ಭಾವ ಭೈರಾಗಿ
ಕಾದಂಬರಿ ವಿಮರ್ಶೆ | ಸ್ವಪ್ನದಲ್ಲಿ ಸೊರಗಿದ ಪ್ರೀತಿ
- ಸಿಂಪಲ್ ಸಿಂಚು
ಇತ್ತೀಚಿಗಷ್ಟೇ ಕರುನಾಡ ಹಣತೆ ಕವಿ ಬಳಗದ ಮೂಲಕ ಪರಿಚಿತರಾದ ಕೆ.ಸಿರಿ (ಗ್ರಾಮ ಲೆಕ್ಕಿಗರು) ಚಾಮರಾಜನಗರ. ಇವರು ಪರಿಚಯವಾದ ಹತ್ತು ನಿಮಿಷದಲ್ಲಿಯೇ ಇವರ ಕಾದಂಬರಿ ನನ್ನ ಕೈಗೆ ತಲುಪಿತು. “ಸ್ವಪ್ನದಲ್ಲಿ ಸೊರಗಿದ ಪ್ರೀತಿ”. ಅತ್ಯದ್ಭುತವಾದ ಶೀರ್ಷಿಕೆ ಹೊಂದಿದೆ. ನಾನು ಒಬ್ಬಳು ಬರಹಗಾರ್ತಿಯಾಗಿ ಶೀರ್ಷಿಕೆ ನೋಡಿ ನನ್ನದೇ ಆದಂತಹ ಒಂದು ಕಲ್ಪನೆಯಲ್ಲಿ ನಾನು ಮುಳುಗಿದಾಗ.
ಪ್ರೀತಿಯೆಂದರೆ, ಪ್ರೇಮ ಅಷ್ಟೇ ಅಂದುಕೊಂಡಿದ್ದೆ ಆದರೆ ಕುತೂಹಲದಿಂದ ಕಾದಂಬರಿಯನ್ನು ಓದುತ್ತಿರುವಾಗ ಅರ್ಥವಾಯಿತು, ಪ್ರೀತಿಯೆಂದರೆ ಹೆಸರು ಹಾಗೆಯೇ ಪ್ರೇಮ ಅನ್ನೋದು ಕೂಡ ಹೆಸರು, ಅಂತ. ಸಮಾಜದಲ್ಲಿ ಪ್ರೇಮ ನಿವೇದನೆಯನ್ನು ಮೊದಲಿಗೆ ಹುಡುಗರು ಮಾಡಬೇಕು, ಅದಕ್ಕೂ ಮೊದಲು ಪ್ರೇಮ ನಿವೇದನೆಯನ್ನು ಹುಡುಗಿ ಮಾಡಿದರೆ ತಪ್ಪು.
ಎಂಬುದು ವಿಶ್ವವಿಖ್ಯಾತಿ ಅಭಿಪ್ರಾಯ. ಅದು ಇನ್ನು ಹಲವಾರು ಜನರ ಅಭಿಪ್ರಾಯವೂ ಹೌದು. ಹೆಣ್ಣಾದವಳು ತನ್ನೊಳಗಿನ ಭಾವನೆಗಳನ್ನು, ನನ್ನೊಳಗಿನ ತಲ್ಲಣಗಳನ್ನು ಹೊರಹಾಕಲು ಸಮಾಜದಲ್ಲಿ ಸರಿಯಾದ ರೀತಿಯ ಸ್ವತಂತ್ರ ಕೂಡ ಇಲ್ಲ ಅಂತಹ ಕಟ್ಟುಪಾಡುಗಳಿಗೆ ಸ್ವಪ್ನದಲ್ಲಿ ಸೊರಗಿದ ಪ್ರೀತಿಯು ಪರಿಹಾರವಾಗಿದೆ.
ಇದನ್ನೂ ಓದಿ | ಪುಸ್ತಕ ವಿಮರ್ಶೆ | ಮೋಹದ ಮೋಡಗಳು
ಈ ಕಾದಂಬರಿಯನ್ನೂ ಪೂರ್ತಿಯಾಗಿ ಇದರಲ್ಲಿ ಮುಳುಗಿ ಓದಿದಾಗ ಮಧ್ಯದಿಂದ ಹಿಡಿದು ಕೊನೆಯವರೆಗೂ ದುಃಖ ನನ್ನನ್ನು ಅವರಿಸುತ್ತದೆ. ಪ್ರೀತಿ ಪ್ರೇಮ್ ಎಂಬ ಹೆಸರಿನ ಹೊಂದಾಣಿಕೆ ತುಂಬಾ ಅದ್ಭುತವಾಗಿದೆ. ಪ್ರೀತಿ ಪ್ರೇಮ್ ನಾ ಹುಟ್ಟಿದ ದಿನ, ಕೆಂಪುಬಣ್ಣದ ಅಭಿರುಚಿ, ಪ್ರೀತಿ ಪ್ರೇಮಿಗಳ ದಿನವನ್ನು ಆಚರಿಸುತ್ತಿದಂತಹ ಪದ್ಧತಿ.
ಎಲ್ಲವೂ ಕೂಡ ತುಂಬಾ ಮನಸ್ಸಿಗೆ ಇಷ್ಟವಾಯಿತು. ಹಾಗೆಯೇ ಪ್ರೀತಿ ಎಷ್ಟು ವರ್ಷಗಳ ಕಾಲವಾದರೂ ತನ್ನ ಪ್ರೀತಿಯನ್ನು ಉಳಿಸಿಕೊಂಡು ಹೋಗುವ ರೀತಿ. ನಮ್ಮಂತಹ ಹೂಮನಸ್ಸಿಗರಿಗೆ ಸ್ಫೂರ್ತಿದಾಯಕವಾಗಿದೆ. ಈ ಕಾದಂಬರಿಯಲ್ಲಿ ಹುಚ್ಚುಕೋಡಿ ಮನಸ್ಸಿನ ಚಿತ್ರಣವನ್ನು ಮತ್ತು ನಿಯಂತ್ರಣವನ್ನು, ಪ್ರೇಮ್ನಾ ಮೂಲಕ ಬಣ್ಣಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರೀತಿ-ಪ್ರೇಮವೆಂದು ಆವೇಶ ಪಟ್ಟು ಆತ್ಮಹತ್ಯೆ, ಸಾವಿನ ಕೃತ್ಯಗಳನ್ನು ಕೈಗೊಳ್ಳುವ ಯುವಜನರಿಗೆ ಜೀವನದ ಗುರಿ ಮುಖ್ಯ ಎಂಬುದನ್ನು ತಿಳಿಸುತ್ತದೆ. ಮುಂದುವರೆದು ಕನ್ನಡ ದೇಸಿ ಪದಗಳ ಸಂಭಾಷಣೆ, ನಿರ್ಗಳತೆಯಿಂದ ಕಾದಂಬರಿ ಓದುವವರಿಗೆ ಪ್ರಯಾಣದಲ್ಲಿ ನಿಲ್ದಾಣಗಳಂತೆ ಸರಳವಾಗಿ ಅರ್ಥವಾಗುವ ಕವನಗಳು ಕಾದಂಬರಿಯ ವಿಶೇಷತೆಯಾಗಿದೆ.
ಅಪ್ಪ-ಅಮ್ಮನ ಮಾತಿಗೆ ಬೆಲೆ ಕೊಡದಿರುವ ಯುವಜನಾಂಗಕ್ಕೆ ಮಾದರಿ ಪ್ರೇಮ್ ಒಂದೆಡೆ ಆದರೆ, ಇನ್ನೊಂದೆಡೆ ಅದೇ ಪ್ರೇಮ್ ಪ್ರೀತಿಯ ಪ್ರೀತಿಯನ್ನು ನಿಭಾಯಿಸಲು ಬರದೆ, ತನಗೆ ತಾನು ಮೋಸ ಮಾಡಿಕೊಂಡಿದ್ದು ತುಂಬಾ ದುಃಖಕರ ವಿಚಾರ. ಅತಿ ಹೆಚ್ಚು ಭಾವುಕರಾದ ಕ್ಷಣ ಪ್ರೇಮ್ ತನ್ನ ಅಪ್ಪನನ್ನು ಪ್ರೀತಿಯ ಗೋರಿಯ ಹತ್ತಿರ ಕರೆದುಕೊಂಡು ಹೋಗಿ.
ತನ್ನ ದುಃಖವನ್ನು ಹೇಳಿಕೊಂಡು ಅಪ್ಪ-ಮಗ ಇಬ್ಬರೂ ಪಶ್ಚತಾಪ ಪಡುವ ಕ್ಷಣ.ಪ್ರೀತಿಯ ಬದಲಿಗೆ ಪಾರ್ವತಿ ಬಂದಾಗ, ಪ್ರೀತಿಯನ್ನು ಪಾರ್ವತಿಯಲ್ಲಿ ಕಾಣುವುದು!! ಇಲ್ಲದಿರುವ ವ್ಯಕ್ತಿಗಳನ್ನು ಇರುವ ವ್ಯಕ್ತಿಗಳೊಂದಿಗೆ ಕಲ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅಂತಹ ಸಂದರ್ಭವನ್ನು ತುಂಬಾ ಸೂಕ್ಷ್ಮವಾಗಿ ವರ್ಣಿಸಿದ್ದಾರೆ.
ನಾನು ಪಿಯುಸಿ ನಲ್ಲಿರುವಾಗ ವಿನಿತ್ ಎಂಬ ಹುಡುಗ ದ್ವಿತೀಯ ಪಿಯುಸಿ ಪರೀಕ್ಷೆಯ ಸಮಯದಲ್ಲಿ ಪ್ರೇಮ ನಿವೇದನೆಯನ್ನು ತನ್ನ ಗೆಳೆಯರೊಂದಿಗೆ ಹೇಳಿಕಳಿಸಿದ್ದ ನಾನು ಮೊದಲು ಪರೀಕ್ಷೆ ಬರೆದು ಪಾಸ್ ಆಗಲಿಕ್ಕೆ ಹೇಳು ಎಂದು ಬೈದು ಕಳಿಸಿದ ಕ್ಷಣ ನೆನಪಾಗಿ ನಕ್ಕಿದೆ.
ಈ ಕಾದಂಬರಿಯನ್ನು ಓದಿದ ಕ್ಷಣಗಳು ನನ್ನನ್ನು ತುಂಬಾ ಯೋಚನೆ, ತುಂಬಾ ಭ್ರಮೆಗಳಿಗೆ, ತುಂಬಾ ಪ್ರಶ್ನೆಗಳಿಗೆ ಅನುವು ಮಾಡಿ ಎಲ್ಲದಕ್ಕೂ ಕೊನೆಯಲ್ಲಿ ಉತ್ತರ ಹುಡುಕುವಲ್ಲಿ ವಿಶಾಲವಾದ ಮನಸ್ಥಿತಿಯನ್ನು ತಂದುಕೊಟ್ಟಂತಹ “ಕೆ. ಸಿರಿಯವರ ಸ್ವಪ್ನದಲ್ಲಿ ಸೊರಗಿದ ಪ್ರೀತಿಗೆ ಸದಾಕಾಲ ಚಿರಋಣಿ”. ಶುಭವಾಗಲಿ ಶ್ರೀಧರ್ ಸರ್. ಇನ್ನು ಹಲವಾರು ವಿಶೇಷ ವಿಭಿನ್ನ ಕಾದಂಬರಿಗಾಳಿಗಾಗಿ ಕಾಯುತ್ತಿರುವ ಆಶಾ ಜೀವಿ ನಿಮ್ಮ ಅನುಯಾಯಿ. ಸಿಂಪಲ್ ಸಿಂಚು. ಧನ್ಯವಾದಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಮುರುಕುಂಬಿ
- ಡಾ.ಗಿರೀಶ್ ಮೂಗ್ತಿಹಳ್ಳಿ
ನಮ್ಮ ಒಳಗೆ ಬಿಡಲೆ ಇಲ್ಲ
ಚೌರ ಚಹಾ ಮಾಡಲೆ ಇಲ್ಲ
ಎದೆಗೆ ಒದ್ದರು; ಬದಿ ಬದಿಗು ನಕ್ಕರು
ಜಾತಿಪಂಚೆ ಉಟ್ಟುಕೊಂಡು
ನೀತಿನಂಜು ಇಟ್ಟುಕೊಂಡು
ದ್ವೇಷ ಮೆರೆದರು; ಕಟುಸತ್ಯ ಮರೆತರು
ನೂರ ಒಂದು ಕೂಡಿಕೊಂಡು
ಹಟ್ಟಿತನಕ ಅಟ್ಟಿಬಂದು
ಬೆಂಕಿ ಇಟ್ಟರು ; ಕಣ್ಣೀರು ಕೊಟ್ಟರು
ಮುರುಕುಂಬಿ ಮುರುಕರೆಲ್ಲ
ಕಂಬಿ ಹಿಂದೆ ಬಿದ್ದರಲ್ಲ
ಕೆಟ್ಟ ಮನಗಳು; ಕಡುಕೆಟ್ಟ ಜನಗಳು
ಜಾತಿಗೀತಿ ಏನು ಇಲ್ಲ
ಪ್ರೀತಿ ಪ್ರೇಮ ಇರಲಿ ಎಲ್ಲ
ಬಾಳ್ಮೆ ಮಾಡಲು; ಸಹಬಾಳ್ಮೆ ಮಾಡಲು
ಶಾಂತಿಬೆಳಕು ಬುದ್ಧನಿರಲು
ಕ್ರಾಂತಿಕಹಳೆ ಬಸವನಿರಲು
ಅಳಲುಬಾರದು;’ವಿಧಿದಾತ’ನಿರಲು
ಅಳುಕುಬಾರದು. (ಕವಿತೆ-ಡಾ. ಗಿರೀಶ್ ಮೂಗ್ತಿಹಳ್ಳಿ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ‘ಎಳೆ’ ತಂದರೋ..!
- ನವೀನ್ ಸಾಗರ್, ಬೆಂಗಳೂರು
ಸಿನಿಮಾ ಹಾಡುಗಳು ಕವನಗಳು ಎಲ್ಲ ಗದ್ಯಗಳಷ್ಟು ನೇರ ಸಲೀಸು ಅಲ್ಲ. ಹೇಳಬೇಕಿರೊದನ್ನು ಗದ್ಯಗಳ ಹಾಗೆ ಸೀದಾಸಾದಾವಾಗಿ ಕವನಗಳು, ಸಿನಿಗೀತೆಗಳು ಹೇಳುವುದಿಲ್ಲ. ಹಾಗೆ ಹೇಳಿಬಿಟ್ಟರೆ ಅವು ಕವನ/ಹಾಡು/ಪದ್ಯಗಳೇ ಅಲ್ಲ!!!
ಹಾಡು ಅಂದರೆ ಅಲ್ಲಿ ಉಪಮೆಗಳು ಗೂಢಾರ್ಥಗಳು ದ್ವಂದ್ವಾರ್ಥಗಳು(ದ್ವಂದ್ವಾರ್ಥ ಅಂದ್ರೆ ಅಶ್ಲೀಲ ಮಾತ್ರವೇ ಅಲ್ಲ), ಎರಡುಮೂರು ವಿಚಾರಗಳನ್ನು ಹೇಳಬಲ್ಲ ಒಂದೇ ಒಂದು ಸಾಲು, ಇನ್ಯಾವತ್ತೋ ರೆಲೆವೆಂಟ್ ಅನಿಸಬಲ್ಲ ಕಲ್ಪನೆಗಳು ಏನೇನೋ ತುಂಬಿಹೋಗಿರುತ್ತವೆ. ಅದಕ್ಕೊಂದು ಮೂಡ್ ಇರುತ್ತೆ.
ಒಬ್ಬೊಬ್ಬ ಓದುಗನಲ್ಲಿ ಒಂದೊಂದು ಭಾವ ಹುಟ್ಟಿಸಬಲ್ಲ ಶಕ್ತಿ ಕವಿತೆಗಳಿಗಿರುತ್ತದೆ. ನನಗೆ ರೊಮ್ಯಾಂಟಿಕ್ ಅನಿಸುವ ಗೀತೆಯೊಂದು ಇನ್ನೊಬ್ಬನಿಗೆ ವಿರಹಗೀತೆ ಅನಿಸಬಹುದು. ನನಗೆ ಲಾಲಿ ಹಾಡೆನಿಸುವ ಗೀತೆಯೊಂದು ಇನ್ಯಾರಿಗೋ ಜಾಲಿ ಗೀತೆ ಅನಿಸಬಹುದು. ಇನ್ನೊಬ್ರಿಗೆ ಶೋಕಗೀತೆ ಅನಿಸೋ ಗೀತೆಯಲ್ಲಿ ನನಗೇನೋ ತುಂಟತನ ಕಾಣಿಸಬಹುದು. ಸಭ್ಯಗೀತೆ ಅನಿಸುವ ಹಾಡೊಂದು ಸಾಲುಸಾಲಲ್ಲೂ ಡಬಲ್ ಮೀನಿಂಗ್ ತುಂಬ್ಕೊಂಡಿದೆಯಲ್ಲ ಅನಿಸಬಹುದು. ಗ್ರಹಿಕೆ ಮೂಡು ವಯಸ್ಸು ಸಂದರ್ಭ ಇವೆಲ್ಲದರ ಮೇಲೆ ಹಾಡೊಂದು ನಮ್ಮನ್ನು ತಲುಪೋ ಬಗೆ ಬದಲಾಗುತ್ತಾ ಹೋಗುತ್ತದೆ. ಅಷ್ಟಾಗಿಯೂ ಅಸಲಿಗೆ ಅದನ್ನು ಬರೆದ ಕವಿಯ ಯೋಚನೆ ನಾವು ಗ್ರಹಿಸಿದ್ದೆಲ್ಲಕ್ಕಿಂತ ಭಿನ್ನವಾಗಿದ್ದಿನ್ನೇನೋ ಇದ್ದರೂ ಇರಬಹುದು.
ಹಲವು ಬಾರಿ ಕವಿಗೆ ತನ್ನ ಗೀತೆ ತಾನಂದುಕೊಂಡ ಭಾವದಲ್ಲೇ ರೀಚ್ ಆಗಿದೆ ಅನ್ನೋ ಖುಷಿ ತೃಪ್ತಿ ಸಿಗುತ್ತದೆ. ಕೆಲವು ಬಾರಿ .. ಅರೆ ಬರೆಯುವಾಗ ನಾನೇ ಹೀಗೊಂದು ಗೂಡಾರ್ಥದ ಬಗ್ಗೆ ಯೋಚಿಸಿರಲಿಲ್ಲ. ಕೇಳುಗ ಇದಕ್ಕೆ ಇನ್ನೊಂದು ಆಯಾಮವನ್ನೇ ಕೊಟ್ಟುಬಿಟ್ಟನಲ್ಲ ಅಂತ ಅಚ್ಚರಿಯಾಗಬಹುದು. ಕೆಲವೊಮ್ಮೆ ತನಗೇ ಗೊತ್ತಿಲ್ಲದ ಅರ್ಥ ಹುಟ್ಟಿಸಿ ತನ್ನನ್ನು ಕೇಳುಗರು ಮೇಲೇರಿಸಿ ಕೂರಿಸಿದಾಗ, ಈ ಕ್ರೆಡಿಟ್ ಬಿಟ್ಟುಕೊಡಲಿಷ್ಟ ಪಡದ ಕರಪ್ಟ್ ಮನಸು.. ಹೌದೌದು ನಾನು ಹೀಗೆ ಎರಡರ್ಥ ಹುದುಗಿಸಿಈ ಸಾಲು ಬರೆದಿದ್ದೆ ಎಂದು ಧ್ವನಿಗೂಡಿಸುತ್ತದೆ. ಅದೇ ವಿವಾದಕ್ಕೋ ಅವಹೇಳನಕ್ಕೋ ಕಾರಣವಾದರೆ .. ಇಲ್ಲ ನಾನು ಬರೆದದ್ದು ಈ ಅರ್ಥದಲ್ಲಿ ಅಂತ ಸೇಫ್ಟಿ ಮೋಡ್ ಗೂ ಹೋಗುತ್ತದೆ. ಹಾಡು/ಕವಿತೆಗಳಿಗೆ ಈ ವ್ಯಾಖ್ಯಾನದ ಮೂಲಕ ಬಚಾವಾಗುವ ಇಮೇಜ್ ರೂಪಿಸಿಕೊಳ್ಳುವ ಅವಕಾಶವಿರುತ್ತದೆ. ಗದ್ಯಗಳಿಗೆ ಆ ಪ್ರಿವೆಲೇಜ್ ಇರೋದಿಲ್ಲ.
ಸಂಭ್ರಮ ಚಿತ್ರದಲ್ಲಿ ಹಂಸಲೇಖ … “ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರೋ…” ಗೀತೆಯಲ್ಲಿ ” ಎಳೆ” ಪದವನ್ನು ಎರಡರ್ಥ ಬರುತ್ತದೆಂದೇ ಬಳಸಿದರೋ ಬರೆದ ಮೇಲೆ ಎರಡರ್ಥ ಕೇಳುಗರ ಗ್ರಹಿಕೆಗೆ ಬಂತೋ ಎಂಬ ಪ್ರಶ್ನೆಯಂತೆ ಇದು. ಹಂಸ ಲೇಖಾವ್ರು ಪ್ರೀತಿಯ ’ಎಳೆ’ಯ ಬಗ್ಗೆ ಬರೆದಿರಬಹುದು. ಅಥವಾ ಎಳೆದು ತಂದರೋ ಎಂದು ಕೇಳಿಯೂ ಬರೆದಿರಬಹುದು. ಅಥವಾ ಅವರಿಗಿರೋ ಪನ್ ಸೆನ್ಸ್ ಗೆ ಈ ಎರಡೂ ಅರ್ಥ ಬರಲಿ ಅಂತಲೇ ಎಳೆ ಎಂಬ ಪದ ಬಳಸಿರಬಹುದು. ಈ ಥರದ ಸಾಕಷ್ಟು ಉದಾಹರಣೆ ಸಿಗುತ್ತದೆ. ಸಾಹಿತ್ಯ ಗಮನಿಸಲು ಶುರು ಮಾಡಿದಾಗ ಇಂಥ ಖುಷಿ ಅನುಭೂತಿಗಳು ಸಿಗಲಾರಂಭಿಸುತ್ತವೆ. ರಿಸರ್ಚಿನಂಥ ಖುಷಿ
ಹಂಸಲೇಖರ … “ಈ ಹರಯದ ನರಕೊಳಲಲಿ ಇವೆ ಸರಿಗಮ ಹೊಳ್ಳೆಗಳು… ಈ ಮದನನ ಕಿರುಬೆರಳಲಿ ನವಿರೇಳದೆ ಗುಳ್ಳೆಗಳು..” ಈ ಸಾಲು ಕೇವಲ ಕಮರ್ಶಿಯಲ್ ಮ್ಯೂಸಿಕಲ್ ಸಾಂಗ್ ಆಗಿ ನಮ್ಮ ಕಿವಿ ತಲುಪಿದಾಗ ಗುನುಗುವ ಸಾಲಾಗುತ್ತದೆ ಅಷ್ಟೆ. ಅರೆ ಹರಯದ ನರಕೊಳಲು ಅಂದ್ರೆ ಏನು… ಮದನನ ಕಿರುಬೆರಳು ಅಂದ್ರೆ.. ? ಸಾಮಾನಿಗೆ ಇಷ್ಟು ಸಭ್ಯಶೃಂಗಾರರೂಪ ಕೊಟ್ಟು ಹೇಳಿರೋದಾ ಅನಿಸಿದಾಗ.. ಶೃಂಗಾರ ಅಡಗಿರೋ ಸಾಲಾದರೂ ಜೋರಾಗಿ ಹೇಳೋಕೆ ಮನಸು ಹಿಂಜರಿಯುತ್ತದೆ.
ಸಾಹಿತ್ಯ ಅಷ್ಟಾಗಿ ಗಮನಿಸದ ವಯಸ್ಸಲ್ಲಿ… “ಮೈಯ್ಯಲ್ಲಿ ಏಳುತಿದೆ ಮನ್ಮಥನ ಅಂಬುಗಳು.. ಜುಮ್ ಜುಮ್ ಜುಮ್..” ಅನ್ನೋ ಸಾಲು ಸಂಕ್ರಾಂತಿ ಗೀತೆ ಎಂಬಂತೆ ಬಂದು ಹೋಗುತ್ತಿತ್ತು.
ಆದರೆ ಆನಂತರ ಸಾಹಿತ್ಯವಾಗಿ ಗಮನಿಸಿದಾಗ. ಆಹಾ ರೋಮಾಂಚನವನ್ನು.. ಮೈರೋಮ ನಿಮಿರುವುದನ್ನು ಮನ್ಮಥನ ಬಾಣಕ್ಕೆ ಹೋಲಿಸಿದ್ದಾರಲ್ಲ ಅನಿಸಿ ನಿಜಕ್ಕೂ ಜುಮ್ ಅನಿಸಿತ್ತು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿದರೆ.. ಮೈಯಲ್ಲಿ ಏಳುತಿದೆ ಮನ್ಮಥನ ಅಂಬು ಅಂದ್ರೆ.. ಒನ್ಸಗೇನ್ ಸಾಮಾನಿರಬಹುದಾ ಅನಿಸದಿರದು.
ಸದಾಶಿವಂಗೆ ಅದೇ ಗ್ಯಾನ ಅಂದ್ಕೋಬೇಡಿ..
ನೆನಪಿರಲಿ ಚಿತ್ರದ ಅಜಂತಾ ಎಲ್ಲೋರಾ ಗೀತೆಯಲ್ಲಿ ಬರುವ… “ಮಂದವಾಗಿ ಬಳುಕೋವಂಥ ನಾರಿ ಇವಳ
ಅಂದ ನೋಡಿ ನಿಂತಾಗ..ಚಂದ ನೋಡಿ ನಿಂತಾಗ..
ಯಾರೊ ನೀನು ಎಂದು ಕೇಳುತಾವೆ..
ಇವಳ ಪೊಗರಿನ ಹೃದಯಪಾಲಕಿಯರು..
ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ…”
ಈ ಸಾಲುಗಳು ತನ್ನ ರಿದಮಿಕ್ ಮ್ಯೂಸಿಕ್ ಹಾಗೂ ಸುಲಲಿತವಾಗಿ ಲಘುಗುರು ಇಟ್ಟು ಬರೆದಂಥ ಪದಗಳ ಆಟದಿಂದ ಮಜವಾಗಿ ಹಾಡಿಸಿಕೊಂಡು ಬಿಡ್ತವೆ. ಆದರೆ ಯಾವತ್ತೋ ಆರಾಮಾಗಿ ಸಾಹಿತ್ಯ ಕೇಳ್ತಾ ಇದ್ದರೆ.. ಆಹಾ ..ಹಂಸಲೇಖರ ರಸಿಕಕಲ್ಪನೆಗಳಿಗೆ ಮಿತಿಯೇ ಇಲ್ಲವಾ ಅನಿಸಿಬಿಡುತ್ತದೆ.
ಯಾರೋ ನೀನು ಎಂದು ಕೇಳುತಾವೆ ಇವಳ “ಪೊಗರಿನ ಹೃದಯ ಪಾಲಕಿಯರು” ಎಂದು ಅವರು ರೆಫರ್ ಮಾಡ್ತಿರೋದು ಆ ಹೆಣ್ಣಿನ ಸ್ತನಗಳ ಬಗ್ಗೆ ಅಂತ ಅರ್ಥವಾದಾಗ ಮತ್ತೊಮ್ಮೆ ಈ ಸಾಂಗ್ ಕೊಡುವ ಅನುಭೂತಿಯೇ ವಿಭಿನ್ನ. “ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ” ಎಂದು ಮುಂದುವರಿಸಿ ಆ ಸಾಲಿಗೆ ಇನ್ನಷ್ಟು ರಸಿಕತೆ ತುಂಬುತ್ತಾರೆ ಹಂಸ್.
ಗಡಿಬಿಡಿಗಂಡ ಚಿತ್ರದ…. ಮುದ್ದಾಡೆಂದಿದೆ ಮಲ್ಲಿಗೆ ಹೂ ಗೀತೆಯಲ್ಲಿ……. ನಾಯಕಿ”ಎದೆಯ ಸೆರಗ ಮೋಡದಲ್ಲಿ ನೀನೇ ಚಂದ್ರನೀಗ….” ಅಂದರೆ…. ನಾಯಕ” ಹೃದಯ ಮೇರುಗಿರಿಗಳಲ್ಲಿ… ಕರಗಬಹುದೆ ಈಗ” ಅಂತಾನೆ. “ಮುಡಿಯಲಿ ಮಲ್ಲಿಗೆಯ ಮುಡಿದವಳ ಮೊದಲುಮುಡಿಯಬೇಕು.. ಮಡದಿಗೆ ಪ್ರತಿದಿನವೂ ಮೊದಲಿರುಳಿರಬೇಕು…” ಅಂತ ನಾಯಕಿ ತನ್ನನ್ನು ಮೊದಲು ರಮಿಸು ಅಂತ ಒತ್ತಾಯಿಸುತ್ತಿದ್ದರೆ………… ನಾಯಕ ..” ಮನಸಿನ ಮಧುವಿನ ಮಹಲೊಳಗೆ … ಮದನ ಮಣಿಯಬೇಕು… ಸುರತಿಯ ಪರಮಾನ್ನ ಹಿತಮಿತವಿರಬೇಕು” ಅಂತ ಆಕೆಯ ಮೇಲಿರೋ ಮೋಹದ ಜೊತೆಜೊತೆಗೆ ಪ್ರತಿದಿನ ಬೇಡ ಫ್ರೀಡಮ್ಮು ವೀಕ್ಲಿ ಒನ್ಸು ಜುಮ್ ಜುಮ್ಮು” ಅಂತ ದೂರ ಹೋಗೋ ಪ್ರಯತ್ನ ಕೂಡ ಮಾಡುತ್ತಾನೆ.
ಇದು ಕೂಡ ಹೆಣ್ಣು ತನ್ನ ಗಂಡನ್ನು ಸೆಕ್ಸಿಗಾಗಿ ಕರೆಯುವ ಗೀತೆಯೇ ಆದರೂ… ತನ್ನ ಕ್ಲಾಸಿಕಲ್ ಟ್ಯೂನ್ ನಿಂದ ಚೆಂದದ ಪದಜೋಡಣೆಯಿಂದ… ಈ ಹಾಡು ಕೊಂಚವೂ ಅಶ್ಲೀಲ ಅನಿಸೋದೇ ಇಲ್ಲ. ಅಶ್ಲೀಲ ಅನಿಸಿದರೂ ಓಕೆ ಎಂದು ಬರೆದಾಗ.. ರಾತ್ರಿ ಆಯ್ತು ಮಲಗೋಣ ಇಂದು ನಮ್ಮ ಸೋಭಾನ… ಅಥವಾ ಕಾಯಿ ಕಾಯಿ ನುಗ್ಗೇಕಾಯಿ ಮಹಿಮೆಗೆ ರಾತ್ರಿಯೆಲ್ಲ ನಿದ್ದೆಯಿಲ್ಲ ಕಣ್ಣಿಗೆ.. ನೆಲ್ಲಿಕಾಯಿ ಆಸೆಗೆ ಬಿಟ್ಟು ಬಂದೆ ಹಾಸಿಗೆ ಅಂತ ಸ್ವಲ್ಪ ನೇರವಾಗಿಬಿಡುತ್ತಾರೆ ಹಂಸಲೇಖ.
ಇವೆಲ್ಲ ಸಾಹಿತ್ಯವನ್ನು ಗಮನಿಸುವಾಗ ಅರ್ಥವಾಗುತ್ತಾ ಹೋಗುವ ಅಪಾರಾರ್ಥಗಳು. ತೂಗುಮಂಚದ “ಹಮ್ಮನುಸಿರಬಿಟ್ಟಳು ಎಂಬುದು ಅಮ್ಮನುಸಿರ ಬಿಟ್ಟಳು ಎಂದಾಗಿದ್ದು ಅದನ್ನು ಲಾಲಿಹಾಡೆಂದು ತಪ್ಪು ತಿಳಿದುದರ ಪರಿಣಾಮ ಎಂದು ಹಿಂದೊಮ್ಮೆ ಬರೆದಿದ್ದು ನಿಮಗೆ ನೆನಪಿರಬಹುದು.
ಇನ್ನು ಡಬಲ್ ಮೀನಿಂಗೇ ಹುಡುಕಬೇಕು ಅಂದರೆ ಪ್ರತಿ ಗೀತೆಯೂ ಬೇರೆಯೇ ಅರ್ಥ ಕೊಡಬಲ್ಲ ಕೆಪಾಸಿಟಿ ಹೊಂದಿರುತ್ತದೆ. ಅದು ನಾವು ಆ ಗೀತೆಯನ್ನು ಬಿಂಬಿಸೋಕೆ ಹೊರಟಿರುವ ರೀತಿಯ ಮೇಲೆ ಡಿಪೆಂಡು. ಎಂಥ ಸಭ್ಯಸಾಲನ್ನೂ.. ಕವಿಗೇ ಶಾಕ್ ಆಗುವ ಹಾಗೆ ಡಬಲ್ ಮೀನಿಂಗ್ ಆಗಿಸಬಹುದು. ಆ ಉದಾಹರಣೆ ಈ ಬರಹದಲ್ಲಿ ಬೇಡ. ಮುಂದೆಂದಾದರೂ ಬರೆಯೋಣ.
ಇದೆಲ್ಲ ಬರೆಯೋಕೆ ಹೊರಟಿದ್ದಕ್ಕೆ ಪ್ರೇರಣೆ ಅಣ್ಣಯ್ಯ ಚಿತ್ರದ ಒಂದು ಸಾಂಗ್. ಅಣ್ಣಯ್ಯ ಬಂದು ಹೋಗಿ ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಟೈಮಾಯ್ತು. ರವಿಚಂದ್ರನ್ ಸಿನಿಮಾಗಳು ಸಾಫ್ಟ್ ಪೋರ್ನ್ ಸಿನಿಮಾಗಳಂತೆ ಭಾಸವಾಗುತ್ತಿದ್ದ ನಮ್ಮ ಏಜಿನ ದಿನಗಳವು. ರವಿಚಂದ್ರನ್ ಸಿನಿಮಾಗಳನ್ನು ನೋಡೋದು ಕಾಶೀನಾಥ್ ಸಿನಿಮಾ ನೋಡೋಷ್ಟೇ ಪಾಪ ಎಂಬಷ್ಟು ಮಡಿವಂತಿಕೆ ದಿನಗಳವು. ಆದರೆ ನಮ್ಮ ಪಾಲಿಗೆ ಆಗ ರವಿಮಾಮಾ ಲವ್ ರೊಮ್ಯಾನ್ಸ್ ಶೃಂಗಾರಗಳಿಗೆ ಗಾಡ್. ಆತ ಹೀರೋಯಿನ್ ಎದೆಯ ಮೇಲೆ ಮುಖವಿಟ್ಟು ಒರಗಿದರೆ ನಮಗೆ ರಸಸ್ಫೋಟ ಆಗುತ್ತಿತ್ತು. ಕುತ್ತಿಗೆಗೊಂದು ಮುತ್ತಿಟ್ಟು ತುದಿಬೆರಳುಗಳನ್ನು ಕತ್ತು ಮತ್ತು ಎದೆಯ ನಡುವೆ ಒಮ್ಮೆ ಆಡಿಸಿದ ಅಂದರೆ ಕೊಳಲು ಲಂಬಕೋನವಾಗುತ್ತಿತ್ತು.
ಆತ ಸೆರಗು ಸರಿಸಿ ಹೊಕ್ಕಳಿಗೊಮ್ಮೆ ಮುತ್ತಿಟ್ಟರೆ ಮುಗಿದೇಹೋಯ್ತು ಊರಸ್ನಾಯುಗಳು ಬಿಗಿಯಾಗಿ ಹೋಗುತ್ತಿದ್ದವು. ಅಂದು ಹಂಸಲೇಖ ಗೀತೆಗಳು ರವಿಚಂದ್ರನ್ ನ ಪಿಚ್ಚರೈಸೇಷನ್ನಲ್ಲಿ ಕಳೆದುಹೋಗಿಬಿಡುತ್ತಿದ್ದವು. ಅಥವಾ ಸಾಹಿತ್ಯ ಸಂಗೀತ ಎಲ್ಲದರಾಚೆಗೆ ನಮಗೆ ಆ ರೊಮ್ಯಾನ್ಸೇ ಹೆಚ್ಚು ಆಕರ್ಷಿಸಿಬಿಡುತ್ತಿತ್ತು. ಕ್ಯಾಸೆಟಲ್ಲಿ ಹಾಡುಗಳನ್ನು ಕೇಳಿ ಸಿನಿಮಾಗೆ ಹೋದಾಗ ಗೀತೆಗಳು ಆಡಿಯೋಗಿಂತ ವಿಡಿಯೋವಾಗಿ ತೃಪ್ತಿಕೊಟ್ಟು ಕಳಿಸುತ್ತಿದ್ದವು. ಆದರೆ ಆನಂತರ ಸಾಹಿತ್ಯ ಗಮನಿಸುವ ಮೆಚುರಿಟಿ, ಸಾಹಿತ್ಯದಲ್ಲಿರುವ ಇಮ್ಯಾಜಿನೇಷನ್ ಪವರ್ ಆಸ್ವಾಧಿಸುವ ಮನಸ್ಥಿತಿ ಎಲ್ಲ ಬಂದಾಗ.. ರವಿ ಚಂದ್ರನ್ ಹಂಸಲೇಖರ ಗೀತೆಗೆ ಹತ್ತು ಪರ್ಸೆಂಟಷ್ಟೂ ನ್ಯಾಯ ಸಲ್ಲಿಸಲು ಸಾಧ್ಯವಾಗಿಲ್ಲ ಅನಿಸಿಬಿಟ್ಟಿದೆ. ಹಾಗಂತ ಹಂಸಲೇಖರ ಸಾಹಿತ್ಯಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಿತ್ತಾ? ಖಂಡಿತ ಇಲ್ಲ. ಯಥಾವತ್ ನ್ಯಾಯ ಸಲ್ಲಿಸಲು ಹೋದದ್ದೇ ಆದರೆ ಆ ಸಾಂಗ್ ನ ಪಿಚ್ಚರೈಸೇಷನ್ ಕಾಮಸೂತ್ರವಾಗಿ ಹೋಗುವಷ್ಟು ಹಾಟ್ ಆಗಿಬಿಡುತ್ತಿತ್ತು.
ಆ ಗೀತೆಗಳು ಪಿಚ್ಚರೈಸ್ ಆಗದೆಯೇ ಇಮ್ಯಾಜಿನೇಷನ್ನಲ್ಲೇ ಉಳಿದುಬಿಟ್ಟಿದ್ದರೆ ಎಷ್ಟು ಚೆಂದವಿತ್ತು ಅನಿಸಿದ್ದೂ ಇದೆ. ಸತ್ಯ ಏನಂದರೆ ರವಿಚಂದ್ರನ್ ಸಲ್ಲಿಸಿದಷ್ಟು ನ್ಯಾಯವನ್ನು ಹಂಸಲೇಖರ ಗೀತೆಗೆ ಇನ್ಯಾರೂ ಸಲ್ಲಿಸಲು ಸಾಧ್ಯವಾಗಲಿಲ್ಲ. ರೊಮ್ಯಾಂಟಿಕ್ ಗೀತೆಗಳಲ್ಲಿ ಮಾತ್ರವಲ್ಲ… ಬೇರೆ ಗಂಭೀರ/ಸ್ಯಾಡ್/ಫಿಲಾಸಫಿಕಲ್/ಕ್ರಾಂತಿ ಯಾವ ಗೀತೆಗಳಿಗೂ ವಿಶ್ಯುಯಲಿ ನ್ಯಾಯ ಸಿಕ್ಕಿಲ್ಲ. ಇದು ಹಂಸಲೇಖ ಮಾತ್ರ ಅಲ್ಲ.. ಬಹುತೇಕ ಸಾಹಿತಿಗಳ ಮನಸಿನ ಮೂಲೆಯ ಅಸಮಾಧಾನ ಹಾಗೂ ನೋಡುಗರ ಅಸಂತೃಪ್ತಿ. ಮೊನ್ನೆ ನಾನು ಶೇರ್ ಮಾಡಿಕೊಂಡ ” ಸುಮ್ಮನೆ ಹೀಗೆ ನಿನ್ನನೇ …:” ಎಂಬ ಅಮರ್ ಚಿತ್ರದ ಗೀತೆಯಾದರೂ ಅಷ್ಟೆ. ಅಷ್ಟು ಗಾಢ ಸಾಲುಗಳ ಗೀತೆಗೆ ಅಂಬರೀಶ್ ಪುತ್ರನಿಂದ ಕಲ್ಲುಬಂಡೆಯಂಥ ಅಭಿನಯ. ಇಡೀ ಹಾಡನ್ನು ಲಾಂಗ್ ಶಾಟ್ ಗಳಲ್ಲಿ ತೆಗೆದು ಪ್ರಕೃತಿ ಸೌಂದರ್ಯ ತೋರಿಸಿ ಮುಗಿಸಿದ್ದಾರೆ ನಾಗಶೇಖರ್. ಸಾಹಿತ್ಯಕ್ಕೆ ಸಂಗೀತ ಸಲ್ಲಿಸುವಷ್ಟು ನ್ಯಾಯವನ್ನು ದೃಶ್ಯರೂಪ ಸಲ್ಲಿಸಲು ಸಾಧ್ಯವಿಲ್ಲ. ಬೆಟರ್ ನಾವು ಹಾಡುಗಳನ್ನು ನಮ್ಮ ಇಮ್ಯಾಜಿನೇಷನ್ ಗೆ ತಕ್ಕಂತೆ ಕಣ್ಮುಚ್ಚಿಕೊಂಡು ಮನಸ್ಸಿನೊಳಗೇ ಚಿತ್ರಿಸಿಕೊಂಡುಬಿಡುವುದು.
ಬ್ಯಾಕ್ ಟು ಅಣ್ಣಯ್ಯ ಚಿತ್ರದ ಆ ಸಾಂಗ್ : ಇಷ್ಟು ವರ್ಷದಲ್ಲಿ ಈ ಹಾಡನ್ನು ಕಮ್ಮಿ ಅಂದ್ರೂ ಒಂದು ಸಾವಿರ ಸಲ ಕೇಳಿರುತ್ತೇನೆ. ಹಿಟ್ ಆಲ್ಪಮ್ ಆಗಿರುವ ಅದರ ಕಡಿಮೆ ಪಾಪ್ಯುಲರ್ ಗೀತೆ ಅದು.
“ಅ ಹಾಗೆ ಪ್ರೇಮಿ ಓಹೋ.. ಒ ಹೋಗೆ ಪ್ರೇಮಿ ಆಹಾ…”
ಈ ಹಾಡಿನ ಚಿತ್ರಣ ನಿಮ್ಮನ್ನು ಸಾಹಿತ್ಯ ಗಮನಿಸದಷ್ಟು ಸೆಳೆದುಕೊಳ್ಳುತ್ತದೆ ಕಾರಣ. ರವಿಚಂದ್ರನ್ ಮಧುಬಾಲಾ ಕೆಮಿಸ್ಟ್ರಿ! ಆದರೆ ಅದ್ಯಾಕೋ ಗೀತೆ ತುಂಬ ಅಟ್ರಾಕ್ಟಿವ್ ಅನಿಸಿರಲಿಲ್ಲ. ಕಮಾನು ಡಾರ್ಲಿಂಗ್, ಅಣ್ಣಯ್ಯ ಅಣ್ಣಯ್ಯ ಬಾರೋ, ರಾಗಿ ಹೊಲದಾಗೆ ಖಾಲಿ ಗುಡಿಸಲು ಈ ಗೀತೆಗಳು ಕೊಟ್ಟ ಕಿಕ್ …. ಈ ಅ ಹಾಗೆ ಪ್ರೇಮಿ ಓಹೋ… ಒ ಹೋಗೆ ಪ್ರೇಮಿ ಆಹಾ ಗೀತೆ ನೀಡಿರಲಿಲ್ಲ.
ಹೌದು ನಾನು ಈ ಹಾಡನ್ನು ಕೇಳಿಸಿಕೊಳ್ತಾ ಇದ್ದದ್ದೇ ಹೀಗೆ. ಮೊನ್ನೆಯ ತನಕವೂ…ಆದರೆ ಮೊನ್ನೆ ಯಾಕೋ ಮತ್ತೊಮ್ಮೆ ಕೇಳಿಸಿಕೊಂಡಾಗ.. ಅರೆ ಇಪ್ಪತ್ತೈದು ವರ್ಷ ತಪ್ಪಾಗಿ ತಿಳಿದುಕೊಂಡು ತಪ್ಪಾಗೇ ಹಾಡಿಕೊಂಡೆನಲ್ಲ ಅಂತ ಮೈತುಂಬ ಗಿಲ್ಟು
ಆ ಸಾಂಗ್ ಇರೋದು ಹೀಗೆ…
”ಆಹಾ’ಗೆ ಪ್ರೇಮಿ “ಓಹೋ”
” ಓಹೋ”ಗೆ ಪ್ರೇಮಿ ” ಆಹಾ”
ನನ್ನ ಹಾಗೆ ಅದೆಷ್ಟು ಜನ ಯಾಮಾರಿದ್ದೀರೋ ಗೊತ್ತಿಲ್ಲ. ಅಥವಾ ನಾನೊಬ್ನೇ ಹೀಗೆ ತಪ್ಪಾಗಿ ಕೇಳಿಸಿಕೊಂಡವ್ನೋ ಗೊತ್ತಿಲ್ಲ
ಈ ಗೀತೆಯ ವಿಶೇಷ ಏನಂದ್ರೆ ಹಂಸಲೇಖ. ಆಹಾ ಮತ್ತು ಓಹೋ ಎಂಬ ಎರಡು ಪದಗಳನ್ನೇ ಪ್ರೇಮಿಗಳನ್ನಾಗಿಸಿದ್ದಾರೆ
ಆಹಾಗೆ ಓಹೋ ಪ್ರೇಮಿ… ಓಹೋಗೆ ಆಹಾ ಪ್ರೇಮಿ!
ಅದು ಇಬ್ಬರು ಪ್ರೇಮಿಗಳ ಹೆಸರು!
ಈಗ ಈ ಹಾಡೊಮ್ಮೆ ಕೇಳಿನೋಡಿ…
ಅದು ಸೌಂಡಾಗೋದೇ ಬೇರೆ ಥರ!
ಅದ್ಯಾಕೆ ಆಹಾ ಓಹೋ ಎಂಬ ಪದಗಳು ಇಲ್ಲಿ ಪಾತ್ರಗಳಾದವು ಅಂತ ಸಿನಿಮಾ ತೆರೆದು ನೋಡಿದೆ. ಈ ಹಾಡು ಆರಂಭವಾಗುವ ಮುನ್ನ ಅಣ್ಣಯ್ಯ ಯಾವುದೋ ಫೈಟಿಂಗಲ್ಲಿ ಒದೆ ತಿಂದು ಬೆನ್ನಿಗೆ ಕಾಶಿ ಕೈಲಿ ಬಿಸಿ ಮಸಾಜ್ ಮಾಡಿಸಿಕೊಳ್ತಾ ಇರ್ತಾನೆ. ಅವನ ಇಮ್ಯಾಜಿನೇಷನಲ್ಲಿ ನಾಯಕಿ ಬಂದು ಕಾಶಿಯ ಬದಲು ಮಸಾಜ್ ಮಾಡ್ತಿರೋ ಹಾಗೆ ಒಂದು ಟ್ವಿಸ್ಟು.. ಇಮ್ಯಾಜಿನೇಷನಲ್ಲೇ ಅವಳೊಂದಿಗೆ ಮಾತಾಡ್ತಾ.. ಆಕೆ ಬಿಸಿ ಶಾಖ ಕೊಟ್ಟಾಗ ಒಮ್ಮೆ ನಾಯಕ ಆಹಾ ಅಂತಾನೆ.. ಇನ್ನೊಮ್ಮೆ ಓಹೋ ಎಂದು ಬಿಗಿಯುಸಿರು ಬಿಡುತ್ತಾನೆ. ಆಗ ಹುಟ್ಟುವ ಹಾಡಿದು. ಡ್ರೀಮ್ ಸಾಂಗ್ ನಲ್ಲಿ ಟೆಕ್ಸ್ಟ್ ಕೂಡ ಬರುತ್ತದೆ ಆಹಾ ಓಹೋ ಅಂತ!
ಸ್ಕ್ರಿಪ್ಟ್ ಜೊತೆ ದೃಶ್ಯರಚನೆ ಜೊತೆ ಗೀತ ಸಾಹಿತಿ ಕನೆಕ್ಟ್ ಆದಾಗ ಇಂಥ ಅದ್ಭುತಗಳು, ಮಜಗಳು, ಕ್ರಿಯೇಟಿವ್ ಐಡಿಯಾಗಳು ಹುಟ್ಟುತ್ತವೆ. ಹಂಸಲೇಖ ಎಲ್ಲೋ ಕೂತು ಹಾಡುಬರೆದುಕೊಟ್ಟು ಸಂಗೀತ ಮಾಡಿಕೊಡ್ತಿರಲಿಲ್ಲ. ಸಿನಿಮಾದೊಂದಿಗೆ ಪ್ರೀ ಪ್ರೊಡಕ್ಷನ್ನಿಂದ ರೀರೆಕಾರ್ಡಿನ ತನಕ ಜರ್ನಿ ಮಾಡ್ತಿದ್ರು ಅನ್ನೋದಕ್ಕೆ ಇದೊಂದು ಸಾಕ್ಷಿ. ಅವರಿಬ್ಬರ ಕಾಂಬಿನೇಷನ್ ಯಾಕೆ ಆ ಪರಿ ಕ್ಲಿಕ್ ಆಗುತ್ತಿತ್ತು ಅನ್ನೋದಕ್ಕೂ ಇದೊಂದು ಪುರಾವೆ. ( ಬರಹ : ನವೀನ್ ಸಾಗರ್ ; ಫೇಸ್ ಬುಕ್ ನಿಂದ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಉಸಿರು
ಮೂಲ : ಜಲಾಲುದ್ದೀನ್ ರೂಮಿ, ಕನ್ನಡಕ್ಕೆ : ಡಾ.ಎಚ್.ಎಸ್.ಅನುಪಮಾ
ನಾ ಕ್ರೈಸ್ತನಲ್ಲ, ಯಹೂದಿ, ಮುಸಲ್ಮಾನ, ಹಿಂದುವೂ ಅಲ್ಲ ಬೌದ್ಧ, ಸೂಫಿ, ಝೆನ್ ಧರ್ಮದವನೂ ಅಲ್ಲ
ಪಂಥ ಪರಂಪರೆಯವನಲ್ಲ, ಮೂಡಲದವನಲ್ಲ ಪಡುವಣದವನಲ್ಲ, ಕಡಲೊಳಗಿನಿಂದೆದ್ದು ಬಂದವನಲ್ಲ
ನೆಲದಿಂದುದ್ಭವಿಸಲಿಲ್ಲ, ಸಹಜ ಸೃಷ್ಟಿಯಲ್ಲ, ದೈವಿಕವಲ್ಲ ಪಂಚಭೂತಗಳಿಂದಾದವನಲ್ಲ, ನಾ ಎಂಬುದೇ ಇಲ್ಲ
ಇಹದಲೂ ಪರದಲ್ಲೂ ನನ್ನ ಕುರುಹಿಲ್ಲ ಆಡಂ ಈವರ ವಂಶದ ಕುಡಿಯಲ್ಲ
ಯಾವ ವಂಶಾವಳಿಯೂ ನನಗಿಲ್ಲ, ನೆಲೆಯಿರದವ ಕಾಯವಲ್ಲ, ಆತ್ಮವೂ ಅಲ್ಲ, ನಿಶ್ಲೇಷದ ಶೇಷ
ನಾ ಪ್ರೇಮಿಯವ, ಲೋಕವೆರೆಡನೊಂದೇ ಆಗಿ ಕಂಡವ ಕರೆವುದು ಪ್ರೇಮ ನನ್ನ, ಅರಿತುಕೊಳುವುದು ತನ್ನ ತಾ..
ಮೊದಲ, ಕೊನೆಯ, ಹೊರ, ಒಳ
ಎಲ್ಲವೂ ಪ್ರೇಮ, ಪ್ರೇಮ, ಬರೀ ಪ್ರೇಮ
ಅದು ಪ್ರಾಣ, ಅದೇ ಉಸಿರು.
ಉಸಿರಾಡು ಮನುಜ.
(ಈ ಕವಿತೆಯನ್ನು ಲಡಾಯಿ ಪ್ರಕಾಶನ ಗದಗ ಇವರು ಪ್ರಕಟಿಸಿರುವ ‘ಉರಿಯ ಕುಡಿಯ ನಟ್ಟ ನಡುವೆ‘ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಜಲಾಲುದ್ದೀನ್ ರೂಮಿಯ ಕವಿತೆಗಳನ್ನು ಕನ್ನಡಕ್ಕೆ ಡಾ.ಎಚ್.ಎಸ್. ಅನುಪಮ ಅವರು ಅನುವಾದಿಸಿರುವ ಕೃತಿ ಇದಾಗಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ವಿಕಲಚೇತನರ ಕ್ಷೇತ್ರದಲ್ಲಿ ಉತ್ತಮ ಸೇವೆ : ಜಿಲ್ಲಾ ಸಮಿತಿ ಸದಸ್ಯತ್ವಕ್ಕೆ ನೇಮಕ ಮಾಡಲು ಆಹ್ವಾನ
-
ದಿನದ ಸುದ್ದಿ7 days ago
ಕಬ್ಬಳ ಗ್ರಾಮದ ಮಹಿಳೆ ನಾಪತ್ತೆ
-
ದಿನದ ಸುದ್ದಿ7 days ago
ದಾವಣಗೆರೆ | ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರಿಂದ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ರಸ್ತೆ ಸುರಕ್ಷತಾ ಸಮಿತಿ ಸಭೆ | ಅಪಘಾತ ಪ್ರಮಾಣ ತಗ್ಗಿಸಲು ಜಿಲ್ಲೆಯ ರಸ್ತೆಗಳ ದುರಸ್ತಿ ಹಾಗೂ ಸುಧಾರಣೆಗೆ ವಿಶೇಷ ಗಮನ ನೀಡಿ : ಡಿಸಿ ಗಂಗಾಧರಸ್ವಾಮಿ ಜಿ.ಎಂ.
-
ದಿನದ ಸುದ್ದಿ6 days ago
ಒಳಮೀಸಲಾತಿ ಜಾರಿಗೆ ಚಾಲನೆ ; ಜಾತಿಗಣತಿ ವರದಿ ವಿರೋಧಕ್ಕೆ ಬೇಡ ಮನ್ನಣೆ : ಮಾಜಿ ಸಚಿವ ಎಚ್.ಆಂಜನೇಯ
-
ದಿನದ ಸುದ್ದಿ21 hours ago
ಚಿಗಟೇರಿ ಆಸ್ಪತ್ರೆಯಲ್ಲಿ ಮಹಿಳೆ ಮತ್ತು ಮಕ್ಕಳ ನೂತನ ಕಟ್ಟಡದ ಲೋಕಾರ್ಪಣೆ ; ಗ್ರೂಪ್ ಡಿ ಹುದ್ದೆಗಳಿಗೆ ನೇರಪಾವತಿಯಡಿ ನೇಮಕಕ್ಕೆ ಕಾನೂನು ಇಲಾಖೆಗೆ ಪ್ರಸ್ತಾವನೆ : ಸಚಿವ ದಿನೇಶ್ ಗುಂಡೂರಾವ್
-
ದಿನದ ಸುದ್ದಿ6 days ago
ದಾವಣಗೆರೆ | ಬಿರ್ಸಾ ಮುಂಡಾ ಜನ್ಮ ದಿನಾಚರಣೆ ; ಬುಡಕಟ್ಟು ಜನರ ಆರ್ಥಿಕ ಸಬಲೀಕರಣಕ್ಕಾಗಿ ಯೋಜನೆಗಳ ಸಮರ್ಪಕ ಬಳಕೆಗೆ ಸೂಚನೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್