Connect with us

ಕ್ರೀಡೆ

ಬೆಳಗಿನ ಪ್ರಮುಖ ಸುದ್ದಿಗಳು

Published

on

ಬೆಳಗಿನ ಪ್ರಮುಖ ಸುದ್ದಿಗಳು

  1. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗೆ ವಿಶೇಷ ಮುತುವರ್ಜಿ ವಹಿಸಬೇಕು. ಸಮಾಜದಲ್ಲಿ ಶಾಂತಿ, ಸೌಹಾದ ವಾತಾವರಣಕ್ಕೆ ಧಕ್ಕೆ ಬಾರದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ನಡೆದ ಪೊಲೀಸ್ ಮತ್ತು ಕಾನೂನು ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಈ ಸೂಚನೆ ನೀಡಿದ್ದಾರೆ.
  2. ಗುವಾಹತಿಯಲ್ಲಿ ಇಂದು ನಡೆಯಲಿರುವ ಅಸ್ಸಾಂ ಪೊಲೀಸ್ ವಿಶೇಷ ಪರೇಡ್‌ನಲ್ಲಿ ಉತ್ತಮ ಸಾಧನೆ ಮಾಡಿದ ಪೊಲೀಸ್ ಸಿಬ್ಬಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರಪತಿ ಪದಕ ಪ್ರದಾನ ಮಾಡಲಿದ್ದಾರೆ. ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲಿರುವ ಕೇಂದ್ರ ಸಚಿವ ಅಮಿತ್ ಶಾ, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
  3. ತಮಿಳುನಾಡಿನ ಕೊಯಮತ್ತೂರಿನಲ್ಲಿ ನಿನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅತ್ಯುತ್ತಮ ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಎಂಎಸ್‌ಎಂಇ ವಲಯಕ್ಕೆ ಕೇಂದ್ರ ಸರ್ಕಾರ ಅಗತ್ಯ ಉತ್ತೇಜನ ನೀಡುತ್ತಿದೆ ಎಂದು ಸಚಿವರು ತಿಳಿಸಿದರು.
  4. ’ಒಂದು ರಾಷ್ಟ್ರ – ಒಂದು ಗುಣಮಟ್ಟ’ ಪರಿಕಲ್ಪನೆ ಸಾಕಾರಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಭಾರತೀಯ ಉತ್ಪನ್ನಗಳು ಅತ್ಯಂತ ಶ್ರೇಷ್ಠ ಗುಣಮಟ್ಟ ಹೊಂದಿರಬೇಕು, ಗ್ರಾಹಕರ ಹಿತರಕ್ಷಣೆಗೆ ಆದ್ಯತೆ ನೀಡಬೇಕು ಎಂಬುದು ಸರ್ಕಾರದ ಕಾಳಜಿಯಾಗಿದೆ ಎಂದು ಸಚಿವರು ತಿಳಿಸಿದರು.
  5. ದೇಶದ ಭದ್ರತಾ ಪಡೆಗಳ ಕ್ಯಾಂಟೀನ್‌ಗಳಲ್ಲಿ ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಉತ್ಪನ್ನಗಳ ಮಾರಾಟವನ್ನು ಹಂತ ಹಂತವಾಗಿ ಆರಂಭಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
  6. ಹೆದ್ದಾರಿ ವಲಯದಲ್ಲಿ ರಸ್ತೆ ನಿರ್ಮಾಣ ವೆಚ್ಚ ಕಡಿಮೆ ಮಾಡುವುದು ಮತ್ತು ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವುದು ಮಹತ್ವದ ಕಾರ್ಯ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
  7. ರಸ್ತೆ ಸಾರಿಗೆ ಮತ್ತು ಹೆದ್ದಾರಿ ವಲಯದಲ್ಲಿ ಸುಸ್ಥಿರ ಮತ್ತು ಪುನರ್ ಬಳಕೆ ತಂತ್ರಜ್ಞಾನ ಅಳವಡಿಸಲಾಗುತ್ತಿದೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
  8. ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಮಸ್ಯೆಗಳ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಇಂದು ರಾಜ್ಯಮಟ್ಟದ ಸಭೆ ಕರೆಯಲಾಗಿದೆ ಎಂದು ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಬೆಳಗಾವಿಯಲ್ಲಿ ಹೇಳಿದ್ದಾರೆ. ಕಬ್ಬು ಬೆಳೆಗಾರರ ಬಾಕಿ ಬಿಲ್ ಪಾವತಿ, ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.
  9. ಮುಂಬರುವ ಮುಂಗಾರು ಹಂಗಾಮಿಗೆ ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
  10. ಶಬ್ದಮಾಲಿನ್ಯ ಉಂಟುಮಾಡುವ ಯಾವುದೇ ಚಟುವಟಿಕೆಗಳನ್ನು ನಿಯಂತ್ರಿಸಲು ನ್ಯಾಯಾಲಯಗಳ ಆದೇಶದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಸಿದ್ದಾರೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಗೌರವಿಸಬೇಕು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
  11. ಗುವಾಹತಿಯಲ್ಲಿ ಇಂದು ನಡೆಯಲಿರುವ ಅಸ್ಸಾಂ ಪೊಲೀಸ್ ವಿಶೇಷ ಪರೇಡ್‌ನಲ್ಲಿ ಉತ್ತಮ ಸಾಧನೆ ಮಾಡಿದ ಪೊಲೀಸ್ ಸಿಬ್ಬಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರಪತಿ ಪದಕ ಪ್ರದಾನ ಮಾಡಲಿದ್ದಾರೆ. ನಂತರ ಅಸ್ಸಾಂ ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಪಡೆ ಸಿಬ್ಬಂದಿಯೊಂದಿಗೆ ಸಚಿವರು ಸಂವಾದ ನಡೆಸಲಿದ್ದಾರೆ.
  12. ದೇಶದಲ್ಲಿ ರೋಗ ನಿರೋಧಕ ಆರೋಗ್ಯ ಸೇವೆ ಹಾಗೂ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳ ನಡುವೆ ಸಮನ್ವಯ ಸಾಧಿಸಲು ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.
  13. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತೀವ್ರಗೊಂಡಿರುವ ’ಅಸಾನಿ’ ಚಂಡಮಾರುತ ಮುಂದಿನ 48ಗಂಟೆಗಳಲ್ಲಿ ಪಶ್ಚಿಮ ಮಧ್ಯ ಭಾಗದಿಂದ ಪಶ್ಚಿಮ ವಾಯವ್ಯ ದಿಕ್ಕಿನತ್ತ ಚಲಿಸುವ ಸಾಧ್ಯತೆಯಿದ್ದು, ದುರ್ಬಲಗೊಳ್ಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಇತರೆ ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ಕಲ್ಲು-ಮುಳ್ಳಿನ ದಾರಿಯಲ್ಲೂ ನಿಲ್ಲದ ಹೆಜ್ಜೆ; ತಾಯಿಯ ಛಲಕ್ಕೆ ಮ್ಯಾರಥಾನ್‌ನಲ್ಲಿ ಪ್ರಥಮ ಸ್ಥಾನ

Published

on

ಬರಿಗಾಲಿನ ಓಟದಲ್ಲಿ ಗೆದ್ದ ತಾಯಿ: ಮಕ್ಕಳ ಭವಿಷ್ಯಕ್ಕಾಗಿ ನೋವನ್ನೇ ಮರೆತ ರಮಾಬಾಯಿಯ ಸ್ಫೂರ್ತಿಗಾಥೆ

ಸುದ್ದಿದಿನ,ಮುಂಬಯಿ: ಬದುಕಿನಲ್ಲಿ ಎದುರಾಗುವ ಸಂಕಷ್ಟಗಳು ಕೆಲವೊಮ್ಮೆ ಮನುಷ್ಯನನ್ನು ಕುಗ್ಗಿಸುತ್ತವೆ. ಆದರೆ ತಾಯಿಯೊಬ್ಬಳಿಗೆ ಮಕ್ಕಳ ಭವಿಷ್ಯದ ಕನಸು ದೊಡ್ಡದಾಗಿದ್ದರೆ, ಆಕೆಯ ಮುಂದೆ ನೋವು, ಬಡತನ, ಅಡೆತಡೆ ಯಾವುದೂ ನಿಲ್ಲುವುದಿಲ್ಲ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈನ 47 ವರ್ಷದ ರಮಾಬಾಯಿ ರಣವೀರ್ ಅವರ ಕಥೆ ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ಪತಿಯ ಅಕಾಲಿಕ ಅಗಲಿಕೆಯ ಬಳಿಕ ಇಬ್ಬರು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಹೋರಾಟ ನಡೆಸುತ್ತಿರುವ ರಮಾಬಾಯಿ, ಬರಿಗಾಲಿನಲ್ಲಿ ಮ್ಯಾರಥಾನ್ ಓಡಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

http://Visit : www.suddidina.com

ಕೂಲಿ ಕೆಲಸದಿಂದ ಅಡುಗೆ ಕೆಲಸದವರೆಗೆ

ಮುಂಬಯಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡ ಬಳಿಕ ರಮಾಬಾಯಿ ಕುಟುಂಬದ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಮ್ಮ ಹೆಗಲ ಮೇಲೆ ಹೊತ್ತರು. ಗದ್ದೆಗಳಲ್ಲಿ ಕೂಲಿ ಕೆಲಸ ಮಾಡುತ್ತಾ ಮಕ್ಕಳನ್ನು ಬೆಳೆಸಿದ ಅವರು, ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಅಂಬಾಜೋಗೈನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವೊಂದರಲ್ಲಿ ಅಡುಗೆ ಕೆಲಸಕ್ಕೂ ಸೇರಿದರು.

ದಿನವಿಡೀ ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಸೇರಿದಂತೆ ದುಡಿಮೆಯ ನಡುವೆಯೂ ಅವರ ಮನಸ್ಸಿನಲ್ಲಿದ್ದದ್ದು ಒಂದೇ ಕನಸು—ತಮ್ಮ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸ್ವಾವಲಂಬಿಗಳನ್ನಾಗಿ ಮಾಡುವುದು.

₹3 ಸಾವಿರಕ್ಕಾಗಿ ಆರಂಭವಾದ ಓಟ

ಮಕ್ಕಳ ವಿದ್ಯಾಭ್ಯಾಸದ ಅಗತ್ಯಕ್ಕೆ ಪುಸ್ತಕಗಳನ್ನು ಖರೀದಿಸಲು ಹಣ ಬೇಕಾಗಿತ್ತು. ಇದೇ ಸಂದರ್ಭದಲ್ಲಿ ‘ಅಮೃತ್ ದೌಡ್’ ಮ್ಯಾರಥಾನ್ ಕುರಿತು ಅವರಿಗೆ ಮಾಹಿತಿ ದೊರೆಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹3 ಸಾವಿರ ನೀಡಲಾಗುತ್ತದೆ ಎಂಬುದು ತಿಳಿದ ತಕ್ಷಣ ರಮಾಬಾಯಿ ಓಟದಲ್ಲಿ ಭಾಗವಹಿಸಲು ನಿರ್ಧರಿಸಿದರು.

ಯುವಕರು ಟ್ರ್ಯಾಕ್‌ಸೂಟ್ ಮತ್ತು ಶೂ ಧರಿಸಿ ಓಟಕ್ಕೆ ಸಜ್ಜಾಗಿದ್ದರೆ, ರಮಾಬಾಯಿ ಮಾತ್ರ ಸಾಮಾನ್ಯ ಸೀರೆಯಲ್ಲೇ ಸ್ಪರ್ಧೆಯ ಕಣಕ್ಕಿಳಿದರು. ಆರಂಭದಲ್ಲಿ ಕಾಲಿಗೆ ಚಪ್ಪಲಿ ಇದ್ದರೂ ಓಟದ ವೇಗ ಹೆಚ್ಚಾದಂತೆ ಅದು ಜಾರಲಾರಂಭಿಸಿತು.

ಚಪ್ಪಲಿ ಬಿಟ್ಟು ಬರಿಗಾಲಿನಲ್ಲಿ ಓಟ

ಗುರಿ ಮುಟ್ಟಬೇಕೆಂಬ ಛಲದ ಮುಂದೆ ಚಪ್ಪಲಿ ಅಡ್ಡಿಯಾಗಬಾರದು ಎಂದು ನಿರ್ಧರಿಸಿದ ರಮಾಬಾಯಿ, ಚಪ್ಪಲಿಯನ್ನು ಕೈಗೆತ್ತಿಕೊಂಡು ಬರಿಗಾಲಿನಲ್ಲೇ ಓಡತೊಡಗಿದರು. ರಸ್ತೆಯ ಕಲ್ಲು-ಮುಳ್ಳುಗಳು ಕಾಲಿಗೆ ಚುಚ್ಚಿದರೂ ಅವರು ಓಟ ನಿಲ್ಲಿಸಲಿಲ್ಲ.

ಸೀರೆಯ ಅಂಚನ್ನು ಸರಿಪಡಿಸಿಕೊಳ್ಳುತ್ತಾ, ನೋವನ್ನು ಮರೆತು ಗುರಿಯತ್ತ ಮುನ್ನುಗ್ಗಿದ ಅವರು ಎಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿ ಮೊದಲಿಗರಾಗಿ ಫಿನಿಶ್ ಲೈನ್ ತಲುಪಿದರು. ಈ ಗೆಲುವಿನ ಹಿಂದೆ ಬಹುಮಾನದ ಹಣಕ್ಕಿಂತಲೂ ದೊಡ್ಡದಾದ ಒಂದು ಕನಸು—ಮಕ್ಕಳ ಭವಿಷ್ಯ—ಇತ್ತು.

ತಾಯಿಯ ಹಾದಿಯಲ್ಲೇ ಮಗಳ ಗೆಲುವು

ಈ ಮ್ಯಾರಥಾನ್‌ನಲ್ಲಿ ರಮಾಬಾಯಿಯ ಮಗಳು ಪೂಜಾ ಕೂಡ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುವುದು ವಿಶೇಷ. ತಾಯಿಯ ಪರಿಶ್ರಮದಿಂದ ಪ್ರೇರಣೆ ಪಡೆದ ಪೂಜಾ, ಭವಿಷ್ಯದಲ್ಲಿ ಪೊಲೀಸ್ ಅಧಿಕಾರಿಯಾಗುವ ಸಂಕಲ್ಪ ಮಾಡಿದ್ದಾರೆ. ಮತ್ತೊಬ್ಬ ಮಗಳು ಬ್ಯಾಂಕಿಂಗ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಪೂಜಾಳ ಪರಿಶ್ರಮ ಮತ್ತು ರಮಾಬಾಯಿಯ ತ್ಯಾಗವನ್ನು ಗಮನಿಸಿದ ತರಬೇತಿ ಅಕಾಡೆಮಿಯ ನಿರ್ದೇಶಕರು ಪೂಜಾಳ ಶಿಕ್ಷಣ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಿದ್ದಾರೆ. ಹೀಗಾಗಿ ಒಂದು ಮ್ಯಾರಥಾನ್ ಗೆಲುವು ಕೇವಲ ₹3 ಸಾವಿರದ ಬಹುಮಾನಕ್ಕೆ ಸೀಮಿತವಾಗದೆ, ಕುಟುಂಬದ ಭವಿಷ್ಯಕ್ಕೆ ಹೊಸ ಆಶಾಕಿರಣವನ್ನೇ ಮೂಡಿಸಿದೆ.

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಹಿರಿಯ ಕ್ರಿಕೆಟ್ ಪಟು ಎನ್ಆರ್‌ಎಚ್ ರಮೇಶ್ ನಿಧನ

Published

on

ಸುದ್ದಿದಿನ,ದಾವಣಗೆರೆ: ನಗರದ ಎನ್ಆರ್‌ಎಚ್‌ ಸೈಕಲ್ ಮಾರ್ಟ್ ಮಾಲೀಕ, ದಾವಣಗೆರೆ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್‌ನ ನಾಯಕನಾಗಿದ್ದ ಎನ್.ಆರ್‌.ಎಚ್‌.ರಮೇಶ ಇಲ್ಲಿನ ಕೆಟಿಜೆ ನಗರದ 15ನೇ ಕ್ರಾಸ್‌, 2ನೇ ಮೇನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಸಂಜನೆ ನಿಧನರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಓರ್ವ ಸಹೋದರ, ಮೂವರು ಸಹೋದರಿಯರು ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ. ದಾವಣಗೆರೆ ಗಾಂಧಿ ನಗರ ಸಮೀಪದ ವೀರಶೈವ ರುದ್ರಭೂಮಿಯಲ್ಲಿ ಮೇ.7ರಂದು ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

90ರ ದಶಕದಲ್ಲಿ ದಾವಣಗೆರೆ ಸೇರಿದಂತೆ ನೆರೆ ಹೊರೆಯ ಜಿಲ್ಲೆಗಳಲ್ಲಿ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯ, ಪಂದ್ಯಾವಳಿಗಳಲ್ಲಿ ಭರ್ಜರಿ ಸಿಕ್ಸರ್ ಭಾರಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಆಟಗಾರನಾಗಿ ರಮೇಶ ಸಾಧನೆ ಮಾಡಿದ್ದರು. ಎನ್ಆರ್‌ಎಚ್‌ ರಮೇಶ ನಿಧನಕ್ಕೆ ಎಫ್‌ಸಿಸಿ ತಂಡದ ಹಿರಿಯ ಆಟಗಾರರು, ದಾವಣಗೆರೆ ಕ್ರಿಕೆಟ್ ಕ್ಲಬ್‌ ಸೇರಿದಂತೆ ವಿವಿಧ ಕ್ರಿಕೆಟ್ ಕ್ಲಬ್‌ಗಳ ಹಿರಿಯ ಆಟಗಾರರು ತೀವ್ರ ಸಂತಾಪ ಸೂಚಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending