ದಿನದ ಸುದ್ದಿ
ದಾವಣಗೆರೆ | ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕೋವಿಡ್ ಲಸಿಕಾ ಜಾಗೃತಿ ಅಭಿಯಾನ
ಸುದ್ದಿದಿನ,ದಾವಣಗೆರೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಮಹಾನಗರಪಾಲಿಕೆ ಸಹಯೋಗದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು, ಮಾಸ್ಕ್ ಧರಿಸುವುದು ಹಾಗೂ ಕೋವಿಡ್ 2ನೇ ಅಲೆ ತಡೆಯುವ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದಲ್ಲಿ ಕೋವಿಡ್ ಲಸಿಕಾ ಅಭಿಯಾನವನ್ನು ಶುಕ್ರವಾರ ನಗರದ ವಿವಿಧೆಡೆ ಹಮ್ಮಿಕೊಳ್ಳಲಾಯಿತು.
ಭಾಷಾನಗರ, ಬೀಡಿ ಲೇಔಟ್, ಆಜಾದ್‍ನಗರ, ಮೆಹಬೂಬ್ ನಗರ, ಶಿವ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ತಹಶೀಲ್ದಾರ್ ಗಿರೀಶ್ ಸೇರಿದಂತೆ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಕೋವಿಡ್ ಲಸಿಕೆ, ಮಾಸ್ಕ್, ಸಾಮಾಜಿಕ ಅಂತರದ ಕುರಿತು ಅರಿವು ಮೂಡಿಸಿದರು.
ಈ ವೇಳೆ ಆಶಾ ಕಾರ್ಯಕರ್ತೆಯರು ‘ಜನಸಂದಣಿ ಪ್ರದೇಶದಿಂದ ದೂರವಿರಿ’, ‘ನಿಮ್ಮ ಕಣ್ಣು, ಮೂಗು, ಬಾಯಿಗಳನ್ನು ಮುಟ್ಟಿಕೊಳ್ಳಬೇಡಿ’, ‘1977 ಕ್ಕೆ ಮೊದಲು ಹುಟ್ಟಿದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು’, ‘ಕೈಗಳನ್ನು ನೈರ್ಮಲ್ಯದೊಂದಿಗೆ ಕಾಪಾಡಿಕೊಳ್ಳಿ’ ಎಂಬಂತಹ ಘೋಷಣೆಗಳೊಂದಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತ ಮಾಸ್ಕ್ ವಿತರಿಸಿದರು.
ಜಾಥಾ ಮುಗಿದ ಬಳಿಕ ಆಜಾದ್‍ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕಳೆದ ವರ್ಷ ಹಳೆ ದಾವಣಗೆರೆ ಕೊರೋನದಂತಹ ಗಂಡಾಂತರ ಎದುರಿಸಿ, ಅದರಿಂದ ಪಾರಾಗಿದೆ ಎಂಬುದು ನಮಗೆಲ್ಲ ತಿಳಿದ ವಿಚಾರ. ಈ ದೃಷ್ಟಿಯಿಂದ ನಾವು ಈ ಭಾಗದಲ್ಲಿ ಹೆಚ್ಚಿನ ಆದ್ಯತೆ ನೀಡಿ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಲಸಿಕೆ ಹಾಕಿಸಿಕೊಳ್ಳುವುದು ಹೀಗೆ ಕೋವಿಡ್-19 ಕುರಿತು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದೇವೆ ಎಂದರು.
ಇದನ್ನೂ ಓದಿ |ಸಚಿವ ಲಕ್ಷ್ಮಣ ಸವದಿ ತವರು ಜಿಲ್ಲೆಯಲ್ಲೇ ಸಾರಿಗೆ ನೌಕರ ನೇಣಿಗೆ ಶರಣು..!
ಈಗಾಗಲೇ ಜಿಲ್ಲಾದ್ಯಂತ 1 ಲಕ್ಷದ 22 ಸಾವಿರ ಜನರಿಗೆ ಲಸಿಕೆ ಹಾಕಿಸಿದ್ದು, 45 ವರ್ಷದ ಮೇಲ್ಪಟ್ಟ 93 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಬೇಕು. ಆದ ಕಾರಣ ಈ ಭಾಗದ ಸ್ಥಳೀಯ ಕಾರ್ಪೋರೇಟರ್, ಮುಖಂಡರ ಸಮ್ಮುಖದಲ್ಲಿ ಲಸಿಕಾ ಅಭಿಯಾನವನ್ನು ಏರ್ಪಡಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ.
ಸಾರ್ವಜನಿಕರು ಲಸಿಕಾ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ತಮ್ಮನ್ನ ತಾವು ಕೊರೋನಾದಿಂದ ಸಂಭವಿಸುವ ಮರಣದಿಂದ ರಕ್ಷಿಸಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಡಿಹೆಚ್‍ಒ ಡಾ.ನಾಗರಾಜ್ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಡಿ ಈಗಾಗಲೇ 115 ಉಪಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ನೀಡಲಾಗುತ್ತಿದ್ದು, ಪ್ರತಿ ಒಂದು ಉಪಕೇಂದ್ರಕ್ಕೆ 50 ಜನರನ್ನು ಗುರಿ ಮಾಡಿ ಲಸಿಕೆ ನೀಡಲಾಗುತ್ತಿದೆ. ಹಾಗೂ ನಗರದಲ್ಲಿ ಒಂದು ದಿನಕ್ಕೆ 10 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, 6 ಸಾವಿರ ಜನರನ್ನು ತಲುಪುತ್ತಿದ್ದೇವೆ. ಇಲ್ಲಿಯವರೆಗೂ ಒಟ್ಟು 93 ಸಾವಿರ ಜನರಿಗೆ ಕೋವಿಡ್ ವ್ಯಾಕ್ಸಿನೇಷನ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಿಸಲು ಎಲ್ಲಾ ಇಲಾಖೆಯ ಪ್ರತಿನಿಧಿಗಳು ಸರ್ವೆ ನಡೆಸುವ ಮೂಲಕ ಶ್ರಮವಹಿಸುತ್ತಿದ್ದು, ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್.ಎಲ್.ಡಿ, ಆರ್.ಸಿ.ಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಡಿಎಲ್‍ಒ ಡಾ.ಮುರುಳೀಧರ್, ಡಿಎಫ್‍ಒ ಡಾ.ರೇಣುಕಾರಾಧ್ಯ, ಡಿಎಂಒ ಡಾ.ನಟರಾಜ್, ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ್ ಬಾರ್ಕಿ, ಡಾ.ಮಂಜುಳ, ಡಾ.ವೇದಮೂರ್ತಿ, ಡಾ.ಸುನಿತ, ಡಾ.ವೆಂಕಟೇಶ್, ಡಾ.ಉಮಾಪತಿ ಸೇರಿದಂತೆ ಇತರೆ ಎಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು
ಸುದ್ದಿದಿನ,ರಾಯಚೂರು: ಕಟ್ಟಡದ ಮೇಲ್ಛಾವಣಿಯ ಸಜ್ಜಾ ಏಕಾಏಕಿ ಕುಸಿದು ಬಿದ್ದು ಮೂವರು ಯುವಕರು ಮೃತಪಟ್ಟ ದುರ್ಘಟನೆ ಭಾನುವಾರ ಜಿಲ್ಲೆಯ ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಸಂಭವಿಸಿದೆ.
ಮೃತರನ್ನು ದೇವದುರ್ಗ ತಾಲೂಕಿನ ಸಮುದ್ರ ಗ್ರಾಮದ ರವಿಚಂದ್ರ (35), ಕ್ಯಾದಿಗೆರಾ ಗ್ರಾಮದ ನಾಗರಾಜ್ (30) ಹಾಗೂ ಕೊತ್ತಿಗುಡ್ಡದ ಅರ್ಜುನ್ (21) ಎಂದು ಗುರುತಿಸಲಾಗಿದೆ.
ಕಟ್ಟಡದ ಅವಶೇಷಗಳಡಿ ಸಿಲುಕಿ ರವಿಚಂದ್ರ ಹಾಗೂ ನಾಗರಾಜ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅರ್ಜುನ್ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಯುವಕರು ತಾವೇ ನಿರ್ಮಿಸಿದ್ದ ‘ಅಂತ್ಯವಾಯ್ತು’ ಎಂಬ ಕಿರುಚಿತ್ರದ ಪೋಸ್ಟರ್ ಅಂಟಿಸಲು ಕಟ್ಟಡದ ಬಳಿ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.
ಕಟ್ಟಡದ ಮೇಲ್ಛಾವಣಿಯ ಒಂದು ಭಾಗವು, ಅದಕ್ಕೆ ಜೋಡಣೆಯಾಗಿದ್ದ ಕಬ್ಬಿಣದ ಮೆಟ್ಟಿಲುಗಳ ಸಹಿತ ಕುಸಿದು ಬಿದ್ದಿದೆ. ಘಟನೆಯಲ್ಲಿ ಉಮೇಶ್, ಪ್ರಭು ಹಾಗೂ ಅಭಿಷೇಕ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ21 hours agoನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
-
ದಿನದ ಸುದ್ದಿ2 days agoಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್
-
ದಿನದ ಸುದ್ದಿ18 hours agoಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
ದಿನದ ಸುದ್ದಿ1 day agoದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು

