಳೆದಿದ್ದರು.

ಅವರು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪೈಪೋಟಿ ನಡೆಸಿದ್ದರು. ಸೋಲು ಕಂಡಿದ್ದರೂ ರಾಷ್ಟ್ರೀಯ ರಾಜಕೀಯದಲ್ಲಿ ಅವರ ಸ್ಥಾನಮಾನ ಮತ್ತಷ್ಟು ಬಲವತ್ತಾಯಿತು.

1999ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಜಯ ಸಾಧಿಸಲು ಸಾಧ್ಯವಾಗದಿದ್ದರೂ ಅವರು ಕಾಂಗ್ರೆಸ್‌ನ ಪ್ರಮುಖ ಮುಖವಾಗಿ ಗುರುತಿಸಿಕೊಂಡರು.

ಸಂಘಟನಾ ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಕಾರಣ, ಚುನಾವಣಾ ಗೆಲುವಿಗಿಂತ ಪಕ್ಷ ನಿರ್ಮಾಣದಲ್ಲಿ ಅವರ ಪಾತ್ರವೇ ಹೆಚ್ಚು ಗಮನ ಸೆಳೆಯಿತು.

ಕಾಂಗ್ರೆಸ್ ಸಂಘಟನೆಯಲ್ಲಿ ‘ಟಾಸ್ಕ್ ಮಾಸ್ಟರ್’

ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್ ಅವರನ್ನು ಸಂಘಟನಾ ತಜ್ಞ ಎಂದು ಕರೆಯಲಾಗುತ್ತದೆ. ಪಕ್ಷ ಎದುರಿಸಿದ ಸಂಕಷ್ಟದ ಸಂದರ್ಭಗಳಲ್ಲಿ ಹಲವು ರಾಜ್ಯಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘಟನೆಯನ್ನು ಬಲಪಡಿಸಿದ ಅನುಭವ ಅವರಿಗೆ ಇದೆ.

ಇತ್ತೀಚಿನ ಅವಧಿಯಲ್ಲಿ ಅವರು ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ರಾಜಕೀಯದ ಸೂಕ್ಷ್ಮ ಸಮೀಕರಣಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸುವ ಶೈಲಿ ಅವರ ವಿಶೇಷತೆ ಎಂದು ಪಕ್ಷದ ನಾಯಕರು ಹೇಳುತ್ತಾರೆ.

ಕರ್ನಾಟಕ ಕಾಂಗ್ರೆಸ್‌ನಲ್ಲಿ ಹರಿಪ್ರಸಾದ್ ಅವರು ಹಲವು ದಶಕಗಳಿಂದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ಸಂದರ್ಭದಲ್ಲೂ ಅವರು ಸಮತೋಲನ ಸಾಧಿಸುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರು, 2022 ರಿಂದ 2023ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ನೀತಿಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವ ಮೂಲಕ ಅವರು ಗಮನ ಸೆಳೆದಿದ್ದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ

2026ರಲ್ಲಿ ಕರ್ನಾಟಕ ರಾಜಕೀಯದಲ್ಲಿ ನಡೆದ ನಾಯಕತ್ವ ಬದಲಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡರು. ಇದರ ಪರಿಣಾಮವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪಕ್ಷದೊಳಗೆ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದರೂ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿತು.

ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ಸಂಘಟನಾ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಿದೆ. ಪಕ್ಷದ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಹರಿಪ್ರಸಾದ್ ಅವರ ಅನುಭವ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಿಂದೆ ಹಲವು ರಾಜಕೀಯ ಕಾರಣಗಳಿವೆ. ಮೊದಲನೆಯದಾಗಿ, ಅವರು ಯಾವುದೇ ಒಂದು ಗುಂಪಿಗೆ ಸೀಮಿತವಾಗದ ನಾಯಕ ಎಂಬ ಚಿತ್ರಣ ಹೊಂದಿದ್ದಾರೆ. ಎರಡನೆಯದಾಗಿ, ಸಂಘಟನಾ ಅನುಭವ ಅಪಾರವಾಗಿದೆ. ಮೂರನೆಯದಾಗಿ, ಹೈಕಮಾಂಡ್‌ಗೆ ಅತ್ಯಂತ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರು. ನಾಲ್ಕನೆಯದಾಗಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಾಮರ್ಥ್ಯ ಅವರಿಗಿದೆ ಎಂದು ಕಾಂಗ್ರೆಸ್ ನಾಯಕತ್ವ ನಂಬಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಅವರ ಮುಂದಿರುವ ಸವಾಲುಗಳು ಸಣ್ಣದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸಂಘಟನೆಯನ್ನು ಸದೃಢವಾಗಿಡುವುದು ದೊಡ್ಡ ಜವಾಬ್ದಾರಿ. ಕಾರ್ಯಕರ್ತರ ಅಸಮಾಧಾನ, ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡ, ಪ್ರಾದೇಶಿಕ ಸಮೀಕರಣಗಳು ಮತ್ತು ಜಾತಿ ಆಧಾರಿತ ರಾಜಕೀಯ ಬೇಡಿಕೆಗಳನ್ನು ಸಮತೋಲನಗೊಳಿಸಬೇಕಾಗಿದೆ.

ಇದರ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಸಂಘಟನೆಯನ್ನು ನಿರಂತರ ಚಟುವಟಿಕೆಯಲ್ಲಿ ಇರಿಸುವುದು ಅವರ ಪ್ರಮುಖ ಗುರಿಯಾಗಲಿದೆ.

ಹರಿಪ್ರಸಾದ್ ಅವರು ಹೆಚ್ಚು ಪ್ರಚಾರಪ್ರಿಯ ರಾಜಕಾರಣಿಯಲ್ಲ. ಸಂಘಟನೆಯೊಳಗೆ ಕೆಲಸ ಮಾಡುವ ನಾಯಕ ಎಂಬ ಹೆಗ್ಗಳಿಕೆ ಅವರಿಗೆ ಇದೆ. ಕಾರ್ಯಕರ್ತರೊಂದಿಗೆ ನೇರ ಸಂಪರ್ಕ, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಮತ್ತು ತಾಳ್ಮೆಯ ರಾಜಕೀಯ ಅವರ ಕಾರ್ಯಶೈಲಿಯ ಮುಖ್ಯ ಲಕ್ಷಣಗಳು.

ಅವರ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳು ಬಂದಿದ್ದರೂ ಪಕ್ಷದ ಮೇಲಿನ ನಿಷ್ಠೆ ಪ್ರಶ್ನಾತೀತವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಲವು ಬಾರಿ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿದೆ.

ರಾಜಕೀಯದ ಜೊತೆಗೆ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿರುವ ಹರಿಪ್ರಸಾದ್ ಅವರು ಉಷಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಬ್ಬ ಪುತ್ರಿಯಿದ್ದಾರೆ. ಕುಟುಂಬ ಜೀವನವನ್ನು ರಾಜಕೀಯದಿಂದ ಸಾಧ್ಯವಾದಷ್ಟು ದೂರ ಇಡುವ ನಾಯಕ ಎಂಬ ಹೆಸರನ್ನು ಅವರು ಗಳಿಸಿದ್ದಾರೆ.

ಭವಿಷ್ಯದ ರಾಜಕೀಯ ಪಾತ್ರ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಹರಿಪ್ರಸಾದ್ ಅವರ ರಾಜಕೀಯ ಜೀವನದ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮನ್ವಯ ಸಾಧಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ತಂತ್ರ ರೂಪಿಸುವುದು, ಕಾರ್ಯಕರ್ತರ ಬಲವರ್ಧನೆ, ಚುನಾವಣಾ ಸಿದ್ಧತೆ ಮತ್ತು ಹೈಕಮಾಂಡ್‌ನೊಂದಿಗೆ ಸಮನ್ವಯ ಸಾಧಿಸುವ ಪ್ರಮುಖ ಹೊಣೆಗಾರಿಕೆ ಅವರ ಮೇಲಿದೆ. ಈ ಎಲ್ಲ ಸವಾಲುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ಭವಿಷ್ಯ ಬಹುಮಟ್ಟಿಗೆ ಅವಲಂಬಿತವಾಗಿದೆ.

ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಸಂಘಟನೆಯಲ್ಲಿ ದುಡಿದಿರುವ ಬಿ.ಕೆ. ಹರಿಪ್ರಸಾದ್ ಇಂದು ಕರ್ನಾಟಕ ಕಾಂಗ್ರೆಸ್‌ನ ಅತ್ಯುನ್ನತ ಸಂಘಟನಾ ಹುದ್ದೆಯನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿ ರಾಜಕಾರಣದಿಂದ ಆರಂಭವಾದ ಅವರ ಪಯಣ ರಾಜ್ಯಸಭೆ, ರಾಷ್ಟ್ರೀಯ ಸಂಘಟನೆ, ವಿಧಾನ ಪರಿಷತ್ ಮತ್ತು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನವರೆಗೆ ತಲುಪಿದೆ.

ಅನುಭವ, ಸಂಘಟನಾ ಕೌಶಲ್ಯ, ರಾಜಕೀಯ ಪ್ರೌಢಿಮೆ ಮತ್ತು ಪಕ್ಷದ ಮೇಲಿನ ನಿಷ್ಠೆ ಎಂಬ ನಾಲ್ಕು ಅಂಶಗಳು ಅವರ ರಾಜಕೀಯ ವ್ಯಕ್ತಿತ್ವದ ಪ್ರಮುಖ ಗುರುತುಗಳಾಗಿವೆ. ಕರ್ನಾಟಕ ಕಾಂಗ್ರೆಸ್ ಹೊಸ ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ, ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವ ಪಕ್ಷಕ್ಕೆ ಹೊಸ ಶಕ್ತಿ ತುಂಬುತ್ತದೆಯೇ ಎಂಬುದನ್ನು ರಾಜ್ಯದ ರಾಜಕೀಯ ಕುತೂಹಲದಿಂದ ಗಮನಿಸುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending