Connect with us

ದಿನದ ಸುದ್ದಿ

ದಾವಣಗೆರೆ | ಜಲ ಜೀವನ್ ಮಿಷನ್ ಮೂಲಕ 2024ರೊಳಗೆ ಪ್ರತಿ ಮನೆಗೂ ನೀರು : ಜಿ ಪಂ ಸಿಇಓ

Published

on

ಸುದ್ದಿದಿನ,ದಾವಣಗೆರೆ : ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಕಾಮಗಾರಿಗಳು ಜಿಲ್ಲೆಯಲ್ಲಿ ತ್ವರಿತಗತಿಯಲ್ಲಿ ಸಾಗಿದ್ದು, 2024 ರೊಳಗೆ ಜಿಲ್ಲೆಯ ಎಲ್ಲಾ ಕಂದಾಯ ಮತ್ತು ಜನವಸತಿ ಗ್ರಾಮಗಳ ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಹೇಳಿದರು.

ಮಂಗಳವಾರ ನಗರದ ರಾಷ್ಟ್ರೀಯ ಹೆದ್ದಾರಿ 4 ಬಳಿಯಿರುವ ಜೆನೆಸಿಸ್ ರಿಟ್ರೀಟ್ ಹೋಟೆಲ್‍ನಲ್ಲಿ ಸೊಸೈಟಿ ಫಾರ್ ಪೀಪಲ್ಸ್ ಇಂಟಿಗ್ರೇಟೆಡ್ ಡೆವಲಪ್‍ಮೆಂಟ್ (ರಿ) ಚಿಕ್ಕಮಗಳೂರು ಇವರ ಸಹಯೋಗದಲ್ಲಿ ಜಲ ಜೀವನ್ ಮಿಷನ್ ಕುರಿತು ಗ್ರಾಮ ಪಂಚಾಯಿತಿ ಹಾಗೂ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ 4 ದಿನಗಳ ಕಾಲ ಹಮ್ಮಿಕೊಂಡಿರುವ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬದುಕಿಗೆ ನೀರು ಅತೀ ಮುಖ್ಯವಾದದ್ದು. ಇಡೀ ಬ್ರಹ್ಮಾಂಡವು ಪಂಚಭೂತಗಳಿಂದ ಸೃಷ್ಠಿಯಾಗಿದೆ ಇವುಗಳಲ್ಲಿ ನೀರು ಸಹ ಒಂದು, ನೀರಿಲ್ಲದೇ ಬದುಕಲು ಅಸಾಧ್ಯ. ವೈಜ್ಞಾನಿಕವಾಗಿ ಜೀವ ಹುಟ್ಟಿದ್ದು ನೀರಿನಿಂದಲೇ ಇತಿಹಾಸದಲ್ಲಿ ಹಲವಾರು ನಾಗರೀಕತೆಗಳು ಕೂಡ ನದಿಯ ದಂಡೆಯ ಮೇಲೆ ಹುಟ್ಟಿಕೊಂಡಿವೆ. ಜೀವಸಂಕುಲಗಳ ಬದುಕಿಗೆ ಪೋಷಕಾಂಶಗಳಂತೆ ನೀರು ಅತಿಮುಖ್ಯ.

ನೀರು ಸಂತೋಷ, ಶಕ್ತಿ, ಆರೋಗ್ಯ ಮತ್ತು ಧರ್ಮಶ್ರದ್ಧೆಯ ಮೂಲ, ತಾಯಿಯಂತೆ ಇದರ ಕಾಳಜಿವಹಿಸುವುದು ಅವಶ್ಯಕವಾಗಿದೆ. ಜನಸಂಖ್ಯೆ ಹೆಚ್ಚಾದಂತೆ ನೀರಿನ ಬವಣೆ ಹೆಚ್ಚುತ್ತಿದೆ. ಹಿಂದಿನ ಕಾಲದಲ್ಲಿ ಪ್ರತಿ ಊರಲ್ಲೂ ಕೆರೆ ಬಾವಿ ಕಲ್ಯಾಣಿಗಳಲ್ಲಿ ನೀರು ಹೊರ ತೆಗೆಯಲಾಗುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಅವುಗಳನ್ನು ಮುಚ್ಚಿ ಬಡಾವಣೆಗಳನ್ನು ನಿರ್ಮಿಸಲಾಗುತ್ತಿದೆ.

ಹವಾಮಾನ ವೈಪರೀತ್ಯದಿಂದ ಸಾಕಷ್ಟು ಬದಲಾವಣೆಯಾಗಿದೆ ರಾಜಸ್ಥಾನ ಬಿಟ್ಟರೆ ಕರ್ನಾಟಕವೇ ಅತೀ ಹೆಚ್ಚು ಬರಕ್ಕೆ ತುತ್ತಾಗಿದ್ದನ್ನು ನಾವು ಕಾಣಬಹುದು. ಮನುಷ್ಯನ ದೇಹದಲ್ಲಿ ಶೇ 70ರಷ್ಟು ನೀರಿದೆ, ಹಾಗೆಯೇ ಭೂಮಿಯ ಮೇಲೂ ಕೂಡ ನೀರಿನ ಪ್ರಮಾಣ ಹೆಚ್ಚಿದೆ. ಆದರೆ ಇದರಲ್ಲಿ ನವೀಕರಿಸಬಹುದಾದ ನೀರಿನ ಪ್ರಮಾಣ ಶೇಕಡ 4 ರಷ್ಟು ಮಾತ್ರ ಇದೆ ಎಂದು ಹೇಳಿದರು.

ಸರ್ಕಾರಗಳು ಕೇಂದ್ರ ಮತ್ತು ರಾಜ್ಯದಿಂದ ಹಿಡಿದು ಗ್ರಾಮಪಂಚಾಯಿತಿ ಮಟ್ಟದವರೆಗೂ ನೀರು ಒದಗಿಸುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಗ್ರಾಮೀಣ ಭಾಗದಲ್ಲಿ ಬಡಜನರು ದುಡಿಯಲು ಮೀಸಲಿಟ್ಟ ಸಮಯದ ನೀರನ್ನು ತರಲು ವ್ಯರ್ಥ ಮಾಡುತ್ತಿದ್ದಾರೆ. ನೀರು ಹಾಗೂ ಆಹಾರ ಎಷ್ಟು ಗುಣಮಟ್ಟದ್ದಾಗಿರುತ್ತದೆಯೋ ಅಷ್ಟು ಆರೋಗ್ಯ ಚೆನ್ನಾಗಿರುತ್ತದೆ.

ಕಲುಷಿತ ನೀರಿನಿಂದ ಅನೇಕ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆಗಳಿರುವ ಕಾರಣದಿಂದಾಗಿಯೇ ಪ್ರಧಾನ ಮಂತ್ರಿಗಳು 2019ರ ಆಗಸ್ಟ್ 15ರಂದು ಜಲ ಜೀವನ್ ಮಿಷನ್ ಯೋಜನೆಯನ್ನು ಘೋಷಿಸಿದರು. ಈ ಮೂಲಕ ದೇಶಾದ್ಯಂತ 18 ಕೋಟಿ ಕುಟುಂಬಗಳಿಗೆ 3.5 ಲಕ್ಷ ಕೋಟಿ ರೂ. ವೆಚ್ಚಮಾಡಿ ಮನೆಮನೆಗೂ ನೀರನ್ನು ಒದಗಿಸುವ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಿ ದೇಶದಲ್ಲಿ ಈಗಾಗಲೇ 2 ಕೋಟಿ ಮನೆಗಳಿಗೆ ಜಲ ಜೀವನ್ ಮಿಷನ್ ಮೂಲಕ ನೀರು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 693 ಕಂದಾಯ ಗ್ರಾಮಗಳು ಮತ್ತು 876 ಜನವಸತಿ ಪ್ರದೇಶಗಳಿವೆ. ಇದರಲ್ಲಿ 2020-21ನೇ ಸಾಲಿನಲ್ಲಿ 356 ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಪ್ರಾರಂಭ ಮಾಡಿ, 161 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಉಳಿದವುಗಳ ಕಾಮಗಾರಿ ಪ್ರಗತಿಯಲ್ಲಿದೆ. 2021-22ನೇ ಸಾಲಿನಲ್ಲಿ 125 ಕಾಮಗಾರಿಗಳಲ್ಲಿ 90 ಕಾಮಗಾರಿಗಳು ಪೂರ್ಣಗೊಂಡಿದ್ದು 35 ಪ್ರಗತಿಯಲ್ಲಿವೆ. 2024ರೊಳಗೆ ಜಿಲ್ಲೆಯ ಎಲ್ಲಾ ಕಂದಾಯ ಮತ್ತು ಜನವಸತಿ ಗ್ರಾಮಗಳ ಮನೆ ಮನೆಗೆ ನೀರು ಒದಗಿಸುವ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ತರಬೇತಿಯಿಂದ ಹೆಚ್ಚಿನ ಜ್ಞಾನ ಪಡೆದು, ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮತ್ತು ಸಹಕಾರ ನೀಡಬೇಕು. ಒಟ್ಟಾರೆ ಜಲ ಜೀವನ್ ಮಿಷನ್ ಮೂಲಕ ಪ್ರತಿ ಮನೆ ಮನೆಗೂ ನೀರು ಒದಗಿಸುವ ಉದ್ದೇಶದಿಂದ ಕಾರ್ಯಗಾರ ಅಯೋಜನೆ ಮಾಡಲಾಗಿದೆ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಅಧಿಕಾರಿಗಳ ಪಾತ್ರದ ಜೊತೆಗೆ ಜನಸಮುದಾಯಗಳ ಸಹಕಾರವು ಮುಖ್ಯವಾಗಿದೆ. ಜಲ ಜೀವನ್ ಮಿಷನ್ ಯೋಜನೆಯಿಂದ ನೀರು ಒದಗಿಸುವುದು ಮಾತ್ರವಲ್ಲದೆ ವಿದ್ಯುಚ್ಚಕ್ತಿಯ ಉಳಿತಾಯವು ಆಗಲಿದೆ ಎಂದರು.

ಕೆ.ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನದ ಕುರಿತು ಗ್ರಾಮ ಪಂಚಾಯಿತಿಯ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ 4 ದಿನಗಳ ಕಾಲ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಆದ್ದರಿಂದ ಎಲ್ಲಾ ಸದಸ್ಯರು ಇದರ ಸದುಪಯೋಗ ಪಡೆದು ಯೋಜನೆಯ ಸಮರ್ಪಕ ಜಾರಿಗೆ ಪ್ರಯತ್ನಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಮಲ್ಲಿಕಾರ್ಜುನಯ್ಯ, ಜಿಲ್ಲಾ ಯೋಜನಾ ನಿರ್ದೇಶಕ ಜಗದೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು, ಉಪಾಧ್ಯಕ್ಷರು, ಸದಸ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ನೀರಗಂಟಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ

Published

on

ಸುದ್ದಿದಿನ,ದಾವಣಗೆರೆ: ದೇಶದ ಪ್ರಮುಖ ಆರೋಗ್ಯ ವಿಮೆ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶುರನ್ಸ್ ಕಂಪನಿ ಲಿಮಿಟೆಡ್, ಕರ್ನಾಟಕದಲ್ಲಿ ಮಳೆಗಾಲದಲ್ಲಿ ಜನರನ್ನು ಕಾಡುವ ವಿವಿಧ ಬಗೆಯ ಕಾಯಿಲೆಗಳ ಚಿಕಿತ್ಸಾ ಸೌಲಭ್ಯವನ್ನು ವಿಸ್ತರಿಸಿದೆ.

ಈ ಉಪಕ್ರಮದ ಮೂಲಕ, ಪಾಲಿಸಿದಾರರಿಗೆ ‘ಟಾಕ್ ಟು ಸ್ಟಾರ್’ ಸೇವೆ ಹಾಗೂ ಮನೆ ಬಾಗಿಲಿನ ಆರೋಗ್ಯ ಸೇವೆ ಕಲ್ಪಿಸಿಕೊಡಲಾಗುತ್ತಿದೆ. ಇದರ ನೆರವಿನಿಂದ ಆರಂಭಿಕ ಹಂತದಲ್ಲೇ ಅಗತ್ಯ ವೈದ್ಯಕೀಯ ಸಲಹೆ ಮತ್ತು ಪರೀಕ್ಷೆಗಳ ನೆರವು ಒದಗಿಸಲಾಗುತ್ತಿದೆ. ಜೊತೆಗೆ, ಸಾರ್ವಜನಿಕರು ಸ್ಟಾರ್ ಹೆಲ್ತ್ ಕಸ್ಟಮರ್ ಆ್ಯಪ್ ಮೂಲಕ 24*7 ಉಚಿತ ವರ್ಚುವಲ್ ವೈದ್ಯರ ಸಮಾಲೋಚನೆ ಪಡೆಯುವ ಅವಕಾಶವನ್ನೂ ಕಲ್ಪಿಸಲಾಗಿದೆ ಎಂದು ಸ್ಟಾರ್ ಹೆಲ್ತ್ ಇನ್ಶುರನ್ಸ್ ಕರ್ನಾಟಕ ವಹಿವಾಟು ವಿಭಾಗದ ಮುಖ್ಯಸ್ಥ ಆದಿತ್ಯ ಓಂಪ್ರಕಾಶ್ ಬಿಯಾನಿ ಹೇಳಿದ್ದಾರೆ.

ಪಾಲಿಸಿದಾರರಿಗೆ ಅನಿಯಮಿತ ಟೆಲಿ ಸಮಾಲೋಚನೆಯಡಿ ಪಾಲಿಸಿ ಅವಧಿಯಲ್ಲಿ ಎಷ್ಟೇ ಬಾರಿ ಬೇಕಾದರೂ ದೂರವಾಣಿ ಅಥವಾ ಆನ್‍ಲೈನ್ ಮೂಲಕ ವೈದ್ಯರ ಸಲಹೆ ಪಡೆಯಬಹುದು. ಜ್ವರ ಅಥವಾ ಸೋಂಕಿನ ಆರಂಭಿಕ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯಕೀಯ ಸಲಹೆ ಪಡೆಯಲು ಇದು ನೆರವಾಗುತ್ತದೆ. ಸಾರ್ವಜನಿಕರಿಗೆ ಉಚಿತ ವರ್ಚುವಲ್ ವೈದ್ಯರ ಸಮಾಲೋಚನೆಯೂ ಇರುತ್ತದೆ.

ಅಂತೆಯೇ ಪಾಲಿಸಿದಾರರು ‘ಟಾಕ್ ಟು ಸ್ಟಾರ್’ ಸೇವೆಯಡಿ 7200 222 333 ಸಂಖ್ಯೆಗೆ ಕರೆ ಮಾಡಿ ಮಾರ್ಗದರ್ಶನ ಪಡೆಯಬಹುದು. ನಗದುರಹಿತ ಮನೆ ಬಾಗಿಲಿನ ಆರೋಗ್ಯ ಸೇವೆಯಡಿ ಅರ್ಹ ಪಾಲಿಸಿದಾರರಿಗೆ ಸ್ಟಾರ್ ಹೆಲ್ತ್ ಕ್ಯಾಷ್‍ಲೆಸ್- ಸೌಲಭ್ಯದ ಮೂಲಕ ಮನೆ ಬಾಗಿಲಿಗೇ ಆರೋಗ್ಯ ಸೇವೆ ಒದಗಿಸಲಾಗುತ್ತದೆ. ವೈದ್ಯರ ಸಲಹೆಯಂತೆ ನಸಿರ್ಂಗ್ ಸೇವೆ, ರಕ್ತ ಪರೀಕ್ಷೆ, ಆರೋಗ್ಯ ಮೇಲ್ವಿಚಾರಣೆ, ಐವಿ ಫ್ಲೂಯಿಡ್ಸ್ ಹಾಗೂ ಚುಚ್ಚುಮದ್ದು ಸೇರಿದಂತೆ ಅಗತ್ಯ ಚಿಕಿತ್ಸೆಗಳನ್ನು ಮನೆಯಲ್ಲೇ ನೀಡಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಶೇ. 56 ರಷ್ಟು ಗಣತಿ ನಮೂನೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್.ಐ.ಆರ್.ಕುರಿತು ಮಾಹಿತಿ ನೀಡಲು ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ಬಿಎಲ್‌ಒಗಳು ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಅರ್ಜಿಗಳನ್ನು ವಿತರಿಸಿ, ಸ್ವೀಕರಿಸುತ್ತಿದ್ದಾರೆ. ಶೇ. 91 ರಷ್ಟು ಜನರಿಗೆ ಫಾರಂ ಭರ್ತಿ ಮಾಡಲು ತಿಳಿಯದ ಕಾರಣ ಬಿಎಲ್‌ಒಗಳೇ ಸಾರ್ವಜನಿಕರಿಗೆ ಸಹಾಯ ಮಾಡುತ್ತಿದ್ದಾರೆ ಎಂದರು.

ಸಾರ್ವಜನಿಕರ ಅನುಕೂಲಕ್ಕಾಗಿ ದಾವಣಗೆರೆ ನಗರದಲ್ಲಿ 45 ಕೇಂದ್ರಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ತಾಲೂಕು ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ಅನುಮಾನಗಳಿದ್ದಲ್ಲಿ ಸಾರ್ವಜನಿಕರು ಬಿಎಲ್‌ಒಗಳನ್ನು ಅಥವಾ ಚುನಾವಣಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನೋಡಲ್ ಅಧಿಕಾರಿಗಳು ಮತ್ತು ಸೂಪರ್‌ವೈಸರ್‌ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಸದ್ಯಕ್ಕೆ ಸಾರ್ವಜನಿಕರಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸುತ್ತಿಲ್ಲ. ಆಗಸ್ಟ್ 7 ರ ನಂತರ ಯಾರು ಯಾವ ದಾಖಲೆಗಳನ್ನು ನೀಡಬೇಕು ಎಂಬುದನ್ನು ಸ್ಪಷ್ಟಪಡಿಸಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.

ವಿವಿಧ ತಾಂತ್ರಿಕ ಹಾಗೂ ನೈಜ ಕಾರಣಗಳಿಂದಾಗಿ ಒಟ್ಟು 17,499 ಮತದಾರರ ಗಣತಿ ನಮೂನೆಗಳು ವಾಪಸ್ ಬಂದಿಲ್ಲ. ಇದರಲ್ಲಿ ಪ್ರಮುಖವಾಗಿ 7,487 ಮರಣ ಪ್ರಕರಣಗಳು , 263 ವಿಳಾಸ ಪತ್ತೆಯಾಗದವರು , 6,677 ಶಾಶ್ವತವಾಗಿ ಸ್ಥಳಾಂತರಗೊಂಡವರು , 2,994 ದ್ವಿಪ್ರತಿ ದಾಖಲಾತಿ (Double Entry) ಹಾಗೂ 78 ಇತರೆ ಕಾರಣ ಎಂದು ತಿಳಿಸಿದರು.

1,200 ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಗುರುತಿಸಿ, ಅಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮತದಾರರ ಪರಿಷ್ಕರಣೆಯ ಕಾರ್ಯವಿಧಾನದ ಕುರಿತು ವಿವಿಧ ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆ ಯಲ್ಲಿ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸುವ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಜುಲೈ 29ರ ವರೆಗೆ ಮಾತ್ರ ಕಾಲಾವಕಾಶ ಇರುವುದರಿಂದ ಬಿಎಲ್‌ಒಗಳು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಅವರೊಂದಿಗೆ ಶಾಂತಿಯುತವಾಗಿ ವರ್ತಿಸಿ, ಸೂಕ್ತ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಒಂದು ವೇಳೆ ದ್ವಿಪ್ರತಿ (Double Entry) ಸೇರಿದಂತೆ ಯಾವುದೇ ತಪ್ಪು ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ನೀಡಿದಲ್ಲಿ, ಅಂತವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌, ಮಹಾನಗರ ಪಾಲಿಕೆ ಆಯುಕ್ತ ಡಾ.ಮಹಾಂತೇಶ್‌ ಚುನಾವಣಾ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ: ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆ ನಡೆಸುವಂತೆ ದೂರು ನೀಡಿ 5 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತಾಗೆ ದೂರು ಸಲ್ಲಿಸಿದ್ದಾರೆ.

ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ವಿಭಾಗ-2 ರ ವ್ಯಾಪ್ತಿಗೆ ಒಳಪಡುವ ಮಾಯಕೊಂಡ, ಹೊನ್ನಾಳಿ, ಚನ್ನಗಿರಿ ಉಪ ವಿಭಾಗಗಳು ಹಾಗೂ ವಿಭಾಗ-2ರ ಕಛೇರಿಯ ವ್ಯಾಪ್ತಿಗೆ 2023-24 ರಿಂದ 2025-26ನೇ ಸಾಲಿನ ಅವಧಿಯಲ್ಲಿ ಬಿಡುಗಡೆಯಾಗಿರುವ ಸ್ಥಳೀಯ ಶಾಸಕರ ಅನುದಾನದಲ್ಲಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣವನ್ನು ಇಲಾಖೆಯ ವಾಹನಗಳ ಇಂಧನ ವೆಚ್ಚಕ್ಕೆಂದು ನಿಯಮಬಾಹಿರವಾಗಿ ದುರ್ಬಳಕೆ ಮಾಡಿಕೊಂಡಿರುವುದು ಮಾತ್ರವಲ್ಲದೆ, ಬಹುತೇಕ ಕಡೆಗಳಲ್ಲಿ ಯಾವುದೇ ಕಾಮಗಾರಿ ನಡೆಸದೆ ನಕಲಿ ಕಡತ ಸೃಷ್ಟಿಸಿ ಸ್ಥಳೀಯ ಶಾಸಕರ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ವಿಷಯವು ಅಧಿಕೃತ ಮೂಲಗಳಿಂದ ತಿಳಿದು ಬಂದ ಕಾರಣ ಮಾಹಿತಿಹಕ್ಕು ಅಡಿಯಲ್ಲಿ ಹಲವಾರು ಭಾರಿ ಅರ್ಜಿ ಸಲ್ಲಿಸಿ, ಮಾಹಿತಿ ಕೋರಿದಾಗಲೂ ನಿಯಮಬಾಹಿರವಾಗಿ ಹಿಂಬರಹ ನೀಡುತ್ತ ಬಂದಿರುತ್ತಾರೆ.

ಆದ ಕಾರಣ ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆಗೆ ಒಳಪಡಿಸಿ, ಕೈಗೊಂಡ ಕ್ರಮದ ವರದಿಯನ್ನು ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಐ.ಡಿ.ಎಲ್, ಬೆಂಗಳೂರು ಇವರಿಗೆ ದಿನಾಂಕ: 06-02-2026 ರಂದು ದೂರು ನೀಡಲಾಗಿತ್ತು. ಆದರೆ ದೂರು ನೀಡಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ದಿನಾಂಕ: 21-04-2026 ರಂದು ಜ್ಞಾಪನ ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ 2 ತಿಂಗಳು ಕಳೆದರೂ ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್‌ಗೌಡ ಎಂ.ಬಿ ಇವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.

ಆದ ಕಾರಣ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್‌ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತ ಕಾಯ್ದೆಯ ಅನುಸಾರ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ಸಲ್ಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending