ದಿನದ ಸುದ್ದಿ
ಸಮೀಪಿಸುತ್ತಿದೆ ಎಸ್.ಎಸ್.ಎಲ್.ಸಿ ಪರೀಕ್ಷೆ ; ಹೆಚ್ಚಾಗುತ್ತಿದೆ ಅಂಕ ಗಳಿಕೆಯ ನಿರೀಕ್ಷೆ..?
- ಕುಮಾರಸ್ವಾಮಿ.ವಿ.ಕೆ,ಮುಖ್ಯ ಶಿಕ್ಷಕರು,ಸಿದ್ಧಾರ್ಥ ಆಂಗ್ಲ ಪ್ರೌಢಶಾಲೆ,ತೋಟಗೆರೆ, ಬೆಂಗಳೂರು ಉತ್ತರ
ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಈಗ ದಿನಗಣನೆ ಆರಂಭವಾಗಿದೆ. ನಿರಂತರ ಅಭ್ಯಾಸದಲ್ಲಿರುವ ವಿದ್ಯಾರ್ಥಿಗಳು ಕೆಲವೇ ದಿನಗಳಲ್ಲಿ ಪರೀಕ್ಷೆ ಬರೆದು ನಿರಾಳಗೊಳ್ಳಲಿದ್ದಾರೆ. ವರ್ಷಪೂರ್ತಿ ಅಭ್ಯಾಸ ಮಾಡಿದ ಪಾಠಗಳನ್ನು ಕೇವಲ ಮೂರು ಗಂಟೆಗಳ ಪರೀಕ್ಷೆಯಲ್ಲಿ ಬರಯುವುದು ಅತ್ಯಂತ ಸವಾಲಿನ ಕೆಲಸವೂ ಹೌದು. ಹೀಗಾಗಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಇಲ್ಲೊಂದಿಷ್ಟು ಸೂಚನೆಗಳು.
ಪುನರ್ಮನನವಷ್ಟೇ ಬಾಕಿ
ವಿದ್ಯಾರ್ಥಿಗಳು ಈಗಾಗಲೇ ನಿರಂತರ ಅಭ್ಯಾಸದಲ್ಲಿ ತೊಡಗಿದ್ದು, ಪರೀಕ್ಷೆ ಬರೆಯಲು ಸಂಪೂರ್ಣವಾಗಿ ತಯಾರಿ ಮಾಡಿಕೊಂಡಿದ್ದಾರೆ. ಈ ಹಂತದಲ್ಲಿ ಎಲ್ಲವನ್ನೂ ಓದಲು ಸವiಯಾವಕಾಶ ಇಲ್ಲದಿರುವುದರಿಂದ ಈಗಾಗಲೇ ಮಕ್ಕಳು ಕಲಿತಿರುವ ವಿಷಯಗಳನ್ನು ಪುನರರ್ಮನನ ಮಾಡಬೇಕಿದೆ. ತಾವು ತಯಾರಿಸಿಟ್ಟುಕೊಂಡಿರುವ ಮುಖ್ಯಾಂಶಗಳು, ಟಿಪ್ಪಣಿಗಳು ಇತ್ಯಾದಿ ಅಧ್ಯಯನ ಸಾಮಗ್ರಿಗಳನ್ನು ದಿನಕ್ಕೊಮ್ಮೆ ಮೆಲುಕು ಹಾಕುವುದರಿಂದ ಪರೀಕ್ಷೆಗೆ ಸಾಕಷ್ಟು ಅನುಕೂಲವಾಗುತ್ತದೆ.
ಒತ್ತಡ ಬೇಡ
ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯನ್ನೂ ಸೇರಿ ವಿದ್ಯಾರ್ಥಿಗಳು ಈಗಾಗಲೇ ಸಾಕಷ್ಟು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಎದುರಿಸಿಯಾಗಿದೆ. ಸದರಿ ಪರೀಕ್ಷೆಗಳಲ್ಲಿ ಮಕ್ಕಳಿಗೆ ಮುಖ್ಯ ಪರೀಕ್ಷೆಗೆ ಸಂಬಂಧಿಸಿದ ಸಾಕಷ್ಟು ನಿರ್ದೇಶನಗಳು ದೊರೆತಿರುತ್ತವೆ. ಆದ್ದರಿಂದ ಮಕ್ಕಳು ಯಾವುದೇ ಹಂತದಲ್ಲಿ ತಮ್ಮ ಮೇಲೆ ಒತ್ತಡ ಹಾಕಿಕೊಳ್ಳದೆ ನಿರಾತಂಕವಾಗಿದ್ದಾಗ ಮಾತ್ರ ಹೆಚ್ಚು ಅಂಕ ಗಳಿಸಲು ಸಾಧ್ಯ. ಅಲ್ಲದೇ ಹಿಂದಿನ ಪರೀಕ್ಷೆಗಳಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇದು ಸಕಾಲವಾಗಿದೆ.
ಎರಡು ವರ್ಷಗಳ ಅಂತರ
ಹಾಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ತಯಾರಿರುವ ವಿದ್ಯಾರ್ಥಿಗಳು ಶಾಲೆಗಳಲ್ಲಿ ನೇರ ಪರೀಕ್ಷೆ ಬರೆದು ಎರಡು ವರ್ಷಗಳಾಗಿವೆ. ಏಳನೇ ತರಗತಿಯ ಪರೀಕ್ಷೆ ಮುಗಿಸಿದ ನಂತರ ಕೊರೋನಾ ಕಾರಣದಿಂದ ಬಹುತೇಕ ಪರೀಕ್ಷೆಗಳು ಆನ್‌ಲೈನ್‌ನಲ್ಲೇ ನಡೆದಿವೆ. ಹೀಗಾಗಿ ಮಕ್ಕಳಿಗೆ ಸಹಜವಾಗಿಯೇ ಶೈಕ್ಷಣಿಕ ಅಂತರ ಕಾಡುತ್ತಿರುತ್ತದೆ. ಅದೂ ಅಲ್ಲದೇ ಬರವಣಿಗೆ ಶೈಲಿಯೂ ಬದಲಾಗಿರುತ್ತದೆ. ಹೀಗಾಗಿ ಮಕ್ಕಳು ಉಳಿದಿರುವ ಕಾಲಾವಧಿಯಲ್ಲಿ ಹೆಚ್ಚು ಬರವಣಿಗೆಗೆ ಮಹತ್ವ ಕೊಡಬೇಕಿದೆ.
ಪಠ್ಯ ಪುಸ್ತಕವೆಂಬ ಸ್ನೇಹಿತ
ಮಕ್ಕಳಲ್ಲಿ ಹತ್ತಾರು ರೀತಿಯ ಅಧ್ಯಯನ ಸಾಮಗ್ರಿಗಳು ಈಗಾಗಲೇ ಇರಬಹುದು ನಿಜ. ಆದರೆ ಎಲ್ಲಕ್ಕಿಂತ ಮಿಗಿಲಾಗಿ ಯಾವ ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಓದಿಗೆ ಪ್ರಾಮುಖ್ಯತೆ ನೀಡುತ್ತಾರೋ, ಸಹಜವಾಗಿಯೇ ಅವರ ಅಂಕಗಳಿಕೆ ಹೆಚ್ಚಾಗುತ್ತದೆ. ಪರೀಕ್ಷೆಗೆ ಬರುವ ಯಾವುದೇ ಪ್ರಶ್ನೆಗಳು ಪಠ್ಯ ಪುಸ್ತಕವನ್ನು ಆಧರಿಸಿರುತ್ತವೆ. ಆದ್ದರಿಂದ ಮಕ್ಕಳು ಹೆಚ್ಚಾಗಿ ಪಠ್ಯ ಪುಸ್ತಕವನ್ನು ಒಳ್ಳೆಯ ಸ್ನೇಹಿತನಂತೆ ಬಳಸಿಕೊಳ್ಳಬೇಕಿದೆ.
ಇರುವ ಭಾಗ್ಯವ ನೆನೆದು ಬಾರನೆಂಬುದನು ಬಿಡು! :
ಬಹುತೇಕ ವಿದ್ಯಾರ್ಥಿಗಳು ಮಾಡುತ್ತಿರುವ ದೊಡ್ಡ ತಪ್ಪೇನೆಂದರೆ ಪ್ರಶ್ನೆ ಪತ್ರಿಕೆಯನ್ನು ಓದಿದಾಗ ತಮಗೆ ಗೊತ್ತಿಲ್ಲದಿರುವ ಯಾವುದೋ ಒಂದೆರಡು ಪ್ರಶ್ನೆಗಳ ಬಗ್ಗೆ ಗಾಬರಿಯಾಗಿ ಅದನ್ನೇ ಚಿಂತಿಸುತ್ತಾ ಕುಳಿತು, ಗೊತ್ತಿರುವ ಪ್ರಶ್ನೆಗಳ ಉತ್ತರವನ್ನೂ ಮರೆಯುತ್ತಿದ್ದಾರೆ. ಇದರಿಂದ ಅವರ ಅಂಕ ಗಳಿಕೆಯ ಮೇಲೆ ಋಣಾತ್ಮಕ ಪ್ರಭಾವ ಬೀರುವುದು ಖಚಿತ. ಆದ್ದರಿಂದ ಮೊದಲು ಗೊತ್ತಿರುವ ಪ್ರಶ್ನೆಗಳಿಗೆ ಉತ್ತರ ಬರೆಯುವುದನ್ನು ರೂಢಿಸಿಕೊಳ್ಳಬೇಕಿದೆ.
ಹಳೆಯ ಪ್ರಶ್ನೆ ಪತ್ರಿಕೆಗಳ ವಿಮರ್ಶೆ
ವಿದ್ಯಾರ್ಥಿಗಳಿಗೆ ಅತೀ ಹೆಚ್ಚು ಸಹಾಯ ಮಾಡುವುದೇ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು. ಅದರಲ್ಲೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇದು ವರದಾನವೇ ಆಗಿದೆ. ಪ್ರೌಢ ಶಿಕ್ಷಣ ಮಂಡಳಿಯಲ್ಲಿರುವ ಲಭ್ಯವಿರುವ ಹಿಂದಿನ ಮೂರು ನಾಲ್ಕು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಮಕ್ಕಳು ಅಭ್ಯಸಿಸಿದಾಗ ಅವರಿಗೆ ಪರೀಕ್ಷೆ ಬರೆಯಲು ಇನ್ನೂ ವಿಶ್ವಾಸ ಹೆಚ್ಚಾಗುತ್ತದೆ. ಅಲ್ಲದೇ ಗೊತ್ತಿಲ್ಲದಿರುವ ಸುಮರು ಪ್ರಶ್ನೆಗಳಿಗೆ ಉತ್ತರವೂ ಸಿಗುತ್ತದೆ.
ಶಿಕ್ಷಕರೊಂದಿಗೆ ಸಂಪರ್ಕ
ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಅಭ್ಯಸಿಸುವ ಮುನ್ನ ಸಂಬAಧಿಸಿದ ವಿಷಯ ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಸ್ವಯಂ ಅಭ್ಯಾಸ ಮಾಡಿದಾಗ ಎಲ್ಲವೂ ಗೊಂದಲಮಯವಾಗಿ ಪರೀಕ್ಷೆಗೆ ತೊಡಕಾಗುವುದು ಖಚಿತ. ಆದ್ದರಿಂದ ತಮಗೆ ಏನೇ ಸಂದೇಹಗಳು ಬಂದಲ್ಲಿ ಕೂಡಲೇ ಅದನ್ನು ಶಿಕ್ಷಕರಿಂದ ಬಗೆಹರಿಸಿಕೊಂಡು ಮುಂದೆ ಸಾಗಬೇಕು.
ಬಿಡುವಿಲ್ಲದ ಓದು ಬೇಡ
ಹೆಚ್ಚು ಅಂಕಗಳಿಕೆ ನಿರೀಕ್ಷೆಯಲ್ಲಿರುವ ಮಕ್ಕಳು ಎರಡು – ಮೂರು ಗಂಟೆಗಳ ನಿರಂತರ ಅಭ್ಯಾಸದಲ್ಲಿ ತೊಡಗುವುದರಿಂದ ಅವರ ಸ್ಮರಣ ಶಕ್ತಿ ಕಡಿಮೆಯಾಗುವುದು ಖಚಿತ. ಆದ್ದರಿಂದ ಮಕ್ಕಳು ಕನಿಷ್ಠ ಅರ್ಧ ಗಂಟೆ ಓದಿ ನಂತರ ಹತ್ತರಿಂದ ಹದಿನೈದು ನಿಮಿಷಗಳ ಬ್ರೇಕೆ ಪಡೆದಾಗ ಓದಿದ ವಿಚಾರಗಳು ಮನಸ್ಸಿನಲ್ಲೇ ಉಳಿಯುತ್ತವೆ. ಓದುವಾಗ ಯಾವುದೇ ವಿಧಧ ಗದ್ದಲವಿರದ ಸ್ಥಳದ ಆಯ್ಕೆ ಅತಿ ಅಗತ್ಯ.
ಪರೀಕ್ಷೆಗೆ ಅಗತ್ಯವಾದ ಪ್ರಮುಖ ಸೂಚನೆಗಳು
- ಬರವಣಿಗೆ ಸ್ಫುಟವಾಗಿರಲಿ ಸಮಯದ ಹೊಂದಾಣಿಕೆ ಅತ್ಯಗತ್ಯ
- ಪ್ರಶ್ನೆ ಪತ್ರಿಕೆಯನ್ನು ಚೆನ್ನಾಗಿ ಓದಿ ನೋಂದಣಿ ಸಂಖ್ಯೆಯನ್ನು ತಪ್ಪಿಲ್ಲದೆ ಬರೆಯಿರಿ
- ಪ್ರಶ್ನೆಗಳ ಸಂಖ್ಯೆಯನ್ನು ಸರಿಯಾಗಿ ಬರೆಯಿರಿ ಮರೆಯದೆ ಪ್ರವೇಶ ಪತ್ರವನ್ನು ಒಯ್ಯಿರಿ
- ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ಪರೀಕ್ಷೆಗೆ ಬೇಕಾದ ಉಪಕರಣಗಳನ್ನು ಮರೆಯದೆ ತೆಗೆದುಕೊಂಡು ಹೋಗಿ
- ಪರೀಕ್ಷೆಗೆ ಮುನ್ನ ಅನಗತ್ಯ ಚರ್ಚೆ ಬೇಡ ಪರೀಕ್ಷೆಗೆ ಒಂದು ಗಂಟೆಗಿಂತ ಮುಂಚೆ ಓದುವುದನ್ನು ನಿಲ್ಲಿಸಿ
- ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರವನ್ನು ತಲುಪಿರಿ
- ವದಂತಿಗಳಿಗೆ ಕಿವಿ ಕೊಡಬೇಡಿ
- ಸಡಿಲವಾದ ಉಡುಪುಗಳನ್ನು ಧರಿಸಿ ಪರೀಕ್ಷೆಯನ್ನು ಒಂದು ಹಬ್ಬದಂತೆ ಸ್ವೀಕರಿಸಿ
- ಪರೀಕ್ಷೆ ಮುಗಿಯವರೆಗೂ ಮೊಬೈಲ್, ಟಿವಿ ವೀಕ್ಷಣೆಯಿಂದ ದೂರವಿರಿ ನಿಯಮಿತ ನಿದ್ದೆ, ಧ್ಯಾನ, ವ್ಯಾಯಾಮಗಳಂತಹ ಕ್ರಿಯೆ ನಿಮ್ಮ ಸ್ಮರಣಯನ್ನು ಹೆಚ್ಚು ಮಾಡುತ್ತದೆ.
- ಎಲ್ಲಾ ವಿಷಯದ ಪರೀಕ್ಷೆ ಮುಗಿಯುವವರೆಗೂ ಮಾದರಿ ಉತ್ತರಗಳ ಬಗ್ಗೆ ಚಿಂತಿಸದಿರಿ ಕೇವಲ ಅಂಕಗಳಿಗಾಗಿ ಅಲ್ಲ, ಉತ್ತಮ ಭವಿಷ್ಯಕ್ಕಾಗಿ ಪರೀಕ್ಷೆ ಬರೆಯಿರಿ.
- ಮುಖ್ಯಾಂಶಗಳಿಗೆ ಅಡಿಗೆರೆ ಹಾಕಿರಿ ಅಪರಿಚಿತರಿಗೆ ನಿಮ್ಮ ನೋಂದಣಿ ಸಂಖ್ಯೆಯನ್ನು ನೀಡದಿರಿ.
- ಕೊರೊನಾ ನಿಯಮಗಳನ್ನು ತಪ್ಪದೇ ಪಾಲಿಸಿ ಉತ್ತರ ಪತ್ರಿಕೆಯನ್ನು ಹಿಂತಿರುಗಿಸುವ ಮುನ್ನ ಗಮನವಿಟ್ಟು ಪರಿಶಿಲೀಸಿ.
- ಎಲ್ಲಾ ಪ್ರಶ್ನೆಗಳಿಗೂ ತಪ್ಪದೇ ಉತ್ತರಿಸಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಕರ ನಿರ್ದೇಶನದಂತೆ ಸಹಿ ಮಾಡಲು ಮರೆಯದಿರಿ
ಓದುವ ಕೋಣೆ ಗಾಳಿ, ಬೆಳಕಿನಿಂದ ಕೂಡಿರಲಿ ಆತ್ಮ ವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ
(ಕುಮಾರಸ್ವಾಮಿ.ವಿ.ಕೆ
ಮುಖ್ಯ ಶಿಕ್ಷಕರು,
ಸಿದ್ಧಾರ್ಥ ಆಂಗ್ಲ ಪ್ರೌಢಶಾಲೆ,
ತೋಟಗೆರೆ, ಬೆಂಗಳೂರು ಉತ್ತರ
ಮೊ : ೯೧೧೩೯೦೬೧೨೦)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಕಲಿ ವೈದ್ಯರಿಗೆ ದಂಡ ; ಮೆಡಿಕಲ್ ಸ್ಟೋರ್ ಮುಚ್ಚಲು ಆದೇಶ
ಸುದ್ದಿದಿನ,ದಾವಣಗೆರೆ:ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ನಕಲಿ ವೈದ್ಯ ಹಾಗೂ ಲಿಂಗಾಪುರದಲ್ಲಿ ಫಾರ್ಮಾಸಿಸ್ಟ್ ನಡೆಸುತ್ತಿದ್ದ ಕ್ಲಿನಿಕ್ ಮುಚ್ಚಿಸಿ ತಲಾ ಲಕ್ಷ ರೂ.ಗಳ ದಂಡ ಪಾವತಿಸುವಂತೆ ಜಿಲ್ಲಾಧಿಕಾರಿ ಹಾಗೂ ಕೆಪಿಎಂಇ ನೊಂದಣಿ ಪ್ರಾಧಿಕಾರ ಹಾಗೂ ಸಾರ್ವಜನಿಕ ಕುಂದುಕೊರತೆ ನಿವಾರಣಾ ಸಮಿತಿ ಅಧ್ಯಕ್ಷರಾದ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಭದ್ರಾವತಿ ತಾಲ್ಲೂಕಿನ ಸನ್ಯಾಸಿಕೊಡಮಗ್ಗಿ ಗ್ರಾಮದ 57 ವರ್ಷದ ಶ್ರೀನಿವಾಸ್ ತಂದೆ ತಿಮ್ಮಪ್ಪ ಇವರು ಹೊನ್ನಾಳಿ ತಾಲ್ಲೂಕಿನ ಲಿಂಗಾಪುರದಲ್ಲಿ ಶೀನಪ್ಪಗೌಡ ಎಂಬುವರ ಮನೆ ಬಾಡಿಗೆ ಪಡೆದು ಹಲವು ವರ್ಷಗಳಿಂದ ಶ್ರೀ ರಾಮಾಂಜನೇಯ ಮೆಡಿಕಲ್ಸ್ ಮತ್ತು ಜನರಲ್ ಸ್ಟೋರ್ ಎಂದು ಪರವಾನಗಿ ಪಡೆದು ಜೊತೆಗೆ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಾ ಜನರಿಗೆ ಚಿಕಿತ್ಸೆ ನೀಡುತ್ತಿದ್ದನು. ಇವರು ಪಡೆದ ಮೆಡಿಕಲ್ ಸ್ಟೋರ್ ಲೈಸೆನ್ಸ್ ರದ್ದುಪಡಿಸಿ ಒಂದು ಲಕ್ಷ ದಂಡ ವಿಧಿಸಲಾಗಿದೆ.
ಮತ್ತೊಬ್ಬ ನಕಲಿ ವೈದ್ಯ ಹಿರೇಕೇರೂರು ತಾಲ್ಲೂಕಿನ ಹಿರೇ ಮರಬ ಗ್ರಾಮದ 45 ವರ್ಷದ ಲಕ್ಷ್ಮಣ ಬಿನ್ ಫಕ್ಕೀರಪ್ಪ ಇವರು ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ದೇವಸ್ಥಾನದ ಹತ್ತಿರ ಬಸವನಗೌಡ ಎಂಬುವರಿಂದ ಮನೆ ಬಾಡಿಗೆ ಪಡೆದು ಹಲವು ವರ್ಷಗಳಿಂದ ಅನಧಿಕೃತ ಕ್ಲಿನಿಕ್ ನಡೆಸುತ್ತಾ ಬಂದಿದ್ದರು. ತಪಾಸಣೆ ವೇಳೆ ಬಿಇಎಂಎಸ್ ಪ್ರಮಾಣ ಪತ್ರ ಹೊಂದಲಾಗಿದೆ ಎಂಬ ಮಾಹಿತಿ ನೀಡಿದ್ದು ಇದು ಅಮಾನ್ಯ ಪ್ರಮಾಣ ಪತ್ರವಾಗಿರುವುದರಿಂದ ನಕಲಿ ಎಂದು ಪರಿಗಣಿಸಿ ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.
ಈ ನಕಲಿ ಕ್ಲಿನಿಕ್ ಗಳ ಬಗ್ಗೆ ಹೊನ್ನಾಳಿ ಉಪ ವಿಭಾಗಾಧಿಕಾರಿ ಅಭಿಷೇಕ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಸ್ಥಳ ಮಹಾಜರು ಮಾಡಿ ಸಮಗ್ರ ವರದಿ ನೀಡಿದ್ದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಕೆಪಿಎಂಇ ನೊಂದಣಿ ಸದಸ್ಯ ಕಾರ್ಯದರ್ಶಿ ಡಾ.ಷಣ್ಮುಖಪ್ಪ ಜಿಲ್ಲಾಧಿಕಾರಿಗಳಿಗೆ ಸಮಗ್ರ ವರದಿಯೊಂದಿಗೆ ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
AI ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಪ್ರಕಟ
ಸುದ್ದಿದಿನಡೆಸ್ಕ್:ಕೃತಕ ಬುದ್ಧಿಮತ್ತೆ ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಟೈಮ್ ಪತ್ರಿಕೆ ಪ್ರಕಟಿಸಿದ್ದು, ಅದರಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸ್ಥಾನ ಪಡೆದಿದ್ದಾರೆ.
ಅಶ್ವಿನಿ ವೈಷ್ಣವ್ ಅವರನ್ನು ಶಾರ್ಪರ್ ವರ್ಗದಲ್ಲಿ ಹೆಸರಿಸಲಾಗಿದ್ದು, ಅವರ ನಾಯಕತ್ವದಲ್ಲಿ ಮುಂದಿನ 5 ವರ್ಷಗಳಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಕ್ಷೇತ್ರದ ಮೊದಲ 5 ದೇಶಗಳಲ್ಲಿ ಭಾರತ ಸ್ಥಾನ ಪಡೆಯುವ ಆಶಯದಲ್ಲಿದೆ ಎಂದು ಟೈಮ್ ಮ್ಯಾಗ್‌ಜೀನ್ ಬರೆದಿದೆ.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿಸುವ ಪ್ರಯತ್ನದಲ್ಲಿ ಸಚಿವರು ನಿರ್ವಹಿಸಿದ ಮಹತ್ವದ ಪಾತ್ರದ ಹಿನ್ನೆಲೆಯಲ್ಲಿ ಪಟ್ಟಿಯಲ್ಲಿ ಅವರ ಹೆಸರು ನಮೂದಿತವಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆ ನೀಡಿದ ಇನ್ಫೋಸೀಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಸಿಇಓಗಳಾದ ಗೂಗಲ್‌ನ ಸುಂದರ್ ಪಿಚಾಯಿ, ಮೈಕ್ರೋಸಾಫ್ಟ್‌ನ ಸತ್ಯ ನಾದೆಲ್ಲಾ, ಓಪನ್‌ಎಐ ನ ಸ್ಯಾಮ್ ಅಲ್ಟ್‌ಮನ್, ಮೆಟಾದ ಮಾರ್ಕ್ ಝುಕೇರ್‌ಬರ್ಗ್ ಟೈಮ್ ಪ್ರಕಟಿಸಿದ ಪಟ್ಟಿಯಲ್ಲಿ ಸೇರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಾಜಧಾನಿಯಲ್ಲಿ ಅಪಾಯಕಾರಿ ಮರಗಳನ್ನು ಕತ್ತರಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ
ಸುದ್ದಿದಿನಡೆಸ್ಕ್:ರಾಜಧಾನಿ ಬೆಂಗಳೂರಿನಲ್ಲಿ 15 ದಿನದೊಳಗೆ ಗುಂಡಿ ಮುಚ್ಚುವಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಸೂಚಿಸಿದ್ದಾರೆ.
ವಿದೇಶ ಪ್ರವಾಸಕ್ಕೂ ಮುನ್ನ ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಇಂದು ಸಭೆ ನಡೆಸಿದ ಅವರು ಸರಿಯಾಗಿ ಕಾರ್ಯನಿವಹಿಸದ ಅಧಿಕಾರಿಗಳನ್ನು ಅಮಾನತುಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಸೆಪ್ಟಂಬರ್‌ನಲ್ಲಿ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ತಿಳಿಸಿದ ಅವರು, ಅಪಾಯಕಾರಿ ಮರಗಳಿದ್ದರೆ, ಕತ್ತರಿಸುವಂತೆ ಸೂಚಿಸಿದ್ದಾರೆ.
ಯಾವುದೇ ದೂರು ಬಂದರೆ ಅಧಿಕಾರಿಗಳೇ ನೇರ ಹೊಣೆ ಎಂದಿದ್ದಾರೆ. ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಮೌನೀಶ್ ಮೌದ್ಗೀಲ್, ಬಿಎಂಆರ್ಡಿಎ ಆಯುಕ್ತ, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ರಾಯಚೂರು | ಶಾಲಾ ಬಸ್ ಅಪಘಾತ ; ಇಬ್ಬರು ವಿದ್ಯಾರ್ಥಿಗಳು ಸಾವು
-
ದಿನದ ಸುದ್ದಿ5 days ago
ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ
-
ದಿನದ ಸುದ್ದಿ6 days ago
ಸರ್ಕಾರಿ ಐಟಿಐ ಪ್ರವೇಶಕ್ಕೆ ಆಹ್ವಾನ
-
ದಿನದ ಸುದ್ದಿ4 days ago
ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು
-
ದಿನದ ಸುದ್ದಿ5 days ago
ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ
-
ದಿನದ ಸುದ್ದಿ5 days ago
ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ
-
ದಿನದ ಸುದ್ದಿ4 days ago
ರಿವರ್ ಕ್ರಾಸಿಂಗ್ ತರಬೇತಿ ; ಬೋಟ್ ಮುಳುಗಿ ಇಬ್ಬರು ಕಮಾಂಡೋಗಳು ಸಾವು