ಅಸಾಮಾನ್ಯಳು
ವಿಧಿಯೊಡನೆ ಗುದ್ದಾಡಿ ಗೆದ್ದು ಬದುಕುತ್ತಿರುವ ಶಿಕ್ಷಕಿ ಕಲಾವತಿ
ಈ ವಿಧಿಯೇ ಹೀಗೆ…, ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ರೀತಿ ಆಟವಾಡಿಯೇ ತೀರುತ್ತದೆ. ಆದರೆ, ಇವರ ಜೊತೆ ಆಡಿದ್ದು ಮಾತ್ರ ದುರ್ವಿಧಿಯೇ ಸರಿ. ಸುಮಾರು 25 ವರ್ಷದ ಹಿಂದಿನ ಕಥೆ … ಒಮ್ಮೆ ಅತಿಯಾದ ಜ್ವರ ಬಾಧೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದರು. ಚಿಕಿತ್ಸೆ ನಡೆಯಿತು. ಆದರೆ ಡಾಕ್ಟರ್ ಹೇಳಿದ ಆ ಸಂಗತಿಯಿಂದ ಬರಸಿಡಿಲು ಬಡಿದಂತಾಯಿತು … ! ಅತಿಯಾದ ಜ್ವರದ ತಾಪದಿಂದಾಗಿ ಕಾಲುಗಳು ಸಂಪೂರ್ಣ ಸ್ವಾಧೀನ ಕಳೆದುಕೊಂಡು ನಿಸ್ತೇಜವಾಗಿ ಬಿಟ್ಟಿದ್ದವು …!? ಎಲ್ಲರಂತೆ ಲವಲವಿಕೆಯಿಂದ ಓಡಾಡುತ್ತಾ, ಚಟಪಟನೆ ಕೆಲಸ ಕಾರ್ಯಗಳನ್ನು ಮಾಡುತ್ತಾ, ಅರಳು ಹುರಿದಂತೆ ಮಾತನಾಡುತ್ತಾ ತಾನೂ ನಕ್ಕು ನಲಿದು, ಎಲ್ಲರನ್ನೂ ನಗಿಸುತ್ತಾ ಮನೆಗೊಂದು ಕಳಶವೆಂಬಂತಿದ್ದ ಆ ಹೆಣ್ಣುಮಗಳು ಅಂದಿನಿಂದ ಕೂತಲ್ಲಿಯೇ ಕೂರುವಂತಾಯಿತು. ಇಡೀ ಮನೆಯಲ್ಲೀಗ ನಿಶ್ಯಬ್ದವೇ… ನಿಶ್ಯಬ್ದ. ಆಕಾಶವೇ ಕಳಚಿ ಬಿದ್ದಂತಾಗಿ ಕಲಾವತಿಯವರ ಎದೆಯಲ್ಲೂ ನೀರವ ಮೌನ ಆವರಿಸಿತು…!
ಆದರೆ, ವಿದಿಯಾಟಕ್ಕೆ ಸಿಲುಕಿ ಕಾಲುಕಳೆದುಕೊಂಡರೂ ಬದುಕಿನ ಆಯ ತಪ್ಪಲು ಬಿಡಲಿಲ್ಲ, ಕನಸುಗಳನ್ನು ಕಮರಿಸಿಕೊಳ್ಳಲಿಲ್ಲ, ತನ್ನೊಳಗಿನ ಉತ್ಸಾಹವೂ ಕೂಡ ಕುಗ್ಗಲು ಬಿಡಲಿಲ್ಲ ಕಲಾವತಿಯವರು.
ತಾನು ಗಣಿತ ವಿಷಯದಲ್ಲಿ ಬಿ.ಎಸ್ಸಿ.,ಬಿ.ಇಡಿ ವಿದ್ಯಾಭ್ಯಾಸ ಮಾಡಿದ್ದು ವ್ಯರ್ಥವಾಗಬಾರದು. ನಾಲ್ಕಾರು ಮಕ್ಕಳಿಗೆ ವಿದ್ಯಾ ದಾನವನ್ನಾದರೂ ಮಾಡಬೇಕು, ತಾನು ಕಲಿತ ವಿದ್ಯೆ ಹಾಗೂ ತನ್ನ ಬದುಕು ಸಾರ್ಥಕವಾಗಬೇಕು ಎಂಬ ಛಲ ಎದೆಯೊಳಗೆ ಮಡುಗಟ್ಟಿತ್ತು. ಆದಕ್ಕೆ ಪೂರಕ ಎಂಬಂತೆ, ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ ಅವರಿಗೆ ಸರ್ಕಾರಿ ನೌಕರಿಯೂ ಅರಸಿ ಬಂತು.
1994ರಲ್ಲಿ ದಾವಣಗೆರೆ ಸಮೀಪದ ಆವರಗೆರೆ ಸರ್ಕಾರಿ ಪ್ರೌಢಶಾಲೆಗೆ ಕರ್ತವ್ಯಕ್ಕೆ ಹಾಜರಾದರು. ಪ್ರತಿದಿನವೂ 3 ಗಾಲಿಚಕ್ರದ ವಾಹನದಲ್ಲಿ ಹೊಸ ಪಯಣ ಶುರುವಾಯಿತು. ಅಂದಿನಿಂದ ಇಂದಿನವರೆಗೂ ಒಂದು ದಿನವೂ ಅವರು ಬಳಲಿಲ್ಲ. ಅವರ ಮುಖದಲ್ಲಿನ ಕಳೆ ಕುಂದಿಲ್ಲ. ತನ್ನ ಇಷ್ಟ – ಕಷ್ಟಗಳನ್ನೆಲ್ಲಾ ಬದಿಗಿಟ್ಟು, ತನ್ನ ಆಸೆ – ಆಕಾಂಕ್ಷೆಗಳನ್ನೆಲ್ಲಾ ಪಕ್ಕಕ್ಕಿಟ್ಟು, ತನಗೀಗಾಯಿತಲ್ಲ ಎಂಬ ನೋವನ್ನು ಕೂಡ ಮರೆತು ವಿದ್ಯಾರ್ಥಿಗಳ ಏಳ್ಗೆಯನ್ನ ಕಂಡೇ ಸಂತಸ ಪಡುತ್ತಿದ್ದಾರೆ ಕಲಾವತಿ ಮೇಡಂ. ಗಾಲಿ ಕುರ್ಚಿಯಲ್ಲಿಯೇ ಕೂತು ಉತ್ಸಾಹದಿಂದ ಪಾಠ ಹೇಳುವ ಅವರ ಪರಿ…, ಪಾಠದ ಜೊತೆ ಶಿಸ್ತು, ಶಾಂತಿ, ಸಂಯಮ, ನಾಗರೀಕತೆ, ಸುಸಂಸ್ಕøತ ನಡೆ – ನುಡಿಯ ಮಹತ್ವ ಬೋಧಿಸುವ ಅವರ ಕಳಕಳಿ…, ಮಾನವನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಏನೇ ಬಂದರೂ ಎಲ್ಲವನ್ನೂ ಧೈರ್ಯದಿಂದ ಎದುರಿಸಬೇಕು. ನಾವು ಕಲಿತ ಜ್ಞಾನ, ತಿಳಿವಳಿಕೆ, ವಿದ್ಯೆ – ಬುದ್ಧಿಯನ್ನು ನಮ್ಮ ಬದುಕಿನ ಉನ್ನತಿಗೆ ಸದುಪಯೋಗಪಡಿಸಿಕೊಳ್ಳಬೇಕು. ಅಂತೆಯೇ ಪರರ ಬದುಕಿನ ಹಿತಕ್ಕಾಗಿ ನಮ್ಮ ಕೈಲಾದಷ್ಟು ಸಹಾಯ – ಸಹಕಾರದೊಂದಿಗೆ ಅಳಿಲು ಸೇವೆಯನ್ನಾದರೂ ಮಾಡಬೇಕು. ಸರಳತೆ, ಸಜ್ಜನಿಕೆ ರೂಢಿಸಿಕೊಂಡು ಕುಟುಂಬ ಮತ್ತು ಸಮಾಜಸೇವೆಯ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂಬ ಅವರ ಪ್ರೇರಣಾದಾಯಕ ಹಿತನುಡಿಗಳು ಹಾಗೂ ವಿದ್ಯಾರ್ಥಿಗಳನ್ನು ಗುರಿ ಸಾಧನೆಗೆ ಹಚ್ಚುವ ಅವರ ಪ್ರೀತಿಯ ಪರಿಯನ್ನು ಕಂಡಾಗ ನಿಜಕ್ಕೂ ಯಾರಿಗಾದರೂ ಕಲಾವತಿಯವರ ಬಗ್ಗೆ ಹೆಮ್ಮೆಯ ಭಾವ ಮೂಡದೆ ಇರದು.
ಕೆಲವರಿಗೆ ತಮ್ಮ ಜೀವನದಲ್ಲುಂಟಾಗುವ ಒಂದೇ ಒಂದು ಸೋಲನ್ನು ಸಹ ಸಹಿಸಿಕೊಳ್ಳುವ ತಾಳ್ಮೆ ಇರುವುದಿಲ್ಲ. ಸೋಲು – ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಬದುಕನ್ನು ಮುನ್ನೆಡಿಸಿಕೊಂಡು ಹೋಗುವ ಮನೋಸಾಮರ್ಥ ಇರುವುದಿಲ್ಲ. ಎಲ್ಲಾ ಇದ್ದೂ ಕೂಡ ಒಂದು ಸಣ್ಣ ನೋವಿಗೋ, ಸಣ್ಣ ಸೋಲಿಗೋ ಭಯಪಟ್ಟು, ಪ್ರಯತ್ನಪಟ್ಟರೆ ಚಿಟಿಕೆ ಪ್ರಯತ್ನದಲ್ಲಿ ಸರಿಪಡಿಸಿಕೊಳ್ಳಬಹುದಾದ ಸಮಸ್ಯೆಗೂ ಕೂಡ ಆಕಾಶವೇ ಕಳಚಿಬಿದ್ದಂತೆ ಒದ್ದಾಡುತ್ತಾ, ಎಲ್ಲದಕ್ಕೂ ಆತ್ಮಹತ್ಯೆ ಒಂದೇ ಪರಿಹಾರ ಎಂದು ಯೋಚಿಸುವ ಅದೆಷ್ಟೋ ದುರ್ಬಲ ಮನಸ್ಸುಗಳಿಗೆ – ಸಂಕಷ್ಟದಲ್ಲೂ ಸವಾಲಿನ ಬದುಕು ಸಾಗಿಸುತ್ತಿರುವ ಕಲಾವತಿಯವರ ಜೀವನ ವಿಧಾನವನ್ನು ಒಮ್ಮೆ ತೋರಿಸಬೇಕೆನಿಸುತ್ತದೆ.
ತಮ್ಮ ಕರ್ತವ್ಯ ಮರೆತು ಹರಟೆಯಲ್ಲೇ ಕಾಲ ಕಳೆದು ತಮ್ಮ ವೃತ್ತಿಗೆ ದ್ರೋಹ ಬಗೆಯುತ್ತಿರುವ ಶಿಕ್ಷಕ ಮಹಾಶಯರ ನಡುವೆ … ತಮ್ಮ ತೋರಿಕೆಯ ಸೇವೆಗೂ ಪ್ರಶಸ್ತಿ ಪುರಸ್ಕಾರಕ್ಕಾಗಿ ಅರ್ಜಿ ಹಿಡಿದು ಅವರಿವರ ಮನೆ ಬಾಗಿಲು ತಟ್ಟುವ ಮಹಾಜನರ ನಡುವೆ ವಿಭಿನ್ನವಾಗಿ ನಿಲ್ಲುತ್ತಾರೆ ಕಲಾವತಿ. ಯಾವುದಕ್ಕೂ ವೈಯಕ್ತಿಕ ಪ್ರತಿಫಲ ಬಯಸದೆ ವಿದ್ಯಾರ್ಥಿಗಳ ಉನ್ನತಿಯಲ್ಲೇ ತನ್ನ ಉನ್ನತಿ ಕಂಡುಕೊಳ್ಳುತ್ತಾ ಸಾಗುತ್ತಿರುವ ಅವರು ತಮ್ಮ ಸೇವಾವಧಿಯಲ್ಲಿ ಈವರೆಗೂ ಪ್ರಶಸ್ತಿ – ಪುರಸ್ಕಾರಕ್ಕಾಗಿ ಎಂದಿಗೂ ಅರ್ಜಿ ಸಲ್ಲಿಸಿಲ್ಲ. ತಮ್ಮ ದೈಹಿಕ, ಮಾನಸಿಕ ಸಂಕಟದ ನೋವು-ನಲಿವು, ಬವಣೆಯಲ್ಲೂ ಸ್ವಾಭಿಮಾನ ಹಾಗೂ ಸ್ವಾವಲಂಬಿತನದ ಬದುಕು ಕಟ್ಟಿಕೊಂಡಿರುವ ಅವರ ಮಾದರಿ ಜೀವನ ಶೈಲಿಯನ್ನು ಹಾಗೂ ಅವರ ನಿಸಾರ್ಥ ಸೇವಾ ತುಡಿತವನ್ನು ಹತ್ತಿರದಿಂದ ಬಲ್ಲಂತಹ ಕೆಲ ಆತ್ಮೀಯ ಸ್ನೇಹಿತರೇ ಅವರಿಗೆ ಅತಿ ಒತ್ತಾಯಪೂರ್ವಕವಾಗಿ ಕೆಲ ವೇದಿಕೆಗಳಿಗೆ ಕರೆದು ಸನ್ಮಾನಿಸಿ – ಗೌರವಿಸಿ ಅವರಲ್ಲಿ ಇನ್ನಷ್ಟು ಚೈತನ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.
ಸುಮಾರು 20 ವರ್ಷಗಳಿಂದಲೂ ಆವರಗೆರೆಯಲ್ಲೇ ಖಾಯಂ ನಿವಾಸಿಯಾಗಿರುವ ಕಲಾವತಿಯವರ ತಂದೆ ಅನಂತರಾಜು ದೈವಾಧೀನರಾಗಿದ್ದು, ತಾಯಿ ವಸಂತಮಾಲ ಹಾಗೂ ಸಹೋದರಿ ಅವರೊಂದಿಗಿದ್ದಾರೆ. ಅಣ್ಣ ಸುನಿಲ್‍ರಾಜ ತಮ್ಮ ಕೆಲಸದ ನಿಮಿತ್ಯ ದಾವಣಗೆರೆಯಲ್ಲಿ ನೆಲೆಸಿದ್ದಾರೆ. ಕುಟುಂಬದವರ ಅನನ್ಯ ಪ್ರೀತಿ – ಸಹಕಾರ, ಪ್ರೋತ್ಸಾಹ ಹಾಗೂ ವಿದ್ಯಾರ್ಥಿಗಳ ಒಡನಾಟವೇ ನನಗೆ ದಿವ್ಯ ಔಷಧವಾಗಿದೆ ಎನ್ನುತ್ತಾರೆ ಕÀಲಾವತಿ ಮೇಡಂ. ಎಲ್ಲರಂತೆ ಅವರಿಗೂ ಕಾಲುಗಳಿವೆ, ಆದರೆ ಸ್ವಾಧೀನ ಮಾತ್ರ ಕಳೆದುಕೊಂಡಿವೆ. ಹಾಗಾಗಿ ಕಾಲುಗಳಲ್ಲಿ ಮತ್ತೆ ಚೈತನ್ಯ ಮೂಡಬಹುದು ಪ್ರಯತ್ನಿಸಿ ಎಂಬ ಹಲವರ ಸಲಹೆಯಿಂದಾಗಿ 25 ವರ್ಷಗಳಿಂದಲೂ ಕಲಾವತಿಯವರು ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಫಿಜಿಯೋ ಥೆರಪಿಗಾಗಿ ಈಗಲೂ ಬೆಂಗಳೂರಿಗೆ ಹೋಗಿ ಬರುತ್ತಿದ್ದಾರೆ. ತನ್ನಿಂದ ಪರರಿಗೆ ಕಿಂಚಿತ್ತೂ ತೊಂದರೆಯಾಗಬಾರದೆಂದು ಬಯಸುವ ಕಲಾವತಿಯವರು ಒಂಟಿಯಾಗಿ ಚಿಕಿತ್ಸೆಗೆ ತಾವೊಬ್ಬರೇ ಹೋಗಲಾಗದ ತನ್ನ ಅಸಹಾಯಕ ಪರಿಸ್ಥಿತಿ ಬಗ್ಗೆ ಬಹುವಾಗಿ ನೊಂದುಕೊಂಡಿದ್ದಾರೆ. ತಾನು ಪರರ ಸೇವೆ ಮಾಡಬೇಕು ಹೊರತು ತಾನೇ ಇತರರಿಂದ ಸೇವೆ ಮಾಡಿಸಿಕೊಳ್ಳುವ ಸ್ಥಿತಿಗೆ ಸಿಲುಕಬಾರದು ಎಂದು ಯೋಚಿಸುತ್ತಿದ್ದ ಕಲಾವತಿಯವರ ಬದುಕಿನಲ್ಲಿ ದುರ್ವಿಧಿಯಂತೂ ಆಟವಾಡಿತು. ಆದರೂ ಕಾಲಿನ ಮರು ಚೈತನ್ಯಕ್ಕಾಗಿ ನಿರಂತರ ಪ್ರಯತ್ನಿಸುತ್ತಲೇ ಇರುವ ಅವರ ಪ್ರಯತ್ನಕ್ಕೆ ಫಲ ಸಿಗಲಿ, ಮತ್ತೆ ಅವರು ಲವಲವಿಕೆಯಿಂದ ಓಡಾಡುತ್ತಾ ಹೊಸ ಜೀವನ ಕಂಡುಕೊಳ್ಳುವಂತಾಗಲಿ ಎಂದು ನಾವು ನೀವೆಲ್ಲಾ ಪ್ರಾರ್ಥಿಸೋಣ.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401
ಅಸಾಮಾನ್ಯಳು
ಭಾರತದ ಕಿರಿಯ ಲೇಖಕಿ ‘ಮಾನ್ಯ ಹರ್ಷ’..!
ಹತ್ತು ವರ್ಷದ ಈ ಪುಟ್ಟ ಲೇಖಕಿ ಮಾನ್ಯ ಹರ್ಷ ಗೆ ಓದುವುದು ಬರೆಯುವುದು ಎಂದರೆ ತುಂಬಾ ಇಷ್ಟವಂತೆ. ಬೆಂಗಳೂರಿನ ಚಿತ್ರ ಮತ್ತು ಹರ್ಷ ದಂಪತಿಗಳ ಮಗಳಾದ ಮಾನ್ಯ ಹತ್ತು ವರ್ಷಕ್ಕೆ ಕನ್ನಡದಲ್ಲಿ ಪುಸ್ತಕ ಬರೆದು ಕನ್ನಡದ ಕಿರಿಯ ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ಈಕೆ ಬರೆದಿರುವ “ ನೀರಿನ ಪುಟಾಣಿ ಸಂರಕ್ಷಕರು ” ಮಕ್ಕಳ ಕಾದಂಬರಿಗೆ , ಇಂಡಿಯಾ ಬುಕ್ ಆಫ್ ರೆಕಾರ್ಡ್ ವತಿಯಿಂದ ” ಕನ್ನಡದಲ್ಲಿ ಪುಸ್ತಕ ಬರೆದಿರುವ ಕಿರಿಯ ಲೇಖಕಿ “ ಎಂಬ ಬಿರುದಿಗೆ ಪಾತ್ರಳಾಗಿದ್ದಾಳೆ ಮಾನ್ಯ.
ಬೆಂಗಳೂರಿನ ಬಿ.ಟಿ.ಎಮ್ ಬಡಾವಣೆ ಯ ವಿಬ್ಗಯಾರ್ ಶಾಲೆಯ ಐದನೇ ತರಗತಿಯಲ್ಲಿ ಓದುತ್ತಿರುವುದು ಮಾನ್ಯ ತಾನು ಅಪ್ಪಟ ಕನ್ನಡತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ ಆಸಕ್ತಿ ಯನ್ನು ಬೆಳಸಿಕೊಂಡಿರುವ ಮಾನ್ಯ, ತನ್ನ ಅಜ್ಜಿಯ ಬಾಯಿಂದ ಕನ್ನಡ ಕಥೆ-ಕವನಗಳನ್ನು ಕೇಳಿ ಬೆಳೆದ ಹುಡುಗಿ. ಕನ್ನಡದಲ್ಲಿ ಪುಸ್ತಕ ಬರೆಯಲು ನನ್ನ ಅಜ್ಜಿಯೇ ನನಗೆ ಸ್ಫೂರ್ತಿ ಎನ್ನುತ್ತಾಳೆ ಮಾನ್ಯ.
ಈಗಾಗಲೇ ” ನೇಚರ್ ಅವರ್ ಫ್ಯೂಚರ್” ಪುಸ್ತಕ ಬರೆದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಐದು ರೆಕಾರ್ಡ್ ಬುಕ್ಗಳಲ್ಲಿ ಹೆಸರು ಮಾಡಿರುವ ಈ ಪುಟ್ಟ ಲೇಖಕಿ, ವಜ್ರ ಬುಕ್ ಆಫ್ ರೆಕಾರ್ಡ್ ವತಿಯಿಂದ ” ಭಾರತದ ಕಿರಿಯ ಕವಿಯಿತ್ರಿ” ಎಂಬ ಬಿರುದನ್ನೂ ಮುಡಿಗೇರಿಸಿಕೊಂಡಿದ್ದಾಳೆ.
” ನೀರಿನ ಪುಟಾಣಿ ಸಂರಕ್ಷಕರು” ಈಕೆಯ ಎರಡನೆಯ ಪುಸ್ತಕವಾಗಿದ್ದು , ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ಬರೆದಿದ್ದಾಳೆ.
ಆಂಗ್ಲ ಅವತರಣಿಕೆ ” ದಿ ವಾಟರ್ ಹೀರೋಸ್” ಮತ್ತು ಕನ್ನಡದಲ್ಲಿ ” ನೀರಿನ ಪುಟಾಣಿ ಸಂರಕ್ಷಕರು ” ಹೆಸರಲ್ಲಿ ರಚಿತವಾಗಿರುವ ಈ ಪುಸ್ತಕ ಸದ್ಯ ಕಾಡುತ್ತಿರುವ ನೀರಿನ ಕೊರತೆ ಮತ್ತು ಇದರ ಸಂರಕ್ಷಣೆಯ ತೀವ್ರತೆಯ ಮೇಲೆ ಬೆಳಕು ಚೆಲ್ಲುತ್ತದೆ.
ಈ ಪುಸ್ತಕ ಮಾರ್ಚ್ 22 ಕ್ಕೆ , ವಿಶ್ವ ಜಲ ದಿನದಂದು ಬಿಡುಗಡೆ ಆಗಬೇಕಿತ್ತು. ಆದ್ರೆ ವಿಶ್ವವನ್ನು ಕಾಡುತ್ತಿರುವ ಕರೋನ ಕಾಟದಿಂದಾಗಿ ಪುಸ್ತಕ ಬಿಡುಗಡೆ ತುಂಬಾ ಕಷ್ಟ ಆಯ್ತು. ಲಾಕ್ಡೌನ್ ನಡುವೆಯೂ ಪುಸ್ತಕವನ್ನು ಆನ್ಲೈನ್ ನಲ್ಲೇ ಬಿಡುಗಡೆ ಮಾಡಿದೆವು ಎಂದು ತಮ್ಮ ಅಳಲು ವ್ಯಕ್ತ ಪಡಿಸಿದರು.
ಪುಟ್ಟ ಲೇಖಕಿಯು, ದೈನಂದಿನ ಜೀವನದ ಸರಳ ನಿದರ್ಶನಗಳ ಮೂಲಕ ನೀರಿನ ಸಮಸ್ಯೆ ಯನ್ನು ಸ್ವಾರಸ್ಯಕರವಾಗಿ ನಿರೂಪಿಸಲು ಪ್ರಯತ್ನಿಸಿದ್ದಾರೆ.
ನೀರನ್ನು ಉಳಿಸಲು ಪ್ರತಿಯೊಬ್ಬರೂ ಅನುಸರಿಸಬೇಕಾದ ಅತ್ಯಂತ ಸರಳ ಮತ್ತು ಸುಲಭ ನಿಯಮಗಳನ್ನು ಈ ಪುಸ್ತಕ ಒಳಗೊಂಡಿದೆ.
ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು. ಚಿಕ್ಕ ವಯಸ್ಸಿನಲ್ಲೇ ಪ್ರಕೃತಿಯ ಬಗೆಗಿನ ಜವಾಬ್ದಾರಿ ಅರಿತ ಮಕ್ಕಳು ಹೇಗೆ ತಮ್ಮ ಪುಟ್ಟ ಕೈಗಳಿಂದ ದೊಡ್ಡ ಕೆಲಸ ಮಾಡಿ ತೋರಿಸುತ್ತಾರೆ ಎಂಬುದರ ಕಥಾಸಂಗಮವೇ ” ” ಪುಟಾಣಿ ಸಂರಕ್ಷಕರು ” .
ನೀರು ಪ್ರಕೃತಿಯ ಅಮೂಲ್ಯ ದ್ರವವಾಗಿದೆ. ನೀರು ಇಲ್ಲದೆ ಜೀವನವು ಅಸ್ತಿತ್ವದಲ್ಲಿಲ್ಲ. 3/4 ನೇ ಭಾಗದಷ್ಟು ಭೂಮಿಯ ಮೇಲ್ಮೈ ಜಲಮೂಲಗಳಿಂದ ಆವರಿಸಿದ್ದರೂ, ಈ ನೀರಿನ 97 ಪ್ರತಿಶತ ಉಪ್ಪು ನೀರಿನ ರೂಪದಲ್ಲಿ ಸಾಗರಗಳಲ್ಲಿದೆ, ಮತ್ತು ಮಾನವ ಬಳಕೆಗೆ ಅನರ್ಹವಾಗಿದೆ.
ಕೇವಲ 2.7% ಮಾತ್ರ ಶುದ್ದ ನೀರು ಇದ್ದು ಭ ಇದರಲ್ಲಿ ಸುಮಾರು 70% ರಷ್ಟು ನೀರು
ಹಿಮನದಿಗಳಾಗಿವೆ. ಅದರಲ್ಲಿ ಕೇವಲ 1% ಶುದ್ಧ ನೀರು ಲಭ್ಯವಿದ್ದು ಮಾನವ ಬಳಕೆಗೆ ಯೋಗ್ಯವಾಗಿದೆ. ಆದ್ದರಿಂದ ಈ ಅಮೂಲ್ಯವಾದ ಸಂಪನ್ಮೂಲವನ್ನು ಸಂರಕ್ಷಿಸುವುದು ಬಹಳ ಮುಖ್ಯ ಎಂದು ಸಾರಿ ಹೇಳುತ್ತಿದ್ದಾರೆ ಈ ಪುಟ್ಟ ಲೇಖಕಿ. ಈ ಪುಸ್ತಕವು ಪ್ರಕೃತಿ ತಾಯಿಗೆ ಅರ್ಪಿತವಾಗಿವೆ.
ವಿಶ್ವ ಜಲ ದಿನಾಚರಣೆ, ಮಾರ್ಚ್ 22, 2018 ರಂದು, ಮಾನ್ಯ , 38 ಮಕ್ಕಳು ಮತ್ತು 36 ಪೋಷಕರೊಂದಿಗೆ ನೀರು ಉಳಿಸಿ ಮೆರವಣಿಗೆ ಜಾತಾ ಹಮ್ಮಿಕೊಂಡಿದ್ದಳು. ದೊರೆಸಾನಿ ಅರಣ್ಯ ಪ್ರದೇಶ ದಿಂದ ಪ್ರಾರಂಭವಾದ ಜಾತಾ ಪುಟ್ಟನ್‌ಹಳ್ಳಿ ಕೆರೆ ಯಲ್ಲಿ ಸಸಿಗಳನ್ನು ನೆಡುವ ಮೂಲಕ ಕೊನೆಗೊಂಡಿತು. ಮಕ್ಕಳು ನೀರನ್ನು ಉಳಿಸುವ ವಾಗ್ದಾನ ಮಾಡಿದರು ಮತ್ತು ನೀರು ಸಂರಕ್ಷಣೆ ಬಗ್ಗೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಿದರು.
ಮನ್ಯಾ ಕನ್ನಡದಲ್ಲಿ ರಾಪ್ ಹಾಡನ್ನು ಬರೆದು ಹಾಡಿದ್ದಾರೆ. ಪ್ರಕೃತಿಯ ಸಂರಕ್ಷಣೆ ಬಗೆಗಿನ ಈ ರಾಪ್ ಸಂಗ ಸಾಮಾಜಿಕ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಿಬ್ಗಿಯರ್ ಬಿಟಿಎಂ ಶಾಲೆಯ ವಿದ್ಯಾರ್ಥಿಗಳು ಹಾಡಿದ ಸ್ಟ್ರೈಕ್ ಆಫ್ ಪ್ಲಾಸ್ಟಿಕ್ ಗೀತೆಯ ಸಾಹಿತ್ಯವನ್ನೂ ಮಾನ್ಯಾ ಬರೆದಿದ್ದಾರೆ. ಇದೇ ಶಾಲೆಯ ಮ್ಯೂಸಿಕ್ ಸರ್ ಈ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದು , ದೊಡ್ಡ ಹಿಟ್ ಆಗಿದೆ.
ಭಾರತ ಕೇಂದ್ರ ಸರಕಾರ ಹಮ್ಮಿಕೊಂಡಿದ್ದ #WaterHeroes ಸ್ಪರ್ಧೆ ಯಲ್ಲಿ ಕೂಡ ಮಾನ್ಯಳ ನೀರಿನ ಹೋರಾಟ ಮತ್ತು ಕಳಕಳಿ ಗೆ ಪ್ರಶಸ್ತಿ ಬಂದಿದೆ.
UN -Water ನ ಫೇಸ್ ಬುಕ್ ಖಾತೆಯಲ್ಲಿ ಈ ಪುಟ್ಟ ಬಾಲೆಯ ನೀರಿನ ಹೋರಾಟ ಹಾಗೂ ನೀರಿನ ಸಂರಕ್ಷಣೆ ಕಳಕಳಿ ಬಗ್ಗೆ ಹಂಚಿಕೊಳ್ಳಲಾಗಿದೆ.
ಈ ಕಿರಿಯ ಕವಿಯಿತ್ರಿಯ ಕಿವಿಮಾತು
“ನೀವು ಉಪದೇಶ ಮಾಡುವ ಮೊದಲು ಸ್ವಯಂ
ಅಭ್ಯಾಸ ಮಾಡಿ”.
ಅಪ್ರತಿಮ ಪ್ರತಿಭೆಯ ಈ ಪುಟ್ಟ ಬಾಲೆ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಲಿ. ಮತ್ತಷ್ಟು
ಯಶಸ್ಸ ಈಕೆಯದಾಗಲಿ ಎಂದು ಹಾರೈಸೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಸಾಮಾನ್ಯಳು
ಗ್ರಾಂಡ್ ಮಾಸ್ಟರ್ ಮಾನ್ಯ ಹರ್ಷ ; ಈಕೆ ಭಾರತದ ಅತ್ಯಂತ ಕಿರಿಯ ಕವನಗಾರ್ತಿ..!
- ಸುದ್ದಿದಿನ ಡೆಸ್ಕ್
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ನಾನ್ನುಡಿಯಂತೆ, ಒಂಭತ್ತನೇ ವಯಸ್ಸಿಗೇ ಪುಸ್ತಕ ಬರೆದು, ಭಾರತದ ಅತ್ಯಂತ ಕಿರಿಯ ಕವನಗಾರ್ತಿ ಎಂಬ ಬಿರುದಿಗೆ ಪಾತ್ರರಾಗಿದ್ದಾಳೆ ಬೆಂಗಳೂರಿನ ಚಿತ್ರ ಹಾಗೂ ಹರ್ಷ ದಂಪತಿಗಳ ಮುದ್ದಿನ ಮಗಳು ಮಾನ್ಯ ಹರ್ಷ. ಬೆಂಗಳೂರಿನ ವಿಬ್ಗಯಾರ್ ಹೈ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಈಕೆ , ಮೂರು ದಾಖಲೆಗಳ ಒಡತಿ. ಏಷಿಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ವಜ್ರ ವರ್ಲ್ಡ್ ರೆಕಾರ್ಡ್, ವತಿಯಿಂದ ಮೂರು ಬಿರುದುಗಳು ಈ ಪುಟ್ಟ ಪೋರಿಗೆ ಪ್ರಾಪ್ತ ವಾಗಿದೆ.
ಚಿಕ್ಕ ವಯಸ್ಸಿನಲ್ಲೇ, ಪರಿಸರ ಪ್ರಜ್ಞೆ ಹಾಗೂ ಕಾಳಜಿ ಬೆಳೆಸಿಕೊಂಡಿರುವ ಒಂಬತ್ತರ ಹರೆಯದ ಮಾನ್ಯ ಹರ್ಷ,ಈ ಸಣ್ಣ ವಯಸ್ಸಿನಲ್ಲೇ “ ನೇಚರ್ ಅವರ್ ಫ್ಯೂಚರ್” ಪುಸ್ತಕ ಬರೆದು “ಭಾರತದ ಕಿರಿಯ ಕವನಗಾರ್ತಿ ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ.
ಜುಲೈ 5, 2019ರಂದು ಮುದ್ರಣಗೊಂಡ “ನೇಚರ್ ಅವರ್ ಫ್ಯೂಚರ್” ಪುಸ್ತಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಗಿಟ್ಟಿಸಿಕೊಂಡಿದೆ. 55 ಕವನಗಳನ್ನು ಒಳಗೊಂಡಿರುವ ಈ ಪುಸ್ತಕ, ಚಿನ್ನರಲ್ಲಿ ಪರಿಸರ ಪ್ರಜ್ಞೆ ಮೂಡಿಸಿದೆ. ದೇಶ, ದೇಶ ಪ್ರೇಮ,ಸೈನಿಕರ ತ್ಯಾಗ-ಬಲಿದಾನ, ಪ್ರಕೃತಿ, ಪರಿಸರ, ಹೆಣ್ಣಿನ ಮಹತ್ವದ ಬಗ್ಗೆ ಕವನಗಳನ್ನು ಒಳಗೊಂಡಿರುವ ಈ ಪುಸ್ತಕ ದಾಖಲೆ ಸೃಷ್ಟಿಸಿದೆ.
- ವಜ್ರ ವರ್ಲ್ಡ್ ರೆಕಾರ್ಡ್ ವತಿಯಿಂದ ಈ ಪುಸ್ತಕ ಬರೆದ ಮಾನ್ಯ ಹರ್ಷ “ಭಾರತದ ಅತ್ಯಂತ ಕಿರಿಯ ಕವನಗಾರ್ತಿ” ಎಂಬ ಬಿರುದು ನೀಡಿ ಸನ್ಮಾನಿಸಲಾಗಿದೆ.
- ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ, “ಗ್ರಾಂಡ್ ಮಾಸ್ಟರ್” ಬಿರುದು , ಪಾರಿತೋಷಕ ನೀಡಿ ಗೌರವಿಸಲಾಗಿದೆ.
- ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ” ಪರಿಸರ ಕುರಿತ ಕವನಗಳು ರಚಿಸಿದ ಅತ್ಯಂತ ಕಿರಿಯ ಕವನಗಾರ್ತಿ ಎಂಬ ಬಿರುದು, ಪಾರಿತೋಷಕ, ಮೆಡಲ್ ನೀಡಿ ಗೌರವಿಸಲಾಗಿದೆ.
ಸಣ್ಣ ವಯಸ್ಸಿನಲ್ಲೇ ಬರೆಯುವ ಗೀಳು ಅಂಟಿಸಿಕೊಂಡ ಮಾನ್ಯ, ಆರನೇ ವಯಸ್ಸಿಗೇ ಹಲವಾರು ಕವನಗಳನ್ನು ರಚಿಸತೊಡಗಿದಳು. ಇದನ್ನು ಕಂಡ ಆಕೆಯ ಶಾಲಾ ಶಿಕ್ಷಕರು, ಈ ಪುಟ್ಟ ಕವನಗಾರ್ತೀಯ ಬರೆಯುವ ಹವ್ಯಾಸವನ್ನು ಮತ್ತಷ್ಟು ಪ್ರೋತ್ಸಾಹಿಸಿದರು.
2018ರ ಕಿಡ್ಸ್ ವರ್ಲ್ಡ್ ಅಂತಾರಾಷ್ಟ್ರೀಯ ಸಣ್ಣ ಕಥೆಗಳ ಪ್ರಶಸ್ತಿಗೂ ಮಾನ್ಯ ಪಾತ್ರರಾಗಿದ್ದಾಳೆ. ಈಕೆ ರಚಿಸಿದ,” ಥಾಂಕ್ಸ್ ಗಿವಿಂಗ್” ಸಣ್ಣ ಕಥೆಯು ಭಾರೀ ಪ್ರಶಂಸೆಗೆ ಒಳಪಟ್ಟಿದೆ.
ಮೂರು ವರ್ಷಗಳ, ಪುಸ್ತಕ ಮುದ್ರಿಸುವ, ಈಕೆಯ ಕನಸು ಈಗ ನನಸಾಗಿದೆ. “ನೇಚರ್ ಅವರ್ ಫ್ಯೂಚರ್” ಪುಸ್ತಕ ಮಾನ್ಯಾಳ ಪರಿಸರ ಪ್ರಜ್ಞೆ ಹಾಗೂ ಕಾಳಜಿ ಗೆ ಕನ್ನಡಿ ಹಿಡಿದಂತಿದೆ.ಮಾರ್ಚ್ 22,2018 ರೈ ವಿಶ್ವ ಜಲ ಸಂರಕ್ಷಣಾ ದಿನಾಚರಣೆ ಅಂಗವಾಗಿ , ಚಿನ್ನದ ವಾಕಥಾನ್ ಆಯೋಜಿಸಿದ್ದ ಈ ಪೋರಿ, ಸ್ನೇಹಿತರೊಂದಿಗೆ”ನೀರು ಉಳಿಸಿ” ಆಂದೋಲನ ನಡೆಸಿದ್ದಳು.
ಅಂತೆಯೇ,ಜೆ.ಪಿ.ನಗರದ ಪುಟ್ಟೇನಹಳ್ಳಿ ಕೆರೆಗೆ ಕಾಲ್ನಡಿಗೆಯಲ್ಲಿ ತೆರಳಿ, ಗಿಡಗಳನ್ನು ನೆಟ್ಟು ಪರಿಸರ ಪ್ರಜ್ಞೆ ಮೂಡಿಸದಳು ಮಾನ್ಯ ಹರ್ಷ. ಕಲೆ, ಕ್ರೀಡೆ ಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಮಾನ್ಯ,ಹಾಡು, ಕುಣಿತ,ಈಜುಗಾರಿಕೆಯಲ್ಲಿ ಹಲವಾರು ಪ್ರಶಸ್ತಿ ಗೌರವಗಳನ್ನು ಪಡೆದಿದ್ದಾಳೆ. ಕರಾಟೆ ಹಾಗೂ ಟೆಕ್ವಾಂಡೋ ವಿದ್ಯೆ ರೂಢಿಸಿಕೊಂಡಿರುವ ಮಾನ್ಯ ಕಲೆ-ಸಾಹಿತ್ಯ-ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿದ್ದಾಳೆ.
ಇಷ್ಪಕ್ಕೇ ನಿಲ್ಲದೆ ಮಾನ್ಯಾಳ ಪುಸ್ತಕ ಪ್ರೀತಿ, ಈಗ ಈಕೆ ಕನ್ನಡದಲ್ಲಿ ರಚಿಸಿರುವ ಕವನ ಹಾಗೂ ಕಥೆಗಳ ಗುಚ್ಛವನ್ನು ಮುದ್ರಿಸುವ ತವಕದಲ್ಲಿದ್ದಾಳೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಸಾಮಾನ್ಯಳು
ಅರ್ಪಣ ‘ಆರಾಧನ’ಕ್ಕೆ 10ನೇ ವಾರ್ಷಿಕೋತ್ಸವದ ಸಂಭ್ರಮ.!
- ಇದೇ ಆಗಸ್ಟ್ 11 ಆರಾಧನ ಟ್ರಸ್ಟ್ ನ 10 ನೇ ವಾರ್ಷಿಕೋತ್ಸವದ ದಿನ ಈ ಎಲ್ಲಾ ಮಹಿಳೆಯರು ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಇನ್ನೂ ಮಹಿಳೆಯರ ಈ ಆಸಕ್ತಿಯನ್ನು ಮನಗಂಡ ಅಪರ್ಣರವರು ಸದ್ಯ ಹನುಮಂತನಗರದಲ್ಲಿ ತಮ್ಮ ನೃತ್ಯ ಶಾಲೆಯ ಇನ್ನೊಂದು ಶಾಖೆಯನ್ನು ತೆರೆದಿದ್ದಾರೆ. ಆ ಮೂಲಕ ಕಲೆ ಮತ್ತು ಕಲಾಸಕ್ತರನ್ನು ಒಂದು ಗೂಡಿಸುವ ಪ್ರಯತ್ನ ಮಾಡ್ತಿದ್ದಾರೆ.
ಎಲ್ಲರೊಳಗೊಂದು ಕಲೆ ಇರುತ್ತದೆ, ಕಾಲೇಜು ದಿನಗಳು ಮುಗಿದ ನಂತರ ಕೆಲಸ, ಆ ಒಂದು ಅನಿವಾರ್ಯತೆ ಅದನ್ನು ನನ್ನಿಂದ ದೂರ ಮಾಡಿಬಿಡುತ್ತೆ, ಕೆಲವರು ಅದೆಲ್ಲವನ್ನೂ ಮೀರಿ ತಮ್ಮ ಪ್ರತಿಭೆಯನ್ನ ಉಳಿಸಿಕೊಂಡು ಹೋಗುತ್ತಾರೆ, ಕೆಲವರು
ಅದನ್ನು ಮರೆತು ಬಿಡುತ್ತಾರೆ, ಆದ್ರೆ ನಿಜವಾಗಲೂ ಅದರ ಪ್ರೀತಿ ಇರುವವರು ಅದರಲ್ಲಿ ಬದುಕನ್ನು ಕಂಡುಕೊಳ್ಳುತ್ತಾರೆ. ಅಪರ್ಣಾ ಆನಂದ್ ಉತ್ತಮ ಉದಾಹರಣೆ.
ಹಾಡುಗಾರಿಕೆ ಅದು ಆತ್ಮ ತೃಪ್ತಿ
ನಾವು ಮಾಡೋ ಕೆಲಸ ಬಗ್ಗೆ ನಮಗೆ ಆತ್ಮ ತೃಪ್ತಿ ಇದ್ದಾಗಷ್ಟೇ ಅಲ್ಲ… ಯಶಸ್ಸು ಸಾಧಿಸೋದಕ್ಕೆ ಸಾಧ್ಯ. ಇದನ್ನು ಅರಿತುಕೊಂಡಅಪರ್ಣಾ ತಮಗೆ ಆತ್ಮ ಸೃಷ್ಟಿ ನೀಡುವ ಹಾಡುಗಾರಿಕೆ ಮತ್ತು ನೃತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ, ಇವತ್ತಿನ ಸಮುದಾಯ ಡಿಗ್ರಿ ಮುಗಿಸುತ್ತಲೇ ಸಂಬಳದ ಕಡೆಗೆ ಜಾರುತ್ತಾರೆ, ಆದಕ್ಕಾಗಿಯೇ ಸಾಕಷ್ಟು ಕೋರ್ಸ್ ಗಳನ್ನು ಮಾಡಿಕೊಂಡು ಮುಂದುವರೆಯುತ್ತಾರೆ, ಈ ಹಂತದಲ್ಲೇ ತಮ್ಮೊಳಗಿರುವ ಒಬ್ಬ ಹಾಡುಗಾರ , ನೃತ್ಯ, ಕ್ರೀಡಾ ಪಟು ವನ್ನು ಕಳೆದುಕೊಳ್ಳುತ್ತಾರೆ, ಆದ್ರೆ
ಆ ಅವರ ಹಾದಿ ಮಾತ್ರ ಭಿನ್ನ.
ಬಾಲ್ಯ ಬರೆದಿತ್ತು ಡೆಸ್ಟಿನಿ
ಹಾಡು ಮತ್ತು ನೃತ್ಯವನ್ನು ಜೀವವೆಂದುಕೊಂಡಿದ್ಮ ಹುಡುಗಿ ಅಪರ್ಣ, ಅದಕ್ಕಾಗಿ ಯನ್ನು 5ನೇ ವಯಸ್ಸಿನಲ್ಲಿಯೇ ಹಾಡುಗಾರಿಕೆ ಆರಂಭಿಸಿದರು. 7ನೇ ತರಗತಿ ಯಲ್ಲಿದ್ದಾಗ ಮೊದಲ ಬಾರಿಗೆ ವೇದಿಕೆ ಹತ್ತಿದರು. ಆ ನಂತರ ನೃತ್ಯವನ್ನು ಜೊತೆಜೊತೆಯಲೆ ಅಭ್ಯಾಸ ಮಾಡಿದರು. ಮೂಲತಃ ಮೈಸೂರಿನವರಾದ ಅಪರ್ಣಾ ಅವರ ಕಲೆಗೆ ಕಾಲೇಜಿನಲ್ಲೂ ಒಳ್ಳೆಯ ಪ್ರೋತ್ಸಾಹ ಸಿಕ್ಕಿತು. ಕಾಲೇಜು ದಿನಗಳಲ್ಲಿ, ಸಿ್ಖಕ್ಕ ಈ ಪ್ರೋತ್ಸಾಹಕ್ಕೆ, ಭರತನಾಟ್ಯದಲ್ಲೇ ಎಂ.ಎ ಮುಗಿಸಿದರು. ಈ ಹಂತದಲ್ಲಿ ಸಾಕಷ್ಟು ಸಂಗೀತ ಮತ್ತು ನೃತ್ಯ
ಕಛೇರಿಯನ್ನು ನೀಡುತ್ತಿದ್ದರು. ತಾವು ಸಿರೀಕ್ಷಿಸದಷ್ಟು ಸಂಭಾವನೆ ಸಿಗದಿದ್ದರೂ ಕೆಡಿಸಿಕೊಳ್ಳದಿದರೂ, ಆ ಹಣ ಕೀರ್ತಿ ಗೌರವ ಅವರನ್ನು ಹಿಂಬಾಲಿಸಿತು.
ಆರಾಧನ
ಆರಾಧನದ ಆರಾಧನೆ
ತಮ್ಮ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಬಂದ ಅಪರ್ಣ ಎದೆ ತುಂಬಿ ಹಾಡುವೆನು ಸ್ಪರ್ಧೆಯಲ್ಲಿ ಹೆಸರುಗಳಿಸಿದರು. ನಂತರ
ಬೆಂಗಳೂರಿನಲ್ಲಿಯೇ ತಮ್ಮ ಪತಿ ಆನಂದ್ ಜೊತೆಗೆ ನೆಲೆ ನಿಂತ ಅಪರ್ಣಾ ಗೆ ಸುಮ್ಮನೆ ಮನೆಯಲ್ಲಿ ಕೂರುವುದು ಇಷ್ಟವಿರಲಿಲ್ಲ. ಬದುಕಿನ ಎಲ್ಲ ಹಂತದಂತೆ ಮದುವೆ, ಮಗುವಿನ ಜೊತೆ ಕಲೆಯನ್ನು ಆರಾಧಿಸೋ ತವಕ ಮುಂದುವರೆದಿತ್ತು. ಇದೇ ಇಚ್ಚಾಶಕ್ತಿಯನ್ನು ಪ್ರಭಲವಾಗಿಸಿಕೊಂಡು ತಾವು ನೆಲೆಸಿದ್ದ ಮನೆಯಲ್ಲೇ ಆರಾಧನಾ ಫರ್ಫಾರ್ಮಿಂಗ್ ಸ್ಕೂಲ್ ಆರಂಭಿಸಿದರು. ಮೊದಲು ಸಣ್ಣ ಮಟ್ಟದಲ್ಲೇ ಬೆಳೆದ ಸಂಸ್ಥೆ ಇಂದು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ.
ಗುರು ಶಿಷ್ಯ ಪರಂಪರೆಯ ರಾಯಭಾರಿ
ತಾವು ಗುರು ಶಿಷ್ಯ ಪರಂಪರೆಯಲ್ಲಿ ಕಲಿತಿದ್ದ ಅಪರ್ಣಾ ಆದನ್ನೆ ತಮ್ಮ ಕಲಾಸೇವೆಗೆ ಮೀಸಲಿಟ್ಟರು. ಇಂದಿನ ಯುವ ಜನತೆಗೆ ಕಲೆಯ ಪರಿಚಯ ಸ್ಟೇಜ್, ಕೋ ಆರ್ಡಿನೇಷನ್, ಥಿಯೇಟರ್, ಪರ್ಫಾಮೆನ್ಸ್ ಬಗ್ಗೆ ಹೆಚ್ಚು ಜ್ಞಾನ ನೀಡುವುದು ಮುಖ್ಯ ಉದ್ಮಶವಾಗಿತ್ತು. ಆ
ಹಿನ್ನೆಲೆಯಲ್ಲಿ ಆರಂಭವಾದ ಅರಾಧನಾ ಇಂದು 30 ಜನ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಇಲ್ಲಿ ಬರಲು ಯಾವುದೇ ವಯಸ್ಸಿನ ಮಿತಿ ಇಲ್ಲ. ನಿಮಗೆ ಕಲಿಯೋ ಹುಮ್ಮಸಿದರೆ ಸಾಕು ಅಂತಾರೆ ಅಪರ್ಣಾ. ಇದನ್ನು ಇನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸೋ ಕನಸು
ಹೊಂದಿದ್ದಾರೆ. ಆ ಮೂಲಕ ತಮ್ಮ ಕನಸು ಮತ್ತು ಬದುಕು ಎರಡನ್ನು ನೃತ್ಯದಲ್ಲಿ ಕಟ್ಟಿಕೊಂಡಿದ್ದಾರೆ.
ಇವತ್ತು ಕಲೆ ಅನ್ನೋದು ಕೇವಲ ಮನರಂಜನೆ ಯಾಗಿ ಮಾತ್ರ ಉಳಿದಿಲ್ಲ. ದೇಶದ ಆರ್ಥಿಕ ಪ್ರಗತಿಯಲ್ಲಿ ಇದು ದೊಡ್ಡ ಸ್ಥಾನಗಳಿಸಿಕೊಂಡಿದೆ. ಇದೇ ಹಿನ್ನೆಲೆಯಲ್ಲಿ ಇವತ್ತು ಎಷ್ಟೋ ಜನರು ತಮ್ಮ ಉದ್ಯೋಗಗಳನ್ನು ತೊರೆದು ತಮ್ಮ ಆತ್ಮದ ಕರೆಗೆ ಓಗೊಟ್ಟು ತಮ್ಮ ಕೈಹಿಡಿದಿದ್ದ ಕಲಾ ಸೇವೆಗೆ ಮರಳುತ್ತಿದ್ದಾರೆ. ಇನ್ನೂ ಕೆಲವರು ಕಲೆಯನ್ನು ಉಸಿರಾಗಿಸಿಕೊಂಡ ಅಪರ್ಣಾ ರಂಥ ಯುವ ಮನಸು ಅದರಲ್ಲಿ ತೊಡಗಿಸಿಕೊಂಡು ತಮ್ಮ ಬದುಕನ್ನು ಕಟ್ಟಕೊಂಡಿದ್ದಾರೆ. ಅದಕ್ಕೆ ಹೇಳೋದು ಮನಸ್ಸಿಗೆ ಇಷ್ಟವಾದುದನ್ನು ಮಾಡುತ್ತಾ ಹೋದರೆ ಕೀರ್ತಿ ಹಣ ಮತ್ತು ಯಶಸ್ಸು ನಿಮ್ಮದಾಗುತ್ತದೆ ಅಂತ!
ಆಗಸ್ಟ್ 11ಕ್ಕೆ ‘ಆರಾಧನ’ ವಾರ್ಷಿಕೋತ್ಸವ
ಕಲಿಕೆಗೆ ಯಾವುದೇ ವಯಸ್ಸಿಲ್ಲ. ಅದಕ್ಕೆ ಪೂರಕವಾಗಿ ಉದ್ಯೋಗಸ್ಥ, ಸ್ವ ಉದ್ಯೋಗಸ್ಥ ಮಹಿಳೆಯರು. ತಮಗೆ ಸಿಗುವ ಸ್ವಲ್ಪ ಸಮಯದಲ್ಲೇ ಅಪರ್ಣ ಅವರ ಬಳಿ ನೃತ್ಯ ಕಲಿಯುತ್ತಿದ್ದಾರೆ. ಇದೇ ಆಗಸ್ಟ್ 11 ಆರಾಧನ ಟ್ರಸ್ಟ್ ನ 10 ನೇ ವಾರ್ಷಿಕೋತ್ಸವದ ದಿನ ಈ ಎಲ್ಲಾ ಮಹಿಳೆಯರು ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಇನ್ನೂ ಮಹಿಳೆಯರ ಈ ಆಸಕ್ತಿಯನ್ನು ಮನಗಂಡ ಅಪರ್ಣರವರು ಸದ್ಯ ಹನುಮಂತನಗರದಲ್ಲಿ ತಮ್ಮ ನೃತ್ಯ ಶಾಲೆಯ ಇನ್ನೊಂದು ಶಾಖೆಯನ್ನು ತೆರೆದಿದ್ದಾರೆ.
ಆ ಮೂಲಕ ಕಲೆ ಮತ್ತು ಕಲಾಸಕ್ತರನ್ನು ಒಂದು ಗೂಡಿಸುವ ಪ್ರಯತ್ನ ಮಾಡ್ತಿದ್ದಾರೆ. ಇನ್ನೂ ತಿರುಪತಿಯ TTD ,SVBC ಯಲ್ಲಿ ಕಾರ್ಯಕ್ರಮ ನೀಡಿದ್ದಾರೆ. ತಾಂಜವೂರಿನ ಬೃಹದೀಶ್ವರ ದಲ್ಲಿ ನಾಟ್ಯಂಜಲಿ , ವೆಲ್ಲೂರ್ ಜಲಕಂಠೇಶ್ವರಲ್ಲಿ ಕಲಾ ಪ್ರದರ್ಶನ ನೀಡಿದ್ದಾರೆ. ಇನ್ನು ಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳೆಲ್ಲರೂ ಕರ್ನಾಟಕ ಎಜುಕೇಷನ್ ಬೋರ್ಡ್‌ನಡೆಸುವ ಸಂಗೀತ, ನೃತ್ಯ ಪರೀಕ್ಷೆಯಲ್ಲಿ 90% ಗಿಂತ ಹೆಚ್ಚಿನ ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಹೀಗೆ ಅಪರ್ಣ ಆನಂದ್‌ರವರು ನಿರಂತರ ಕಲಾ ಸೇವೆಯನ್ನೇ ಬದುಕಾಗಿಸಿಕೊಂಡಿದ್ದಾರೆ.
ಇದೇ ಆಗಸ್ಟ್ 11 ರಂದು ತಮ್ಮ ಆರಾಧನ ಇನ್ ಸ್ಟಿಟ್ಯೂಟ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಟ್ರಸ್ಟ್ ನ 10 ನೇ ವಾರ್ಷಿಕೋತ್ಸವವನ್ನು , ಕತ್ರಿಗುಪ್ಪೆ, ಬಿ ಎಸ್ ಕೆ 3rd ಸ್ಟೇಜ್ ನಲ್ಲಿರುವ ಪರಂಪರೆ ಆಡಿಟೋರಿಯಂನಲ್ಲಿ ಆಯೋಜಿಸಿದ್ದಾರೆ.ಜೊತೆಗೆ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನವು ಇರುತ್ತದೆ. ತಪ್ಪದೇ ಕಲಾಸಕ್ತರು ಭಾಗವಹಿಸಿ. ಆರಾಧನ ಟ್ರಸ್ಟ್ ನ ಈ ಕಾರ್ಯವನ್ನು ಪ್ರೋತ್ಸಾಹಿಸಿ.
–ಚೈತ್ರ ಮೈಸೂರು
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ5 days ago
ನಕಲಿ ವೈದ್ಯರಿಗೆ ದಂಡ ; ಮೆಡಿಕಲ್ ಸ್ಟೋರ್ ಮುಚ್ಚಲು ಆದೇಶ
-
ದಿನದ ಸುದ್ದಿ4 days ago
ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
-
ದಿನದ ಸುದ್ದಿ4 days ago
ಆರಗದಲ್ಲಿ ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪ ಪತ್ತೆ
-
ದಿನದ ಸುದ್ದಿ18 hours ago
ಸಂತೇಬೆನ್ನೂರು | ಈಶ್ವರೀ ವಿ ವಿ ಯಲ್ಲಿ ಇಂಜಿನಿಯರ್ಸ್ ಡೇ ಆಚರಣೆ
-
ದಿನದ ಸುದ್ದಿ3 days ago
ದಾವಣಗೆರೆ | ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ
-
ದಿನದ ಸುದ್ದಿ2 days ago
ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಅಹವಾಲು ಸ್ವೀಕಾರ
-
ದಿನದ ಸುದ್ದಿ2 days ago
HAL | ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ | ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠ ಹಾಗೂ ಶ್ರೇಷ್ಠ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್