ನೆಲದನಿ
ಯಕ್ಷಗಾನ ಕಲಾವಿದ ಮಹಾಬಲ ನಾಯ್ಕ ಬೇಳಂಜೆ ಬದುಕಿನ ಸಂಕಥನ
ಭೂಮಿಯ ಮೇಲೆ ಮಾನವನ ಉಗಮದೊಂದಿಗೆ ಕಲೆಗಳು ಕೂಡ ಮಾನವನ ಬದುಕಿನ ಭಾಗವಾಗಿ ಬೆಳೆದುಕೊಂಡು ಬಂದಿವೆ. ಹೀಗಾಗಿ ಮಾನವ ಮತ್ತು ಕಲೆಗೂ ಭಾವನಾತ್ಮಕವಾದ ನಂಟು ಬೆಳೆದುಬಂದಿದೆ. ಮಾನವನ ನಿರಂತರವಾದ ವಿಕಾಸದಲ್ಲಿ ಈ ಜನಪದ ಕಲೆಗಳು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ತಳ ಸಮುದಾಯಗಳಲ್ಲಿ. ಹೀಗಾಗಿ ಭಾರತದ ಬಹುತೇಕ ಜನಪದ ಕಲೆಗಳು ತಳ ಸಮುದಾಯಗಳಿಂದಲೆ ಜೀವಂತಿಕೆಯನ್ನು ಪಡೆದುಕೊಂಡಿವೆ. ಈಗಲೂ ಈ ಕಲೆಗಳು ತನ್ನ ಜೀವಂತಿಕೆಯನ್ನು ಪಡೆದುಕೊಂಡಿರುವುದು ಬಡತನದ ಬದುಕಿನಲ್ಲಿಯೇ. ಹೀಗಾಗಿ ಬಡತನ ಹಾಗೂ ಜನಪದ ಕಲೆಗಳಿಗೆ ನಿಕಟವಾದ ಸಂಬಂಧವೊಂದು ಬಿಡದ ನಂಟಾಗಿ ಬೆಳೆದುಕೊಂಡು ಬಂದಿದೆ. ಇಂತಹ ಜಾನಪದ ಕಲೆಗಳಲ್ಲಿ ಯಕ್ಷಗಾನವು ಒಂದು ಪ್ರಮುಖ ಕಲೆಯಾಗಿ ಬೆಳೆದುಕೊಂಡು ಬಂದಿದೆ. ಯಕ್ಷಗಾನವು ಮೂಲತಃ ಶೂದ್ರಾತಿ ಶೂದ್ರರ ಕಲೆಯಾಗಿ ಬೆಳೆದು ಬಂದಿದೆ. ಇಂತಹ ಸಾಮಾಜಿಕ ಸಮಾನತೆಯಿಂದ ವಂಚಿತವಾದ ಸಮುದಾಯವೊಂದು ಪಾಲಿಸಿ, ಪೋಷಿಸಿಕೊಂಡು ಬಂದ ಜನಪದ ಕಲೆಯೊಂದು ಇಂದು ಜಾಗತಿಕ ಮಟ್ಟದಲ್ಲಿ ತನ್ನ ಅನನ್ಯತೆಯನ್ನು, ಕೀರ್ತಿಯನ್ನು ಗಳಿಸಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ. ಇಂತಹ ಕಲೆಯ ಶ್ರೀಮಂತಿಕೆ ಹಲವಾರು ತಳಸಮುದಾಯದ ಕಲಾವಿದರು ತಮ್ಮ ಶ್ರಮವನ್ನು ಧಾರೆಯೆರೆಯುತ್ತಿದ್ದಾರೆ. ಇಂತಹ ತಳಸಮುದಾಯದ ಬಡಗುತಿಟ್ಟು ಯಕ್ಷಗಾನ ಕಲಾವಿದರಲ್ಲಿ ಬೇಳಂಜೆ ಮಹಾಬಲ ನಾಯ್ಕರು ಒಬ್ಬರಾಗಿದ್ದಾರೆ.
ಶ್ರೀಯುತ ಮಹಾಬಲ ನಾಯ್ಕರು ಹಿರಿಯ ಮದ್ದಳೆ ಕಲಾವಿದರಾದ ಶ್ರೀ ಬೇಳಂಜೆ ತಿಮ್ಮಪ್ಪ ನಾಯ್ಕ ಹಾಗೂ ಶ್ರೀಮತಿ ವೇದಾವತಿ ಅವರ ಸುಪುತ್ರರಾಗಿ 13 ಜುಲೈ 1958 ರಲ್ಲಿ ಕಾರ್ಕಳ ತಾಲ್ಲೂಕಿನ ಬೇಳಂಜೆ ಎಂಬಲ್ಲಿ ಜನಿಸಿದರು. ಶ್ರೀಯುತ ಮಹಾಬಲ ನಾಯ್ಕರು ತಮ್ಮ ವಿದ್ಯಾಭ್ಯಾಸವನ್ನು ಆರನೇ ತರಗತಿಗೆ ಮೊಟಕುಗೊಳಿಸಿ, ತಮ್ಮ ಹನ್ನೆರಡನೇ ವಯಸ್ಸಿಗೆ ಬಣ್ಣದ ಬದುಕಿನೆಡೆಗೆ ಸಾಗದರು. ಮಹಾಬಲ ನಾಯ್ಕರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಂತಹ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಜಾತಿಯಲ್ಲಿ ‘ಮರಾಠಿ’ಗೆ ಸೇರಿದ್ದು, ತಳ ಸಮುದಾಯದಿಂದ ಬಂದವರಾಗಿದ್ದಾರೆ. ತಳ ಸಮುದಾಯಗಳಿಗೂ ಮತ್ತು ಜನಪದ ಕಲೆಗಳಿಗೆ ಒಂದು ಅನ್ಯೋನ್ಯವಾದ ಸಂಬಂಧವು ಚರಿತ್ರೆಯುದ್ಧಕ್ಕೂ ಬೆಳೆದುಕೊಂಡು ಬಂದಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇಂದಿಗೂ ತಳ ಸಮುದಾಯಗಳು ಕಲೆಯ ಉಳಿವಿಗಾಗಿ ಅವಿರತವಾದ ಶ್ರಮವನ್ನು ವ್ಯಕ್ತಪಡಿಸುವ ಮೂಲಕವಾಗಿ ಹಲವಾರು ಕಲೆಗಳ ಶ್ರೀಮಂತಿಕೆ ಕಾರಣೀಭೂತರಾಗಿದ್ದಾರೆ. ಇಲ್ಲಿ ಶ್ರೀಯುತ ಮಹಾಬಲ ನಾಯ್ಕರು ಯಕ್ಷಗಾನ ಕಲೆಯೊಂದಿಗೆ ಒಡನಾಟವನ್ನು ಬೆಳೆಸಿಕೊಂಡು ಬಂದಿರುವುದು ಕೂಡ ಇದೆ ಹಾದಿಯಲ್ಲಿ. ಶೂದ್ರಾತಿ ಶೂದ್ರರ ಕಲೆಯೆಂದೆ ಗುರುತಿಸಿಕೊಂಡು ಬಂದಿರುವ ಯಕ್ಷಗಾನವು ಇಂದು ತನ್ನ ಅನನ್ಯತೆಯನ್ನು ಕಾಯ್ದುಕೊಂಡಿರುವುದು ತಳ ಸಮುದಾಯಗಳ ಮೂಲಕವಾಗಿಯೇ. ಈ ಕಲೆಯು ಇಂದಿನ ಜಾಗತಿಕ ಕ್ಷೇತ್ರಕ್ಕೆ ತನ್ನನ್ನು ತೆರೆದುಕೊಂಡು ದೇಶ, ವಿದೇಶಗಳಲ್ಲಿ ತನ್ನ ಅಸ್ಮಿತೆಯನ್ನು ಮೆರೆದಿರುವುದಕ್ಕೆ ಹಾಗೂ ರಾರಾಜಿಸುವುದಕ್ಕೆ ಈ ತಳ ಸಮುದಾಯಗಳ ಶ್ರಮವು ಮಹತ್ತರವಾದುದಾಗಿದೆ.
ಶ್ರೀಯುತ ಮಹಾಬಲ ನಾಯ್ಕರು ಈ ಕಲೆಯನ್ನು ಒಂದು ಹವ್ಯಾಸವಾಗಿ ಬಾಲ್ಯದ ದಿನಮಾನಗಳಲ್ಲಿ ಮೈಗೂಡಿಸಿಕೊಂಡರು. ಇದಕ್ಕೆ ಶ್ರೀಯುತ ಮಹಾಬಲ ನಾಯ್ಕ ಅವರ ತಂದೆಯವರಾದ ಬೇಳಂಜೆ ತಿಮ್ಮಪ್ಪ ನಾಯ್ಕರು ಪ್ರಮುಖ ಕಾರಣಕರ್ತರಾಗಿದ್ದಾರೆ. ಬೇಳಂಜೆ ತಿಮ್ಮಪ್ಪ ನಾಯ್ಕರು ಹೆಸರಾಂತ ಮದ್ದಳೆಗಾರರಾಗಿ ಕರಾವಳಿ ಭಾಗದಲ್ಲಿ ಹೆಸರು ಮಾಡಿದವರು. ಇವರು ಯಕ್ಷಗಾನದ ದಿಗ್ಗಜರೆಂದು ಗುರುತಿಸಿಕೊಂಡಿರುವ ‘ಕಾಳಿಂಗ ನಾವಡ’ ಅವರ ಗುರುಗಳಾಗಿಯೂ ತಮ್ಮ ಸೇವೆಯನ್ನು ಮುನ್ನಡೆಸಿಕೊಂಡು ಬಂದವರು. ಶ್ರೀಯುತ ತಿಮ್ಮಪ್ಪ ನಾಯ್ಕರು 1978 ರಲ್ಲಿಯೇ ಕಾಳಿಂಗ ನಾವಡರ ಸಹಭಾಗಿತ್ವದಲ್ಲಿ ‘ಹಂಗರಕಟ್ಟೆ ಕಲಾ ಮೇಳ’ವನ್ನು ಆರಂಭಿಸುವ ಮೂಲಕವಾಗಿ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಬಂದವರು. ಆ ಮೂಲಕವಾಗಿ ಯಕ್ಷಗಾನ ರಂಗಕ್ಷೇತ್ರದಲ್ಲಿ ತಿಮ್ಮಪ್ಪ ನಾಯ್ಕ ಅವರ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆದ ಕಾರಣ ತಂದೆಯವರ ಹಾದಿಯಲ್ಲಿಯೇ ಮುನ್ನಡೆದ ಇವರಿಗೆ ಈ ಕಲೆಯು ಬಂದು ಹವ್ಯಾಸವಾಗಿ ನಂತರದಲ್ಲಿ ಪ್ರವೃತ್ತಿಯಾಗಿ ಬೆಳೆದು ಬಂದಿದೆ.
ಪ್ರೇರಣೆ ಮತ್ತು ಪ್ರಭಾವ
ಶ್ರೀಯುತ ಮಹಾಬಲ ನಾಯ್ಕ ಅವರ ಯಕ್ಷಗಾನ ರಂಗಕಲೆಗೆ ಪ್ರಮುಖವಾಗಿ ಪ್ರೇರಣೆಯಾದವರು ಇವರ ತಂದೆಯವರಾದ ಬೇಳಂಜೆ ತಿಮ್ಮಪ್ಪ ನಾಯ್ಕರು. ಬೇಳಂಜೆ ತಿಮ್ಮಪ್ಪ ನಾಯ್ಕರು ಹೆಸರಾಂತ ಮದ್ದಳೆಗಾರರಾಗಿ ಕರಾವಳಿ ಭಾಗದಲ್ಲಿ ತನ್ನದೆ ಆದ ಛಾಪು ಮೂಡಿಸಿದವರು. ಇವರು ಯಕ್ಷಗಾನದ ದಿಗ್ಗಜರೆಂದು ಗುರುತಿಸಿಕೊಂಡಿರುವ ‘ಕಾಳಿಂಗ ನಾವಡ’ ಅವರ ಗುರುಗಳಾಗಿಯೂ ತಮ್ಮ ಸೇವೆಯನ್ನು ಮುನ್ನಡೆಸಿಕೊಂಡು ಬಂದವರು. ಶ್ರೀಯುತ ತಿಮ್ಮಪ್ಪ ನಾಯ್ಕರು 1978 ರಲ್ಲಿಯೇ ಕಾಳಿಂಗ ನಾವಡರ ಸಹಭಾಗಿತ್ವದಲ್ಲಿ ‘ಹಂಗರಕಟ್ಟೆ ಕಲಾ ಮೇಳ’ವನ್ನು ಆರಂಭಿಸುವ ಮೂಲಕವಾಗಿ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ತಿಮ್ಮಪ್ಪ ನಾಯ್ಕರು ತಮ್ಮ ಕಡು ಬಡತನದ ನಡುವೆಯೇ ಯಕ್ಷಗಾನ ರಂಗಕಲೆಯ ಮೇಲಿನ ಕಾಳಜಿ ಹಾಗೂ ಶ್ರದ್ಧೆಯಿಂದಾಗಿ ತಮ್ಮದೇ ಆದ ಪ್ರತ್ಯೇಕ ಕಲಾಮೇಳವನ್ನು ತೆರೆಯುವ ಮುಖಾಂತರ ವೃತ್ತಿ ರಂಗಭೂಮಿಯನ್ನು ಆರಂಭಿಸಿದರು. ಆ ಮೂಲಕವಾಗಿ ಯಕ್ಷಗಾನ ರಂಗಕ್ಷೇತ್ರದಲ್ಲಿ ತಿಮ್ಮಪ್ಪ ನಾಯ್ಕ ಅವರ ಹೆಸರು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆದ ಕಾರಣ ತಂದೆಯವರ ಹಾದಿಯಲ್ಲಿಯೇ ಮುನ್ನಡೆದ ಇವರಿಗೆ ಈ ಕಲೆಯು ಬಂದು ಹವ್ಯಾಸವಾಗಿ ನಂತರದಲ್ಲಿ ಪ್ರವೃತ್ತಿಯಾಗಿ ಬೆಳೆದು ಬಂದಿದ್ದು ಮಾತ್ರವಲ್ಲದೆ, ಇದೊಂದು ವೃತ್ತಿಯಾಗಿಯೂ ಮುಂದುವರೆಯಿತು.
ಶ್ರೀಯುತ ಮಹಾಬಲ ನಾಯ್ಕರು ಈ ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದರಾಗಿ ಸಿದ್ಧಗೊಳ್ಳಲು ಹಲವಾರು ಗುರು ಮಹಾಶಯರು ಕಾರಣೀಭೂತರಾಗಿದ್ದಾರೆ. ಇವರ ತಂದೆಯವರಾದ ತಿಮ್ಮಪ್ಪ ನಾಯ್ಕರಿಂದ ಯಕ್ಷಗಾನ ಕ್ಷೇತ್ರದ ಬಗೆಗೆ ಆಸಕ್ತಿಯನ್ನು ರೂಡಿಸಿಕೊಂಡರು ಸಹ, ಇವರು ತಂದೆಯಂತೆ ಸಂಗೀತ ಪ್ರಕಾರವಾದ ಮದ್ದಳೆ ಕ್ಷೇತ್ರವನ್ನು ತಮ್ಮ ವೃತ್ತಿಯಾಗಿ ಮತ್ತು ಹವ್ಯಾಸವಾಗಿ ಮುಂದುವರೆಸಲಿಲ್ಲ. ಇವರಿಗೆ ಹೆಚ್ಚು ಆಕರ್ಷಣಿಯವಾದ ಪ್ರಕಾರವೆಂದರೆ ಅದು ವೇಷಗಾರಿಕೆ. ಆದ್ದರಿಂದ ಶ್ರೀಯುತ ಮಹಾಬಲ ನಾಯ್ಕರಿಗೆ ಪೌರಾಣಿಕವಾದ ಹಲವಾರು ಪಾತ್ರಗಳಲ್ಲಿ ವಿಶೇಷವಾದ ಆಸಕ್ತಿಯಿತ್ತು. ಆದ ಕಾರಣ ಇವರು ಸಂಗೀತ ಪ್ರಕಾರದಿಂದ ದೂರ ಸರಿದು ಪಾತ್ರಧಾರಿಯಾಗಿ ತಮ್ಮನ್ನು ಗುರುತಿಸಿಕೊಂಡರು. ಈ ಪಾತ್ರಧಾರಿಕೆಯಲ್ಲಿ ಪರಿಣಿತಿಯನ್ನು ಗಳಿಸಲು ಹಲವಾರು ಗುರುಗಳ ಮಾರ್ಗದರ್ಶನವನ್ನು ಪಡೆದಿದ್ದಾರೆ.
ಶ್ರೀಯುತ ಮಹಾಬಲ ನಾಯ್ಕರು ತಮ್ಮ ಹನ್ನೆರಡನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ತನ್ನನ್ನು ತೆರೆದುಕೊಳ್ಳಲು ಮುಂದಾದಾಗ ಈ ಕಲೆಯನ್ನು ಮೈಗೂಡಿಸಿಕೊಳ್ಳಲು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿದ ತರುವಾಯದಲ್ಲಿ ದಶಾವತಾರಿ ಗರು ವೀರಭದ್ರನಾಯಕ್ ಇವರ ಮಾರ್ಗದರ್ಶನದಲ್ಲಿ ಕಲಾ ಬದುಕಿಗೆ ಪಾದಾರ್ಪಣೆ ಮಾಡಿದರು. ಹೀಗೆ ಆರಂಭವಾದ ಇವರ ಕಲಾ ದೀಕ್ಷೇಯು ನಂತರದಲ್ಲಿ ನೀಲಾವರ ರಾಮಕೃಷ್ಣಯ್ಯನವರ ಮಾರ್ಗದರ್ಶನದಲ್ಲಿ ಕಲೆಯ ಬಗೆಗಿನ ಸೂಕ್ಷ್ಮ ಸನ್ನೀವೇಶಗಳ ಕುರಿತು ತರಬೇತಿ ಪಡೆದರು. ನಂತರದಲ್ಲಿ ಹಿರಿಯಡಕ ಗೋಪಾಲರಾಯರ ಶಿಷ್ಯರಾಗಿಯೂ ಸೇವೆಯನ್ನು ಮುಂದುವರೆಸಿದ ಶ್ರೀಯುತ ಮಹಾಬಲ ನಾಯ್ಕರು ಯಕ್ಷಗಾನ ರಂಗಕಲೆಯಲ್ಲಿ ಅಭೂತಪೂರ್ವವಾದ ಸಿದ್ಧಿಯನ್ನು ಮೈಗೂಡಿಸಿಕೊಂಡರು. ಈ ಎಲ್ಲಾ ಗುರು ಮಹಾಶಯರಿಂದ ಶಿಷ್ಯನಾಗಿ ಸೇವೆ ಸಲ್ಲಿಸಿ, ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡ ಶ್ರೀಯುತ ಮಹಾಬಲ ನಾಯ್ಕ ಅವರು ತಮ್ಮ ತಂದೆಯವರಾದ ಶ್ರೀಯುತ ತಿಮ್ಮಪ್ಪ ನಾಯ್ಕರಿಂದ ಸಾಕಷ್ಟು ಅನುಭವಗಳನ್ನು ಪಡೆದುಕೊಂಡು ಪೂರ್ಣ ಪ್ರಮಾಣದ ಕಲಾ ಬದುಕಿಗೆ ತಮ್ಮನ್ನು ತೆರೆದುಕೊಂಡು, ಸುಮಾರು ನಲವತ್ತೇಲು ವರ್ಷಗಳಿಂದಲೂ ಈ ಕ್ಷೇತ್ರದಲ್ಲಿ ಅನುಪಮವಾದ ಸಾಧನೆ ಮಾಡುತ್ತ ಬಂದಿದ್ದಾರೆ. ಹೀಗೆ ಹಲವಾರು ಗುರುಗಳ ಶಿಷ್ಯತ್ವದಲ್ಲಿ ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡ ಶ್ರೀಯುತ ಮಹಾಬಲ ನಾಯ್ಕರು ಈ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಾ ಸೇವೆ ಮತ್ತು ವೃತ್ತಿ ಜೀವನ
ಶ್ರೀಯುತ ಮಹಾಬಲ ನಾಯ್ಕರು ತಮ್ಮ ಹನ್ನೆರಡನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ತನ್ನನ್ನು ತೆರೆದುಕೊಳ್ಳಲು ಮುಂದಾದಾಗ ಈ ಕಲೆಯನ್ನು ಮೈಗೂಡಿಸಿಕೊಳ್ಳಲು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿದರು. ಇಲ್ಲಿ ದಶಾವತಾರಿ ಗರು ವೀರಭದ್ರನಾಯಕ್ ಇವರ ಮಾರ್ಗದರ್ಶನದಲ್ಲಿ ಕಲಾ ಬದುಕಿಗೆ ಪಾದಾರ್ಪಣೆ ಮಾಡಿ, ನೀಲಾವರ ರಾಮಕೃಷ್ಣಯ್ಯನವರ ಮಾರ್ಗದರ್ಶನದಲ್ಲಿ ಕಲೆಯ ಬಗೆಗಿನ ಸೂಕ್ಷ್ಮ ಸನ್ನೀವೇಶಗಳ ಕುರಿತು ತರಬೇತಿ ಪಡೆದರು. ನಂತರದಲ್ಲಿ ಹಿರಿಯಡಕ ಗೋಪಾಲರಾಯರ ಶಿಷ್ಯರಾಗಿಯೂ ಸೇವೆಯನ್ನು ಮುಂದುವರೆಸಿದ ಶ್ರೀಯುತ ಮಹಾಬಲ ನಾಯ್ಕರು ಯಕ್ಷಗಾನ ರಂಗಕಲೆಯಲ್ಲಿ ಅಭೂತಪೂರ್ವವಾದ ಸಿದ್ಧಿಯನ್ನು ಮೈಗೂಡಿಸಿಕೊಂಡರು. ಈ ಎಲ್ಲಾ ಗುರು ಮಹಾಶಯರಿಂದ ಶಿಷ್ಯನಾಗಿ ಸೇವೆ ಸಲ್ಲಿಸಿ, ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡ ಶ್ರೀಯುತ ಮಹಾಬಲ ನಾಯ್ಕ ಅವರು ತಮ್ಮ ತಂದೆಯವರಾದ ಶ್ರೀಯುತ ತಿಮ್ಮಪ್ಪ ನಾಯ್ಕರಿಂದ ಸಾಕಷ್ಟು ಅನುಭವಗಳನ್ನು ಪಡೆದುಕೊಂಡು ಪೂರ್ಣ ಪ್ರಮಾಣದ ಕಲಾ ಬದುಕಿಗೆ ತಮ್ಮನ್ನು ತೆರೆದುಕೊಂಡು, ಸುಮಾರು ನಲವತ್ತೇಲು ವರ್ಷಗಳಿಂದಲೂ ಈ ಕ್ಷೇತ್ರದಲ್ಲಿ ಅನುಪಮವಾದ ಸಾಧನೆ ಮಾಡುತ್ತ ಬಂದಿದ್ದಾರೆ.
ಹೀಗೆ ಆರಂಭವಾದ ಶ್ರೀಯುತ ಮಹಾಬಲ ನಾಯ್ಕರ ನಿರಂತರ ಕಲಾ ಸೇವೆಯು ಹಲವಾರು ಕಲಾ ಮೇಳಗಳಲ್ಲಿ ಮುಂದುವರೆದಿದೆ. ಶ್ರೀಯುತ ಮಹಾಬಲ ನಾಯ್ಕರು ಸೇವೆಗೈದ ಕ್ಷೇತ್ರ ಹಾಗೂ ಮೇಳಗಳು ಈ ಮುಂದಿನಂತಿವೆ; ಆರಂಭದಲ್ಲಿ ಅಮೃತೇಶ್ವರಿ ಕಲಾ ಮೇಳದ ಮೂಲಕವಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಶ್ರೀಯುತ ಮಹಾಬಲ ನಾಯ್ಕರು ಹಿರಿಯಡಕ, ಪೆರ್ಡೂರು ಕಲಾ ಮೇಳದಲ್ಲಿ ಒಂದು ವರ್ಷ ಸೇವೆಯನ್ನು ಸಲ್ಲಿಸಿರುತ್ತಾರೆ. ನಂತರದಲ್ಲಿ ಮಾರಣಕಟ್ಟೆ ಕಲಾ ಮೇಳದಲ್ಲಿ ಸತತವಾಗಿ ಹತ್ತು ವರ್ಷಗಳ ಕಾಲ ಕಲಾವಿದರಾಗಿ ಬಣ್ಣದ ಲೋಕದಲ್ಲಿ ರಂಜಿಸಿರುತ್ತಾರೆ. ಹಾಗೆಯೇ ಆರಂಭಿಕ ಹಂತದಲ್ಲಿ ಬಣ್ಣದ ಲೋಕಕ್ಕೆ ಪ್ರವೇಶಿಸಿದ ಅಮೃತೇಶ್ವರಿ ಕಲಾ ಮೇಳದಲ್ಲಿ ಸುಮಾರು ಐದು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸುವ ಮೂಲಕವಾಗಿ ಸಾಕಷ್ಟು ವಿದ್ವತ್ತನ್ನು ಗಳಿಸಿರುತ್ತಾರೆ. ನಂತರದಲ್ಲಿ ಸೌಕೂರು ಕಲಾ ಮೇಳದಲ್ಲಿ ಎರಡು ವರ್ಷಗಳ ಕಾಲ ಕಲಾವಿದರಾಗಿ ತನ್ನ ಸೇವೆಯನ್ನು ಸಲ್ಲಿಸಿರುತ್ತಾರೆ. ಹಾಗೆಯೇ ಮಡಾಮಕ್ಕಿ ಕಲಾ ಮೇಳದಲ್ಲಿ ಸತತವಾಗಿ ಎರಡು ವರ್ಷಗಳ ಕಾಲ ಕಲಾವಿದರಾಗಿ ಬಣ್ಣದ ಲೋಕದಲ್ಲಿ ಮೆರೆದಿರುತ್ತಾರೆ. ಹೀಗೆ ಹಲವಾರು ಕಡೆಗಳಲ್ಲಿ ತಮ್ಮ ಸಾಧನೆಗೈದ ಶ್ರೀಯುತ ಮಹಾಬಲ ನಾಯ್ಕರು ಮಂದಾರ್ತಿ ಕಲಾ ಮೇಳದಲ್ಲಿ ಸುಮಾರು ಇಪ್ಪತೈದು ವರ್ಷಗಳ ಕಲಾ ಸೇವೆಯಲ್ಲಿ ಮುಂದುವರೆದಿದ್ದು, ಇಂದಿಗೂ ಇದೇ ಮಂದಾರ್ತಿ ಕಲಾ ಮೇಳದಲ್ಲಿ ಕಲಾವಿದರಾಗಿ ಪ್ರೇಕ್ಷಕರಿಗೆ ರಸದೌತಣವನ್ನು ಉಣಬಡಿಸುತ್ತಾ ಬಂದಿದ್ದಾರೆ. ಹೀಗೆ ವಿವಿಧ ಕಲಾಮೇಳಗಳಲ್ಲಿ ಶ್ರೀಯುತ ಮಹಾಬಲ ನಾಯ್ಕರು ತಮ್ಮ ನಲವತ್ತೇಳು ವರ್ಷಗಳ ಕಾಲದ ಯಕ್ಷಕೃಷಿಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.
ಶ್ರೀಯುತ ಮಹಾಬಲ ನಾಯ್ಕರು ಯಕ್ಷಗಾನ ಕ್ಷೇತ್ರದಲ್ಲಿನ ತಮ್ಮ ನಿರಂತರ ಹೋರಾಟದಲ್ಲಿ ಹಲವು ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕವಾಗಿ ಜೀವ ತುಂಬಿದ್ದಾರೆ. ಇಂತಹ ಪಾತ್ರಗಳಲ್ಲಿ ಪೌರಾಣಿಕ ಪಾತ್ರಗಳೆ ಹೆಚ್ಚಾಗಿವೆ. ಶ್ರೀಯುತ ಮಹಾಬಲ ನಾಯ್ಕರು ನಿರ್ವಹಿಸಿದ ಪ್ರಮುಖವಾದ ಪಾತ್ರಗಳೆಂದರೆ ಬಬ್ರುವಾಹನ, ಅಭಿಮನ್ಯು, ವೃಷಸೇನ, ಲವ-ಕುಶ, ಶ್ರೀಕೃಷ್ಣ, ವಿದ್ಯುನ್ಮಾಲಿ, ಆಂಜನೇಯ ಹಾಗೂ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶ್ರೀಯುತ ಮಹಾಬಲ ನಾಯ್ಕರು ತಮ್ಮಲ್ಲಿನ ಆಳಂಗ, ತಾರಕಸ್ವರತ್ರಾಣ ಹಾಗೂ ಚುರುಕಿನ ಪದಗತಿಗಳಿಂದ ಕಲಾಭಿಮಾನಿಗಳು, ಕಲಾ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಹೀಗೆ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕವಾಗಿ ಸುಮಾರು ಐದು ದಶಕಗಳ ಕಾಲ ನಿರಂತರವಾದ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಬಂದಿರುವ ಶ್ರೀಯುತ ಮಹಾಬಲ ನಾಯ್ಕರು ತಮ್ಮ ಅರವತ್ತು ವಯಸ್ಸಿನ ಗಡಿಯಲ್ಲಿಯೂ ತುಂಬು ಹುಮ್ಮಸ್ಸಿನಿಂದ ಕಲಾ ಸೇವೆಯಲ್ಲಿ ಮುನ್ನಡೆಯುತ್ತಿದ್ದಾರೆ.
ಗೌರವ, ಸನ್ಮಾನ ಹಾಗೂ ಪ್ರಶಸ್ತಿ
ಶ್ರೀಯುತ ಮಹಾಬಲ ನಾಯ್ಕರು ತಮ್ಮ ನಿರಂತರವಾದ ನಲವತ್ತೇಳು ವರ್ಷಗಳ ಕಲಾ ಸೇವೆಯಿಂದಾಗಿ ಈ ಕ್ಷೇತ್ರದ ಪ್ರಬುದ್ಧ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇವರ ಈ ಕಲಾ ಸೇವೆಯನ್ನು ಗಮನಿಸಿ, ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಹಲವಾರು ಸಂಘ ಸಂಸ್ಥೆಗಳು ಹಲವಾರು ಸನ್ಮಾನ, ಗೌರವ ಹಾಗೂ ಪುರಸ್ಕಾರವನ್ನು ನೀಡಿ ಇವರನ್ನು ಗೌರವಿಸುತ್ತ ಬಂದಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಕಾರ್ಕಳದ ಜೇಸೀ ಸಪ್ತಾಹ ಹಾಗೂ ಹೆಬ್ರಿಯ ಮರಾಠಿ ಸಂಘದ ವತಿಯಿಂದ ಇವರಿಗೆ ಗೌರವ ಹಾಗೂ ಪುರಸ್ಕಾರಗಳು ಲಭಿಸಿವೆ. ಶ್ರೀಯುತ ಮಹಾಬಲ ನಾಯ್ಕರು ಇಂದು ತಮ್ಮ ಧರ್ಮಪತ್ನಿ ಬೇಬಿ, ಮಕ್ಕಳಾದ ದಿವ್ಯಾ, ದೀಪಾ ಹಾಗೂ ದಿವಾಕರ ಇವರ ಜೊತೆಗೆ ಕೌಟುಂಬಿಕ ಜೀವನವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಇವರೊಂದಿಗೆ ಯಕ್ಷಗಾನ ಕೃಷಿಯಲ್ಲಿ ನಿರಂತರವಾದ ಸಾಧನೆಯಲ್ಲಿ ಮುಂದುವರೆಯುತ್ತಿದ್ದಾರೆ.

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243




