ಸಿನಿ ಸುದ್ದಿ
ಅತಿಲೋಕ ಸುಂದರಿ ಸಂದರ್ಶನ : ಸೆಲಬ್ರಿಟಿ ಲೋಕದ BG ಈಗ ಫುಲ್ ಬಿಝಿ..!
ಅಂತರಾಷ್ಟ್ರೀಯ ಸೆಲೆಬ್ರಿಟಿ ಲೋಕದಲ್ಲಿ BG ಎಂಬ ಹೆಸರು ಉಲ್ಲೇಖಿಸಿದರೆ ಜನ ನಿಬ್ಬೆರಗಾಗುತ್ತಾರೆ. ಆ ಎರಡಕ್ಷರದ ಹಿಂದಿರುವ ಮಹಾ ಶಕ್ತಿಯೇ ಭವ್ಯ ಗೌಡ. ಮಾಡೆಲಿಂಗ್, ಜಾಹೀರಾತು, ಬಣ್ಣದ ಜಗತ್ತಿನಲ್ಲಿ BG ಎಂದೇ ಖ್ಯಾತರಾಗಿರುವ ಭವ್ಯ ಅವರು ಅಕ್ಷರಶಃ ಈಗ ಬಿಝಿಯಾಗಿದ್ದಾರೆ.
ವಿಶ್ವ ಮಟ್ಟದ ಸೌಂದರ್ಯ ಸ್ಪರ್ಧೆಗಳಲ್ಲಿ ಭಾರತದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ಹಿರಿಮೆ ಅವರದು. ಮೂಲತಃ ಮಂಡ್ಯದವರಾದ ಭವ್ಯ ಗೌಡ ಅವರು ತವರಿಗೆ ಮರಳಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬುದು ಅವರ ಕನಸು. ಈಗಾಗಲೇ 34 ಜಾಗತಿಕ ಬ್ರ್ಯಾಂಡ್ಗಳಿಗೆ ರಾಯಭಾರಿಯಾಗಿರುವ 30500 ಫೋಟೊಶೂಟ್ಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಪರಿಯ ಫೋಟೊ ಶೂಟ್ಗಳಲ್ಲಿ ಪಾಲ್ಗೊಂಡು ಹೆಸರು ಮಾಡಿದ ವಿಶ್ವದ ಏಕೈಕ ವ್ಯಕ್ತಿ ಎಂದರೆ ಅದು ಭವ್ಯ ಗೌಡ. 2010ರಲ್ಲಿ ಯುಕೆಯಲ್ಲಿ ನಡೆದ (ಮಿಡ್ಲ್ಯಾಂಡ್ಸ್) ಮಿಸ್ ಅರ್ಥ್ ಬ್ಯೂಟಿ ಪೆಜೆಂಟ್ನಲ್ಲಿ ವಿಜೇತೆಯಾಗಿ ಹೊರಹೊಮ್ಮಿದ ಅವರು, ಗ್ರೇಟ್ ಬ್ರಿಟನ್ನ ಇತಿಹಾಸದಲ್ಲಿ ಈ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತಳಾದ ಮೊತ್ತ ಮೊದಲ ಭಾರತೀಯರೆಂಬ ಕೀರ್ತಿಗೆ ಭವ್ಯ ಅವರು ಪಾತ್ರರಾದರು. ಇದರ ಬೆನ್ನಿಗೇ ಅವರು ಮಿಸ್ ಇಂಗ್ಲೆಡ್ ಸೌಂದರ್ಯ ಸ್ಪರ್ಧೆಯ ಫೈನಲಿಸ್ಟ್ ಆಗಿ ವಿಶ್ವದ ಗಮನ ಸೆಳೆದರು.
2013ರಲ್ಲಿ ಮಿಸ್ ಕೊಲಂಬೊ ಕ್ವೀನ್ ಪಟ್ಟ ಕೂಡ ಧಕ್ಕಿಸಿಕೊಂಡ ಅವರು ಮಧುಮಗಳ ಫೋಟೊಗ್ರಫಿ (ಬ್ರೈಡಲ್ ಫೋಟೊಗ್ರಫಿ) ಮಾಡುವರ ಪಾಲಿನ ಜೀವಂತ ಗೊಂಬೆ ಎಂಬ ಅನ್ವರ್ಥನಾಮವಾಗಿ ಉಳಿದಿದ್ದಾರೆ. 2010ರಲ್ಲೇ ಇವರು ಮಿಸ್ ಕಾಮನ್ವೆಲ್ತ್ ಫೈನಲಿಸ್ಟ್ ಆಗಿಯೂ ಗಮನ ಸೆಳೆದಿದ್ದರು. ಇಂಥ ಏಳು ಪಟ್ಟಗಲನ್ನು ಅಲಂಕರಿಸಿರುವ ಅಂತರಾಷ್ಟ್ರೀಯ ಸೆಲಬ್ರಿಟಿಯೊಬ್ಬರು ಸುದ್ದಿದಿನದೊಟ್ಟಿಗೆ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಅವರ ಆಂತರ್ಯದ ದನಿಯನ್ನು ಹಿಡಿದಿಡುವ ಪ್ರಯತ್ನ ನಮ್ಮದು.
• ಭಾರತದ ಬಗೆಗಿನ ನಿಮ್ಮ ಕನಸುಗಳೇನು?
ಭಾರತವು 2030ರ ಹೊತ್ತಿಗೆ ಪೆಟ್ರೋಲಿಯಂ ಮುಕ್ತ ದೇಶವಾಗಿ ಹೊರಬೇಕೆಂಬುದು ನನ್ನ ಕನಸುಗಳಲ್ಲೊಂದು. ಇದಕ್ಕಾಗಿ ಕೇಂದ್ರ ಸರಕಾರವು ಬ್ಯಾಟರಿ ಚಾಲಿತ ವಾಹನಗಳಿಗೆ ಹೆಚ್ಚು ಪುಷ್ಠಿ ನೀಡುತ್ತಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಬೆಟೆರಾ ಎಂಬ ಈ ಯೋಜನೆಗೆ ನಾನು ರಾಯಭಾರಿಯಾಗಿದ್ದೇನೆ. ಈ ಮೂಲಕ ದೇಶದ ಮಹೋನ್ನತ ಕನಸುಗಳಲ್ಲಿ ಒಂದು ಭಾಗವಾಗಿರುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ.
• ವಿದೇಶದಲ್ಲೇ ಹೆಚ್ಚು ಇದ್ದರೂ ಕನ್ನಡ ಪ್ರೀತಿ ಹಾಗೆ ಇದೆಯೇ?
ಕನ್ನಡ ನನ್ನ ಮನಸ್ಸಿಗೆ ಹತ್ತಿರವಾದ ಭಾಷೆ. ಏಕೆಂದರೆ ಅದು ನನ್ನ ತಾಯಿ ಸಮಾನ. ಪ್ರಪಂಚವೆಲ್ಲಾ ಗೆದ್ದು ಬರಬಹುದು ಆದರೆ, ನನ್ನ ತಾಯ್ನಾಡಿಗೆ ಏನೂ ಸಾಧನೆ ಮಾಡಲಿಲ್ಲ ಎಂದರೆ ಏನು ಪ್ರಯೋಜನ. ಕನ್ನಡದವರಾಗಿ ನಾವು ನಮ್ಮ ಮಾತೃ ಭಾಷೆ ಮಾತನಾಡಲು ಯಾವಾಗಲೂ ಹಿಂದೆ ಮುಂದೆ ನೋಡಬಾರದು. ನಾನು ಹುಟ್ಟಿದ ಈ ಮಣ್ಣಿನಲ್ಲೇ ಏನಾದರೂ ಸಾಧಿಸಿ ತೋರಿಸಬೇಕೆಂಬ ಹಂಬಲ ನನ್ನದು.
• ನೀವು ರಾಯಭಾರಿಯಾಗಿರುವ ಬ್ರ್ಯಾಂಡ್ ಉತ್ಪನ್ನಗಳ ಬಗ್ಗೆ ಹೇಳಿ
ಈವರೆಗೆ ನಾನು 34 ಬ್ರಾಂಡ್ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದೇನೆ. ಇಂಗ್ಲೆಂಡ್ನ ಹಲವು ಕಂಪನಿಗಳೂ ಕೂಡ ನನ್ನನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದವು. ಬಕ್, ಬ್ರೆಸ್ಟ್ ಕ್ಯಾನ್ಸರ್ ಯುನೈಟೆಡ್ ಕಿಂಗ್ಡಂ, ಕ್ರಿಶ್ಚಿಯನ್ ಆಡಿಗರ್, ಗೆಸ್, ಡಿ ಆ್ಯಡ್ ಜಿ, ಶೀಶಾ ಗಾರ್ಡನ್, ನಿಯೋನ್ ನಿಯತಕಾಲಿಕೆ, ಏಷ್ಯನ್ ಬ್ರೈಡಲ್ ಆ್ಯಂಡ್ ಟ್ರೇನಿಂಗ್ ಅಕಾಡೆಮಿ, ಸೈಮಾ ಹೇರ್ ಆ್ಯಂಡ್ ಬ್ಯೂಟಿ, ಬ್ರಿಟೀಶ್ ರೆಡ್ ಕ್ರಾಸ್ ಇನ್ನು ಹಲವು ವಿದೇಶಿ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದೇನೆ.
• ನಿಮಗೆ ಖುಷಿ ಕೊಡುವ ಫೋಟೊ ಶೂಟ್ ಯಾವುದು ?
ನಾನು ಮಾಡಿರುವ ಎಲ್ಲ ಫೋಟೊ ಶೂಟ್ಗಳೂ ಖುಷಿಕೊಟ್ಟಿವೆ. ನಾನು ಕ್ಯಾಮೆರಾ ಫ್ರೆಂಡ್ಲಿ. ಯಾವ್ಯಾವ ಫೋಟೊಗಳಿಗೆ ಹೇಗೆ ಫೋಸ್ ಕೊಡಬೇಕೆಂಬುದು ಕರಗತವಾಗಿದೆ. ಹಾಗಾಗಿಯೇ 30500 ಫೋಟೊಶೂಟ್ಗಳನ್ನು ಯಶಸ್ವಿಯಾಗಿ ಮುಗಿಸಿದ್ದೇನೆ. ಅಂದಹಾಗೆ ನನ್ನ ಬ್ರೈಡಲ್ ಫೋಟೊಗಳು (ಮಧುಮಗಳ ಲುಕ್ನ ಫೋಟೊಗಳು) ಜಗತ್ಪ್ರಸಿದ್ಧಿಗಳಿಸಿವೆ. ಬ್ರೈಡಲ್ ಫೋಟೊಗ್ರಫಿಯಲ್ಲಿ ನಾನೊಂದು ವಿಷಯ ವಸ್ತುವೇ ಆಗಿದ್ದು, ನನ್ನ ಕುರಿತು ಅಧ್ಯಯನವೇ ನಡೆಯುತ್ತಿದೆ. ಕೆಲವು ಕ್ಲೈಂಟ್ಗಳು 9 ಬಾರಿ ನನ್ನ ಬಳಿಯೇ ಫೋಟೊ ಶೂಟ್ ಮಾಡಿಸಿದ ಉದಾಹರಣೆಯೂ ಇದೆ. ಕಾರಣ ನನ್ನ ವೃತ್ತಿಪರತೆ ಹಾಗೂ ಕೌಶಲ್ಯ. ಎಷ್ಟೊ ಜನರಿಗೆ ವೆಂಬ್ಲಿ ಸ್ಟೇಡಿಯಂಗೆ ಹೋಗಬೇಕೆಂಬ ಕನಸಿರುತ್ತದೆ. ನನಗೆ ಆ ಸ್ಟೇಡಿಯಂಗೆ ಕರೆಸಿ ಸನ್ಮಾನಿಸಿದರು ಇದು ಮರೆಯಲಾಗದ ಕ್ಷಣ.
• ಮಾಡೆಲಿಂಗ್ ಕ್ಷೇತ್ರದ ಆಯ್ಕೆ ಹೇಗೆ?
ಮಾಡೆಲಿಂಗ್ ಎಂಬುದು ಈಚೆಗೆ ನನಗೆ ಬಂದ ಆಸಕ್ತಿಯಲ್ಲ. ನಾನು ಚಿಕ್ಕಂದಿನಿಂದಲೂ ಮಾಡೆಲಿಂಗ್ ಹಾಗೂ ಬಣ್ಣದ ಜಗತ್ತಿನ ಬಗ್ಗೆ ಆಕರ್ಷಿತಳಾಗಿದ್ದೆ. 9ನೇ ತರಗತಿಯಲ್ಲಿದ್ದಾಗಲೇ ರಾಂಪ್ ವಾಕ್ನ ಚಾತುರ್ಯತೆ ನನಗೆ ಲಭಿಸಿತ್ತು. ಬರುಬರುತ್ತಾ ಅದು ನನ್ನ ವೃತ್ತಿಯಾಯಿತು. ಅದು ಇನ್ನೂ ಮುಂದಕ್ಕೆ ಹೋಗಿ ಅಂತರಾಷ್ಟ್ರೀಯ ಸೆಲಬ್ರಿಟಿಯಾಗಿ ಹೊರಹೊಮ್ಮಿದ್ದೇನೆ. ನಾನು ಈ ಸ್ಥಾನಕ್ಕೇರಿದ್ದೇನೆ ಎನ್ನುವುದಕ್ಕಿಂತ ಕನ್ನಡದ ಗೌಡತಿಯೊಬ್ಬಳು ಈ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯ ಬಗ್ಗೆ ನನಗೇ ಹೆಮ್ಮೆಯಾಗುತ್ತದೆ.
• ಶಿಕ್ಷಣ ಮತ್ತು ಫ್ಯಾಷನ್ ಲೋಕವನ್ನು ಸರಿದೂಗಿಸಿದ್ದು ಹೇಗೆ?
ನನಗೆ ಬಣ್ಣದ ಜಗತ್ತಿನ ಬಗ್ಗೆ ಎಷ್ಟು ವ್ಯಾಮೋಹವಿತ್ತೋ ಅದೇ ರೀತಿ ಶಿಕ್ಷಣದ ಬಗ್ಗೆಯೂ ಅಷ್ಟೇ ಆಕರ್ಷಣೆ ಇತ್ತು. ಬೆಂಗಳೂರು ವಿಶ್ವ ವಿದ್ಯಾಲಯದ ರ‌್ಯಾಂಕ್ ಹೋಲ್ಡರ್ ಆದ ನಾನು ಶಿಕ್ಷಣವನ್ನು ಎಂದಿಗೂ ನಿರ್ಲಕ್ಷಿಸಿಲ್ಲ. ಯುಕೆಯಲ್ಲಿ ಉನ್ನತ ಶಿಕ್ಷಣವನ್ನೂ ಪಡೆದೆ. ನಟನೆ ಕುರಿತು ಇನ್ನಷ್ಟು ಅಭ್ಯಾಸ ಮಾಡುವ ನಿಟ್ಟಿನಲ್ಲಿ ಕೋರ್ಸ್ ಕೂಡ ಮುಗಿಸಿದೆ. ನಾನು ಪರಿಣತಿ ಹೊಂದಿರುವ ನಟಿ, ರಂಗಭೂಮಿಯ ಎಲ್ಲಾ ಪಟ್ಟುಗಳು ಗೊತ್ತಿವೆ. ನಾನು ಯಾವುದೇ ಕ್ಷೇತ್ರದಲ್ಲಿ ಹೆಸರು ಮಾಡಿದರೂ ಶಿಕ್ಷಣವನ್ನು ನಿರ್ಲಕ್ಷಿಸಕೂಡದು ಎಂಬುದು ಅಪ್ಪ ಹೇಳಿದ ಮಾತು. ಅದನ್ನು ಚಾಚು ತಪ್ಪದೆ ಪಾಲಿಸಿದೆ. ಅವರ ಮಾತು ನನಗೆ ವೇದವಾಖ್ಯವಾಯಿತು.
• ಕಲಬೆರಕೆ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಿದ್ದು ಹೇಗೆ?
ನಾನು ಸಾಕಿದ್ದ ಮೀನೊಂದು ಸಾವಿಗೀಡಾಯಿತು. ನಾನು ಪ್ರೀತಿಯಿಂದ ಸಾಕಿದ್ದ ಮೀನದು. ಅದರ ಬೆಲೆ ಒಂದೂವರೆ ಲಕ್ಷ ರೂಪಾಯಿ. ಪ್ರೀತಿ ಮುಂದೆ ಹಣ ದೊಡ್ಡದಲ್ಲ. ಅದಕ್ಕೆ ನಿತ್ಯವೂ ಫೀಡ್ ಮಾಡುವ ಫುಡ್ ಖಾಲಿಯಾಗಿತ್ತು. ಅದರ ಬದಲಾಗಿ ಇನ್ನೊಂದು ಫುಡ್ ಪಾಕೆಟ್ ಅನ್ನು ನನ್ನ ಶಾಲೆಯ ಸಿಬ್ಬಂದಿಯೊಬ್ಬರು ಖರೀದಿಸಿ ತಂದು ಅದಕ್ಕೆ ತಿನ್ನಿಸಿದರು. ಅದಾದ ಕೆಲವೇ ದಿನಗಳಲ್ಲಿ ಮೀನು ಸಾವಿಗೀಡಾಯಿತು. ಅದಕ್ಕೆ ಕಾರಣ ಅದು ತಿಂದಿದ್ದ ಫುಡ್. ಅವಧಿ ಮುಗಿದ ಫುಡ್ ಪೊಟ್ಟಣದ ಮೇಲೆ ದಿನಾಂಕ ಬದಲಿಸಿ ಮಾರಾಟ ಮಾಡಲಾಗಿತ್ತು. ದೇಶದಲ್ಲಿ ಇಂಥ ಕಲಬೆರಕೆ ದಂದೆ ನಡೆಯುತ್ತಿರುವ ಬಗ್ಗೆ ಬೇಸರವಾಯಿತು. ಐ ಹೇಟ್ ಫೇಕ್ ಎಂಬ NGO ವೊಂದು ನಡೆಸಿದ ಕಲಬೆರಕೆ ಕುರಿತ ಜಾಗೃತಿಗೆ ನಾನು ರಾಯಭಾರಿಯಾದೆ. ಹೈದರಾಬಾದ್ನಲ್ಲಿ ಈ ಸಂಸ್ಥೆಯ ಕಾರ್ಯಕ್ರಮ ನಡೆಯಿತು. ನಟ ಮಹೇಶ್ ಬಾಬು ಅವರು ನನ್ನ ಜತೆ ಕಾರ‌್ಯಕ್ರಮದ ಮುಖ್ಯಸ್ಥರಾಗಿ ಪಾಲ್ಗೊಂಡಿದ್ದರು.
• ರಾಜಕಾರಣಿ ಮಗಳೆಂಬ ಪ್ರಭಾವ ನಿಮ್ಮ ಬೆಳವಣಿಗೆಗೆ ಸಹಕಾರಿಯಾಯಿತೇ?
ನಮ್ಮ ತಂದೆ ಪ್ರಭಾವಿ ರಾಜಕಾರಣಿ ಎಂಬ ಕಾರಣಕ್ಕೆ ನಾನು ರಾಜ್ಯದಲ್ಲಿ ಅಥವಾ ಈ ದೇಶದಲ್ಲಿ ಹೆಸರು ಮಾಡಬಹುದು. ವಿದೇಶದಲ್ಲಿ ಎಂಎನ್ಸಿ ಕಂಪನಿಗಳಿಗೆ ರಾಯಭಾರಿಯಾಗಬೇಕು ಎಂದರೆ ಅಲ್ಲಿ ನಮ್ಮಪ್ಪನ ಪ್ರಭಾವ ನಡೆಯುತ್ತಾ? ಖಂಡಿತ ಇಲ್ಲ. ನಾನು ಸ್ವಲ್ಪ ಸ್ವಾಭಿಮಾನಿ ನನ್ನದೇ ಸ್ವಂತ ಕಾಲಿನ ಮೇಲೆ ನಿಲ್ಲಬೇಕೆಂಬ ಹಂಬಲ ಇದೆ. ಹಾಗಾಗಿ ನನ್ನದಲ್ಲದ ಊರಿನಲ್ಲಿ ನಾನಾಗಿ ಬೆಳೆದೆ. ಅಪ್ಪನ ಬೆಂಬಲ ಇದೆಯೇ ಹೊರತು, ಪ್ರಭಾವ ಇಲ್ಲ.
• ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳದೆ ನೀವು ಆ ಕ್ಷೇತ್ರವನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ?
ಖಂಡಿತ ಇಲ್ಲ. ಏಕೆಂದರೆ ಸಿನಿಮಾ ಆಫರ್ ಗಳು ನನಗೆ ಇಂದು ನಿನ್ನೆ ಬಂದದ್ದಲ್ಲ. ಸಿನಿಮಾಗಳಲ್ಲಿ ನಟಿಸಬೇಕೆಂದು ಅವಕಾಶಗಳು ಸರಣಿಯಾಗಿ ನನ್ನನ್ನು ಹುಡುಕಿಕೊಂಡು ಬಂದವು. ಆದರೆ, ನಾನು ತುಂಬ ಚೂಸಿ. ನನಗೆ ತಕ್ಕನಾದ ಕತೆ, ಒಂದು ಶಕ್ತಿಯುತ ಪಾತ್ರವಿದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ?
• ಸದ್ಯ ಯಾವ ಆಫರ್ಗಳು ನಿಮ್ಮ ಕೈಲಿವೆ.
ನಾನು ನಾಯಕಿಯಾಗಿ ನಟಿಸುತ್ತಿರುವ ಬಾಲಿವುಡ್ ಸಿನಿಮಾ, ಚಿತ್ರೀಕರಣ ಹಂತದಲ್ಲಿದೆ. ಸಿನಿಮಾದ ಶೂಟಿಂಗ್ ಸದ್ಯ ಊಟಿಯಲ್ಲಿ ನಡೆಯುತ್ತಿದೆ.
• ರಾಜಕೀಯಕ್ಕೆ ಬರುವ ಆಸಕ್ತಿ ಇದೆಯೇ?
ಖಂಡಿತ ಇಲ್ಲ. ಜನ ಸೇವೆ ಮಾಡಲು ರಾಜಕೀಯ ಒಂದು ಕ್ಷೇತ್ರ ಹೌದು ಆದರೆ, ಅದೊಂದೇ ಕ್ಷೇತ್ರದಲ್ಲಿ ಜನ ಸೇವೆ ಮಾಡಲು ಅವಕಾಶ ಎಂದಲ್ಲ. ನಾನು ಹೊರಗಿನಿಂದಲೇ ಸೇವೆ ಮಾಡಲು ಇಚ್ಛಿಸುತ್ತೇನೆ.
• ನಿಮ್ಮ ಫಿಟ್ನೆಸ್‌ನ ಗುಟ್ಟೇನು?
ದಿನವೂ ಮೂರು ಗಂಟೆಗಳ ಕಾಲ ವರ್ಕ್ ಔಟ್ ಮಾಡುತ್ತೇನೆ. ನಿಯಮಿತ ಆಹಾರ, ಡಯೆಟ್ ಇವು ನನ್ನ ಆರೋಗ್ಯದ ಗುಟ್ಟು. ಸಣ್ಣ ಆಗಲು ಸಪ್ಲಿಮೆಂಟ್‌ಗಳನ್ನು ಸೇವಿಸುವುದಿಲ್ಲ.ನಿತ್ಯದ ಆಹಾರದಲ್ಲೇ ಕಂಟ್ರೋಲ್ ಮಾಡುತ್ತೇನೆ. ಟೆಕ್ವೆಂಡೊ, ಮಾರ್ಷಲ್ ಆರ್ಟ್ಸ್, 1300 ವರ್ಕ್ ಔಟ್‌ಗಳು ದಿನವೂ ಮಾಡುತ್ತೇನೆ. ಭರತ ನಾಟ್ಯ, ಏರೋಬಿಕ್ಸ್, ಸಾಲ್ಸಾ, ಸಂಬ ಮೊಂಬ ಮೊದಲಾದ ಡಾನ್ಸ್‌ಗಳು ನನ್ನ ಫಿಟ್‌ನೆಸ್ಟ್ ರಹಸ್ಯ. ಯೋಗದಿಂದ ನನ್ನಲ್ಲಿ ಧನಾತ್ಮಕ ಶಕ್ತಿ ತುಂಬಿದೆ. ರೋಪ್ ವ್ಯಾಯಾಮಗಳೂ ಕೂಡ ಮಾಡುತ್ತೇನೆ. ಬಾದಾಮಿ, ಗೋಡಂಬಿ ಮೊದಲಾದ ಐದು ನಟ್ಸ್‌ಗಳಿಂದ ದೇಹಕ್ಕೆ ಸಾಕಷ್ಟು ಎಣ್ಣೆ ಅಂಶ ಸಿಗುತ್ತದೆ. ಬ್ರೋಕ್ಲಿ ಗ್ರೀನ್ ಟೀ ನನ್ನ ಬದುಕನ್ನು ಬದಲಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
ಸುದ್ದಿದಿನ ಡೆಸ್ಕ್:ಹಲವಾರು ವರ್ಷಗಳ ಕಾಲ ಬಂಗಾಳಿ ಟೆಲಿವಿಷನ್ನಲ್ಲಿ ಕೆಲಸ ಮಾಡಿದ ನಂತರ ಮತ್ತು ನಂತರ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ನಂತರ, ಅಭಿನೇತಾ ಸುಶೋಭನ್ ಸೋನು ರಾಯ್ ಅವರು ‘ಟೇಕ್ ಕೇರ್ ಭಾಲೋಬಾಸ’ ಚಿತ್ರದ ಮೂಲಕ ಬಂಗಾಳಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ‘ಜಾಯ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಇದು ಸ್ನೇಹ, ಸಂಬಂಧಗಳು ಮತ್ತು ಕಾಲಾನುಕ್ರಮದಲ್ಲಿ ವಿಕಸನಗೊಳ್ಳುವ ಭಾವನೆಗಳ ಸುತ್ತ ಕೇಂದ್ರೀಕೃತವಾಗಿರುವ ಕಥೆಯಲ್ಲಿನ ಒಬ್ಬ ಸ್ನೇಹಿತ.
ನಿರ್ದೇಶಕ ಪಿಜೂಷ್ ಸಾಹಾ ಅವರ ಮಾರ್ಗದರ್ಶನದಲ್ಲಿ ಸುಶೋಭನ್ ಅವರ ಅಭಿನಯ ಪ್ರಯಾಣವು ಪ್ರಾರಂಭವಾಯಿತು, ಅಲ್ಲಿ ಅವರು ಸುಮಾರು ಎರಡು ವರ್ಷಗಳ ಕಾಲ ಅಭಿನಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದರು. ನಿಯಮಿತ ಆಡಿಷನ್ಗಳ ನಂತರ, 2019 ರಲ್ಲಿ ಅವರು ಆಕಾಶ್ ಆಠ್ ಚಾನೆಲ್ನ ‘ಆನಂದಮಯೀ ಮಾ’ ಧಾರಾವಾಹಿಯ ಮೂಲಕ ತಮ್ಮ ಟೆಲಿವಿಷನ್ ಚೊಚ್ಚಲ ಪ್ರವೇಶವನ್ನು ಮಾಡಿದರು, ಇದನ್ನು ಮರಣೋತ್ತರ ನಿರ್ದೇಶಕ ದೇವಿದಾಸ್ ಭಟ್ಟಾಚಾರ್ಯ ನಿರ್ದೇಶಿಸಿದ್ದರು, ಅದರಲ್ಲಿ ಅವರು ವೈಷ್ಣವ ಭಕ್ತನ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸ್ಟಾರ್ ಜಲ್ಸಾದ ‘ಮೋಹರ್’, ‘ಕೋರಾಪಾಖಿ’, ‘ತಿತ್ಲಿ’ ಮತ್ತು ‘ಖೇಲಾಘರ್’, ಜೊತೆಗೆ ಜೀ ಬಂಗ್ಲಾದ ‘ಜಮುನಾ ಢಾಕಿ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು, ಹೀಗೆ ಬಂಗಾಳಿ ಟೆಲಿವಿಷನ್ನಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು.
COVID-19 ಸಾಂಕ್ರಾಮಿಕ ಸಮಯದಲ್ಲಿ, ಅಭಿನಯದ ಕೆಲಸಗಳು ಸೀಮಿತವಾದಾಗ, ಸುಶೋಭನ್ ಮಾಡೆಲಿಂಗ್ಗೆ ತಿರುಗಿದರು. 2023 ರಿಂದ ಪ್ರಾರಂಭಿಸಿ, ಅವರು ಹಾಲಿಡೇ ಇನ್ ಹೋಟೆಲ್, ಡಾಬರ್, ಟೈಟಾನ್ ಐ+, ವೆಲಾಸಿಟಿ ಐವೇರ್, ಅಮೆಜಾನ್, ಸ್ಪೆನ್ಸರ್ಸ್, ಕ್ಯಾಂಪಸ್ ಶೂಸ್, ಬಿಗ್ ಬಜಾರ್, ಬಯೋಟಿಕ್ ಮತ್ತು ಫಿಯಾಮಾ ಡಿ ವಿಲ್ಸ್ ಸೇರಿದಂತೆ ಹಲವಾರು ಬ್ರಾಂಡ್ಗಳೊಂದಿಗೆ ಕೆಲಸ ಮಾಡಿದರು. 2025 ರಲ್ಲಿ, ಕೋಲ್ಕತ್ತಾದಲ್ಲಿ ನಡೆದ ‘ಎತ್ನಿಕ್ ಎಲಿಗನ್ಸ್ 2025’ ಸೌಂದರ್ಯ ಸ್ಪರ್ಧೆಯಲ್ಲಿ ಅವರು ಪ್ರಥಮ ರನ್ನರ್-ಅಪ್ ಆಗಿ ಆಯ್ಕೆಯಾದರು.
ಹೌರಾದಲ್ಲಿ ಜನಿಸಿ ಕೋಲ್ಕತ್ತಾದಲ್ಲಿ ಬೆಳೆದ ಸುಶೋಭನ್, ಸುಮಾರು ಮೂರೂವರೆ ವರ್ಷದ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನಂತರ ತಾಯಿಯಿಂದ ಬೆಳೆಸಲ್ಪಟ್ಟರು. ಅವರು ಕೋಲ್ಕತ್ತಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು 2016 ರಲ್ಲಿ ದಮ್ ದಮ್ ಮೋತಿಜೀಲ್ ರವೀಂದ್ರ ಮಹಾವಿದ್ಯಾಲಯದಿಂದ ವಾಣಿಜ್ಯದಲ್ಲಿ ಬಿ.ಕಾಮ್ ಪದವಿಯನ್ನು ಪಡೆದರು. ಅಭಿನಯವನ್ನು ಮುಂದುವರಿಸುವ ಮೊದಲು, ಅವರು ಸುಮಾರು ಎರಡು ವರ್ಷಗಳ ಕಾಲ ಪಾಶ್ಚಾತ್ಯ ನೃತ್ಯದಲ್ಲಿ ತರಬೇತಿ ಪಡೆದರು ಮತ್ತು ರಂಗ ಪ್ರದರ್ಶನಗಳಲ್ಲಿ ಭಾಗವಹಿಸಿದರು.
‘ಟೇಕ್ ಕೇರ್ ಭಾಲೋಬಾಸ’ ಸುಶೋಭನ್ ಅವರ ಮೊದಲ ಬಂಗಾಳಿ ಫೀಚರ್ ಫಿಲ್ಮ್ನಲ್ಲಿ ಕಾಣಿಸಿಕೊಳ್ಳುವುದನ್ನು ಸೂಚಿಸುತ್ತದೆ. ಈ ಚಿತ್ರದಲ್ಲಿ, ಜಾಯ್ ಅವರು ಕೆಲವೊಮ್ಮೆ ಸಂಯಮದಿಂದಿರುವ, ಆದರೆ ಉಷ್ಣತೆ, ಸ್ನೇಹಪರತೆ ಮತ್ತು ಸಹಜತೆಯನ್ನು ಪ್ರದರ್ಶಿಸುವ ಪಾತ್ರವಾಗಿ ಚಿತ್ರಿಸಲಾಗಿದೆ, ಇದು ಸಂಬಂಧಗಳು ಮತ್ತು ದೈನಂದಿನ ಭಾವನೆಗಳ ಅನ್ವೇಷಣೆಗೆ ಕೊಡುಗೆ ನೀಡುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ಅಂತರಂಗ1 day agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ3 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
-
ದಿನದ ಸುದ್ದಿ2 days agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್










