ದಿನದ ಸುದ್ದಿ
ದಾವಣಗೆರೆ | ನಾಳೆಯಿಂದಲೇ ಹೋಟೆಲ್ ಕಾರ್ಯಾರಂಭಕ್ಕೆ ಸೂಚನೆ ; ತಾವಿರುವಲ್ಲಿಯೇ ಪಡಿತರ ಪಡೆಯಿರಿ: ಜಿಲ್ಲಾಧಿಕಾರಿ
ಸುದ್ದಿದಿನ,ದಾವಣಗೆರೆ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‍ಡೌನ್‍ನಿಂದ ಸಿಲುಕಿಕೊಂಡಿರುವ ನೆರೆ ಜಿಲ್ಲೆಗಳ ಹಾಗೂ ನೆರೆ ರಾಜ್ಯಗಳ ಸಾರ್ವಜನಿಕರು ತಮ್ಮ ಬಳಿ ಪಡಿತರ ಚೀಟಿ ಇದ್ದಲ್ಲಿ ತಾವಿರುವಲ್ಲಿಯೇ ಪಡಿತರ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಇಂದು ಜಿಲ್ಲಾಡಳಿತದ ಭವನದ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ಯಾವುದೇ ನಿರಾಶ್ರಿತರು ಹಸಿವಿನಿಂದ ಬಳಲಬಾರದು. ವಿವಿಧ ರಾಜ್ಯಗಳ ಕಾರ್ಮಿಕರು, ಅಲೆಮಾರಿ ಜನಾಂಗದವರು, ಅವರು ಇರುವಲ್ಲಿಗೆ ಅಧಿಕಾರಿಗಳು ತೆರಳಿ ತಯಾರಿಸಿದ ಆಹಾರ ಅಥವಾ ಪಡಿತರ ಒದಗಿಸುವ ಮೂಲಕ ಅವರಿಗೆ ನೆರವು ನೀಡಬೇಕೆಂದರು.
ಲೈಂಗಿಕ ಕಾರ್ಯಕರ್ತರು, ಮಂಗಳಮುಖಿಯರ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಸಂಬಂಧಿಸಿದ ತಹಶೀಲ್ದಾರರು ವರದಿ ಪಡೆದು ಅವರಿಗೆ ಅಗತ್ಯ ಪಡಿತರ ವಿತರಿಸಲು ಕ್ರಮ ತೆಗೆದುಕೊಳ್ಳಬೇಕೆಂದರು.
ಜಿಲ್ಲೆಯಲ್ಲಿ 156 ಸಫಾಯಿ ಕರ್ಮಚಾರಿ ಕುಟುಂಬಗಳಿದ್ದು, ಅವರಲ್ಲಿ ಕೆಲವರಿಗೆ ಪಡಿತರ ಚೀಟಿ ಇದೆ. ಒಂದು ವೇಳೆ ಇಲ್ಲದವರಿಗೂ ಅಗತ್ಯ ಪಡಿತರ ನೀಡಿ. ಮತ್ತು ಬೇಕರಿಗಳು ಕಾರ್ಯಾರಂಭವಾಗಿರುವ ಬಗ್ಗೆ ಖಚಿತಪಡಿಸಿ ಎಂದರು.
- ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ ಜಮಾತೆ ಇಸ್ಲಾಂ ಧರ್ಮಸಭೆಯಲ್ಲಿ ಹಾಜರಾದ ಐದು ವ್ಯಕ್ತಿಗಳು ನಗರದಲ್ಲಿ ಇದ್ದಾರೆಂಬ ಟಿವಿ ಮಾಧ್ಯಮದಲ್ಲಿ ಸುದ್ದಿ ಬಂದಿದ್ದು, ಅವರು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಪಡಬೇಕು. ಅಥವಾ ಯಾರಾದರೂ ಅವರ ಅಕ್ಕಪಕ್ಕ ವಾಸಿಸುವವರು ಅಂತಹವರ ಮಾಹಿತಿ ನೀಡಿದರೆ, ಅಂತಹವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು.
|ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿಗಳು
ಬಳ್ಳಾರಿಯ ಹೊಸಪೇಟೆಯ ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿ ನಗರದ ಇಎಸ್‍ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಅವರನ್ನು ತಪಾಸಣೆ ನಡೆಸಿದ ವೈದ್ಯರನ್ನು ಹೋಮ್ ಕ್ವಾರೆಂಟೈನ್‍ನಲ್ಲಿ ಇಡಲಾಗಿದೆ. ಅವರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎಂದರು.
ಲಾಕ್‍ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಒಟ್ಟು 78 ವಾಹನಗಳನ್ನು ಸೀಜ್ ಮಾಡಲಾಗಿದ್ದು, ದಯಮಾಡಿ ಸಾರ್ವಜನಿಕರು ಮನೆಯಿಂದ ಹೊರ ಹೋಗಲು ಕಾರಣ ಬೇಡ. ಮನೆಯಲ್ಲಿರಲು ಹಲವಾರು ಕಾರಣಗಳಿವೆ ಎಂದರು.
ಈ ಕುರಿತು ಜನಪ್ರತಿನಿಧಿಗಳು ಸಾರ್ವಜನಿಕರಲ್ಲಿ ಮನವಿ ಮಾಡಬೇಕೆಂದು ನಾನು ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಹಾಗೂ ವಿವಿಧ ಧರ್ಮಗುರುಗಳು, ಸಮಾಜದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.
ದಾವಣಗೆರೆ ಮತ್ತು ಹರಿಹರ ಹೊರತುಪಡಿಸಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ಮತ್ತು ಗರ್ಭಿಣಿ, ಬಾಣಂತಿಯರಿಗೆ ಮೊಟ್ಟೆಗಳನ್ನು ನೀಡಬೇಕೆಂದರು.
ಆಹಾರ ಇಲಾಖೆಯ ಉಪ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಜಿಲ್ಲೆಯ ರೈಸ್‍ಮಿಲ್‍ಗಳು, ದಾಲ್‍ಮಿಲ್‍ಗಳು ಕಾರ್ಯಾರಂಭ ಮಾಡಿದ್ದು, ಪೂರಕ ಸಾಮಗ್ರಿಗಳು ದೊರೆಯುತ್ತಿವೆ ಎಂದು ಮಾಲೀಕರು ತಿಳಿಸಿದ್ದಾರೆ ಎಂದರು.
ಹೋಟೆಲ್ ತೆರೆಯಲು ಜಿಲ್ಲಾಧಿಕಾರಿ ಸೂಚನೆ
ಕೊರೊನಾ ವೈರಸ್ ಹಿನ್ನೆಲೆ ಲಾಕ್‍ಡೌನ್ ಇದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಹೋಟೆಲ್‍ಗಳನ್ನು ಕಾರ್ಯಾರಂಭ ಮಾಡಬೇಕು. ಪ್ರಮುಖವಾಗಿ ನೂತನ್ ಕಾಲೇಜು ರಸ್ತೆಯ ಸವಿತಾ ಹೋಟೆಲ್, ವಿದ್ಯಾನಗರದ ಸಿಗಂಧೂರೇಶ್ವರಿ ಹೋಟೆಲ್, ಅಜ್ಜಿ ಹೋಟೆಲ್ ಖಾನಾವಳಿ, ಆಂಜನೇಯ ಬಡಾವಣೆಯ ಬಿಐಇಟಿ ರಸ್ತೆಯ ಮಮತಾ ಹೋಟೆಲ್, ಹದಡಿ ರಸ್ತೆಯ ಶಿವಸಾಗರ್ ಹೋಟೆಲ್‍ಗಳನ್ನು ಏ.1 ರಿಂದಲೇ ತೆರೆಯಬೇಕು. ಉಳಿದ ಹೋಟೆಲ್‍ಗಳವರು ಈ ಕೂಡಲೇ ತೆರೆಯಬೇಕೆಂದರು.
ಸಭೆಯಲ್ಲಿ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಪಾಲಿಕೆ ಆಯುಕ್ತರಾದ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಇತರೆ ಅಧಿಕಾರಿಗಳು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೆ.ಆರ್.ಐ.ಡಿ.ಎಲ್, ಮಾಯಕೊಂಡ ವ್ಯಾಪ್ತಿ ; 20 ಕೋಟಿ ಅನುದಾನ : ತನಿಖೆಗೆ ಒಳಪಡಿಸಲು ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಕೆಆರ್.ಐ.ಡಿ.ಎಲ್ ವಿಭಾಗ-2ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬಿಡುಗಡೆಯಾದ ರೂ. 20 ಕೋಟಿ ಮೊತ್ತದ 51 ಕಾಮಗಾರಿಗಳನ್ನು ಸೂಕ್ತ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ರೂ. 20 ಕೋಟಿ ಅನುದಾನದಲ್ಲಿ ನಡೆದಿರುವ 51 ಕಾಮಗಾರಿಗಳ ಬಗ್ಗೆ ಅನುಮಾನ ಕಂಡುಬಂದಿದ್ದು, ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಕೋರಿದಾಗ ಬಹುತೇಕ ಕಾಮಗಾರಿಗಳು ನಡೆದಿರುವುದಿಲ್ಲ ಎಂಬುದಾಗಿ ಹಿಂಬರಹ ನೀಡಿರುತ್ತಾರೆ. ಹೀಗಾಗಿ 51 ಕಾಮಗಾರಿಗೆ ಸಂಬಂಧಿಸಿದಂತೆ ನಿತೀನ್ ಎಸ್. ಜಾಧವ್, ಸಹಾಯಕ ಕಾರ್ಯಪಾಲಕ ಅಭಿಯಂತರು, ಕೆ.ಆರ್.ಐ.ಡಿ.ಎಲ್, ಮಾಯಕೊಂಡ ಇವರ ವಿರುದ್ಧ ಪ್ರಕರಣ ದಾಖಲಿಸಿ ರೂ. 20 ಕೋಟಿ ಮೊತ್ತದಲ್ಲಿ ನಡೆದಿರುವ 51 ಕಾಮಗಾರಿಗಳನ್ನು ನಿಯಮಾನುಸಾರ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೀಡಿರುವ ಮುಂಬಡ್ತಿಯ ಸ್ಥಳ ನಿಯುಕ್ತಿಗೆ ಸಂಬAಧಿಸಿದ ಆನ್‍ಲೈನ್ ಕೌನ್ಸಿಲಿಂಗ್ನಲ್ಲಿ ಪಾರದರ್ಶಕತೆಯನ್ನು ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳನ್ನು ಸೇವಾ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಅರ್ಹ ದ್ವಿತೀಯ ದರ್ಜೆ ಸಹಾಯಕರ ವೃಂದದಿAದ ಮುಂಬಡ್ತಿ ಮೂಲಕ ಭರ್ತಿ ಮಾಡಲು ಮುಂದಾಗಿದ್ದು, ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ದಿನಾಂಕ: 12-11-2025 ರಂದು ಆನ್‍ಲೈನ್ ಕೌನ್ಸಿಲಿಂಗ್ ನಡೆಸಿ, ಸ್ಥಳ ನಿಯುಕ್ತಿ ಮಾಡಿ, ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ಪ್ರಥಮ ದರ್ಜೆ ಸಹಾಯಕರ ಪಟ್ಟಿಯನ್ನು ಬಿಡುಗಡೆಗೊಸಲಾಗಿರುತ್ತದೆ.
ಆದರೆ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ಪಟ್ಟಿಯಲ್ಲಿ ಆಯುಕ್ತರ ಕಛೇರಿ, ಬೆಂಗಳೂರು ಇಲ್ಲಿ 03 ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯನ್ನು ಗುರುತಿಸಲಾಗಿರುತ್ತದೆ. ಆದರೆ ಆದೇಶ ಪ್ರತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಮುಂಬಡ್ತಿಯಲ್ಲಿ 10 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿಗೆ ಆಯ್ಕೆ ಮಾಡಿಕೊಂಡಿರುವ 10 ಅಭ್ಯರ್ಥಿಗಳಲ್ಲಿ 05 ಅಭ್ಯರ್ಥಿಗಳನ್ನು ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ ಯಥಾ ಪ್ರಕಾರ ಮುಂದುವರೆಸಲಾಗಿರುತ್ತದೆ.
ಹೀಗಾಗಿ ಸದರಿ ಮುಂಬಡ್ತಿ ಪ್ರಕ್ರಿಯೆಯು ನಿಯಮಬಾಹಿರವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿ 10 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


