ದಿನದ ಸುದ್ದಿ
ಜಾಗತಿಕ ಬಂಡವಾಳಶಾಹಿಯ ವ್ಯವಸ್ಥಾಗತ ಬಿಕ್ಕಟ್ಟು
- ನವ ಉದಾರ ಬಂಡವಾಳಶಾಹಿಯು ಈಗ ಆ ಬಿಕ್ಕಟ್ಟುಗಳಿಗಿಂತ ಭಿನ್ನವಾದ ಒಂದು ವ್ಯವಸ್ಥಾಗತ ಬಿಕ್ಕಟ್ಟಿಗೆ ಒಳಗಾಗಿದೆ. ತೇಪೆ ಹಚ್ಚುವ ಕೆಲಸಗಳ ಮೂಲಕ ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ; ಎಲ್ಲಿಯವರೆಗೆ ಹಣಕಾಸು ಬಂಡವಾಳದ ಯಜಮಾನಿಕೆ ಮುಂದುವರೆಯುತ್ತದೆಯೋ ಮತ್ತು ಜಾಗತಿಕ ಹಣಕಾಸಿನ ಹರಿವಿನ ಸುಳಿಗೆ ಸಿಕ್ಕಿದ ದೇಶ ದೇಶಗಳು ಆ ಸುಳಿಯಲ್ಲಿಯೇ ಉಳಿಯುತ್ತವೆಯೋ ಅಲ್ಲಿಯವರೆಗೆ ಈ ಬಿಕ್ಕಟ್ಟೂ ಮುಂದುವರೆಯುತ್ತದೆ, ಮತ್ತಷ್ಟು ಹದಗೆಡುತ್ತದೆ. ಇಂತಹ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಯಜಮಾನಿಕೆಯಿಂದ ಹೊರ ಬರಲು, ಪ್ರತಿಯೊಂದು ದೇಶದ ಒಳಗೂ, ಒಂದು ಪರ್ಯಾಯ ಅಜೆಂಡಾದೊಂದಿಗೆ ದುಡಿಯುವ ಜನತೆಯನ್ನು ಅಣಿನೆರೆಸಬೇಕಾಗುತ್ತದೆ.
ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಆಗಾಗ ಅಥವಾ ಚಕ್ರೀಯವಾಗಿ ಬಿಕ್ಕಟ್ಟುಗಳು ಉಂಟಾಗುತ್ತವೆ. ಅಂತಹ ಸಂದರ್ಭದಲ್ಲಿ, ವ್ಯವಸ್ಥೆಯ ಚೌಕಟ್ಟಿನೊಳಗೆ, ಅಂದರೆ ವ್ಯವಸ್ಥೆಯ ಪ್ರಚಲಿತ ವರ್ಗಗಳ ರೂಪ ರಚನೆ ಇವುಗಳಿಗೆ ಅನುಗುಣವಾಗಿ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗತ್ತದೆ. ಇದರಿಂದ ಬಿಕ್ಕಟ್ಟು ಮತ್ತಷ್ಟು ಹದಗೆಡುತ್ತದಷ್ಟೇ. ಈ ಅರ್ಥದಲ್ಲಿ ನವ ಉದಾರ ಬಂಡವಾಳಶಾಹಿಯು ಈಗ ಆ ಬಿಕ್ಕಟ್ಟುಗಳಿಗಿಂತ ಭಿನ್ನವಾದ ಒಂದು ವ್ಯವಸ್ಥಾಗತ ಬಿಕ್ಕಟ್ಟಿಗೆ ಒಳಗಾಗಿದೆ. ತೇಪೆ ಹಚ್ಚುವ ಕೆಲಸಗಳ ಮೂಲಕ ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ; ಈ ತೇಪೆದಾರಿಗಿಂತಲೂ ಹೆಚ್ಚು ಉಪಯುಕ್ತ ಎನ್ನುವ ಕ್ರಮ ಕೈಗೊಂಡರೂ ಬಿಕ್ಕಟ್ಟು ಉಲ್ಬಣಗೊಳ್ಳುತ್ತಲೇ ಹೋಗುತ್ತದೆ. ಈ ಮಾತಿಗೆ ಉದಾಹರಣೆಯಾಗಿ ಅಮೇರಿಕಾದಲ್ಲಿ ಟ್ರಂಪ್, ಚೀನಾ, ಭಾರತ ಮತ್ತು ಇತರ ಕೆಲವು ದೇಶಗಳ ಆಮದುಗಳ ಮೇಲೆ ಅಧಿಕ ಸುಂಕ ಹೇರುವ ಮೂಲಕ ಕೈಗೊಂಡಿರುವ ರಕ್ಷಣಾತ್ಮಕ ಕ್ರಮಗಳನ್ನು ಗಮನಿಸಬಹುದು.
ಆದರೆ, ನವ ಉದಾರವಾದಿ ಜಾಗತೀಕರಣದ ವಿಶಾಲ ಚೌಕಟ್ಟನ್ನು ಮೀರದ ಹೊರತು, ಅಂದರೆ, ಈ ಜಾಗತೀಕರಣದ ಚಾಲಕ ಶಕ್ತಿಯೇ ಆಗಿರುವ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಯಜಮಾನಿಕೆಯಿಂದ ಹೊರ ಬರದ ಹೊರತು, ಟ್ರಂಪ್ ಎಷ್ಟೇ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಂಡರೂ ಬಿಕ್ಕಟ್ಟು ಪರಿಹಾರವಾಗುವುದಿಲ್ಲ. ಅದು ಇನ್ನಷ್ಟು ಹದಗೆಡುತ್ತದೆ.
ಈ ಬಿಕ್ಕಟ್ಟಿನ ರೋಗ ಲಕ್ಷಣಗಳು ಸ್ಪಷ್ಟವಾಗಿಯೇ ಪ್ರಕಟಗೊಂಡಿವೆ. 2008ರ ಬಿಕ್ಕಟ್ಟಿನ ನಂತರ, ಬಡ್ಡಿದರಗಳನ್ನು ಹತ್ತಿರ ಹತ್ತಿರ ಸೊನ್ನೆಯ ಮಟ್ಟಕ್ಕೆ ಇಳಿಸುವ ಅಗ್ಗದ ಬಡ್ಡಿ ನೀತಿಯನ್ನು ಅಮೇರಿಕಾ ಮತ್ತು ಹಲವು ದೇಶಗಳು ಅನುಸರಿಸಿದವು. ಈ ಕ್ರಮದಿಂದಾಗಿ ಜಾಗತಿಕ ಬಂಡವಾಳಶಾಹಿಗೆ ಉಸಿರಾಟ ಸರಾಗವಾಯಿತು. ಅಷ್ಟಾಗಿಯೂ, ವಿಶ್ವವು ಈಗ ಮತ್ತೊಮ್ಮೆ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ. ಅಮೇರಿಕಾದಲ್ಲಿ ವ್ಯವಹಾರ ಮತ್ತು ಉದ್ದಿಮೆಗಳ ಮೇಲಿನ ಹೂಡಿಕೆ ಇಳಿಯುತ್ತಿದೆ. ಈ ವರ್ಷದ ಜುಲೈನಲ್ಲಿ ಅಮೇರಿಕಾದ ಕೈಗಾರಿಕಾ ಉತ್ಪಾದನೆ ಅದರ ಹಿಂದಿನ ತಿಂಗಳಿಗಿಂತ ಶೇ.0.2 ಕಡಿಮೆ ಇತ್ತು. ಈ ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ಬ್ರಿಟನ್ನಿನ ಮತ್ತು ಜರ್ಮನಿಯ ಅರ್ಥವ್ಯವಸ್ಥೆಗಳೂ ಕುಗ್ಗಿದವು. ಇಟಲಿ, ಬ್ರೆಜಿಲ್, ಮೆಕ್ಸಿಕೊ, ಅರ್ಜೆಂಟೈನಾ ಮತ್ತು ಭಾರತದಂತಹ ದೇಶಗಳಲ್ಲೂ ಅದೇ ಪರಿಸ್ಥಿತಿ ಇದೆ. ಈ ಜಾಗತಿಕ ಹಿಂಜರಿತದ ಪರಿಣಾಮವಾಗಿ ಚೀನಾದಲ್ಲೂ ಬೆಳವಣಿಗೆಯ ದರ ಇಳಿಯುತ್ತಿದೆ.
ಈಗ ತಲೆದೋರುತ್ತಿರುವ ಆರ್ಥಿಕ ಹಿಂಜರಿತಕ್ಕೆ ಎಲ್ಲ ದೇಶಗಳ ನೀತಿ-ನಿರೂಪಕರು ಮತ್ತೊಮ್ಮೆ ಬಡ್ಡಿ ದರಗಳ ಮತ್ತಷ್ಟು ಇಳಿಕೆ ಮಾಡುವ ಮೂಲಕವೇ ಸ್ಪಂದಿಸುತ್ತಿದ್ದಾರೆ. ಈಗಾಗಲೇ ಬಡ್ಡಿ ದರಗಳನ್ನು ಹತ್ತಿರ ಹತ್ತಿರ ಋಣಾತ್ಮಕ ಮಟ್ಟಕ್ಕೆ ಇಳಿಸಿರುವ ಯೂರೋಪಿಯನ್ ಕೇಂದ್ರೀಯ ಬ್ಯಾಂಕ್, ಬಡ್ಡಿ ದರಗಳನ್ನು ಇನ್ನೂ ಕೆಳಗಿಳಿಸುವ ಯೋಜನೆಯಲ್ಲಿದೆ. ಭಾರತದಲ್ಲೂ ಸಹ ಈಗಾಗಲೇ ಬಡ್ಡಿ ದರಗಳ ಇಳಿಕೆಯಾಗಿದೆ. ಈ ರೀತಿಯಲ್ಲಿ ಬಡ್ಡಿ ದರಗಳನ್ನು ಇಳಿಕೆ ಮಾಡುತ್ತಿರುವ ಉದ್ದೇಶ ಏನೆಂದರೆ, ಬಡ್ಡಿ ದರ ಕಡಿಮೆ ಇದ್ದರೆ ಬಂಡವಾಳ ಹೂಡಿಕೆ ವೃದ್ಧಿಸುತ್ತದೆ ಎಂಬುದಕ್ಕಿಂತಲೂ ಹೆಚ್ಚಾಗಿ; ಕಡಿಮೆಯ ಬಡ್ಡಿ ದರಗಳಿಂದಾಗಿ ಆಸ್ತಿಗಳ ಬೆಲೆ ಗುಳ್ಳೆಗಳು ಏಳುತ್ತವೆ ಎಂಬುದು. ಇವರ ಪ್ರಕಾರ, ಆಸ್ತಿಗಳ ಬೆಲೆ ಗುಳ್ಳೆಗಳು ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುತ್ತವೆ. ಹೇಗೆಂದರೆ, ಆಸ್ತಿಗಳ ಬೆಲೆ ಗುಳ್ಳೆಗಳು ತಮ್ಮ ಸಂಪತ್ತನ್ನು ಹೆಚ್ಚಿಸಿವೆ ಆಸ್ತಿಯ ಒಡೆಯರಿಗೆ ಅನಿಸುತ್ತದೆ. ಅನೇಕ ರೀತಿಯಲ್ಲಿ ಹೆಚ್ಚು ಖರ್ಚುಮಾಡುತ್ತಾರೆ, ಅದರಿಂದಾಗಿ ಬೇಡಿಕೆ ವೃದ್ದಿಸುತ್ತದೆ.
ಎಲ್ಲ ದೇಶಗಳ ನೀತಿ-ನಿರೂಪಕರೂ ಇದೇ ಮಾದರಿಯಲ್ಲೇ ಏಕೆ ಸ್ಪಂದಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಎರಡನೆಯ ಮಹಾ ಯುದ್ಧದ ನಂತರದ ಅವಧಿಯಲ್ಲಿ-ಅಂದರೆ, ನವ ಉದಾರವಾದಿ ಜಾಗತೀಕರಣವು ಹೆಜ್ಜೆ ಇಡುವ ಮುನ್ನ, ಆರ್ಥಿಕ ಹಿಂಜರಿತದ ಸೂಚನೆ ಇದ್ದಾಗ, ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವ ಸಲುವಾಗಿ ಸರ್ಕಾರದ ವೆಚ್ಚಗಳನ್ನು ಹೆಚ್ಚಿಸಬಹುದಿತ್ತು. ಸರ್ಕಾರಗಳು, ಅಗತ್ಯವಿದ್ದರೆ, ತಮ್ಮ ವಿತ್ತೀಯ ಕೊರತೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದಿತ್ತು. ಏಕೆಂದರೆ, ಆ ಸಮಯದಲ್ಲಿ ಬಂಡವಾಳದ ಹರಿದಾಡುವಿಕೆಯ ಮೇಲೆ ನಿಯಂತ್ರಣವಿತ್ತು. ಹಾಗಾಗಿ, ವಿತ್ತೀಯ ಕೊರತೆಯ ಮಟ್ಟ ಏರಿದ ಕಾರಣದಿಂದಲೇ ಬಂಡವಾಳವು ಪಲಾಯನ ಗೈಯ್ಯುವ ಅಪಾಯವಿರಲಿಲ್ಲ.
ಯುದ್ದಾನಂತರದಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಶಿಲ್ಪಿಗಳಲ್ಲಿ ಒಬ್ಬರಾದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಅವರು ವಿಶ್ವ ಹೀಗಿರಬೇಕು ಎಂದು ಕಲ್ಪಿಸಿಕೊಂಡಿದ್ದ ದೃಶ್ಯ ಇದಾಗಿತ್ತು. ಹಣಕಾಸು ಬಂಡವಾಳದ ಅಂತಾರಾಷ್ಟ್ರೀಕರಣವನ್ನು ಕೀನ್ಸ್ ವಿರೋಧಿಸಿದ್ದರು. (ಹಣಕಾಸು ಬಂಡವಾಳವು ಎಲ್ಲಕ್ಕಿಂತ ಮಿಗಿಲಾಗಿ ರಾಷ್ಟ್ರೀಯವಾಗಿಯೇ ಇರಬೇಕು ಎಂದು ಅವರು ಹೇಳಿದ್ದರು).
ಉದ್ಯೋಗ ಸೃಷ್ಟಿಯ ಉದ್ದೇಶಕ್ಕಾಗಿ ಸರ್ಕಾರವು ಕೈಗೊಳ್ಳುವ ಹೆಚ್ಚು ಹೆಚ್ಚು ಖರ್ಚಿನ ಕ್ರಮಗಳನ್ನು ಯಾವತ್ತೂ ವಿರೋಧಿಸುವ ಹಣಕಾಸು ಬಂಡವಾಳವು ಪ್ರಭುತ್ವವನ್ನು ತನ್ನ ಕೈಗೊಂಬೆಯಾಗಿಸಿಕೊಳ್ಳುವ ಮೂಲಕ, ರಾಷ್ಟ್ರ-ಪ್ರಭುತ್ವದ ಉದ್ಯೋಗ ಸೃಷ್ಟಿಯ ಸಾಮರ್ಥ್ಯವನ್ನು ಒಳಗೊಳಗೇ ನಾಶಪಡಿಸುತ್ತದೆ ಎಂಬ ನೆಲೆಯಲ್ಲಿ ಅವರು ಹಣಕಾಸು ಬಂಡವಾಳವು ಅಂತಾರಾಷ್ಟ್ರೀಕರಣಗೊಳ್ಳುವುದನ್ನು ವಿರೋಧಿಸಿದ್ದರು. ಬಂಡವಾಳಶಾಹಿ ಅರ್ಥವ್ಯವಸ್ಥೆಯ ಸಂರಕ್ಷಕರಾಗಿದ್ದ ಕೀನ್ಸ್, ರಾಷ್ಟ್ರ-ಪ್ರಭುತ್ವವು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸದ ಹೊರತು, ಸಮಾಜವಾದವು ಒಡ್ಡಿದ ಬೆದರಿಕೆಯಿಂದ ಬಂಡವಾಳಶಾಹಿಗೆ ಉಳಿಗಾಲವಿಲ್ಲ ಎಂದು ಭಯಪಟ್ಟಿದ್ದರು.
ಆದರೆ, ಯುದ್ದಾನಂತರದ ಕೆಲವು ವರ್ಷಗಳ ಕಾಲಾವಧಿಯಲ್ಲಿ, ಅಮೇರಿಕಾದ ಪಾವತಿ ಶೇಷದ ಚಾಲ್ತಿ ಖಾತೆಯಲ್ಲಿ ಸತತವಾಗಿ ಬಹಳ ಕಾಲ ಭಾರಿ ಮೊತ್ತದ ಕೊರತೆಯ ಹಣ (ಇದು ಬೇರೆ ಬೇರೆ ದೇಶಗಳು ತಮ್ಮ ರಫ್ತುಗಳ ಮೂಲಕ ಗಳಿಸಿದ ಹಣ), ಮತ್ತು, ತದನಂತರದ ಅವಧಿಯಲ್ಲಿ, ಅಂದರೆ 197೦ರ ದಶಕದಲ್ಲಿ, ತೈಲ ಬೆಲೆಗಳ ವಿಪರೀತ ಹೆಚ್ಚಳದಿಂದಾಗಿ ತೈಲ ಉತ್ಪಾದಕ ದೇಶಗಳ ಅಪಾರ ಲಾಭದ ಆದಾಯವು ಅಭಿವೃದ್ಧಿ ಹೊಂದಿದ ದೇಶಗಳ ಮಹಾ ನಗರ ಕೇಂದ್ರಿತ ಬ್ಯಾಂಕ್‌ಗಳಲ್ಲಿ ಶೇಖರಣೆಯಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಬಂಡವಾಳದ ಹರಿದಾಡುವಿಕೆಯ ಮೇಲಿದ್ದ ನಿಯಂತ್ರಣವನ್ನು ಕಿತ್ತುಹಾಕುವಂತೆ ಹಣಕಾಸು ಬಂಡವಾಳವು ಒತ್ತಡ ಹೇರಿತು. ತನಗೆ ಎಲ್ಲಿಗೆ ಬೇಕೊ ಅಲ್ಲಿಗೆ ಮುಕ್ತವಾಗಿ ಚಲಿಸಲು ಅನುವಾಗುವಂತೆ ಇಡೀ ವಿಶ್ವವನ್ನೇ ತೆರೆದಿಡಬೇಕು ಎಂದು ಹಣಕಾಸು ಬಂಡವಾಳವು ಬಯಸಿತು ಮತ್ತು ಆ ಪ್ರಯತ್ನದಲ್ಲಿ ಕೊನೆಗೆ ಯಶಸ್ವಿಯೂ ಆಯಿತು. ಈ ರೀತಿಯಲ್ಲಿ ಹಣಕಾಸು ಬಂಡವಾಳವು ಜಾಗತಿಕವಾಗಿ ತನ್ನ ಯಜಮಾನಿಕೆಯನ್ನು ಸ್ಥಾಪಿಸಿಕೊಂಡಿತು.
ಈ ವಿದ್ಯಮಾನವು, ಉದ್ಯೋಗ ಸೃಷ್ಟಿಯ ಮಟ್ಟ ಕಾಯ್ದುಕೊಳ್ಳುತ್ತಿದ್ದ ತನ್ನ ಜವಾಬ್ದಾರಿಕೆಯಿಂದ ರಾಷ್ಟ್ರ-ಪ್ರಭುತ್ವವು ಹಿಂದೆ ಸರಿಯಿತು ಎಂಬುದನ್ನು ಸೂಚಿಸುತ್ತದೆ. ಹಾಗಾಗಿ, ಈ ರೀತಿಯಲ್ಲಿ ಅಸ್ತಿತ್ವಕ್ಕೆ ಬಂದ ನವ ಉದಾರ ಹಣಕಾಸು ಬಂಡವಾಳವು ಒಟ್ಟಾರೆ ಬೇಡಿಕೆಯನ್ನು ಉತ್ತೇಜಿಸಲು ಉಳಿಸಿಕೊಂಡಿರುವ ಏಕೈಕ ಮಾರ್ಗವೇ ಆಸ್ತಿಗಳ ಬೆಲೆ ಗುಳ್ಳೆಗಳ ಉದ್ದೀಪನೆ; ಮತ್ತು ಈ ಉದ್ದೇಶಕ್ಕಾಗಿ ಬಡ್ಡಿದರ ನೀತಿಯ ಬಳಕೆ.
ಆದರೆ, ಯಾವಾಗ ಬೇಕಾದರೂ ನಿಯಂತ್ರಿಸಬಹುದಾದ ಸರ್ಕಾರದ ವೆಚ್ಚಗಳಂತಲ್ಲದೆ, ಬೇಕು ಎಂದ ಕೂಡಲೇ ಗುಳ್ಳೆಗಳು ಪ್ರತ್ಯಕ್ಷವಾಗುವುದಿಲ್ಲ. 1990ರ ದಶಕದಲ್ಲಿ (ಅಮೇರಿಕಾದಲ್ಲಿ ಡಾಟ್-ಕಾಂ ಗುಳ್ಳೆಗಳು), ಮತ್ತು ಈ ಶತಮಾನದ ಆರಂಭದ ವರ್ಷಗಳಲ್ಲಿ (ಅಮೇರಿಕಾದಲ್ಲಿ ವಸತಿ ಗುಳ್ಳೆಗಳು) ಈ ಗುಳ್ಳೆಗಳು ಒಟ್ಟಾರೆ ಬೇಡಿಕೆಯನ್ನು ಸ್ವಲ್ಪ ಸಮಯದ ವರೆಗೆ ಉದ್ದೀಪಿಸಿದಂತೆ ಕಂಡಿತು. ಆದರೆ, ವಸತಿ ಗುಳ್ಳೆಗಳು ಒಡೆದ ಕೂಡಲೇ ಜನ ಜಾಗೃತರಾದರು. ಬಡ್ಡಿದರಗಳನ್ನು ಹತ್ತಿರ ಹತ್ತಿರ ಸೊನ್ನೆಯ ಮಟ್ಟಕ್ಕೆ ಇಳಿಸಿದರೂ ಸಹ, ಅಷ್ಟೇ ಪರಿಣಾಮದ ಹೊಸ ಗುಳ್ಳೆಗಳು ಪ್ರತ್ಯಕ್ಷವಾಗಲಿಲ್ಲ.
ಅದೇ ಸಮಯದಲ್ಲಿ, ಪ್ರತಿಯೊಂದು ದೇಶದಲ್ಲೂ ಮತ್ತು ಇಡೀ ವಿಶ್ವದಲ್ಲೇ ಒಟ್ಟಾರೆ ಬೇಡಿಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ರಭಾವಪೂರ್ಣವಾಗಿ ಕಾರ್ಯ ಪ್ರವೃತ್ತವಾಗಿರುವ ಇನ್ನೊಂದು ಅಂಶವೂ ಇದೆ. ಒಟ್ಟು ಉತ್ಪತ್ತಿಯಲ್ಲಿ ಮಿಗುತಾಯದ ಪಾಲು ಹೆಚ್ಚುತ್ತಿರುವ ಅಂಶವೇ ಆ ಇನ್ನೊಂದು ಅಂಶ. ಜಾಗತೀಕರಣವೆಂದರೆ, ಎಲ್ಲಕ್ಕಿಂತ ಮಿಗಿಲಾಗಿ, ಹಣಕಾಸೂ ಸೇರಿದಂತೆ, ಬಂಡವಾಳವು ದೇಶ ದೇಶಗಳ ಗಡಿಯಾಚೆಗೆ ಮುಕ್ತವಾಗಿ ಚಲಿಸುವ ಅವಕಾಶ. ಬಂಡವಾಳದ ಈ ಚಲನೆಯಿಂದಾಗಿ, ಜಾಗತಿಕ ಬೇಡಿಕೆಯನ್ನು ಪೂರೈಸಲು ಹೆಚ್ಚು-ಕೂಲಿಯ ಬೃಹತ್ ನಗರಗಳಲ್ಲಿ ನೆಲೆಸಿದ್ದ ಅನೇಕಾನೇಕ ಚಟುವಟಿಕೆಗಳು ಕಡಿಮೆ-ಕೂಲಿಯ ಮೂರನೆಯ ಜಗತ್ತಿನ ದೇಶಗಳಲ್ಲಿ ಮರು-ನೆಲೆಗೊಂಡವು. ಈ ವಿದ್ಯಮಾನದಿಂದಾಗಿ ಮುಂದುವರೆದ ದೇಶಗಳ ಕಾರ್ಮಿಕರನ್ನು ಮೂರನೆಯ ಜಗತ್ತಿನ ದೇಶಗಳ ಕಾರ್ಮಿಕರೊಂದಿಗೆ ಪೈಪೋಟಿಗೆ ತಳ್ಳಿದ ಕಾರಣದಿಂದಾಗಿ ಮುಂದುವರೆದ ದೇಶಗಳ ಕಾರ್ಮಿಕರ ಕೂಲಿಯು ಕೆಳ ಮಟ್ಟದಲ್ಲೇ ಉಳಿಯುವಂತಾಗಿದೆ.
ಅದೇ ಸಮಯದಲ್ಲಿ, ಮೂರನೆಯ ಜಗತ್ತಿನ ದೇಶಗಳ ಕಾರ್ಮಿಕರ ಕೂಲಿಯು ಬದುಕುಳಿಯುವ ಮಟ್ಟದಲ್ಲೇ ಉಳಿದಿದೆ, ಏಕೆಂದರೆ, ಕೈಗಾರಿಕಾ ಚಟುವಟಿಕೆಗಳು ಮರು-ನೆಲೆಗೊಂಡ ಬಳಿಕವೂ ಬರಿದಾಗದಷ್ಟು ದೊಡ್ಡ ಪ್ರಮಾಣದ ಮೀಸಲು ಶ್ರಮಿಕ ಪಡೆ ಮೂರನೆಯ ಜಗತ್ತಿನ ದೇಶಗಳಲ್ಲಿದೆ. ಆದ್ದರಿಂದ, ಜಗತ್ತಿನಾದ್ಯಂತ ಕಾರ್ಮಿಕರ ಉತ್ಪಾದಕತಾ ಪರಿಮಾಣವು ಹೆಚ್ಚಿದರೂ ಸಹ, ಜಗತ್ತಿನಾದ್ಯಂತ ಕಾರ್ಮಿಕರ ಕೂಲಿಯ ದರದ ಏರಿಕೆಯ ಪರಿಮಾಣವು ಹೆಚ್ಚಾಗುವುದಿಲ್ಲ. ಈ ಕಾರಣದಿಂದಾಗಿಯೇ ಪ್ರತಿಯೊಂದು ದೇಶದಲ್ಲೂ ಮತ್ತು ಇಡೀ ವಿಶ್ವದಲ್ಲೇ ಮಿಗುತಾಯದ ಪಾಲು ಹೆಚ್ಚುತ್ತಿದೆ.
ಮಿಗುತಾಯದ ಪಾಲಿನ ಈ ಪರಿಯ ಹೆಚ್ಚಳವು ಅಗತ್ಯಕ್ಕಿಂತ ಅಧಿಕವಾಗಿ ಉತ್ಪಾದಿಸುವ (Overproduction) ಪ್ರವೃತ್ತಿಯನ್ನು ಬೆಳೆಸುತ್ತದೆ, ಏಕೆಂದರೆ, ತಮ್ಮ ವರಮಾನದ ಪ್ರತಿ ಯೂನಿಟ್‌ನಲ್ಲಿ ಕೂಲಿಗಾರರ ಬಳಕೆಯ ಭಾಗವು, ಮಿಗುತಾಯ ಸಂಪಾದಿಸುವವರ ವರಮಾನದ ಪ್ರತಿ ಯೂನಿಟ್‌ನ ಬಳಕೆಯ ಭಾಗಕ್ಕಿಂತ ಬಹಳ ದೊಡ್ಡದಿರುತ್ತದೆ. ಅಗತ್ಯಕ್ಕಿಂತ ಅಧಿಕವಾಗಿ ಉತ್ಪಾದಿಸುವ ಈ ಪ್ರವೃತ್ತಿಯನ್ನು ಪ್ರತಿಯೊಂದು ದೇಶದೊಳಗೂ ಸರ್ಕಾರದ ವೆಚ್ಚಗಳನ್ನು ಏರಿಸುವ ಮೂಲಕ ಸರಿದೂಗಿಸಬಹುದಿತ್ತು. ಆದರೆ ಇದು ಸಾಧ್ಯವೇ ಇಲ್ಲದುದರಿಂದ, ಅಗತ್ಯಕ್ಕಿಂತ ಅಧಿಕವಾಗಿ ಉತ್ಪಾದಿಸುವ ಪ್ರವೃತ್ತಿಯನ್ನು ತಡೆಯುವ ಏಕ ಮಾತ್ರ ಸಾಧ್ಯತೆ ಎಂದರೆ, ಆಸ್ತಿಗಳ ಬೆಲೆ ಗುಳ್ಳೆಗಳನ್ನು ಎಬ್ಬಿಸುವುದು. ಇಂತಹ ಗುಳ್ಳೆಗಳು ಏಳದೆ ಇದ್ದಾಗ ಅಗತ್ಯಕ್ಕಿಂತ ಅಧಿಕವಾಗಿ ಉತ್ಪಾದಿಸುವ ಪ್ರವೃತ್ತಿಯು ಪೂರ್ಣ ಬಲದೊಂದಿಗೆ ಕೆಲಸಮಾಡುತ್ತದೆ. ನಾವೀಗ ನೋಡುತ್ತಿರುವುದು ಈ ವಿದ್ಯಮಾನವನ್ನೇ.
ಇಂತಹ ಪರಿಸ್ಥಿತಿಯಲ್ಲಿ ರೂಢಿಗತವಾಗಿ ಬಳಸುವ ಬಡ್ಡಿ ದರ ಇಳಿಸುವ ಉಪಕರಣವು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಆದ್ದರಿಂದ, ಒಟ್ಟಾರೆ ಬೇಡಿಕೆಯ ಕೊರತೆಯನ್ನು ಸರಿದೂಗಿಕೊಳ್ಳುವ ಪ್ರಯತ್ನವಾಗಿ, ಸರ್ಕಾರದ ವೆಚ್ಚಗಳನ್ನು ಹೆಚ್ಚಿಸಲಾರದ ಪರಿಸ್ಥಿತಿಯಲ್ಲಿ, ಡೊನಾಲ್ಡ್ ಟ್ರಂಪ್ ತಮ್ಮ ದೇಶ ಎದುರಿಸುತ್ತಿರುವ ಬಿಕ್ಕಟ್ಟಿನಿಂದ ಹೊರಬರಲು ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಬಿಕ್ಕಟ್ಟನ್ನು ಬೇರೆ ಬೇರೆ ದೇಶಗಳಿಗೆ, ಅದರಲ್ಲೂ ಮುಖ್ಯವಾಗಿ ಚೀನಾ ದೇಶಕ್ಕೆ, ರಫ್ತು ಮಾಡುತ್ತಿದ್ದಾರೆ ಚೀನಾದಿಂದ ಆಮದು ಮಾಡಿಕೊಳ್ಳುವ ಅನೇಕ ವಸ್ತುಗಳ ಮೇಲೆ ಟ್ರಂಪ್ ಶೇ.25ರಷ್ಟು ಸುಂಕ ಹೇರಿದ್ದಾರೆ. ಮುಯ್ಯಿಗೆ ಮುಯ್ಯಿ ಎಂಬಂತೆ ಅಮೇರಿಕಾದಿಂದ ಆಮದು ಮಾಡಿಕೊಳ್ಳುವ ಅನೇಕ ವಸ್ತುಗಳ ಮೇಲೆ ಚೀನಾ ಶೇ.25ರಷ್ಟು ಸುಂಕ ಹೇರಿದೆ.
ಬಿಕ್ಕಟ್ಟಿನಿಂದ ಹೊರಬರುವ ಸಾಧನವಾಗಿ ಅಮೇರಿಕಾ ಆರಂಭಿಸಿದ ಈ ವ್ಯಾಪಾರ ಸಮರವು ಇಡೀ ವಿಶ್ವದ ಅರ್ಥವ್ಯವಸ್ಥೆಯೇ ಬಿಕ್ಕಟ್ಟಿಗೆ ಒಳಗಾಗುವಂತೆ ಮಾಡಿದೆ, ಹೇಗೆಂದರೆ, ವಿಶ್ವದ ಬಂಡವಾಳಗಾರರಲ್ಲಿ ಕೆಲವರಿಗಾದರೂ ಹೂಡಿಕೆ ಮಾಡಲು ಇದ್ದ ಅಲ್ಪ ಸ್ವಲ್ಪ ಪ್ರೇರಣೆಯನ್ನೂ ಈ ವ್ಯಾಪಾರ ಸಮರವು ಒಳಗೊಳಗೇ ಕುಗ್ಗಿಸಿದೆ. ಆಸ್ತಿಗಳ ಬೆಲೆ ಗುಳ್ಳೆಗಳನ್ನು ಎಬ್ಬಿಸುವ ಉದ್ದೇಶದಿಂದ ಕೈಗೊಂಡ ಬಡ್ಡಿ ದರ ಇಳಿಕೆಯ ಕ್ರಮವು ಅಂದುಕೊಂಡದ್ದಕ್ಕಿಂತ ಭಿನ್ನವಾಗಿ ಪರಿಣಮಿಸಿದೆ – ವಿಶ್ವದ ಷೇರು ಮಾರುಕಟ್ಟೆಗಳು ಕುಸಿದು ಬೀಳುತ್ತಿವೆ. ಉದಾಹರಣೆಗೆ, ನ್ಯೂಯಾರ್ಕ್‌ನ ವಾಲ್ ಸ್ಟ್ರೀಟ್ ಷೇರು ಮಾರುಕಟ್ಟೆಯು ಆಗಸ್ಟ್ 14ರಂದು ಈ ವರ್ಷದ ಅತಿ ದೊಡ್ಡ ಕುಸಿತ ಕಂಡಿದೆ. ಅದನ್ನು ಹಿಂಬಾಲಿಸಿ ವಿಶ್ವದ ಷೇರು ಮಾರುಕಟ್ಟೆಗಳೂ ಕುಸಿದು ಬಿದ್ದಿವೆ.
ಪ್ರತಿಯೊಂದು ದೇಶದೊಳಗೂ ಸರ್ಕಾರದ ವೆಚ್ಚಗಳನ್ನು ಏರಿಸುವುದು ಸಾಧ್ಯವಾದರೆ, ನನ್ನ ನೆರೆಯವನು ಹಾಳಾಗಲಿ ಎನ್ನುವ ನೀತಿಯ ಅಗತ್ಯವಿಲ್ಲ. ಸರ್ಕಾರದ ವೆಚ್ಚಗಳಿಂದ ಉಂಟಾದ ಬೇಡಿಕೆ ಹೊರ ದೇಶಗಳಿಗೆ ಸೋರಿಕೆಯಾಗುವುದನ್ನು ತಡೆಯುವ ಉದ್ದೇಶದಿಂದ ಒಂದು ವೇಳೆ ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಂಡರೂ ಸಹ, ಅದರಿಂದಾಗಿ ಬೇರೇ ದೇಶಗಳಿಂದ ಮಾಡಿಕೊಳ್ಳುವ ಆಮದುಗಳಲ್ಲಿ ಕಡಿತವಾಗುವುದಿಲ್ಲ, ಏಕೆಂದರೆ, ಮಾರುಕಟ್ಟೆಯು ತನ್ನಷ್ಟಕ್ಕೆ ತಾನೇ ಬೆಳೆಯುತ್ತಿರುತ್ತದೆ. ಆದರೆ. ಸರ್ಕಾರದ ವೆಚ್ಚಗಳು ಏರಿಕೆಯಾಗದ ಸಂರ್ಭದಲ್ಲಿ (ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಸರ್ಕಾರದ ವೆಚ್ಚಗಳ ಏರಿಕೆಯನ್ನು ವಿರೋಧಿಸುತ್ತದೆ; ಈ ಕಾರಣದಿಂದಾಗಿಯೇ ಬಹುತೇಕ ಎಲ್ಲಾ ದೇಶಗಳೂ ತಮ್ಮ ವಿತ್ತೀಯ ಕೊರತೆಗೆ ಮಿತಿಯನ್ನು ವಿಧಿಸುವ ಕಾನೂನು ತಂದಿವೆ), ಒಂದು ದೇಶವು ಅನುಸರಿಸಬಹುದಾದ ನೀತಿಯನ್ನು ಆಯ್ದುಕೊಳ್ಳಲು ಆ ದೇಶಕ್ಕೆ ನನ್ನ ನೆರೆಯವನು ಹಾಳಾಗಲಿ ಎನ್ನುವ ನೀತಿಯನ್ನು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲ ಎಂಬಂತಾಗಿದೆ. ಇದರಿಂದಾಗಿ ಎಲ್ಲ ದೇಶಗಳ ಬಿಕ್ಕಟ್ಟಿನ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.
ನಿಖರವಾಗಿ ಹೇಳುವುದಾದರೆ, ಈ ಪರಿಸ್ಥಿತಿಯೇ ನವ ಉದಾರ ಬಂಡವಾಳಶಾಹಿಯ ವ್ಯವಸ್ಥಾಗತ ಬಿಕ್ಕಟ್ಟಿನ ಹೆಗ್ಗುರುತು. ಎಲ್ಲಿಯವರೆಗೆ ಹಣಕಾಸು ಬಂಡವಾಳದ ಯಜಮಾನಿಕೆ ಮುಂದುವರೆಯುತ್ತದೆಯೋ ಮತ್ತು ಜಾಗತಿಕ ಹಣಕಾಸಿನ ಹರಿವಿನ ಸುಳಿಗೆ ಸಿಕ್ಕಿದ ದೇಶ ದೇಶಗಳು ಆ ಸುಳಿಯಲ್ಲಿಯೇ ಉಳಿಯುತ್ತವೆಯೋ ಅಲ್ಲಿಯವರೆಗೆ ಈ ಬಿಕ್ಕಟ್ಟೂ ಮುಂದುವರೆಯುತ್ತದೆ. ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿರುವ ಎಷ್ಟು ಪ್ರಯತ್ನಗಳನ್ನು ಮಾಡಿದರೂ ಬಿಕ್ಕಟ್ಟು ಮತ್ತಷ್ಟು ಹದಗೆಡುತ್ತದೆ. ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಯಜಮಾನಿಕೆಯಿಂದ ಹೊರ ಬರಲು, ಪ್ರತಿಯೊಂದು ದೇಶದ ಒಳಗೂ, ಒಂದು ಪರ್ಯಾಯ ಅಜೆಂಡಾದೊಂದಿಗೆ ದುಡಿಯುವ ಜನತೆಯನ್ನು ಅಣಿನೆರೆಸಬೇಕಾಗುತ್ತದೆ.
( ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
-ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
EV ನೋಂದಣಿಯಲ್ಲಿ ಕರ್ನಾಟಕದ ಸಾಧನೆ – ಶುದ್ಧ ಚಲನೆಗೆ ಬೆಸ್ಕಾಂ ಮುನ್ನಡೆ
ಸುದ್ದಿದಿನ,ಬೆಂಗಳೂರು: ರಾಜ್ಯವು ಇವಿ ನೋಂದಣಿಯಲ್ಲಿ ದೇಶದಲ್ಲೇ ಪ್ರಮುಖ ಸ್ಥಾನ ಪಡೆದಿದ್ದು, ಶುದ್ಧ ಚಲನೆಗೆ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ ಹಾಗೂ ವಿಶ್ವ ಇವಿ ದಿನದ ಸಂದರ್ಭದಲ್ಲಿ ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ಮುನ್ನಡೆ ಸಾಧಿಸಿರುವುದು ಶ್ಲಾಘನೀಯ.
http://Visit : www.suddidina.com
ಕರ್ನಾಟಕವು ಒಟ್ಟು ಇವಿ ನೋಂದಣಿಯಲ್ಲಿ 3ನೇ ಸ್ಥಾನ ಪಡೆದಿದ್ದು, e-2W (ಎಲೆಕ್ಟ್ರಿಕ್ ಎರಡು ಚಕ್ರ ವಾಹನ) ಮತ್ತು e-4W (ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನ) ನೋಂದಣಿಯಲ್ಲಿ 2ನೇ ಸ್ಥಾನ ಪಡೆದಿದೆ. ಇದು ರಾಜ್ಯದ ಜನರು ಎಲೆಕ್ಟ್ರಿಕ್ ವಾಹನಗಳನ್ನು ಸ್ವೀಕರಿಸುವ ಪ್ರಮಾಣ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. 2027 ಹಣಕಾಸು ವರ್ಷದಲ್ಲಿ EV ಪ್ರವೇಶ ಪ್ರಮಾಣ 14.67% ಆಗಿದ್ದು, ಇದು ದೇಶದ ಮಟ್ಟದಲ್ಲಿ ಗಮನಾರ್ಹ ಸಾಧನೆಯಾಗಿದೆ.
ರಾಜ್ಯದ ಇವಿ ಮೂಲಸೌಕರ್ಯ ಅಭಿವೃದ್ಧಿಗೆ ಬೆಸ್ಕಾಂ ನೊಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ, ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಚಾರ್ಜಿಂಗ್ ಸೌಲಭ್ಯ, ಹಾಗೂ ಶುದ್ಧ ಚಲನೆಗೆ ಅಗತ್ಯವಾದ ತಂತ್ರಜ್ಞಾನವನ್ನು ಒದಗಿಸುವಲ್ಲಿ ಬೆಸ್ಕಾಂ ಪ್ರಮುಖ ಪಾತ್ರವಹಿಸಿದೆ.
ಕರ್ನಾಟಕ ಸರ್ಕಾರವು ಶುದ್ಧ ಚಲನೆಗೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವಿ ಖರೀದಿಗೆ ಪ್ರೋತ್ಸಾಹಕ ಯೋಜನೆಗಳು, ಚಾರ್ಜಿಂಗ್ ಮೂಲಸೌಕರ್ಯ ವಿಸ್ತರಣೆ, ಹಾಗೂ ಹಸಿರು ತಂತ್ರಜ್ಞಾನವನ್ನು ಉತ್ತೇಜಿಸುವ ಕ್ರಮಗಳು ಇವಿ ಕ್ರಾಂತಿಗೆ ಬಲ ನೀಡಿವೆ.
ಇವಿ ಬಳಕೆಯ ಹೆಚ್ಚಳದಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದು, ಇಂಧನ ಅವಲಂಬನೆ ಕಡಿಮೆಯಾಗುವುದು ಹಾಗೂ ಶುದ್ಧ ಶಕ್ತಿಯ ಬಳಕೆ ಹೆಚ್ಚಾಗುವುದು. ಇದು ಕರ್ನಾಟಕವನ್ನು ಹಸಿರು ರಾಜ್ಯವಾಗಿ ರೂಪಿಸುವತ್ತ ಪ್ರಮುಖ ಹೆಜ್ಜೆಯಾಗಿದೆ.
ವಿಶ್ವ ಇವಿ ದಿನದ ಅಂಗವಾಗಿ, ಕರ್ನಾಟಕವು ತನ್ನ ಸಾಧನೆಗಳನ್ನು ಹಂಚಿಕೊಂಡು, ಮುಂದಿನ ದಿನಗಳಲ್ಲಿ ಶುದ್ಧ ಚಲನೆಗೆ ಇನ್ನಷ್ಟು ಬಲ ನೀಡಲು ಬದ್ಧವಾಗಿದೆ. ಇವಿ ಕ್ರಾಂತಿಯ ಮೂಲಕ ಕರ್ನಾಟಕವು ಭಾರತದ ಭವಿಷ್ಯವನ್ನು ಹಸಿರು ಮತ್ತು ಶಾಶ್ವತ ದಿಕ್ಕಿನಲ್ಲಿ ಮುನ್ನಡೆಸುತ್ತಿದೆ.

ದಿನದ ಸುದ್ದಿ
ಬೆಂಗಳೂರು ಸೆಪ್ಟೆಂಬರ್‌ನಲ್ಲಿ 31.9 ಡಿ.ಸೆ. ದಾಖಲೆ – ಹವಾಮಾನ ಇಲಾಖೆ ಎಚ್ಚರಿಕೆ
ಸುದ್ದಿದಿನ,ಬೆಂಗಳೂರು: ಪ್ರತಿ ವರ್ಷ ಮಳೆಗಾಲದ ಅಂತ್ಯದಲ್ಲಿ ನೈಋತ್ಯ ಮಾನ್ಸೂನ್ ಶೀತವಾಗಿರುತ್ತದೆ. ಆದರೆ ಈ ಬಾರಿ, 75 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. 2026ರ ಸೆಪ್ಟೆಂಬರ್ 8ರಂದು ನಗರದಲ್ಲಿ 31.9 ಡಿ.ಸೆ. ತಾಪಮಾನ ದಾಖಲಾಗಿದ್ದು, ಇದು ಕಳೆದ ಹಲವು ದಶಕಗಳ ಬಳಿಕ ಕಂಡುಬಂದ ಅತಿ ಹೆಚ್ಚು ಮಟ್ಟವಾಗಿದೆ.
http://Visit : www.suddidina.com
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿರುವ ಮಾಹಿತಿಯ ಪ್ರಕಾರ, 1951ರಿಂದ ಇಂದಿನವರೆಗಿನ ದಾಖಲೆಗಳಲ್ಲಿ 33.3 ಡಿ.ಸೆ. ಗರಿಷ್ಠ ತಾಪಮಾನವು ದಾಖಲಾಗಿತ್ತು. ಈ ಬಾರಿ 31.9 ಡಿ.ಸೆ. ತಾಪಮಾನವು ಆ ದಾಖಲೆಗಳಿಗೆ ಸಮೀಪವಾಗಿದೆ. ಇದೇ ದಿನ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 33.4 ಡಿ.ಸೆ. ತಾಪಮಾನ ದಾಖಲಾಗಿದ್ದು, ಇದು ನಗರದ ಉಷ್ಣಾಂಶ ಏರಿಕೆಯನ್ನು ಸ್ಪಷ್ಟಪಡಿಸುತ್ತದೆ.
ಹಿಂದಿನ ವರ್ಷಗಳ ದಾಖಲೆಗಳನ್ನು ನೋಡಿದರೆ, 2025ರಲ್ಲಿ 29.9 ಡಿ.ಸೆ., 2024ರಲ್ಲಿ 31.6 ಡಿ.ಸೆ., 2023ರಲ್ಲಿ 30.8 ಡಿ.ಸೆ., 2022ರಲ್ಲಿ 31 ಡಿ.ಸೆ., 2021ರಲ್ಲಿ 31.3 ಡಿ.ಸೆ., 2020ರಲ್ಲಿ 30.6 ಡಿ.ಸೆ., 2019ರಲ್ಲಿ 30.8 ಡಿ.ಸೆ., 2018ರಲ್ಲಿ 31.7 ಡಿ.ಸೆ., 2017ರಲ್ಲಿ 31.1 ಡಿ.ಸೆ., 2016ರಲ್ಲಿ 30.6 ಡಿ.ಸೆ. ದಾಖಲಾಗಿತ್ತು. ಈ ಹೋಲಿಕೆಯಿಂದ, 2026ರ ಸೆಪ್ಟೆಂಬರ್‌ನಲ್ಲಿ ದಾಖಲಾಗಿರುವ ಉಷ್ಣಾಂಶವು ಅತಿ ಹೆಚ್ಚು ಮಟ್ಟದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ.
ಹವಾಮಾನ ತಜ್ಞರ ಪ್ರಕಾರ, ಎಲ್‌ನಿನೋ ಒತ್ತಡ ಮುಂದುವರಿದಿರುವುದರಿಂದ ಉಷ್ಣಾಂಶ ಏರಿಕೆಗೆ ಕಾರಣವಾಗಿದೆ. ಆದರೆ, ಇದು ತಾತ್ಕಾಲಿಕವಾಗಿರಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಮುಂದಿನ ತಿಂಗಳುಗಳಲ್ಲಿ ಶೀತಮಾನ್ಸೂನ್ ಬಲಿಷ್ಠವಾಗುವ ಸಾಧ್ಯತೆ ಇದೆ. ಅಂದಾಜು 1 ರಿಂದ 3 ಡಿ.ಸೆ. ಅಂತರದಲ್ಲಿ ಶಾಖದ ಮಟ್ಟ ಹೆಚ್ಚಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಮಳೆ ಆಗದಿರುವುದರಿಂದ ಕಾವೇರಿ ನದಿಯ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಹವಾಮಾನ ಇಲಾಖೆ ಪ್ರಕಾರ, ಸೆಪ್ಟೆಂಬರ್ 16ರ ನಂತರ ಮಳೆಯಾಗುವ ಸಾಧ್ಯತೆಗಳಿವೆ. ಇದರಿಂದ ನೀರಿನ ಮಟ್ಟ ಸುಧಾರಿಸಬಹುದು ಎಂಬ ನಿರೀಕ್ಷೆ ಇದೆ.
ಒಟ್ಟಿನಲ್ಲಿ, ಬೆಂಗಳೂರಿನಲ್ಲಿ ದಾಖಲಾಗಿರುವ ಉಷ್ಣಾಂಶ ಏರಿಕೆ ಹವಾಮಾನ ಬದಲಾವಣೆಯ ಗಂಭೀರತೆಯನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಮಳೆಯ ನಿರೀಕ್ಷೆ ಇದ್ದರೂ, ತಾತ್ಕಾಲಿಕವಾಗಿ ಉಷ್ಣಾಂಶ ಏರಿಕೆ ಸಾರ್ವಜನಿಕ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ದಿನದ ಸುದ್ದಿ
KPSCExam: ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ವೈದ್ಯರ ಕೊರತೆ – ತಕ್ಷಣ ನೇಮಕಾತಿ ಅಗತ್ಯ
ಸುದ್ದಿದಿನ,ಕಲಬುರ್ಗಿ: ಕರ್ನಾಟಕದಲ್ಲಿ ವೈದ್ಯಾಧಿಕಾರಿ ಹುದ್ದೆಗಳ ಖಾಲಿತನವು ದಿನದಿಂದ ದಿನಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (KPSC) ಅಡಿಯಲ್ಲಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿರುವುದರಿಂದ, ರಾಜ್ಯದ ಅನೇಕ ಆಸ್ಪತ್ರೆಗಳು ವೈದ್ಯರ ಕೊರತೆಯಿಂದ ಬಳಲುತ್ತಿವೆ. ವಿಶೇಷವಾಗಿ ಬೆಂಗಳೂರು ಹಾಗೂ ಇತರ ನಗರ ಪ್ರದೇಶಗಳಲ್ಲಿ ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡಲು ತೊಂದರೆ ಉಂಟಾಗಿದೆ.
http://Visit : www.suddidina.com
ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದಾಗಿ ರೋಗಿಗಳ ಆರೈಕೆ ವಿಳಂಬವಾಗುತ್ತಿದೆ. ತುರ್ತು ಚಿಕಿತ್ಸೆಗೆ ಬರುವವರು ಸಮಯಕ್ಕೆ ಚಿಕಿತ್ಸೆ ಪಡೆಯಲು ಕಷ್ಟ ಅನುಭವಿಸುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದಾಗಿ ಆಸ್ಪತ್ರೆಗಳ ಕಾರ್ಯಾಚರಣೆ ಹಿನ್ನಡೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದ್ದು, ಅಲ್ಲಿ ವೈದ್ಯರ ಕೊರತೆಯಿಂದ ಮೂಲಭೂತ ಆರೋಗ್ಯ ಸೇವೆಗಳೇ ಕುಂಠಿತವಾಗಿವೆ.
ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸುವ ಅಗತ್ಯವಿದೆ. ಆರೋಗ್ಯ ಸೇವೆ ಜನಜೀವನಕ್ಕೆ ನೇರವಾಗಿ ಸಂಬಂಧಿಸಿದುದರಿಂದ, ವೈದ್ಯರ ಕೊರತೆಯು ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಆಸ್ಪತ್ರೆಗಳು ವೈದ್ಯರ ಕೊರತೆಯಿಂದಾಗಿ ನಿರ್ವಹಣಾ ತೊಂದರೆ ಎದುರಿಸುತ್ತಿವೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ, ವೈದ್ಯರ ಕೊರತೆ ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುತ್ತಿದೆ. ತುರ್ತು ಸೇವೆ, ಶಸ್ತ್ರಚಿಕಿತ್ಸೆ ಹಾಗೂ ದಿನನಿತ್ಯದ ಚಿಕಿತ್ಸಾ ಕಾರ್ಯಗಳಲ್ಲಿ ವಿಳಂಬ ಉಂಟಾಗುತ್ತಿದೆ.
ಸರ್ಕಾರದ ಯೋಜನೆಯ ಪ್ರಕಾರ, ಶೀಘ್ರದಲ್ಲೇ ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಇದರಿಂದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ ಎಂಬ ನಿರೀಕ್ಷೆ ಇದೆ. ಆದರೆ, ಪ್ರಕ್ರಿಯೆ ವಿಳಂಬವಾದರೆ ಆರೋಗ್ಯ ಸೇವೆಯ ಮೇಲೆ ಇನ್ನಷ್ಟು ಹಾನಿ ಉಂಟಾಗುವ ಸಾಧ್ಯತೆ ಇದೆ.
ರೋಗಿ ಆರೈಕೆ, ಆಸ್ಪತ್ರೆಗಳ ಕಾರ್ಯಾಚರಣೆ ಹಾಗೂ ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ವೈದ್ಯರ ನೇಮಕಾತಿ ತುರ್ತು ಅಗತ್ಯವಾಗಿದೆ. ವೈದ್ಯರ ಕೊರತೆಯಿಂದಾಗಿ ಚಿಕಿತ್ಸೆ ವಿಳಂಬವಾಗುವುದು, ರೋಗಿಗಳ ತೃಪ್ತಿ ಕಡಿಮೆಯಾಗುವುದು ಹಾಗೂ ಆರೋಗ್ಯ ಸೇವೆಯ ಗುಣಮಟ್ಟ ಕುಸಿಯುವುದು ಸಾಮಾನ್ಯ.
ಒಟ್ಟಿನಲ್ಲಿ, ಕರ್ನಾಟಕದಲ್ಲಿ ವೈದ್ಯಾಧಿಕಾರಿ ಹುದ್ದೆಗಳ ಖಾಲಿತನವು ಆರೋಗ್ಯ ಸೇವೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ಕಾರವು ತಕ್ಷಣ ಕ್ರಮ ಕೈಗೊಂಡು ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಿದರೆ, ಆಸ್ಪತ್ರೆಗಳಲ್ಲಿ ಸೇವೆ ಸುಧಾರಿಸಿ, ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ.

-
ದಿನದ ಸುದ್ದಿ6 hours agoಬೆಂಗಳೂರು ಇ-ಕಾಮರ್ಸ್ ಡಾರ್ಕ್ ಸ್ಟೋರ್ಗಳಲ್ಲಿ ಅವಧಿ ಮೀರಿದ ಆಹಾರ, ಔಷಧ ಪತ್ತೆ
-
ದಿನದ ಸುದ್ದಿ6 hours agoದಾವಣಗೆರೆ ನಗರಕ್ಕೆ ರಾಜ್ಯಮಟ್ಟದ “ಸ್ವಚ್ಛ ವಾರ್ಡ್ ವಾಯು ಸರ್ವೇಕ್ಷಣೆ 2025” ಪ್ರಶಸ್ತಿಯ ಗರಿ: ರೂ 25.00 ಲಕ್ಷ ನಗದು ಬಹುಮಾನ
-
ದಿನದ ಸುದ್ದಿ5 hours agoಮಧ್ಯಪ್ರಾಚ್ಯದಲ್ಲಿ ಏಳು ತಿಂಗಳಿನಿಂದ ಯುದ್ಧದ ಕಾರ್ಮೋಡ – ಇರಾನ್–ಅಮೆರಿಕ ಸಂಘರ್ಷ ತೀವ್ರ
-
ದಿನದ ಸುದ್ದಿ6 hours agoGold Rate Fall: 24 ಕ್ಯಾರೆಟ್ ಚಿನ್ನದ ದರ ₹104 ಇಳಿಕೆ, ಬೆಳ್ಳಿ ಗ್ರಾಂಗೆ ₹250 ಸ್ಥಿರ
-
ದಿನದ ಸುದ್ದಿ5 hours agoಸ್ಕ್ರೀನ್ ಬೆಳಕು, ಸಾಮಾಜಿಕ ಜಾಲತಾಣ – ನಿದ್ರೆಗೆ ಅಡ್ಡಿ, ಆರೋಗ್ಯಕ್ಕೆ ಹಾನಿ
-
ದಿನದ ಸುದ್ದಿ5 hours agoKPSCExam: ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ವೈದ್ಯರ ಕೊರತೆ – ತಕ್ಷಣ ನೇಮಕಾತಿ ಅಗತ್ಯ
-
ದಿನದ ಸುದ್ದಿ5 hours agoಬೆಂಗಳೂರು ಸೆಪ್ಟೆಂಬರ್‌ನಲ್ಲಿ 31.9 ಡಿ.ಸೆ. ದಾಖಲೆ – ಹವಾಮಾನ ಇಲಾಖೆ ಎಚ್ಚರಿಕೆ
-
ದಿನದ ಸುದ್ದಿ3 hours agoEV ನೋಂದಣಿಯಲ್ಲಿ ಕರ್ನಾಟಕದ ಸಾಧನೆ – ಶುದ್ಧ ಚಲನೆಗೆ ಬೆಸ್ಕಾಂ ಮುನ್ನಡೆ


