ದಿನದ ಸುದ್ದಿ
ಪ್ರಖ್ಯಾತ ನೇತ್ರತಜ್ಞ ಡಾ.ಎಂ.ಸಿ.ಮೋದಿ ಬಗ್ಗೆ ನಿಮಗೆಷ್ಟು ಗೊತ್ತು..!?
- ಸಂಗಮೇಶ ಎನ್ ಜವಾದಿ, ಕೊಡಂಬಲ
ಭಾರತದ ಪ್ರಖ್ಯಾತ ನೇತ್ರತಜ್ಞರಲ್ಲೊಬ್ಬರು,ಅವರ ಅರವತ್ತು ವರ್ಷಕ್ಕಿಂತ ಮೇಲ್ಪಟ್ಟ ವೃತ್ತಿ ಜೀವನದಲ್ಲಿ ಸುಮಾರು 7 ಲಕ್ಷಕ್ಕಿಂತ ಹೆಚ್ಚು ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಮಾಡಿ ವೈದ್ಯ ಲೋಕದಲ್ಲಿ ಜಗತ್ತಪ್ರಸಿದ್ದಿ ಪಡೆದಿರುವ ಎಂ.ಸಿ.ಮೋದಿಯವರ ಸೇವೆ ಅಜರಾಮ ಮತ್ತು ಅನನ್ಯ ಎಂದೇ ಹೇಳಬೇಕಾಗುತ್ತದೆ.
ಅಂದು ಮುಂಬೈ ಒಂದರ ಸಭೆಯಲ್ಲಿ ಸೇರಿದ್ದ ಅನೇಕ ದೇಶಭಕ್ತ ಮಹನೀಯರ ಮಾತುಗಳಿಂದ ಪ್ರಭಾವಿತರಾಗಿ,ತಮಗಿದ್ದ ಸಾವಿರಾರು ರೂಪಾಯಿಗಳ ಆದಾಯದ ಮೂಲವಾಗಿದ್ದ ಖಾಸಗಿ ವೈದ್ಯ ವೃತ್ತಿಯನ್ನು ತೊರೆದು, ಬಿಡಿಗಾಸು ಪಡೆಯದೇ ಅಂಧರಿಗೆ ನೇತ್ರಚಿಕಿತ್ಸೆ ಮಾಡಲು ಸಂಕಲ್ಪಿಸಿ ಸಾವಿರಾರು ಜನರಿಗೆ ನೇತ್ರ ಶಸ್ತ್ರಚಿಕಿತ್ಸೆ ಮಾಡುವುದರೊಂದಿಗೆ ಜನಸಾಮಾನ್ಯರ ಪ್ರೀತಿ – ಸ್ನೇಹಕ್ಕೆ ಸಾಕ್ಷಿಯಾಗುವ ಮೂಲಕ ವಿಶ್ವ ಗಿನ್ನಿಸ್ ದಾಖಲೆ ಮಾಡಿದ ಈ ನಾಡಿನ ಧೀಮಂತ ವೈದ್ಯ ಲೋಕದ ವೈದ್ಯರಾದ ಮುರುಗಪ್ಪ ಚನ್ನವೀರಪ್ಪ ಮೋದಿಯವರು ಎಂದು ಹೆಮ್ಮೆಯಿಂದ ಹೇಳುತ್ತೇವೆ.
ಜನನ,ಕಾಯಕ ಜೀವನ
ಮುರಿಗೆಪ್ಪ ಚನ್ನವೀರಪ್ಪ ಮೋದಿಯವರು ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಬೀಳಗಿಯ ಗ್ರಾಮದ ಚನ್ನವೀರಪ್ಪ ಮತ್ತು ದುಂಡಮ್ಮ ದಂಪತಿಗಳ ಮಗನಾಗಿ ದಿನಾಂಕ 04-10-1916 ರಲ್ಲಿ ಜನಿಸಿದರು. ಜಮಖಂಡಿಯ ಪಿ ಬಿ ಶಾಲೆಯಲ್ಲಿ ಪ್ರಾಥಮಿಕ ,ಪ್ರೌಢ ಶಿಕ್ಷಣ ಪಡೆದು ನಂತರ ಬಡತನದ ನಡುವೆಯೂ ವಿದ್ಯಾರ್ಜನೆ ಮುಂದುವರೆಸಿ ಬೆಳಗಾವಿ ಆಯುರ್ವೇದ ಕಾಲೇಜಿನಲ್ಲಿ ಅಭ್ಯಾಸ ಮಾಡಿದರು.
ತದನಂತರ ಮತ್ತೆ ಕೆಬಿಎಚ್‌ಬಿ ಕಣ್ಣಿನ ಆಸ್ಪತ್ರೆ ಹಾಗೂ ರಾಮವಾಡಿ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯ ಶಿಕ್ಷಣ ಪಡೆದರು.ಇದಲ್ಲದೆ ಮೋದಿಯವರು ಕೊಲಂಬಿಯಾ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಗಳಿಸಿದರು.ನಂತರ ಬೆಳಗಾವಿಯಲ್ಲಿ ಅವರು ಕಾಯಕ ಜೀವನ ಆರಂಭಿಸಿ ದಾವಣಗೆರೆಯಲ್ಲಿ ನೆಲೆಸಿದರು.
1942 ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಮಹಾತ್ಮ ಗಾಂಧಿಯವರ ಭಾಷಣದಿಂದ ಪ್ರೇರಿತರಾಗಿ ಕೆಲವೇ ಸ್ವಯಂಸೇವಕರ ಜತೆ ಹಳ್ಳಿಗಳಿಗೆ ಹೋಗಿ ರೋಗಿಗಳಿಂದ ಹಣ ಪಡೆಯದೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರು,ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ಜೊತೆಗೆ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಮಾಡಿರುತ್ತಾರೆ. ಕಣ್ಣಿನ ಪೊರೆ (ಕ್ಯಟರಾಕ್ಟ್) ತೆಗೆಯುವ ಶಸ್ತ್ರ ಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದ್ದ ಡಾ.ಮೋದಿಯವರು ಪ್ರತಿ ಗ್ರಾಮದಲ್ಲೂ ಶಾಲೆ, ಕಾಲೇಜುಗಳನ್ನು ತೆಗೆದುಕೊಂಡು ಅದನ್ನೇ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಿ ಸತತವಾಗಿ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು.
ರಷ್ಯಾ ಮತ್ತು ಅಮೇರಿಕ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲೂ ಅವರು ಸೇವೆ ಸಲ್ಲಿಸಿ ಗೌರವಗಳಿಗೆ ಪಾತ್ರರಾಗಿದ್ದಾರೆ.ಇದಲ್ಲದೆ ದಾವಣಗೆರೆ, ಬೆಂಗಳೂರು ಮತ್ತು ಬೆಳಗಾವಿಗಳಲ್ಲಿ ಕಣ್ಣು ಚಿಕಿತ್ಸಾಲಯಗಳನ್ನು ಸ್ಥಾಪಿಸಿದ ಶ್ರೀಯುತರು ತಮ್ಮ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಸೇವೆ ಒದಗಿಸುತ್ತಿದ್ದರು.
ಸಾಮೂಹಿಕ ನೇತ್ರ ಚಿಕಿತ್ಸೆ ಹಾಗೂ ಸಂಚಾರಿ ಘಟಕವನ್ನು ತೆರೆದ ಮೊದಲ ವೈದ್ಯ ಎಂಬ ಖ್ಯಾತಿಯನ್ನು ಗಳಿಸಿದ್ದ ಹಿರಿಮೆ ಇವರದು ಜೊತೆಗೆ ಮೋದಿಯವರು ತಮ್ಮ ಸ್ವಂತ ಹಣವನ್ನು ವ್ಯಯಿಸಿ ಬಡಜನರ ಸೇವೆ ಮಾಡುತ್ತಿದ್ದರು ಎಂಬುದು ನಾವ್ಯಾರೂ ಮರೆಯಬಾರದು.
ಇನ್ನು ಕಣ್ಣಿನ ಆರೋಗ್ಯದ ಕುರಿತು ಅವರ ಮನಸ್ಸು ಎಷ್ಟು ತುಡಿಯುತ್ತಿತ್ತೆಂದರೆ, ರೈಲಿನಲ್ಲಿ ಪ್ರಯಾಣ ಮಾಡುವಾಗಲೂ ಅಲ್ಲಿನ ಪ್ರಯಾಣಿಕರ ಕಣ್ಣುಗಳನ್ನು ಉಚಿತವಾಗಿ ಪರೀಕ್ಷಿಸಿ ಸಲಹೆ ನೀಡುತ್ತಿದ್ದರು ಎನ್ನುವುದು ಮರೆಯುವಂತಿಲ್ಲ.
ಡಾ. ಮೋದಿಯವರೇ ಹೇಳುತ್ತಿದ್ದ ಹಾಗೆ ಮೊದ ಮೊದಲು ರೋಗಿಗಳು ಇವರ ಶಿಬಿರಕ್ಕೆ ಬರಲು ಹಿಂಜರಿಯುತ್ತಿದ್ದರು.
ಆಪರೇಷನ್ ಪದ ಕೇಳಿ ಶಿಬಿರಕ್ಕೆ ಬಂದವರಲ್ಲಿ ಕೆಲವರು ಓಡಿ ಹೋಗುತ್ತಿದ್ದರು. ಆದರೆ ಕ್ರಮೇಣ ಶಸ್ತ್ರ ಚಿಕಿತ್ಸೆಗೊಳಗಾಗಿ ದೃಷ್ಟಿಯನ್ನು ಮತ್ತೆ ಪಡೆದವರನ್ನು ಕಂಡು ಶಿಬಿರಕ್ಕೆ ಬರುವವರು ಹೆಚ್ಚಾದರು. ಹೀಗೆ ಅವರ ಸೇವೆ ನಾಡಿನ ತುಂಬೆಲ್ಲ ಪಸರಿಸಿತ್ತು.
ಈ ಕಾರಣದಿಂದ ಅವರ ಸೇವೆಯನ್ನು ಗುರುತಿಸಿದ ಅಂದಿನ ಕರ್ನಾಟಕ ಸರ್ಕಾರ, ಏಕವ್ಯಕ್ತಿಯ ಯುದ್ಧ (one man’s war) ಎಂಬ ಒಂದು ಕಿರು ದೃಶ್ಯ ದಾಖಲೆಯನ್ನು ತಯಾರಿಸಿದ್ದು ವಿಶೇಷ ಹಾಗಾಗಿ ಅವರು ಮಾಡಿರುವ ಸೇವೆ ನಿಸ್ವಾರ್ಥ ಎಂಬುದು ಇದರಿಂದ ಗೊತ್ತಾಗುತ್ತದೆ.ಈ ಎಲ್ಲಾ ಕಾರಣಗಳಿಂದ ಲಕ್ಷಗಟ್ಟಲೆ ಅಂಧರಿಗೆ ದೃಷ್ಟಿ ನೀಡಿದ ಆ ಮಹಾನ್ ಚೇತನರ ಜ್ಞಾಪಕಾರ್ಥವಾಗಿ ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ ಮೋದಿ ಕಣ್ಣಿನ ಆಸ್ಪತ್ರೆ ಎಂಬ ಹೆಸರಿನ ಆಸ್ಪತ್ರೆಯು ದಿನನಿತ್ಯ ನೂರಾರು ಜನರಿಗೆ ಸೇವೆ ನೀಡುವಲ್ಲಿ ನಿರಂತವಾಗಿದೆ.
ಗಾಂಧೀಜಿ ಪ್ರೇರಣೆ
ಭಾರತದಲ್ಲಿ ವ್ಯಾಪಕವಾಗಿ ಕಾಡುವ ಅಂಧತ್ವದ ನಿವಾರಣೆ ಇವರ ಬದುಕಿನ ಗುರಿಯಾಯಿತು. ಮಹಾತ್ಮ ಗಾಂಧಿಯವರ ಅರ್ಪಣಾಭಾವ, ಜನಸೇವೆ, ಪ್ರಭಾವ ಇವರ ಮೇಲೆ ಹೆಚ್ಚು ಪರಿಣಾಮ ಬೀರಿತು. ಸಮಾಜದ ಒಳಿತಿಗಾಗಿ ದುಡಿಯಲು ತಮ್ಮನ್ನು ತಾವು ಅರ್ಪಿಸಿಕೊಂಡರು. ವೈಯಕ್ತಿಕ ಸುಖ ಸಂತೋಷ ತ್ಯಜಿಸಿ, ತಮ್ಮ ಪ್ರತಿಭೆ ಮತ್ತು ಪರಿಣತಿಯನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಕಣ್ಣಿಲ್ಲದವರಿಗೆ ಮೋದಿ ಬೆಳಕಾದರು ಬಂಧುಗಳೆ.
ವಿಶ್ವ ದಾಖಲೆ
ಮೋದಿಯವರು ತಿರುಪತಿಯಲ್ಲಿ ಒಂದೆ ದಿನದಲ್ಲಿ 833 ಶಸ್ತ್ರ ಚಿಕಿತ್ಸೆ ಮಾಡಿ ವಿಶ್ವ ದಾಖಲೆ ಸ್ಥಾಪಿಸಿದರು. ಒಟ್ಟಾರೆ 7 ಲಕ್ಷಕ್ಕೂ ಹೆಚ್ಚು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದನ್ನು ಗಿನ್ನಿಸ್ ದಾಖಲೆಗಳ ಪುಸ್ತಕದಲ್ಲಿ ಸೇರಿಸಲಾಗಿದೆ. ವೈದ್ಯಕೀಯ ವೃತ್ತಿಯಲ್ಲಿ ಮೋದಿಯವರ ಸಾಧನೆ ಅನುಪಮ ಮತ್ತು ಅದ್ವಿತೀಯ.
ಭಾರತದ ಬಹುತೇಕ ಪ್ರದೇಶದಲ್ಲಿ ಸಂಚರಿಸಿ, ದೃಷ್ಟಿಹೀನರಿಗೆ ದೃಷ್ಟಿ ಕೊಟ್ಟ ಖ್ಯಾತಿ ಇವರದು. ಸಂಚಾರಿ ನೇತ್ರ ಚಿಕಿತ್ಸಾಲಯವನ್ನು ಸ್ಥಾಪಿಸಿದ ಮೊದಲ ವ್ಯಕ್ತಿ. ಈಗ ಇದು ಬೃಹತ್ತಾಗಿ ಬೆಳೆದಿದೆ. ಸಾಮೂಹಿಕ, ಉಚಿತ ನೇತ್ರ ಚಿಕಿತ್ಸೆಯನ್ನು ಪ್ರಾರಂಭಿಸಿದವರಲ್ಲಿ ಇವರೇ ಮೊದಲಿಗರು. ಅಂಧತ್ವ ನಿವಾರಣೆಗೆ ಇವರು ಹಮ್ಮಿಕೊಂಡ ಆಂದೋಲನದಲ್ಲಿ 1993ರವರೆಗೆ 6,10,564 ಜನರ ಕಣ್ಣುಗಳ ಶಸ್ತ್ರ ಚಿಕಿತ್ಸೆಯನ್ನೂ, 1,21,18,630ಕ್ಕೂ ಹೆಚ್ಚಿನ ರೋಗಿಗಳ ಕಣ್ಣು ತಪಾಸಣೆಯನ್ನು ಇವರು ಮಾಡಿದ್ದಾರೆ.
ಒಂದೇ ದಿನದಲ್ಲಿ ತಿರುಪತಿಯಲ್ಲಿ 833 ಮಂದಿಗೆ ಮೋತಿಬಿಂದು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿ ಗಿನ್ನೆಸ್ ದಾಖಲೆ ಸ್ಥಾಪಿಸಿದ್ದಾರೆ. ಈ ಹಿಂದೆ ಇಂಥ ದಾಖಲೆ ಕೆನಡದ ಆಂಟೇರಿಯೋದ ವೈದ್ಯ ಡಾ. ರಾಬರ್ಟ್ ಮ್ಯಾಕ್ಲ್ಯೂರ್ ಅವರ ಹೆಸರಿನಲ್ಲಿತ್ತು. ಈ ವೈದ್ಯ (1924-78) 20,424 ಶಸ್ತ್ರ ಚಿಕಿತ್ಸೆ ಮಾಡಿ ದಾಖಲೆ ಸ್ಥಾಪಿಸಿದ್ದ. ಡಾ. ಮೋದಿಯವರು ತಮ್ಮ ಜೀವಿತಾವಧಿಯಲ್ಲಿ ಕಣ್ಣಿನ ರೋಗಿಗಳನ್ನು ತಪಾಸಣೆ ಮಾಡಲು 46,120 ಹಳ್ಳಿಗಳನ್ನು ಸಂದರ್ಶಿಸಿದ್ದರು.
ಅಂಧರ ಬಾಳಿಗೆ ಬೆಳಕಾದರ ಡಾ.ಮೋದಿ: ಆಗಿನ ಕಾಲಕ್ಕೆ ಖ್ಯಾತ ನೇತ್ರ ವೈದ್ಯರೆಂದು ಹೆಸರು ಪಡೆದ ಮೋದಿಯವರ ಪ್ರೊಫೆಸರ್ ಆಗಿದ್ದ ಡಾ. ಡಿ.ಎಸ್. ಸರ್‍ದೇಸಾಯ್ ಅವರು ಪಾಟ್ನಾ ಮತ್ತು ಗುಜರಾತಿನಲ್ಲಿ ಹಮ್ಮಿಕೊಂಡಿದ್ದ ನೇತ್ರ ಚಿಕಿತ್ಸೆಯ ಶಿಬಿರದಲ್ಲಿ ಭಾಗವಹಿಸಲು ಮೋದಿಯವರನ್ನು ಆಹ್ವಾನಿಸಿದರು. ಗುರುವಿನ ಜೊತೆ ಕೈಜೋಡಿಸಿ ಸ್ವತಂತ್ರವಾಗಿ ಮೋದಿಯವರು 20 ಮಂದಿಯ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಸೈ ಎನಿಸಿಕೊಂಡರು.
ಗ್ರಾಮೀಣ ಜನತೆಗೆ ಸೇವೆ ಮಾಡಲು ಅವರಿಗೆ ಇದು ಮತ್ತಷ್ಟು ಪ್ರೇರಕ ಶಕ್ತಿಯನ್ನು ಕೊಟ್ಟಿತು. ಇದರ ಹಿಂದೆಯೇ ಧಾರವಾಡ ಜಿಲ್ಲೆಯ ನರಗಲ್ ಹಳ್ಳಿಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಯ ಶಿಬಿರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸ್ಥಳೀಯರಿಗೆ ಆಗ ಶಸ್ತ್ರ ಚಿಕಿತ್ಸೆಗೆ ತಮ್ಮನ್ನು ಒಡ್ಡಿಕೊಳ್ಳಲು ಇನ್ನೂ ಅಳುಕಿತ್ತು. ಇದನ್ನು ಮನಗಂಡ ಮೋದಿಯವರು ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ರೋಗಿಗಳನ್ನುದ್ದೇಶಿಸಿ ಅದು ಅಪಾಯಕಾರಿಯಲ್ಲ ಎಂದು ಮನವರಿಕೆ ಮಾಡಿಕೊಡಲು ದೀರ್ಘ ಪ್ರವಚನವನ್ನೇ ನೀಡುತ್ತಿದರು. ಇದರಿಂದ ಪ್ರೇರಿತರಾಗಿ ಕಣ್ಣಿನ ರೋಗಿಗಳು ಶಸ್ತ್ರ ಚಿಕಿತ್ಸೆಗೆ ಮುಂದಾಗುತ್ತಿದರು.
ಕೇವಲ ಎರಡೇ ಗಂಟೆಯಲ್ಲಿ 20 ಜನರಿಗೆ ಯಶಸ್ವಿಯಾಗಿ ಚಿಕಿತ್ಸೆ ಮಾಡಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.ಹೀಗೆ ಅಂಧರು ನನ್ನ ಬಳಿಗೆ ಬರಲು ಶಕ್ತರಲ್ಲ. ನಾನೇ ಅವರ ಬಳಿಗೆ ಹೋಗಬಾರದೇಕೆ? ಎಂದು ಯೋಚನೆ ಮಾಡುವ ಮೂಲಕ ಲಕ್ಷಾಂತರ ಅಂಧರ ಬಳಿಗೆ ತೆರಳಿ ಅವರ ಕಷ್ಟಕ್ಕೆ ಮಿಡಿದ ಹೃದಯ ಇವರದಾಗಿತ್ತು.ಇದಲ್ಲದೆ ತಮ್ಮ ಸುತ್ತ ತ್ಯಾಗಜೀವಿಗಳ ದೊಡ್ಡ ಗುಂಪನ್ನೇ ಬೆಳೆಸಿ, ಮಾನವೀಯ ಸೇವೆಗೆ ನಿಂತ ಮಹಾನ್ ವ್ಯಕ್ತಿ ಇವರು.
ಇಂಥವರು ಕೂಡ ತಮ್ಮ ಬದುಕಿನಲ್ಲಿ ಕೆಲವೊಂದು ಕಹಿ ಪ್ರಸಂಗಗಳನ್ನು ಎದುರಿಸಬೇಕಾಯಿತು. ಆಧುನಿಕ ಶಸ್ತ್ರ ಚಿಕಿತ್ಸಾ ವೈದ್ಯರು, ಡಾ. ಮೋದಿಯವರು ಕಳಪೆ ಪರಿಸರದಲ್ಲಿ ಶಸ್ತ್ರ ಕ್ರಿಯೆಯನ್ನು ನಡೆಸುತ್ತಾರೆಂದು ದೂರಿದ್ದರು. ಜೊತೆಗೆ ಮೋದಿಯವರ ವೈದ್ಯಕೀಯ ಹಿನ್ನೆಲೆ ಕೇವಲ ಎಲ್.ಐ.ಎಮ್. ಎಂದೂ ಇತರ ವೈದ್ಯರಿಗಿರುವಂತೆ ಎಲ್.ಸಿ.ಪಿ.ಎಸ್.(ಲೈಸೆನ್ಸಿಯೇಟ್ ಆಫ್ ದಿ ಕಾಲೇಜ್ ಆಫ್ ಫಿಸಿಷಿಯನ್ಸ್ ಅಂಡ್ ಸರ್ಜನ್ಸ್) ಅಲ್ಲವೆಂದೂ ಅವರು ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲು ಅರ್ಹರಲ್ಲವೆಂದೂ ಆರೋಪಿಸಿದ್ದರು.
ಕರ್ನಾಟಕ ಸರ್ಕಾರ ಇಂಥ ಆರೋಪಗಳನ್ನು ಸ್ವೀಕರಿಸಲು ಸಿದ್ಧವಿರಲಿಲ್ಲ. ಕಣ್ಣಿನ ಶಸ್ತ್ರ ಚಿಕಿತ್ಸೆಯ ಯಾವುದೇ ಪರಿಣತರಿಗಿಂತ ಇವರು ತ್ವರಿತವಾಗಿ ಚಿಕಿತ್ಸೆ ನಡೆಸುತ್ತಾರೆಂಬುದನ್ನೂ ಒಪ್ಪಿಕೊಂಡಿತು. ಮೋದಿಯವರ ವೃತ್ತಿಪರ ವೈಶಿಷ್ಟ್ಯವೆಂದರೆ ಮೋತಿಬಿಂದು ಶಸ್ತ್ರ ಚಿಕಿತ್ಸೆಗೆ ಇವರು ತೆಗೆದುಕೊಳ್ಳುತ್ತಿದ್ದ ಸಮಯ ಕೇವಲ 14 ಸೆಕೆಂಡುಗಳು ಅಷ್ಟೇ ಆಗಿತ್ತು ಬಂಧುಗಳೆ.
ಗೌರವ ಪ್ರಶಸ್ತಿಗಳು
ಡಾ.ಮೋದಿಯವರ ಸೇವೆ ಮತ್ತು ಸಾಧನೆಗಳನ್ನು ಶ್ಲಾಘಿಸಿ ಕೇಂದ್ರ ಸರಕಾರದಿಂದ 1956 ರಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗೂ 1968 ರಲ್ಲಿ ಪದ್ಮಭೂಷಣ ಪ್ರಶಸ್ತಿ ಗೌರವಿಸಲಾಗಿದೆ.ಇನ್ನು ಮೈಸೂರು, ಕರ್ನಾಟಕ ಮತ್ತು ಪುಣೆ ವಿಶ್ವವಿದ್ಯಾಲಯಗಳು ಶ್ರೀಯುತರಿಗೆ ಗೌರವ ಡಾಕ್ಟರೇಟ್ ನೀಡಿವೆ.ಅಲ್ಲದೆ ನೈಟ್ ಆಫ್ ಬ್ಲೈಂಡ್, ಅಂಬಾಸೆಡರ್ ಆಫ್ ಗುಡ್ ವಿಲ್ ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿದೆ.ಇನ್ನ ಅಮೆರಿಕದ Spartanburg ನ ಮೇಯರ್ ಇವರಿಗೆ ಗೌರವ ಪೌರತ್ವ ನೀಡಿ ಗೌರವಿಸಿದ್ದಾರೆ.
ಜೊತೆಗೆ ಕರ್ನಾಟಕ ರಾಜ್ಯದ ವಿಧಾನ ಪರಿಷತ್ತಿನ ಸದಸ್ಯರಾಗಿ 1990 ರಲ್ಲಿ ನೇಮಕಗೊಂಡು ಸೇವೆ ಸಹ ಸಲ್ಲಿಸಿದ್ದಾರೆ ಎಂಬುದು ಮತ್ತೊಂದು ವಿಶೇಷ ಹಾಗೆ ಮೋದಿಯವರು ಎಲ್ಲಾ ಪ್ರಶಸ್ತಿ ಪುರಸ್ಕಾರಗಳಿಂದ ಬಂದ ಹಣವನ್ನು ಬಡವರಿಗಾಗಿ ವ್ಯಯಿಸಿದ್ದಾರೆ.ಹೀಗೆ ಹತ್ತು ಹಲವು ಸಂಘ,ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ.
ಕೊನೆಯ ಮಾತು
ಸಾವಿರಾರು ಬಡವರಿಗೆ ಕಣ್ಣಿನ ದೃಷ್ಟಿ ನೀಡಿ ನೇತ್ರದಾನಿ ಎಂದೇ ಹೆಸರುವಾಸಿಯಾಗಿದ್ದ ಡಾ.ಎಂ.ಸಿ.ಮೋದಿಯವರು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿ ಹಲವಾರು ರಾಜ್ಯಗಳಲ್ಲಿ ದೃಷ್ಟಿದೋಷದ ಸಾವಿರಾರು ರೋಗಿಗಳಿಗೆ ದೃಷ್ಟಿ ನೀಡುವ ಮೂಲಕ ನೇತ್ರದಾನಿ ಎಂಬ ಬಿರುದು ಪಡೆದುಕೊಂಡಿದ್ದರು. ಜನ ಸೇವೆ ಮೂಲಕ ರಾಜ್ಯ ಹೊರರಾಜ್ಯಗಳಲ್ಲದೆ ದೇಶ ವಿದೇಶಗಳಲ್ಲೂ ಡಾ.ಎಂ.ಸಿ.ಮೋದಿ ಅವರು ಮನೆಮಾತಾಗಿದ್ದರು.
ಸಾಮೂಹಿಕ ನೇತ್ರ ಚಿಕಿತ್ಸಾ ಹಾಗೂ ಸಂಚಾರಿ ಘಟಕವನ್ನು ತೆರೆದ ಮೊದಲ ವೈದ್ಯ ಎಂಬ ಖ್ಯಾತಿಯನ್ನೂ ಕೂಡ ಗಳಿಸಿದ್ದ ಅವರು, ರೈಲಿನಲ್ಲಿ ಪ್ರಯಾಣಿಸುವಾಗಲೂ ಅಲ್ಲಿನ ಪ್ರಯಾಣಿಕರ ಕಣ್ಣುಗಳನ್ನು ಪರೀಕ್ಷಿಸುತ್ತಿದ್ದರು. ಡಾ. ಮೋದಿ ಸಾವಿನಲ್ಲೂ ಸಾರ್ಥಕತೆ ಪಡೆದವರು. ಅವರ ನಿಧನಾನಂತರ (11.11.2005) ಅವರ ಎರಡೂ ಕಣ್ಣಗಳನ್ನು ಅವರ ಕುಟುಂಬದವರು ಅಂಧರಿಗೆ ದಾನ ಮಾಡಿದರು.ಕಣ್ಣುಕೊಟ್ಟ ಅಣ್ಣ ಎಂಬ ಬಿರುದು ಈ ದೃಷ್ಟಿಯಿಂದಲೂ ಅವರ ಜೀವನ ಸಾರ್ಥಕವಾಯಿತು.
ಸುದ್ದಿದಿನ.ಕಾಂ | ವಾಟ್ಸಾಪ್ | 9980346243

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


