ದಿನದ ಸುದ್ದಿ
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
ರಾಜ್ಯದ 28ಲೋಕಸಭಾ ಮತಕ್ಷೇತ್ರಗಳನ್ನು ಒಳಗೊಂಡ ಜಿಲ್ಲೆಗಳಲ್ಲಿ ನಡೆದಿರುವ ಚುನಾವಣಾ ಚಟುವಟಿಕೆಗಳ ಬಗ್ಗೆ ಮಾಹಿತಿ
ಸುದ್ದಿದಿನ ಡೆಸ್ಕ್ : ದಾವಣಗೆರೆಯಲ್ಲಿ ಚುನಾವಣಾ ಕಾರ್ಯಗಳ ವೀಕ್ಷಣೆ ಮತ್ತು ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಾರ್‌ರೂಮ್ ಆರಂಭಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿಯ ಜಿಲ್ಲಾ ನೋಡಲ್ ಅಧಿಕಾರಿ ಗುಂಜನ್ ಕೃಷ್ಣ ಇಂದು ವಾರ್‌ರೂಮ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ವಿದ್ಯುನ್ಮಾನ ಮಾಧ್ಯಮಗಳ ವೀಕ್ಷಣೆಗಾಗಿ ಟಿ.ವಿ. ಅಳವಡಿಕೆ, ಸ್ಥಳೀಯ ವಾಹಿನಿಗಳು ಮತ್ತು ಸಾಮಾಜಿಕ ಜಾಲತಾಣ ವೀಕ್ಷಣೆ ಹಾಗೂ ಪ್ರತಿ ತಾಲೂಕಿಗೆ ಚುನಾವಣಾ ಕಾರ್ಯಗಳ ವೀಕ್ಷಣಾ ವರದಿಗಾಗಿ ನೋಡಲ್ ಅಧಿಕಾರಿಗಳ ನೇಮಕ ಕುರಿತಂತೆ ಮಾಹಿತಿ ಪಡೆದರು.
ಮತದಾರರು ವಿ.ಎಚ್.ಎ. ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಪರಿಶೀಲಿಸಬಹುದು ಎಂದು ತಿಳಿಸಿದರು.
ಯಾದಗಿರಿ
ಯಾದಗಿರಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಸಂಬಂಧ ಮುದ್ರಣವಾಗುವ ಪ್ರಚಾರ ಸಾಮಾಗ್ರಿಗಳ ಮೇಲೆ ಮುದ್ರಕರು ಮತ್ತು ಪ್ರಕಾಶಕರ ಹೆಸರು, ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು.
ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಕರಪತ್ರ, ಹ್ಯಾಂಡ್‌ಬಿಲ್, ಬಂಟಿಂಗ್ ಬ್ಯಾನರ್‌ಗಳ ಮೇಲೆ ಮುದ್ರಕರು ಮತ್ತು ಪ್ರಕಾಶಕರ ವಿವರಗಳು ಹಾಗೂ ಮುದ್ರಣ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ನಿಯಮ ಉಲ್ಲಂಘಿಸಿದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ತಿಳಿಸಿದ್ದಾರೆ.
ದಕ್ಷಿಣ ಕನ್ನಡ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚುನಾವಣೆ ನಡೆಯುವ ಏಪ್ರಿಲ್ 26ರಂದು ಸರ್ಕಾರದ 18 ಸಾವಿರ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಚುನಾವಣಾಆಯೋಗದ ನಿರ್ದೇಶನದಂತೆ ಮತಗಟ್ಟೆಗಳಲ್ಲಿ ಅಗತ್ಯ ಮೂಲಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ದೀಪಗಳು, ಶೌಚಾಲಯ, ವಿಶೇಷಚೇತನ ಮತದಾರರಿಗೆ ಗಾಲಿ ಕುರ್ಚಿ, ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಹಿಲನ್ ತಿಳಿಸಿದ್ದಾರೆ.
ಮಂಗಳೂರು
ಮಂಗಳೂರು ನಗರದಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ನಿರತರಾಗಿರುವ 12 ಆರೋಪಿಗಳನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಕಾನೂನು ಸುವ್ಯವಸ್ಥೆ ಪಾಲನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‍ವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ
ಬಳ್ಳಾರಿ ಜಿಲ್ಲೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾ ಸ್ವೀಪ್ ಸಮಿತಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಮನೆಗಳಿಂದ ದೂರವಿದ್ದು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಪತ್ರ ಬರೆದು ಆಮಿಷಕ್ಕೆ ಒಳಗಾಗದೇ ಮತದಾನ ಮಾಡಬೇಕೆಂದು ಮನವಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಜಿಲ್ಲಾ ಮತ್ತು ತಾಲೂಕು ಮಟ್ಟದ 295ಶಾಲೆಗಳು ಮತ್ತು ವಸತಿ ನಿಲಯಗಳಲ್ಲಿ ಇರುವ ಅಂದಾಜು 15ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಅವರ ಪೋಷಕರಿಗೆ ಈ ಸಂಬಂಧ ಪತ್ರ ಬರೆಸುವ ಅಭಿಯಾನ ನಡೆಸಲಾಗುತ್ತಿದೆ.
ಚಿತ್ರದುರ್ಗ
ಚಿತ್ರದುರ್ಗ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಂದೂಕು ಪರವಾನಗಿ ಪಡೆದಿರುವ ನಾಗರಿಕರು ತಮ್ಮಲ್ಲಿರುವ ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಗಳಿಗೆ ಒಪ್ಪಿಸಬೇಕು ಮತ್ತು ಇದಕ್ಕೆ ಸೂಕ್ತ ರಶೀದಿಯನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸೂಚಿಸಿದ್ದಾರೆ.
ಹಾವೇರಿ
ಹಾವೇರಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ಅಗತ್ಯ ಕ್ರಮಗಳನ್ನು ಆರಂಭಿಸಲಾಗಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇಕಡ 71.63ರಷ್ಟು ಮತದಾನವಾಗಿತ್ತು. ಮತದಾನದ ಮಹತ್ವ ತಿಳಿಸುವ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಅಕ್ಷಯ ಶ್ರೀಧರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಅಂದಾಜು ಒಂದು ಕೋಟಿ 20 ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.
ಉತ್ತರ ಕನ್ನಡ
ಉತ್ತರಕನ್ನಡ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಮೇ 7 ರಂದು ನಡೆಯಲಿದ್ದು, ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದ ಹಕ್ಕು ಚಲಾಯಿಸಬೇಕು. ಯಾವುದೇ ಆಮಿಷ ಅಥವಾ ಪ್ರಭಾವಗಳಿಗೆ ಒಳಗಾಗದೇ ನಿರ್ಭೀತಿಯಿಂದ ಮತದಾನ ಮಾಡಬೇಕು ಎಂದು ಸ್ವೀಪ್ ಸಮಿತಿ ವತಿಯಿಂದ ಮಜಾಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.
ವಿಜಯನಗರ
ವಿಜಯನಗರ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಕ್ರಮ ಹಣಕಾಸು ಸಾಗಾಟ ಪ್ರಕರಣಗಳ ಮೇಲೆ ಕಣ್ಣಿಡಬೇಕು. ಅನುಮಾನಾಸ್ಪದ ಬ್ಯಾಂಕ್ ವ್ಯವಹಾರಗಳ ಮೇಲೆ ತೀವ್ರ ನಿಗಾ ಇಡಬೇಕು ಎಂದು ಜಿಲ್ಲಾಧಿಕಾರಿ ದಿವಾಕರ್ ಎಂ.ಎನ್., ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿಂದು ಮತದಾರರ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಕುಸಿಯುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ. ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿರುವ ಮತದಾನದಲ್ಲಿ ಅರ್ಹ ಮತದಾರರೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಕೆ. ಪರಮೇಶ್ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.
ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.
http://Visit : www.suddidina.com
ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ:
ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.
ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:
ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.
ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.




