ದಿನದ ಸುದ್ದಿ
ಶಿಮ್ಲಾದಿಂದ ಕನ್ನಡತಿ ಕರೆತಂದ ವಿಕ ವರದಿಗಾರ ನಿಮಗೆ ಗೊತ್ತಾ?
ಸುದ್ದಿದಿನ ಡೆಸ್ಕ್: ಪತ್ರಕರ್ತರು ಚೌಕಟ್ಟಿನ ಹೊರಗೂ ಕೆಲಸ ಮಾಡಿ ಹೇಗೆ ಸತ್ಕಾರ್ಯ ಮಾಡಬಹುದು ಎನ್ನುವುದಕ್ಕೆ ಶಿಮ್ಲಾದ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರಿನ ಪಿರಿಯಾಪಟ್ಟಣ ಮೂಲದ ಕನ್ನಡತಿ ಪದ್ಮಾರನ್ನು ಕರೆತರಲು ಅವಿರತವಾಗಿ ಶ್ರಮಿಸಿದ ವಿಜಯ ಕರ್ನಾಟಕ ದಿನಪತ್ರಿಕೆಯ ಮೈಸೂರು ವಿಭಾಗದ ಹಿರಿಯ ಉಪ ಸಂಪಾದಕ ಚಾಣಕ್ಯ ನೀಲಕಂಠನಹಳ್ಳಿ ಅವರು ಮಾದರಿಯಾಗಿ ನಿಂತಿದ್ದಾರೆ.
ಚಾಣಕ್ಯ ಅವರ ಸೇವೆಯ ಬಗ್ಗೆ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೂ ಕೂಡ ಪದ್ಮಾ ಅವರನ್ನು ಭೇಟಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ವಿಜಯ ಕರ್ನಾಟಕ ಹೆಸರನ್ನು ಪ್ರಸ್ತಾಪಿಸಿ ವರದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳು ಸುಳ್ಳೋ ನಿಜವೋ ಎಂದು ಯೋಚಿಸದೆ ಯಥಾವತ್ತಾಗಿ ಭಟ್ಟಿ ಇಳಿಸುವ ಮಾಧ್ಯಮಗಳಿಗೆ ಹೀಗೂ ಕೆಲಸ ಮಾಡಬಹುದು ಎಂಬುದನ್ನು ಒಂದು ನಿದರ್ಶನ ಸಮೇತ ಚಾಣಕ್ಯ ಅವರು ಸಾಬೀತುಮಾಡಿ ತೋರಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ನೀಲಕಂಠನಹಳ್ಳಿ ಎಂಬ ಪುಟ್ಟ ಗ್ರಾಮ ಮೂಲದವರಾದ ಅವರು, ಸದ್ಯ ಮೈಸೂರಿನ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಹಿರಿಯ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಅಮೋಘ್ ಸ್ಥಳೀಯ ವಾಹಿನಿಯಲ್ಲಿ ವರದಿಗಾರರಾಗಿ, ಪ್ರಜಾವಾಣಿ ಬೆಂಗಳೂರು ವಿಭಾಗದಲ್ಲಿ ಟ್ರೇನಿಯಾಗಿ, ವಿಜಯವಾಣಿ ದಿನಪತ್ರಿಕೆಯ ಚಿತ್ರದುರ್ಗ ಹಾಗೂ ದಾವಣಗೆರೆಯ ವರದಿಗಾರನಾಗಿ ಕೆಲಸ ಮಾಡಿದ್ದ ಅವರು ಕಳೆದ ಐದು ವರ್ಷಗಳಿಂದ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಕರಣ ಭೇದಿಸಿದ್ದು ಹೀಗೆ…
ಪದ್ಮಾ ಪ್ರಕರಣ ಕುರಿತು ಟ್ವಿಟರ್ ಹಾಗೂ ಫೇಸ್ಬುಕ್ನಲ್ಲಿ ಕಾಣಿಸಿಕೊಂಡ ಒಂದು ಮಾಹಿತಿಯ ಬೆನ್ನು ಹತ್ತಿದ ಚಾಣಕ್ಯ ಅವರು ಶಿಮ್ಲಾ ಆಸ್ಪತ್ರೆಯ ದೂರವಾಣಿ ಸಂಖ್ಯೆಯನ್ನು ಗೂಗಲ್ನಲ್ಲಿ ಪತ್ತೆಮಾಡಿದರು. ತಮಗೆ ಗೊತ್ತಿದ್ದಷ್ಟು ಹಿಂದಿಯಲ್ಲಿ ಅಲ್ಲಿನ ಸ್ವಾಗತಕಾರನ ಹತ್ತಿರ ಮಾತನಾಡಿ ಹೇಗೋ ಅಲ್ಲಿನ ವೈದ್ಯ ಸಂಜಯ್ ಪಾಠಕ್ ಸಂಪರ್ಕ ಸಾಧಿಸಿ ಪದ್ಮಾ ಅವರೊಂದಿಗೆ ಮಾತನಾಡಲು ಯಶಸ್ವಿಯಾದರು. ಶಿಮ್ಲಾದಲ್ಲಿದ್ದ ಪದ್ಮಾರನ್ನು ಮೊದಲು ಗುರುತಿಸಿದ ಹಿಮಾಚಲಪ್ರದೇಶದ ಸಾಮಾಜಿಕ ಕಾರ್ಯಕರ್ತೆ ಸುನೀಲ ಶರ್ಮಾ ಅವರಿಗೆ ಫೇಸ್ ಬುಕ್ನಲ್ಲಿ ಸಂದೇಶ ಕಳಿಸಿ ಅವರ ಸಂಪರ್ಕವನ್ನೂ ಗಳಿಸಲು ಯಶಸ್ವಿಯಾದರು.
ವರದಿ ಮಾಡಿ ಸುಮ್ಮನಾಗಲಿಲ್ಲ
ಮೇಲಿನವರ ಗಮನಕ್ಕೆ ತಂದು ವರದಿಮಾಡಿ ತಣ್ಣಗಾಗಿದ್ದರೆ ಅವರು ಹತ್ತರಲ್ಲಿ ಹನ್ನೊಂದನೆಯವರಾಗಿರಬೇಕಾಗಿತ್ತು. ವಿಕ ಮೈಸೂರು ಸ್ಥಾನಿಕ ಸಂಪಾದಕ ಲೋಕೇಶ್ ಕಾಯರ್ಗ ಅವರು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಅವರಿಗೆ ವಿಷಯ ಮುಟ್ಟಿಸಿದರು. ಚಾಣಕ್ಯ ಮೈಸೂರು ಜಿಲ್ಲಾ ಮಾನಸಿಕ ಆರೋಗ್ಯ ಯೋಜನಾಧಿಕಾರಿ ಮಂಜುಪ್ರಸಾದ್ ಅವರಿಗೆ ವಿಷಯ ಮುಟ್ಟಿಸಿದರು. ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿಗೆ ಸುನೀಲ ಶರ್ಮಾ, ಸಂಜಯ್ ಪಾಠಕ್ ಅವರ ಮೊಬೈಲ್ ನಂಬರ್ ನೀಡಿ. ಈ ಪ್ರಕರಣದಲ್ಲಿ ವಿಜಯ ಕರ್ನಾಟಕ ಪತ್ರಿಕೆಯು ಮುಖ್ಯ ಸೂತ್ರಧಾರಿಯಾಗಿರುವಂತೆ ನೋಡಿಕೊಂಡರು.
ವರದಿ ಪರಕಟವಾದ ಮರುದಿನವೇ ವಿಜಯ ಕರ್ನಾಟಕದ ಪಿರಿಯಾಪಟ್ಟಣ ವರದಿಗಾರ ನವೀನ್ ಅವರು ಕಂಪಲಾಪುರದ ಮಾಕನಹಳ್ಳಿ ಪಾಳ್ಯದಲ್ಲಿರುವ ಪದ್ಮಾ ಅವರ ಮನೆಯನ್ನು ಪತ್ತೆ ಮಾಡಿದರು. ಮಾನಸಿಕ ಆರೋಗ್ಯಾಧಿಕಾರಿಗೆ ವಿಳಾಸ ತೋರಿಸಿ ಅವರನ್ನು ಕರೆದೊಯ್ದವರು ನವೀನ್.
ಮನೆ ಪರಿಸ್ಥಿತಿ ಸರಿ ಇರಲಿಲ್ಲ
ಪದ್ಮಾ ಅವರ ಕುಟುಂಬ ವರ್ಗವನ್ನು ಮಾನಸಿಕ ಆರೋಗ್ಯ ಇಲಾಖೆ ತಂಡ ಭೇಟಿಯಾದಾಗ ಅವರ ಮನೆ ಪರಿಸ್ಥಿತಿ ಕರಳು ಚುರುಕ್ ಎನ್ನುವಂತಿತ್ತು. ದುಡ್ಡಿಲ್ಲದೆ ಅರ್ಧಕ್ಕೆ ಮನೆ ನಿಂತಿದ್ದರಿಂದ ಪದ್ಮಾರ ತಾಯಿ ಪಾರ್ವತಮ್ಮನವರು ಅವರ ಮಗಳ ಮನೆಯಲ್ಲಿ ವಾಸಿಸುತ್ತಿದ್ದರು. ಕೂಲಿ ಮಾಡಿ ಬದುಕುವ ಕುಟುಂಬಕ್ಕೆ ಪದ್ಮಾ ಇನ್ನಷ್ಟು ಹೊರೆಯಾಗಬಹುದೆಂದು ಮೇಲ್ನೋಟದಲ್ಲೇ ಕಾಣುತ್ತಿತ್ತು. ಕೂಡಲೇ ಪಿರಿಯಾಪಟ್ಟಣ ಶಾಸಕ ಮಹದೇವು ಅವರನ್ನು ಸಂಪರ್ಕಿಸಿದ ಚಾಣಕ್ಯ ಅವರು ಪದ್ಮಾರ ಮನೆ ಪರಿಸ್ಥಿತಿಯನ್ನು ವಿವರಿಸಿ ಹೇಳಿದರು. ಇದರಿಂದ ಕರಗಿದ ಶಾಸಕರು ಪದ್ಮಾ ಕುಟುಂಬಕ್ಕೆ ನೆರವು ನೀಡುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ಅಭಿರಾಂ ಅವರೂ ಕೂಡ ಇದೇ ರೀತಿ ಭರವಸೆ ನೀಡಿದರು.
ಪ್ರೇರಣೆಯಾಗಿದ್ದು ಸಂಸ್ಥೆ ಹಾಗೂ ಗುರುಗಳು
ವರದಿಗಳು ಸಮಾಜದ ಮೂರನೇ ವ್ಯಕ್ತಿಗೆ ಲಾಭ ತಂದುಕೊಟ್ಟಾಗಲೇ ಸಾರ್ಥಕವಾಗುವುದು ಎಂದು ಚಾಣಕ್ಯ ಅವರು ತಮ್ಮ ಫೇಸ್ಬುಕ್ ಪೋಸ್ಟ್ವೊಂದರಲ್ಲಿ ಹೇಳಿದ್ದಾರೆ. ಇದಕ್ಕೆ ಕಾರಣವಾಗಿದ್ದು ನನ್ನ ಸಂಸ್ಥೆ ಹಾಗೂ ಸ್ಥಾನಿಕ ಸಂಪಾದಕರು ನೀಡಿದ ಪ್ರೋತ್ಸಾಹ ಎಂದು ಫೇಸ್ ಬುಕ್ ಮೆಸೆಂಜರ್ನಲ್ಲಿ ಸುದ್ದಿದಿನ ಕ್ಕೆ ತಿಳಿಸಿದ್ದಾರೆ.
ನಾನು ವಿಕ ಬಳಗಕ್ಕೆ ಸೇರಿದಾಗ ನನ್ನ ಆದ್ಯಗುರುಗಳು ನೀವು ಏನು ಬರೆಯುತ್ತೀರಾ ಎಂದು ಕೇಳಿದರು. ಕೃಷಿ, ವಿಜ್ಞಾನ, ಭಾಷಾಂತರ, ಲೈಫ್ ಸ್ಟೈಲ್ ವರದಿಗಾರಿಕೆ ಬಗ್ಗೆ ವಿವರಿಸಿದೆ. ಶ್ರೀಸಾಮಾನ್ಯನಿಗೆ ನೆರವಾಗುವಂತಹ ಯಾವುದಾದರೂ ಲೇಖನ ಬರೆದಿದ್ದೀರಾ ಎಂದು ಕೇಳಿದರು. ನನ್ನ ಬಳಿ ಉತ್ತರ ಇರಲಿಲ್ಲ. ಸಮಾಜದ ಮೂರನೇ ವ್ಯಕ್ತಿಗೆ ಲಾಭ ತಂದು ಕೊಟ್ಟಾಗ ಮಾತ್ರ ವರದಿ ಸಾರ್ಥಕವಾಗತ್ತದೆ ಎಂದು ಅವರು ಹೇಳಿದ್ದರು. ಇದು ಅರ್ಥವಾಗಲು ಐದು ವರ್ಷ ಹಿಡಿಯಿತು ಎಂದು ಚಾಣಕ್ಯ ಅವರು ತಮ್ಮ ಫೇಸ್ಬುಕ್ ಪೋಸ್ಟ್ ವೊಂದರಲ್ಲಿ ಬರೆದಿದ್ದಾರೆ.
ದಿನದ ಸುದ್ದಿ
ವಿಶಾಖಪಟ್ಟಣಂನಲ್ಲಿ ಆಲ್ ಇಂಡಿಯ ಕ್ರೀಡಾಕೂಟಕ್ಕೆ ಪೇದೆ ಕೆ.ಆರ್.ಹುಲಿರಾಜ ಆಯ್ಕೆ
- ಗಿರೀಶ್ ಕುಮಾರ್ ಗೌಡ, ಬಳ್ಳಾರಿ
ಸುದ್ದಿದಿನ,ಬಳ್ಳಾರಿ: ಉದ್ಯೋಗದೊಂದಿಗೆ ಆರೋಗ್ಯದ ದೃಷ್ಟಿಯಿಂದ ಪ್ರತಿನಿತ್ಯ ಒಂದು ತಾಸಿನ ಕಾಲ ದೇಹದಂಡನೆ ಮಾಡಿದರೇ ಕರ್ತವ್ಯ ನಿರ್ವಹಿಸಲು ಅನುಕೂಲಕರವಾಗುತ್ತದೆ ಎಂದು ವಿಶಾಲಪಟ್ಟಣಂ ಆಲ್ ಇಂಡಿಯಾ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾದ ಪೇದೆ ಕೆ.ಆರ್ ಹುಲಿರಾಜ ತಿಳಿಸಿದರು.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬೊಮ್ಮಗಟ್ಟ ಗ್ರಾಮದ ತಂದೆ ಕೆ.ರಮೇಶ್, ತಾಯಿ ಲಕ್ಷ್ಮೀ ಅವರ ಮೊದಲನೇ ಮಗ ಕೆ.ಆರ್ ಹುಲಿರಾಜ, ವೃತ್ತಿಯಲ್ಲಿ ಕೆ.ಎಸ್.ಆರ್.ಟಿ.ಸಿ ಪೇದೆ, ಪತ್ನಿ ಸವಿತಾ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಉದ್ಯೋಗಿ, ಇಬ್ಬರು ಮಕ್ಕಳು ಇದ್ದಾರೆ.
ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸದ ಜೊತೆಗೆ ಖೋ-ಖೋ, ಓಟ, ವಾಲಿಬಾಲ್, ಕ್ರಿಕೆಟ್ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಜೊತೆಗೆ ಬಳ್ಳಾರಿ ಡಯಟ್ ನಲ್ಲಿ ಡಿ.ಎಡ್. ಪದವಿ ಪಡೆದು ನಂತರ ಬಿ.ಎ. ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದಾರೆ.
ಪೇದೆಯಾಗಿ ಆಯ್ಕೆ
2014ನೇ ಮಾರ್ಚ್ 3ನೇ ತಾರೀಖು ಬೆಂಗಳೂರಿನ ಕೆ.ಎಸ್.ಆರ್.ಟಿ.ಸಿ.ಯಲ್ಲಿ ಪೇದೆಯಾಗಿ ಆಯ್ಕೆಯಾಗಿ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಎರಡು ವರ್ಷಗಳ ಕಾಲ ತರಬೇತಿ ಪೂರ್ಣಗೊಳಿಸಿದ್ದಾರೆ.
ಬೆಂಗಳೂರಿನಲ್ಲಿ 6 ವರ್ಷಗಳ ಕಾಲ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಪ್ರಸ್ತುತ ಚಿತ್ರದುರ್ಗ ಜಿಲ್ಲೆಯ ಚಳ್ಳಕೇರೆ ತಾಲೂಕಿನ ಡಿಪೋದಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
800,1500 ಮೀಟರ್ ಓಟದ ಸ್ಪರ್ಧೆ ಆಯ್ಕೆ
ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿ, ನಂತರ ರಾಜ್ಯ ಮಟ್ಟದಲ್ಲಿ 800 ಮೀಟರ್ ಹಾಗೂ 1500 ಮೀಟರ್ ಓಟದಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡು, 2024ನೇ ಸಾಲಿನ ಡಿಸೆಂಬರ್ 6, 7 ಹಾಗೂ 8 ರಂದು ನಡೆಯುವ ಆಲ್ ಇಂಡಿಯಾ ರೋಡ್ ಟ್ರಾನ್ಸ್ಪೋರ್ಟ್ ಕಾರ್ಪೋರೇಷನ್ ಲಿಮಿಟೆಡ್ ಅಥ್ಲೆಟಿಕ್ ಮೀಟ್, ಪಾರ್ಟ್ ಸೇಡಿಯಂ, ವಿಶಾಖಪಟ್ಟಣಂನಲ್ಲಿ ನಡೆಯುವ ಅಥ್ಲೆಟಿಕ್ಸ್ ಗೆ ಆಯ್ಕೆಯಾಗಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.
ಇಲಾಖೆ ಪ್ರೋತ್ಸಾಹ
ASRTU ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುವ ನಿಗಮದ ಆಟಗಾರರಿಗೆ ಅಭ್ಯಾಸ ಮಾಡಲು ವೇತನ ಸಹಿತ ರಜೆ ಹಾಗೂ ಕ್ರೀಡಾ ಸಾಮಗ್ರಿ ಕೊಟ್ಟಿದ್ದಾರೆ .ASRTU ವತಿಯಿಂದ ದೇಶದ ಎಲ್ಲಾ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ವಿಶಾಖಪಟ್ಟಣಂನಲ್ಲಿ ಆಯೋಜಿಸಲಾಗಿದೆ. ರಾಜ್ಯದ ಹಾಗೂ ಜಿಲ್ಲೆಯ ಇಲಾಖೆಯ ಅಧಿಕಾರಿಗಳಿಗೆ ಪೇದೆ ಕೆ.ಆರ್. ಹುಲಿರಾಜ್ ರಿಗೆ ಧನ್ಯವಾದಗಳನ್ನು ತಿಳಿಸಿದರು.
ಒಟ್ಟಾರೆಯಾಗಿ ASRTU Athletics ಡಿಸೆಂಬರ್-2024 ಕ್ರೀಡಾಕೂಟವನ್ನು ಡಿಸೆಂಬರ್ 06 ರಿಂದ 8 ವರೆಗೆ ವಿಶಾಖಪಟ್ಟಣಂನಲ್ಲಿ ಆಯೋಜಿಸಿದೆ. ಅದರಲ್ಲಿ ಬಳ್ಳಾರಿ ಜಿಲ್ಲೆಯ ನಿವಾಸಿ ಪೇದೆ ಕೆ.ಆರ್ ಹುಲಿರಾಜ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಸಮಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ತಂದೆ ತಾಯಿ, ಪೋಷಕರು ಹಾಗೂ ಸ್ನೇಹಿತರು ಶುಭಕೋರಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚನ್ನಗಿರಿ |ಶ್ರೀ ಶಿವಲಿಂಗೇಶ್ವರ ಸ್ವಾಮಿ ಪ್ರಥಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ
ಸುದ್ದಿದಿನ,ಚನ್ನಗಿರಿ:ಪಟ್ಟಣದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಪ್ರಥಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಹಾಗೂ ಇತರೆ ಚಟುವಟಿಕೆ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು.
ಮುಖ್ಯ ಅತಿಥಿಗಳಾಗಿ ಡಿವೈಎಸ್ ಪಿ ಸ್ಯಾಮ್ ವರ್ಗೀಸ್ ಐಪಿಸ್ ಹಾಗೂ ಕಿರುತೆರೆಯ ರಿಯಾಲಿಟಿ ಶೋ ಮಹಾನಟಿ ಖ್ಯಾತಿಯ ಬಿಂದು ಹೊನ್ನಾಳಿ ಭಾಗವಹಿಸಿದ್ದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅಮೃತೇಶ್ವರ ಬಿ.ಜಿ ವಹಿಸಿದ್ದರು. ಐ ಕ್ಯು ಎಸ್ ಸಿ ಸಂಚಾಲಕರಾದ ವಿಜಯ್ ಕುಮಾರ್ ಎನ್.ಸಿ ಅವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಷಣ್ಮುಖಪ್ಪ ಕೆ.ಹೆಚ್ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಡಿವೈಎಸ್ ಪಿ ಸ್ಯಾಮ್ ವರ್ಗೀಸ್ ಐ ಪಿ ಎಸ್ ಅವರ ವ್ಯಕ್ತಿಪರಿಚಯವನ್ನು ಪ್ರಾಧ್ಯಾಪಕಿ ಡಾ.ದಾಕ್ಷಾಯಿಣಿ ಡೋಂಗ್ರೆ ಅವರು ಹಾಗೂ ಕಿರುತೆರೆ ನಟಿ ಬಿಂದು ಹೊನ್ನಾಳಿಯವರ ವ್ಯಕ್ತಿಪರಿಚಯವನ್ನು ಡಾ.ಶಕೀಲ್ ಅಹಮ್ಮದ್ ಅವರು ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ನ ಸಂಯೋಜಕರಾದ ಡಾ.ರಮೇಶ್ ಅಯ್ಯನಹಳ್ಳಿ ಹಾಗೂ ಪ್ರಸನ್ನ ಷ, ರೆಡ್ ಕ್ರಾಸ್ ನ ಸಂಯೋಜಕರಾದ ಡಾ.ಪ್ರದೀಪ್ ಕುಮಾರ್ ಜಿಎಂ, ರೋವರ್ಸ್ ನ ಸುರೇಶ್ ಜಿ.ಎಸ್, ರೇಂಜರ್ಸ್ ನ ಡಾ.ಶಕುಂತಲಾ ಹಾಗೂ ಸುಪ್ರಿಯಾ ಬುಟ್ಟಿ, ಉದ್ಯೋಗ ಕೋಶದ ಸಂಚಾಲಕರಾದ ಡಾ.ಮಂಜುಳ ಟಿ, ಕಾಲೇಜು ಸಮಿತಿಯ ಸದಸ್ಯರು, ಬೋಧಕವರ್ಗ ಹಾಗೂ ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ತೇಜು, ಭಾಗ್ಯ ಜಿ.ಜಿ ಆಶಯಗೀತೆ ಹಾಡಿದರು. ಮಂಜುನಾಥ ಮತ್ತು ಲೋಹಿತ್ ನಿರೂಪಿಸಿದರು. ಸಿದ್ದೇಶ್ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕ್ರೀಡೆ
ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ರಾಘವೇಂದ್ರ ಎನ್ ಬಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಸುದ್ದಿದಿನ,ದಾವಣಗೆರೆ:ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾಲಯದ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ 90ಕೆಜಿ ವಿಭಾಗದಲ್ಲಿ ರಾಘವೇಂದ್ರ ಚಿನ್ನದ ಪದಕ ಗೆಲ್ಲುವ ಮೂಲಕ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ..
ದಾವಣಗೆರೆ ನಗರದ ಜಿಎಫ್ ಜಿಸಿ ಕಾಲೇಜಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದಿಂದ ದೇಹದಾರ್ಢ್ಯ ಸ್ಪರ್ಧೆ ಹಾಗೂ ಆಯ್ಕೆ ಗಳು ನಡೆದವು, ಕಾಲೇಜಿನಲ್ಲಿ ಪ್ರಥಮ ಬಿಎ ವ್ಯಾಸಂಗ ಮಾಡುತ್ತಿರುವ ರಾಘವೇಂದ್ರ, ಹಳೇ ಕುಂದುವಾಡದ ಬಸವರಾಜ್, ಲಕ್ಷ್ಮಿದೇವಿ ದಂಪತಿಯ ಪುತ್ರನಾಗಿದ್ದು, ಸ್ಪರ್ಧೆಯಲ್ಲಿ 90ಕೆಜಿ ವಿಭಾಗದಲ್ಲಿ ದೇಹ ಪ್ರದರ್ಶಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾನೆ.
ಓದಿನ ಜೊತೆಗೆ ತನ್ನ ತಂದೆಯ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಾ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಬಿಡುವಿನ ವೇಳೆಯಲ್ಲಿ ಕೋಚ್ ಮಧು ಪೂಜಾರ್ ಮಾರ್ಗದರ್ಶನದಲ್ಲಿ ದೇಹ ಹುರಿಗೊಳಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ್ದಾನೆ, ಸ್ಪರ್ಧೆಯಲ್ಲಿ ಬೈಸಿಪ್ಸ್, ಲ್ಯಾಟ್ ಸ್ಟ್ರೈಡ್ ಪೋಸ್ ಕೊಟ್ಟು ನೋಡುಗರನ್ನು, ತೀರ್ಪುಗಾರರನ್ನು ಬೆರಗುಗೊಳಿಸಿದ್ದಾನೆ.
ಇನ್ನೂ ರಾಘವೇಂದ್ರನ ದೇಹ ಪ್ರದರ್ಶನ ವೇಳೆ ಶಿಳ್ಳೆ, ಚಪ್ಪಾಳೆ ಕೇಳಿ ಬಂದವು, ರಾಘವೇಂದ್ರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ಬರುವ ಫೆಬ್ರುವರಿಯಲ್ಲಿ ಮಂಗಳೂರಿನಲ್ಲಿ ಸ್ಪರ್ಧೆ ನಡೆಯಲಿದೆ, ಇನ್ನೂ ಚಿನ್ನದ ಪದಕ ಗಳಿಸಿರುವ ರಾಘವೇಂದ್ರನಿಗೆ ಜಿಎಫ್ ಜಿಸಿ ಕಾಲೇಜು ಆಡಳಿತ ಮಂಡಳಿ, ಮಾರ್ಗದರ್ಶಕರು, ಹಳೇ ಕುಂದುವಾಡ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ವಹಿವಾಟುಗಳಲ್ಲಿ ಅಮೆರಿಕ ಡಾಲರ್ ಬದಲಾಯಿಸದಂತೆ ಬ್ರಿಕ್ಸ್ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯ
-
ದಿನದ ಸುದ್ದಿ7 days ago
ಇಂದು ವಿಶ್ವ ಏಡ್ಸ್ ದಿನ; ಎಚ್ಐವಿ ಚಿಕಿತ್ಸೆ – ನಿರ್ಮೂಲನೆ ಕುರಿತು ಜಾಗೃತಿ ಅಭಿಯಾನ
-
ಕ್ರೀಡೆ5 days ago
ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ರಾಘವೇಂದ್ರ ಎನ್ ಬಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
-
ದಿನದ ಸುದ್ದಿ3 days ago
ಚನ್ನಗಿರಿ |ಶ್ರೀ ಶಿವಲಿಂಗೇಶ್ವರ ಸ್ವಾಮಿ ಪ್ರಥಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ
-
ಕ್ರೀಡೆ5 days ago
ಅದ್ವಿತೀಯ 2024ರಲ್ಲಿ ಜಿಎಂಐಟಿ ಕಾಲೇಜಿನ ಸಿಎಸ್ಇ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿಯಲ್ಲಿ ತೃತೀಯ ಸ್ಥಾನ
-
ದಿನದ ಸುದ್ದಿ6 days ago
ಫೆಂಗಲ್ ಚಂಡಮಾರುತ | ರಾಜ್ಯದ ವಿವಿಧೆಡೆ ಮಳೆ ; ಕೆಲವು ಜಿಲ್ಲೆಯಲ್ಲಿ ರಜೆ ಘೋಷಣೆ
-
ಕ್ರೀಡೆ6 days ago
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ3 days ago
ವಿಶಾಖಪಟ್ಟಣಂನಲ್ಲಿ ಆಲ್ ಇಂಡಿಯ ಕ್ರೀಡಾಕೂಟಕ್ಕೆ ಪೇದೆ ಕೆ.ಆರ್.ಹುಲಿರಾಜ ಆಯ್ಕೆ