ರಾಜಕೀಯ
ನಗರ ಸಭೆ ಚುನಾವಣೆ |ಕಾಂಗ್ರೆಸ್ ಟಿಕೆಟ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!

ಸುದ್ದಿದಿನ, ಚಿತ್ರದುರ್ಗ: ನಗರಸಭೆ ಚುನಾವಣೆಗೆ ಇನ್ನು ಕೇವಲ ಇಪ್ಪತ್ತು ದಿನಗಳಿರುವುದರಿಂದ ಕಾಂಗ್ರೆಸ್ ಪಕ್ಷದ ಟಿಕೇಟ್‍ಗೆ ಬೇಡಿಕೆ ಹೆಚ್ಚಾಗಿ ಟಿಕೇಟ್‍ಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ದಿನದಿಂದ ದಿನೇ ಅಧಿಕವಾಗತೊಡಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪರಿಶಿಷ್ಟ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಂಜುನಾಥ್ ಹದಿನಾರನೇ ವಾರ್ಡ್‍ನಿಂದ ನಗರಸಭೆ ಚುನಾವಣೆಗೆ ಸ್ಪರ್ಧೆ ಬಯಸಿ ಕಾಂಗ್ರೆಸ್ ಟಿಕೇಟ್‍ಗೆ ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್‍ಅಲ್ಲಾಭಕ್ಷ್‍ರವರಿಗೆ ಅರ್ಜಿ ಸಲ್ಲಿಸಿದರು.
ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪನವರ ಪರ ಸಾಕಷ್ಟು ಪ್ರಚಾರ ನಡೆಸಿದರಲ್ಲದೆ ಇಂದಿಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹದಿನೇಳನೇ ವಾರ್ಡ್‍ನಿಂದ ತಿಪ್ಪೇಸ್ವಾಮಿ ಕಾಂಗ್ರೆಸ್ ಟಿಕೇಟ್‍ಗಾಗಿ ಅರ್ಜಿ ಸಲ್ಲಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಬಾಬ್‍ಜಾನ್, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ನಾಗರಾಜ್‍ರೆಡ್ಡಿ, ರಹಮತ್‍ವುಲ್ಲಾ, ಅಂಜಿನಪ್ಪ, ಎಂ.ಮೈಲಾರಪ್ಪ, ಬಸವರಾಜ್, ಮಂಜುನಾಥ್, ಡಿ.ಕುಮಾರ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಅಂಕಣ
ಸಿದ್ಧಾಂತ ಮತ್ತು ಪತ್ರಿಕೋದ್ಯಮ

- ಹರ್ಷಕುಮಾರ್ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್
ಇದು ಸುಮಾರು 2002-03ರ ಸಂದರ್ಭ. ಶಿವಮೊಗ್ಗದಲ್ಲಿ ನಾವು ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಕಾಲ. ಒಬ್ಬ ಪತ್ರಕರ್ತ ಮಿತ್ರರೊಂದಿಗೆ ಹೀಗೇ ಚರ್ಚೆ ನಡೆಯುತ್ತಿತ್ತು. ಅವರು ಪತ್ರಿಕೋದ್ಯಮದ ನ್ಯೂಟ್ರಾಲಿಟಿ ಕುರಿತು ಮಾತಾಡುತ್ತಾ, ʼನಾವು ಪತ್ರಕರ್ತರು ನಿಮ್ಮ ರೀತಿ ಯೋಚನೆ ಮಾಡೋದಕ್ಕೆ ಆಗಲ್ಲ. ನಾವು ಯಾವತ್ತೂ ಯಾವುದೇ ಸಿದ್ಧಾಂತಕ್ಕೆ ವಾಲಿಕೊಳ್ಳದೇ ತಟಸ್ಥತೆ ಕಾಪಾಡಬೇಕಾಗುತ್ತದೆʼ ಎಂದು ಹೇಳಿದರು. ʼಅವರ ಜೊತೆ ನಾನು ವಾದಿಸಿದೆ.
ಸರ್, ಸುಳ್ಳನ್ನೇ ಬಂಡವಾಳ ಮಾಡಿಕೊಂಡ ಸಿದ್ಧಾಂತಗಳು ರಾರಾಜಿಸುವಾಗ ಸತ್ಯವನ್ನು ಹುಡುಕಲು ಸಹ ಸಿದ್ಧಾಂತದ ಸಹಾಯ ಬೇಕಾಗುತ್ತದೆ. ಯಾವ ವ್ಯಕ್ತಿಯೂ ಸಿದ್ಧಾಂತದ ಹೊರಗಾಗಿ ಇರಲು ಸಾಧ್ಯವಿಲ್ಲ. ನನಗೆ ಸಿದ್ದಾಂತವೇ ಇಲ್ಲ ಎನ್ನುವ ವ್ಯಕ್ತಿಯನ್ನು ಕೂಡಾ ಅವನಿಗೆ ತಿಳಿದೋ ತಿಳಿಯದೆಯೋ ಒಂದಲ್ಲಾ ಒಂದು ಸಿದ್ದಾಂತ ಇಲ್ಲವೇ ಹಲವು ಸಿದ್ಧಾಂತಗಳು ನಿರ್ದೇಶಿಸುತ್ತಿರುತ್ತವಲ್ಲ.. ʼ ಎಂದ ನನ್ನ ಮಾತಿಗೆ ನಮಗೆ ಪತ್ರಕರ್ತರಿಗೆ ಹಾಗೆ ಯೋಚಿಸಲು ಬರುವುದಿಲ್ಲ. ನೀವು ಎಡ ಪಂಥ ಅಂತೀರಿ, ಅವರು ಬಲಪಂಥ ಅಂತಾರೆ, ನಾವು ಇವೆರಡರ ನಡುವೆ ಸತ್ಯ ಹುಡುಕ್ತೀವಿʼ ಎಂದೆಲ್ಲಾ ಹೇಳಿದರು. ಕೊನೆಗೆ ಯಾರೂ ರಾಜಿಯಾಗಲಿಲ್ಲ.
ಇದಾಗಿ ಹದಿನೈದು ವರ್ಷಗಳ ನಂತರ, 2019ರಲ್ಲಿ ಅದೇ ಪತ್ರಕರ್ತ ಸ್ನೇಹಿತರು ನಮ್ಮ ಜೊತೆ ಕೆಲಸ ಮಾಡುತ್ತಿದ್ದರು. ಅವರು ನರೇಂದ್ರ ಮೋದಿ ಸರ್ಕಾರದ ಆರ್ಥಿಕ ವಂಚನೆಗಳನ್ನು ಅದ್ಭುತ ರೀತಿಯಲ್ಲಿ ಅಂಕಿಅಂಶಗಳ ಸಮೇತ ಬಯಲು ಮಾಡುತ್ತಿದ್ದುದು ಕಂಡು ನನಗೆ ಅಚ್ಚರಿ ಮತ್ತು ಸಂತೋಷವಾಗಿತ್ತು. ಅಂದು ಅವರು ನಿಜಕ್ಕೂ ಸತ್ಯದ ಪರವಾಗಿದ್ದರು. ಆದರೆ ಅವರ ಬರೆಹಗಳನ್ನು ಯಾರಾದರೂ ಬಲಪಂಥೀಯರು ಓದಿದರೆ ಅವರಿಗೆ ಖಂಡಿತಾ ಇವರು ʼಎಡಪಂಥೀಯ ಸಿದ್ಧಾಂತಿʼ, ʼನಗರ ನಕ್ಸಲ್ʼ ಎಂದೆಲ್ಲಾ ಸುಲಭವಾಗಿ ಹಣೆಪಟ್ಟಿ ಕಟ್ಟಬಹುದಿತ್ತು. ಆದರೆ ಆ ಪತ್ರಕರ್ತ ಸ್ನೇಹಿತರು ನಿಜಕ್ಕೂ ಈ ದೇಶದ ಭವಿಷ್ಯದ ಬಗ್ಗೆ ತುಂಬಾ ಆತಂಕಗೊಂಡು, ಕಾಳಜಿಯಿಂದ ಕೆಲಸ ಮಾಡುತ್ತಿದ್ದರು. ಕೊನೆಗೆ ಅವರಿಗೂ ಸಹ ಅವರು ಹಿಂದೆ ಹೇಳಿದ್ದ ರೀತಿಯಲ್ಲಿ ತಟಸ್ಥವಾಗಿ ಪತ್ರಿಕೋದ್ಯಮ ನಡೆಸುವುದು ಸಾಧ್ಯವಿಲ್ಲ ಎಂಬ ಅರಿವಾಗಿರಬಹುದು ಎಂದುಕೊಂಡೆ. ಹೌದು ಪತ್ರಕತ್ರರಾದವರು ಮಾಡಲು ಇರುವ ಬಹಳ ಕೆಲಸಗಳ ನಡುವೆಯೂ ಅವರು ಅದ್ಯತೆಯನ್ನು ಗುರುತಿಸಿಕೊಂಡಿದ್ದರು.
ಪತ್ರಿಕೋದ್ಯಮದ ಬಗ್ಗೆ ಮಾತಾಡುವಾಗ ನಾವು ಒಂದು ಪ್ರಾಥಮಿಕ ಸಂಗತಿಯನ್ನು ತಿಳಿದುಕೊಳ್ಳಬೇಕು. ನಮ್ಮ ದೇಶದಲ್ಲಿ ಪತ್ರಿಕೋದ್ಯಮ ಆರಂಭವಾದ ಸಂದರ್ಭದಲ್ಲಿ ಯಾವೆಲ್ಲಾ ಭಾರತೀಯರು ಪತ್ರಿಕೆಗಳನ್ನು ಹೊರತರುತ್ತಿದ್ದರೋ ಅವರೆಲ್ಲರೂ ಕಟು ಸಿದ್ಧಾಂತಿಗಳಾಗಿದ್ದರು. ಸಾಮ್ರಾಜ್ಯವಾದದ ವಿರುದ್ಧದ ಸಿದ್ದಾಂತ ಅವರೆಲ್ಲರನ್ನು ಮುನ್ನಡೆಸುತ್ತಿತ್ತು. ಬಹುತೇಕ ಅವರೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರು ಇಲ್ಲವೇ ಸ್ವಾಭಿಮಾನ ಚಳವಳಿಯ ಹೋರಾಟಗಾರರು, ನಾಯಕರು ಆಗಿದ್ದರು. ಅಂತಹ ಸ್ಪಷ್ಟ ಸೈದ್ಧಾಂತಿಕ ಬುನಾದಿಯಿಟ್ಟುಕೊಂಡು ಅವರೆಲ್ಲಾ ಬ್ರಿಟಿಷರ ವಿರುದ್ಧ ಪತ್ರಿಕೋದ್ಯಮ ನಡೆಸದಿದ್ದರೆ ಈ ದೇಶದ ಪತ್ರಿಕೋದ್ಯಮದ ಇತಿಹಾಸ ಅತ್ಯಂತ ಟೊಳ್ಳಾದ, ಬೂಸಾ ಇತಿಹಾಸವಾಗುತ್ತಿತ್ತು.
ಕೆಲ ಬ್ರಿಟಿಷ್ ಪತ್ರಕರ್ತರು ಹೇಗೆ ಬ್ರಿಟಿಷ್ ಅಧಿಕಾರಿಗಳ ಬೆಡ್ ರೂಮ್ ಸ್ಟೋರಿಗಳನ್ನು ಚಪ್ಪರಿಸಿಕೊಂಡು ಅದನ್ನೇ ಪತ್ರಿಕೋದ್ಯಮ ಎಂದು ಬೀಗುತ್ತಿದ್ದರೋ ಅಷ್ಟರಲ್ಲೇ ಭಾರತೀಯ ಪತ್ರಿಕೋದ್ಯಮ ಉಳಿದುಬಿಡುತ್ತಿತ್ತು. ಆದರೆ ಹೀಗೆ ಆಗಲು ಬಿಡದೇ ಉದಾತ್ತ ಧ್ಯೇಯಗಳ ಮೂಲಕ ದೇಶದ ಪತ್ರಿಕೋದ್ಯಮ ಬೆಳೆಸಿದ 19ನೆಯ ಶತಮಾನದ ಅಂತಹ ಧೀಮಂತ ಪತ್ರಕರ್ತರು ಹಲವರು. ಸುರೇಂದ್ರ ನಾಥ್ ಬ್ಯಾನರ್ಜಿ (ಬೆಂಗಾಲಿ ಪತ್ರಿಕೆ- 1879) ಪತ್ರಕರ್ತರಾಗಿ ಕೆಲಸ ಮಾಡುತ್ತಲೇ ಸತ್ಯ ಹೇಳಿದ ಕಾರಣಕ್ಕೆ ಬ್ರಿಟಿಷ್ ಸರ್ಕಾರ ಅವರನ್ನು ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯ ಅಡಿ ಜೈಲಿಗಟ್ಟಿತ್ತು. ಸಂವಾದ ಕೌಮುದಿ ಎಂಬ ಪತ್ರಿಕೆ ನಡೆಸುತ್ತಿದ್ದ ರಾಜಾರಾಮ ಮೋಹನ್ ರಾಯ್ ಒಬ್ಬ ಸ್ಪಷ್ಟ ವಿಚಾರವಾದಿಯಾಗಿದ್ದರು.
ಅವರು ಈ ದೇಶದ ಅನಿಷ್ಟಗಳ ಕುರಿತೇ ತಮ್ಮ ಪತ್ರಿಕೆಯಲ್ಲಿ ಬರೆಯುತ್ತಾ ಹೋದರು. ಇದೇ ಕೆಲಸವನ್ನು ಮಹಾರಾಷ್ಟ್ರದಲ್ಲಿ ಮರಾಠಿ ಪತ್ರಿಕೆ ಆರಂಭಿಸಿದ ಜಂಬೇಕರ್ ಮಾಡಿದರು, ಅವರು ತಮ್ಮ ದರ್ಪಣ್ ಪತ್ರಿಕೆಯ ಮೂಲಕ ಸಾಮಾಜಿಕ ಅನಿಷ್ಟಗಳು ಕುರಿತು ಜಾಗೃತಿ ಮೂಡಿಸಿದರು- ಇವರನ್ನು ಮರಾಠಿ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಯಲಾಗುತ್ತದೆ. ಬಂಗಾಳದಲ್ಲಿ ಹರೀಶ್ಚಂದ್ರ ರಾಯ್ ಎಂಬುವವರು ಬಂಗದರ್ಶನ್ ಎಂಬ ಪತ್ರಿಕೆ ತಂದರು; ಗುಜರಾತಿಯಲ್ಲಿ ʼಬಾಂಬೆ ಸಮಾಚಾರ್ʼ ಪತ್ರಿಕೆ ಆರಂಭಿಸಿದ ಫರ್ದುನ್ಜಿ ಮರ್ಜ್ ಬಾನ್ ಎಂಬುವವರು ಸಹ ಪತ್ರಿಕೆಯ ಮೂಲಕ ಸಮಾಜ ಸುಧಾರಣೆಗೆ ಒತ್ತು ಕೊಟ್ಟರು. ಇನ್ನು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಬಾಲಗಂಗಾಧರ ತಿಲಕ್ ಕೇಸರಿ ಮತ್ತು ಮರಾಟಾ ಪತ್ರಿಕೆ ಹೊರಡಿಸುತ್ತಿದ್ದರು, ಗಾಂದೀಜಿಯವರು ಆಫ್ರಿಕಾದಲ್ಲಿದ್ದಾಗಲೇ ಇಂಡಿಯನ್ ಒಪಿನಿಯನ್ ಪತ್ರಿಕೆ ನಡೆಸುತ್ತಿದ್ದರೆ, ಭಾರತಕ್ಕೆ ಬಂದ ಮೇಲೆ ಯಂಗ್ ಇಂಡಿಯಾ ಮತ್ತು ಹರಿಜನ್ ಎಂಬ ಪತ್ರಿಕೆಗಳನ್ನು ಹೊರತಂದರು,
ಸುಭಾಷ್ ಚಂದ್ರ ಬೋಸ್ ಅವರು ಸ್ವರಾಜ್ ಪತ್ರಿಕೆಯ ಸಂಪಾದಕರಾಗಿದ್ದರು, ಲಾಲಾ ಲಜಪತ್ ರಾಯ್ ಅವರು ದ ಟ್ರಿಬ್ಯೂನ್ ಎಂಬ ಇಂಗ್ಲಿಷ್ ಪತ್ರಿಕೆ ತಂದರು, ಜೊತೆಗೆ ವಂದೆ ಮಾತರಂ ಎಂಬ ಉರ್ದು ಪತ್ರಿಕೆಯನ್ನೂ ಪ್ರಕಟಿಸುತ್ತಿದ್ದರು- ಇವುಗಳ ಮೂಲಕ ಸ್ವದೇಶಿ ಚಿಂತನೆಯನ್ನು ಅಥವಾ ಸಿದ್ಧಾಂತವನ್ನು ಪ್ರಚುರಪಡಿಸಿದರು, ಹೋಂರೂಲ್ ಚಳವಳಿಯ ಮುಂದಾಳು ಅನಿಬೆಸೆಂಟ್ ಅವರು ನ್ಯೂ ಇಂಡಿಯಾ ಪತ್ರಿಕೆ ತಂದರು, ಇನ್ನು ಮದನ್ ಮೋಹನ್ ಮಾಳವೀಯ ಅವರು ಮೋತಿಲಾಲ್ ನೆಹರೂ ಜೊತೆ ಸೇರಿಕೊಂಡು ದ ಲೀಡರ್ ಎಂಬ ಪತ್ರಿಕೆ ತಂದರೆ, ನಂತರ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯನ್ನೂ ಪುನರುಜ್ಜೀವಗೊಳಿಸಿದರು. ಇನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ʼಅಸ್ಪೃಶ್ಯರಿಗೆ ಈ ದೇಶದಲ್ಲಿ ಪತ್ರಿಕೆಯಿಲ್ಲʼ ಎಂದು ಘೋಷಿಸಿ ಮೊದಲಿಗೆ ಶಾಹು ಮಹಾರಾಜರ ಬೆಂಬಲದಿಂದ ಮೂಕನಾಯಕ ಪತ್ರಿಕೆ (1920) ತಂದರು; ನಂತರ ಬಹಿಷ್ಕೃತ ಭಾರತ (1927), ನಂತರ ಸಮತಾ (1928), ನಂತರ ಜನತಾ (1930) ಹಾಗೂ ಪ್ರಬುದ್ಧ ಭಾರತ (1956) ಪತ್ರಿಕೆಗಳನ್ನು ಹೊರಡಿಸಿ ನಿರಂತರವಾಗಿ ಅವುಗಳಲ್ಲಿ ಬರೆಯುತ್ತಾ ತಾವೊಬ್ಬ ಧೀಮಂತ ಪತ್ರಕರ್ತ ಎಂಬುದನ್ನೂ ನಿರೂಪಿಸಿದ್ದರು.
ಇವರನ್ನೆಲ್ಲಾ ಹೊರಗಿಟ್ಟು ಕೇವಲ ಬ್ರಿಟಿಷರು ತಂದ ಬೆಂಗಾಲ್ ಗೆಜೆಟ್ ನಂತವುಗಳನ್ನು ಮಾತ್ರವೇ ಭಾರತದ ಪತ್ರಿಕೋದ್ಯಮದ ಇತಿಹಾಸ ಎಂದು ಹೇಳಲು ಬರುತ್ತದೆಯೇ? ಈ ದೇಶದ ಪತ್ರಿಕೋದ್ಯಮದ ಇತಿಹಾಸದ ಸೈದ್ಧಾಂತಿಕ ಅಡಿಪಾಯ ಅತ್ಯಂತ ಭದ್ರವಾಗಿತ್ತು ಎಂಬುದಕ್ಕೆ ಇವೆಲ್ಲಾ ಸಾಕ್ಷಿಯಲ್ಲವೆ? ಅಲ್ಲಿ ಎಡಬಿಡಂಗಿತನಕ್ಕೆ, ಸೊ ಕಾಲ್ಡ್ ತಟಸ್ಥತೆಗೆ ಯಾವುದೇ ಅವಕಾಶವಿರಲಿಲ್ಲ. ಈ ದೇಶವನ್ನು ಕಾಡುತ್ತಿದ್ದ ಸಾಮ್ರಾಜ್ಯಶಾಹಿ ಮತ್ತು ಬ್ರಾಹ್ಮಣಶಾಹಿ ಶಕ್ತಿಗಳನ್ನು ನೇರವಾಗಿ ಎದುರಿಸಿಯೇ ಭಾರತದ ಪತ್ರಿಕೋದ್ಯಮ ನಡೆದುಕೊಂಡುಬಂದಿದೆ ಎಂಬುದಕ್ಕೆ ಮೇಲಿನ ಉದಾಹರಣೆಗಳೇ ಸಾಕ್ಷಿ.
ಸ್ವಾತಂತ್ರ್ಯಾನಂತರದಲ್ಲಿ, ನಮ್ಮ ಕರ್ನಾಟಕದಲ್ಲೇ ನಾವು ಯಾರನ್ನೆಲ್ಲಾ ಇಂದು ಧೀಮಂತ ಪತ್ರಕರ್ತರೆಂದು ಪರಿಗಣಿಸಿದ್ದೇವೆಯೋ, ಯಾರನ್ನೆಲ್ಲಾ ಆದರ್ಶ ಎಂದು ನೋಡುತ್ತೇವೆಯೋ ಅವರೆಲ್ಲರೂ ಅತ್ಯಂತ ಸ್ಪಷ್ಟ ಮತ್ತು ದೃಢವಾದ ಸಿದ್ಧಾಂತಿಗಳೇ ಆಗಿದ್ದರು ಎಂಬುದನ್ನು ಮರೆಯಬಾರದು. ಕರ್ನಾಟಕದ ಪತ್ರಿಕೋದ್ಯಮಕ್ಕೇ ಹೊಸ ಮೆರಗು ತಂದು ಸಂಚಲನ ಮೂಡಿಸಿದ ಪಿ. ಲಂಕೇಶ್ ಅವರು ಕಡಿಮೆ ಸಿದ್ಧಾಂತಿಯೇ? ಸ್ಪಷ್ಟ ಸೈದ್ಧಾಂತಿಕ ತಳಹದಿಯ ಪತ್ರಿಕೋದ್ಯಮವೇ ಅವರ ಆಕ್ಟಿವಿಸಂ ಆಗಿತ್ತು ಮಾತ್ರವಲ್ಲ ಪತ್ರಿಕೋದ್ಯಮದ ಮೂಲಕ ಸಾಮಾಜಿಕ ರಾಜಕೀಯ ಬದಲಾವಣೆಯನ್ನೂ ಮಾಡಲು ಸಾಧ್ಯ ಎಂದು ಪಿ ಲಂಕೇಶ್ ಒಂದು ಮಾದರಿಯನ್ನೇ ಸೃಷ್ಟಿಸಿದರು. ಅದು ಸಾಧ್ಯವಾಗಿದ್ದೇ ಅವರ ಕಟಿಬದ್ಧ ಸೈದ್ಧಾಂತಿಕ ನಿಲುವಿನಿಂದ.
ನಾಡು ಕಂಡ ಮತ್ತೊಬ್ಬ ಧೀಮಂತ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿ ಕೂಡಾ ಗಟ್ಟಿ ತಾತ್ವಿಕ ನಿಲುವುಗಳ ಮೂಲಕ ನಾಡಿನ ಜನರನ್ನು ತಲುಪಿದರು. ಇನ್ನು 70-80ರ ದಶಕಗಳಲ್ಲಿ ಭಾರತೀಯ ಪತ್ರಿಕೋದ್ಯಮದ ಧೀಮಂತ ಪರಂಪರೆಯಲ್ಲಿ ಸಾಗಿದ ಹಲವಾರು ಕನ್ನಡ ಪತ್ರಿಕೆಗಳಿದ್ದವು- ಸುದ್ದಿ ಸಂಗಾತಿ, ಶೂದ್ರ, ಪಂಚಮ, ಸಮುದಾಯ, ಸಂಕ್ರಮಣ ಮುಂತಾದ ನಿಯತಕಾಲಿಕೆಗಳು ಕನ್ನಡಿಗರ ಅರಿವಿನ ವಿಸ್ತರಣೆಯಲ್ಲಿ ಕಡಿಮೆ ಕೆಲಸ ಮಾಡಿವೆಯೇ? ಹಾಗಾದರೆ ಇವೆಲ್ಲವೂ ಖಚಿತ ಸೈದ್ದಾಂತಿಕತೆಯಿಂದಲೇ ನಡೆಯಲಿಲ್ಲವೇ?
ಇನ್ನು ಕಳೆದ ಕೆಲವು ದಶಕಗಳಲ್ಲಿ, ಅಗ್ನಿ, ಹಾಯ್ ಬೆಂಗಳೂರು, ಗೌರಿ ಲಂಕೇಶ್ ವಾರಪತ್ರಿಗಳೂ ತಮ್ಮ ಛಾಪು ಮೂಡಿಸಿದವು. ಪಿ ಲಂಕೇಶರ ಸ್ಪೂರ್ತಿಯಲ್ಲೇ ದೊಡ್ಡ ದೊಡ್ಡ ಭ್ರಷ್ಟಾಚಾರ ಪ್ರಕರಣಗಳನ್ನು ಅನಾವರಣಗೊಳಿಸಿದವು. ಇದ್ದುದರಲ್ಲಿ ರವಿ ಬೆಳಗರೆ ಎಡಬಿಡಂಗಿಯಾಗಿ ಕ್ರೈಂ, ಸೆಕ್ಸ್ ಗಳನ್ನ ಅಸ್ತ್ರವಾಗಿಸಿಕೊಂಡು ಟ್ಯಾಬ್ಲಾಯ್ಡ್ ಪತ್ರಿಕೋದ್ಯಮವನ್ನು ಹಳ್ಳ ಹಿಡಿಸಿದರೂ ಹಾಯ್ ಬೆಂಗಳೂರು ಸಹ ಅನೇಕ ಬ್ರಷ್ಟಾಚಾರ ಹಗರಣಗಳನ್ನು ಬಯಲು ಮಾಡಿದ್ದು ಸತ್ಯ.
ಯಾವನ್ನು ನಾವು ದಿನಪತ್ರಿಕೆಗಳು ಅಥವಾ ವೃತ್ತ ಪತ್ರಿಕೆಗಳು ಎನ್ನುತ್ತೇವೆಯೋ ಇವುಗಳ ಆದ್ಯತೆ ದಿನನಿತ್ಯದ ಸುದ್ದಿಗಳನ್ನು ಜನರಿಗೆ ತಲುಪುವುದು ಮಾತ್ರವಾಗಿದ್ದ ಕಾರಣ ಬಹಳ ಪತ್ರಿಕೆಗಳಲ್ಲಿ ಸೈದ್ಧಾಂತಿಕತೆ ದೊಡ್ಡ ವಿಷಯವಾಗಲಿಲ್ಲ. ಆದರೆ ಅಂತಹ ಕಡೆಗಳಲ್ಲಿ ಸಹ ದೊಡ್ಡ ದೊಡ್ಡ ಸಿದ್ಧಾಂತಿಗಳು ಹತ್ತಾರು ವರ್ಷಗಳ ಕಾಲ ಕೆಲಸ ಮಾಡಿದ್ದರು ಮತ್ತು ತಮ್ಮ ಖಚಿತ ಅಭಿಪ್ರಾಯಗಳನ್ನು ಆ ವೇದಿಕೆಗಳ ಮೂಲಕ ಜನರಿಗೆ ತಲುಪಿಸುತ್ತಾ ಬಂದಿದ್ದರೆಂಬುದನ್ನು ನಾವು ಮರೆಯಕೂಡದು.
ಈಗ ಹೇಳಿ, ನಮ್ಮ ಪತ್ರಿಕೋದ್ಯಮಕ್ಕೆ ಸಿದ್ಧಾಂತ ಬೇಡವೆ, ಪತ್ರಕರ್ತರಾಗಿರುವವರು ಸೈದ್ಧಾಂತಿಕ ಸ್ಪಷ್ಟತೆ ಹೊಂದಿರಬಾರದೆ? ಆಕ್ಟಿವಿಸ್ಟುಗಳು ಪತ್ರಕರ್ತರಾಗುವುದು ಅಪರಾಧವೆ? ಪತ್ರಿಕೋದ್ಯಮ ಆಕ್ಟಿವಿಸಂಗೆ ಪೂರಕವಾಗಿರಬಾರದೆ? ಇಂದು ಬ್ರಾಹ್ಮಣ್ಯದ ದಿಗ್ವಿಜಯ ಮತ್ತೊಮ್ಮೆ ನಿಜವಾಗುವ ಕರಾಳ ಛಾಯೆ ಇಡೀ ದೇಶವನ್ನು ಆವರಿಸಿಕೊಂಡಿರುವಾಗ, ಬಾಬಾಸಾಹೇಬರು ಎಚ್ಚರಿಸಿದ್ದ ಆ ʼಪ್ರತಿಕ್ರಾಂತಿʼ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡ ಎಲ್ಲವನ್ನೂ ನೊಣೆಯುತ್ತಿರುವಾಗ, ಅಪರಾಧವೇ ಅಧಿಕಾರವಾಗಿ ದೇಶದ ಪ್ರಮುಖ ಸಂಸ್ಥೆಗಳೆಲ್ಲವನ್ನೂ ನುಂಗಿ ನೀರುಕುಡಿದು ತಮ್ಮ ಅಂಕೆಯಲ್ಲಿ ತಂದುಕೊಂಡು ಇಡೀ ದೇಶದ ಜನರಿಗೆ ಕರಾಳತೆ ದರ್ಶನ ಮಾಡುತ್ತಾ ಭ್ರಷ್ಟಾಚಾರದ ವ್ಯಾಖ್ಯಾನವನ್ನೇ ತಿರುಗುಮರುಗು ಮಾಡುತ್ತಿರುವಾಗ ಸೊ ಕಾಲ್ಡ್ ತಟಸ್ಥತೆಯ ಬದನೇಕಾಯಿಯನ್ನು ನೆಚ್ಚಿಕೊಳ್ಳದೇ ನಿರ್ಧಾರಿತ ಜನಾಂದೋಲನಗಳಿಗೆ ಪೂರಕವಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತರಾದವರು ಜೊತೆಗೂಡುವುದು ಬೇಡವೇ?
‘ಬೇಡ’ ಎಂಬ ಅಭಿಪ್ರಾಯ ನಿಮ್ಮದಾಗಿದ್ದರೆ ನಿಮ್ಮ ಬಳಿ ಹೇಳಲು ನನಗೆ ಏನೂ ಉಳಿದಿಲ್ಲ. ನೀವು ನಿಮ್ಮದೇ ಸುಖಾಸನದಲ್ಲಿ ನೆಮ್ಮದಿಯಾಗಿ ಪವಡಿಸಬಹುದು, ನನಗೇನೂ ಅಭ್ಯಂತರವಿಲ್ಲ. (ಬರಹ- ಹರ್ಷಕುಮಾರ್ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಆರಂಭಿಸಿ : ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯ

ಸುದ್ದಿದಿನ,ದಾವಣಗೆರೆ: ಕ್ಷೇತ್ರದ ವ್ಯಾಪ್ತಿಯ ಕಲ್ಪನಹಳ್ಳಿ ಬಳಿ ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಸ್ಥಾಪಿಸಲು ಭೂಮಿ ಖರೀದಿಸಿದ್ದು, ಈ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.
ವಿಧಾನಸಭೆಯಲ್ಲಿ ಬುಧವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿವಮೊಗ್ಗ ಹಾಲು ಒಕ್ಕೂಟದಿಂದ ಬೇರ್ಪಡಿಸಿ ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಒಳಗೊಂಡ ಮೆಗಾ ಡೈರಿ ಆರಂಭಿಸಲು ನನ್ನ ಕ್ಷೇತ್ರದ ವ್ಯಾಪ್ತಿಯ ಕಲ್ಪನಹಳ್ಳಿಯಲ್ಲಿ ಭೂಮಿ ಖರೀದಿಸಿದ್ದೇವೆ. ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಿ ಡೈರಿ ಆರಂಭಿಸಿದರೆ ಈ ಭಾಗದ ರೈತರು ಆರ್ಥಿಕವಾಗಿ ಸಬಲರಾಗಲಿದ್ದಾರೆ ಎಂದು ಸದನದ ಗಮನ ಸೆಳೆದರು.
ಹೈನುಗಾರಿಕೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಸಬ್ಸಿಡಿ ಕೊಡುವುದನ್ನು ಶೇ.75ರಷ್ಟು ಹೆಚ್ಚಳ ಮಾಡಿದರೆ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿ ಉತ್ತಮ ಬದುಕು ಕಟ್ಟಿಕೊಳ್ಳುತ್ತಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದರು.
ಮಧ್ಯ ಕರ್ನಾಟಕದ ಕೇಂದ್ರ ಬಿಂದು, ಹಿಂದುಳಿದ ಜಿಲ್ಲೆ ದಾವಣಗೆರೆ. ಅದರಲ್ಲೂ ಅತೀ ಹಿಂದುಳಿದ ಮೀಸಲು ಕ್ಷೇತ್ರ ಮಾಯಕೊಂಡ. ಸಿರಿಗೆರೆ ತರಳಬಾಳು ಜಗದ್ಗುರುಗಳ ಹೋರಾಟದ ಫಲವಾಗಿ ನನ್ನ ಕ್ಷೇತ್ರದಲ್ಲಿ 22 ಕೆರೆಗಳ ಯೋಜನೆ ಜಾರಿಗೊಂಡು ಎಲ್ ಅಂಡ್ ಟಿ ಕಂಪನಿ ಕಾಮಗಾರಿ ನಡೆಸಿತ್ತು. ಕಳಪೆ ಕಾಮಗಾರಿಯಿಂದ 100 ಹಳ್ಳಿಗಳಿಗೆ ಕುಡಿಯುವ ನೀರು, ನೀರಾವರಿ ಕಲ್ಪಿಸಬೇಕೆಂಬ ಉದ್ದೇಶ ಈಡೇರಿಲ್ಲ. ಪುನಃ ಹೊಸ ಪೈಪ್‌ಲೈನ್ ಕಾಮಗಾರಿಗೆ ಹಣ ನೀಡಿ ಕಾಮಗಾರಿ ಆರಂಭಿಸುವAತೆ ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಕೂಡಲೇ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ನನ್ನ ಕ್ಷೇತ್ರದಲ್ಲಿ ಹೆಚ್ಚು ಗುಡ್ಡಗಾಡು ಪ್ರದೇಶ ಹೊಂದಿದ್ದು, ಈ ಪ್ರದೇಶಗಳಲ್ಲಿ ಅತೀ ಹೆಚ್ಚು ಕೆರೆಗಳನ್ನು ನಿರ್ಮಾಣ ಮಾಡಿದರೆ ಜನಜಾನುವಾರುಗಳಿಗೆ ಕುಡಿಯುವ ನೀರು, ಅಂತರ್ಜಲ ಮಟ್ಟ ವೃದ್ಧಿಗೆ ಅನುಕೂಲವಾಗುತ್ತದೆ. ಅಲ್ಲದೇ ಬ್ರಿಟಿಷರು ನಿರ್ಮಿಸಿದ ಕೆರೆ ಇದೆ. ಅದನ್ನು ಜೀರ್ಣೋದ್ಧಾರ ಮಾಡಿದರೆ ಇಡೀ ಪಕ್ಷಿ ಸಂಕುಲ, ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಬಹುದು ಎಂದು ಸದನ ಗಮನ ಸೆಳೆದರು.
ಎಸ್ಸಿ-ಎಸ್ಟಿ ಅಭಿವೃದ್ಧಿ ನಿಗಮಗಳಿಗೆ ಅನೇಕ ಸೌಲಭ್ಯ ಒದಗಿಸಲು ಅನುದಾನದ ಕೊರತೆ ಇದೆ. ಹೆಚ್ಚಿನ ಅನುದಾನ ನೀಡಬೇಕು. ಎಸ್ಸಿ-ಎಸ್ಟಿ ಸಮುದಾಯ ಆರ್ಥಿಕವಾಗಿ ಸಬಲರಾಗಲು ಭೂಒಡೆತನ ಯೋಜನೆ ಜಾರಿಗೊಳಿಸಿದ್ದು, ಕ್ಷೇತ್ರಕ್ಕೆ ಕೇವಲ ಒಂದೇ ಕೊಟ್ಟರೆ ಸಾಧ್ಯವಾಗುವುದಿಲ್ಲ. ಇದಕ್ಕೆ ಹೆಚ್ಚು ಒತ್ತು ಕೊಡಬೇಕು. ಖಾಸಗಿ ಕಾಲೇಜುಗಳಲ್ಲಿ ಡಿಪ್ಲೊಮಾ, ನರ್ಸಿಂಗ್, ಪ್ಯಾರಾ ಮೆಡಿಕಲ್ ಸೇರಿದಂತೆ ವೃತ್ತಿಪರ ಕೋರ್ಸ್ನಲ್ಲಿ ಅಭ್ಯಾಸ ಮಾಡುವ ಎಸ್ಸಿ-ಎಸ್ಟಿ ಮಕ್ಕಳಿಗೆ 2013-18ರಲ್ಲಿ ಹಾಸ್ಟೆಲ್ ಸೌಲಭ್ಯ ಇತ್ತು, ಈಗ ಇಲ್ಲ. ಕೂಡಲೇ ಈ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.
ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಹಗಲು ದರೋಡೆ ಮಾಡಲಾಗುತ್ತಿದೆ. ಹೊರ ಗುತ್ತಿಗೆ ತೆಗೆದು ನೇರವಾಗಿ ನೇಮಕಾತಿ ಮಾಡಿಕೊಂಡರೆ ಅವರ ಬದುಕು ಉಜ್ವಲವಾಗುತ್ತದೆ. ಶೋಷಿತ ಸಮುದಾಯಗಳಿಗೆ ತ್ವರಿತ ನ್ಯಾಯ ಒದಗಿಸಲು ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ರಾಜ್ಯದಲ್ಲಿ 33 ವಿಶೇಷ ಪೊಲೀಸ್ ಠಾಣೆ ತೆರೆಯಲು ಕ್ರಮ, ಅಲ್ಲದೇ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ 2 ಕೋಟಿ ಮೀಸಲು, ಅದರಂತೆ ಒಬಿಸಿ, ಅಲ್ಪಸಂಖ್ಯಾತರಿಗೂ 2 ಕೋಟಿ ಮೀಸಲಿಡುವ ಮೂಲಕ ರೈತರು, ಕಾಯಕ ಜೀವಿಗಳು, ವಿಶೇಷವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್‌ಸಿಪಿ-ಎಸ್‌ಟಿಪಿ ಯೋಜನೆಯಡಿ 48,018 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಟ್ಟಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು.
- ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ
ಮಳೆಗಾಲದಲ್ಲಿ ತುಂಗಾ ಜಲಾಯಶದಿಂದ ಭದ್ರಾ ಜಲಾಶಯಕ್ಕೆ ನೀರು ತುಂಬಿಸಿ ಅಪರ್ ಭದ್ರಾ ಯೋಜನೆ ನೀರು ನೀಡುವ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿದರೆ ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರಿಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ, ನಮ್ಮ ಭಾಗದ ರೈತರಿಗೆ ಅನಾನುಕೂಲವಾಗಲಿದೆ. ಕೂಡಲೇ ಸರ್ಕಾರ ಈ ಯೋಜನೆಯ ಕಾಮಗಾರಿ ಪೂರ್ಣಗೊಳಿಸಬೇಕು. ರಾಗಿ, ಭತ್ತ, ತೊಗರಿ ಬೆಂಬಲ ಬೆಲೆಯಡಿ ಖರೀದಿಸಿದಂತೆ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೆರೆಬಿಳಚಿ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ; 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಸುದ್ದಿದಿನ,ಚನ್ನಗಿರಿ:ತಾಲೂಕಿನ ಕೆರೆಬಿಳಚಿಯಲ್ಲಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ ,ಕ್ರಿಶ್ಚಿಯನ್, ಜೈನ್ ,ಬೌದ್ಧ ಸಿಖ್ ಪಾರ್ಸಿ ಧರ್ಮದವರಿಗೆ 75% ಸ್ಥಾನ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ 25% ಸ್ಥಾನಗಳು ಮೀಸಲಾಗಿವೆ.ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ಮತ್ತು ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://sevasindhuservices.karnataka.gov.in/
ಪ್ರವೇಶ ಪಡೆಯಲು ಅರ್ಹತೆಗಳು
- 05 ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಪೋಷಕರ ಆದಾಯದ ಮಿತಿ ಎಸ್.ಸಿ/ಎಸ್.ಟಿ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ
- 1 ಲಕ್ಷ ರೂ.ಗಳು ಮತ್ತು ಅಲ್ಪಸಂಖ್ಯಾತರಿಗೆ 2.5ಲಕ್ಷ ರೂ.ಗಳು ಮತ್ತು ಹಿಂದುಳಿದ ವರ್ಗದವರಿಗೆ 44500/- ರೂ.ಗಳಿಗೆ ಮೀರಿರಬಾರದು.
ವಸತಿ ಶಾಲೆಯಲ್ಲಿ ದೊರೆಯುವ ಸೌಲಭ್ಯಗಳು
- ಆಯ್ಕೆಯಾದ ವಿದ್ಯಾರ್ಥಿಗಳಿಗೆ 6ನೇ ತರಗತಿಯಿಂದ 12 ತರಗತಿಯವರೆಗೆ ಉಚಿತ ಶಿಕ್ಷಣ.
- ಉಚಿತ ಪಠ್ಯ ಪುಸ್ತಕ, ಲೇಖನ ಸಾಮಗ್ರಿಗಳು, ಸಮವಸ್ತ್ರ, ಶೂ ಮತ್ತು ಸಾಕ್ಸ್, ಹಾಸಿಗೆ ಹೊದಿಕೆ ಜೊತೆಗೆ ಉತ್ತಮ ಮೂಲ ಸೌಲಭ್ಯ ಒದಗಿಸಲಾಗುವುದು.
- ಸುಸಜ್ಜಿತ ಕೊಠಡಿ ಹಾಗೂ ವಸತಿ ನಿಲಯಗಳು, ವಿದ್ಯುತ್ ವ್ಯವಸ್ಥೆ, 24×7 ಬಿಸಿ ನೀರಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ.
- ನುರಿತ ಶಿಕ್ಷಕರು ಮತ್ತು ಉಪನ್ಯಾಸಕರಿಂದ ಭೋದನೆ, ಪ್ರತಿ ವಿಷಯಕ್ಕೆ ಸುಸಜ್ಜಿತ ಪ್ರಯೋಗಾಲಯ ಸೌಲಭ್ಯ ಹಾಗೂ ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ ಇದೆ.
- ಉಚಿತ ವಸತಿ ಮತ್ತು ಭೋಜನ ವ್ಯವಸ್ಥೆ ಇದೆ. ಜೊತೆಗೆ 24×7 CCTV ನಿರೀಕ್ಷಣೆಯಲ್ಲಿ ಇರುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
2 ಕೋಟಿ 20 ಲಕ್ಷ ಜನ, ಪಡಿತರ ಚೀಟಿಯ ಪ್ರಯೋಜನ ಪಡೆಯುತ್ತಿಲ್ಲ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ
-
ದಿನದ ಸುದ್ದಿ5 days ago
ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಿದ ಶಾಸಕ ಕೆ.ಎಸ್.ಬಸವಂತಪ್ಪ
-
ದಿನದ ಸುದ್ದಿ7 days ago
ಅನ್ನಭಾಗ್ಯ ಯೋಜನೆ | ನೇರ ನಗದು ವರ್ಗಾವಣೆ ಬದಲು ಅಕ್ಕಿ ವಿತರಣೆ
-
ದಿನದ ಸುದ್ದಿ2 days ago
ನೆಲಮಂಗಲ ಸಮೀಪದ ದಾಸನಪುರದಲ್ಲಿ 306 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕೃಷಿ ಮಾರುಕಟ್ಟೆ ನಿರ್ಮಾಣ : ಸಚಿವ ಶಿವಾನಂದಪಾಟೀಲ್
-
ದಿನದ ಸುದ್ದಿ5 days ago
ಬೆಂವಿವಿ | ಸಂವಹನ ವಿದ್ಯಾರ್ಥಿಗಳಿಂದ ಹೋಳಿ ಸಂಭ್ರಮ
-
ದಿನದ ಸುದ್ದಿ2 days ago
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ರಾಜ್ಯದ ಶಿಲಾ ಶಾಸನಗಳು ಸೇರ್ಪಡೆ
-
ದಿನದ ಸುದ್ದಿ1 day ago
ಮಾಸಾಶನ ಪಡೆಯುತ್ತಿರುವ ಕಲಾವಿದರು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ
-
ದಿನದ ಸುದ್ದಿ4 days ago
ಕವಿತೆ | ಮತ್ತಿನ ಕುಣಿಕೆ