ದಿನದ ಸುದ್ದಿ
ದಾವಣಗೆರೆ | ಜಿಲ್ಲಾ ಉಸ್ತುವಾರಿ ಸಚಿವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ : ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಜಾರಿಗೆ ಸಚಿವರ ಸೂಚನೆ
ಸುದ್ದಿದಿನ,ದಾವಣಗೆರೆ : ಸರ್ಕಾರ ಹೊರಡಿಸಿರುವ ಕೋವಿಡ್ ನಿಯಂತ್ರಣದ ಹೊಸ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಜೊತೆಗೆ ಕೋವಿಡ್ ಔಷಧಿಗಳು, ಆಕ್ಸಿಜನ್ ಮತ್ತು ಲಸಿಕೆ ಸಮರ್ಪಕ ನಿರ್ವಹಣೆಯೊಂದಿಗೆ ರೈತರು, ಕೈಗಾರಿಕೆಗಳು ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕೆಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಗಳೊಂದಿಗೆ ಸಭೆ ನಡೆಸಿ, ಕೋವಿಡ್ ನಿಯಂತ್ರಣದ ಹೊಸ ಮಾರ್ಗಸೂಚಿಗಳು ಮತ್ತು ದಾವಣಗೆರೆ ನಗರ ಹಾಗೂ ತಾಲ್ಲೂಕುಗಳಲ್ಲಿನ ಕೋವಿಡ್ ಹಿನ್ನೆಲೆಯ ವಾಸ್ತವಿಕ ಸ್ಥಿತಿಗತಿಗಳ ಬಗ್ಗೆ ಸವಿವರವಾಗಿ ಡಿಸಿ, ಎಸ್‍ಪಿ, ಡಿಹೆಚ್‍ಓ, ತಾಲ್ಲೂಕುಗಳ ತಹಶೀಲ್ದಾರರು ಮತ್ತು ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಜಿಲ್ಲೆಯಲ್ಲಿ ಕೋವಿಡ್ ಲಸಿಕೆ, ರೆಮಿಡಿಸಿವರ್ ಸೇರಿದಂತೆ ಇತರೆ ಔಷಧಿಗಳು ಮತ್ತು ಆಕ್ಸಿಜನ್, ಬೆಡ್ ಇನ್ನಾವುದೇ ರೀತಿಯ ಕೊರತೆಗಳು ಕಂಡುಬಂದಲ್ಲಿ ತಕ್ಷಣ ನನ್ನ ಗಮನಕ್ಕೆ ತರಬೇಕು. ತಾವು ಮುಖ್ಯಮಂತ್ರಿಗಳು, ಆರೋಗ್ಯ ಮಂತ್ರಿಯವರೊಂದಿಗೆ ಪ್ರತಿ ದಿನದ ವರದಿ ನೀಡುತ್ತಿದ್ದು, ಈ ಬಗ್ಗೆಯೂ ಸಮಾಲೋಚಿಸಿ ಶೀಘ್ರದಲ್ಲೇ ಸಮರ್ಪಕ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಇದನ್ನೂ ಓದಿ | ದಾವಣಗೆರೆ | ಶವ ಸಾಗಿಸಲು ಉಚಿತ ವಾಹನಗಳ ವ್ಯವಸ್ಥೆ ; ಬೆಡ್ ಮತ್ತು ಆಕ್ಸಿಜನ್ ವಿವರ : ಜಿಲ್ಲಾಧಿಕಾರಿ
ಜಿಲ್ಲೆಯ ಹೊರಭಾಗದಿಂದ ಬಂದವರಿಗೆ ಕೋವಿಡ್ ಲಕ್ಷಣವಿದ್ದಲ್ಲಿ ತಕ್ಷಣ ಪರೀಕ್ಷೆ ಮಾಡಿ ಫಲಿತಾಂಶ ಬರುವವರೆಗೆ ಅವರನ್ನು ಹೋಂ ಕ್ವಾರಂಟೈನ್‍ನಲ್ಲಿ ಇರುವಂತೆ ನೋಡಿಕೊಳ್ಳಬೇಕಿರುವುದು ಆರೋಗ್ಯ ಇಲಾಖೆ ಜವಾಬ್ದಾರಿಯಾಗಿದೆ. ಹೊಸ ಮಾರ್ಗಸೂಚಿಗಳ ಜಾರಿಗೆ ಪೊಲೀಸ್ ಇಲಾಖೆಗೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ ಗೃಹರಕ್ಷಕದಳ ಸಿಬ್ಬಂದಿಗಳ ಸೇವೆಯನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದ್ದು ಎಸ್‍ಪಿ ಯವರು ಇವರನ್ನು ಬಳಸಿಕೊಂಡು ಕಠಿಣ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಂಬುಲೆನ್ಸ್ ಇರುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರತಿಕ್ರಿಯಿಸಿ ಕೋವಿಡ್ ರೋಗಿಗಳಿಗೆ ರೆಮಿಡಿಸಿವರ್ ಒಂದೇ ಪರಿಣಾಮಕಾರಿ ಚಿಕಿತ್ಸೆ ಅಲ್ಲ. ಇತರೇ ಲಸಿಕೆಗಳು ಮತ್ತು ಆಂಟಿಬಯಾಟಿಕ್‍ಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಇಂಡೆಂಟ್ ಹಾಕಲಾಗಿದೆ. ಆ ಔಷಧಿಗಳನ್ನು ಜಿಲ್ಲಾಸ್ಪತ್ರೆಗೆ ಶೀಘ್ರವಾಗಿ ಸರಬರಾಜು ಮಾಡಲು ಕ್ರಮ ವಹಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಹಾಗೂ ಜಿಲ್ಲೆಯಲ್ಲಿ ಜನರು ಸ್ವಯಂಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಪಡೆಯಲು ಬರುತ್ತಿದ್ದು, ಪ್ರಸ್ತುತ ದಿನಕ್ಕೆ 13 ಸಾವಿರ ಜನರಿಗೆ ನೀಡುವ ಗುರಿ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ 20 ಸಾವಿರದವರೆಗೆ ಲಸಿಕೆ ನೀಡಲು ಅಗತ್ಯವಾದ ಲಸಿಕೆಗಳ ಸರಬರಾಜು ಮಾಡಬೇಕೆಂದು ಸಚಿವರಲ್ಲಿ ಕೋರಿದರು.
ಡಿಹೆಚ್‍ಓ ಡಾ.ನಾಗರಾಜ ಮಾತನಾಡಿ, 45 ವರ್ಷ ಮೇಲ್ಪಟ್ಟವರಿಗೆ ಇಲ್ಲಿಯವರೆಗೆ 1,55,204 ಜನರಿಗೆ ಲಸಿಕೆ ನೀಡಲಾಗಿದೆ. 1,86,667 ಆರೋಗ್ಯ ಮತ್ತು ಫ್ರಂಟ್‍ಲೈನ್ ಉದ್ಯೋಗಿಗಳಿಗೆ ಲಸಿಕೆ ನೀಡಲಾಗಿದೆ. ಇಂದಿಗೆ ಸಾಕಾಗುವಷ್ಟು ರೆಮಿಡಿಸಿವರ್ ಲಸಿಕೆ ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿದ್ದು, ಇಂದು ಎರಡು ಕಂಪೆನಿಗಳಿಂದ ರೆಮಿಡಿಸಿವರ್ ಲಸಿಕೆ ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆಯಾಗಲಿದೆ ಎಂದರು.
ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಜಯಪ್ರಕಾಶ್ ಮಾತನಾಡಿ, ಸಿ.ಜಿ ಆಸ್ಪತ್ರೆಯಲ್ಲಿ ಒಟ್ಟು 930 ಬೆಡ್ ಸಾಮಥ್ರ್ಯ ಇದ್ದು, ಇದರಲ್ಲಿ 300 ಬೆಡ್‍ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿರಿಸಿದ್ದು, ಈ ಪೈಕಿ 30 ಆಕ್ಸಿಜನ್ ಬೆಡ್‍ಗಳಿವೆ. ಪ್ರಸ್ತುತ ಆಕ್ಸಿಜನ್‍ಗೆ ಕೊರತೆ ಇಲ್ಲ. 270 ಆಕ್ಸಿಜನ್ ಸಿಲಿಂಡರ್‍ಗಳು ಮತ್ತು 80 ವಯಲ್ ರೆಮಿಡಿಸಿವರ್ ಲಭ್ಯತೆ ಇದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರ ಹನುಮಂತರಾಯ ಮಾತನಾಡಿ, ಜಿಲ್ಲೆಯಲ್ಲಿ ಕೊವಿಡ್ ಹೊಸ ಮಾರ್ಗಸೂಚಿಗಳನ್ನು ಪಾಲಿಸಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಕಳೆದ ಒಂದು ವಾರದಲ್ಲಿ 2335 ಮಾಸ್ಕ್ ಪ್ರಕರಣ. ಲಾಕ್‍ಡೌನ್ ಉಲ್ಲಂಘನೆಯ 15 ಪ್ರಕರಣವನ್ನು ಎಪಿಡೆಮಿಕ್ ಕಾಯ್ದೆ ಅಡಿ ದಾಖಲಿಸಲಾಗಿದೆ. ಇದರಲ್ಲಿ ರೆಮಿಡಿಸಿವರ್ ಲಸಿಕೆ ಅಕ್ರಮ ಸಂಗ್ರಹ ಮತ್ತು ಮಾರಾಟದ ಕುರಿತು 02 ಪ್ರಕರಣ ದಾಖಲಾಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಚಿವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗದಂತೆ ಸ್ಥಳೀಯವಾಗಿ ಕ್ರಮ ಜರುಗಿಸಬೇಕು. ಅವಶ್ಯಕತೆ ಇರುವವರಿಗೆ ಗ್ರೀನ್ ಕಾರ್ಡ್ ನೀಡಬೇಕು. ತಾಲ್ಲೂಕುಗಳಲ್ಲಿ ನೋಡಲ್ ಅಧಿಕಾರಿಗಳಾಗಿರುವ ತಹಶೀಲ್ದಾರರು ತಾಲ್ಲೂಕಿನಾದ್ಯಂತ ಸಂಚರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.
ಹಾಗೂ ಜಿಲ್ಲೆಯ ಪ್ರವೇಶ ಮತ್ತು ಟೋಲ್, ಹೊರಹೋಗುವ ದಾರಿಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸುವಂತೆ ಹಿಂದಿನ ಸಭೆಯಲ್ಲಿ ತಿಳಿಸಿದ್ದು ಈ ಬಗ್ಗೆ ಕೇಳಿದಾಗ ಎಸ್‍ಪಿ ಯವರು, ಹೆಬ್ಬಾಳ ಟೋಲ್ ಮತ್ತು ದಾವಣಗೆರೆ ಪ್ರವೇಶ, ನ್ಯಾಮತಿ ಹೊನ್ನಾಳಿಯಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಿ ಕ್ರಮ ವಹಿಸಲಾಗುತ್ತಿದೆ ಎಂದರು.
ದಾವಣಗೆರೆ, ಹೊನ್ನಾಳಿ, ಚನ್ನಗಿರಿ, ಹರಿಹರ, ಜಗಳೂರು ತಾಲ್ಲೂಕುಗಳ ತಹಶೀಲ್ದಾರರೊಂದಿಗೆ ಸಚಿವರು ಮಾತನಾಡಿ ತಾಲ್ಲೂಕುಗಳಲ್ಲಿ ಕೋವಿಡ್ ವಸ್ತುಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡು ತಾಲ್ಲೂಕುಗಳಲ್ಲಿ ರೈತರ ಚಟುವಟಿಕೆ ಮತ್ತು ಹರಿಹರದಂತಹ ತಾಲ್ಲೂಕಿನಲ್ಲಿ ಕೈಗಾರಿಕೆ ಚಟುವಟಿಕೆ ಇತರೆ ಕಟ್ಟಡ ಕಾಮಗಾರಿಗಳಿಗೆ ತೊಂದರೆ ಆಗದಂತೆ ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು.
ಜೊತೆಗೆ ತಾಲ್ಲೂಕು ಟಾಸ್ಕ್‍ಫೋರ್ಸ್, ಗ್ರಾ.ಪಂ ಹಾಗೂ ಬೂತ್ ಮಟ್ಟದಲ್ಲಿ ಟಾಸ್ಕ್‍ಫೋರ್ಸ್ ಸಮಿತಿಗಳು ಸಕ್ರಿಯವಾಗಿ ಕೋವಿಡ್ ನಿರ್ವಹಣೆಯಲ್ಲಿ ಪಾಲ್ಗೊಳ್ಳಬೇಕು. ಹಾಗೂ ಪಿಡಿಓ, ಆಶಾ, ಅಂಗನವಾಡಿ ಸೇರಿದಂತೆ ಹಿಂದೆ ಸಕ್ರಿಯವಾಗಿದ್ದ ಎಲ್ಲ ಸಿಬ್ಬಂದಿಗಳನ್ನೊಳಗೊಂಡು ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ನಗರವನ್ನು ಮೂರು ವಲಯಗಳನ್ನಾಗಿ ವಿಂಗಡಿಸಿ ಮೂರು ತಂಡಗಳನ್ನು ರಚಿಸಿ ಕೋವಿಡ್ ನಿಯಮ ಉಲ್ಲಂಘನೆ ಬಗ್ಗೆ ಕ್ರಮ ವಹಿಸಲಾಗುತ್ತಿದೆ. 45 ವಾರ್ಡುಗಳಲ್ಲಿ ತಳ್ಳುಗಾಡಿಗಳ ಮೂಲಕ ತರಕಾರಿ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದುವರೆಗೆ ನಿಯಮ ಉಲ್ಲಂಘಿಸಿದ ಬಟ್ಟೆ ಸೇರಿದಂತೆ ಇತರೆ ಅಂಗಡಿಗಳಿಗೆ ರೂ.1,84,800 ದಂಡ ವಿಧಿಸಲಾಗಿದ್ದು, ಮಾಸ್ಕ್ ಧರಿಸದೇ ಇರುವವರಿಂದ ರೂ.67,350 ದಂಡ ಸಂಗ್ರಹಿಸಲಾಗಿದೆ ಎಂದರು.
ಸಚಿವರು ಮಾತನಾಡಿ, ಇದೊಂದು ಸಂದಿಗ್ಧ ಪರಿಸ್ಥಿತಿಯಾಗಿದ್ದು, ಅಧಿಕಾರಿಗಳು ಯಾವುದೇ ಮುಲಾಜಿಗೆ ಗುರಿಯಾಗದೇ ಎಚ್ಚರಿಕೆಯಿಂದ ಕೋವಿಡ್ ನಿರ್ವಹಣೆ ಕೆಲಸ ಮಾಡಬೇಕು. ಹಾಗೂ ರೋಗಿಗಳು, ಮತ್ತಾರಿಂದಲೂ ದೂರುಗಳು ಬಾರದಂತೆ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿಕೊಂಡು ಹೋಗಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಎಸ್‍ಎಲ್‍ಓಗಳಾದ ರೇಷ್ಮಾ ಹಾನಗಲ್, ಸರೋಜ, ತಹಶೀಲ್ದಾರ್ ಗಿರೀಶ್, ಆರ್‍ಸಿಹೆಚ್‍ಓ ಡಾ.ಮೀನಾಕ್ಷಿ, ಡಾ. ನಟರಾಜ್, ಡಾ.ಗಂಗಾಧರ್, ಡಾ.ರೇಣುಕಾರಾಧ್ಯ, ಡಾ.ಯತೀಶ್, ಟಿಹೆಚ್‍ಓ ಡಾ.ವೆಂಕಟೇಶ್, ಇತರೆ ಅಧಿಕಾರಿಗಳು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸ್ವಾತಂತ್ರ್ಯವೆಂದರೆ ಬರಿ ಹಕ್ಕಲ್ಲ ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಕೂಡ : ಯೋಗೀಶ್ ಸಹ್ಯಾದ್ರಿ
ಸುದ್ದಿದಿನ,ಚಿತ್ರದುರ್ಗ : ಸ್ವಾತಂತ್ರ್ಯವೆಂದರೆ ಕೇವಲ ಹಕ್ಕುಗಳ ಅನುಭವವಲ್ಲ, ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಸಹ ಹೌದು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸದಾ ಸ್ಮರಿಸಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಶಿಸ್ತು, ಪ್ರಾಮಾಣಿಕತೆ ಮತ್ತು ದೇಶಪ್ರೇಮವನ್ನು ಬೆಳೆಸಿಕೊಂಡು ರಾಷ್ಟ್ರದ ಭವಿಷ್ಯದ ಉತ್ತಮ ನಾಗರಿಕರಾಗಬೇಕು ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಅಧ್ಯಕ್ಷರಾದ ರೊ. ಯೋಗೀಶ್ ಸಹ್ಯಾದ್ರಿ ತಿಳಿಸಿದರು.
ನಗರದ ರೋಟರಿ ವಿದ್ಯಾಲಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಬಳಿಕ ಮಾತನಾಡಿದ ಅವರು ಮಾತನಾಡಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿರುವುದು ಅನೇಕ ಮಹನೀಯರ ತ್ಯಾಗದ ಫಲ. ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅಸಂಖ್ಯಾತ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನು ಅರ್ಪಿಸಿದ್ದಾರೆ. ಅವರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಅವರು ಕಂಡ ಕನಸಿನ ಭಾರತವನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸದಾ ಸ್ಮರಿಸಿ, ಏಕತೆ, ಶಿಸ್ತು, ಶಿಕ್ಷಣ ಮತ್ತು ಸೇವೆಯ ಮೂಲಕ ಶ್ರೇಷ್ಠ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಅವರು ಕರೆ ನೀಡಿದರು. ಎಲ್ಲಾ ವಿದ್ಯಾರ್ಥಿಗಳು ದೇಶದ ಹೆಮ್ಮೆ ಮತ್ತು ಭವಿಷ್ಯದ ಆಶಾಕಿರಣಗಳಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೊ. PHF. PDG. ಮಧುಪ್ರಸಾದ್ ಕೆ. ಅವರು ವಹಿಸಿದ್ದರು. ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವುದು ಇಂದಿನ ಯುವಜನತೆಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ನಮಗೆ ಹಕ್ಕುಗಳನ್ನು ನೀಡಿದಂತೆ ಕರ್ತವ್ಯಗಳನ್ನೂ ನೀಡಿದೆ. ಸಂವಿಧಾನವನ್ನು ಗೌರವಿಸುವುದು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು, ಪರಿಸರವನ್ನು ಸಂರಕ್ಷಿಸುವುದು, ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು ಹಾಗೂ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ರೋಟರಿ ಟ್ರಸ್ಟ್ ನ ಖಜಾಂಚಿ ರೊ. ಸತ್ಯನಾರಾಯಣಾಚಾರ್,
ರೊ. ಜಿ.ಎ. ವಿಶ್ವನಾಥ್ ಬಾಬು, ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ಸದಸ್ಯರು, ಹಾಗೂ ರೊ. ಶಂಕರಪ್ಪ, ಆಡಳಿತಾಧಿಕಾರಿ, ರೋಟರಿ ವಿದ್ಯಾಲಯ, ಉಪಸ್ಥಿತರಿದ್ದು , ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿ, ದೇಶದ ಪ್ರಗತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಮ್ಮದೇ ಆದ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಭಾಷಣ ಮಾಡಲು ಅವಕಾಶ ನೀಡಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ರಾಷ್ಟ್ರದ ಅಭಿವೃದ್ಧಿಯ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಭಾಷಣಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ವಿದ್ಯಾರ್ಥಿಗಳ ಪೋಷಕರು ಕೂಡ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಉಮಾದೇವಿ ಹೆಚ್.ಎಂ. ಅವರು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಶಿಕ್ಷಕಿ ಜ್ಯೋತಿ ಆರ್. ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಹಿರಿಯ ಶಿಕ್ಷಕಿ ಗೌರಮ್ಮ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ರೋಟರಿ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನವಿಲೇಹಾಳು | 80ನೇ ಸ್ವಾತಂತ್ರ್ಯ ದಿನಾಚರಣೆ ; ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸಿಹಿ ಹಂಚಿ ಸಂಭ್ರಮ
ಸುದ್ದಿದಿನ,ದಾವಣಗೆರೆ: ಜಿಲ್ಲೆಯ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ, ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನವಿಲೇಹಾಳು ಗ್ರಾಮದಲ್ಲಿ ಸಿಹಿ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ದೇಶದ ಏಕತೆ, ಸಾಮರಸ್ಯ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಕುರಿತು ಸಂದೇಶ ನೀಡಲಾಯಿತು.
ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಜಾಫರ್ ಅವರು ಮಾತನಾಡಿ, ಸ್ವಾತಂತ್ರ್ಯವೆಂಬುದು ಕೇವಲ ಆಚರಣೆಗೆ ಸೀಮಿತವಾಗದೆ, ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ನ್ಯಾಯ ಹಾಗೂ ಅಭಿವೃದ್ಧಿಯ ಅವಕಾಶ ದೊರೆಯುವಂತಾಗಬೇಕು. ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯಗಳನ್ನು ಕೋರಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ
ಸುದ್ದಿದಿನ,ಚನ್ನಗಿರಿ: ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯು ಸೋಮೌಅರ ನವಿಲೇಹಾಳು ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿಯಾಗಿ ಗ್ರಾಮಸಭೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.
ಗ್ರಾಮಸಭೆ ಎಂಬುದು ಗ್ರಾಮಸ್ಥರ ಸಮಸ್ಯೆಗಳನ್ನು ನೇರವಾಗಿ ಚರ್ಚಿಸಿ, ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸುವ ಪ್ರಮುಖ ವೇದಿಕೆಯಾಗಿರುವುದರಿಂದ, ಗ್ರಾಮಸಭೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು PDO ಅವರಿಗೆ ಮನವಿ ಮಾಡಲಾಯಿತು.
ಅದರಂತೆ ಗ್ರಾಮಸಭೆಯ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ಟಾಂಟಾಂ/ಧ್ವನಿವರ್ಧಕದ ಮೂಲಕ ಗ್ರಾಮದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುವುದರ ಜೊತೆಗೆ, ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅರ್ಹ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸಭೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸುವಂತೆ ತಿಳಿಸಲಾಯಿತು.
ಗ್ರಾಮದಲ್ಲಿಯೇ ಉದ್ಯೋಗ ಸೃಷ್ಟಿಗೆ ಒತ್ತು
ಇದೇ ಸಂದರ್ಭದಲ್ಲಿ ಮನರೇಗಾ (MGNREGA) ಯೋಜನೆಯಡಿ ಗ್ರಾಮದ ಅರ್ಹ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವಂತೆ ಮನವಿ ಮಾಡಲಾಯಿತು.
ಗ್ರಾಮಸ್ಥರು ಉದ್ಯೋಗಕ್ಕಾಗಿ ಅನಿವಾರ್ಯವಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ, ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಿರುವ ಕೆಲಸಗಳನ್ನು ಸಮರ್ಪಕವಾಗಿ ಗುರುತಿಸಿ, ಅರ್ಹರಿಗೆ ನಿಯಮಾನುಸಾರ ಉದ್ಯೋಗ ಒದಗಿಸಬೇಕು ಎಂದು ತಿಳಿಸಲಾಯಿತು.
ಪ್ರಸ್ತುತ ಬತ್ತದ ನಾಟಿ ಕಾರ್ಯಕ್ಕೆ ಅಗತ್ಯವಿರುವ ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೃಷಿ ಕೆಲಸಗಳು ಲಭ್ಯವಿಲ್ಲದ ಅವಧಿಯಲ್ಲಿ ಗ್ರಾಮಸ್ಥರಿಗೆ ಮನರೇಗಾ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳ ಮೂಲಕ ಉದ್ಯೋಗ ಒದಗಿಸಿ, ಗ್ರಾಮದಲ್ಲಿಯೇ ಆದಾಯದ ಅವಕಾಶಗಳನ್ನು ಸೃಷ್ಟಿಸುವುದು ಅಗತ್ಯವಾಗಿದೆ ಎಂದು ಮನವಿ ಮಾಡಲಾಯಿತು.
ಗ್ರಾಮದಲ್ಲಿಯೇ ಉದ್ಯೋಗ ದೊರೆತರೆ ಗ್ರಾಮಸ್ಥರ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ, ಗುಳೆ ಹೋಗುವುದನ್ನು ತಡೆಯಲು ಹಾಗೂ ಗ್ರಾಮದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು PDO ಅವರ ಗಮನಕ್ಕೆ ತರಲಾಯಿತು.
ಇತರೆ ಗ್ರಾಮಾಭಿವೃದ್ಧಿ ವಿಚಾರಗಳ ಚರ್ಚೆ
ಇದರ ಜೊತೆಗೆ ನವಿಲೇಹಾಳ ಗ್ರಾಮದ ವಿವಿಧ ಅಭಿವೃದ್ಧಿ ಸಮಸ್ಯೆಗಳು, ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ಉದ್ಯೋಗಾವಕಾಶಗಳು, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು PDO ಅವರೊಂದಿಗೆ ಚರ್ಚಿಸಲಾಯಿತು.
ಗ್ರಾಮಸ್ಥರಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಮರ್ಪಕವಾಗಿ ತಲುಪುವಂತೆ ಪಾರದರ್ಶಕವಾಗಿ ಹಾಗೂ ನಿಯಮಾನುಸಾರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಲಾಯಿತು.
ಗ್ರಾಮಸಭೆಯಲ್ಲಿ ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆ, ಸ್ಥಳೀಯ ಉದ್ಯೋಗ ಸೃಷ್ಟಿ ಹಾಗೂ ಗ್ರಾಮಾಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ನವಿಲೇಹಾಳ ಗ್ರಾಮವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.
“ಗ್ರಾಮದ ಅಭಿವೃದ್ಧಿ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಗ್ರ ಗ್ರಾಮಾಭಿವೃದ್ಧಿ ಸಾಧ್ಯ.”
ಗ್ರಾಮದ ಜನರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ನವಿಲೇಹಾಳ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ (ರಿ.) ನಿರಂತರವಾಗಿ ಜನಪರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ಜಾಫರ್ ರವರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ
-
ದಿನದ ಸುದ್ದಿ19 hours agoನವಿಲೇಹಾಳು | 80ನೇ ಸ್ವಾತಂತ್ರ್ಯ ದಿನಾಚರಣೆ ; ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸಿಹಿ ಹಂಚಿ ಸಂಭ್ರಮ
-
ದಿನದ ಸುದ್ದಿ15 hours agoಸ್ವಾತಂತ್ರ್ಯವೆಂದರೆ ಬರಿ ಹಕ್ಕಲ್ಲ ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಕೂಡ : ಯೋಗೀಶ್ ಸಹ್ಯಾದ್ರಿ

