Connect with us

ದಿನದ ಸುದ್ದಿ

ದಾವಣಗೆರೆ | ಜಿಲ್ಲಾ ಉಸ್ತುವಾರಿ ಸಚಿವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ : ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಜಾರಿಗೆ ಸಚಿವರ ಸೂಚನೆ

Published

on

ಸುದ್ದಿದಿನ,ದಾವಣಗೆರೆ : ಸರ್ಕಾರ ಹೊರಡಿಸಿರುವ ಕೋವಿಡ್ ನಿಯಂತ್ರಣದ ಹೊಸ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಜೊತೆಗೆ ಕೋವಿಡ್ ಔಷಧಿಗಳು, ಆಕ್ಸಿಜನ್ ಮತ್ತು ಲಸಿಕೆ ಸಮರ್ಪಕ ನಿರ್ವಹಣೆಯೊಂದಿಗೆ ರೈತರು, ಕೈಗಾರಿಕೆಗಳು ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕೆಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಗಳೊಂದಿಗೆ ಸಭೆ ನಡೆಸಿ, ಕೋವಿಡ್ ನಿಯಂತ್ರಣದ ಹೊಸ ಮಾರ್ಗಸೂಚಿಗಳು ಮತ್ತು ದಾವಣಗೆರೆ ನಗರ ಹಾಗೂ ತಾಲ್ಲೂಕುಗಳಲ್ಲಿನ ಕೋವಿಡ್ ಹಿನ್ನೆಲೆಯ ವಾಸ್ತವಿಕ ಸ್ಥಿತಿಗತಿಗಳ ಬಗ್ಗೆ ಸವಿವರವಾಗಿ ಡಿಸಿ, ಎಸ್‍ಪಿ, ಡಿಹೆಚ್‍ಓ, ತಾಲ್ಲೂಕುಗಳ ತಹಶೀಲ್ದಾರರು ಮತ್ತು ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್ ಲಸಿಕೆ, ರೆಮಿಡಿಸಿವರ್ ಸೇರಿದಂತೆ ಇತರೆ ಔಷಧಿಗಳು ಮತ್ತು ಆಕ್ಸಿಜನ್, ಬೆಡ್ ಇನ್ನಾವುದೇ ರೀತಿಯ ಕೊರತೆಗಳು ಕಂಡುಬಂದಲ್ಲಿ ತಕ್ಷಣ ನನ್ನ ಗಮನಕ್ಕೆ ತರಬೇಕು. ತಾವು ಮುಖ್ಯಮಂತ್ರಿಗಳು, ಆರೋಗ್ಯ ಮಂತ್ರಿಯವರೊಂದಿಗೆ ಪ್ರತಿ ದಿನದ ವರದಿ ನೀಡುತ್ತಿದ್ದು, ಈ ಬಗ್ಗೆಯೂ ಸಮಾಲೋಚಿಸಿ ಶೀಘ್ರದಲ್ಲೇ ಸಮರ್ಪಕ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ | ದಾವಣಗೆರೆ | ಶವ ಸಾಗಿಸಲು ಉಚಿತ ವಾಹನಗಳ ವ್ಯವಸ್ಥೆ ; ಬೆಡ್ ಮತ್ತು ಆಕ್ಸಿಜನ್ ವಿವರ : ಜಿಲ್ಲಾಧಿಕಾರಿ

ಜಿಲ್ಲೆಯ ಹೊರಭಾಗದಿಂದ ಬಂದವರಿಗೆ ಕೋವಿಡ್ ಲಕ್ಷಣವಿದ್ದಲ್ಲಿ ತಕ್ಷಣ ಪರೀಕ್ಷೆ ಮಾಡಿ ಫಲಿತಾಂಶ ಬರುವವರೆಗೆ ಅವರನ್ನು ಹೋಂ ಕ್ವಾರಂಟೈನ್‍ನಲ್ಲಿ ಇರುವಂತೆ ನೋಡಿಕೊಳ್ಳಬೇಕಿರುವುದು ಆರೋಗ್ಯ ಇಲಾಖೆ ಜವಾಬ್ದಾರಿಯಾಗಿದೆ. ಹೊಸ ಮಾರ್ಗಸೂಚಿಗಳ ಜಾರಿಗೆ ಪೊಲೀಸ್ ಇಲಾಖೆಗೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ ಗೃಹರಕ್ಷಕದಳ ಸಿಬ್ಬಂದಿಗಳ ಸೇವೆಯನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದ್ದು ಎಸ್‍ಪಿ ಯವರು ಇವರನ್ನು ಬಳಸಿಕೊಂಡು ಕಠಿಣ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಂಬುಲೆನ್ಸ್ ಇರುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರತಿಕ್ರಿಯಿಸಿ ಕೋವಿಡ್ ರೋಗಿಗಳಿಗೆ ರೆಮಿಡಿಸಿವರ್ ಒಂದೇ ಪರಿಣಾಮಕಾರಿ ಚಿಕಿತ್ಸೆ ಅಲ್ಲ. ಇತರೇ ಲಸಿಕೆಗಳು ಮತ್ತು ಆಂಟಿಬಯಾಟಿಕ್‍ಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಇಂಡೆಂಟ್ ಹಾಕಲಾಗಿದೆ. ಆ ಔಷಧಿಗಳನ್ನು ಜಿಲ್ಲಾಸ್ಪತ್ರೆಗೆ ಶೀಘ್ರವಾಗಿ ಸರಬರಾಜು ಮಾಡಲು ಕ್ರಮ ವಹಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.

ಹಾಗೂ ಜಿಲ್ಲೆಯಲ್ಲಿ ಜನರು ಸ್ವಯಂಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಪಡೆಯಲು ಬರುತ್ತಿದ್ದು, ಪ್ರಸ್ತುತ ದಿನಕ್ಕೆ 13 ಸಾವಿರ ಜನರಿಗೆ ನೀಡುವ ಗುರಿ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ 20 ಸಾವಿರದವರೆಗೆ ಲಸಿಕೆ ನೀಡಲು ಅಗತ್ಯವಾದ ಲಸಿಕೆಗಳ ಸರಬರಾಜು ಮಾಡಬೇಕೆಂದು ಸಚಿವರಲ್ಲಿ ಕೋರಿದರು.

ಡಿಹೆಚ್‍ಓ ಡಾ.ನಾಗರಾಜ ಮಾತನಾಡಿ, 45 ವರ್ಷ ಮೇಲ್ಪಟ್ಟವರಿಗೆ ಇಲ್ಲಿಯವರೆಗೆ 1,55,204 ಜನರಿಗೆ ಲಸಿಕೆ ನೀಡಲಾಗಿದೆ. 1,86,667 ಆರೋಗ್ಯ ಮತ್ತು ಫ್ರಂಟ್‍ಲೈನ್ ಉದ್ಯೋಗಿಗಳಿಗೆ ಲಸಿಕೆ ನೀಡಲಾಗಿದೆ. ಇಂದಿಗೆ ಸಾಕಾಗುವಷ್ಟು ರೆಮಿಡಿಸಿವರ್ ಲಸಿಕೆ ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿದ್ದು, ಇಂದು ಎರಡು ಕಂಪೆನಿಗಳಿಂದ ರೆಮಿಡಿಸಿವರ್ ಲಸಿಕೆ ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆಯಾಗಲಿದೆ ಎಂದರು.

ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಜಯಪ್ರಕಾಶ್ ಮಾತನಾಡಿ, ಸಿ.ಜಿ ಆಸ್ಪತ್ರೆಯಲ್ಲಿ ಒಟ್ಟು 930 ಬೆಡ್ ಸಾಮಥ್ರ್ಯ ಇದ್ದು, ಇದರಲ್ಲಿ 300 ಬೆಡ್‍ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿರಿಸಿದ್ದು, ಈ ಪೈಕಿ 30 ಆಕ್ಸಿಜನ್ ಬೆಡ್‍ಗಳಿವೆ. ಪ್ರಸ್ತುತ ಆಕ್ಸಿಜನ್‍ಗೆ ಕೊರತೆ ಇಲ್ಲ. 270 ಆಕ್ಸಿಜನ್ ಸಿಲಿಂಡರ್‍ಗಳು ಮತ್ತು 80 ವಯಲ್ ರೆಮಿಡಿಸಿವರ್ ಲಭ್ಯತೆ ಇದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರ ಹನುಮಂತರಾಯ ಮಾತನಾಡಿ, ಜಿಲ್ಲೆಯಲ್ಲಿ ಕೊವಿಡ್ ಹೊಸ ಮಾರ್ಗಸೂಚಿಗಳನ್ನು ಪಾಲಿಸಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಕಳೆದ ಒಂದು ವಾರದಲ್ಲಿ 2335 ಮಾಸ್ಕ್ ಪ್ರಕರಣ. ಲಾಕ್‍ಡೌನ್ ಉಲ್ಲಂಘನೆಯ 15 ಪ್ರಕರಣವನ್ನು ಎಪಿಡೆಮಿಕ್ ಕಾಯ್ದೆ ಅಡಿ ದಾಖಲಿಸಲಾಗಿದೆ. ಇದರಲ್ಲಿ ರೆಮಿಡಿಸಿವರ್ ಲಸಿಕೆ ಅಕ್ರಮ ಸಂಗ್ರಹ ಮತ್ತು ಮಾರಾಟದ ಕುರಿತು 02 ಪ್ರಕರಣ ದಾಖಲಾಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಚಿವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗದಂತೆ ಸ್ಥಳೀಯವಾಗಿ ಕ್ರಮ ಜರುಗಿಸಬೇಕು. ಅವಶ್ಯಕತೆ ಇರುವವರಿಗೆ ಗ್ರೀನ್ ಕಾರ್ಡ್ ನೀಡಬೇಕು. ತಾಲ್ಲೂಕುಗಳಲ್ಲಿ ನೋಡಲ್ ಅಧಿಕಾರಿಗಳಾಗಿರುವ ತಹಶೀಲ್ದಾರರು ತಾಲ್ಲೂಕಿನಾದ್ಯಂತ ಸಂಚರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.

ಹಾಗೂ ಜಿಲ್ಲೆಯ ಪ್ರವೇಶ ಮತ್ತು ಟೋಲ್, ಹೊರಹೋಗುವ ದಾರಿಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸುವಂತೆ ಹಿಂದಿನ ಸಭೆಯಲ್ಲಿ ತಿಳಿಸಿದ್ದು ಈ ಬಗ್ಗೆ ಕೇಳಿದಾಗ ಎಸ್‍ಪಿ ಯವರು, ಹೆಬ್ಬಾಳ ಟೋಲ್ ಮತ್ತು ದಾವಣಗೆರೆ ಪ್ರವೇಶ, ನ್ಯಾಮತಿ ಹೊನ್ನಾಳಿಯಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಿ ಕ್ರಮ ವಹಿಸಲಾಗುತ್ತಿದೆ ಎಂದರು.

ದಾವಣಗೆರೆ, ಹೊನ್ನಾಳಿ, ಚನ್ನಗಿರಿ, ಹರಿಹರ, ಜಗಳೂರು ತಾಲ್ಲೂಕುಗಳ ತಹಶೀಲ್ದಾರರೊಂದಿಗೆ ಸಚಿವರು ಮಾತನಾಡಿ ತಾಲ್ಲೂಕುಗಳಲ್ಲಿ ಕೋವಿಡ್ ವಸ್ತುಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡು ತಾಲ್ಲೂಕುಗಳಲ್ಲಿ ರೈತರ ಚಟುವಟಿಕೆ ಮತ್ತು ಹರಿಹರದಂತಹ ತಾಲ್ಲೂಕಿನಲ್ಲಿ ಕೈಗಾರಿಕೆ ಚಟುವಟಿಕೆ ಇತರೆ ಕಟ್ಟಡ ಕಾಮಗಾರಿಗಳಿಗೆ ತೊಂದರೆ ಆಗದಂತೆ ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು.

ಜೊತೆಗೆ ತಾಲ್ಲೂಕು ಟಾಸ್ಕ್‍ಫೋರ್ಸ್, ಗ್ರಾ.ಪಂ ಹಾಗೂ ಬೂತ್ ಮಟ್ಟದಲ್ಲಿ ಟಾಸ್ಕ್‍ಫೋರ್ಸ್ ಸಮಿತಿಗಳು ಸಕ್ರಿಯವಾಗಿ ಕೋವಿಡ್ ನಿರ್ವಹಣೆಯಲ್ಲಿ ಪಾಲ್ಗೊಳ್ಳಬೇಕು. ಹಾಗೂ ಪಿಡಿಓ, ಆಶಾ, ಅಂಗನವಾಡಿ ಸೇರಿದಂತೆ ಹಿಂದೆ ಸಕ್ರಿಯವಾಗಿದ್ದ ಎಲ್ಲ ಸಿಬ್ಬಂದಿಗಳನ್ನೊಳಗೊಂಡು ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದರು.

ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ನಗರವನ್ನು ಮೂರು ವಲಯಗಳನ್ನಾಗಿ ವಿಂಗಡಿಸಿ ಮೂರು ತಂಡಗಳನ್ನು ರಚಿಸಿ ಕೋವಿಡ್ ನಿಯಮ ಉಲ್ಲಂಘನೆ ಬಗ್ಗೆ ಕ್ರಮ ವಹಿಸಲಾಗುತ್ತಿದೆ. 45 ವಾರ್ಡುಗಳಲ್ಲಿ ತಳ್ಳುಗಾಡಿಗಳ ಮೂಲಕ ತರಕಾರಿ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದುವರೆಗೆ ನಿಯಮ ಉಲ್ಲಂಘಿಸಿದ ಬಟ್ಟೆ ಸೇರಿದಂತೆ ಇತರೆ ಅಂಗಡಿಗಳಿಗೆ ರೂ.1,84,800 ದಂಡ ವಿಧಿಸಲಾಗಿದ್ದು, ಮಾಸ್ಕ್ ಧರಿಸದೇ ಇರುವವರಿಂದ ರೂ.67,350 ದಂಡ ಸಂಗ್ರಹಿಸಲಾಗಿದೆ ಎಂದರು.

ಸಚಿವರು ಮಾತನಾಡಿ, ಇದೊಂದು ಸಂದಿಗ್ಧ ಪರಿಸ್ಥಿತಿಯಾಗಿದ್ದು, ಅಧಿಕಾರಿಗಳು ಯಾವುದೇ ಮುಲಾಜಿಗೆ ಗುರಿಯಾಗದೇ ಎಚ್ಚರಿಕೆಯಿಂದ ಕೋವಿಡ್ ನಿರ್ವಹಣೆ ಕೆಲಸ ಮಾಡಬೇಕು. ಹಾಗೂ ರೋಗಿಗಳು, ಮತ್ತಾರಿಂದಲೂ ದೂರುಗಳು ಬಾರದಂತೆ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿಕೊಂಡು ಹೋಗಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಎಸ್‍ಎಲ್‍ಓಗಳಾದ ರೇಷ್ಮಾ ಹಾನಗಲ್, ಸರೋಜ, ತಹಶೀಲ್ದಾರ್ ಗಿರೀಶ್, ಆರ್‍ಸಿಹೆಚ್‍ಓ ಡಾ.ಮೀನಾಕ್ಷಿ, ಡಾ. ನಟರಾಜ್, ಡಾ.ಗಂಗಾಧರ್, ಡಾ.ರೇಣುಕಾರಾಧ್ಯ, ಡಾ.ಯತೀಶ್, ಟಿಹೆಚ್‍ಓ ಡಾ.ವೆಂಕಟೇಶ್, ಇತರೆ ಅಧಿಕಾರಿಗಳು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದಲ್ಲಿ ನಿಷೇಧ ; ತೆರವುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಪತ್ರ

Published

on

ಸುದ್ದಿದಿನಡೆಸ್ಕ್:ಕರ್ನಾಟಕದ ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಧಿಕಾರಿ ವಿಧಿಸಿರುವ ನಿಷೇಧ ಆದೇಶ ರದ್ದು ತೆರವುಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.

ಇದು ಮುಂದಿನ ದಿನಗಳಲ್ಲಿ ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತಾರಾಜ್ಯ ಸಾಗಾಣೆಗೆ ಅಡ್ಡಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿರ್ಬಂಧವು ಸಾವಿರಾರು ರೈತರ ಜೀವನ ಉಪಾಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ

Published

on

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಸುದ್ದಿದಿನಡೆಸ್ಕ್:ರಾಜ್ಯ ಸರ್ಕಾರ ಇಂದು ಕೆಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ಬೆಂಗಳೂರು ಮೆಟ್ರೋ ಪಾಲಿಟನ್ ಟಾಸ್ಕ್‌ಪೋರ್ಸ್ ಎಡಿಜಿಪಿ ಯಾಗಿ ವರ್ಗಾವಣೆ ಮಾಡಿದೆ.

ಕೆಎಸ್‌ಆರ್‌ಟಿಸಿ ಮಹಾನಿರ್ದೆಶಕರನ್ನಾಗಿ ಅಕ್ರಂ ಪಾಶಾ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ

Published

on

ಸುದ್ದಿದಿನಡೆಸ್ಕ್:ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಮಧ್ಯಸ್ಥಿಕೆ ವಹಿಸುವಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸಂತ್ರಸ್ಥರು ಮತ್ತು ಅವರ ಕುಟುಂಬಗಳಿಗೆ ಪಾರದರ್ಶಕತೆ ನ್ಯಾಯ ದೊರಕುವಂತಾಗಲು ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಸಂತ್ರಸ್ಥರಿಗೆ ನ್ಯಾಯ ಒದಗಿಸುವುದು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಸಮಸ್ಯೆಗೆ ಒಳಗಾದ ಮಕ್ಕಳ ವಿವರವನ್ನು ಕೋರಿ ಸಿಐಡಿಗೆ ಮಕ್ಕಳ ಹಕ್ಕು ಆಯೋಗ ನೋಟಿಸ್ ಜಾರಿ ಮಾಡಿದೆ.

ಸಾರ್ವಜನಿಕ ದೂರು ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಆಯೋಗ ಈ ಬಗ್ಗೆ ಹೆಚ್ಚಿನ ನಿಖರ ಮಾಹಿತಿ ನೀಡುವಂತೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending