ದಿನದ ಸುದ್ದಿ
ಡಾ.ಗಂಗುಬಾಯಿ ಹಾನಗಲ್ ವಿವಿ ಕುಲಪತಿ ಆಯ್ಕೆ ಪ್ರಕ್ರಿಯೆಯಲ್ಲಿ ರಾಜಕೀಯ : ಅನ್ಯವಿಷಯ ಪ್ರಾಧ್ಯಾಪಕರ ನೇಮಕಕ್ಕೆ ಮಾಸ್ಟರ್ ಪ್ಲಾನ್!!
ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗುಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯದ ಕುಲಪತಿಗಳ ಆಯ್ಕೆಯ ವಿಚಾರದಲ್ಲಿ ರಾಜಕೀಯತೆ ನಡೆಯುತ್ತಿದೆ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.
ಯುಜಿಸಿ ನಿಯಾಮವಳಿಯ ಪ್ರಕಾರ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಷಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ,ಹಾಗೂ ವಿಷಯದಲ್ಲಿ ಅನುಭವವನ್ನು ಹೊಂದಿರುವ ಪ್ರಾಧ್ಯಾಪಕರನ್ನು ಕುಲಪತಿಯನ್ನಾಗಿ ಮಾಡಬೇಕೆಂಬ ನಿಯಮವಿದೆ. ಈ ಹಿಂದೆ ಅನ್ಯ ಭಾಷೆಯ ಪ್ರಾಧ್ಯಾಪಕರನ್ನು ಒಳಗೊಂಡಂತೆ ಕುಲಪತಿ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು ಹಾಗು ಶಿಫಾರಸ್ಸು ಮಾಡಲಾಗಿತ್ತು ಆದ್ರೆ ನಿಯಮಾವಳಿಯನ್ನು ಮೀರಿ ಸೆಲೆಕ್ಷನ್ ನೆಡೆದಿದೆ ಎಂಬ ಕಾರಣಕ್ಕಾಗಿಯೇ ಕಲಪತಿಯ ಆಯ್ಕೆಯನ್ನು ರಾಜ್ಯಪಾಲರು ಹಿಂದಿರುಗಿಸಿದ್ದರು . ಈಗ ಅದೇ ರೀತಿ ಮತ್ತೆದೆ ಪ್ರಯತ್ನ ನಡೆಯುತ್ತಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.
ಮಂಗಳವಾರ(16/07/19) ನೆಡದ ಉನ್ನತ ಶಿಕ್ಷಣದ ಸೆಲೆಕ್ಷನ್ ಕಮಿಟಿ ಸಭೆಯಲ್ಲಿ ಯುಜಿಸಿ ನಿಯಮಕ್ಕೆ ವಿರುದ್ಧವಿದ್ದರೂ, ಅನ್ಯಭಾಷೆಯ ವಿಷಯ ತಜ್ಞರ ಹೆಸರನ್ನೇ ಮತ್ತೆ ಪ್ರಸ್ಥಾಪಿಸಲಾಗಿದೆ ಹಾಗೆ ವಯೋಮಾನ ಮೀರಿದ ಪ್ರದ್ಯಾಪಕರನ್ನು ಶಿಫಾರಸ್ಸು ಮಾಡಲಾಗಿದೆ . ಇಂಗ್ಲೀಷ್ ನಿವೃತ್ತಿ ಪ್ರಾಧ್ಯಾಪಕರಾಗಿರುವ ಕೆ.ಟಿ ಸುನೀತಾ, ನಿವೃತ್ತ ಐಎಎಸ್ ಅಧಿಕಾರಿ ಮದ್ದು ಮೋಹನ್, ಸಂಗೀತ ನಿವೃತ್ತಿ ಪ್ರಾಧ್ಯಾಪಕಿ ಬಿ.ಎಂ ಜಯಶ್ರೀಯರ (ಎಂ ಪಿ ಎಸ )ಹೆಸರು ಕುಲಪತಿಯ ಸ್ಥಾನಕ್ಕೆ ಕೇಳಿಬರುತ್ತಿದೆ. ಮೂರೂ ಆಯಾರ್ಥಿಗಳಿಗು ಈಗಾಗಲೇ 63 ವರ್ಷ ಮೀರಿರುತ್ತಾರೆ ಯಾರೋಬರಿಗೂ ನಾಲ್ಕು ವರೆ ವರ್ಷಕಗಳ ಕುಲಪತಿ ಅವಧಿಯು ಪೂರ್ಣವಾಹಿಸಲು ಸಾಧ್ಯವಾಗುವುದಿಲ್ಲ ಅದಲ್ಲದೆ ಇಲ್ಲಿಯವರೆಗೂ ಈ ರೀತಿಯ ನಿಯಮ ಉಲ್ಲಂಘನೆ ಆಗಿಲ್ಲ ಈ ಕುತಂತ್ರಗಳನ್ನು ನೋಡಿದರೆ ರಾಜಕೀಯ ಕೈವಾಡ ಸ್ಪಷ್ಟವಾಗಿ ಕಾಣುತ್ತದೆ , ಈ ಸ್ಥಾನಕ್ಕೆ ಅರ್ಹತೆಯಿಲ್ಲದಿದ್ದರೂ ಅಂತಿಮವಾಗಿದೆ.
ಮೈಸೂರಿನ ಡಾ. ಹಂಗುಬಾಯಿ ಹಾನಗಲ್ ವಿಶ್ವ ವಿದ್ಯಾನಿಲಯವೂ ಆರಂಭಗೊಂಡು 10 ವರ್ಷವಾದರೂ ಒಳ ರಾಜಕೀಯತೆ, ವಿಷಯ ತಜ್ಞರ ಕೊರತೆಯಿಂದಾಗಿ ಇನ್ನೂ ಅಭಿವೃದ್ಧಿಯಾಗಬೇಕಾದ ಕೆಲಸಗಳು ಸಾಕಷ್ಟಿದೆ. ಇದರಿಂದ ವಿದ್ಯಾರ್ಥಿಗಳು ಕಲಾ ಆಸಕ್ತರು ಮತ್ತು ಕರ್ನಾಟಕ ಪ್ರದರ್ಶನ ಕಲೆಗಳ ಪದವೀಧರರ ಒಕ್ಕೂಟ ಪ್ರತಿವರ್ಷವೂ ಅಸಮಾಧಾನಕ್ಕೆ ಒಳಗಾಗುತ್ತಿದ್ದಾರೆ. ಈ ಹಿಂದೆ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿ ಗಳಿಗೆ ಈ ವಿಚಾರ ಕುರಿತು ದೂರು ನೀಡಲಾಗಿತ್ತು ಹಾಗಿದ್ದರೂ ಮತ್ತೆ ಅದೇ ಪ್ರಯತ್ನ ಮುಂದುವರಿದಿದೆ.
ಒಟ್ಟಾರೆಯಾಗಿ ಕುಲಪತಿ ಆಯ್ಕೆ ವಿಚಾರದಲ್ಲಿನ ರಾಜಕೀಯತೆಯಿಂದ ವಿಶ್ವವಿದ್ಯಾನಿಲಯ ಕೊರಗುತ್ತಿದೆ. ಈ ಭಾರಿ ಉತ್ತಮ ವಿಷಯ ತಜ್ಞರನ್ನೇ, ನಿಯಮಾವಳಿಯ ಪ್ರಕಾರ ಗರ್ವನರ್ ಆಯ್ಕೆ ಮಾಡಿ, ಯಾವುದೇ ರಾಜಕೀಯತೆಯನ್ನು ಮಾಡದೇ ವಿಶ್ವವಿದ್ಯಾನಿಲಯದ ಅಭಿವೃದ್ಧಿಗೆ ಸಹಕರಿಸಬೇಕೆಂಬುದು ಅಲ್ಲಿನ ಸಾರ್ವಜನಿಕರ ಸೇರಿದಂತೆ ವಿದ್ಯಾರ್ಥಿಗಳ ಮನವಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ
ಸುದ್ದಿದಿನ,ದಾವಣಗೆರೆ : ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಭರತ್ ಕುಮಾರ್ ಅವರು ಅಣಬೆಯ ಹೊಸ ಮೂರು ಶೀಲಿಂದ್ರ ಜಾತಿಗಳನ್ನು ಪತ್ತೆ ಹಚ್ಚಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಕರ್ನಾಟಕದ ಪಶ್ಚಿಮ ಘಟ್ಟಗಳ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಅರಣ್ಯ ಪ್ರದೇಶಗಳಲ್ಲಿ ನಡೆಸಿದ ಸಮಗ್ರ ಸಂಶೋಧನೆಯ ಫಲವಾಗಿ ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ಪಿಎಚ್‌ಡಿ ಸಂಶೋಧಕರಾದ ಭರತ್ ಕುಮಾರ್ ಎಸ್ ಅವರು ಮೂರು ಹೊಸ ಶಿಲೀಂಧ್ರ (ಮಶ್ರೂಮ್) ಜಾತಿಗಳನ್ನು ಪತ್ತೆಹಚ್ಚಿದ್ದಾರೆ.
ಮರಕುಲುಷಣ ಶಿಲೀಂಧ್ರಗಳ ವೈವಿಧ್ಯತೆ, ದಾಖಲೆಗೊಳಿಸುವಿಕೆ ಹಾಗೂ ಜೈವ ನಿಯಂತ್ರಣ ಸಾಮರ್ಥ್ಯದ ಅಧ್ಯಯನದ ಅಂಗವಾಗಿ ಈ ಸಂಶೋಧನೆ ಕೈಗೊಳ್ಳಲಾಗಿತ್ತು.
ಈ ಅಧ್ಯಯನವನ್ನು ಕ್ರಮಬದ್ಧ ವೈಜ್ಞಾನಿಕ ವಿಧಾನದಲ್ಲಿ ನಡೆಸಲಾಗಿದ್ದು, ಕ್ಷೇತ್ರ ಸಂಗ್ರಹಣೆಯ ವೇಳೆ ತಾಜಾ ಹಾಗೂ ಪರಿಪಕ್ವ ಫಲಧಾರಕ ದೇಹಗಳನ್ನು ಅವುಗಳ ಸ್ವಾಭಾವಿಕ ವಾಸಸ್ಥಳಗಳಿಂದ ಸಂಗ್ರಹಿಸಿ, ಸ್ಥಳದ ವಿವರಗಳು (GPS, ಎತ್ತರ), ಸಬ್ಸ್ಟ್ರೇಟ್ (ಮಣ್ಣು, ಮರ, ಆತಿಥೇಯ ಸಸ್ಯ), ದಿನಾಂಕ ಮತ್ತು ಪರಿಸರ ಮಾಹಿತಿ ದಾಖಲಿಸಲಾಗಿದೆ.
ಡಾ. ಎನ್. ಪ್ರವೀಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮತ್ತು ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ ಸಂಸ್ಥೆಯ ಅರಣ್ಯ ಪಥಾಲಜಿ ವಿಭಾಗದ ಹಿರಿಯ ವಿಜ್ಞಾನಿಯಾಗಿರುವ ಡಾ. ಮುತ್ತು ಕುಮಾರ್ ಅವರ ಸಹಯೋಗದಲ್ಲಿ ನಡೆದ ಈ ಸಂಶೋಧನೆಯಲ್ಲಿ Ganoderma swietenium, Fulvifomes ficicola ಹಾಗೂ Lachnocladium sevyakrishnarum ಎಂಬ ಮೂರು ಹೊಸ ಶಿಲೀಂಧ್ರ ಜಾತಿಗಳನ್ನು ಗುರುತಿಸಲಾಗಿದೆ.
ಮೊದಲ ಎರಡು ಜಾತಿಗಳಿಗೆ ಅವುಗಳ ಆತಿಥೇಯ ಮರಗಳಾದ Swietenia mahagoni ಮತ್ತು Ficus religiosa ಆಧಾರದ ಮೇಲೆ ಹೆಸರು ನೀಡಲಾಗಿದ್ದು, ಮೂರನೇ ಜಾತಿಯನ್ನು ಸಂಶೋಧಕರ ತಂದೆಯಾದ ಸೇವ್ಯ ನಾಯ್ಕ ಅವರ ಗೌರವಾರ್ಥವಾಗಿ Lachnocladium sevyakrishnarum ಎಂದು ನಾಮಕರಣ ಮಾಡಲಾಗಿದೆ.
ವರ್ಗೀಕರಣ (Taxonomy) ಮತ್ತು ವಂಶವೃಕ್ಷ (Phylogenetic) ಅಧ್ಯಯನಗಳ ಆಧಾರದ ಮೇಲೆ ಈ ಜಾತಿಗಳನ್ನು ಜಾಗತಿಕ ವಿಜ್ಞಾನ ಸಮುದಾಯಕ್ಕೆ ಪರಿಚಯಿಸಲಾಗಿದ್ದು, ಈ ಸಂಶೋಧನಾ ಫಲಿತಾಂಶಗಳು ಅಂತರರಾಷ್ಟ್ರೀಯ ಮಟ್ಟದ ಪೀರ್-ರಿವ್ಯೂ ಪತ್ರಿಕೆಗಳಾದ Journal of Sustainable Forestry (Taylor & Francis) ಮತ್ತು Indian Phytopathology (Springer Nature)ಗಳಲ್ಲಿ ಪ್ರಕಟವಾಗಿವೆ.
ಪಶ್ಚಿಮ ಘಟ್ಟಗಳು ಜಗತ್ತಿನ ಪ್ರಮುಖ ಜೈವ ವೈವಿಧ್ಯತೆಯ ಹಾಟ್‌ಸ್ಪಾಟ್ ಆಗಿರುವುದರಿಂದ, ಈ ಪತ್ತೆಗಳು ಅಲ್ಲಿ ಇನ್ನೂ ಅನಾವರಣಗೊಳ್ಳದ ಶಿಲೀಂಧ್ರ ವೈವಿಧ್ಯತೆಯನ್ನು ಹೈಲೈಟ್ ಮಾಡುತ್ತವೆ.
ಭರತ್ ಕುಮಾರ್ ಎಸ್ ಅವರು ತಮ್ಮ ಪಿಎಚ್‌ಡಿ ಸಂಶೋಧನಾ ಪಯಣದಲ್ಲಿ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕ ಕ್ಷೇತ್ರ ಕಾರ್ಯ, ಅಪರೂಪದ ಶಿಲೀಂಧ್ರ ಮಾದರಿಗಳ ಸಂಗ್ರಹಣೆ ಹಾಗೂ ಪ್ರಯೋಗಾಲಯದ ಅಣುಮಟ್ಟದ ವಿಶ್ಲೇಷಣೆಗಳ ಮೂಲಕ ಹಲವು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಇವರ ಸಂಶೋಧನೆ ಶಿಲೀಂಧ್ರಗಳ ವೈವಿಧ್ಯತೆಯನ್ನು ದಾಖಲಿಸುವುದರೊಂದಿಗೆ, ಅವುಗಳ ಜೈವ ನಿಯಂತ್ರಣ ಸಾಮರ್ಥ್ಯವನ್ನು ಅನ್ವೇಷಿಸಿ ಪರಿಸರ ಸ್ನೇಹಿ ರೋಗ ನಿಯಂತ್ರಣ ವಿಧಾನಗಳಿಗೆ ಹೊಸ ದಾರಿಯನ್ನು ತೆರೆದಿದೆ.
ಇದರ ಜೊತೆಗೆ, ಅವರು ತಮ್ಮ ಸಂಶೋಧನಾ ಲೇಖನಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಂಡಿಸಿದ್ದು, 2025ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ “ಯುವ ಸಂಶೋಧನಾ ವಿದ್ವಾಂಸ ಪ್ರಶಸ್ತಿ-2025” ಅನ್ನು ಪಡೆದಿದ್ದಾರೆ.
ಈ ಸಾಧನೆಗೆ ಪ್ರೋತ್ಸಾಹ ನೀಡಿದ ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ. ಫಾ. ರೋಷನ್ ಕ್ಯಾಸ್ಟೀಲಾನೊ ಹಾಗೂ ಉಪಕುಲಪತಿಗಳಾದ ರೆವ್. ಡಾ. ಫಾ. ವಿಕ್ಟರ್ ಲೋಬೋ ಎಸ್.ಜೆ ಅವರಿಗೆ, ಜೊತೆಗೆ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ನೀಲಂ ಮಿಶ್ರಾ ಅವರಿಗೆ ಸಂಶೋಧಕರು ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಶಿಲೀಂಧ್ರಗಳ ಮಹತ್ವವನ್ನು ಅರ್ಥಮಾಡಿಕೊಳ್ಳಲು ಈ ಪತ್ತೆಗಳು ಸಹಕಾರಿಯಾಗಿದ್ದು, ಭವಿಷ್ಯದ ಸಂಶೋಧನೆಗಳಿಗೆ ಮಹತ್ವದ ದಿಕ್ಕು ನೀಡುವಂತಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು
~ಗೋವರ್ಧನ ನವಿಲೇಹಾಳು
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಖಾಲಿಯಾದ ಈ ಕ್ಷೇತ್ರವು ಕುಟುಂಬದ ರಾಜಕೀಯ ಉತ್ತರಾಧಿಕಾರ, ಅಲ್ಪಸಂಖ್ಯಾತರ ಅಸಮಾಧಾನ ಮತ್ತು ಪಕ್ಷಾಂತರದ ಆರೋಪಗಳ ನಡುವೆ ತೀವ್ರ ಸ್ಪರ್ಧೆಯನ್ನು ಕಂಡಿತು. ಸುಮಾರು 5,708 ಮತಗಳ ಅಂತರದಿಂದ ಗೆದ್ದ ಸಮರ್ಥ್ ಅವರು ಶಾಮನೂರು ಕುಟುಂಬದ ಮೂರನೇ ಪೀಳಿಗೆಯ ಪ್ರತಿನಿಧಿಯಾಗಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಈ ಗೆಲುವು ಕಾಂಗ್ರೆಸ್‌ಗೆ ಸಂತೋಷದ ಸುದ್ದಿಯಾದರೂ, ಎಸ್‌ಡಿಪಿಐ ಪಡೆದ ಗಣನೀಯ 18,975 ಮತಗಳು ಮತ್ತು ಬಿಜೆಪಿಯ ತೀವ್ರ ಪೈಪೋಟಿ ರಾಜಕೀಯ ಸಮೀಕರಣಗಳಲ್ಲಿ ಹೊಸ ತಿರುವುಗಳನ್ನು ಸೂಚಿಸುತ್ತವೆ.
ಈ ಉಪಚುನಾವಣೆಯು ಕೇವಲ ಕ್ಷೇತ್ರೀಯ ಘಟನೆಯಾಗಿರದೆ, ಕರ್ನಾಟಕ ರಾಜಕೀಯದಲ್ಲಿ ಅಲ್ಪಸಂಖ್ಯಾತರ ಮತಬ್ಯಾಂಕ್, ಕುಟುಂಬ ರಾಜಕೀಯ ಮತ್ತು ಪ್ರತಿಪಕ್ಷದ ತಂತ್ರಗಳ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಯಿತು. ಶಾಮನೂರು ಕುಟುಂಬದ ದೀರ್ಘಕಾಲದ ಸೇವೆಯನ್ನು ಜನರು ಮೆಚ್ಚಿದ್ದರೂ, ಕಾಂಗ್ರೆಸ್‌ನಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನಿರಾಕರಣೆಯಿಂದಾಗಿ ಉಂಟಾದ ಅಸಮಾಧಾನವು ಎಸ್‌ಡಿಪಿಐಗೆ ಅವಕಾಶ ಮಾಡಿಕೊಟ್ಟಿತು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ತೀವ್ರ ಪ್ರಚಾರ ನಡೆಸಿದ್ದರೂ, ಕಾಂಗ್ರೆಸ್‌ನ ಅಭಿವೃದ್ಧಿ ಕಾರ್ಯಗಳು ಮತ್ತು ಐದು ಗ್ಯಾರಂಟಿಗಳ ಪ್ರಭಾವವು ಗೆಲುವಿಗೆ ನೆರವಾಯಿತು. ಆದರೆ ಈ ಗೆಲುವು ಸುಲಭವಾಗಿರಲಿಲ್ಲ; ಅದು ಎಲ್ಲಾ ಪಕ್ಷಗಳಿಗೂ ಪಾಠವನ್ನು ಕಲಿಸುತ್ತದೆ.
ಸಮರ್ಥ್ ಶಾಮನೂರು ಅವರ ಮುಂದಿನ ನಡೆ
ಕಿರಿಯ ವಯಸ್ಸಿನಲ್ಲಿ (ದೇಶದ ಎರಡನೇ ಅತಿ ಕಿರಿಯ ಶಾಸಕರಾಗಿ) ಗೆದ್ದ ಸಮರ್ಥ್ ಅವರು ತಮ್ಮ ಅಜ್ಜರ ರಾಜಕೀಯ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿಯಲ್ಲಿದ್ದಾರೆ. ಮುಂದಿನ ನಡೆಯು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರೀಕರಣಗೊಳ್ಳಬೇಕು. ದಾವಣಗೆರೆಯಂತಹ ನಗರ-ಗ್ರಾಮೀಣ ಮಿಶ್ರ ಕ್ಷೇತ್ರದಲ್ಲಿ ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವುದು ಮುಖ್ಯ. ಶಾಮನೂರು ಕುಟುಂಬದ ಹೆಸರು ಅಭಿವೃದ್ಧಿಗೆ ಸಮಾನವಾಗಿದೆ; ಇದನ್ನು ಮುಂದುವರಿಸಿ, ಎಲ್ಲಾ ಸಮುದಾಯಗಳ ನಡುವೆ ಸೇತುವೆಯಾಗಬೇಕು.
ವಿಶೇಷವಾಗಿ ಅಲ್ಪಸಂಖ್ಯಾತರ ಅಸಮಾಧಾನವನ್ನು ನಿವಾರಿಸುವುದು ಅಗತ್ಯ. ಟಿಕೆಟ್ ವಿವಾದದ ನಂತರ ಉಂಟಾದ ಬಿರುಕುಗಳನ್ನು ತುಂಬುವ ಮೂಲಕ ಏಕತೆಯ ಸಂದೇಶ ನೀಡಬೇಕು. ಯುವಕರಾಗಿರುವುದರಿಂದ ಆಧುನಿಕ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಪಾರದರ್ಶಕ ಆಡಳಿತದ ಮೂಲಕ ಹೊಸ ಚಿಂತನೆ ತರಬಹುದು. ರಾಜಕೀಯದಲ್ಲಿ ವೈಯಕ್ತಿಕ ದಾಳಿ ಬದಲು ನಿರ್ಮಾಣಾತ್ಮಕ ವಿಮರ್ಶೆಯನ್ನು ಪ್ರೋತ್ಸಾಹಿಸುವುದು ಅವರ ಯಶಸ್ಸಿಗೆ ಕಾರಣವಾಗುತ್ತದೆ. ಜನಸಂಪರ್ಕವನ್ನು ನಿರಂತರವಾಗಿ ಉಳಿಸಿಕೊಂಡು, ಕ್ಷೇತ್ರದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತುತಪಡಿಸುವುದು ಅವರ ಮುಂದಿನ ಗುರಿಯಾಗಬೇಕು. ಗೆಲುವು ಕುಟುಂಬದ ಆಸ್ತಿಯಲ್ಲ, ಜನರ ವಿಶ್ವಾಸದ ಫಲ; ಇದನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲು.
ಬಿಜೆಪಿಯ ಮುಂದಿನ ಸವಾಲುಗಳು
ಬಿಜೆಪಿ ಈ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನ ಒಳಜಗಳಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳಲು ವಿಫಲವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದೆ ಬಿಜೆಪಿಗೆ ಸವಾಲುಗಳು ಹಲವು: ಮೊದಲನೆಯದು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ನಡುವೆ ವಿಶ್ವಾಸಾರ್ಹತೆಯನ್ನು ಕಟ್ಟುವುದು. ಧ್ರುವೀಕರಣದ ತಂತ್ರಗಳು ಸೀಮಿತ ಯಶಸ್ಸು ನೀಡುತ್ತವೆ ಎಂಬುದು ಈ ಫಲಿತಾಂಶ ಸೂಚಿಸುತ್ತದೆ.
ಕ್ಷೇತ್ರದಲ್ಲಿ ಸ್ಥಳೀಯ ನಾಯಕರನ್ನು ಬಲಪಡಿಸುವುದು, ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನಸಂಪರ್ಕ ಹೆಚ್ಚಿಸುವುದು ಅಗತ್ಯ. ರಾಜ್ಯ ಮಟ್ಟದಲ್ಲಿ ಪ್ರತಿಪಕ್ಷದ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು ಮುಂದಿನ ಚುನಾವಣೆಗಳಲ್ಲಿ ನೆರವಾಗುತ್ತದೆ. ಈ ಗೆಲುವು ಕಾಂಗ್ರೆಸ್‌ಗೆ ಎಚ್ಚರಿಕೆಯಾಗಿದ್ದರೆ, ಬಿಜೆಪಿಗೆ ಕ್ರಿಯಾಶೀಲತೆಯ ಅಗತ್ಯವನ್ನು ತೋರಿಸುತ್ತದೆ.
ಎಸ್‌ಡಿಪಿಐ ಮುಂದಿನ ಸವಾಲು
ಎಸ್‌ಡಿಪಿಐ ಈ ಚುನಾವಣೆಯಲ್ಲಿ ಗಮನಾರ್ಹ ಮತಗಳನ್ನು ಪಡೆದು ತನ್ನ ಉಪಸ್ಥಿತಿಯನ್ನು ಸಾಬೀತುಪಡಿಸಿದೆ. ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಂ ಸಮುದಾಯದ ಅಸಮಾಧಾನವನ್ನು ಬಳಸಿಕೊಂಡು ತನ್ನ ಮತಬ್ಯಾಂಕ್‌ನ್ನು ವಿಸ್ತರಿಸಿದೆ. ಆದರೆ ಇದು ಸವಾಲುಗಳನ್ನೂ ತಂದಿದೆ. ಮುಂದೆ ಎಸ್‌ಡಿಪಿಐಗೆ ಬ್ರಾಡ್ ಆಪೀಲ್ ಅಗತ್ಯ – ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಆರ್ಥಿಕ-ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಉದ್ಯೋಗದಂತಹ ವಿಷಯಗಳಲ್ಲಿ ಎಲ್ಲರಿಗೂ ಸ್ಪಂದಿಸುವ ಧೋರಣೆ ಬೆಳೆಸಬೇಕು.
ಚುನಾವಣಾ ಅನಿಯಮಗಳ ಆರೋಪಗಳು ಮತ್ತು ಮುಖ್ಯ ಪಕ್ಷಗಳ ನಡುವಿನ ತಂತ್ರಗಳ ನಡುವೆ ಸಿಲುಕದೆ, ಸ್ವತಂತ್ರ ರಾಜಕೀಯವನ್ನು ಬಲಪಡಿಸುವುದು ಮುಖ್ಯ. ದೀರ್ಘಕಾಲದ ಯಶಸ್ಸಿಗೆ ಸಮುದಾಯಗಳ ನಡುವಿನ ಸೇತುವೆಯಾಗುವುದು ಅಗತ್ಯ; ಇಲ್ಲದಿದ್ದರೆ ಮತ ವಿಭಜನೆಯ ಆರೋಪಗಳು ಮುಂದುವರಿಯುತ್ತವೆ.
ಈ ಫಲಿತಾಂಶವು ಭಾರತೀಯ ಜನತಂತ್ರದ ಜೀವಂತತೆಯನ್ನು ತೋರಿಸುತ್ತದೆ. ಗೆಲುವು ಸಂಭ್ರಮಿಸುವುದರ ಜೊತೆಗೆ, ಸೋಲಿನಿಂದ ಪಾಠ ಕಲಿಯುವುದು ಎಲ್ಲಾ ಪಕ್ಷಗಳ ಕರ್ತವ್ಯ. ಸಮರ್ಥ್ ಶಾಮನೂರು ಅವರು ತಮ್ಮ ಯುವಕರ ಉತ್ಸಾಹ ಮತ್ತು ಕುಟುಂಬ ಪರಂಪರೆಯನ್ನು ಸಂಯೋಜಿಸಿ, ಎಲ್ಲಾ ವರ್ಗಗಳ ಜನರ ಸೇವೆಗೆ ಮುಂದಾಗಬೇಕು. ಕಾಂಗ್ರೆಸ್ ಅಂತರ್ಗತ ಏಕತೆಯನ್ನು ಬಲಪಡಿಸಬೇಕು. ಬಿಜೆಪಿ ಮತ್ತು ಎಸ್‌ಡಿಪಿಐ ತಮ್ಮ ತಂತ್ರಗಳನ್ನು ಪುನರ್ ಪರಿಶೀಲಿಸಿ, ಜನಕೇಂದ್ರಿತ ರಾಜಕೀಯಕ್ಕೆ ಮರಳಬೇಕು.
ದಾವಣಗೆರೆ ದಕ್ಷಿಣದ ಜನರು ಅಭಿವೃದ್ಧಿ ಮತ್ತು ಸಾಮರಸ್ಯವನ್ನು ಬಯಸುತ್ತಾರೆ. ಹೊಸ ಶಾಸಕರು ಈ ನಿರೀಕ್ಷೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ. ರಾಜಕೀಯವು ಸೇವೆಯಾಗಬೇಕೇ ವಿನಾ ಕುಟುಂಬ ಅಥವಾ ಸಮುದಾಯ ದ್ವೇಷದ ಆಟವಾಗಬಾರದು. ಈ ಉಪಚುನಾವಣೆಯ ಪಾಠಗಳು ರಾಜ್ಯದ ಭವಿಷ್ಯದ ಚುನಾವಣೆಗಳಿಗೆ ದಾರಿ ತೋರಿಸುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ದೇಗುಲಗಳಲ್ಲಿ ನಿಧಿ ಶೋಧನೆ ಯತ್ನ ; ಆರು ಜನರ ಬಂಧನ
ಸುದ್ದಿದಿನ,ದಾವಣಗೆರೆ:ತಾಲ್ಲೂಕಿನ ಕಾಡಜ್ಜಿ ಗ್ರಾಮದ ದೇಗುಲಗಳಲ್ಲಿ ನಿಧಿ ಶೋಧಿಸಲು ಯತ್ನಿಸಿದ ಆರು ಜನರ ಆರೋಪಿಗಳನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಾಡಜ್ಜಿ ಗ್ರಾಮದ ಬಸವರಾಜ (42), ಮಲೇಬೆನ್ನೂರಿನ ಪ್ರಕಾಶ ಆಚಾರಿ (48), ಮಂಜುನಾಥ (51), ಪ್ರಕಾಶ (42), ಹೊನ್ನಾವರ ತಾಲ್ಲೂಕಿನ ಇಡಗುಂಜಿ ಗ್ರಾಮದ ರಾಮನಾಥ ಪೈ (52), ಸಾಗರ ತಾಲ್ಲೂಕಿನ ಬ್ಯಾಕೋಡು ಗ್ರಾಮದ ಶ್ರೀಕಾಂತ ಭಟ್ (51) ಬಂಧಿತರು.
ಆರೋಪಿಗಳು ಏ. 22ರಂದು ರಾತ್ರಿ ಕಾಡಜ್ಜಿ ಗ್ರಾಮದ ಚೌಡಮ್ಮ ದೇಗುಲದಲ್ಲಿ ನಿಧಿ ಶೋಧ ಮಾಡಿದ್ದರು. ಏ.29ರಂದು ರಾತ್ರಿ ಪೇಟೆ ದುರುಗಮ್ಮ ದೇಗುಲದ ಬಳಿ ಜೆಸಿಬಿ ಮೂಲಕ ಗುಂಡಿ ತೆಗೆದಿದ್ದರು. ದುಷ್ಟ ಶಕ್ತಿ ಪೂಜೆ, ಹೋಮ– ಹವನ ಮಾಡಿ ಗರ್ಭಗುಡಿಯಲ್ಲಿ ನಿಧಿ ತೆಗೆಯಲು ಮುಂದಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಆರೋಪಿಗಳನ್ನು ಹಿಡಿಯಲು ಯತ್ನಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆಯ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಸುಗಮ ಮತ ಎಣಿಕೆಗೆ ಸಜ್ಜು
-
ಅಂಕಣ2 days agoಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು
-
ದಿನದ ಸುದ್ದಿ5 days agoದಾವಣಗೆರೆ | ದೇಗುಲಗಳಲ್ಲಿ ನಿಧಿ ಶೋಧನೆ ಯತ್ನ ; ಆರು ಜನರ ಬಂಧನ
-
ದಿನದ ಸುದ್ದಿ13 hours agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ

