ದಿನದ ಸುದ್ದಿ
ಜ.30 ರಂದು ದಾವಣಗೆರೆ ವಿವಿ ಯಲ್ಲಿ ರಂಗ ವಿಮರ್ಶಾ ಕಮ್ಮಟ
ಸುದ್ದಿದಿನ,ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಆಸಕ್ತ ಬರಹಗಾರರಿಗಾಗಿ ರಂಗ ವಿಮರ್ಶಾ ಕಮ್ಮಟವನ್ನು ಜ.30 ರಂದು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ, ಜಿಲ್ಲಾ ವರದಿಗಾರರ ಕೂಟ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ದಾವಣಗೆರೆ ಇವರ ಸಹಯೋಗದಲ್ಲಿ ಜ.30 ರ ಬೆಳಿಗ್ಗೆ 10.30 ಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯದ ಎಂ.ಬಿ.ಎ ಸಭಾಂಗಣದಲ್ಲಿ ರಂಗ ವಿಮರ್ಶಾ ಕಮ್ಮಟವನ್ನು ಏರ್ಪಡಿಸಲಾಗಿದೆ.
ಬೆಳಿಗ್ಗೆ 10.30 ಕ್ಕೆ ಒಂದನೇ ಗೋಷ್ಟಿಯಲ್ಲಿ ಲಿಖಿತ ಪಠ್ಯ-ರಂಗ ಪಠ್ಯ ಮತ್ತು ವಿಮರ್ಶೆಯ ಹಾದಿ ವಿಷಯ ಕುರಿತು ರಂಗತಜ್ಞರು, ಸಿನೆಮಾ ನಿರ್ದೇಶಕರು ಹಾಗೂ ರಂಗ ವಿಮರ್ಶಾ ಕಮ್ಮಟದ ನಿರ್ದೇಶಕರಾದ ಬಿ.ಸುರೇಶ್ ವಿಷಯ ಮಂಡನೆ ಮಾಡುವರು. ಹಿರಿಯ ಸಾಹಿತಿಗಳು ಮತ್ತು ದಾವಣಗೆರೆ ನಗರವಾಣಿ ಪತ್ರಿಕೆಯ ಸಹ ಸಂಪಾದಕರಾದ ಬಿ.ಎನ್.ಮಲ್ಲೇಶ್, ಟಿವಿ9 ಜಿಲ್ಲಾ ವರದಿಗಾರರಾದ ಬಸವರಾಜ ದೊಡ್ಡಮನಿ, ಸಂಯುಕ್ತ ಕರ್ನಾಟಕ ದಾವಣಗೆರೆ ಬ್ಯೂರೋ ಮುಖ್ಯಸ್ಥರಾದ ಮಂಜುನಾಥ ಗೌರಕ್ಕಳವರ್, ವಿಜಯ ಕರ್ನಾಟಕ ಉಪ ಸಂಪಾದಕ ಯಳನಾಡು ಮಂಜುನಾಥ, ರಂಗವೈಭವದ ಉಪಸಂಪಾದಕ ಬಸವರಾಜ್ ಐರಣಿ, ಆ.ವಿ.ಎವಿಕೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಅನುರಾಧ ಬಕ್ಕಪ್ಪ ಸಂವಾದದಲ್ಲಿ ಪಾಲ್ಗೊಳ್ಳುವರು.
ಮಧ್ಯಾಹ್ನ 12.30 ಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಎಸ್.ವಿ.ಹಲಸೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ಭೀಮಸೇನ.ಆರ್ ಅಧ್ಯಕ್ಷತೆ ವಹಿಸುವರು. ರಂಗತಜ್ಞರು ಹಾಗೂ ಸಿನೆಮಾ ನಿರ್ದೇಶಕರಾದ ಬಿ.ಸುರೇಶ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ಜಿ.ಎಂ.ಆರ್.ಆರಾಧ್ಯ, ವಾರ್ತಾಧಿಕಾರಿ ಅಶೋಕಕುಮಾರ್.ಡಿ, ರಂಗಸಮಾಜದ ಸದಸ್ಯರಾದ ಪ್ರಭುದೇವ ಕಪ್ಪಗಲ್ಲು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಮಧ್ಯಾಹ್ನ 2.30 ಕ್ಕೆ ಎರಡನೇ ಗೋಷ್ಟಿಯಲ್ಲಿ ನೀನಾಸಮ್ ತಿರುಗಾಟ 2018 ಇವರಿಂದ ಆಶ್ಚರ್ಯ ಚೂಡಾಮಣಿ ನಾಟಕದ ವಿಡಿಯೋ ಪ್ರದರ್ಶನವಿರುತ್ತದೆ. ಹಾಗೂ ಪ್ರದರ್ಶನದ ದೃಶ್ಯ ಭಾಷೆ ಮತ್ತು ಮೌಲ್ಯ ನಿಗದಿಪಡಿಸುವ ಬಗೆ ಕುರಿತು ರಂಗತಜ್ಞರು, ಸಿನೆಮಾ ನಿರ್ದೇಶಕರು ಹಾಗೂ ರಂಗ ವಿಮರ್ಶಾ ಕಮ್ಮಟದ ನಿರ್ದೇಶಕರಾದ ಬಿ.ಸುರೇಶ್ ವಿಷಯ ಮಂಡನೆ ಮಾಡುವರು. ಪ್ರಜಾವಾಣಿ ಬ್ಯೂರೋ ಮುಖ್ಯಸ್ಥ ವಿಶಾಖ.ಎನ್, , ಕನ್ನಡಪ್ರಭ ಪತ್ರಿಕೆಯ ಜಿಲ್ಲಾ ಪ್ರಧಾನ ವರದಿಗಾರ ನಾಗರಾಜ್ ಬಡದಾಳ್, ಏಷಿಯಾನೆಟ್ ಸುರ್ವಣ 24*7 ಜಿಲ್ಲಾ ವರದಿಗಾರ ಡಾ.ವರದರಾಜ್, ದಾವಿವಿ ಸ್ನಾತಕೋತ್ತರ ಕೇಂದ್ರದ ಸಂಯೋಜನಾಧಿಕಾರಿ ವಿಶ್ವನಾಥ್.ಹೆಚ್, ಕಥೆಗಾರ್ತಿ ಬಿ.ಟಿ.ಜಾಹ್ನವಿ, ರಂಗಕರ್ಮಿ ಸಿದ್ದರಾಜ.ಎಸ್.ಎಸ್ ಸಂವಾದದಲ್ಲಿ ಪಾಲ್ಗೊಳ್ಳುವರು.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭವಿದ್ದು ದಾವಣಗೆರೆ ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ.ಬಸವರಾಜ ಬಣಕಾರ ಸಮಾರೋಪ ನುಡಿ ನುಡಿವರು. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ಭೀಮಸೇನ.ಆರ್ ಅಧ್ಯಕ್ಷತೆ ವಹಿಸುವರು. ಲೇಖಕರು-ಹಿರಿಯ ಪತ್ರಕರ್ತರಾದ ಬಾ.ಮ.ಬಸವರಾಜಯ್ಯ ಪ್ರಮಾಣ ಪತ್ರ ವಿತರಣೆ ಮಾಡುವರು. ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯರಾದ ವಿಜಯಲಕ್ಷ್ಮಿ ಹಿರೇಮಠ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವೀರಪ್ಪ ಎಂ.ಭಾವಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕನಕದಾಸರ ಕೀರ್ತನೆ ತತ್ವಗಳು ಸಾರ್ವಕಾಲಿಕ : ಸಚಿವ ಕೆ ಎಸ್ ಬಸಂತಪ್ಪ
ಸುದ್ದಿದಿನ,ದಾವಣಗೆರೆ : ಸಮಾಜದಲ್ಲಿ ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಮೂಡಿಸುವಲ್ಲಿ ಕನಕದಾಸರ ಕೀರ್ತನೆಗಳು ಹಾಗೂ ತತ್ವಗಳು ಸಾರ್ವಕಾಲಿಕ ಪ್ರಸ್ತುತ ಎಂದು ಮುಜರಾಯಿ ಮೀನುಗಾರಿಕೆ ಬಂದರು ಒಳಸಾರಿಗೆ ಸಚಿವರಾದ ಕೆ ಎಸ್ ಬಸಂತಪ್ಪ ಅವರು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತುಂಗಾ ಭದ್ರಾ ಸಭಾಂಗಣದಲ್ಲಿ ಆಯೋಜಿಸಿದ್ದ ದಾಸ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ನಂತರ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಕನಕದಾಸರ ನಾಲ್ಕು ಸಾಲಿನ ಕೀರ್ತನೆಗಳು ಇಡೀ ಸಮಾಜದಲ್ಲಿ ಬದಲಾವಣೆ ತರಲು ಮತ್ತು ಎಲ್ಲರಲ್ಲಿಯೂ ‘ಒಂದು’ ಎಂಬ ಭಾವನೆಯನ್ನು ಮೂಡಿಸಲು ಅತ್ಯಂತ ಶ್ರೇಷ್ಠವಾಗಿವೆ. ಅಂದಿನ ಕಾಲದಲ್ಲಿ ಬಸವಣ್ಣ, ವಾಲ್ಮೀಕಿ ಹಾಗೂ ಕನಕದಾಸರಂತಹ ಮಹನೀಯರು ಸಮಾಜದಲ್ಲಿ ಶಾಂತಿಯ ಸಂದೇಶವನ್ನು ಸಾರುವ ಮೂಲಕ ಸಮಾಜಮುಖಿ ಚಿಂತನೆಗಳನ್ನು ನೀಡಿದ್ದಾರೆ ಎಂದರು.
ಕನಕದಾಸರ ಅಧ್ಯಯನ ಪೀಠಗಳ ಸ್ಥಾಪನೆ, ಅವರ ಕೀರ್ತನೆಗಳನ್ನು ಜನರಿಗೆ ತಲುಪಿಸುವುದು ಹಾಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಹತ್ತಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಎಚ್ ಟಿ ಅವರು ಮಾತನಾಡಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾವಡಿಯಲ್ಲಿ 1509ರಲ್ಲಿ ಬೀರಪ್ಪ ಮತ್ತು ಬಚ್ಚಮ್ಮ ದೇವಿಯವರ ಪುತ್ರನಾಗಿ ಜನಿಸಿದ ಕನಕದಾಸರು, ಬಾಲ್ಯದಲ್ಲೇ ಉತ್ತಮ ಶಿಕ್ಷಣ ಹಾಗೂ ಯುದ್ಧ ಕಲೆಗಳನ್ನು ಕಲಿತು ತಮ್ಮ ಪ್ರಾಂತದ ಪಾಳೆಗಾರರಾಗಿ ಆಡಳಿತ ನಡೆಸಿದ್ದರು.
ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡು ಆತ್ಮಾವಲೋಕನ ಮಾಡಿಕೊಂಡ ನಂತರ, ಜೀವನವೆಂಬುದು ಕೇವಲ ಹೋರಾಟವಲ್ಲದೆ, ಸಮಾಜದಲ್ಲಿರುವ ಅಸಮಾನತೆಯನ್ನು ಮತ್ತು ಮೇಲ್ವರ್ಗದವರ ತುಳಿತಕ್ಕೆ ಒಳಗಾದ ಹಿಂದುಳಿದ ವರ್ಗದವರನ್ನು ಸಮಾನವಾಗಿ ನೋಡುವ ದಾರ್ಶನಿಕ ಚಿಂತನೆಯನ್ನು ರೂಢಿಸಿಕೊಂಡರು. ವಿಜಯಸಾಗರ ಸಾಮ್ರಾಜ್ಯದ ಅತ್ಯಂತ ಹಿರಿಯ ಗುರುಗಳಾದ ವ್ಯಾಸರಾಯರ ಶಿಷ್ಯರಾಗಿ, 16ನೇ ಶತಮಾನದ ದಾಸ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪಾಳೆಗಾರರು ತಮ್ಮ ಜಮೀನಿನಲ್ಲಿ ಸಿಕ್ಕ ಚಿನ್ನವನ್ನು ದಾನಶೀಲರಾಗಿ ಜನರ ಏಳಿಗೆಗಾಗಿ ಮುಡಿಪಾಗಿಟ್ಟಿದ್ದರಿಂದ ಅವರಿಗೆ ‘ಕನಕ ನಾಯಕ’ ಮತ್ತು ‘ಕನಕ ದಾಸರು’ ಎಂಬ ಹೆಸರು ಬಂದಿತು. ಕನಕದಾಸರು ಯಾವುದೇ ಒಂದು ಜಾತಿಗೆ ಸೀಮಿತರಾಗದೆ, ಜಾತ್ಯಾತೀತ ನಾಯಕರಾಗಿ ಕೇವಲ ದೇವರ ಭಕ್ತಿಗೆ ಸೀಮಿತಗೊಳ್ಳದೆ ಸಮಾಜದ ಎಲ್ಲ ಅಡಕುಗಳನ್ನು ದೂರಳಿಸಿ ಎಲ್ಲರೂ ಸಮಾನರು ಎಂದು ತಮ್ಮ ಕೀರ್ತನೆಗಳ ಮುಖಾಂತರ ಸಾರಿದ್ದಾರೆ ಎಂದು ತಿಳಿಸಿದರು.
ಸುಮತಿ ಜಯಪ್ಪ ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಚಿವರಾದ ಕೆ ಎಸ್ ಬಸಂತಪ್ಪ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಮರ್ಥ್ ಶಾಮನೂರ್ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ ಎಂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸಾಹಿತ್ಯ ಎಂ ಆಲದ ಕಟ್ಟಿ ಹಾಗೂ ಸಮುದಾಯದ ಮುಖಂಡರುಗಳು ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರುಗಳಾದ ಪರಮೇಶ್ವರಪ್ಪ ಗಾಣಪ್ಪ ರಮೇಶ್ ಶಿವಣ್ಣ ಮಂಜುನಾಥ ರುದ್ರಮುನಿ ಇತರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಎಚ್ ಟಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಯೋಜನಾ ನಿರ್ದೇಶಕ ವೀರೇಶ್ ಅಬಕಾರಿ ಸಹಾಯಕ ಆಯುಕ್ತ ಚಿದಾನಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ದಿನದ ಸುದ್ದಿ
ಚನ್ನಗಿರಿ | ಕೊರಟಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ | ಪಿ.ಡಿ.ಓ ಶಿವಕುಮಾರ, ಇ.ಒ ಪ್ರಕಾಶ್ ವಿರುದ್ಧ ಲೋಕಾಗೆ ದೂರು
ದಾವಣಗೆರೆ, ಸುದ್ದಿದಿನ; ದಾವಣಗೆರೆ ಜಿಲ್ಲಾ ಚನ್ನಗಿರಿ ತಾಲ್ಲೂಕು ಕೊರಟಿಕೆರೆ ಗ್ರಾಮ ಪಂಚಾಯಿತಿಗೆ 15ನೇ ಹಣಕಾಸಿನ ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ನಡೆದಿರುವ ಕಾಮಗಾರಿ ಮತ್ತು ಖರೀದಿಯಲ್ಲಿನ ಅವ್ಯವಹಾರವನ್ನು ಸೂಕ್ತ ತನಿಖೆಗೆ ಒಳಪಡಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಕಾಲಾವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚನ್ನಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಎಂ.ಆರ್ ಹಾಗೂ ಅವ್ಯವಹಾರದಲ್ಲಿ ಭಾಗಿಯಾಗಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜಿ ಶಿವಕುಮಾರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಕೊರಟಿಕೆರೆ ಗ್ರಾಮ ಪಂಚಾಯಿತಿ ಕಾರ್ಯಾಲಯ ಇಲ್ಲಿಗೆ 15ನೇ ಹಣಕಾಸು ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಸಾಕಷ್ಟು ಅವ್ಯವಹಾರ ಹಾಗೂ ಅಕ್ರಮಗಳು ನಡೆದಿರುವ ಅಧಿಕೃತ ಮಾಹಿತಿಯ ಮೇರೆಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯಾಲಯ, ಕೊರಟಿಕೆರೆ ಚನ್ನಗಿರಿ ತಾಲ್ಲೂಕು ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ ಮಾಹಿತಿ ಕೋರಲಾಗಿದ್ದು, ಅರ್ಜಿದಾರರು ಹಣ ಪಾವತಿಸಿದರೂ ನಿಗಧಿತ ಕಾಲಾವಧಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ನೀಡದ ಕಾರಣ ಇ-ಗ್ರಾಮ ಸ್ವರಾಜ್ ಮೂಲಕ ಮಾಹಿತಿ ಪಡೆದು ದಿನಾಂಕ: 03-10-2026 ರಂದು ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಚನ್ನಗಿರಿ ಇವರಿಗೆ ದೂರು ನೀಡಿ ಇಲಾಖಾ ತನಿಖೆಗೆ ಒಳಪಡಿಸುವಂತೆ ಕೋರಲಾಗಿತ್ತು. ನಿಗಧಿತ ಕಾಲಾವಧಿ ಮುಕ್ತಾಯವಾದರೂ ಯಾವುದೇ ತನಿಖೆ ನಡೆಸದ ಕಾರಣ ಲೋಕಾಯುಕ್ತಗೆ ದೂರು ನೀಡಿ, ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ದಿನದ ಸುದ್ದಿ
ರಕ್ತದಾನದಿಂದ ಜೀವ ಉಳಿಸಿ, ಶ್ರವಣ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ : ಯೋಗೀಶ್ ಸಹ್ಯಾದ್ರಿ
ಚಿತ್ರದುರ್ಗ : ರಕ್ತದಾನವು ಅತ್ಯಂತ ಶ್ರೇಷ್ಠವಾದ ಮಾನವೀಯ ಸೇವೆಯಾಗಿದ್ದು, ಒಬ್ಬ ವ್ಯಕ್ತಿ ಮಾಡುವ ರಕ್ತದಾನದಿಂದ ಮತ್ತೊಬ್ಬರ ಅಮೂಲ್ಯ ಜೀವವನ್ನು ಉಳಿಸಲು ಸಾಧ್ಯವಿದೆ. ಪ್ರತಿಯೊಬ್ಬರೂ ರಕ್ತದಾನದ ಮಹತ್ವವನ್ನು ಅರಿತು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ರೋಟರಿ ಕ್ಲಬ್ ಚಿತ್ರದುರ್ಗ ಅಧ್ಯಕ್ಷ ರೊ. ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.
ರೋಟರಿ ಕ್ಲಬ್ ಚಿತ್ರದುರ್ಗ, ವಾಸವಿ ಬ್ಲಡ್ ಸೆಂಟರ್ ಹಾಗೂ ಸೋನಿಕ್ ಹಿಯರಿಂಗ್ ಏಡ್ ಸೆಂಟರ್, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಶ್ರವಣ ದೋಷ ಪರೀಕ್ಷಾ ಶಿಬಿರವನ್ನು ಬುಧವಾರ ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿ ಸೇವಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ. ಅಪಘಾತಗಳು, ಶಸ್ತ್ರಚಿಕಿತ್ಸೆಗಳು, ಹೆರಿಗೆ ಸಂದರ್ಭಗಳು ಹಾಗೂ ವಿವಿಧ ಕಾಯಿಲೆಗಳ ಚಿಕಿತ್ಸೆಯಲ್ಲಿ ರಕ್ತದ ಅವಶ್ಯಕತೆ ಅತ್ಯಂತ ಮಹತ್ವದ್ದಾಗಿದೆ. ನಾವು ನೀಡುವ ರಕ್ತವು ಮತ್ತೊಂದು ಕುಟುಂಬದ ಬದುಕಿನಲ್ಲಿ ಸಂತೋಷವನ್ನು ಮರಳಿ ತರಬಹುದು. ರಕ್ತದಾನದಿಂದ ದಾನಿಯೊಬ್ಬರಿಗೆ ಯಾವುದೇ ನಷ್ಟವಾಗುವುದಿಲ್ಲ; ಬದಲಾಗಿ ಸಮಾಜಕ್ಕೆ ಜೀವ ಉಳಿಸುವ ಅಮೂಲ್ಯ ಕೊಡುಗೆಯನ್ನು ನೀಡಿದಂತಾಗುತ್ತದೆ. ರಕ್ತದಾನದ ಕುರಿತು ಜನರಲ್ಲಿ ಇರುವ ತಪ್ಪು ಕಲ್ಪನೆ ಮತ್ತು ಅನಗತ್ಯ ಭಯವನ್ನು ದೂರ ಮಾಡಿ ಯುವಜನತೆ ಸೇರಿದಂತೆ ಅರ್ಹ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರವಣ ಆರೋಗ್ಯದ ಮಹತ್ವವನ್ನು ವಿವರಿಸಿದ ಅವರು, ಕಿವಿಗಳು ಕೇವಲ ಶಬ್ದಗಳನ್ನು ಕೇಳುವ ಅಂಗಗಳಲ್ಲ; ಅವು ಮನುಷ್ಯನನ್ನು ಕುಟುಂಬ, ಸಮಾಜ ಮತ್ತು ಜಗತ್ತಿನೊಂದಿಗೆ ಸಂಪರ್ಕಿಸುವ ಪ್ರಮುಖ ಮಾಧ್ಯಮಗಳಾಗಿವೆ. ಮಕ್ಕಳಲ್ಲಿ ಶ್ರವಣ ದೋಷ ಕಂಡುಬಂದರೆ ಅವರ ಮಾತಿನ ಬೆಳವಣಿಗೆ, ಭಾಷಾ ಕಲಿಕೆ, ಶಿಕ್ಷಣ ಮತ್ತು ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಬಹುದು. ಹಿರಿಯರಲ್ಲಿ ಶ್ರವಣ ಸಾಮರ್ಥ್ಯ ಕಡಿಮೆಯಾದರೆ ಕುಟುಂಬದವರೊಂದಿಗೆ ಸಂವಹನ ನಡೆಸಲು ತೊಂದರೆಯಾಗಬಹುದು ಎಂದರು. ಕೇಳುವ ಸಾಮರ್ಥ್ಯ ಕಡಿಮೆಯಾಗುತ್ತಿರುವುದನ್ನು ವಯಸ್ಸಿನ ಸಹಜ ಪ್ರಕ್ರಿಯೆ ಎಂದು ನಿರ್ಲಕ್ಷಿಸಬಾರದು. ಆರಂಭಿಕ ಹಂತದಲ್ಲಿಯೇ ಶ್ರವಣ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಸಮಸ್ಯೆಯನ್ನು ಗುರುತಿಸಿ ಸೂಕ್ತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಅತಿಯಾದ ಶಬ್ದ, ಮೊಬೈಲ್ ಮತ್ತು ಹೆಡ್ಫೋನ್ಗಳ ದುರ್ಬಳಕೆಯಿಂದ ಕಿವಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಶ್ರವಣ ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೋಟರಿ ಕ್ಲಬ್ ಚಿತ್ರದುರ್ಗ ಟ್ರಸ್ಟ್ನ ಕಾರ್ಯದರ್ಶಿ ಹಾಗೂ ಮಾಜಿ ಜಿಲ್ಲಾ ಗವರ್ನರ್ ರೊ. ಮಧುಪ್ರಸಾದ್ ಕೆ. ಅವರು ಮಾತನಾಡಿ, ರೋಟರಿ ಸಂಸ್ಥೆಯು ಸಮಾಜದ ಆರೋಗ್ಯ, ಶಿಕ್ಷಣ ಹಾಗೂ ಮಾನವೀಯ ಸೇವೆಯ ಕ್ಷೇತ್ರಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಆರೋಗ್ಯ ಸೇವಾ ಶಿಬಿರಗಳು ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ ಎಂದು ಅಭಿಪ್ರಾಯಪಟ್ಟರು. ಶ್ರವಣ ದೋಷವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಪರೀಕ್ಷೆ ಹಾಗೂ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು.
ವಾಸವಿ ಬ್ಲಡ್ ಸೆಂಟರ್ನ ಡಾ. ಶ್ರೀನಿವಾಸ್ ಶೆಟ್ಟಿ ಅವರು ರಕ್ತದಾನದ ಮಹತ್ವ, ರಕ್ತದ ಅವಶ್ಯಕತೆ ಹಾಗೂ ರಕ್ತದಾನದಿಂದ ಸಮಾಜಕ್ಕೆ ದೊರೆಯುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಶಿಬಿರದಲ್ಲಿ ಸಾರ್ವಜನಿಕರಿಗೆ ರಕ್ತದಾನ ಮಾಡಲು ಹಾಗೂ ಉಚಿತವಾಗಿ ಶ್ರವಣ ದೋಷ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
ರೋಟರಿ ಕ್ಲಬ್ ಚಿತ್ರದುರ್ಗದ ಸದಸ್ಯರಾದ ರೊ. ಮಾಧುರಿ ಮಧುಪ್ರಸಾದ್, ರೊ. ವೆಂಕಟೇಶ್ ಎಂ.ಸಿ, ರೊ. ತರುಣ್ ಷಾ, ಸೂರ್ಯನಾರಾಯಣ್, ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ ಕಾರ್ಯದರ್ಶಿ ಚೈತ್ರ ಸಿ, ಸೋನಿಕ್ ಹಿಯರಿಂಗ್ ಏಡ್ ಸೆಂಟರ್ ಮೊಹಮ್ಮದ್ ಸುಹೇಲ್ ಸೇರಿದಂತೆ ರೋಟರಿ ಸೇವಾ ಭವನ ಸಿಬ್ಬಂದಿ, ವಾಸವಿ ಬ್ಲಡ್ ಸೆಂಟರ್ ಹಾಗೂ ಸೋನಿಕ್ ಹಿಯರಿಂಗ್ ಏಡ್ ಸೆಂಟರ್ನ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-
ದಿನದ ಸುದ್ದಿ3 days agoನೀತಿ ಸಂಹಿತೆ ಉಲ್ಲಘನೆ, ಬೋಧನೆ ಶೂನ್ಯ ; ಚಳ್ಳಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಲೇಪಾಕ್ಷ ವಿರುದ್ಧ ದೂರು
-
ದಿನದ ಸುದ್ದಿ4 days agoಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಕಲಿ ಬಿಲ್ಲುಗಳ ಹಾವಳಿ | ಕೆ.ಟಿ.ಪಿ.ಪಿ ನಿಯಮ ಉಲ್ಲಂಘನೆ ; ಜಂಟಿ ನಿರ್ದೇಶಕ ಸೇರಿ 4 ಜನ ಪ್ರಾಂಶುಪಾಲರ ವಿರುದ್ಧ ಲೋಕಾಗೆ ದೂರು
-
ಅಂತರಂಗ6 days agoಕವಿತೆ | ಒಂಟಿಯಾನದ ಸರಕು
-
ದಿನದ ಸುದ್ದಿ3 days agoಮಂಗಳೂರು | ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಕೆ.ಆರ್ ಕವಿತಾ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoರಕ್ತದಾನದಿಂದ ಜೀವ ಉಳಿಸಿ, ಶ್ರವಣ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ : ಯೋಗೀಶ್ ಸಹ್ಯಾದ್ರಿ
-
ದಿನದ ಸುದ್ದಿ7 days agoಕಾರಾಗೃಹಗಳ ಇಲಾಖೆ ನೇಮಕಾತಿ ಪರೀಕ್ಷೆ : 4,697 ಅಭ್ಯರ್ಥಿಗಳು ಹಾಜರು
-
ದಿನದ ಸುದ್ದಿ2 days agoಚನ್ನಗಿರಿ | ಕೊರಟಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ | ಪಿ.ಡಿ.ಓ ಶಿವಕುಮಾರ, ಇ.ಒ ಪ್ರಕಾಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ18 hours agoಕನಕದಾಸರ ಕೀರ್ತನೆ ತತ್ವಗಳು ಸಾರ್ವಕಾಲಿಕ : ಸಚಿವ ಕೆ ಎಸ್ ಬಸಂತಪ್ಪ

