ರಾಜಕೀಯ
ಯುದ್ಧೋನ್ಮಾದ ಹೆಮ್ಮೆಯ ಅಮಲಿನ ವಿಲಕ್ಷಣ ಅಲೆ

ಸುದ್ದಿದಿನ ವಿಶೇಷ : ಇಬ್ಬರ ನಡುವೆ ಜಗಳವಾಗುತ್ತದೆ. ಕೈ ಕೈ ಮಿಲಾಯಿಸಿ ಒಬ್ಬರನ್ನೊಬ್ಬರು ಹೊಡೆದುಕೊಂಡು ರಕ್ತಸಿಕ್ತಗೊಂಡು ಘಾಸಿಗೊಳ್ಳುವ ಸಂದರ್ಭವದು.
ದೈಹಿಕ ಶಕ್ತಿಯ ಬಲದಲ್ಲಿ ಒಬ್ಬರು ಮತ್ತೊಬ್ಬರನ್ನು ಮಣಿಸಿಬಿಡುತ್ತಾರೆ. ಗೆದ್ದು ಬೀಗುತ್ತಾರೆ. ಆ ಗೆಲುವು ಗೆದ್ದವನೊಳಗೆ ಅಹಂಕಾರವನ್ನು ಶಾಶ್ವತವಾಗಿ ಬೇರೂರಿಸಿಬಿಡುತ್ತದೆ. ಅದರ ಜೊತೆಗೆ ಪ್ರತಿಯೊಂದು ಸಲವೂ ಆ ಗೆಲುವನ್ನು ನೆನಪಿಸುವಂಥ ರೀತಿಯ ನಡವಳಿಕೆಗಳೊಂದಿಗೆ ಉಳಿದವರೊಳಗೆ ಭಯಭೀತಿ ಉಂಟುಮಾಡುತ್ತಲೇ ತನ್ನ ಪ್ರಾಬಲ್ಯದ ಪ್ರದರ್ಶನದೊಂದಿಗೆ ವಿಜೃಂಭಿಸುತ್ತಾನೆ. ಅಂಥ ಕ್ಷಣಗಳನ್ನೇ ಸಂಭ್ರಮಿಸುತ್ತಾ ದೈಹಿಕವಾಗಿ ಪ್ರಬಲವಾಗಿರುವುದೇ ಎಲ್ಲರನ್ನು ಹದ್ದುಬಸ್ತಿನಲ್ಲಿಡುವ ಬಹುಮುಖ್ಯ ತಂತ್ರ ಎಂಬುದನ್ನು ಸಾರುತ್ತಲೇ ಇರುತ್ತಾನೆ. ತನ್ನನ್ನು ತೊಡವಿಕೊಂಡರೆ ಪರಿಣಾಮ ನೆಟ್ಟಗಿರದು ಎಂಬ ಭಯಾನಕ ಸಂದೇಶ ರವಾನಿಸುತ್ತಾನೆ.
ಅವನ ಬೆಂಬಲಿಗರ ಭಾವುಕ ಅಜ್ಞಾನವು ಅವರಲ್ಲಿ ಒಂದು ಬಗೆಯ ಹುಸಿ ಹೆಮ್ಮೆಯನ್ನು ಮೂಡಿಸಿಬಿಡುತ್ತದೆ. ಅದರ ಕತ್ತಲ ಬಂಧದೊಳಗೆ ಬೆಂಬಲಿಗ ಅಭಿಮಾನಿಗಳ ವಿವೇಕ ಉಸಿರುಗಟ್ಟುತ್ತಿರುತ್ತದೆ. ಅಂಥವರ ಸಂಖ್ಯೆಯೇ ಹೆಚ್ಚಾಗುತ್ತಾ ಒಂದು ಬಗೆಯ ಸ್ಥಗಿತತೆಯ ವಾತಾವರಣ ನೆಲೆಸಿಬಿಡುತ್ತದೆ.
ನಕಾರಾತ್ಮಕತೆಗೆ ಸಾಕ್ಷ್ಯ ಒದಗಿಸುವ ಯುದ್ಧ
ಕಾರ್ಗಿಲ್ ವಿಜಯೋತ್ಸವವು ದೇಶದಾದ್ಯಂತ ಇಂಥದ್ದೊಂದು ನಕಾರಾತ್ಮಕತೆಗೆ ಸಾಕ್ಷ್ಯ ಒದಗಿಸುತ್ತಿದೆ. ಯುದ್ಧ ಗೆದ್ದ ಸಂಭ್ರಮದಲ್ಲಿ ದೇಶದ ಕುರಿತಾದ ಹೆಮ್ಮೆ ಅಪವ್ಯಾಖ್ಯಾನಕ್ಕೀಡಾಗುತ್ತಿದೆ. ನಿಜದ ಹೆಮ್ಮೆಯ ಬದಲು ವಿಲಕ್ಷಣ ಅಭಿಮಾನದ ವಿಕೃತಿ ವ್ಯಾಪಕವಾಗುತ್ತಲೇ ಇದೆ.
ಒಂದು ದೇಶ ಮತ್ತೊಂದು ದೇಶದ ವಿರುದ್ಧ ಜಯ ಸಾಧಿಸಿದ ಘಳಿಗೆಯನ್ನು ನೆನಪಿಸಿಕೊಂಡು ಜಗತ್ತಿಗೆ ನಮ್ಮ ಶಕ್ತಿಯನ್ನು ತೋರ್ಪಡಿಸುವ ವಿಜಯೋತ್ಸವವು ಪ್ರಜೆಗಳ ಪ್ರಜ್ಞೆಯನ್ನು ಶತಮಾನಗಳಷ್ಟು ಹಿಂದಕ್ಕೆ ತಳ್ಳುವ ಹುನ್ನಾರದ ಭಾಗವಾಗಿಯೇ ಕಾಣಿಸುತ್ತಿದೆ. ನಮ್ಮವರೇ ಆಗಿದ್ದವರು ಹಿಂದೊಮ್ಮೆ ವಿಭಜನೆಯ ಸಾಂದರ್ಭಿಕ ಅನಿವಾರ್ಯತೆಯಲ್ಲಿ ಅಧಾರ್ಮಿಕ ತಿಳಿಗೇಡಿತನದ ಪರಮಾವಧಿಯ ಅತಿರೇಕದ ಕಾರಣಕ್ಕಾಗಿ ಬೇರೊಂದು ದೇಶದವರಾದರು. ನಂತರ ಒಬ್ಬರಿಗೊಬ್ಬರು ಜಗಳವಾಡಿಕೊಳ್ಳುವ ಧಾವಂತ ಒಬ್ಬರನ್ನೊಬ್ಬರು ಜಯಿಸುವ ಹಠವನ್ನು ಪ್ರತಿಷ್ಠಾಪಿಸಿಬಿಟ್ಟಿತು. ಈ ಹಠದೊಂದಿಗಿನ ದ್ವೇಷದ ಭಾವಗಳನ್ನು ರಾಜಕೀಯ ಸಂಕುಚಿತತೆ ಮತ್ತು ಅಧಿಕಾರ ದಾಹದ ಮನುಷ್ಯ ಸಹಜ ದೌರ್ಬಲ್ಯಗಳು ಮತ್ತಷ್ಟು ಪ್ರಬಲಗೊಳಿಸಿದವು.
ಅವು ಎಷ್ಟು ಪ್ರಖರವಾಗಿ ಮುಂದುವರೆದವು ಎಂದರೆ ಬಗೆಹರಿಸಿಕೊಳ್ಳಬಹುದಾಗಿದ್ದ ಭಿನ್ನಾಭಿಪ್ರಾಯಗಳನ್ನು ಕ್ರೌರ್ಯದ ಮೂಲಸರಕುಗಳನ್ನಾಗಿಸಿದವು. ಇಷ್ಟಿಷ್ಟಕ್ಕೆ ಗೆರೆಗೀಚಿ ಜಗಳಕ್ಕೆ ನಿಲ್ಲುವುದನ್ನೇ ಸ್ಥಾಯಿಯಾಗಿಸಿದವು. ಒಡೆದು ಆಳುವ ನೀತಿಯನ್ನೇ ಬಂಡವಾಳವಾಗಿಸಿಕೊಂಡವರನ್ನು ಮುಂಚೂಣಿಗೆ ತಂದುನಿಲ್ಲಿಸಿದವು. ಅವರ ಮೂಗಿನ ನೇರಕ್ಕೆ ರಾಷ್ಟ್ರವಾದವನ್ನು ಮುನ್ನೆಲೆಗೆ ತಂದವು. ಅಷ್ಟೇ ಅಲ್ಲದೇ ದೇಶವನ್ನು ಪ್ರೇಮಿಸುವ ಭ್ರಮಾತ್ಮಕ ಭಾವನೆ ಕೆರಳಿಸುವಂಥ ವಿಕೃತಿಗಳನ್ನು ಸೃಷ್ಟಿಸಿದವು. ಯುದ್ಧ, ಸಂಘರ್ಷಗಳ ಜೊತೆಗೆ ನಿಲ್ಲುವ ವಿಲಕ್ಷಣ ವಿತಂಡವಾದವನ್ನು ದಾಟಿಸಿದವು.
ಉದಾತ್ತ ಪದಗಳ ವರ್ತುಲದೊಳಗೆ ಬಂಧಿ
ದೇಶಾಭಿಮಾನವು ಅಧಿಕಾರವನ್ನು ದಕ್ಕಿಸಿಕೊಳ್ಳುವ ಹುನ್ನಾರಗಳೊಂದಿಗೆ ಗುರುತಿಸಿಕೊಂಡವರ ರಾಕ್ಷಸ ಹಸಿವನ್ನು ನೀಗಿಸುವ ಪಾತ್ರವನ್ನು ನಿಭಾಯಿಸಲಾರಂಭಿಸಿತು. ಸಾವು-ನೋವುಗಳು ತ್ಯಾಗ-ಬಲಿದಾನಗಳ ಉದಾತ್ತ ಪದಗಳ ವರ್ತುಲದೊಳಗೆ ಬಂಧಿಯಾಗಿ ತಮ್ಮ ನಿಜ ಅರ್ಥವನ್ನು ಕಳೆದುಕೊಂಡವು. ಈ ಹಂತದಲ್ಲಿಯೇ ಇತಿಹಾಸದಲ್ಲಿ ಆಗಿಹೋದ ಗಾಯಗಳನ್ನು ಜನಪ್ರಿಯ ಶೈಲಿಯಲ್ಲಿ ನೆನಪಿಸಿಕೊಂಡು ಅತ್ಯದ್ಭುತ ಎನ್ನಿಸುವ ಹಾಗೆ ಭಾಷಾಪಾಂಡಿತ್ಯ ಪ್ರದರ್ಶಿಸಿ ಇನ್ನೊಂದು ದೇಶದ ವಿರುದ್ಧ ಮಾತನಾಡುತ್ತಾ ಬೆಂಬಲ ಗಳಿಸಿಕೊಳ್ಳುವ ರಹಸ್ಯ ಕಾರ್ಯಸೂಚಿ ಪ್ರಯತ್ನಗಳು ಯಶಸ್ಸು ಕಂಡವು. ಆ ಯಶಸ್ಸೇ ಇಂದು ಹಿಂಸೆಯ ಪರವಾದ ಸೋಂಕಿನೊಂದಿಗಿನ ವರ್ತನೆಗಳನ್ನೇ ವ್ಯಾಪಕವಾಗಿಸಿಬಿಟ್ಟಿದೆ.
ಇಂಥವುಗಳನ್ನು ಪ್ರಶ್ನಿಸಿ ಚಿಗುರಿಕೊಳ್ಳಬೇಕಾಗಿದ್ದ ಪರ್ಯಾಯ ಪ್ರತಿರೋಧದ ರಾಜಕಾರಣ ಪಕ್ಷಗಳ ಸಂಕುಚಿತ ಸಾರ್ವಭೌಮತ್ವದ ಅಲೆಯ ಹೊಡೆತಕ್ಕೆ ಸಿಲುಕಿಬಿಟ್ಟಿದೆ. ಆ ಅಲೆಯು ನಟನೆಯನ್ನೇ ನಿಜವಾದ ನಾಯಕತ್ವ ಎಂದು ಬಿಂಬಿಸುತ್ತಿದೆ. ಹಿಂದಿನವರಿಗಿಂತ ಈಗಿನ ಭಾವುಕ ಕೃತಕತೆಯೇ ಯೋಗ್ಯ ಎನ್ನುವಂಥ ನಂಬಿಕೆಯನ್ನು ಬಿತ್ತುತ್ತಿದೆ. ಚಿಂತನೆಯ ಸಾರ್ವಜನಿಕ ಸಾಮಥ್ರ್ಯವನ್ನೇ ಮುಳುಗಿಸಿ ಅದರ ಜಾಗದಲ್ಲಿ ಆರಾಧನೆಯ ಮನೋಭಾವವನ್ನು ನೆಲೆಗೊಳಿಸಿಬಿಟ್ಟಿದೆ.
ಮಾತಿನ ಮೋಡಿಯೊಳಗೆ ಸಿಲುಕಿದ ಯುವಜನ
ಯಾರನ್ನು ನೆಚ್ಚಿಕೊಂಡಿದ್ದೇವೆ, ಯಾರನ್ನು ನೆಚ್ಚಿಕೊಳ್ಳಬೇಕಿತ್ತು ಎಂಬ ವಿವೇಚನೆಯನ್ನೇ ಮರೆಸಿ ಒಂದು ಬಗೆಯ ಅಸಹಾಯಕತೆಯನ್ನು ಸೃಷ್ಟಿಸಿಬಿಟ್ಟಿದೆ.
ಕಾರ್ಗಿಲ್ ಯುದ್ಧದ ವೇಳೆ ಭಾರತದ ಆಗಿನ ಪ್ರಧಾನಿ ಕಾವ್ಯಾತ್ಮಕ ಧಾಟಿಯ ಯುದ್ಧಪ್ರಚೋದಕ ಭಾವುಕ ಪರಿಭಾಷೆಯನ್ನು ನೆಚ್ಚಿಕೊಂಡಿದ್ದರು. ಈಗಿನ ಪ್ರಧಾನಿ ಭಾಷೆಗೆ ಇರುವ ಉದಾತ್ತ ದೃಷ್ಟಿಕೋನಗಳ ಬಹುಮುಖೀ ಪ್ರಭಾವೀ ಶಕ್ತಿಯನ್ನೇ ಆಧರಿಸಿಕೊಂಡ ಮಾತಿನ ಮೋಡಿಯೊಳಗೆ ಜನರನ್ನು ಸಿಲುಕಿಸುತ್ತಿದ್ದಾರೆ. ಮಾತನಾಡಲೇಬೇಕಾದ ಸಂಗತಿಗಳ ಬಗ್ಗೆ ಮೌನವಹಿಸುತ್ತಿದ್ದಾರೆ.
ಇದೇನು ಇಂದು ನಿನ್ನೆಯ ರಾಜಕೀಯ ಪ್ರವೃತ್ತಿಯಲ್ಲ. ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಈಗ ಮಾತಿನ ಆಕರ್ಷಕ ಆಯಾಮ ಪಡೆದಿದೆ ಅಷ್ಟೇ. ಅವರ ಮೌನದ ಸ್ಪೇಸ್‍ನ್ನು ಅವರನ್ನು ಆರಾಧಿಸುವ ಬೆಂಬಲಿಗ ಪಡೆಯು ಸಂಘರ್ಷವನ್ನು, ಯದ್ಧೋನ್ಮಾದದ ಗುಂಗುಗಳನ್ನು ಶಾಶ್ವತವಾಗಿ ಬೇರೂರಿಬಿಡಿಸುವ ಪ್ರಯತ್ನಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಜನರೂ ರಾಜಕೀಯ ಮನರಂಜನೆಯ ಗ್ರಾಹಕರಾಗಿ ಮೂಕಪ್ರೇಕ್ಷಕರಾಗಿದ್ದಾರೆ. ಅವರ ಅಸಹಾಯಕತೆಯು ಯುದ್ಧೋನ್ಮಾದದ ಅಮಲನ್ನು ಹೆಮ್ಮೆ ಮತ್ತು ಅಭಿಮಾನ ಎಂಬ ಪದಗಳೊಂದಿಗೆ ಜೋಡಿಸಿ ಹಿಂಸೆಯ ಪರವಾದ ಅಲೆಯನ್ನು ಸೃಷ್ಟಿಸಲಾಗುತ್ತಿದೆ. ರಂಜನೆಯ ರೂಪದ ನುಡಿಗಳು ಮತ್ತು ಮಾತನಾಡಲೇಬೇಕಾದ ಸಂದರ್ಭದಲ್ಲಿ ಮೌನಕ್ಕೆ ಶರಣುಹೋಗುವ ತಂತ್ರಗಳ ಮೂಲಕ ಹಿಂಸೆಯೇ ಎಲ್ಲದಕ್ಕೂ ಪರಿಹಾರ ಎಂಬ ತಪ್ಪುಕಲ್ಪನೆಯನ್ನು ಬಿತ್ತಲಾಗುತ್ತಿದೆ. ತಪ್ಪು ತಿಳುವಳಿಕೆಗಳನ್ನು ನೆಲೆಗೊಳಿಸಿ ಅದರ ಆಧಾರದ ಮೇಲೆ ಅಧಿಕಾರದ ಮೇಲಿನ ಹಿಡಿತವನ್ನು ಪ್ರಬಲಗೊಳಿಸಿಕೊಳ್ಳುವ ಹೆಜ್ಜೆಗಳು ಹಿಂದೆಂದಿಗಿಂತಲೂ ದಟ್ಟವಾಗುತ್ತಿವೆ.
ಮನಮೋಹನ ಮೌನಕ್ಕಿಂತಲೂ ಈಗಿಮ ಮಾತಿನ ಅಬ್ಬರವೇ ಮೇಲು
ಹಿಂದಿನ ಮನಮೋಹನ ಮೌನಕ್ಕಿಂತಲೂ ಈಗಿನ ಮಾತಿನ ಅಬ್ಬರವೇ ಮೇಲು ಎಂದು ನಂಬಿಸಲಾಗುತ್ತಿದೆ. ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷವು ಪ್ರಬಲ ಪ್ರತಿರೋಧವನ್ನೊಡ್ಡುವ ಬದಲು ತನ್ನ ಮುಂಚೂಣಿ ಯುವ ನೇತಾರನ ತೊಳಲಾಟದ ಚಡಪಡಿಕೆಗೆ ಸಾಕ್ಷಿಯಾಗುತ್ತಿದೆ. ಇದೆಲ್ಲದರ ನಡುವೆ ಹಿಂಸೆಯು ಅಧಿಕಾರದ ಅಧಿಪತ್ಯದ ಇಂಧನವಾಗಿ ರಾಜಕೀಯ ಬೃಹದಾಕೃತಿಯನ್ನು ತಳೆದುಬಿಟ್ಟಿದೆ. ಅದೇ ಕಾರ್ಗಿಲ್ ಜಯಭೇರಿಯ ಕ್ಷಣಗಳಿಗೆ ಉತ್ಸವದ ಬಣ್ಣವನ್ನು ಲೇಪಿಸಿ ಜನರ ಮನೋಧರ್ಮವನ್ನು ಯುದ್ಧದ ಪರವಾಗಿ ತಿರುಗಿಸಿಬಿಟ್ಟಿದೆ.
ಯುದ್ಧವೆಂದರೆ ಎರಡು ದೇಶಗಳ ಸಂಘರ್ಷದ ಹಿಂಸಾತ್ಮಕ ಕ್ರಿಯೆ. ಕಳೆದುಕೊಳ್ಳುವ ನೋವುಗಳನ್ನು ಮನುಷ್ಯ ವಲಯದೊಳಗೆ ಸೇರ್ಪಡೆಗೊಳಿಸುವ ರಾಕ್ಷಸದಾಹದ ಅಖಾಡ. ಸೈನಿಕರ ಜೀವಗಳನ್ನು ಬಲಿ ಪಡೆದು ತಂದೆ, ತಾಯಿ, ಅಜ್ಜ, ಅಜ್ಜಿ, ಪತ್ನಿ, ಅಕ್ಕ, ತಂಗಿ ಸೇರಿದಂತೆ ಸಂಬಂಧಿಗಳೊಳಗೆ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಭಯಾನಕ ಸ್ವರೂಪಿ. ಜೀವ ಕಳೆದುಕೊಂಡ ಸೈನಿಕರ ತ್ಯಾಗ ನೆನಪಿಸಿಕೊಂಡು ದೇಶದ ಆಡಳಿತಾತ್ಮಕ ಪ್ರತಿನಿಧಿಗಳು ಅಧಿಕಾರಕ್ಕೆ ಮತ್ತಷ್ಟು ಹತ್ತಿರಾಗುವ ಪ್ರಯತ್ನಗಳಿಗೆ ಕುಮ್ಮಕ್ಕು ನೀಡುವ ಸಂದರ್ಭ. ಜೊತೆಗೆ ಯುದ್ಧ ನಡೆಯಲೇಬೇಕು, ಎದುರಾಳಿಗಳ ಸೊಕ್ಕು ಮುರಿಯಲೇಬೇಕು ಎಂಬ ಆವೇಶಭರಿತ ವಿಕೃತಿಗಳನ್ನು ವಿಜೃಂಭಿಸಿಕೊಳ್ಳಲು ಬೇಕಾಗುವ ಮಾಹಿತಿಯ ನಮೂನೆಗಳನ್ನು ನೆನಪಿಸಿಕೊಳ್ಳಲು ಪೂರಕವಾಗುವ ಬೀತಿಯ ಮೂಲ.
ಸದ್ಯದ ಕಾರ್ಗಿಲ್ ವಿಜಯೋತ್ಸವದೊಂದಿಗಿನ ರಹಸ್ಯ ಕಾರ್ಯಸೂಚಿ ಮತ್ತು ಅದನ್ನು ದೃಷ್ಟಿಯಲ್ಲಿರಿಸಿಕೊಂಡ ಸಂಕುಚಿತ ರಾಜಕಾರಣ ಯುದ್ಧವನ್ನು ಹೀಗೆ ಮರುವ್ಯಾಖ್ಯಾನಿಸಿಕೊಳ್ಳುವ ಒತ್ತಡವನ್ನು ಸೃಷ್ಟಿಸಿದೆ.
ಆದರೆ, ನಮ್ಮ ಯುವಶಕ್ತಿ ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಂಡು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಭಾವುಕತೆಯ ಲೇಪನೆಯೊಂದಿಗಿನ ವಿಕೃತ ಬಿಂಬಗಳನ್ನೇ ಆರಾಧಿಸುತ್ತಾ ಸೈನಿಕರನ್ನು ನೆನಪಿಸಿಕೊಳ್ಳುವುದಷ್ಟನ್ನೇ ದೇಶಪ್ರೇಮ ಎಂದುಕೊಂಡಿವೆ. ಯುದ್ಧ ಆಗಲೇಬೇಕು, ಯುದ್ಧದಿಂದಲೇ ಪರಿಹಾರ ಎಂಬ ಅಧಿಕಾರಕೇಂದ್ರದ ಮೂಲಭೂತವಾದಿ ದೃಷ್ಟಿಕೋನವನ್ನೇ ಆರಾಧಿಸುತ್ತಾ, ಆ ಆರಾಧನೆಯ ಭಾವಗಳನ್ನೇ ವಿಸ್ತರಿಸುವ ಪ್ರಚೋದಕ ಮಾಹಿತಿ, ಮಾತುಗಳನ್ನು ಶೇರ್ ಮಾಡುತ್ತಾ ತಮ್ಮೊಳಗಿನ ಯೋಚನೆಯ ಶಕ್ತಿಯನ್ನೇ ಕ್ರಮೇಣ ಕಳಚಿಕೊಳ್ಳುತ್ತಾ ಸಾಗಿದೆ.
ಗೇಲಿ ಮಾಡುವ ಪ್ರವೃತ್ತಿ
ಯೋಚಿಸುವವರನ್ನು ‘ಬುದ್ಧಿಜೀವಿಗಳು’ ಎಂಬ ಪಟ್ಟ ಕಟ್ಟಿ ಅದೊಂದು ಅಸ್ಪೃಶ್ಯ ವರ್ಗ ಎನ್ನುವಂತೆ ಗೇಲಿಮಾಡುತ್ತಿದೆ. ಬುದ್ಧಿ ಮತ್ತು ಜೀವ ಎರಡೂ ಮನುಷ್ಯ ಬದುಕನ್ನು ಚಲನಶೀಲಗೊಳಿಸುವಂಥವು. ಬುದ್ಧಿಯು ವಿವೇಕ ತಂದುಕೊಳ್ಳುವ ಮೂಲವಾದರೆ ಜೀವ ಅಂಥ ವಿವೇಕವನ್ನು ದಾಟಿಸುವ ಚಲನೆಯನ್ನೇ ಸಂಕೇತಿಸುತ್ತದೆ. ಆ ಮೂಲಕ ಸಾಮಾಜಿಕ ಚಲನಶೀಲತೆಯ ಜೀವಂತಿಕೆಯನ್ನು ಹೆಚ್ಚಿಸುವುದಕ್ಕೆ ಸಾಧ್ಯವಾಗುತ್ತದೆ. ಅದಕ್ಕೆ ಮೌಲಿಕ ಚಿಂತನೆಗಳನ್ನು ಕೊಡುಗೆಗಳನ್ನಾಗಿ ನೀಡುವವರು ಬುದ್ಧಿಜೀವಿಗಳೆನ್ನಿಸಿಕೊಳ್ಳುತ್ತಾರೆ. ತಾವು ಬುದ್ಧಿಜೀವಿಗಳೆಂದುಕೊಂಡು ಬೀಗುವವರು, ತಮ್ಮ ಬುದ್ಧಿಯನ್ನು ಅಧಿಕಾರದಲ್ಲಿರುವವರ ಕೈಗೊಪ್ಪಿಸುವವರು, ಸಮಾಜದ ಜೀವಂತಿಕೆಗೆ ತದ್ವಿರುದ್ಧದ ನಡವಳಿಕೆಯವರು ಬುದ್ಧಿ ಅಥವಾ ವಿವೇಕದೊಂದಿಗಿನ ಜೀವಗಳಲ್ಲ. ಆದರೆ, ಸಮಾಜಕ್ಕೆ ಈ ಕ್ಷಣಕ್ಕೆ ಬೇಕಾದದ್ದನ್ನು ಪ್ರಸ್ತಾಪಿಸಿ ಅಧಿಕಾರದಲ್ಲಿರುವವರನ್ನು ಎಚ್ಚರಿಸುವ ಮಾತುಗಳನ್ನಾಡಿ ಬೆಳವಣಿಗೆಗೆ ಅರ್ಥಪೂರ್ಣ ತೀವ್ರತೆ ತಂದುಕೊಡುವ ಚಿಂತನಶೀಲರು ಬುದ್ಧಿಜೀವಿಗಳು.
ನಮ್ಮ ರಾಜಕಾರಣ ಮತ್ತು ಮಾಧ್ಯಮದ ಆಕ್ರಾಮಕ ಭಾಷಿಕ ವಿಕೃತಿಗಳು ಬುದ್ಧಿಜೀವಿಗಳ ವೈವಿಧ್ಯಮಯ ಶಕ್ತಿಯನ್ನು ಹಿನ್ನೆಲೆಗೆ ಸರಿಸಿ ಅವರನ್ನು ದೇಶದ್ರೋಹಿಗಳು ಎಂದು ಬಿಂಬಿಸುವುದರ ಕಡೆಗೆ ಹೆಚ್ಚು ವಾಲಿಕೊಂಡಿವೆ. ನಾಯಕರೆನ್ನಿಸಿಕೊಂಡ ಅಪ್ರಬುದ್ಧರು ‘ನಾನು ಗೃಹಸಚಿವನಾಗಿದ್ದರೆ ಇಂಥವರನ್ನು ಒಟ್ಟಿಗೆ ನಿಲ್ಲಿಸಿ ಗುಂಡು ಹಾರಿಸುವಂತೆ ಹೇಳುತ್ತಿದ್ದೆ’ ಎಂಬ ಯುದ್ಧದ ಪರಿಭಾಷೆಯಲ್ಲಿಯೇ ಮಾತನಾಡಿಬಿಡುತ್ತಾರೆ. ಆ ಮಾತನ್ನು ಸುದ್ದಿಮಾಧ್ಯಮಗಳು ಬಹುದೊಡ್ಡ ದಾರ್ಶನಿಕ ನುಡಿ ಎಂಬಂತೆ ಚಿತ್ರಿಸಿಬಿಡುತ್ತವೆ. ಮತ್ತೊಂದು ರಾಷ್ಟ್ರದ ವಿರುದ್ಧದ ಯುದ್ಧಸನ್ನದ್ಧತೆಯ ವಿಕೃತಿಗಳು ಮತ್ತು ದೇಶದ ಒಳಗೇ ಇರುವ ಯೋಚಿಸುವ ಶಕ್ತಿಯುಳ್ಳವರ ವಿರುದ್ಧದ ಹಿಂಸಾತ್ಮಕ ದಾಳಿಗಳು ಸಂಕುಚಿತತೆಯನ್ನು ವಿಸ್ತಾರಗೊಳಿಸಲು ಬೇಕಾದ ಜನಸಮ್ಮತಿಯನ್ನು ಉತ್ಪಾದಿಸಿಕೊಳ್ಳುತ್ತಿವೆ. ಹಾಗಾಗುವಂತೆ ಮೂಲಭೂತವಾದಿ ಚಾಣಾಕ್ಷ ನಡೆಗಳು ಸಂವಹನ ತಂತ್ರಗಳನ್ನು ಹೆಣೆದು ಯಶಸ್ಸು ಕಾಣುತ್ತಿವೆ.
ಮೂಲಭೂತವಾದಿ ಕಾರ್ಯತಂತ್ರಗಳು ಗಾಂಧಿ ಚಿಂತನೆಯನ್ನು ಪರೋಕ್ಷವಾಗಿ ಮತ್ತು ನೇರವಾಗಿ ಅಪ್ರಸ್ತುತ ಎಂದು ನಂಬಿಸುತ್ತಿವೆ. ಉಪವಾಸದ ನಡೆಗಿಂತ ಹಿಂಸೆಯೊಂದಿಗಿನ ನಡೆಗಳಿಗೆ ಬ್ರಿಟಿಷರು ಹೆದರಿದರು ಎಂದು ಈಗಾಗಲೇ ಆಗಿಹೋದ ಇತಿಹಾಸವನ್ನು ಸಂಕುಚಿತ ದೃಷ್ಟಿಕೋನಗಳ ಮಟ್ಟಕ್ಕಿಳಿಸಿ ವಿವರಿಸುತ್ತಿವೆ. ಇಂಥವುಗಳನ್ನು ಅಲ್ಲಗಳೆಯಬೇಕಿದ್ದ ಸುದ್ದಿಮಾಧ್ಯಮಗಳು ವೈಭವೀಕರಣದ ತಂತ್ರಗಾರಿಕೆಯೊಂದಿಗೆ ಪ್ರಜೆಗಳನ್ನು ವೀಕ್ಷಕ ಗ್ರಾಹಕರನ್ನಾಗಿಸಿಕೊಂಡು ಹಣಗಳಿಕೆಯ ಲೆಕ್ಕಾಚಾರದ ಗುಂಗಿನೊಂದಿಗೇ ಸಂಭ್ರಮಿಸುತ್ತಿವೆ. ಈ ನಕಾರಾತ್ಮಕತೆಗೆ ಕಡಿವಾಣ ಹೇಗೆ? ಸಾಧ್ಯವೇ ಇಲ್ಲ ಎನ್ನುವಂತಿಲ್ಲ.
ಮತ್ತೆ ಬುದ್ಧಿ ಮತ್ತು ಜೀವಗಳೆರಡೂ ಸಂಯೋಜಿತಗೊಂಡು ಚಲನಶೀಲತೆಯೆಡಗಿನ ಪಯಣ ಹಿಂದೆಂದಿಗಿಂತಲೂ ತೀವ್ರಗೊಳ್ಳಬೇಕು. ಪ್ರಶ್ನೆಗಳು ಹುಟ್ಟಿಕೊಳ್ಳಬೇಕು. ಪ್ರಶ್ನಿಸುವವರ ಸ್ಥೈರ್ಯ ಹೆಚ್ಚಿಸುವ ಪ್ರಜಾಸತ್ತಾತ್ಮಕ ವಾತಾವರಣ ರೂಪುಗೊಳ್ಳಬೇಕು. ಬುದ್ಧಿ ಜೀವಗಳನ್ನು ಕೊಲ್ಲುವ ಪರಿಭಾಷೆಯನ್ನು ಎದುರುಗೊಳ್ಳುವ ಸೌಹಾರ್ದಯುತ ಸಂವಾದದ ಆರೋಗ್ಯಕರ ಆಂದೋಲನ ದೇಶವ್ಯಾಪಿಯಾಗಬೇಕು. ಯುದ್ಧೋನ್ಮೋದ ಮತ್ತು ಸಂಘರ್ಷದ ಭಾಷಿಕ ವಿಕೃತಿಗಳಿಗಿಂತ ಮಾನವೀಯತೆಯೇ ದೇಶದ ಶ್ರೇಷ್ಠ ಗುಣಲಕ್ಷಣವಾಗಬೇಕು ಎಂಬ ಕಾಳಜಿಗಳು ಮುನ್ನೆಲೆಗೆ ಬರಬೇಕು. ದೇಶದ ಕುರಿತಾದ ಹೆಮ್ಮೆಯ ಭಾವಗಳು ಮನುಷ್ಯತ್ವದ ಮೌಲಿಕತೆಯೊಂದಿಗೇ ಸಂಯೋಜಿತಗೊಳ್ಳಬೇಕು. ದೇಶದ ಬಗೆಗಿನ ಪ್ರೇಮವು ಅಂಧಾಭಿಮಾನದ ಮಿತಿಗಳನ್ನು ದಾಟಿಕೊಂಡು ಗಂಭೀರ ಚಿಂತನೆಗಳ ಬಲದಲ್ಲಿ ಗಟ್ಟಿಗೊಳ್ಳಬೇಕು.
(ಲೇಖಕರು: ಡಾ.ಎನ್.ಕೆ.ಪದ್ಮನಾಭ,
ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರ, ಉಜಿರೆ)

ರಾಜಕೀಯ
ಮಸ್ಕಿ ಬಿಜೆಪಿ ಅಭ್ಯರ್ಥಿ ಪರ ಇಂದು ಸಿಂಗರ್ ಮಂಗ್ಲಿ ಪ್ರಚಾರ

ಸುದ್ದಿದಿನ,ರಾಯಚೂರು: ರಾಬರ್ಟ್ ಸಿನೆಮಾ ‘ಕಣ್ಣೆ ಅದಿರಿಂದಿ’ ಹಾಡಿನ ಮೂಲಕ ಭಾರೀ ಸದ್ದು ಮಾಡಿದ ಗಾಯಕಿ ಮಂಗ್ಲಿ ಮಸ್ಕಿ ಉಪ ಚುನಾವಣಾ ಅಖಾಡದಲ್ಲಿ ಮಂಗಳವಾರ ಬಿಜೆಪಿ ಪರವಾಗಿ ಪ್ರಚಾರ ಮಾಡಲಿದ್ದಾರೆ.
ಬಿಜೆಪಿಯು ಗಾಯಕಿ ಮಂಗ್ಲಿ ಅವರನ್ನ ಪ್ರಚಾರಕ್ಕೆ ಆಹ್ವಾನಿಸಿದ್ದು, ಇಂದು ಮಸ್ಕಿ ಕೆಲ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಮತಯಾಚಿಸಲಿದ್ದಾರೆ. ಆದರೆ ಚುನಾವಣಾ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.
ಇದೇ 17 ರಂದು ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೂರು ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಭರ್ಜರಿ ರಣತಂತ್ರವನ್ನು ಹೂಡಿದ್ದಾರೆ.
ಇದನ್ನೂ ಓದಿ | ಕವಿತೆ | ಅವಳು ಮಸಣ ಕಾಯುವ ಪಾರ್ವತಿ..! -ಪದ್ಮಶ್ರೀ ಗೋವಿಂದರಾಜು,ಭದ್ರಾವತಿ
ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಸಿಎಂ ಯಡಿಯೂರಪ್ಪ ಅವರು, ಕಾಂಗ್ರೆಸ್ ನೆಲಸವಾಗುವುದು ನಿಶ್ಚಿತ. 3 ಕ್ಷೇತ್ರಗಳಲ್ಲೂ ದೊಡ್ಡ ಮತಗಳ ಅಂತರದಲ್ಲಿ ನಾವೇ ಗೆಲ್ಲುತ್ತೇವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಇತ್ತ ಮೂರು ಪಕ್ಷಗಳ ಮತಯಾಚನೆಯ ಕಾವು ಏರುತ್ತಲೇ ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಿ.ಜೆ.ಪಿ ಎಂ.ಪಿಗಳ ಗುಲಾಮಿ ಮನಸ್ಥಿತಿ ಕರ್ನಾಟಕವನ್ನು ಸರ್ವನಾಶ ಮಾಡಲಿದೆ : ಸಿದ್ದರಾಮಯ್ಯ ಆಕ್ರೋಶ

ಸುದ್ದಿದಿನ, ಬೆಳಗಾವಿ: ಕೃಷಿ ವಿರೋಧಿ ಕಾಯ್ದೆಗಳ ಮೂಲಕ ರೈತರ ಬದುಕನ್ನು ಶಾಶ್ವತವಾಗಿ ಘಾಸಿಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರ ಇದೀಗ ರಸಗೊಬ್ಬರದ ಬೆಲೆ ಏರಿಸಿ ಅವರ ಗಾಯದ ಮೇಲೆ ಬರೆ ಎಳೆದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಳಗಾವಿ ಲೋಕಸಭೆ ಕ್ಷೇತ್ರದ ಸವದತ್ತಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರ ಪರ ಮತಪ್ರಚಾರ ನಡೆಸಿದ ಅವರು ಮಾತನಾಡಿದರು.
ಕೇಂದ್ರದ ರೈತ ಶತ್ರು ನರೇಂದ್ರ ಮೋದಿ ಸರ್ಕಾರ ರಸಗೊಬ್ಬರದ ಬೆಲೆಗಳನ್ನು ಶೇ. 60 ರಷ್ಟು ಹೆಚ್ಚಿಸಿದೆ. ಡಿ.ಎ.ಪಿ ಗೊಬ್ಬರ ಏಪ್ರಿಲ್ 1 ರಿಂದ ಒಂದು ಕ್ವಿಂಟಾಲಿಗೆ 1400 ಗಳಷ್ಟು ಬೆಲೆ ಜಾಸ್ತಿಯಾಗುತ್ತಿದೆ. ಇದುವರೆಗೆ 2400 ರೂಪಾಯಿಗಳಿದ್ದ ಬೆಲೆ ಈಗ 3800 ರೂ ಗಳಾಗುತ್ತಿದೆ ಎಂದರು.
ಸಾರಜನಕ, ರಂಜಕ ಮತ್ತು ಪೊಟ್ಯಾಷ್ಗಳ ಮೇಲಿನ ಬೆಲೆ ಕ್ವಿಂಟಾಲ್ ಗೆ ರೂ.1250 ಹೆಚ್ಚಿಸಿದ್ದಾರೆ. ರೂ.2350 ಗೆ ಸಿಗುತ್ತಿದ್ದ ಗೊಬ್ಬರ ಈಗ ರೂ.3600ರಷ್ಟಾಗಿದ್ದು ರೈತರು ನಿಸ್ಸಂಶಯವಾಗಿ ದಿವಾಳಿಯಾಗಲಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಜಾಸ್ತಿಯಾಗಿದೆ, ಅದಕ್ಕೆ ಬೆಲೆ ಜಾಸ್ತಿ ಮಾಡಿದ್ದೇವೆ ಎಂಬ ಕೇಂದ್ರ ಸರ್ಕಾರದ ಸಬೂಬು ಶುದ್ಧ ಸುಳ್ಳು. ಕಳೆದ ವರ್ಷ ರೂ.1,33,947 ಕೋಟಿ ರಸಗೊಬ್ಬರಕ್ಕಾಗಿ ಸಬ್ಸಿಡಿ ನೀಡಲಾಗಿತ್ತು. ಈಗ ಅದು ರೂ.79,530 ಕೋಟಿಗೆ ಇಳಿಸಿದ್ದಾರೆ. ಆದ್ದರಿಂದಲೇ ಏಪ್ರಿಲ್ 1 ರಿಂದ ಬೆಲೆ ಹೆಚ್ಚಾಗಿದೆ.
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಪ್ರಶ್ನಿಸದ ರಾಜ್ಯ ಸರ್ಕಾರ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಬಿ.ಜೆ.ಪಿ ಎಂ.ಪಿಗಳ ಗುಲಾಮಿ ಮನಸ್ಥಿತಿ ಕರ್ನಾಟಕವನ್ನು ಸರ್ವನಾಶ ಮಾಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಪ್ರಶ್ನಿಸದ ರಾಜ್ಯ @BJP4Karnataka ಸರ್ಕಾರ ಮತ್ತು ರಾಜ್ಯವನ್ನು ಪ್ರತಿನಿಧಿಸುವ @BJP4India ಎಂ.ಪಿಗಳ ಗುಲಾಮಿ ಮನಸ್ಥಿತಿ ಕರ್ನಾಟಕವನ್ನು ಸರ್ವನಾಶ ಮಾಡಲಿದೆ.
5/5 #ಬೆಲೆಯೇರಿಕೆ— Siddaramaiah (@siddaramaiah) April 9, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
6ನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಾರಿಗೆ ನೌಕರರಿಗೆ ವೇತನ ಭತ್ಯೆ ನೀಡಲು ಸಾಧ್ಯವಿಲ್ಲ : ಮುಖ್ಯಮಂತ್ರಿ ಯಡಿಯೂರಪ್ಪ

ಸುದ್ದಿದಿನ, ಬೆಂಗಳೂರು : ’ರಾಜ್ಯದ ಒಟ್ಟು ಆದಾಯದ ಶೇ. 85 ರಷ್ಟು, ವೇತನ, ಭತ್ಯೆ, ಪಿಂಚಣಿ ಮತ್ತಿತರ ಯೋಜನೇತರ ವೆಚ್ಚಗಳಿಗೆ ವ್ಯಯವಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅಲ್ಪ ಆದಾಯ ಲಭ್ಯವಿರುತ್ತದೆ ಎಂದು ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಲಿಂಕ್ ಮೇಲೆ ಕ್ಲಿಕ್ ಮಾಡಿ : ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ವಿನಂತಿಸುತ್ತೇನೆ : ಯಡಿಯೂರಪ್ಪ ಫೇಸ್ ಬುಕ್ ಪೋಸ್ಟ್
ಬಜೆಟ್ ಅಧಿವೇಶನದಲ್ಲಿ ವಿಪಕ್ಷ ನಾಯಕರು ಪ್ರಸ್ತಾಪಿಸಿದ್ದಂತೆ, ಯೋಜನೇತರ ವೆಚ್ಚ ಈಗಾಗಲೇ ಅಧಿಕವಾಗಿದೆ. ಪ್ರಸಕ್ತ ಸಂದರ್ಭಗಳಲ್ಲಿ ಮತ್ತಷ್ಟು ಹೆಚ್ಚು ಅನುದಾನವನ್ನು ಯೋಜನೇತರ ವೆಚ್ಚಗಳಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಜೊತೆಗೆ ಲಾಕ್ ಡೌನ್ ಸಂದರ್ಭದಲ್ಲಿಯೂ ಸಹ ಸಾರಿಗೆ ನೌಕರರ ಹಿತರಕ್ಷಣೆ ದೃಷ್ಟಿಯಿಂದ ಅವರಿಗೆ ವೇತನ ನೀಡಲು, ಸರ್ಕಾರ 2,300 ಕೋಟಿ ರೂ. ಗಳ ಅನುದಾನ ನೀಡಿದೆ. ಸವಾಲಿನ ಸಂದರ್ಭಗಳಲ್ಲಿಯೂ ಸಹ ಸಾರಿಗೆ ಸಂಸ್ಥೆಗಳ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಸರ್ಕಾರ ಈಗಾಗಲೇ ಈಡೇರಿಸಿದ್ದು, 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಭತ್ಯೆ ನೀಡಲು ಸಾಧ್ಯವಿರುವುದಿಲ್ಲ. ಆದ್ದರಿಂದ ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ವಿನಂತಿಸುತ್ತೇನೆ’. ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್7 days ago
ತರಕಾರಿ ಸಿಪ್ಪೆಯಿಂದ ಪೇಪರ್ ತಯಾರಿಸಿದ ಹತ್ತರ ಬಾಲೆ ಮಾನ್ಯ ಹರ್ಷ..!
-
ದಿನದ ಸುದ್ದಿ7 days ago
ನಿಗದಿತ ದರಕ್ಕೆ ರಸಗೊಬ್ಬರ ಮಾರಾಟ ಮಾಡಲು ಸೂಚನೆ
-
ನಿತ್ಯ ಭವಿಷ್ಯ6 days ago
ಈ ರಾಶಿಯವರಿಗೆ ನಿಶ್ಚಿತಾರ್ಥ ಸಂಭವ! ಶನಿವಾರ- ರಾಶಿ ಭವಿಷ್ಯ ಏಪ್ರಿಲ್-17,2021
-
ನಿತ್ಯ ಭವಿಷ್ಯ5 days ago
ಈ ರಾಶಿಯವರಿಗೆ ಸಂಜೆಯೊಳಗೆ ಒಂದು ಖುಷಿ ಸಂದೇಶ! ಭಾನುವಾರ- ರಾಶಿ ಭವಿಷ್ಯ ಏಪ್ರಿಲ್-18,2021
-
ದಿನದ ಸುದ್ದಿ7 days ago
ಕೊರೊನಾತಂಕದ ನಡುವೆ ಎಸ್.ಎಸ್.ಎಲ್.ಸಿ ಮಕ್ಕಳಿಗಿರಲಿ ನಿರಾತಂಕ ; ಪಠ್ಯ ಕಡಿತದ ಲಾಭ – ಅಂಕಗಳಿಕೆ ಸರಾಗ
-
ದಿನದ ಸುದ್ದಿ5 days ago
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಮತ್ತೆ ಬಂದರೂ ಅದೇ ಕೊರೋನ, ನಾವು ಹೆದರದಿರೋಣ
-
ದಿನದ ಸುದ್ದಿ3 days ago
ಹಳೇ ಕುಂದುವಾಡ ಮನಾ ಯುವ ಬ್ರಿಗೇಡ್, ಜರವೇ ನಾಲ್ಕನೇ ವಾರ್ಷಿಕೋತ್ಸವ | ಯುವಕರ ಸಮಾಜ ಮುಖಿ ಕೆಲಸಗಳು ಉತ್ತಮ ನಾಯಕತ್ವಕ್ಕೆ ಬುನಾದಿ : ಮೇಯರ್ ಎಸ್.ಟಿ.ವೀರೇಶ್