Connect with us

ದಿನದ ಸುದ್ದಿ

ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ; ಇದು ಬಿಜೆಪಿಯು ‘ಭೂತಾಯಿಗೆ ಬಗೆವ ದ್ರೋಹ’ : ಸಿದ್ದರಾಮಯ್ಯ ಆಕ್ರೋಶ

Published

on

ಸುದ್ದಿದಿನ, ಬೆಂಗಳೂರು: ಉದ್ಯಮಿಗಳು, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಗಳು ಅಸಹಾಯಕ ರೈತರಿಗೆ ವಂಚಿಸಿ ಸುಲಭದಲ್ಲಿ ಭೂಮಿ ಖರೀದಿ ಮಾಡಲು ನೆರವಾಗುವ ಉದ್ದೇಶದಿಂದಲೇ ಈ ತಿದ್ದುಪಡಿಯನ್ನು ತರಲಾಗಿದೆ. ಇದರಲ್ಲಿ ಯಾವ ರೈತರ ಹಿತದೃಷ್ಟಿಯೂ ಇಲ್ಲ ಎಂದು ಮುಖ್ಯಂಮತ್ರಿ ಸಿದ್ದರಾಮಯ್ಯ ಹೇಳಿದರು.

ಭೂ ಸುಧಾರಣೆ ಕಾಯ್ದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿಗೆ ತಂದು ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಿದ್ದರು, ರಾಜ್ಯ ಬಿಜೆಪಿ ಸರ್ಕಾರ ಉಳ್ಳವನನ್ನೇ ಭೂ ಒಡೆಯನನ್ನಾಗಿ ಮಾಡಲು ಹೊರಟಿದೆ ಎಂದರು.

ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79ಎ, ಬಿ, ಸಿ ಮತ್ತು 80ನೇ ಕಲಂಗಳನ್ನು ರದ್ದುಗೊಳಿಸಿ, ಕಲಂ 63ರಲ್ಲಿ ನಿಗದಿಪಡಿಸಿದ ಭೂ ಒಡೆತನದ ಮಿತಿಯನ್ನು ದ್ವಿಗುಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಕೃಷಿ ಕ್ಷೇತ್ರದ ಶವಪೆಟ್ಟಿಗೆಗೆ ಹೊಡೆದಿರುವ ಕೊನೆಯ ಮೊಳೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಭೂಮಿ ಖರೀದಿಗೆ ಆದಾಯದ ಮಿತಿಯ ಸೆಕ್ಷನ್ 79ಎ, ಕೃಷಿಕರೇತರರಿಗೆ ಭೂಮಿ ಖರೀದಿ ನಿಷೇಧಿಸಿದ್ದ ಸೆಕ್ಷನ್ 79ಬಿ, ಸುಳ್ಳು ಪ್ರಮಾಣಪತ್ರಕ್ಕೆ ದಂಡ ವಿಧಿಸುವ ಸೆಕ್ಷನ್ 79 ಸಿ, ಕೃಷಿಕರಲ್ಲದವರಿಗೆ ಭೂಮಿ ವರ್ಗಾವಣೆ ನಿಷೇಧಿಸಿದ್ದ ಸೆಕ್ಷನ್ 80, ಗರಿಷ್ಠ ಭೂಮಿತಿಯ ಸೆಕ್ಷನ್ 63ರ ರದ್ದತಿ ಭೂತಾಯಿಗೆ ಬಗೆವ ದ್ರೋಹ‌ ಎಂದು ಕಿಡಿಕಾರಿದರು.

ತಿದ್ದುಪಡಿಗೆ ಒಳಗಾಗಿರುವ ಎಲ್ಲಾ ಸೆಕ್ಷನ್ ಗಳು ಭೂಮಲೀಕರ ದೌರ್ಜನ್ಯದಿಂದ ಸಣ್ಣ ರೈತರನ್ನು ರಕ್ಷಿಸುವ ಹಾಗೂ ಸಣ್ಣ ಪುಟ್ಟ ಹಿಡುವಳಿದಾರರ ಅಸಹಾಯಕತೆಯನ್ನು ಶ್ರೀಮಂತರು ಹಾಗು ಉದ್ಯಮಿಗಳು ದುರುಪಯೋಗ ಪಡಿಸಿಕೊಳ್ಳದಂತೆ ತಡೆಹಿಡಿಯುವ ಅವಕಾಶಗಳನ್ನು ಒದಗಿಸುತ್ತಿದ್ದವು ಎಂದು ನುಡಿದರು.

ಈ ಎಲ್ಲಾ ತಿದ್ದುಪಡಿಗಳ ಪರಿಣಾಮವಾಗಿ ಕಾರ್ಪೋರೇಟ್ ಸಂಸ್ಥೆಗಳು, ರಿಯಲ್ ಎಸ್ಟೇಟ್ ಕುಳಗಳು ಮತ್ತು ಶ್ರೀಮಂತರು ಸುಲಭವಾಗಿ ಕೃಷಿ ಭೂಮಿಯನ್ನು ಕಬಳಿಸಬಹುದು. ಸಣ್ಣ ರೈತಾಪಿಗಳು ಇನ್ನಷ್ಟು ವೇಗವಾಗಿ ಹಾಗೂ ಶಾಸನಬದ್ಧವಾಗಿ ಕೃಷಿಯಿಂದ ಹೊರದೂಡಲ್ಪಡುತ್ತಾರೆ ಎಂದರು.

ಭೂ ಸುಧಾರಣೆ ಕಾಯ್ದೆಯ ಉಲ್ಲಂಘನೆ ಮಾಡಿರುವ ಅಂದಾಜು 60,000 ಎಕರೆ ಜಮೀನು ಒಳಗೊಂಡಿರುವ 13,814 ಪ್ರಕರಣಗಳು ರಾಜ್ಯದ ನ್ಯಾಯಾಲಯದಲ್ಲಿವೆ. ಪ್ರಸ್ತಾಪಿತ ತಿದ್ದುಪಡಿಯಿಂದ ಈ ಎಲ್ಲ ಪ್ರಕರಣಗಳು ರದ್ದಾಗಿ ಅಕ್ರಮಗಳೆಲ್ಲ ಸಕ್ರಮವಾಗಲಿವೆ. ಈ ಭೂಗಳ್ಳರನ್ನು ರಕ್ಷಿಸಲಿಕ್ಕಾಗಿಯೇ ತಿದ್ದುಪಡಿ ತರಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭೂ ಸುಧಾರಣೆ ಕಾಯ್ದೆ ಉಲ್ಲಂಘಣೆಯ 13,814 ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಭೂಮಿಗೆ ಚಿನ್ನದ ಬೆಲೆ ಇರುವ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿದೆ. ಈ ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಶಾಮೀಲಾಗಿ ಸರ್ಕಾರ ಈ ತಿದ್ದುಪಡಿ ತಂದಿದೆ ಎಂದು ಕಿಡಿಕಾರಿದರು.

ಭೂ ಸುಧಾರಣೆ ತಿದ್ದುಪಡಿಯ ಹಿಂದೆ ಕೋಟ್ಯಂತರ ರೂಪಾಯಿಗಳ ಹಗರಣ ಇದೆ. ಅಂದಾಜು 60,000 ಎಕರೆ ಜಮೀನನ್ನು ಪಡೆಯಲಿರುವ ಭೂಗಳ್ಳರಿಂದ ಆಡಳಿತ ಪಕ್ಷದವರಿಗೆ ಏನು ಲಾಭ ಎನ್ನುವುದನ್ನು ನಾನು ವಿವರಿಸಲು ಹೋಗುವುದಿಲ್ಲ‌ ಎಂದರು.

ಭೂ ಸುಧಾರಣಾ ಕಾಯ್ದೆಯಿಂದಾಗಿ ಭ್ರಷ್ಟಾಚಾರ ಹೆಚ್ಚಾಗಿದೆ, ಅಧಿಕಾರಿಗಳು ಲಂಚ ಹೊಡೆಯಲು ಅನುಕೂಲವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಲಂಚ ಎಲ್ಲಿ ಇಲ್ಲ? ತಹಶೀಲ್ದಾರ್, ಪೊಲೀಸ್, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಲಂಚ ಇಲ್ಲವೇ? ನಿರ್ಮೂಲನೆ ಮಾಡಬೇಕಾಗಿರುವುದು ಲಂಚವನ್ನೇ? ಇಲ್ಲ ಕಾನೂನನ್ನೇ? ಎಂದು ಪ್ರಶ್ನಿಸಿದರು.

ಅಧಿಕಾರಿಗಳು ಲಂಚಕೋರರಾಗಿದ್ದಾರೆ ಎಂದರೆ ಸರ್ಕಾರ ಅವರನ್ನು ನಿಯಂತ್ರಿಸಲು ವಿಫಲವಾಗಿದೆ ಇಲ್ಲವೇ ಸರ್ಕಾರವೇ ಲಂಚಕೋರರ ಜೊತೆ ಶಾಮೀಲಾಗಿದೆ ಎಂದರ್ಥವಲ್ಲವೇ? ಇದನ್ನೂ ಸಮರ್ಥಿಸಿಕೊಳ್ಳಲು ನಾಚಿಕೆ ಆಗುವುದಿಲ್ವೇ? ಎಂದರು.

ಇಡೀ ದೇಶ ಕೊರೊನಾ ಸೋಂಕಿನಿಂದ ತತ್ತರಿಸುತ್ತಿರುವಾಗ ತರಾತುರಿಯಲ್ಲಿ ಈ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ತರುವ ಅನಿವಾರ್ಯತೆ ಏನಿತ್ತು? ಇದನ್ನು ತರುವ ಮೊದಲು ರೈತರ ಜೊತೆ ಸಮಾಲೋಚನೆ ಮಾಡಿದ್ದೀರಾ? ವಿರೋಧ ಪಕ್ಷಗಳ ಜೊತೆ ಚರ್ಚೆ ಮಾಡಿದ್ದೀರಾ? ಕನಿಷ್ಠ ನಿಮ್ಮ ಪಕ್ಷದೊಳಗಾದರೂ ಚರ್ಚೆ ಮಾಡಿದ್ದೀರಾ? ಎಂದು ನುಡಿದರು.

ಈ ಭೂ ಸುಧಾರಣಾ ತಿದ್ದುಪಡಿಯಿಂದ ಕೃಷಿಗೇನು ತೊಂದರೆಯಾಗಲಾರದು ಎಂದು ಹೇಳುತ್ತೀರಲ್ಲಾ? ಕೃಷಿಯೇತರ ಬಳಕೆಗೆ ಕೃಷಿ ಭೂಮಿಯನ್ನು ಬಳಸಿಕೊಳ್ಳಬಾರದೆಂಬ ನಿರ್ಬಂಧವೇನಾದರೂ ತಿದ್ದುಪಡಿಯಲ್ಲಿದೆಯೇ? ಯಾಕೆ ಅದನ್ನು ಸೇರಿಸಿಲ್ಲ? ಇದರ ಹಿಂದಿನ ದುರುದ್ದೇಶ ಏನು? ಎಂದರು.

ರೈತ ವಿರೋಧಿಯಾಗಿರುವ ಭೂ ಸುಧಾರಣಾ ತಿದ್ದುಪಡಿಯನ್ನು ನಾವು ಮಾತ್ರವಲ್ಲ, ಆಡಳಿತ ಪಕ್ಷದ ಸದಸ್ಯರಲ್ಲಿ ಆತ್ಮಸಾಕ್ಷಿ ಇದ್ದರೆ ಅವರೂ ವಿರೋಧಿಸಬೇಕು ಎಂದು ಮನವಿ ಮಾಡುತ್ತೇವೆ. ನಮ್ಮ ಹೋರಾಟ ಸದನಕ್ಕೆ ಮಾತ್ರ ಸೀಮಿತವಲ್ಲ, ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಸತಿ ಯೋಜನೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.

ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..

Published

on

1. ಸಮತೋಲಿತ ಆಹಾರ (Balanced Diet): ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶವಿರುವ (fiber) ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳುಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ. ಕಾರ್ಬೋಹೈಡ್ರೇಟ್ ಹಾಗೂ ಎಣ್ಣೆಯಂಶವಿರುವ ಆಹಾರವನ್ನು ಕಡಿಮೆ ಮಾಡಿ.

2. ಸಿಹಿ ಪದಾರ್ಥಗಳ ನಿಯಂತ್ರಣ (Avoid Sweets): ಸಕ್ಕರೆ, ಬೆಲ್ಲ, ಬೇಕರಿ ತಿಂಡಿಗಳು, ಐಸ್‌ಕ್ರೀಮ್ ಮತ್ತು ಕೃತಕ ಸಕ್ಕರೆ ಇರುವ ತಂಪು ಪಾನೀಯಗಳ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ ಅಥವಾ ದೂರವಿಡಿ.

3. ದಿನನಿತ್ಯದ ವ್ಯಾಯಾಮ (Regular Exercise): ಪ್ರತಿದಿನ ಕನಿಷ್ಠ 30 ರಿಂದ 45 ನಿಮಿಷಗಳ ಕಾಲ ವೇಗದ ನಡಿಗೆ (brisk walking), ಸೈಕ್ಲಿಂಗ್, ಈಜು ಅಥವಾ ಯೋಗ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.

4. ದೇಹದ ತೂಕದ ನಿರ್ವಹಣೆ (Weight Management): ಅತಿಯಾದ ದೇಹದ ತೂಕವು ಇನ್ಸುಲಿನ್ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ತೂಕವನ್ನು ಆರೋಗ್ಯಕರ ಮಿತಿಯಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ.

5. ನಿಯಮಿತ ರಕ್ತದ ಪರೀಕ್ಷೆ (Regular Blood Sugar Check): ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Fasting ಮತ್ತು Post Prandial) ಹಾಗೂ ಮೂರು ತಿಂಗಳ ಸರಾಸರಿ ತಿಳಿಸುವ HbA1c ಪರೀಕ್ಷೆಯನ್ನು ಮಾಡಿಸಿಕೊಳ್ಳಿ.

6. ಸಮಯಕ್ಕೆ ಸರಿಯಾಗಿ ಔಷಧಿ ಸೇವನೆ (Timely Medication): ವೈದ್ಯರು ಸೂಚಿಸಿದ ಮಾತ್ರೆಗಳನ್ನು ಅಥವಾ ಇನ್ಸುಲಿನ್ ಅನ್ನು ನಿಗದಿತ ಸಮಯಕ್ಕೆ ತೆಗೆದುಕೊಳ್ಳಿ. ಸ್ವಂತ ನಿರ್ಧಾರದಿಂದ ಔಷಧಿಯನ್ನು ನಿಲ್ಲಿಸಬೇಡಿ.

7. ಮಾನಸಿಕ ಒತ್ತಡದ ನಿರ್ವಹಣೆ (Stress Management): ಅತಿಯಾದ ಮಾನಸಿಕ ಒತ್ತಡವು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ (Meditation) ಅಥವಾ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ.

8. ಪೂರಕ ನೀರು ಕುಡಿಯುವುದು (Stay Hydrated): ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಇದು ದೇಹದಲ್ಲಿರುವ ಹೆಚ್ಚುವರಿ ಗ್ಲೂಕೋಸ್ ಮೂತ್ರದ ಮೂಲಕ ಹೊರಹೋಗಲು ಸಹಾಯ ಮಾಡುತ್ತದೆ.

9. ಉತ್ತಮ ನಿದ್ರೆ (Good Sleep): ಪ್ರತಿದಿನ ರಾತ್ರಿ 7 ರಿಂದ 8 ಗಂಟೆಗಳ ಕಾಲ ಶಾಂತಿಯುತವಾದ ನಿದ್ರೆ ಮಾಡುವುದು ದೇಹದ ಚಯಾಪಚಯ ಕ್ರಿಯೆ (Metabolism) ಮತ್ತು ಹಾರ್ಮೋನ್‌ಗಳ ಸಮತೋಲನಕ್ಕೆ ಬಹಳ ಮುಖ್ಯ.

10. ದುರಭ್ಯಾಸಗಳಿಂದ ದೂರವಿರಿ (Avoid Smoking and Alcohol): ಧೂಮಪಾನ ಮತ್ತು ಮದ್ಯಪಾನವು ಸಕ್ಕರೆ ಕಾಯಿಲೆಯ ತೊಂದರೆಗಳನ್ನು (ಹೃದಯ ಮತ್ತು ನರಗಳ ಸಮಸ್ಯೆ) ಮತ್ತಷ್ಟು ಹೆಚ್ಚು ಮಾಡುವುದರಿಂದ ಇವುಗಳಿಂದ ದೂರವಿರುವುದು ಒಳ್ಳೆಯದು.

ಗಮನಿಸಿ: ಈ ಮೇಲಿನ ಮಾಹಿತಿ ರೋಗದ ನಿರ್ವಹಣೆಗೆ ಸಾಮಾನ್ಯ ಮಾರ್ಗದರ್ಶನವಾಗಿದೆ. ಪ್ರತಿಯೊಬ್ಬರ ದೇಹ ಪ್ರಕೃತಿ ವಿಭಿನ್ನವಾಗಿರುವುದರಿಂದ, ನಿಮ್ಮ ವೈದ್ಯರ ವೈಯಕ್ತಿಕ ಸಲಹೆ ಮತ್ತು ಚಿಕಿತ್ಸೆಯ ಕ್ರಮವೇ ಅಂತಿಮ ಹಾಗೂ ಸುರಕ್ಷಿತ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುವಲ್ಲಿ ದೇಶದ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶಿಯ ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ರೈತರ ಆದಾಯವನ್ನು ಸುಧಾರಿಸಲು ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರ ಪುರಷ್ಕೃತ ಕೃಷಿಯೋನ್ನತಿ ಯೋಜನೆಯಡಿ ‘’ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು’’ (National Mission on Edible Oil – Oilseeds (NMEO-OS) ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.

ಎಣ್ಣೆಕಾಳು ಬೆಳೆಗಾರರು ಮತ್ತು ಮೌಲ್ಯ ಸರಪಳಿ ಪಾಲುದಾರರನ್ನು (Value Chain Partners) ಸಂಸ್ಕರಣಾದಾರರೊಂದಿಗೆ ಸಂಪರ್ಕಿಸಲು ಮತ್ತು ಅವರಿಗೆ ಮಾರುಕಟ್ಟೆ ಕಲ್ಪಿಸುವುದರೊಂದಿಗೆ ಉತ್ತಮ ಲಾಭವನ್ನು ಪಡೆಯುವಂತೆ ಖಾತ್ರಿಪಡಿಸುವುದು ಯೋಜನೆಯ ಗುರಿಗಳಲ್ಲಿ ಒಂದಾಗಿದೆ.

ಸದರಿ ಯೋಜನೆಯಡಿ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಲು ಹಾಗೂ ಶುದ್ಧ ಖಾದ್ಯ ತೈಲ ಉಪಯೋಗಿಸಲು ಅನುಕೂಲವಾಗುವಂತೆ ಪ್ರೇರೇಪಿಸಲು ಸೂಕ್ತವಾಗುವಂತೆ ಹಾಗೂ ಮೌಲ್ಯ ಸರಪಳಿಯನ್ನು ಉತ್ತೇಜಿಸಲು, ಸಂಸ್ಕರಣಾ ಘಟಕಗಳಿಗೆ ಅವಶ್ಯವಿರುವ ಯಂತ್ರೋಪಕರಣಗಳನ್ನು ಪಡೆಯಲು/ಪ್ರಾಥಮಿಕ ಮತ್ತು ದ್ವಿತೀಯ ಎಣ್ಣೆಕಾಳು ಕೊಯ್ಲೋತ್ತರ ಮೂಲ ಸೌಕರ್ಯ ಸೌಲಭ್ಯ ಪಡೆಯಲು ಗರಿಷ್ಠ ಯೋಜನಾ ವರದಿಯ ಶೇ.33 ರಷ್ಟು ಅಥವಾ ರೂ.9.99 ಲಕ್ಷಕ್ಕೆ ಮೀರದಂತೆ ಅನುದಾನವನ್ನು ನೀಡಲಾಗುವುದು. ಸದರಿ ಯೋಜನೆಯ ಘಟಕದಡಿ ಕಟ್ಟಡ ವೆಚ್ಚ ಮತ್ತು ಭೂಮಿ ಬಾಡಿಗೆಯನ್ನು ಪರಿಗಣಿಸಲಾಗುವುದಿಲ್ಲ.

ಸದರಿ ಯೋಜನೆಯಡಿ ಸೌಲಭ್ಯ ಪಡೆಯಲು ಸರ್ಕಾರ / ಸರ್ಕಾರೇತರ ಸಂಸ್ಥೆಗಳು, FPOs ಗಳು ಜುಲೈ 04 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಯೋಜನೆಯ ಮಾರ್ಗಸೂಚಿಯನ್ವಯ ಜಿಲ್ಲಾ ಕಾರ್ಯಕಾರಿ ಸಮಿತಿಯಲ್ಲಿ ಫಲಾನುಭವಿ ಆಯ್ಕೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಉಪ ಕೃಷಿ ನಿರ್ದೇಶಕರ ಕಛೇರಿ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending