ನೆಲದನಿ
ದಮನಿತರ ಬದುಕಿನ ಆಶಾಕಿರಣ ಮಂಜಮ್ಮ ಜೋಗತಿಯ ಕಲಾ ಬದುಕು

ಜಾನಪದ ಸಿರಿವಂತಿಕೆ ಎಂಬುದು ಒಂದು ನಾಡಿನ ಪ್ರಾದೇಶಿಕ ವೈಶಿಷ್ಟ್ಯತೆಯ ಪ್ರತೀಕವಾಗಿರುತ್ತದೆ. ಇಂತಹ ಜಾನಪದವು ಪ್ರಾದೇಶಿಕ ಸತ್ವವನ್ನು ಅರಿಯುವುದಕ್ಕೆ, ಗುರುತಿಸುವುದಕ್ಕೆ ಸಹಕಾರಿಯಾಗುತ್ತದೆ. ಒಂದು ನಾಡಿನ ಜನರ ಜೀವಂತ ಸಾಹಿತ್ಯವಾಗಿರುವ ಜನಪದವು ಸಾಮಾನ್ಯರ ಬದುಕಿನೊಂದಿಗೆ ಬೆರೆತುಕೊಂಡಿರುತ್ತದೆ. ಇಂತಹ ಜಾನಪದಕ್ಕೂ ಬಡತನದ ಬದುಕಿಗೂ ಅವಿನಾಭಾವ ಸಂಬಂಧವಿದೆ. ಜಾನದಪ ಕಲೆಗಳು ಇಂದಿಗೂ ಜೀವಂತವಾಗಿರುವುದು ಬಡವರ ಗುಡಿಸಲುಗಳಲ್ಲೆ. ಹೀಗಾಗಿ ಜಾನಪದ ಸಿರಿವಂತಿಕೆಗೆ ಆಶ್ರಯ ತಾಣಗಳಾಗಿರುವುದು ಬಡವರ ಗುಡಿಸಲುಗಳೆ. ಆದ್ದರಿಂದ ಜಾನಪದಕ್ಕೂ ಬಡತನದ ಬದುಕಿಗೂ ಬಿಡಿಸಲಾರದ ಬಂಧವೊಂದಿದೆ. ಈ ಬಂಧವು ಚರಿತೆಯುದ್ಧಕ್ಕೂ ತನ್ನ ನಿರಂತರವಾದ ಪಯಣವನ್ನು ಮುಂದುವರೆಸಿಕೊಂಡು ಬಂದಿದೆ.
ಇಂತಹ ನಾಡಿನ ಜೀವನಾಡಿಯಾದ ಜಾನಪದ ಕಲೆಯನ್ನು ತಮ್ಮ ಬದುಕಿನ ಭಾಗವಾಗಿ ಕಾಪಾಡಿಕೊಂಡು ಬಂದವರಲ್ಲಿ ಮಂಜಮ್ಮ ಜೋಗತಿಯವರು ಒಬ್ಬರಾಗಿದ್ದಾರೆ. ಇವರು ಜಾನಪದದ ವಿವಿಧ ಪ್ರಕಾರಗಳಲ್ಲಿ ಒಂದಾಗಿರುವ ಜೋಗತಿ ನೃತ್ಯ ಹಾಗೂ ಹಾಡುಗಾರಿಕೆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದು ಮಾತ್ರವಲ್ಲದೆ ಈ ಸಾಹಿತ್ಯ ಪ್ರಕಾರದ ಉಳಿವಿಗಾಗಿ ಅವಿರತ ಶ್ರಮವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮಂಜಮ್ಮ ಜೊಗತಿಯು ನಾಡು ಕಂಡ ‘ಜೋಗತಿ ಸಿರಿ’ಯಾಗಿ ಕಂಡುಬರುತ್ತಾರೆ. ಇಂತಹ ಜಾನಪದ ಸಿರಿಯ ಕಲಾ ಬದುಕಿನ ಸುತ್ತ ಅಂತರ್ಗತವಾಗಿರುವ ಸಂಕಥನವನ್ನು ಗುರುತಿಸುವ ಉದ್ಧೇಶವನ್ನು ಪ್ರಸ್ತುತ ಲೇಖನವು ಒಳಗೊಂಡಿದೆ.
ಜಗತ್ತಿನ ಪ್ರತಿಯೊಂದು ಕುಟುಂಬಗಳಲ್ಲಿ ತಂದೆ ತಾಯಂದಿರು ಕೂಡ ತಮ್ಮ ಮಕ್ಕಳು ಒಳ್ಳೆಯ ವಿದ್ಯಾವಂತರಾಗಬೇಕು, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು. ಯಾರ ಮುಂದೆಯೂ ತಗ್ಗಿ ನಡೆಯುವಂತಾಗಬಾರದು ಎಂದೆಲ್ಲ ಕನಸು ಕಟ್ಟಿರುತ್ತಾರೆ. ತಮ್ಮ ಮಕ್ಕಳು ಸಮಾಜ ಘಾತುಕರಿರಲಿ, ಬರೀ ಸುಳ್ಳು ಹೇಳಿದರೂ ತಂದೆ ತಾಯಿಗಳು ಸಹಿಸಿಕೊಳ್ಳುವುದಿಲ್ಲ. ವಾಸ್ತವ ಹೀಗಿರುವಾಗ ತಮ್ಮ ವಂಶವನ್ನು ಬೆಳಗಬೇಕಾದ ಗಂಡು ಮಗ ಹೆಣ್ಣಾಗಿ ವರ್ತಿಸುತ್ತಿದ್ದಾನೆ, ಇಲ್ಲವೇ ಹೆಣ್ಣಾಗಿ ಪರಿವರ್ತನೆಯಾಗುತ್ತಾನೆ ಎಂದರೆ ಯಾರು ತಾನೇ ಸಹಿಸಿಕೊಳ್ಳಲು ಸಾಧ್ಯ. ಅದೂ ಭಾರತದಂತಹ ಸಾಂಪ್ರದಾಯಿಕ ನಾಡಿನಲ್ಲಿ ಊಹಿಸಿಕೊಳ್ಳುವುದು ಕಷ್ಟವೆ. ಇಂತಹ ಸಂಕಷ್ಟವೊಂದು ಬಾಲ್ಯದ ದಿನಗಳಲ್ಲಿ ಮಂಜಮ್ಮ ಜೋಗತಿಯ ಕುಟುಂಬವನ್ನು ಪ್ರವೇಶಿಸಿತು. ಮಂಜಮ್ಮನ ದೈಹಿಕ ಕ್ರಿಯೆಯಲ್ಲಾದ ಈ ಬದಲಾವಣೆಯು ಜೈವಿಕ ಕ್ರಿಯೆಯಾಗಿರಬಹುದು. ಆದರೆ ಸಾಂಪ್ರದಾಯಿಕ ಸಮಾಜದಲ್ಲಿ ಇದನ್ನು ನೋಡುವ ದೃಷ್ಟಿಕೋನ ತುಂಬಾ ತಮ್ಮ ಕೆಳ ಮಟ್ಟದ್ದಾಗಿರುತ್ತದೆ. ಮಂಜುನಾಥ ತನ್ನ ಜೈವಿಕ ಒತ್ತಡಗಳಿಂದ ಮಂಜಮ್ಮನಾಗುವ ಸನ್ನವೇಶದಲ್ಲಿ ಅನುಭವಿಸಿದ ಯಾತನೆಗಳು ತುಂಬಾ ತ್ರಾಸದಾಯಕವಾಗಿದ್ದವು. ಇಲ್ಲಿ ಮಂಜಮ್ಮನನ್ನು ಕಾಡಿದ, ಸಂಕಷ್ಟಕ್ಕೆ ದೂಡಿದ ಘಟನೆಗಳಿಗೆ ಮಂಜಮ್ಮನ್ನ ಕುಟುಂಬ ನೇರ ಹೊಣೆಯಲ್ಲ. ಮಂಜುನಾಥ ತನ್ನ ಸಹಜ ಜೈವಿಕ ಸ್ವಭಾವಗಳಲ್ಲಿ ಹೆಣ್ಣಾಗಿ ಪರಿವರ್ತನೆಯಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂಬುದು ತನ್ನ ಕುಟುಂಬಕ್ಕೆ ಸಂಪೂರ್ಣವಾದ ಅರಿವಿದೆ. ಆದರೆ ತನ್ನ ಕುಟುಂಬದ ಸುತ್ತಮುತ್ತಲಿನ ಸಮಾಜದಲ್ಲಿ ಅಪಮಾನಕ್ಕೆ ಗುರಿಯಾಗಬೇಕಾದ ಒತ್ತಡಗಳಲ್ಲಿ ಉಂಟಾದ ಸಂಘರ್ಷವೇ ಮಂಜಮ್ಮನನ್ನು ಗಂಡಸ್ಸಾಗಿಯೇ ಉಳಿಯುವಂತೆ ಒತ್ತಾಯ ನಡೆದಿವೆ. ಈ ಒತ್ತಾಯದ ಭಾಗವಾದ ಹಿಂಸೆ ಮತ್ತು ಅವಮಾನಗಳು ಅವರ ಬದುಕಿನಲ್ಲಿ ಹಲವಾರು ತಲ್ಲಣಗಳನ್ನು ಮೂಡಿಸಿವೆ.
ಮಂಜಮ್ಮ ಜೋಗತಿಯು ಶ್ರೀ ಹನುಮಂತಯ್ಯ ಶೆಟ್ಟಿ, ಶ್ರೀಮತಿ ಜಯಲಕ್ಷ್ಮೀಯವ ಪುತ್ರನಾಗಿ ಬಳ್ಳಾರಿ ಜಿಲ್ಲೆಯ ಕಲ್ಲುಕಂಬ ಗ್ರಾಮದಲ್ಲಿ ಜನಿಸಿದವರು. ಇವರ ತಂದೆ ತಾಯಿಗೆ ಇಪ್ಪತ್ತೊಂದು ಜನ ಮಕ್ಕಳಲ್ಲಿ ಮಂಜಮ್ಮ ಜೋಗತಿಯು ಒಬ್ಬರಾಗಿದ್ದರು. ಈ ಇಪ್ಪತ್ತೊಂದು ಜನ ಮಕ್ಕಳಲ್ಲಿ ಉಳಿದುಕೊಂಡಿದ್ದು ಮಾತ್ರ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಮಾತ್ರ. ಈ ಇಬ್ಬರು ಗಂಡು ಸಂತಾನಗಳಲ್ಲಿ ಮಂಜಮ್ಮ (ಮಂಜುನಾಥ) ಒಬ್ಬರಾಗಿದ್ದರು. ಆದ್ದರಿಂದ ಇಲ್ಲಿ ಉಳಿದ ಎರಡು ಗಂಡು ಸಂತಾನಗಳಲ್ಲಿ ಒಬ್ಬರಾಗಿರುವ ಮಂಜುನಾಥ ಕೃಷ್ಣನಂತಾಗಿ ತಮ್ಮ ವಂಶವನ್ನು ಬೆಳಗುತ್ತಾನೆ ಎಂಬುದು ತಂದೆ ತಾಯಿಗಳ ಆದಮ್ಯ ಬಯಕೆಯಾಗಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಕೃಷ್ಣನಂತಾಗಿ ವಂಶ ಬೆಳಗಬೇಕಾದ ಮಗ ಬೃಹನ್ನಳೆಯಂತಾದಾಗ ತಂದೆ ತಾಯಿಗಳಿಗೆ ತೀವ್ರತರವಾದ ಆಘಾತವನ್ನು ಮೂಡಿತ್ತು. ತಮ್ಮ ಬಾಲ್ಯದ ದಿನಗಳಿಂದಲೆ ಮಂಜಮ್ಮ ಗಂಡು ಹುಡುಗರ ಜೊತೆಯಲ್ಲಿ ಬೆರೆಯದೆ ಹೆಚ್ಚಾಗಿ ಹುಡುಗಿಯರೊಂದಿಗೆ ಬೆರೆಯುತ್ತಿದ್ದರು. ಹೆಂಗಸರು ಮಾಡುವ ಕೆಲಸಗಳಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಸಮಾಜದ ಜನರಿಂದ ಹಲವಾರು ಕುಹಕದ ಮಾತುಗಳು ಹೊರಬಿದ್ದು, ಮಂಜಮ್ಮನ ಮನಸ್ಸನ್ನು ಘಾಸಿಗೊಳಿಸುತ್ತಿದ್ದವು. ಕೆಲವು ಹೆಣ್ಣು ಮಕ್ಕಳು “ಅವನ್ಯಾಕೆ ನಮ್ಮ ಜತೆ ಬರುತ್ತಾನೆ? ಈ ವಯಸ್ಸಿಗೆ ಅವನಿಗೇನು ಚಪಲ. ನೋಡೋಕೆ ಹೆಣ್ಣಿನಂಗಾಡ್ತಾನೆ, ಹೆಣ್ಣಿನ ಚಪಲ ಬ್ಯಾರೆ” ಎಂದೆಲ್ಲ ನೇರವಾಗಿ ನಿಂದಿಸುತ್ತಿದ್ದರು. ಆದರೆ ವಾಸ್ತವವಾಗಿ ಮಂಜುನಾಥನಲ್ಲಿ ಮಂಜವ್ವ ಒಡಮೂಡುತ್ತಿದ್ದಳು. ಆದರೆ ಈ ಸೂಕ್ಷ್ಮ ಅಳಲನ್ನು ಅರ್ಥೈಸುವ ಮನಸ್ಥಿತಿಯು ಯಾರಿಗೂ ಇರಲಿಲ್ಲ. ಇಂತಹ ಸಂದರ್ಭದಲ್ಲಿ ತನ್ನೆಲ್ಲ ನೋವುಗಳನ್ನು ತಾನೆ ನುಂಗಿಕೊಂಡು ಬದುಕಿನ ಹಾದಿಯನ್ನು ಕಂಡುಕೊಳ್ಳುವ ಸಾಹಸಮಯ ಬದುಕಿಗಾಗಿ ಮಂಜಮ್ಮ ತವಕಿಸಿದ್ದಾರೆ.
ಮಂಜಮ್ಮ ತನ್ನಲ್ಲಿ ಮೂಡಿದ ಹೆಣ್ತನವನ್ನು ಹೊತ್ತು ನಡೆಸಿದ ಹೋರಾಟದಲ್ಲಿ ಅವಮಾನಗಳೆ ಹೆಚ್ಚು. ಮಂಜಮ್ಮನ ದೇಹದಲ್ಲಿ ಒಡಮೂಡಿದ್ದು ಜೈವಿಕ ಕ್ರಿಯೆ. ಈ ಜೈವಿಕವಾದ ಬದಲಾವಣೆಯ ಒತ್ತಡದ ಭಾಗವಾಗಿ ಮಂಜಮ್ಮ ತಮ್ಮ ಹೆಣ್ತನವನ್ನು ಪ್ರದರ್ಶಿಸಿದರು. ಆದರೆ ಈ ಸಮಾಜದ ಕಣ್ಣಿಗೆ ಅದು ಸಹಜವಾದ ಜೈವಿಕ ಬದಲಾವಣೆಯಾಗಿರಲಿಲ್ಲ. ಅದನ್ನು ದೇವರಿಗೆ ಆರೋಪಿಸಲಾಯಿತು. ‘ಶೆಟ್ರು ಹುಡುಗ ಮಂಜುನಾಥನ ಮೈಯಾಗೆ ಹುಲಿಗೆಮ್ಮ ಬರಕತ್ಯಾಳೆ’ ಎಂದು ಆರೋಪಿಸಿದರು. ಆದರೆ ಇದರಿಂದ ಮಂಜಮ್ಮನ ಮೇಲೆ ಕುಟುಂಬದವರಿಂದ ಒತ್ತಡಗಳು ತೀವ್ರವಾದಾಗ ಮಂಜಮ್ಮ ಈ ಜೀವದ ಅಂತ್ಯಕ್ಕೆ ನಾಂದಿ ಹಾಡಲು ಮುಂದಾಗಿ ವಿಷ ಸೇವನೆ ಮಾಡಿದರು. ಆದರೆ ಅದೃಷ್ಟವಶತ್ ಇವರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸಿದ ಪರಿಣಾಮವಾಗಿ ಬದುಕುಳಿದರು. ದಾವಣಗೆರೆಯ ಸರ್ಕಾರಿ ಆಸ್ಪತ್ರೆಗೆ ಇವರನ್ನು ಸೇರಿಸಿದ ನಂತರ ಇವರ ಯೋಗಕ್ಷೇಮ ನೋಡಿಕೊಳ್ಳಲು ಯಾರು ಮುಂದೆ ಬರುವುದಿಲ್ಲ. ಇಂತಹ ಸಂದಿಗ್ಧ ಸಂದರ್ಭದಲ್ಲಿ ತನ್ನ ಜೀವನ ಹಾಗೂ ಹಸಿವನ್ನು ಪೂರೈಸಿಕೊಳ್ಳುವುದಕ್ಕಾಗಿ ಆಸ್ಪತ್ರೆಯ ರೋಗಿಗಳ ಎದುರು ದೇವಿಯ ಹಾಡು ನೃತ್ಯ ಮಾಡಿ ಜೀವನವನ್ನು ಸಾಗಿಸಿದರು. ನಂತರದಲ್ಲಿ ಸಂಪ್ರದಾಯದಂತೆ ದೇವಿಯ ದೀಕ್ಷೆ ತೆಗೆದುಕೊಂಡು ಮನೆಯಿಂದ ಹೊರ ನಡೆದ ಮಂಜವ್ವ ದಾವಣಗೆರೆಯಲ್ಲಿ ಪ್ರತ್ಯೇಕವಾದ ವಾಸ್ತವ್ಯ ಹೂಡಿದರು. ಹಲವು ಕಡೆ ನಡೆಯುವ ಸಂತೆ, ಜಾತ್ರೆಗಳಲ್ಲಿ ದೇವಿಯನ್ನು ಹೊತ್ತೊಯ್ದು ತನ್ನ ಜೀವನ ನಿರ್ವಹಣೆಗೆ ಮುಂದಾದರು.
ಮನೆಯಿಂದ ಹೊರಬಂದ ಮಂಜಮ್ಮ ತನ್ನ ಜೀವನವನ್ನು ತಾನು ಸಾಗಿಸಿಕೊಂಡು ಸ್ವಲ್ಪ ನೆಮ್ಮದಿಯನ್ನು ಕಂಡುಕೊಳ್ಳುವ ಸಂದರ್ಭದಲ್ಲಿ ಇವರ ಬದುಕನ್ನು ಘಾಸಿಗೊಳಿಸುವಂತಹ ಘಟನೆಯೊಂದು ನಡೆದು ಹೋಗಿತ್ತು. ತಾನು ಸಂಗ್ರಹಿಸಿದ ಹಣವನ್ನೆಲ್ಲ ಕೂಡಿಟ್ಟುಕೊಂಡು ಮನೆ ಬಾಡಿಗೆ ಕಟ್ಟಲು ಸಿದ್ಧ ಮಾಡಿಕೊಂಡು ಬರುವಾಗ ದಾವಣಗೆರೆಯ ಹೈಸ್ಕೂಲು ಮೈದಾನದಲ್ಲಿ ಇವರ ಮೇಲೆ ಪುಢಾರಿಗಳ ಗುಂಪೊಂದು ಅತ್ಯಾಚಾರಕ್ಕೆ ಮುಂದಾಗಿ, ಸೀರೆ ಉಟ್ಟ ಗಂಡು ದೇಹದ ಮೇಲೆ ದೌರ್ಜನ್ಯವೆಸಗಿ, ಇವರ ಬಳಿಯಿದ್ದ ಹಣವನ್ನೆಲ್ಲ ಕಸಿದುಕೊಳ್ಳುತ್ತಾರೆ. ಈ ಘಟನೆಯಿಂದ ಇವರಲ್ಲಿ ತೀವ್ರ ಮುಜುಗರ ಉಂಟಾಗುತ್ತದೆ. ಈ ಎಲ್ಲಾ ಘಟನೆಗಳನ್ನು ಮೆಟ್ಟಿನಿಂತ ಮಂಜಮ್ಮ ಸಾಧಿಸುವ ಛಲವೊತ್ತು ಮುನ್ನಡೆಯುತ್ತಾರೆ.
ಮಂಜಮ್ಮ ನಿರಂತರವಾಗಿ ತನ್ನ ಬದುಕಿನ ಹೋರಾಟವನ್ನು ಮುಂದುವರೆಸಿಕೊಂಡು ಬಂದವರು. ಇವರು ದೇವತೆಯ ದೀಕ್ಷೆ ಪಡೆದು ಮನೆಯಿಂದ ಹೊರಬಂದ ಸಂದರ್ಭದಲ್ಲಿ ಜೀವನವು ತುಂಬಾ ದುಸ್ತರವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮಂಜಮ್ಮ ಆಯ್ದುಕೊಂಡಿದ್ದು ಸ್ವಾಭಿಮಾನದ ಬದುಕಿಗೆ ಪೂರಕವಾದ ಕಲೆಯನ್ನು. ಆರಂಭಿಕ ಹಂತದ ಈ ಕಲೆಗೆ ಪ್ರಚೋದಕ ಶಕ್ತಿಯಾದವರು ಬಸಪ್ಪನವರು. ಈ ಗುರುವಿನ ಆಶ್ರಯ ಪಡೆದು, ಅವರ ಶಿಷ್ಯಳಾಗಿ ಶಿರಸಾವಹಿಸಿ ದುಡಿದ ಮಂಜಮ್ಮ ನಂತರ ದಿನಗಳಲ್ಲಿ ಈ ಕಲೆಯೊಂದಿಗೆ ತನ್ನ ನಿರಂತದ ಬಂಧವನ್ನು ಕಾಯ್ದುಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಹಲವಾರು ಏಳುಬೀಳುಗಳನ್ನು ಅನುಭವಿಸಿದ ಮಂಜಮ್ಮ ಜೋಗತಿ ಮುಂದೆ ಕಾಳವ್ವ ಜೋಗತಿಯನ್ನು ಗುರುವಾಗಿ ಪಡೆಯುತ್ತಾಳೆ. ಈ ಕಾಳವ್ವ ಜೋಗತಿಯು ಮಂಜವ್ವನಿಗೆ ಕೇವಲ ಗುರುವಾಗಿರುವುದಿಲ್ಲ. ಅದರಾಚೆ ತಂದೆ ತಾಯಿ, ಬಂಧು ಬಳಗ ಮತ್ತು ಸರ್ವಸ್ವವಾಗಿಯೂ ಮಂಜವ್ವನಿಗೆ ಅಭಯ ನೀಡುತ್ತಾರೆ. ಕಾಳವ್ವ ಜೋಗತಿಯಿಂದ ಒಂದು ನೆಲೆಯನ್ನು ಕಂಡುಕೊಂಡ ಮಂಜವ್ವ ಜೋಗತಿಯು ತನ್ನ ಬದುಕಿಗಾಗಿ ಸ್ವಾರ್ಥವನ್ನು ಬೆಳೆಸಿಕೊಳ್ಳದೆ, ತನ್ನ ಗುರು ಕಾಳವ್ವ ಜೋಗತಿಯ ಮಾರ್ಗದರ್ಶನದಲ್ಲಿ ತನ್ನಂತೆ ಸಮಾಜ ಮತ್ತು ಕುಟುಂಬದಿಂದ ವಂಚಿತರಾದ ಹಲವಾರು ಅಬಲರಿಗೆ ಆಶ್ರಯ ನೀಡುವ ಮಹಾತಾಯಿಯಾಗಿ ದುಡಿಯುತ್ತಾರೆ.
ಮಂಜಮ್ಮನದು ಯಾವಾಗಲೂ ಒಂಟಿ ಬದುಕಲ್ಲ. ಮಂಜವ್ವ ಎಂಬುದೇ ಕೂಡು ಕುಟುಂಬದ ಮೂರ್ತ ಸ್ವರೂಪ. ಈ ಮಹಾತಾಯಿಯದು ಮಾತೃ ಹೃದಯ. ಕಷ್ಟ ಎಂದು ಬಂದವರಿಗೆ ಅಭಯ ನೀಡಿ ಆಶ್ರಯ ಕಲ್ಪಿಸುವುದೆ ಈ ತಾಯಿಯ ಗುಣವಾಗಿದೆ. ಮಂಜಮ್ಮ ತಾನು ಅನುಭವಿಸಿದ ಎಲ್ಲಾ ಸಂಕಷ್ಟಗಳನ್ನು ಎಂದು ಮರೆತವರಲ್ಲ. ಹೀಗಾಗಿ ಸಮಾಜದಲ್ಲಿ ಮಂಗಳಮುಖಿಯರು ಅನುಭವಿಸುತ್ತಿರುವ ಯಾತನೆಯ ಬಿಸಿಯನ್ನು ಸ್ವತಃ ಅನುಭವಿಸಿದವರಾಗಿದ್ದಾರೆ. ಹೀಗಾಗಿ ಯಾವುದೇ ಮಂಗಳಮುಖಿಯರು ಸಮಾಜದಿಂದ ತಿರಸ್ಕರಿಸಲ್ಪಟ್ಟಿದ್ದರು ಕೂಡ ಅಂತಹವರಿಗೆ ಆಶ್ರಯ ಕಲ್ಪಿಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೆ ಹಲವಾರು ದೀನ ದಲಿತರಿಗೆ ಆಶ್ರಯಧಾತರಾಗಿ ಮಂಜಮ್ಮ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ಮಂಜಮ್ಮ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಗ್ರಾಮದಲ್ಲಿ ಪುಟ್ಟ ಮನೆಯೊಂದನ್ನು ನಿರ್ಮಿಸಿಕೊಂಡು ದಮನಿತರ ಸೇವೆಯನ್ನು ಮಾಡುವ ಕಾಯಕದಲ್ಲಿ ಸದಾ ತಲ್ಲಿನರಾಗಿದ್ದಾರೆ. ಇದು ಅವರ ಮಾತೃ ಮೌಲ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ.
ಮಂಜಮ್ಮನದು ಬಹುಮುಖಿ ವ್ಯಕ್ತಿತ್ವ. ಯಾವುದೆ ಒಂದು ಕಾರ್ಯದಲ್ಲಿ ಮಾತ್ರ ತನ್ನನ್ನು ತೊಡಗಿಸಿಕೊಂಡು ಸುಮ್ಮನಿರುವವರಲ್ಲ. ಕಲಾ ಕ್ಷೇತ್ರಕ್ಕೆ ಬಂದರೆ ಅವರು ಒಬ್ಬ ಜೋಗತಿಯಾಗಿ, ದೇವತೆಯನ್ನು ಆರಾಧಿಸುವುದರೊಂದಿಗೆ, ಜೋಗತಿ ನೃತ್ಯದಲ್ಲಿ ತನ್ನದೆ ಆದ ಛಾಪು ಮೂಡಿಸಿದ ಕೀರ್ತಿ ಇವರದಾಗಿದೆ. ಜೋಗತಿ ನೃತ್ಯದಲ್ಲಿನ ಇವರ ಸಾಧನೆಯು ಇವರನ್ನು ಉತ್ತುಂಗ ಶಿಖರದತ್ತ ಕೊಂಡೊಯ್ದಿದೆ. ಈ ಜೋಗತಿ ಕಲೆಯು ಅವಸಾನದ ಅಂಚಿನಲ್ಲಿರುವಾಗ ಇದಕ್ಕೆ ಮರುಜೀವ ನೀಡಿದವರು ಮಂಜಮ್ಮ ಎಂದರೆ ತಪ್ಪಾಗಲಾರದು. ಈ ಜೋಗತಿ ಕಲೆಯನ್ನು ಪ್ರಚಾರಾತ್ಮಕವಾದ ನೆಲೆಯಲ್ಲಿ ಹಲವಾರ ಸಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಇದನ್ನು ಬಳಸಿಕೊಂಡ ಕೀರ್ತಿಗೆ ಇವರು ಭಾಜನರಾಗಿದ್ದಾರೆ. ಆಧುನಿಕ ಸಂಗೀತಾ ಮತ್ತು ನೃತ್ಯಗಳ ಪ್ರಭಾವದಿಂದ ಮೂಲೆಗುಂಪಾಗಿದ್ದ ಮತ್ತು ಯುವಜನತೆ ಮನದ ಮೂಸೆಯಿಂದ ಮರೆಯಾಗುತ್ತಿದ್ದ ಈ ಜೋಗತಿ ನೃತ್ಯ ಮತ್ತು ಕಲೆಯನ್ನು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳ ಮೂಲಕ ಪ್ರದರ್ಶನ ನೀಡಿ, ಇದರ ಬಗೆಗೆ ಅರಿವು ಮೂಡಿಸುವಲ್ಲಿ ಮಂಜಮ್ಮ ಜೋಗತಿಯ ಕಾಣ್ಕೆಯು ಅಪಾರವಾಗಿದೆ. ಹಾಗೆಯೇ ಈ ಜೋಗತಿ ನೃತ್ಯವನ್ನು ಯುವ ಪೀಳಿಗೆಗೆ ಪರಿಚಯಿಸುವ ಮತ್ತು ಈ ಕಲೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ನೆಲೆಯಲ್ಲಿ ತಮ್ಮ ಹೋರಾಟವನ್ನು ಮಂಜಮ್ಮ ಮುಂದುವರೆಸಿಕೊಂಡು ಬಂದಿದ್ದಾರೆ.
ಮಂಜಮ್ಮನ ಕಲಾಸೇವೆ ಜೋಗತಿ ನೃತ್ಯಕ್ಕೆ ಮಾತ್ರ ಸೀಮಿತವಾದುದಲ್ಲ. ಅದರಾಚೆ ನಾಟಕ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ. ಆರಂಭಿಕ ಹಂತದಲ್ಲಿ ತಮ್ಮ ಹಸಿವನ್ನು ನೀಗಿಸಲು ದೇವಿಯ ಮಹಾತ್ಮೆಯನ್ನು ಪ್ರಧಾನವಾಗಿಟ್ಟುಕೊಂಡು ಬೀದಿ ನಾಟಕಗಳನ್ನು ಪ್ರದರ್ಶನ ಮಡುವ ಮೂಲಕ ಜೀವನವನ್ನು ಆರಂಭಿಸಿದ ಮಂಜಮ್ಮ ಜೋಗತಿಯು ರೇಣುಕೆಯ ಪಾತ್ರಕ್ಕೆ ಜೀವ ತುಂಬಿದರು. ಹೀಗೆ ಬೀದಿ ನಾಟಕಗಳ ಮೂಲಕ ಪ್ರದರ್ಶನವನ್ನು ಆರಂಭಿಸಿದ ಮಂಜಮ್ಮ ಸಾಮಾಜಿಕ ಅರಿವು ಮೂಡಿಸುವ ನೆಲೆಯಲ್ಲಿ ಏಡ್ಸ್, ಮಲೇರಿಯಾ, ಪೋಲಿಯೊ, ಸ್ವಚ್ಚತೆಯ ಅರಿವು ಮೂಡಿಸುವ ಹಲವಾರು ನಾಟಕಗಳನ್ನು ಪ್ರದರ್ಶನ ಮಾಡುತ್ತ ಬಂದಿದ್ದಾರೆ. ಹಾಗೆಯೇ ಮುಂದುವರೆದು ಹಲವಾರು ಪೌರಾಣಿಕ ನಾಟಕಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ತನ್ನ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ದೃಢ ದೇಹಕಾಯರಾದ ಮಂಜಮ್ಮ ಭೀಮ, ದುರ್ಯೋಧನ, ಹಿರಣ್ಯಕಶ್ಯಪು ಪಾತ್ರಗಳ ಮೂಲಕ ಪುರುಷ ಪಾತ್ರಧಾರಿಗಳು ನಾಚುವಂತೆ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಹೀಗೆ ಮುಂದುವರೆದ ಇವರ ಸಾಧನೆಯು ಇಂದಿಗೂ ತನ್ನ ಜೀವಂತಿಕೆಯನ್ನು ಕಾಯ್ದುಕೊಂಡಿದ್ದು, ಹಲವಾರು ನಾಟಕಗಳ ಪ್ರದರ್ಶನದ ಜೊತೆಗೆ ಯುವ ಸಮುದಾಯಕ್ಕೆ ನಾಟಕ ತರಬೇತಿ ನೀಡುವ ಜವಬ್ದಾರಿಯನ್ನು ಹೊತ್ತಿದ್ದಾರೆ. ಹೀಗಾಗಿ ಜೋಗತಿ ನೃತ್ಯ ಮತ್ತು ನಾಟಕ ಕ್ಷೇತ್ರಗಳಲ್ಲಿ ಮಂಜಮ್ಮನ ಸಾಧನೆಯು ಅಪಾರವಾದುದಾಗಿದೆ.
ಮಂಜಮ್ಮ ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಯಾದವರು. ಇದು ಅವರ ದೇಹದಲ್ಲಾದ ಜೈವಿಕ ಬದಲಾವಣೆ. ಆದರೆ ಈ ಜೈವಿಕ ಕ್ರಿಯೆಯಿಂದ ಉಂಟಾದ ಬದಲಾವಣೆಯ ಪರಿಣಾಮವಾಗಿ ಸಮಾಜದಲ್ಲಿ ಹಲವಾರು ಸಂಕಷ್ಟಗಳನ್ನು ಅನುಭವಿಸಿದರು. ಈ ಸಂಕಷ್ಟಗಳು ಅತಿಯಾದಾಗ ಸಾವಿಗೆ ಶರಣಾಗಲು ಮುಂದಾದರು. ಆದರೆ ಸಾವನ್ನು ಜಯಿಸಿದ ಮಂಜಮ್ಮ ಇಂದು ಸಾಧನೆಯ ಶಿಖರದಲ್ಲಿದ್ದಾರೆ. ಅಂದು ತಾವು ಹೆಣ್ಣಾಗಿ ಮನೆಯನ್ನು ತೊರೆದಾಗ ಒಂದು ಕಾಟನ್ ಸೀರೆ ಮಾತ್ರ ಇವರ ಬಳಿ ಇದ್ದಿದ್ದು. ಆದರೆ ಈ ಬಡತನಕ್ಕೆ ಅಂಜದ ಮಂಜಮ್ಮ ನಿಷ್ಠೆ ಮತ್ತು ಪ್ರಾಮಾಣಿಕತೆಯ ಮೂಲಕ ಇಂದು ಸಮಾಜದಲ್ಲಿ ಉತ್ತಮವಾದ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ. ಅಂದು ಕೇವಲ ಒಂದು ಸೀರೆಯನ್ನುಟ್ಟು ಹೊರಬಂದ ಈ ಮಹಾತಾಯಿಯು ಇಚಿದು ತನ್ನಲ್ಲಿ ಹಲವಾರು ಸೀರೆಗಳು ಇರುವುದನ್ನು ನೆನೆದು ಸಂತೋಷ ಪಡುತ್ತಾರೆ. ಮಂಜಮ್ಮ ಆಸ್ತಿಪಾಸ್ತಿಯನ್ನು ಸಂಪಾದಿಸಿದವರಲ್ಲ. ದೀನ ದಲಿತರ ಹಾರೈಕೆ ಮತ್ತು ಅವರ ಪ್ರೀತಿಯನ್ನು ಸಂಪಾದಿಸುವುದೆ ಆಸ್ತಿಯೆಂದು ಭಾವಿಸಿದವರು. ಸೀರೆಯೊಂದಿಗಿನ ಇವರ ನಂಟು ಹೆಣ್ತನದ ಪ್ರತಿರೂಪವಾಗಿದೆ. ಇದರೊಂದಿಗಿನ ಅವರ ನಂಟು ಭಾವನಾತ್ಮಕ ಸ್ವರೂಪದಿಂದ ಕೂಡಿದೆ.
ಮಂಜಮ್ಮನವರ ಕಲಾಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಸರ್ಕಾರವು ನೀಡುವ ಉನ್ನತ ಪುರಸ್ಕಾರವಾಗಿರುವ ‘ಕನ್ನಡ ರಾಜ್ಯೋತ್ಸವ’ ಪ್ರಶಸ್ತಿಯು ಇವರ ಮುಡಿಗೇರಿದೆ. ಹಾಗೆಯೇ ಇವರ ಕಲಾಸೇವೆ ಹಾಗೂ ಸಾಮಾಜಿಕ ಕಳಕಳಿಯನ್ನು ಗಮನಿಸಿದಂತಹ ಹಲವಾರು ಸಂಘ ಸಂಸ್ಥೆಗಳು ಹಲವಾರು ಪುರಸ್ಕಾರ ಹಾಗೂ ಸನ್ಮಾನದ ಮೂಲಕವಾಗಿ ಇವರನ್ನು ಗೌರವಿಸಿವೆ. ಸಾಧನೆಗೆ ಹೆಣ್ಣು ಗಂಡು, ಮೇಲು ಕೀಳು, ಶ್ರೇಷ್ಠ ಕನಿಷ್ಟವೆಂಬ ಯಾವುದೇ ಅಡ್ಡಿ ಆತಂಕಗಳಿಲ್ಲ. ಸಾಧಿಸುವ ಛಲವೊಂದಿದ್ದರೆ ಎಂಥ ಪರ್ವತವನ್ನು ಶ್ರಮದ ಮೂಲಕ ಹೇರಿ ಸಾಧಿಸಬಹುದು ಎಂಬುದನ್ನು ಮಂಜಮ್ಮ ಸಾಧಿಸಿ ತೋರಿಸಿದ್ದಾರೆ. ಮಂಜಮ್ಮನದು ಸದಾ ತುಡಿಯುವ ಮಾತೃ ಹೃದಯ. ಈ ಮಹಾತಾಯಿಯ ಮಾತೃ ಹೃದಯವು ಕೇವಲ ದಮನಿತ ಸಮುದಾಯದ ಮಾನವ ಲೋಕಕ್ಕೆ ಮಾತ್ರ ಮಿಡಿಯುತ್ತ ಬಂದಿಲ್ಲ. ಅದರಾಚೆಗಿನ ಪ್ರಾಣಿ ಪಕ್ಷಿ ಸಂಕುಲಕ್ಕೂ ತನ್ನ ಅಂತಃಕರಣದ ತುಡಿತವನ್ನು ವ್ಯಕ್ತಪಡಿಸಿಕೊಂಡು ಬಂದಿದೆ. ಇದಕ್ಕೆ ಸಾಕ್ಷಿಯಾಗಿ ಈ ತಾಯಿಯು ತನ್ನ ಕುಟೀರದೊಳಗೆ ವಿವಿಧ ಪ್ರಾಣಿ ಸಂಕುಲಕ್ಕೆ ಆಶ್ರಯ ನೀಡಿ, ತನ್ನ ಮಕ್ಕಳಂತೆ ಪ್ರೀತಿಯುಣಿಸುತ್ತಾ ಬಂದು, ಅವುಗಳ ನೋವಿಗೆ ಮಿಡಿದಿದ್ದಾರೆ. ಮಂಜಮ್ಮ ಎಂಬ ಈ ಮಹಾತಾಯಿಯು ತನ್ನಂತೆ ಹಲವಾರು ಮಂಗಳಮುಖಿಯರಿಗೆ ಆಶ್ರಯ ನೀಡುವುದರ ಜೊತೆಗೆ, ಆಶ್ರಯ ಕಳೆದುಕೊಂಡ ವೃದ್ಧರು ಹಾಗೂ ತಂದೆ ತಾಯಿಗಳ ಪ್ರೀತಿಯಿಂದ ವಂಚಿತರಾದ ಅನಾಥ ಮಕ್ಕಳಿಗೆ ಆಶ್ರಯಧಾತೆಯಾಗಿ ತನ್ನ ಮಾತೃ ಶ್ರೀಮಂತಿಕೆಯನ್ನು ಹಾಗೂ ತಾಯ್ತನವನ್ನು ಹೆಚ್ಚಿಸಿಕೊಂಡಿದ್ದಾರೆ. ಇದು ಮಂಜಮ್ಮ ಜೋಗತಿಯ ಬದುಕಿನ ಕಿರು ಪರಿಚಯ ಮಾತ್ರವಾಗಿದೆ. ಇವರ ಸಾಧನೆಯು ನಿಸ್ವಾರ್ಥದಿಂದ ಕೂಡಿದ್ದು, ಮಾತು ಕೃತಿಯಾಗಿ, ಕಾರ್ಯವಾಗಿ ಹೊರಹೊಮ್ಮಿದೆ. ಆದ ಕಾರಣ ಇವರನ್ನು, ಇವರ ಕಾರ್ಯವನ್ನು ಎಷ್ಟು ವರ್ಣಿಸಿದರೂ ಅತಿಶಯೋಕ್ತಿಯಾಗಲಾರದು. ಮಂಜಮ್ಮ ಜೋಗತಿಯೆಂಬ ಈ ಮಹಾತಾಯಿಯು ಕಲಾಕ್ಷೇತ್ರಕ್ಕೆ ಇನ್ನಷ್ಟು ಸೇವೆಯನ್ನು ನೀಡಲಿ, ಇವರ ಸಾಮಾಜಿಕ ಕಳಕಳಿ ಸದಾ ಹೀಗೆ ಮುಂದುವರೆಯುವಂತಹ ಆರೋಗ್ಯವನ್ನು ದೇವರು ಕರಣಿಸಲಿ ಎಂಬುದೆ ನಮ್ಮ ಹಾರೈಕೆ.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ನೆಲದನಿ
ರೈತ ಹೋರಾಟಗಾರ `ಸಹಜಾನಂದ ಸರಸ್ವತಿ’

ಉತ್ತರಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ 22 ಫೆಬ್ರವರಿ 1889 ರಂದು ಜನಿಸಿ, ಜೂನ್ 26,1950 ರಂದು ನಿಧನರಾದ ಸಹಜಾನಂದ್ ಸರಸ್ವತಿ ಅವರ ನಿಜವಾದ ಹೆಸರು ನವರಂಗ್ ರೈ. ಹೋರಾಟ ಮನೋಭಾವದ ಸಹಜಾನಂದರು ಬಹುಮುಖ ಪ್ರತಿಭೆ. ಕ್ರಾಂತಿಕಾರಿ ರೈತ ನಾಯಕ, ಇತಿಹಾಸಕಾರ, ದಾರ್ಶನಿಕ, ಬರಹಗಾರ. ಅವರ ಮುಖ್ಯ ಬರಹ-ಕೃತಿ ಬಿಹಾರವನ್ನು ಕೇಂದ್ರೀಕರಿಸಿದೆ. ಅವರು ಬಿಹ್ತಾದಲ್ಲಿ ಆಶ್ರಮವನ್ನು ಸ್ಥಾಪಿಸಿದ್ದರು ಮತ್ತು ಅಲ್ಲಿಂದ ತಮ್ಮ ವೃದ್ದಾಪ್ಯದ ದಿನಗಳಲ್ಲಿ ತಮ್ಮ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಿದರು.
ಸಹಜಾನಂದರು 1929ರಲ್ಲಿ ಬಿಹಾರ ಪ್ರಾಂತೀಯ ಕಿಸಾನ್ ಸಭೆಯನ್ನು (ಬಿಪಿಕೆಎಸ್) ರಚಿಸಿದರು. ಜಮೀನ್ದಾರರಿಂದ ಭೂ ಹಿಡುವಳಿ ಕುರಿತಾಗಿ ರೈತರ ಮೇಲೆ ನಡೆಯುತ್ತಿದ್ದ ದಾಳಿಗಳ ವಿರುದ್ಧ ರೈತರ ಕುಂದುಕೊರತೆಗಳನ್ನು ಒಟ್ಟುಗೂಡಿಸುವ ಸಲುವಾಗಿ ಈ ಸಂಘಟನೆ-ಹೋರಾಟವನ್ನು ಅವರು ಆರಂಭಿಸಿದರು. ಆ ಮೂಲಕ ಭಾರತದಲ್ಲಿ ರೈತರ ಚಳುವಳಿಗಳಿಗೆ ನಾಂದಿ ಹಾಡಿದರು.
ಕ್ರಮೇಣ ರೈತ ಚಳುವಳಿ ತೀವ್ರಗೊಂಡಿತು ಮತ್ತು ಭಾರತದ ಉಳಿದ ಭಾಗಗಳಿಗೆ ಹರಡಿತು. ಇದು 1936 ರಲ್ಲಿ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ರಚನೆಗೆ ಕಾರಣವಾಯಿತು, ಅವರು ಅದರ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. ಕಿಸಾನ್ ಪ್ರಣಾಳಿಕೆ ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಪಡಿಸಬೇಕು ಮತ್ತು ಗ್ರಾಮೀಣ ಸಾಲಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿತು. ಆ ಜಮೀನ್ದಾರರನ್ನು ಬ್ರಿಟಿಷ್ ಸರ್ಕಾರ ಆದಾಯ ಸಂಗ್ರಹಕ್ಕಾಗಿ ನೇಮಕ ಮಾಡಿಕೊಂಡಿತ್ತು.
ಇದನ್ನೂ ಓದಿ | ಕ್ರಾಂತಿಕಾರಿ ರೈತ ಹೋರಾಟದ ಸ್ಫೂರ್ತಿಯ ಚಿಲುಮೆ `ಅಜಿತ್ ಸಿಂಗ್‘
ಭೂ ಮಾಲೀಕತ್ವವನ್ನು ಉಳಿಸಲು ಮತ್ತು ರೈತರ ಉಳುಮೆಯ ಹಕ್ಕುಗಳನ್ನು ಉಳಿಸಿಕೊಳ್ಳಲು ನಡೆದ ಈ ಚಳುವಳಿ, ಬಿಹಾರ ಮತ್ತು ಯುನೈಟೆಡ್ ಪ್ರಾಂತ್ಯದ ಕಾಂಗ್ರೆಸ್ ಸರ್ಕಾರಗಳೊಂದಿಗೆ ಸಂಘರ್ಷ ಎದುರಿಸಬೇಕಾಗಿತು.
ಸಹಜಾನಂದ ಸರಸ್ವತಿ 1937-1938ರಲ್ಲಿ ಬಿಹಾರದಲ್ಲಿ ಬಕಾಶ್ತ್ ಚಳವಳಿಯನ್ನು ಸಂಘಟಿಸಿ ಮುನ್ನಡೆಸಿದರು. ಬಕಾಶ್ತ್ ಎಂದರೆ ಸ್ವಯಂ-ಕೃಷಿ, ಸ್ವಯಂ ಉಳುಮೆ. ಈ ಆಂದೋಲನವು ಜಮೀನ್ದಾರರ ಬಕಾಶ್ತ್ ಜಮೀನುಗಳಿಂದ ಟೆನೆಂಟ್ಗಳನ್ನು ಹೊರಹಾಕುವುದರ ವಿರುದ್ಧವಾಗಿತ್ತು. ಇದು ಬಿಹಾರ ಹಿಡುವಳಿ ಕಾಯ್ದೆ ಮತ್ತು ಬಕಾಶ್ತ್ ಭೂ ತೆರಿಗೆಯನ್ನು ಅಂಗೀಕರಿಸಲು ಕಾರಣವಾಯಿತು. ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಸಹಜಾನಂದರನ್ನು ಬಂಧಿಸಲಾಗಿತ್ತು.
(ಕೃಪೆ : Mass Media Foundation)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ
ಸಾರೇಕೊಪ್ಪದ ಬಂಗಾರ ; ಅಕ್ಷರತುಂಗಾವನ್ನು ನೆನೆದು

- ಸುರೇಶ ಎನ್ ಶಿಕಾರಿಪುರ
ನನ್ನಮ್ಮ ಅನಕ್ಷರಸ್ತೆ ಆಕೆ ಅಕ್ಷರ ಬರೆಯುವುದು ಕಲಿತದ್ದು ಅಂದಿನ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರು ಜಾರಿಗೆ ತಂದಿದ್ದ ‘ಅಕ್ಷರ ತುಂಗಾ’ ಎಂಬ ಯೋಜನೆಯಿಂದ. ಅನಕ್ಷರಸ್ಥ ಹಿಂದುಳಿದ ವರ್ಗಗಳ ಜನ ಸಣ್ಣದಾಗಿ ದಿನಪತ್ರಿಕೆ ಓದಲು ರಾಜಕೀಯ ಸಾಮಾಜಿಕ ವೈಚಾರಿಕ ವಿಚಾರಗಳನ್ನು ಸರ್ಕಾರಗಳ ಯೋಜನೆಗಳು ವಿದ್ಯಾಮಾನಗಳನ್ನು ಅರ್ಥಮಾಡಿಕೊಳ್ಳಲು ಕಲಿತದ್ದು ಬಂಗಾರಪ್ಪನೆಂಬ ಹಿಂದುಳಿದ ವರ್ಗದ ನಾಯಕ ಜಾರಿಗೊಳಿದ್ದ ಆ ಯೋಜನೆಯಿಂದ.
ಆದರೆ ತಮ್ಮ ರಾಜಕೀಯ ಹಿತಾಸಕ್ತಿ ಮತ್ತು ದಲಿತರು ಹಿಂದುಳಿದವರು ಅಕ್ಷರ ಕಲಿಯಬಾರದೆಂಬ ಪಾರಂಪರಿಕ ದ್ವೇಷ ಮತ್ತು ಹೊಟ್ಟೆಕಿಚ್ಚಿನ ಕಾರಣಕ್ಕೆ ಮೇಲ್ಜಾತಿಗಳು ಇದರ ಮೇಲೆ ಅಪಪ್ರಚಾರ ಶುರುವಿಟ್ಟರು. ಅಕ್ಷರ ತುಂಗಾ ಯೋಜನೆಯ ಕುರಿತ ಅಸಮಧಾನ ಅಪಪ್ರಚಾರದ ಒಂದು ಘೋಷಣೆ ಹೇಗಿತ್ತೆಂದರೆ,
“ಅಕ್ಷರತುಂಗಾ ಮೂರ್ಕೋಟಿ ನುಂಗ” ಇದನ್ನು ಅಂದಿನ ದಲಿತವಿರೋಧೀ ಹಿಂದುಳಿದವರ ವಿರೋಧಿಗಳು ಯಶಸ್ವಿಯಾಗಿ ಪ್ರಚಾರ ಮಾಡಿದರು. ಅಕ್ಷರ ಕಲಿಯುತ್ತಿದ್ದ ಜನ ಕೆಲವರು ಅದನ್ನು ಹೌದೆಂದೇ ನಂಬಿದ್ದರು. ಬಂಗಾರಪ್ಪ ಅಪ್ಪಟ ಜಾನಪದ ನಾಯಕ. ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಹಳ್ಳಿ ಸೊಗಡು ಸಂಪರ್ಕ ಬಿಟ್ಟುಕೊಡದ ಅಪ್ಪಣ ಹಳ್ಳೀಯ.
ಅವರಿಗೆ ಅಕ್ಷರ ಜ್ಞಾನವಿಲ್ಲದ ಕಾರಣಕ್ಕೇ ದಲಿತರು ಹಿಂದುಳಿದವರು ಹಿಂದೇಯೇ ಉಳಿದಿರುವುದು ಎಂಬ ಸ್ಪಷ್ಟ ತಿಳುವಳಿಕೆಯಿತ್ತು. ಅದಕ್ಕಾಗೇ ಅಂಬೇಡ್ಕರ್ ಗಾಂಧೀಜಿ ನೆಹರು ದೇವರಾಜ ಅರಸು ಹೋರಾಡಿದ್ದರೆಂಬ ಅರಿವಿತ್ತು ಹಾಗಾಗಿಯೇ ಶಾಲೆ ಕಲಿಯದ ಹಿರಿಯರು ಯುವಕರು ಆ ಯೋಜನೆಯ ಮೂಲಕ ನಾಲಕ್ಕಕ್ಷರ ಕಲಿತು ತಮ್ಮ ಮೇಲಾಗುವ ಅನ್ಯಾಯ ಅಕ್ರಮ ದಬ್ಬಾಳಿಕೆಗಳನ್ನು ಅರ್ಥ ಮಾಡಿಕೊಳ್ಳುವಂತಾಗಲಿ ಎಂಬುದೇ ಅವರ ಉದ್ಧೇಶವಾಗಿತ್ತು.
ಏಕೆಂದರೆ ಅನಕ್ಷರಸ್ತ ಬಡ ರೈತನಿಂದ ನಕಲಿ ಸಹಿ ಮಾಡಿಸಿಕೊಂಡು ಅವನ ಹೊಲ ಮನೆ ನುಂಗಿ ನೀರುಕುಡಿದ ಮೇಲ್ಜಾತಿ ಹಣವಂತರ ದೌರ್ಜನ್ಯಗಳ ಬರ್ಬರತೆ ಹೇಗಿರುತ್ತಿತ್ತು ಎಂಬುದನ್ನು ಆ ಕಾಲದ ಹಿರಿಯ ತಲೆಮಾರಿನವರಿಗೆ ಕೇಳಿದರೆ ಗೊತ್ತಾಗುತ್ತದೆ. ಕರಣಿಕ ಗೌಡ ಪಟೇಲ ಎಂಬುವವರೆಲ್ಲಾ ಅಕ್ಷರ ಬಲ ದೊಣ್ಣೆಯ ಬಲ ಖಡ್ಗದ ರಾಜಕೀಯ ಬಲದಿಂದಲೇ ದಮನಿತ ವರ್ಗಗಳನ್ನು ಹತ್ತಿಕ್ಕಿದ ಚರಿತ್ರೆಯೇ ನಮ್ಮ ಬೆನ್ನಿಗಿದೆ.
ಇಂತಹಾ ದುರುಳರಿಂದ ದುಡಿಯುವ ಶ್ರಮಜೀವಿ ಜನರನ್ನು ಪಾರು ಮಾಡಲು ಕೊನೆಯಪಕ್ಷ ಒಂದು ಅಗ್ರಿಮೆಂಟ್ ಕಾಪಿಯನ್ನೋ ನೋಂದಣಿ ವ್ಯವಹಾರವನ್ನೋ ಓದಿ ತಿಳಿದುಕೊಳ್ಳುವಂತಾಗಲಿ ಇದರಿಂದ ಸಾಕಷ್ಟು ಶೋಷಣೆಯನ್ನು ತಪ್ಪಿಸಬಹುದೆಂಬುದು ಅವರ ದೂರದೃಷ್ಟಿಯಾಗಿತ್ತು. ಇದು ಮೇಲ್ಜಾತಿ ಮನಸುಗಳಿಗೆ ಆಗಿಬರಲಿಲ್ಲ ಅವರು ಹುನ್ನಾರದ ಬೀಜ ಬಿತ್ತಿದರು “ಅಕ್ಷರತುಂಗಾ ಮೂರ್ಕೋಟಿ ನುಂಗಾ” ಎಂದೇ ಕೂಗಿದರು.
ನನ್ನೂರಿನ ಬಿಜೆಪಿಯ ಈರಾದಿಈರರೆಲ್ಲ ಇದನ್ನು ದನಿ ಎತ್ತರಿಸಿ ಕೂಗಿದ್ದೇ ಕೂಗಿದ್ದು ಹಾಗೆ ಕೂಗುವವರಲ್ಲಿ ಮುಗ್ಧ ಅನಕ್ಷರಸ್ಥ ಜನತೆಯೂ ಇರುತ್ತಿತ್ತು. ಆದರೆ ‘ಅಕ್ಷರತುಂಗಾ’ ಯೋಜನೆಯಲ್ಲಿ ಬಂಗಾರಪ್ಪ ಗಂಟು ಹೊಡೆದರು ಎಂಬುದಕ್ಕೆ ಸಾಕ್ಷಿಯೇ ಇಲ್ಲ. ಸಾಬೀತಾಗಲೂ ಇಲ್ಲ.
ಹಿಂದುಳಿದವರ್ಗದವನೊಬ್ಬ ಅಧಿಕಾರ ಉನ್ನತಸ್ಥಾನದಲ್ಲಿ ಕೂರುವುದು ಶೋಷಿತ ಸಮುದಾಯಗಳು ಅಕ್ಷರ ಕಲಿಯುವುದು ಈ ದೇಶದ ಮೇಲ್ಜಾತಿಗಳಿಗೆ ಯಾವತ್ತೂ ಆಗದ ವಿಚಾರ.
ದೇವರಾಜ ಅರಸರಿಗೂ ಬಂಗಾರಪ್ಪನವರಿಗೂ ಕಾಡಿದರು ಸಿದ್ದರಾಮಯ್ಯನವರಿಗೂ ಕಾಡಿದರು ಮುಂದೆ ಯಾರೇ ದಲಿತ ಹಿಂದುಳಿದವ ಅಧಿಕಾರಕ್ಕೆ ಬಂದರೂ ಕಾಡುತ್ತಾರೆ ಸಾಧ್ಯವಾದಷ್ಟು ಆ ಸಮುದಾಯಗಳವರು ಅಧಿಕಾರದ ಹಂತಕ್ಕೆ ಬರುವುದನ್ನು ತಡೆಯಲು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಎಚ್ಚೆತ್ತುಕೊಳ್ಳದಿದ್ದರೆ ಕಷ್ಟ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ
ನುಡಿಯ ಒಡಲು -27 | ನುಡಿಯೆಂಬ ಅಪ್ರಮಾಣದ ಪ್ರಮಾಣೀಕರಣ

- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ನುಡಿ, ಪ್ರಾದೇಶಿಕ ನುಡಿ ಇಲ್ಲವೇ ರಾಷ್ಟ್ರೀಯ ನುಡಿ ಯಾವುದಾದರೂ ಇರಬಹುದು ಅಂತಹ ನುಡಿಯ ಚಹರೆಗಳು ಎರಡು ಪ್ರಮುಖ ಆಯಾಮಗಳನ್ನು ಒಳಗೊಂಡಿರುತ್ತವೆ. ಒಂದು ರಚನೆ ಮತ್ತೊಂದು ಕ್ರಿಯೆ. ನಿರಂತರ ಬದಲಾವಣೆಯ ಪ್ರಕ್ರಿಯೆಯಲ್ಲಿ ರೂಪಿಸಿಕೊಂಡ ನುಡಿಯ ರಚನೆ ಮತ್ತು ಕ್ರಿಯೆಯ ವಿಭಿನ್ನ ನೆಲೆಗಳನ್ನು ಸಮಾಜಭಾಷಾಶಾಸ್ತ್ರೀಯ ಮಾದರಿಯಲ್ಲಿ ಬಿಡಿಸಿ ನೋಡಬೇಕಿದೆ.
ಹೀಗೆ ಯಾವುದೇ ನುಡಿಯ ಯಾಜಮಾನಿಕೆ ನೆಲೆಗೊಳ್ಳಲು ಆ ನಾಡಿನ ರಾಜ ಇಲ್ಲವೇ ಅರಸು ಮನೆತನಗಳ ಕೊಡುಗೆಯೂ ಕಾರಣವಾಗಿರದೆ ಇರಲಾರದು. ನುಡಿ ಬಗೆಗಿನ ಇಂತಹ ಬೆಳವಣಿಗೆಗಳನ್ನು ವಿಶ್ಲೇಷಿಸುವ ಅಗತ್ಯವಿದೆ. ಈ ವಿದ್ಯಮಾನಗಳು ಹಾಗೂ ಬೆಳವಣಿಗೆಯನ್ನು ಅರಿತುಕೊಳ್ಳುವ ಮೂಲಕ ನುಡಿಯ ಒಡಲಲ್ಲೇ ಹುದುಗಿರುವ ಅಸಮಾನತೆಗಳನ್ನು ಗುರುತಿಸಬಹುದು.
ಡೈಗ್ಲಾಸಿಂ ಎಂಬ ಅರಿಮೆಪದದ ಮೂಲಕ ನುಡಿಯ ಇಂತಹ ಅಸಮಾನ ನೆಲೆಗಳನ್ನು ಬಿಡಿಸಿ ನೋಡಬಹುದು. ಆದರೆ ಡೈಗ್ಲಾಸಿಯ ಕುರಿತ ಫರ್ಗ್ಯೂಸನ್ (1986:219) ಅವರ ವಿಶ್ಲೇಷಣಾ ಮಾದರಿಗೆ ಸಾಕಷ್ಟು ಮಿತಿಗಳಿರುವುದರಿಂದ ಡೈಗ್ಲಾಸಿಯದ ಪೂರ್ಣ ಚಿತ್ರಣ ಸಿಗುವುದಿಲ್ಲ. ಹಾಗಾಗಿ ಇವರ ತಾತ್ವಿಕ ಚೌಕಟ್ಟಿಗೆ ಪರ್ಯಾಯವಾಗಿ ಇನ್ನೊಂದು ಚೌಕಟ್ಟನ್ನು ರೂಪಿಸಿಕೊಂಡು ವಿವರಿಸಬಹುದು.
ಅಂದರೆ ಡೈಗ್ಲಾಸಿಯೆಂಬುದು ಕೇವಲ ಒಂದೇ ನುಡಿಯೊಳಗಣ ಏರುಪೇರುಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಬದಲಾಗಿ ನುಡಿಯೊಳಗಿನ ಅಸಮಾನತೆಗೆ ಬೇರೊಂದು ನುಡಿಯೂ ಕಾರಣವಾಗಿರಲೂ ಸಾಧ್ಯವಿದೆ (ಎತ್ತುಗೆಗಾಗಿ ಸಂಸ್ಕೃತ ಕನ್ನಡ ಹಾಗೂ ಸಂಸ್ಕೃತಕ್ಕೆ ಹೊರತಾದ ಕನ್ನಡ ಅಂದರೆ ದೇಶಿ ಕನ್ನಡ). ಆದ್ದರಿಂದ ಯಾವುದೇ ಒಂದು ನುಡಿ ಇಲ್ಲವೇ ಒಳನುಡಿಯು ಬೇರೊಂದು ನುಡಿ ಇಲ್ಲವೇ ಒಳನುಡಿಯ ಪ್ರಾಬಲ್ಯಕ್ಕೆ ಒಳಪಟ್ಟಾಗ ಅಂತಹ ನುಡಿ ರೂಪಾಂತರಗೊಳ್ಳುವ ಬಗೆಗಳು ಯಾವ ಯಾವ ಸ್ವರೂಪದಲ್ಲಿ ರೂಪುಗೊಳ್ಳುತ್ತವೆ ಅನ್ನುವ ಪ್ರಕ್ರಿಯೆಯನ್ನೂ ಕೂಡ ಡೈಗ್ಲಾಸಿಯ ಎಂದು ಗುರುತಿಸಿಬಹುದು.
ಈ ಡೈಗ್ಲಾಸಿಯ ಹುಟ್ಟಿಸುವ ಡೈಕಾಟಮಿಯೂ ಕೂಡ ಒಂದು ನುಡಿ ಹಾಗೂ ಒಳನುಡಿಗಳ ನಡುವೆ ಇರುವ ಅಧಿಕಾರ ಮತ್ತು ಸಾಮಾಜಿಕ ಅಂತಸ್ತನ್ನು ಪ್ರತಿನಿಧಿಸುವ ಬಗೆಯೇ ಹೊರತು ಬೇರೇನು ಇರಲಾರದು. ಕನ್ನಡದ ಪ್ರಮಾಣಭಾಷೆ ಎನ್ನುವುದು ಸಂಸ್ಕೃತ ಭೂಯಿಷ್ಠ ಭಾಷಿಕ ಸ್ವರೂಪ. ಇದನ್ನೇ ಕನ್ನಡದ ಉನ್ನತ (ದಿ ಹೈ ವೆರೈಟಿ) ನುಡಿ ಪ್ರಭೇದವೆಂದು ಪರಿಗಣಿಸಿರುವುದು. ಇಂತಹ ನುಡಿ ಸನ್ನಿವೇಶವು ಕನ್ನಡದ ಇತರೆ ಒಳನುಡಿಗಳನ್ನು ನಿಮ್ನ (ದಿ ಲೋ ವೆರೈಟಿ) ಪ್ರಭೇದಗಳನ್ನಾಗಿ ರೂಪಿಸಿರಲಕ್ಕೂ ಸಾಧ್ಯ.
ಈ ಎರಡೂ ಬಗೆಯ ಪ್ರಭೇಧಗಳ ನಡುವಿನ ವ್ಯತ್ಯಾಸಗಳನ್ನು ಫರ್ಗ್ಯೂಸನ್ನು ವಿವರಿಸುವ ಮಾದರಿಯಲ್ಲಿ ನೋಡಲು ಸಾಧ್ಯವಿಲ್ಲ. ಏಕೆಂದರೆ ಫರ್ಗ್ಯೂಸನ್ನ ಪ್ರಕಾರ ಡೈಗ್ಲಾಸಿಯ ಎಂಬುದು ಒಂದೇ ನುಡಿಯ ಬೇರೆ ಬೇರೆ ಪ್ರಭೇದಗಳ ನಡುವಣ ಅಂತರಗಳು. ಈ ಅಂತರಗಳನ್ನೇ ಇವನು ಹೈ ಮತ್ತು ಲೋ ಪ್ರಭೇದಗಳೆಂದು ಗುರುತಿಸಿದ್ದಾನೆ. ಇವುಗಳಲ್ಲಿ ಹೈ ವೆರೈಟಿಯೇ ಈ ಮುಂದಿನ ಎಲ್ಲ ವಲಯಗಳಲ್ಲಿ ಕ್ರಿಯಾಶೀಲವಾಗಿರುತ್ತದೆ. ಈ ವಲಯಗಳನ್ನು ನಿಯೋಗ.
ಪ್ರತಿಷ್ಠೆ, ಸಾಹಿತ್ಯ ಪರಂಪರೆ, ಗ್ರಹಿಕೆ, ಪ್ರಮಾಣೀಕರಣ, ನೆಲೆಗೊಳಿಸುವಿಕೆ, ವ್ಯಾಕರಣ, ಶಬ್ದಕೋಶ ಎಂದು ವರ್ಗೀಕರಿಸಿದ್ದಾನೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆಯನ್ನು ಪರಿಶೀಲಿಸಿದಾಗ ಈ ಎರಡೂ ಪ್ರಭೇದಗಳ ನಡುವಿನ ಕಂದರ ಮೇಲೆ ಪಟ್ಟಿ ಮಾಡಿದ ಎಲ್ಲ ನಿಯೋಗಗಳಲ್ಲಿಯೂ ನಿಚ್ಚಳವಾಗಿ ಕಣ್ಣಿಗೆ ರಾಚುತ್ತದೆ ದಿಟ. ಆದರೆ ಫರ್ಗ್ಯೂಸನ್ನ ಮಾದರಿಗೆ ಹೊರತಾದ ಕನ್ನಡದ ಡೈಗ್ಲಾಸಿಯ ಮಾದರಿಯನ್ನು ಇಲ್ಲಿ ಕಾಣಬಹುದು.
ಈಗಾಗಲೇ ಚರ್ಚಿಸಿದಂತೆ ಕನ್ನಡ ಸನ್ನಿವೇಶದಲ್ಲಿ ಹೈ ವೆರೈಟಿ ಅಂದರೆ ಅದು ಸಂಸ್ಕೃತ ಕನ್ನಡವೇ ಆಗಿರುತ್ತದೆ ಹಾಗೂ ಲೋ ವೆರೈಟಿ ಎಂಬುದು ಅದು ದೇಶಿ ಕನ್ನಡವೇ ಆಗಿರುತ್ತದೆ. ಒಂದು ಅಂದಾಜಿನ ಪ್ರಕಾರ ಇಂತಹ ಕನ್ನಡವನ್ನೇ ಮಾರ್ಗ ಹಾಗೂ ದೇಶಿ ಎಂದೂ ವಿಂಗಡಿಸಿರಬಹುದು. ಹೀಗೆ ರೂಪುಗೊಂಡ ಈ ಆಯಾಮಗಳು ಸಾಂಸ್ಕೃತಿಕ, ರಾಜಕೀಯ ಪಲ್ಲಟಕ್ಕೂ ಕಾರಣವಾಗಿವೆ ಎಂಬುದು ಗಮನಾರ್ಹ. ಫರ್ಗ್ಯೂಸನ್ನ ಪ್ರಕಾರ ಹೈ ಹಾಗೂ ಲೋ ವೆರೈಟಿಗಳ ನಡುವಣ ಅಂತರ ಯಾವಾಗಲೂ ಅದು ಸ್ಥಿರವಾಗಿರುತ್ತದೆ.
ಅಂದರೆ ಇವನ ಪ್ರಕಾರ ಡೈಗ್ಲಾಸಿಯವನ್ನು ಕುರಿತು ಚರ್ಚಿಸುವುದೆಂದರೆ ಪ್ರಮಾಣ ನುಡಿಯೊಂದರ ಬೆಳವಣಿಗೆ ಹಾಗೂ ಲಕ್ಷಣಗಳನ್ನು ಕುರಿತು ಚರ್ಚಿಸುವುದೇ ಆಗಿದೆ. ಆದರೆ ಬಕ್ತಿನ್ನ ಹೆಟ್ರೋಗ್ಲಾಸಿಯ ಪರಿಕಲ್ಪನೆಯೊಟ್ಟಿಗೆ ಡೈಗ್ಲಾಸಿಯವನ್ನು ಹೋಲಿಸಿ ನೋಡಿದರೆ ದಿಟವಾಗಿಯೂ ನುಡಿಯ ಒಡಲ ಉರಿ ಎಂತಹದು ಎಂಬುದು ನಿಚ್ಚಳವಾಗುತ್ತದೆ.
ಬಕ್ತಿನ್ನ ಪ್ರಕಾರ ಹೆಟ್ರೋಗ್ಲಾಸಿಯ ಎನ್ನುವುದು ಲೋ ವೆರೈಟಿಯ ಬಹುಳತೆಯನ್ನು ಕುರಿತಾಗಿದೆ ಅಂದರೆ ಹೆಟ್ರೋಗ್ಲಾಸಿಯ ಎಂಬುದು ಅಂಕೆಯಲ್ಲಿಟ್ಟ ನುಡಿ (ಒವರ್ರ್ಚಿಂಗ್) ಹಾಗೂ ಸಾಹಿತ್ಯಕ ಇಲ್ಲವೇ ಮೇಲ್ಮಟ್ಟದ ನುಡಿ (ಲಿಟರರಿ ಆರ್ಎನ್ನೋಬೆಲ್ಡ್)ಗಳ ನಡುವಣ ತಿಕ್ಕಾಟವೇ ಆಗಿರುತ್ತದೆ. ಇದನ್ನು ಹೀಗೂ ಹೇಳಬಹುದು, ನುಡಿಯ ಏಕೀಕರಣ ಹಾಗೂ ವಿಕೇಂದ್ರಿಕರಣದ ನಡುವಿನ ತಿಕ್ಕಾಟವೂ ಆಗಿರುತ್ತದೆ. ಸಂವಿಧಾನಬದ್ಧ ಮಾನ್ಯತೆಯನ್ನು ಪಡೆದಿರುವ ಈ ಕೆಳಗಿನ ವಿಂಗಡನೆಯನ್ನು ಗಮನಿಸಿದರೆ ಬಕ್ತಿನ್ನ ಈ ಪರಿಕಲ್ಪನೆಯ ಮಹತ್ವದ ಆಯಾಮಗಳು ಯಾವವು ಎಂಬುದು ಎದ್ದುಕಾಣುತ್ತವೆ.
1. ಪ್ರಮುಖ ನುಡಿಗಳು / ರಾಷ್ಟ್ರೀಯ ನುಡಿಗಳು
2. ಪ್ರಾದೇಶಿಕ ನುಡಿಗಳು / ಮೈನಾರಿಟಿ ನುಡಿಗಳು
3. ಶಾಸ್ತ್ರೀಯ / ವಿಶೇಷ ಮಾನ್ಯತೆ ಪಡೆದ ನುಡಿಗಳು
ಸ್ಟೀವರ್ಟ್ (ಲ್ಯಾಂಗ್ವೇಜ್ ಆಪ್ ಟೈಪಾಲಜಿ:1962: ಇಂಟರ್ನೆಟ್)ನ ಮಾದರಿಯೂ ಫರ್ಗ್ಯೂಸನ್ ನ ಮಾದರಿಯನ್ನು ಮತ್ತಷ್ಟೂ ಸುಧಾಹರಿಸಿ ನುಡಿ ಸನ್ನಿವೇಶದ ಮತ್ತೊಂದು ಬಗೆಯ ನುಡಿಯ ಅಸಮಾನತೆಯನ್ನು ತೋರಿಸುತ್ತದೆ.
ನುಡಿ ಪ್ರಕಾರಗಳು,ಟೈಪ್ಸ್
ವಿಶೇಷತೆಗಳು, ಆ್ಯಟ್ರಿಬ್ಯೂಟ್ಸ್
1. ಪ್ರಮಾಣ ನುಡಿ
2. ದೇಶಿ ನುಡಿ
3. ಒಳನುಡಿ
ವಿಶೇಷತೆಯ ವಿವರಗಳು
1. ಪ್ರಮಾಣ, 2. ಸ್ವಾಯತ್ತತೆ, 3. ಚಾರಿತ್ರಿಕತೆ, 4. ಚೈತನ್ಯಶೀಲತೆ
ಈ ಮಾದರಿಯು ನುಡಿ ಹಾಗೂ ಒಳನುಡಿಗಳ ನಡುವಣ ಅಸಮಾನ ನೆಲೆಗಳನ್ನು ಸೂಚಿಸುತ್ತದೆ. ಕನ್ನಡ ಇಲ್ಲವೇ ಭಾರತದ ಯಾವುದೇ ಒಂದು ನುಡಿಯ ಒಳನುಡಿಗಳಲ್ಲಿಯೇ ತಾರತಮ್ಯದ ನೆಲೆಗಳನ್ನು ಕಾಣಬಹುದು. ಆದ್ದರಿಂದ ಕ್ಲಾಸಿಕಲ್ ನುಡಿಗೆ ಇನ್ನೂ ಹೆಚ್ಚಿನ ಪಾವಿತ್ರö್ಯತೆಯನ್ನು ಆರೋಪಿಸುವ ಹುನ್ನಾರಗಳು ನಡೆಯುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಜೋಶ್ವಾ ಫಿಶ್ಮನ್ (1980: ಇಂಟರ್ನೆಟ್) ಡೈಗ್ಲಾಸಿಯವನ್ನು ಇನ್ನೊಂದು ಬಗೆಯಲ್ಲಿ ವಿಸ್ತರಿಸುತ್ತಾನೆ. ಇವನ ಪ್ರಕಾರ ಡೈಗ್ಲಾಸಿಯ ಎಂಬುದು ಕೇವಲ ಒಂದೇ ನುಡಿಯ ಪ್ರಭೇದಗಳ ನಡುವಿನ ಸನ್ನಿವೇಶ ಮಾತ್ರವಾಗದೇ ಅದು ಬೇರೆ ಬೇರೆ ನುಡಿಗಳ ನಡುವಣ ನುಡಿ ಸನ್ನಿವೇಶವೂ ಆಗಿರುತ್ತದೆ.
ಬಹುಭಾಷಿಕ ಸನ್ನಿವೇಶದಲ್ಲಂತೂ ಹೈ ಹಾಗೂ ಲೋ ವೆರೈಟಿಗಳು ಯಾವುದೇ ಜೈವಿಕ ನಂಟಸ್ತಿಕೆಯನ್ನು ಹೊಂದದ ನುಡಿ ಪ್ರಭೇದಗಳೂ ಆಗಿರುತ್ತವೆ, ಎತ್ತುಗೆಗಾಗಿ ಸಂಸ್ಕೃತ ಇಲ್ಲವೇ ಸಂಸ್ಕೃತ ಕನ್ನಡ (ಹೈ ವೆರೈಟಿ) ಹಾಗೂ ಕನ್ನಡ (ಲೋ ವೆರೈಟಿ) ಆಗಿರುತ್ತವೆ. ಫಿಶ್ಮನ್ನ ಈ ವಿಶ್ಲೇಷಣೆಯನ್ನು ವಿಸ್ತೃತ ಡೈಗ್ಲಾಸಿಯ ಓದು ಎಂದು ಗುರುತಿಸಲಾಗಿದೆ. ದ್ವಿಭಾಷಿಕ, ಬಹುಭಾಷಿಕ ಸನ್ನಿವೇಶದಲ್ಲಿಯ ಡೈಗ್ಲಾಸಿಯ ಕುರಿತು ಇವನ ಓದುಗಳು ಹೊಸ ಬಗೆಯ ದಾರಿಗಳನ್ನು ತೋರಿಸಿವೆ ಎಂದೇ ಹೇಳಬೇಕಾಗುತ್ತದೆ.
ಒಂದು ಕಡೆಗೆ, ಸಾರ್ವತ್ರಿಕ ನುಡಿಗಟ್ಟೊಂದನ್ನು ರೂಪಿಸುವ ಮತ್ತು ಇನ್ನೊಂದು ಕಡೆಗೆ ಕನ್ನಡದ ಗುರುತನ್ನು ನೆಲೆಗೊಳಿಸುವ ಹಂಬಲದಲ್ಲಿ ಹೊರಟ ಕವಿರಾಜಮಾರ್ಗಕಾರನಿಗೆ ಬೇಕಾದಷ್ಟು ಸಾಂಸ್ಕೃತಿಕ ರಾಜಕೀಯ ಗುರಿಗಳೂ ಇದ್ದಿರಬಹುದು. ಈ ಗುಂಗಿನಿಂದ ಮಾರ್ಗಕಾರನು ಕನ್ನಡದ ರಾಚನಿಕ ಸ್ವರೂಪವನ್ನು ಪುರ್ರಚಿಸುವ ಮಹತ್ತರ ಉದ್ದೇಶವನ್ನು ಇಟ್ಟಿಕೊಂಡಿದ್ದರಬಹುದು. ಆದರೆ ಈ ಬಗೆಯ ನುಡಿಯ ಧೋರಣೆಯನ್ನು ಕೂಡ ಸಂಸ್ಕೃತ ವಿದ್ವಾಂಸರು ಲೆಕ್ಕಿಸದೆ ಮಾರ್ಗಕಾರನನ್ನು ಕೇವಲ ಅನ್ಯಭಾಷೆಗಳಿಂದ ಪಡೆಯುವ ಜಾಗದಲ್ಲಿ ನಿಲ್ಲಿಸಿದ್ದಾದರೆ.
ಈ ಮಾತುಗಳನ್ನು ಗಮನಿಸಿದರೇ ಇದು ಇನ್ನೂ ನಿಚ್ಚಳಗೊಳ್ಳುತ್ತದೆ. “ಕನ್ನಡಕ್ಕೆ ಸಂಸ್ಕೃತದ ಜ್ಞಾನಶಾಸ್ತಿçಯ ಮನ್ನಣೆ ದೊರಕದೇ ಹೋಗಿದ್ದರೆ ಅದಕ್ಕೆ ಈಗ ದೊರಕಿದ ಪ್ರತಿಷ್ಠೆಯನ್ನು ಸಾಧಿಸಲಾಗುತ್ತಿರಲಿಲ್ಲ” (ಶೆಲ್ಡನ್ ಪೊಲಾಕ್: 2000: ಪುಟ:11). ಎಂದೂ ವಿಶ್ಲೇಷಿಸಿದ ಬಗೆ ಸಂಸ್ಕೃತ ತನ್ನೆಲ್ಲ ನುಡಿಯ ಕಸುವನ್ನು ಕನ್ನಡಕ್ಕೆ ದತ್ತಿಯಾಗಿ ಕೊಟ್ಟಿದೆ ಎನ್ನುವಂತಿದೆ. ಇಂತಹ ಭಾಷಿಕ ಅಧಿಕಾರ ಮತ್ತು ಯಜಮಾನಿಕೆಯನ್ನು ಸಂಸ್ಕೃತವು ಚರಿತ್ರೆ ಉದ್ದಕ್ಕೂ ಕನ್ನಡದಂತಹ ನುಡಿಗಳ ಮೇಲೆ ಸವಾರಿಯನ್ನು ಮಾಡಿಕೊಂಡು ಬಂದಿದೆ.
ತನ್ನ ಅಧಿಕಾರ ಹಾಗೂ ಯಜಮಾನಿಕೆಯನ್ನು ಸಾಧಿಸಿರುವ ರೀತಿಯನ್ನು ಈ ಮೇಲಿನ ಪೊಲಾಕ್ ಅವರ ಮಾತುಗಳಿಂದ ತಿಳಿದುಕೊಳ್ಳಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಈ ಧೋರಣೆ ಕನ್ನಡದ ಅನನ್ಯತೆ ಕಟ್ಟುವ ಮಾರ್ಗಕಾರನ ತಾತ್ವಿಕ ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಹುಸಿಗೊಳಿಸುವ ಸೂಚನೆಯನ್ನೂ ನೀಡುತ್ತದೆ. ಇದು ಕನ್ನಡದಂತಹ ನುಡಿಯ ಜೀವಂತಿಕೆ ಮತ್ತು ಸ್ವಂತಿಕೆಯನ್ನು ನಾಶಮಾಡಿ ತನ್ನ ಭಾಷಿಕ ಅಧಿಕಾರವನ್ನು ಮುಂದುವರಿಸುವ ಅಪಾಯದ ಸೂಚನೆಯೂ ಆಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕನ್ನಡದ ಅರಸು ಮನೆತನಗಳಾದ ರಾಷ್ಟçಕೂಟ, ಚಾಲುಕ್ಯ, ಹೊಯ್ಸಳ ಇವರು ತಮ್ಮ ರಾಜಕೀಯ-ಸಾಂಸ್ಕೃತಿಕ ಸಂವಹನೆಗಾಗಿ ಕನ್ನಡ ನುಡಿಗೆ ಮನ್ನಣೆ ನೀಡಿದ ಕಾರಣ ಈ ನುಡಿಯು ತನ್ನೆಲ್ಲ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಬಿಕ್ಕಟ್ಟುಗಳ ನಡುವೆಯೂ ತನ್ನದೇ ಆದ ಸಾಹಿತ್ಯಿಕ-ರಾಜಕೀಯ ಅನನ್ಯತೆಯನ್ನು ಕಟ್ಟಿಕೊಂಡಿರುವ ಸಾಧ್ಯತೆಗಳೇ ಹೆಚ್ಚು ಎಂಬ ನಂಬಿಕೆಗಳೂ ನೆಲೆನಿಂತಿವೆ. ಇರಲಿ ಹೀಗೆ ಸಾಂಸ್ಕೃತಿಕವಾಗಿ ಪ್ರಾಬಲ್ಯ ಹೊಂದಿರುವ ಸಂಸ್ಕೃತ ನುಡಿಯ ಗಮನವು ಹೇಗೆ ಒಂದು ನುಡಿಯ ಒಟ್ಟು ಸಾಮಾಜಿಕ ಸಂದರ್ಭದಲ್ಲಿ ತನ್ನ ಗುರುತುಗಳನ್ನು ನೆಲೆಗೊಳಿಸುವ ಹುನ್ನಾರವನ್ನು ಮಾಡಿದೆ ಅನ್ನುವುದನ್ನು ಇಲ್ಲಿ ಕಾಣಬಹುದು. ಅಂದರೆ ಆಯಾ ಭಾಷಿಕ ಸನ್ನಿವೇಶ ಮತ್ತು ಬಳಕೆಯ ನಿಲುವುಗಳನ್ನು ನಿಯಂತ್ರಿಸಿದ ಮಾದರಿಗಳು ನಮ್ಮ ಕನ್ನಡ ವ್ಯಾಕರಣ, ಮೀಮಾಂಸೆ, ಸಂಸ್ಕೃತಿ ಚಿಂತನೆ, ಶೈಕ್ಷಣಿಕ ಪರಂಪರೆಗಳು ರೂಪಗೊಂಡ ಬಗೆಗಳನ್ನು ಸಾಮಾಜಿಕ ನುಡಿಯರಿಮೆಯ ನೆಲೆಗಳಿಂದ ಇನ್ನೂ ನಿಚ್ಚಳವಾಗಿ ಕಾಣಲು ಸಾಧ್ಯವಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಕ್ರೀಡೆ7 days ago
ಅತಿ ಕಡಿಮೆ ಪಂದ್ಯ ; 400 ವಿಕೆಟ್ : ದಾಖಲೆ ಬರೆದ ಸ್ಪಿನ್ನರ್ ಆರ್ ಅಶ್ವಿನ್
-
ಕ್ರೀಡೆ7 days ago
ರಾಜ್ಯದ ಕ್ರೀಡಾ ವಿಜ್ಞಾನ ಸಂಸ್ಥೆಯಿಂದ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ
-
ಲೈಫ್ ಸ್ಟೈಲ್6 days ago
ರೆಸಿಪಿ | ಖರ್ಜೂರದ ಹೋಳಿಗೆ ಮಾಡೋದು ಹೇಗೆ ಗೊತ್ತಾ..?
-
ದಿನದ ಸುದ್ದಿ5 days ago
ಅಸ್ಸಾಂ | ಅಥ್ಲೀಟ್ ಹಿಮಾ ದಾಸ್ ಡಿಎಸ್ಪಿಯಾಗಿ ನೇಮಕ ; ನನ್ನ ಮತ್ತು ತಾಯಿಯ ಕನಸು ನನಸಾದ ದಿನವಿದು : ಹಿಮಾ ಭಾವುಕ ನುಡಿ
-
ಸಿನಿ ಸುದ್ದಿ4 days ago
ಇಂದು ಕನ್ನಡ ಬಿಗ್ ಬಾಸ್ ಸೀಸನ್ 8 ಗ್ರ್ಯಾಂಡ್ ಓಪನಿಂಗ್ | ಒಂಟಿ ಮನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ..?
-
ದಿನದ ಸುದ್ದಿ7 days ago
ಹೆಚ್.ಎ.ಎಲ್ ನಲ್ಲಿ ತರಬೇತಿಗಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ಜನರಿಗೆ ತಮ್ಮ ಕೆಲಸಗಳಾಗುವ ಭರವಸೆ,15 ದಿನಕ್ಕೊಮ್ಮೆ ಜನಸ್ಪಂದನ : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ | ಜನಸ್ಪಂದನದ ಕಂಪ್ಲೀಟ್ ಡೀಟೆಲ್ಸ್ ; ಮಿಸ್ ಮಾಡ್ದೆ ಓದಿ
-
ದಿನದ ಸುದ್ದಿ7 days ago
ಕಲ್ಲು ಕ್ವಾರಿ ವಿರುದ್ದ ಎಫ್ಐಆರ್ ದಾಖಲು | ಕಲ್ಲುಗಣಿ ಮತ್ತು ಕ್ರಷರ್ ಘಟಕಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸದಿದ್ದರೆ ಕ್ರಮ : ಡಿಸಿ ಮಹಾಂತೇಶ ಬೀಳಗಿ ಎಚ್ಚರಿಕೆ