Connect with us

ಭಾವ ಭೈರಾಗಿ

ಕವಿತೆ | ಅವಳು ಮಸಣ ಕಾಯುವ ಪಾರ್ವತಿ..!

Published

on

  • ಪದ್ಮಶ್ರೀ ಗೋವಿಂದರಾಜು,ಭದ್ರಾವತಿ

ಹುಂ!!
ಅವಳ ಪರಶಿವನು ಅದೇ ಮಸಣದಲಿ ಐಕ್ಯವಾಗಿಹನು
ಅದಕೇ ಅವಳು ಹಲವು ನಿರ್ಜೀವ ಅನಾಥ ದೇಹಗಳ
ಹಗಲು ರಾತ್ರಿಯೇನ್ನದೆ ಕಾಯುವಳು
ಅನಾಥವಾದ ದೇಹಕೆ ಅವಳಿಂದಲೇ ಮೋಕ್ಷ
ಅವಳೇ ವಂಶವಿಲ್ಲದ ದೇಹಕೆ ವಾರಸುದಾರಳು!!

ಚಿತೆಯ ಅಗ್ನಿ ಸ್ಪರ್ಶ ಮಾಡಿ ತಿರುಗಿ
ನೋಡದೆ ಹೋದ ನೆಂಟರು,
ಉಳಿಸಿ ಹೋದ ಬೆಂಕಿಯ
ಅರದಂತೆ ಉರಿಸುವಳು ಅವಳು.

ಮಕ್ಕಳು ಮರಿಯ ಸಂಸಾರವೇ
ಇಲ್ಲದ ಅವಳಿಗೆ ಆಗಾಗ ಬರುವ
ದೇಹಗಳ ಜೊತೆ ಬಂದ ಜನರು

ನಡೆದಾಡುವ ಶವಗಳಂತೆ ಕಾಣುವರು
ಕಾರಣ
ಮಸಣವೊಂದೇ ಕೊನೆಯ ಮನೆ
ಆಕೆ ಅರಿತಿದ್ದಾಳೆ
ಅದಕೇ
ಆಕೆ ಮಸಣ ಕಾಯುವ ಪಾರ್ವತಿ!!

(ಸುಮಾರು ವರ್ಷಗಳಿಂದ ಶಿವಮೊಗ್ಗ ಸ್ಮಶಾನ ಕಾಯುವುದು ಒಬ್ಬ ಹೆಣ್ಣು.
ಆಕೆಯ ಛಲದ ಬದುಕಿಗೆ ಒಂದು ಪ್ರಣಾಮ )

ಸುದ್ದಿದಿನ.ಕಾಂ | ವಾಟ್ಸಾಪ್ | 9980346243

ಅಂಕಣ

ಅನ್ನಕ್ಕೆ ಯಾವ ಧರ್ಮ..? ಮತ್ತು ಇತರೆ ಕವಿತೆಗಳು

Published

on

~ವಿಜಯ್ ನವಿಲೇಹಾಳು

ನನ್ನ ಮನವ, ಹಸಿದ ತೋಳಗಳಂತೆ ಕಿತ್ತು ತಿಂದು ಅದೆಷ್ಟೋ ದಿನಗಳಿಂದ ಎದೆನಡುಗಿಸುತ್ತ ರಣಕೇಕೆ ಹಾಕುತ್ತಿರುವ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ

ಮಾರಮ್ಮನ ಜಾತ್ರೆಯ ಪ್ರಸಾದ,
ಮೊಹರಮ್ ನ ಚೋಂಗಿ ಕೂಡಿ ಉಂಡು
ಅಡುಗೆ ರುಚಿಯೂ; ಮಾಯಾ ದೀವಿಗೆಯನು
ತಿಕ್ಕಿದಾಗ ಬರುವ ಜೀನಿಯಂತೆ ಅದ್ಭುತ ವಾಗಿತ್ತು

ಪಂಕ್ತಿಯಲ್ಲಿ ಹಿಂದುವೋ, ಮುಸಲ್ಮಾನನೋ, ಕ್ರಿಶ್ಚಿಯನ್ನನೋ, ಯಾರಾದರೇನು? ಅನ್ನಕ್ಕೆ ಯಾವ ಧರ್ಮ ?

ಈಗ ಅಲ್ಲೆಲ್ಲೊ ಯಾರೋ ಕೆಲವರು ಜಾತಿ ಧರ್ಮದ ವಿಷವನು ಹನಿ ಹನಿ ಉಣಬಡಿಸಿ ಊರಿಗೂರಿಗೆ ದ್ವೇಷದ ನಶೆಯೇರಿಸಿದ್ದಾರೆ

ಈಗೀಗ ಅವರ ಹಸಿವು ನೀಗುತ್ತಿರುವುದು ಕ್ರೌರ್ಯದ ಕತ್ತಿಯಿಂದ ಜಿನಿಗುತ್ತಿರುವ ರಕ್ತದಿಂದ

ನಾನೆಂದು ಕವಿತೆ ಬರೆದವನಲ್ಲ ಎದೆಯೊಳಗಿನ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ.

ಇತರೆ ಕವಿತೆಗಳು

೧..
ಅವಳ ಮಾತುಗಳು ಅಲ್ಪ ಪ್ರಾಣಗಳಂತೆ
ಕಿವಿಗಳಿಗೆ ನಾಟುತ್ತವೆ
ಅವಳ ಮೌನ ಮಹಾ ಪ್ರಾಣಗಳಂತೆ
ಸೀದ ಹೃದಯಕ್ಕೆ ಅಪ್ಪಳಿಸುತ್ತವೆ
ಅವಳ ಮಾತು ಮತ್ತು ಮೌನದ ಕೊನೆಯಲಿ
ನಾನು ಅನುನಾಸಿಕದಂತೆ.
೨..
ಮಡಿವಂತಿಕೆಯೇ ಶ್ರೇಷ್ಟ ಮೈಲಿಗೆಯು ಅನಿಷ್ಟ ಅಂದುಕೊಂಡಿದ್ದರೆ ಊರಾಚೆಗಿನ ಕಲ್ಲು ಬಂಡೆ ವಿಗ್ರಹವಾಗುತ್ತಿರಲಿಲ್ಲ.
೩..
ಅವಳು ಅಣು ಅಣುವಾಗಿ ಹೃದಯದ
ಆಳವನು ಸೇರಿಕೊಂಡು ಬೇರು ಬಿಟ್ಟಳು
ಅವಳ ಒಲವಿನ ಆಕ್ರಮಣಕೆ
ನಾ ಮರುಮಾತುಗಳಾಡದೆ ಹೆಪ್ಪುಗಟ್ಟಿದೆ. (ಕವಿ:ವಿಜಯ್ ನವಿಲೇಹಾಳು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಹನಿಗವಿತೆಗಳು | ಬೆಳಕಿನ ಬೆನ್ನ ಹಿಂದೆ

Published

on

  • ಅನಿತ ಮಂಜುನಾಥ

ಪ್ರೀತಿ,
ಅಜ್ಞಾತ ಅನೂಹ್ಯ.
ಭಾವಯಾನದ
ಬಾನ ಕೆಳಗೆ.

…….

ಸುರಿಯುವ ಮಳೆಯಲ್ಲಿ
ಕೊಡೆ ಮರೆತೆ,
ಆಗ ನೀ ನೆನಪಾದೆ.

…….

ನನ್ನ
ವಿರಹಗಳಿಗೆ,
ಕಾವ್ಯವೇ ಮದ್ದು ನನಗೆ,
ಮನದೊಳಗೊಂದು
ಸುಖ ಸದ್ದು !

…….

ಮಾತು ವಚನಗಳು,
ಮನ ಕಲಹಗಳಾಗದಿರಲಿ,
ಆಗಲಿ ಬಾಳಿನ ಆಶಾಕಿರಣ.

(ಅನಿತ ಮಂಜುನಾಥ ಅವರ ‘ ಬೆಳಕಿನ ಬೆನ್ನ ಹಿಂದೆ – ಹನಿಗವಿತೆಗಳ ಕವನ ಸಂಕಲನದಿಂದ ಈ ಮೇಲಿನ ಹನಿಗಳನ್ನು ಆಯ್ದುಕೊಳ್ಳಲಾಗಿದೆ‌.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ಯಾವ ಕಾಲದ ಶಾಸ್ತ್ರವೇನು ಹೇಳಿದರೇನು..?

Published

on

  • ಕುವೆಂಪು

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ?
ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !

ನೀರಡಿಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನಗೊರೆಯಬೇಕೇನು ?
ನೊಂದವರ ಕಂಬನಿಯನೊರಸಿ ಸಂತೈಸುವೊಡೆ
ಶಾಸ್ತ್ರ ಪ್ರಮಾಣವದಕಿರಲೆ ಬೇಕೇನು ?

ಪಂಚಮರ ಶಿಶುವೊಂದು ಕೆರೆಯಲ್ಲಿ ಮುಳುಗುತಿರೆ
ದಡದಲ್ಲಿ ಮಿಯುತ್ತ ನಿಂತಿರುವ ನಾನು
ಮುಟ್ಟಿದರೆ ಬ್ರಹ್ಮತ್ವ ಕೆಟ್ಟುಹೋಗುವುದೆಂದು
ಸುಮ್ಮನಿದ್ದರೆ ಶಾಸ್ತ್ರಸಮ್ಮತವದೇನು?

ಅಂತು ಮನು ತಾನು ಹೆಲಿರಲಾರನಯ್ಯಯ್ಯೊ!
ಹೇಳಿದ್ದರವನನೂ ಶಾಸ್ತ್ರದೊಳೆ ಸುತ್ತಿ,
ಸ್ವರ್ಗ ಹೋಗಲಿ, ಮತ್ತೆ ನರಕ ಬಂದರು ಬರಲಿ,
ಎದೆಯ ಧೈರ್ಯವ ಮಾಡಿ ಬಿಸುಡಾಚೆಗೆತ್ತಿ!

ಸ್ವರ್ಗ ಹೋಗುವುದಿಲ್ಲ, ನರಕ ಬರುವುದು ಇಲ್ಲ;
ಸ್ವರ್ಗ ನರಕಗಳೇನು ಶಾಸ್ತ್ರಸ್ಥವಲ್ಲ .
ಎದೆಯ ದನಿ ಧರ್ಮನಿಧಿ ! ಕರ್ತವ್ಯವದುವೆ ವಿಧಿ !
ನಂಬದನು; ಅದನುಳಿದು ಋಷಿಯು ಬೇರಿಲ್ಲ!

ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ,
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ;
ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ,
ನಮ್ಮ ಹೃದಯವೆ ನಮೆಗೆ ಶ್ರೀಧರ್ಮಸೂತ್ರ !(ರಾಷ್ಟ್ರಕವಿ ಕುವೆಂಪು ಅವರ ‘ಕೋಗಿಲೆ ಮತ್ತು ಸೋವಿಯಟ್ ರಷ್ಯ’ ಕವನಸಂಕಲನದಿಂದ )

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending