Connect with us

ದಿನದ ಸುದ್ದಿ

ಲಜ್ಜೆಗೆಟ್ಟ ರಾಜಕಾರಣಕ್ಕೆ ಕರ್ನಾಟಕವೇ ತವರು..!

Published

on

  • ನಾ ದಿವಾಕರ

ಮೂರು ನಾಲ್ಕು ದಶಕಗಳ ಹಿಂದೆ ಉತ್ತರ ಭಾರತದ ಹಲವು ರಾಜ್ಯಗಳು ‘ ಆಯಾರಾಂ ಗಯಾರಾಂ ’ ಪಕ್ಷಾಂತರ ರಾಜಕಾರಣದಿಂದ ಕಲುಷಿತಗೊಂಡು ಕಂಗೆಟ್ಟಿದ್ದ ಸಂದರ್ಭದಲ್ಲಿ ಕರ್ನಾಟಕ ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾಗಿತ್ತು. ಅಧಿಕಾರಸ್ಥ ರಾಜಕಾರಣಿಗಳ ಉತ್ತರದಾಯಿತ್ವದ ಪ್ರಜ್ಞೆ ಮತ್ತು ಕೊಂಚ ಮಟ್ಟಿನ ಪ್ರಾಮಾಣಿಕತೆ ರಾಜ್ಯ ರಾಜಕಾರಣದಲ್ಲಿ ಹೊಸ ಅಲೆ ಸೃಷ್ಟಿಸಿತ್ತು.

ಪಕ್ಷಾಂತರ, ಭಿನ್ನಮತೀಯ ರಾಜಕಾರಣ, ಪಕ್ಷಭೇದ ಮತ್ತು ಹೊಸ ಪಕ್ಷಗಳ ಸ್ಥಾಪನೆ ಇವೆಲ್ಲದರ ನಡುವೆಯೇ ರಾಜ್ಯದಲ್ಲಿ, ಅಧಿಕಾರ ಪೀಠದಲ್ಲಿರುವವರು ‘ ನೈತಿಕ ಹೊಣೆ ’ ಎನ್ನುವ ಪದಗಳ ಅರ್ಥವನ್ನು ಬಲ್ಲವರಾಗಿದ್ದರು. ಅಪವಾದಗಳಿಂದ ಮುಕ್ತವಾದ ರಾಜಕಾರಣ ಅಸಾಧ್ಯವೇ ಆದರೂ ತಮ್ಮ ಮೇಲಿನ ಅಪವಾದಗಳನ್ನು ಸ್ವೀಕರಿಸಿ, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಒಂದು ಪರಂಪರೆಗೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಸಾಕ್ಷಿಯಾಗಿದ್ದರು.

ಅಬ್ದುಲ್ ನಜೀರ್ ಸಾಬ್ ಅವರಂತಹ ನಿಸ್ಪೃಹ, ಪ್ರಾಮಾಣಿಕ, ಸರಳ ಸಜ್ಜನಿಕೆಯ ರಾಜಕಾರಣಿಯೊಬ್ಬರು ಈ ನೆಲದ ಮೇಲೆ ಓಡಾಡಿದ್ದರು ಎನ್ನುವುದು ಹೆಮ್ಮೆಯ ವಿಚಾರ. ಆದರೆ ಇಂತಹ ಒಂದು ವ್ಯಕ್ತಿತ್ವ ಕೇವಲ ಮೂರು ನಾಲ್ಕು ದಶಕಗಳ ಒಳಗೆ ಪ್ರಾಚೀನ ಶಿಲಾಶಾಸನದಂತೆ ಕಾಣುತ್ತಿರುವುದು ದುರಂತ.

ನಜೀರ್ ಸಾಬ್ ಮೂರು ನಾಲ್ಕು ಪೀಳಿಗೆಯ ರಾಜಕಾರಣಿಗಳಿಗೆ ಪ್ರೇರಣೆಯಾಗಬೇಕಿತ್ತು, ಸ್ಪೂರ್ತಿಯಾಗಬೇಕಿತ್ತು. ಆದರೆ ಅವರ ಒಡನಾಟದಲ್ಲಿದ್ದವರೂ ಇಂದು ಭ್ರಷ್ಟ ಮಾರ್ಗಗಳಲ್ಲಿ ನಡೆಯುತ್ತಿರುವುದನ್ನು ನೋಡಿದರೆ, ನವ ಉದಾರವಾದದ ಕಾರ್ಪೋರೇಟ್ ರಾಜಕಾರಣ ನಮ್ಮ ದೇಶದ ರಾಜಕೀಯ ವಾತಾವರಣವನ್ನು ಎಷ್ಟು ಕಲುಷಿತಗೊಳಿಸಿದೆ ಎಂದು ಅರ್ಥವಾಗುತ್ತದೆ.

ಭಾರತದ ರಾಜಕಾರಣದಲ್ಲಿ ಪ್ರಾಮಾಣಿಕತೆ ಮತ್ತು ಸತ್ಯಸಂಧತೆಯೂ ಇತ್ತು ಎನ್ನುವುದು ಬಹುಶಃ ಮುಂದಿನ ಪೀಳಿಗೆಗೆ ಪುರಾಣ ಕಥನದಂತೆ ಕಾಣುತ್ತದೆ. ನಿಜ, ದೇಶ ಬದಲಾಗಿದೆ, ಜನರೂ ಬದಲಾಗಿದ್ದಾರೆ, ಹಾಗೆಯೇ ರಾಜಕಾರಣಿಗಳೂ ಬದಲಾಗಿದ್ದಾರೆ. ಆದರೆ ರಾಜಕೀಯ ರಂಗದಲ್ಲಿ ಉಂಟಾಗಿರುವ ಬದಲಾವಣೆ ದೇಶವನ್ನು ವಿನಾಶದತ್ತ ಕೊಂಡೊಯ್ಯುವಂತೆ ಕಾಣುತ್ತಿದೆ.

ಪಂಚಾಯತ್ ವ್ಯವಸ್ಥೆಗೆ ಒಂದು ಸ್ಪಷ್ಟ ಕಾಯಕಲ್ಪ ನೀಡಿದ ಕರ್ನಾಟಕದಲ್ಲಿ ನಾವು ಗ್ರಾಮ ಪಂಚಾಯತ್ ಸ್ಥಾನಗಳು ಹರಾಜಾಗುತ್ತಿರುವುದನ್ನು ಇತ್ತೀಚೆಗಷ್ಟೇ ನೋಡಿದ್ದೇವೆ. ಜನಪ್ರತಿನಿಧಿ ಎನ್ನುವ ಪದ ಅಧಿಕಾರ ಕೇಂದ್ರಗಳಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಹರಾಜು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವ ಒಂದು ವಿಕೃತ ಪರಂಪರೆಗೆ ಕರ್ನಾಟಕವೇ ಪ್ರಧಾನ ಭೂಮಿಕೆಯಾಗಿರುವುದು ವಿಪರ್ಯಾಸ ಎನಿಸಿದರೂ ಸತ್ಯ.

ತತ್ವ, ಸಿದ್ಧಾಂತ ಮತ್ತು ಜನಸೇವೆ ಈ ಮೂರೂ ಉದಾತ್ತ ಚಿಂತನೆಗಳಿಗೆ ಎಂದೋ ತಿಲಾಂಜಲಿ ಕೊಟ್ಟಿರುವ ರಾಜ್ಯ ರಾಜಕಾರಣದಲ್ಲಿ ಇಂದು ಉಳಿದಿರುವುದು ಅಧಿಕಾರ ರಾಜಕಾರಣ ಮಾತ್ರ ಎನ್ನುವುದೂ ಅಷ್ಟೇ ಸತ್ಯ. ಏಕೆಂದರೆ ನವ ಉದಾರವಾದ ಮತ್ತು ಹಣಕಾಸು ಬಂಡವಾಳ ಊರ್ಜಿತವಾಗಲು ಬೇಕಿರುವುದು ಒಂದು ಪ್ರಬಲ ಸರ್ಕಾರ ಮತ್ತು ಶಿಥಿಲ ವಿರೋಧ.

ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಇದನ್ನು ಸಾಧಿಸಲಾಗಿದೆ. ಹಾಗಾಗಿಯೇ ರಾಜ್ಯದ ರೈತರ ಪಾಲಿಗೆ ಮರಣಶಾಸನವಾಗಲಿರುವ ಕೃಷಿ ಮಸೂದೆ, ಎಪಿಎಂಸಿ ಕಾಯ್ದೆಯ ತಿದ್ದುಪಡಿ, ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿ ಮತ್ತು ಗೋಹತ್ಯೆ ನಿಷೇಧ ಕಾಯ್ದೆಗಳ ವಿರುದ್ಧ ಒಂದು ಪ್ರಬಲ ರಾಜಕೀಯ ಹೋರಾಟ ರೂಪುಗೊಳ್ಳುತ್ತಿಲ್ಲ.

ಗೋಮಾಂಸ ಸೇವನೆಯ ಹಕ್ಕು ಬಾಧ್ಯತೆಗಳನ್ನು ಕುರಿತು ನಡೆಯುತ್ತಿರುವಷ್ಟು ರಾಜಕೀಯ ಚರ್ಚೆಗಳು, ವಾಗ್ವಾದಗಳು, ಗೋ ಹತ್ಯೆ ನಿಷೇಧದಿಂದ ರೈತಾಪಿಯ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ನಡೆಯುತ್ತಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ.

ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿಯಿಂದ ಕೃಷಿ ಭೂಮಿ ಉದ್ಯಮಿಗಳ ವಶವಾಗುವ ಅಪಾಯವನ್ನು ರೈತ ಸಂಘಟನೆಗಳು ಗ್ರಹಿಸಿವೆಯಾದರೂ, ರಾಜ್ಯದ ವಿರೋಧ ಪಕ್ಷಗಳು ಒಂದು ಸ್ಪಷ್ಟ ನಿಲುವು ತಳೆಯುವಲ್ಲಿ ವಿಫಲವಾಗಿವೆ. ಮಣ್ಣಿನ ಮಕ್ಕಳ ಪಕ್ಷ ಎಂಬ ಹೆಗ್ಗಳಿಕೆಯೊಂದಿಗೇ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಜಾತ್ಯತೀತ ಜನತಾ ದಳ ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿಗೆ ಬೆಂಬಲ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳ ಬಗ್ಗೆ ಮೌನ ವಹಿಸಿದೆ.

ಈ ನಡುವೆಯೇ ಕರ್ನಾಟಕದ ರಾಜಕಾರಣ ಅಕ್ಷರಶಃ ಹರಾಜು ಮಾರುಕಟ್ಟೆಯಂತಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇತ್ತೀಚಿನ ಕೆಲವು ಬೆಳವಣಿಗೆಗಳು ಈ ಮಾರುಕಟ್ಟೆ ರಾಜಕಾರಣವನ್ನು ನಡುಬೀದಿಯಲ್ಲಿ ಬೆತ್ತಲಾಗಿ ನಿಲ್ಲಿಸಿಬಿಟ್ಟಿದೆ.

2008ರ ನಂತರದಲ್ಲಿ ನವ ಉದಾರವಾದಿ ಮಾರುಕಟ್ಟೆ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಎದುರಿಸಿದ ಬಿಕ್ಕಟ್ಟಿಗೂ, ಭಾರತದ ರಾಜಕಾರಣದಲ್ಲಿ ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳ ನೇರ ಪಾಲ್ಗೊಳ್ಳುವಿಕೆಗೂ ನೇರ ಸಂಬಂಧ ಇರುವುದನ್ನು ಈ ಮಾರುಕಟ್ಟೆ ರಾಜಕಾರಣದಲ್ಲಿ ಗುರುತಿಸಬಹುದು. ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ಸಾಂವಿಧಾನಿಕ ನಿಯಮ, ಬದ್ಧತೆಗಳನ್ನು ಗಾಳಿಗೆ ತೂರಿ ರಾಜಕೀಯ ಪಕ್ಷಗಳು ಶಾಸಕರನ್ನು ಖರೀದಿಸಲು ಮುಂದಾಗಿದ್ದೂ ಸಹ ಈ ಬಿಕ್ಕಟ್ಟಿನ ನಂತರದಲ್ಲೇ ಎನ್ನುವುದನ್ನೂ ಗಮನಿಸಬೇಕು.

ಜನಸಾಮಾನ್ಯರು ಸುಸ್ಥಿರ ಸರ್ಕಾರ ಬಯಸುತ್ತಾರೆ, ಸುಭದ್ರ ಆಡಳಿತ ಅಪೇಕ್ಷಿಸುತ್ತಾರೆ ಆದರೆ ಒಂದೇ ಪಕ್ಷದ ಸ್ಪಷ್ಟ ಬಹುಮತದ ರಾಜಕೀಯ ಅಧಿಕಾರ ಜನಾಭಿಪ್ರಾಯದ ಒತ್ತಾಸೆಯಲ್ಲ. ಇದು ಮಾರುಕಟ್ಟೆಯ ಅನಿವಾರ್ಯತೆ. ಈ ಅನಿವಾರ್ಯತೆಯನ್ನು ಜನಾಭಿಪ್ರಾಯವಾಗಿ ರೂಪಿಸುವ ಹೊಣೆಯನ್ನು ಕಾರ್ಪೋರೇಟ್ ನಿಯಂತ್ರಿತ ಸುದ್ದಿ ಮಾಧ್ಯಮಗಳು ವಹಿಸಿಕೊಂಡಿವೆ.

ಇದರ ಪರಿಣಾಮ, ಕರ್ನಾಟಕದಲ್ಲಿ ‘ ಅನರ್ಹರ ರಾಜಕಾರಣ ’ ಎನ್ನುವ ಹೊಸ ಪರಿಕಲ್ಪನೆ ಹುಟ್ಟಿಕೊಂಡಿದೆ. ಒಂದು ಪಕ್ಷದಿಂದ ಆಯ್ಕೆಯಾಗಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಅನರ್ಹ ಪಟ್ಟ ಪಡೆದು, ಅನರ್ಹರಾಗಿಯೇ ಮತ್ತೊಂದು ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಅಧಿಕಾರ ಪೀಠಕ್ಕೆ ಸನಿಹವಾಗುವ ಒಂದು ಅನಿಷ್ಟ ಪರಂಪರೆಗೆ ರಾಜ್ಯದ ಹಲವು ಅನುಭವಿ ರಾಜಕಾರಣಿಗಳೇ ಸ್ಪಷ್ಟ ಬುನಾದಿ ಹಾಕಿರುವುದು ದುರಂತವಾದರೂ ಸತ್ಯ. ಈ ಬೆಳವಣಿಗೆಯ ಹಿಂದೆ ಮಾರುಕಟ್ಟೆಯ ಶಕ್ತಿ ಇರುವುದನ್ನು ನಿರ್ಲಕ್ಷಿಸಲಾಗುವುದಿಲ್ಲ.

ಈ ನಡುವೆಯೇ ರಾಜ್ಯದ ಲಜ್ಜೆಗೆಟ್ಟ ರಾಜಕಾರಣ ಪರಾಕಾಷ್ಠೆ ತಲುಪಿದೆ. 17 ಮಂದಿ ಅನರ್ಹ ಶಾಸಕರ ಬಲದಿಂದ ಸರ್ಕಾರ ರಚಿಸಿದ ಬಿಜೆಪಿ ಮತ್ತು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಅಸ್ಮಿತೆಗಳನ್ನೂ ಮಾರಿಕೊಂಡು ಬಿಕರಿಯಾಗಿರುವ ಶಾಸಕರು ರಾಜ್ಯ ಶಾಸನಸಭೆಯನ್ನು ತರಕಾರಿ ಮಾರುಕಟ್ಟೆಯಂತೆ ಬಳಸುತ್ತಿದ್ದಾರೆ. ಸಚಿವ ಪದವಿ, ನಿಗಮ ಮಂಡಲಿ ಅಧ್ಯಕ್ಷ ಪದವಿ ಇಲ್ಲದೆ ಹೋದರೆ ಈ ಜನ ನಾಯಕರ ಜನಸೇವೆಯೇ ಸ್ಥಗಿತವಾಗಿಬಿಡುತ್ತದೆ.

‘ಜನಸೇವೆಯೇ ಜನಾರ್ಧನ ಸೇವೆ’ ಎನ್ನುವ ಘೋಷವಾಕ್ಯ ಎಂದೋ ಮೂಲೆಗೆ ಸೇರಿದ್ದು ಇಂದು ಧನಾರ್ಜನೆಯೇ ಜನಸೇವೆಯ ಗುರಿಯಾಗಿರುವುದು ಸ್ಪಷ್ಟ. ಗ್ರಾಮಪಂಚಾಯತ್ ಮಟ್ಟದಲ್ಲಿ ಸ್ಥಾನಗಳೇ ಹರಾಜು ಹಾಕಲ್ಪಟ್ಟರೆ, ರಾಜ್ಯ ಸರ್ಕಾರದಲ್ಲಿ ಸಚಿವ ಪದವಿ ಹರಾಜು ಹಾಕಲಾಗುತ್ತಿದೆ. ಒಂದು ರಹಸ್ಯ ಸಿ ಡಿ ಇಡೀ ರಾಜ್ಯ ರಾಜಕಾರಣವನ್ನು ಬೆತ್ತಲಾಗಿಸುತ್ತಿದೆ. ಶಾಸಕರನ್ನು ಖುಲ್ಲಂಖುಲ್ಲಾ ಖರೀದಿಸುವ ಪ್ರಕ್ರಿಯೆಗೆ ಆಪರೇಷನ್ ಕಮಲ ಹೆಸರಿನಲ್ಲಿ ಚಾಲನೆ ನೀಡಿದ ಬಿಜೆಪಿಯ ನಾಯಕತ್ವ ಇಂದಿನ ಹದಗೆಟ್ಟ ಪರಿಸ್ಥಿಗೆ ಸಂಪೂರ್ಣ ಹೊಣೆ ಹೊರಬೇಕಿದೆ.

17 ಶಾಸಕರನ್ನು ಬಿಜೆಪಿಗೆ ತರಲು ನೂತನ ಸಚಿವ ಯೋಗೇಶ್ವರ್ 9 ಕೋಟಿ ರೂ ಸಾಲ ಮಾಡಿದ್ದಾರೆ ಎಂದು ಮತ್ತೋರ್ವ ಮಾಜಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅಂದರೆ ಈ ಶಾಸಕರ ನಿಷ್ಠೆಯನ್ನು ಖರೀದಿಸಲು ಹಣಕಾಸು ವ್ಯವಹಾರ ನಡೆದಿದೆ ಎನ್ನುವುದು ಸ್ಪಷ್ಟವಾಗುತ್ತದೆ. 9 ಕೋಟಿ ರೂ ಸಾಲ ಮಾಡುವ ವ್ಯಕ್ತಿ 90 ಕೋಟಿ ರೂ ಖರ್ಚು ಮಾಡುವ ಸಾಮರ್ಥ್ಯ ಹೊಂದಿರುತ್ತಾನೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರು ನಿಷ್ಠೆಯಿಂದ ಪವಿತ್ರ ಮತ ಚಲಾಯಿಸುವ ಮೂಲಕ ಆಯ್ಕೆ ಮಾಡಿ ಶಾಸನಸಭೆಗೆ ಕಳುಹಿಸುವ ಶಾಸಕರು ಈ ರೀತಿ ಬಿಕರಿಯಾಗುವುದೇ ಪ್ರಜಾತಂತ್ರ ಮೌಲ್ಯಗಳಿಗೆ ಅಪಚಾರ ಎಸಗಿದಂತಲ್ಲವೇ ? ಈ ಕನಿಷ್ಠ ಪ್ರಜ್ಞೆ ರಾಜಕಾರಣಿಗಳಲ್ಲಿ ಇರುವುದಿಲ್ಲ ಏಕೆಂದರೆ ಅವರ ದೃಷ್ಟಿ ಅಧಿಕಾರ ಪೀಠದ ಮೇಲಿರುತ್ತದೆ. ಆದರೆ ಪ್ರಜ್ಞಾವಂತ ನಾಗರಿಕರಲ್ಲಿ ಈ ಪ್ರಜ್ಞೆ ಇರಬೇಕಲ್ಲವೇ ?

ಮುಖ್ಯಮಂತ್ರಿ ಯಡಿಯೂರಪ್ಪ ಬ್ಲಾಕ್‍ಮೇಲ್ ರಾಜಕಾರಣಕ್ಕೆ ಬಲಿಯಾಗಿದ್ದಾರೆ ಎಂದು ನಿರೂಪಿಸಲು ತಮ್ಮ ಬಳಿ ಇರುವ ರಹಸ್ಯ ಸಿ ಡಿ ಒಂದನ್ನು ಗುರಾಣಿಯಂತೆ ಬಳಸುತ್ತಿರುವ ಬಸನಗೌಡ ಪಾಟಿಲ್ ಯತ್ನಾಳ್ ಅವರಿಗೆ ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದಿದ್ದಲ್ಲಿ ಈ.

ಸಿ ಡಿಯನ್ನು ಎಂದೋ ಸಾರ್ವಜನಿಕರ ಮುಂದೆ ಬಹಿರಂಗಪಡಿಸುತ್ತಿದ್ದರು. ತಮ್ಮ ಸ್ವಾರ್ಥ ಸಾಧನೆಗೆ ‘ಯಾರೂ ನೋಡಲಾಗದಂತಹ’ ಸಿ ಡಿ ಒಂದನ್ನು ಅಸ್ತ್ರವನ್ನಾಗಿ ಬಳಸುವುದು ಹೊಲಸು ರಾಜಕಾರಣವಲ್ಲವೇ ? ಒಂದು ವೇಳೆ ಯತ್ನಾಳ್ ಅವರ ಬೇಡಿಕೆಗಳು ಈಡೇರಿದರೆ ಈ
ಸಿ ಡಿಯಲ್ಲಿ ಇರಬಹುದಾದ ಅವ್ಯವಹಾರಗಳ ದಾಖಲೆಗಳು ಶಾಶ್ವತವಾಗಿ ಭೂಗತವಾಗಿಬಿಡುತ್ತವೆ ಅಲ್ಲವೇ ?

ಸಿ ಡಿ ರಾಜಕಾರಣ, ರೆಸಾರ್ಟ್ ರಾಜಕಾರಣ ಮತ್ತು ಬ್ಲಾಕ್‍ಮೇಲ್ ರಾಜಕಾರಣ ಈ ಮೂರೂ ವಿದ್ಯಮಾನಗಳ ಹಿಂದೆ ಕಾರ್ಪೋರೇಟ್ ಬಂಡವಾಳ, ಕರಾಳ ದಂಧೆಯ ಕಪ್ಪುಹಣ ಮತ್ತು ಮಾರುಕಟ್ಟೆ ಮಾಫಿಯಾದ ಛಾಯೆ ಇರುವುದನ್ನು ಗಮನಿಸದೆ ಹೋದರೆ ಬಹುಶಃ ಮುಂದಿನ ದಿನಗಳಲ್ಲಿ ಚುನಾವಣೆಗಳೇ ಒಂದು ಹಾಸ್ಯ ಪ್ರಹಸನವಾಗಿಬಿಡುತ್ತದೆ. ಇಡೀ ಪ್ರಜಾತಂತ್ರ ವ್ಯವಸ್ಥೆಯನ್ನು ಮಾರುಕಟ್ಟೆ ಶಕ್ತಿಗಳು ಆಕ್ರಮಿಸುತ್ತವೆ.

ಜನರು ಜನಪ್ರತಿನಿಧಿಗಳಿಗೆ ಮತ ನೀಡಿದರೆ, ಧನಿಕರು ಧನಪ್ರತಿನಿಧಿಗಳನ್ನು ಶಾಸನ ಸಭೆಗಳಿಗೆ ಕಳಿಸುತ್ತಾರೆ. ಏಕಂದರೆ ಹಣಕಾಸು ಬಂಡವಾಳಿಗರ ಹೂಡಿಕೆಗೆ ವಂದಿಮಾಗಧರ ಬೃಹತ್ ಪಡೆಯ ಅವಶ್ಯಕತೆ ಇರುತ್ತದೆ. ಕೇಂದ್ರ ಸರ್ಕಾರದ ಕೃಷಿ ಮಸೂದೆಗಳು ಇದಕ್ಕೊಂದು ಸ್ಪಷ್ಟ ಉದಾಹರಣೆ. 101 ರೈತರ ಸಾವಿಗೆ ಕನಿಷ್ಠ ಅನುಕಂಪ ತೋರುವುದಕ್ಕೂ ಮುಂದಾಗದ ನರೇಂದ್ರ ಮೋದಿ ಸರ್ಕಾರ ಮಾರುಕಟ್ಟೆ ಶಕ್ತಿಗಳ ಕಬಂಧ ಬಾಹುಗಳಲ್ಲಿ ಸಿಲುಕುವ ಒಂದು ಚುನಾಯಿತ ಸರ್ಕಾರ ಹೇಗಿರುತ್ತದೆ ಎನ್ನುವುದನ್ನು ನಿರೂಪಿಸಿದೆ.

ಈ ಹಿನ್ನೆಲೆಯಲ್ಲೇ ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಬೇಕಿದೆ. ಮೊದಲು ಶಾಸಕರಲ್ಲಿ ಎರಡೇ ಪ್ರಭೇದಗಳಿದ್ದವು. ಹಾಲಿ ಮತ್ತು ಮಾಜಿ. ಈಗ ಅರ್ಹ-ಅನರ್ಹ, ಸಂತೃಪ್ತ-ಅತೃಪ್ತ, ಮೂಲ-ವಲಸಿಗ ಹೀಗೆ ಹಲವು ಪ್ರಭೇದಗಳು ಹುಟ್ಟಿಕೊಂಡಿವೆ.

ಈ ಗೊಂದಲದ ನಡುವೆ ‘ ಪ್ರಾಮಾಣಿಕ ಶಾಸಕ ’ ರ ಸಂತತಿಯೇ ನಶಿಸುತ್ತಿದೆ. ‘ ಜನಪರ ಕಾಳಜಿ ’ ಮತ್ತು ‘ ಜನ ಸೇವೆ ’ ಎಂಬ ಪರಿಕಲ್ಪನೆಗಳು ಹರಾಜು ಮಾರುಕಟ್ಟೆಯಲ್ಲಿ ಬಿಕರಿಯಾಗುವ ಕಚ್ಚಾ ವಸ್ತುಗಳಾಗಿದ್ದು, ಇವೆರಡರ ಪರಿವೆಯೇ ಇಲ್ಲದ ನಾಯಕರಿಗೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೆಲೆ ನಿಗದಿಯಾಗುತ್ತದೆ. 17 ಶಾಸಕರನ್ನು ಒಂದುಗೂಡಿಸಲು 9 ಕೋಟಿ ರೂ ಖರ್ಚು ಮಾಡುವ ಒಂದು ವ್ಯವಸ್ಥೆಗೆ ಇದೂ ಒಂದು ಕಾರಣ.

ಕೆಂಗಲ್ ಹನುಮಂತಯ್ಯನವರಿಂದ ಜೆ ಹೆಚ್ ಪಟೇಲ್ ವರೆಗಿನ ಒಂದು ರಾಜಕೀಯ ಪರಂಪರೆ ಪ್ರಾಚೀನ ವ್ಯವಸ್ಥೆಯ ಪಳೆಯುಳಿಕೆಯಂತೆ ಕಂಡುಬಂದರೆ, ಈ ಅಧಃಪತನದ ಹಿಂದೆ ಮಾರುಕಟ್ಟೆ ಬಂಡವಾಳ ಮತ್ತು ಅಧಿಕಾರ ರಾಜಕಾರಣದ ಹಂಬಲ ಪ್ರಬಲ ಶಕ್ತಿಗಳಾಗಿ ಕಂಡುಬರುತ್ತವೆ.

ಈ ನಡುವೆ ರಾಜ್ಯ ರಾಜಕಾರಣದಲ್ಲಿ ಸದಾ ಕೇಳಿಬರುತ್ತಿದ್ದ ಮೌಲ್ಯ, ತತ್ವ , ಸಿದ್ಧಾಂತ ಮತ್ತು ಸಾಂವಿಧಾನಿಕ ಬದ್ಧತೆ ಮುಂತಾದ ಪದಗಳು ಇತಿಹಾಸದ ಕಸದಬುಟ್ಟಿ ಸೇರಿಬಿಟ್ಟಿವೆ. ಈ ಹೊಲಸು ರಾಜಕಾರಣಕ್ಕೆ ಕರ್ನಾಟಕವೇ ತವರು ಎನ್ನುವುದು ಚರಿತ್ರೆಯ ದೊಡ್ಡ ದುರಂತ. ಆದರೆ ಇದು ವಾಸ್ತವ.

ಈ ಪರಿಸ್ಥಿತಿಗೆ ಯಾರು ಕಾರಣ ? ಪ್ರಜ್ಞೆ ಕಳೆದುಕೊಂಡಿರುವ ನಾಗರಿಕರೋ ಸ್ವಂತಿಕೆ ಕಳೆದುಕೊಂಡಿರುವ ರಾಜಕಾರಣಿಗಳೋ ? ನಜೀರ್ ಸಾಬ್ ಕೇಳ್ತಿದಾರೆ, ಉತ್ತರ ಕೊಡಿ !

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಪ್ರಮುಖ 8 ಕ್ಲಬ್‌ಗಳ ಮೇಲೆ ದಿಢೀರ್ ದಾಳಿ; ನಿಯಮ ಉಲ್ಲಂಘನೆಗೆ ನೋಟಿಸ್

Published

on

bengaluru-clubs-food-safety-raid-cockroaches-expired-food-found
ಬೆಂಗಳೂರು ಕ್ಲಬ್‌ಗಳಲ್ಲಿ ಆಹಾರ ಸುರಕ್ಷತೆ ಶಾಕ್: ಜಿರಳೆ, ಹುಳು, ಅವಧಿ ಮೀರಿದ ಆಹಾರ ಪತ್ತೆ!

ಸುದ್ದಿದಿನ,ಬೆಂಗಳೂರು: ನಗರದ ಪ್ರತಿಷ್ಠಿತ ಕ್ಲಬ್‌ಗಳಲ್ಲಿಯೂ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ನಿಯಮಗಳ ಉಲ್ಲಂಘನೆ ಕಂಡುಬಂದಿರುವುದು ಆತಂಕ ಮೂಡಿಸಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ನಗರದ ಪ್ರಮುಖ 8 ಕ್ಲಬ್‌ಗಳ ಮೇಲೆ ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ಹಲವು ಗಂಭೀರ ಲೋಪಗಳು ಬೆಳಕಿಗೆ ಬಂದಿವೆ. ಆಹಾರ ಸಂಗ್ರಹಣಾ ಸ್ಥಳದಲ್ಲಿ ಅಶುಚಿತ್ವ, ಜಿರಳೆ ಹಾಗೂ ಇತರೆ ಕೀಟಗಳ ಹಾವಳಿ, ಅಸಮರ್ಪಕ ಆಹಾರ ಸಂಗ್ರಹಣೆ ಮತ್ತು ಅವಧಿ ಮೀರಿದ ಪದಾರ್ಥಗಳು ಪತ್ತೆಯಾಗಿವೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ನಿಯಮಗಳು-2011ರ ಅನ್ವಯ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿತ್ತು. ಬೌರಿಂಗ್ ಕ್ಲಬ್, ಸೆಂಚುರಿ ಕ್ಲಬ್, ಕೆಎಸ್‌ಸಿಎ ಕ್ಲಬ್, ಕ್ಯಾಥೋಲಿಕ್ ಕ್ಲಬ್, ಟೆನ್ನಿಸ್ ಕ್ಲಬ್, ವಿಜಯನಗರ ಕ್ಲಬ್, ಮಹಾಲಕ್ಷ್ಮಿ ಲೇಔಟ್ ಕ್ಲಬ್ ಮತ್ತು ಮಲ್ಲೇಶ್ವರ ಕ್ಲಬ್‌ಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.

http://Visit : www.suddidina.com

ಬೇಳೆಕಾಳಿನಲ್ಲಿ ಹುಳು, ದಾಸ್ತಾನು ಕೇಂದ್ರದಲ್ಲಿ ಜಿರಳೆ

ಬೌರಿಂಗ್ ಕ್ಲಬ್‌ನಲ್ಲಿ ಬೇಳೆಕಾಳುಗಳಲ್ಲಿ ಹುಳುಗಳು ಕಂಡುಬಂದಿದ್ದು, ದಾಸ್ತಾನು ಕೇಂದ್ರದಲ್ಲಿ ಅಶುಚಿತ್ವ ಹಾಗೂ ಜಿರಳೆಗಳಿರುವುದು ಪತ್ತೆಯಾಗಿದೆ. ಸೆಂಚುರಿ ಕ್ಲಬ್‌ನಲ್ಲಿಯೂ ಕೀಟಗಳ ಹಾವಳಿ ಮತ್ತು ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಎರಡೂ ಕ್ಲಬ್‌ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

ಕೆಎಸ್‌ಸಿಎ ಕ್ಲಬ್‌ನಲ್ಲೂ ಹಲವು ಲೋಪ

ಕೆಎಸ್‌ಸಿಎ ಕ್ಲಬ್‌ನಲ್ಲಿ ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ, ಆಹಾರ ಪೊಟ್ಟಣಗಳ ಲೇಬಲಿಂಗ್ ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳು ಕಂಡುಬಂದಿವೆ. ಅಸಮರ್ಪಕ ಒಳಚರಂಡಿ ವ್ಯವಸ್ಥೆ, ಶೀತಲೀಕರಣ ಘಟಕದಲ್ಲಿನ ಅನೈರ್ಮಲ್ಯ ಹಾಗೂ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಪ್ರತ್ಯೇಕವಾಗಿ ಸಂಗ್ರಹಿಸದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಪಾತ್ರೆ ತೊಳೆಯಲು ಬಿಸಿನೀರಿನ ವ್ಯವಸ್ಥೆಯ ಕೊರತೆಯೂ ಕಂಡುಬಂದಿದೆ.

ಅವಧಿ ಮೀರಿದ ಅಣಬೆ ಪತ್ತೆ

ಕ್ಯಾಥೋಲಿಕ್ ಕ್ಲಬ್‌ನಲ್ಲಿ ಅವಧಿ ಮೀರಿದ 10 ಪ್ಯಾಕೇಟ್ ಅಣಬೆಗಳು ಪತ್ತೆಯಾಗಿವೆ. ಆಹಾರ ಪದಾರ್ಥಗಳ ಮೇಲೆ ಅಗತ್ಯ ಲೇಬಲ್‌ಗಳಿಲ್ಲದಿರುವುದು ಹಾಗೂ ಸ್ವಚ್ಛತೆಯ ಕೊರತೆಯ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಟೆನ್ನಿಸ್ ಕ್ಲಬ್‌ನಲ್ಲಿ ಆಹಾರ ನಿರ್ವಹಣಾ ಸಿಬ್ಬಂದಿ ವೈದ್ಯಕೀಯ ಪ್ರಮಾಣಪತ್ರ ಹೊಂದಿರದಿರುವುದು ಕಂಡುಬಂದಿದೆ.

ವಿಜಯನಗರ, ಮಹಾಲಕ್ಷ್ಮಿ ಲೇಔಟ್ ಮತ್ತು ಮಲ್ಲೇಶ್ವರ ಕ್ಲಬ್‌ಗಳಲ್ಲಿಯೂ ಆಹಾರ ಪದಾರ್ಥಗಳ ಅವಧಿ ಕುರಿತ ಲೇಬಲಿಂಗ್ ಕೊರತೆ ಹಾಗೂ ಸ್ವಚ್ಛತೆ-ನೈರ್ಮಲ್ಯದ ಸಮಸ್ಯೆಗಳು ಪತ್ತೆಯಾಗಿವೆ.

ಹೋಟೆಲ್‌ಗಳಿಗೂ ಕಟ್ಟುನಿಟ್ಟಿನ ಸೂಚನೆ

ಕ್ಲಬ್‌ಗಳ ಜೊತೆಗೆ ಹೋಟೆಲ್‌ಗಳು ಹಾಗೂ ಇತರೆ ಆಹಾರ ಉದ್ಯಮಗಳಲ್ಲಿನ ಲೋಪಗಳ ಬಗ್ಗೆಯೂ ಇಲಾಖೆ ಗಮನಹರಿಸಿದೆ. ಮುಂದಿನ 15 ದಿನಗಳಲ್ಲಿ ಹೋಟೆಲ್ ಅಸೋಸಿಯೇಷನ್, ರೆಸ್ಟೋರೆಂಟ್ ಅಸೋಸಿಯೇಷನ್ ಮತ್ತು ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರೊಂದಿಗೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಅಡುಗೆಮನೆ ನಿರ್ವಹಣೆ, ಆಹಾರ ತಯಾರಿ ಮತ್ತು ನೈರ್ಮಲ್ಯ ಕುರಿತು ಮಾರ್ಗಸೂಚಿ ಹಾಗೂ ತರಬೇತಿ ನೀಡುವ ಚಿಂತನೆಯೂ ಇದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ಸೆ.2ರ ಹುಟ್ಟುಹಬ್ಬ ಆಚರಿಸದಿರಲು ಕಿಚ್ಚನ ನಿರ್ಧಾರ: “ನಿಮ್ಮ ಪ್ರೀತಿಯೇ ನನಗೆ ದೊಡ್ಡ ಮೈಲಿಗಲ್ಲು

Published

on

ಹುಟ್ಟುಹಬ್ಬದ ಸಂಭ್ರಮಕ್ಕೆ ಬ್ರೇಕ್: ಅಭಿಮಾನಿಗಳಿಗೆ ಕಿಚ್ಚ ಸುದೀಪ್‌ ಭಾವುಕ ಮನವಿ, ಸಮಾಜಮುಖಿ ಕಾರ್ಯಕ್ಕೆ ಕರೆ!

ಸುದ್ದಿದಿನ,ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಹಬ್ಬದ ವಾತಾವರಣ. ಆದರೆ ಈ ಬಾರಿ ಸೆಪ್ಟೆಂಬರ್‌ 2ರಂದು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಳ್ಳದಿರಲು ಸುದೀಪ್‌ ನಿರ್ಧರಿಸಿದ್ದಾರೆ. ವೈಯಕ್ತಿಕ ಹಾಗೂ ಬಲವಾದ ಕೆಲವು ಕಾರಣಗಳಿಂದ ಈ ವರ್ಷದ ಜನ್ಮದಿನದ ಸಂಭ್ರಮದಿಂದ ದೂರ ಉಳಿಯುತ್ತಿರುವುದಾಗಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಭಾವನಾತ್ಮಕ ಪತ್ರದ ಮೂಲಕ ತಿಳಿಸಿದ್ದಾರೆ.

ಹುಟ್ಟುಹಬ್ಬದಂದು ಮನೆಯ ಬಳಿ ಅಭಿಮಾನಿಗಳನ್ನು ಭೇಟಿಯಾಗಲು ತಾವು ಲಭ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕಿಚ್ಚ, ಯಾವುದೇ ರೀತಿಯ ಗದ್ದಲ ಅಥವಾ ಸತ್ಕಾರಕ್ಕೆ ಮುಂದಾಗದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸಾಮಾನ್ಯವಾಗಿ ಸಾವಿರಾರು ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮನೆ ಮುಂದೆ ಸೇರುವ ಸಂದರ್ಭದಲ್ಲೇ, ಈ ಬಾರಿ ಸುದೀಪ್‌ ಅವರ ಮನವಿ ವಿಶೇಷ ಗಮನ ಸೆಳೆದಿದೆ.

ಉಡುಗೊರೆ ಬೇಡ, ಸಮಾಜಕ್ಕೆ ಸಹಾಯ ಮಾಡಿ

ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ನೀಡಲು ಉದ್ದೇಶಿಸಿರುವ ಉಡುಗೊರೆಗಳ ಬದಲಾಗಿ ಆ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುವಂತೆ ಸುದೀಪ್‌ ಕರೆ ನೀಡಿದ್ದಾರೆ. ತಮ್ಮ ಹೆಸರಿನಲ್ಲಿ ನಡೆಯುವ ಸಂಭ್ರಮಕ್ಕಿಂತ ಸಮಾಜಕ್ಕೆ ನೆರವಾಗುವ ಕೆಲಸವೇ ತಮಗೆ ನಿಜವಾದ ಸಂತೋಷ ನೀಡುತ್ತದೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

ಅಭಿಮಾನಿಗಳು ತಮ್ಮ ತಮ್ಮ ಊರು, ಪ್ರದೇಶಗಳಲ್ಲಿ ಸಮಾಜಪರ ಕಾರ್ಯಕ್ರಮಗಳನ್ನು ಆಯೋಜಿಸುವುದೇ ತಮಗೆ ದೊರೆಯುವ ಅತ್ಯುತ್ತಮ ಆಶೀರ್ವಾದ ಎಂದು ಕಿಚ್ಚ ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳ ಪ್ರೀತಿಗೆ ಹೊಸ ಅರ್ಥ ನೀಡುವ ಪ್ರಯತ್ನ ಮಾಡಿದ್ದಾರೆ.

30 ವರ್ಷಗಳ ಸಿನಿ ಪಯಣದ ನೆನಪು

ಕನ್ನಡ ಚಿತ್ರರಂಗಕ್ಕೆ ಸುದೀಪ್‌ ಬರೋಬ್ಬರಿ ಮೂರು ದಶಕಗಳನ್ನು ಅರ್ಪಿಸಿದ್ದಾರೆ. ಸಿನಿಮಾ ತಮ್ಮ ಪರಮ ಕಾಯಕವಾಗಿದ್ದು, ಕೆಲವೊಮ್ಮೆ ಸಿನಿಮಾಗಳು ತಡವಾಗಬಹುದು; ಅದಕ್ಕೂ ಕಾರಣಗಳಿರುತ್ತವೆ ಎಂದು ಅವರು ಹೇಳಿದ್ದಾರೆ. ಈ ಮಾತುಗಳ ಮೂಲಕ ತಮ್ಮ ವೃತ್ತಿಜೀವನದ ಮುಂದಿನ ಹೆಜ್ಜೆಗಳ ಬಗ್ಗೆ ಕುತೂಹಲ ಮೂಡಿಸಿದ್ದಾರೆ.

“ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ” ಎಂಬ ಖಡಕ್‌ ಡೈಲಾಗ್‌ ಮೂಲಕ ಮುಂದಿನ ಸಿನಿಮಾ ಅಥವಾ ಹೊಸ ಯೋಜನೆಗೆ ಸುದೀಪ್‌ ಸುಳಿವು ನೀಡಿದ್ದಾರೆ. ಹೀಗಾಗಿ ಅವರ ಪತ್ರ ಕೇವಲ ಹುಟ್ಟುಹಬ್ಬದ ಮನವಿಯಾಗದೆ, ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆಯನ್ನೂ ಹುಟ್ಟುಹಾಕಿದೆ.

https://x.com/KicchaSudeep/status/2092857077706506638

“ಕನ್ನಡ ನನ್ನ ಸತ್ಯ.. ಕನ್ನಡದಿಂದ ನಾನು ನಿತ್ಯ”

ತಮ್ಮ ಮಾತೃಭಾಷೆ ಕನ್ನಡದ ಮೇಲಿನ ಪ್ರೀತಿಯನ್ನೂ ಸುದೀಪ್‌ ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಎಲ್ಲೇ ಹೋದರೂ ಕನ್ನಡಿಗರನ್ನು ರಂಜಿಸುವ ವಿಷಯದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ ಎಂದು ಹೇಳಿರುವ ಅವರು, ಕಳೆದ 30 ವರ್ಷಗಳಿಂದ ಅಭಿಮಾನಿಗಳಿಂದ ದೊರೆತ ಪ್ರೀತಿ, ಹಾರೈಕೆ, ಚಪ್ಪಾಳೆ ಮತ್ತು ಶಿಳ್ಳೆಗಳೇ ತಮ್ಮ ದೊಡ್ಡ ಬಲ ಎಂದು ಸ್ಮರಿಸಿದ್ದಾರೆ.

“ನಮ್ಮನ್ನು ಮತ್ತು ನಿಮ್ಮನ್ನು ಎಂದಾದರೂ ಬೇರ್ಪಡಿಸಲು ಸಾಧ್ಯವೇ?” ಎಂದು ಪ್ರಶ್ನಿಸುವ ಮೂಲಕ ಅಭಿಮಾನಿಗಳೊಂದಿಗಿನ ತಮ್ಮ ಭಾವನಾತ್ಮಕ ಬಂಧವನ್ನು ತೆರೆದಿಟ್ಟಿದ್ದಾರೆ. ಕೊನೆಯಲ್ಲಿ “Luv u all always…” ಎಂದು ಹೇಳುವ ಮೂಲಕ ಕಿಚ್ಚ ತಮ್ಮ ಅಭಿಮಾನಿಗಳ ಮೇಲಿನ ಅಪಾರ ಪ್ರೀತಿಯನ್ನು ಮತ್ತೊಮ್ಮೆ ಸಾರಿದ್ದಾರೆ.

 

Continue Reading

ದಿನದ ಸುದ್ದಿ

ಬಿಡುಗಡೆ ಬೆನ್ನಲ್ಲೇ ನಿರ್ದೇಶಕಿಯ ಹಳೆಯ ಮಾತಿಗೆ ಹೊಸ ವಿವಾದ: ‘ಟಾಕ್ಸಿಕ್’ ಸುತ್ತ ಟ್ರೋಲ್‌ಗಳ ಸದ್ದು

Published

on

toxic-movie-geethu-mohandas-old-statement-viral-yash-fans-troll
‘ಟಾಕ್ಸಿಕ್’ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೆಯ ವಿಡಿಯೋ ವೈರಲ್: ಸ್ಕ್ರಿಪ್ಟ್‌ ಬಗ್ಗೆ ಹೇಳಿಕೆಗೆ ಯಶ್ ಅಭಿಮಾನಿಗಳ ಆಕ್ರೋಶ!

ಸುದ್ದಿದಿನ,ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಹಳೆಯ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ. ಚಿತ್ರದ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ನಿರ್ದೇಶಕಿಯ ಸಿನಿಮಾ ಮಾಡುವ ವಿಧಾನಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಚರ್ಚೆಯ ಕೇಂದ್ರಬಿಂದುವಾಗಿದೆ.

ವೈರಲ್ ವಿಡಿಯೋದಲ್ಲಿ ಗೀತು ಮೋಹನ್‌ದಾಸ್ ಅವರು, ತಾವು ಬರೆಯುವುದು, ಚಿತ್ರೀಕರಿಸುವುದು ಹಾಗೂ ಎಡಿಟ್ ಮಾಡುವ ಪ್ರಕ್ರಿಯೆಯಲ್ಲಿ ಸಿನಿಮಾ ನಿಧಾನವಾಗಿ ರೂಪುಗೊಳ್ಳುತ್ತದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ತಾವು ಸ್ಕ್ರಿಪ್ಟ್‌ಗೆ ಕಟ್ಟುನಿಟ್ಟಾಗಿ ಅಂಟಿಕೊಂಡು ಕೆಲಸ ಮಾಡುವುದಿಲ್ಲ ಎಂಬ ಅವರ ಹೇಳಿಕೆಯೇ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

http://Visit : www.suddidina.com

‘ಸ್ಕ್ರಿಪ್ಟ್‌ನಂತೆ ಸಿನಿಮಾ ಸಿಗುವುದಿಲ್ಲ’ ಎಂದಿದ್ದ ನಿರ್ದೇಶಕಿ

ನಿರ್ಮಾಪಕರನ್ನು ಭೇಟಿಯಾಗುವಾಗಲೇ ತಮ್ಮ ಕೆಲಸದ ಶೈಲಿಯನ್ನು ಸ್ಪಷ್ಟಪಡಿಸುವುದಾಗಿ ಗೀತು ಹೇಳಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಸ್ಕ್ರಿಪ್ಟ್‌ನಲ್ಲಿ ಓದುವ ಕಥೆಯಂತೆಯೇ ಅಂತಿಮ ಸಿನಿಮಾ ಇರಬೇಕೆಂದಿಲ್ಲ ಎಂಬ ಸಂದೇಶವನ್ನು ಅವರು ನೀಡಿದ್ದರು.

ಸಾಮಾನ್ಯವಾಗಿ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಕಥೆ, ಚಿತ್ರಕಥೆ ಮತ್ತು ಚಿತ್ರೀಕರಣದ ಯೋಜನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಹೀಗಾಗಿ ಗೀತು ಅವರ ಈ ಹಳೆಯ ಹೇಳಿಕೆಯನ್ನು ಕೆಲವರು ಪ್ರಶ್ನಿಸುತ್ತಿದ್ದರೆ, ಮತ್ತೊಂದೆಡೆ ನಿರ್ದೇಶಕರ ಸೃಜನಶೀಲ ಪ್ರಕ್ರಿಯೆ ಒಂದೇ ರೀತಿಯಾಗಿರಬೇಕೆಂದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

https://x.com/alpasankhyata/status/2092620787698094334

‘ಟಾಕ್ಸಿಕ್’ ಮೇಲೆ ಪರಿಣಾಮ ಬೀರಿದ ಹಳೆಯ ಹೇಳಿಕೆ?

‘ಟಾಕ್ಸಿಕ್’ ಬಿಡುಗಡೆ ಬಳಿಕ ಸಿನಿಮಾದ ಕಥೆ, ನಿರೂಪಣೆ, ಆಕ್ಷನ್ ಹಾಗೂ ಪಾತ್ರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಇದೇ ಸಮಯದಲ್ಲಿ ಹಳೆಯ ವಿಡಿಯೋ ವೈರಲ್ ಆಗಿರುವುದರಿಂದ, ಸಿನಿಮಾದಲ್ಲಿನ ಕೆಲವು ಅಂಶಗಳನ್ನು ಈ ಹೇಳಿಕೆಯೊಂದಿಗೆ ಹೋಲಿಸಿ ನೆಟ್ಟಿಗರು ಚರ್ಚಿಸುತ್ತಿದ್ದಾರೆ.

ಚಿತ್ರವು ಸ್ವಾತಂತ್ರ್ಯಪೂರ್ವದ ಗೋವಾ ಹಿನ್ನೆಲೆಯಲ್ಲಿನ ಅಪರಾಧ ಜಗತ್ತು ಮತ್ತು ಅಂಡರ್‌ವರ್ಲ್ಡ್‌ ಕಥೆಯನ್ನು ಒಳಗೊಂಡಿದೆ. ಯಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಸೇರಿದಂತೆ ದೊಡ್ಡ ತಾರಾಬಳಗವಿದೆ.

ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಆರಂಭ

ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ‘ಟಾಕ್ಸಿಕ್’ ಮೊದಲ ದಿನವೇ ₹100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬ ವರದಿಗಳು ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಆರಂಭ ಪಡೆದಿರುವುದನ್ನು ಸೂಚಿಸುತ್ತವೆ. ಆದರೆ ಪ್ರೇಕ್ಷಕರ ಪ್ರತಿಕ್ರಿಯೆ ಮಾತ್ರ ಮಿಶ್ರವಾಗಿದೆ.

ಸದ್ಯ ಗೀತು ಮೋಹನ್‌ದಾಸ್ ಅವರ ಹಳೆಯ ಹೇಳಿಕೆ ಮತ್ತು ‘ಟಾಕ್ಸಿಕ್’ ಚಿತ್ರದ ಕುರಿತು ನಡೆಯುತ್ತಿರುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರಿದಿದೆ. ವೈರಲ್ ವಿಡಿಯೋ ಚಿತ್ರದ ಸೃಜನಶೀಲ ವಿಧಾನಕ್ಕೆ ಸಂಬಂಧಿಸಿದ ಹಳೆಯ ಅಭಿಪ್ರಾಯವಾಗಿದ್ದು, ಅದನ್ನು ಇಂದಿನ ಚಿತ್ರದ ಫಲಿತಾಂಶದೊಂದಿಗೆ ಹೇಗೆ ಸಂಪರ್ಕಿಸಬೇಕು ಎಂಬುದರ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

 

 

Continue Reading

Trending