ದಿನದ ಸುದ್ದಿ
ಮೈಸೂರು ದಸರಾ ಗಜಪಯಣ ಹಿನ್ನೆಲೆ; ಆನೆಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ ಗೊತ್ತಾ..?

ಸುದ್ದಿದಿನ,ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಗಜಪಯಣ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಇದು ಮಹಾರಾಜರ ಕಾಲದಿಂದಲೂ ಸಹ ಗಜಪಯಣ ಕಾರ್ಯಕ್ರಮವು ಜರುಗುತ್ತಿದ್ದು, ಇಂದಿನ ಕಾರ್ಯಕ್ರಮಗಳಿಗಿಂತ ವಿಭನ್ನವಾಗಿತ್ತು. ಮೈಸೂರು ಮಹಾರಾಜರು ದಸರಾ ಮಹೋತ್ಸವದ ಸಂದರ್ಭದಲ್ಲಿ ಅಂಬಾರಿಯನ್ನು ಹೊರುವುದಕ್ಕಾಗಿ ಹಾಗೂ ವಿವಿಧ ಕಾರ್ಯಕ್ರಮಗಳಿಗಾಗಿ ಕಾಡಿನಲ್ಲಿ ಪಳಗಿಸಿರುವ ಆನೆಗಳನ್ನು ಆಯ್ಕೆ ಮಾಡಿ ನಿಗದಿತ ಶುಭದಿನದಂದು ಶ್ಲೋಕಗಳನ್ನು ಪಠಿಸುವ ಮೂಲಕ ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತವನ್ನು ಮಾಡಿ ನಂತರ ಸದರಿ ಸ್ಥಳದಿಂದ ಕಾಲ್ನಡಿಗೆ ಮೂಲಕ ಮೈಸೂರು ಅರಮನೆ ಆವರಣಕ್ಕೆ ಕರೆತರುತ್ತಿದ್ದರು. ಆನೆಗಳಿಗೆ ಭಕ್ತಿ ಮತ್ತು ಶ್ರದ್ದೆಯಿಂದ ವಿಶೇಷ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ದಿನಗಳನ್ನು ಆಚರಣೆ ಮಾಡಲಾಗುತ್ತಿತ್ತು.
ಇಂದು ಮಾನವ ಜಗತ್ತನ್ನು ಆಧುನೀಕರಣಗೊಳಿಸುವ ತವಕದಲ್ಲಿ ಕಾಡುಗಳನ್ನು ನಾಶಮಾಡಿ ಕಾಂಕ್ರೀಟಿಕರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾನೆ. ಇದರಿಂದ ಜಾಗತಿಕ ವಲಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ರೀತಿ ವಾತವರಣ ಬದಲಾವಣೆ, ರಸ್ತೆಯ ಮೇಲೆ ವಾಹನಗಳ ದಟ್ಟಣೆ, ಶಬ್ದ ಮಾಲಿನ್ಯದಿಂದ ಆನೆಗಳನ್ನು ಕಾಡಿನಿಂದ ಮೈಸೂರಿಗೆ ಕಾಲ್ನಡಿಗೆ ಮೂಲಕ ಕರೆತರಲು ಕಷ್ಟವಾಗಿರುವುದನ್ನು ಅರಿತ ಅರಣ್ಯ ಇಲಾಖೆ, ಆನೆಗಳ ಸುರಕ್ಷತೆಗಾಗಿ ಲಾರಿಗಳ ಮೂಲಕ ಸಾಗಾಣಿಕೆ ಮಾಡಲು 2004ರಲ್ಲಿ ತೀರ್ಮಾನಿಸಲಾಯಿತು. 2004ನೇ ಸಾಲಿನಿಂದ ಗಜಪಯಣ ಕಾರ್ಯಕ್ರಮದಲ್ಲಿ ಮೊದಲನೇ ತಂಡದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ರಾಜೀವ್‍ಗಾಂಧಿ ರಾಷ್ಟ್ರೀಯ ಉದ್ಯಾನದ ವೀರನಹೊಸಳ್ಳಿ ಬಳಿ ಸಾಂಪ್ರದಾಯಿಕ ಪೂಜೆಗಳೊಂದಿಗೆ ಚಾಲನೆ ನೀಡಲಾಗುತ್ತಿರುತ್ತದೆ.
ಸಾಂಪ್ರದಾಯಿಕ ಪೂಜೆಗಳು ನೆರವೇರಿದ ನಂತರ ಆನೆಗಳನ್ನು ಲಾರಿಯ ಮೂಲಕ ಸುರಕ್ಷಿತವಾಗಿ ಮೈಸೂರಿಗೆ ಸಾಗಾಣಿಕೆ ಮಾಡಲಾಗುವುದು.
ನಂತರದ ದಿನಗಳಲ್ಲಿ ಗಜಪಯಣ ಕಾರ್ಯಕ್ರಮದಲ್ಲಿ ಮೊದಲನೇ ತಂಡದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ರಾಜೀವ್‍ಗಾಂಧಿ ರಾಷ್ಟ್ರೀಯ ಉದ್ಯಾನದ ವೀರನಹೊಸಳ್ಳಿ ಬಳಿ ನಡೆಯುತ್ತಿದ್ದ ಸಾಂಪ್ರದಾಯಿಕ ಪೂಜೆ ಕಾರ್ಯಕ್ರಮವನ್ನು ಹುಣಸೂರು ತಾಲ್ಲೂಕು, ನಾಗಪುರ ಗಿರಿಜನ ಹಾಡಿಯ ಸರ್ಕಾರಿ ಶಾಲೆಯ ಆವರಣದಲ್ಲಿ ಜನಪ್ರತಿನಿಧಿಗಳು, ಗಣ್ಯವ್ಯಕ್ತಿಗಳು, ಅಧಿಕಾರಿಗಳು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸಮ್ಮುಖದಲ್ಲಿ ಸಾಂಪ್ರದಾಯಿಕ ಪೂಜೆಯನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕರಲ್ಲಿ ಅರಣ್ಯ ಮತ್ತು ವನ್ಯಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯ ವತಿಯಿಂದ ನೆರವೇರಿಸಿಕೊಂಡು ಬರಲಾಗುತ್ತಿರುತ್ತದೆ.
ಸದರಿ ಸಂದರ್ಭದಲ್ಲಿ ಸಾಂಪ್ರದಾಯಿಕ ರಾಗಗಳನ್ನು ನುಡಿಸುವ ಸಂಗೀತಗಾರರು ಹಾಗೂ ಪೂರ್ಣಕುಂಬದೊಂದಿಗೆ ಶ್ಲೋಕಗಳನ್ನು ಪಠಿಸುವುದು ಹಾಗೂ ಆನೆಗಳ ಸುರಕ್ಷತೆ ಮತ್ತು ಸಮಾಜ ಸಾಮೂಹಿಕ ಕಲ್ಯಾಣಕ್ಕಾಗಿ ಗಣೇಶ ಅಷ್ಟೋತ್ತರ ಸೇರಿದಂತೆ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ. ಅಲ್ಲದೆ ಆನೆಗಳಿಗೆ ತೆಂಗಿನಕಾಯಿ, ಬೆಲ್ಲ ಮತ್ತು ಕಬ್ಬನ್ನು ನೀಡಿ ಸ್ವಾಗತವನ್ನು ಕೋರಲಾಗುತ್ತದೆ. ಗಜಪಯಣ ಕಾರ್ಯಕ್ರಮದ ದಿನ ಆನೆಗಳನ್ನು ವಿವಿಧ ಬಣ್ಣಗಳಿಂದ ಅಲಂಕಾರ ಗೊಳಿಸಿ, ವಿಶೇಷ ವಿನ್ಯಾಸವುಳ್ಳ ಹಣೆಪಟ್ಟಿಯನ್ನು ಹಾಕಲಾಗುವುದು. ಅಲ್ಲದೆ ಆನೆಗಳ ಮಾವುತರು ಮತ್ತು ಕವಾಡಿಗಳು ಸಹಾ ಸಮವಸ್ತ್ರಗಳನ್ನು ಧರಿಸುತ್ತಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳು ಹಾಗೂ ಗಣ್ಯವ್ಯಕ್ತಿಗಳು ಅಲಂಕೃತ ಆನೆಗಳಿಗೆ ಪೂಜೆ ಸಲ್ಲಿಸಿ ಬೆಲ್ಲ ಮತ್ತು ಕಬ್ಬನ್ನು ನೀಡುತ್ತಾರೆ. ಮಾವುತರು ಮತ್ತು ಕವಾಡಿಗಳವರಿಗೆ ತಾಂಬೂಲಗಳನ್ನು ನೀಡಿ ಸ್ವಾಗತವನ್ನು ಕೋರಲಾಗುವುದು. ನಂತರ ಅವರಿಗೆ ವಿಶೇಷ ಭೋಜನವನ್ನು ಏರ್ಪಡಿಸಲಾಗುತ್ತದೆ. ಆನೆಗಳನ್ನು ರ್ಯಾಂಪ್ಸ್‍ಗಳ ಮೂಲಕ ಲಾರಿಗಳಿಗೆ ಹತ್ತಿಸಿ, ಅರಣ್ಯ ಇಲಾಖೆಯ ಮತ್ತು ಪೋಲೀಸ್ ಸಿಬ್ಬಂದಿ ಬಂದೂಬಸ್ತಿನೊಂದಿಗೆ ಮೈಸೂರಿಗೆ ಸಾಗಾಣಿಕೆ ಮಾಡಲಾಗುತ್ತದೆ.
ಆನೆಗಳ ಆಯ್ಕೆಯ ಪ್ರಕ್ರಿಯೆ, ಆರೋಗ್ಯ ತಪಾಸಣೆ
ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವ ಆನೆಗಳನ್ನು ಈ ಎಲ್ಲಾ ಕಾರ್ಯಕ್ರಮಗಳಿಗಿಂತ ಮುಂಚೆ ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪಶುವೈದ್ಯಾಧಿಕಾರಿಗಳೊಂದಿಗೆ ವಿವಿಧ ಆನೆ ಶಿಬಿರಗಳಿಗೆ ತೆರಳಿ ಆನೆಗಳ ಆರೋಗ್ಯವನ್ನು ಪರಿಶೀಲಿಸುತ್ತಾರೆ. ಈ ಬಾರಿ ದಸರಾ ಮಹೋತ್ಸವಕ್ಕಾಗಿ ಆನೆಗಳನ್ನು ಆಯ್ಕೆ ಮಾಡಲು ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಎಂ ಚಳಕಾಪುರೆ ಮತ್ತು ಪಶುವೈದ್ಯಾಧಿಕಾರಿ ಡಾ. ಡಿ.ಎನ್. ನಾಗರಾಜು ಅವರು ನಾಗರಹೊಳೆ, ಬಂಡೀಪುರ ಮತ್ತು ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಗೆ ಬರುವ ವಿವಿಧ ಆನೆಗಳ ಶಿಬಿರಗಳಲ್ಲಿ ಇರುವ ಸಾಕಾನೆಗಳ ಆರೋಗ್ಯ ತಪಾಸಣೆ ಮಾಡಿ ಒಟ್ಟು 16 ಆನೆಗಳನ್ನು ಆಯ್ಕೆ ಮಾಡಿರುತ್ತಾರೆ. ನಂತರ ದಿನಾಂಕ:19-7-2018 ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆಯನ್ನು ಜರುಗಿಸಿ,
16 ಆನೆಗಳ ವಿವರಗಳನ್ನು ಪಡೆದು ಅದರಲ್ಲಿ 12 ಆನೆಗಳನ್ನು ಆಯ್ಕೆ ಮಾಡಿ ದಸರಾ ಮಹೋತ್ಸವಕ್ಕೆ ಕರೆತರಲು ತೀರ್ಮಾನಿಸಲಾಯಿತು.
ಗಜಪಯಣ-2018 (ವೀರನಹೊಸಹಳ್ಳಿ ಬಳಿ)
ಪ್ರತಿ ವರ್ಷದಂತೆ ಪ್ರಸಕ್ತ ವರ್ಷದಲ್ಲಿಯೂ 2018ರ ಮೈಸೂರು ದಸರಾ ಮಹೋತ್ಸವದ
ಅಂಗವಾಗಿ ಗಜಪಯಣ ಕಾರ್ಯಕ್ರಮವನ್ನು ಸೆಪ್ಟಂಬರ್ ಮಾಹೆಯ 2ನೇ ತಾರೀಖಿನಂದು
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವಲಯದ ಹೆಬ್ಬಾಗಲಿನಲ್ಲಿ ಪೂಜಾ ಕಾರ್ಯಕ್ರಮವನ್ನು ಹಾಗೂ ಗ್ರಾಮದ ಬಳಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮವನ್ನು ಹುಣಸೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಅಡಗೂರು ಹೆಚ್ ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜಿ.ಟಿ.ದೇವೇಗೌಡ ರವರು ವಿದ್ಯುಕ್ತ ಚಾಲನೆಯನ್ನು ನೀಡಿರುತ್ತಾರೆ. ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾನ್ಯ ಪ್ರವಾಸೋದ್ಯಮ, ರೇಷ್ಮೆ ಖಾತೆ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಾ.ರಾ.ಮಹೇಶ್ ಮತ್ತು ಮಾನ್ಯ ಕನ್ನಡ ಮತ್ತು ಸಂಸ್ಕøತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ
ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಶ್ರೀಮತಿ ಜಯಮಾಲ
ರವರು ಭಾಗವಹಿಸಿರುತ್ತಾರೆ. ಅಲ್ಲದೇ ಮೈಸೂರು ಪ್ರಾಂತ್ಯದ ಮಾನ್ಯ ಲೋಕಸಭಾ ಸದಸ್ಯರು, ಮಾನ್ಯ ಶಾಸಕರು, ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ
ಉಪಾಧ್ಯಕ್ಷರುಗಳು ಭಾಗವಹಿಸಿರುತ್ತಾರೆ.
ಗಜಪಯಣದ ಕಾರ್ಯಕ್ರಮದ ನಂತರ ಮೊದಲನೆ ತಂಡದಲ್ಲಿ ಅರ್ಜುನ, ವರಲಕ್ಷ್ಮಿ,
ಚೈತ್ರ, ಗೋಪಿ, ವಿಕ್ರಮ ಮತ್ತು ಧನಂಜಯ ಆನೆಗಳನ್ನು ಮೈಸೂರಿನ ಅರಣ್ಯ ಭವನಕ್ಕೆ
ಕರೆತರಲಾಯಿತು. ಸದರಿ ಆನೆಗಳನ್ನು ದಿನಾಂಕ:5-9-2018 ರಂದು ಮೈಸೂರು ಅರಮನೆ
ಆವರಣಕ್ಕೆ ಬರಮಾಡಿಕೊಳ್ಳಲು ಶುಭ ದಿನ ನಿಗಧಿಯಾದ್ದರಿಂದ, ಮೂರು ದಿನಗಳವರೆಗೆ
ಮೈಸೂರು ಅರಣ್ಯ ಭವನದಲ್ಲಿ ವಾಸ್ತವ್ಯ ಮಾಡಿದ್ದವು. ದಿನಾಂಕ: 5-9-2018 ರಂದು ಅರಣ್ಯ ಭವನದಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾದಿಕಾರಿಗಳು (ಹುಲಿ ಮತ್ತು ಆನೆ ಯೋಜನೆ) ಮೈಸೂರು ರವರಾದ ಶ್ರೀ ಜಗತ್ ರಾಮ್ ಭಾ.ಅ.ಸೇ. ಮುಖ್ಯ ಅರಣ್ಯ
ಸಂರಕ್ಷಣಾಧಿಕಾರಿಗಳು, ಮೈಸೂರು ವೃತ್ತ, ಮೈಸೂರು ರವರಾದ ಶ್ರೀ ವೆಂಕಟೇಸನ್ ಎಸ್
ಬಾs .ಅ.ಸೇ. ಹಾಗೂ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾಂಪ್ರಾದಾಯಿಕ ಪೂಜೆಯನ್ನು ಸಲ್ಲಿಸಿದ ನಂತರ ಬಲ್ಲಾಳ್ ವೃತ್ತ–ರಾಮಸ್ವಾಮಿ ವೃತ್ತ ಮತ್ತು 100 ಅಡಿ ರಸ್ತೆಯ ಮೂಲಕ ಕಾಲ್ನಡಿಗೆಯಲ್ಲಿ ಅರಮನೆಯ ಜಯಮಾರ್ತಾಂಡ ಗೇಟ್‍ನ ಬಳಿ ಕರೆತರಲಾಗುತ್ತದೆ. ಅಲ್ಲಿ
ಗಣ್ಯರು ಹಾಗೂ ಅಧಿಕಾರಿಗಳು ಪೂಜೆಯನ್ನು ನೆರವೇರಿಸುವ ಮೂಲಕ ಅರಮನೆಯ ಆವರಣಕ್ಕೆ ಬರಮಾಡಿಕೊಳ್ಳಲಾಯಿತು.
ಸೌಲಭ್ಯಗಳು : ಮಾವುತರು ಹಾಗೂ ಅವರ ಕುಟುಂಬ ವರ್ಗದವರಿಗೆ
ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವ ಆನೆಗಳ ಮಾವುತರು ಮತ್ತು
ಕವಾಡಿಗಳವರೊಂದಿಗೆ ಅವುರುಗಳ ಕುಟುಂಬ ವರ್ಗದವರು ಸಹಾ ಜೊತೆಯಲ್ಲಿ ಬರುವುದರಿಂದ ಅವರ ವಾಸ್ತವ್ಯಕ್ಕಾಗಿ ಮೈಸೂರು ಅರಮನೆ ಆವರಣದಲ್ಲಿ ಅರಣ್ಯ ಇಲಾಖೆಯ ವತಿಯಿಂದ
ನೀರು ನಿರೋಧಕ ಶೆಡ್ಡಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತದೆ. ಅಲ್ಲದೇ ಅವರ ದಿನನಿತ್ಯದ ನಿರ್ವಹಣೆಗೆ ಅಗತ್ಯವಾದ ವಸ್ತುಗಳನ್ನು ಸಹಾ ಪೂರೈಸಲಾಗುತ್ತದೆ. ಇವರೊಂದಿಗೆ ಆನೆಗಳಿಗೂ
ಸಹಾ ಶೆಡ್ಡುಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅಲ್ಲದೆ ಮಾವುತ ಮತ್ತು ಕವಾಡಿಗಳ ಮಕ್ಕಳ ವಿದ್ಯಾಬ್ಯಾಸಕ್ಕೆ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ತಾತ್ಕಾಲಿಕವಾಗಿ ಗ್ರಂಥಾಲಯನ್ನು ಹಾಗೂ ಪಾಠಶಾಲೆಯನ್ನು ಮತ್ತು ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಸದರಿ ಸ್ಥಳದಲ್ಲಿ ಒಂದು ಆರ್ಯವೇದದ ಆಸ್ಪತ್ರೆಯನ್ನು ಸಹಾ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ತೆರೆಯಲಾಗಿರುತ್ತದೆ. ಇವುಗಳಲ್ಲದೆ ರಕ್ಷಣೆಯ ದೃಷ್ಟಿಯಿಂದ ಆನೆಗಳ ಶಿಬಿರ
ಹಾಗೂ ಶೆಡ್ಡ ಆವರಣಗಳಲ್ಲಿ ಸಿಸಿಟಿವಿಯನ್ನು ಸಹಾ ಅಳವಡಿಸಲಾಗಿರುತ್ತದೆ.
ಎರಡನೇ ತಂಡದ ಆನೆಗಳ ಆಗಮನ
ದಿನಾಂಕ:14-9-2018 ರಂದು ಎರಡನೇ ತಂಡದಲ್ಲಿ ಅಭಿಮನ್ಯು, ಬಲರಾಮ, ಕಾವೇರಿ,
ವಿಜಯ, ಪ್ರಶಾಂತ ಮತ್ತು ದ್ರೋಣ ಆನೆಗಳನ್ನು ಮೈಸೂರು ಅರಮನೆಯ ಜಯಮಾರ್ತಾಂಡ
ಗೇಟ್‍ನ ಬಳಿ ಗಣ್ಯರು ಹಾಗೂ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪೂಜಾ
ಕಾರ್ಯಕ್ರಮವನ್ನು ನೆರವೇರಿಸುವ ಮೂಲಕ ಬರಮಾಡಿಕೊಳ್ಳಲಾಯಿತು.
ವಿಶೇಷ ತರಬೇತಿ ಮತ್ತು ತಾಲೀಮು
ದಿನಾಂಕ: 6-9-2018 ರಿಂದ ಮೊದಲನೆ ತಂಡದ ಆನೆಗಳಿಗೆ ಯಾವುದೇ ಭಾರವಿಲ್ಲದೆ
ವಾಹನಗಳ ಶಬ್ದಕ್ಕೆ ಹಾಗೂ ಜನಸಂದಣಿಗೆ ಮತ್ತು ರಾತ್ರಿ ದೀಪದ ಬೆಳೆಕಿಗೆ ಹೊಂದಿಕೊಳ್ಳುವ
ಸಲುವಾಗಿ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಮೈಸೂರು ಅರಮನೆಯಿಂದ
ಬನ್ನಿಮಂಟಪದವರೆಗೆ ತಾಲೀಮು ನೀಡಲಾಗುತ್ತಿದ್ದು, ನಂತರ ದಿನಾಂಕ 14-9-2018 ರಿಂದ
ಹಂತಹಂತವಾಗಿ 350 ಕೆ.ಜಿ ಯಿಂದ 750 ಕೆಜಿಯರವರೆಗೆ ಭಾರವನ್ನು ಗಂಡು ಆನೆಗಳ ಬೆನ್ನಿಗೆ ಕಟ್ಟುವ ತೊಟ್ಟಿಲಿಗೆ ಮರಳು ಮೂಟೆಗಳನ್ನು ತುಂಬಿ ಪ್ರತಿ ದಿನ ತಾಲೀಮು ನೀಡಲಾಗುತ್ತಿದೆ. ಅಲ್ಲದೇ ವಿಜಯದಶಮಿಯಂದು ಹಾರಿಸುವ ಕುಶಲತೋಪುಗಳ ಶಬ್ದಕ್ಕೆ ಅಂಜದೆ ಇರುವುದಕ್ಕಾಗಿ ದಿನಾಂಕ: 27-9-2018 ರಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಪೋಲಿಸ್ ಹಿರಿಯ ಅಧಿಕಾರಿಗಳು ಉಪಸ್ಥಿತಿಯಲ್ಲಿ ಆನೆಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಮುಂದೆ ಅಂದರೆ ಸ್ವಲ್ಪ ದೂರದಲ್ಲಿ ಕುಶಲ ತೋಪುಗಳನ್ನು ಇಟ್ಟು ಸಿಡಿಮದ್ದನ್ನು ಸಿಡಿಸುತ್ತಾರೆ. ಈ ರೀತಿ 3-4 ಬಾರಿ ಆನೆಗಳಿಗೆ ಸಿಡಿಮದ್ದಿನ ತಾಲೀಮನ್ನು ಮಾಡಿಸಲಾಗುವುದು.
ವಿಶೇಷ ಆಹಾರಪದಾರ್ಥಗಳು ಮತ್ತುಮೇವು ಪೂರೈಕೆ
ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಇಲಾಖಾ ಆನೆಗಳು ಸುಮಾರು 50
ರಿಂದ 55 ದಿನಗಳವರಿಗೆ ಮೈಸೂರಿನಲ್ಲಿ ವಾಸ್ತವ್ಯ ಮಾಡಲಾಗುತ್ತದೆ. ಈ ಅವಧಿಯಲ್ಲಿ ಆನೆಗಳ ಬಗ್ಗೆ ವಹಿಸುವ ಎಚ್ಚರ ತುಂಬ ನಾಜೂಕಿನ ಹಾಗೂ ಜವಾಬ್ದಾರಿಯುತ ಕೆಲಸವಾಗಿದ್ದು, ಆನೆಗಳಿಗೆ ಪೌಷ್ಟಿಕ ಆಹಾರಗಳನ್ನು ನೀಡಿ ಹೆಚ್ಚಿನ ಮುತುವರ್ಜಿಯಿಂದ ನೋಡಿಕೊಳ್ಳಲಾಗುತ್ತಿದೆ.ಆನೆಗಳಿಗೆ ಪ್ರತಿ ದಿನ ಮರದ ಸೊಪ್ಪು, ಹಸಿಹುಲ್ಲು, ಕಬ್ಬುಗಳನ್ನು ನೀಡಲಾಗುತ್ತಿದ್ದು ಅದರ ಜೊತೆಗೆ ಪ್ರತಿ ದಿನ ಎರಡು ಬಾರಿ ಭತ್ತ, ಹಿಂಡಿ, ಕಾಯಿ, ಬೆಲ್ಲ ಯುಕ್ತ ಪ್ರಮಾಣದಲ್ಲಿ ಉಪ್ಪನ್ನು ಸೇರಿಸಿ ಭತ್ತದ ಹುಲ್ಲಿನಲ್ಲಿ ಕುಸುರೆ ಕಟ್ಟಿ ತಿನ್ನಿಸಲಾಗುತ್ತದೆ. ಅಲ್ಲದೆ ದಿನಕ್ಕೆರಡು ಬಾರಿ ಬೆಳಗ್ಗೆ 6.30 ಗಂಟೆಗೆ ಮತ್ತು ಸಂಜೆ 7.30 ಗಂಟೆಗೆ ಬೇಯಿಸಿದ ಹೆಸರುಕಾಳು, ಉದ್ದಿನಕಾಳು, ಕುಸುಬಲಕ್ಕಿ, ಗೋದಿ, ಈರುಳ್ಳಿ ಜೊತೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯಿಸಿ ಆದು ತಣ್ಣಗಾದ ಮೇಲೆ ಹಸಿ ತರಕಾರಿಗಳನ್ನು ಮತ್ತು ಬೆಣ್ಣೆಯನ್ನು ಸೇರಿಸಿ ಪ್ರತಿಯೊಂದು ಆನೆಗೂ ಯುಕ್ತ ಪ್ರಮಾಣದಲ್ಲಿ ತಿನ್ನಿಸಲಾಗುತ್ತದೆ.
ಅಲ್ಲದೇ ಪಶುವೈದ್ಯಾಧಿಕಾರಿಗಳು ಪ್ರತಿ ದಿನ ಆನೆ ಶಿಬಿರಗಳಿಗೆ ಬೇಟಿ ಅವುಗಳ ಆರೋಗ್ಯ ತಪಾಸಣೆ, ಆಹಾರ ಪರಿಶೀಲನೆ, ಆನೆಗಳಿಗೆ ತರಬೇತಿ ಮತ್ತು ಅವಶ್ಯವಿದ್ದಲ್ಲಿ ಚಿಕಿತ್ಸೆಯನ್ನು ನೀಡಿ ಔಷಧಿಗಳನ್ನು ನೀಡುತ್ತಾರೆ.
ಪೂಜಾ ಕಾರ್ಯಕ್ರಮಗಳು
ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಇಲಾಖಾ ಆನೆಗಳಿಗೆ ವಿಶೇಷ ದಿನಗಳಂದು
ಅಂದರೆ ಗಣೇಶ ಚತುರ್ಥಿ ಮತ್ತು ಇತರೆ ಹಬ್ಬದ ದಿನಗಳಂದು ಅರಣ್ಯ ಇಲಾಖೆಯ ಹಿರಿಯ
ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಅಧಿಕಾರಿಗಳು ಉಪಸ್ಥಿತಿಯಲ್ಲಿ ಪೂಜಾ ಕಾರ್ಯಕ್ರಮಗಳನ್ನು
ನೆರವೇರಿಸಲಾಗುತ್ತದೆ.
ವನ್ಯಜೀವಿ ಸಪ್ತಾಹ-2018
ವನ್ಯಜೀವಿ ಸಪ್ತಾಹವನ್ನು ಪ್ರತಿ ವರ್ಷವು ಅಕ್ಟೋಬರ್ ಮಾಹೆಯ 2ನೇ ತಾರೀಖಿನಿಂದ
8ನೇ ತಾರೀಖಿನವರಗೆ ಆಚರಣೆ ಮಾಡಲಾಗುತ್ತದೆ. ವನ್ಯಜೀವಿ ಸಪ್ತಾಹವು ಸಾರ್ವಜನಿಕರಲ್ಲಿ ವನ್ಯಜೀವಿ ಸಂಪತನ್ನು ಉಳಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವಾಗಿರುತ್ತದೆ. 2018ನೇ ಸಾಲಿನಲ್ಲಿ ಅಕ್ಟೋಬರ್ 2 ರಿಂದ 8ನೇ ತಾರೀಖಿನವರಗೆ ವನ್ಯಜೀವಿ ಸಪ್ತಾಹವನ್ನು ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ದಸರಾ ಮಹೋತ್ಸವದಲ್ಲಿ
ಭಾಗವಹಿಸಲಿರುವ ಇಲಾಖಾ ಆನೆಗಳಿಗೆ ಬಟ್ಟೆಯಿಂದ ತಯಾರಿಸಿದ ಗೌನಗಳ ಮೇಲೆ ವನ್ಯಜೀವಿಗಳ ವಿವಿಧ ಸ್ಲೋಗನ್‍ಗಳನ್ನು ಬರೆದು ಅವುಗಳನ್ನು ಆನೆಗಳು ಬೆಳಗ್ಗೆ ಮತ್ತು ಸಂಜೆ ತಾಲೀಮು ಮಾಡುವ ವೇಳೆ ಅಂದರೆ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ನಡೆಯುವ ತಾಲೀಮಿನ ವೇಳೆ ಆನೆಗಳ ಮೇಲೆ ಅವುಗಳನ್ನು ಹೊದಿಸಿ ತಾಲೀಮು ನಡೆಸಲಾಯಿತು. ಈ
ರೀತಿಯಾಗಿ ಸಾರ್ವಜನಿಕರಿಗೆ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು
ಯಶಸ್ವಿಗೊಳಿಸಲಾಯಿತು.
ಕಿಟ್ ವಿತರಣೆ ಹಾಗೂ ಇತರೆ ಕಾರ್ಯಕ್ರಮಗಳು
ದಿನಾಂಕ: 5-10-2018 ರಂದು ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಅರಣ್ಯ ಸಚಿವರಾದ
ಶ್ರೀ ಶಂಕರ್ ಆರ್ ರವರ ಅಧ್ಯಕ್ಷತೆಯಲ್ಲಿ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ
ಉಪಸ್ಥಿತಿಯಲ್ಲಿ ಕಿಟ್ ವಿತರಣಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸದರಿ ದಿನದಂದು ಮಾನ್ಯ ಅರಣ್ಯ ಸಚಿವರು ಆನೆಗಳಿಗೆ ಪೂಜೆಯನ್ನು ನೆರವೇರಿಸಿ, ಮಾವುತರು ಮತ್ತು ಕವಾಡಿಗಳಿಗೆ ದಿನನಿತ್ಯದ ನಿರ್ವಹಣೆಗೆ ಅವಶ್ಯವಿದ್ದ ಕೊಡೆ, ವಾಟರ್ ಬಾಟಲ್, ಜಿರ್ಕಿನ್, ಟೋಪಿ, ಟಿ-ಶರ್ಟ, ಶೂ ಮತ್ತು ಬ್ಯಾಗುಗಳನ್ನೊಳಗೊಂಡ ಕಿಟ್‍ನ್ನು ವಿತರಣೆ ಮಾಡಿದರು. ಗಣ್ಯರು ಮತ್ತು ವಿವಿಧ ಸಂಘ ಸಂಸ್ಥೆಗಳು ಆನೆಗಳ ಮಾವುತರು ಮತ್ತು ಕವಾಡಿಗಳು ಹಾಗೂ ಅವರ ಕುಟುಂಬ ವರ್ಗದವರಿಗೆ ವಿವಿಧ ದಿನಗಳಂದು ಉಚಿತವಾಗಿ ಆರೋಗ್ಯ ತಪಾಸಣೆ, ವಸ್ತ್ರಗಳನ್ನು ನೀಡುವುದು ಮತ್ತು ಭೋಜನಕೂಟವನ್ನು ಏರ್ಪಡಿಸಿರುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಸುದ್ದಿದಿನಡೆಸ್ಕ್: 2024-25ನೇ ಸಾಲಿನ ರಾಜ್ಯ ಮುಂಗಡ ಪತ್ರ ಹಿನ್ನೆಲೆಯಲ್ಲಿ ರೈತ ಸಂಘಗಳ ಪ್ರತಿನಿಧಿಗಳು ಹಾಗೂ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿಂದು ಸಭೆ ನಡೆಸಿದರು.ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಮುಂಗಡ ಪತ್ರ ಮಂಡನೆ ಹಿನ್ನೆಲೆಯಲ್ಲಿ ರೈತ ನಾಯಕರೊಂದಿಗೆ ಸಭೆ ನಡೆಸಿ, ಅವರ ಅಭಿಪ್ರಾಯ ಪಡೆಯಲಾಗಿದೆ. ಬಜೆಟ್ನಲ್ಲಿ ಸರ್ಕಾರದ ಇತಿಮಿತಿಯಲ್ಲಿ ಏನು ಸೇರಿಸಬೇಕು ಎಂಬ ಬಗ್ಗೆ ಚರ್ಚೆಯಾಗಿದೆ. ರೈತರ ಹಿತ ಕಾಪಾಡುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಗೃಹಲಕ್ಷ್ಮಿ, ಪಡಿತರ ಸಹಾಯಧನದ ಬಾಕಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯನ್ನು ನಡೆಸಲು ರಾಜ್ಯ ಸರ್ಕಾರ ಸಿದ್ಧವಿದೆ. ಈ ಸಂಬಂಧ ಹೈಕೋರ್ಟ್ ನೀಡುವ ಆದೇಶವನ್ನು ಪಾಲಿಸಲಾಗುವುದು ಎಂದು ಪುನರುಚ್ಚರಿಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಅವರು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾರ್ಚ್ 3 ರಂದು ವಿಧಾನಮಂಡಲ ಅಧಿವೇಶನ; 7 ರಂದು ಬಜೆಟ್ ಮಂಡನೆಗೆ ಸರ್ಕಾರ ನಿರ್ಧಾರ

ಸುದ್ದಿದಿನಡೆಸ್ಕ್:ಮಾರ್ಚ್ 7 ರಂದು ರಾಜ್ಯ ಸರ್ಕಾರದ ಬಜೆಟ್ ಮಂಡನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 3 ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಅಂದು ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಮಾರ್ಚ್ 4 ರಿಂದ ಮೂರು ದಿನ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಎಷ್ಟು ದಿನ ಅಧಿವೇಶನ ನಡೆಸಬೇಕು ಎನ್ನುವುದನ್ನು ಕಲಾಪ ಸಲಹಾ ಸಮಿತಿ ನಿರ್ಧಾರ ಮಾಡಲಿದೆ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉತ್ಸವಗಳ ಹೆಸರಲ್ಲಿ ಮೌಢ್ಯ ತೊರೆಯಬೇಕು : ಈಶ್ವರಾನಂದಪುರಿ ಸ್ವಾಮೀಜಿ

ಸುದ್ದಿದಿನ,ದಾವಣಗೆರೆ: ನಮಗೆ ಇಂದು ಭಕ್ತಿ ಮತ್ತು ಜ್ಞಾನ ಎರಡೂ ಮುಖ್ಯ. ಭಕ್ತಿ ಹೆಚ್ಚಿಸುವ ದೇವಾಲಯಗಳ ಜತೆಯಲ್ಲೇ ಜ್ಞಾನ ವಿಸ್ತರಿಸುವ ವಿದ್ಯಾಲಯಗಳೂ ಹೆಚ್ಚಬೇಕು ಎಂದು ಹೊಸದುರ್ಗ ಕನಕ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಹಳೆಕುಂದುವಾಡ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಆಂಜನೇಯ ಸ್ವಾಮಿ, ಶ್ರೀ ಬಸವೇಶ್ವರ ದೇವಸ್ಥಾನದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಂದಿನ ಮಕ್ಕಳನ್ನು ಐಎಎಎಸ್, ಕೆಎಎಸ್ನಂತಹ ಉನ್ನತ ಶಿಕ್ಷಣ ಹಾಗೂ ಸಂಸ್ಕಾರ ನೀಡಲು ಪಾಲಕರು ಮುಂದಾಗಬೇಕು. ಉತ್ಸವಗಳ ಹೆಸರಲ್ಲಿ ಮೌಢ್ಯ ತೊರೆಯಬೇಕು. ದುಂದುವೆಚ್ಚ ಕಡಿಮೆ ಮಾಡಬೇಕು ಎಂದೂ ಸಲಹೆ ನೀಡಿದರು.
ಶ್ರೀಕೃಷ್ಣನು ಕನಕನಿಗೆ, ಶ್ರೀರಾಮನು ಶಬರಿಗೆ ಒಲಿದಿದ್ದು ಜಾತಿಯಿಂದಲ್ಲ; ಅವರಲ್ಲಿದ್ದ ಭಕ್ತಿಯಿಂದಾಗಿ. ಭಕ್ತಿ ಮತ್ತು ಭಕ್ತನಿಗೆ ಜಾತಿ ಇಲ್ಲ. ಎಲ್ಲ ಸ್ವಾಮೀಜಿಗಳನ್ನು, ವರ್ಗದವರನ್ನು ಒಗ್ಗೂಡಿಸಿದ ಕುಂದುವಾಡ, ಸಾಮರಸ್ಯದ ಗ್ರಾಮವಾಗಿದೆ. ಪ್ರತಿ ಗ್ರಾಮದಲ್ಲೂ ಇಂತಹ ವಾತಾವರಣ ಇರಬೇಕು ಎಂದು ಆಶಿಸಿದರು.
ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ ಆಂಜನೇಯನಿಗೆ ಸೀಮಿತ ಜಾತಿಯ ಭಕ್ತರಿಲ್ಲ. ಆತ ಜಾತ್ಯತೀತ ವ್ಯಕ್ತಿ. ಭಕ್ತಿಗೆ ಹೆಸರಾದ ಆಂಜನೇಯ ಹಾಗೂ ಸಮಾನತೆಗೆ ಹೆಸರಾದ ಬಸವೇಶ್ವರರ ದೇಗುಲ ಪ್ರತಿಷ್ಠಾಪನೆಯನ್ನು ಕುಂದುವಾಡ ಗ್ರಾಮಸ್ಥರು ಭಾವೈಕ್ಯ, ಸೌಹಾರ್ದ ಹಾಗೂ ಸಹಬಾಳ್ವೆಯಿಂದ ಮಾಡುತ್ತಿದ್ದಾರೆ. ಈ ಕುಂದುವಾಡ ಗ್ರಾಮ ಸೌಹಾರ್ದ ಗ್ರಾಮವಾಗಿ ಬದಲಾಗಲಿ ಎಂದು ಹೇಳಿದರು.
ಹದಡಿಯ ಚಂದ್ರಗಿರಿ ಮಠದ ಮುರಳೀಧರ ಸ್ವಾಮೀಜಿ ಮಾತನಾಡಿ ಎಲ್ಲವನ್ನು ಕೊಟ್ಟ ದೇವರನ್ನು ಮರೆಯುತ್ತಿದ್ದೇವೆ. ನಿಸರ್ಗವನ್ನು ಹಾಳು ಮಾಡುತ್ತ, ಮಾಲಿನ್ಯ ಹೆಚ್ಚಿಸುತ್ತಿದ್ದೇವೆ. ನಮ್ಮಲ್ಲಿ ಭಯ ಮೂಡಿಸಲು ಹಿರಿಯರು ಊರಿಗೊಂದು ದೇವಸ್ಥಾನ ನಿರ್ಮಿಸಿದ್ದಾರೆ. ಆದರೆ ನಮ್ಮೊಳಗಿರುವ ದೇವರನ್ನು ನಾವು ಕಾಣಬೇಕು. ಮದಗಳನ್ನು ಕೈಬಿಡಬೇಕು. ಧರ್ಮ ಕಾರ್ಯ, ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ ಬಸವತತ್ವ ಎಲ್ಲರೂ ಕೂಡಿ ಬಾಳುವುದನ್ನು ಹೇಳಿದೆ. ಎಲ್ಲ ವರ್ಗಗಳಿಗೂ ಬಸವಣ್ಣನವರು ಸಾಮಾಜಿಕ ನ್ಯಾಯ ನೀಡಿದರು. ನಾವಿಂದು ಅವರ ದಾರಿಯಲ್ಲಿ ಸಾಗಬೇಕಿದೆ. ಬಸವಣ್ಣ ಕಂಡು ಕನಸು ಕುಂದುವಾಡ ಗ್ರಾಮದಲ್ಲಿ ಅನಾವರಣವಾಗಿದ್ದು, ಇಲ್ಲಿ ಸದಾ ಶಾಂತಿ ನೆಲೆಸಲಿ ಎಂದು ಆಶಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಗ್ರಾಮದವರು ತುಂಬಾ ಒಗ್ಗಟ್ಟಿನಿಂದ ದೇವಾಲಯ ನಿರ್ಮಾಣ ಮಾಡಿರೋದು ಮೆಚ್ಚುವಂತಾಗಿದೆ,
ತಡವಾಗಿಯಾದರೂ ಗ್ರಾಮದಲ್ಲಿ ದೇಗುಲಗಳು ಉತ್ತಮವಾಗಿ ನಿರ್ಮಿತವಾಗಿವೆ. ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.
ದಾವಣಗೆರೆ- ಹಳೇ ಕುಂದುವಾಡ ಮುಖ್ಯ ರಸ್ತೆಗೆ ಹೊಂದಿಕೊಂಡ ರಸ್ತೆ ವ್ಯಾಜ್ಯ ನ್ಯಾಯಾಲಯದಲ್ಲಿದ್ದು ಇದನ್ನು ತೆರವುಗೊಳಿಸಿದಲ್ಲಿ ಗ್ರಾಮಸ್ಥರು ಬಯಸಿದಂತೆ 80 ಅಡಿ ರಸ್ತೆ ನಿರ್ಮಾಣ ಮಾಡಲು ಬದ್ಧನಿದ್ದೇನೆ. ಈ ಸಂಬಂಧ ದೂಡಾ ಅಧಿಕಾರಿಗಳು, ಜಮೀನಿನ ಮಾಲೀಕರು, ಗುತ್ತಿಗೆದಾರರನ್ನು ಸೇರಿಸಿ ಸಭೆ ನಡೆಸೋಣ ಎಂದರು.
ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಈ ಭಾಗದಲ್ಲಿ ದೇಗುಲಗಳ ಸಂಖ್ಯೆ ಹೆಚ್ಚಿದೆ. ಹಿಂದುಳಿದ ವರ್ಗದ ಮಕ್ಕಳು ವಿದ್ಯಾವಂತರಾದರೆ ಇಂತಹ ಹತ್ತು ದೇವಸ್ಥಾನ ಕಟ್ಟುತ್ತಾರೆ, ಹೀಗಾಗಿ ಶಾಲೆಗಳ ನಿರ್ಮಾಣಕ್ಕೂ ಮಹತ್ವ ನೀಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಮೈಲಾರ ಕ್ಷೇತ್ರದ ಕಾರ್ಣಿಕ ನುಡಿಯುವ ರಾಮಪ್ಪಜ್ಜ, ಹಳೆಕುಂದುವಾಡದ ಸ್ವಾಮಿಜಿ ರಾಜಣ್ಣ, ಮುಖಂಡರಾದ ಬಿ.ಜಿ. ಅಜಯಕುಮಾರ್, ಲೋಕಿಕೆರೆ ನಾಗರಾಜ್, ಶ್ರೀನಿವಾಸ ದಾಸಕರಿಯಪ್ಪ, ಎಚ್. ವೆಂಕಟೇಶ್, ಜೆ.ಎನ್. ಶ್ರೀನಿವಾಸ್. ಶ್ವೇತಾ ಶ್ರೀನಿವಾಸ್, ಮುದೇಗೌಡ್ರ ಗಿರೀಶ್, ತಹಸೀಲ್ದಾರ್ ಬಿ.ಎನ್.ಅಶ್ವಥ್, ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮದ ಮುಖಂಡರು, ಯುವಕರು, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಫೆಬ್ರವರಿ 17 ಮತ್ತು 18ಕ್ಕೆ ಕಲಬುರಗಿಯಲ್ಲಿ ಮೀಡಿಯಾ ಫೆಸ್ಟ್-2025
-
ದಿನದ ಸುದ್ದಿ7 days ago
ಪತ್ರಕರ್ತರ ಮೇಲೆ ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ್ ಹಲ್ಲೆ, ಕೊಲೆ ಬೆದರಿಕೆ
-
ದಿನದ ಸುದ್ದಿ7 days ago
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
-
ದಿನದ ಸುದ್ದಿ5 days ago
ಜಿಎಂ ಡಿಪ್ಲೋಮೋ ಕಾಲೇಜಿನ 44 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ
-
ದಿನದ ಸುದ್ದಿ4 days ago
ತುಂಬಿದ ಕೊಡ ತುಳುಕಿತಲೇ ಪರಾಕ್..!
-
ದಿನದ ಸುದ್ದಿ2 days ago
ಕವಿತೆ | ನಾನೊಲಿದೆನಯ್ಯಾ
-
ದಿನದ ಸುದ್ದಿ3 days ago
ಜನಸಿರಿ ಫೌಂಡೇಶನ್ ವತಿಯಿಂದ ಕವಿಗಳ ಕಲರವ
-
ದಿನದ ಸುದ್ದಿ17 hours ago
ಉತ್ಸವಗಳ ಹೆಸರಲ್ಲಿ ಮೌಢ್ಯ ತೊರೆಯಬೇಕು : ಈಶ್ವರಾನಂದಪುರಿ ಸ್ವಾಮೀಜಿ