ದಿನದ ಸುದ್ದಿ
ರಕ್ತವನ್ನು ಶುದ್ಧವಾಗಿಟ್ಟುಕೊಳ್ಳಿ : ರೆಡ್‍ಕ್ರಾಸ್ ಕಾರ್ಯದರ್ಶಿ ಮಂಜುನಾಥ್ ಕರೆ
ಸುದ್ದಿದಿನ,ದಾವಣಗೆರೆ : ಶುದ್ಧ ರಕ್ತದಾನವು ಮತ್ತೊಬ್ಬರ ಜೀವ ಉಳಿವಿಗೆ ಕಾರಣವಾಗುತ್ತದೆ. ಆದ್ದರಿಂದ ರಕ್ತದ ಮಹತ್ವ ಅರಿತುಕೊಳ್ಳಿ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಾವಣಗೆರೆ ಜಿಲ್ಲಾ ಶಾಖೆಯ ಕಾರ್ಯದರ್ಶಿ ಮಂಜುನಾಥ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅವರು ದಾವಣಗೆರೆ ರೆಡ್ ಕ್ರಾಸ್ ಸಂಸ್ಥೆ ಹಾಗೂ ದಾವಣಗೆರೆ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯವರ ಸಹಯೋಗದಲ್ಲಿ ತಾಲ್ಲೂಕಿನ ಗೋಪನಾಳ್ ಗ್ರಾಮದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಂಡಿದ್ದ ಉಚಿತ ರಕ್ತ ಗುಂಪು ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅನ್ನದಾನ, ವಿದ್ಯಾದಾನದಂತೆ ರಕ್ತದಾನವೂ ಕೂಡ ಮಹಾದಾನಗಳಲ್ಲಿ ಒಂದಾಗಿದೆ. ರಕ್ತವು ಮಾನವನ ಚೈತನ್ಯಕ್ಕೆ ಅವಶ್ಯವಾದ ಅಂಗಾಂಶ. ರಕ್ತದಾನ ಮಾಡಿದರೆ ಮತ್ತೆ ಹೊಸ ಚೈತನ್ಯಯುಕ್ತ ರಕ್ತ ಉತ್ಪತ್ತಿಯಾಗುತ್ತದೆ. ಆದ್ದರಿಂದ ಭಯಪಡುವ ಅಗತ್ಯವಿಲ್ಲ. 18 ವರ್ಷ ತುಂಬಿದ ನಂತರ ವಿದ್ಯಾರ್ಥಿಗಳು ರಕ್ತದಾನ ನೀಡಲು ಮುಂದಾಗಬೇಕು ಎಂದರು. ಪ್ರಸ್ತುತ ಅತ್ಯವಶ್ಯ ಎನಿಸಿರುವ ಆಧಾರ್‍ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್ ನಂತೆ ರಕ್ತ ಗುಂಪಿನ ಕಾರ್ಡ್ ಸಹ ನಮ್ಮ ಬಳಿ ಇರಬೇಕಾಗಿದೆ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಸತಿ ಶಾಲೆಯ ಪ್ರಾಚಾರ್ಯ ವಿ.ಸಿ ಅಂಜಿನಪ್ಪ ಮಾತನಾಡಿ, ಸರ್ಕಾರಿ ಶಾಲಾ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ರಕ್ತ ಗುಂಪು ಪರೀಕ್ಷೆಯನ್ನು ಉಚಿತವಾಗಿ ಆಯೋಜಿಸಿದ ಎರಡೂ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರಲ್ಲದೆ ಎರಡೂ ಸಂಸ್ಥೆಗಳ ಪದಾಧಿಕಾರಿಗಳಿಗೆ ಕೃತಜ್ಞತಾಪೂರ್ವಕ ವಂದನೆಗಳನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್ ಅವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ರೆಡ್‍ಕ್ರಾಸ್ ಸಂಸ್ಥೆಯ ಖಜಾಂಚಿ ಗೌಡ್ರು ಚನ್ನಬಸಪ್ಪ, ಅಕಾಡೆಮಿಯ ಸಂಸ್ಥಾಪಕ ಕಾರ್ಯದರ್ಶಿ ಎನ್.ಕೆ ಕೊಟ್ರೇಶ್ ವೇದಿಕೆಯಲ್ಲಿದ್ದರು.ಈ ಸಂದರ್ಭದಲ್ಲಿ ಅಕಾಡೆಮಿಯ ಸದಸ್ಯರಾದ ಅರವಿಂದ್, ಟೆಕ್ನಿಷಿಯನ್ ವಿನಯ್, ನಾಗಣ್ಣ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.ಶಿಬಿರದಲ್ಲಿ 100 ವಿದ್ಯಾರ್ಥಿಗಳ ರಕ್ತ ಗುಂಪು ಪರೀಕ್ಷೆ ಮಾಡಿ ಕಾರ್ಡ್ ನೀಡಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ
ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಜ.30 ರಂದು ಹೊನ್ನಾಳಿ ಉಪ ನೋಂದಣಿ ಕಚೇರಿ ಆವರಣ, ಜ.31 ರಂದು ಚನ್ನಗಿರಿ ಉಪ ನೋಂದಣಿ ಕಚೇರಿ ಆವರಣ, ಫೆ.2 ರಂದು ಹರಿಹರ ಉಪ ನೋದಣಿ ಕಚೇರಿ ಆವರಣ, ಫೆ.3 ರಂದು ದಾವಣಗೆರೆ ಉಪ ನೋಂದಣಿ ಕಚೇರಿ, ಫೆ.4 ರಂದು ಜಗಳೂರು ಉಪ ನೋಂದಣಿ ಕಚೇರಿ ಆವರಣಗಳಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.


