ಸಿನಿ ಸುದ್ದಿ
ಕೆಜಿಎಫ್ ಒಂದು ಅನನ್ಯ ಅನುಭವ..!

ಕೆಜಿಎಫ್ ಬರಿಗಣ್ಣಿಗೆ ಮಾತ್ರ ಕಾಣುವ, ಕಿವಿಗಳಿಗೆ ಮಾತ್ರ ಕೇಳಿಸುವ ಸಿನಿಮಾ ಅಲ್ಲ. ಕೆಜಿಎಫ್ ಒಂದು ಅನನ್ಯ ಅನುಭವ. ಅದು ಬೇರೆ ಬೇರೆ ರೂಪಗಳಲ್ಲಿ ನಿಮ್ಮನ್ನು ಮುಟ್ಟುತ್ತಿರುತ್ತದೆ, ಒಳಗೊಳಗೆ ಪ್ರವಹಿಸುತ್ತಿರುತ್ತದೆ. ನಿಸ್ಸಂಶಯವಾಗಿ ಕೆಜಿಎಫ್ ಒಂದು ಮಹಾಕಾವ್ಯ. ಪ್ರಶಾಂತ್ ನೀಲ್ ಹೊಸದೇನನ್ನೋ ಮಾಡಿದ್ದಾರೆ, ಅದನ್ನು ನೀವು ನಿಮಗೆ ಸಮಾಧಾನವಾಗುವಂತೆ ವಿವರಿಸಲಾರಿರಿ. ಮೊದಲೇ ಹೇಳಿದಂತೆ ಇದೊಂದು ಅನುಭವ, ಅನುಭವಿಸಿಯೇ ತೀರಬೇಕು.
ಯಶ್ ಈ ಇಡಿ ಸಿನಿಮಾವನ್ನು ತಮ್ಮ ಭುಜದ ಮೇಲೆ ಹೊತ್ತು ಸಾಗಿದ್ದಾರೆ. ಅವರು ಪ್ರತಿಫ್ರೇಮ್ ನಲ್ಲೂ ಕಣ್ಣಿಗೆ ಹಬ್ಬ. ಆಗಾಗ ನಿಮ್ಮ ಕೈಗಳ ಮೇಲಿನ ರೋಮಗಳು ಎದ್ದುನಿಂತರೆ ಅದಕ್ಕೆ ಯಶ್ ಕಾರಣ. ಈ ಸಿನಿಮಾದಲ್ಲಿ ಯಶ್ ಹೊರತಾಗಿ ಇನ್ನೊಬ್ಬರನ್ನು ಆ ಪಾತ್ರದಲ್ಲಿ ಕಲ್ಪಿಸಿಕೊಳ್ಳಲಾಗದು. ಯಶ್ ಈ ಸಿನಿಮಾಗಾಗಿಯೇ ಕಡೆದಿಟ್ಟ ವಿಗ್ರಹ. ಅವರು ಇಲ್ಲಿ ಬರಿಯ ಹೀರೋ ಮಾತ್ರವಲ್ಲ ಸೂಪರ್ ಹೀರೋ, ಥೇಟ್ ನಮ್ಮ ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್ ಗಳ ಹಾಗೆ. ಸೂಪರ್ ಹೀರೋಗಳಿಗಾದರೂ ನಾಲ್ಕು ಏಟು ಬೀಳಬಹುದು, ಕೆಳಗೆ ಬೀಳಬಹುದು. ರಾಕಿ ಭಾಯ್ ನಮ್ಮ ಫ್ಯಾಂಟಸಿ ಜಗತ್ತಿನ ದೊರೆ, ಅವನಿಂದ ಅಸಾಧ್ಯವಾದದ್ದು ಏನೂ ಇಲ್ಲ, ಅವನನ್ನು ಯಾರಿಂದಲೂ ಮಣಿಸಲಾಗದು.
ಪ್ರಶಾಂತ್ ನೀಲ್ ಗೆ ಆಕ್ಷನ್ ಇಷ್ಟವಿರಬಹುದು. ಆದರೆ ತೆಲುಗು ಸಿನಿಮಾಗಳ ಹಾಗೆ ಭೀಬತ್ಸ ದೃಶ್ಯಗಳು ಇಲ್ಲಿಲ್ಲ. ಕ್ರೌರ್ಯ ಕಣ್ಣಿಗೆ ರಾಚಿಸಿದರೂ ಅದು ನಮ್ಮ ಎದೆಗೆ ಇಳಿಯುವುದನ್ನು ತಡೆದುಬಿಡುತ್ತಾರೆ ಪ್ರಶಾಂತ್. ಒಬ್ಬ ಸಣ್ಣ ಹುಡುಗನ ದಾರುಣ ಕೊಲೆಯೊಂದನ್ನು ಯಶ್ ಅವರ ಅದ್ಭುತ ರಿಯಾಕ್ಷನ್ ಮತ್ತು ಒಂದಿಡೀ ಸಮೂಹದ ದೊಡ್ಡ ನಿಟ್ಟುಸಿರಿನೊಂದಿಗೆಯೇ ತೋರಿಸಿಬಿಡುತ್ತಾರೆ ಅವರು. ನೋಡಿ ನಿಟ್ಟುಸಿರಾಗೋ ಸರದಿ ನಮ್ಮದಷ್ಟೆ. ನಿರ್ದೇಶಕರ ತಂಡ ಅಸಾಧ್ಯ ಕೆಲಸಗಳನ್ನು ಮಾಡಿದೆ. ಕಥೆಗೆ ಸಂಬಂಧಿಸಿದ ರಿಸರ್ಚ್ ಗಳಿಂದ ಹಿಡಿದು ಒಂದೇ ಒಂದು ದೃಶ್ಯವೂ ತರ್ಕಹೀನವಾಗದಂತೆ, ಬಾಲಿಷ ಎನಿಸದಂತೆ, ಕ್ಲೀಷೆಯಾಗದಂತೆ ಈ ತಂಡ ಪರಿಶ್ರಮ ವಹಿಸಿದೆ.
ಸಿನಿಮಾದ ಸ್ಕ್ರೀನ್ ಪ್ಲೇ ಈ ಹೊತ್ತಿನವರೆಗಿನ ಅದ್ಭುತ ಪ್ರಯೋಗಗಳಲ್ಲಿ ಒಂದು. ಪ್ರಶಾಂತ್ ನೀಲ್ ಕಸುಬುದಾರಿಕೆಗೆ ಜವಾಬೇ ಇಲ್ಲ. ಈ ಸ್ಕ್ರೀನ್ ಪ್ಲೇಗೆ ನಿಜವಾದ ಆತ್ಮವನ್ನು ತುಂಬಿರುವ ಸಂಕಲನಕಾರ ಶ್ರೀಕಾಂತ್ ತನ್ನ ಕತ್ತರಿಯನ್ನೂ ಒಂದು ಪಾತ್ರವಾಗಿಸಿದ್ದಾನೆ. ಎರಡನೇ ಚಾಪ್ಟರಿನ ಒಂದೆರಡು ಸೀನ್ ಗಳನ್ನು ಕ್ಲೈಮಾಕ್ಸ್ ಗೂ ಮುನ್ನ ಕಾಣಿಸುವ ಎದೆಗಾರಿಕೆ ಇಲ್ಲಿ ಪ್ರದರ್ಶನಗೊಂಡಿದೆ. ಒಂದೇ ಒಂದು ಕ್ಷಣ ನೀವು ಅತ್ತಿತ್ತ ತಿರುಗದಂತೆ ಮಾಡುವ ಕಲೆಗಾರಿಕೆ ಇಲ್ಲಿ ಸಿದ್ಧಿಸಿದೆ.
ಸಿನಿಮಾದ ಛಾಯಾಗ್ರಹಣ ಈ ದೇಶಕ್ಕೇ ಅಪರೂಪದ್ದು. ದೃಶ್ಯಗಳನ್ನು ನ ಭೂತೋ ಎನ್ನುವಂತೆ ಕಟ್ಟಿಕೊಡುವಲ್ಲಿ ಭುವನ್ ಗೌಡ ಅವರಿಗಿರುವ ರಾಕ್ಷಸ ಹಸಿವು ಎದ್ದುಕಾಣುತ್ತದೆ. ಪ್ರತಿಯೊಂದು ಫ್ರೇಮನ್ನೂ ಅವರು ತಾವೇ ಬರೆದ ಚಿತ್ರದಂತೆ ಸೆರೆಹಿಡಿದಿದ್ದಾರೆ. ಸೆಕೆಂಡ್ ಹಾಫ್ ನ ಪ್ರತಿಯೊಂದು ದೃಶ್ಯವೂ ದೃಶ್ಯಕಾವ್ಯಗಳೇ. ಪ್ರತಿ ಫ್ರೇಮ್ ನಿಮ್ಮ ಜತೆ ಮಾತಿಗೆ ಇಳಿಯುತ್ತದೆ.
ರವಿ ಬಸ್ರೂರು ಕೆಜಿಎಫ್ ನ ಮತ್ತೊಬ್ಬ ಹೀರೋ. ಅವರ ಹಿನ್ನೆಲೆ ಸಂಗೀತ ಸಿನಿಮಾದಿಂದ ಒಂದು ಮಿಲಿಮೀಟರ್ ಕೂಡ ಆಚೆ ಹೋಗಿ ನಿಲ್ಲುವುದಿಲ್ಲ. ಪ್ರತಿ ದೃಶ್ಯಗಳ ಜತೆ ಬ್ಲೆಂಡ್ ಆಗಿ ವಿಶೇಷ ಅನುಭೂತಿ ಉಕ್ಕಿಸುತ್ತದೆ. ಹಾಡುಗಳಿಗೂ ಇದೇ ಮಾತು ಹೇಳಬೇಕು.
ಶಿವು ಕುಮಾರ್ ಎಂಬ ಆರ್ಟ್ ಡೈರೆಕ್ಟರ್ ಬಗ್ಗೆ ಏನು ಹೇಳಿದರೂ ಕಡಿಮೆಯೇ. ಸೆಕೆಂಡ್ ಹಾಫ್ ನಲ್ಲಿ ಅವರು ಹಾಕಿರುವ ಸೆಟ್ ಗಳನ್ನು ನೋಡಿ ಬೇರೆ ಸಿನಿಮಾ ನಿರ್ಮಾಪಕದ ಎದೆ ನಡುಗಿ ಹೋಗಿರಬಹುದು. ಮಾರಿ ಪೂಜೆಯ ಸೆಟ್ ಅಂತೂ ಅಸಾಧಾರಣ. ಒಮ್ಮೆ ಎದ್ದು ನಿಂತು ಕ್ಲಾಪ್ ಮಾಡಬೇಕೆನಿಸುತ್ತದೆ. ಶಿವು ಮತ್ತು ಅವರ ಹುಡುಗರ ತಂಡ ಕೆಜಿಎಫ್ ಕನಸಿನ ಬಹುಮಖ್ಯ ಪಾತ್ರಧಾರಿಗಳು.
ಯಶ್ ಹೊರತಾಗಿ ಈ ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳು ತೆರೆಯ ಮೇಲೆ ಅಪ್ಪಳಿಸುತ್ತವೆ. ಅವುಗಳಲ್ಲಿ ಕೆಲವು ಮುಂದಿನ ಚಾಪ್ಟರ್ ಗೆಂದೇ ಮೀಸಲಾಗಿಟ್ಟ ಟ್ರೇಲರ್ ಗಳು! ಎಲ್ಲರೂ ನಿರ್ದೇಶಕರ ನಟರುಗಳೇ! ನಿಮ್ಮ ಕಣ್ಣುಗಳಿಂದಲೇ ಹೆಚ್ಚು ಮಾತಾಡಿ ಎಂದು ಪ್ರಶಾಂತ್ ನೀಲ್ ಈ ಪಾತ್ರಗಳಿಗೆ ಹೇಳಿದಂತಿದೆ. ಆ ಪಾತ್ರಗಳು ಚಾಚೂ ತಪ್ಪದೆ ಹಾಗೇ ಮಾಡಿವೆ. ಹಿರಿಯ ನಟ ಅನಂತ್ ನಾಗ್ ಸಿನಿಮಾದ ಘನತೆಯನ್ನು ಹೆಚ್ಚಿಸಿದ್ದಾರೆ. ಪ್ರಶಾಂತ್ ಹೆಚ್ಚುಗಾರಿಕೆ ಏನೆಂದರೆ ಸಾವಿರಾರು ಜೂನಿಯರ್ ಆಕ್ಟರ್ ಗಳಿಂದಲೂ ಅವರು ಆಕ್ಟಿಂಗ್ ಮಾಡಿಸಿದ್ದಾರೆ. ಜೂನಿಯರ್ ಗಳೂ ಪಳಗಿದ ನಟರಂತೆಯೇ ನಟಿಸಿದ್ದಾರೆ.
ಅತ್ಯುತ್ತಮ ಸಿನಿಮಾ, ನಿರ್ದೇಶನ, ಹೀರೋ, ಸಂಗೀತ, ಕಲಾ ನಿರ್ದೇಶನ, ಸಂಕಲನ ಹೀಗೆ ಕನಿಷ್ಠ 6 ವಿಭಾಗಗಳಲ್ಲಾದರೂ ಕೆಜಿಎಫ್ ಗೆ ಆಸ್ಕರ್ ಪ್ರಶಸ್ತಿ ಬರಲೇಬೇಕು. ಯಾಕೆಂದರೆ ಈ ಸಿನಿಮಾ ಸ್ಪರ್ಧೆ ನೀಡುತ್ತಿರುವುದು ಭಾರತೀಯ ಸಿನಿಮಾಗಳ ಜತೆಯಲ್ಲ, ಹಾಲಿವುಡ್ ಸಿನಿಮಾಗಳ ಜತೆ. ಸಿನಿಮಾದ ಕ್ರಾಫ್ಟ್ ಹಾಗಿದೆ. ಇದು ಬಾಹುಬಲಿಯನ್ನು ಮೀರಿಸುವ ಸಿನಿಮಾವೇ ಎಂದು ಯಾರಾದರೂ ಕೇಳಿದರೆ ನನ್ನ ಉತ್ತರ ಹೌದು ಎಂಬುದೇ ಆಗಿರುತ್ತದೆ.
ಕೆಜಿಎಫ್ ಗಿಂತ ಅದ್ಭುತವಾದ ಕನ್ನಡ ಅಥವಾ ಭಾರತೀಯ ಸಿನಿಮಾ ಬಂದಿಲ್ಲವೆಂದಲ್ಲ, ಬಂದಿವೆ. ಆದರೆ ಕೆಜಿಎಫ್ ಸಿನಿಮಾದ ಕ್ರಾಫ್ಟ್ ಹಿಂದೆಂದೂ ಬಂದಿರಲು ಸಾಧ್ಯವಿಲ್ಲ. ಇಷ್ಟೊಂದು ಪರಿಶ್ರಮ ಮತ್ತು ಕನಸುಗಳನ್ನು ತೊಡಗಿಸಿ ಮಾಡಿದ ಸಿನಿಮಾ ಇನ್ನೊಂದಿರಲು ಸಾಧ್ಯವಿಲ್ಲ. ಇಡೀ ತಂಡ ಸಿನಿಮಾವನ್ನು ಜೀವಿಸಿಬಿಟ್ಟಿದೆ ಎಂದರೆ ಅದು ಅತಿಶಯೋಕ್ತಿ ಅಲ್ಲ. ಕನ್ನಡ ಚಿತ್ರರಂಗವನ್ನು ಹೊಸ ದಾರಿಗೆ ಎಳೆದೊಯ್ದಿದ್ದಾರೆ ಪ್ರಶಾಂತ್ ಮತ್ತು ಯಶ್ ಜೋಡಿ. ಅವರೇ ಹೇಳಿದಂತೆ ಇದು ಅವರ ಕನಸು ಮಾತ್ರವಲ್ಲ, ನಮ್ಮೆಲ್ಲರ ಕನಸು. ನಮ್ಮ ಕನಸನ್ನು ಅವರು ನಿಜವಾಗಿಸಿದ್ದಾರೆ.
ಚಿತ್ರನಿರ್ಮಾಪಕ ವಿಜಯ್ ಕಿರಗಂದೂರು ಎಂಬ ಮಹಾಸಾಹಸಿಗೆ ಕೋಟಿಗಳಂತೂ ಹರಿದುಬರಲಿವೆ. ಆದರೆ ನಮ್ಮ ಕೋಟಿ ಕೋಟಿ ಚಪ್ಪಾಳೆಗಳು ಸಲ್ಲಲೇಬೇಕು.
ಸಿನಿಮಾ ಕಥೆ, ಸಂಭಾಷಣೆ, ಹೂರಣದ ಬಗ್ಗೆ ಏನನ್ನೂ ಹೇಳಿಲ್ಲ. ಹೇಳಬಾರದು ಕೂಡ. ಯಾಕೆಂದರೆ ಇಂಥ ಸಿನಿಮಾಗಳನ್ನು ಯಾವ ರಿವ್ಯೂ ಕೂಡ ಕೇಳದೇ ಹೋಗಿನೋಡಬೇಕು.
– ದಿನೇಶ್ ಕುಮಾರ್ ಎಸ್.ಸಿ. (ದಿನೂ)

ದಿನದ ಸುದ್ದಿ
ಶ್ರೀಲಂಕಾದಲ್ಲಿ ಕನ್ನಡ ಚಲನಚಿತ್ರೋತ್ಸವ

ಸುದ್ದಿದಿನ, ಕೊಲೊಂಬೋ : ಶ್ರೀಲಂಕಾದ ರಾಜಧಾನಿ ಕೊಲೊಂಬೋದಲ್ಲಿನ ತರಂಗಿಣಿ ಸಿನಿಮಾ ಹಾಲ್‌ನಲ್ಲಿ ಏರ್ಪಡಿಸಿದ್ದ ಕನ್ನಡ ಚಲನಚಿತ್ರೋತ್ಸವಕ್ಕೆ ಮಂಗಳವಾರ ಚಾಲನೆ ದೊರೆಯಿತು.
ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರಿ ಗೋಪಾಲ್ ಬಾಗ್ಳೆ, ಶ್ರೀಲಂಕಾದ ಬಹು ಮಾಧ್ಯಮ ಖಾತೆ ಸಚಿವ ಡಾ. ಬಂದೂಲ ಗುಣವರ್ಧನೆ ಹಾಗೂ ಸಂಸ್ಕೃತಿ ಖಾತೆ ಸಚೆವ ವಿಧುರವಿಕ್ರಮ ನಾಯಕ್ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ, ಕನ್ನಡ ಚಲನಚಿತ್ರರಂಗದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತರ ಮಾತನಾಡಿದ ಸಚಿವ ಡಾ.ಗುಣವರ್ಧನೆ, ಉಭಯ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ, ಚಲನಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಮನರಂಜನಾ ಮಾಧ್ಯಮವು ಅತ್ಯಂತ ಜನಪ್ರಿಯ ಮಾಧ್ಯಮವಾಗಿದ್ದು, ಪ್ರಾದೇಶಿಕ ಚಲಚಿನಚಿತ್ರಗಳು, ಅದರಲ್ಲಿಯೂ ಭಾರತದ ಚಲನಚಿತ್ರ ಸಂಸ್ಕೃತಿಯ ಜೊತೆಗೆ ದೇಶದ ಪರಂಪರೆ ಹಾಗೂ ಇತಿಹಾಸವನ್ನು ಪ್ರತಿಬಿಂಬಿಸುತ್ತಿದೆ. ಸಾಮಾಜಿಕ ವಲಯದಲ್ಲಿ ಪ್ರಾದೇಶಿಕ ಬಾಷೆಯಲ್ಲಿ ಬರುವ ಚಿತ್ರಗಳು, ಚಿತ್ರ ಪ್ರೇಮಿಗಳಿಗೆ ಅದರಲ್ಲಿಯೂ ವಿದ್ಯಾರ್ಥಿಗಳಿಗೆ, ಪಠ್ಯಕ್ರಮದ ಭಾಗವಾಗಿ ಹಲವು ಪ್ರದೇಶಗಳಲ್ಲಿ ಅಧ್ಯಯನಕ್ಕೂ ಅನುಕೂಲವಾಗಿದೆ. ಇತ್ತೀಚೆಗೆ ಶ್ರಿಲಂಕಾದ ವಿದ್ಯಾರ್ಥಿಗಳು ಇದರ ಅನುಭವವನ್ನು ಪಡೆದುಕೊಳ್ಳಲು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಮಾರ್ಗದರ್ಶನ ಅನುಕೂಲವಾಗಿದೆ ಎಂದು ಅವರು ಹೇಳಿದರು.
ಶ್ರೀಲಂಕಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 250 ರಿಂದ 300 ಚಲನಚಿತ್ರಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಿದೆ. ಕಳೆದ ವರ್ಷ ನಾಲ್ಕನೇ ಬಹುದೊಡ್ಡ ಕಾರ್ಯಗಾರ ಆಯೋಜಿಸಲಾಗಿತ್ತು ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶ್ರೀಲಂಕಾ ವಿದ್ಯಾರ್ಥಿಗಳಿಗೆ, ಚಲನಚಿತ್ರರಂಗದ, ತರಬೇತಿ, ವೀಕ್ಷಣೆ ಹಾಗೂ ನಿರ್ಮಾಣದ ಬಗ್ಗೆ ಹಲವು ರೀತಿ ಪ್ರಾತ್ಯಕ್ಷಿಕೆ ಮೂಲಕ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಈ ವರ್ಷ ಅಮೆರಿಕ-ಅಮೆರಿಕ, ಇಷ್ಠಕಾಮ್ಯ, ಮಾತಾಡ್ ಮಾತಾಡ್ ಮಲ್ಲಿಗೆ ಹಾಗೂ ಕೊಟ್ರೇಶಿ ಕನಸು ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಏನಿದು ವಿಚಿತ್ರ | ನಟಿಯ ಡೈವೋರ್ಸ್ ಫೋಟೋಶೂಟ್..!

ಸುದ್ದಿದಿನ ಡೆಸ್ಕ್ : ನಟಿ ಶಾಲಿನಿ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಜನಮನಗೆದ್ದಿದ್ದಾರೆ. ಮೊದಲ ಮದುವೆಯ ವಿಚ್ಛೇದನದ ನಂತರ ಆಕೆ ಮೊಹಮ್ಮದ್ ಎಂಬುವವರನ್ನು ಮದುವೆಯಾಗಿದ್ದರು. ಆ ದಾಂಪತ್ಯದಲ್ಲಿ ಹಲವು ಸಮಸ್ಯೆಗಳಿಂದ ವಿಚ್ಛೇದನ ಪಡೆದರು. ಅದನ್ನು ಸಂಭ್ರಮಿಸಲು ಫೋಟೋಶೂಟ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.
ಮದುವೆಗೂ ಮುನ್ನ ತೆಗೆದಿರುವ ಫೋಟೋಶೂಟ್ಗಳು ಬಹಳಷ್ಟು ಬಂದಿವೆ. ಆದರೆ ವಿಚಿತ್ರ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಕ್ಕಾಗಿಯೇ ನಟಿ ಶಾಲಿನಿಫೋಟೋಗಳು ವೈರಲ್ ಆಗಿವೆ. ಡೈವೋರ್ಸ್ ಆಗಿದ್ದನ್ನೂ ಸಂಭ್ರಮಿಸುವ ಕಾರಣಕ್ಕಾಗಿ ಮಾಡಿದ ಈ ಫೋಟೋಶೂಟ್ ಈಗ ಹಲವರ ಗಮನ ಸೆಳೆದಿದೆ.
ಜೀ ತಮಿಳು ಶೋ ಸೂಪರ್ ಮಾಮ್ ರಿಯಾಲಿಟಿ ಶೋನಲ್ಲಿ ಮಗಳೊಂದಿಗೆ ಶಾಲಿನಿ ಭಾಗವಹಿಸಿದ್ದರು. ಖುಷ್ಬು ಅಭಿನಯದ ಮೀರಾ ತಮಿಳು ಧಾರಾವಾಹಿಯಲ್ಲಿ ಕೂಡ ಆಕೆ ನಟಿಸಿದ್ದಾರೆ. ಈ ಧಾರಾವಾಹಿಯ ಮೂಲಕ ನಟಿ ಖುಷ್ಪು ಹಲವು ವರ್ಷಗಳ ನಂತರ ಕಿರುತೆರೆಯಲ್ಲಿ ನಟಿಸಿದ್ದಾರೆ.
ಮಹಿಳೆಯೊಬ್ಬರು ‘ಡೈವೋರ್ಸ್ಡ್’ ಎಂಬ ಫಲಕ ಹಿಡಿದ, ಪತಿಯೊಂದಿಗೆ ಇದ್ದ ಫೋಟೋದಲ್ಲಿನ ಪತಿಯ ಮುಖದ ಭಾಗವನ್ನು ಹರಿದು ಪ್ರತ್ಯೇಕಿಸಿದ, ಪತಿ-ಪತ್ನಿ ಇಬ್ಬರೂ ಜೊತೆಗಿದ್ದ ಫೋಟೋವನ್ನು ಚಪ್ಪಲಿ ಕಾಲಿನಲ್ಲಿ ತುಳಿದು ಹೊಸಕಿ ಹಾಕಿದಂಥ ಫೋಟೋಗಳು ಈ ಫೋಟೋಶೂಟ್ನ ಪ್ರಮುಖ ಆಕರ್ಷಣೆ ಎನಿಸಿಕೊಂಡಿವೆ. ಅಲ್ಲದೆ, ‘ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!’ ಎಂಬ ಫಲಕವನ್ನು ಹಿಡಿದು ಸಂತಸದಿಂದ ಬೀಗುವಂಥ ಫೋಟೋ ಮೂಲಕ ‘ಪತಿ ಎಂಬ ಒಂದು ಸಮಸ್ಯೆಯನ್ನು ನಿವಾರಿಸಿಕೊಂಡಿದ್ದೇನೆ’ ಎಂಬ ಸಂದೇಶವನ್ನೂ ಈಕೆ ಸಾರಿದ್ದಾರೆ.
ಶಾಲಿನಿ ಇನ್ಸ್ಟಾ ಅಕೌಂಟ್ ಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://instagram.com/shalu2626?igshid=YmMyMTA2M2Y=
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ದಿ ಕೇರಳ ಸ್ಟೋರಿ’ ವಿವಾದ| ಲವ್ ಜಿಹಾದ್ ಅನ್ನೋದು ಸುಳ್ಳು : ಕೇರಳ ಸಿಎಂ ಪಿಣರಾಯಿ

ಸುದ್ದಿದಿನ, ಕೇರಳ : ‘ದಿ ಕೇರಳ ಸ್ಟೋರಿ’ ಸಿನೆಮಾ ಟ್ರೇಲರ್ ನೋಡಿ ಪ್ರತಿಕ್ರಿಯಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಸಿನೆಮಾದಿಂದ ಕೇರಳಕ್ಕೆ ಕೆಟ್ಟ ಹೆಸರು ಬರಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಧ್ಯ ‘ದಿ ಕೇರಳ ಸ್ಟೋರಿ’ ಸಿನಿಮಾ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಪರ- ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ. ಲವ್ ಜಿಹಾದ್ ವಿಚಾರವಿಟ್ಟುಕೊಂಡು ತಯಾರಾಗಿರುವ ಈ ಸಿನಿಮಾದಲ್ಲಿ ಐಸಿಸ್ ವಿಚಾರವನ್ನೂ ಹೇಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಚಿತ್ರದ ಟ್ರೇಲರ್ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಕೇರಳದಲ್ಲಿ ಸಿನಿಮಾ ರಿಲೀಸ್‌ಗೆ ತಡೆ ಬಿದ್ದರೂ ಅಚ್ಚರಿ ಏನಿಲ್ಲ.
ಲವ್ ಜಿಹಾದ್ ಅನ್ನೋದು ಸುಳ್ಳು. ತನಿಖಾ ಸಂಸ್ಥೆ, ನ್ಯಾಯಾಲಯ ಮತ್ತು ಕೇಂದ್ರ ಗೃಹ ಸಚಿವಾಲಯದಿಂದ ಲವ್ ಜಿಹಾದ್ ಎಂಬ ವಿಚಾರ ತಿರಸ್ಕರಿಸಲ್ಪಟ್ಟಿದೆ. ಈಗ ಲವ್ ಜಿಹಾದ್ ವಿಚಾರನ್ನೇ ಚಿತ್ರದ ಥೀಮ್ ಮಾಡಿಕೊಂಡಿದ್ದಾರೆ. ರಾಜ್ಯದ ಬಗ್ಗೆ ಅಪಪ್ರಚಾರ ಮಾಡಲು ಸಂಘಪರಿವಾರ ಪ್ರಯತ್ನಿಸುತ್ತಿದೆ’ ಎಂದಿದ್ದಾರೆ ಪಿಣರಾಯಿ ವಿಜಯನ್.
ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ತೆಗೆದ ಸಿನಿಮಾ ಇದು ಎಂದು ನಿರ್ದೇಶಕ ಸುದಿಪ್ಲೋ ಸೇನ್ ಹೇಳಿದ್ದಾರೆ. ಇರಾಕ್ ಮತ್ತು ಸಿರಿಯಾದಲ್ಲಿ ಉಗ್ರಗಾಮಿ ಸಂಘಟನೆಗಳಿಗೆ ಸೇರಿಕೊಂಡ ಕೇರಳದ 32,000 ಮಹಿಳೆಯರು ಕಣ್ಮರೆಯಾಗುವುದರ ಸುತ್ತ ಚಿತ್ರದ ಕಥೆ ಸಾಗುತ್ತದೆ. ಅದಾ ಶರ್ಮಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,ನಟಿ ಶ್ವೇತಾ ಮೆನನ್ ಕೂಡ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.
‘ದಿ ಕೇರಳ ಸ್ಟೋರಿ’ ಸಿನಿಮಾ ಮೇ 5ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ. ಸದ್ಯ ಸಿನಿಮಾ ರಿಲೀಸ್‌ಗೆ ಕೇರಳ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ. ಹೀಗಾಗಿ, ಸಿನಿಮಾ ಮೇ5ಕ್ಕೆ ರಿಲೀಸ್ ಆಗಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.
ಟ್ರೇಲರ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್7 days ago
ರಣ ಬೇಟೆಗಾರ ‘ಕೆನ್ನಾಯಿ’ ವಿನಾಶವಾದ ಕತೆ..!
-
ದಿನದ ಸುದ್ದಿ7 days ago
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರ
-
ದಿನದ ಸುದ್ದಿ7 days ago
ನಾಳೆ ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ7 days ago
ಜೂನ್ 8 ರಿಂದ ಕೋಳಿ ಸಾಕಾಣಿಕೆ ತರಬೇತಿ ಶಿಬಿರ
-
ದಿನದ ಸುದ್ದಿ7 days ago
ಒಡಿಶಾದಲ್ಲಿ ಸಿಲುಕಿರುವ ಕನ್ನಡಿಗರು ಇಂದು ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮನ
-
ದಿನದ ಸುದ್ದಿ5 days ago
ಗೋ ಹತ್ಯೆ ನಿಷೇಧ ಕಾಯ್ದೆ ; ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ4 days ago
ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ನಿಗದಿ
-
ದಿನದ ಸುದ್ದಿ7 days ago
ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿಗೆ ಕ್ರೀಡಾಪಟುಗಳ ಆಯ್ಕೆ