ದಿನದ ಸುದ್ದಿ
ನನ್ನೂರು ಕೂಡ್ಲಿಗಿ ಮತ್ತು ಮಹಾತ್ಮ ಗಾಂಧೀಜಿಯವರ ಚಿತಾಭಸ್ಮ
- ಕೆ.ಶ್ರೀಧರ್ (ಕೆ.ಸಿರಿ)
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೆಸರು ಅಜರಾಮರ. ಶ್ರೀಯುತರನ್ನು ಇಡೀ ವಿಶ್ವವೇ ‘ಪೂಜ್ಯನೀಯ’ ಭಾವನೆಯಿಂದ ಗೌರವಿಸುತ್ತದೆ.
ವಿಶ್ವದ ದಿಗ್ಗಜ ನಾಯಕರುಗಳು ಹಾಗೂ ವಿದ್ವಾಂಸರು, ವಿವಿಧ ಸಂಪನ್ಮೂಲ ವ್ಯಕ್ತಿಗಳಾದ ಮಾರ್ಟಿನ್ ಲೂಥರ್ ಕಿಂಗ್, ಆಲ್ಬರ್ಟ್ ಐನ್ಸ್ಟೈನ್,ನೆಲ್ಸನ್ ಮಂಡೇಲಾ,ವಿಲ್ ಡ್ಯುರಾಂಟ್,ಅಟೆನ್ಬರೋ,ಹೋ ಚಿ ಮಿನ್,ಬರಾಕ್ ಒಬಾಮ,ಆಂಗ್ ಸಾನ್ ಸೂಕಿ,ದಲಾಯಿ ಲಾಮ ರವರು “ನಾವು ಮಹಾತ್ಮ ಗಾಂಧೀಜಿಯವರ ಅನುಯಾಯಿಗಳು” ಎಂದು ಮುಕ್ತಕಂಠದಿಂದ ಅರ್ಪಿತಗೊಳಿಸಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ನೋಡುವುದಾದರೆ ಮಹಾತ್ಮ ಗಾಂಧೀಜಿಯವರು ವಿಶ್ವಮಾನವರಂತೆ ಕಾಣುತ್ತಾರೆ. ಇದು ನಮ್ಮ ಭಾರತ ದೇಶದ ಹೆಮ್ಮೆ.ಗಾಂಧೀಜಿಯವರು ಒಬ್ಬ ವ್ಯಕ್ತಿಯಲ್ಲ ನಮ್ಮ ದೇಶದ ಶಕ್ತಿ, ತಮ್ಮ ಜೀವನದುದ್ದಕ್ಕೂ ಅಹಿಂಸಾತ್ಮಕ ಮಾರ್ಗದ ಮೂಲಕ ಸ್ವಾತಂತ್ರ್ಯ ಚಳುವಳಿ, ವರ್ಣಭೇದ ನೀತಿ ವಿರೋಧಿಸಿ ಉಪವಾಸ ಸತ್ಯಾಗ್ರಹದಿಂದಲೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಚೇತನ ನಮ್ಮ ಬಾಪೂಜಿ.
ಕೂಡ್ಲಿಗಿ ತಾಲೂಕು ಬಳ್ಳಾರಿಯ ವಿಭಜಿತ ವಿಜಯನಗರ ಜಿಲ್ಲೆಯ ಕರ್ನಾಟಕದ ಎರಡನೆಯ ಅತೀದೊಡ್ಡ ತಾಲ್ಲೂಕು ಹಾಗೂ ಹಿಂದುಳಿದ ತಾಲ್ಲೂಕು. ಮುಖ್ಯವಾಗಿ ಇಲ್ಲಿ ಹಿಂದುಳಿದಿರುವುದು ನಮ್ಮ ತಾಲ್ಲೂಕಲ್ಲ ತಾಲ್ಲೂಕಿನಲ್ಲಿರುವ ಮನಸ್ಸುಗಳು ಅಭಿವೃದ್ಧಿ ಪಥದಲ್ಲಿ ಹಿಂದುಳಿದಿವೆ ಈ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಯನ್ನು ಯಾರು ಹಾಕಿದ್ದಲ್ಲ ನಮಗೇ ನಾವೇ ಹಿಂದುಳಿದ ತಾಲ್ಲೂಕು ಹಿಂದುಳಿದ ತಾಲ್ಲೂಕು ಎಂದೇಳಿ ಹಿಂದೆಯೇ ಉಳಿಸುವ ಪ್ರಯತ್ನದಲ್ಲಿದ್ದೇವೆ.
ಜಾತಿ ಜಾತಿಗಳ ಪ್ರಾಬಲ್ಯ ಸ್ಥಾಪಿಸುವ ಜಿದ್ದಿನಲ್ಲಿ ತಾಲ್ಲೂಕು ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ವೈಫಲ್ಯ ಹೊಂದಿದೆ. ಇಲ್ಲಿ ದುಡಿಯುವವರು ದುಡಿಯುತ್ತಲೇ ಇದ್ದಾರೆ, ಕುಣಿಯುವವರು ಕುಣಿಯುತ್ತಲೇ ಇದ್ದಾರೆ, ಕುಣಿಯುತ್ತಿರುವುದು ಜಾತಿಯ ಅಮಲು, ಇಷ್ಟೆಲ್ಲಾ ನ್ಯೂನ್ಯತೆಗಳು ತಾಲ್ಲೂಕು ಹಿಂದುಳಿದಿದೆ ಎಂದು ಹೇಳುವ ನಮ್ಮ ಮನಸ್ಸುಗಳಲ್ಲಿಯೇ ಇವೆ ಈ ನ್ಯೂನತೆಗಳನ್ನು ಬದಿಗಿರಿಸಿ ಕೂಡ್ಲಿಗಿ ತಾಲೂಕಿನ ಚಾರಿತ್ರಿಕ ಹಿನ್ನೆಲೆ ಒಮ್ಮೆ ಅವಲೋಕನ ಮಾಡಿದರೆ ನಿಜಕ್ಕೂ ಹಿಂದುಳಿದಿರುವುದು ತಾಲ್ಲೂಕ? ಅಥವಾ ತಾಲ್ಲೂಕಿನಲ್ಲಿರುವ ನಮ್ಮ ಮನಸ್ಸುಗಳೇ? ಎಂದು ನಮಗೆ ತಿಳಿಯುತ್ತದೆ.
ಕೂಡ್ಲಿಗಿ ತಾಲೂಕನ್ನು ಮೌರ್ಯರು, ಶಾತವಾಹನರು, ಪಲ್ಲವರು, ಕದಂಬರು, ಚಾಲುಕ್ಯರು ಹಾಗೂ ವಿಜಯನಗರದ ಅರಸರು ಆಳ್ವಿಕೆ ನಡೆಸಿದ್ದಾರೆ. ಅಲ್ಲದೇ ಬಳ್ಳಾರಿ ಜಿಲ್ಲೆಗೆ ಮಹಾತ್ಮ ಗಾಂಧೀಜಿಯವರು 2 ಕಾರಣಗಳಿಂದಾಗಿ 1934 ರ ಮಾರ್ಚ್ 3 ರಂದು ಭೇಟಿ ನೀಡಿರುವುದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.
1- ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ರೂಪುರೇಷೆಗಳಿಗೆ ಆರ್ಥಿಕ ನೆರವು ಕೇಳಲು.
2-ಸಂಡೂರು ತಾಲ್ಲೂಕಿನ ಬೆಟ್ಟ ಗುಡ್ಡಗಳಲ್ಲಿ ನೆಲೆಸಿರುವ ಕುಮಾರಸ್ವಾಮಿ ದೇವಾಲಯಕ್ಕೆ ದಲಿತ ಸಮುದಾಯದವರಿಗೆ ಪ್ರವೇಶಾತಿ ನೀಡಿದ್ದ ಅಂದಿನ ಮಹಾರಾಜರಿಗೆ ಅಭಿನಂದನೆ ಸಲ್ಲಿಸಲು.
ಸಂಡೂರಿಗೆ ಭೇಟಿ ನೀಡಿದ ಮಹಾತ್ಮ ಗಾಂಧೀಜಿಯವರು ಅಲ್ಲಿ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತು ‘ಓಯಾಸಿಸ್’ ಎಂದು ಕರೆಯುವುದಲ್ಲದೆ ಸೆಪ್ಟೆಂಬರ್ ತಿಂಗಳಲ್ಲಿ ಸಂಡೂರು ನೋಡು (See Sundur in September) ಎಂದು ಹೇಳಿದ ವಾಕ್ಯ ಈಗಲೂ ಮಾನಸ ಸರೋವರದ ಬಳಿ ಬರುವ ರಸ್ತೆಯ ಇಕ್ಕೆಲದಲ್ಲಿನ ಕಲ್ಲುಬಂಡೆಯ ಮೇಲೆ ಬರೆದಿರುವುದು ಈಗಲೂ ಇದೆ ಇದೊಂದು ಇತಿಹಾಸ ಈ ಸಂಡೂರು ತಾಲೂಕು ಕೂಡ್ಲಿಗಿ ಪಕ್ಕದ ತಾಲ್ಲೂಕಾಗಿದೆ.
ಇದು ಅಲ್ಲದೇ 1921 ರ ಅಕ್ಟೋಬರ್ 1 ರಂದು ಧಾರವಾಡಕ್ಕೆ ಹೋಗಲು ಗಾಂಧೀಜಿಯವರು ಬಳ್ಳಾರಿಗೆ ಬಂದಿದ್ದರು ಹಾಗೂ ಅಲ್ಲಿ ತೆಲುಗು ಹಾಗೂ ಕನ್ನಡ ಭಾಷಿಕ ಕಾಂಗ್ರೆಸ್ ಮುಖಂಡರು ನಮ್ಮಲ್ಲಿ ಬರಬೇಕೆಂದು ದುಂಬಾಲು ಬಿದ್ದಾಗ ಎತ್ತ ಕಡೆ ಹೋಗದೆ 8 ಗಂಟೆಗಳ ಕಾಲ ಬಳ್ಳಾರಿ ರೈಲು ನಿಲ್ದಾಣದಲ್ಲಿಯೇ ಇದ್ದರೆಂಬುದು ಅಧ್ಯಯನದಿಂದ ತಿಳಿದು ಬರುತ್ತದೆ.
ಒಟ್ಟು ಕರ್ನಾಟಕಕ್ಕೆ ಮಹಾತ್ಮ ಗಾಂಧೀಜಿಯವರು 18 ಬಾರಿ ಆಗಮಿಸಿದ್ದರು ಅದರಲ್ಲಿ ನಮ್ಮ ಜಿಲ್ಲೆಗೆ ಎರಡು ಬಾರಿ ಬಂದಿದ್ದರು ಎಂಬುದು ನಮ್ಮ ಹೆಮ್ಮೆಯ ವಿಚಾರ. ಹೀಗೆ ಅಹಿಂಸಾತ್ಮಕ ಹಾಗೂ ಹಿಂಸಾತ್ಮಕ ಮಾರ್ಗದ ಮೂಲಕ ಆಗಸ್ಟ್ 15 1947 ರಂದು ನಮ್ಮ ಭಾರತ ದೇಶಕ್ಕೆ ಮಹಾತ್ಮ ಗಾಂಧೀಜಿ ಹಾಗೂ ದೇಶಭಕ್ತರ ತಂಡ ಸ್ವಾತಂತ್ರ್ಯ ತಂದುಕೊಟ್ಟಿತು.
ಈ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪಾತ್ರ ಹಿರಿತನದ್ದು. ಸ್ವಾತಂತ್ರ್ಯ ಬಂದು ಕೆಲವೇ ದಿನಗಳಲ್ಲಿ ಮಹಾತ್ಮ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ಗುಂಡಿಟ್ಟು ಕೊಂದೆ ಬಿಟ್ಟರು.! ಗಾಂಧೀಜಿಯವರ ಚಿತಾಭಸ್ಮವನ್ನು ಬಳ್ಳಾರಿ ನಗರದ ಗಾಂಧಿ ಭವನದ ಮಲ್ಲಸಜ್ಜನ ವ್ಯಾಯಾಮ ಶಾಲೆಯ ಆವರಣದಲ್ಲಿ 24 ಗಂಟೆಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಕೂಡ್ಲಿಗಿ ತಾಲೂಕಿನ ಶಿಕ್ಷಕರಾದ ಬಿಂದು ಮಾಧವ್ ರಾಯ್ ಹಾಗೂ ಮಹಾತ್ಮ ಗಾಂಧೀಜಿಯವರ ಅಭಿಮಾನಿಗಳ ತಂಡ ಗಾಂಧೀಜಿಯವರ ಚಿತಾಭಸ್ಮ ತಂದು ಕೂಡ್ಲಿಗಿ ತಾಲೂಕಿನ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ದೆಹಲಿಯ ರಾಜ್ ಘಾಟ್ ನಂತೆಯೇ ಇರುವ ಬಾಪೂಜಿಯವರನ್ನು ನೆನಪಿಸುವ ಸ್ಮಾರಕವನ್ನು ಚಿತಾಭಸ್ಮವನ್ನು ಇಡುವ ಮೂಲಕ ಹುತಾತ್ಮರ ಸ್ಮಾರಕ ನಿರ್ಮಿಸಲಾಗಿದೆ.
1950 ರೆ ದಶಕದಲ್ಲಿ ಸ್ಥಾಪಿಸಲಾದ ಈ ಚಿತಾಭಸ್ಮ ಸ್ಮಾರಕ ನಿರ್ಮಾಣ ಕಾರ್ಯವನ್ನು ಮಾಜಿ ಪ್ರಧಾನಿ P.V ನರಸಿಂಹರಾವ್ ಅವರ ಗುರುಗಳಾದ ರಮಾನಂದ ತೀರ್ಥರು ಉದ್ಘಾಟಿಸಿದರು. ಇಂತಹ ಮಹಾನ್ ಚೇತನರ ಚಿತಾಭಸ್ಮ ನಮ್ಮ ಕೂಡ್ಲಿಗಿ ತಾಲ್ಲೂಕಿನಲ್ಲಿ ಇರುವುದು ಒಂದು ಐತಿಹಾಸಿಕ ವಿಷಯ ಈ ಮೂಲಕ ನಮ್ಮ ಬಳ್ಳಾರಿ ಜಿಲ್ಲೆಗೂ ಸ್ವಾತಂತ್ರ್ಯ ಸಂಗ್ರಾಮಕ್ಕೂ ನಂಟಿದೆ.
ಇತ್ತೀಚೆಗೆ ಕೂಡ್ಲಿಗಿ ತಾಲೂಕಿನ ಚಿತಾಭಸ್ಮದ ಬಳಿ ‘ಚಿಂತನಾ ಚೇತನ’ ವೇದಿಕೆಗಳು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತೋಷದ ವಿಚಾರವಾಗಿದೆ. ಕೂಡ್ಲಿಗಿ ತಾಲೂಕಿನಲ್ಲಿ ಹೇಳಿಕೊಳ್ಳುವಂತಹ ಯಾವ ಪ್ರೇಕ್ಷಣೀಯ ಸ್ಥಳಗಳು ಇಲ್ಲದಿದ್ದರೂ ಮಹಾತ್ಮ ಗಾಂಧೀಜಿಯವರಂತಹ ಚಿತಾಭಸ್ಮ ಹುತಾತ್ಮರ ಸ್ಮಾರಕ ಇರುವುದು ನಮ್ಮ ತಾಲ್ಲೂಕಿನ ಪುಣ್ಯ ಈ ಚಿತಾಭಸ್ಮ ತಂದು ಹುತಾತ್ಮರ ಸ್ಮಾರಕ ನಿರ್ಮಿಸಲು ಶ್ರಮಿಸಿದ ಸರ್ವರಿಗೂ ದೀರ್ಘದಂಡ ನಮಸ್ಕಾರಗಳು.
ಹೀಗೆ ನನ್ನೂರು ಕೂಡ್ಲಿಗಿ ತಾಲೂಕಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೆನಪು ಹುತಾತ್ಮರ ಸ್ಮಾರಕದ ಮೂಲಕ ಅಚಂದ್ರಾರ್ಕಸ್ಥಾಯಿಯಾಗಿದೆ ಸರ್ವರಿಗೂ ಮಹಾತ್ಮ ಗಾಂಧೀಜಿಯವರ ದಿನಾಚರಣೆಯ ಶುಭಾಶಯಗಳು.
(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿ
ಚಾಮರಾಜನಗರ
9741270125)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.
ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.
ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ
ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್, ಚೇತನ್ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.
ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.
ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.
ಹೌದು! 2023ರ ಆಗಸ್ಟ್ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.
http://Visit : www.suddidina.com
ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ:
ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.
ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಕುಟುಂಬದ ಬಜೆಟ್ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:
ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.
ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.




