ಲೋಕಾರೂಢಿ
ನಿರುದ್ಯೋಗ, ಬಡತನ ಮತ್ತು ಮೋದಿ ವರ್ಷಗಳು
- ಭಾರತದಲ್ಲಿ ಉದ್ಯೋಗಿ ಮತ್ತು ನಿರುದ್ಯೋಗಿ ಎಂಬ ಸರಳ ವಿಂಗಡಣೆ ಸಾಧ್ಯವಿಲ್ಲ. ಆದ್ದರಿಂದ ಉದ್ಯೋಗದ ಪ್ರಮಾಣವನ್ನು ತಿಳಿಯುವ ಒಂದು ವಿಧಾನವೆಂದರೆ ‘ಉದ್ಯೋಗ ವರಮಾನ’ವನ್ನು ಪರಿಶೀಲಿಸುವುದು. ಇದನ್ನು ಅಳೆಯುವ ಒಂದು ವಿಧಾನವೆಂದರೆ, ಆಹಾರ ಸೇವನೆಯಲ್ಲಿ ಕಾಳುಗಳ ತಲಾ ಲಭ್ಯತೆ. ಇದು ದುಡಿಯುವ ಜನ ವಿಭಾಗಗಳಿಗೆ ಮೋದಿ ಆಳ್ವಿಕೆಯ ವರ್ಷಗಳಲ್ಲಿ ಸತತವಾಗಿ ಇಳಿಯುತ್ತ ಬಂದಿದೆ. ಅಂದರೆ ಬಡತನವನ್ನು ಅಳೆಯುವ ಕ್ಯಾಲೊರಿ ಸೇವನೆಯ ಪ್ರಮಾಣವೂ ಇಳಿಯುತ್ತ ಬಂದಿದೆ. ಆದರೆ ಮೋದಿ ಸರಕಾರ, ನಿಜವಾಗಿಯೂ ಬಡತನ ಮತ್ತು ನಿರುದ್ಯೋಗವನ್ನು ಅನುಭವಿಸುತ್ತಿರುವ ಜನತೆಗೆ ಅವರ ಪರಿಸ್ಥಿತಿಗಳಿಗೆ ಸಂಬಂಧಪಟ್ಟ ಅಂಕಿ-ಅಂಶಗಳು ಗೊತ್ತಾಗದಂತೆ ತಡೆಹಿಡಿಯುವ ಮೂಲಕ, ಸರ್ವಾಧಿಕಾರಶಾಹಿತ್ವವನ್ನು ಮಾತ್ರವಲ್ಲ, ತಮಗೆ ಬಡತನ, ನಿರುದ್ಯೋಗ ಇಲ್ಲ ಎಂದು ಜನರು ಯೋಚಿಸುವಂತೆ ಮಾಡಬಹುದು ಎಂದು ನಂಬುವ ಮೂರ್ಖತನವನ್ನೂ ಪ್ರದರ್ಶಿಸಿದೆ.
ಶಿಮ್ಲಾದ ಕಾರ್ಮಿಕ ಬ್ಯೂರೋದಿಂದ ಹಿಡಿದು ಭಾರತೀಯ ಆರ್ಥಿಕ ವೀಕ್ಷಣಾ ಕೇಂದ್ರ(ಸಿಎಂಐಇ), ಮತ್ತು ಆಕ್ಸ್‌ಫಾಮ್ ವರೆಗೆ ಹಲವಾರು ಸಂಸ್ಥೆಗಳು ಭಾರತದಲ್ಲಿ ಈಗ ಗಂಭೀರವಾಗಿರುವ ನಿರುದ್ಯೋಗ ಪರಿಸ್ಥಿತಿಯತ್ತ ಗಮನ ಸೆಳೆದಿವೆ. ಆದರೆ ಸರ್ಕಾರ ಇದನ್ನು ನಿರಂತರವಾಗಿ ನಿರಾಕರಿಸುತ್ತಾ ಬಂದಿರುವುದೇ ಅಲ್ಲದೇ, ತಾನು ಒಪ್ಪದ ಅಧಿಕೃತವಾದ ಅಂಕಿ ಅಂಶಗಳನ್ನೇ ಮುಚ್ಚಿಹಾಕಿದೆ.
ಈಗಿನ ಸರ್ಕಾರದ ಸ್ಥಿತಿ ಕಥೆಗಳಲ್ಲಿ ಬರುವ ಪರದೆ ಹಿಂದೆ ಬಿಚ್ಚಿಟ್ಟು ಕೊಂಡಿರುವ ಕಳ್ಳನ ರೀತಿಯದಾಗಿದೆ. ಅವನ ಬೂಟುಗಳು ಪರದೆಯ ಕೆಳಗೆ ಕಾಣುತ್ತಿರುವಂತೆ ಬೇರೆ ಬೇರೆ ಕಡೆಗಳಲ್ಲಿ ಸಿಗುವ ಅಂಕಿ ಅಂಶಗಳು ಸತ್ಯವನ್ನು ಹೊರಗೆಡಹುತ್ತಿವೆ. ಈ ವಿವಿಧ ಸ್ಥಳಗಳೆಂಬುದು ಯಾವುದೋ ದೂರದ ಮೂಲಗಳಲ್ಲ, ಸರಕಾರದ ವಾರ್ಷಿಕ ಆರ್ಥಿಕ ಸರ್ವೇಯಲ್ಲಿ ಪ್ರಮುಖವಾದ ಕೋಷ್ಟಕಗಳಲ್ಲಿ ಪ್ರಕಟವಾಗಿರುವಂತವುಗಳೇ.
ನಿರುದ್ಯೋಗದ ವಿಷಯ ಬಹಳ ನಾಜೂಕಿನದ್ದು, ಅದೂ ಭಾರತದಲ್ಲಿ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು. ಇಲ್ಲಿರುವುದು ಉದ್ಯೋಗಿ ಮತ್ತು ನಿರುದ್ಯೋಗಿ ಎಂಬ ಸರಳ ವ್ಯತ್ಯಾಸವಲ್ಲ. ಇದು ವಾಸ್ತವವಾಗಿ, ಅರೆ ಉದ್ಯೋಗ, ಕೆಲವು ಗಂಟೆಗಳ ಉದ್ಯೋಗ, ತಾತ್ಕಾಲಿಕ ಉದ್ಯೋಗ, ಹಂಗಾಮಿ ಉದ್ಯೋಗ ಇವೆಲ್ಲದರ ಮಿಶ್ರಣವಾಗಿರುತ್ತದೆ. ಕೆಲವಷ್ಟೇ ಜನರಿಗೆ ಮಾತ್ರ ಅವರ ಇಷ್ಟದಂತೆ ಪೂರ್ಣ ಪ್ರಮಾಣದ ಉದ್ಯೋಗ ಲಭಿಸಿರುತ್ತದೆ.
ಆದ್ದರಿಂದ ಉದ್ಯೋಗದ ಪ್ರಮಾಣ ಏರಿದೆಯೆಂದರೆ ಎಷ್ಟರ ಮಟ್ಟಿನ ಉದ್ಯೋಗ ಎಂದು ನೋಡಬೇಕಾಗಿದೆ. ಮತ್ತು ಇದು ತಿಳಿಯುವ ಒಂದು ವಿಧಾವೆಂದರೆ ನಿಜ ವರಮಾನದ ಹೆಚ್ಚಳ ಎಷ್ಟಾಗಿದೆ ಎಂಬುದನ್ನು ಪರಿಶೀಲಿಸುವುದು.
ಆರ್ಥಿಕ ತಜ್ಞರು ಈ ಹೆಚ್ಚಳವನ್ನು ಅಳೆಯಲು ಉದ್ಯೋಗ ವರಮಾನ ಎಂಬ ಪದವನ್ನು ಬಳಸುತ್ತಾರೆ. ನಿರುದ್ಯೋಗ ಎಂದರೆ ಒಟ್ಟು ದುಡಿಯುವ ಜನಗಳಲ್ಲಿ ಒಂದು ನಿರ್ದಿಷ್ಟ ಮಿತಿಗಿಂತ ಕಡಿಮೆ ವರಮಾನ ಪಡೆಯುವವರ ಅನುಪಾತ ಎಂದು ಕಾಣಬಹುದು. ನಿರುದ್ಯೋಗ ಕಡಿಮೆಯಾದಾಗ ಸುಮಾರಾಗಿ ಹೇಳುವುದಾದರೆ, ದುಡಿಯುವ ಜನವಿಭಾಗಗಳ ತಲಾ ವರಮಾನ ಹೆಚ್ಚಾಗಬೇಕಾಗುತ್ತದೆ. ಅದರಂತೆ ನಿರುದ್ಯೋಗ ಹೆಚ್ಚಾದಾಗ ದುಡಿಯುವ ವ್ಯಕ್ತಿಗಳ ತಲಾ ವರಮಾನ ಸಹಜವಾಗಿಯೇ ಕುಸಿಯುತ್ತದೆ. ಆದ್ದರಿಂದ ನಾವು ಉದ್ಯೋಗದ ಹಂತಗಳಿಗೂ ದುಡಿಯುವ ಜನರಿಗೂ ಮತ್ತು ಅವರ ತಲಾ ವರಮಾನಕ್ಕೂ ಸಂಬಂಧವಿರುವುದನ್ನು ಅಧಾರ ಸೂತ್ರವಾಗಿ ಪರಿಗಣಿಸಬಹುದು. ಮೋದಿ ಸರ್ಕಾರದ ಅವಧಿಯಲ್ಲಿ ದುಡಿಯುವ ಜನರ ನಿಜ ತಲಾ ವರಮಾನದ ಸ್ಥಿತಿ-ಗತಿಯೇನು ಎಂಬುದು ಈಗ ನಮ್ಮ ಮುಂದಿರುವ ಪ್ರಶ್ನೆ.
ದುಡಿಯುವ ಜನತೆಯ ತಲಾ ನಿಜ ವರಮಾನವನ್ನು ಅಳೆಯಲು ಸರಳವಾದ ಮಾರ್ಗವಿದೆ. ಜನರು ಯಾವಾಗ ಸ್ಥಿತಿವಂತರಾಗುತ್ತಾರೋ ಆಗ ಅವರು ಹೆಚ್ಚು ಹೆಚ್ಚು ವಿವಿಧ ಪ್ರಕಾರದ ವಸ್ತುಗಳನ್ನು ಕೊಳ್ಳುತ್ತಾರೆ. ಜನರು ಸ್ಥಿತಿವಂತರಾಗುವಾಗ ಹೆಚ್ಚಿನ ಬೇಡಿಕೆ ಪಡೆಯುವ ಸರಕುಗಳನ್ನು ಸಕಾರಾತ್ಮಕ ಹಿಗ್ಗುವಿಕೆ ಹೊಂದಿರುವ ಸರಕುಗಳು ಎನ್ನಲಾಗುತ್ತದೆ. ಕಾಳುಗಳು ಇಂತಹ ವಸ್ತುಗಳಲ್ಲಿ ಪ್ರಮುಖವಾದ್ದು. ವರಮಾನ ಹೆಚ್ಚಾದಾಗ ಇವುಗಳ ಬಳಕೆ ಹೆಚ್ಚಾಗುತ್ತದೆ, ಇದು ನೇರವಾಗಿ ಆಗಲಿಕ್ಕಿಲ್ಲ. ನಿಜ, ಬಡವರ ಮಟ್ಟಿಗೆ ಇದು ನೇರವಾಗಿಯೇ ಹೆಚ್ಚುತ್ತದೆ. ಆದರೆ ಸ್ಥಿತಿವಂತರಲ್ಲಿ ಕೂಡ ಪರೋಕ್ಷವಾಗಿ ಕಾಳುಗಳ ಬಳಕೆ ಸಂಸ್ಕರಿಸಿದ ಆಹಾರ ಪಧಾರ್ಥಗಳು ಮತ್ತು ಪ್ರಾಣಿ ಜನ್ಯ ವಸ್ತುಗಳ ರೂಪದಲ್ಲಿ ಹೆಚ್ಚುತ್ತದೆ.
ಸರ್ಕಾರದ ವಾರ್ಷಿಕ ಆರ್ಥಿಕ ಸರ್ವೇಕ್ಷಣೆಯಲ್ಲಿ ಪ್ರತಿ ವರ್ಷ ಲಭ್ಯವಿರುವ ಕಾಳುಗಳ ವಿವರ ಸಿಗುತ್ತದೆ. ಆದರೆ ಅದರ ಬಳಕೆಯ ಒಟ್ಟು ವಿವರ ಲಭ್ಯವಿರುವುದಿಲ್ಲ. ಆದರೆ ನಾವು ಲಭ್ಯತೆ ಮತ್ತು ಬಳಕೆ ಜತೆ-ಜತೆಯಲ್ಲೇ ಸಾಗುತ್ತವೆ ಎಂದು ಭಾವಿಸಬಹುದು. ಆರ್ಥಿಕ ಸರ್ವೇಕ್ಷಣೆಯ ಜನಸಂಖ್ಯೆಯ ಅಂದಾಜು ಖಚಿತವಾಗಿರುವುದಿಲ್ಲ, ಜನಗಣತಿ ನಡೆಯದ ವರ್ಷಗಳಲ್ಲಿ ಹಿಂದಿನ ಸಾಲಿನ ಸಂಖ್ಯೆಗಳಿಗೆ ಒಂದು ಖಚಿತವಾದ ಸಂಖ್ಯೆಯನ್ನು ಸೇರಿಸಲಾಗುತ್ತದೆ. ವಾಸ್ತವವಾಗಿ ಒಂದು ನಿರ್ದಿಷ್ಟ ಸಂಖ್ಯೆಯನ್ನಲ್ಲ, ಒಂದು ನಿರ್ದಿಷ್ಟ ಪ್ರಮಾಣವನ್ನು ಹಿಂದಿನ ವರ್ಷದ ಜನಸಂಖ್ಯೆಗೆ ಸೇರಿಸಬೇಕು. ನಾವು ಇಲ್ಲಿ ಈ ರೀತಿಯ ಹೊಂದಾಣಿಕೆ ಮಾಡಿಕೊಂಡು ಒಟ್ಟು ಜನಸಂಖ್ಯೆಯ ಕಾಳುಗಳ ತಲಾ ಲಭ್ಯತೆಯನ್ನು ಆರ್ಥಿಕ ಸರ್ವೇಯ ಅಂಕಿಅಂಶಗಳನ್ನು ಆಧಾರವಿಟ್ಟುಕೊಂಡು ಲೆಕ್ಕ ಹಾಕಬಹುದು.
ಹೀಗೆ ಲೆಕ್ಕ ಹಾಕಿದಾಗ, ಮೋದಿ ಸರ್ಕಾರದ ಅವಧಿಯ ಪ್ರತಿ ವರ್ಷದಲ್ಲೂ ಕಾಳುಗಳ ತಲಾ ಲಭ್ಯತೆ ಸ್ಪಷ್ಟವಾಗಿ ದೇಶದಲ್ಲಿ 1991 ರಲ್ಲಿ ನವ-ಉದಾರವಾದಿ ಆರ್ಥಿಕ ಧೋsರಣೆಗಳನ್ನು ಆರಂಭಿಸಿದಾಗ ಇದ್ದುದಕ್ಕಿಂತ ಕಡಿಮೆಯಾಗಿದೆ. ಇದು ಮೋದಿಯವರ ಹಿಂದಿನ ಅವಧಿಗೂ ಸಲುತ್ತದೆ. ಆದರೆ ನಾವು ನೆನಪಿಸಿಕೊಳ್ಳಬೇಕಿರುವುದು ಮೋದಿಯವರು ನಿರುದ್ಯೋಗದ ಪ್ರಮಾಣದ ಇಳಿಕೆಯ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದರು ಎಂಬುದನ್ನು. ನಿರುದ್ಯೋಗ ಈ ಐದು ವರ್ಷಗಳಲ್ಲಿ 1991ರ ಮೊದಲು ಇದ್ದುದಕ್ಕೆ ಹೋಲಿಸಿದರೆ, ಇಳಿಯುವ ಬದಲು ತುಂಬಾ ಹೆಚ್ಚಿದೆ.
ಕತೆ ಇಲ್ಲಿಗೆ ಮುಗಿಯುವುದಿಲ್ಲ. ನಿರುದ್ಯೋಗದ ಪ್ರಮಾಣ ಮೋದಿ ಸರ್ಕಾರದ ಅವಧಿಯಲ್ಲಿ ಪ್ರತಿ ಹಿಂದಿನ ಅವಧಿಗಿಂತ ಹೆಚ್ಚುತ್ತ ಬಂದಿದೆ. 2014ಕ್ಕೆ ಹೋಲಿಸಿದಾಗಲೂ ಕಾಳುಗಳ ತಲಾ ಲಭ್ಯತೆ ಇಳಿಯುತ್ತಲೇ ಬಂದಿದೆ. ಪರಿಣಾಮವಾಗಿ ಉದ್ಯೋಗ ವರಮಾನ ಪ್ರತಿ ವರ್ಷವೂ ಕಡಿಮೆಯಾಗುತ್ತಲೇ ಬಂದಿದೆ.
ಈಗ ಲಭ್ಯವಿರುವ ತಾತ್ಕಾಲಿಕ ಅಂಕಿಅಂಶಗಳಂತೆ 2017 ರಲ್ಲಿ ಕಾಳುಗಳ ಲಭ್ಯತೆ ಒಟ್ಟು ಜನಸಂಖ್ಯೆಗೆ 2014 ರಲ್ಲಿ ಇದ್ದುದಕ್ಕೆ ಸರಿಸಮವಾಗಿದದ್ದರೂ ನಮ್ಮ ದೃಷ್ಟಿಯಿರುವುದು ದುಡಿಯುವ ಜನರಿಗೆ ಲಭ್ಯತೆಯ ಪ್ರಮಾಣದ ಮೇಲೆ, ಏಕೆಂದರೆ ಅದು ಉದ್ಯೋಗ ವರಮಾನದ ಮಾಪನವಾಗಿರುತ್ತದೆ. ದೇಶದಲ್ಲಿ ವರಮಾನದ ಅಸಮಾನತೆ ವೇಗವಾಗಿ ಹೆಚ್ಚುತ್ತಿರುವಾಗ ಜನಸಂಖ್ಯೆಯ ಉಳ್ಳವರ ಭಾಗದವರು ಹೆಚ್ಚು ಬೇಳೆಕಾಳುಗಳನ್ನು ನೇರವಾಗಿ ಮತ್ತು ಪರೋಕ್ಷವಾಗಿ ತಲಾ ವರಮಾನ ಹೆಚ್ಚಾಗದಂತೆ ಬಳಸುತ್ತಾರೆ. ಅಂದರೆ ಕಾಳುಗಳ ತಲಾ ಲಭ್ಯತೆ ದುಡಿಯುವ ಜನ ವಿಭಾಗಗಳಿಗೆ 2017 ರಲ್ಲಿ 2014 ಕ್ಕಿಂತ ಕಡಿಮೆಯಾಗಿದೆ ಎಂದೇ ಅರ್ಥ. ಮೋದಿ ಸರ್ಕಾರದ ಅವಧಿಯ ಪ್ರತಿ ವರ್ಷದಲ್ಲೂ ಬೇಳೆಕಾಳುಗಳ ಲಭ್ಯತೆ ದುಡಿಯುವ ಜನತೆಗೆ 2014ನೇ ಸಾಲಿನ ಮಟ್ಟಕ್ಕಿಂತ ಕಡಿಮೆಯಾಗಿರುವುದು ಕಂಡುಬರುತ್ತದೆ. ಸಂಕ್ಷಿಪ್ರವಾಗಿ ಹೇಳುವುದಾದರೆ, ವರಮಾನ ನಿರುದ್ಯೋಗವನ್ನು ನವ-ಉದಾರವಾದಿ ಧೋರಣೆಗಳ ಅವಧಿಯ ಹಿಂದಿನ ಮಟ್ಟಕ್ಕೆ ಇಳಿಸುವ ಬದಲು, ಮೋದಿಯವರ ಆಳ್ವಿಕೆಯಲ್ಲಿ ನಿಜವಾಗಿ ಕುಸಿಯುತ್ತಿರುವ ವರಮಾನ ನಿರುದ್ಯೋಗವೇ ಕಾಣಬಂದಿದೆ.
ತಲಾ ಕಾಳು ಲಭ್ಯತೆಯ ಕುಸಿತದ ಅವಧಿ ಇನ್ನೂ ಹಲವು ಪರಿಣಾಮ ಸೃಷ್ಟಿಸಿದೆ. ಬಡತನವನ್ನು ಭಾರತದಲ್ಲಿ ಪರಿಗಣಿಸುವುದು ಆಹಾರದ ಕ್ಯಾಲೋರಿ ಸೇವನೆ ಪ್ರಕಾರವಾಗಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ತಲಾ ೨೨೦೦ ಕ್ಯಾಲೋರಿ ಮತ್ತು ನಗರ ಪ್ರದೇಶಗಳಿಗೆ ತಲಾ 2100 ಕ್ಯಾಲೋರಿ ನಿಗದಿ ಪಡಿಸಿರುತ್ತಾರೆ. ಸಾಮಾನ್ಯ ಜನರಿಗೆ ಈ ಕ್ಯಾಲೋರಿಗಳು ಲಭ್ಯವಾಗುವುದು ಕಾಳುಗಳ ಮುಖಾಂತರ (ಪ್ರಾಣಿಜನ್ಯ ಪ್ರೊಟೀನ್ ಎಲ್ಲರಿಗೂ ಲಭ್ಯವಾಗದ ಕಾರಣ). ಕಾಳುಗಳ ಲಭ್ಯತೆಯ ಕುಸಿತದಿಂದ 2014 ಗೆ ಹೋಲಿಸಿದಾಗ ಉಳ್ಳವರಿಗೆ ಯಾವ ರೀತಿಯ ಕುಸಿತವೂ ಅನುಭವಕ್ಕೆ ಬಂದಿರುವುದಿಲ್ಲ ಬದಲಿಗೆ ಅವರ ಬಳಕೆ ಹೆಚ್ಚೇ ಆಗಿರುತ್ತದೆ ಎಂಬುದನ್ನು ಮತ್ತೊಮ್ಮೆ ಗಮನದಲ್ಲಿಟ್ಟುಕೊಂಡರೆ, ಬಡತನದ ಮಟ್ಟವೂ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಹೆಚ್ಚಾಗಿದೆ ಎಂದೇ ಕಂಡು ಬರುತ್ತದೆ.
ಈ ಕುಸಿತದ ತೀವ್ರತೆಯನ್ನು ತಿಳಿಯಬೇಕಾದರೆ, ಭಾರತದಲ್ಲಿ ಈ ಮೊದಲೂ ಕೂಡ ಕಾಳುಗಳ ತಲಾ ಲಭ್ಯತೆ ಚೈನಾ ದೇಶದಲ್ಲಿನ ತಲಾ ಲಭ್ಯತೆಯ ಅರ್ಧದಷ್ಟು ಮಾತ್ರ ಎಂಬುದನ್ನು ಗಮನಿಸಬೇಕು. ಎನ್‌ಎಸ್‌ಎಸ್ ಕಾಲ್ಯೋರಿ ಮತ್ತು ಪ್ರೊಟೀನ್ ಸೇವನೆಯ ಮಾಹಿತಿಯನ್ನು ನಿಯಮಿತವಾಗಿ ಪ್ರಕಟಿಸುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದನ್ನು ನಿಲ್ಲಿಸಲಾಗಿದೆ. ಈ ರೀತಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡದಿರುವುದೇ ಒಂದು ವಿಶಿಷ್ಟ ಸರ್ವಾಧಿಕಾರಶಾಹಿಯ ಲಕ್ಷಣ.
ಇದು ಜನರನ್ನು ತಪ್ಪುಹಾದಿಗೆ ಎಳೆಯುವುದೇ ಅಲ್ಲದೆ ಪ್ರಜಾತಂತ್ರದಲ್ಲಿ ಜನತೆಯೇ ಸರ್ವೋಚ್ಚರಾಗಿದ್ದು, ಅವರಿಗೆ ಮಾಹಿತಿಯ ಹಕ್ಕು ಇದೆ ಎಂಬುದನ್ನು ಕೂಡ ನಿರಾಕರಿಸುತ್ತದೆ. ಸಂವಿಧಾನದ ಪ್ರಕಾರ ಸರಕಾರ ಇರುವುದು ಜನತೆಯ ಸೇವೆಗಾಗಿ, ಆದ್ದರಿಂದ ಅವರಿಂದ ಯಾವ ಮಾಹಿತಿಯನ್ನೂ ತಡೆದಿಡುವಂತಿಲ್ಲ. ಇದು ಸರ್ಕಾರದ ಅಸಾಧಾರಣ ಮೂರ್ಖತೆಯ ಕೃತ್ಯವೂ ಆಗಿದೆ. ಏಕೆಂದರೆ, ನಿಜವಾಗಿಯೂ ಬಡತನ ಮತ್ತು ನಿರುದ್ಯೋಗವನ್ನು ಅನುಭವಿಸುತ್ತಿರುವ ಜನತೆಗೆ ಅವರ ಪರಿಸ್ಥಿತಿಗಳಿಗೆ ಸಂಬಂಧಪಟ್ಟ ಅಂಕಿ-ಅಂಶಗಳನ್ನು ತಡೆ ಹಿಡಿಯುವ ಮೂಲಕ ತಮಗೆ ಬಡತನ, ನಿರುದ್ಯೋಗ ಇಲ್ಲ ಎಂದು ಅವರು ಯೋಚಿಸುವಂತೆ ಮಾಡಬಹುದು ಎಂದು ಈ ಸರಕಾರ ನಂಬಿದೆ!
–ಪ್ರೊ. ಪ್ರಭಾತ್ಪಟ್ನಾಯಕ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ
ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದಾಗಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಮಹತ್ವದ ಜವಾಬ್ದಾರಿಯನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಿದೆ.
ಈ ನೇಮಕ ಕೇವಲ ಸಂಘಟನಾತ್ಮಕ ಬದಲಾವಣೆಯಲ್ಲ. ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ದಿಕ್ಕು, ಪಕ್ಷದ ಒಳಾಂಗಣ ಸಮತೋಲನ ಮತ್ತು ಭವಿಷ್ಯದ ಚುನಾವಣಾ ತಂತ್ರಗಳಿಗೆ ಇದು ಪ್ರಮುಖ ಸೂಚನೆಯಾಗಿದೆ. ಹಲವು ದಶಕಗಳ ರಾಜಕೀಯ ಅನುಭವ, ಸಂಘಟನಾ ಕೌಶಲ್ಯ ಮತ್ತು ಹೈಕಮಾಂಡ್‌ಗೆ ನಿಕಟ ಸಂಪರ್ಕ ಹೊಂದಿರುವ ಹರಿಪ್ರಸಾದ್ ಅವರು ಈಗ ರಾಜ್ಯ ಕಾಂಗ್ರೆಸ್‌ನ ನೂತನ ಸಾರಥಿಯಾಗಿ ಹೊರಹೊಮ್ಮಿದ್ದಾರೆ.
ಆರಂಭಿಕ ಜೀವನ ಮತ್ತು ಶಿಕ್ಷಣ
ಬಿ.ಕೆ. ಹರಿಪ್ರಸಾದ್ ಅವರು 1954ರ ಜುಲೈ 29ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎ. ಕೆಂಪಯ್ಯ ಹಾಗೂ ತಾಯಿ ಕೆ. ಗುಣಾವತಿ. ಬಾಲ್ಯದಿಂದಲೇ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳತ್ತ ಆಸಕ್ತಿ ಹೊಂದಿದ್ದ ಅವರು ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣ ಪಡೆದರು. ವಿದ್ಯಾರ್ಥಿ ಜೀವನದಲ್ಲಿಯೇ ಕಾಂಗ್ರೆಸ್ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡ ಅವರು ಮುಂದೆ ಪೂರ್ಣಾವಧಿ ರಾಜಕಾರಣಿಯಾಗಿ ಬೆಳೆದರು.
ವಿದ್ಯಾರ್ಥಿ ರಾಜಕಾರಣದಿಂದ ರಾಷ್ಟ್ರೀಯ ಮಟ್ಟದ ನಾಯಕತ್ವದವರೆಗೆ
ಹರಿಪ್ರಸಾದ್ ಅವರ ರಾಜಕೀಯ ಬದುಕು ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳಿಂದ ಆರಂಭವಾಯಿತು. ಸಂಘಟನಾ ರಾಜಕಾರಣದಲ್ಲಿ ತೋರಿದ ಸಾಮರ್ಥ್ಯದಿಂದ ಅವರು ಶೀಘ್ರದಲ್ಲೇ ಪಕ್ಷದ ಹಿರಿಯ ನಾಯಕರ ಗಮನ ಸೆಳೆದರು.
ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಅವರು, ಹಲವು ರಾಜ್ಯಗಳ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಹೈಕಮಾಂಡ್‌ನೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ನಾಯಕರಲ್ಲಿ ಹರಿಪ್ರಸಾದ್ ಪ್ರಮುಖರು ಎಂದು ಪರಿಗಣಿಸಲಾಗುತ್ತದೆ.
ಬಿ.ಕೆ. ಹರಿಪ್ರಸಾದ್ ಅವರು ಹಲವು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1990ರಿಂದಲೇ ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಾ ಬಂದಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಹಲವು ವಿಷಯಗಳ ಬಗ್ಗೆ ಧ್ವನಿ ಎತ್ತಿದ ಅವರು ಸಂಸತ್ತಿನ ಚರ್ಚೆಗಳಲ್ಲಿ ಗಮನ ಸೆಳೆದಿದ್ದರು.
ಅವರು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪೈಪೋಟಿ ನಡೆಸಿದ್ದರು. ಸೋಲು ಕಂಡಿದ್ದರೂ ರಾಷ್ಟ್ರೀಯ ರಾಜಕೀಯದಲ್ಲಿ ಅವರ ಸ್ಥಾನಮಾನ ಮತ್ತಷ್ಟು ಬಲವತ್ತಾಯಿತು.
1999ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಜಯ ಸಾಧಿಸಲು ಸಾಧ್ಯವಾಗದಿದ್ದರೂ ಅವರು ಕಾಂಗ್ರೆಸ್‌ನ ಪ್ರಮುಖ ಮುಖವಾಗಿ ಗುರುತಿಸಿಕೊಂಡರು.
ಸಂಘಟನಾ ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಕಾರಣ, ಚುನಾವಣಾ ಗೆಲುವಿಗಿಂತ ಪಕ್ಷ ನಿರ್ಮಾಣದಲ್ಲಿ ಅವರ ಪಾತ್ರವೇ ಹೆಚ್ಚು ಗಮನ ಸೆಳೆಯಿತು.
ಕಾಂಗ್ರೆಸ್ ಸಂಘಟನೆಯಲ್ಲಿ ‘ಟಾಸ್ಕ್ ಮಾಸ್ಟರ್’
ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್ ಅವರನ್ನು ಸಂಘಟನಾ ತಜ್ಞ ಎಂದು ಕರೆಯಲಾಗುತ್ತದೆ. ಪಕ್ಷ ಎದುರಿಸಿದ ಸಂಕಷ್ಟದ ಸಂದರ್ಭಗಳಲ್ಲಿ ಹಲವು ರಾಜ್ಯಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘಟನೆಯನ್ನು ಬಲಪಡಿಸಿದ ಅನುಭವ ಅವರಿಗೆ ಇದೆ.
ಇತ್ತೀಚಿನ ಅವಧಿಯಲ್ಲಿ ಅವರು ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ರಾಜಕೀಯದ ಸೂಕ್ಷ್ಮ ಸಮೀಕರಣಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸುವ ಶೈಲಿ ಅವರ ವಿಶೇಷತೆ ಎಂದು ಪಕ್ಷದ ನಾಯಕರು ಹೇಳುತ್ತಾರೆ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಹರಿಪ್ರಸಾದ್ ಅವರು ಹಲವು ದಶಕಗಳಿಂದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ಸಂದರ್ಭದಲ್ಲೂ ಅವರು ಸಮತೋಲನ ಸಾಧಿಸುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅವರು, 2022 ರಿಂದ 2023ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ನೀತಿಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವ ಮೂಲಕ ಅವರು ಗಮನ ಸೆಳೆದಿದ್ದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ
2026ರಲ್ಲಿ ಕರ್ನಾಟಕ ರಾಜಕೀಯದಲ್ಲಿ ನಡೆದ ನಾಯಕತ್ವ ಬದಲಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡರು. ಇದರ ಪರಿಣಾಮವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪಕ್ಷದೊಳಗೆ ಹಲವು ನಾಯಕರ ಹೆಸರುಗಳು ಕೇಳಿಬಂದಿದ್ದರೂ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿತು.
ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ಸಂಘಟನಾ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಿದೆ. ಪಕ್ಷದ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಹರಿಪ್ರಸಾದ್ ಅವರ ಅನುಭವ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಿಂದೆ ಹಲವು ರಾಜಕೀಯ ಕಾರಣಗಳಿವೆ. ಮೊದಲನೆಯದಾಗಿ, ಅವರು ಯಾವುದೇ ಒಂದು ಗುಂಪಿಗೆ ಸೀಮಿತವಾಗದ ನಾಯಕ ಎಂಬ ಚಿತ್ರಣ ಹೊಂದಿದ್ದಾರೆ. ಎರಡನೆಯದಾಗಿ, ಸಂಘಟನಾ ಅನುಭವ ಅಪಾರವಾಗಿದೆ. ಮೂರನೆಯದಾಗಿ, ಹೈಕಮಾಂಡ್‌ಗೆ ಅತ್ಯಂತ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರು. ನಾಲ್ಕನೆಯದಾಗಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಾಮರ್ಥ್ಯ ಅವರಿಗಿದೆ ಎಂದು ಕಾಂಗ್ರೆಸ್ ನಾಯಕತ್ವ ನಂಬಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಅವರ ಮುಂದಿರುವ ಸವಾಲುಗಳು ಸಣ್ಣದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸಂಘಟನೆಯನ್ನು ಸದೃಢವಾಗಿಡುವುದು ದೊಡ್ಡ ಜವಾಬ್ದಾರಿ. ಕಾರ್ಯಕರ್ತರ ಅಸಮಾಧಾನ, ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡ, ಪ್ರಾದೇಶಿಕ ಸಮೀಕರಣಗಳು ಮತ್ತು ಜಾತಿ ಆಧಾರಿತ ರಾಜಕೀಯ ಬೇಡಿಕೆಗಳನ್ನು ಸಮತೋಲನಗೊಳಿಸಬೇಕಾಗಿದೆ.
ಇದರ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಕಾಂಗ್ರೆಸ್ ಸಂಘಟನೆಯನ್ನು ನಿರಂತರ ಚಟುವಟಿಕೆಯಲ್ಲಿ ಇರಿಸುವುದು ಅವರ ಪ್ರಮುಖ ಗುರಿಯಾಗಲಿದೆ.
ಹರಿಪ್ರಸಾದ್ ಅವರು ಹೆಚ್ಚು ಪ್ರಚಾರಪ್ರಿಯ ರಾಜಕಾರಣಿಯಲ್ಲ. ಸಂಘಟನೆಯೊಳಗೆ ಕೆಲಸ ಮಾಡುವ ನಾಯಕ ಎಂಬ ಹೆಗ್ಗಳಿಕೆ ಅವರಿಗೆ ಇದೆ. ಕಾರ್ಯಕರ್ತರೊಂದಿಗೆ ನೇರ ಸಂಪರ್ಕ, ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಮತ್ತು ತಾಳ್ಮೆಯ ರಾಜಕೀಯ ಅವರ ಕಾರ್ಯಶೈಲಿಯ ಮುಖ್ಯ ಲಕ್ಷಣಗಳು.
ಅವರ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳು ಬಂದಿದ್ದರೂ ಪಕ್ಷದ ಮೇಲಿನ ನಿಷ್ಠೆ ಪ್ರಶ್ನಾತೀತವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಲವು ಬಾರಿ ಅವರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿದೆ.
ರಾಜಕೀಯದ ಜೊತೆಗೆ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿರುವ ಹರಿಪ್ರಸಾದ್ ಅವರು ಉಷಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಬ್ಬ ಪುತ್ರಿಯಿದ್ದಾರೆ. ಕುಟುಂಬ ಜೀವನವನ್ನು ರಾಜಕೀಯದಿಂದ ಸಾಧ್ಯವಾದಷ್ಟು ದೂರ ಇಡುವ ನಾಯಕ ಎಂಬ ಹೆಸರನ್ನು ಅವರು ಗಳಿಸಿದ್ದಾರೆ.
ಭವಿಷ್ಯದ ರಾಜಕೀಯ ಪಾತ್ರ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಹರಿಪ್ರಸಾದ್ ಅವರ ರಾಜಕೀಯ ಜೀವನದ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರ ಮತ್ತು ಪಕ್ಷ ಸಂಘಟನೆಯ ನಡುವೆ ಸಮನ್ವಯ ಸಾಧಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಲಿದೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ತಂತ್ರ ರೂಪಿಸುವುದು, ಕಾರ್ಯಕರ್ತರ ಬಲವರ್ಧನೆ, ಚುನಾವಣಾ ಸಿದ್ಧತೆ ಮತ್ತು ಹೈಕಮಾಂಡ್‌ನೊಂದಿಗೆ ಸಮನ್ವಯ ಸಾಧಿಸುವ ಪ್ರಮುಖ ಹೊಣೆಗಾರಿಕೆ ಅವರ ಮೇಲಿದೆ. ಈ ಎಲ್ಲ ಸವಾಲುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಕರ್ನಾಟಕ ಕಾಂಗ್ರೆಸ್‌ನ ಮುಂದಿನ ರಾಜಕೀಯ ಭವಿಷ್ಯ ಬಹುಮಟ್ಟಿಗೆ ಅವಲಂಬಿತವಾಗಿದೆ.
ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಸಂಘಟನೆಯಲ್ಲಿ ದುಡಿದಿರುವ ಬಿ.ಕೆ. ಹರಿಪ್ರಸಾದ್ ಇಂದು ಕರ್ನಾಟಕ ಕಾಂಗ್ರೆಸ್‌ನ ಅತ್ಯುನ್ನತ ಸಂಘಟನಾ ಹುದ್ದೆಯನ್ನು ಅಲಂಕರಿಸಿದ್ದಾರೆ. ವಿದ್ಯಾರ್ಥಿ ರಾಜಕಾರಣದಿಂದ ಆರಂಭವಾದ ಅವರ ಪಯಣ ರಾಜ್ಯಸಭೆ, ರಾಷ್ಟ್ರೀಯ ಸಂಘಟನೆ, ವಿಧಾನ ಪರಿಷತ್ ಮತ್ತು ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನವರೆಗೆ ತಲುಪಿದೆ.
ಅನುಭವ, ಸಂಘಟನಾ ಕೌಶಲ್ಯ, ರಾಜಕೀಯ ಪ್ರೌಢಿಮೆ ಮತ್ತು ಪಕ್ಷದ ಮೇಲಿನ ನಿಷ್ಠೆ ಎಂಬ ನಾಲ್ಕು ಅಂಶಗಳು ಅವರ ರಾಜಕೀಯ ವ್ಯಕ್ತಿತ್ವದ ಪ್ರಮುಖ ಗುರುತುಗಳಾಗಿವೆ. ಕರ್ನಾಟಕ ಕಾಂಗ್ರೆಸ್ ಹೊಸ ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ, ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವ ಪಕ್ಷಕ್ಕೆ ಹೊಸ ಶಕ್ತಿ ತುಂಬುತ್ತದೆಯೇ ಎಂಬುದನ್ನು ರಾಜ್ಯದ ರಾಜಕೀಯ ಕುತೂಹಲದಿಂದ ಗಮನಿಸುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಮುನ್ನೋಟ: ಜೀವನಕ್ರಮವಾಗಿ ಪ್ರಜಾಪ್ರಭುತ್ವ
ಪ್ರಜಾಪ್ರಭುತ್ವವು ಕೇವಲ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲ; ಅದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವ ಒಂದು ಉದಾತ್ತ ಜೀವನಕ್ರಮ. ಸೈದ್ಧಾಂತಿಕವಾಗಿ ಪ್ರಜಾಪ್ರಭುತ್ವವು ‘ನಿಷ್ಪಕ್ಷಪಾತ’ ಮನೋಭಾವವನ್ನು ಪ್ರತಿಪಾದಿಸುತ್ತದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವವು ಕೇವಲ ಕಾಗದದ ಮೇಲಿನ ವಾಕ್ಯವಾಗದೆ, ಹುಟ್ಟಿನಿಂದ ಹೇರಲ್ಪಟ್ಟ ಶ್ರೇಣೀಕೃತ ವ್ಯವಸ್ಥೆಯ ಗೋಡೆಗಳನ್ನು ಕೆಡವುವ ಶಕ್ತಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ದೇಶದ ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನಕ್ಕೇರಲು ಸಾಧ್ಯವಿರುವುದು ಈ ವ್ಯವಸ್ಥೆಯ ಅತಿದೊಡ್ಡ ಯಶಸ್ಸು.
ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಬಲ
ಸಾಮಾಜಿಕ ನ್ಯಾಯವು ಪ್ರಜಾಪ್ರಭುತ್ವದ ಅಂತರಾತ್ಮವಿದ್ದಂತೆ. ಐತಿಹಾಸಿಕವಾಗಿ ಶೋಷಣೆಗೆ ಒಳಗಾದ ಸಮುದಾಯಗಳಿಂದ ಬಂದ ವ್ಯಕ್ತಿಗಳು ನಾಯಕತ್ವದ ಸ್ಥಾನಕ್ಕೇರುವುದು ಹೊರನೋಟಕ್ಕೆ ಒಂದು ಪವಾಡದಂತೆ ಭಾಸವಾಗಬಹುದು. ಆದರೆ, ವಾಸ್ತವದಲ್ಲಿ ಇದು ಸಂವಿಧಾನ ನೀಡಿರುವ ‘ಮತದಾನದ ಹಕ್ಕು’ ಮತ್ತು ‘ಪ್ರಾತಿನಿಧ್ಯದ ಅವಕಾಶ’ಗಳ ಫಲಶೃತಿಯಾಗಿದೆ. ಪ್ರಜಾಪ್ರಭುತ್ವವು ಕೇವಲ ಬಹುಮತದ ಆಡಳಿತವಲ್ಲ, ಬದಲಿಗೆ ಅಲ್ಪಸಂಖ್ಯಾತ ಮತ್ತು ದಮನಿತ ಧ್ವನಿಗಳಿಗೂ ನೀತಿ ನಿರೂಪಣೆಯಲ್ಲಿ ಸಮಾನ ವೇದಿಕೆ ಕಲ್ಪಿಸುವ ಒಳಗೊಳ್ಳುವಿಕೆಯ (Inclusion) ಪ್ರಕ್ರಿಯೆಯಾಗಿದೆ. ಅಧಿಕಾರವು ಕೆಲವೇ ಜನರ ಕೈಯಲ್ಲಿ ಕೇಂದ್ರಿಕೃತವಾಗದೆ, ವಿಕೇಂದ್ರೀಕರಣದ ಮೂಲಕ ಸಾಮಾನ್ಯ ಜನರಿಗೂ ತಲುಪಿದಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳುತ್ತದೆ.
ನಾಯಕತ್ವದ ನೈತಿಕತೆ ಮತ್ತು ಸಾಂವಿಧಾನಿಕ ಬದ್ಧತೆ
ಪ್ರಜಾಪ್ರಭುತ್ವದ ಅತ್ಯಂತ ನಿರ್ಣಾಯಕ ಅಂಶವೆಂದರೆ ಅಧಿಕಾರವನ್ನು ಪಡೆದವರ ನೈತಿಕ ನಡೆ. ಪ್ರಜಾಪ್ರಭುತ್ವದ ಒತ್ತಾಸೆಯಿಂದ ಅವಕಾಶ ಮತ್ತು ಅಧಿಕಾರವನ್ನು ಪಡೆಯುವ ಪ್ರತಿಯೊಬ್ಬರೂ ಪ್ರಜಾಸತ್ತಾತ್ಮಕ ನಿಲುವುಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುವ ನೈತಿಕತೆಯನ್ನು ಹೊಂದಿರಬೇಕಾಗುತ್ತದೆ. ಅಧಿಕಾರವು ಒಂದು ಸೌಲಭ್ಯವಲ್ಲ, ಅದೊಂದು ಜವಾಬ್ದಾರಿ. ಯಾವ ವ್ಯವಸ್ಥೆಯು ಒಬ್ಬ ವ್ಯಕ್ತಿಯನ್ನು ಸಾಮಾನ್ಯ ಸ್ಥಿತಿಯಿಂದ ನಾಯಕತ್ವದ ಸ್ಥಾನಕ್ಕೆ ಏರಿಸುತ್ತದೆಯೋ, ಅದೇ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿಹಿಡಿಯುವುದು ಆ ನಾಯಕನ ಪರಮ ಧರ್ಮ. ಸಾಂವಿಧಾನಿಕ ಆಶಯಗಳಿಗೆ ದ್ರೋಹ ಬಗೆಯದೆ, ವೈಯಕ್ತಿಕ ಹಿತಾಸಕ್ತಿಗಿಂತ ಜನಹಿತವೇ ದೊಡ್ಡದು ಎಂಬ ನಿಲುವು ತಳೆದಾಗ ಮಾತ್ರ ಅಧಿಕಾರಕ್ಕೆ ಸಾರ್ಥಕತೆ ದೊರೆಯುತ್ತದೆ.
ಐತಿಹಾಸಿಕ ಪ್ರೇರಣೆ: ಅಬ್ರಹಾಂ ಲಿಂಕನ್ ಎಂಬ ಮಾದರಿ
ಪ್ರಜಾಪ್ರಭುತ್ವದ ಇತಿಹಾಸವನ್ನು ಚರ್ಚಿಸುವಾಗ ಅಬ್ರಹಾಂ ಲಿಂಕನ್ ಅವರ ಹೆಸರು ಅನಿವಾರ್ಯ. “ಜನರಿಗಾಗಿ, ಜನರಿಂದ, ಜನರಿಗೋಸ್ಕರ” ಎಂಬ ಅವರ ಸರಳ ವ್ಯಾಖ್ಯಾನವು ಜಗತ್ತಿನಾದ್ಯಂತ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಭದ್ರ ಬುನಾದಿ ಹಾಕಿತು. ಒಬ್ಬ ಸಾಮಾನ್ಯ ಹಿನ್ನೆಲೆಯ ವ್ಯಕ್ತಿ ಅಮೆರಿಕದ ಅಧ್ಯಕ್ಷನಾಗಿ ಗುಲಾಮಗಿರಿಯ ವಿರುದ್ಧ ಹೋರಾಡಿದ್ದು, ಪ್ರಜಾಪ್ರಭುತ್ವದ ಗುಣಕ್ಕೆ (Flexibility) ಸಾಕ್ಷಿಯಾಗಿದೆ. ಲಿಂಕನ್ ಅವರ ಹೋರಾಟವು ಮಾನವೀಯತೆ ಮತ್ತು ಸಮಾನತೆಯನ್ನು ಪ್ರಜಾಪ್ರಭುತ್ವದ ಅನಿವಾರ್ಯ ಅಂಗವನ್ನಾಗಿಸಿತು, ಇದು ಇಂದಿಗೂ ಜಾಗತಿಕ ರಾಜಕೀಯಕ್ಕೆ ದಾರಿದೀಪವಾಗಿದೆ.
ಸಿನಿಮಾ, ಸಮಾಜ ಮತ್ತು ರಾಜಕೀಯ ನಾಯಕತ್ವದ ಮನ್ವಂತರ
ತಮಿಳುನಾಡಿನಂತಹ ರಾಜ್ಯಗಳಲ್ಲಿ ರಾಜಕೀಯವು ಯಾವಾಗಲೂ ಸಾಮಾಜಿಕ ನ್ಯಾಯದ ಪ್ರಯೋಗಶಾಲೆಯಾಗಿ ಕಾರ್ಯನಿರ್ವಹಿಸಿದೆ. ದ್ರಾವಿಡ ಚಳವಳಿಯ ಹಿನ್ನೆಲೆಯಲ್ಲಿ ಬೆಳೆದು ಬಂದ ಇಲ್ಲಿನ ರಾಜಕೀಯ ಸಂಸ್ಕೃತಿಯಲ್ಲಿ, ಸಿನಿಮಾ ರಂಗದ ವ್ಯಕ್ತಿಗಳನ್ನು ಕೇವಲ ನಟರನ್ನಾಗಿ ನೋಡದೆ, ತಮ್ಮ ಸಾಮಾಜಿಕ ಆಶೋತ್ತರಗಳನ್ನು ಈಡೇರಿಸುವ ‘ಪ್ರತಿನಿಧಿ’ಗಳಾಗಿ ಜನರು ಸ್ವೀಕರಿಸುತ್ತಾ ಬಂದಿದ್ದಾರೆ. ಇತ್ತೀಚಿನ ವಿದ್ಯಮಾನಗಳಲ್ಲಿ ಸಿ. ಜೋಸೆಫ್ ವಿಜಯ್ (ನಟ ವಿಜಯ್) ಅವರಂತಹ ವ್ಯಕ್ತಿಗಳು ರಾಜಕೀಯ ಪ್ರವೇಶದ ಹಾದಿಯಲ್ಲಿರುವುದು ಈ ಪರಂಪರೆಯ ಮುಂದುವರಿಕೆಯಾಗಿದೆ. ಜನರು ಇಂತಹ ನಾಯಕರಲ್ಲಿ ಒಬ್ಬ ‘ಸ್ಟಾರ್’ಗಿಂತ ಹೆಚ್ಚಾಗಿ, ಶೋಷಿತರ ಪರವಾಗಿ ಧ್ವನಿ ಎತ್ತುವ ಮತ್ತು ಅಧಿಕಾರದ ವಿಕೇಂದ್ರೀಕರಣಕ್ಕೆ ಶ್ರಮಿಸುವ ನಾಯಕತ್ವವನ್ನು ನಿರೀಕ್ಷಿಸುತ್ತಾರೆ.
ಭವಿಷ್ಯದ ಆಶಯ
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಜಾಪ್ರಭುತ್ವವು ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ತನ್ನನ್ನು ತಾನು ರೂಪಿಸಿಕೊಳ್ಳುತ್ತಿದೆ. ಅಧಿಕಾರವು ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ಸಾಧನವಾಗಬೇಕೇ ಹೊರತು, ಅದು ಕೇವಲ ಆಡಳಿತ ನಡೆಸುವ ಅಧಿಕಾರವಲ್ಲ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಅಧಿಕಾರಸ್ಥರ ನೈತಿಕ ಬದ್ಧತೆಯ ಮೂಲಕ ಮಾತ್ರ ಒಂದು ಸಮಾಜವು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವದ ಯಶಸ್ಸನ್ನು ಸಂಭ್ರಮಿಸಲು ಸಾಧ್ಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
-
ದಿನದ ಸುದ್ದಿ3 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ದಿನದ ಸುದ್ದಿ15 hours agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ


