ದಿನದ ಸುದ್ದಿ
ಸಾಸ್ವೆಹಳ್ಳಿ ಏತನೀರಾವರಿ ಯೋಜನೆ ಭೂಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತವಾಗಿಪೂರ್ಣಗೊಳಿಸಬೇಕು : ಎಂಪಿ ಜಿ.ಎಂ. ಸಿದ್ದೇಶ್ವರ
ಸುದ್ದಿದಿನ,ದಾವಣಗೆರೆ: ಜಿಲ್ಲೆಯ ಸಾಸ್ವೆಹಳ್ಳಿ ಏತನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಪಂಪ್‍ಹೌಸ್‍ಗಳು, ಡೆಲವರಿ ಚೇಂಬರ್‍ಗಳು, ಎಲೆಕ್ಟ್ರಿಕಲ್ ಸಬ್‍ಸ್ಟೇಷನ್‍ಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ನಿರ್ಮಿಸಬೇಕಿರುವ ವಿದ್ಯತ್ ಟವರ್‍ಗಳ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಭೂಸ್ವಾಧೀನ ಪ್ರಕ್ರಿಯೆಗಳನ್ನು ವಿಳಂಬಕ್ಕೆ ಅವಕಾಶ ನೀಡದಂತೆ ತ್ವರಿತವಾಗಿ ಪೂರ್ಣಗೊಳಿಸಬೇಕು,ಇದರಲ್ಲಿ ಯಾವುದೇ ಅಡೆತಡೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಸ್ವೆಹಳ್ಳಿ ಸೇರಿದಂತೆ ವಿವಿಧ ಏತನೀರಾವರಿ ಯೋಜನೆಗಳ ಕುರಿತು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಸಾಸ್ವೆಹಳ್ಳಿ ಏತನೀರಾವರಿ ಯೋಜನೆಯಡಿ ಜಾಕ್‍ವೆಲ್ ಕಮ್ ಪಂಪ್‍ಹೌಸ್, ಡೆಲಿವರಿ ಛೇಂಬರ್, ಎಲೆಕ್ಟ್ರಿಕಲ್ ಸಬ್‍ಸ್ಟೇಷನ್, ರೈಸಿಂಗ್ ಮೈನ್‍ಗಳ ನಿರ್ಮಾಣಕ್ಕಾಗಿ ಹೊನ್ನಾಳಿ ತಾಲ್ಲೂಕಿನಲ್ಲಿ 6 ಎಕರೆ 03 ಗುಂಟೆ ಹಾಗೂ ಚನ್ನಗಿರಿ ತಾಲ್ಲೂಕಿನಲ್ಲಿ 09 ಎಕರೆ 14 ಗುಂಟೆ ಸೇರಿದಂತೆ 15 ಎಕರೆ 17 ಗುಂಟೆ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತದೆ.
ಈಗಾಗಲೆ ಸಾಸ್ವೆಹಳ್ಳಿ ಗ್ರಾಮದಲ್ಲಿ 03 ಎಕರೆ 03 ಗುಂಟೆಗೆ ಸಂಬಂಧಿಸಿದಂತೆ ಭೂಮಿ ಕಳೆದುಕೊಳ್ಳುವ ರೈತರಿಗೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಶೇ. 50 ರಷ್ಟು ಪರಿಹಾರ ಹಣ ಪಾವತಿಸಲಾಗಿದೆ. ಅದೇ ರೀತಿ ಚನ್ನಗಿರಿ ತಾಲ್ಲೂಕು ಚಕ್ಕಲಿ ಗ್ರಾಮ ಬಳಿ ಪಂಪ್‍ಹೌಸ್, ಎಲೆಕ್ಟ್ರಿಕಲ್ ಸಬ್‍ಸ್ಟೇಷನ್, ಅಪ್ರೋಚ್ ರಸ್ತೆಗೆ ಅಗತ್ಯವಿರುವ ಒಟ್ಟು 07 ಎಕರೆ ಭೂಮಿಗೆ ಸಂಬಂಧಿಸಿದಂತೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಶೇ. 50 ರಷ್ಟು ಪರಿಹಾರ ಹಣ ಪಾವತಿಸಲಾಗಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮುತ್ತಗದೂರು ಬಲಿ ಪಂಪ್‍ಹೌಸ್ ಹಾಗೂ ವಿದ್ಯುತ್ ಸಬ್‍ಸ್ಟೇಷನ್, ಚಿತ್ರದುರ್ಗ ತಾಲ್ಲೂಕು ಮದಕರಿಉರ ಮತ್ತು ದೊಡ್ಡಿಗನಾಳ್ ಗ್ರಾಮ ಬಳಿ ಡೆಲವರಿ ಚೇಂಬರ್, ಅಪ್ರೋಚ್ ರಸ್ತೆಗಾಗಿ ಸದ್ಯ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ನಿಗಮಕ್ಕೆ ಹಸ್ತಾಂತರ ಮಾಡುವ ಕಾರ್ಯ ಬಾಕಿ ಇದೆ. ಭೂಸ್ವಾಧೀನ ಕಾರ್ಯವನ್ನು ವಿಳಂಬಕ್ಕೆ ಅವಕಾಶವಿಲ್ಲದಂತೆ ಶೀಘ್ರ ಪೂರ್ಣಗೊಳಿಸಬೇಕು. ಯಾವುದೇ ಅಡೆತಡೆಗಳು ಇದ್ದಲ್ಲಿ ಕೂಡಲೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಸಂಸದರು ಸೂಚನೆ ನೀಡಿದರು.
ಇದನ್ನೂ ಓದಿ | ಹರಿಹರ ನಗರದಲ್ಲಿ ತಂಬಾಕು ದಾಳಿ : ಕಾಯ್ದೆ ಉಲ್ಲಂಘನೆಗೆ ದಂಡ
ಹೊನ್ನಾಳಿ ತಾಲ್ಲೂಕಿನಲ್ಲಿ ಪಂಪ್‍ಹೌಸ್-1 ರ ಬಳಿ ನಿರ್ಮಿಸಲು ಉದ್ದೇಶಿಸಿರುವ ಎಲೆಕ್ಟ್ರಿಕಲ್ ಸಬ್‍ಸ್ಟೇಷನ್‍ಗೆ ವಿದ್ಯುತ್ ಸಂಪರ್ಕಕ್ಕಾಗಿ ದಿಡಗೂರು, ಬೀರಗೊಂಡನಹಳ್ಳಿ, ಚಿಕ್ಕಬಾಸೂರು, ಉಜ್ಜನೀಪುರ, ಹೊಟ್ಯಾಪುರ, ಸದಾಶಿವಪುರ, ಸಾಸ್ವೆಹಳ್ಳಿ, ಮಾವಿನಕೋಟೆ ಗ್ರಾಮ ವ್ಯಾಪ್ತಿಯಲ್ಲಿ ಒಟ್ಟು 49 ವಿದ್ಯುತ್ ಟವರ್‍ಗಳನ್ನು ನಿರ್ಮಿಸಬೇಕಿದ್ದು, 48 ಎಕರೆ ಭೂಮಿಯನ್ನು ಗುರುತಿಸಲಾಗಿದೆ.
ಇದಕ್ಕಾಗಿ ಅಗತ್ಯ ಜಾಗ ಮತ್ತು ಕಾರಿಡಾರ್ ಹಾದುಹೋಗುವ ಮಾರ್ಗದ ಸರ್ವೆ ನಕ್ಷೆ ಹಾಗೂ ಬಾಧಿತರಾಗುವ ರೈತರ ಭೂಮಿಯ ಸರ್ವೆ ನಂಬರ್‍ಗಳೊಂದಿಗೆ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಪರಿಹಾರಮೊತ್ತ ನಿಗದಿಪಡಿಸುವುದು ಬಾಕಿ ಇದೆ. ಹೊಳಲ್ಕೆರೆ ತಾಲ್ಲೂಕು ಸಾಸಲು ಗ್ರಾಮ ಬಳಿಯ ಸಬ್‍ಸ್ಟೇಷನ್‍ಗೆ 20 ಟವರ್‍ಗಳ ನಿರ್ಮಾಣಕ್ಕೆ ಸರ್ವೆ ಪೂರ್ಣಗೊಂಡಿದೆ.
ಅದೇ ರೀತಿ ಕೆರೆಬಿಳಚಿ ಗ್ರಾಮ ಬಳಿ ವಿದ್ಯುತ್ ಸಬ್‍ಸ್ಟೇಷನ್‍ಗೆ ವಿದ್ಯುತ್ ಸಂಪರ್ಕಿಸಲು 4.50 ಕಿ.ಮೀ. ಮಾರ್ಗದಲ್ಲಿ 20 ವಿದ್ಯುತ್ ಟವರ್ ನಿರ್ಮಾಣಕ್ಕೆ ಜಕ್ಕಲಿ, ಸೋಮಲಾಪುರ, ಕೆರೆಬಿಳಚಿ ಗ್ರಾಮಗಳ ಸರ್ವೆ ಕಾರ್ಯವನ್ನು ಚನ್ನಗಿರಿ ತಹಸಿಲ್ದಾರರು ತ್ವರಿತವಾಗಿ ಮಾಡಿಸಬೇಕು, ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಬಾಕಿ ಇರುವ ಸರ್ವೆ ಕಾರ್ಯವನ್ನು ಆಯಾ ತಹಸಿಲ್ದಾರರು ಪೂರ್ಣಗೊಳಿಸಬೇಕು. ಪರಿಹಾರ ಮೊತ್ತದ ದರವನ್ನು ಒಂದು ವಾರದೊಳಗೆ ನಿಗದಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಸಂಸದರು ಮಾತನಾಡಿ, ಅಧಿಕಾರಿಗಳು ಸರ್ವೆ ಕಾರ್ಯ, ಭೂಸ್ವಾಧೀನದಂತಹ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಫಾಲೋಅಪ್ ಮಾಡುವುದಿಲ್ಲ, ಹೀಗಾಗಿ ಯೋಜನೆಗಳಲ್ಲಿ ಪ್ರಗತಿಯಾಗುವುದಿಲ್ಲ. ಅಧಿಕಾರಿಗಳ ಇಂತಹ ಕಾರ್ಯವೈಖರಿಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ರಾಜನಹಳ್ಳಿ ಏತನೀರಾವರಿ
ಜಿಲ್ಲೆಯ ಜಗಳೂರು ತಾಲ್ಲೂಕಿನ 03 ಮತ್ತು ದಾವಣಗೆರೆ ತಾಲ್ಲೂಕಿನ 19 ಸೇರಿದಂತೆ ಒಟ್ಟು 22 ಕೆರೆಗಳಿಗೆ ನೀರು ತುಂಬಿಸುವ ರಾಜನಹಳ್ಳಿ ಏತ ನೀರಾವರಿ ಯೋಜನೆಯಲ್ಲಿ ಮೊದಲನೆ ಹಂತದಲ್ಲಿ ಹರಿಹರ ತಾಲ್ಲೂಕಿನ ಹಲಸಬಾಳು ಗ್ರಾಮ ಬಳಿ ತುಂಗಭದ್ರಾ ನದಿಯಿಂದ ನೀರೆತ್ತಿ 28 ಕಿ.ಮೀ. ದೂರದಲ್ಲಿರುವ ದಾವಣಗೆರೆ ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದ ಹತ್ತಿರದ ಎರಡನೆ ಹಂತಕ್ಕೆ ನೀರೊದಗಿಸುವುದು.
ಎರಡನೆ ಹಂತದಲ್ಲಿ ಉದ್ದೇಶಿತ 22 ಕೆರೆಗಳಿಗೆ 150 ಕಿ.ಮೀ. ಪೈಪ್‍ಲೈನ್ ಮುಖಾಂತರ ನೀರೊದಗಿಸುವ ಯೋಜನೆ ಇದಾಗಿದೆ. ಯೋಜನೆಯಡಿ ಸದ್ಯ 2022 ರ ಜುಲೈ 31 ರವರೆಗೆ ನಿರ್ವಹಣೆ ಗುತ್ತಿಗೆಯನ್ನು ನೀಡಲಾಗಿದೆ ಎಂದು ಯೋಜನೆಯ ಕಾರ್ಯಪಾಲಕ ಅಭಿಯಂತರ ಮಲ್ಲಪ್ಪ ಹೇಳಿದರು.
ಹಲಸಬಾಳು ಪಂಪ್‍ಹೌಸ್‍ಗೆ ಸಂಪರ್ಕಿಸುವ 225 ಮೀ. ಉದ್ದ ಹಾಗೂ ಮಲ್ಲಶೆಟ್ಟಿಹಳ್ಳಿ ಬಳಿಯ 50 ಮೀ. ಉದ್ದದ ಇಂಟೇಕ್ ಚಾನಲ್‍ನ ಹೂಳನ್ನು ತೆಗೆಸಲು ಸೂಚನೆ ನೀಡಲಾಗಿದ್ದು, ಸದ್ಯ ಇಂಟೇಕ್‍ಚಾನಲ್‍ನಲ್ಲಿ ನೀರು ಖಾಲಿಯಿದ್ದು, ಮಳೆಗಾಲ ಪ್ರಾರಂಭವಾಗುವುದರ ಒಳಗಾಗಿ ಹೂಳು ತೆಗೆಸಬೇಕು ಎಂದು ಸಂಸದರು ಸೂಚನೆ ನೀಡಿದರು.
ಏತನೀರಾವರಿ ಯೋಜನೆಯ ರಾಷ್ಟ್ರೀಯ ಹೆದ್ದಾರಿ 04 ರ ಪಕ್ಕದಲ್ಲಿರುವ ಪೈಪ್‍ಲೈನ್‍ಅನ್ನು ಸ್ಥಳಾಂತರಿಸುವ ಕಾಮಗಾರಿ ತ್ವರಿತವಾಗಿ ಕೈಗೊಳ್ಳದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಏತ ನೀರಾವರಿ ಯೋಜನೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ಪೈಪ್‍ಲೈನ್ ಸ್ಥಳಾಂತರಿಸುವ ಕಾರ್ಯ ಶೀಘ್ರ ಪೂರ್ಣಗೊಳ್ಳಬೇಕು ಎಂದರು.
ಉತ್ತರಿಸಿದ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು ಈಗಾಗಲೆ 12 ಕಿ.ಮೀ. ಪೈಕಿ 7.5 ಕಿ.ಮೀ. ಪೈಪ್‍ಲೈನ್ ಸ್ಥಳಾಂತರ ಪೂರ್ಣಗೊಂಡಿದ್ದು, ಇನ್ನೂ 4.5 ಕಿ.ಮೀ. ಕಾಮಗಾರಿ ಬಾಕಿ ಇದೆ. ಭೂಮಿ ಹಸ್ತಾಂತರ ಪ್ರಕ್ರಿಯೆಯಲ್ಲಿ ಸಮಸ್ಯೆಯಿದ್ದು, ವಿಳಂಬವಾಗುತ್ತಿದೆ ಎಂದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಭೂಮಿ ಸ್ವಾಧೀನಕ್ಕೆ ಪಡೆದು, ಪೊಲೀಸ್ ಬಂದೋಬಸ್ತ್ ತೆಗೆದುಕೊಂಡು ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ರಾ.ಹೆ. ನಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ
ದಾವಣಗೆರೆಯಿಂದ ಹಾವೇರಿವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಫ್ಲೈಓವರ್‍ಗಳ ಬಳಿ ಹಾಗೂ ಕೆಳ ಸೇತುವೆ ಬಳಿ ಮಳೆ ನೀರು ರಸ್ತೆಯ ಮೇಲೆಯೇ ನಿಲ್ಲುತ್ತಿದ್ದು, ಇದರಿಂದ ವೇಗವಾಗಿ ಬರುವ ವಾಹನಗಳ ಗಾಜುಗಳಿಗೆ ನೀರು ಸಿಡಿದು ಮುಂದಿನ ರಸ್ತೆ ಕಾಣದಂತಾಗುತ್ತಿದೆ. ಹೀಗಾಗಿ ಅಪಘಾತಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆಗಳಿವೆ.
ತಾವೇ ಖುದ್ದಾಗಿ ಇದರ ಅನುಭವ ಪಡೆದಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇಂತಹ ಪ್ರದೇಶಗಳನ್ನು ಗುರುತಿಸಿ, ಸೂಕ್ತ ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಲ್ಲುವಂತಿರಬಾರದು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ. ಲಿಂಗಣ್ಣ, ಕರ್ನಾಟಕ ನೀರಾವರಿ ನಿಗಮ ತುಂಗಾ ಮೇಲ್ದಂಡೆ ಯೋಜನಾ ವಲಯದ ಮುಖ್ಯ ಇಂಜಿನಿಯರ್ ಯತೀಶ್‍ಚಂದ್ರ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸೇರಿದಂತೆ ಬೆಸ್ಕಾಂ, ಕೆಪಿಟಿಸಿಎಲ್, ಲೋಕೋಪಯೋಗಿ ಇಲಾಖೆಗಳ ಇಂಜಿನಿಯರ್‍ಗಳು, ತಹಸಿಲ್ದಾರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಸತಿ ಯೋಜನೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.
ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
1. ಸಮತೋಲಿತ ಆಹಾರ (Balanced Diet): ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶವಿರುವ (fiber) ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳುಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ. ಕಾರ್ಬೋಹೈಡ್ರೇಟ್ ಹಾಗೂ ಎಣ್ಣೆಯಂಶವಿರುವ ಆಹಾರವನ್ನು ಕಡಿಮೆ ಮಾಡಿ.
2. ಸಿಹಿ ಪದಾರ್ಥಗಳ ನಿಯಂತ್ರಣ (Avoid Sweets): ಸಕ್ಕರೆ, ಬೆಲ್ಲ, ಬೇಕರಿ ತಿಂಡಿಗಳು, ಐಸ್ಕ್ರೀಮ್ ಮತ್ತು ಕೃತಕ ಸಕ್ಕರೆ ಇರುವ ತಂಪು ಪಾನೀಯಗಳ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ ಅಥವಾ ದೂರವಿಡಿ.
3. ದಿನನಿತ್ಯದ ವ್ಯಾಯಾಮ (Regular Exercise): ಪ್ರತಿದಿನ ಕನಿಷ್ಠ 30 ರಿಂದ 45 ನಿಮಿಷಗಳ ಕಾಲ ವೇಗದ ನಡಿಗೆ (brisk walking), ಸೈಕ್ಲಿಂಗ್, ಈಜು ಅಥವಾ ಯೋಗ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
4. ದೇಹದ ತೂಕದ ನಿರ್ವಹಣೆ (Weight Management): ಅತಿಯಾದ ದೇಹದ ತೂಕವು ಇನ್ಸುಲಿನ್ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ತೂಕವನ್ನು ಆರೋಗ್ಯಕರ ಮಿತಿಯಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ.
5. ನಿಯಮಿತ ರಕ್ತದ ಪರೀಕ್ಷೆ (Regular Blood Sugar Check): ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Fasting ಮತ್ತು Post Prandial) ಹಾಗೂ ಮೂರು ತಿಂಗಳ ಸರಾಸರಿ ತಿಳಿಸುವ HbA1c ಪರೀಕ್ಷೆಯನ್ನು ಮಾಡಿಸಿಕೊಳ್ಳಿ.
6. ಸಮಯಕ್ಕೆ ಸರಿಯಾಗಿ ಔಷಧಿ ಸೇವನೆ (Timely Medication): ವೈದ್ಯರು ಸೂಚಿಸಿದ ಮಾತ್ರೆಗಳನ್ನು ಅಥವಾ ಇನ್ಸುಲಿನ್ ಅನ್ನು ನಿಗದಿತ ಸಮಯಕ್ಕೆ ತೆಗೆದುಕೊಳ್ಳಿ. ಸ್ವಂತ ನಿರ್ಧಾರದಿಂದ ಔಷಧಿಯನ್ನು ನಿಲ್ಲಿಸಬೇಡಿ.
7. ಮಾನಸಿಕ ಒತ್ತಡದ ನಿರ್ವಹಣೆ (Stress Management): ಅತಿಯಾದ ಮಾನಸಿಕ ಒತ್ತಡವು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಹಾರ್ಮೋನ್ಗಳನ್ನು ಬಿಡುಗಡೆ ಮಾಡುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ (Meditation) ಅಥವಾ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ.
8. ಪೂರಕ ನೀರು ಕುಡಿಯುವುದು (Stay Hydrated): ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಇದು ದೇಹದಲ್ಲಿರುವ ಹೆಚ್ಚುವರಿ ಗ್ಲೂಕೋಸ್ ಮೂತ್ರದ ಮೂಲಕ ಹೊರಹೋಗಲು ಸಹಾಯ ಮಾಡುತ್ತದೆ.
9. ಉತ್ತಮ ನಿದ್ರೆ (Good Sleep): ಪ್ರತಿದಿನ ರಾತ್ರಿ 7 ರಿಂದ 8 ಗಂಟೆಗಳ ಕಾಲ ಶಾಂತಿಯುತವಾದ ನಿದ್ರೆ ಮಾಡುವುದು ದೇಹದ ಚಯಾಪಚಯ ಕ್ರಿಯೆ (Metabolism) ಮತ್ತು ಹಾರ್ಮೋನ್ಗಳ ಸಮತೋಲನಕ್ಕೆ ಬಹಳ ಮುಖ್ಯ.
10. ದುರಭ್ಯಾಸಗಳಿಂದ ದೂರವಿರಿ (Avoid Smoking and Alcohol): ಧೂಮಪಾನ ಮತ್ತು ಮದ್ಯಪಾನವು ಸಕ್ಕರೆ ಕಾಯಿಲೆಯ ತೊಂದರೆಗಳನ್ನು (ಹೃದಯ ಮತ್ತು ನರಗಳ ಸಮಸ್ಯೆ) ಮತ್ತಷ್ಟು ಹೆಚ್ಚು ಮಾಡುವುದರಿಂದ ಇವುಗಳಿಂದ ದೂರವಿರುವುದು ಒಳ್ಳೆಯದು.
ಗಮನಿಸಿ: ಈ ಮೇಲಿನ ಮಾಹಿತಿ ರೋಗದ ನಿರ್ವಹಣೆಗೆ ಸಾಮಾನ್ಯ ಮಾರ್ಗದರ್ಶನವಾಗಿದೆ. ಪ್ರತಿಯೊಬ್ಬರ ದೇಹ ಪ್ರಕೃತಿ ವಿಭಿನ್ನವಾಗಿರುವುದರಿಂದ, ನಿಮ್ಮ ವೈದ್ಯರ ವೈಯಕ್ತಿಕ ಸಲಹೆ ಮತ್ತು ಚಿಕಿತ್ಸೆಯ ಕ್ರಮವೇ ಅಂತಿಮ ಹಾಗೂ ಸುರಕ್ಷಿತ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುವಲ್ಲಿ ದೇಶದ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶಿಯ ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ರೈತರ ಆದಾಯವನ್ನು ಸುಧಾರಿಸಲು ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರ ಪುರಷ್ಕೃತ ಕೃಷಿಯೋನ್ನತಿ ಯೋಜನೆಯಡಿ ‘’ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು’’ (National Mission on Edible Oil – Oilseeds (NMEO-OS) ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.
ಎಣ್ಣೆಕಾಳು ಬೆಳೆಗಾರರು ಮತ್ತು ಮೌಲ್ಯ ಸರಪಳಿ ಪಾಲುದಾರರನ್ನು (Value Chain Partners) ಸಂಸ್ಕರಣಾದಾರರೊಂದಿಗೆ ಸಂಪರ್ಕಿಸಲು ಮತ್ತು ಅವರಿಗೆ ಮಾರುಕಟ್ಟೆ ಕಲ್ಪಿಸುವುದರೊಂದಿಗೆ ಉತ್ತಮ ಲಾಭವನ್ನು ಪಡೆಯುವಂತೆ ಖಾತ್ರಿಪಡಿಸುವುದು ಯೋಜನೆಯ ಗುರಿಗಳಲ್ಲಿ ಒಂದಾಗಿದೆ.
ಸದರಿ ಯೋಜನೆಯಡಿ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಲು ಹಾಗೂ ಶುದ್ಧ ಖಾದ್ಯ ತೈಲ ಉಪಯೋಗಿಸಲು ಅನುಕೂಲವಾಗುವಂತೆ ಪ್ರೇರೇಪಿಸಲು ಸೂಕ್ತವಾಗುವಂತೆ ಹಾಗೂ ಮೌಲ್ಯ ಸರಪಳಿಯನ್ನು ಉತ್ತೇಜಿಸಲು, ಸಂಸ್ಕರಣಾ ಘಟಕಗಳಿಗೆ ಅವಶ್ಯವಿರುವ ಯಂತ್ರೋಪಕರಣಗಳನ್ನು ಪಡೆಯಲು/ಪ್ರಾಥಮಿಕ ಮತ್ತು ದ್ವಿತೀಯ ಎಣ್ಣೆಕಾಳು ಕೊಯ್ಲೋತ್ತರ ಮೂಲ ಸೌಕರ್ಯ ಸೌಲಭ್ಯ ಪಡೆಯಲು ಗರಿಷ್ಠ ಯೋಜನಾ ವರದಿಯ ಶೇ.33 ರಷ್ಟು ಅಥವಾ ರೂ.9.99 ಲಕ್ಷಕ್ಕೆ ಮೀರದಂತೆ ಅನುದಾನವನ್ನು ನೀಡಲಾಗುವುದು. ಸದರಿ ಯೋಜನೆಯ ಘಟಕದಡಿ ಕಟ್ಟಡ ವೆಚ್ಚ ಮತ್ತು ಭೂಮಿ ಬಾಡಿಗೆಯನ್ನು ಪರಿಗಣಿಸಲಾಗುವುದಿಲ್ಲ.
ಸದರಿ ಯೋಜನೆಯಡಿ ಸೌಲಭ್ಯ ಪಡೆಯಲು ಸರ್ಕಾರ / ಸರ್ಕಾರೇತರ ಸಂಸ್ಥೆಗಳು, FPOs ಗಳು ಜುಲೈ 04 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಯೋಜನೆಯ ಮಾರ್ಗಸೂಚಿಯನ್ವಯ ಜಿಲ್ಲಾ ಕಾರ್ಯಕಾರಿ ಸಮಿತಿಯಲ್ಲಿ ಫಲಾನುಭವಿ ಆಯ್ಕೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಉಪ ಕೃಷಿ ನಿರ್ದೇಶಕರ ಕಛೇರಿ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಆಶ್ರಯ ಯೋಜನೆ – ಆವಧಿ ವಿಸ್ತರಣೆ
-
ದಿನದ ಸುದ್ದಿ4 days agoಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ
-
ಅಂಕಣ4 days agoಕವಿತೆ | ದೇವರ ಹೂವು
-
ದಿನದ ಸುದ್ದಿ6 days agoಗರಿಕೆ ಹುಲ್ಲಿನ ಜ್ಯೂಸ್ನಲ್ಲಿದೆ ರಕ್ತದ ಕ್ಯಾನ್ಸರ್ ಗುಣಪಡಿಸುವ ಶಕ್ತಿ
-
ದಿನದ ಸುದ್ದಿ3 days agoರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
-
ದಿನದ ಸುದ್ದಿ3 days agoಉಚಿತ ಕೋಳಿ ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಕೃಷಿ ಪಂಡಿತ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ: ಅರ್ಜಿ ಆಹ್ವಾನ

