Connect with us

ರಾಜಕೀಯ

ಹಿಂದುತ್ವ ಮತ್ತು‌ ಬಿಜೆಪಿ

Published

on

ಪ್ರಗ್ಯಾ ಸಿಂಗ್ ಠಾಕೂರ್ ಅನ್ನು ಲೋಕಸಭಾ ಚುನಾವಣೆಯಲ್ಲಿ ನಿಲ್ಲಿಸಿದ್ದು ನನಗೆ ತೀರಾ ಆಶ್ಚರ್ಯವಾಗಿಯೇನೂ ಕಾಣುತ್ತಿಲ್ಲ. ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೇಟು ನಿರಾಕರಿಸಿದ್ದು ಕೂಡ ದೊಡ್ಡ ಆಶ್ಚರ್ಯವೇನಲ್ಲ. ಇದು ಸಂಘ ಪರಿವಾರದಲ್ಲಿ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಯೋಜನಾ ಪ್ರಕ್ರಿಯೆ ಮತ್ತು ಅನುಷ್ಠಾನ.

ಜನಸಾಮಾನ್ಯ ಹಿಂದುತ್ವವಾದ ಮತ್ತು ಹಿಂದೂರಾಷ್ಟ್ರದ ಕಲ್ಪನೆಯನ್ನು ಪರಿಗಣಿಸುವಂತೆ ಮಾಡುವುದು ಅವರ ಮೊದಲ ಹಂತದ ಕೆಲಸವಾಗಿತ್ತು. ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಎಲ್ಲರನ್ನೂ ಒಳಗೊಳ್ಳುವ ಸಂವಿಧಾನ ಪ್ರೇರಿತ ರಾಷ್ಟ್ರೀಯತೆ ಬಹುಸಂಖ್ಯಾತ ಜನರಲ್ಲಿ ಸಾಮಾನ್ಯವಾಗಿಯೇ ಇತ್ತು. ಇಂಥಾ ವಾತಾವರಣದಲ್ಲಿ ವಾಜಪೇಯಿ, ಆಡ್ವಾಣಿ ಮತ್ತು ಜೋಷಿ ಸಾಕಷ್ಟು ಜಾಗರೂಕತೆಯಿಂದಲೇ ಕೆಲಸ ಮಾಡಬೇಕಿತ್ತು. ಇಲ್ಲದಿದ್ದರೆ ಅವರನ್ನಾಗಲೀ, ಅವರ ಸಿದ್ಧಾಂತವನ್ನಾಗಲೀ ಈಗ ಒಪ್ಪಿರುವವರೂ ಒಪ್ಪುವುದು ಕಷ್ಟವಿತ್ತು. ಈ ತಂಡ ಅದನ್ನು ಸಾಕಷ್ಟೂ ಯಶಸ್ವಿಯಾಗಿ ಮಾಡಿದ್ದಲ್ಲದೇ, ಬಲಪಂಥೀಯ ಸರ್ಕಾರಕ್ಕೂ ಕೂಡ ಒಂದು ಗಟ್ಟಿ ತಳಹದಿಯನ್ನು ಹಾಕಿಕೊಟ್ಟಿತು.

ಈ ತಳಹದಿ ದೊರೆತ ಮೇಲೆ ಹಿಂದುತ್ವವಾದವನ್ನು ಇನ್ನಷ್ಟು ನೆಲ-ಮನಕ್ಕಿಳಿಸಲು ಆ ತಲೆಮಾರಿಗಿಂತ ಹೆಚ್ಚು ಆಗ್ರಹಪೂರ್ವಕವಾಗಿ ಕೆಲಸ ಮಾಡುವ ತಲೆಮಾರಿನ ಅಗತ್ಯ ಕಾಣಿಸಿತು. ಹೀಗಾಗಿ ಮೋದಿಯನ್ನು ಮುನ್ನೆಲೆಗೆ ತರಲಾಯಿತು. ಜೋಷಿ, ಆಡ್ವಾಣಿಯವರನ್ನು ಬದಿಗೆ ಸರಿಸಿದ್ದು ಈ ಪ್ರಕ್ರಿಯೆಯೇ. ಮೋದಿಯವರ ಆಡಳಿತದಲ್ಲಿ ಪರಿವಾರ ಈ ಗುರಿಯತ್ತ ಸಾಕಷ್ಟು ದೂರ ಕ್ರಮಿಸುವುದು ಸಾಧ್ಯವಾಯಿತು ಎನ್ನುವುದನ್ನು ನಾವೆಲ್ಲ ಕಳೆದ ಐದು ವರ್ಷಗಳಲ್ಲಿ ಚೆನ್ನಾಗಿಯೇ ನೋಡಿದ್ದೇವೆ. ರಾಷ್ಟ್ರೀಯತೆಯ ವ್ಯಾಖ್ಯಾನವನ್ನು ಬದಲಿಸುವುದು, ದೇಶದ್ರೋಹವನ್ನು ಮರುವ್ಯಾಖ್ಯಾನಿಸುವುದು, ವಿಶ್ವವಿದ್ಯಾಲಯಗಳ ಮೇಲೆ, ವಿದ್ಯಾರ್ಥಿಗಳ ಮೇಲೆ ವೈಚಾರಿಕ ನಿರ್ಬಂಧ ಹೇರಿ, ತಮ್ಮದನ್ನು ಹೇರಲು ಮಾಡಿದಂಥಾ ಪ್ರಯತ್ನಗಳು, ದೇಶದ ಆಹಾರ ಪದ್ಧತಿಗಳ ಮೇಲೆ ಆದಂತಹ ಹಲ್ಲೆಗಳು, ಸಂವಿಧಾನವನ್ನು ನಿಕಶಕ್ಕೆ ಒಡ್ಡುವುದು, ಇನ್ನೂ ಮುಂತಾದವು ಕೇವಲ stray incidents ಅಲ್ಲ.

ಈಗ ಮೋದಿಯವರ “ಯಶಸ್ವೀ” ಪಾತ್ರವೂ ಕೊನೆಯ ಹಂತದಲ್ಲಿರುವಾಗ ಹಿಂದುತ್ವವಾದವನ್ನು ಅವರಿಗಿಂತ ಹೆಚ್ಚು ಭಾವೋದ್ವೇಗದಿಂದ ಹೇರುವ, ನಾಟಿಸುವ ತಲೆಮಾರಿನ ಅವಶ್ಯಕತೆ ಪರಿವಾರಕ್ಕೆ ಇದೆ. ಈ ಹಂತದಲ್ಲಿ ಬೌದ್ಧಿಕ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಸಾಮರ್ಥ್ಯದ ಅಗತ್ಯವಿದೆ. ಒಂದು ರೀತಿಯ ಮಿಲಿಟೆನ್ಸಿಯ ಅಗತ್ಯವೂ ಇದೆ. ಹೀಗಾಗಿಯೇ ಯಾರೂ ಊಹಿಸದ, ಆದರೆ ಅಂಥಾ ಉದ್ದೇಶಕ್ಕಾಗಿಯೇ ತರಬೇತಾಗಿರುವ ಯೋಗಿ, ಮಣಿಪುರ ಮತ್ತು ತ್ರಿಪುರಾದ ಮುಖ್ಯಮಂತ್ರಿಗಳು ಮುನ್ನೆಲೆಗೆ ಬಂದಿದ್ದು. ಅವರ ಕಾಲಾಳುಗಳಾಗಿ ದೇಶದ ತುಂಬಾ ಲಕ್ಷಾಂತರ ಯುವಕರು ತಯಾರಾಗಿದ್ದಾರೆ.

ಅವರಲ್ಲಿನ ಅನೇಕ ಮುಂದಾಳುಗಳಲ್ಲಿ ಒಬ್ಬ ಸೂರ್ಯ. ಆತನಿಗೆ ಇಂದು ಪ್ರವೇಶ ದೊರೆತಿದೆ. ಅದೇ ಪ್ರಕ್ರಿಯೆಯ ಭಾಗವಾಗಿಯೇ ಪ್ರಗ್ಯಾ ಸಿಂಗ್ ಠಾಕೂರ್ ಅನ್ನು ಕೂಡ ತರಲಾಗಿದೆ. ಒಂದು ವೇಳೆ ಇಂದು ಅನಂತಕುಮಾರ್ ಬದುಕಿದ್ದು, ಅವರನ್ನೂ ಈ ಚುನಾವಣೆಯಲ್ಲಿ ಬದಿಗೆ ಸರಿಸಿದ್ದರೂ ಕೂಡ ಆಶ್ಚರ್ಯವಾಗುತ್ತಿರಲಿಲ್ಲ. ಅದು ಕೂಡ ಆ ಕಾರ್ಯಕ್ರಮದ ಭಾಗವೇ ಆಗಿರುತ್ತಿತ್ತು. ಒಂದೆರಡು ದಿನಗಳ ಪ್ರತಿರೋಧದ ನಂತರ ಪರಿವಾರದೊಳಗೆ ಎಲ್ಲವೂ ತಣ್ಣಗಾಗುತ್ತಿತ್ತು. ಬಹುಶಃ ಈ ಚುನಾವಣೆಯಲ್ಲೇ ಹಾಗಾಗುತ್ತಿರಲಿಲ್ಲ ಎಂದುಕೊಳ್ಳುವುದು ಅವರ ಹತ್ತಿರದವರಿಗೆ ಸಮಾಧಾನ ತರಬಹುದು.

ಬಲಪಂಥೀಯತೆಯನ್ನು ಇಷ್ಟು ಕರಾರುವಾಕ್ಕಾಗಿ ಪಸರಿಸುತ್ತಿರುವ ಈ ಧೀರ್ಘಕಾಲೀನ ಕಾರ್ಯಕ್ರಮಕ್ಕೆ ತತ್ಸಮವಾಗಿ ಎದುರು ನಿಲ್ಲುವಂಥಾ ಮಾನವೀಯ ಕಾರ್ಯಕ್ರಮವೊಂದು ನಮ್ಮ ದೇಶದಲ್ಲಿ ಇನ್ನೂ ಗಟ್ಟಿಗೊಳ್ಳದಿರುವುದು ಶೋಚನೀಯ. ನಮ್ಮ ಯುವಪೀಳಿಗೆಗೆ ಇದನ್ನು ಮನದಟ್ಟು ಮಾಡಿಸುವ ಜವಾಬ್ದಾರಿ ನಮ್ಮ ಮೇಲಿದೆ.

–ಕೇಸರಿ ಹರವು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬಡವರ ಪಾಲಿನ ಸಂಜೀವಿನಿ ವೈದ್ಯ ಡಾ. ಎಸ್.ಎಂ. ಎಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ

Published

on

ವಿಶೇಷ ವರದಿ : ಗೋವರ್ಧನ ನವಿಲೇಹಾಳು

ಸುದ್ದಿದಿನ,ದಾವಣಗೆರೆ: ವೈದ್ಯಕೀಯ ವೃತ್ತಿ ಇಂದು ಸೇವೆಯ ಜೊತೆಗೆ ವಾಣಿಜ್ಯೀಕರಣದ ಸ್ವರೂಪವನ್ನೂ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ, ವೈದ್ಯಕೀಯ ಸೇವೆಯೇ ಮಾನವೀಯ ಧರ್ಮ ಎಂದು ನಂಬಿ ಬದುಕುತ್ತಿರುವ ದಾವಣಗೆರೆಯ ಹಿರಿಯ ವೈದ್ಯ ಡಾ. ಸಿದ್ದಲಿಂಗಪ್ಪ ಮುರುಗೆಪ್ಪ ಎಲಿ (ಡಾ. ಎಸ್.ಎಂ. ಎಲಿ) ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಮಾಜಸೇವೆ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಸುದೀರ್ಘ, ನಿಸ್ವಾರ್ಥ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಈ ಗೌರವಕ್ಕೆ ಆಯ್ಕೆ ಮಾಡಿದೆ.

ವೈದ್ಯಕೀಯ ವೃತ್ತಿಯನ್ನು ಕೇವಲ ಜೀವನೋಪಾಯದ ಮಾರ್ಗವಾಗಿ ನೋಡದೆ, ಬಡವರು ಮತ್ತು ಅಸಹಾಯಕರ ನೋವಿಗೆ ಸ್ಪಂದಿಸುವ ಮಾನವೀಯ ಕಾಯಕವನ್ನಾಗಿ ರೂಪಿಸಿಕೊಂಡಿರುವ ಡಾ. ಎಲಿ ಅವರು ದಾವಣಗೆರೆಯಲ್ಲಿ ‘ಬಡವರ ವೈದ್ಯರು’ ಎಂದೇ ಜನಪ್ರಿಯರಾಗಿದ್ದಾರೆ. ಅವರ ಪಾಲಿಗೆ ರೋಗಿಯ ಆರ್ಥಿಕ ಸ್ಥಿತಿಗಿಂತ ಆತನ ಆರೋಗ್ಯ ಮತ್ತು ಜೀವದ ಮೌಲ್ಯವೇ ಮುಖ್ಯ. ಇದೇ ಮೌಲ್ಯಾಧಾರಿತ ಬದುಕು ಅವರನ್ನು ಸಾವಿರಾರು ಜನರ ಪಾಲಿನ ಆತ್ಮೀಯ ವೈದ್ಯರನ್ನಾಗಿಸಿದೆ.

ಐದು ದಶಕಗಳ ಸೇವೆಯ ಪಯಣ

ಮೂಲತಃ ಧಾರವಾಡ ಜಿಲ್ಲೆಯ ಹಂಸಭಾವಿ ಗ್ರಾಮದವರಾದ ಡಾ. ಎಲಿ ಅವರು 1969ರಿಂದ ವೈದ್ಯಕೀಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಹಾಗೂ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ವೃತ್ತಿಪರ ಜ್ಞಾನ, ಅನುಭವ ಮತ್ತು ಸೇವಾ ಮನೋಭಾವದ ಮೂಲಕ ವಿಶಿಷ್ಟ ಗುರುತನ್ನು ಗಳಿಸಿದ್ದಾರೆ.

ನಿವೃತ್ತಿಯ ನಂತರವೂ ವಿಶ್ರಾಂತ ಜೀವನಕ್ಕೆ ಮೊರೆಹೋಗದೆ, ರೋಗಿಗಳ ಸೇವೆಯನ್ನು ಮುಂದುವರಿಸಿದ್ದಾರೆ. ನಗರದ ಎಂ.ಸಿ.ಸಿ. ‘ಬಿ’ ಬ್ಲಾಕ್‌ನಲ್ಲಿರುವ ತಮ್ಮ ಸರಳ ಕ್ಲಿನಿಕ್‌ನಲ್ಲಿ ಇಂದಿಗೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸಾಮಾನ್ಯವಾಗಿ ವೈದ್ಯಕೀಯ ಸಮಾಲೋಚನೆಗೆ ಹೆಚ್ಚಿನ ಶುಲ್ಕ ವಿಧಿಸುವ ಇಂದಿನ ವ್ಯವಸ್ಥೆಯಲ್ಲಿ, ಅವರು ಕೇವಲ 10ರಿಂದ 30 ರೂಪಾಯಿಗಳ ಅತ್ಯಲ್ಪ ಶುಲ್ಕದಲ್ಲಿ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿರುವುದು ಅವರ ಸೇವಾ ಬದ್ಧತೆಗೆ ಸಾಕ್ಷಿಯಾಗಿದೆ.

ಬಡವರ ಕಣ್ಣೀರೊರೆಸುವ ವೈದ್ಯ

ದಾವಣಗೆರೆ ಮಾತ್ರವಲ್ಲದೆ ಚಿತ್ರದುರ್ಗ, ಹಾವೇರಿ, ರಾಣೆಬೆನ್ನೂರು, ಶಿವಮೊಗ್ಗ ಸೇರಿದಂತೆ ವಿವಿಧ ಭಾಗಗಳಿಂದಲೂ ಬಡ ಮತ್ತು ಮಧ್ಯಮ ವರ್ಗದ ಜನರು ಇವರ ಬಳಿ ಚಿಕಿತ್ಸೆಗಾಗಿ ಬರುತ್ತಾರೆ. ಹಣದ ಕೊರತೆಯಿಂದ ಯಾರೂ ಚಿಕಿತ್ಸೆ ವಂಚಿತರಾಗಬಾರದು ಎಂಬ ಕಾಳಜಿ ಅವರದ್ದು. ಬಡ ರೋಗಿಗಳಿಗೆ ಉಚಿತ ಔಷಧ ಮಾದರಿಗಳನ್ನು ನೀಡುವುದು, ವೈದ್ಯಕೀಯ ಪರೀಕ್ಷೆಗಳಿಗೆ ರಿಯಾಯಿತಿ ದೊರಕಿಸಿಕೊಡುವುದು, ಅಗತ್ಯವಿದ್ದಾಗ ಪ್ರಯಾಣ ವೆಚ್ಚವನ್ನೂ ಭರಿಸುವುದು ಅವರ ಸೇವೆಯ ಭಾಗವಾಗಿದೆ.

ಕೆಲವೊಮ್ಮೆ ರೋಗಿಗಳ ಬಳಿ ಆಟೊ ಬಾಡಿಗೆಗೂ ಹಣವಿಲ್ಲದಿರುವುದನ್ನು ಗಮನಿಸಿ, ಅವರ ಪ್ರಯಾಣದ ವೆಚ್ಚವನ್ನೂ ತಾವೇ ನೀಡುತ್ತಾರೆ. ರೋಗಿಯ ಸಂಕಷ್ಟವನ್ನು ಕೇವಲ ವೈದ್ಯಕೀಯ ಸಮಸ್ಯೆಯಾಗಿ ನೋಡದೆ, ಅದರ ಹಿಂದಿರುವ ಸಾಮಾಜಿಕ ಮತ್ತು ಆರ್ಥಿಕ ನೋವನ್ನೂ ಅರ್ಥಮಾಡಿಕೊಳ್ಳುವ ಅವರ ಗುಣವೇ ಅವರನ್ನು ಜನಮಾನಸದಲ್ಲಿ ಎತ್ತರದ ಸ್ಥಾನದಲ್ಲಿ ನಿಲ್ಲಿಸಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಸೇವಾ ಮನೋಭಾವಕ್ಕೆ ಹೊಸ ಅರ್ಥ ನೀಡಿರುವ ಡಾ. ಎಲಿ ಅವರ ಬದುಕು, ವೃತ್ತಿಯ ಯಶಸ್ಸು ಹಣ ಮತ್ತು ಆಸ್ತಿಯಲ್ಲಿ ಮಾತ್ರ ಅಳೆಯಲಾಗದು ಎಂಬುದನ್ನು ಸಾರುತ್ತದೆ. ಬಡವರ ಪಾಲಿಗೆ ವೈದ್ಯರು ಕೇವಲ ಚಿಕಿತ್ಸಕರಲ್ಲ, ಸಂಕಷ್ಟದ ಸಮಯದಲ್ಲಿ ಭರವಸೆ ನೀಡುವವರೂ ಆಗಿರಬೇಕು ಎಂಬುದನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ್ದಾರೆ.

ಅವರ ಈ ಸುದೀರ್ಘ ಸೇವಾ ಪಯಣದಲ್ಲಿ ಕುಟುಂಬದ ಬೆಂಬಲವೂ ಮಹತ್ವದ್ದಾಗಿದೆ. ಪತ್ನಿ ನಾಗರತ್ನಮ್ಮ ಅವರು ಅವರ ಸೇವಾ ಕಾರ್ಯಕ್ಕೆ ನಿರಂತರ ಪ್ರೋತ್ಸಾಹ ನೀಡಿದ್ದಾರೆ. ಮಕ್ಕಳಾದ ಡಾ. ವಿನಯ್ ಎಸ್. ಎಲಿ ಮತ್ತು ಡಾ. ಸುಮನ್ ಎಸ್. ಎಲಿ ಕೂಡ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಸಮಾಜಸೇವೆ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ಎಸ್.ಎಂ. ಎಲಿ ಅವರ ಸಾಧನೆ ಕೇವಲ ವೈಯಕ್ತಿಕ ಗೌರವವಲ್ಲ; ಮಾನವೀಯ ವೈದ್ಯಕೀಯ ಸೇವೆಗೆ ಸಂದ ಮನ್ನಣೆಯಾಗಿದೆ. ವೈದ್ಯಕೀಯ ವೃತ್ತಿಯ ಮೂಲ ಆಶಯವಾದ ರೋಗಿಗಳ ಸೇವೆ, ಕರುಣೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ತಮ್ಮ ಬದುಕಿನುದ್ದಕ್ಕೂ ಎತ್ತಿಹಿಡಿದಿರುವ ಅವರ ಕಾರ್ಯ ಇಂದಿನ ಯುವ ವೈದ್ಯರಿಗೆ ಮಾದರಿಯಾಗಿದೆ.

ದಾವಣಗೆರೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ಬಡ ಕುಟುಂಬಗಳ ಪಾಲಿಗೆ ಆಸರೆಯಾಗಿರುವ ಎಲಿ ಅವರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ನೀಡಿರುವ ಈ ಪ್ರಶಸ್ತಿ ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ. ಪ್ರಶಸ್ತಿಗಳು ಸಾಧಕರನ್ನು ಗುರುತಿಸುತ್ತವೆ; ಆದರೆ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯುವುದು ಅವರ ಸೇವೆಯಿಂದ ಮಾತ್ರ ಸಾಧ್ಯ ಎಂಬುದಕ್ಕೆ ಡಾ. ಎಸ್.ಎಂ. ಎಲಿ ಅವರ ಬದುಕೇ ಸಾಕ್ಷಿಯಾಗಿದೆ.

Continue Reading

ದಿನದ ಸುದ್ದಿ

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೀಡಿರುವ ಮುಂಬಡ್ತಿಯ ಸ್ಥಳ ನಿಯುಕ್ತಿಗೆ ಸಂಬAಧಿಸಿದ ಆನ್‌ಲೈನ್ ಕೌನ್ಸಿಲಿಂಗ್‌ನಲ್ಲಿ ಪಾರದರ್ಶಕತೆಯನ್ನು ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳನ್ನು ಸೇವಾ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಅರ್ಹ ದ್ವಿತೀಯ ದರ್ಜೆ ಸಹಾಯಕರ ವೃಂದದಿAದ ಮುಂಬಡ್ತಿ ಮೂಲಕ ಭರ್ತಿ ಮಾಡಲು ಮುಂದಾಗಿದ್ದು, ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ದಿನಾಂಕ: 12-11-2025 ರಂದು ಆನ್‌ಲೈನ್ ಕೌನ್ಸಿಲಿಂಗ್ ನಡೆಸಿ, ಸ್ಥಳ ನಿಯುಕ್ತಿ ಮಾಡಿ, ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ಪ್ರಥಮ ದರ್ಜೆ ಸಹಾಯಕರ ಪಟ್ಟಿಯನ್ನು ಬಿಡುಗಡೆಗೊಸಲಾಗಿರುತ್ತದೆ.

ಆದರೆ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ಪಟ್ಟಿಯಲ್ಲಿ ಆಯುಕ್ತರ ಕಛೇರಿ, ಬೆಂಗಳೂರು ಇಲ್ಲಿ 03 ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯನ್ನು ಗುರುತಿಸಲಾಗಿರುತ್ತದೆ. ಆದರೆ ಆದೇಶ ಪ್ರತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಮುಂಬಡ್ತಿಯಲ್ಲಿ 10 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿಗೆ ಆಯ್ಕೆ ಮಾಡಿಕೊಂಡಿರುವ 10 ಅಭ್ಯರ್ಥಿಗಳಲ್ಲಿ 05 ಅಭ್ಯರ್ಥಿಗಳನ್ನು ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ ಯಥಾ ಪ್ರಕಾರ ಮುಂದುವರೆಸಲಾಗಿರುತ್ತದೆ.

ಹೀಗಾಗಿ ಸದರಿ ಮುಂಬಡ್ತಿ ಪ್ರಕ್ರಿಯೆಯು ನಿಯಮಬಾಹಿರವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿ 10 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!

Published

on

ಆಗಸ್ಟ್ 2023 ರಿಂದ ಜುಲೈ 2026 ರವರೆಗೆ ₹28,759 ಕೋಟಿ ಸಬ್ಸಿಡಿ ಬಿಡುಗಡೆ; ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್‌ನಿಂದ ಕೋಟ್ಯಂತರ ಕುಟುಂಬಗಳ ಆರ್ಥಿಕ ಸಬಲೀಕರಣ

ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.

ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.

http://Visit : www.suddidina.com

ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ: 

ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.

ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.

ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:

ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.

ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

Continue Reading
Advertisement

Title

ಅಂತರಂಗ1 day ago

ಮೆಚ್ಚುಗೆ ಪಡೆದ ಕತೆ | ಸತ್ಯದರ್ಶನ

~ಸುಜಾತ ಎಸ್.ಎನ್ ರೆಡ್ಡಿ, ಬೆಂಗಳೂರು ಅತ್ತೇ , ಇವತ್ತು ಜಯಂತ್ ಮಾವ ಜೈಲಿನಿಂದ ಬಿಡುಗಡೆಯಾಗಿ ಇಲ್ಲಿಗೇ ಬರ್ತಿದ್ದಾರಂತೆ..! ಅಮ್ಮ ತುಂಬಾ ದಿನಗಳ ನಂತರ ಖುಷಿಯಾಗಿ ಕಾಣ್ತಾ ಇದ್ದಾರೆ....

ಅಂತರಂಗ1 day ago

ಮೆಚ್ಚುಗೆ ಪಡೆದ ಕವಿತೆ | ಬಂದಿದ್ದಾರೆ; ಆದರೆ ಸಿಕ್ಕಿಲ್ಲ

~ಕವಿತ ಎ. ವಿ. ಶ್ಯಾಗಲೆ, ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ ಈಗೀಗ ಮೆದುಳು – ಕಿಡ್ನಿಗಳ ಜಾಗ ಬದಲಾಗಿರಬೇಕು. ಸರ್ಜರಿಗೆಂದು ಕೆಲವರನ್ನು ವೈದ್ಯರ ಬಳಿ...

ಅಂತರಂಗ3 days ago

ಮೆಚ್ಚುಗೆ ಪಡೆದ ಕತೆ | ವೆಂಕಟನ ಸ್ವೆಟರ್

~ ಚಂದ್ರಿಕಾ ನಾಗರಾಜ್ ಹಿರಿಯಡಕ ತಟ್ಟೆಗೆ ಹಾಕಿದ್ದ 4 ಇಡ್ಲಿಯಲ್ಲಿ ಎರಡನ್ನು ಪೇಪರ್ ನಲ್ಲಿ ಕಟ್ಟಿಟ್ಟು, ಉಳಿದೆರಡು ಇಡ್ಲಿಯನ್ನು ಹಿಚಿಕಿ ಸಾಂಬಾರಿಗಾಗಿ ಕಾದು ಕುಳಿತ್ತಿದ್ದ ವೆಂಕಟ. ಅನ್ನಪೂರ್ಣಮ್ಮ...

ಅಂತರಂಗ4 days ago

ಮಣ್ಣಿನ ಬದುಕಿನಿಂದ ಸಾಹಿತ್ಯದ ದಡದವರೆಗೆ: ಅಮರೇಶ ನುಗಡೋಣಿಯವರ ಬದುಕು–ಬರಹ

~ಡಾ. ಗುರುಸಿದ್ಧಯ್ಯಾ ಸ್ವಾಮಿ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸಿ. ಬಿ. ಖೇಡಗಿ ಮಹಾವಿದ್ಯಾಲಯ, ಅಕ್ಕಲಕೋಟ ಮಹಾರಾಷ್ಟ್ರ.   ಬದುಕಿನ ಅನುಭವಗಳನ್ನು ಸಾಹಿತ್ಯದ ಸೃಜನಶೀಲ ಶಕ್ತಿಯನ್ನಾಗಿ ರೂಪಿಸಿಕೊಂಡ...

ಅಂತರಂಗ5 days ago

ಮೆಚ್ಚುಗೆ ಪಡೆದ ಕವಿತೆ | ಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತು

ಸಂತೆಬೆನ್ನೂರು  ಫೈಜ್ನಟ್ರಾಜ್ ಆಲಿಸು, ಎದೆಗೆ ನುಗ್ಗುವ ಗಾಳಿ ಹೇಳುತಿದೆ ಏನೇನೊ ನನ್ನದಲ್ಲದ ಮಾತುಗಳು ಯಾರವವೊ –ದೇವನೂರು ಮಹಾದೇವ   ತಿಂದಿರೋದು ಎಲ್ಡೆಯ ತಕ ಇದೊಂದು ಅಂತ ಅವ್ವ...

ಅಂತರಂಗ5 days ago

ಮೆಚ್ಚುಗೆ ಪಡೆದ ಕತೆ |  ಸಮಾಧಿ

~ಟಿ.ಆರ್. ಪ್ರಕಾಶ ಭಾಗವತ, ಶಿರಸಿ ಬರೋಬ್ಬರಿ ನಾಲ್ಕು ಎಕರೆ ಅಡಿಕೆ ತೋಟ ಸಮಾಧಿಯಾಗಿತ್ತು! ಆ ವರ್ಷದ ಮಳೆಗೆ ಅದೇನು ಆವೇಶ ಬಂದಿತ್ತೋ… ಕೇರಳ ರಾಜ್ಯದ ಕೆಲವೆಡೆ ಭಯಂಕರ...

ಅಂತರಂಗ5 days ago

ದೇವನಗರಿ ಸುದ್ದಿದಿನ ವಿಶೇಷಾಂಕ; ಗೋವರ್ಧನರ ಆಸಕ್ತಿ ಹಾಗು ಅಕ್ಷರ ಪ್ರೀತಿಯ ಪ್ರತಿಬಿಂಬ

ಸುದ್ದಿದಿನ ಪತ್ರಿಕೆ ಗೋವರ್ಧನರಿಗೆ ಪ್ರೀತಿಯ ಮಗು. ಅದಕ್ಕೀಗ ಐದು ವರ್ಷ. ಅನ್ನುವ ಭಾವದಲ್ಲಿ ನನಗೆ ಅನ್ನಿಸಿದ್ದನ್ನು ಹೇಳಬೇಕಾದ ಒಂದು ವಾಕ್ಯ; “ಹೆತ್ತಪ್ಪನ ಖುಶಿ, ಪತ್ರಿಕೆಯ ವಿಶೇಷಾಂಕದ ತುಂಬ...

ಅಂತರಂಗ2 weeks ago

ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ದೇವನಗರಿ ಸುದ್ದಿದಿನ ಕನ್ನಡ ದಿನಪತ್ರಿಕೆ, ಏಕಾಂತಗಿರಿ ಟ್ರಸ್ಟ್, ದಾವಣಗೆರೆ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ...

ಅಂತರಂಗ2 weeks ago

ಸಂತೆಬೆನ್ನೂರು ಫೈಜ್ನಟ್ರಾಜ್ ಗೆ ಮುದ್ದಣ ಕಾವ್ಯ ಪ್ರಶಸ್ತಿ

ಸುದ್ದಿದಿನ,ದಾವಣಗೆರೆ:ಮೂಡುಬಿದರೆಯ ಕಾಂತಾವರ ಕನ್ನಡ ಸಂಘ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ವತಿಯಿಂದ ಪ್ರತಿವರ್ಷ’ ಮುದ್ದಣ ಕಾವ್ಯ ಪ್ರಶಸ್ತಿ ಗಾಗಿ’ ಏರ್ಪಡಿಸುವ ಕವನ ಸಂಕಲನಗಳ ಹಸ್ತಪ್ರತಿ ಸ್ಪರ್ಧೆಯಲ್ಲಿ ದಾವಣಗೆರೆ...

ದಿನದ ಸುದ್ದಿ2 weeks ago

ಬಡವರ ಪಾಲಿನ ಸಂಜೀವಿನಿ ವೈದ್ಯ ಡಾ. ಎಸ್.ಎಂ. ಎಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ

ವಿಶೇಷ ವರದಿ : ಗೋವರ್ಧನ ನವಿಲೇಹಾಳು ಸುದ್ದಿದಿನ,ದಾವಣಗೆರೆ: ವೈದ್ಯಕೀಯ ವೃತ್ತಿ ಇಂದು ಸೇವೆಯ ಜೊತೆಗೆ ವಾಣಿಜ್ಯೀಕರಣದ ಸ್ವರೂಪವನ್ನೂ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ, ವೈದ್ಯಕೀಯ ಸೇವೆಯೇ ಮಾನವೀಯ ಧರ್ಮ ಎಂದು...

Trending