ದಿನದ ಸುದ್ದಿ
ಕಲ್ಪವೃಕ್ಷವೆಂದರೆ..!?
- ಕೆ.ಶ್ರೀಧರ್ (ಕೆ.ಸಿರಿ), ಯುವ ಸಾಹಿತಿಗಳು, ಚಾಮರಾಜನಗರ
ಕಲ್ಪವೃಕ್ಷವೆಂದರೆ ಬೇಡಿದ್ದನ್ನು ನೀಡುವ ಸ್ವರ್ಗ ಲೋಕದ ಮರ ಹೌದು ತೆಂಗಿನಮರವು ಕೂಡ ಮನುಷ್ಯನ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಉಪಯುಕ್ತವಾಗುವ ಮರ. ತೆಂಗಿನ ಮರದ ಜೀವ ಮತ್ತು ಜೀವನವೇ ಹಾಗೆ ಅದರ ಯಾವುದೇ ಒಂದೇ ಒಂದು ಭಾಗವು ಕೂಡ ಅನುಪಯುಕ್ತವಾದುದಲ್ಲ ಇಡೀ ಮರವೇ ಒಂದಲ್ಲ ಒಂದು ತರದಲ್ಲಿ ಮಾನವನ ಜೀವನಕ್ಕೆ ಬದುಕ ಸಾಗಿಸಲು ಸಹಾಯಕವಾಗುತ್ತದೆ.
ತೆಂಗಿನ ಮರ ಯಾವುದೇ ರೆಂಬೆ ಕೊಂಬೆಗಳನ್ನು ಹೊಂದಿರುವುದಿಲ್ಲ ಒಂದೇ ಕಾಂಡವು ಸುಮಾರು 20 ರಿಂದ 30 ಅಡಿಯವರೆಗೂ ಬೆಳೆದು ಗರಿ ಗರಿಯಾದ ಹಸಿರು ತೆಂಗಿನ ಗರಿಗಳನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ತೆಂಗಿನ ಮರದ ಸಿಂಗಾರದಲ್ಲಿ ಅಂದರೆ ಹೊಂಬಾಳೆಯಲ್ಲಿ ಗಂಡು ಹೂವು ಹಾಗೂ ಹೆಣ್ಣು ಹೂವುಗಳು ಇರುತ್ತವೆ ಹೆಣ್ಣು ಹೂವುಗಳು ಅರಳಿದ ನಂತರವೇ ಸಿಂಗಾರದಲ್ಲಿ ಫಲ ಇಡಲು ಆರಂಭವಾಗುತ್ತದೆ.
ಸುಮಾರು 70 ರಿಂದ 80 ವರ್ಷಗಳ ಕಾಲ ಜೀವಿಸುವ ತೆಂಗಿನ ಮರದಲ್ಲಿ ತಿಂಗಳಿಗೊಂದು ಹೊಸ ಗರಿಯನ್ನು ಬಿಡುತ್ತದೆ. ಈ ಗರಿಯ ಜೀವನ ಕಾಲ 30 ತಿಂಗಳು ಮಾತ್ರ ಆಮೇಲೆ ಮರದಿಂದ ಉದುರಿ ಬೀಳುತ್ತದೆ. ಒಂದು ಮರದಲ್ಲಿ 30 ತನಕ ಹೂವಿನ ಜೊಂಪೆ ಇರುತ್ತದೆ.ತಿಂಗಳಿಗೊಂದು ಹೂ ಗೊಂಚಲು ಬಿಡುತ್ತದೆ.ಒಂದು ಮರದಿಂದ ಒಂದು ಸಂವತ್ಸರ ಕಾಲದಲ್ಲಿ 30 ರಿಂದ 60 ಕಾಯಿಗಳು ಉತ್ಪತ್ತಿಯಾಗುತ್ತವೆ.
ಹೆಣ್ಣು ಹೂವು ಹುಟ್ಟಿದ ಮೇಲೆ ಕಾಯಿ ಆಗುವುದಕ್ಕೆ ಒಂದು ಸಂವತ್ಸರ ಕಾಲಬೇಕು. ಬಹುತೇಕವಾಗಿ ಕರ್ನಾಟಕ,ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಗೋವಾ ರಾಜ್ಯಗಳ ಕರಾವಳಿ ಪ್ರಾಂತ್ಯಗಳಲ್ಲಿ ಹೆಚ್ಚಾಗಿ ಸಾಗುವಳಿ ಮಾಡುತ್ತಾರೆ ತೆಂಗಿನ ಮರದ ಫಲಗಳಿಗಿಂತ ಆ ಮರದ ಗರಿಗಳು ಬಡತನದಲ್ಲಿರುವವರಿಗೆ ಸೂರು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ದುಡಿದು ತಿನ್ನುವ ವರ್ಗದವರು ಇಟ್ಟಿಗೆ, ಸಿಮೆಂಟು,ಕಬ್ಬಿಣ ಮತ್ತು ಗಾರೆ ಕೆಲಸದವರಿಗೆ ದುಡ್ಡು ಕೊಟ್ಟು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಇಂತಹ ಸಂದರ್ಭದಲ್ಲಿ ಈ ವರ್ಗದವರು ತೆಂಗಿನ ಗರಿಗಳ ಕೊಂಡು ತೆಂಗಿನ ಗರಿಯ ಗುಡಿಸಲನ್ನು ಕಟ್ಟಿಕೊಂಡು ಜೀವನ ಸಾಗಿಸುವುದನ್ನು ನಾವು ಇಂದಿಗೂ ನೋಡುತ್ತೇವೆ ಈ ಸಂಗತಿ ನೋಡಿದೆ ನಿಜಕ್ಕೂ ತೆಂಗಿನ ಮರ ಕಲ್ಪತರುವೇ ಸರಿ ಇನ್ನು ಉಳ್ಳವರು ತೆಂಗಿನ ಮರವನ್ನು ಕಡಿಸಿ ತೆಂಗಿನ ತೀರು/ಅಡ್ಡತೊಲೆಯಾಗಿ ಬಳಸಿ ಸುಂದರ ಗೃಹ ನಿರ್ಮಾಣ ಮಾಡಿಕೊಳ್ಳುವಲ್ಲಿ ತೆಂಗಿನ ಮರದ ಪಾತ್ರ ನಿಜಕ್ಕೂ ಶ್ರೇಷ್ಠ.
ತ್ರಿನೇತ್ರಫಲ ಬರೀ ಗೃಹ ನಿರ್ಮಾಣ ಮಾಡಿಕೊಳ್ಳುವಲ್ಲಿ ಅಷ್ಟೇ ಉಪಯುಕ್ತ ಅಲ್ಲ ಸಾಂಸ್ಕೃತಿಕ ಒಡೆತನದ ರಾಯಭಾರಿಯೂ ಹೌದು ಬಾಲ್ಯದಲ್ಲಿ ಮಕ್ಕಳ ಆಟಿಕೆಗೆ ಉಪಯುಕ್ತವಾಗುವ ದುಡ್ಡೇ ನೀಡದೆ ಮನರಂಜನೆ ನೀಡುವ ಸಾಧನವೂ ಹೌದು. ತೆಂಗಿನ ಕಾಯಿ ಮನುಷ್ಯ ಜೀವನದ ಹುಟ್ಟಿನಿಂದ ಮರಣದವರೆಗೂ ಸಹ ಪ್ರಮುಖ ಪಾತ್ರ ವಹಿಸುತ್ತವೆ.
ಯಾವುದೇ ಒಂದು ಪೂಜೆ ಪುನಸ್ಕಾರಗಳು ಯಶಸ್ವಿಯಾಗಬೇಕಾದರೆ ತೆಂಗಿನ ಕಾಯಿ ಇರಲೇಬೇಕು ಮದುವೆಯ ಹಂದರಗಾಯಿಯಾಗಿಯೂ ಮರಣದ ಈಡು ಗಾಯಿಯೂ ಆಗಿಯೂ ತೆಂಗಿನ ಕಾಯಿ ಅತ್ಯವಶ್ಯಕ. ಇನ್ನೂ ಒಣಗಿದ ತೆಂಗಿನ ಕಾಯಿಂದ ಪರಿಶುದ್ಧ ಕೊಬ್ಬರಿ ಎಣ್ಣೆ ದೊರೆತರೆ ಹಸಿ ತೆಂಗಿನ ಕಾಯಿಯಿಂದ ದೋಸೆಗೆ ಚಟ್ನಿ ಹಾಗೂ ಕೊಬ್ಬರಿ ಹೋಳಿಗೆಯಲ್ಲಿಯೂ ಸಹ ತೆಂಗಿನ ಕಾಯಿ ಬಳಕೆಯಾಗುತ್ತದೆ.
ಒಣ ಕೊಬ್ಬರಿಯು ಪೌಷ್ಟಿಕ ಆಹಾರವಾಗಿ ಉಪಯುಕ್ತವಾಗುವುದರ ಜೊತೆಗೆ ಹೆಣ್ಣಿಗೆ ಉಡಿಹಕ್ಕಿ ಹಾಕುವ ಪದ್ದತಿಯಲ್ಲಿ ಒಣಕೊಬ್ಬರಿ ಪ್ರಮುಖ ಪಾತ್ರ ವಹಿಸುತ್ತದೆ. ಬರೀ ತೆಂಗಿನ ಕಾಯಿಯಷ್ಟೇ ಅಲ್ಲ ತೆಂಗಿನ ಚಿಪ್ಪುನ್ನು ಕೂಡ ಗೃಹ ಪೀಠೋಪಕರಣಗಳಾಗಿಯೂ ಬಳಸಬಹುದು ಅಲ್ಲದೆಯೂ ತೆಂಗಿನ ಕಾಯಿ ಚಿಪ್ಪಿನ್ನು ಚೆನ್ನಾಗಿ ಬೇಯಿಸಿ ಮದರಂಗಿಯಾಗಿಯೂ ಬಳಸಬಹುದು.
ತೆಂಗಿನ ನಾರು ಸುಲಿದು ದಿನ ನಿತ್ಯ ಬಳಕೆಯ ಹಗ್ಗವಾಗಿಯೂ ಮನೆಯಲ್ಲಿ ಕಾಲ್ವಸ್ತ್ರವಾಗಿಯೂ ಬಳಸಬಹುದು ಉಳಿದಂತೆ ತೆಂಗಿನ ಸಿಪ್ಪೆಯನ್ನು ಅಡುಗೆ ಬೇಯಿಸಲು ಕಟ್ಪಿಗೆಯಾಗಿಯೂ ಉಪಯೋಗವಾಗುತ್ತದೆ. ತೆಂಗಿನ ಗರಿಗಳಿಂದ ಚಿಕ್ಕ ವಯಸ್ಸಿನಲ್ಲಿ ಊದಲು ಪೀಪಿ ಹಾಗು ಕನ್ನಡಕ,ಜಡೆ ಹೆಣೆಯುವುದು ಹಾಗೂ ತೆಂಗಿನ ಗರಿಯ ಕಡ್ಡಿಗಳಿಂದ ಕಸ ಗುಡಿಸಲು ಪೊರಕೆ ಮಾಡಿಕೊಳ್ಳುವುದು ತೆಂಗಿನ ಗರಿಗಳನ್ನು ಒಂದು ತೊಟ್ಟಿಯಲ್ಲಿ ಹಾಕಿ ನೀರು ಬಿಟ್ಟರೆ ಕೊಳೆತು ಚೆನ್ನಾಗಿ ಕೊಬ್ಬರವಾಗುತ್ತದೆ.
ಇದನ್ನೂ ಓದಿ | ಕರ್ನಾಟಕ | ಶುಕ್ರವಾರ 592 ಮಂದಿ ಕೊರೋನಾದಿಂದ ಸಾವು, 50ಸಾವಿರ ಹೊಸ ಪ್ರಕರಣಗಳು ದಾಖಲು
ಹೊಂಬಾಳೆಯಿಂದಲೂ ಕೆಲವರು ಅಂಗಳದ ಕಸ ಗುಡಿಸುತ್ತಾರೆ. ಇನ್ನೂ ವಿಶೇಷವೆಂದರೆ ತೆಂಗಿನ ಮರಗಳಲ್ಲಿಯೇ ಹೆಜ್ಜೇನುಗಳು ಆಶ್ರಯ ತಾಣಗಳಾಗಿ ಬಳಸುವುದು ಹೆಚ್ಚು ಗಿಣಿಗಳಂತೂ ತೆಂಗಿನ ಮರದಲ್ಲೊಂದು ಪೊಟರೆ ಕೊರೆದು ತಮ್ಮ ಗೂಡಾಡಗಿಸಿಕೊಂಡು ಸಂತಾನೋತ್ಪತ್ತಿ ಕಾರ್ಯ ಮಾಡುತ್ತವೆ. ಕೋತಿಗಳಂತೂ ಮರದಿಂದ ಮರಕ್ಕೆ ಹಾರುತ್ತಾ ತೆಂಗಿನ ತೋಟದಲ್ಲಿಯೇ ದಿನವೆಲ್ಲಾ ಕಳೆಯುತ್ತವೆ.
ನಿಮಗೆ ಅನಿಸಬಹುದು ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ ಇವನ್ಯಾಕೆ ಹೇಳುತ್ತಿದ್ದಾನೆಂದು, ಮೊನ್ನೆ ಮೊನ್ನೆಯಷ್ಟೇ ಚಾಮರಾಜನಗರದ ಕೋರ್ಟ್ ರೋಡಿನಿಂದ ಹೋಗುತ್ತಿರಬೇಕಾದರೆ ಮದ್ಯಾಹ್ನದ ಉರಿಬಿಸಿಲು ಹೊಟ್ಟೆಯಲ್ಲಿ ಒಂಚೂರು ಸಂಕಟವಾದ ಹಾಗೆ ಎನಿಸಿತು. ಸುಮ್ಮನೆ ಬೈಕಿನಲ್ಲಿ ಹೋಗುವಾಗ ಡಿವೈಎಸ್ಪಿ ಆಫೀಸಿನ ಪಕ್ಕದಲ್ಲಿಯೇ ಒಬ್ಬ ಎಳನೀರು ವ್ಯಾಪರಿಯೂ ಎಳನೀರು ಮಾರುತ್ತಿರುವುದನ್ನು ಕಂಡು ಒಂದೆಳ್ನೀರು ಕುಡಿಯುವ ಮನಸ್ಸಾಯಿತು.
ಹಾಗೆಯೇ ಬೈಕ್ ತಿರುಗಿಸಿಕೊಂಡು ಎಳ್ನೀರು ಕುಡಿಯಲು ಹೊರಟೆ ಸ್ವಲ್ಪ ವಯಸ್ಸಾದ ಮುದುಕಪ್ಪ ಒಂದು ಕೈಯಲ್ಲಿ ಎಳ್ನೀರು ಇನ್ನೊಂದು ಕೈಯಲ್ಲಿ ಹರಿತವಾದ ಮಚ್ಚನ್ನು ಹಿಡಿದು ಕೊಚ್ಚುತ್ತಿದ್ದರು ಒಂದಿಬ್ಬರು ಸ್ನೇಹಿತರು ಐದು ಎಳನೀರನ್ನು ಪಾರ್ಸೆಲ್ ಕೊಡುವಂತೆ ಹೇಳಿ ಈ ರೀತಿಯಾಗಿ ಮಾತಿಗಿಳಿದರು.
“ತಾತಪ್ಪ್ಯೋ ಐದೆಳ್ನೀರು ಕೊಡಿ”
“ಇಲ್ಲೆ ಕುಡ್ದರೋ ಮನಗ ಪಾರ್ಸೆಲ್ ಹೊಯ್ದರೋ?”
“ಎಲ್ಲಾ ಮನ್ಗೆಯಾ ಪಾರ್ಸೆಲ್ ಕಟ್ಟಿ”
“ಹೂಂ ಆಯ್ತೇಳಿ ” ಎಂದು ಒಂದು ತೆಂಗಿನ ಕಾಯಿ ಕೊಚ್ಚಲು ಮುಂದಾದರು.
“ತಾತ ಕೈ ಜೋಪಾನ ನಮ್ಗ ನೀವು ಕೊಚ್ಚದ್ ನೋಡಿದ್ರೆನೇ ಭಯವಾಯ್ತ್ ಆಮೇಗ ಕೈ ಗಿಯ್ಗೆ ಹಾಕಂಡರೀ” “ಯಾನು ಇಲ್ಲಾ ಕಣಾ ಐದಾ ಸಾಕ ಹ್ವೇಳಿ”?.”ಹೂಂ ಸಾಕು ಕೆಂಚಕಿರೋ ಕಾಯಿ ಕೊಚ್ಚರೀ”. “ಇದ್ಯಾಕ ಬೇರೆ ಯಾನಾಗಿದ್ದಾವು ಕಣೀ”! “ಕೆಂಚಗಿರೋವು ವಸಿ ಸಿಹಿ ಇರ್ತಾವೆ ಕಣ್ ತಾತ”,”ಸಿಹ್ಯೋ ಕಹ್ಯೋ (ಸಿಹಿಯೋ- ಕಹಿಯೋ) ಯಾವನಾರ ಒಳ್ಗ ನುಗ್ಗಿ ನೋಡಿದರಾ ಕಣೀ”? “ವ್ಹಾ…. ಇದ್ಸರಿ ಮತ್ತೆ ಕೆಂಚಗಿರೋವೆ ಕೆಚ್ಚಿ ”
ಎಂದು ತಾವೆ ಇನ್ನೆರಡು ತೆಂಗಿನ ಕಾಯಿಗಳನ್ನು ಆಯ್ಕೆ ಮಾಡಿಕೊಂಡು ಪಾರ್ಸೆಲ್ ಕೊಂಡು ಹೊರಟರು ನಾನು ಕೂಡ ಎರಡು ಎಳನೀರು ಕುಡಿದು ಸ್ವಲ್ಪ ಹೊತ್ತು ಅಲ್ಲಿಯೇ ನಿಂತು ನೆಮ್ಮದಿಯ ಉಸಿರು ಬಿಟ್ಟು ಹೊರಟೆ ಮನಸ್ಸು ಸ್ವಲ್ಪ ತಂಪಾಯಿತು.
ಹಾಗೆಯೇ ಬೈಕಿನಲ್ಲಿ ಹೋಗುತ್ತಿರುವಾಗ ಆ ತಾತ ಹೇಳಿದ ಮಾತು ನೆನಪಾಯಿತು.”ಸಿಹ್ಯೋ ಕಹ್ಯೋ (ಸಿಹಿಯೋ- ಕಹಿಯೋ) ಯಾವನಾರ ಒಳ್ಗ ನುಗ್ಗಿ ನೋಡಿದರಾ ಕಣೀ”? ಹೌದು ಈ ಮಾತು ಎಷ್ಟು ಸತ್ಯ ಅಲ್ಲವೇ ಎಳ್ನೀರು ಕೃತಕವಾಗಿ ತಯಾರಾಗುವಂತದ್ದಲ್ಲ ಮರದ ಮೇಲೆ ನೈಸರ್ಗಿಕವಾಗಿ ತಯಾರಾಗುವಂತದ್ದು ಅದರೊಳಗೆ ಸಿಹಿ ಕಹಿ ಎನ್ನುವುದು ಇರುವುದಿಲ್ಲ ಎಲ್ಲದು ಒಳ್ಳೆಯ ನೀರೆ.
ಆದರೆ ನಾವೇ ಅವುಗಳನ್ನು ಸಿಹಿ ಕಹಿ ಎಂದು ವಿಂಗಡಿಸಿಕೊಳ್ಳುತ್ತೇವೆ. ಇನ್ನೊಂದು ವಿಶೇಷವೆಂದರೆ ಎಳ್ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ನೂರಾರು ತಂಪು ಪಾನೀಯ ಕೊಕೊ ಕೋಲಾ,ಮಜಾ ,ಪೆಪ್ಸಿಗಳಿಗಿಂತ ಒಂದು ಎಳ್ನೀರು ಶ್ರೇಷ್ಠ. ಆಧುನಿಕತೆಯ ಫಲವಾಗಿ ನಾವು ನಿಸರ್ಗದತ್ತವಾಗಿ ತಯಾರಾದ ಎಳ್ನೀರಿನ ಬದಲಾಗಿ ಕೃತಕವಾಗಿ ರಾಸಾಯನಿಕ ವಸ್ತುಗಳಿಂದ ತಯಾರಾಗುವ ಪಾನೀಯಗಳಿಗೆ ಮೊರೆ ಹೋಗುವುದೇ ವಿಷಾದನೀಯ ಸಂಗತಿ.
ಇದನ್ನೂ ಓದಿ | ನಿಮ್ಮ ಮಗುವಿಗೆ ಅನುವಂಶಿಕ ದೋಷಗಳಿವೆಯೇ..,? ತಿಳಿಯುವುದು ಹೇಗೆ..?
ಹೀಗೆ ಈ ಎಳ್ನೀರು ನನ್ನ ಕಾಡಿತು ಆ ತಾತಪ್ಪನ ಅನುಭವದ ಮಾತು ಪ್ರಕೃತಿಯ ಮಹತ್ವ ಮತ್ತು ವಾಸ್ತವತೆಯನ್ನು ತಿಳಿಸಿತು. ಈ ತೆಂಗಿನ ಮರದ ಕುರಿತಾಗಿ ವರಕವಿ ದ.ರಾ ಬೇಂದ್ರೆಯವರು ತಮ್ಮ ಸಖಿಗೀತದಲ್ಲಿ ತೆಂಗಿನ ಮರದ ಕುರಿತಾಗಿ ಈ ರೀತಿಯಾಗಿ ಉಲ್ಲೇಖಿಸಿದ್ದಾರೆ ‘ಇಕೋ ನೆಲ – ಅಕೋ ಜಲ, ಅದರ ಮೇಲೆ ಮರದ ಫಲ’.
(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿಗಳು
ಚಾಮರಾಜನಗರ
9741270125)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್ ಕುಣಿಗಲ್ ಅವರ ́ಸಂಸʼ ಕತೆಗೆ ಪ್ರಥಮ ಬಹುಮಾನ,. ರವಿ ಮಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ದ್ವಿತೀಯ ಬಹುಮಾನ ಹಾಗೂ ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕರಾದ ಗೋವರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಜೇಯ ಸಿಂಹ ಕೆ.ವಿ. ಅವರ ʼಮಾರ್ಜಕದ ಶ್ರೀಮುಡಿʼ, ಟಿ.ಆರ್. ಪ್ರಕಾಶ ಭಾಗವತ ಅವರ ʼಸಮಾಧಿʼ , ರಘುನಂದನ್ ಅವರ ʼಹೀಗೊಂದು ಕಛೇರಿʼ , ಡಾ||. ಮಿರ್ಜಾ ಬಷೀರ್ ಅವರ ʼ ಒಂದು ಸದ್ದಿಲ್ಲದ ಕ್ರಾಂತಿʼ, ಸುಜಾತ ಎಸ್. ಎನ್ ರೆಡ್ಡಿ ಅವರ ʼ ಸತ್ಯ ದರ್ಶನʼ, ಚಂದ್ರಿಕಾ ನಾಗರಾಜ್ ಹಿರಿಯಡಕ ಅವರ ʼ ವೆಂಕಟನ ಸ್ವೆಟರ್, ರೈಹಾನ ಅವರ ʼಬಾವಿಗೆ ಬಿದ್ದರೂʼ, ಒಟ್ಟು ಈ ಏಳುಕತೆಗಳು ತೀರ್ಪುಗಾರ ಮೆಚ್ಚುಗೆ ಪಡೆದಿವೆ.
ಕತಾ ಸ್ಪರ್ಧೆಯ ತೀರ್ಪುಗಾರರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕತೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ, ಹೊಸಪೇಟೆ, ಕವಿ ಕತೆಗಾರ , ಜಿ. ಮುದ್ದುವೀರಸ್ವಾಮಿ, ದಾವಣಗೆರೆ, ಕತೆಗಾರ್ತಿ ಹಾಗೂ ಕನ್ನಡ ಪ್ರಾಧ್ಯಾಪಕಿ, ಸುಜಾತ ಚಲಾವಾದಿ, ತಾಳಿಕೋಟೆ, ಕತೆಗಾರ ಹಾಗೂ ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಡಾ. ಟಿ ಎಸ್. ಗೊರವರ, ಗಜೇಂದ್ರಘಡ ಇವರು ಕಾರ್ಯನಿವಹಿದ್ದರು ಎಂದು ಮಾಹಿತಿ ನೀಡಿದ್ಧಾರೆ.
ಪ್ರಥಮ ಬಹುಮಾನ ಹತ್ತು ಸಾವಿರ ರೂ (10000 ರೂ ) ನಗದು, ದ್ವೀತೀಯ ಬಹುಮಾನ ಐದು ಸಾವಿರ ನಗದು, (5000 ರೂ), ತೃತೀಯ ಬಹುಮಾನ ಮೂರು ಸಾವಿರ (3000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ನೀಡಲಾಗುವುದು.
ಕವಿತೆ ಸ್ಪರ್ಧೆ ಫಲಿತಾಂಶ
ಕವಿತೆ ಸ್ಪರ್ಧೆಯಲ್ಲಿ ಆನಂದ ಕುಂಚನೂರ ಅವರ ʼ ಬೆತ್ತಲೆ ಶಿಖರʼ ಕವಿತೆಗೆ ಪ್ರಥಮ ಬಹುಮಾನ, ಅಜಯ್ ಅಂಗಡಿ ಅವರ ʼಒಂದು ಶ್ರಾವಣ ಸಂಜೆಗೆʼ ದ್ವಿತೀಯ ಬಹುಮಾನ, ಭಾಗ್ಯ ಜ್ಯೋತಿ ಹಿರೇಮಠ ಅವರ ʼ ಗೋಡೆ ಕವಿತೆಗೆ ತೃತೀಯ ಬಹುಮಾನ ದೊರೆತಿದೆ.
ಫೈಜ್ನಟ್ರಾಜ್ ಅವರ ʼಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತುʼ, ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರ ʼಒಂಟಿಯಾನದ ಸರಕುʼ, ಕವಿತ ಎ.ವಿ ಅವರ ʼಬಂದಿದ್ದಾರೆ ಸಿಕ್ಕಿಲ್ಲʼ, ರಮ್ಯ ಕೆ.ಜಿ. ಅವರ ʼಬಿಡಿಸಿಕೊಳ್ಳುತ್ತದೊಂದು ಚಿತ್ರ,ʼ, ಮುರ್ತುಜಾ ಬೇಗಂ ಕೊಡಗಲಿ ಅವರ ʼಒಂದು ಕನ್ನಡಿ ಮೂರು ಬಿಂಬಗಳುʼ, ಮನಸ್ವಿ ಎಂ ಸ್ವಾಮಿ ಅವರ ʼ ರಾಜಧಾನಿಯಲ್ಲಿ ರಾಜʼ, ವೀಣಾ ರಾವ್ ಅವರ ʼಬಣ್ಣಗಳ ಆಚೆಗೆʼ ಒಟ್ಟು ಏಳು ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕವಿತೆ ಸ್ಪರ್ಧೆಯ ತೀರ್ಪುಗಾರರಾಗಿ ಕವಿ ಚಂದ್ರಶೇಖರ ತಾಳ್ಯ, ಹೊಳಲ್ಕೆರೆ, ಕವಯಿತ್ರಿ ಸವಿತಾ ನಾಗಭೂಷಣ, ಶಿವಮೊಗ್ಗ, ಕವಿ ವಿಲ್ಸನ್ ಕಟೀಲು ಅವರು ಕಾರ್ಯನಿರ್ವಹಿಸಿದ್ದರು.
ಪ್ರಥಮ ಬಹುಮಾನ ಐದು ಸಾವಿರ ರೂ (5000 ರೂ ) ನಗದು, ದ್ವೀತೀಯ ಬಹುಮಾನ ಮೂರು ಸಾವಿರ ನಗದು, (3000 ರೂ), ತೃತೀಯ ಬಹುಮಾನ ಎರಡು ಸಾವಿರ (2000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ಇದೇ ಅಕ್ಟೋಬರ್ 24 ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ʼ ನಡೆಯುವ ದೀಪಾವಳಿ ವಿಶೇಷಾಂಕ-2026 ರ ಬಿಡುಗಡೆ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9980346243 ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

ದಿನದ ಸುದ್ದಿ
ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.
ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್. ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


