Connect with us

ದಿನದ ಸುದ್ದಿ

ವರ್ಚುವಲ್ ಪಂಚಲಿಂಗದರ್ಶನ ಮಹೋತ್ಸವ; ಕೋವಿಡ್ ಹಿನ್ನೆಲೆ ಸರಳ ದಸರಾದಂತೆ ಆಚರಣೆಗೆ ಒತ್ತು : ಸಚಿವ ಎಸ್.ಟಿ. ಸೋಮಶೇಖರ್

Published

on

ಸುದ್ದಿದಿನ,ಮೈಸೂರು: ಕೋವಿಡ್ 19 ರ ಹಿನ್ನೆಲೆಯಲ್ಲಿ ದಸರಾವನ್ನು ಹೇಗೆ ಸರಳವಾಗಿ ಮಾಡಲಾಯಿತೋ ಹಾಗೆಯೇ ಪಂಚಲಿಂಗದರ್ಶನ ಮಹೋತ್ಸವವನ್ನೂ ಮಾಡೋಣ. ವರ್ಚುವಲ್ ವ್ಯವಸ್ಥೆಯನ್ನು ಮಾಡುವುದು ಒಳ್ಳೆಯದು. ಈ ಬಗ್ಗೆ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಬಳಿಯೂ ಚರ್ಚಿಸಿದ್ದೇನೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಪಂಚಲಿಂಗ ದರ್ಶನ ಮಹೋತ್ಸವ ಕುರಿತ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಲಹೆ, ಮಾಹಿತಿಯನ್ನು ಪಡೆದು ಸಚಿವರು ಮಾಹಿತಿ ನೀಡಿದರು.

ತಜ್ಞರ ಸಮಿತಿಯೊಂದನ್ನು ರಚಿಸಬೇಕಿದೆ. ಈ ತಂಡ ತಲಕಾಡಿಗೆ ಭೇಟಿ ನೀಡಿ ವರದಿ ಕೊಡಲಿ. ಅವರ ವರದಿ ಆಧಾರದ ಮೇಲೆ ಆಚರಣೆ ಮಾಡೋಣ. ಜೊತೆಗೆ ಚಳಿಗಾಲ ಬರುತ್ತಿರುವುದರಿಂದ ಹೆಚ್ಚಿನ ನಿಗಾ ವಹಿಸುವುದು ಒಳ್ಳೆಯದು ಎಂದು ಸಚಿವರು ತಿಳಿಸಿದರು.

ತಲಕಾಡಿನಲ್ಲಿ ಅಭಿವೃದ್ಧಿ ಕಾರ್ಯಗಳೂ ಆಗಬೇಕು. ಡಿಸೆಂಬರ್ 14ರಿಂದ ಪಂಚಲಿಂಗ ದರ್ಶನ ಮಹೋತ್ಸವ ಆರಂಭವಾಗುತ್ತಿರುವುದರಿಂದ ಎಲ್ಲವನ್ನೂ ಒಮ್ಮೆಲೆ ಮಾಡಲು ಸಾಧ್ಯವಾಗುವುದಿಲ್ಲ. ತುರ್ತು ಕೆಲಸಗಳನ್ನು ಈಗ ಮಾಡಿಕೊಳ್ಳಿ. ಹಂತಹಂತವಾಗಿ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡೋಣ ಎಂದು ಸಚಿವರಾದ ಸೋಮಶೇಖರ್ ಅವರು ಅಧಿಕಾರಿಗಳಿಗೆ ತಿಳಿಸಿದರು.

ತಜ್ಞರ ತಂಡದ ವರದಿ ಬಳಿಕ ತೀರ್ಮಾನ

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ 5-6 ಮಂದಿಯ ತಂಡ ರಚಿಸಲಾಗುವುದು. ಈ ತಂಡ ತಲಕಾಡಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಲಿದೆ. ಇನ್ನು ತಜ್ಞರ ತಂಡ ನೀಡುವ ವರದಿ ಆಧಾರದಲ್ಲಿ ಎಷ್ಟು ಜನ ಇರಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ

ಪಂಚಲಿಂಗದರ್ಶನ ಮಹೋತ್ಸವಕ್ಕೆ ಬೇಕಾದ ತಯಾರಿಗಳು ನಡೆಯಲಿ. ಸುಣ್ಣ ಬಣ್ಣ, ದೀಪಾಲಂಕಾರ, ರಸ್ತೆ, ಚರಂಡಿ ವ್ಯವಸ್ಥೆಗಳು ಸೇರಿದಂತೆ ಪ್ರತಿ ಬಾರಿ ನಡೆಯುವ ಕಾರ್ಯಕ್ರಮದಂತೆ ನಡೆಸುವ ಕಾಮಗಾರಿಗಳಿಗೆ ಎಷ್ಟು ಖರ್ಚು ಬೇಕಾಗುತ್ತದೆ ಎಂದು ಅಂದಾಜು ವೆಚ್ಚವನ್ನು ಪಟ್ಟಿ ಮಾಡಿ ಜಿಲ್ಲಾಡಳಿತ ಮುಖಾಂತರ ಪ್ರಸ್ತಾವನೆ ಸಲ್ಲಿಸಿ, ಸರ್ಕಾರದ ನಿರ್ಧಾರದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳೋಣ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಜ್ಞರ ತಂಡ ಪರಿಶೀಲಿಸಲಿ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ, ಪಂಚಲಿಂಗ ದರ್ಶನವನ್ನು ದಸರಾ ಮಾದರಿಯಲ್ಲಿ ವರ್ಚುವಲ್ ಆಗಿ ಆಚರಿಸುವುದು ಒಳ್ಳೆಯದು. ಎಲ್ಲರೂ ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಲಿ. ಅಲ್ಲದೆ, ತಜ್ಞರ ತಂಡವನ್ನು ಕರೆಸಿ ವರದಿ ಪಡೆದರೆ, ಅವರ ಸೂಚನೆಯಂತೆ ಆಚರಣೆ ಮಾಡುವುದು ಒಳ್ಳೆಯದು ಎಂದು ತಿಳಿಸಿದರು.

ಸಭೆಯ ಅಭಿಪ್ರಾಯಗಳು

ತಲಕಾಡು ಪ್ರಸಿದ್ಧವಾದ ಸ್ಥಳವಾಗಿದ್ದು, ಪ್ರತಿ ಬಾರಿ ಕಾರ್ತಿಕ ಮಾಸ, ವೃಶ್ಚಿಕ ಅಮವಾಸ್ಯೆ, ಸೋಮವಾರ ಕುಹಯೋಗ, ವಿಶಾಖ ನಕ್ಷತ್ರದ ಶುಭ ಲಗ್ನದಲ್ಲಿ ನಡೆಯುವ ಪಂಚಲಿಂಗ ದರ್ಶನ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಸೇರುತ್ತಾರೆ. ಈ ಬಾರಿ ಕೋವಿಡ್ ಇರುವುದರಿಂದ ಸರಳವಾಗಿ ಆಚರಿಸುವುದು ಒಳ್ಳೆಯದು ಎಂಬ ಅಭಿಪ್ರಾಯಗಳು ವ್ಯಕ್ತವಾದವು.

ತಲಕಾಡು ಕ್ಷೇತ್ರದ ಶ್ರೀವೈದ್ಯೇಶ್ವರ, ಶ್ರೀ ಪಾತಾಳೇಶ್ವರ, ಶ್ರೀ ಮರುಳೇಶ್ವರ, ಶ್ರೀ ಅರ್ಕೇಶ್ವರ ಮತ್ತು ಶ್ರೀ ಮುಡುಕುತೊರೆ ಮಲ್ಲಿಕಾರ್ಜುನೇಶ್ವರದ ಐದು ದೇವಸ್ಥಾನಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇವುಗಳಿಗೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಸಭೆಯಲ್ಲಿ ಮನವಿಗಳು ವ್ಯಕ್ತವಾದವು.

ಕಳೆದ ಬಾರಿ 2013ರಲ್ಲಿ ಪಂಚಲಿಂಗ ದರ್ಶನ ಮಹೋತ್ಸವಕ್ಕೆ 12 ಕೋಟಿ ರೂ.ಅನುದಾನ ಮಂಜೂರಾಗಿತ್ತು. ಅದರಲ್ಲಿ 6,78,01,740 ರೂ. ಖರ್ಚಾಗಿದ್ದು, ಇದರಲ್ಲಿ 5,58,00,000 ರೂಪಾಯಿ ಉಳಿಕೆಯಾಗಿತ್ತು. ಇದನ್ನು ಸಮೂಹ ದೇವಸ್ಥಾನಗಳಲ್ಲೊಂದಾದ ಮುಡುಕುತೊರೆ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಶಾಶ್ವತ ಕಾಮಗಾರಿಗಳಿಗೆ ಉಪಯೋಗಿಸಿಕೊಳ್ಳಲು ಸರ್ಕಾರದಿಂದ ಅನುಮತಿ ದೊರೆತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಅಂದಾಜು ವೆಚ್ಚ ಪಟ್ಟಿ

ವರ್ಚುವಲ್ ವ್ಯವಸ್ಥೆ ಮಾಡಲು 9 ಲಕ್ಷ ರೂಪಾಯಿ, ಧಾರ್ಮಿಕ ಕಾರ್ಯಕ್ರಮಕ್ಕೆ 32 ಲಕ್ಷ ರೂಪಾಯಿಯನ್ನು ಅಂದಾಜು ಮಾಡಲಾಗಿದೆ. ಆದರೆ, ಇದರಲ್ಲಿ ಯಾವುದೇ ದೀಪಾಲಂಕಾರಗಳು ಯಾವುದೂ ಸೇರಿಲ್ಲ ಎಂಬ ಮಾಹಿತಿಯನ್ನು ಸಭೆಗೆ ಅಧಿಕಾರಿಗಳು ನೀಡಿದರು.

ಆರೋಗ್ಯ, ಪೊಲೀಸ್ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಸಿದ್ಧತೆ ಹಾಗೂ ಕಾರ್ಯಕ್ರಮವನ್ನು ನಡೆಸಿದರೆ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ

Published

on

ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.

ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್.‌ ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್‌. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.

ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.

ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ

Published

on

ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್‌ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್‌ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್‌ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್‌ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್‌, ಚೇತನ್‌ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.

ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್‌ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್‌ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್‌ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.

ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending