ದಿನದ ಸುದ್ದಿ
‘ವಠಾರ ಶಾಲೆ’ ನಡೆಸುವ ಬಗ್ಗೆ ಕಾರ್ಯಕ್ರಮ ರೂಪಿಸಬೇಕು : ಸಚಿವ ಸುರೇಶ ಕುಮಾರ್
ಸುದ್ದಿದಿನ,ಬೆಳಗಾವಿ: ಕೊರೊನಾ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆ ಮತ್ತು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಪರೀಕ್ಷೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರಾದ ಎಸ್.ಸುರೇಶ್ ಕುಮಾರ್ ಹೇಳಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ (ಜೂ. 2) ನಡೆದ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಧನೆ ಮಾಡಬೇಕು ಎಂಬ ಮಕ್ಕಳ ಕನಸಿಗೆ ಪರೀಕ್ಷೆ ಮೂಲಕ ಪೋಷಿಸುವ ಅಗತ್ಯವಿದೆ. ಮಕ್ಕಳ ಭವಿಷ್ಯದ ಹಾಗೂ ಹಿತದ ದೃಷ್ಟಿಯಿಂದ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಆದ್ದರಿಂದ ಮಕ್ಕಳ ಸುರಕ್ಷತೆ ಮತ್ತು ಆತ್ಮವಿಶ್ವಾಸ ಬೆಳೆಸಲು ಮುಂದಾಗುವಂತೆ ಶಿಕ್ಷಕ ಸಮುದಾಯಕ್ಕೆ ತಿಳಿಸಿದರು.
ಎಲ್ಲರಿಗೂ ಸ್ಮಾರ್ಟ್ ಫೋನ್ ಅಥವಾ ನೆಟವರ್ಕ್ ಸಿಗದಿರುವುದರಿಂದ ಮನೆ ಮನೆಗೆ ತೆರಳಿ ಪಾಠ ಮಾಡುವುದರ ಜತೆಗೆ ಗ್ರಾಮದ ದೊಡ್ಡ ಮನೆ ಅಥವಾ ಕಟ್ಟಡಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು “ವಠಾರ ಶಾಲೆ” ನಡೆಸುವ ಬಗ್ಗೆ ಕಾರ್ಯಕ್ರಮ ರೂಪಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರಾದ ಸುರೇಶ್ ಕುಮಾರ್ ಸಚಿವರು ಸಲಹೆ ನೀಡಿದರು.
ವಿಶೇಷವಾದ ಸನ್ನಿವೇಶದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಕಿರುವುದರಿಂದ ರಾಜ್ಯದ ಎಲ್ಲ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ ಎಂದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಶೀಲಿಸಿದ ನ್ಯಾಯಾಲಯವು ಪರೀಕ್ಷೆ ನಡೆಸಬಹುದು ಎಂದು ಅಭಿಪ್ರಾಯಪಟ್ಟಿದೆ. ಅದೇ ರೀತಿ ಕೇಂದ್ರ ಸರ್ಕಾರ ಕೂಡ ಹಸಿರುನಿಶಾನೆ ತೋರಿಸಿದೆ ಎಂದರು.
ಸಮುದಾಯ ರೆಡಿಯೋ, ವಾಟ್ಸಾಪ್ ಮತ್ತಿತರ ಮಾರ್ಗಗಳ ಮೂಲಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನಿರಂತರ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆ ನಡೆದಿದೆ. ಇದೇ ರೀತಿ ಇನ್ನೂ ಹದಿನೈದು ದಿನಗಳ ಕಾಲ ಈ ಪ್ರಕ್ರಿಯೆ ಮುಂದುವರಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಮಾಡಿಸಬೇಕು ಎಂದು ಶಿಕ್ಷಕರಿಗೆ ತಿಳಿಸಿದರು.
ಪರೀಕ್ಷಾ ಕೇಂದ್ರಕ್ಕೆ ಉಚಿತ ಸ್ಯಾನಿಟೈಸರ್ ಪೂರೈಕೆ
ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಈಗಾಗಲೇ ಉಚಿತವಾಗಿ ಸ್ಯಾನಿಟೈಸರ್ ಪೂರೈಸಲಾಗಿದೆ. ಪರೀಕ್ಷಾ ಕೇಂದ್ರದ ಎಲ್ಲ ಶಿಕ್ಷಕರು, ಸಿಬ್ಬಂದಿ ಕೂಡ ಕೈಗವಸ ಹಾಕಿಕೊಳ್ಳಬೇಕು. ಪ್ರತಿ ಇನ್ನೂರು ಮಕ್ಕಳಿಗೆ ಒಂದು ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡುವುದು ಸೇರಿದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವರು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಶೌಚಾಲಯ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಆರೋಗ್ಯ, ಸಾರಿಗೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಜತೆಗೆ ಸಭೆ ನಡೆಸಿ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆಯಾಗದಿರಲಿ
ವಲಸೆ ಕಾರ್ಮಿಕರ ಮಕ್ಕಳಿಗೆ ಅವರು ಇರುವ ಗ್ರಾಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಕಂಟೈನ್ಮೆಂಟ್ ಝೋನ್ ನಲ್ಲಿ ಪರೀಕ್ಷಾ ಕೇಂದ್ರ ಇರದಂತೆ ನೋಡಿಕೊಳ್ಳಬೇಕು.
ಪರೀಕ್ಷೆಯ ಪಾವಿತ್ರ್ಯತೆ ಅಥವಾ ಗಾಂಭಿರ್ಯತೆಗೆ ಕುಂದು ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದರು.
ಮಕ್ಕಳಲ್ಲಿ ಕಲಿಕೆಯ ಗುಣಮಟ್ಟ ವೃದ್ಧಿಗೊಳಿಸಲು ಶಿಕ್ಷಕರು ಕೈಗೊಂಡ ವಿಶೇಷ ಕಾರ್ಯಕ್ರಮಗಳ ಬಗ್ಗೆ ಸಚಿವರು ಮಾಹಿತಿಯನ್ನು ಪಡೆದುಕೊಂಡರು.
ಪರೀಕ್ಷಾ ಪ್ರವೇಶ ಪತ್ರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಕೆಲ ನಿರ್ದಿಷ್ಟ ಸ್ಥಳಗಳಲ್ಲಿ ಸಮುದಾಯ ಭವನ ಮತ್ತಿತರ ಕಡೆಗಳಲ್ಲಿ ಗುಂಪು ಅಧ್ಯಯನಕ್ಕೆ ಅನುಕೂಲ ಆಗುವಂತೆ ರಾತ್ರಿ ವೇಳೆ ಪಾಠ ಮಾಡಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ಮಳೆಗಾಲ ಆರಂಭಗೊಂಡಿರುವುದರಿಂದ ಓದಲು ತೊಂದರೆಯಾಗುವ ಮಕ್ಕಳಿಗೆ ವಸತಿನಿಲಯದ ಸೌಲಭ್ಯ ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಅದೇ ರೀತಿ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಶುಚಿತ್ವ ಕಡೆಗೆ ಕೂಡ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಡಾ.ರಾಜೇಂದ್ರ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲು ಗ್ರಾಮಗಳ ಗ್ರಂಥಾಲಯಗಳನ್ನು “ಓದುವ ಮನೆ”ಯಾಗಿ ಪರಿವರ್ತಿಸುವ ಸಲಹೆ ನೀಡಿದರು.
ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಸಿದ್ದಲಿಂಗಯ್ಯ ಹಿರೇಮಠ, ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ವ್ಯವಸ್ಥೆಯಿದ್ದು, ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಿದ್ದಾರೆ ಎಂದು ಹೇಳಿದರು.
ಹೆಚ್ಚುವರಿ ಕೊಠಡಿ; ಪರ್ಯಾಯ ವ್ಯವಸ್ಥೆ
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ಸಂದರ್ಭದಲ್ಲಿ ಅಗತ್ಯಬಿದ್ದರೆ ಎರಡು ಹೆಚ್ಚುವರಿ ಕೊಠಡಿಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಜಾನನ ಮನ್ನಿಕೇರಿ ತಿಳಿಸಿದರು.
ಪರೀಕ್ಷೆ ಸಂದರ್ಭದಲ್ಲಿ ಯಾವುದಾದರೂ ಶಾಲೆಯ ವ್ಯಾಪ್ತಿಯಲ್ಲಿ ಸೋಂಕು ಪತ್ತೆಯಾಗಿ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿದರೆ ಪರ್ಯಾಯ ವ್ಯವಸ್ಥೆಯನ್ನು ಕೂಡ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಪ್ರತಿದಿನ ಪರೀಕ್ಷೆ ಆರಂಭಕ್ಕಿಂತ ಮುಂಚೆ ಹಾಗೂ ನಂತರ ಕೊಠಡಿಯನ್ನು ಶುಚಿಗೊಳಿಸುವುದು ಮತ್ತು ಪರೀಕ್ಷೆಗೆ ಹಾಜರಾಗುವ ಎಲ್ಲ ಮಕ್ಕಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರಿಗೆ ವಿವರಿಸಿದರು.
ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಕೆಡೆಟ್ ಗಳನ್ನು ಸ್ವಯಂ ಸೇವಕರಾಗಿ ನಿಯೋಜಿಸಲು ಉದ್ದೇಶಿಸಲಾಗಿದೆ ಎಂದು ಚಿಕ್ಕೋಡಿ ಡಿಡಿಪಿಐ ಮನ್ನಿಕೇರಿ ತಿಳಿಸಿದರು.ಪರೀಕ್ಷೆ ಸಂದರ್ಭದಲ್ಲಿ ಮಕ್ಕಳಿಗೆ ಅಗತ್ಯ ಸಾರಿಗೆ ಸೌಲಭ್ಯ ಒದಗಿಸುವ ಬಗ್ಗೆ ಸಾರಿಗೆ ಇಲಾಖೆ ಜತೆ ಚರ್ಚೆ ನಡೆಸಲಾಗುತ್ತಿದೆ ಎಂದರು.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಸಿದ್ಧತೆ ಕುರಿತು ಹಾಗೂ ಪರೀಕ್ಷೆ ಸಂದರ್ಭದಲ್ಲಿ ತೆಗೆದುಕೊಳ್ಳಲಿರುವ ಕ್ರಮಗಳ ಕುರಿತು ಡಿಡಿಪಿಐ ಎ.ಬಿ.ಪುಂಡಲೀಕ ಮಾಹಿತಿಯನ್ನು ನೀಡಿದರು.
ಪರೀಕ್ಷಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಪೂರೈಕೆ ಹಾಗೂ ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡುವ ಬಗ್ಗೆ ವಿವರಿಸಿದರು.ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


