ಬಹಿರಂಗ
ಮನುಸ್ಮೃತಿ ಯಾಕೆ ಬೇಡ : ಡಾ.ಬಿ.ಆರ್.ಅಂಬೇಡ್ಕರ್ ಹೇಳಿರೋದಿಷ್ಟು..!
ಹಿಂದೂಗಳನ್ನು ತರ್ಕದಿಂದ ಮನವೊಲಿಸಿ , ತರ್ಕವಿರುದ್ಧವಾದ ಕಾರಣ ಜಾತಿಪದ್ಧತಿಯನ್ನು ತೊರೆಯಲು ಹೇಳಬಲ್ಲಿರಾ ? ಇಲ್ಲಿ ಇನ್ನೊಂದು ಪ್ರಶ್ನೆ ಹುಟ್ಟುತ್ತದೆ, ತರ್ಕ ಮಾಡುವ ಸ್ವಾತಂತ್ರ್ಯ ಹಿಂದೂವಿಗೆ ಇದೆಯೆ ? ಆಚಾರ ವಿಷಯದಲ್ಲಿ ಪಾಲಿಸಬೇಕಾದರೆ ಮೂರು ಶಾಸನಗಳನ್ನು ಮನುಸ್ಮೃತಿ ವಿಧಿಸಿದೆ . “ ವೇದ, ಶೃತಿಃ, ಸದಾಚಾರಃ ಸ್ವಸ್ಯಚಃ ಪ್ರಿಯಮಾತ್ಮಾನಃ ”, ತರ್ಕ ಮಾಡುವ ಬುದ್ಧಿಗೆ ಇಲ್ಲಿ ಆಸ್ಪದವೇ ಇಲ್ಲ.
ಸದಾಚಾರ ಇವುಗಳನ್ನುಳಿದ ಬೇರೆ ಯಾವುದನ್ನೂ ಹಿಂದೂವು ಅನುಸರಿಸಕೂಡದು. ಮೊದಲನೆಯದಾಗಿ, ವೇದಗಳಲ್ಲಿ ಅಥವಾ ಸೃತಿಗಳಲ್ಲಿ ಹೇಳಿರುವ ಮಾತುಗಳನ್ನು ಅರ್ಥ ಮಾಡುವಾಗ ಸಂಶಯ ಹುಟ್ಟಿಕೊಂಡರೆ ಹೇಗೆ ? ಈ ವಿಷಯದಲ್ಲಿ ಮನುವಿನ ಅಭಿಪ್ರಾಯ ಸ್ಪಷ್ಟವಾಗಿದೆ. ಮನು ಹೇಳುತ್ತಾನೆ ,
ಯೋ ವ ಮನೈತ ತೇ ಮೂಲೇ ಹೇತು ಶಾಸ್ತಾಶ್ರ ಯಾದ್ವಿಜಃ |
ಸ ಸಾಧುಭಿರ್ಬಹಿಷ್ಕಾರ್ಯೊ ನಾಸ್ತಿಕೋ ವೇದನಿಂದಕಃಃ||
ಈ ವಿಧಿಯ ಮೇರೆಗೆ ವೇದ, ಸೃತಿಗಳ ಅರ್ಥ ವಿವರಣೆಯಲ್ಲಿ ಸ್ವತಂತ್ರ ಬುದ್ಧಿಯಿಂದ ತರ್ಕ ಹೂಡುವುದು ನಿಷಿದ್ಧ. ಹೀಗಿರುವುದರಿಂದ ವೇದಗಳಲ್ಲಿ, ಸ್ಮೃತಿಗಳಲ್ಲಿ ಹೇಳಿರುವ ವಿಷಯಕ್ಕೆ ಸುಮ್ಮನೆ ತಲೆದೂಗಬೇಕು ; ತರ್ಕಿಸಕೂಡದು. ವೇದಗಳ ಉಕ್ತಿಗೂ ಸತಿಗಳ ಉಕ್ತಿಗೂ ಪರಸ್ಪರ ವಿರೋಧ ಕಂಡುಬಂದಿತೆನ್ನಿ, ಆ ಪ್ರಸಂಗದಲ್ಲಿ ಕೂಡ ಸ್ವಂತ ಬುದ್ದಿಯಿಂದ ವಿಚಾರ ಮಾಡುವಂತಿಲ್ಲ. ಎರಡು ಸ್ಮೃತಿಗಳ ಪರಸ್ಪರ ವಿರೋಧವಾದ ಮಾತುಗಳನ್ನು ಹೇಳಿದ್ದರೆ ಅವೆರಡೂ ಸಮಾನವಾದ ಶಾಸನಗಳೇ. ಅವೆರಡರಲ್ಲಿ ಯಾವುದನ್ನು ಅನುಸರಿಸಿದರೂ ದೋಷವಿಲ್ಲ . ಬುದ್ಧಿಶಕ್ತಿಯಿಂದ ತೂಗಿನೋಡಿ ಯಾವುದು ಸರಿಯೆಂದು ನಿರ್ಧರಿಸುವ ಪ್ರಯತ್ನ ಮಾಡಕೂಡದು. ಮನು ಸ್ಪಷ್ಟವಾಗಿ ಸಾರುತ್ತಾನೆ ,
ಶ್ರುತಿಧಂ ತು ಯತ್ರ ಸ್ಯಾತ್ತತ್ರ ಧರ್ಮಾವುಬೇ ಸೃತೌಜ||
ಶ್ರುತಿ ಹಾಗೂ ಸ್ಮತಿ ಇವೆರಡರಲ್ಲಿ ಪರಸ್ಪರ ವಿರೋಧ ಕಂಡರೆ ಶ್ರುತಿಯ ಮಾತೇ ಪ್ರಮಾಣ . ಆದರೆ ಇಲ್ಲಿ ಕೂಡ ಇವೆರಡರಲ್ಲಿ ಯಾವುದು ಬುದ್ದಿ ಸಮ್ಮತವೆಂದು ನೋಡಲು ಪ್ರಯತ್ನಿಸಕೂಡದು. ಇದನ್ನು ಮನುವೇ ಹೀಗೆ ಹೇಳಿದ್ದಾರೆ.
ಯಾ ವೇದಬಾಹ್ಯಾಃ ಸ್ಮೃತಯೋ ಯಾಶ್ಚ ಕಾಶ್ಚ ಕುದೃಷ್ಟಃ | |
ಸರ್ವಾಯ್ತಾ ನಿಷ್ಪಲಾಃ ಪ್ರೇತ್ಯ ತಮೋನಿಷಾ ಹಿ ತಂ ಸೃತಾಃ |
ಎರಡು ಸೃತಿಗಳಲ್ಲಿ ವಿರೋಧ ಕಂಡರೆ ಮನುಸ್ಮೃತಿಯೇ ಪ್ರಮಾಣ. ಇಲ್ಲಿ ಕೂಡ ಸ್ವತಂತ್ರವಾಗಿ ತರ್ಕಿಸಕೂಡದು. ಬೃಹಸ್ಪತಿ ಈ ಕೆಳಗಿನಂತೆ ಹೇಳಿದ್ದಾನೆ.
ವೇದಾಯತ್ಯೋಪನಿಬಂಧೃತ್ವಾತ್ ಪ್ರಮಾಣ್ಯಂ ಹಿ ಮನೋಸ್ಕೃತಂ |
ಮರ್ನ್ವಥವಿಪರೀತಾ ತು ಯಾ ಸ್ಮತಿಃ ಸಾರ ನ ಶಸ್ಯತೇ||
ಶ್ರುತಿ ಮತ್ತು ಸೃತಿಗಳು ಹೇಳಿಬಿಟ್ಟ ಮೇಲೆ ಮುಗಿದು ಹೋಯಿತು. ಹಿಂದೂವಾದವನು ತನ್ನ ಬುದ್ಧಿಶಕ್ತಿಯನ್ನು ಅದಕ್ಕೆ ಬಳಸಿಕೊಳ್ಳಬೇಕಾಗಿಲ್ಲ. ಮಹಾಭಾರತದಲ್ಲಿ ಕೂಡ ಇದೇ ಮಾತನ್ನು ಹೇಳಲಾಗಿದೆ.
ಪುರಾಣಂ ಮಾನವೋ ಧರ್ಮಃ ಸಾಂಗೋ ವೇದಶ್ಚಿಕಿತಂ | ಆಜ್ಞಾಸಿದ್ಧಾನಿ ಚತ್ವಾತಿ ನ ಹಂತವ್ಯಾನಿ ಹೇತುಭಿಃ | |
ಜಾತಿ ಮತ್ತು ವರ್ಣ ಇವೆರಡನ್ನೂ ಕುರಿತು
ವೇದಗಳಲ್ಲಿಯೂ ಸ್ಪತಿಗಳಲ್ಲಿಯೂ ವಿಧಿನಿಷೇಧಗಳನ್ನು ಹೇಳಿರುವುದರಿಂದ ಹಿಂದೂವಾದವನಿಗೆ ಸ್ವತಂತ್ರ ವಿಚಾರಶಕ್ತಿಯ ಅವಕಾಶವೇ ಇಲ್ಲ. ರೈಲ್ವೆ ಪ್ರವಾಸ ಮತ್ತು ವಿದೇಶ ಯಾತ್ರೆಗಳಂತಹ ಪ್ರಸಂಗಗಳಲ್ಲಿ ಜಾತಿ ನಿಯಮಗಳನ್ನು ಮುರಿಯಬೇಕಾಗಿ ಬಂದರೂ ಮತ್ತೆ ಜಾತಿ ನಿಯಮಗಳಿಗೆ ನಿಷ್ಠೆ ತೋರುವ ಹಿಂದೂಗಳನ್ನು ಕಂಡು ಹಿಂದೂಗಳಲ್ಲದವರು ನಗುತ್ತಿರಬಹುದು. ಹಿಂದೂಗಳ ವಿಚಾರಶಕ್ತಿಗೆ ತೊಡಿಸಿದ ಇನ್ನೊಂದು ಸಂಕೋಲೆಯನ್ನು ಈ ಸಂಗತಿ ಪ್ರಕಟಿಸುತ್ತದೆ.
ಮನುಷ್ಯನ ಜೀವನ ಕೇವಲ ಅಭ್ಯಾಸಬಲದಿಂದ, ವಿಚಾರ ಮಾಡುವ ಅವಶ್ಯಕತೆಯಿಲ್ಲದೆಯೆ ಸಾಮಾನ್ಯವಾಗಿ ಸಾಗುತ್ತದೆ. ಯಾವುದೋ ಒಂದು ನಿರ್ದಿಷ್ಟವಾದ ನಂಬಿಕೆ ಅಥವಾ ತಿಳುವಳಿಕೆ ಸರಿಯೋ ತಪ್ಪೋ ಎಂಬುದನ್ನು ಸಾಧಕಬಾಧಕ ಪ್ರಮಾಣಗಳಿಂದ ಪರಿಶೀಲಿಸಿ ನೋಡಿ, ಆಳವಾಗಿ ಚಿಂತಿಸಿ ನಿರ್ಣಯಕ್ಕೆ ಬರುವ ಪ್ರಸಂಗ ತೀರ ಅಪರೂಪ. ಒಂದು ಸಂಕಟಕಾಲ ಅಥವಾ ಸಂದಿಗ್ಧ ಪರಿಸ್ಥಿತಿ ಉಂಟಾದಾಗ ಮಾತ್ರ ವಿಚಾರಶಕ್ತಿ ಈ ಕ್ರಿಯೆಯಲ್ಲಿ ತೊಡಗಬಹುದು. ರೈಲ್ವೆ ಪ್ರವಾಸವಾಗಲಿ, ವಿದೇಶ ಪ್ರಯಾಣವಾಗಲಿ ಹಿಂದೂವಿನ ಜೀವನದಲ್ಲಿ ಒಂದು ದಿವ್ಯ ಪರೀಕ್ಷೆಯ ಸಂದರ್ಭವೇ ಆಗುತ್ತದೆ ; ಎಲ್ಲಾ ಕಾಲದಲ್ಲಿ ಪಾಲಿಸಲಾಗದಿದ್ದರೆ ಜಾತಿ ನಿಯಮಗಳನ್ನು ಪಾಲಿಸುವುದಾದರೂ ಯಾತಕ್ಕೆ ಎಂಬ ಪ್ರಶ್ನೆ ಹಿಂದೂವಿಗೆ ಬರಬೇಕಷ್ಟೆ. ಆದರೆ ಆ ಪ್ರಶ್ನೆ ಅವನಿಗೆ ಬರುವುದೇ ಇಲ್ಲ.
ಒಂದು ಹೆಜ್ಜೆಯಲ್ಲಿ ಜಾತಿಯನ್ನು ಉಲ್ಲಂಘಿಸುತ್ತಾನೆ , ಮುಂದಿನ ಹೆಜ್ಜೆಯಲ್ಲಿ ಏನೂ ಆಗಿಲ್ಲವೆಂಬಂತೆ ಜಾತಿಯ ನಿಯಮವನ್ನು ಪಾಲಿಸುತ್ತಾನೆ . ಈ ವಿಚಿತ್ರವಾದ ನಡವಳಿಕೆಗೆ ಉತ್ತರ ಶಾಸ್ತ್ರಗಳ ಶಾಸನದಲ್ಲಿದೆ . “ ಸಾಧ್ಯವಾದಷ್ಟು ಮಟ್ಟಿಗೆ ಜಾತಿ ನಿಯಮಗಳನ್ನು ಪಾಲಿಸು , ಮೀರಬೇಕಾಗಿ ಬಂದರೆ ಪ್ರಾಯಶ್ಚಿತ್ತದಿಂದ ಶುದ್ದಿ ಮಾಡಿಕೊ ” ಎಂದು ಶಾಸ್ತ್ರಗಳು ಹೇಳುತ್ತವೆ . ಈ ಪ್ರಾಯಶ್ಚಿತ್ತ ವಿಧಾನದಿಂದ ಜಾತಿಪದ್ಧತಿ ನಿರಾತಂಕವಾಗಿ ಮುಂದುವರಿಯಲು ಅನುಕೂಲವಾಗಿದೆ . ವಿಚಾರ ಮಾಡುವ ಅವಕಾಶವನ್ನು ತಪ್ಪಿಸಿ ಜಾತಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲಾಗಿದೆ . ಜಾತಿ ಹಾಗೂ ಅಸ್ಪಶ್ಯತೆಗಳ ನಿರ್ಮೂಲನೆಗಾಗಿ ಹಲವಾರು ಜನರು ಈ ಮೊದಲೇ ಪ್ರಯತ್ನಿಸಿದ್ದುಂಟು. ಇಂಥವರಲ್ಲಿ ರಾಮಾನುಜ, ಕಬೀರ ಮೊದಲಾದವರನ್ನು ಮುಖ್ಯವಾಗಿ ಹೆಸರಿಸಬಹುದು. ಈ ಸುಧಾರಕರ ಪ್ರಯತ್ನಗಳನ್ನು ವಿವರಿಸಿ , ಅವರನ್ನು ಅನುಸರಿಸಿರೆಂದು ಹಿಂದೂಗಳಿಗೆ ಹೇಳಬಲ್ಲಿರಾ ? ಶ್ರುತಿ , ಸ್ಮೃತಿಗಳ ಜೊತೆಗೆ ಸದಾಚಾರವೆಂಬುದನ್ನೂ ಶಾಸನಗಳ ಸಾಲಿನಲ್ಲಿ ಮನು ಸೇರಿಸಿದ್ದಾನೆ . ಶಾಸ್ತ್ರಗಳಿಗಿಂತ ಸದಾಚಾರವೇ ಹೆಚ್ಚಿನದೆಂದೂ ಹೇಳಲಾಗಿದೆ.
ಯದ್ಯದಾಚರ್ಯತೇ ಯೇನ ಧರ್ಮ್ಮಂ ವಾ ಧರ್ಮ್ಮಮೇವ ವಾ | ದೇಶಾಚರಣಂ ನಿತ್ಯಂ ಚರಿತ್ರಂ ತದ್ದಿ ಕೀರ್ತಿತಮ್ | |
ಈ ಮಾತಿನ ಮೇರೆಗೆ, ಧರ್ಮವಾಗಿರಲಿ, ಅಧರ್ಮವಾಗಿರಲಿ, ಶಾಸ್ತಾನುಸಾರವಾಗಿರಲಿ, ಶಾಸ್ತ್ರ ವಿರುದ್ದವೇ ಆಗಿರಲಿ , ಸದಾಚಾರವನ್ನೇ ಪಾಲಿಸತಕ್ಕದ್ದು. ಆದರೆ ಸದಾಚಾರವೆಂದರೇನು ? ಒಳ್ಳೆಯ ನಡತೆ, ಸರಿಯಾದ ನಡತೆಯೆಂದಾಗಲೀ ಸಜ್ಜನರ ನಡತೆಯೆಂದಾಗಲೀ ಭಾವಿಸಿದರೆ ತಪ್ಪು, ಸದಾಚಾರದ ಅರ್ಥ ಹಾಗಲ್ಲ . ಒಳ್ಳೆಯದೂ , ಪುರಾತನ ಕಾಲದಿಂದ ನಡೆದುಬಂದ ಆಚಾರವೇ ಸದಾಚಾರ, ಕೆಳಗಿನ ಶ್ಲೋಕ ಇದನ್ನು ಸ್ಪಷ್ಟಪಡಿಸುತ್ತದೆ :
ಯಸ್ಕನ್ ದೇಶೇ ಯ ಆಚಾರಃ ಪಾರಂಪರ್ಯ ಕ್ರಮಾಗತಃ | ವರ್ಣಾನಾಂ ಕಿಲ ಸರ್ವೆಷಾಂ ಸ ಸದಾಚಾರ ಉಚ್ಯತೇ |
ಸದಾಚಾರವೆಂದರೆ ಒಳೆಯ ಆಚಾರವೆಂಬ ಅಥವಾ ಸಜ್ಜನರ ಆಚಾರವೆಂಬ ಗ್ರಹಿಕೆಯಿಂದ, ಸಜ್ಜನರನ್ನೇ ಅನುಕರಿಸಿಯಾರೆಂಬ ಭೀತಿಯಿಂದಲೋ ಏನೋ ಸ್ಪತಿಗಳು ಸ್ಪಷ್ಟವಾಗಿ ಹೀಗೆ ವಿಧಿಸುತ್ತವೆ “ ಶ್ರುತಿ, ಸೃತಿ, ಸದಾಚಾರಗಳಿಗೆ ವ್ಯತಿರಿಕ್ತವಾದ ನಡತೆ ದೇವತೆಗಳಿಂದಾದರೂ ಅದು ಆಚರಣೆ ಯೋಗ್ಯವಲ್ಲ. ಇದು ಅತಿ ವಿಚಿತ್ರವೆನಿಸಬಹುದು, ಅಬದ್ದ ಎನಿಸಬಹುದು. ಆದರೆ ವಸ್ತುಸ್ಥಿತಿ ಹಾಗಿದೆ. ‘ ನ ದೇವಚರಿತಂ ಚರೇತ್ ‘ ಎಂಬುದು ಶಾಸ್ತ್ರಗಳು ವಿಧಿಸಿದ ಶಾಸನ , ಬುದ್ಧಿಶಕ್ತಿ ಮತ್ತು ನೀತಿ ಇವೆರಡು ಸುಧಾರಕನ ಬತ್ತಳಿಕೆಯಲ್ಲಿರುವ ಮಹಾಸ್ತ್ರ ಗಳು. ಇವೆರಡನ್ನೂ ಕಿತ್ತುಕೊಂಡುಬಿಟ್ಟರೆ ಅವನೇನು ಮಾಡಬಲ್ಲ ? ಬುದ್ದಿಯ ಉಪಯೋಗ ಮಾಡಲು ಜನರಿಗೆ ಸ್ವಾತಂತ್ರ್ಯವೇ ಇಲ್ಲವೆಂದರೆ ನೀವು ಜಾತಿಯನ್ನು ನಾಶ ಪಡಿಸುವುದು ಹೇಗೆ ? ಜಾತಿಯೆಂಬುದು ನೀತಿ ಸಮ್ಮತವೋ ಅಲ್ಲವೋ ಎನ್ನುವುದನ್ನು ವಿಚಾರಿಸುವ ಸ್ವಾತಂತ್ರ್ಯ ಜನರಿಗೆ ಇಲ್ಲವೆಂದರೆ ನೀವು ಜಾತಿಯನ್ನು ಉಚ್ಚಾಟಿಸುವುದೆಂತು ? ಜಾತಿ ಕಟ್ಟಿಕೊಂಡ ಕೋಟೆ ದುರ್ಭೇದ್ಯವಾಗಿದೆ.
ಬುದ್ದಿ ಮತ್ತು ನೀತಿಗಳು ಅದನ್ನು ಭೇದಿಸಲಾರವು. ಇನ್ನೂ ಒಂದು ಮಾತನ್ನು ನೆನಪಿಡಿ. ಈ ದುರ್ಗದ ಒಳಗಡೆ ಬುದ್ದಿವಂತ ವರ್ಗವಾದ ಬ್ರಾಹ್ಮಣರ ಸೈನ್ಯ ಸನ್ನದ್ಧವಾಗಿ ನಿಂತಿದೆ. ಇದು ಸಂಬಳಕ್ಕಾಗಿ ದುಡಿಯುವ ಸೈನ್ಯವಲ್ಲ. ತನ್ನ ಮಾತೃಭೂಮಿಯನ್ನು ರಕ್ಷಿಸಲು ನಿಂತ ಸೈನ್ಯವಾಗಿದೆ. ಹೀಗಿರುವುದರಿಂದಲೇ ನಾನು ಹೇಳುತ್ತೇನೆ ಹಿಂದೂಗಳಲ್ಲಿಯ ಜಾತಿಗಳನ್ನು ಹೊಡೆದಟ್ಟುವುದು ಅಸಾಧ್ಯವಾದುದು. ಈ ಕೋಟೆಯಲ್ಲಿ ಒಂದು ತೂತು ಮಾಡುವುದಕ್ಕೆ ಒಂದು ಸುದೀರ್ಘ ಯುಗವೇ ಬೇಕಾದೀತು. ಈ ಕಾರ್ಯಕ್ಕೆ ದೀರ್ಘಾವಧಿಯೇ ಬೇಕಾಗಲಿ, ಅಲ್ಪಾವಧಿಯೇ ಸಾಕಾಗಲಿ ನೀವು ಮರೆಯದಿರಬೇಕಾದ ಒಂದು ಮಾತಿದೆ. ವೈಚಾರಿಕತೆಯನ್ನು ನಿರಾಕರಿಸುವ ವೇದಗಳನ್ನು ಹಾಗೂ ಶಾಸ್ತ್ರಗಳನ್ನು, ನೀತಿಗೂ ಬುದ್ದಿಗೂ ಅವಕಾಶವೀಯದಿರುವ ವೇದಗಳನ್ನು ಹಾಗೂ ಶಾಸ್ತ್ರಗಳನ್ನು ನೀವು ಅನುಸರಿಸದೆ ಇರಬೇಕು. ಶ್ರುತಿ ಮತ್ತು ಸ್ಮೃತಿಗಳ ವಿಷಯಗಳು ಸಂಕುಚಿತವಾದವು. ಬೇರೆ ಉಪಾಯವೇ ಇಲ್ಲ. ಇದು ಈ ವಿಷಯದಲ್ಲಿ ನನ್ನ ಖಚಿತವಾದ ಅಭಿಪ್ರಾಯ .
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
- ಜುಲೈ 25ರ ಭರವಸೆ ಜಾರಿಗೆ ವಿಳಂಬ: CJP ತೀವ್ರ ಆಕ್ರೋಶ
- ಇಂಡಿಯಾ ಗೇಟ್‌ನಿಂದ ಪೊಲೀಸ್ ಕೇಂದ್ರ ಕಚೇರಿವರೆಗೆ ಮೆರವಣಿಗೆ
- NEET ಅಭ್ಯರ್ಥಿಗಳ ಕುಟುಂಬಸ್ಥರು, ಪೊಲೀಸ್ ದೌರ್ಜನ್ಯ ಸಂತ್ರಸ್ತರು ಮುಂಚೂಣಿಯಲ್ಲಿ
- “ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ” ಎಂದ CJP
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
ಸುದ್ದಿದಿನ,ನವದೆಹಲಿ: ದೇಶದ ಯುವಜನರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಸಾರ್ವಜನಿಕವಾಗಿ ನೀಡಲಾಗಿದ್ದ ಭರವಸೆಗಳಿಗೆ ಒಂದು ತಿಂಗಳು ಕಳೆದರೂ ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕ್ರಮಗಳು ಗೋಚರಿಸುತ್ತಿಲ್ಲ ಎಂಬುದು CJPಯ ಪ್ರಮುಖ ಆರೋಪವಾಗಿದೆ.
CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಹಾಗೂ ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯಗಳು ಯುವಜನರಿಗೆ ನೀಡಿದ್ದ ಭರವಸೆಗಳ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.
http://Visit : www.suddidina.com
ಇಂಡಿಯಾ ಗೇಟ್‌ನಿಂದ ಮೆರವಣಿಗೆ
ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನವದೆಹಲಿ ಪೊಲೀಸ್ ಕೇಂದ್ರ ಕಚೇರಿಯತ್ತ ಸಾಗಲಿದೆ. ಮೃತ NEET ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾರೆ ಎಂದು CJP ಹೇಳಿದೆ.
ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು ಮತ್ತು ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಒಂದೇ ಪ್ರಮುಖ ಬೇಡಿಕೆಯೊಂದಿಗೆ ಯುವಜನರು ಶಾಂತಿಯುತವಾಗಿ ಧ್ವನಿ ಎತ್ತಲಿದ್ದಾರೆ ಎಂದು ಪಕ್ಷ ಹೇಳಿದೆ.
‘ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ’
ಜುಲೈ 25ರಂದು ನೀಡಿದ ಭರವಸೆಗಳನ್ನು ನಂಬಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳನ್ನು ಯುವಜನರು ಉತ್ತಮ ನಂಬಿಕೆಯಿಂದ ಹಿಂಪಡೆದಿದ್ದರು. ಆದರೆ, ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಯುವಜನರಲ್ಲಿ ಮತ್ತೆ ಅಸಮಾಧಾನ ಮೂಡಿಸಿದೆ ಎಂದು CJP ಆರೋಪಿಸಿದೆ.
“ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ನಮ್ಮ ಸದುದ್ದೇಶವನ್ನು ಸರ್ಕಾರ ಯುವಜನರಿಗೆ ದ್ರೋಹ ಮಾಡುವ ಅವಕಾಶವಾಗಿ ಬಳಸಿಕೊಳ್ಳಬಾರದು” ಎಂದು CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಎಚ್ಚರಿಕೆ ನೀಡಿದೆ.
“ಭರವಸೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ”
|
ಮಾತಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ
ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು CJPಯ ಆಗ್ರಹ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೋವಿನ ನಡುವೆ ನಡೆಯಲಿರುವ ಈ ಮೆರವಣಿಗೆ, ಯುವಜನರ ವಿಶ್ವಾಸ ಮತ್ತು ಸರ್ಕಾರದ ಹೊಣೆಗಾರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.
ಕೇಂದ್ರ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ ಎಂದು CJP ಆರೋಪಿಸಿದೆ.
ಸೆಪ್ಟೆಂಬರ್ 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯಾ ಗೇಟ್‌ನಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರು, ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳಿಗೆ CJP ಮನವಿ ಮಾಡಿದೆ. ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದೆ ಎಂದು ಅದು ಪುನರುಚ್ಚರಿಸಿದೆ.

ದಿನದ ಸುದ್ದಿ
KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
329 ಅಭ್ಯರ್ಥಿಗಳಿಗೆ ಏಕಕಾಲದಲ್ಲಿ ವಿಚಾರಣಾ ನೋಟಿಸ್
-
658 OMR ಕಾರ್ಬನ್ ಶೀಟ್‌ಗಳು FSLಗೆ
-
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ED ಗಂಭೀರ ಆರೋಪ
-
₹70–80 ಲಕ್ಷ ಲಂಚದ ಆರೋಪವೂ ತನಿಖೆಯಲ್ಲಿದೆ
-
ಪ್ರಶ್ನೆಪತ್ರ ಸಿದ್ಧತೆ, ಮುದ್ರಣದ CCTV ದೃಶ್ಯಗಳ ಬಗ್ಗೆಯೂ ಅನುಮಾನ
ಸುದ್ದಿದಿನ,ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಈಗಾಗಲೇ ಜಾರಿ ನಿರ್ದೇಶನಾಲಯ (ED) ರಾಜ್ಯದ ವಿವಿಧೆಡೆ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದು, ಅದರ ಬೆನ್ನಲ್ಲೇ ಅಪರಾಧ ತನಿಖಾ ಇಲಾಖೆ (CID) ಎಲ್ಲಾ 329 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
http://Visit : www.suddidina.com
329 ಅಭ್ಯರ್ಥಿಗಳಿಗೆ ನೋಟಿಸ್ ಏಕೆ?
ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಈಗಾಗಲೇ 658 OMR ಕಾರ್ಬನ್ ಶೀಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಮೂಲ OMR ಉತ್ತರ ಪತ್ರಿಕೆಗಳೊಂದಿಗೆ ಹೋಲಿಕೆ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಅಭ್ಯರ್ಥಿಗಳು ಗುರುತಿಸಿದ್ದ ಉತ್ತರಗಳ ಕಾರ್ಬನ್ ಪ್ರತಿಯಲ್ಲಿ ಮತ್ತು ಮೂಲ OMRನಲ್ಲಿ ವ್ಯತ್ಯಾಸವಿದೆಯೇ ಎಂಬುದನ್ನು ಪರಿಶೀಲಿಸುವುದು ತನಿಖೆಯ ಪ್ರಮುಖ ಭಾಗವಾಗಿದೆ.
ಇದೀಗ 329 ಅಭ್ಯರ್ಥಿಗಳನ್ನೂ ವಿಚಾರಣೆಗೆ ಒಳಪಡಿಸುವ CID ಕ್ರಮ ಪ್ರಕರಣದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ವಿಚಾರಣೆಯ ಮೂಲಕ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ, ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಅಥವಾ ಉತ್ತರಗಳ ಮಾಹಿತಿ ಮುಂಚಿತವಾಗಿ ಸಿಕ್ಕಿತೇ, OMR ಉತ್ತರ ಪತ್ರಿಕೆಗಳಲ್ಲಿ ತಿದ್ದುಪಡಿ ನಡೆದಿದೆಯೇ ಎಂಬುದರ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
IAS ಅಧಿಕಾರಿಯತ್ತ ತನಿಖೆಯ ಚಿತ್ತ
ಈ ಪ್ರಕರಣದಲ್ಲಿ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಅವರು ಫೆಬ್ರವರಿ 2024ರಿಂದ ಮಾರ್ಚ್ 2026ರವರೆಗೆ KPSCಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ MSME ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬೆಂಗಳೂರಿನ ನಿವಾಸ ಸೇರಿದಂತೆ ಉತ್ತರ ಪ್ರದೇಶದ ಬರೇಲಿಯಲ್ಲಿರುವ ನಿವಾಸದ ಮೇಲೂ ED ಶೋಧ ನಡೆಸಿದೆ.
ED ಆರೋಪದ ಪ್ರಕಾರ, ಗಂಗ್ವಾರ್ ಅವರು ತಮ್ಮ ಇಬ್ಬರು ಪುತ್ರರಿಗೆ KPSC ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ದೊರಕಿಸಿಕೊಡಲು ವ್ಯಕ್ತಿಯೊಬ್ಬರಿಂದ ಸುಮಾರು ₹1.1 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಈ ಆರೋಪ ಇನ್ನೂ ತನಿಖೆಯ ಹಂತದಲ್ಲಿದ್ದು, ಆರೋಪ ಸಾಬೀತಾಗಿಲ್ಲ.
ಪ್ರಶ್ನೆಪತ್ರಿಕೆ ಸಿದ್ಧತೆಯಲ್ಲೂ ಅನುಮಾನ
ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮತ್ತು ಮುದ್ರಿಸುವ ಪ್ರಕ್ರಿಯೆಗೆ ಸಂಬಂಧಿಸಿದ CCTV ದೃಶ್ಯಾವಳಿಗಳ ಅನುಪಸ್ಥಿತಿಯನ್ನೂ ED ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇಂತಹ ಪ್ರಕ್ರಿಯೆಯಲ್ಲಿ CCTV ದಾಖಲೆಗಳು ಪ್ರಮುಖ ಭದ್ರತಾ ಕ್ರಮವಾಗಿರುವುದರಿಂದ, ಅವುಗಳ ಲಭ್ಯತೆ ಮತ್ತು ನಿರ್ವಹಣೆಯೂ ತನಿಖೆಯ ಪ್ರಮುಖ ಅಂಶವಾಗಿದೆ.
ಇದರ ಜೊತೆಗೆ, ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ₹70–80 ಲಕ್ಷದವರೆಗೆ ಲಂಚ ಕೇಳಲಾಗಿದೆ ಎಂಬ ಆರೋಪಗಳೂ ತನಿಖೆಯಲ್ಲಿವೆ. ಪ್ರಶ್ನೆಪತ್ರಿಕೆ ಸೋರಿಕೆ, OMR ತಿದ್ದುಪಡಿ ಮತ್ತು ನೇಮಕಾತಿ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಿದ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.
KPSCಯಂತಹ ನೇಮಕಾತಿ ಸಂಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುವ ಆರೋಪಗಳಾಗಿರುವುದರಿಂದ, CID ಮತ್ತು ED ತನಿಖೆಯ ಮುಂದಿನ ಹಂತಗಳು ಮಹತ್ವ ಪಡೆದುಕೊಂಡಿವೆ. 329 ಅಭ್ಯರ್ಥಿಗಳ ವಿಚಾರಣೆ, OMR ಕಾರ್ಬನ್ ಶೀಟ್‌ಗಳ FSL ವರದಿ ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆಯ ಬಳಿಕ ಪ್ರಕರಣದ ನಿಜವಾದ ಚಿತ್ರಣ ಇನ್ನಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ.
ಮೇಲಿನ ಹಣ, ಅಕ್ರಮ ಮತ್ತು ಅಧಿಕಾರಿಯ ವಿರುದ್ಧದ ಆರೋಪಗಳು ತನಿಖಾ ಸಂಸ್ಥೆಗಳು ಮುಂದಿಟ್ಟಿರುವ ಆರೋಪಗಳಾಗಿದ್ದು, ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಆರೋಪಗಳೆಂದೇ ಪರಿಗಣಿಸಬೇಕೆಂದು ಕೋರ್ಟ್ ತಿಳಿಸಿದೆ.

ದಿನದ ಸುದ್ದಿ
₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
ರಾಜಾಜಿನಗರದಲ್ಲಿ ಬಿಡಿಎ ಭರ್ಜರಿ ಕಾರ್ಯಾಚರಣೆ: 13,000 ಚದರ ಅಡಿ ಜಾಗ ವಶಕ್ಕೆ
- 13,000 ಚದರ ಅಡಿ ಪ್ರದೇಶ ತೆರವು; ಪೊಲೀಸ್ ಭದ್ರತೆಯಲ್ಲಿ ಬಿಡಿಎ ಕಾರ್ಯಾಚರಣೆ
ನಿವೇಶನ 13 ಮತ್ತು 17ರಲ್ಲಿ ಅನಧಿಕೃತ ನಿರ್ಮಾಣ ತೆರವು; ಪೊಲೀಸ್ ಸಹಕಾರದಲ್ಲಿ ಕಾರ್ಯಾಚರಣೆ
ಸುದ್ದಿದಿನ,ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನಧಿಕೃತ ನಿರ್ಮಾಣಗಳ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ರಾಜಾಜಿನಗರ ಬಡಾವಣೆಯ ಇಂಡಸ್ಟ್ರೀಯಲ್ ಸಬರ್ಬ್ 2ನೇ ಹಂತದಲ್ಲಿ ಮಹತ್ವದ ತೆರವು ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಸುಮಾರು ₹25 ಕೋಟಿ ಮೌಲ್ಯದ ಆಸ್ತಿಯನ್ನು ಪ್ರಾಧಿಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಪೀಣ್ಯ ಗ್ರಾಮದ ಸರ್ವೆ ನಂಬರ್ 79 ಮತ್ತು 70ರಲ್ಲಿ ಬರುವ ಇಂಡಸ್ಟ್ರೀಯಲ್ ಸಬರ್ಬ್, 2ನೇ ಹಂತ, ರಾಜಾಜಿನಗರ ಬಡಾವಣೆಯ ನಿವೇಶನ ಸಂಖ್ಯೆ 13 ಮತ್ತು 17ರಲ್ಲಿ ಈ ಕಾರ್ಯಾಚರಣೆ ನಡೆದಿದೆ. ಸುಮಾರು 13,000 ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಕಟ್ಟಡ ಹಾಗೂ ನಿರ್ಮಾಣಗಳನ್ನು ತೆರವುಗೊಳಿಸಿ, ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ.
http://Visit : www.suddidina.com
ಅನಧಿಕೃತ ನಿರ್ಮಾಣಕ್ಕೆ ಬಿಡಿಎ ಬ್ರೇಕ್:
ಬಿಡಿಎಗೆ ಸೇರಿದ ಅಥವಾ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಜಾಗಗಳಲ್ಲಿ ನಿಯಮಬಾಹಿರವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ತೆರವು ಕಾರ್ಯಾಚರಣೆಯ ಬಳಿಕ ಆಸ್ತಿಯನ್ನು ಪ್ರಾಧಿಕಾರದ ನೇರ ಸುಪರ್ದಿಗೆ ತೆಗೆದುಕೊಳ್ಳಲಾಗಿದ್ದು, ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಗಳ ಸಂರಕ್ಷಣೆಗೆ ಬಿಡಿಎ ಕೈಗೊಳ್ಳುತ್ತಿರುವ ಕ್ರಮಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.
ಸುಮಾರು ₹25 ಕೋಟಿ ಮೌಲ್ಯದ ಆಸ್ತಿ ಇರುವುದರಿಂದ, ಈ ಕಾರ್ಯಾಚರಣೆ ನಗರದ ಆಸ್ತಿ ಸಂರಕ್ಷಣೆ ಹಾಗೂ ಅನಧಿಕೃತ ನಿರ್ಮಾಣಗಳ ನಿಯಂತ್ರಣದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ದೊಡ್ಡ ಪ್ರಮಾಣದ ಭೂಮಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ನಡೆಸಿದರೆ ಯಾವುದೇ ಕಾರಣಕ್ಕೂ ಅದನ್ನು ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಈ ಕ್ರಮ ನೀಡಿದೆ.
https://x.com/BDAOfficialGok/status/2092121239175512436?s=20
ಬಹು ಇಲಾಖೆಗಳ ಸಮನ್ವಯದಲ್ಲಿ ಕಾರ್ಯಾಚರಣೆ:
ತೆರವು ಕಾರ್ಯಾಚರಣೆಯನ್ನು ಬಿಡಿಎಯ ವಲಯ ಆಯುಕ್ತರು, ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ-1, ಕಾರ್ಯನಿರತ ಆರಕ್ಷಕ ಪಡೆ, ಪಶ್ಚಿಮ ವಿಭಾಗದ ಅಭಿಯಂತರರು ಹಾಗೂ ಸರ್ವೆಯರ್‌ಗಳು ಒಳಗೊಂಡ ತಂಡ ಕೈಗೊಂಡಿತು. ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ಅಡಚಣೆ ಉಂಟಾಗದಂತೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಸ್ಥಳ ಪರಿಶೀಲನೆ, ನಿರ್ಮಾಣ ತೆರವು ಹಾಗೂ ಜಾಗದ ಸ್ವಾಧೀನ ಪ್ರಕ್ರಿಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಪೂರ್ಣಗೊಳಿಸಿದರು. ಕಾರ್ಯಾಚರಣೆ ಬಳಿಕ ತೆರವುಗೊಳಿಸಲಾದ ಪ್ರದೇಶವನ್ನು ಬಿಡಿಎ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ನಗರದ ಭೂ ಸಂಪತ್ತಿನ ರಕ್ಷಣೆಗೆ ಕಠಿಣ ಹೆಜ್ಜೆ
ಬೆಂಗಳೂರು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಹಾಗೂ ಪ್ರಾಧಿಕಾರಕ್ಕೆ ಸೇರಿದ ಜಾಗಗಳ ಮೇಲೆ ಅಕ್ರಮ ನಿರ್ಮಾಣಗಳು ನಡೆಯದಂತೆ ನಿಗಾ ವಹಿಸುವುದು ಪ್ರಮುಖ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಕೈಗೊಂಡಿರುವ ₹25 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳುವ ಕ್ರಮ, ಅನಧಿಕೃತ ನಿರ್ಮಾಣಗಳ ವಿರುದ್ಧದ ಕಾರ್ಯಾಚರಣೆಗೆ ಮತ್ತಷ್ಟು ಬಲ ನೀಡಿದೆ.
ಬೆಂಗಳೂರು ನಗರದ ಭೂ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ಬಿಡಿಎಯ ಈ ತೆರವು ಕಾರ್ಯಾಚರಣೆ, ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶವಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆಗಳು ಮುಂದುವರಿಯುವ ಸಾಧ್ಯತೆ ಇದೆ.

-
ದಿನದ ಸುದ್ದಿ7 days agoಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
-
ದಿನದ ಸುದ್ದಿ4 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ಅಂತರಂಗ3 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ17 hours agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ
-
ದಿನದ ಸುದ್ದಿ18 hours agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ
-
ದಿನದ ಸುದ್ದಿ14 hours agoಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ
-
ದಿನದ ಸುದ್ದಿ14 hours agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ18 hours agoಶಾಸಕ ಸಮರ್ಥ್ ಶಾಮನೂರು ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಅಡ್ಡಬಂದ ವಾಹನ ತಪ್ಪಿಸಲು ಹೋಗಿ ಅವಘಡ !







