Connect with us

ದಿನದ ಸುದ್ದಿ

ಚಿಕ್ಕಬಿದರಿ ಡಿಸ್ಟಿಲರಿ ಕಾರ್ಖಾನೆಯಿಂದ ಮಾಲಿನ್ಯ | ಗ್ರಾಮಸ್ಥರ ಆರೋಗ್ಯ ಕಾಪಾಡಲು ಜಿಲ್ಲಾಡಳಿತ ಬದ್ಧ : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

Published

on

ಸುದ್ದಿದಿನ,ದಾವಣಗೆರೆ : ಹರಿಹರ ತಾಲ್ಲೂಕು ಚಿಕ್ಕಬಿದರಿಯ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಆರೋಗ್ಯ ಇಲಾಖೆ, ತಾಲ್ಲೂಕು ಪಂಚಾಯತ್ ಸಹಯೋಗದಲ್ಲಿ ಭಾನುವಾರ ಏರ್ಪಡಿಸಲಾದ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಚಾಲನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಚಿಕ್ಕಬಿದರಿ ಸಮೀಪದ ಡಿಸ್ಟಿಲರಿ ಕಾರ್ಖಾನೆಯಿಂದ ಹೊರಸೂಸುವ ಹಾರುಬೂದಿಯಿಂದಾಗಿ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ, ಆರೋಗ್ಯ ಸಮಸ್ಯೆಗಳು ತಲೆದೋರುತ್ತಿವೆ ಎಂಬುದಾಗಿ ಇಲ್ಲಿನ ಗ್ರಾಮಸ್ಥರು ದೂರು ನೀಡಿದ್ದರು. ಹೀಗಾಗಿ ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಅಭಿಪ್ರಾಯ ಸಂಗ್ರಹಿಸಲಾಗಿತ್ತು.

ಗ್ರಾಮಸ್ಥರ ಕೋರಿಕೆಯಂತೆ ಆರೋಗ್ಯ ಇಲಾಖೆವತಿಯಿಂದ ವಿಶೇಷ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ, ಗ್ರಾಮದ ಪ್ರತಿಯೊಬ್ಬರೂ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಡಂಗುರ ಹಾಕಿಸಲಾಗಿತ್ತು. ಕಾರ್ಖಾನೆಯಿಂದ ಹೊರಸೂಸುವ ಹಾರುಬೂದಿ ಹಾಗೂ ತ್ಯಾಜ್ಯದಿಂದ ಗಾಳಿ, ನೀರು ಕಲುಷಿತವಾಗಿರುವ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಈ ಕುರಿತು ಬೆಂಗಳೂರಿನ ವಲಯ ಪರಿಸರ ಇಲಾಖಾ ಕಚೇರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ಕಾರ್ಖಾನೆಯವರು ಮಾಲಿನ್ಯ ನಿಯಂತ್ರಣಕ್ಕಾಗಿ ನೂತನ ತಂತ್ರಜ್ಞಾನ ಅಳವಡಿಕೆಗೆ ಸೂಚಿಸಲಾಗುವುದು, ಇದನ್ನು ಕಾರ್ಖಾನೆಯವರೂ ಕೂಡ ಅಳವಡಿಸಿ, ಸೂಚನೆಯನ್ನು ಪಾಲಿಸುವ ವಿಶ್ವಾಸವಿದೆ. ಈಗಾಗಲೆ ವಿವಿಧ ಇಲಾಖೆಗಳು ನೂತನ ತಂತ್ರಜ್ಞಾನಗಳನ್ನು ಅಳವಡಿಸಿ, ಪರಿಸರ ಮಾಲಿನ್ಯವನ್ನು ನಿಯಂತ್ರಿಸಿರುವ ನಿದರ್ಶನಗಳಿವೆ.

ಇದರ ಜೊತೆಗೆ ಇಲ್ಲಿನ ಗ್ರಾಮಗಳ ನೀರಿನ ಮಾದರಿಯನ್ನು ಸಂಗ್ರಹಿಸಿ, ಬಳಕೆಗೆ ಯೋಗ್ಯವಿರುವ ಬಗ್ಗೆ ಪರೀಕ್ಷಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಅಲ್ಲದೆ ಗ್ರಾಮಸ್ಥರ ರಕ್ತದ ಮಾದರಿ ಸಂಗ್ರಹಿಸಿ ವಿಶೇಷ ಪರೀಕ್ಷೆಗೆ ಒಳಪಡಿಸುವಂತೆಯೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಇದೀಗ ಗ್ರಾಮದಲ್ಲಿ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದ್ದು, ಮಕ್ಕಳು, ವೃದ್ಧರು, ಮಹಿಳೆಯರು, ಗರ್ಭಿಣಿಯರು ಸೇರಿದಂತೆ ಎಲ್ಲರೂ ಆರೋಗ್ಯ ತಪಾಸಣೆ ನಡೆಸುವಂತೆ ಅನುಕೂಲ ಮಾಡಿಕೊಡಲಾಗಿದೆ. ಒಂದು ವೇಳೆ ಆರೋಗ್ಯ ಸಮಸ್ಯೆ ಗಂಭೀರವಾಗಿದ್ದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡುವಂತೆಯೂ ಸೂಚಿಸಲಾಗಿದೆ.

ಆರೋಗ್ಯ ಇಲಾಖೆ ನೀಡುವ ವರದಿಯನ್ನಾಧರಿಸಿ ಮುಂದಿನ ಅಗತ್ಯ ಕ್ರಮ ಜರುಗಿಸಲಾಗುವುದು. ಗ್ರಾಮಸ್ಥರ ಆರೋಗ್ಯ ಕಾಪಾಡಲು ಜಿಲ್ಲಾಡಳಿತ ಬದ್ಧವಾಗಿದ್ದು, ಈ ಕುರಿತು ಜನರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಮಾಡಲಾಗುವುದು ಎಂದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ ಮಾತನಾಡಿ, ಜಿಲ್ಲೆಯ ಕೆಲವು ಗ್ರಾಮಗಳಲ್ಲಿನ ನೀರಿನಲ್ಲಿ ಫ್ಲೋರೈಡ್ ಅಂಶ ಇರುವ ಬಗ್ಗೆ ಮಾಹಿತಿ ಬಂದಿದ್ದು, ಇದಕ್ಕೆ ಕಾರಣಗಳನ್ನು ಕಂಡುಹಿಡಿದು, ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ. ಜಲಸಿರಿ ಯೋಜನೆಯಡಿ ಕೊಂಡಜ್ಜಿ ಹಾಗೂ ಸುತ್ತಮುತ್ತಲ 11 ಗ್ರಾಮಗಳಿಗೆ ಶುದ್ಧ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ.

ಸ್ವಚ್ಛ ಭಾರತ್ ಮಿಷನ್ ನಡಿ ಮನೆ ಮನೆಯಿಂದ ಕಸ ಸಂಗ್ರಹಿಸಿ, ಪ್ಲಾಸ್ಟಿಕ್ ತೊಡೆದುಹಾಕಿ ಪರಿಸರ ಕಾಯ್ದುಕೊಳ್ಳುವುದು, ಅಲ್ಲದೆ ಕಟ್ಟಲಾಗಿರುವ ಶೌಚಾಲಯಗಳನ್ನು ಬಳಸುವಂತೆ ಜಾಗೃತಿ ಮೂಡಿಸಲಾಗುವುದು. ಇಲ್ಲಿನ ಗ್ರಾಮಗಳಲ್ಲಿ ಗಾಳಿ, ನೀರಿನಿಂದ ಹರಡುವ ರೋಗ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾತನಾಡಿ, ಕಾರ್ಖಾನೆ ತ್ಯಾಜ್ಯ ನೀರಿನಲ್ಲಿ ಸೇರಿ, ನೀರು ಕಲುಷಿತಗೊಂಡು ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಹಾರುಬೂದಿ ಗಾಳಿಯೊಂದಿಗೆ ಬೆರೆತು ಗಾಳಿಯೂ ಕಲುಷಿತವಾಗಿರುವ ಸಾಧ್ಯತೆಗಳಿವೆ. ಇಲ್ಲಿನ ನೀರಿನ ಮಾದರಿಯನ್ನು ಸಂಗ್ರಹಿಸಿ, ಬಳಕೆಗೆ ಅರ್ಹವಾಗಿದೆಯೋ, ಇಲ್ಲವೋ ಎಂಬುದನ್ನು ಪರೀಕ್ಷಿಸಿ ವರದಿ ಸಲ್ಲಿಸಲಾಗುವುದು.

ಒಂದು ವೇಳೆ ನೀರಿನಲ್ಲಿ ರಾಸಾಯನಿಕ ಮಿಶ್ರಣವಾಗಿರುವುದು ಕಂಡುಬಂದಲ್ಲಿ, ಉನ್ನತ ತಪಾಸಣೆಗೆ ಬೆಂಗಳೂರಿಗೆ ಪರೀಕ್ಷೆಗೆ ಮತ್ತೊಮ್ಮೆ ಕಳುಹಿಸಿಕೊಡಲಾಗುವುದು. ಸದ್ಯ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಹಮ್ಮಿಕೊಂಡಿದ್ದು, ಯಾರಿಗಾದರೂ ಗಂಭೀರ ಆರೋಗ್ಯ ಸಮಸ್ಯೆ ಅಥವಾ, ಒಂದೇ ತರಹದ ಆರೋಗ್ಯ ಸಮಸ್ಯೆಗಳು ಹೆಚ್ಚು ಕಂಡುಬಂದಲ್ಲಿ, ಉನ್ನತ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗುವುದು. ಇಲ್ಲಿನ ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ನಿರಂತರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನಟರಾಜ್, ಆರೋಗ್ಯಾಧಿಕಾರಿ ಡಾ. ಚಂದ್ರಮೋಹನ್ ಸೇರಿದಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ತಹಸಿಲ್ದಾರರು, ಗ್ರಾ.ಪಂ. ಸದಸ್ಯರು, ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆರೋಗ್ಯ ಇಲಾಖೆಯಿಂದ ಚಿಕ್ಕಬಿದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಯಿತು. ಕಿವಿ, ಮೂಗು, ಗಂಟಲು ಪರೀಕ್ಷೆ, ಕಣ್ಣಿನ ಪರೀಕ್ಷೆ, ಕೋವಿಡ್ ಪರೀಕ್ಷೆ, ಚರ್ಮರೋಗ ಪರೀಕ್ಷೆ, ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ, ಹೃದ್ರೋಗ ಪರೀಕ್ಷೆ ಮುಂತಾದ ಪರೀಕ್ಷೆಗಳಿಗೆ ಶಾಲೆಯ ಪ್ರತಿ ಕೊಠಡಿಗಳಲ್ಲಿ ಪ್ರತ್ಯೇಕ ವಿಭಾಗ ವ್ಯವಸ್ಥೆ ಮಾಡಲಾಗಿತ್ತು.

ಹರಿಹರ ತಾಲ್ಲೂಕು ಹಾಗೂ ದಾವಣಗೆರೆಯ ಜಿಲ್ಲಾ ಆಸ್ಪತ್ರೆಯಿಂದ ತಜ್ಞ ವೈದ್ಯರುಗಳು ಆಗಮಿಸಿ, ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದರು. ಶಿಬಿರದಲ್ಲಿ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾಹಿತಿ ಹಕ್ಕು ಅರ್ಜಿ ಸಲ್ಲಿಕೆ ಇನ್ಮುಂದೆ ಮತ್ತಷ್ಟು ಸುಲಭ: ‘ಸಕಾಲ’ ಸೇವೆಗೆ ಭೌತಿಕ ಆರ್‌ಟಿಐ ಅರ್ಜಿಗಳ ಸೇರ್ಪಡೆ, ಗ್ರಾಮ ಒನ್‌ನಲ್ಲೂ ಲಭ್ಯ

Published

on

ಸುದ್ದಿದಿನ,​ಬೆಂಗಳೂರು: ನಾಗರಿಕರಿಗೆ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯನ್ನು ಇನ್ನಷ್ಟು ಸುಲಭವಾಗಿ ಬಳಸಲು ಹಾಗೂ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಕರ್ನಾಟಕ ಸರ್ಕಾರವು ಮಾನ್ಯ ಮುಖ್ಯಮಂತ್ರಿಯವರ ಅನುಮೋದನೆಯೊಂದಿಗೆ ಎರಡು ಪ್ರಮುಖ ಹಾಗೂ ನೂತನ ನಿರ್ಧಾರಗಳನ್ನು ಕೈಗೊಂಡಿದೆ.

ಭೌತಿಕ ಆರ್‌ಟಿಐ ಅರ್ಜಿಗಳ ದಾಖಲಾತಿ ಈಗ ‘ಸಕಾಲ’ ಸೇವೆ

​ಅಂಚೆ ಅಥವಾ ಖುದ್ದಾಗಿ ಸಲ್ಲಿಸುವ ಭೌತಿಕ (ಕಾಗದದ ರೂಪದ) ಆರ್‌ಟಿಐ ಅರ್ಜಿಗಳನ್ನು ಸ್ವೀಕರಿಸಿದ ಸಾರ್ವಜನಿಕ ಪ್ರಾಧಿಕಾರವು 2 ದಿನಗಳ ಒಳಗಾಗಿ ಆರ್‌ಟಿಐ ಆನ್‌ಲೈನ್ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು.

​ಇದನ್ನು ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011 ರ ಅಡಿಯಲ್ಲಿ ಖಾತ್ರಿ ಸೇವೆಯಾಗಿ ಅಧಿಸೂಚಿಸಲಾಗಿದೆ. ​ಇದರಿಂದ ಪ್ರತಿಯೊಬ್ಬ ಅರ್ಜಿದಾರರಿಗೂ ಆನ್‌ಲೈನ್ ನೋಂದಣಿ ಸಂಖ್ಯೆ ದೊರೆಯಲಿದ್ದು, ಅರ್ಜಿಯ ಸ್ಥಿತಿಗತಿಯನ್ನು (Status) ಯಾವಾಗ ಬೇಕಾದರೂ ಪರಿಶೀಲಿಸಬಹುದು.

​ಅರ್ಜಿಗಳು ಕಳೆದುಹೋಗುವ ಅಥವಾ ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆ ಇರುವುದಿಲ್ಲ. ನಿಯಮಿತ ۲ ದಿನಗಳಲ್ಲಿ ಪೋರ್ಟಲ್‌ನಲ್ಲಿ ದಾಖಲಿಸದಿದ್ದರೆ ನಾಗರಿಕರು ಸಕಾಲ ಕಾಯ್ದೆಯಡಿ ಪರಿಹಾರ ವೆಚ್ಚ ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ಸಂಬಂಧಪಟ್ಟ ಅಧಿಕಾರಿಯೇ ಇದಕ್ಕೆ ಹೊಣೆಗಾರರಾಗುತ್ತಾರೆ.

ಎಲ್ಲಾ ಒನ್ ಕೇಂದ್ರಗಳಲ್ಲಿ ಆನ್‌ಲೈನ್ ಆರ್‌ಟಿಐ ಸೇವೆ ಲಭ್ಯ

​ಇಂಟರ್ನೆಟ್ ಅಥವಾ ಕಂಪ್ಯೂಟರ್ ಬಳಕೆ ತಿಳಿಯದ ಸಾರ್ವಜನಿಕರನು ದೃಷ್ಟಿಯಲ್ಲಿಟ್ಟುಕೊಂಡು, ರಾಜ್ಯದ ಎಲ್ಲಾ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಆನ್‌ಲೈನ್ ಆರ್‌ಟಿಐ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ವಿಸ್ತರಿಸಲಾಗಿದೆ.

​ನಾಗರಿಕರು ತಮ್ಮ ಸಮೀಪದ ಕೇಂದ್ರಕ್ಕೆ ತೆರಳಿ ಸಿಬ್ಬಂದಿಯ ನೆರವಿನಿಂದ ಅರ್ಜಿ ಸಲ್ಲಿಸಬಹುದು.
​ನಿಗದಿತ ಆರ್‌ಟಿಐ ಶುಲ್ಕ ಮತ್ತು ಕೇಂದ್ರದ ನಾಮಮಾತ್ರ ಸೇವಾ ಶುಲ್ಕವನ್ನು ಪಾವತಿಸಿ, ಸ್ಥಳದಲ್ಲೇ ಆನ್‌ಲೈನ್ ಸ್ವೀಕೃತಿ (Acknowledgement) ಪಡೆಯಬಹುದು.

​ಗ್ರಾಮ ಪಂಚಾಯಿತಿ ಮಟ್ಟದ ‘ಗ್ರಾಮ ಒನ್’ ಕೇಂದ್ರಗಳ ಮೂಲಕ ಈಗ ಹಳ್ಳಿಯ ಪ್ರತಿಯೊಬ್ಬ ನಾಗರಿಕರಿಗೂ ಆನ್‌ಲೈನ್ ಆರ್‌ಟಿಐ ಸೌಲಭ್ಯ ತಲುಪಿದೆ.

ಪ್ರಮುಖ ಪ್ರಯೋಜನಗಳು

​ಏಕರೂಪದ ವೇದಿಕೆ: ಭೌತಿಕ, ಆನ್‌ಲೈನ್ ಅಥವಾ ಸೇವಾ ಕೇಂದ್ರಗಳ ಮೂಲಕ ಬರುವ ಎಲ್ಲಾ ಅರ್ಜಿಗಳು ಒಂದೇ ವೇದಿಕೆಯಡಿ ಬರಲಿವೆ. ​ಪಾರದರ್ಶಕತೆ: ಆರ್‌ಟಿಐ ಕಾಯ್ದೆ 2005ರ ಕಾಲಮಿತಿಗಳ ಪಾಲನೆಯನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು.

ಇದರಿಂದ ಮಾಹಿತಿ ಅಧಿಕಾರಿಗಳಿಂದಾಗುವ ವಿಳಂಬವನ್ನು ಶೀಘ್ರವಾಗಿ ಗುರುತಿಸಬಹುದು.
ನಾಗರಿಕರಿಗೆ ತಮ್ಮ ಅರ್ಜಿಗಳ ವಿಶ್ವಾಸಾರ್ಹ ದಾಖಲೆ ಲಭ್ಯವಾಗುತ್ತದೆ.

​ಸಾರ್ವಜನಿಕರು ನೇರವಾಗಿ ಆನ್‌ಲೈನ್‌ನಲ್ಲಾಗಲಿ ಅಥವಾ ತಮ್ಮ ಸಮೀಪದ ಸೇವಾ ಕೇಂದ್ರಗಳ (ಬೆಂಗಳೂರು ಒನ್/ಕರ್ನಾಟಕ ಒನ್/ಗ್ರಾಮ ಒನ್) ಮೂಲಕವಾಗಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ​ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ಕೆ.ಆರ್.ಐ.ಡಿ.ಎಲ್, ಮಾಯಕೊಂಡ ವ್ಯಾಪ್ತಿ ; 20 ಕೋಟಿ ಅನುದಾನ : ತನಿಖೆಗೆ ಒಳಪಡಿಸಲು ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಕೆ‌ಆರ್.ಐ.ಡಿ.ಎಲ್  ವಿಭಾಗ-2ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬಿಡುಗಡೆಯಾದ ರೂ. 20 ಕೋಟಿ ಮೊತ್ತದ 51 ಕಾಮಗಾರಿಗಳನ್ನು ಸೂಕ್ತ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಮಾಯಕೊಂಡ  ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ರೂ. 20 ಕೋಟಿ ಅನುದಾನದಲ್ಲಿ ನಡೆದಿರುವ 51 ಕಾಮಗಾರಿಗಳ ಬಗ್ಗೆ ಅನುಮಾನ ಕಂಡುಬಂದಿದ್ದು, ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಕೋರಿದಾಗ ಬಹುತೇಕ ಕಾಮಗಾರಿಗಳು ನಡೆದಿರುವುದಿಲ್ಲ ಎಂಬುದಾಗಿ ಹಿಂಬರಹ ನೀಡಿರುತ್ತಾರೆ. ಹೀಗಾಗಿ 51 ಕಾಮಗಾರಿಗೆ ಸಂಬಂಧಿಸಿದಂತೆ ನಿತೀನ್ ಎಸ್. ಜಾಧವ್, ಸಹಾಯಕ ಕಾರ್ಯಪಾಲಕ ಅಭಿಯಂತರು, ಕೆ.ಆರ್.ಐ.ಡಿ.ಎಲ್, ಮಾಯಕೊಂಡ ಇವರ ವಿರುದ್ಧ ಪ್ರಕರಣ ದಾಖಲಿಸಿ ರೂ. 20 ಕೋಟಿ ಮೊತ್ತದಲ್ಲಿ ನಡೆದಿರುವ 51 ಕಾಮಗಾರಿಗಳನ್ನು ನಿಯಮಾನುಸಾರ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೀಡಿರುವ ಮುಂಬಡ್ತಿಯ ಸ್ಥಳ ನಿಯುಕ್ತಿಗೆ ಸಂಬAಧಿಸಿದ ಆನ್‌ಲೈನ್ ಕೌನ್ಸಿಲಿಂಗ್‌ನಲ್ಲಿ ಪಾರದರ್ಶಕತೆಯನ್ನು ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳನ್ನು ಸೇವಾ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಅರ್ಹ ದ್ವಿತೀಯ ದರ್ಜೆ ಸಹಾಯಕರ ವೃಂದದಿAದ ಮುಂಬಡ್ತಿ ಮೂಲಕ ಭರ್ತಿ ಮಾಡಲು ಮುಂದಾಗಿದ್ದು, ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ದಿನಾಂಕ: 12-11-2025 ರಂದು ಆನ್‌ಲೈನ್ ಕೌನ್ಸಿಲಿಂಗ್ ನಡೆಸಿ, ಸ್ಥಳ ನಿಯುಕ್ತಿ ಮಾಡಿ, ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ಪ್ರಥಮ ದರ್ಜೆ ಸಹಾಯಕರ ಪಟ್ಟಿಯನ್ನು ಬಿಡುಗಡೆಗೊಸಲಾಗಿರುತ್ತದೆ.

ಆದರೆ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ಪಟ್ಟಿಯಲ್ಲಿ ಆಯುಕ್ತರ ಕಛೇರಿ, ಬೆಂಗಳೂರು ಇಲ್ಲಿ 03 ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯನ್ನು ಗುರುತಿಸಲಾಗಿರುತ್ತದೆ. ಆದರೆ ಆದೇಶ ಪ್ರತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಮುಂಬಡ್ತಿಯಲ್ಲಿ 10 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿಗೆ ಆಯ್ಕೆ ಮಾಡಿಕೊಂಡಿರುವ 10 ಅಭ್ಯರ್ಥಿಗಳಲ್ಲಿ 05 ಅಭ್ಯರ್ಥಿಗಳನ್ನು ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ ಯಥಾ ಪ್ರಕಾರ ಮುಂದುವರೆಸಲಾಗಿರುತ್ತದೆ.

ಹೀಗಾಗಿ ಸದರಿ ಮುಂಬಡ್ತಿ ಪ್ರಕ್ರಿಯೆಯು ನಿಯಮಬಾಹಿರವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿ 10 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending