ರಾಜಕೀಯ
ಆಯುಷ್ಮಾನ್ ಭಾರತ : ಆರೋಗ್ಯ ವಿಮೆಯಿಂದ ಯಾರಿಗೆ ಲಾಭ?
- ನವ ಉದಾರ ನೀತಿಗಳ ಅನುಸರಣೆಯ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹಾಳುಗೆಡವಿ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ಕೊಡಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ವಿಮೆಯ ಪರಿಕಲ್ಪನೆ ಪ್ರಚಲಿತಗೊಂಡಿದೆ. ಇದನ್ನು ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರ ಆರಂಭಿಸಿದ್ದರೂ, ಬಿಜೆಪಿ ನೇತೃತ್ವದ ಎನ್ಡಿಎ ಸರಕಾರಗಳ ಅಡಿಯಲ್ಲಿ ಇದರ ಮೇಲೆಯೇ ಗಮನ ಕೇಂದ್ರೀಕರಿಸಲಾಗಿದೆ.
- ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತನ್ನು ಸಂಪೂರ್ಣವಾಗಿ ಪಲ್ಲಟಗೊಳಿಸಿ ಖಾಸಗಿಯವರನ್ನೇ ಹೆಚ್ಚಾಗಿ ಅವಲಂಬಿಸುವಂತೆ ಮಾಡುವ ಖಾಸಗಿಯವರ ಮೂಲಕದ ಆರೋಗ್ಯ ವಿಮೆಯ ಪ್ರಯೋಜನ ಹೆಚ್ಚು ಸ್ಥಿತಿವಂತ ವಿಭಾಗಗಳಿಗೇ ದೊರೆತಿರುವಂತೆ ಕಾಣುತ್ತದೆ. ಇದರ ಆವಶ್ಯಕತೆ ಹೆಚ್ಚಾಗಿರುವ ಬಡವಿಭಾಗಗಳಿಗೆ ದೊರೆತಿರುವ ಪ್ರಯೋಜನ ನಗಣ್ಯವೆಂದೇ ಅಂಕಿ-ಅಂಶಗಳು ಹೇಳುತ್ತವೆ.
-ಕೆ.ಎಂ.ನಾಗರಾಜ್
ಮಾನವ ಹಕ್ಕುಗಳನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು ಮುಖ್ಯವಾಗಿ ಆರೋಗ್ಯ ಒಂದು ಹಕ್ಕು ಎಂದು ಪರಿಗಣಿತವಾದಾಗ ಮಾತ್ರ ಸಾಧ್ಯವಾಗುತ್ತದೆ. ಆದರೆ, ಆರೋಗ್ಯ ಒಂದು ಹಕ್ಕು ಎಂಬುದನ್ನು ನಮ್ಮ ಸಂವಿಧಾನ ಇನ್ನೂ ಒಪ್ಪಿಕೊಂಡಿಲ್ಲ. ಸಂವಿಧಾನದ ಮಾರ್ಗದರ್ಶಿ ತತ್ವಗಳಡಿಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಉತ್ತಮಪಡಿಸುವಂತೆ ಸುಪ್ರೀಂ ಕೋರ್ಟಿನ ಆದೇಶಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷಿಸಿವೆ. ಹಣಕಾಸಿನ ತೊಂದರೆಯಿಂದಾಗಿ ಸುಮಾರು ಎಂಟು ಕೋಟಿಯಷ್ಟು ಭಾರತೀಯರು ಕಾಯಿಲೆ ಇದ್ದಾಗಲೂ ಯಾವುದೇ ಔಷಧೋಪಚಾರ ಪಡೆಯುತ್ತಿಲ್ಲ.
ಇನ್ನು ಔಷಧೋಪಚಾರ ಪಡೆಯುವವರ ಪರಿಸ್ಥಿತಿಯಂತೂ ಭಯಾನಕವಾಗಿದೆ. ವೈದ್ಯಕೀಯ ಚಿಕಿತ್ಸೆಯ ವೆಚ್ಚ ಹೇಳತೀರದಷ್ಟು ದುಬಾರಿಯಾಗಿದೆ. ಆರೋಗ್ಯ ರಕ್ಷಣೆಗಾಗಿ ಒಂದು ಕುಟುಂಬವು ಮಾಡುವ ಖರ್ಚಿನಲ್ಲಿ 67% ಹಣ ಸಣ್ಣ ಪುಟ್ಟ ಔಷಧೋಪಚಾರ ಮತ್ತು ಇತರ ಕೆಲವು ಖರ್ಚುಗಳಿಗೆ ತಗಲುತ್ತದೆ ಎಂಬುದಾಗಿ ವರದಿಗಳು ತಿಳಿಸುತ್ತವೆ.
ನವ ಉದಾರ ನೀತಿಗಳ ಅನುಸರಣೆಯ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹಾಳುಗೆಡವಿ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ಕೊಡಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ವಿಮೆಯ ಪರಿಕಲ್ಪನೆ ಪ್ರಚಲಿತಗೊಂಡಿದೆ. ಇದನ್ನು ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರ ಆರಂಭಿಸಿದ್ದರೂ, ಬಿಜೆಪಿ ನೇತೃತ್ವದ ಎನ್ಡಿಎ ಸರಕಾರಗಳ ಅಡಿಯಲ್ಲಿ ಇದರ ಮೇಲೆಯೇ ಗಮನ ಕೇಂದ್ರೀಕರಿಸಲಾಗಿದೆ.
ಮೋದಿ ಸರ್ಕಾರವು ತನ್ನ 2018-19ರ ಬಜೆಟ್ನಲ್ಲಿ ಆಯುಷ್ಮಾನ್ ಭಾರತ ಎಂಬ ಆರೋಗ್ಯ ವಿಮೆ ಯೋಜನೆಯನ್ನು ಘೋಷಿಸಿತ್ತು. 10 ಕೋಟಿ ಕುಟುಂಬಗಳಿಗೆ (ಅಂದರೆ, ಸುಮಾರು 50 ಕೋಟಿ ಮಂದಿಗೆ) ಐದು ಲಕ್ಷ ರೂಗಳ ವರೆಗಿನ ಆರೋಗ್ಯ ವಿಮೆ ಒದಗಿಸುವ ಈ ಯೋಜನೆಯು ಜಗತ್ತಿನಲ್ಲೇ ಅತಿ ದೊಡ್ಡದು ಎಂದು ಸರ್ಕಾರ ಹೇಳಿಕೊಂಡಿತ್ತು ಮತ್ತು ಅದಕ್ಕಾಗಿ ಬಜೆಟ್ನಲ್ಲಿ 2000 ಕೋಟಿ ರೂ ನಿಗದಿಪಡಿಸಿತ್ತು. ವಿಮಾ ಕಂಪೆನಿಗಳ ಮೂಲಕ ಜಾರಿಯಾಗುವ ಈ ಯೋಜನೆಗೆ ಫಲಾನುಭವಿಗಳ ಸಂಖ್ಯೆಯ ಆಧಾರದ ಮೇಲೆ ಸರ್ಕಾರವು ಪ್ರೀಮಿಯಂ ತೆರಬೇಕಾಗುತ್ತದೆ. ಹಾಗಾಗಿ, ಸರ್ಕಾರ ನಿಗದಿಪಡಿಸಿದ 2000 ಕೋಟಿ ರೂ ಗಳಲ್ಲಿ 50ಕೋಟಿ ಮಂದಿಗೆ ಪ್ರೀಮಿಯಂ ಲೆಕ್ಕದಲ್ಲಿ ಒದಗುವ ಹಣ ತಲಾ 40 ರೂಗಳಾಗುತ್ತದೆ.
ಈ ಒಂದು ಅಂಶವೇ ಜಗತ್ತಿನಲ್ಲೇ ಅತಿ ದೊಡ್ಡ ಆರೋಗ್ಯ ವಿಮೆಯ ನಿಜ ಸ್ವರೂಪವನ್ನು ಬಯಲು ಮಾಡಿತ್ತು. ಆದರೂ, ಬಿಜೆಪಿಯು 2019ರ ಚುನಾವಣೆಯಲ್ಲಿ ಆಯುಷ್ಮಾನ್ ಭಾರತ ಯೋಜನೆಯನ್ನು ಪ್ರಚಾರಕ್ಕೆ ಬಳಸಿಕೊಂಡಿತ್ತು. ಎರಡನೆಯ ಬಾರಿಗೆ ಅಧಿಕಾರಕ್ಕೆ ಬಂದ ನಂತರವೂ ಮೋದಿ ಸರ್ಕಾರವು 2019-20ರ ಬಜೆಟ್ನಲ್ಲಿ ಈ ಯೋಜನೆಗೆ 6400 ಕೋಟಿ ರೂ ನಿಗದಿಪಡಿಸಿದೆ. ಹಾಗಾಗಿ, ಈ ಯೋಜನೆಯು ಅದೆಷ್ಟು ಟೊಳ್ಳು ಎಂಬುದನ್ನು ಅರ್ಥಮಾಡಿಕೊಳ್ಳಲು ಹಿಂದಿನ ಸರ್ಕಾರಗಳು (ರಾಜ್ಯ ಮತ್ತು ಕೇಂದ್ರ ಸರ್ಕಾರಗಳು) ಜಾರಿಗೊಳಿಸಿದ್ದ ಆರೋಗ್ಯ ವಿಮಾ ಯೋಜನೆಗಳನ್ನು ಅವಲೋಕಿಸಬೇಕಾಗುತ್ತದೆ.
2002ರಲ್ಲಿ ಕರ್ನಾಟಕ ಸರ್ಕಾರವು ಯಶಸ್ವಿನಿ ಎಂಬ ಒಂದು ಆರೋಗ್ಯ ವಿಮೆಯನ್ನು ಜಾರಿಗೊಳಿಸಿತ್ತು. ಆರಂಭದಲ್ಲಿ, ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರಿಗೆ ಮಾತ್ರ ಸೀಮಿತಗೊಂಡಿದ್ದ ಈ ಕಿರು ಯೋಜನೆಯು ಸದಸ್ಯರಿಂದ ತಿಂಗಳಿಗೆ ತಲಾ ಐದು ರೂ ವಂತಿಕೆಯ ಮೂಲಕ ಸ್ವತಃ ಹಣ ಒದಗಿಸಿಕೊಳ್ಳುತ್ತಿತ್ತು. ಹೃದಯ ಸಂಬಂಧಿ ಮತ್ತು ಇತರ ಕೆಲವು ಶಸ್ತ್ರ ಚಿಕಿತ್ಸೆಗಳಿಗೆ ಗುರುತಿಸಿದ ಕೆಲವು ಆಸ್ಪತ್ರೆಗಳ ಮೂಲಕ ನಗದುರಹಿತ ಸೌಲಭ್ಯ ಒದಗಿಸಿತ್ತು.
ಈಚೆಗೆ, ಎರಡು ಲಕ್ಷದ ವರೆಗಿನ ವಿಮೆಯೊಂದಿಗೆ ವಾರ್ಷಿಕ ಪ್ರೀಮಿಯಂ ಮೊತ್ತವನ್ನು ಗ್ರಾಮೀಣದವರಿಗೆ 600ರೂ ಮತ್ತು ಪಟ್ಟಣದವರಿಗೆ 710 ರೂ ಏರಿಸಲಾಗಿದೆ ಮತ್ತು ಅನೇಕ ಆಸ್ಪತ್ರೆಗಳು ಮತ್ತು ಸುಮಾರು ಎಲ್ಲ ಶಸ್ತ್ರ ಚಿಕಿತ್ಸೆಗಳೂ ಯೋಜನೆಗೆ ಸೇರ್ಪಡೆಯಾಗಿವೆ. ಈ ನಡುವೆ, ಕರ್ನಾಟಕ ಸರ್ಕಾರವು ಯಶಸ್ವಿನಿ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ವಾಜಪೇಯಿ ಆರೋಗ್ಯ ಶ್ರೀ, ರಾಜೀವ್ ಆರೋಗ್ಯಭಾಗ್ಯ ಮುಂತಾದ ಎಲ್ಲ ಯೋಜನೆಗಳನ್ನೂ ಸೇರಿಸಿ ಆರೋಗ್ಯ ಕರ್ನಾಟಕ ಎಂಬ ಹೆಸರಿನ ಯೋಜನೆಯು ಗೊಂದಲದ ಗೂಡಾಗಿತ್ತು. ಆಯುಷ್ಮಾನ್ ಭಾರತ ಯೋಜನೆಯನ್ನು ಒಪ್ಪಿಕೊಳ್ಳಲಾಗದ ಪರಿಸ್ಥಿತಿಯಲ್ಲಿ, ಹಿಂದಿನ ಮತ್ತು ಇಂದಿನ ಮುಖ್ಯ ಮಂತ್ರಿ, ಇಬ್ಬರೂ, ಹಳೆಯ ಯಶಸ್ವಿನಿ ಯೋಜನೆಯನ್ನೇ ಜಾರಿಗೊಳಿಸುವುದಾಗಿ ಹೇಳಿದ್ದಾರೆ.
ಯುಪಿಎ ಸರ್ಕಾರವು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಡಿಯಲ್ಲಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಜನನಿ ಸುರಕ್ಷಾ ಮುಂತಾದ ಯೋಜನೆಗಳ ಜೊತೆಗೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಎಂಬ ಒಂದು ಆರೋಗ್ಯ ವಿಮೆಯನ್ನು ಜಾರಿಗೊಳಿಸಿತ್ತು. ಬಡತನ ರೇಖೆಯ ಕೆಳಗಿರುವ ಕುಟುಂಬಗಳಿಗೆ 30 ಸಾವಿರ ರೂ ವರೆಗಿನ ವಾರ್ಷಿಕ ಒಳ-ರೋಗಿ ಚಿಕಿತ್ಸೆಯನ್ನು ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ ಕಲ್ಪಿಸಲಾಗಿತ್ತು.
ಈ ಯೋಜನೆಯನ್ನೇ ಮುಂದುವರೆಸಿದರೂ, ಅದೊಂದು ತನ್ನ ಹೊಸ ಯೋಜನೆಯೆಂಬಂತೆ ಪ್ರಸ್ತುತಪಡಿಸುತ್ತ ಮೋದಿ ಸರ್ಕಾರವು 2016-17ರ ಬಜೆಟ್ನಲ್ಲಿ, ಬಡ ಕುಟುಂಬಗಳಿಗೆ ಒಂದು ಲಕ್ಷ ರೂ ವರೆಗಿನ ಒಳ-ರೋಗಿ ಚಿಕಿತ್ಸೆಯನ್ನು ಮತ್ತು ಹಿರಿಯ ನಾಗರಿಕರಿಗೆ 30 ಸಾವಿರ ರೂ ಅಧಿಕವಾಗಿ ಒದಗಿಸುವುದಾಗಿ ಹೇಳಿತ್ತು. ಆದರೆ, ಈ ಯೋಜನೆ ಅನುಷ್ಠಾನಗೊಳ್ಳಲೇ ಇಲ್ಲ. ಬದಲಿಗೆ, ಮೂಗಿಗೆ ತುಪ್ಪ ಸವರುವ ಆಯುಷ್ಮಾನ್ ಭಾರತ ಯೋಜನೆಯ ಘೋಷಣೆಯಾಗಿದೆ.
ವಿಮೆಗೆ ಸಂಬಂಧಿಸಿದ ಅಂಕಿ-ಅಂಶಗಳ ಲೆಕ್ಕ ಹಾಕುವ ತಜ್ಞರ ಪ್ರಕಾರ, 50 ಕೋಟಿ ಮಂದಿಗೆ ಐದು ಲಕ್ಷ ರೂಗಳ ವರೆಗಿನ ಆರೋಗ್ಯ ವಿಮೆ ಒದಗಿಸುವ ಆಯುಷ್ಮಾನ್ ಭಾರತ ಯೋಜನೆಯ ತಲಾ ವಾರ್ಷಿಕ ಪ್ರೀಮಿಯಂ ಕನಿಷ್ಠ ಐದು ಸಾವಿರ ರೂ ಆಗುತ್ತದೆ. ಅಂದರೆ, ಸರ್ಕಾರವು ಒಂದು ಲಕ್ಷದ ಇಪ್ಪತ್ತೈದು ಸಾವಿರ ಕೋಟಿ ರೂಗಳಷ್ಟು ಪ್ರೀಮಿಯಂ ತೆರಬೇಕಾಗುತ್ತದೆ. ಆದರೆ, ಈ ಬಾಬ್ತು ಮೋದಿ ಸರ್ಕಾರವು 2019-20ರ ಬಜೆಟ್ನಲ್ಲಿ ತೆಗೆದಿಟ್ಟಿರುವ ಹಣ ಕೇವಲ 6,400 ಕೋಟಿ ರೂ. ಇದು ಮೋದಿ ಸರ್ಕಾರದ ಮಾತಿಗೂ ಮತ್ತು ಕೃತಿಗೂ ಇರುವ ಅಂತರವನ್ನು ತೋರಿಸುತ್ತದೆ.
ವಾಸ್ತವವಾಗಿ ಇದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತನ್ನು ಸಂಪೂರ್ಣವಾಗಿ ಪಲ್ಲಟಗೊಳಿಸಿ ಖಾಸಗಿಯವರನ್ನೇ ಹೆಚ್ಚಾಗಿ ಅವಲಂಬಿಸುವಂತೆ ಮಾಡುವ ಯೋಜನೆಯೇ ಆಗಿದೆ. ಖಾಸಗಿಯವರ ಮೂಲಕ ಆರೋಗ್ಯ ವಿಮೆಯ ಮೇಲೆ ಹೆಚ್ಚಿನ ಒತ್ತು ನೀಡುವ ಇಂತಹ ಯೋಜನೆಗಳಿಂದ ನಿಜವಾಗಿ ಯಾರಿಗೆ ಲಾಭ ಎಂಬುದನ್ನು ಅಧ್ಯಯನ ಮಾಡುತ್ತಿರುವ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಅಂಕುರ್ ವರ್ಮ ಪ್ರಕಾರ (Who Benefits from the Govt Funded Health Insurance? , ನ್ಯೂಸ್ಕ್ಲಿಕ್, ಡಿಸೆಂಬರ್ 3, 2019) 2014ರಿಂದ 2018ರ ಅವಧಿಯಲ್ಲಿ ಆರೋಗ್ಯ ವಿಮೆಗೆ ಒಳಪಟ್ಟವರ ಪ್ರಮಾಣವೇನೂ ಹೆಚ್ಚಿಲ್ಲ.
ವಿಮಾಯೋಜನೆಯನ್ನು ಸಾರ್ವತ್ರಿಕಗೊಳಿಸಿರುವ ರಾಜ್ಯಗಳಲ್ಲಿ ಮಾತ್ರವೇ ಆರೋಗ್ಯ ವಿಮೆಯ ಫಲಾನುಭವಿಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಇರುವುದು. ಈ ಆರೋಗ್ಯ ವಿಮೆಯ ಪ್ರಯೋಜನ ಕೂಡ ಹೆಚ್ಚು ಸ್ಥಿತಿವಂತ ವಿಭಾಗಗಳಿಗೇ ದೊರೆತಿರುವಂತೆ ಕಾಣುತ್ತದೆ. ಇದರ ಆವಶ್ಯಕತೆ ಹೆಚ್ಚಾಗಿರುವ ಬಡವಿಭಾಗಗಳಿಗೆ ದೊರೆತಿರುವ ಪ್ರಯೋಜನ ನಗಣ್ಯವೆಂದೇ ಹೇಳಬಹುದು.
ಅಂಕುರ್ವರ್ಮ ತಮ್ಮ ಲೇಖನದಲ್ಲಿ ಹೋಲಿಸಿರುವ ೭೫ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ 71ನೇ ಮತ್ತು 75ನೇ ಸುತ್ತಿನ ಮಾಹಿತಿಗಳು ಕುತೂಹಲಕಾರಿಯಾಗಿವೆ. ಜುಲೈ 2017 ಮತ್ತು ಜೂನ್ 2018ರ ನಡುವೆ, ಎನ್ಎಸ್ಎಸ್ಒ ನಡೆಸಿದ 75ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ ಭಾಗವಾಗಿ, ಆರೋಗ್ಯ ಸಂಬಂಧವಾಗಿ ಕುಟುಂಬಗಳು ಮಾಡುವ ಖರ್ಚಿನ ವಿವರಗಳನ್ನು ಸಂಗ್ರಹಿಸಿದ ವರದಿಯನ್ನು ನವೆಂಬರ್ 24ರಂದು ಬಿಡುಗಡೆ ಮಾಡಿದೆ. ಇದೇ ಸರ್ವೆಯನ್ನು ಹಿಂದೆ 2014ರ 71ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ ಭಾಗವಾಗಿ ಮಾಡಲಾಗಿತ್ತು.
75ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ ಪ್ರಕಾರ, 2017-18ರಲ್ಲಿ, 85.9% ಗ್ರಾಮೀಣ ಜನತೆ ಮತ್ತು 82% ನಗರವಾಸಿಗಳು ಯಾವುದೇ ಆರೋಗ್ಯ ವಿಮೆಗೆ ಒಳಪಟ್ಟಿರಲಿಲ್ಲ. ವಿಮೆಗೆ ಒಳಪಡದವರ ಸಂಖ್ಯೆ 2014ರ ಸರ್ವೆಯಲ್ಲಿಯೂ ಇಷ್ಟೇ ಇತ್ತು ಮತ್ತು ಈ ನಾಲ್ಕು ವರ್ಷಗಳ ಅವಧಿಯಲ್ಲಿ ಆರೋಗ್ಯ ವಿಮೆಗೆ ಒಳಪಟ್ಟವರ ಸಂಖ್ಯೆಯು ನಗರಗಳಲ್ಲಿ ಮಾತ್ರ ಕೇವಲ 1.1% ಹೆಚ್ಚಿದೆ.
ವಿಮೆಗೆ ಒಳಪಟ್ಟವರಲ್ಲಿ ಬಹುತೇಕ ಎಲ್ಲರೂ ಸರ್ಕಾರ-ಪ್ರಾಯೋಜಿತ ವಿಮೆಗೊಳಪಟ್ಟಿದ್ದಾರೆ (ಕೋಷ್ಟಕ-1). ಗ್ರಾಮೀಣದಲ್ಲಿ, 0.2% ಮಂದಿ ಆರೋಗ್ಯ ವಿಮೆಯನ್ನು ತಾವೇ ಒದಗಿಸಿಕೊಂಡಿದ್ದಾರೆ ಮತ್ತು 0.3% ಮಂದಿ ಖಾಸಗಿ ಉದ್ಯೋಗದಾತರು ಒದಗಿಸಿದ ವಿಮೆಗೊಳಪಟ್ಟಿದ್ದಾರೆ. ನಗರಗಳಲ್ಲಿ, 3.8% ಮಂದಿ ಆರೋಗ್ಯ ವಿಮೆಯನ್ನು ತಾವೇ ಒದಗಿಸಿಕೊಂಡಿದ್ದಾರೆ ಮತ್ತು ಕೇವಲ 2.9% ಮಂದಿ ಖಾಸಗಿ ಉದ್ಯೋಗದಾತರು ಒದಗಿಸಿದ ವಿಮೆಗೊಳಪಟ್ಟಿದ್ದಾರೆ.
ಆರೋಗ್ಯ ವಿಮೆಗೊಳಪಟ್ಟವರ ಸಂಖ್ಯೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಆಂಧ್ರ, ತೆಲಂಗಾಣ, ಕೇರಳ ಮತ್ತು ಛತ್ತೀಸ್ಘಡ ರಾಜ್ಯಗಳಲ್ಲಿ, ರಾಜ್ಯ ಸರ್ಕಾರಗಳು ಅರ್ಹತೆಯನ್ನು ಸಡಿಲಗೊಳಿಸಿರುವುದರಿಂದಾಗಿ, ಬಹುತೇಕ ಎಲ್ಲರೂ ಆರೋಗ್ಯ ವಿಮೆಗೊಳಪಟ್ಟಿದ್ದಾರೆ. ಉಳಿದ ರಾಜ್ಯಗಳಲ್ಲಿ ಆರೋಗ್ಯ ವಿಮೆಗೊಳಪಟ್ಟವರ ಸಂಖ್ಯೆ ನಿಕೃಷ್ಟವಾಗಿದೆ.
ಈ ಸರ್ವೆಯಿಂದ ಹೊರಹೊಮ್ಮುವ ಒಂದು ಮುಖ್ಯವಾದ ಅಂಶವೆಂದರೆ, ಬಡವರಿಗಾಗಿಯೇ ಇರುವ ಯೋಜನೆಗಳನ್ನೊಳಗೊಂಡ ಸರ್ಕಾರ-ಪ್ರಾಯೋಜಿತ ಆರೋಗ್ಯ ವಿಮೆಗೆ ಬಡ ಕುಟುಂಬಗಳಿಗಿಂತ ಅತಿ ಹೆಚ್ಚು ಸಂಖ್ಯೆಯ ಶ್ರೀಮಂತರೇ ಒಳಪಟ್ಟಿದ್ದಾರೆ (ಕೋಷ್ಟಕ-2).ಶೇ.20 ತಳ ಮಟ್ಟದ ಬಡ ಕುಟುಂಬಗಳ (ವೆಚ್ಚದ ಆಧಾರದ ಮೇಲೆ) ಪೈಕಿ ಕೇವಲ 10% ಕುಟುಂಬಗಳು ಆರೋಗ್ಯ ವಿಮೆಗೊಳಪಟ್ಟಿವೆ. ಇನ್ನೊಂದೆಡೆಯಲ್ಲಿ, ಶೇ.20 ಅತಿ ಶ್ರೀಮಂತ ಕುಟುಂಬಗಳ (ವೆಚ್ಚದ ಆಧಾರದ ಮೇಲೆ) ಪೈಕಿ ಶೇ.22 ಕುಟುಂಬಗಳು ಆರೋಗ್ಯ ವಿಮೆಗೊಳಪಟ್ಟಿವೆ. ಈ ಶ್ರೀಮಂತ ಕುಟುಂಬಗಳಲ್ಲಿ ಶೇ.20ರಷ್ಟು ಮಂದಿ ಸರ್ಕಾರ-ಪ್ರಾಯೋಜಿತ ಆರೋಗ್ಯ ವಿಮೆಯ ಸೌಲಭ್ಯ ಬಳಸಿಕೊಂಡಿದ್ದಾರೆ. ನಗರ ವಾಸಿಗಳಲ್ಲಿ ಸುಮಾರು 8% ಮಂದಿ ಸರ್ಕಾರ-ಪ್ರಾಯೋಜಿತ ಆರೋಗ್ಯ ವಿಮೆಗೊಳಪಟ್ಟಿದ್ದಾರೆ.
ಆಸ್ಪತ್ರೆ ಸೇರಿದ ಸಂದರ್ಭದಲ್ಲಿ ಸ್ವತಃ ಮಾಡಿದ ಖರ್ಚಿನಲ್ಲಿ ಸ್ವಲ್ಪ ಹಣ ಮರಳಿಸಲಾಗುತ್ತದೆ. ಈ ಪ್ರಕಾರವಾಗಿ, ಸರ್ಕಾರ-ಪ್ರಾಯೋಜಿತ ಆರೋಗ್ಯ ವಿಮೆ, ಖಾಸಗಿ ಉದ್ಯೋಗದಾತರು ಒದಗಿಸಿದ ಆರೋಗ್ಯ ವಿಮೆ ಮತ್ತು ಸ್ವಂತವೇ ಪಡೆದ ಆರೋಗ್ಯ ವಿಮೆಗಳ ಮೂಲಕ ಶ್ರೀಮಂತರು ಹೆಚ್ಚು ಹಣ ಮರಳಿ ಪಡೆಯುತ್ತಾರೆ (ಕೋಷ್ಟಕ-3). ಉದಾಹರಣೆಗೆ, ಗ್ರಾಮೀಣದಲ್ಲಿ, ಆಸ್ಪತ್ರೆ ಸೇರಿದ ಪ್ರಕರಣಗಳಲ್ಲಿ, ಬಡವರ ಪ್ರಕರಣಗಳಲ್ಲಿ ಕೇವಲ 1.6% ಮತ್ತು ಶ್ರೀಮಂತರ 4% ಪ್ರಕರಣಗಳಲ್ಲಿ ಸ್ವಲ್ಪ ಹಣ ಮಾತ್ರ ಮರಳಿ ಪಡೆಯುತ್ತಾರೆ. ಬಡ ಕುಟುಂಬಗಳು ಆಸ್ಪತ್ರೆಯಲ್ಲಿ ಮಾಡಿದ ಖರ್ಚಿನಲ್ಲಿ ಕೇವಲ 4% ಹಣ ಮರಳಿ ಪಡೆದರೆ, ಶ್ರೀಮಂತರು ಆಸ್ಪತ್ರೆಯಲ್ಲಿ ಮಾಡಿದ ಖರ್ಚಿನಲ್ಲಿ 22% ಹಣ ಮರಳಿ ಪಡೆಯುತ್ತಾರೆ. ಅದೇ ರೀತಿಯಲ್ಲಿ, ನಗರ ವಾಸಿಗಳಲ್ಲಿ, ಬಡವರು 1.5% ಹಣ ಮರಳಿ ಪಡೆದರೆ, ಶ್ರೀಮಂತರು 22% ಹಣ ಮರಳಿ ಪಡೆಯುತ್ತಾರೆ.
ನಗರವಾಸಿಗಳು ಆಸ್ಪತ್ರೆ ಸೇರಿದ ಪ್ರಕರಣಗಳಲ್ಲಿ, ಬಡವರು ಆಸ್ಪತ್ರೆಯಲ್ಲಿ ಮಾಡಿದ ಖರ್ಚಿನಲ್ಲಿ ಕೇವಲ 4 % ಹಣ ಮರಳಿ ಪಡೆದರೆ, ಶ್ರೀಮಂತರು 27% ಹಣ ಮರಳಿ ಪಡೆಯುತ್ತಾರೆ. ನಿರ್ದಿಷ್ಟವಾಗಿ, ಗ್ರಾಮೀಣ ಬಡವರು, ಒಂದು ಪ್ರಕರಣದಲ್ಲಿ, ಸರಾಸರಿ 279ರೂ ಮರಳಿ ಪಡೆದರೆ, ನಗರವಾಸಿ ಶ್ರೀಮಂತರು, ಒಂದು ಪ್ರಕರಣದಲ್ಲಿ, ಸರಾಸರಿ 12000 ರೂ ಮರಳಿ ಪಡೆಯುತ್ತಾರೆ. ಇದು, ಆರೋಗ್ಯ ವಿಮೆಯ ಒಳಗೊಳ್ಳುವಿಕೆಯಲ್ಲಿ ಮತ್ತು ಆಸ್ಪತ್ರೆಯಲ್ಲಿ ಖರ್ಚಾದ ಹಣ ಮರಳಿಪಡೆಯುವಲ್ಲಿ ಅದೆಷ್ಟು ತಾರತಮ್ಯತೆ ಇದೆ ಮತ್ತು ಬಡವರು ಅದೆಷ್ಟು ತಿರಸ್ಕಾರಕ್ಕೊಳಗಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಒಂದು ಅಂದಾಜಿನ ಪ್ರಕಾರ, ದುಬಾರಿ ವೆಚ್ಚದ ವೈದ್ಯಕೀಯ ಚಿಕಿತ್ಸೆಯ ಕಾರಣದಿಂದಾಗಿಯೇ ಪ್ರತಿ ವರ್ಷವೂ ಸುಮಾರು ಆರು ಕೋಟಿ ಮಂದಿ ಭಾರತೀಯರು ಬಡತನಕ್ಕೆ ತಳ್ಳಲ್ಪಡುತ್ತಾರೆ.
ಕೋಷ್ಟಕ – 1
2014 ಮತ್ತು 2018ರಲ್ಲಿ ಬೇರೆ ಬೇರೆ ಮಾದರಿಯ ಆರೋಗ್ಯ ವಿಮಾ ಯೋಜನೆ ಬಳಸಿಕೊಂಡ ವ್ಯಕ್ತಿಗಳ ಶೇಖಡಾವಾರು
ಆರೋಗ್ಯ ವಿಮೆಯ ಮಾದರಿ 71ನೇ ಸುತ್ತು 2014ರಲ್ಲಿ 75ನೇ ಸುತ್ತು 2017-18ರಲ್ಲಿ
ಗ್ರಾಮೀಣ ಪ್ರದೇಶ
ಸರ್ಕಾರ ಒದಗಿಸಿದ ಆರೋಗ್ಯ ವಿಮಾ ಯೋಜನೆ ಬಳಸಿಕೊಂಡವರು 13.1 13.5
ಖಾಸಗಿ ಉದ್ಯೋಗದಾತರು ಒದಗಿಸಿದ ವಿಮಾ ಯೋಜನೆ ಬಳಸಿಕೊಂಡವರು 0.6 0.3
ತಾವೇ ಒದಗಿಸಿಕೊಂಡ ಆರೋಗ್ಯ ವಿಮಾ ಯೋಜನೆಯನ್ನು ಬಳಸಿಕೊಂಡ ಕುಟುಂಬಗಳು 0.3 0.2ಇತರೆ 0.1 0.1
ಯಾವುದೇ ಆರೋಗ್ಯ ವಿಮೆಗೆ ಒಳಪಡದವರು 85.9 85.9
ನಗರ ಪ್ರದೇಶ
ಸರ್ಕಾರ ಒದಗಿಸಿದ ಆರೋಗ್ಯ ವಿಮಾ ಯೋಜನೆ ಬಳಸಿಕೊಂಡವರು 12 12.2
ಖಾಸಗಿ ಉದ್ಯೋಗದಾತರು ಒದಗಿಸಿದ ವಿಮಾ ಯೋಜನೆ ಬಳಸಿಕೊಂಡವರು 2.4 2.9
ತಾವೇ ಒದಗಿಸಿಕೊಂಡ ಆರೋಗ್ಯ ವಿಮಾ ಯೋಜನೆಯನ್ನು ಬಳಸಿಕೊಂಡ ಕುಟುಂಬಗಳು 3.5 3.8
ಇತರೆ 0.2 0.2
ಯಾವುದೇ ಆರೋಗ್ಯ ವಿಮೆಗೆ ಒಳಪಡದವರು 82 80.9
ಕೋಷ್ಟಕ – 2
2018ರಲ್ಲಿ ಆರೋಗ್ಯ ವಿಮೆಗೊಳಗಾದ ಕುಟುಂಬಗಳ ಅನುಪಾತ (ಕುಟುಂಬಗಳ ವೆಚ್ಚವನ್ನು ಆಧರಿಸಿ ಅವುಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಲಾಗಿದೆ)
ಕುಟುಂಬಗಳ ಐದು ಗುಂಪುಗಳು
ಸರ್ಕಾರದ ಆರೋಗ್ಯ ವಿಮೆ ಬಳಸಿಕೊಂಡವರು ಯಾವುದೋ ಒಂದು ಆರೋಗ್ಯ ವಿಮೆಗೆ ಒಳಪಟ್ಟವರು ಗ್ರಾಮೀಣ ನಗರ ಗ್ರಾಮೀಣ ನಗರ
ಶೇ.20 ತಳಮಟ್ಟದಬಡಕುಟುಂಬಗಳು 10.1 8.1 10.2 9.8
ಶೇ.20 ತಳಮಟ್ಟದಮೇಲಿನಕುಟುಂಬಗಳು (20-40) 9.2 11.9 9.4 14
ಮಧ್ಯಮಮಟ್ಟದಶೇ.20 ಕುಟುಂಬಗಳು (40-60) 12.5 14.2 12.9 18.2
ಶೇ.20 ಶ್ರೀಮಂತಕುಟುಂಬಗಳು (60-80) 15.4 13.2 16 20.4
ಶೇ.20 ಅತಿಶ್ರೀಮಂತಕುಟುಂಬಗಳು 20 13.5 21.9 33
ಕೋಷ್ಟಕ – 3
ಆಸ್ಪತ್ರೆಗೆ ಸೇರಿದ್ದಾಗ ಮಾಡಿದ ಖರ್ಚಿನಲ್ಲಿ ಶೇ. ಎಷ್ಟು ಮಂದಿ ಮರಳಿ ಹಣ ಪಡೆದರು ಮತ್ತು ಅದರ ಮೊತ್ತ ವೆಷ್ಟು(ಕುಟುಂಬಗಳ ವೆಚ್ಚವನ್ನು ಆಧರಿಸಿ ಅವುಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಲಾಗಿದೆ)
ಕುಟುಂಬಗಳ ಐದು ಗುಂಪುಗಳು
ಗ್ರಾಮೀಣ ನಗರ
ವೆಚ್ಚ ಮರಳಿ ಪಡೆದವರು(ಶೇ. ಸಂಖ್ಯೆ) ಮರಳಿ ಪಡೆದ ಸರಾಸರಿ ಮೊತ್ತ ವೆಚ್ಚ ಮರಳಿ ಪಡೆದವರು
(ಶೇ. ಸಂಖ್ಯೆ ಮರಳಿ ಪಡೆದ ಸರಾಸರಿ ಮೊತ್ತ
ಶೇ.20 ತಳಮಟ್ಟದಬಡಕುಟುಂಬಗಳು 1.6 279 1.5 562
ಶೇ.20 ತಳಮಟ್ಟದಮೇಲಿನಕುಟುಂಬಗಳು (20-40) 1.1 211 3.4 1467
ಮಧ್ಯಮಮಟ್ಟದಶೇ.20 ಕುಟುಂಬಗಳು (40-60) 1.9 417 5.5 2527
ಶೇ.20 ಶ್ರೀಮಂತಕುಟುಂಬಗಳು (60-80) 2.2 705 7.8 4030
ಶೇ.20 ಅತಿಶ್ರೀಮಂತಕುಟುಂಬಗಳು 4 1373 21.8 12000
(ಈ ವಾರದ ಜನಶಕ್ತಿ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.
ಹೌದು! 2023ರ ಆಗಸ್ಟ್ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.
http://Visit : www.suddidina.com
ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ:
ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.
ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಕುಟುಂಬದ ಬಜೆಟ್ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:
ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.
ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ದಿನದ ಸುದ್ದಿ
ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!
ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪರ್ಕಿಸುವ 20,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ 8 ಬಹು ಟ್ರ್ಯಾಕಿಂಗ್ (Multi-Tracking) ರೈಲು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ (ಸೆ.09) ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆಗಳು ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅನುಷ್ಠಾನಗೊಳ್ಳಲಿವೆ.
http://Visit : www.suddidina.com
ಈ ಯೋಜನೆಗಳಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವು ಬರೋಬ್ಬರಿ 1,200 ಕಿಲೋಮೀಟರ್ಗಳಷ್ಟು ವಿಸ್ತರಣೆಯಾಗಲಿದೆ. ಇದರಿಂದ 6,900ಕ್ಕೂ ಹೆಚ್ಚು ಗ್ರಾಮಗಳಿಗೆ ಸುಧಾರಿತ ಸಂಪರ್ಕ ಸಿಗಲಿದ್ದು, ರೈಲುಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಗಣನೀಯವಾಗಿ ಹೆಚ್ಚಾಗಲಿದೆ.
ಯಾವೆಲ್ಲ ಯೋಜನೆಗಳಿಗೆ ಅನುಮೋದನೆ?
ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಪ್ರಮುಖ ಯೋಜನೆಗಳು ಹೀಗಿವೆ:
1. ಅರಾಕೋಣಂ-ರೇಣಿಗುಂಟಾ ಮತ್ತು ವೈಟ್ಫೀಲ್ಡ್-ಬಂಗಾರಪೇಟೆ ನಡುವೆ 3 ಮತ್ತು 4ನೇ ಮಾರ್ಗ: ಇದು ಕರ್ನಾಟಕ ಮತ್ತು ತಮಿಳುನಾಡು, ಆಂಧ್ರಪ್ರದೇಶಕ್ಕೆ ಅತ್ಯಂತ ಮಹತ್ವದ ಯೋಜನೆಯಾಗಿದೆ.
2. ಸಿಕಂದರಾಬಾದ್-ಕಾಜಿಪೇಟೆ ನಡುವೆ ಮಲ್ಟಿ ಟ್ರ್ಯಾಕಿಂಗ್: ತೆಲಂಗಾಣದ ಪ್ರಮುಖ ಮಾರ್ಗದ ದಟ್ಟಣೆ ಕಡಿಮೆ ಮಾಡಲಿದೆ.
3. ಹೊಸೂರು-ಓಮಲೂರು, ಸೇಲಂ-ಕರೂರ್-ದಿಂಡಿಗಲ್ ಜೋಡಿ ಹಳಿ ಯೋಜನೆ: ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ಸಂಪರ್ಕವನ್ನು ಬಲಪಡಿಸಲಿದೆ.
4. ಖರಗ್ಪುರ-ಝಾರ್ಸುಗುಡ ಮತ್ತು ಕತ್ನಿ-ಪೆಂದ್ರ ರಸ್ತೆ ನಡುವೆ 4ನೇ ಮಾರ್ಗ ಮತ್ತು ಬಿಲಾಸ್ಪುರ್-ಪೆಂದ್ರ ರಸ್ತೆ ನಡುವೆ 3ನೇ ಮಾರ್ಗ: ಛತ್ತೀಸ್ಗಢ, ಒಡಿಶಾ, ಮಧ್ಯಪ್ರದೇಶದ ಕಲ್ಲಿದ್ದಲು ಮತ್ತು ಖನಿಜ ಸಾಗಣೆಗೆ ಸಹಕಾರಿಯಾಗಲಿದೆ.
ಈ ಎಲ್ಲಾ ಯೋಜನೆಗಳು ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಛತ್ತೀಸ್ಗಢ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಳ್ಳಲಿವೆ.
ಕರ್ನಾಟಕಕ್ಕೆ ಏನು ಲಾಭ?
ಈ ಬಹು ಟ್ರ್ಯಾಕಿಂಗ್ ಯೋಜನೆಗಳಿಂದ ಕರ್ನಾಟಕಕ್ಕೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ.ಕೈಗಾರಿಕೆಗಳಿಗೆ ಅನುಕೂಲ: ರಾಜ್ಯದ ಉಕ್ಕು ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳಾದ ಖನಿಜ ಸಾಗಿಸಲು ವಾಡಿ-ತಂದೂರು, ಮೋಟುಮಾರಿ-ವಿಷ್ಣುಪುರಂ ಮಾರ್ಗದಲ್ಲಿನ ಅಭಿವೃದ್ಧಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಹೂಟಗಿ, ಕೂಡಗಿ, ಯಾದ್ಲಾಪುರ, ಬಳ್ಳಾರಿ ಮತ್ತು ಯರಮರಸ್ನಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆ ಇನ್ನಷ್ಟು ವೇಗ ಮತ್ತು ಸುಲಭವಾಗಲಿದೆ.
ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ದಟ್ಟಣೆ ಕಡಿಮೆ: ವೈಟ್ಫೀಲ್ಡ್-ಬಂಗಾರಪೇಟೆ ನಡುವಿನ 47 ಕಿ.ಮೀ ಉದ್ದದ 3 ಮತ್ತು 4ನೇ ಮಾರ್ಗವು ಅತ್ಯಂತ ದಟ್ಟಣೆಯ ಮನ್ಮಾಡ-ಹುಬ್ಬಳ್ಳಿ-ಬೆಂಗಳೂರು-ಜೋಳರಪೇಟೆ ವಿಭಾಗದಡಿ ಬರುತ್ತದೆ. ಇದು ಬೆಂಗಳೂರು-ಚೆನ್ನೈ ನಡುವಿನ ರೈಲು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ.
ಪ್ರವಾಸೋದ್ಯಮ ಮತ್ತು ಸರಕು ಸಾಗಣೆಗೆ ಉತ್ತೇಜನ: ಹೊಸೂರು-ಓಮಲೂರು ಜೋಡಿ ಹಳಿ ಮಾರ್ಗದಿಂದ ಕನ್ಯಾಕುಮಾರಿ, ರಾಮೇಶ್ವರಂನಂತಹ ಪುಣ್ಯಕ್ಷೇತ್ರಗಳಿಗೆ ತೆರಳುವ ಲಕ್ಷಾಂತರ ಯಾತ್ರಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಸರಕು ಸಾಗಣೆಯೂ ವೇಗವಾಗಲಿದೆ.ಒಟ್ಟಾರೆಯಾಗಿ, ಈ ಯೋಜನೆಗಳು ಕೇವಲ ರೈಲು ಮಾರ್ಗಗಳ ವಿಸ್ತರಣೆಯಷ್ಟೇ ಅಲ್ಲ, ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಸಂಪರ್ಕಕ್ಕೆ ಹೊಸ ಶಕ್ತಿ ತುಂಬಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ದಿನದ ಸುದ್ದಿ
ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
ಸುದ್ದಿದಿನ, ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಶತಕದ ಸಂಭ್ರಮವನ್ನು ಆಚರಿಸಲು ರಾಜ್ಯ ಸರ್ಕಾರವು `ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ’ ಎಂಬ ವಿಶೇಷ ಮತ್ತು ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮವು ನಾಳೆ ಅಂದರೆ 2026ನೇ ಸೆಪ್ಟೆಂಬರ್ 10ರ ಗುರುವಾರ ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಪ್ರತಿಷ್ಠಿತ ಬ್ಯಾಂಕ್ವೇಟ್ ಸಭಾಂಗಣದಲ್ಲಿ ನಡೆಯಲಿದೆ. ಸರ್ಕಾರದ ನೂರು ದಿನಗಳ ಸಾಧನೆ, ಜನಪರ ಯೋಜನೆಗಳ ಅನುಷ್ಠಾನ ಮತ್ತು ಮುಂದಿನ ಅಭಿವೃದ್ಧಿಯ ದೂರದೃಷ್ಟಿಯನ್ನು ಜನರ ಮುಂದಿಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಗಣ್ಯರ ದಂಡು, ಸಿದ್ದರಾಮಯ್ಯರಿಂದ ಉದ್ಘಾಟನೆ:
ಈ ಶತದಿನೋತ್ಸವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿನ ಒಗ್ಗಟ್ಟು ಮತ್ತು ನಾಯಕತ್ವದ ನಿರಂತರತೆಯನ್ನು ಸಂಕೇತಿಸುತ್ತದೆ.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಜಿ. ಪರಮೇಶ್ವರ್, ರಾಜ್ಯ ಸಂಪುಟದ ಎಲ್ಲಾ ಸಚಿವರು, ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಭಾಗವಹಿಸಲಿದ್ದಾರೆ. ಇದರ ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
http://Visit : www.suddidina.com
ಫಲಾನುಭವಿಗಳೊಂದಿಗೆ ನೇರ ಸಂವಾದ – ಕಾರ್ಯಕ್ರಮದ ಪ್ರಮುಖ ಆಕರ್ಷಣೆ
ಈ ಕಾರ್ಯಕ್ರಮದ ಅತ್ಯಂತ ಪ್ರಮುಖ ಆಕರ್ಷಣೆ ಎಂದರೆ ಮುಖ್ಯಮಂತ್ರಿಗಳೊಂದಿಗೆ ಫಲಾನುಭವಿಗಳ ನೇರ ಸಂವಾದ. ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳು ಈ ವೇದಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ದೃಢ ಕರ್ನಾಟಕದ ಸಂಕಲ್ಪ
ಶತಕದ ಪಥ – ಪ್ರಗತಿಯ ರಥ100 ದಿನಗಳು.. ಇದು ಕೇವಲ ಆರಂಭವಷ್ಟೇ. ಜನರ ಆಶಯಗಳಿಗೆ ಸ್ಪಂದಿಸಿ, ರಾಜ್ಯದ ಸಮಗ್ರ ಅಭಿವೃದ್ಧಿಗೆ ವೇಗ ನೀಡುವ ಸಂಕಲ್ಪದೊಂದಿಗೆ ಕಳೆದ 100 ದಿನಗಳಲ್ಲಿ ಹಲವು ಮಹತ್ವದ ಹೆಜ್ಜೆಗಳನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ, ಉದ್ಯೋಗ, ತಂತ್ರಜ್ಞಾನ, ಮೂಲಸೌಕರ್ಯ, ಶಿಕ್ಷಣ, ಕೃಷಿ ಹಾಗೂ… pic.twitter.com/NDViSWw6LV
— DK Shivakumar (@DKShivakumar) September 10, 2026
ಕೇವಲ ಗ್ಯಾರಂಟಿ ಯೋಜನೆಗಳಷ್ಟೇ ಅಲ್ಲದೆ, ಸಮಾಜದ ವಿವಿಧ ವರ್ಗಗಳ ಶ್ರಮಿಕರು ಮತ್ತು ಕಾರ್ಮಿಕರು ಕೂಡ ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೃಷಿಕರು, ಆಟೋ ಚಾಲಕರು, ಹಮಾಲಿಗಳು, ಗಿಗ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೌರಕಾರ್ಮಿಕರು ತಮ್ಮ ಬದುಕಿನಲ್ಲಿ ಸರ್ಕಾರದ ಯೋಜನೆಗಳಿಂದ ಆಗಿರುವ ಬದಲಾವಣೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಮುಕ್ತವಾಗಿ ಮಾತನಾಡಲಿದ್ದಾರೆ.
100 ದಿನಗಳಲ್ಲಿ ಸರ್ಕಾರವು ಕೈಗೊಂಡಿರುವ ಜನಪರ ನಿರ್ಧಾರಗಳು, ಅಭಿವೃದ್ಧಿ ಕಾಮಗಾರಿಗಳು ಮತ್ತು ಆಡಳಿತದಲ್ಲಿ ತಂದಿರುವ ಪಾರದರ್ಶಕತೆಯ ಬಗ್ಗೆ ಈ ವೇದಿಕೆಯಲ್ಲಿ ಚರ್ಚೆ ನಡೆಯಲಿದೆ. ಸರ್ಕಾರದ ಸಾಧನೆಗಳನ್ನು ಕೇವಲ ಭಾಷಣದ ಮೂಲಕವಲ್ಲ, ಬದಲಾಗಿ ಫಲಾನುಭವಿಗಳ ಬಾಯಿಂದಲೇ ಜನರಿಗೆ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ದಿನಗಳಲ್ಲಿ ದೃಢ ಕರ್ನಾಟಕ’ ನಿರ್ಮಾಣದ ನಿಟ್ಟಿನಲ್ಲಿ ಸರ್ಕಾರದ ಮುಂದಿನ 5 ವರ್ಷಗಳ ಕಾರ್ಯಯೋಜನೆ ಮತ್ತು ರೂಪುರೇಷೆಗಳನ್ನು ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.




