ಅಂತರಂಗ
ಅನಾಥರನ್ನಾಗಿಸದ ಅಂತಿಮ ಸಂಗಾತಿ
- ಅಲ್ಮೆಡಾ ಗ್ಲಾಡ್ ಸನ್
ಒಂಬತ್ತು ವರ್ಷ ವಯಸ್ಸಿನ ಹುಡುಗನೊಬ್ಬನ ತಲೆಗೆ ಶಿಕ್ಷಣವೇ ಹತ್ತುತಿರಲಿಲ್ಲವಾಗಿ ಆತ ಮೂರನೇ ಕ್ಲಾಸಿನಿಂದ ಮೇಲೇರಿರಲಿಲ್ಲ! ಆದರೂ ಆತನ ಮಾನವೀಯ ಸೂಕ್ಷ್ಮ ಸಂವೇದನೆಯ ಉತ್ಕಟತೆ ಎಷ್ಟಿತೆಂದರೆ ದೇವಸ್ಥಾನ, ಮಸೀದಿ, ಚರ್ಚುಗಳ ಮುಂಭಾಗ ಭಿಕ್ಷುಕರ ಮಧ್ಯೆ ತಾನೂ ತಲೆಯ ಮೇಲೆ ಟವಲ್ ಹಾಕಿಕೊಂಡು ಕುಳಿತು ಭಿಕ್ಷೆ ಬೇಡಿ ಬಂದ ಹಣವನ್ನು ಅಲ್ಲಿದ್ದವರಿಗೆಲ್ಲಾ ಹಂಚುತ್ತಿದ್ದ.
ಇದನ್ನರಿತ ಆತನ ಸಂಬಂಧಿಕರು ಚರ್ಮ ಕಿತ್ತು ಬರುವ ಹಾಗೆ ಬಾರಿಸಿ ಕೆಡವುತ್ತಿದ್ದರೆ ಅಲ್ಲಿದ್ದ ಭಿಕ್ಷುಕರೇ ಆತನ ಪರವಾಗಿ ವಕಾಲತ್ತು ಹಾಕಿ ಬೇಡಿದ ಭಿಕ್ಷೆಯನ್ನೆಲ್ಲಾ ಭಿಕ್ಷುಕರಿಗೆ ಹಂಚುತ್ತಿದ್ದಾನೆ ಎಂದು ಶ್ಯೂರಿಟಿ ಕೊಟ್ಟ ಮೇಲೆಯೇ ಏನಾದರೂ ಆಗಿ ಹಾಳಾಗಿ ಹೋಗು ಎಂದು ಕೈ ಚೆಲ್ಲುತ್ತಿದ್ದರು.
ಹುಡುಗ ಮಾತ್ರ ತನ್ನ ಅಪ್ಪ ಪ್ರತಿದಿನ ನೀಡುತ್ತಿದ್ದ ಒಂದು ರೂಪಾಯಿಯಲ್ಲಿ ನೆಲ್ಲಿಕಾಯಿಗಳನ್ನು ಕೊಂಡು ಮಾರಿ, ಅದರಿಂದ ಬಂದ ಹಣದಲ್ಲಿ ಇಡ್ಲಿಯನ್ನೋ, ಚಿತ್ರಾನ್ನವನ್ನೋ ಕೊಂಡು ಜನರಿಗೆ ಹಂಚಿಬಿಡುತ್ತಿದ್ದ. ನೋಡುಗರಿಗೆ ಹುಡುಗನ ವರ್ತನೆಗಳು ವಿಲಕ್ಷಣ ಹಾಗೂ ಅತಿರೇಕವಾಗಿ ಕಾಣುತ್ತಿದ್ದರೂ ಆತನಿಗದು ಸಹಜವಾಗಿತ್ತು.
ಇವನನ್ನು ಹೀಗೆಯೆ ಬಿಟ್ಟರೆ ಕಳ್ಳನೋ, ಸುಳ್ಳನೋ ಆಗುತ್ತಾನೆಂದು ತೀರ್ಮಾನಿಸಿ, ದೆಹಲಿಯಲ್ಲಿ ಧರ್ಮಶಾಸ್ತ್ರ ಅಧ್ಯಯನ ನಡೆಸುತ್ತಿದ್ದ ಅಣ್ಣನ ಬಳಿಗೆ ಕಳುಹಿಸಿದ್ದರು. ಅಲ್ಲಿಯೂ ಇದೇ ವರ್ತನೆ! ಧರ್ಮಗುರುಗಳು ನಿಮ್ಮ ಮಗ ಯಾವ ಕಾರಣಕ್ಕೂ ಓದಲಾರ ಎಂಬ ಪ್ರಶಂಸಾ ಪತ್ರದೊಡನೆ ಆತನನ್ನು ವಾಪಸ್ ಕಳುಹಿಸಿದಾಗಲೂ ಪೋರ ತನ್ನ ಯೋಚನಾ ಕ್ರಮದಿಂದ ವಿಚಲಿತನಾಗಿರಲಿಲ್ಲ.
ಇಂದು ಆತ ನಲವತ್ತೆರೆಡರ ಯುವಕ. ವಿಶೇಷ ಅಂತಃಶಕ್ತಿ, ಧಾರ್ಮಿಕ ಬದ್ಧತೆ, ಇಚ್ಛಾಶಕ್ತಿ ಹಾಗೂ ತಾತ್ವಿಕತೆಯನ್ನು ತನ್ನ ಸರಳ ಬದುಕಿನೊಂದಿಗೆ ಮೇಳೈಸಿಕೊಂಡಿರುವ ಈತನ ನಾಜುಕಿಲ್ಲದ ಮಾತುಗಳು ಒಬ್ಬ ಪ್ರಬುದ್ಧ ಮೌಲ್ವಿಯದ್ದೋ, ಸೂಫಿಸಂತನದ್ದೋ ಎಂದೆನ್ನಿಸದಿರಲಾರದು. ಯಾರಿಗೂ ಬೇಡವಾದ ಸುಮಾರು ಹದಿಮೂರು ಸಾವಿರ ಅನಾಥ ಶವಗಳಿಗೆ ಗೌರವಪೂರ್ಣ ಶ್ರದ್ಧಾಂಜಲಿಯೊಡನೆ ವಿದಾಯ ನೀಡಿದ ಶ್ರೇಷ್ಠ ಕಾಯಕ ರತ್ನ ನಮ್ಮ ಅಯೂಬ್ ಅಹಮದ್.
ಮೈಸೂರು ನಗರ ಇವರನ್ನು ‘ಬಾಡಿಮಿಯಾ ಎಂದೂ ಪ್ರೀತಿಯಿಂದ ಕರೆಯುತ್ತಿದೆ. ಜನಸ್ನೇಹಿ ಅಯೂಬ್ ಬಾಡಿಮಿಯಾ ಎಂದೆನ್ನಿಸಿಕೊಂಡಿದ್ದೇ ರೋಚಕವಾದುದ್ದು. ಯಾವುದೋ ವೈರಾಗ್ಯಕ್ಕೋ, ಭಾವೋದ್ರೇಕಕ್ಕೋ, ಗುರುತಿಸಿಕೊಳ್ಳುವ ಪ್ರವೃತ್ತಿಗೋ ಸಿಲುಕಿ ಅಯೂಬ್ ಈ ಕಾರ್ಯಕ್ಕೊಡ್ಡಿಕೊಂಡವರಲ್ಲ.
ಬದಲಾಗಿ ಎಳವೆಯಲ್ಲೇ ತನ್ನ ಅಪ್ಪ ಪಠಿಸುತ್ತಿದ್ದ ಖುರಾನನಿನ ನುಡಿಮುತ್ತುಗಳನ್ನೆ ಎದೆಯೊಳಗಿಳಿಸಿಕೊಂಡು ಇನ್ಸಾನಿಯಾತ್ ಜಿಂದಾಬಾದ್ ಎಂದು ಹೃದಯದೊಳಗೆ ಬರೆದುಕೊಂಡು ಸಂತೃಪ್ತನಾದ ಯುವಕನೀತ . “ನಮ್ದುಕೆ ಅಪ್ಪಾಜಿನೆ ನಮ್ಗೆ ಗುರುಗಳಿದಂಗೆ. ಚಿಕ್ಕದ್ರಿಂದ ಖುರಾನ್ ಓದಿ ನಮ್ಗೆ ಅರ್ಥ ಹೇಳ್ಕೊಡೊರು. ಖುರಾನ್ ಒಂದ್ಕಡೆ ಹೇಳ್ತೈತೆ, ಮಂದಿ ಬದ್ಕಿದ್ರೂ, ಸತ್ರೂ ಅವರ್ನ ಗೌರವದಿಂದ ನೋಡು ಅಂತ.
ಹಸ್ದವರ್ಗೆ ಊಟ, ಚಳಿಯಲ್ಲಿದ್ದೋರ್ಗೆ ಬಟ್ಟೆ ಕೊಟ್ಟು, ಸತ್ತೋದೊರ್ಗೇ ಗೌರವದಿಂದ ಕಳ್ಸಿಕೊಡು ಅಂತನೇ ಎಲ್ಲಾ ದೇವ್ರು ಹೇಳ್ತಿರೋದು. ನಾವೆಲ್ಲಾ ಭೂಮೀಲಿ ಬಾಡಿಗೆ ಮನೆಯಾಗೆ ಇದೀವಿ. ಯಾರ್ದು ಪರ್ಮನೆಂಟ್ ಇಲ್ಲ. ಹೋಗೊದ್ರೊಳ್ಗೆ ಅಲ್ಲಾ ಮಾಲೀಕ್ದು ಬಾಡಿಗೆ ಕಟ್ಟ್ಬೇಕು. ನಾನು ಅದನ್ನೇ ಮಾಡ್ತಾ ಇದೀನಿ ಅಷ್ಟೇ “ಎಂದು ಹೇಳುವ ಅಯೂಬ್ ಜಿ ‘ಬಾಡಿಮಿಯಾ’ನಾಗಿ ಇಪ್ಪತ್ತೆರಡು ವರ್ಷಗಳಾಗಿವೆ.
“ನಮ್ದು ಚಿಕ್ಕ್ದ್ರಲ್ಲಿ ಯೆಲ್ಡ್ಮೂರು ಸೈಂಕಲ್ ಇಟ್ಟಿದ್ವಿ. ದೊಡ್ಡವನಾದಾಗ ಒಂದು ಸೆಕೆಂಡ್ ಹ್ಯಾಂಡ್ಲು ಕಾರು ಮಡಗ್ಬೇಕು ಅನ್ಸಿತ್ತು” ಎಂದು ತನ್ನ 18ರ ಹರೆಯವನ್ನು ನೆನಪಿಸಿಕೊಂಡ ಅಯೂಬ್ ಕಾರೊಂದನ್ನು ಖರೀದಿ ಮಾಡಲು ಬಸ್ನಲ್ಲಿ ಹೋಗ್ತಿದ್ದಾಗ ಬಂಡಿಪಾಳ್ಯದ ಬಳಿ ಶವವೊಂದು ಬಿದ್ದಿತ್ತಂತೆ. ಸಂಜೆ ತನ್ನ ಕಾರಿನೊಂದಿಗೆ ಮರಳುತ್ತಿದ್ದಾಗಲೂ ಶವ ಅಲ್ಲೇ ಬಿದ್ದಿತ್ತು. “ಖುರಾನ್ ಪ್ರಕಾರ ಯಾವುದೇ ಶವಾ ಬಿದ್ದಿಲ್ರಿ, ನಾವು ಅದ್ರ ಮಕ ನೋಡ್ದೆ, ಶವದ್ ಮೆರವಣಿಗೆಯಲ್ಲಿ ನಾಲ್ಕೆಜ್ಜೆ ಹಾಕ್ದೆ ಮುಂದುಕ್ಕೋಗ್ಬಾರ್ದು.
ನಾನು ಮಕ ನೋಡಿ ಅಲ್ಲಿದ್ದವರ್ಗೆ ‘ಕ್ಯಾ ಸಾಬ್ ಅಭಿ ಐಸಾ ಹೀ ಹೈನಾ? ಅಂತ ಕೇಳ್ದೆ. ‘ಕ್ಯಾ ಕರ್ನಾ ಕೋಹಿ ನಹೀ ಹೈನಾ?’ ಅಂದಾಗ ಛೋಡೊ ಭಾಯ್ ಮೈ ಹೂನಾ? ಅಂತ ಹೇಳ್ಬುಟ್ಟಿದ್ದೇ ಹೆಣ ಎತ್ತ್ಕೊಂದಿ ಕೆ.ಆರ್.ಆಸ್ಪತ್ರೆಗೆ ತಂದಿದ್ದೆ. ಎಲ್ಲರೂ ಹೊಸ ಕಾರ್ ನ ಚಾಮುಂಡಿಗೋ, ದರ್ಗಕ್ಕೋ ತಗೊಂದಿ ಹೋಗ್ತಾರೆ. ಇಲ್ಲ ಅಪ್ಪ-ಅಮ್ಮಂಗೆ ಕುಂದ್ರಿಸ್ಕೊಂದಿ ರೌಂಡ್ ಹೋಗ್ತಾರೆ, ನಾನ್ ಮಾಡಿದ್ದು ನೋಡಿ ನಮ್ಮವ್ರು ನಮ್ಗೆ ದನಕ್ಕೆ ಬಡ್ದಂಗೆ ಬಡ್ದುಬಿಟ್ರು.
ನಂಗೇನಾದ್ರೂ ದಯ್ಯ-ಪಯ್ಯ ಏನಾದ್ರೂ ಹಿಡ್ಕೊಂಡು ಬಿಟ್ರೆ ಅಂತ ಅವರ್ಗೆ ಬಯ್ಯ. ನಾನು,’ ನಾನೇನ್ ತಪ್ಪು ಕೆಲಸ ಮಾಡ್ದೆ? ‘ ಅಂತ ತಲೆ ಕೆರ್ಕಂಡಿ ಮೈಸೂರು ಬೇಡ್ನಕ್ಕೇ ಬೇಡ ಅಂತ ಬೆಂಗಳೂರ್ಗೆ ಹೊಂಟ್ಬಿಟ್ಟೆ. ಒಂದ್ಸಲ ಲಾಲ್ಬಾಗ್ನಲ್ಲಿ ಜನ ಗುಂಪು ಸೇರಿದ್ರು. ನಾನು ಫಿಲಿಂ ಶೂಟಿಂಗ್ ಇರ್ಬೋದು, ಹೀರೊಗೆ ಒಂದ್ಸಲ ಕೈ ಮಿಲಾಯ್ಸ್ಬೋದು ಅಂತ ನುಗ್ಗಿ ಹೋದ್ರೆ ಮತ್ತೆ ಹೆಣ ಬಿದ್ದಿತ್ತು. ನಾನ್ ಹೆದ್ರಿ ‘ಯಾ ಅಲ್ಲಾ ಏನಿದೆಲ್ಲಾ’ ನನ್ ಗಿರಾಚಾರ ನೆಟ್ಗಿಲ್ಲ ಅಂತ ಹೇಳ್ತಿದ್ರುವೇ ಬಾಡಿನ ಬಿಟ್ಟೋಗೋಕೆ ಮನ್ಸಾಗ್ನಿಲ್ಲ.
ಮತ್ತೆ ಹೆಣ ಹೊತ್ತ್ಕೊಂದಿ ಹೊಂಟಾಗ ಅಲ್ಲಿದ್ದ ಮುದುಕ್ರು ನನ್ ಕೈ ಮುಗ್ದು ಮಗಾ ನೀನು ಮಾಡಿದ್ದು ಅಂತಿಂಥಾ ಸಣ್ಣ್ ಕೆಲ್ಸ ಅಲ್ಲಾ, ನಿನ್ಗೆ ಒಳ್ಳೆದಾಗ್ತುದೆ ಅಂತ ಆಶೀವಾರ್ದ ಮಾಡಿದ್ರು ಎಂದು ನೆನಪಿಸಿಕೊಂಡ ಅಯೂಬ್. ತನ್ನ ಬದುಕಿಗಾಗಿ ಬಾಡಿಗೆ ಆಟೋ, ಟ್ಯಾಕ್ಸಿ ಚಾಲನೆ ಮಾಡುತ್ತಾ, ಲಾರಿಗಳಿಗೆ ಹಣ್ಣು-ತರಕಾರಿಗಳನ್ನು ತುಂಬುತ್ತಾ ತನ್ನ ಒಡನಾಡಿಗಳ ಸಂಕಷ್ಟಗಳಿಗೆ ಪ್ರತೀ ಕ್ಷಣ ಮಿಡಿಯುತ್ತಾ ಸಾಗುತ್ತಿದ್ದಾರೆ.
ಮೊದಮೊದಲು ಈ ವಿಶಿಷ್ಟ ಕಾಯಕ ಅಯೂಬ್ ರವರನ್ನು ಅಗ್ನಿಪರೀಕ್ಷೆಗೊಳಿಸಿದ್ದಿದೆ. ಸ್ನೇಹಿತರು, ಸಂಬಂಧಿಕರು ದೂರವಾಗಿ ತಿರಸ್ಕಾರ, ಅನಾಥ ಪ್ರಜ್ಞೆಗಳು ಇನ್ನಿಲ್ಲದಂತೆ ಕಾಡಿದಾಗ ಯಾ ಅಲ್ಲಾ ಏನಿದು ಈ ಥರಾ ಎಕ್ಸಾಮು ತಗೊಂದಿದಿ? ಎಂದು ಅತ್ತದುಂಟು. ಸಣ್ಣ ವಾಹನದಲ್ಲಿ ಹೆಣವನ್ನು ತುಂಬಿ ಒಬ್ಬಂಟಿಯಾಗ ಬರುವಾಗ ಭಯವೆಂಬುದು ದೆವ್ವಗಳಾಗಿ ಕಾಡಿದುಂಟು.
ಆದರೆ ತನ್ನನರಿತ ಹೆತ್ತಪ್ಪ ನೀಡಿದ ನೈತಿಕ ಹಾಗೂ ಧಾರ್ಮಿಕ ಶಕ್ತಿ ಅಯೂಬ್ರನ್ನು ‘ಮೆಸ್ಸಾಯಾ’ನನ್ನಾಗಿಸಿದೆ. ಅನಾಥ ಹೆಣಗಳ ಒಡನಾಡಿಯೆಂದೇ ಗುರುತಿಸಲ್ಪಟ್ಟ ಬಾಡಿಮಿಯಾ ಅಯೂಬ್ ಮಾಡದಿರುವ ಸೇವಾ ಕಾರ್ಯಗಳಿಲ್ಲ. ಮೊದಲೆಲ್ಲಾ ಅರಮನೆ ಮುಂಭಾಗ ಅನ್ನ ಇಲ್ದೆ ಕುಳಿತಿರುವವರಿಗೆ ಅನ್ನ ಕೊಡುತ್ತಿದ್ದರಂತೆ. ಕೆಲವರು ಬಂದು ಇಲ್ಲೇ ಊಟ ಕೊಡಬೇಡಿ ಅರಮನೆಗೆ ಅವಮಾನ ಆಗುತ್ತೆ ಅಂತ ಹೇಳಿದ್ರಂತೆ. ಅದಕ್ಕೆ ನಮ್ಮ ಅಯುಬ್ “ಹರೇ ಬಾಯ್ ನಮ್ದುಕ್ಕೆ ಏನಾದ್ರೂ ಇಲ್ಲಿದು ರಾಜಕುಮಾರ್ ಆಗಿದ್ದಿದ್ರೆ ಇವರನ್ನೆಲ್ಲ ಒಳಗೆ ಕರ್ಕೊಂಡು ಹೋಗಿ ಕುಂದ್ರಿಸಿ ಊಟ ಕೊಡ್ತ್ತಿದ್ದೆ” ಅಂತ ಹೇಳಿ ನಕ್ಕಿದ್ದ ರಂತೆ!
ಫೆಬ್ರವರಿ 22ನೇ ತಾರೀಕು ಅಹಮದ್ ರವರ ಹುಟ್ಟುಹಬ್ಬ. ಆ ದಿನ ಆಯುಬ್ ಜನರಿಗೆ ಒಂದು ಸಂದೇಶವನ್ನು ನೀಡಲಿಕ್ಕೆ ಇಷ್ಟಪಟ್ಟಿದ್ದಾರೆ. “ಅಲ್ಲಾ ಭಾಯ್! ಏನ್ ಘನಂದಾರಿ ಕಾಮ್ ಜೀವನದಲ್ಲಿ ಮಾಡಿಬಿಟ್ಟಿದ್ದೀರಿ ಅಂತ ಹುಟ್ದಬ್ಬ ಸೆಲೆಬ್ರೇಟ್ ಮಾಡ್ತೀರಿ? ಹಾಗೆ ನೋಡಿದರೆ ಒಂದು ವರ್ಷ ವೇಸ್ಟೇಜ್ ಆಗಿ ಇನ್ನೊಂದ್ ವರ್ಷ ವೇಸ್ಟೇಜ್ ಆಗ್ತಾಯಿದೆ.
ಇದಕ್ಕೆ ಹೋಗಿ ಕೇಕ್ ಪಾಕ್ ವೇಸ್ಟೇಜ್ ಎಲ್ಲ ಜನ್ರಿಗೆ ತಿನ್ಸೋ ಬದ್ಲು ಒಬ್ಬ ರೋಗಿದ್ದು ಬಿಲ್ ಕಟ್ಟಿ? ಒಂದು ಬಡ ಮಗಂದು ಸ್ಕೂಲ್ ಫೀಸು ಚುಕ್ತಾ ಮಾಡಿ? ಮೇಲ್ಗಡೆಯವಂದು ಅಕೌಂಟ್ ನಲ್ಲಿ ಒಂದಿಷ್ಟು ಜಮಾ ಮಾಡಿಕೊಂಡು ಬನ್ನಿ? ನಿಮಗೂ ಒಳ್ಳೆಯದಾಗುತ್ತದೆ ಜನರಿಗೂ ಒಳ್ಳೆಯದಾಗುತ್ತದೆ.” ಅಂತ! ಹೇಗಿದೆ ಸಂದೇಶ?
ಈಗ ಸ್ಲಂ ಹಾಗೂ ರೈಲ್ವೆ ಸ್ಟೇಷನ್ಗಳಲ್ಲಿನ ಹಸಿದ ಹೊಟ್ಟೆಗಳನ್ನು ಸಮಾಧಾನಿಸುತ್ತ, ಪಡಿತರಗಳನ್ನು ವಿತರಿಸುತ್ತಿರುವ ಆಯುಬ್ ‘ಇಂಡಿಯಾ ಯುಟಿಲಿಟಿ ಬ್ಯಾಂಕ್’ ಎಂಬುದನ್ನು ಸ್ಥಾಪಿಸಿ ಜನರಿಂದ ಉಪಯೋಗಿಸಲ್ಪಟ್ಟ ಆದರೆ ಚೆನ್ನಾಗಿರುವ ಪದಾರ್ಥಗಳನ್ನು ಸಂಗ್ರಹಿಸಿ ಇಲ್ಲದವರಿಗೆ ಹಂಚುವ ಪ್ರವೃತ್ತಿಯಲ್ಲಿದ್ದಾರೆ. ಅನೇಕ ಬಡ ಹೆಣ್ಣುಮಕ್ಕಳ ಮಾಂಗಲ್ಯಭಾಗ್ಯಕ್ಕೂ ಕಾರಣೀಭೂತರಾಗಿದ್ದಾರೆ.
ತನ್ನ ಮಗಳ ಹೆಸರಿನಲ್ಲಿ ಉಚಿತ ಟೈಲರಿಂಗ್ ತರಬೇತಿಯನ್ನು ನೀಡುತ್ತಿದ್ದಾರೆ. ನೂರಾರು ಕೊರೊನಾ ಹೆಣಗಳನ್ನು ಧೃತಿಗೆಡದೇ ಸಾಗಿಸಿ ‘ವಾರಿಯರ್’ ಎಂದೆನ್ನಿಸಿಕೊಂಡಿದ್ದಾರೆ. ಹಾರ್ಮೋನಿ ಯೂನಿವರ್ಸಿಟಿ ಆಫ್ ಅಮೆರಿಕ ನೀಡಿದ ಗೌರವ ಡಾಕ್ಟರೇಟ್, ಮೈಸೂರು ದಸರಾದಲ್ಲಿ ನ ನಾಗರಿಕ ಸನ್ಮಾನ,ಹತ್ತಾರು ಪ್ರಶಸ್ತಿಗಳು, ಸನ್ಮಾನಗಳು ತನ್ನನರಸಿ ಬಂದರೂ ಹೊನ್ನಶೂಲಕ್ಕೇರದೇ ಮಂದಹಾಸದೊಡನೆ ಪ್ರಶಸ್ತಿಗಳು ಬೇಡ, ದೇವರ ಕೆಲಸಕ್ಕೆ ಕೈ ಜೋಡಿಸಿ ಎನ್ನುವ ಬಾಡಿಮಿಯಾನ ಸುಳ್ಳು, ತಟವಟಗಳಿಲ್ಲದ, ಅನುಕರಣೆಗೂ ಅಸಾಧ್ಯವಾದ ಅಪ್ಪಟ ಅಪರಂಜಿಯ ಬದುಕು ನಮ್ಮೊಡನಿರುವವರನ್ನು ಪ್ರೀತಿಸುವ, ನಮ್ಮನಗಲಿದವರನ್ನೂ ಗೌರವಿಸುವ ಮೌಲ್ಯವೊಂದನ್ನು ಬಿತ್ತುತ್ತಾ ಎಲ್ಲಾ ಧರ್ಮಗಳ ಧರ್ಮಗುರುಗಳನ್ನೂ ವಿಸ್ಮಿತರನ್ನಾಗಿಸಿದೆ.
ಹ್ಯಾಪಿ ಬರ್ತಡೇ ಭಾಯಿ! ನಿಮ್ಮಂತಹ ಹೃದಯವಂತರ ಸಂತತಿ ಇನ್ನೂ ಹೆಚ್ಚಲಿ!!
(21 ಫೆಬ್ರವರಿ ಯ ಫೇಸ್ ಬುಕ್ ಬರಹ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕತೆ | ಹೀಗೊಂದು ಕಚೇರಿ
~ಎಸ್. ರಘುನಂದನ್, ಮೈಸೂರು
ಅದು ಸಂಜೆಯ ಸಮಯ. ಕತ್ತಲ ನೆರಳುಗಳು ಹಸಿದ ಭೂತದ ಬೆರಳುಗಳಂತೆ ಚಾಚಿಕೊಳ್ಳುತ್ತಿದ್ದ ಹೊತ್ತು. ಸಾವಿರಾರು ದಣಿದ ಜೀವಿಗಳು ತಮ್ಮ ಮನೆಗಳಿಗೆ ಮರಳುತ್ತಿದ್ದರಿಂದ, ರಸ್ತೆಯ ಗಾಳಿಯಲ್ಲಿ ಹೊಗೆಯ ಘಾಟು ತುಂಬಿತ್ತು. ಭಾಸ್ಕರ ಮನೆಗೆ ಮರಳುತ್ತಿದ್ದ. ರಸ್ತೆಯ ಬಳುಕುವ ತಿರುವುಗಳಲ್ಲಿ ಮೊಪೆಡ್ ವಾಲಿಸುತ್ತಿದ್ದಾಗ, ಆ ಕತ್ತಲೆಯ ಕಪ್ಪು ಪರದೆಯಿಂದ ಹಠಾತ್ತಾಗಿ ಕಡುಗತ್ತಲೆಯಷ್ಟೇ ಕಪ್ಪಾಗಿದ್ದ ಕಪ್ಪು ನಾಯಿ ಅಡ್ಡ ಬಂದಿದ್ದಲ್ಲದೆ ಹೆಡ್ಲೈಟ್ ಬೆಳಕಿನಲ್ಲಿ ಹೆಪ್ಪುಗಟ್ಟಿದಂತೆ ನಿಂತಿತ್ತು.
ಇದ್ದಕಿದ್ದಂತೆ ಉಂಟಾದ ಆಘಾತದಿಂದ ಭಾಸ್ಕರನ ಹೃದಯ ಪಂಜರದೊಳಗಿನ ಹಕ್ಕಿಯಂತೆ ಬಡಿದುಕೊಂಡಿತು. ಆ ಮೂಕಪ್ರಾಣಿಯನ್ನು ಉಳಿಸಲು ಆತುರದಿಂದ ಹ್ಯಾಂಡಲ್ಬಾರ್ ಅನ್ನು ಬಲವಾಗಿ ತಿರುಗಿಸಿದ. ರಸ್ತೆಯ ಮೇಲೆ ಟೈರ್ಗಳು ಚೀರಿದವು. ಜಗತ್ತು ಒಮ್ಮೆಲೇ ತಲೆಕೆಳಗಾದಂತೆ ಆಗಿ ಗಾಡಿ ತಪ್ಪು ಹಾದಿಗೆ ಜಾರಿತು. ಎದುರಿನಿಂದ ಕಣ್ಣು ಕೋರೈಸುವ ಬೆಳಕು, ಇನ್ನೊಂದು ಮೊಪೆಡ್. ಕ್ಷಣಕಾಲ ಉಸಿರು ಬಿಗಿಹಿಡಿದು ಮೃತ್ಯುವಿನ ಅಲಗಿನ ಮೇಲೆ ನರ್ತಿಸಿದ ಅನುಭವ. ಅತ್ಯಂತ ಕೂದಲೆಳೆಯ ಅಂತರದಲ್ಲಿ ಎದುರಿನ ವಾಹನವನ್ನು ದಾಟಿ ಮುನ್ನಡೆದ ಭಾಸ್ಕರ.
ಎದೆ ಇನ್ನು ಡವ ಡವ ಅಂತ ಹೊಡೆದುಕೊಳ್ಳುತ್ತಾ ಇತ್ತು, ಜೀವ ಬಾಯಿಗೆ ಬಂದಹಾಗೆ ಆಗಿತ್ತು. ಅಂತೂ ಹೇಗೋ ಅಪಘಾತ ತಪ್ಪಿತಲ್ಲಾ ಎಂಬ ನಿಟ್ಟುಸಿರು ಬಿಟ್ಟ ಭಾಸ್ಕರ. ಆ ದಟ್ಟ ಗಾಳಿಯಲ್ಲಿ ಒಂದು ಸದ್ದು ಕೇಳಿಸಿತು. ಅದು ಹಾರ್ನ್ ಸದ್ದಲ್ಲ, ಯಾರೋ ಕೂಗಿದ ಹಾಗೆ: “ಹೇ! ಹೇ! ಯೋ! ಯೋ!” ರಸ್ತೆ ಮಂಜಾಗಿತ್ತು. ಯಾರೋ ದಾರಿಹೋಕ ಇರಬೇಕು, ಕೆಲವೊಮ್ಮೆ ಹೀಗೆಲ್ಲ ಗಾಡಿ ಓಡಿಸಿದಾಗ ರಸ್ತೆಯಲ್ಲಿ ಕೂಗಿಬಿಡುತ್ತಾರೆ, ಅವರಿಗೇನು ಗೊತ್ತು ನಮಗೆ ಎಷ್ಟು ಗಾಬರಿಯಾಗಿರುತ್ತೆ ಅಂತ, ಹೀಗೆಲ್ಲ ಯೋಚನೆ ಮಾಡುತ್ತಾ ಇನ್ನು ಸ್ವಲ್ಪ ಮುಂದೆ ಸಾಗಿದ. ಹಿಂದೆ ಏನೋ ಸದ್ದಾದಂತೆ ಆಗಿ, ಕನ್ನಡಿಯಲ್ಲಿ ನೋಡಿದರೆ ಕತ್ತಲೆಯ ತುದಿಯಿಂದ ಕಡುಕಪ್ಪು ಬಣ್ಣದ ಒಂದು ವ್ಯಾನ್, ಪೋಲಿಸ್ ವಾಹನದಂತಿತ್ತು ಅದು. ಅದರ ದೀಪಗಳು ಮಂದ ಹಳದಿ ಬಣ್ಣದಲ್ಲಿ ಮಿನುಗಿದವು, ಪಕ್ಕಕ್ಕೆ ನಿಲ್ಲಿಸುವಂತೆ ಒಳಗೆ ಕುಳಿತಿದ್ದವರ ಕೈ ಸನ್ನೆ ಮಾಡಿತು. ಭಾಸ್ಕರ ಗಾಡಿ ಪಕ್ಕಕ್ಕೆ ನಿಲ್ಲಿಸಿದ. ಭಾಸ್ಕರ ಸದಾ ಕಾನೂನು ಪಾಲಿಸುವ ಸತ್ಪ್ರಜೆ, ಕಾಲಕಾಲಕ್ಕೆ ಸರಿಯಾಗಿ ವಿಮೆ ಕಂತು ಕಟ್ಟುವವನು. ವ್ಯಾನ್ ಮುಂದೆ ನಿಂತಿತು, ಇಬ್ಬರು ವ್ಯಕ್ತಿಗಳು ಕೆಳಗಿಳಿದರು. ಅವರು ಧರಿಸಿದ್ದ ಸಮವಸ್ತ್ರ ಅಚ್ಚುಕಟ್ಟಾಗಿತ್ತು. ಅವರು ನಡೆದುಬರುವ ಶೈಲಿ ಅತಿ ಶಿಸ್ತಿನಿಂದ ಕೂಡಿತ್ತು.
“ನಿಲ್ಲು,” ಅವರ ಧ್ವನಿಯಲ್ಲಿ ಯಾವುದೇ ಮಾನವೀಯ ಆರ್ದ್ರತೆ ಇರಲಿಲ್ಲ. ಭಾಸ್ಕರನ ಮನಸ್ಸು ವೇಗವಾಗಿ ಓಡಲಾರಂಭಿಸಿತು. ಆ ದಿಢೀರ್ ತಿರುವು… ಆ ಮೊಪೆಡ್ಗೆ ಏನಾದರು ತೊಂದರೆ ಆಯ್ತಾ? “ಸಾರ್” ನಡುಗುವ ದನಿಯಲ್ಲೇ ಮಾತಾಡಿದ, “ನನಗೆ ಆ ಮೊಪೆಡ್ ಸವಾರರಿಗೆ ತೊಂದರೆ ಆಗಿದ್ದು ಗೊತ್ತಾಗಲಿಲ್ಲ. ಆ ನಾಯಿಯನ್ನು ಉಳಿಸಲು ಹೋಗಿ ಹೀಗಾಯ್ತು. ಕ್ಷಮಿಸಿ.”
ಎರಡನೇ ಅಧಿಕಾರಿ ಮುನ್ನಡೆದ. ಅವನ ಕಣ್ಣುಗಳು ಕತ್ತಲೆಯ ಪ್ರಪಾತದಂತಿದ್ದವು. “ನೀನು ಭಾಸ್ಕರ್ ತಾನೇ?” ತನ್ನ ಹೆಸರು ಅವರಿಗೆ ತಕ್ಷಣ ತಿಳಿದಿದ್ದನ್ನು ನೋಡಿ ದಿಗ್ಭ್ರಮೆಗೊಂಡ, ಕತ್ತಲೆಯಲ್ಲಿ ಫೇಸ್ ರೆಕಗ್ನಿಷನ್ ತಂತ್ರಜ್ಞಾನ ಅಳವಡಿಕೆ ಆಗಿದೆಯಾ ಹೀಗೆಲ್ಲ ಯೋಚಿಸುತ್ತ, ಅಳುಕುತ್ತಲೇ “ಹೌದು ಸಾರ್” ಎಂದು ಹೇಳಿದ ಭಾಸ್ಕರ ಮುಂದುವರಿಸುತ್ತ “ನನ್ನ ಎಲ್ಲ ದಾಖಲೆಗಳು ಸರಿಯಾಗಿವೆ. ಏನೇ ನಷ್ಟವಾಗಿದ್ದರೂ ಇನ್ಶೂರೆನ್ಸ್ ಮೂಲಕ ಕಟ್ಟಿಕೊಡುತ್ತೇನೆ” ಎಂದು ಕಣ್ಣಲ್ಲಿ ಗಾಬರಿ ಸೂಚಿಸುತ್ತ ನಿಂತ.
ಆ ಇಬ್ಬರು ಅಧಿಕಾರಿಗಳು ಒಬ್ಬರನ್ನೊಬ್ಬರು ನೋಡಿಕೊಂಡರು. ಅವರಿಂದ ಹೊರಬಂದ ನಗು ಯಾಕೋ ತಣ್ಣಗೆ ಕೊರೆಯುವಂತೆ ಇತ್ತು. “ನೀನು ನಮ್ಮ ಜೊತೆ ಬರಬೇಕು,” ಮೊದಲನೆಯವನು ಗಂಭೀರವಾಗಿ ಹೇಳಿದ. ಭಾಸ್ಕರನಿಗೆ ಹೊಟ್ಟೆಯಲ್ಲಿ ತಣ್ಣನೆಯ ಭೀತಿ ಸುರುಳಿ ಸುತ್ತಿಕೊಂಡಿತು. “ನೋಡಿ, ನನ್ನ ವಕೀಲರಿಗೆ ಕರೆ ಮಾಡಲು ಅವಕಾಶ ಕೊಡಿ. ನನ್ನ ಹಕ್ಕುಗಳು ನನಗೆ ಗೊತ್ತಿವೆ. ನನ್ನ ಮೊಪೆಡ್ ಇಲ್ಲೇ ಲಾಕ್ ಮಾಡಿ ಕೀ ತಗೊಳ್ಳಿ, ಒಂದು ಕಾಲ್ ಮಾಡಲು ಬಿಡಿ” ಎಂದೆಲ್ಲ ಬಡಬಡಿಸತೊಡಗಿದ. ಎರಡನೇ ಅಧಿಕಾರಿ ತಲೆಬಾಗಿಸಿ “ಯಾವ ಮೊಪೆಡ್?” ಅಂದ. “ನನ್ನ ಮೊಪೆಡ್!” ಎನ್ನುತ್ತಾ ಭಾಸ್ಕರ ಹಿಂದೆ ತಿರುಗಿ ತೋರಿಸಲು ಹೋದಾಗ ಕೈಗೆ ಸಿಕ್ಕಿದ್ದು ಬರಿ ಗಾಳಿ! ಅಲ್ಲಿ ಯಾವುದೇ ಮೊಪೆಡ್ ಇರಲಿಲ್ಲ! ಜೇಬಿನಲ್ಲಿ ಫೋನಿಗಾಗಿ ತಡಕಾಡಿದರೆ ಏನು ಇಲ್ಲ.
“ಭಾಸ್ಕರ್,” ಮೊದಲ ಅಧಿಕಾರಿ ಬೇಸರದಿಂದ ಹೇಳಿದ “ನಿನ್ನ ಅಂತಿಮ ವಿಚಾರಣೆಗೆ ಕರೆದೊಯ್ಯಲು ಬಂದಿದ್ದೇವೆ. ವಿಚಾರಣಾ ಬ್ಯೂರೋ ತಲುಪಿದ ಮೇಲೆ ನಿನ್ನ ‘ಹಕ್ಕುಗಳ’ ಬಗ್ಗೆ ವಿವರಣೆ ನೀಡುತ್ತೇವೆ.” ಭಾಸ್ಕರ ಬೆದರಿದ ಧ್ವನಿಯಲ್ಲಿ “ನನ್ನ ವಕೀಲರು” ಎಂದು ಕೇಳಿದಾಗ “ಅಲ್ಲಿ ಮನುಷ್ಯರಿಗೆ ಪ್ರವೇಶವಿಲ್ಲ ಮಿಸ್ಟರ್” ಎರಡನೇ ಅಧಿಕಾರಿ ಕ್ರೂರವಾಗಿ ನಕ್ಕ. “ನೀನು ಸತ್ತು ಹೋಗಿದ್ದೀಯ, ಈಗ ನಮ್ಮ ಜೊತೆ ಬರುವೆ. “ಭಾಸ್ಕರನಿಗೆ ಆ ಎರಡು ಪದಗಳು ಮನಸ್ಸಿನಲ್ಲಿ ಪ್ರತಿಧ್ವನಿಸಿತು. “ಅಸಾಧ್ಯ! ಸುಳ್ಳು” ಎಂದೆಲ್ಲ ಪೇಚಾಡಿದ. ಆದರೆ ಅಧಿಕಾರಿ ರಸ್ತೆಯತ್ತ ಬೆರಳು ಮಾಡಿದ. ಮಂಜು ಸರಿದಾಗ, ರಸ್ತೆ ದೀಪದ ಕೆಳಗೆ ನಜ್ಜುಗುಜ್ಜಾಗಿದ್ದ, ಪೆಟ್ರೋಲು ಸೋರುತ್ತಿದ್ದ ದ್ವಿಚಕ್ರ ವಾಹನ ಕಂಡಿತು. ಅದರ ಪಕ್ಕದಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಒಂದು ದೇಹ! ಆಂಬ್ಯುಲೆನ್ಸ್ ಸಿಬ್ಬಂದಿ ಆ ದೇಹವನ್ನು ಎತ್ತಿ ಒಳಗಿಡುತ್ತಿದ್ದರು. ಆ ಮುಖ ಭಾಸ್ಕರನದೇ ಆಗಿತ್ತು. ಆ ರಕ್ತವೂ ಅವನದೇ.
ಬ್ರಹ್ಮಾಂಡದ ಅಡಿಪಾಯವೇ ಕುಸಿದುಬಿದ್ದಾಗ ಮನುಷ್ಯ ಚೀರಲಾರ, ಕೇವಲ ಕುಸಿದುಬೀಳುತ್ತಾನಷ್ಟೆ. ಭಾಸ್ಕರ ಕಪ್ಪು ವ್ಯಾನ್ ಏರಿದ್ದು ಆಯಿತು, ಅದು ಅನಂತವಾಗಿ ಎತ್ತರಕ್ಕೆ ಬೆಳೆದಿದ್ದ ಬೃಹತ್ ಕಾಂಕ್ರೀಟ್ ಕಟ್ಟಡದ ಮುಂದೆ ನಿಂತಿದ್ದಾಯಿತು. ‘ಪ್ರವೇಶದ್ವಾರ’ ಸ್ವರ್ಗದ ಬಾಗಿಲಾಗಿರಲಿಲ್ಲ, ನರಕದ ಬೆಂಕಿಯ ಕುಂಡವೂ ಆಗಿರಲಿಲ್ಲ. ಅದೊಂದು ಅಚ್ಚುಕಟ್ಟಾದ ಕಚೇರಿಯ ಬಾಗಿಲಿನಂತಿತ್ತು.
ಭಾಸ್ಕರನನ್ನು ಮೇಲಿನ ಅಂತಸ್ತಿಗೆ ಕರೆದೊಯ್ದು ವಿಪರೀತ ಜನವಿದ್ದ ಹಜಾರದಲ್ಲಿ ನಿಲ್ಲಿಸಲಾಯಿತು. ಕಣ್ಣಿನ ಕೆಳಗೆ ಕಪ್ಪು ಕಲೆಗಳಿದ್ದ ಗುಮಾಸ್ತ ಸ್ವಾಗತಿಸಿದ. ಅವನ ಹಿಂದೆ, ಹಳೆಯ ಹಳದಿ ಕಂಪ್ಯೂಟರ್ಗಳು ಮಿನುಗುತ್ತಿದ್ದವು. ಮೂಲೆಯಲ್ಲಿದ್ದ ಡಾಟ್-ಮ್ಯಾಟ್ರಿಕ್ಸ್ ಪ್ರಿಂಟರ್ ಝಿಟ್-ಝಿಟ್-ಝಿಟ್… ಎಂದು ಚೀರುತ್ತಾ ನಿರಂತರ ಕಾಗದಗಳನ್ನು ಮುದ್ರಿಸುತ್ತಿತ್ತು. “ಸ್ವಾಗತ,” ಗುಮಾಸ್ತ ಬೇಸರದಿಂದಲೇ ಹೇಳಿ, ಧೂಳು ಹಿಡಿದ ನಿಯಮಾವಳಿ ಪುಸ್ತಕ ಮತ್ತು ಒಂದು ತೆಳುವಾದ ಹಾಳೆಯನ್ನು ನೀಡಿದ. “ನಿನ್ನ ವಿಚಾರಣೆ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ. ಇದು ನಿನ್ನ ಹಕ್ಕುಗಳ ಕೈಪಿಡಿ, ಮತ್ತು ಇದು ನಿನ್ನ ಕರ್ಮಗಳ ಪ್ರಾಥಮಿಕ ಲೆಕ್ಕಪತ್ರ. ಇದನ್ನೆಲ್ಲ ಓದಿದ್ದೇನೆ ಎಂದು ಇಲ್ಲಿ ಸಹಿ ಮಾಡು.” ನಡೆದಿರುವುದನ್ನು ಇನ್ನು ಅರಗಿಸಿಕೊಳ್ಳಲು ಕಷ್ಟ ಪಡುತ್ತಾ ಇರುವ ಭಾಸ್ಕರ “ಅಯ್ಯೋ ಸ್ವಾಮಿ, ಮೊದಲು ಕಾಗದಗಳನ್ನು ಓದಲು ಬಿಡಿ, ಆಮೇಲೆ ಸಹಿ ಮಾಡುತ್ತೇನೆ” ಎಂದ. ಗುಮಾಸ್ತ ನಕ್ಕು “ಇದನ್ನು ಓದುತ್ತಾ ಕುಳಿತರೆ ನಿನ್ನ ಸರದಿ ತಡವಾಗುತ್ತದೆ ಜೀವ, ಸುಮ್ಮನೆ ಸಹಿ ಮಾಡಿ ಮೌಲ್ಯಮಾಪಕ ತಂಡ ಬರುವವರೆಗೆ ಅಲ್ಲಿ ಕುಕ್ಕರುಬಡಿ” ಅಂದ. ಭೂಮಿಯ ಮೇಲಿನ ಫಾರ್ಮಾಲಿಟಿ ರೀತಿನೇ ಇದು ಇರಬೇಕು, ಎಷ್ಟೆಲ್ಲಾ ಪತ್ರಗಳಿಗೆ, ನಿಯಮಾವಳಿ ಓದದೇ ಸಹಿ ಹಾಕೊಲ್ಲವೇ, ಇದು ಹಾಗೆ ಅಂದುಕೊಂಡು ಭಾಸ್ಕರ ತಕ್ಷಣ ಸಹಿ ಮಾಡಿದ ಮತ್ತು ಅಲ್ಲೇ ಮೂಲೆಯಲ್ಲಿ ಮುರುಕು ಕುರ್ಚಿಯಲ್ಲಿ ಕುಕ್ಕರಿಸಿದ, ಬೇರೆ ಏನು ತಾನೇ ಮಾಡೋಹಾಗೆ ಇದ್ದಾನೆ ಭಾಸ್ಕರ ಅಲ್ಲವೇ.
ಹೀಗೆ ಕಾಯುತ್ತಿದ್ದಾಗ, ಫೈಲ್ಗಳನ್ನು ಹಿಡಿದುಕೊಂಡಿದ್ದ ಅಧಿಕಾರಿಗಳ ತಂಡ ಬಂದು ಭಾಸ್ಕರನನ್ನು ಅಲ್ಲಿಯೇ ಇದ್ದ ಒಂದು ಕೋಣೆಗೆ ಎಳೆದೊಯ್ದು ಪ್ರಶ್ನೆಗಳ ಸುರಿಮಳೆ ಗೈದರು. ಹೀಗಿತ್ತು ನೋಡಿ ಪ್ರಶ್ನೆಗಳು:
೧. ನಿನ್ನ ಏಳನೇ ಹುಟ್ಟುಹಬ್ಬದ ಬೆಳಿಗ್ಗೆ ಎಷ್ಟು ಡಿಗ್ರಿ ಕೋನದಲ್ಲಿ ಹಲ್ಲುಜ್ಜಿದೆ?
೨. ೨೦೧೨ ರ ಬೇಸಿಗೆಯಲ್ಲಿ ಊಟದ ತಟ್ಟೆಯಲ್ಲಿ ಎಷ್ಟು ಅನ್ನದ ಅಗುಳು ಬಿಟ್ಟಿದ್ದೆ?
ಹೀಗೆ ಏನೇನೋ, ಎಲ್ಲ ಅಸಂಬದ್ಧ ಎನ್ನಿಸುವ ಪ್ರಶ್ನೆಗಳು! ಇವನು ಏನು ಹೇಳಿದನೋ, ಹೇಗೆ ಹೇಳಿದನೋ ಅದು ಕೇಳಿದವರಿಗೆ ಗೊತ್ತು. ಒಬ್ಬ ಅಧಿಕಾರಿ “ಸಹಿ ಮಾಡುವ ಮುನ್ನ ಎಲ್ಲವನ್ನೂ ಓದಿದ್ದೀಯಾ?” ಎಂದು ಕೇಳಿದ. ಭಾಸ್ಕರ ಅದಕ್ಕೆ “ಗುಮಾಸ್ತರು ಹೇಳಿದ್ದಕ್ಕೆ ಸಹಿ ಮಾಡಿದೆ” ಎಂದು ಹಲ್ಲುಕಿರಿದ. ಅವರು ‘ನಿಯಮ ಉಲ್ಲಂಘನೆ’ ಎಂದು ಗುರುತು ಮಾಡಿದರು. ಜೊತೆಗೆ ಓದದೇ ಹೀಗೆಲ್ಲ ಸಹಿ ಮಾಡೋದು ತಪ್ಪು ಎನ್ನುವ ಮಾತು. ಕಡೆಗೆ ಒಂದು ಟೋಕನ್ ಕೊಟ್ಟು ಇನ್ನೊಂದು ದೊಡ್ಡ ಹಜಾರಕ್ಕೆ ಕಳಿಸಿದರು.
ಹಜಾರದಲ್ಲಿ ವಿಪರೀತ ಜೀವಗಳು ಕಾಯುತ್ತ ನಿಂತಿದ್ದಂತೆ ಕಂಡಿತು. ಕೆಲವು ಕಡೆ ಮೇಜುಗಳಲ್ಲಿ ಕೆಲವು ಕಡಕ್ಕಾದ ದಿರಿಸು ಧರಿಸಿ ಟೋಕನ್ ಆದರಿಸಿ ಜೀವಗಳನ್ನು ಕರೆಯುತ್ತ ಇದ್ದರು. ಪಾಪ ಒಂದು ಕಡೆ ಪ್ರಾಣ ಹೋಗಿದೆ ಅನ್ನುವ ಆಘಾತ, ಅದರಮೇಲೆ ಈ ಹಳೆಯ ಕಚೇರಿಯ ವಾತಾವರಣ, ಭಾಸ್ಕರನಿಗೆ ಏನು ತೋಚುತ್ತಿಲ್ಲ. ಅವನ ಕಲ್ಪನೆಯ ರೀತಿ ಸ್ವರ್ಗ/ನರಕ ವಿಚಾರಣೆಯಂತೂ ಇದು ಅಲ್ಲ. ಯಾವುದೊ ಪತ್ರಿಕೆ ಸಿಕ್ಕಿತು, ಗತಜೀವ ಪತ್ರಿಕೆ ಅಂತೇ. ಬೇಸರ ಹೋಗಲಾಡಿಸಲು ಅದನ್ನು ಓದತೊಡಗಿದ, ಇವನು ಓದುತ್ತ ಹೋದಂತೆಲ್ಲ ಇವನ ಭಾಷೆಯಲ್ಲೇ ಅಕ್ಷರ ಮೂಡುತ್ತ ಇತ್ತು. ಯಾರೋ ಭೂಮಿಯ ಮೇಲಿದ್ದವರೇ ಈಗ ಇಲ್ಲಿ ದೊಡ್ಡ ಅಧಿಕಾರಿ ಆಗಿರುವ ಸುದ್ದಿ ಓದಿದ ಭಾಸ್ಕರ. ಅದರ ಕೆಳಗೆ ಅವರ ಸಾಧನೆ ನೋಡಿ ನಗು ಬಂತು, ಭೂಮಿಯ ಮೇಲೆ ಜನರಿಗೆ ಅತಿಯಾದ ನಂಬುಗೆ ಎಷ್ಟು ಕೆಟ್ಟದ್ದು ಎಂದು ಜನರಿಗೆ ಪಂಗನಾಮ ಹಾಕುವುದರ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಬಣ್ಣಿಸಲಾಗಿತ್ತು. ಹಾಗು ಮೋಸ ಹೋದವರದ್ದೇ ತಪ್ಪು ಎಂದು ಹೇಳಲಾಗಿತ್ತು. ಭಾಸ್ಕರನಿಗೆ ಪಾಪ ಇದೆಲ್ಲ ಹೊಸ ತರ್ಕಗಳು ಅರ್ಥವಾಗಲಿಲ್ಲ. ಎಷ್ಟೇ ಆದರೂ ಆತ ಕೈಪಿಡಿ ಓದದೇ ಸಹಿ ಮಾಡಿದವನಲ್ಲವೇ, ಅತಿಯಾದ ಆತ್ಮವಿಶ್ವಾಸ ಈ ಆತ್ಮಕ್ಕೆ ನೋಡಿ.
ಕೊನೆಗೂ ಭಾಸ್ಕರನ ಹೆಸರು ಕೂಗಿದರು. ಅಲ್ಲಿದ್ದ ಜ್ಯೂರಿಗಳ ಮೇಜಿನ ಮುಂದೆ ಹೋಗಿ ತಲೆಕೆರಿಯುತ್ತ ಕೂತ. “ಭಾಸ್ಕರ್,” ಒಬ್ಬ ಜ್ಯೂರಿ ಗಂಭೀರವಾಗಿ ಹೇಳಿದ. “ನವ ಗತಜೀವ ಕಾನೂನು ಪ್ರಕಾರ, ಬ್ರಹ್ಮಾಂಡ ತನ್ನ ಲೆಕ್ಕಾಚಾರದ ಶೈಲಿಯನ್ನು ಬದಲಾಯಿಸಿದೆ. ಅತ್ಯಂತ ಒಳ್ಳೆಯ ಕೆಲಸ ಮಾಡಿದವರು ಭೂಮಿಯ ಮೇಲೆಯೇ ಸಂಪತ್ತು, ಯಶಸ್ಸಿನ ರೂಪದಲ್ಲಿ ಫಲ ಅನುಭವಿಸುತ್ತಾರೆ. ಮಹಾಪಾಪ ಮಾಡಿದವರೂ ಅಲ್ಲೇ ಶಿಕ್ಷೆ ಅನುಭವಿಸುತ್ತಾರೆ. ಉಳಿದ ಅಸ್ಪಷ್ಟ ಲೆಕ್ಕಗಳನ್ನು ಮಾತ್ರ ಇಲ್ಲಿ ಮಾಪನ ಮಾಡಿ ತೀರ್ಮಾನ ಮಾಡಲಾಗುತ್ತದೆ.”
“ನಾನು ಒಳ್ಳೆಯವನಾಗಿದ್ದೆ ಸ್ವಾಮಿ!” ಭಾಸ್ಕರ ಪಲುಕಿದ. “ನೋಡೋಣ,” ಜ್ಯೂರಿ ಕನ್ನಡಕ ಸರಿಪಡಿಸುತ್ತಾ ಒಂದಷ್ಟು ಕಡತಗಳನ್ನು ಕೆದಕಿ ಆಮೇಲೆ ಕೆಲವು ಪತ್ರಗಳನ್ನು ನೋಡಿ “ಏನಯ್ಯ ನಿನ್ನ ಲೆಕ್ಕದಲ್ಲಿ ತಪ್ಪುಗಳೇ ಹೆಚ್ಚು. ನಿನ್ನ ಒಳ್ಳೆಯ ಕೆಲಸಗಳೆಲ್ಲವೂ ರದ್ದಾಗಿವೆ. ಈ ಶಿಕ್ಷೆಯ ಒಪ್ಪಂದಕ್ಕೆ ಸಹಿ ಮಾಡು” ಎಂದು ಒಂದಷ್ಟು ಪತ್ರಗಳನ್ನು ಎಸೆದರು. “ಇಲ್ಲ! “ನನಗೆ ವಿವರವಾದ ಲೆಕ್ಕ ಬೇಕು!” ಭಾಸ್ಕರ ಧೈರ್ಯ ಮಾಡಿ ದೃಢವಾಗಿ ಹೇಳಿದ. ಜ್ಯೂರಿಗಳು ಒಣ ಎಲೆಗಳಂತೆ ನಕ್ಕರು. “ಹೌದೇ, ಲೆಕ್ಕ ಬೇಕಾ, ಕೊಡೋಣ ಬಿಡು” ಎಂದು ಅವರು ಡಾಟ್-ಮ್ಯಾಟ್ರಿಕ್ಸ್ ಪ್ರಿಂಟರಿನಿಂದ ಪ್ರಿಂಟ್ಔಟ್ ತೆರೆದರು:
ಐಟಂ ೪೦೫: ಅನಾಥಾಶ್ರಮಕ್ಕೆ ೫೦೦ ರೂಪಾಯಿ ನೀಡಿದ್ದು. ಸಿಕ್ಕ ಅಂಕ: ಶೂನ್ಯ. ಕಾರಣ: ದಾನ ಕೊಡಬೇಕಾದರೆ ಪಕ್ಕದಲ್ಲಿದ್ದ ಹುಡುಗಿಯನ್ನು ಬಿಟ್ಟಬಾಯಿ ಬಿಟ್ಟಂತೆ ನೋಡುತ್ತಾ ಕೊಟ್ಟಿದ್ದು. ಸ್ವಾರ್ಥದಿಂದ ಮಾಡಿದ ಪರೋಪಕಾರ ರದ್ದಾಗಿದೆ.
ಐಟಂ ೮೯: ಐದನೇ ವಯಸ್ಸಿನಲ್ಲಿ ಪ್ಲಾಸ್ಟಿಕ್ ಆಟಿಕೆ ಕದ್ದಿದ್ದು. ಅಂಕ: -೧೦. ಪರಿಹಾರ: ಬೀದಿ ನಾಯಿಗೆ ಬಿಸ್ಕತ್ತು ಹಾಕಿದ್ದರಿಂದ ಸರಿದೂಗಿದೆ. ಹೀಗಾಗಿ ಒಟ್ಟಾರೆ ಶೂನ್ಯ.
ಐಟಂ ೧೦೨೪: ಮಕ್ಕಳಿಗೆ ಗಣಿತ ಕಲಿಸಿದ್ದು. ಅಂಕ: -೫೦. ಕಾರಣ: ಋಣಾತ್ಮಕ ಪರೋಪಕಾರ! ಆ ಮಕ್ಕಳಿಗೆ ಆಟವಾಡಬೇಕಿತ್ತು, ಗಣಿತ ಕಲಿಸಿದರಿಂದ ಅವರ ದಿನ ಹಾಳಾಯಿತು.
ಐಟಂ ೧೧೦೯: ಯಾವುದೊ ವ್ಯಕ್ತಿಯನ್ನು ನಂಬಿ ಹಣ ಹೂಡಿಕೆ ಮಾಡಿ ಕಳೆದುಕೊಂಡಿದ್ದು. ಅಂಕ: -೯೦. ಕಾರಣ: ಹೀಗೆ ಯಾರಲ್ಲಿ ಅಂದರೆ ಅವರಲ್ಲಿ ನಂಬಿಕೆ ಇಡುವುದಕ್ಕೆ ನಂಬಿಕೆ ಏನು ಸಮಾರಂಭದ ಕುರ್ಚಿಯೇ. ಹಾಗೆಯೇ ಮೋಸ ಮಾಡಿದ ವ್ಯಕ್ತಿಯನ್ನು ಉತ್ತಮ ಪಾಠ ಕಲಿಸಿದ ಕಾರಣಕ್ಕೆ ಪುಣ್ಯ ಜೀವಿಯೆಂದು ಆತನ ಕಾಲಾನಂತರ ಇಲ್ಲಿಯೇ ಸಲಹೆಗಾರನಾಗಿ ನಿಯಮಿಸಲಾಗುವುದು.
ಹೀಗೆ ಭಾಸ್ಕರ ಮಾಡಿದ ಒಳ್ಳೆ ಕೆಲಸ ಎಲ್ಲವು ತಪ್ಪಾಗಿ ತೋರಿಸಲಾಗಿತ್ತು ಮತ್ತು ಸಣ್ಣ ಪುಟ್ಟ ತಪ್ಪುಗಳು ಅಪರಾಧವೆಂಬಂತೆ ತೋರಿಸಲಾಗಿತ್ತು.
ಭಾಸ್ಕರ ಅಯೋಮಯದಿಂದ ತಡಬಡಿಸಿದ. “ನನಗೆ ಮೋಸ ಮಾಡಿದ ವ್ಯಕ್ತಿ ಪಾಪಿಯಲ್ಲವೇ, ನಾನು ಪರಸ್ಪರ ನಂಬುವುದು ಉದಾತ್ತ ಗುಣ ಎಂದುಕೊಂಡಿದ್ದೆ” ಎಂದು ಕೇಳಿದಾಗ “ಇದು ನಮ್ಮ ಅಂಕ ಕೊಡುವ ಶೈಲಿ” ಜ್ಯೂರಿ ನಕ್ಕರು. “ನಿಮ್ಮಂಥವರಿಗೆ ಪಾಠ ಕಲಿಸುವ ಕಾರ್ಯದಲ್ಲಿ ಆತ ನಮ್ಮ ಕೈಗೂಡಿಸಿದ್ದ” ಎಂದು ಉತ್ತರಿಸಿ “ಈಗ, ನಾವು ಲೆಕ್ಕವನ್ನು ವಿವರಿಸಿದ್ದೇವೆ ಎಂದು ಸಹಿ ಮಾಡು” ಎಂದು ಹೇಳಿದ. ಈ ಬಾರಿ ಭಾಸ್ಕರ ಸಹಿ ಮಾಡಲಿಲ್ಲ. “ನನಗೆ ಪೂರ್ತಿ ವಿವರಿಸಿಲ್ಲ, ನಾನು ನಿಯಮಾವಳಿ ಮತ್ತು ಹಕ್ಕುಗಳ ಪುಸ್ತಕ ಓದಬೇಕು,” ಎಂದು ಖಡಕ್ಕಾಗಿ ಹೇಳಿದ. ಜ್ಯೂರಿಗಳು “ಹಾಗಾದರೆ ಅನಂತವಾಗಿ ಕಾಯಬೇಕಾದೀತು” ಎಂದು ಬೆದರಿಸಿದರೂ ಭಾಸ್ಕರ ಪಟ್ಟು ಸಡಿಲಿಸಲಿಲ್ಲ. ಒಬ್ಬ ಜ್ಯೂರಿ “ಹಾಗಾದರೆ ಅಲ್ಲಿ ಹೋಗಿ ಕುಳಿತು ಎಲ್ಲ ಕೈಪಿಡಿ ಓದಿಕೊಂಡು ಬಾ” ಎಂದು ಒಂದು ಮೂಲೆಯನ್ನು ತೋರಿಸಿದ.
ಆ ಮೂಲೆಯಲ್ಲಿ ಭಾಸ್ಕರ ಧೂಳು ಹಿಡಿದ ನಿಯಮಾವಳಿ ಪುಸ್ತಕವನ್ನು ತೆರೆದು ಪುಟಗಳನ್ನು ತಿರುವಿದ. ಅಷ್ಟು ದೊಡ್ಡ ಪುಸ್ತಕ, ಎಲ್ಲಿಂದ ಓದಬೇಕು ಎಷ್ಟು ಓದಬೇಕು ಗೊತ್ತಾಗಲಿಲ್ಲ. ಆದರೂ ಹಠಬಿಡದೆ ವಿಷಯಸೂಚಿಯನ್ನು ನೋಡಿದ. ಆಗ ಕಂಡಿತು ನೋಡಿ ಒಂದು ಕಡೆ: ನಿಯಮ ವಿಭಾಗ ೭, ಕಲಮು ೧೨: ‘ಜೀವಿಯ ಮರುಪರಿಶೀಲನೆಯ ಹಕ್ಕು. ಆ ಪುಟವನ್ನು ಪೂರ್ತಿ ಓದಿದ ಭಾಸ್ಕರ. ಅದರಲ್ಲಿ ಜೀವಿಯು ಮುದ್ದಾಂ ತನ್ನ ಜೀವನದ ಮರುಪರಿಶೀಲನೆ ಮಾಡಲು ವಿಶೇಷ ಸಂದರ್ಭದಲ್ಲಿ ಅವಕಾಶ ಇದೆ ಎಂದಿತ್ತು.
ಭಾಸ್ಕರ ಈ ಸಲ ಧೈರ್ಯದಿಂದ ಆ ಪುಟವನ್ನು ಗುರುತಿಸಿಕೊಂಡು ಹೋಗಿ ಪುಸ್ತಕವನ್ನು ಜ್ಯೂರಿಗಳ ಮೇಜಿನ ಮೇಲೆ ಇಟ್ಟ. ಅವರು ಇವನು ಇಷ್ಟು ಬೇಗ ಅದೇನು ಕಂಡುಬಂದ ಎಂದು ಅಚ್ಚರಿಯಿಂದ ನೋಡಿದರು. “ನನ್ನನ್ನು ವಾಪಸ್ ಭೂಮಿಗೆ ಕಳುಹಿಸಿ!” ಭಾಸ್ಕರ ದೃಢವಾಗಿ ಹೇಳಿದ. “ನಿಯಮ ವಿಭಾಗ ೭, ಕಲಮು ೧೨ ಪ್ರಕಾರ ಜೀವಿಗೆ ತನ್ನ ಲೆಕ್ಕಾಚಾರದಲ್ಲಿ ಗೊಂದಲವಿದೆ ಮತ್ತು ಇಲ್ಲಿಗೆ ಕರೆತಂದಿರುವುದು ಅಕಾಲಿಕ ಎಂದು ಅನ್ನಿಸಿದರೆ ಹಾಗು ಜೀವಿಯು ಅದನ್ನು ಸಾಬೀತುಪಡಿಸಿದರೆ, ಜೀವಿಯು ಭೂಮಿಗೆ ಮರಳಿ ತನ್ನ ದಾಖಲೆಗಳನ್ನು ಮರುಪರಿಶೀಲಿಸಲು ಅರ್ಜಿ ಸಲ್ಲಿಸಬಹುದು!” ಎಂದಿದೆ ಎಂದು ತೋರಿಸಿದ.
ಜ್ಯೂರಿಗಳ ಮುಖದಲ್ಲಿ ಆಘಾತ ಎದ್ದು ಕಂಡಿತು! ವಿಷಯಸೂಚಿ ನೋಡಬೇಕು, ಸರಿಯಾದ ಕಲಮು ಹುಡುಕಬೇಕು ಎಂದು ಹೇಗೆ ತೋರಿತು ಈ ಜೀವಿಗೆ ಎಂದು ಆಶ್ಚರ್ಯ ಆಗಿರಬೇಕು. “ಅದೆಲ್ಲ ಸರಿ, ಆದರೆ ನೀನು ಇಲ್ಲಿಗೆ ಬಂದಿರುವುದು ಅಕಾಲಿಕ ಅಂತ ಹೇಗೆ ಹೇಳುತ್ತೀಯಾ” ಎಂದು ಒಬ್ಬ ಜ್ಯೂರಿ ಜರ್ಬಾಗಿ ಕೇಳಿದರು. ಭಾಸ್ಕರ ಈಗ ತಾಳ್ಮೆಯಿಂದ “ಮಹನೀಯರೇ ತಾವು ದಯಮಾಡಿ ಪರಾಂಬರಿಸಬೇಕು, ನಾನು ನಿಜಕ್ಕೂ ಪೂರ್ತಿ ಮೃತನಾಗಿದ್ದೇನೆ ಎಂದು ನನಗೆ ಮುದ್ದಾಂ ತೋರಿಸಿ ಮನದಟ್ಟು ಮಾಡಿಸಿಲ್ಲ, ಈ ಲೋಪದಿಂದ ನಾನು ಬದುಕಿದ್ದರು ಬದುಕಿರಬಹುದು ಎನ್ನುವ ಅನುಮಾನ ಇರುತ್ತೆ” ಎಂದು ಉತ್ತರಿಸಿದ. ಅಧಿಕಾರಿಗಳಿಗೆ ಮಾತ್ರ ಗೊತ್ತಿದ್ದ ಆ ‘ಲೂಪ್ಹೋಲ್’ ಇವನಿಗೆ ಹೇಗೆ ಸಿಕ್ಕಿತು? ಎನ್ನುವ ಪ್ರಶ್ನೆ ಅವರಲ್ಲಿ ಮೂಡಿತ್ತು ಅನ್ನಿಸುತ್ತೆ. ಒಬ್ಬ ಜ್ಯೂರಿ ಏನೋ ಯೋಚಿಸುವಂತೆ ಮಾಡಿ “ಸರಿ… ನಿನ್ನಿಷ್ಟದಂತೆ ಆಗಲಿ” ಅಂದರು.
ಆ ಕ್ಷಣವೇ ಕಚೇರಿ ಕಾಂಕ್ರೀಟ್ ಗೋಡೆಗಳು ಕಂಪಿಸತೊಡಗಿದವು. ಕಂಪ್ಯೂಟರ್ ದೀಪಗಳು ಕರಗಿ ಬಿಳಿ ಬೆಳಕಾಯಿತು. ನಾಲಿಗೆಯಲ್ಲಿ ಕಟುವಾದ ಲೋಹದ ರುಚಿ, ಆಸ್ಪತ್ರೆಯ ಬ್ಲೀಚಿಂಗ್ ಪುಡಿಯ ವಾಸನೆ!
ಬೀಪ್… ಬೀಪ್… ಬೀಪ್…
ಭಾಸ್ಕರ ಕಣ್ಣು ತೆರೆದ. ಡಾಕ್ಟರ್ಗಳು ಸುತ್ತವರಿದಿದ್ದರು. “ಅವನಿಗೆ ಪ್ರಜ್ಞೆ ಬರುತ್ತಿದೆ,” ಶಬ್ದ ಕೇಳಿಸಿತು. ಭಾಸ್ಕರ ಮತ್ತೆ ರಕ್ತ-ಮಾಂಸದ ಮನುಷ್ಯನಾಗಿದ್ದ! ಸ್ವಲ್ಪ ಸಮಯದ ನಂತರ ತಂದೆ-ತಾಯಿ ಒಳಗೆ ಬಂದು ಕಣ್ಣೀರಿಟ್ಟರು. “ದೇವರ ದಯೆ ಕಣಪ್ಪ, ಡಾಕ್ಟರ್ ಕೂಡ ಧೈರ್ಯ ಹೇಳುತ್ತಾನೆ ಇದ್ರೂ, ಸದ್ಯ ಕಣ್ಣು ಬಿಟ್ಯಲ್ಲ ಅಷ್ಟು ಸಾಕು” ಎಂದು ತಾಯಿ ಗದ್ಗದಿತರಾದರು. ಆಮೇಲೆ ಸ್ವಲ್ಪ ಹೊತ್ತಿನಲ್ಲಿ ಸ್ನೇಹಿತ ಒಳಗೆ ಬಂದು, “ಭಾಸ್ಕರ, ಆಕ್ಸಿಡೆಂಟ್ ಚಿಕ್ಕದೇ ಆದರೆ ನೀನು ಸರಿಯಾಗಿ ಆಯಕಟ್ಟಿನ ಜಾಗದಲ್ಲಿ ಏಟು ಮಾಡಿಕೊಂಡಿದ್ದೆ ಅನ್ನಿಸುತ್ತೆ, ಪೂರ್ತಿ ೧೨ ಗಂಟೆಗಳ ಕಾಲ ಕೋಮಾದಲ್ಲಿದ್ದೆ” ಅಂದ.
ಹನ್ನೆರಡು ಗಂಟೆಗಳು! ಭಾಸ್ಕರನಿಗೆ ಇದು ಯಾಕೋ ಗೊತ್ತಿಲ್ಲ ತಾನು ಆ ಕಚೇರಿಯಲ್ಲಿ ಕಳೆದಷ್ಟೇ ಸಮಯ, ಅರ್ಜಿ ಪ್ರಕ್ರಿಯೆಗೆ ತೆಗೆದುಕೊಂಡಷ್ಟೇ ಕಾಲ ಎನ್ನಿಸಿತು. ಆದರೆ ಅದು ಹೇಗೆ ಅವನಿಗೆ ಹೊಳೆಯಿತು ಅನ್ನೋದು ಹೋಗಿಬಂದ ಅವನಿಗೆ ಮತ್ತೆ ಆ ಕಚೇರಿಯವರಿಗೆ ಗೊತ್ತು, ನಮ್ಮಂತ ಇನ್ನು ಇಲ್ಲೇ ಇರುವ ಹುಲುಮಾನವರಿಗೆ ಹೇಗೆ ಗೊತ್ತಾಗಬೇಕು. ಭಾಸ್ಕರ ಕಣ್ಣು ಮುಚ್ಚಿ ಆಸ್ಪತ್ರೆಯ ಹಾರ್ಟ್ ಮಾನಿಟರ್ನ ಬೀಪ್… ಬೀಪ್… ಸದ್ದನ್ನು ಆಲಿಸುತ್ತಿದ್ದಾನೆ, ಅದು ಅವನಿಗೇಕೋ ಡಾಟ್-ಮ್ಯಾಟ್ರಿಕ್ಸ್ ಪ್ರಿಂಟರ್ನ ಸದ್ದಿನಂತೆಯೇ ಕೇಳಿಸುತ್ತಿದೆ. ಡಾಕ್ಟರ್ಗಳು ಇದನ್ನು ಕೋಮಾದಲ್ಲಿದ್ದಾಗ ನರಮಂಡಲ ಸೃಷ್ಟಿಸಿದ ಭ್ರಮೆ ಎನ್ನಬಹುದು, ಆದರೆ ಆ ಹಳೆಯ ಕಾಗದದ ಧೂಳಿನ ವಾಸನೆ ಈಗಲೂ ಅವನ ಶ್ವಾಸಕೋಶದಲ್ಲಿದೆ ಎನ್ನುವ ಭಾವನೆ ಇದ್ದಿದ್ದಂತೂ ಸುಳ್ಳಲ್ಲ.
ಇಲ್ಲಿ ‘ಒಳ್ಳೆಯ ಜೀವನ’ ನಡೆಸುವುದು ಎಂದರೆ ಸದಾ ಒಳ್ಳೆಯವನಾಗಿರುವುದಲ್ಲ, ನಿಯಮಗಳನ್ನು ಸರಿಯಾಗಿ ಓದಲು ತಿಳಿದಿರುವುದು ಎನ್ನುವ ಒಂದು ಪಾಠ ಭಾಸ್ಕರನಿಗೆ ಕಲಿತಂತಾಯಿತು.
ಇದು ಶುಭಾಂತ್ಯವೇ? ಇದ್ದರೂ ಇರಬಹುದು.
*******************
ಕತೆಗಾರರ ಪರಿಚಯಾತ್ಮಕ ನುಡಿ
ಎಸ್. ರಘುನಂದನ್ ಅವರು ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಐಟಿಇಎಸ್ (ITES) ಹಾಗೂ ಮಾರಾಟ ವಿಭಾಗಗಳಲ್ಲಿ ಸುಮಾರು 21 ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿನ ಸುದೀರ್ಘ ಕಾರ್ಯಾನುಭವದ ಮೂಲಕ ಮಾನವ ಸಂಬಂಧಗಳು, ವ್ಯಕ್ತಿತ್ವ ವಿಕಸನ ಮತ್ತು ಮನುಷ್ಯನ ಮನೋಭಾವಗಳ ಕುರಿತು ಆಳವಾದ ತಿಳಿವಳಿಕೆಯನ್ನು ಬೆಳೆಸಿಕೊಂಡಿದ್ದಾರೆ. ಪ್ರಸ್ತುತ ಜೀವನೋಪಾಯಕ್ಕಾಗಿ ಮನೋವಿಜ್ಞಾನ ವಿಷಯ ಪರಿಣಿತರಾಗಿ ಸ್ವತಂತ್ರವಾಗಿ (ಫ್ರೀಲಾನ್ಸ್) ಕಾರ್ಯನಿರ್ವಹಿಸುತ್ತಿದ್ದಾರೆ.
ವೃತ್ತಿಯಾಚೆಗೂ ಮನುಷ್ಯರ ಮನಸ್ಸು ಮತ್ತು ಭಾವಜಗತ್ತಿನೊಂದಿಗೆ ಒಡನಾಟ ಹೊಂದಲು ಇಷ್ಟಪಡುವ ರಘುನಂದನ್ ಅವರ ಆಸಕ್ತಿಯ ಕ್ಷೇತ್ರಗಳು ಆಪ್ತ ಸಮಾಲೋಚನೆ, ಮಕ್ಕಳಿಗೆ ಕಥೆ ಹೇಳುವುದು ಹಾಗೂ ಬಿಡುವಿನ ವೇಳೆಯಲ್ಲಿ ಕಥೆಗಳನ್ನು ಬರೆಯುವುದು. ವಿಶೇಷವಾಗಿ ಮಕ್ಕಳ ಕಲ್ಪನಾಶಕ್ತಿ ಮತ್ತು ಸೃಜನಶೀಲತೆಯನ್ನು ಕಥೆಗಳ ಮೂಲಕ ಅರಳಿಸುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಮನುಷ್ಯನ ಮನಸ್ಸನ್ನು ಅರಿಯುವ ಮನೋವಿಜ್ಞಾನದ ಅಧ್ಯಯನ ಮತ್ತು ಬದುಕಿನ ಅನುಭವಗಳನ್ನು ಕಟ್ಟಿಕೊಡುವ ಸಾಹಿತ್ಯದ ಅಭಿವ್ಯಕ್ತಿ ಇವರ ವ್ಯಕ್ತಿತ್ವದ ಎರಡು ಪ್ರಮುಖ ಆಯಾಮಗಳಾಗಿವೆ. ವೃತ್ತಿಪರ ಅನುಭವ, ಮಾನವೀಯ ಕಾಳಜಿ ಮತ್ತು ಸೃಜನಶೀಲ ಅಭಿರುಚಿಯನ್ನು ಜೊತೆಗೂಡಿಸಿಕೊಂಡಿರುವ ರಘುನಂದನ್ ಅವರು ತಮ್ಮದೇ ಆದ ಆಸಕ್ತಿ ಮತ್ತು ಅಭಿವ್ಯಕ್ತಿಯ ಮೂಲಕ ಬದುಕಿನೊಂದಿಗೆ ಸಂವಾದ ನಡೆಸುತ್ತಿರುವವರು.

ಅಂತರಂಗ
ಕತೆ | ಒಂದು ಸದ್ದಿಲ್ಲದ ಕ್ರಾಂತಿ
ಡಾ||.ಮಿರ್ಜಾ ಬಶೀರ್, ತುಮಕೂರು
ಊರಲ್ಲಿ ಕಾಲೇಜು ಪ್ರಾರಂಭವಾಗಿ ಪಿಯುಸಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳತೊಡಗಿದ್ದು ಕೇಳಿ ಅತ್ಯಂತ ಹೆಚ್ಚು ಖುಷಿಯಾಗಿದ್ದು, ಎಸ್ಎಸ್ಎಲ್ಸಿ ಪಾಸಾಗಿ, ಶಿಕ್ಷಣ ಮುಂದುವರಿಸಲಾಗದೆ ಮೂಲೆ ಸೇರಿದ್ದ ಮುಸ್ಲಿಂ ಹುಡುಗಿಯರಿಗೆ. ಹಿಂದು ಹುಡುಗಿಯರು ಕಾಲೇಜು ಇರುವ ನಗರಗಳಲ್ಲಿ ಹಾಸ್ಟೆಲ್ಗಳ ಸೇರಿ ಅಥವಾ ನೆಂಟರಿಷ್ಠರುಗಳ ಮನೆ ಸೇರಿ ಶಿಕ್ಷಣ ಮುಂದುವರೆಸುತ್ತಿದ್ದರು. ಮುಸ್ಲಿಂ ಹುಡುಗರಿಗೆ ಹಾಸ್ಟೆಲ್ಗಳಿರುತ್ತಿದ್ದವು ಅಥವಾ ಬಾಡಿಗೆ ರೂಮುಗಳಲ್ಲಿದ್ದು ಓದುತ್ತಿದ್ದರು. ಆದರೆ ಹುಡುಗಿಯರಿಗೆ ಹಾಸ್ಟೆಲ್ಗಳಿರಲಿಲ್ಲ. ಯಾರಾದರೂ ನೆಂಟರಿಷ್ಠರ ಮನೆಯಲ್ಲಿ ಹರೆಯದ ಮಗಳನ್ನು ಬಿಡುವುದು ಸಂಪ್ರದಾಯಸ್ಥ ಮುಸ್ಲಿಮರಿಗೆ ಒಪ್ಪಿಗೆಯಾಗುತ್ತಿರಲಿಲ್ಲ. ಬಾಡಿಗೆ ರೂಮು ಮಾಡಿ ಓದುವುದು ಊಹೆಗೂ ನಿಲುಕದ ಮಾತಾಗಿತ್ತು. ಹೀಗಾಗಿ ಎಸ್ಎಸ್ಎಲ್ಸಿಗೆ ಮುಸ್ಲಿಂ ಹುಡುಗಿಯರ ಶಿಕ್ಷಣ ಖತಂ ಆಗುತ್ತಿತ್ತು. ಅವರು ರ್ಯಾಂಕ್ ಬಂದರೂ ಅಷ್ಟೇ ಫೇಲಾದರೂ ಅಷ್ಟೇ. ಊರಿನಲ್ಲಿದ್ದ ಹತ್ತಾರು ಮನೆಗಳ ಶ್ರೀಮಂತ ಮುಸ್ಲಿಮರು ಏನೋ ಒಂದು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಆದರೆ ಅತಿ ಹೆಚ್ಚು ಪ್ರಮಾಣದಲ್ಲಿದ್ದ ಬಡ ಮುಸ್ಲಿಮರದ್ದೇ ಇಕ್ಕಟ್ಟಿನ ಪರಿಸ್ಥಿತಿ. ಓದಲೇಬೇಕೆಂಬ ಅದಮ್ಯ ಆಸೆ ಇಟ್ಟುಕೊಂಡಿದ್ದ ಕೆಲವು ಜಾಣೆಯರು ಮುಸುರೆ ತಿಕ್ಕುತ್ತಾ, ಬೀಡಿ ಕಟ್ಟುತ್ತಾ, ಊದಿನ ಕಡ್ಡಿ ಹೊಸೆಯುತ್ತಾ, ಕಟ್ಟಿದ ಗಂಡನ ಜೊತೆ ಏಗುತ್ತಾ, ಬುರ್ಕಾ ಹೊದ್ದುಕೊಂಡು ಭರವಸೆ ಎಂಬುದನ್ನೇ ಮರೆತು ಕಾಲನೊಡನೆ ಸೆಣಸುತ್ತಿದ್ದರು. ಅವರ ಯಾವತ್ತೂ ಮುಂದಿನ ಬದುಕು ಬುರ್ಖಾದ ಕತ್ತಲಿನಲ್ಲಿ ಕರಗಿ ಹೋಗುತ್ತಿತ್ತು.
ಮುಷ್ತರಿ ಎಂಬ ಬಾಲೆಯು ಎಸ್ಎಸ್ಎಲ್ಸಿಯಲ್ಲಿ ಭರ್ಜರಿ ಅಂಮೇಷ್ಟ್ರದು ಪಾಸಾಗಿ, ಕನ್ನಡದಲ್ಲಿ 125 ಕ್ಕೆ 125 ಅಂಕಗಳ ಪಡೆದು, ಕನ್ನಡದ ಮೇರು ಲೇಖಕರೊಬ್ಬರಿಂದ ಬಹುಮಾನ ಸ್ವೀಕರಿಸಿದ್ದಳು. ಅವಳು ಪಾಸಾದ ವರ್ಷವೇ ಕಾಲೇಜು ಪ್ರಾರಂಭವಾಯಿತು. ಮುಷ್ತರಿಯ ಜೊತೆಗೆ ಪಾಸಾಗಿ ಬಂದು ಪಿಯುಸಿ ಸೇರಿದವಳು ಕೌಸರ್. ಕೌಸರ್ ಪ್ರೈಮರಿ ಉರ್ದು ಶಾಲೆಯ ಉಪಾಧ್ಯಾಯ ರೆಹಮಾನ್ ಮೇಷ್ಟ್ರು ಮಗಳು. ಕೌಸರ್ ಇಂಗ್ಲೀಷ್ ಮತ್ತು ಉರ್ದು ಭಾಷೆಗಳನ್ನು ಓದಿ ಎಸ್ಎಸ್ಎಲ್ಸಿ ಪಾಸಾಗಿದ್ದಳು. ಆದರೆ ಕಾಲೇಜಿನಲ್ಲಿ ಉರ್ದು ಭಾಷಾ ಲೆಕ್ಚರರ್ ಇರಲಿಲ್ಲ. ಅದನ್ನು ತಾನೇ ಓದಿಕೊಳ್ಳುತ್ತೇನೆಂದು ಹೇಳಿ ಪ್ರವೇಶ ಪಡೆದಳು.
ಅದೇ ರೀತಿ ಕಿರಾಣಿ ಅಂಗಡಿ ಅಜೀಜರ ಮಗಳು ಖುರ್ಷಿದ್ ಎಸ್ಎಸ್ಎಲ್ಸಿ ಪಾಸಾಗಿ ಎರಡು ವರ್ಷಗಳಾಗಿದ್ದವು. ಎರಡು ವರ್ಷ ಬೀಡಿ ಕಟ್ಟಿ ಸಾವಿರಾರು ರೂಪಾಯಿ ದುಡಿದು ತಂದೆ ತಾಯಿಗೆ ಆಸರೆಯಾಗಿದ್ದಳು. ಈಗ ಕಾಲೇಜು ಸೇರಿದರೆ ಒಂದು ದುಡಿಮೆಯ ಕೈ ಕಮ್ಮಿಯಾಗುತ್ತದೆ ಎಂದು ಅಜೀಜ್ ರಾಗ ಎಳೆದ. ಆದರೆ ಖುರ್ಷಿದ್ ಬಿಡುವಿನ ವೇಳೆಯಲ್ಲಿ ಬೀಡಿ ಕಟ್ಟುತ್ತೇನೆ ಎಂದ ಮೇಲೆ ಒಪ್ಪಿಗೆ ದೊರೆಯಿತು. ಅದು ಹೊಸತಾಗಿ ಪ್ರಾರಂಭವಾದ ಖಾಸಗಿ ಪದವಿ ಪೂರ್ವ ಕಾಲೇಜಾಗಿತ್ತು. ಅರ್ಜಿ ಹಾಕಿದವರಿಗೆಲ್ಲ ಸೀಟು ಸಿಗುತ್ತಿತ್ತು.
ಫಾತಿಮಾ ಸಹ ಎಸ್ಎಸ್ಎಲ್ಸಿ ಮುಗಿದ ಮೇಲೆ ಎರಡು ವರ್ಷ ಮನೆಯಲ್ಲಿದ್ದು ಕಾಲೇಜು ಪ್ರಾರಂಭವಾಗಿದ್ದಕ್ಕೆ ಖುಷಿಯಿಂದ ಬಂದು ಪಿಯುಸಿಗೆ ಪ್ರವೇಶ ಪಡೆದಿದ್ದಳು. ಅವಳಿಗೆ ಸೈನ್ಸ್ ಓದಬೇಕೆಂದಿತ್ತು. ಆದರೆ ಹೊಸತಾಗಿ ಪ್ರಾರಂಭವಾದ ಕಾಲೇಜಿನಲ್ಲಿ ಕಲಾ ವಿಭಾಗ ಮಾತ್ರವಿತ್ತು. ಆಕೆ ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಬೇರೆ ಮಾರ್ಗವಿಲ್ಲದೆ ಕಲಾ ವಿಭಾಗಕ್ಕೆ ಸೇರಿಕೊಂಡಳು. ಉರ್ದು ಭಾಷೆಯನ್ನು ಸಹ ತಾನೇ ಓದಿಕೊಳ್ಳಬೇಕಾಗಿತ್ತು. ತನ್ನ ಇದುವರೆಗಿನ ಬದುಕಲ್ಲಿ ರಾಜಿ ಮಾಡಿಕೊಂಡು ಅವಳಿಗೆ ಅಭ್ಯಾಸವಾಗಿ ಹೋಗಿತ್ತು.
ಅದೇ ಊರಿನ ಮಸೀದಿಯ ಮೌಜಾನ್ ಸಾಹೇಬರ ಮಗಳು ಸಕೀನಾ, ಚರ್ಮದ ಮಂಡಿ ಕರೀಮ್ ಸಾಹೇಬರ ಮಗಳು ನೂರ್ಜಹಾನ್, ಸೈಕಲ್ ಶಾಪ್ ಅಮೀರ್ ಜಾನರ ಮಗಳು ಹಲೀಮಾ, ಬಹಳ ಕಷ್ಟಪಟ್ಟು ಕೊನೆಗೆ ಮಮ್ಮದಿ ಮೇಷ್ಟç ಹತ್ತಿ ಪಾಠ ಹೇಳಿಸಿಕೊಂಡು ಎಸ್ಎಸ್ಎಲ್ಸಿ ಪಾಸಾಗಿದ್ದ ಸಲೀಮಾ ಬಂದು ಪಿಯುಸಿಗೆ ಸೇರಿಕೊಂಡರು. ಅವರಿವರ ಮನೆಯಲ್ಲಿ ಕೆಲಸ ಮಾಡುವ ಅಮೀನಾಬಿಯ ಮೊಮ್ಮಗಳು ಜೀನತ್ ಸಹ ಪಿಯುಸಿ ಸೇರಿದಳು. ಊರಿನಲ್ಲಿ ಕಾಲೇಜು ಪ್ರಾರಂಭವಾಗಿದ್ದು ಜೀನತ್ತಳಿಗೆ ಭಾಗ್ಯದ ಬಾಗಿಲು ತೆರೆದಂತಾಗಿತ್ತು. ಹೀಗೆ ಬಂದು ಸೇರಿದ ಈ ಹೆಣ್ಣುಮಕ್ಕಳೆಲ್ಲ ಬಡತನವನ್ನು ಚೆನ್ನಾಗಿ ಕಂಡವರು ಉಂಡವರು ಆಗಿದ್ದರು. ಶಿಕ್ಷಣ ಪಡೆದು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬೇಕೆಂಬುದಷ್ಟೇ ಅಲ್ಲ ತಮ್ಮ ಕುಟುಂಬಕ್ಕೆ ಸಹಾಯ ಮಾಡಬೇಕೆಂಬ ಮಹತ್ವಾಕಾಂಕ್ಷೆ ಉಳ್ಳವರಾಗಿದ್ದರು. ತಮ್ಮ ಗುರಿಯಿಂದ ಯಾವುದೇ ಕಾರಣಕ್ಕೂ ವಿಚಲಿತರಾಗದ ಶಪಥ ತೊಟ್ಟವರಾಗಿದ್ದರು. ನಗರ ಜೀವನದ ಜಂಭ, ದುಂದು ವೆಚ್ಚ, ಉಡಾಫೆ, ಥಳಕು ಬಳಕು ಮುಂತಾದುವುಗಳಿಂದ ದೂರವಾದವರೂ, ಸರಳರೂ, ಭಯಸ್ಥರೂ, ವಿನಯಶೀಲರೂ ಆಗಿದ್ದರು. ಇದರಲ್ಲಿ ಮುಷ್ತರಿಯದ್ದು ಮಾತ್ರ ಆರ್ಥಿಕವಾಗಿ ಸದೃಢವಾಗಿದ್ದು ಮಿಕ್ಕವರು ಯಾವುದೇ ಕ್ಷಣದಲ್ಲಿ ಕಾಲೇಜು ಬಿಟ್ಟು ಮನೆ ಸೇರುವಂತಿದ್ದರು.
ಈ ಮಕ್ಕಳ ಶಿಕ್ಷಣ ಎಂಬುದು ಮನೆಯ ಆರ್ಥಿಕ ಪರಿಸ್ಥಿತಿ, ಮನೆಯ ಯಜಮಾನನ ಕುಡಿತ, ಇಸ್ಪೀಟಿನಂಥ ಅಭ್ಯಾಸ, ಮನೆಯವರ ಮೌಢ್ಯ, ಕಾಲ ಕಾಲಕ್ಕೆ ಜಾರಿಯಾಗುವ ಜಮಾತಿನ ನಿರ್ಣಯ ಮುಂತಾದುವುಗಳ ಮೇಲೆ ಅವಲಂಬಿತವಾಗಿರುತ್ತಿತ್ತು. ಇಲ್ಲಿಗೆ ಆರು ತಿಂಗಳ ಕೆಳಗೆ ಜಮಾತಿನವರು ಮುಸ್ಲಿಂ ಮಹಿಳೆಯರಾರೂ ಸಿನಿಮಾಗಳನ್ನು ನೋಡಕೂಡದೆಂದು ಹೊರಡಿಸಿದ್ದ ಆದೇಶದನ್ವಯ ಮಹಿಳೆಯರು ಸಿನಿಮಾ ನೋಡುವುದನ್ನು ಅಂದೇ ಬಿಟ್ಟುಬಿಟ್ಟಿದ್ದರು. ಸೈಕಲ್ ಶಾಪ್ನ ಅಮೀರ್ ಜಾನ್ ಕುಡಿಯಲು ಪ್ರಾರಂಭಿಸಿದನೆಂದರೆ ವಾರಗಟ್ಟಲೆ ಕುಡಿಯುತ್ತ ಮನೆ ಸೇರುತ್ತಿರಲಿಲ್ಲ. ಆಗೆಲ್ಲ ಅವನ ಮಗಳಾದ ಹಲೀಮ ತನ್ನ ಅಬ್ಬಾಜಾನನನ್ನು ಊರೆಲ್ಲ ಹುಡುಕಿ ಮನೆಗೆ ಕರೆತರಬೇಕಿತ್ತು. ಆಗೆಲ್ಲ ಅವಳ ಓದು ಬರಹ ಕುಂಟಿತವಾಗುತ್ತಿದ್ದವು. ಕಾಲೇಜಿಗೂ ಗೈರಾಗಬೇಕಾಗುತ್ತಿತ್ತು. ಅಲ್ಲದೆ ಕುಡುಕನ ಮಗಳೆಂದು ಅವಮಾನ ಅನುಭವಿಸಬೇಕಾಗಿತ್ತು. ಅವರಿವರ ಮನೆಯಲ್ಲಿ ಕಸ ಮುಸುರೆ ಕೆಲಸ ಮಾಡುವ ಅಮೀನಾಬಿ ಮನೆಯ ಜೀನತ್ತಳದ್ದು ಸಹ ಅದೇ ಕಥೆಯಾಗಿತ್ತು.
ಇದು ವಿದ್ಯಾರ್ಥಿಗಳ ಲೋಕವಾದರೆ ಹಿರಿಯರ ಲೋಕ ಬೇರೆ ಇತ್ತು. ಅಲ್ಲಿ ಈಗಾಗಲೇ ಅಜಾನ್, ಹಲಾಲ್, ಬೀಫ್, ಲವ್ ಜಿಹಾದ್ ಮುಂತಾದ ವಿಷಯಗಳನ್ನು ಇಟ್ಟುಕೊಂಡು ಜಗಳಗಳಾಗಿದ್ದವು. ಹಿಂದೂ ಮುಸ್ಲಿಂ ಮಧ್ಯೆ ಕಂದಕಗಳು ಏರ್ಪಟ್ಟು ಪರಸ್ಪರ ಸಂಶಯಗಳು ಮನೆ ಮಾಡಿದ್ದವು.
ಊರಲ್ಲಿ ಈ ಬಾರಿ ರಂಜಾನ್ ಹಬ್ಬವನ್ನು ಪ್ರತಿ ವರ್ಷಕ್ಕಿನ್ನ ನೇಮ ನಿಷ್ಠೆಯಿಂದಷ್ಟೇ ಅಲ್ಲದೆ ಅದ್ದೂರಿಯಾಗಿ ಆಚರಿಸಬೇಕೆಂದು ಜಮಾತಿನವರು ನಿರ್ಧರಿಸಿದ್ದರು. ಹಬ್ಬವೊಂದೇ ಅಲ್ಲ ರಂಜಾನ್ ತಿಂಗಳಿನ ಮೂವತ್ತು ದಿನಗಳನ್ನೂ ಹೆಚ್ಚಿನ ಭಕ್ತಿಭಾವದಿಂದ ನಡೆದುಕೊಳ್ಳಬೇಕೆಂದು ಮಾತಾಡಿಕೊಂಡಿದ್ದರು. ಊರಿನ ವಾತಾವರಣಕ್ಕನುಗುಣವಾಗಿ ಭಕ್ತಿಗೊಂದು ತುರ್ತು ಬಂದಿತ್ತು. ವೇಗ ಬಂದಿತ್ತು. ಊರಿನ ಅನೇಕರು ಉದಾರವಾಗಿ ಚಂದಾ ನೀಡಿದ್ದರು. ರಂಜಾನ್ ತಿಂಗಳು ಒಂದೆರಡು ವಾರ ಇರುವಂತೆಯೇ ಮಸೀದಿ ಕಟ್ಟಡ, ಸುತ್ತಲಿನ ಅವರಣ ಗೋಡೆ ಮತ್ತು ಈದ್ಗಾಗಳು ದುರಸ್ತಿಗೊಂಡು ಸುಣ್ಣ ಬಣ್ಣ ಕಂಡವು. ಎಲ್ಲಕ್ಕಿನ್ನ ಮುಖ್ಯವಾಗಿ ಪವಿತ್ರ ರಂಜಾನ್ ತಿಂಗಳು ಪೂರ್ತಿ ಊರಿನಲ್ಲಿಯೇ ಉಳಿದು ತಿಂಗಳಿಡೀ ರೋಜಾ, ನಮಾಜುಗಳಲ್ಲಿ ಕಟ್ಟುನಿಟ್ಟು, ಶ್ರದ್ಧಾ ಭಕ್ತಿ ತಂದುಕೊಡಲು, ಇಡೀ ಸಮುದಾಯಕ್ಕೆ ದಾರಿದೀಪವಾಗಿರಲು ಎಲ್ಲಿಂದಾದರೂ ಧರ್ಮಶಾಸ್ತçಗಳನ್ನು ಕರತಲಾಮಲಕ ಮಾಡಿಕೊಂಡಿರುವ ಒಬ್ಬ ಮೌಲಾನಾರನ್ನು ಕರೆತರಲು ನಿರ್ಧರಿಸಿದ್ದರು. ಧಾರ್ಮಿಕ ಆಚಾರ ವಿಚಾರಗಳಲ್ಲಿ ತಾವು ತಿಳಿಯದೇ ಮಾಡುತ್ತಿರಬಹುದಾದ ತಪ್ಪುಗಳನ್ನು ತಿದ್ದಿಕೊಳ್ಳಲು ಇದು ಸುಸಮಯವಾಗುತ್ತದೆ. ತಾವು ಸರಿಯಾಗಿ ನಡೆದುಕೊಳ್ಳುತ್ತಿದ್ದರೂ ಸಹ ಬಲ್ಲವರೊಬ್ಬರ ಮಾರ್ಗದರ್ಶನವಿದ್ದರೆ ಆತ್ಮವಿಶ್ವಾಸದಿಂದ ಅಲ್ಲಾಹುವಿಗೆ ನಡೆದುಕೊಳ್ಳಬಹುದೆಂಬುದು ಎಲ್ಲರ ಅಭಿಪ್ರಾಯವಾಗಿತ್ತು.
ಮೌಲಾನಾರೊಬ್ಬರು ರಂಜಾನ್ ಒಂದು ತಿಂಗಳಿದೆ ಅನ್ನುವಾಗಲೇ ಬಂದಿಳಿದರು. ಹಾಗೆ ಆಗಮಿಸಿದ ಮೌಲಾನಾರವರನ್ನು ಸಕಲ ಮರ್ಯಾದೆಗಳೊಂದಿಗೆ ಒಂದು ತಿಂಗಳಿಗೂ ಹೆಚ್ಚು ಕಾಲ ಊರಲ್ಲಿಯೇ ಇರಿಸಿಕೊಳ್ಳಬೇಕಾಗಿತ್ತು. ಒಂದೊಂದು ಮನೆಯಲ್ಲಿ ಒಂದೊಂದು ದಿನ ಊಟದ ದಾವತ್ ಇರುತ್ತಿತ್ತು. ರಂಜಾನಿನ ರೋಜಾ ದಿನಗಳಳ್ಲಿ ಸಹರ್ ಮತ್ತು ಇಫ್ತರ್ಗಳಿಗೆ ಮೌಲಾನರನ್ನು ಆಹ್ವಾನಿಸಲು ಜನರಲ್ಲಿ ಸ್ಪರ್ಧೆಯೇ ಏರ್ಪಡುತ್ತಿತ್ತು.
ಊರಿನಲ್ಲೊಬ್ಬ ಸೂಜಿಗಲ್ಲಿನಂಥ ವ್ಯಕ್ತಿಯಿದ್ದರು. ಅವರೇ ಪ್ರೌಢಶಾಲೆಯಲ್ಲಿ ವಿಜ್ಞಾನದ ಮೇಷ್ಟ್ರಾಗಿದ್ದ ಮಹಮ್ಮದ್ ದಿಲಾವರ್. ಬರೀ ವಿಜ್ಞಾನವಷ್ಟೇ ಅಲ್ಲ ಯಾವ ವಿಷಯವನ್ನು ಕೊಟ್ಟರೂ ಲೀಲಾಜಾಲವಾಗಿ ಪಾಠ ಮಾಡಬಲ್ಲವರಾಗಿದ್ದರು. ಮಮ್ಮದಿ ಮೇಷ್ಟುç ಎಂದೇ ಜನಪ್ರಿಯರಾಗಿದ್ದ ಅವರು ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಅರೇಬಿಕ್ ಭಾಷೆಗಳನ್ನು ಬಲ್ಲವರಾಗಿದ್ದರು. ಪಾಠ ಪ್ರವಚನಗಳ ಜೊತೆ ಶಾಲೆಯ ಆಟದ ಮೈದಾನ ಮತ್ತು ಗ್ರಂಥಾಲಯದಲ್ಲಿ ಅವರೇ ವಿದ್ಯಾರ್ಥಿಗಳ ಮುಂದಾಳು ಮತ್ತು ಗೆಳೆಯರಾಗಿದ್ದರು. ಯಾವುದೇ ವಿದ್ಯಾರ್ಥಿ ಎಷ್ಟೇ ಸಲ ಎಸ್ಎಸ್ಎಲ್ಸಿಯಲ್ಲಿ ಡುಮ್ಕಿ ಹೊಡೆದಿದ್ದರೂ ಮಮ್ಮದಿ ಮೇಷ್ಟ್ರು ಕೈಗೆ ಸಿಕ್ಕನೆಂದರೆ ಒಂದೆರಡು ಪ್ರಯತ್ನಗಳಲ್ಲಿಯೇ ಪಾಸಾಗುತ್ತಿದ್ದ. ಊರಲ್ಲಿದ್ದುದು ಒಂದೇ ಪ್ರೌಢಶಾಲೆಯಾಗಿದ್ದುದರಿಂದ ಊರಿನ ಎಲ್ಲ ವಿದ್ಯಾವಂತ ಯುವಕರೂ ಮಮ್ಮದಿ ಮೇಷ್ಟç ಅಭಿಮಾನಿ ಶಿಷ್ಯರೇ ಆಗಿರುತ್ತಿದ್ದರು.
ಮಮ್ಮದಿ ಮೇಷ್ಟ್ರು ಮನೆಯಲ್ಲಿ ಪಿಯುಸಿ ಓದುತ್ತಿದ್ದ ತಂಗಿ ಮುಷ್ತರಿಯನ್ನು ಬಿಟ್ಟರೆ ಮತ್ತಾರೂ ಇರಲಿಲ್ಲ. ಮೇಷ್ಟುç ಮದುವೆಯ ವಯಸ್ಸಿಗೆ ಬಂದಿದ್ದರೂ ತಂಗಿಯ ಶಿಕ್ಷಣ ಮತ್ತು ಮದುವೆ ಪೂರೈಸದೆ ತಾನು ಮದುವೆಯಾಗುವುದಿಲ್ಲವೆಂದು ಪ್ರಕಟಪಡಿಸಿದ್ದರು. ಎಂದೋ ಕಾಲವಶರಾಗಿದ್ದ ಅಮ್ಮಿ, ಬಾಬಾರ ನೆನಪು ಕಾಡದಂತೆ ತಂಗಿಯನ್ನು ಬೆಳೆಸಿದ್ದರು.
ತನ್ನ ಸಹಪಾಠಿ ಜೀನತ್ತಳ ದಾದಿ ಅಮೀನಾಬಿಯನ್ನು ಮುಷ್ತರಿ ತಾಯಿಯಂತೆ ಕಾಣುತ್ತಿದ್ದಳು. ಐವತ್ತು ವರ್ಷಕ್ಕೂ ಹೆಚ್ಚು ವಯಸ್ಸಾಗಿರುವ ಅಮೀನಾಬಿ ಹತ್ತಾರು ಮನೆಗಳಲ್ಲಿ ಕಸ ಮುಸುರೆಯ ಕೆಲಸ ಮಾಡುತ್ತಿದ್ದಳು. ಒಂದೆರಡು ಮನೆಗಳಲ್ಲಿ ದನದ ಕೊಟ್ಟಿಗೆ ‘ತೊಳಿ ಬಳಿ’ ಕೆಲಸ. ಕೆಲವು ಮನೆಗಳಲ್ಲಿ ಬೇಸಿಗೆಯಲ್ಲಿ ಸಂಡಿಗೆ, ಹಪ್ಪಳ, ಶಾವಿಗೆ ಮಾಡುವುದು, ಚಳಿಗಾಲಕ್ಕೆಂದು ಕೌದಿ, ಸ್ವೆಟರ್ ಹೆಣೆಯುವುದು ಮಾಡುತ್ತಿದ್ದಳು. ಯಾರದಾದರೂ ಮನೆಯಲ್ಲಿ ಹೆರಿಗೆಯಾದರೆ ಅಥವಾ ಸಾವು ನೋವಾದರೆ ಅಮೀನಾಬಿ ಬೇಕೇ ಬೇಕು. ಅವಳು ಹಿಂದು ಮುಸ್ಲಿಂ ಎಂದು ನೋಡುತ್ತಿರಲಿಲ್ಲ. ನೆಂಟರೋ, ಇಷ್ಟರೋ ಎಂದು ನೋಡುತ್ತಿರಲಿಲ್ಲ. ಬಡವ ಶ್ರೀಮಂತ ಎಂದು ನೋಡುತ್ತಿರಲಿಲ್ಲ. ಪರಿಚಿತರು ಅಪರಿಚಿತರು ಎಂದು ನೋಡುತ್ತಿರಲಿಲ್ಲ. ಸಾಬರ ಕೇರಿಯ ಖಾತೂನಮ್ಮ, ಜರೀನಾ, ಮಹಬೂಬಿ, ರಜಿಯ ಮುಂತಾದವರು ಹೇಗೆ ಅಮೀನಾಬಿಯ ಮೇಲೆ ಅವಲಂಬಿತರೋ ಹಾಗೆಯೇ ಹಂಪಮ್ಮ, ಜಯಮ್ಮ, ಲಕ್ಷö್ಮಮ್ಮ, ಪಾರ್ವತಮ್ಮ ಸೈತ ಅವಲಂಬಿತರೇ ಆಗಿದ್ದರು. ಹತ್ತಾರು ಮನೆಯವರು, ಕಛೇರಿ, ಹೊಲ, ಗದ್ದೆ, ತೋಟ, ಅಂಗಡಿಗಳಿಗೆ ಸಮಯಕ್ಕೆ ಸರಿಯಾಗಿ ಹೋಗಿ ಕೆಲಸ ಮಾಡಲು ಅಮೀನಾಬಿ ಬೇಕೇ ಬೇಕು. ಅಮೀನಾಬಿಗೆ ಇಪ್ಪತ್ತು ವರ್ಷ ಆಗುವುದಕ್ಕೆ ಮುಂಚೆಯೇ ಒಬ್ಬ ಮಗನನ್ನು ಕೈಗೆ ಕೊಟ್ಟು ಅವಳ ಗಂಡ ಇಹಲೋಕ ತ್ಯಜಿಸಿದ್ದ. ಅಮೀನಾಬಿ ಅಂದಿನಿAದಲೂ ಯಾರ ಮುಂದೆಯೂ ಕೈಚಾಚದೆ ಬದುಕಿದ್ದಾಳೆ. ಬುರ್ಖಾ, ಹಿಜಾಬುಗಳನ್ನು ಧರಿಸದಿದ್ದರೂ ಮಾನ ಮರ್ಯಾದೆಯಿಂದ ಹಗಲು ರಾತ್ರಿಯೆನ್ನದೆ ದುಡಿದು ಬದುಕಿದ್ದಾಳೆ.
ಅಂಥವಳ ಮಗ ಬಾಬು ಇತ್ತೀಚಿನ ದಿನಗಳಲ್ಲಿ ಕುಡಿತಕ್ಕೆ ದಾಸನಾಗಿ ಮನೆ ಸೇರದಂತಾಗಿದ್ದ. ಬಾಬುನ ಹೆಂಡತಿ ಮಕ್ಕಳನ್ನು ಸಹ ಅಮೀನಾಬಿಯೇ ಸಾಕಬೇಕಾಗಿ ಬಂದಿತ್ತು. ಮೌಲಾನಾರಿಂದ ಮಗನಿಗೆ ಹಿತ ವಚನ ಹೇಳಿಸಿದರೆ ಮಗ ಸರಿದಾರಿಗೆ ಬರಬಹುದು ಮತ್ತು ಅಂಥ ಪುಣ್ಯಾತ್ಮರೆದುರು ಜನರು ತಮ್ಮ ಪಾಪಗಳನ್ನು ತೊಳೆದುಕೊಂಡು ನಿಚ್ಚಳವಾಗುವರೆಂಬುದು ಅಮೀನಾಬಿಯ ನಂಬಿಕೆಯಾಗಿತ್ತು. ಇಂತಹ ಆಸೆಯನ್ನು ಇಟ್ಟುಕೊಂಡು ಮೌಲಾನಾರ ಭೇಟಿಯ ಸಮಯಕ್ಕೆ ಅಮೀನಾಬಿ ಕಾಯುತ್ತಿದ್ದಳು. ಬಡ ಮುದುಕಿಯಾದ ತನಗೆ ಮೌಲಾನಾರು ಸಮಯ ಕೊಡುವರೋ ಇಲ್ಲವೋ ಎಂಬ ತೊಳಲಾಟದಲ್ಲಿದ್ದಳು. ಮೌಲಾನಾರವರು ವಾಸವಿದ್ದ ಕೊಠಡಿಯು ಮಸೀದಿಯ ಕಾಂಪೌAಡಿನೊಳಗಿದ್ದು ಅಲ್ಲಿಗೆ ಹೆಣ್ಣು ಹೆಂಗಸಾದ ಅಮೀನಾಬಿ ಪ್ರವೇಶಿಸುವಂತಿರಲಿಲ್ಲ. ಬಾಬು ಮಾತ್ರ ಸದಾ ಕುಡಿದೇ ಇರುತ್ತಿದ್ದುದರಿಂದ ಅವನನ್ನು ಮೌಲಾನಾರ ಎದುರು ಕರೆತರುವುದು ಅಮೀನಾಬಿಗೆ ಇದುವರೆಗೂ ಸಾಧ್ಯವಾಗಿರಲಿಲ್ಲ.
ರಂಜಾನ್ ತಿಂಗಳು ಪೂರ್ತಿ ಬೆಳಗಿನ ಜಾವ ನಾಲ್ಕು ಗಂಟೆಗೆಲ್ಲ ಎದ್ದು ಮನೆ ಮಂದಿಗೆಲ್ಲ ಅಡಿಗೆ ಮಾಡಿ, ರೋಜಾ ಮಾಡುವವರಿಗೆ ಸಹರ್ ಮಾಡಿಸುವುದು ಮತ್ತು ಸಾಯಂಕಾಲ ಆರು ಏಳರ ಸುಮಾರಿಗೆ ಇಫ್ತಾರ್ ಸಿದ್ಧಪಡಿಸುವುದು ಹೆಣ್ಣುಮಕ್ಕಳ ಜವಾಬ್ದಾರಿಯಾಗಿತ್ತು. ಅಂದರೆ ಹೆಣ್ಣುಮಕ್ಕಳು ದುಡಿದುಡಿದು ಹಣ್ಣಾಗುತ್ತಿದ್ದರು. ರಂಜಾನ್ ಎಂದರೆ ಬರೀ ದಾನದ ಹಬ್ಬ ಮಾತ್ರವಲ್ಲ. ಅದು ಸಂಭ್ರಮದ ಹಬ್ಬ ಮಾತ್ರವಲ್ಲ, ಅದು ಹೆಚ್ಚು ಖರ್ಚು ವೆಚ್ಚದ ಹಬ್ಬವೂ ಆಗಿತ್ತು.
ಹೀಗೆ ಹುಮ್ಮಸ್ಸಿನ ಜೀವಿಗಳಾದ ಮುಷ್ತರಿ, ಕೌಸರ್, ಖುರ್ಷಿದ್, ಫಾತಿಮಾ, ಹಲೀಮಾ, ಸಲೀಮಾ, ಜೀನತ್ ಇವರೆಲ್ಲ ರಂಜಾನ್ ತಿಂಗಳ ಅಡಿಗೆ ಮನೆಯ ಬಿಡುವಿಲ್ಲದ ವೇಳಾಪಟ್ಟಿಯಲ್ಲಿಯೂ ತಮ್ಮ ತಮ್ಮ ಪಾಠಗಳ ಕಡೆ ಗಮನವಿಟ್ಟಿದ್ದರು. ದಿನ ದಿನದ ಪಾಠಗಳನ್ನು ಅಂದAದೇ ಓದಿಕೊಳ್ಳುವುದಲ್ಲದೆ ವಾರದಲ್ಲಿ ಬೋಧಿಸಿದ ವಿಷಯಗಳನ್ನು ಹುಡುಗಿಯರೆಲ್ಲ ಸೇರಿ ಗುಂಪು ಮಾಡಿಕೊಂಡು ಓದುತ್ತಿದ್ದರು. ವರ್ಷಾಂತ್ಯದ ಪರೀಕ್ಷೆ ಬಂದೇ ಬಿಟ್ಟಿತು ಎಂಬ ಧಾವಂತದಲ್ಲಿ ಓದಿದರು. ಬೀಡಿ ಸುತ್ತಿದರು. ಊದಿನ ಕಡ್ಡಿ ಹೊಸೆದರು. ಕಸ ಹೊಡೆದರು. ಮುಸುರೆ ತಿಕ್ಕಿದರು. ಅಡಿಗೆ ಮಾಡಿದರು. ಮನೆಯಲ್ಲಿ ಚಿಕ್ಕ ಪುಟ್ಟ ಮಕ್ಕಳ ಕುಂಡಿ ತೊಳೆದರು. ಬದುಕಿನ ಪ್ರತಿ ಗಳಿಗೆಯೂ ಅಮೂಲ್ಯವೆಂಬAತೆ ಕಾಲವನ್ನು ಜಿಪುಣನಂತೆ ಖರ್ಚು ಮಾಡಿದರು.
ಊರಲ್ಲಿ ಮಮ್ಮದಿ ಮೇಷ್ಟçನ್ನು ಕಂಡರಾಗದವರು ಕೆಲವರಿದ್ದರು. ಮುಸ್ಲಿಂ ವಿದ್ಯಾರ್ಥಿನಿಯರು ಆಟೋಟ ಸ್ಪರ್ಧೆಗಳಲ್ಲಿ ಫ್ರಾಕು, ನಿಕ್ಕರ್ ಹಾಕಿಕೊಂಡು ಆಡುವಂತಿಲ್ಲ ಎಂಬುದು ಕೆಲ ಪೋಷಕರ ತಕರಾರು ಆಗಿತ್ತು. ಮಮ್ಮದಿ ಮೇಷ್ಟೆçà ಮುಂದೆ ನಿಂತು ಕ್ರೀಡಾ ಸ್ಪರ್ಧೆಗಳಿಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಜಿಲ್ಲಾ ಮಟ್ಟ, ರಾಜ್ಯ ಮಟ್ಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಮೇಷ್ಟç ಒಳ್ಳೆಯತನ ಮತ್ತು ಸಾಧನೆಗಳು ಅವರ ವೈರಿಗಳನ್ನು ಸುಮ್ಮನಾಗಿಸುತ್ತಿತ್ತು. ಅವರ ಶಾಲೆಯ ವಿದ್ಯಾರ್ಥಿನಿಯರ ರಿಲೇ ತಂಡವು ಅದೇ ಸಮಯದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಅಡ್ಡ ಮಾತಾಡುತ್ತಿದ್ದ ಎಲ್ಲರ ಬಾಯಿ ಮುಚ್ಚಿಸಿತ್ತು. ರಿಲೇ ತಂಡದಲ್ಲಿ ಇಬ್ಬರು ಮುಸ್ಲಿಂ ವಿದ್ಯಾರ್ಥಿನಿಯರೂ ಸಹ ಇದ್ದರು. ಎಲ್ಲ ಪತ್ರಿಕೆಗಳಲ್ಲೂ ರಿಲೇ ತಂಡದ ಸುದ್ದಿ ರಾರಾಜಿಸಿತು. ಮುಂದೆ ಕ್ರೀಡಾ ಕೋಟಾದಲ್ಲಿ ಇವರ ಶೈಕ್ಷಣಿಕ ಮತ್ತು ಔದ್ಯೋಗಿಕ ಬದುಕಿಗೆ ಸಹಾಯವಾಗಬಹುದಾದ ಅವಕಾಶವನ್ನು ಮಮ್ಮದಿ ಮೇಷ್ಟುç ವಿವರವಾಗಿ ತಿಳಿಸಿದರು. ಇದೇ ಊರಿನವಳೂ ಮತ್ತು ಮೇಷ್ಟç ಶಿಷ್ಯೆಯೂ ಆಗಿದ್ದ ಮಹಾದೇವಿಯು ರಾಜ್ಯ ಕಬಡ್ಡಿ ಮಹಿಳಾ ತಂಡದ ನಾಯಕಿಯಾಗಿದ್ದರಿಂದ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಕೆಲಸ ಕೊಟ್ಟು ಗೌರವಿಸಿದ್ದು ಊರಿನಲ್ಲಿ ಮನೆಮಾತಾಗಿತ್ತು. ಇದರಿಂದ ಜನಸಾಮಾನ್ಯರ ಮನಸ್ಸುಗಳಲ್ಲಿ ಹೊಸ ಕನಸುಗಳು, ಆದರ್ಶಗಳು ಚಿಗುರೊಡೆದವು. ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆಯುವವರಷ್ಟೇ ಅಲ್ಲದೆ ಕಬಡ್ಡಿ ಮಹಾದೇವಿಯಂಥವರು ಸಹ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾದರು.
ಹೀಗೆ ಕಷ್ಟಗಳನ್ನೇ ಸಂಭ್ರಮದ ಹಾದಿ ಮಾಡಿಕೊಂಡಿದ್ದ ಮುಷ್ತರಿ, ಕೌಸರ್ ಮುಂತಾದವರಿಗೆ ಅವರ ಪ್ರಿನ್ಸಿಪಾಲ್ ಒಂದು ದಿನ ಇನ್ನು ಮೇಲೆ ಹಿಜಾಬ್ ಧರಿಸಿ ಕಾಲೇಜಿಗೆ ಬರಕೂಡದು ಮತ್ತು ಹಿಜಾಬ್ ಧರಿಸಿದವರಿಗೆ ಕಾಲೇಜಿನಲ್ಲಿ ಪ್ರವೇಶವಿಲ್ಲ ಎಂದು ಹೇಳಿ ಕಾಲೇಜು ಮುಖ್ಯ ದ್ವಾರಕ್ಕೆ ಅಡ್ಡ ನಿಂತರು. ಮನೆಯ ಕೆಲಸ ಕಾರ್ಯ ಮತ್ತು ತಮ್ಮ ತಮ್ಮ ಓದು ಬರಹಗಳಲ್ಲಿ ಮುಳುಗಿದ್ದ ಹುಡುಗಿಯರಿಗೆ ಕಕ್ಕಾಬಿಕ್ಕಿಯಾಯಿತು. ಅವರಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಎಲ್ಲಿಂದಲೋ ಇದ್ದಕ್ಕಿದ್ದಂತೆ ಅಪ್ಪಳಿಸಿದ ಸಿಡಿಲಿನಂತಿತ್ತು ಸನ್ನಿವೇಶ. ಹಿಜಾಬ್ ಅವರು ಸಣ್ಣವರಿದ್ದಾಗಲಿಂದ ತೊಡುತ್ತಿದ್ದ ಉಡುಗೆಯ ಭಾಗವಾಗಿತ್ತು. ಅದೊಂದು ಭಾವನಾತ್ಮಕ ಬಂಧವೂ ಆಗಿತ್ತು. ಅನೇಕರಿಗೆ ಕೂಡಲೇ ಕಣ್ಣೀರು ಬಂದವು. ಅಂದೂ ಸಹ ಎಲ್ಲರು ಹಿಜಾಬು ಧರಿಸಿ ಬಂದಿದ್ದರು. ಅವರು ಆ ಕ್ಷಣದಿಂದ ಕಾಲೇಜಿನ ಒಳಗೆ ಪ್ರವೇಶಿಸುವಂತಿರಲಿಲ್ಲ. ಮನೆಗೆ ವಾಪಸ್ಸು ಹೋಗಬೇಕಿತ್ತು. ಮರುದಿನದಿಂದ ಕಾಲೇಜಿಗೆ ಬರುವ ಗ್ಯಾರಂಟಿ ಇರಲಿಲ್ಲ. ಆ ದಿನ ಎಲ್ಲ ವಿಷಯಗಳ ತರಗತಿಗಳಿದ್ದವು. ಅವೆಲ್ಲವೂ ತಪ್ಪಿ ಹೋಗುತ್ತಿದ್ದವು. ತಬ್ಬಿಬ್ಬಾಗಿದ್ದಂಥ ಹುಡುಗಿಯರು ಏನು ಮಾಡಬೇಕೆಂದು ತಿಳಿಯದೆ ಸ್ವಲ್ಪ ಹೊತ್ತು ಕಾಲೇಜಿನ ಮುಖ್ಯ ದ್ವಾರದ ಹೊರಗೇ ನಿಂತಿದ್ದರು. ಪ್ರಿನ್ಸಿಪಾಲರ ಸಿಟ್ಟು ಇಳಿದ ಮೇಲೆ ಒಳಗೆ ಬಿಡಬಹುದೆಂದುಕೊAಡಿದ್ದರು. ಆದರೆ ಪ್ರಿನ್ಸಿಪಾಲರು ತಮ್ಮ ಬಿಗಿಪಟ್ಟು ಬಿಡಲೇ ಇಲ್ಲ. ಹುಡುಗಿಯರೆಲ್ಲರೂ ತಲೆ ತಗ್ಗಿಸಿಕೊಂಡು ಅವಮಾನದಿಂದ ಕಾಲೇಜಿನಿಂದ ಹೊರಟರು. ಅವರಿಗೆ ತಮ್ಮ ಸ್ವಾತಂತ್ರö್ಯ ಹರಣವಾದಂತಾಗಿತ್ತು. ಕಾಲೇಜಿನ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರು, ಇತರೆ ಸಿಬ್ಬಂದಿ, ದಾರಿಹೋಕರು ನೋಡುತ್ತಿದ್ದರು. ತಮ್ಮನ್ನು ಮಾತ್ರ ಹಿಜಾಬ್ ನೆಪದಲ್ಲಿ ಅನ್ಯಧರ್ಮೀಯರೆಂದು ಹೊರಹಾಕಲ್ಪಟ್ಟಂತಾಗಿತ್ತು. ಬರೀ ಹಿಜಾಬು ತೆಗೆದಿದ್ದರೂ ಅವರಿಗೆ ಪೂರ್ತಿ ಬೆತ್ತಲಾದಂತೆ ಅನಿಸುತ್ತಿತ್ತು. ಜೀವನದಲ್ಲಿ ಇದೇ ಪ್ರಥಮ ಬಾರಿಗೆ ಈ ತರಹದ ಸನ್ನಿವೇಶದಲ್ಲಿ ಸಿಗಿಬಿದ್ದಿದ್ದರು. ಅಷ್ಟೇ ಅಲ್ಲ ಯಾವುದೋ ಕ್ಷÄಲ್ಲಕ ಕಾರಣ ಕೊಟ್ಟು ವಿದ್ಯೆಯನ್ನು ನಿರಾಕರಿಸಿ ಹಿಂದಕ್ಕಟ್ಟಲಾಗಿತ್ತು. ಕೆಲವು ಪತ್ರಿಕೆಗಳು, ಸಾಮಾಜಿಕ ಜಾಲತಾಣ, ರಾಜಕೀಯ ಮುಖಂಡರ ಪ್ರಕಾರ ತಾವೆಲ್ಲರೂ ನುಸುಳುಕೋರರು ಇತ್ಯಾದಿ ನೆನಪಿಗೆ ಬಂತು. ಇವರು ಕಾಲೇಜು ಬಿಟ್ಟು ಹೊರಬರುತ್ತಿದ್ದಾಗ ಅನೇಕ ಹಿಂದು ಸ್ನೇಹಿತರು ಕಣ್ಣೀರು ಮಿಡಿದುದನ್ನು ಇವರು ಗಮನಿಸಿದ್ದರು. ಕೆಲವು ಉಪನ್ಯಾಸಕರು ಸಹ ದುಃಖತಪ್ತರಾಗಿದ್ದರು. ಅಲ್ಲಿಯೇ ಒಂದು ಕ್ಷಣ ಮರದ ನೆರಳಲ್ಲಿ ಮಾತು ಕಳೆದುಕೊಂಡು ಕುಳಿತರು. ಸಾಯಂಕಾಲ ಮಮ್ಮದಿ ಮೇಷ್ಟçಲ್ಲಿ ಸಲಹೆ ಪಡೆಯಲು ನಿರ್ಧರಿಸಿ ಮನೆಗಳತ್ತ ಹೊರಟರು. ಪೋಷಕರು ‘ಹಿಜಾಬು ಬೇಡವೆಂದರೆ ಶಿಕ್ಷಣವೇ ಬೇಡ’ ಎಂದರೇನು ಮಾಡುವುದು ಎಂದು ದಿಗಿಲಿನಿಂದ ಒಬ್ಬರಿಗೊಬ್ಬರು ಪ್ರಶ್ನಿಸಿಕೊಂಡರು.
ಅವರೆಲ್ಲ ಒಟ್ಟು ಹನ್ನೆರಡು ಜನರಿದ್ದರು. ಮಗ್ರೀಬ್ ನಮಾಜಿನ ನಂತರ ಅವರೆಲ್ಲರೂ ಮಮ್ಮದಿ ಮೇಷ್ಟç ಮನೆಗೆ ಹೋದಾಗ ಮೇಷ್ಟುç ಮತ್ತು ಮುಷ್ತರಿ ಮನೆಯಲ್ಲಿಯೇ ಇದ್ದರು. ಅಮೀನಾಬಿ ಮತ್ತು ಮೊಮ್ಮಗಳು ಜೀನತ್ ಅಷ್ಟೊತ್ತಿಗೆ ಬಂದು ಕುಳಿತಿದ್ದರು. ಮೇಷ್ಟಿçಗೆ ಎಲ್ಲ ವಿಷಯ ಗೊತ್ತಿತ್ತು. ಗಾಬರಿ ಬಿದ್ದಿದ್ದ ಹುಡುಗಿಯರಿಗೆ ಗಾಬರಿಯಾಗದಿರಲು ಮತ್ತು ಸೂಕ್ಷö್ಮವಾಗಿ ಈ ಸವಾಲನ್ನು ಎದುರಿಸೋಣ ಎಂದು ಮಾತಿಗಿಳಿದರು.
‘ಹೀಗೆ ಮಾಡಿರಿ. ಕೆಲಸ ಕೈಗೆತ್ತಿಕೊಂಡ ಮೇಲೆ ಅರ್ಧಕ್ಕೆ ಬಿಟ್ಟು ಬರುವಂತಿಲ್ಲ. ನಿಮ್ಮ ಅಬ್ಬ ಅಮ್ಮಿಯರನ್ನು ಒಪ್ಪಿಸಲು ಪ್ರಯತ್ನಿಸಿ. ಮುಖ್ಯ ಏನೆಂದರೆ ನೀವು ಈಗ ಓದುತ್ತಿರುವ ಹಾಗೆ ಮುಂದೆಯೂ ಓದುತ್ತಿರಬೇಕು. ಇವೆಲ್ಲ ಓಟಿಗೆ, ಅಧಿಕಾರಕ್ಕೆ ರಾಜಕಾರಣಿಗಳು ಆಡುತ್ತಿರುವ ಆಟ. ಇವಕ್ಕೆಲ್ಲ ಅರ್ಥವೇ ಇಲ್ಲ. ಹಿಜಾಬನ್ನು ಅಸ್ತç ಮಾಡಿಕೊಂಡಿರುವ ಅಧಾರ್ಮಿಕರಿವರು. ಪ್ರಿನ್ಸಿಪಾಲರು ಸ್ವಂತವಾಗಿ ಆಲೋಚಿಸುವ ವ್ಯಕ್ತಿಯಂತೆ ಕಾಣುತ್ತಿಲ್ಲ. ವಿದ್ಯೆ ಅಂತರAಗಕ್ಕಿಳಿಯದಿದ್ದರೆ ಹೀಗಾಗುತ್ತದೆ. ಇದೇನೂ ಶಾಶ್ವತವಲ್ಲ. ಯಾರದೋ ಹುನ್ನಾರಕ್ಕೆ ನಾವು ಬಲಿಯಾಗಕೂಡದು. ನಾವು ಶಿಕ್ಷಣ ಕೈಬಿಟ್ಟರೆ ನಮಗೇ ನಷ್ಟ’ ಮುಂತಾಗಿ ಮಮ್ಮದಿ ಮೇಷ್ಟುç ಏನು ಮಾಡಬೇಕೆಂದು ಎರಡು ಸಲ ಗುಟ್ಟಾಗಿ ವಿವರಿಸಿದರು.
ಅದೇ ಸಮಯದಲ್ಲಿ ಅಲ್ಲಿದ್ದ ಅಮೀನಾಬಿ ‘ನೋಡ್ರಮ್ಮ, ಎಷ್ಟು ಚೆನ್ನಾಗಿ ಹೇಳ್ತಾರೆ ಮೇಷ್ಟುç! ಓದಬೇಕ್ರಮ್ಮ ಇಲ್ಲಾಂದ್ರೆ ನನ್ನಂತೆ ಕೊನೆತನಕ ಕಸ ಮುಸ್ರೆ ಬಾಚ್ಕೊಂಡು ಸಾಯಬೇಕಾಗುತ್ತೆ. ನಮ್ಮ ವಿದ್ಯೆಯೇ ನಮ್ಮನ್ನು ಸಾಕ್ಬೇಕು. ಎಲ್ಲವ್ದುಕ್ಕೂ ಗಂಡಸ್ರ ಮೇಲೆ ಡಿಪೆಂಡ್ ಆಗ್ಬರ್ದು’ ಎಂದು ನುಡಿದಳು. ಓದೋ ಹುಡುಗೀರ ಜೊತೆ ಮಾತಾಡಿ ಅಮೀನಾಬಿ ಕೆಲವು ಇಂಗ್ಲೀಷ್ ಪದಗಳನ್ನು ಬಳಸುತ್ತಿದ್ದಳು.
ಮರುದಿನ ಎಲ್ಲ ವಿದ್ಯಾರ್ಥಿನಿಯರು ದಿನವೂ ಹೊರಟಂತೆ ಹಿಜಾಬ್ ಧರಿಸಿ ಕಾಲೇಜಿಗೆ ಹೊರಟರು. ಏನೂ ಗೊತ್ತಿಲ್ಲದ ಪೋಷಕರು ಪ್ರತಿ ದಿನದಂತೆ ಟಾಟಾ ಹೇಳಿ ಮಕ್ಕಳನ್ನು ಕಳಿಸಿಕೊಟ್ಟರು. ಹುಡುಗಿಯರು ಕಾಲೇಜಿನ ಮುಖ್ಯದ್ವಾರ ಪ್ರವೇಶಿಸುವಾಗ ಹಿಜಾಬನ್ನು ತೆಗೆದು ತಮ್ಮ ಪುಸ್ತಕದ ಚೀಲದಲ್ಲಿ ಇಟ್ಟುಕೊಂಡರು. ಗೇಟಿನ ಬಳಿ ಪ್ರಿನ್ಸಿಪಾಲರು ಕ್ಯಾತೆ ಮಾಡಲು ಕಾರಣ ಇಲ್ಲದೆ ಸುಮ್ಮನೆ ನಿಂತಿದ್ದರು. ಕಾಲೇಜಿಗೆ ಒಳ್ಳೆಯ ಹೆಸರು ತರಲಿರುವ ಈ ವಿದ್ಯಾರ್ಥಿನಿಯರ ಬಗ್ಗೆ ಎಲ್ಲ ಉಪನ್ಯಾಸಕರು ಪ್ರಿನ್ಸಿಪಾಲರಿಗೆ ತಿಳಿಸಿದ್ದರೆಂದು ಕಾಣುತ್ತದೆ. ಸಂಜೆ ವಾಪಸ್ಸು ಬರುವಾಗ ಕಾಲೇಜಿನಿಂದ ಹೊರ ಬಂದ ಕೂಡಲೇ ಹುಡುಗಿಯರು ಹಿಜಾಬ್ ಧರಿಸಿ ಮನೆಗೆ ಹಿಂತಿರುಗಿದರು. ಮನೆ ಸೇರಿದ ಮೇಲೆ ಅಬ್ಬ ಅಮ್ಮಿಯರಿಗೆ ನಡೆದ ವಿಷಯ ತಿಳಿಸಿದರು. ಅವರು ಅಬ್ಬ ಅಮ್ಮಿಯರನ್ನು ಒಪ್ಪಿಸಿದರು. ಮನೆಯ ಹಿರಿಯರನ್ನು ಒಪ್ಪಿಸಿದರು. ತಪ್ಪಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡರು. ಹುಡುಗಿಯರ ಏಕಾಗ್ರತೆ, ಛಲ ನೋಡಿ ಹಿರಿಯರು ಮೌನ ವಹಿಸಿದರು. ‘ತರಗತಿಯಲ್ಲಿರುವ ತನಕ ನಾವು ಮನೆಯಲ್ಲಿರುವಂತೆ ಹಿಜಾಬು ತೆಗೆದಿರಬಹುದು ಆದರೆ ಅದು ನಮ್ಮ ನಡತೆಯ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ನಮ್ಮ ಮನಸಿನ ವಜ್ರ ಕವಚದ ಮುಂದೆ ಈ ಹಿಜಾಬು ಇದ್ದರೇನು ಬಿಟ್ಟರೇನು?’ ಎಂದು ನುಡಿದರು. ಮಕ್ಕಳ ಕಣ್ಣಿನಲ್ಲಿನ ಮೊನಚು, ಅವರ ಧ್ವನಿಯ ದೃಢತೆಯು ಎದುರಿದ್ದವರನ್ನು ಆತ್ಮಪರೀಕ್ಷೆಗೊಳಪಡಿಸಿತು. ಅಪ್ಪ ಅಮ್ಮಂದಿರು ಅಂತರ್ಮುಖಿಗಳಾದರು. ಎಳೆಯ ಮಕ್ಕಳ ಕನಸನ್ನು ಹೊಸಕಿ ಹಾಕಲು ಅವರ ಮನಸ್ಸು ನಿರಾಕರಿಸಿತು.
ಎಳೆಯರೂ, ಅನಾಮಿಕರೂ, ಗೊತ್ತು ಗುರಿಯಿಲ್ಲದ ಮಕ್ಕಳು ಸವಾಲು ಗೆದ್ದು ನಿಂತಿದ್ದರು.
ಮಮ್ಮದಿ ಮೇಷ್ಟ್ರು ತಮ್ಮ ಶಿಷ್ಯೆಯರತ್ತ ನೋಡಿ ಕಣ್ಣು ಮಿಟುಕಿಸಿದ್ದು ಗೆಲುವನ್ನಲ್ಲದೆ ಅನೇಕ ಅರ್ಥಗಳನ್ನು ಬಿತ್ತರಿಸುತ್ತಿತ್ತು.
* * * * * *
ಕತೆಗಾರರ ಪರಿಚಯಾತ್ಮಕ ನುಡಿ
ಕನ್ನಡ ಕಥಾಸಾಹಿತ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಕಥನಶೈಲಿ, ಜೀವನಾನುಭವದ ಸೂಕ್ಷ್ಮ ಗ್ರಹಿಕೆ ಮತ್ತು ಮಾನವೀಯ LPP ಸಂವೇದನೆಗಳ ಮೂಲಕ ಗಮನ ಸೆಳೆದಿರುವ ಪ್ರಮುಖ ಕಥೆಗಾರರಲ್ಲಿ ಡಾ. ಮಿರ್ಜಾ ಬಷೀರ್ ಅವರೂ ಒಬ್ಬರು. ತುಮಕೂರು ನಿವಾಸಿಯಾಗಿರುವ ಇವರು, ವೃತ್ತಿಯಿಂದ ಪಶುವೈದ್ಯರು; ಪ್ರವೃತ್ತಿಯಿಂದ ಸೃಜನಶೀಲ ಕಥೆಗಾರರು. ವೃತ್ತಿಜೀವನದಲ್ಲಿ ಕಂಡುಂಡ ಅನುಭವಗಳು, ಸಮಾಜದ ವಿವಿಧ ಸ್ತರಗಳ ಬದುಕು, ಮನುಷ್ಯ ಸಂಬಂಧಗಳ ಸಂಕೀರ್ಣತೆ ಹಾಗೂ ಜೀವಜಗತ್ತಿನ ಸೂಕ್ಷ್ಮ ಸಂಗತಿಗಳು ಇವರ ಸಾಹಿತ್ಯದ ವಸ್ತುಗಳಾಗಿ ರೂಪುಗೊಂಡಿವೆ.
ಇದುವರೆಗೆ ‘ಬಟ್ಟೆಯಿಲ್ಲದ ಊರಿನಲ್ಲಿ’ (2013), ‘ಜಿನ್ನಿ’ (2016), ‘ಹಾರುವ ಹಕ್ಕಿ ಮತ್ತು ಇರುವೆ’ (2020) ಹಾಗೂ ‘ಅಬ್ರಕಡಬ್ರ’ (2023) ಎಂಬ ನಾಲ್ಕು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ, ತಮ್ಮ ಪಶುವೈದ್ಯ ವೃತ್ತಿಯ ಅನುಭವಗಳನ್ನು ಆಧರಿಸಿದ ‘ಗಂಗೆ ಬಾರೆ ಗೌರಿ ಬಾರೆ’ (2022) ಎಂಬ ಅನುಭವ ಕಥನವನ್ನೂ ಹೊರತಂದಿದ್ದಾರೆ. ಇವರ ಕಥೆಗಳು ಪ್ರಜಾವಾಣಿ, ಮಯೂರ, ಸುಧಾ, ಹೊಸತು, ಸಮಾಜಮುಖಿ ಸೇರಿದಂತೆ ನಾಡಿನ ಹಲವು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೂರು ಬಾರಿ, ಕನ್ನಡಪ್ರಭದ ಸಂಕ್ರಾಂತಿ ಕಥಾಸ್ಪರ್ಧೆಯಲ್ಲಿ ಒಂದು ಬಾರಿ ಹಾಗೂ ಸಮಾಜಮುಖಿಯ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಎರಡು ಬಾರಿ ಬಹುಮಾನ ಪಡೆದಿರುವುದು ಇವರ ಕಥನ ಪ್ರತಿಭೆಗೆ ಸಾಕ್ಷಿಯಾಗಿದೆ.
ಮಿರ್ಜಾ ಬಷೀರ್ ಅವರ ಸಾಹಿತ್ಯದ ಮಹತ್ವಕ್ಕೆ ಮತ್ತೊಂದು ಸಾಕ್ಷಿ ಎಂದರೆ, ಇವರ ಕಥೆಗಳು ಹಲವು ವಿಶ್ವವಿದ್ಯಾಲಯಗಳ ಪದವಿ ತರಗತಿಗಳ ಪಠ್ಯಗಳಲ್ಲಿ ಸ್ಥಾನ ಪಡೆದಿರುವುದು. ಇವರ ‘ತಬ್ಬಲಿಗಳು’ ನಾಟಕವು ಕೃಷಿ ವಿಶ್ವವಿದ್ಯಾಲಯದ ಪ್ರಥಮ ವರ್ಷದ ಪದವಿ ತರಗತಿಗೆ ಪಠ್ಯವಾಗಿದೆ. ಅಲ್ಲದೆ, ಇವರ ಕಥೆಗಳು ಕೇರಳ ರಾಜ್ಯದ ಒಂಬತ್ತನೇ ತರಗತಿಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಪಠ್ಯದಲ್ಲಿಯೂ ಸೇರ್ಪಡೆಯಾಗಿವೆ. ಕೆಲವು ಕಥೆಗಳು ತೆಲುಗು ಭಾಷೆಗೂ ಅನುವಾದಗೊಂಡಿವೆ. ಇದು ಇವರ ಸಾಹಿತ್ಯದ ಭಾಷಿಕ ಹಾಗೂ ಭೌಗೋಳಿಕ ವ್ಯಾಪ್ತಿಯನ್ನು ಸೂಚಿಸುತ್ತದೆ.
ಇವರ ‘ಜಿನ್ನಿ’ ಕಥಾಸಂಕಲನಕ್ಕೆ 2017ರಲ್ಲಿ ಲಂಕೇಶ್ ಪ್ರಶಸ್ತಿ ಹಾಗೂ ಕೆ. ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ ಲಭಿಸಿವೆ. ‘ಹಾರುವ ಹಕ್ಕಿ ಮತ್ತು ಇರುವೆ’ ಕೃತಿಗೆ 2020ರಲ್ಲಿ ಸ್ವಾಭಿಮಾನಿ ಕರ್ನಾಟಕದ ವಾರ್ಷಿಕ ಕಥಾಸಂಕಲನ ಪ್ರಶಸ್ತಿ ಮತ್ತು ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿಗಳು ಸಂದಿವೆ. ‘ಗಂಗೆ ಬಾರೆ ಗೌರಿ ಬಾರೆ’ ಕೃತಿಗೆ 2023ರಲ್ಲಿ ‘ಅಮ್ಮ’ ಪ್ರಶಸ್ತಿ ದೊರೆತಿದೆ. 2024ರ ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಮುಸ್ಲಿಂ ಲೇಖಕರ ಸಂಘದ ಪ್ರಶಸ್ತಿಯೂ ಇವರಿಗೆ ಲಭಿಸಿವೆ. 2025ರಲ್ಲಿ ಪರಸ್ಪರ ಸಾಹಿತ್ಯ ವೇದಿಕೆ, ಸಾಗರದಿಂದ ‘ಸಂತ ಶಿಶುನಾಳ ಷರೀಫ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವೃತ್ತಿ ಮತ್ತು ಪ್ರವೃತ್ತಿಗಳ ನಡುವಿನ ಅಂತರವನ್ನು ಸೃಜನಶೀಲತೆಯ ಮೂಲಕ ಅಳಿಸಿಹಾಕಿರುವ ಡಾ. ಮಿರ್ಜಾ ಬಷೀರ್, ತಮ್ಮ ಕಥೆಗಳ ಮೂಲಕ ಬದುಕಿನ ಅನೇಕ ಮಗ್ಗುಲುಗಳನ್ನು ಅನಾವರಣಗೊಳಿಸುತ್ತಿರುವ ಸಂವೇದನಾಶೀಲ ಲೇಖಕರು. ಪ್ರಶಸ್ತಿ-ಪುರಸ್ಕಾರಗಳಾಚೆಗೂ ಓದುಗರ ಮನಸ್ಸಿನಲ್ಲಿ ತಮ್ಮ ಸಾಹಿತ್ಯದ ಮೂಲಕ ನೆಲೆ ಕಂಡುಕೊಂಡಿರುವ ಇವರ ಸೃಜನಶೀಲ ಪಯಣ ಕನ್ನಡ ಕಥಾಲೋಕಕ್ಕೆ ಮಹತ್ವದ ಕೊಡುಗೆಯಾಗಿದೆ.

ಅಂತರಂಗ
ಕನ್ನಡ ಕಾವ್ಯಲೋಕದ ವಿಶಿಷ್ಟ ಧ್ವನಿ ಸ. ಉಷಾ ಇನ್ನಿಲ್ಲ
ಸುದ್ದಿದಿನ ಡೆಸ್ಕ್ :ಹಿರಿಯ ಲೇಖಕಿ ಸ.ಉಷಾ ಅವರು ಅನಾರೋಗ್ಯದಿಂದ ಶನಿವಾರ ರಾತ್ರಿ (ನವೆಂಬರ್ 28 ರಂದು ಎಂಟೂವರೆ ಹೊತ್ತಿಗೆ ) ಬೆಂಗಳೂರಿನಲ್ಲಿ ನಿಧನರಾದರು.ಅವರಿಗೆ 72 ವರ್ಷ ವಯಸ್ಸಾಗಿತ್ತು.ಅವರ ಅಂತ್ಯಕ್ರಿಯೆ ಭಾನುವಾರ (ನವೆಂಬರ್ 29) ಮಧ್ಯಾಹ್ನ ಬೆಂಗಳೂರಿನ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ ಎಂದು ಅವರ ಆಪ್ತ ವಲಯ ತಿಳಿಸಿದೆ.
ಕನ್ನಡದ ಹಿರಿಯ ಕವಯತ್ರಿ, ವಿಮರ್ಶಕಿ ಹಾಗೂ ಪ್ರಾಧ್ಯಾಪಕಿ ಸ. ಉಷಾ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕದ ಮಹತ್ವದ ಕೊಂಡಿಯೊಂದು ಕಳಚಿದಂತಾಗಿದೆ. ತಮ್ಮ ವಿಶಿಷ್ಟ ಕಾವ್ಯಾಭಿವ್ಯಕ್ತಿ, ವೈಚಾರಿಕ ನಿಲುವು ಹಾಗೂ ಸಾಮಾಜಿಕ ಸಂವೇದನೆಗಳಿಂದ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಸಂಪಾದಿಸಿದ್ದ ಅವರು, ಮಹಿಳಾ ಕಾವ್ಯದ ದಿಟ್ಟ ಹಾಗೂ ಪರಿಪಕ್ವ ಧ್ವನಿಯಾಗಿ ಗುರುತಿಸಿಕೊಂಡಿದ್ದರು.
ಮೈಸೂರಿನಲ್ಲಿ 1954ರ ಏಪ್ರಿಲ್ 5ರಂದು ಜನಿಸಿದ ಸ. ಉಷಾ ಅವರು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕನ್ನಡ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಅವರು, ಬೋಧನೆಯ ಜೊತೆಗೆ ಸಾಹಿತ್ಯ ಸೃಜನಶೀಲತೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಕವಿತೆಗಳನ್ನು ಬರೆಯಲು ಆರಂಭಿಸಿದ್ದರು.
ಅವರ ಮೊದಲ ಕವನ ಸಂಕಲನ ತೊಗಲುಗೊಂಬೆಯ ಆತ್ಮಕಥೆ ಕನ್ನಡ ಕಾವ್ಯಲೋಕದಲ್ಲಿ ಗಮನ ಸೆಳೆದ ಕೃತಿಯಾಗಿದೆ. ನಂತರ ಈ ನೆಲದ ಹಾಡು, ಹವಳ ಹಾರಿದ ಹೊತ್ತು, ಕಸೂತಿ ಮೊದಲಾದ ಕವನ ಸಂಕಲನಗಳ ಮೂಲಕ ತಮ್ಮದೇ ಆದ ಕಾವ್ಯಲೋಕವನ್ನು ಕಟ್ಟಿಕೊಂಡರು. ವೈದೇಹಿ ಅವರ ಸಾಹಿತ್ಯದ ಕುರಿತು ವಿಮರ್ಶಾ ಬರಹಗಳನ್ನೂ ರಚಿಸಿದ್ದರು.
ಅವರ ಕವಿತೆಗಳಲ್ಲಿ ಹೆಣ್ಣಿನ ಅಂತರಂಗ, ಸಾಮಾಜಿಕ ಅಸಮಾನತೆ, ಶೋಷಣೆ, ಮಾನವೀಯ ಸಂಬಂಧಗಳು ಹಾಗೂ ಬದುಕಿನ ಸೂಕ್ಷ್ಮ ಸಂವೇದನೆಗಳು ಅಭಿವ್ಯಕ್ತಿಗೊಂಡಿವೆ. ಅನುಭವ, ಕಲ್ಪನೆ ಮತ್ತು ವೈಚಾರಿಕತೆಯ ಸಮನ್ವಯ ಅವರ ಕಾವ್ಯದ ಪ್ರಮುಖ ಲಕ್ಷಣವಾಗಿತ್ತು. ಮಹಿಳೆಯರ ಬದುಕಿನ ತಲ್ಲಣಗಳನ್ನು ಕೇವಲ ಭಾವನಾತ್ಮಕವಾಗಿ ಕಟ್ಟಿಕೊಡದೆ, ಸಾಮಾಜಿಕ ಪ್ರಜ್ಞೆಯ ನೆಲೆಯಲ್ಲಿ ವಿಶ್ಲೇಷಿಸುವ ಮೂಲಕ ತಮ್ಮ ಕಾವ್ಯಕ್ಕೆ ವಿಭಿನ್ನ ಆಯಾಮ ನೀಡಿದ್ದರು. ಅವರ ಕವಿತೆಗಳು ಇಂಗ್ಲಿಷ್, ಹಿಂದಿ, ಬೆಂಗಾಲಿ ಹಾಗೂ ಮಲಯಾಳಂ ಭಾಷೆಗಳಿಗೂ ಅನುವಾದಗೊಂಡಿವೆ.
ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಅವರಿಗೆ ವರ್ಧಮಾನ ಉದಯೋನ್ಮುಖ ಲೇಖಕ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ 2017ನೇ ಸಾಲಿನ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿದ್ದವು.
ಕವಯತ್ರಿಯಾಗಿ, ವಿಮರ್ಶಕಿಯಾಗಿ, ಅಧ್ಯಾಪಕಿಯಾಗಿ ಹಲವು ತಲೆಮಾರುಗಳ ಸಾಹಿತ್ಯಾಸಕ್ತರಿಗೆ ಪ್ರೇರಣೆಯಾಗಿದ್ದ ಸ. ಉಷಾ ಅವರ ಅಗಲಿಕೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾಹಿತ್ಯ ಕೃತಿಗಳು ಹಾಗೂ ವೈಚಾರಿಕ ಬರಹಗಳು ಕನ್ನಡ ಓದುಗರ ನಡುವೆ ಸದಾ ಜೀವಂತವಾಗಿರಲಿವೆ.
ಸಾಹಿತ್ಯದ ಮೂಲಕ ಬದುಕಿನ ನೋವು, ನಲಿವು ಮತ್ತು ಸಂಘರ್ಷಗಳಿಗೆ ಧ್ವನಿಯಾದ ಸ. ಉಷಾ ಅವರ ನೆನಪು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoನೀತಿ ಸಂಹಿತೆ ಉಲ್ಲಘನೆ, ಬೋಧನೆ ಶೂನ್ಯ ; ಚಳ್ಳಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಲೇಪಾಕ್ಷ ವಿರುದ್ಧ ದೂರು
-
ದಿನದ ಸುದ್ದಿ5 days agoಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಕಲಿ ಬಿಲ್ಲುಗಳ ಹಾವಳಿ | ಕೆ.ಟಿ.ಪಿ.ಪಿ ನಿಯಮ ಉಲ್ಲಂಘನೆ ; ಜಂಟಿ ನಿರ್ದೇಶಕ ಸೇರಿ 4 ಜನ ಪ್ರಾಂಶುಪಾಲರ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoವಂಚನೆ | ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯತ್ವದಿಂದ ಎಸ್.ಸುರೇಶ್ ವಜಾ
-
ದಿನದ ಸುದ್ದಿ5 days agoಮಂಗಳೂರು | ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಕೆ.ಆರ್ ಕವಿತಾ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಚನ್ನಗಿರಿ | ಕೊರಟಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ | ಪಿ.ಡಿ.ಓ ಶಿವಕುಮಾರ, ಇ.ಒ ಪ್ರಕಾಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoದಾವಣಗೆರೆ | ಸ್ಮಾರ್ಟ್ ಟಿ.ವಿ ಖರೀದಿಯಲ್ಲಿ ಅವ್ಯವಹಾರ ; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಿ.ಡಿ ರಾಜನಾಯ್ಕ ಸೇರಿ 5 ಜನ ಸಿ.ಡಿ.ಪಿ.ಒ ಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoರಕ್ತದಾನದಿಂದ ಜೀವ ಉಳಿಸಿ, ಶ್ರವಣ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ : ಯೋಗೀಶ್ ಸಹ್ಯಾದ್ರಿ
-
ದಿನದ ಸುದ್ದಿ2 days agoವಂಚನೆ | ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯತ್ವದಿಂದ ಎಸ್.ಸುರೇಶ್ ವಜಾ

